ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w98 5/1 ಪು. 5-7
  • ಯೆಹೋವನು ಯಾರು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನು ಯಾರು?
  • ಕಾವಲಿನಬುರುಜು—1998
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಆತನ ಹೆಸರಿನ ಮಹತ್ವ
  • ಯೆಹೋವನ ಪ್ರಧಾನ ಗುಣಗಳು
  • ಎಲ್ಲ ಜನಾಂಗಗಳ ದೇವರು
  • ಯೆಹೋವನನ್ನು ತಿಳಿದುಕೊಳ್ಳುವುದರ ಪ್ರಯೋಜನಗಳು
  • ಯೆಹೋವನು—ಯಾರು?
    ಯೆಹೋವನು—ಯಾರು?
  • ದೇವರನ್ನು ತಿಳಿದುಕೊಳ್ಳಲು ಆರಂಭಿಸುವುದು
    ಸಂತೃಪ್ತಿಕರವಾದ ಜೀವನ—ಲಭ್ಯವಾಗುವ ವಿಧ
  • ಸತ್ಯ ದೇವರು ಯಾರು?
    ನಿತ್ಯಜೀವಕ್ಕೆ ನಡೆಸುವ ಜ್ಞಾನ
  • ಯೆಹೋವನನ್ನು ಒಬ್ಬನೇ ಸತ್ಯ ದೇವರಾಗಿ ಕೊಂಡಾಡಿರಿ
    ಒಬ್ಬನೇ ಸತ್ಯ ದೇವರನ್ನು ಆರಾಧಿಸಿರಿ
ಇನ್ನಷ್ಟು
ಕಾವಲಿನಬುರುಜು—1998
w98 5/1 ಪು. 5-7

ಯೆಹೋವನು ಯಾರು?

ಯೆಹೋವನು ತನ್ನ ನಂಬಿಗಸ್ತ ಆರಾಧಕರಲ್ಲಿ ಒಬ್ಬನಿಗೆ ಹೇಳಿದ್ದು: “ಮನುಷ್ಯರಲ್ಲಿ ಯಾವನೂ ನನ್ನನ್ನು ನೋಡಿ ಜೀವಿಸಲಾರನು.” (ವಿಮೋಚನಕಾಂಡ 33:20) “ದೇವರು ಆತ್ಮಸ್ವರೂಪನು,” ಮತ್ತು ಮಾನವರು ತಮ್ಮ ಭೌತಿಕ ಕಣ್ಣುಗಳಿಂದ ಆತನನ್ನು ನೋಡಸಾಧ್ಯವಿಲ್ಲ. (ಯೋಹಾನ 4:24) ನಡು ಹಗಲಿನಲ್ಲಿ ಸೂರ್ಯನನ್ನು ನೇರವಾಗಿ ನೋಡುವುದು ನಮ್ಮ ಕಣ್ಣುಗಳಿಗೆ ಹಾನಿಕಾರಕವಾಗಿರುವಂತೆಯೇ, ನಮ್ಮ ತೇಜೋಮಯವಾಗಿರುವ ಸೂರ್ಯನನ್ನು ಮಾತ್ರವಲ್ಲ, ನಮ್ಮ ವಿಶ್ವದಲ್ಲಿರುವ ಇತರ ಅನೇಕ ಸೂರ್ಯರನ್ನು ಸಹ ಸೃಷ್ಟಿಸಿದ, ಶಕ್ತಿಯ ಪ್ರಚಂಡವಾದ ಉಗಮವನ್ನು ನೋಡುವುದು ವಿನಾಶಕಾರಕವಾಗಿರುವುದು.

ಸಂತೋಷಕರವಾಗಿ, ದೇವರ ಕುರಿತು ತಿಳಿದುಕೊಳ್ಳಲು ಆತನನ್ನು ನೋಡುವ ಅಗತ್ಯ ನಮಗಿರುವುದಿಲ್ಲ. ಬೈಬಲು, ಆ ಅದ್ಭುತಕರ ಪಾರ್ಸಲ್‌ ಆದ ಭೂಮಿಯನ್ನು ನಮಗಾಗಿ ತಯಾರಿಸಿದಾತನನ್ನು ಗುರುತಿಸುತ್ತದೆ, ಅಲ್ಲದೆ ಆತನ ವ್ಯಕ್ತಿತ್ವವನ್ನು ನಮಗೆ ಪ್ರಕಟಪಡಿಸುತ್ತದೆ. ಆದುದರಿಂದ, ನಮಗೆ ಜೀವವನ್ನು ಕೊಟ್ಟು, ಆ ಜೀವದಲ್ಲಿ ಆನಂದಿಸುವಂತೆ ಮನೋಹರವಾದ ಮನೆಯನ್ನು ಒದಗಿಸಿದ ತಂದೆಯ ಬಗ್ಗೆ ತಿಳಿದುಕೊಳ್ಳಲು ಬೈಬಲನ್ನು ಪರೀಕ್ಷಿಸುವುದು ಸಾರ್ಥಕವಾಗಿದೆ.

ಆತನ ಹೆಸರಿನ ಮಹತ್ವ

ಇಂದು ಅನೇಕರಿಗೆ ಅರಿವಿಲ್ಲದೆ ಇರಬಹುದಾದರೂ, ಎಲ್ಲ ಹೆಸರುಗಳಿಗೆ ಅರ್ಥವಿದೆ. ಉದಾಹರಣೆಗೆ, ಸಾಮಾನ್ಯವಾಗಿರುವ ಡೇವಿಡ್‌ ಎಂಬ ಇಂಗ್ಲಿಷ್‌ ಹೆಸರು, “ಬಿಲವ್ಡ್‌” (ಪ್ರೀತಿಪಾತ್ರನು) ಎಂಬ ಅರ್ಥವುಳ್ಳ ಹೀಬ್ರು ಪದದಿಂದ ಬರುತ್ತದೆ. ಯೆಹೋವ ಎಂಬ ಸೃಷ್ಟಿಕರ್ತನ ಹೆಸರಿಗೂ ಒಂದು ಅರ್ಥವಿದೆ. ಏನದು? ಬೈಬಲಿನ ಮೂಲ ಭಾಷೆಯಾದ ಹೀಬ್ರುವಿನಲ್ಲಿ, ದೈವಿಕ ಹೆಸರು YHWH ಎಂಬ ನಾಲ್ಕು ಅಕ್ಷರಗಳಲ್ಲಿ ಬರೆಯಲ್ಪಟ್ಟಿದ್ದು, ಬೈಬಲಿನ ಹೀಬ್ರು ಭಾಗದಲ್ಲಿ ಬಹುಮಟ್ಟಿಗೆ 7,000 ಬಾರಿ ಕಂಡುಬರುತ್ತದೆ. ದೈವಿಕ ಹೆಸರಿಗೆ “ಆತನು ಆಗಿಸುತ್ತಾನೆ” ಎಂಬ ಅರ್ಥವಿದೆಯೆಂದು ತಿಳಿದುಕೊಳ್ಳಲ್ಪಟ್ಟಿದೆ. ತನ್ನ ಉದ್ದೇಶಗಳನ್ನು ನೆರವೇರಿಸುವ ಸಲುವಾಗಿ ಆತನು ಏನಾಗಿ ಪರಿಣಮಿಸುವ ಅಗತ್ಯವಿದೆಯೊ ಯೆಹೋವನು ವಿವೇಕಯುತವಾಗಿ ಅದಾಗುತ್ತಾನೆಂದು ಅದು ಸೂಚಿಸುತ್ತದೆ. ಆತನು ಸೃಷ್ಟಿಕರ್ತನು, ನ್ಯಾಯಾಧೀಶನು, ರಕ್ಷಕನು, ಜೀವದ ಪೋಷಕನು ಆಗಿದ್ದಾನೆ, ಮತ್ತು ಆದಕಾರಣ ಆತನು ತನ್ನ ವಾಗ್ದಾನಗಳನ್ನು ನೆರವೇರಿಸಬಲ್ಲನು. ಹೀಬ್ರು ಭಾಷೆಯಲ್ಲಿ ಯೆಹೋವ ಎಂಬ ಹೆಸರು, ನೆರವೇರುತ್ತಿರುವ ಪ್ರಕ್ರಿಯೆಯಲ್ಲಿರುವ ಒಂದು ಕೃತ್ಯವನ್ನು ಸೂಚಿಸುವ ಕ್ರಿಯಾರೂಪದಲ್ಲಿರುತ್ತದೆ. ಹೌದು, ಯೆಹೋವನು ಇನ್ನೂ ಕೂಡ ತನ್ನನ್ನು ತನ್ನ ಉದ್ದೇಶಗಳನ್ನು ನೆರವೇರಿಸುವವನಾಗಿ ಆಗಿಸಿಕೊಳ್ಳುತ್ತಿದ್ದಾನೆ. ಆತನೊಬ್ಬ ಜೀವಂತ ದೇವರು!

ಯೆಹೋವನ ಪ್ರಧಾನ ಗುಣಗಳು

ಬೈಬಲು ಸೃಷ್ಟಿಕರ್ತನನ್ನು “ಕನಿಕರವೂ ದಯೆಯೂ ಉಳ್ಳ ದೇವರು; ದೀರ್ಘಶಾಂತನೂ ಪ್ರೀತಿಯೂ ನಂಬಿಕೆಯೂ ಉಳ್ಳವನು; ಸಾವಿರಾರು ತಲೆಗಳ ವರೆಗೂ ದಯೆ [“ಪ್ರೀತಿದಯೆ,” NW] ತೋರಿಸುವವನು; ದೋಷಾಪರಾಧಪಾಪಗಳನ್ನು ಕ್ಷಮಿಸುವವನು” ಎಂಬುದಾಗಿ ವರ್ಣಿಸುತ್ತದೆ. (ವಿಮೋಚನಕಾಂಡ 34:6, 7) “ಪ್ರೀತಿದಯೆ” ಎಂಬ ಅಭಿವ್ಯಕ್ತಿಯು, ತುಂಬ ಅರ್ಥಗರ್ಭಿತವಾದ ಹೀಬ್ರು ಪದವನ್ನು ಭಾಷಾಂತರಿಸುತ್ತದೆ. ಅದು ಒಂದು ವಸ್ತುವಿಗೆ ತನ್ನನ್ನು ಪ್ರೀತಿಪೂರ್ವಕವಾಗಿ ಅಂಟಿಸಿಕೊಳ್ಳುವ ಕರುಣೆಯನ್ನು ಸೂಚಿಸುತ್ತದೆ. ಮತ್ತು ಆ ವಸ್ತುವಿಗಾಗಿರುವ ಅದರ ಉದ್ದೇಶವು ನೆರವೇರುವ ತನಕ ಅದು ಆ ವಸ್ತುವಿಗೆ ಅಂಟಿಕೊಂಡಿರುತ್ತದೆ. ಅದನ್ನು “ನಿಷ್ಠಾವಂತ ಪ್ರೀತಿ” ಎಂದೂ ಭಾಷಾಂತರಿಸಸಾಧ್ಯವಿದೆ. ಯೆಹೋವನ ಕರುಣೆಯು, ಆತನ ಸೃಷ್ಟಿಜೀವಿಗಳಿಗೆ ಪ್ರೀತಿಪೂರ್ವಕವಾಗಿ ಅಂಟಿಕೊಂಡು, ಆತನ ಅದ್ಭುತಕರವಾದ ಉದ್ದೇಶವನ್ನು ನೆರವೇರಿಸುತ್ತದೆ. ನಿಮಗೆ ಜೀವವನ್ನು ಕೊಟ್ಟಾತನಿಂದ ಬರುವ ಇಂತಹ ಪ್ರೀತಿಯನ್ನು ನೀವು ಆದರಿಸಲಾರಿರೊ?

ಯೆಹೋವನು ಕೋಪಿಸಿಕೊಳ್ಳುವುದರಲ್ಲಿ ನಿಧಾನಿಯೂ, ನಮ್ಮ ಪಾಪಗಳನ್ನು ಕ್ಷಮಿಸಲು ತತ್ಪರನೂ ಆಗಿದ್ದಾನೆ. ಅಂತಹ ಒಬ್ಬ ವ್ಯಕ್ತಿಗೆ ನಿಕಟವಾಗಿರುವುದು ಹೃದಯೋಲ್ಲಾಸಕರವಾಗಿದೆ. ಆದರೂ, ಆತನು ತಪ್ಪುಗೈಯುವಿಕೆಯನ್ನು ಮನ್ನಿಸುತ್ತಾನೆಂಬುದನ್ನು ಅದು ಅರ್ಥೈಸದು. ಆತನು ಪ್ರಕಟಿಸಿದ್ದು: “ಯೆಹೋವನೆಂಬ ನಾನು ನ್ಯಾಯವನ್ನು ಪ್ರೀತಿಸುತ್ತೇನೆ, ಕೊಳ್ಳೆಯನ್ನೂ ಅನ್ಯಾಯವನ್ನೂ ದ್ವೇಷಿಸುತ್ತೇನೆ.” (ಯೆಶಾಯ 61:8) ನ್ಯಾಯದ ದೇವರೋಪಾದಿ, ತಮ್ಮ ದುಷ್ಟತನದಲ್ಲಿ ಪಟ್ಟುಬಿಡದೆ ಮುಂದುವರಿಯುವ ಉದ್ಧಟ ಪಾಪಿಗಳನ್ನು ಆತನು ಸದಾಕಾಲ ಸಹಿಸಿಕೊಳ್ಳಲಾರನು. ಹೀಗೆ, ತನ್ನ ನೇಮಿತ ಕಾಲದಲ್ಲಿ ಯೆಹೋವನು ಈ ಲೋಕದ ಅನ್ಯಾಯಗಳನ್ನು ಸರಿಮಾಡುವನೆಂಬ ಖಾತ್ರಿ ನಮಗಿರಸಾಧ್ಯವಿದೆ. ಆತನು ಸಂಕಟಪಡುತ್ತಿರುವವರನ್ನು ಅಲಕ್ಷಿಸನು.

ಪ್ರೀತಿ ಮತ್ತು ನ್ಯಾಯದ ನಡುವೆ ಒಂದು ಪರಿಪೂರ್ಣ ಸಮತೆಯನ್ನು ಕಾಪಾಡಿಕೊಳ್ಳುವುದು ಸುಲಭವಲ್ಲ. ನೀವು ಒಬ್ಬ ಹೆತ್ತವರಾಗಿರುವಲ್ಲಿ, ನಿಮ್ಮ ಮಕ್ಕಳು ಅನುಚಿತವಾಗಿ ವರ್ತಿಸುವಾಗ ಅವರಿಗೆ ಯಾವಾಗ, ಹೇಗೆ, ಮತ್ತು ಎಷ್ಟರ ಮಟ್ಟಿಗೆ ತಿದ್ದುಪಾಟನ್ನು ನೀಡಬೇಕೆಂಬುದರ ಬಗ್ಗೆ ನಿರ್ಧರಿಸುವುದನ್ನು ಕಷ್ಟಕರವೆಂದು ಕಂಡುಕೊಳ್ಳುತ್ತೀರೊ? ಪ್ರೀತಿಯ ಸಹಾನುಭೂತಿಯೊಂದಿಗೆ ನ್ಯಾಯವನ್ನು ಸರಿದೂಗಿಸುವುದು ಹೆಚ್ಚಿನ ವಿವೇಕವನ್ನು ಕೇಳಿಕೊಳ್ಳುತ್ತದೆ. ಮಾನವರೊಂದಿಗೆ ವ್ಯವಹರಿಸುವಾಗ ಆ ಗುಣವನ್ನು ಯೆಹೋವನು ಸಮೃದ್ಧವಾಗಿ ಪ್ರದರ್ಶಿಸುತ್ತಾನೆ. (ರೋಮಾಪುರ 11:33-36) ನಿಶ್ಚಯವಾಗಿಯೂ, ಸೃಷ್ಟಿಕರ್ತನ ವಿವೇಕವನ್ನು ಎಲ್ಲೆಡೆಯಲ್ಲೂ, ಉದಾಹರಣೆಗೆ ನಮ್ಮ ಸುತ್ತಲಿರುವ ಸೃಷ್ಟಿಯ ಅದ್ಭುತಗಳಲ್ಲಿ ನೋಡಸಾಧ್ಯವಿದೆ.—ಕೀರ್ತನೆ 104:24; ಜ್ಞಾನೋಕ್ತಿ 3:19.

ಆದರೂ, ವಿವೇಕ ಮಾತ್ರವೇ ಸಾಲದು. ಆತನ ಚಿತ್ತವನ್ನು ನೆರವೇರಿಸಲು, ಸೃಷ್ಟಿಕರ್ತನಿಗೆ ಶಕ್ತಿಯೂ ಬೇಕು, ಮತ್ತು ಆತನು ಬಹು ಶಕ್ತಿಶಾಲಿಯೆಂದು ಬೈಬಲು ಪ್ರಕಟಪಡಿಸುತ್ತದೆ: “ನಿಮ್ಮ ಕಣ್ಣುಗಳನ್ನು ಮೇಲಕ್ಕೆತ್ತಿಕೊಂಡು ನೋಡಿರಿ! ಈ ನಕ್ಷತ್ರಗಳನ್ನು ಸೃಷ್ಟಿಸಿದಾತನು ಯಾರು? ಈ ಸೈನ್ಯವನ್ನು ಲೆಕ್ಕಕ್ಕೆ ಸರಿಯಾಗಿ ಮುಂದರಿಸುತ್ತಾನಲ್ಲಾ; ಎಲ್ಲವನ್ನೂ ಹೆಸರೆತ್ತಿ ಕರೆಯುತ್ತಾನೆ; ಆತನು ಅತಿ ಬಲಾಢ್ಯನೂ ಮಹಾಶಕ್ತನೂ ಆಗಿರುವದರಿಂದ ಅವುಗಳೊಳಗೆ ಒಂದೂ ಕಡಿಮೆಯಾಗದು.” (ಯೆಶಾಯ 40:26) ಯೆಹೋವನು “ಅತಿ ಬಲಾಢ್ಯ”ನಾಗಿರುವುದರಿಂದ, ತನ್ನ ಕೆಲಸಗಳನ್ನು ಹೇಗಾದರೂ ಮಾಡಿಸಿಕೊಳ್ಳುತ್ತಾನೆ. ಅಂತಹ ಗುಣವು ನಿಮ್ಮನ್ನು ಆತನ ಕಡೆಗೆ ಆಕರ್ಷಿಸಲಾರದೊ?

ಎಲ್ಲ ಜನಾಂಗಗಳ ದೇವರು

ಆದರೆ ಯೆಹೋವನು, “ಹಳೆಯ ಒಡಂಬಡಿಕೆ”ಯ, ಪ್ರಾಚೀನ ಇಸ್ರಾಯೇಲಿನ ದೇವರಲ್ಲವೊ? ಎಂದು ನೀವು ಯೋಚಿಸಬಹುದು. ಯೆಹೋವನು ತನ್ನನ್ನು ಇಸ್ರಾಯೇಲ್ಯರಿಗೆ ಪ್ರಕಟಪಡಿಸಿಕೊಂಡನೆಂಬುದು ನಿಜ. ಆದರೂ, ಪ್ರಥಮ ಮಾನವ ದಂಪತಿಯನ್ನು ಸೃಷ್ಟಿಸಿದ ಕಾರಣ, ಯೆಹೋವನು ‘ಭೂಲೋಕದಲ್ಲಿರುವ ಪ್ರತಿ ಜನ’ಕ್ಕೂ ದೇವರಾಗಿದ್ದಾನೆ. (ಎಫೆಸ 3:15) ನಿಮ್ಮ ಪೂರ್ವಜರನ್ನು ಗೌರವಿಸುವುದು ಯೋಗ್ಯವಾದದ್ದೆಂದು ನೀವು ನಂಬುವುದಾದರೆ, ಭೂಮಿಯ ಮೇಲೆ ಅಸ್ತಿತ್ವದಲ್ಲಿರುವ ಎಲ್ಲ ವಂಶಾವಳಿಗಳ ಮೂಲನಾಗಿರುವ, ನಮ್ಮೆಲ್ಲರ ಸಾಮಾನ್ಯ ಪೂರ್ವಜನಾದ ಪ್ರಥಮ ಮನುಷ್ಯನಿಗೆ ಜೀವವನ್ನು ಕೊಟ್ಟಾತನಿಗೆ ತಲೆಬಾಗಿಸುವುದು ಸೂಕ್ತವಾಗಿರದೊ?

ಮಾನವಕುಲದ ಸೃಷ್ಟಿಕರ್ತನು ಸಂಕುಚಿತ ಸ್ವಭಾವದವನಲ್ಲ. ನಿಜ, ಒಂದು ಸಮಯದಲ್ಲಿ ಆತನಿಗೆ ಇಸ್ರಾಯೇಲ್‌ ಜನಾಂಗದೊಂದಿಗೆ ಒಂದು ವಿಶೇಷ ಸಂಬಂಧವಿತ್ತು. ಆ ಸಮಯದಲ್ಲೂ, ತನ್ನ ಹೆಸರನ್ನು ಹೇಳಿಕೊಂಡ ಎಲ್ಲರನ್ನು ಆತನು ತನ್ನ ಬಳಿ ಸೇರಿಸಿಕೊಂಡನು. ಇಸ್ರಾಯೇಲಿನ ಒಬ್ಬ ವಿವೇಕಿ ಅರಸು, ಯೆಹೋವನಿಗೆ ಮಾಡಿದ ಪ್ರಾರ್ಥನೆಯಲ್ಲಿ ಹೇಳಿದ್ದು: “ನಿನ್ನ ಪ್ರಜೆಗಳಾದ ಇಸ್ರಾಯೇಲ್ಯರಿಗೆ ಸೇರದವನಾದ ಇಂಥ ಒಬ್ಬ ಪರದೇಶಿಯು ನಿನ್ನ ನಾಮಕ್ಕೋಸ್ಕರ ದೂರದೇಶದಿಂದ ಬಂದು ಈ ಆಲಯದ ಮುಂದೆ ನಿಂತು ನಿನ್ನನ್ನು ಪ್ರಾರ್ಥಿಸುವದಾದರೆ ನಿನ್ನ ನಿವಾಸವಾಗಿರುವ ಪರಲೋಕದಿಂದ ಅವನ ಪ್ರಾರ್ಥನೆಯನ್ನು ಕೇಳಿ ಅವನು ಬೇಡಿಕೊಂಡದ್ದನ್ನು ಅನುಗ್ರಹಿಸು; ಆಗ ಲೋಕದ ಎಲ್ಲಾ ಜನರೂ ನಿನ್ನ ನಾಮಮಹತ್ತನ್ನು . . . ತಿಳಿದುಕೊಳ್ಳುವರು.” (1 ಅರಸು 8:41-43) ಈ ದಿನದ ತನಕ, ಎಲ್ಲ ಜನಾಂಗಗಳ ಜನರು ಯೆಹೋವನನ್ನು ತಿಳಿದುಕೊಳ್ಳಬಲ್ಲರು ಮತ್ತು ಆತನೊಂದಿಗೆ ಒಂದು ಅರ್ಥಭರಿತ ಸಂಬಂಧವನ್ನು ಇಟ್ಟುಕೊಳ್ಳಬಲ್ಲರು. ಆದರೆ ಅದು ನಿಮ್ಮನ್ನು ಹೇಗೆ ಬಾಧಿಸುತ್ತದೆ?

ಯೆಹೋವನನ್ನು ತಿಳಿದುಕೊಳ್ಳುವುದರ ಪ್ರಯೋಜನಗಳು

ಹಿಂದಿನ ಲೇಖನದಲ್ಲಿದ್ದ ದೃಷ್ಟಾಂತಕ್ಕೆ ಹಿಂದಿರುಗುವುದಾದರೆ, ಆಕರ್ಷಕವಾಗಿ ಪ್ಯಾಕ್‌ ಮಾಡಲ್ಪಟ್ಟ ಒಂದು ಪಾರ್ಸಲನ್ನು ನೀವು ಪಡೆದುಕೊಳ್ಳುವಲ್ಲಿ, ಆ ಕೊಡುಗೆಯು ಯಾವ ಕಾರಣಕ್ಕಾಗಿತ್ತೆಂದು ನೀವು ಕಂಡುಹಿಡಿಯಲು ಬಯಸುವುದು ಸ್ವಾಭಾವಿಕವೇ. ಅದನ್ನು ಹೇಗೆ ಉಪಯೋಗಿಸಬೇಕು ಮತ್ತು ಜೋಪಾನವಾಗಿ ಇಟ್ಟುಕೊಳ್ಳಬೇಕು? ತದ್ರೀತಿಯಲ್ಲಿ, ದೇವರು ನಮಗಾಗಿ ಈ ಭೂಮಿಯನ್ನು ಸಿದ್ಧಪಡಿಸಿದಾಗ ಆತನ ಮನಸ್ಸಿನಲ್ಲಿ ಏನಿತ್ತೆಂಬುದನ್ನು ತಿಳಿದುಕೊಳ್ಳಲು ನಾವು ಬಯಸುತ್ತೇವೆ. ಆತನು “ಭೂಲೋಕವನ್ನು ನಿರ್ಮಿಸಿ ರೂಪಿಸಿ ಸ್ಥಾಪಿಸಿದನು; ಅದನ್ನು ಶೂನ್ಯಸ್ಥಾನವಾಗಿರಲೆಂದು ಸೃಷ್ಟಿಸದೆ ಜನ—ಮಾನವರಿಂದ—ನಿವಾಸಕ್ಕಾಗಿಯೇ ರೂಪಿಸಿದನು” ಎಂದು ಬೈಬಲ್‌ ಹೇಳುತ್ತದೆ.—ಯೆಶಾಯ 45:18.

ಹೆಚ್ಚಿನ ಮಾನವರಾದರೊ, ಸೃಷ್ಟಿಕರ್ತನ ಈ ಕೊಡುಗೆಯನ್ನು ಜೋಪಾನವಾಗಿ ಇಟ್ಟುಕೊಂಡಿಲ್ಲ. ಯೆಹೋವನಿಗೆ ಬಹಳಷ್ಟು ಅಸಮಾಧಾನವನ್ನು ಉಂಟುಮಾಡುತ್ತಾ, ಅವರು ಭೂಮಿಯನ್ನು ನಾಶಮಾಡುವ ಪಥದಲ್ಲಿದ್ದಾರೆ. ಆದರೂ, ಆತನ ಹೆಸರು ಏನನ್ನು ಸೂಚಿಸುತ್ತದೊ ಅದಕ್ಕನುಸಾರವಾಗಿ, ಮನುಷ್ಯ ಹಾಗೂ ಭೂಮಿಗಾಗಿದ್ದ ತನ್ನ ಮೂಲ ಉದ್ದೇಶವನ್ನು ನೆರವೇರಿಸಲು ಯೆಹೋವನು ದೃಢನಿರ್ಧಾರಮಾಡಿದ್ದಾನೆ. (ಕೀರ್ತನೆ 115:16; ಪ್ರಕಟನೆ 11:18) ಆತನು ಈ ಭೂಮಿಯನ್ನು ದುರಸ್ತುಗೊಳಿಸಿ, ಆತನ ವಿಧೇಯ ಮಕ್ಕಳಾಗಿ ಜೀವಿಸಲು ಇಚ್ಛಿಸುವವರಿಗೆ ಅದನ್ನು ಬಾಧ್ಯತೆಯಾಗಿ ಕೊಡುವನು.—ಮತ್ತಾಯ 5:5.

ಅದು ಸಂಭವಿಸುವಾಗ ವಿಷಯಗಳು ಹೇಗಿರುವವು ಎಂಬುದನ್ನು ಬೈಬಲಿನ ಕೊನೆಯ ಪುಸ್ತಕವು ವರ್ಣಿಸುತ್ತದೆ: “ಇಗೋ, ದೇವರ ನಿವಾಸವು ಮನುಷ್ಯರಲ್ಲಿ ಅದೆ; ಆತನು ಅವರೊಡನೆ ವಾಸಮಾಡವನು, ಅವರು ಆತನಿಗೆ ಪ್ರಜೆಗಳಾಗಿರುವರು; . . . ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.” (ಪ್ರಕಟನೆ 21:3, 4) ಆಗ ಯಾರೂ ದುಃಖದ ಕಣ್ಣೀರನ್ನು ಸುರಿಸಲಾರರು ಇಲ್ಲವೆ ಪ್ರಿಯ ವ್ಯಕ್ತಿಯ ಸಾವಿನ ಕಾರಣ ಗೋಳಿಡಲಾರರು. ಹತಾಶೆಯಲ್ಲಿ ಸಹಾಯಕ್ಕಾಗಿ ಯಾರೂ ಮೊರೆಯಿಡರು ಇಲ್ಲವೆ ಮಾರಕ ರೋಗಗಳ ವೇದನೆಯನ್ನು ಅನುಭವಿಸರು. “ಮರಣವು” ಸಹ “ಕಡೇ ಶತ್ರುವಾಗಿ ನಿವೃತ್ತಿಯಾಗುವದು.” (1 ಕೊರಿಂಥ 15:26; ಯೆಶಾಯ 25:8; 33:324) ಯೆಹೋವನು ನಮ್ಮ ಪ್ರಥಮ ಪೂರ್ವಜರನ್ನು ಸೃಷ್ಟಿಸಿದಾಗ, ನಾವು ಅನುಭವಿಸಬೇಕೆಂದು ಆತನು ಆದಿಯಲ್ಲಿ ಬಯಸಿದಂತಹ ರೀತಿಯ ಜೀವನವನ್ನು ಇದು ವರ್ಣಿಸುತ್ತದೆ.

ನಿಶ್ಚಯವಾಗಿಯೂ, ಯೆಹೋವನ ಆರಾಧಕರ ನಡುವೆ ಇಂತಹ ಪ್ರಮೋದವನೀಯ ಪರಿಸ್ಥಿತಿಗಳ ಪೂರ್ವವೀಕ್ಷಣೆಯನ್ನು ನೀವು ಈಗ ನೋಡಸಾಧ್ಯವಿದೆ. ಆತನು ಅವರಿಗೆ ಹೇಳುವುದು: “ನಾನೇ ನಿನ್ನ ದೇವರಾದ ಯೆಹೋವನು, ನಿನಗೆ ವೃದ್ಧಿಮಾರ್ಗವನ್ನು ಬೋಧಿಸಿ ನೀನು ನಡೆಯಬೇಕಾದ ದಾರಿಯಲ್ಲಿ ನಿನ್ನನ್ನು ನಡೆಯಿಸುವವನಾಗಿದ್ದೇನೆ.” (ಯೆಶಾಯ 48:17) ಯೆಹೋವನು ತನ್ನ ಮಕ್ಕಳಾದ ನಮಗೆ ಜೀವಿಸುವ ಅತ್ಯುತ್ತಮ ವಿಧವನ್ನು ಕಲಿಸುವ ದಯಾಪರ ತಂದೆಯಾಗಿದ್ದಾನೆ. ಮಾನವರಿಗಾಗಿರುವ ಆತನ ಮಾರ್ಗದರ್ಶನಗಳು, ಅನಗತ್ಯವಾದ ನಿರ್ಬಂಧವನ್ನಲ್ಲ, ಪ್ರೀತಿಪೂರ್ಣ ಸಂರಕ್ಷಣೆಯನ್ನು ಒದಗಿಸುತ್ತವೆ. ಅವುಗಳನ್ನು ಅನುಸರಿಸುವುದು, ನಿಜವಾದ ಸ್ವಾತಂತ್ರ್ಯ ಹಾಗೂ ಸಂತೋಷವನ್ನು ತರುವುದು. ಹೀಗೆ ಬರೆಯಲ್ಪಟ್ಟ ವಿಷಯದಂತೆಯೇ ಅದು ಇದೆ: “ಯೆಹೋವನು ಆತ್ಮನಾಗಿದ್ದಾನೆ; ಮತ್ತು ಯೆಹೋವನ ಆತ್ಮವು ಎಲ್ಲಿದೆಯೊ ಅಲ್ಲಿ ಸ್ವಾತಂತ್ರ್ಯವಿದೆ.” (2 ಕೊರಿಂಥ 3:17, NW) ಬೈಬಲಿನಲ್ಲಿ ರೇಖಿಸಲ್ಪಟ್ಟಿರುವ ಮಾರ್ಗದರ್ಶನಗಳನ್ನು ಅನುಸರಿಸುವ ಮೂಲಕ, ಆತನ ಆಳ್ವಿಕೆಯನ್ನು ಸ್ವೀಕರಿಸುವವರು, ಒಂದು ದಿನ ಮಾನವಕುಲದ ಇಡೀ ಲೋಕದಲ್ಲಿ ವ್ಯಾಪಿಸಲಿರುವ ಮನಶ್ಶಾಂತಿಯನ್ನು ಈಗ ಅನುಭವಿಸುತ್ತಿದ್ದಾರೆ.—ಫಿಲಿಪ್ಪಿ 4:7.

ಯೆಹೋವನು ಎಂತಹ ದಯಾಪರ ತಂದೆಯಾಗಿದ್ದಾನೆ! ಸೃಷ್ಟಿಯ ಎಲ್ಲ ಅದ್ಭುತಗಳಿಗೆ ಕಾರಣನಾಗಿರುವಾತನ ಕುರಿತು ಹೆಚ್ಚನ್ನು ಕಲಿಯಲು ನೀವು ಇಷ್ಟವುಳ್ಳವರಾಗಿದ್ದೀರೊ? ಇಷ್ಟವಿರುವವರಿಗೆ, ಬರುವಂತಹ ಪ್ರಯೋಜನಗಳು ಈಗಲೂ ಅಮೂಲ್ಯವಾಗಿವೆ. ಮತ್ತು ಭವಿಷ್ಯತ್ತಿನಲ್ಲಿ ಆ ಆಶೀರ್ವಾದಗಳು ಅನಂತವಾಗಿರುವವು.

[ಪುಟ 5 ರಲ್ಲಿರುವ ಚಿತ್ರ]

ಹೀಬ್ರು ಭಾಷೆಯ ನಾಲ್ಕು ಅಕ್ಷರಗಳಲ್ಲಿ ಬರೆಯಲ್ಪಟ್ಟ ಆ ದೈವಿಕ ಹೆಸರನ್ನು, ಅನೇಕ ಹಳೆಯ ಚರ್ಚುಗಳ ಗೋಡೆಗಳ ಮೇಲೆ ನೋಡಸಾಧ್ಯವಿದೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ