ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w98 5/1 ಪು. 3-4
  • ಇದಕ್ಕೆಲ್ಲ ಯಾರು ಕಾರಣರು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಇದಕ್ಕೆಲ್ಲ ಯಾರು ಕಾರಣರು?
  • ಕಾವಲಿನಬುರುಜು—1998
  • ಅನುರೂಪ ಮಾಹಿತಿ
  • ಯೆಹೋವನು—ಯಾರು?
    ಯೆಹೋವನು—ಯಾರು?
  • ಜೀವರಸಾಯನ ವಿಜ್ಞಾನಿಯೊಂದಿಗೆ ಸಂದರ್ಶನ
    ಎಚ್ಚರ!—2006
  • ನಮಗೆ ಯಾವನು ತಿಳಿಸಬಲ್ಲನು?
    ಜೀವಿತದ ಉದ್ದೇಶವೇನು?—ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ?
  • ರಚನೆಯನ್ನು ಮೆಚ್ಚಿರಿ ರಚಕನನ್ನು ತಿಳಿಯಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2007
ಇನ್ನಷ್ಟು
ಕಾವಲಿನಬುರುಜು—1998
w98 5/1 ಪು. 3-4

ಇದಕ್ಕೆಲ್ಲ ಯಾರು ಕಾರಣರು?

ಕ್ಯಾಂಬೋಡಿಯದ ಕಾಡಿನ ಉದ್ದಕ್ಕೂ ಮರಗಳನ್ನು ಕತ್ತರಿಸುತ್ತಾ, ತನ್ನ ದಾರಿಯನ್ನು ಸೃಷ್ಟಿಸಿಕೊಂಡ 19ನೆಯ ಶತಮಾನದ ಫ್ರೆಂಚ್‌ ಪರಿಶೋಧಕನಾದ ಆನ್ರೀ ಮೂಓ, ಮಂದಿರವನ್ನು ಸುತ್ತುಗಟ್ಟಿದ ಕಂದಕವನ್ನು ತಲಪಿದನು. ಅವನು ನಿಂತಲ್ಲಿಂದ ಸುಮಾರು ಒಂದು ಕಿಲೊಮೀಟರಿನಷ್ಟು ದೂರದಲ್ಲಿ, ಮಂದಿರದ ಐದು ಬುರುಜುಗಳು 60 ಮೀಟರ್‌ಗಳಿಗಿಂತಲೂ ಹೆಚ್ಚಿನ ಎತ್ತರಕ್ಕಿದ್ದವು. ಅದು ಭೂಮಿಯಲ್ಲೇ ಅತ್ಯಂತ ದೊಡ್ಡ ಧಾರ್ಮಿಕ ಸ್ಮಾರಕಕಟ್ಟಡವಾದ ಅಂಗ್‌ಕಾರ್‌ ವಾಟ್‌ ಆಗಿತ್ತು. ಮೂಓ ಅದನ್ನು ಕಂಡುಹಿಡಿದಾಗ, ಅದು ಈಗಾಗಲೇ ಏಳು ಶತಮಾನಗಳಿಂದ ವಿಪರೀತವಾದ ಹವಾಮಾನವನ್ನು ತಾಳಿಕೊಂಡಿತ್ತು.

ಆ ಪಾಚಿ ಆವರಿತ ಕಟ್ಟಡಗಳು ಮಾನವ ಹಸ್ತಗಳ ಕಾರ್ಯವಾಗಿದ್ದವೆಂದು ಮೂಓಗೆ ಒಂದೇ ನೋಟದಲ್ಲೇ ಹೇಳಸಾಧ್ಯವಿತ್ತು. “ಯಾವನೊ ಗತಕಾಲದ ಮೈಕಲ್‌ಆ್ಯಂಜಲೊವಿನಿಂದ ನಿರ್ಮಿಸಲ್ಪಟ್ಟ ಈ ಕಟ್ಟಡವು, ಗ್ರೀಸ್‌ ಇಲ್ಲವೆ ರೋಮ್‌ನಿಂದ ವಿನ್ಯಾಸಿಸಲ್ಪಟ್ಟ ಯಾವುದೇ ವಾಸ್ತುಶಿಲ್ಪೀಯ ಕಟ್ಟಡದ ಅವಶೇಷಗಳಿಗಿಂತಲೂ ಹೆಚ್ಚು ವೈಭವಯುಕ್ತವಾಗಿದೆ,” ಎಂದು ಅವನು ಬರೆದನು. ಅವು ಶತಮಾನಗಳ ವರೆಗೆ ತ್ಯಜಿಸಲ್ಪಟ್ಟಿದ್ದರೂ, ಆ ಅತ್ಯುತ್ಕೃಷ್ಟವಾದ ಕಟ್ಟಡಗಳ ಮರೆಯಲ್ಲಿ ಒಬ್ಬ ವಿನ್ಯಾಸಕನಿದ್ದನೆಂಬ ವಿಷಯದಲ್ಲಿ ಅವನಿಗೆ ಸಂದೇಹವಿರಲಿಲ್ಲ.

ನಮ್ಮ ಸುತ್ತಲಿರುವ ಲೋಕವು ಒಬ್ಬ ವಿನ್ಯಾಸಕನ ಉತ್ಪಾದನೆ ಆಗಿರಬೇಕಾದುದರ ಕಾರಣವನ್ನು ವಿವರಿಸಲು, ಶತಮಾನಗಳ ಹಿಂದೆ ಬರೆಯಲ್ಪಟ್ಟ ವಿವೇಕದ ಒಂದು ಗ್ರಂಥವೂ ತದ್ರೀತಿಯ ತರ್ಕವನ್ನು ಬಳಸಿದ್ದು ಆಸಕ್ತಿಕರವಾದ ವಿಷಯವಾಗಿದೆ. ಅದು ಸೃಷ್ಟಿಸಲ್ಪಟ್ಟಿದ್ದಿರಬೇಕು. ಅಪೊಸ್ತಲ ಪೌಲನು ಬರೆದುದು: “ಪ್ರತಿ ಮನೆಯನ್ನು ಯಾರೋ ಒಬ್ಬನು ಕಟ್ಟಿರುವನು; ಸಮಸ್ತವನ್ನು ಕಟ್ಟಿದಾತನು ದೇವರೇ.” (ಇಬ್ರಿಯ 3:4) ಕೆಲವರು ಹೀಗೆ ಹೇಳುವ ಮೂಲಕ ಈ ಹೋಲಿಕೆಯೊಂದಿಗೆ ಅಸಮ್ಮತಿಸಬಹುದು: ‘ನಿಸರ್ಗದ ಕಾರ್ಯಕಾರಿತ್ವಗಳು, ಮಾನವ ನಿರ್ಮಿತ ಕಾರ್ಯಕಾರಿತ್ವಗಳಿಂದ ಭಿನ್ನವಾಗಿವೆ.’ ಆದರೆ, ಎಲ್ಲ ವಿಜ್ಞಾನಿಗಳು ಆ ಆಕ್ಷೇಪಣೆಯೊಂದಿಗೆ ಸಮ್ಮತಿಸುವುದಿಲ್ಲ. “ಜೀವರಾಸಾಯನಿಕ ವ್ಯವಸ್ಥೆಗಳು ನಿರ್ಜೀವ ವಸ್ತುಗಳಲ್ಲ”ವೆಂದು ಒಪ್ಪಿಕೊಂಡ ಮೇಲೆ, ಲೇಹೈ ವಿಶ್ವವಿದ್ಯಾನಿಲಯದಲ್ಲಿ ಜೀವರಾಸಾಯನ ಶಾಸ್ತ್ರದ ಜೊತೆ ಪ್ರೊಫೆಸರ್‌ ಆಗಿರುವ ಮೈಕಲ್‌ ಬೀಹೀ ಕೇಳುವುದು: “ಸಜೀವವಾದ ಜೀವರಾಸಾಯನಿಕ ವ್ಯವಸ್ಥೆಗಳನ್ನು ಬುದ್ಧಿವಂತಿಕೆಯಿಂದ ವಿನ್ಯಾಸಿಸಸಾಧ್ಯವಿದೆಯೊ?” ತಳಿಶಾಸ್ತ್ರೀಯ ಶಿಲ್ಪಶಾಸ್ತ್ರಗಳಂತಹ ವಿಧಾನಗಳ ಮೂಲಕ ಈಗ ವಿಜ್ಞಾನಿಗಳು, ಸಜೀವಿಗಳಲ್ಲಿ ಮೂಲಭೂತ ಬದಲಾವಣೆಗಳನ್ನು ವಿನ್ಯಾಸಿಸುತ್ತಿದ್ದಾರೆ ಎಂಬುದನ್ನು ತೋರಿಸುತ್ತಾ ಅವರು ಮುಂದುವರಿಯುತ್ತಾರೆ. ಸ್ಪಷ್ಟವಾಗಿಯೇ, ನಿರ್ಜೀವ ಹಾಗೂ ಸಜೀವವಾದ ವಸ್ತುಗಳೆರಡನ್ನೂ ವಿನ್ಯಾಸಿಸಲು ಮತ್ತು ರೂಪಿಸಲು ಸಾಧ್ಯವಿದೆ! ಜೀವಾಣುಗಳ ಸೂಕ್ಷ್ಮದರ್ಶಕೀಯ ಲೋಕದೊಳಗೆ ಅನ್ವೇಷಣೆ ಮಾಡುತ್ತಾ, ಕಾರ್ಯನಡೆಸಲು ಪರಸ್ಪರ ಅವಲಂಬಿಸಿರುವ ಘಟಕಗಳಿಂದ ರಚಿಸಲ್ಪಟ್ಟಿರುವ ವಿಸ್ಮಯಕರವಾದ ಜಟಿಲ ವ್ಯವಸ್ಥೆಗಳನ್ನು ಬೀಹೀ ಚರ್ಚಿಸುತ್ತಾರೆ. ಅವರ ತೀರ್ಮಾನವೇನು? “ಕೋಶದ ತನಿಖೆ ನಡೆಸಲು—ಅಣುವಿನ ಮಟ್ಟದಲ್ಲಿ ಜೀವದ ತನಿಖೆ ನಡೆಸುವ—ಈ ಒಟ್ಟು ಪ್ರಯತ್ನಗಳ ಪರಿಣಾಮವು, ಅದು ‘ವಿನ್ಯಾಸ!’ದ ಉತ್ಪಾದನೆಯಾಗಿದೆ ಎಂಬುದನ್ನು ಸ್ಪಷ್ಟವಾಗಿ ಪ್ರತಿಪಾದಿಸುತ್ತದೆ.”

ತದ್ರೀತಿಯಲ್ಲಿ ವಿಶ್ವಶಾಸ್ತ್ರಜ್ಞರು ಮತ್ತು ಭೌತವಿಜ್ಞಾನಿಗಳು, ಲೋಕ ಮತ್ತು ವಿಶ್ವದ ಕಡೆಗೆ ನಿಕಟವಾದ ನೋಟವನ್ನು ಬೀರಿ, ಆಶ್ಚರ್ಯಗೊಳಿಸುವ ಕೆಲವೊಂದು ನಿಜಾಂಶಗಳನ್ನು ಬೆಳಕಿಗೆ ತಂದಿದ್ದಾರೆ. ಉದಾಹರಣೆಗೆ, ವಿಶ್ವದ ಯಾವುದೇ ನಿಯತಾಂಕಗಳ ಸಂಖ್ಯೆಯಲ್ಲಿ ಅತ್ಯಲ್ಪ ಬದಲಾವಣೆಯು ಸಂಭವಿಸುತ್ತಿದ್ದಲ್ಲಿ, ವಿಶ್ವವು ಜೀವರಹಿತವಾಗಿರುತ್ತಿತ್ತೆಂದು ಅವರಿಗೆ ಈಗ ಗೊತ್ತಿದೆ.a ವಿಶ್ವಶಾಸ್ತ್ರಜ್ಞರಾದ ಬ್ರ್ಯಾಂಡನ್‌ ಕಾರ್ಟರ್‌, ವಿಸ್ಮಯಗೊಳಿಸುವ ಈ ನಿಜಾಂಶಗಳನ್ನು ಕಾಕತಾಳೀಯ ಸಂಗತಿಗಳೆಂದು ಕರೆದರು. ಆದರೆ ನೀವು ನಿಗೂಢವಾದ, ಪರಸ್ಪರ ಸಂಬಂಧವಿರುವ ಕಾಕತಾಳೀಯ ಸಂಗತಿಗಳ ಸರಣಿಯನ್ನೇ ಸಂಧಿಸುವುದಾದರೆ, ಇದಕ್ಕೆಲ್ಲ ಯಾರೊ ಒಬ್ಬರು ಕಾರಣರೆಂಬ ಸಂಶಯವಾದರೂ ನಿಮಗಾಗುತ್ತಿರಲಿಲ್ಲವೊ?

ನಿಶ್ಚಯವಾಗಿಯೂ, ಈ ಎಲ್ಲ ಜಟಿಲವಾದ ವ್ಯವಸ್ಥೆಗಳು ಮತ್ತು ನಿಖರವಾಗಿ ಹೊಂದಿಸಲ್ಪಟ್ಟ “ಕಾಕತಾಳೀಯ ಸಂಗತಿಗಳ” ಮರೆಯಲ್ಲಿ ಒಬ್ಬ ವಿನ್ಯಾಸಕನಿದ್ದಾನೆ. ಯಾರವನು? “ವೈಜ್ಞಾನಿಕ ವಿಧಾನಗಳ ಮೂಲಕ ಆ ವಿನ್ಯಾಸಕನನ್ನು ಗುರುತಿಸುವುದು ಬಹಳ ಕಷ್ಟಕರವಾಗಿರಬಹುದು” ಎಂದು ಒಪ್ಪಿಕೊಳ್ಳುವ ಪ್ರೊಫೆಸರ್‌ ಬೀಹೀ, “ತತ್ವಜ್ಞಾನ ಮತ್ತು ದೇವತಾಶಾಸ್ತ್ರವು” ಆ ಪ್ರಶ್ನೆಗೆ ಉತ್ತರ ನೀಡಲು ಪ್ರಯತ್ನಿಸುವಂತೆ ಬಿಟ್ಟುಬಿಡುತ್ತಾನೆ. ಆ ಪ್ರಶ್ನೆಯು ನಿಮಗೆ ಅಸಂಬದ್ಧವೆಂದು ನಿಮಗೇ ಅನಿಸಬಹುದು. ಆದರೂ, ನಿಮಗೆ ನಿಖರವಾಗಿ ಬೇಕಾಗಿದ್ದ ವಸ್ತುಗಳನ್ನೇ ಒಳಗೊಂಡಿರುವ, ಸುತ್ತುಹಾಳೆಯಿಂದ ಚೆನ್ನಾಗಿ ಹೊದಿಸಲ್ಪಟ್ಟ ಒಂದು ಪಾರ್ಸಲನ್ನು ನೀವು ಪಡೆದುಕೊಳ್ಳುವಲ್ಲಿ, ಅದನ್ನು ನಿಮಗೆ ಯಾರು ಕಳುಹಿಸಿದರೆಂದು ಕಂಡುಹಿಡಿಯಲು ನೀವು ಬಯಸಲಾರಿರೊ?

ಸಾಂಕೇತಿಕವಾಗಿ ಹೇಳುವುದಾದರೆ, ನಾವು ಅಂತಹ ಒಂದು ಪಾರ್ಸಲನ್ನು—ಜೀವಿಸಲು ಮತ್ತು ಜೀವಿತವನ್ನು ಅನುಭವಿಸಸಾಧ್ಯವಾಗುವಂತೆ ಮಾಡುವ ಅದ್ಭುತಕರವಾದ ಕೊಡುಗೆಗಳಿಂದ ತುಂಬಿರುವ ಒಂದು ಪಾರ್ಸಲನ್ನು ಪಡೆದಿದ್ದೇವೆ. ಆ ಪಾರ್ಸಲ್‌, ಜೀವವನ್ನು ಪೋಷಿಸಲಿಕ್ಕಾಗಿ ಗಮನಾರ್ಹವಾದ ವ್ಯವಸ್ಥೆಗಳುಳ್ಳ ಭೂಮಿಯಾಗಿದೆ. ಈ ಕೊಡುಗೆಗಳನ್ನು ನಮಗೆ ಯಾರು ಕೊಟ್ಟರೆಂಬುದನ್ನು ಕಂಡುಹಿಡಿಯಲು ನಾವು ಬಯಸಬಾರದೊ?

ಸಂತೋಷಕರವಾಗಿ, ಆ ಪಾರ್ಸಲನ್ನು ಕಳುಹಿಸಿದಾತನು ಅದರೊಂದಿಗೆ ಒಂದು “ಟಿಪ್ಪಣಿಯನ್ನು” ಸೇರಿಸಿದನು. ಆ “ಟಿಪ್ಪಣಿ”ಯು, ಈ ಮೊದಲು ಉಲ್ಲೇಖಿಸಲ್ಪಟ್ಟ ವಿವೇಕದ ಪ್ರಾಚೀನ ಗ್ರಂಥ—ಬೈಬಲ್‌ ಆಗಿದೆ. ಅದರ ಆರಂಭದ ಮಾತುಗಳಲ್ಲಿ, ಈ ಪಾರ್ಸಲನ್ನು ನಮಗೆ ಯಾರು ಕೊಟ್ಟರೆಂಬ ಪ್ರಶ್ನೆಯನ್ನು ಬೈಬಲು ಎದ್ದುಕಾಣುವ ಸರಳತೆ ಹಾಗೂ ಸ್ಪಷ್ಟತೆಯಿಂದ ಹೀಗೆ ಉತ್ತರಿಸುತ್ತದೆ: “ಆದಿಯಲ್ಲಿ ದೇವರು ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದನು.”—ಆದಿಕಾಂಡ 1:1.

ತನ್ನ “ಟಿಪ್ಪಣಿ”ಯಲ್ಲಿ ಸೃಷ್ಟಿಕರ್ತನು ತನ್ನನ್ನು ತನ್ನ ಹೆಸರಿನಿಂದಲೇ ಗುರುತಿಸಿಕೊಳ್ಳುತ್ತಾನೆ: “ಆಕಾಶಮಂಡಲವನ್ನುಂಟುಮಾಡಿ ಹರವಿ ಭೂಮಂಡಲವನ್ನೂ ಅದರಲ್ಲಿನ ಉತ್ಪತ್ತಿಯನ್ನೂ ವಿಸ್ತರಿಸಿ ಲೋಕದ ಜನರಿಗೆ ಪ್ರಾಣವನ್ನು, . . . ದಯಪಾಲಿಸುವ ಯೆಹೋವನೆಂಬ ದೇವರು ಹೀಗನ್ನುತ್ತಾನೆ.” (ಓರೆಅಕ್ಷರಗಳು ನಮ್ಮವು.) (ಯೆಶಾಯ 42:5) ಹೌದು, ವಿಶ್ವವನ್ನು ವಿನ್ಯಾಸಿಸಿದ ಮತ್ತು ಭೂಮಿಯ ಮೇಲೆ ಸ್ತ್ರೀಪುರುಷರನ್ನು ಉಂಟುಮಾಡಿದ ದೇವರ ಹೆಸರು ಯೆಹೋವ ಎಂದಾಗಿದೆ. ಆದರೆ ಯೆಹೋವನು ಯಾರು? ಆತನು ಯಾವ ರೀತಿಯ ದೇವರು? ಮತ್ತು ಭೂಮಿಯಲ್ಲಿರುವ ಎಲ್ಲ ಜನರು ಆತನಿಗೆ ಏಕೆ ಕಿವಿಗೊಡಬೇಕು?

[ಪಾದಟಿಪ್ಪಣಿ]

a “ನಿಯತಾಂಕಗಳು,” ವಿಶ್ವದಾದ್ಯಂತ ಬದಲಾಗದೆ ಇರುತ್ತವೆಂದು ಕಾಣುವ ಸಂಖ್ಯೆಗಳು. ಎರಡು ಉದಾಹರಣೆಗಳು, ಬೆಳಕಿನ ವೇಗ ಮತ್ತು ಗುರುತ್ವ ಹಾಗೂ ಪರಿಮಾಣದ ಮಧ್ಯೆ ಇರುವ ಸಂಬಂಧವಾಗಿವೆ.

[ಪುಟ 3 ರಲ್ಲಿರುವ ಚಿತ್ರ]

ಅಂಗ್‌ಕಾರ್‌ ವಾಟ್‌ ಮನುಷ್ಯರಿಂದ ಕಟ್ಟಲ್ಪಟ್ಟಿತು

[ಪುಟ 4 ರಲ್ಲಿರುವ ಚಿತ್ರ]

ನೀವು ಒಂದು ಕೊಡುಗೆಯನ್ನು ಪಡೆದುಕೊಳ್ಳುವಾಗ, ಅದನ್ನು ಕಳುಹಿಸಿದವರು ಯಾರೆಂದು ತಿಳಿದುಕೊಳ್ಳಲು ಬಯಸುವುದಿಲ್ಲವೊ?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ