ಯೆಹೋವನ ದಿನವು ಹತ್ತಿರವಿದೆ
“ವೃದ್ಧರೇ, ಕೇಳಿರಿ! ದೇಶನಿವಾಸಿಗಳೇ, ನೀವೆಲ್ಲರೂ ಕಿವಿಗೊಡಿರಿ!”—ಯೋವೇಲ 1:2.
1, 2. ಯೆಹೂದದಲ್ಲಿದ್ದ ಯಾವ ಪರಿಸ್ಥಿತಿಯಿಂದಾಗಿ, ಯೆಹೋವನು ಯೋವೇಲನನ್ನು ತನ್ನ ಬಲವಾದ ಪ್ರವಾದನೆಯನ್ನು ನುಡಿಯಲು ಪ್ರೇರಿಸಿದನು?
“ಯೆಹೋವನ ದಿನವು ಸಮೀಪಿಸಿತು; ಅಯ್ಯೋ, ದಿನವೇ! ಅದು ಸರ್ವಶಕ್ತನಿಂದ ನಾಶನದಿನವಾಗಿಯೇ ಬರುವದು.” ಎಂತಹ ಒಂದು ಕೌತುಕದ ಘೋಷಣೆ! ಅದು ತನ್ನ ಪ್ರವಾದಿಯಾದ ಯೋವೇಲನ ಮೂಲಕ ದೇವರು ತನ್ನ ಜನರಿಗೆ ತಲಪಿಸಿದ ಸಂದೇಶವಾಗಿತ್ತು.
2 ಯೋವೇಲ 1:15ರ ಆ ಮಾತುಗಳು ಬಹುಶಃ ಸುಮಾರು ಸಾ.ಶ.ಪೂ. 820ನೆಯ ಇಸವಿಯಲ್ಲಿ, ಯೆಹೂದದಲ್ಲಿ ದಾಖಲಿಸಲ್ಪಟ್ಟಿದ್ದವು. ಆ ಸಮಯದಲ್ಲಿ ಹಸಿರಾದ ಬೆಟ್ಟಗಳು ದೇಶವನ್ನು ಅಲಂಕರಿಸಿದವು. ಹಣ್ಣು ಮತ್ತು ಧಾನ್ಯವು ಹೇರಳವಾಗಿದ್ದವು. ಹುಲ್ಲುಗಾವಲುಗಳು ವಿಶಾಲ ಮತ್ತು ಹಚ್ಚಹಸಿರಾಗಿದ್ದವು. ಆದರೆ, ಯಾವುದೋ ಒಂದು ದೊಡ್ಡ ದೋಷವಿತ್ತು. ಬಾಳನ ಆರಾಧನೆಯು ಯೆರೂಸಲೇಮ್ ಮತ್ತು ಯೆಹೂದದ ದೇಶದಲ್ಲಿ ಉಚ್ಛ್ರಾಯ ಸ್ಥಿತಿಗೇರಿತು. ಜನರು ಈ ಸುಳ್ಳು ದೇವನ ಮುಂದೆ ಕುಡಿತದ ಕಾಮಕೇಳಿಗಳಲ್ಲಿ ನಿರತರಾಗಿದ್ದರು. (2 ಪೂರ್ವಕಾಲವೃತ್ತಾಂತ 21:4-6, 11ನ್ನು ಹೋಲಿಸಿ.) ಇದೆಲ್ಲವೂ ಮುಂದುವರಿಯುವಂತೆ ಯೆಹೋವನು ಅನುಮತಿಸಲಿದ್ದನೋ?
3. ಯೆಹೋವನು ಯಾವುದರ ಕುರಿತಾಗಿ ಎಚ್ಚರಿಸಿದನು, ಮತ್ತು ಜನಾಂಗಗಳು ಯಾವುದಕ್ಕಾಗಿ ತಯಾರಾಗಬೇಕು?
3 ಬೈಬಲ್ ಪುಸ್ತಕವಾದ ಯೋವೇಲ ಇದಕ್ಕೆ ಸ್ಪಷ್ಟವಾದ ಉತ್ತರವನ್ನು ಕೊಡುತ್ತದೆ. ಯೆಹೋವ ದೇವರು ತನ್ನ ಪರಮಾಧಿಕಾರವನ್ನು ನಿರ್ದೋಷೀಕರಿಸಿ, ತನ್ನ ಪವಿತ್ರ ನಾಮವನ್ನು ಪವಿತ್ರೀಕರಿಸಲಿದ್ದನು. ಖಂಡಿತವಾಗಿಯೂ, ಯೆಹೋವನ ಮಹಾ ದಿನವು ಸಮೀಪವಿತ್ತು. ಆಗ ದೇವರು “ಯೆಹೋಷಾಫಾಟನ ತಗ್ಗಿನಲ್ಲಿ” (NW) ಎಲ್ಲ ಜನಾಂಗಗಳ ಮೇಲೆ ನ್ಯಾಯತೀರ್ಪನ್ನು ಜಾರಿಗೊಳಿಸಲಿದ್ದನು. (ಯೋವೇಲ 3:12) ಸರ್ವಶಕ್ತನಾದ ಯೆಹೋವನೊಂದಿಗೆ ಯುದ್ಧಕ್ಕಾಗಿ ಅವರು ತಯಾರಾಗಲಿ. ನಮ್ಮ ಎದುರಿನಲ್ಲೂ ಯೆಹೋವನ ಮಹಾ ದಿನವಿದೆ. ಆದುದರಿಂದ, ನಮ್ಮ ದಿನಕ್ಕಾಗಿ ಮತ್ತು ಗತಕಾಲಕ್ಕಾಗಿದ್ದ ಯೋವೇಲನ ಪ್ರವಾದನಾ ಮಾತುಗಳನ್ನು ನಾವು ಪರೀಕ್ಷಿಸೋಣ.
ಕೀಟಗಳ ದಾಳಿ
4. ಯೋವೇಲನು ಯಾವುದರ ಕುರಿತಾಗಿ ಎಚ್ಚರಿಸಿದನೊ ಆ ಘಟನೆಯು ಎಷ್ಟು ಮಹತ್ತಾದದ್ದಾಗಿರುವುದು?
4 ಯೆಹೋವನು ತನ್ನ ಪ್ರವಾದಿಯ ಮೂಲಕ ಹೇಳುವುದು: “ವೃದ್ಧರೇ, ಕೇಳಿರಿ! ದೇಶನಿವಾಸಿಗಳೇ, ನೀವೆಲ್ಲರೂ ಕಿವಿಗೊಡಿರಿ! ಇಂಥ ಬಾಧೆಯು ನಿಮ್ಮ ಕಾಲದಲ್ಲಿಯಾಗಲಿ ನಿಮ್ಮ ತಂದೆಗಳ ಕಾಲದಲ್ಲಿಯಾಗಲಿ ಸಂಭವಿಸಿತ್ತೋ? ಇದನ್ನು ನಿಮ್ಮ ಮಕ್ಕಳಿಗೆ ವರ್ಣಿಸಿರಿ, ಅವರು ತಮ್ಮ ಮಕ್ಕಳಿಗೆ ವಿವರಿಸಲಿ, ಅವರು ಮುಂದಿನ ತಲೆಯವರಿಗೆ ತಿಳಿಸಲಿ.” (ಯೋವೇಲ 1:2, 3) ವೃದ್ಧರು ಮತ್ತು ಎಲ್ಲ ಜನರು ತಮ್ಮ ಜೀವಮಾನಕಾಲದಲ್ಲಿ ಅಥವಾ ತಮ್ಮ ಪೂರ್ವಜರ ದಿನಗಳಲ್ಲಿ ಸಂಭವಿಸಿರದಂತಹ ಒಂದು ವಿಷಯವನ್ನು ನಿರೀಕ್ಷಿಸಬಹುದಿತ್ತು. ಅದು ಎಷ್ಟು ಅಸಾಧಾರಣವಾಗಿರಲಿತ್ತೆಂದರೆ, ಅದನ್ನು ಮೂರನೆಯ ತಲೆಮಾರಿಗೂ ತಿಳಿಸಲಾಗುವುದು! ಈ ಗಮನಾರ್ಹವಾದ ಘಟನೆ ಏನಾಗಿತ್ತು? ಅದನ್ನು ಕಂಡುಹಿಡಿಯಲಿಕ್ಕಾಗಿ, ನಾವು ಹಿಂದೆ ಯೋವೇಲನ ದಿನದಲ್ಲಿದ್ದೇವೆಂದು ಊಹಿಸಿಕೊಳ್ಳೋಣ.
5, 6. (ಎ) ಯೋವೇಲನು ಪ್ರವಾದಿಸುವಂತಹ ಉಪದ್ರವವನ್ನು ವರ್ಣಿಸಿರಿ. (ಬಿ) ಆ ಉಪದ್ರವದ ಮೂಲನು ಯಾರಾಗಿದ್ದನು?
5 ಕೇಳಿರಿ! ಯೋವೇಲನು ಒಂದು ದೂರದ ಆರ್ಭಟವನ್ನು ಕೇಳಿಸಿಕೊಳ್ಳುತ್ತಾನೆ. ಆಕಾಶವು ಕಪ್ಪಾಗುತ್ತದೆ, ಮತ್ತು ಮೇಲೆ ಅಂಧಕಾರವು ವ್ಯಾಪಿಸಿದಂತೆ ಆ ವಿಕಟ ಶಬ್ದವು ಹೆಚ್ಚುತ್ತದೆ. ಅನಂತರ ಹೊಗೆಯಂತಹ ಮೋಡವೊಂದು ಕೆಳಗಿಳಿಯುತ್ತದೆ. ಅದು ಕೋಟಿಗಟ್ಟಲೆ ಸಂಖ್ಯೆಯ ಕೀಟಗಳ ಒಂದು ಸೈನ್ಯವಾಗಿದೆ. ಮತ್ತು ಅವು ಎಂತಹ ವಿನಾಶವನ್ನು ಉಂಟುಮಾಡುತ್ತವೆ! ಈಗ ಯೋವೇಲ 1:4ನ್ನು ಪರಿಗಣಿಸಿರಿ. ಈ ಆಕ್ರಮಣಕಾರ ಕೀಟಗಳು, ರೆಕ್ಕೆಗಳುಳ್ಳ ವಲಸೆಹೋಗುವ ಮಿಡತೆಗಳು ಮಾತ್ರವಲ್ಲ, ಇತರ ಕೀಟಗಳೂ ಇವೆ! ಹರಿದಾಡುವ, ರೆಕ್ಕೆಗಳಿಲ್ಲದ ಮಿಡತೆಗಳ ಹಸಿದಿರುವ ದಂಡುಗಳೂ ಬರುತ್ತಾ ಇವೆ. ಗಾಳಿಯಿಂದ ಒಯ್ಯಲ್ಪಟ್ಟು, ಈ ಮಿಡತೆಗಳು ಹಠಾತ್ತನೇ ಬರುತ್ತವೆ, ಮತ್ತು ಅವುಗಳ ಶಬ್ದವು ರಥಗಳ ಶಬ್ದದಂತಿದೆ. (ಯೋವೇಲ 2:5) ಕೋಟ್ಯಂತರ ಮಿಡತೆಗಳು, ತಮ್ಮ ಅತಿಯಾದ ಹಸಿವಿನಿಂದಾಗಿ ಒಂದು ವಾಸ್ತವಿಕ ಪ್ರಮೋದವನವನ್ನು ಕ್ಷಿಪ್ರವಾಗಿ ಅರಣ್ಯಪ್ರದೇಶವಾಗಿ ಪರಿವರ್ತಿಸಬಲ್ಲವು.
6 ಪತಂಗಗಳ ಅಥವಾ ಚಿಟ್ಟೆಗಳ ಲಾರ್ವ ಸ್ಥಿತಿಯಲ್ಲಿರುವ ಮರಿಹುಳುಗಳು ಕೂಡ ಸಂಚರಿಸುತ್ತಿವೆ. ಹಸಿದ ಮರಿಹುಳುಗಳ ದೊಡ್ಡ ಸೈನ್ಯಗಳು, ಗಿಡಗಳ ಹಸುರು ಬಹುಮಟ್ಟಿಗೆ ಬರಿದಾಗುವ ತನಕ ಎಲೆಗಳನ್ನು ತುಂಡುತುಂಡಾಗಿ, ಒಂದೊಂದಾಗಿ ತಿನ್ನಬಲ್ಲವು. ಮತ್ತು ಅವು ಏನನ್ನು ಬಿಟ್ಟುಹೋಗುತ್ತವೊ, ಅದರಲ್ಲಿ ಹೆಚ್ಚಿನದ್ದನ್ನು ಮಿಡತೆಗಳು ತಿನ್ನುತ್ತವೆ. ಮತ್ತು ಮಿಡತೆಗಳು ಏನನ್ನು ಬಿಟ್ಟುಹೋಗುತ್ತವೊ ಅದನ್ನು, ವೇಗವಾಗಿ ಚಲಿಸುವ ಜಿರಲೆಗಳು ಮುಗಿಸಿಬಿಡುವುದಂತೂ ಖಂಡಿತ. ಆದರೆ ಇದನ್ನು ಗಮನಿಸಿರಿ: ಯೋವೇಲ ಅಧ್ಯಾಯ 2, ವಚನ 11ರಲ್ಲಿ, ದೇವರು ಮಿಡತೆ ಸೈನ್ಯವನ್ನು “ತನ್ನ ಮಿಲಿಟರಿ ಪಡೆ”ಯೆಂದು (NW) ಗುರುತಿಸುತ್ತಾನೆ. ಹೌದು, ದೇಶವನ್ನು ವಿನಾಶಗೊಳಿಸಿ, ತೀವ್ರವಾದ ಕ್ಷಾಮವನ್ನು ಉಂಟುಮಾಡಲಿದ್ದ ಮಿಡತೆ ಉಪದ್ರವದ ಮೂಲನು ಆತನಾಗಿದ್ದನು. ಅದು ಯಾವಾಗ ಸಂಭವಿಸಲಿದೆ? “ಯೆಹೋವನ ದಿನ”ದ ಸ್ವಲ್ಪ ಮುಂಚೆಯೇ.
“ಅಮಲೇರಿದವರೇ, ಎಚ್ಚರಗೊಳ್ಳಿರಿ”!
7. (ಎ) ಯೆಹೂದದ ಧಾರ್ಮಿಕ ಮುಖಂಡರ ಸ್ಥಿತಿಯೇನಾಗಿತ್ತು? (ಬಿ) ಇಂದಿನ ಕ್ರೈಸ್ತಪ್ರಪಂಚದ ಮುಖಂಡರು, ಯೆಹೂದದ ಧಾರ್ಮಿಕ ಮುಖಂಡರ ಸ್ಥಿತಿಗೆ ಹೋಲುವಂತಹ ಸ್ಥಿತಿಯಲ್ಲಿರುವುದು ಹೇಗೆ?
7 ಈ ಆಜ್ಞೆಯು ಕೊಡಲ್ಪಟ್ಟಾಗ, ತಿರಸ್ಕಾರಾರ್ಹವಾದ ಜನಸಂದಣಿಯೊಂದನ್ನು—ಯೆಹೂದದ ಧಾರ್ಮಿಕ ಮುಖಂಡರನ್ನು—ಪ್ರತ್ಯೇಕಿಸಲಾಗುತ್ತದೆ: “ಅಮಲೇರಿದವರೇ, ಎಚ್ಚರಗೊಳ್ಳಿರಿ, ಅಳಿರಿ; ಕುಡಿಕರೇ, ಅರಚಿಕೊಳ್ಳಿರಿ; ದ್ರಾಕ್ಷಾರಸವು ನಿಮ್ಮ ಬಾಯಿಗೆ ಇನ್ನು ಬೀಳದು.” (ಯೋವೇಲ 1:5) ಹೌದು, ಯೆಹೂದದ ಆತ್ಮಿಕ ಕುಡುಕರಿಗೆ ‘ಎಚ್ಚರ’ಗೊಳ್ಳುವಂತೆ, ಸ್ತಿಮಿತಕ್ಕೆ ಬರುವಂತೆ ಹೇಳಲಾಯಿತು. ಆದರೆ ಇದು ಬರಿಯ ಪುರಾತನ ಇತಿಹಾಸವೆಂದು ನೆನಸಬೇಡಿರಿ. ಈಗಲೇ, ಯೆಹೋವನ ಮಹಾ ದಿನದ ಮುಂಚೆ, ಕ್ರೈಸ್ತಪ್ರಪಂಚದ ವೈದಿಕರು, ಸಾಂಕೇತಿಕವಾಗಿ ಎಷ್ಟು ದ್ರಾಕ್ಷಾರಸಮತ್ತರಾಗಿದ್ದಾರೆಂದರೆ, ಮಹೋನ್ನತನಿಂದ ಬರುತ್ತಿರುವ ಈ ಆಜ್ಞೆಯ ಕುರಿತಾಗಿ ಅವರಿಗೆ ಅರಿವೇ ಇಲ್ಲ. ಯೆಹೋವನ ಮಹಾ ಮತ್ತು ಭಯಪ್ರೇರಕ ದಿನದ ಮೂಲಕ ಅವರು ತಮ್ಮ ಅಮಲೇರಿದ ಮಂಪರಿನಿಂದ ಎಬ್ಬಿಸಲ್ಪಡುವಾಗ ಎಷ್ಟು ಆಶ್ಚರ್ಯಪಡುವರು!
8, 9. (ಎ) ಯೋವೇಲನು ಮಿಡತೆಗಳನ್ನು ಮತ್ತು ಅವುಗಳ ಉಪದ್ರವದ ಪರಿಣಾಮವನ್ನು ಹೇಗೆ ವರ್ಣಿಸುತ್ತಾನೆ? (ಬಿ) ಇಂದು, ಮಿಡತೆಗಳು ಯಾರನ್ನು ಪ್ರತಿನಿಧಿಸುತ್ತವೆ?
8 ಆ ಮಹಾ ಮಿಡತೆ ಸೈನ್ಯವನ್ನು ನೋಡಿರಿ! “ಇಗೋ, ನನ್ನ ದೇಶದ ಮೇಲೆ ಅಸಂಖ್ಯಾತಪ್ರಬಲಸೈನ್ಯವು ಬಂದಿದೆ; ಅದರ ಹಲ್ಲುಗಳು ಸಿಂಹದ ಹಲ್ಲುಗಳೇ, ಅದರ ಕೋರೆಗಳು ಮೃಗರಾಜನ ಕೋರೆಗಳೇ. ಅದು ನನ್ನ ದ್ರಾಕ್ಷೆಯ ಬಳ್ಳಿಗಳನ್ನು ಹಾಳುಮಾಡಿದೆ, ನನ್ನ ಅಂಜೂರದ ಗಿಡಗಳನ್ನು ಸಿಗಿದುಹಾಕಿದೆ, ಅವುಗಳನ್ನು ಬೋಳುಮಾಡಿ ಬಿಟ್ಟುಬಿಟ್ಟಿದೆ; ರೆಂಬೆಗಳು ಬಿಳುಪಾಗಿ ಹೋಗಿವೆ. [ದೇಶವೇ,] ತನ್ನ ಯೌವನಕಾಲದ ಪತಿಯ ವಿಯೋಗದುಃಖದಿಂದ ಗೋಣಿತಟ್ಟನ್ನುಟ್ಟುಕೊಂಡು ಗೋಳಾಡುವ ಯುವತಿಯಂತೆ ಗೋಳಾಡು.”—ಯೋವೇಲ 1:6-8.
9 ಇದು, ಯೆಹೂದಕ್ಕೆ ದಾಳಿಯಿಡುವ ಮಿಡತೆಗಳ ‘ಒಂದು ದೇಶ,’ ಒಂದು ಮಿಡತೆ ಹಿಂಡಿನ ಕುರಿತಾದ ಪ್ರವಾದನೆ ಮಾತ್ರವೊ? ಇಲ್ಲ, ಈ ಪ್ರವಾದನೆಗೆ ಹೆಚ್ಚಿನ ಮಹತ್ವಾರ್ಥವಿದೆ. ಯೋವೇಲ 1:6 ಮತ್ತು ಪ್ರಕಟನೆ 9:7ರಲ್ಲಿ, ದೇವರ ಜನರು ಮಿಡತೆಗಳಾಗಿ ಪ್ರತಿನಿಧಿಸಲ್ಪಟ್ಟಿದ್ದಾರೆ. ಆಧುನಿಕ ದಿನದ ಮಿಡತೆ ಸೈನ್ಯವು, ಈಗ ಯೇಸುವಿನ “ಬೇರೆ ಕುರಿ”ಗಳ ಸುಮಾರು 56,00,000 ಸಂಗಾತಿಗಳಿಂದ ಜೊತೆಗೂಡಿಸಲ್ಪಟ್ಟಿರುವ, ಯೆಹೋವನ ಅಭಿಷಿಕ್ತ ಮಿಡತೆಗಳ ಮಿಲಿಟರಿ ಪಡೆಯಲ್ಲದೆ ಬೇರೆ ಯಾರೂ ಅಲ್ಲ. (ಯೋಹಾನ 10:16) ಯೆಹೋವನ ಆರಾಧಕರ ಈ ಮಹಾ ಗುಂಪಿನ ಭಾಗವಾಗಿರಲು ನೀವು ಸಂತೋಷವುಳ್ಳವರಾಗಿರುವುದಿಲ್ಲವೋ?
10. ಯೆಹೂದದ ಮೇಲೆ ಮಿಡತೆ ಉಪದ್ರವದ ಪರಿಣಾಮವೇನಾಗಿದೆ?
10 ಮಿಡತೆ ಉಪದ್ರವದ ನಿರ್ದಿಷ್ಟ ಪರಿಣಾಮಗಳನ್ನು ನಾವು ಯೋವೇಲ 1:9-12 ಓದುತ್ತೇವೆ. ಒಂದರ ಅನಂತರ ಇನ್ನೊಂದು ಹಿಂಡು, ದೇಶಕ್ಕೆ ಸಂಪೂರ್ಣ ವಿನಾಶವನ್ನು ಬರಮಾಡಿದವು. ಧಾನ್ಯ, ದ್ರಾಕ್ಷಾಮದ್ಯ, ಮತ್ತು ಎಣ್ಣೆಯ ಕೊರತೆಯಿಂದಾಗಿ, ಅಪನಂಬಿಗಸ್ತ ಯಾಜಕರು ತಮ್ಮ ಕೆಲಸಗಳನ್ನು ಮುಂದುವರಿಸಲಾರದೆ ಹೋದರು. ನೆಲವೂ ಗೋಳಾಡಿತು, ಯಾಕಂದರೆ ಮಿಡತೆಗಳು ಅದರ ಧಾನ್ಯವನ್ನು ಸೂರೆಮಾಡಿದವು, ಮತ್ತು ಹಣ್ಣುಹಂಪಲಿನ ಮರಗಳು ಫಲವಿಲ್ಲದೆ ಬಿಡಲ್ಪಟ್ಟವು. ದ್ರಾಕ್ಷಾಬಳ್ಳಿಗಳು ಹಾಳುಗೆಡವಲ್ಪಟ್ಟದ್ದರಿಂದ, ಆತ್ಮಿಕ ಕುಡುಕರೂ ಆಗಿದ್ದ ಆ ಬಾಳ್‌ಪೂಜಕ ದ್ರಾಕ್ಷಾಮದ್ಯ ಪಾನಾಸಕ್ತರಿಗೆ ಇನ್ನು ಮುಂದೆ ದ್ರಾಕ್ಷಾಮದ್ಯವಿರಲಿಲ್ಲ.
“ಯಾಜಕರೇ, ನಿಮ್ಮ ಎದೆಬಡಿದುಕೊಳ್ಳಿರಿ”
11, 12. (ಎ) ಇಂದು ಯಾರು ದೇವರ ಯಾಜಕರಾಗಿರುವುದಾಗಿ ಹೇಳಿಕೊಳ್ಳುತ್ತಾರೆ? (ಬಿ) ಆಧುನಿಕ ದಿನದ ಮಿಡತೆ ಉಪದ್ರವದಿಂದ ಕ್ರೈಸ್ತಪ್ರಪಂಚದ ಧಾರ್ಮಿಕ ಮುಖಂಡರು ಹೇಗೆ ಬಾಧಿಸಲ್ಪಟ್ಟಿದ್ದಾರೆ?
11 ಆ ದಾರಿತಪ್ಪಿದ ಯಾಜಕರಿಗಾಗಿದ್ದ ದೇವರ ಸಂದೇಶಕ್ಕೆ ಕಿವಿಗೊಡಿರಿ: “ಯಾಜಕರೇ, ಗೋಣಿತಟ್ಟನ್ನು ಉಟ್ಟುಕೊಂಡು ಮೊರೆಯಿಡಿರಿ [“ಎದೆಬಡಿದುಕೊಳ್ಳಿರಿ,” NW]; ಯಜ್ಞವೇದಿಯ ಸೇವಕರೇ, ಗೋಳಾಡಿರಿ.” (ಯೋವೇಲ 1:13) ಯೋವೇಲನ ಪ್ರವಾದನೆಯ ಪ್ರಥಮ ನೆರವೇರಿಕೆಯಲ್ಲಿ, ಲೇವಿಸಂಬಂಧಿತ ಯಾಜಕರು ವೇದಿಯ ಬಳಿ ಸೇವೆಸಲ್ಲಿಸಿದರು. ಆದರೆ ಕೊನೆಯ ನೆರವೇರಿಕೆಯ ಕುರಿತಾಗಿ ಏನು? ಇಂದು, ಕ್ರೈಸ್ತಪ್ರಪಂಚದ ವೈದಿಕರು, ದೇವರ ವೇದಿಯ ಬಳಿ ಆತನ ಶುಶ್ರೂಷಕರು, ಆತನ “ಯಾಜಕರು” ಎಂದು ಹೇಳಿಕೊಳ್ಳುತ್ತಾ, ಸೇವೆಸಲ್ಲಿಸಲು ಅಧಿಕಾರವನ್ನು ವಹಿಸಿಕೊಂಡಿದ್ದಾರೆ. ಆದಾಗಲೂ, ಈಗ ದೇವರ ಆಧುನಿಕ ದಿನದ ಮಿಡತೆಗಳು ಸಂಚರಿಸುತ್ತಾ ಇರುವುದರಿಂದ, ಏನು ಸಂಭವಿಸುತ್ತಾ ಇದೆ?
12 ಯೆಹೋವನ ಜನರು ಕಾರ್ಯಪ್ರವೃತ್ತರಾಗಿರುವುದನ್ನು ಕ್ರೈಸ್ತಪ್ರಪಂಚದ “ಯಾಜಕರು” ನೋಡುವಾಗ, ಮತ್ತು ಅವರ ದೈವಿಕ ನ್ಯಾಯತೀರ್ಪಿನ ಎಚ್ಚರಿಕೆಯನ್ನು ಕೇಳಿಸಿಕೊಳ್ಳುವಾಗ, ಅವರು ರೋಷೋನ್ಮತ್ತರಾಗುತ್ತಾರೆ. ರಾಜ್ಯ ಸಂದೇಶದ ವಿನಾಶಕಾರಿ ಪರಿಣಾಮದಿಂದಾಗಿ, ಅವರು ಕ್ಲೇಶ ಮತ್ತು ಕೋಪದಿಂದ ತಮ್ಮ ಎದೆಬಡಿದುಕೊಳ್ಳುತ್ತಾರೆ. ಮತ್ತು ಅವರ ಹಿಂಡುಗಳು ಅವರನ್ನು ಬಿಟ್ಟುಹೋದಂತೆ ಅವರು ನಿಜವಾಗಿ ಗೋಳಾಡುತ್ತಾರೆ. ಅವರ ಹುಲ್ಲುಗಾವಲುಗಳು ಬರಿದುಗೊಳಿಸಲ್ಪಟ್ಟಿರುವುದರಿಂದ, ಅವರು ತಮ್ಮ ಸಂಪಾದನೆಯ ಮೂಲದ ನಷ್ಟಕ್ಕಾಗಿ ದುಃಖಿಸುತ್ತಾ, ರಾತ್ರಿಯನ್ನು ಗೋಣಿತಟ್ಟಿನಲ್ಲಿ ಕಳೆಯಲಿ. ಸ್ವಲ್ಪ ಸಮಯದೊಳಗೆ ಅವರು ತಮ್ಮ ಉದ್ಯೋಗಗಳನ್ನೂ ಕಳೆದುಕೊಳ್ಳುವರು! ವಾಸ್ತವದಲ್ಲಿ, ಅವರ ಅಂತ್ಯವು ಸಮೀಪವಾಗಿರುವುದರಿಂದ ಇಡೀ ರಾತ್ರಿ ಗೋಳಾಡುವಂತೆ ದೇವರು ಅವರಿಗೆ ಹೇಳುತ್ತಾನೆ.
13. ಕ್ರೈಸ್ತಪ್ರಪಂಚವು ಒಂದು ಗುಂಪಾಗಿ ಯೆಹೋವನ ಎಚ್ಚರಿಕೆಗೆ ಪ್ರತಿಕ್ರಿಯಿಸುವುದೊ?
13 ಯೋವೇಲ 1:14ಕ್ಕನುಸಾರ, ಅವರ ಏಕಮಾತ್ರ ನಿರೀಕ್ಷೆಯು, ಪಶ್ಚಾತ್ತಾಪಪಟ್ಟು, “ಯೆಹೋವನಿಗೆ ಸಹಾಯಕ್ಕಾಗಿ” (NW) ಮೊರೆಯಿಡುವುದರಲ್ಲಿ ಅಡಕವಾಗಿದೆ. ಕ್ರೈಸ್ತಪ್ರಪಂಚದ ಇಡೀ ವೈದಿಕ ವರ್ಗವು ಯೆಹೋವನ ಕಡೆಗೆ ತಿರುಗುವುದನ್ನು ನಾವು ನಿರೀಕ್ಷಿಸಸಾಧ್ಯವೊ? ಖಂಡಿತವಾಗಿಯೂ ಇಲ್ಲ! ಅವರೊಳಗೆ ಕೆಲವರು ಯೆಹೋವನ ಎಚ್ಚರಿಕೆಗೆ ಪ್ರತಿಕ್ರಿಯಿಸಬಹುದು. ಆದರೆ ಈ ಧಾರ್ಮಿಕ ಮುಖಂಡರ ಮತ್ತು ಅವರ ಸಭಿಕ ವರ್ಗದವರ ಆತ್ಮಿಕವಾಗಿ ಹಸಿದು ಕಂಗಾಲಾಗಿರುವ ಸ್ಥಿತಿಯು ಮುಂದುವರಿಯಲಿದೆ. ಪ್ರವಾದಿಯಾದ ಆಮೋಸನು ಮುಂತಿಳಿಸಿದ್ದು: “ಕರ್ತನಾದ ಯೆಹೋವನು ಇಂತೆನ್ನುತ್ತಾನೆ—ಆಹಾ, ನಾನು ದೇಶಕ್ಕೆ ಕ್ಷಾಮವನ್ನು ಉಂಟುಮಾಡುವ ದಿನಗಳು ಬರುತ್ತಿವೆ; ಅದು ಅನ್ನದ ಕ್ಷಾಮವಲ್ಲ, ನೀರಿನ ಕ್ಷಾಮವಲ್ಲ, ಯೆಹೋವನ ವಾಕ್ಯಗಳ ಕ್ಷಾಮವೇ.” (ಆಮೋಸ 8:11) ಇನ್ನೊಂದು ಕಡೆಯಲ್ಲಿ, ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಮೂಲಕ ದೇವರು ನಮಗೆ ಪ್ರೀತಿಯಿಂದ ಒದಗಿಸುತ್ತಿರುವ ಹೇರಳವಾದ ಆತ್ಮಿಕ ಔತಣಕ್ಕಾಗಿ ನಾವೆಷ್ಟು ಆಭಾರಿಗಳಾಗಿದ್ದೇವೆ!—ಮತ್ತಾಯ 24:45-47.
14. ಮಿಡತೆ ಉಪದ್ರವವು ಯಾವುದರ ಮುನ್ಸೂಚಕವಾಗಿದೆ?
14 ಮಿಡತೆಯ ಉಪದ್ರವವು ಯಾವುದೊ ಒಂದು ವಿಷಯದ ಮುನ್ಸೂಚಕವಾಗಿತ್ತು ಮತ್ತು ಆಗಿದೆ. ಅದು ಯಾವ ವಿಷಯದ ಮುನ್ಸೂಚಕವಾಗಿದೆ? ಹೀಗನ್ನುತ್ತಾ, ಯೋವೇಲನು ನಮಗೆ ಸ್ಪಷ್ಟವಾಗಿ ಹೇಳುತ್ತಾನೆ: “ಯೆಹೋವನ ದಿನವು ಸಮೀಪಿಸಿತು; ಅಯ್ಯೋ, ದಿನವೇ! ಅದು ಸರ್ವಶಕ್ತನಿಂದ ನಾಶನದಿನವಾಗಿಯೇ ಬರುವದು.” (ಯೋವೇಲ 1:15) ಇಂದು ದೇವರ ಮಿಡತೆ ಸೈನ್ಯದ ಲೋಕವ್ಯಾಪಕ ದಾಳಿಗಳು, ದೇವರ ಮಹಾ ಮತ್ತು ಭಯಪ್ರೇರಕ ದಿನವು ಸಮೀಪದಲ್ಲಿದೆಯೆಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತವೆ. ನಿಶ್ಚಯವಾಗಿಯೂ ಸಕಲ ಸಹೃದಯಿಗಳು, ದುಷ್ಟರ ವಿರುದ್ಧ ದೈವಿಕ ನ್ಯಾಯತೀರ್ಪು ಜಾರಿಗೊಳಿಸಲ್ಪಟ್ಟು, ಯೆಹೋವನು ವಿಶ್ವ ಪರಮಾಧಿಕಾರಿಯೋಪಾದಿ ವಿಜಯಿಯಾಗುವ ನ್ಯಾಯತೀರ್ಪಿನ ಆ ವಿಶೇಷ ದಿನಕ್ಕಾಗಿ ಹಾತೊರೆಯುತ್ತಾರೆ.
15. ದೇಶದ ದುಃಖಕರ ಪರಿಸ್ಥಿತಿಯ ನೋಟದಲ್ಲಿ, ದೈವಿಕ ಎಚ್ಚರಿಕೆಗಳನ್ನು ಪಾಲಿಸುವವರು ಹೇಗೆ ಪ್ರತಿಕ್ರಿಯಿಸುತ್ತಾರೆ?
15 ಯೋವೇಲ 1:16-20 ತೋರಿಸುವಂತೆ, ಪ್ರಾಚೀನಕಾಲದ ಯೆಹೂದದಲ್ಲಿ ಆಹಾರದ ಸರಬರಾಯಿ ನಿಂತುಹೋಯಿತು. ಆನಂದವೂ ಕೊನೆಗೊಂಡಿತು. ಉಗ್ರಾಣಗಳು ಬರಿದಾಗಿದ್ದವು, ಮತ್ತು ಕಣಜಗಳನ್ನು ಒಡೆದುಹಾಕಬೇಕಾಯಿತು. ಮಿಡತೆಗಳು ದೇಶದಿಂದ ಸಸ್ಯಗಳನ್ನು ಬರಿದುಮಾಡಿದ್ದರಿಂದ, ಹುಲ್ಲುಗಾವಲುಗಳಿಲ್ಲದೆ ಜಾನುವಾರುಗಳು ಗಲಿಬಿಲಿಯಿಂದ ಅಲ್ಲಿಲ್ಲಿ ಅಡ್ಡಾಡಿದವು ಮತ್ತು ಕುರಿಗಳ ಹಿಂಡುಗಳು ಸತ್ತವು. ಎಂತಹ ಒಂದು ವಿಪತ್ತು! ಅಂತಹ ಪರಿಸ್ಥಿತಿಗಳ ನಡುವೆ ಯೋವೇಲನಿಗೇನಾಯಿತು? ವಚನ 19ಕ್ಕನುಸಾರ, ಅವನು ಹೇಳಿದ್ದು: “ಯೆಹೋವಾ, ನಿನಗೆ ಮೊರೆಯಿಡುತ್ತೇನೆ.” ಇಂದೂ, ಅನೇಕರು ದೈವಿಕ ಎಚ್ಚರಿಕೆಗಳನ್ನು ಲಕ್ಷಿಸಿ, ನಂಬಿಕೆಯಿಂದ ಯೆಹೋವ ದೇವರಿಗೆ ಮೊರೆಯಿಡುತ್ತಾರೆ.
“ಯೆಹೋವನ ದಿನವು ಬರುತ್ತಲಿದೆ”
16. “ದೇಶನಿವಾಸಿಗಳು” ಏಕೆ ನಡುಗಬೇಕು?
16 ದೇವರಿಂದ ಬರುವ ಈ ಆಜ್ಞೆಗೆ ಕಿವಿಗೊಡಿರಿ: “ಚೀಯೋನಿನಲ್ಲಿ ಕೊಂಬೂದಿರಿ, ನನ್ನ ಪರಿಶುದ್ಧಪರ್ವತದಲ್ಲಿ ದನಿಗೈಯಿರಿ; ಸಮಸ್ತ ದೇಶನಿವಾಸಿಗಳು ನಡುಗಲಿ.” (ಯೋವೇಲ 2:1) ಆ ರೀತಿಯಲ್ಲಿ ಏಕೆ ಪ್ರತಿಕ್ರಿಯಿಸಬೇಕು? ಪ್ರವಾದನೆಯು ಉತ್ತರಿಸುವುದು: “ಯೆಹೋವನ ದಿನವು ಬರುತ್ತಲಿದೆ, ಸಮೀಪಿಸಿತು; ಅದು ಕತ್ತಲಿನ ಮೊಬ್ಬಿನ ದಿನ, ಕಾರ್ಮುಗಿಲ ಕಗ್ಗತ್ತಲ ದಿನ. ಉದಯವು ಬೆಟ್ಟಗಳ ಮೇಲೆ ಹರಡಿಕೊಳ್ಳುವ ಹಾಗೆ.” (ಯೋವೇಲ 2:1, 2) ಯೆಹೋವನ ಮಹಾ ದಿನಕ್ಕೆ ನಿಜವಾದ ತುರ್ತಿನ ಪ್ರಜ್ಞೆಯು ಜೋಡಿಸಲ್ಪಟ್ಟಿದೆ.
17. ಮಿಡತೆ ಉಪದ್ರವದಿಂದ, ಯೆಹೂದದ ಭೂಮಿ ಮತ್ತು ಅದರಲ್ಲಿನ ಜನರು ಹೇಗೆ ಬಾಧಿಸಲ್ಪಟ್ಟರು?
17 ಆ ಮಿಡತೆಗಳು, ಒಂದು ವಾಸ್ತವಿಕ ಪ್ರಮೋದವನವನ್ನು ಬರಿದಾದ ಹಾಳುಭೂಮಿಯಾಗಿ ಪರಿವರ್ತಿಸಿದಂತೆ, ಪ್ರವಾದಿಯ ದರ್ಶನದ ಮಹತ್ತರ ಪ್ರಭಾವವನ್ನು ಊಹಿಸಿಕೊಳ್ಳಿರಿ. ಮಿಡತೆ ಸೈನ್ಯದ ವರ್ಣನೆಗೆ ಕಿವಿಗೊಡಿರಿ: “ಆ ದಂಡಾಳುಗಳ ರೂಪವು ಕುದುರೆಗಳ ರೂಪದಂತೆ ಕಾಣಿಸುತ್ತದೆ; ಅವು ಸವಾರರಂತೆ ಓಡಾಡುತ್ತವೆ. ಪರ್ವತಾಗ್ರಗಳಲ್ಲಿ ಅವು ಹಾರಾಡುವ ಶಬ್ದವು ರಥಗಳ ಚೀತ್ಕಾರದಂತೆಯೂ ಕೂಳೆಯನ್ನು ನುಂಗುವ ಬೆಂಕಿಯ ಚಟಪಟ ಧ್ವನಿಯ ಹಾಗೂ ಕೇಳಿಸುತ್ತದೆ; ಅವು ವ್ಯೂಹಕಟ್ಟಿಕೊಂಡ ಪ್ರಬಲವಾದ ಸೈನ್ಯವೇ. ಅವುಗಳ ದೆಸೆಯಿಂದ ಜನಾಂಗಗಳು ಸಂಕಟಪಡುತ್ತವೆ; ಎಲ್ಲರ ಮುಖಗಳೂ ಬಾಡಿಹೋಗುತ್ತವೆ.” (ಯೋವೇಲ 2:4-6) ಯೋವೇಲನ ದಿನದ ಮಿಡತೆ ಉಪದ್ರವದ ಸಮಯದಲ್ಲಿ, ಬಾಳನ ಆರಾಧಕರ ಕಡು ಸಂಕಟವು ಹೆಚ್ಚಿತು, ಮತ್ತು ವ್ಯಾಕುಲತೆಯ ಆವೇಗವನ್ನು ಅವರ ಮುಖಗಳಲ್ಲಿ ನೋಡಸಾಧ್ಯವಿತ್ತು.
18, 19. ಇಂದು ದೇವರ ಜನರ ಚಟುವಟಿಕೆಯು ಹೇಗೆ ಒಂದು ಮಿಡತೆ ಉಪದ್ರವದಂತೆ ಇರುತ್ತದೆ?
18 ಆ ವ್ಯವಸ್ಥಿತ, ದಣಿಯದ ಮಿಡತೆಗಳನ್ನು ಯಾವುದೂ ತಡೆಯಲಿಲ್ಲ. ಅವು “ಶೂರರಂತೆ” ಓಡಿದವು, ಮತ್ತು ಗೋಡೆಗಳನ್ನು ಹತ್ತಿ ಆಕ್ರಮಿಸಿದವು. ‘ಅವುಗಳಲ್ಲಿ ಕೆಲವು ಆಯುಧಗಳಿಗೆ ಬಲಿಬಿದ್ದಾಗ, ಬೇರೆಯವು ತಮ್ಮ ಸಾಲುಗಳನ್ನು ಬಿಟ್ಟುಬಿಡಲಿಲ್ಲ.’ (ಯೋವೇಲ 2:7, 8) ಸಾಂಕೇತಿಕ ಮಿಡತೆಗಳ ದೇವರ ಈಗಿನ ದಿನದ ಸೈನ್ಯದ ಎಂತಹ ಒಂದು ಸುವ್ಯಕ್ತ ಪ್ರವಾದನಾ ಚಿತ್ರಣ! ಇಂದು ಕೂಡ, ಯೆಹೋವನ ಮಿಡತೆ ಸೈನ್ಯವು, ನೇರವಾಗಿ ಮುಂದೊತ್ತುತ್ತಾ ಇದೆ. ಸುಳ್ಳು ಧಾರ್ಮಿಕ ವೈರತ್ವದ ಯಾವುದೇ “ಗೋಡೆ”ಯು ಅವರನ್ನು ತಡೆಯುವುದಿಲ್ಲ. ಜರ್ಮನಿಯ ನಾಸಿ ಆಳ್ವಿಕೆಯ ಸಮಯದಲ್ಲಿ ಹಿಟ್ಲರನಿಗೆ ಜಯಕಾರವೆತ್ತಲು ನಿರಾಕರಿಸಿದ್ದಕ್ಕಾಗಿ ‘ಆಯುಧಗಳ ನಡುವೆ ಬಿದ್ದ’ ಸಾವಿರಾರು ಸಾಕ್ಷಿಗಳ ಹಾಗೆಯೇ, ಅವರು ದೇವರಿಗೆ ತಮ್ಮ ಸಮಗ್ರತೆಯನ್ನು ರಾಜಿಮಾಡಿಕೊಳ್ಳುವುದಿಲ್ಲ, ಬದಲಿಗೆ ಮರಣವನ್ನೂ ಎದುರಿಸಲು ಸಿದ್ಧರಿದ್ದಾರೆ.
19 ದೇವರ ಆಧುನಿಕ ದಿನದ ಮಿಡತೆ ಸೈನ್ಯವು, ಕ್ರೈಸ್ತಪ್ರಪಂಚದ “ಪಟ್ಟಣ”ದಲ್ಲಿ ಒಂದು ಸಂಪೂರ್ಣ ಸಾಕ್ಷಿಯನ್ನು ಕೊಟ್ಟಿದೆ. (ಯೋವೇಲ 2:9) ಲೋಕದಾದ್ಯಂತ ಅವರು ಹಾಗೆ ಮಾಡಿದ್ದಾರೆ. ಯೆಹೋವನ ಸಂದೇಶವನ್ನು ಘೋಷಿಸುತ್ತಿರುವಾಗ, ಕೋಟಿಗಟ್ಟಲೆ ಮನೆಗಳನ್ನು ಪ್ರವೇಶಿಸುತ್ತಾ, ಬೀದಿಯಲ್ಲಿ ಜನರನ್ನು ಸಮೀಪಿಸುತ್ತಾ, ಅವರೊಂದಿಗೆ ಫೋನ್ ಮೂಲಕ ಮಾತಾಡುತ್ತಾ ಮತ್ತು ಸಾಧ್ಯವಿರುವ ಯಾವುದೇ ವಿಧದಲ್ಲಿ ಅವರನ್ನು ಸಂಪರ್ಕಿಸುತ್ತಾ ಅವರು ಈಗಲೂ ಎಲ್ಲ ಅಡಚಣೆಗಳನ್ನು ದಾಟುತ್ತಿದ್ದಾರೆ. ನಿಜವಾಗಿಯೂ, ಅವರು ತಮ್ಮ ಕೊನೆಯಿಲ್ಲದ ಶುಶ್ರೂಷೆಯಲ್ಲಿ—ಸಾರ್ವಜನಿಕವಾಗಿಯೂ ಮನೆಯಿಂದ ಮನೆಯಲ್ಲೂ—ನೂರಾರು ಕೋಟಿ ಬೈಬಲ್ ಪ್ರಕಾಶನಗಳನ್ನು ವಿತರಿಸಿದ್ದಾರೆ ಮತ್ತು ಇನ್ನೂ ಅನೇಕಾನೇಕ ಪ್ರಕಾಶನಗಳನ್ನು ಹಂಚುವರು.—ಅ. ಕೃತ್ಯಗಳು 20:20, 21.
20. ಆಧುನಿಕ ದಿನದ ಮಿಡತೆಗಳನ್ನು ಯಾರು ಬೆಂಬಲಿಸುತ್ತಿದ್ದಾನೆ, ಮತ್ತು ಯಾವ ಫಲಿತಾಂಶಗಳೊಂದಿಗೆ?
20 ಮಿಡತೆಗಳ ಒಂದು ಅತಿ ದೊಡ್ಡ ಹಿಂಡು, ಸೂರ್ಯ, ಚಂದ್ರ ಮತ್ತು ನಕ್ಷತ್ರಗಳನ್ನು ಮರೆಮಾಡಬಲ್ಲ ಒಂದು ಕಾರ್ಮುಗಿಲಿನಂತಿದೆ ಎಂದು ಯೋವೇಲ 2:10 ತೋರಿಸುತ್ತದೆ. (ಯೆಶಾಯ 60:8ನ್ನು ಹೋಲಿಸಿ.) ಈ ಮಿಲಿಟರಿ ಪಡೆಯ ಹಿಂದೆ ಯಾರಿದ್ದಾನೆಂಬ ವಿಷಯದಲ್ಲಿ ಯಾವುದೇ ಸಂದೇಹವಿದೆಯೊ? ಮಿಡತೆಯ ಆರ್ಭಟವನ್ನು ಮೀರಿ, ನಾವು ಯೋವೇಲ 2:11ರ ಈ ಮಾತುಗಳನ್ನು ಕೇಳಿಸಿಕೊಳ್ಳುತ್ತೇವೆ: “ಯೆಹೋವನು ತನ್ನ ಸೈನ್ಯದ ಮುಂದೆ ದನಿಗೈಯುತ್ತಾನೆ; ಆತನ ದಂಡು ಬಹು ದೊಡ್ಡದು; ತನ್ನ ಮಾತನ್ನು ನೆರವೇರಿಸಿಕೊಳ್ಳುವಾತನು ಬಲಿಷ್ಠನಾಗಿದ್ದಾನೆ; ಯೆಹೋವನ ದಿನವು ಮಹತ್ತರವೂ ಅತಿ ಭಯಂಕರವೂ ಆಗಿದೆ; ಅದನ್ನು ತಾಳಿಕೊಳ್ಳುವವರು ಯಾರು?” ಹೌದು, ಯೆಹೋವ ದೇವರು ಈಗ, ತನ್ನ ಮಹಾ ದಿನದ ಮುಂಚೆ, ಮಿಡತೆಗಳ ತನ್ನ ಮಿಲಿಟರಿ ಪಡೆಯನ್ನು ಕಳುಹಿಸುತ್ತಿದ್ದಾನೆ.
‘ಯೆಹೋವನು ತಡಮಾಡುವವನಲ್ಲ’
21. ‘ಯೆಹೋವನ ದಿನವು ಕಳ್ಳನಂತೆ ಬರು’ವಾಗ ಏನು ಫಲಿಸುವುದು?
21 ಯೋವೇಲನಂತೆ, ಅಪೊಸ್ತಲ ಪೇತ್ರನು ಯೆಹೋವನ ಮಹಾ ದಿನದ ಕುರಿತಾಗಿ ಮಾತಾಡಿದನು. ಅವನು ಬರೆದುದು: “ಕರ್ತನ ದಿನವು ಕಳ್ಳನು ಬರುವಂತೆ ಬರುತ್ತದೆ. ಆ ದಿನದಲ್ಲಿ ಆಕಾಶಮಂಡಲವು ಮಹಾಘೋಷದಿಂದ ಇಲ್ಲದೆ ಹೋಗುವದು, ಸೂರ್ಯ ಚಂದ್ರ ನಕ್ಷತ್ರಗಳು ಉರಿದು ಲಯವಾಗಿ ಹೋಗುವವು, ಭೂಮಿಯೂ ಅದರಲ್ಲಿರುವ ಕೆಲಸಗಳೂ ಸುಟ್ಟುಹೋಗುವವು.” (2 ಪೇತ್ರ 3:10) ಪಿಶಾಚನಾದ ಸೈತಾನನ ಪ್ರಭಾವದ ಕೆಳಗೆ, ದುಷ್ಟ ಸರಕಾರೀ “ಆಕಾಶಮಂಡಲವು,” ದೇವರಿಂದ ದೂರಸರಿದಿರುವ ಮಾನವಕುಲವಾಗಿರುವ “ಭೂಮಿ”ಯನ್ನು ಆಳುತ್ತದೆ. (ಎಫೆಸ 6:12; 1 ಯೋಹಾನ 5:19) ಈ ಸಾಂಕೇತಿಕ ಆಕಾಶಮಂಡಲ ಮತ್ತು ಭೂಮಿಯು, ಯೆಹೋವನ ಮಹಾ ದಿನದಲ್ಲಿ ದೈವಿಕ ಕೋಪದ ತಾಪದಿಂದ ಪಾರಾಗದಿರುವವು. ಬದಲಿಗೆ, ಅವು ‘ನೀತಿಯು ವಾಸವಾಗಿರುವ ನೂತನಾಕಾಶಮಂಡಲ ಮತ್ತು ನೂತನಭೂಮಂಡಲ’ದಿಂದ ಸ್ಥಾನಪಲ್ಲಟಗೊಳಿಸಲ್ಪಡುವವು.—2 ಪೇತ್ರ 3:13.
22, 23. (ಎ) ಯೆಹೋವನ ದಯಾಪರ, ತಾಳ್ಮೆಯ ತೋರಿಸುವಿಕೆಗೆ ನಾವು ಹೇಗೆ ಪ್ರತಿಕ್ರಿಯಿಸಬೇಕು? (ಬಿ) ಯೆಹೋವನ ದಿನದ ಸಾಮೀಪ್ಯಕ್ಕೆ ನಾವು ಹೇಗೆ ಪ್ರತಿಕ್ರಿಯಿಸಬೇಕು?
22 ಸದ್ಯದ ದಿನದ ಎಲ್ಲ ಅಪಕರ್ಷಣೆಗಳು ಮತ್ತು ನಂಬಿಕೆಯ ಪರೀಕ್ಷೆಗಳಿಂದಾಗಿ, ನಾವು ನಮ್ಮ ದಿನಗಳ ತುರ್ತು ಪರಿಸ್ಥಿತಿಯನ್ನು ಅಲಕ್ಷಿಸುವ ಸಾಧ್ಯತೆಯಿದೆ. ಆದರೆ ಸಾಂಕೇತಿಕ ಮಿಡತೆಗಳು ಸದಾ ಮುಂದೊತ್ತಿದಂತೆ, ಅನೇಕ ಜನರು ರಾಜ್ಯ ಸಂದೇಶಕ್ಕೆ ಪ್ರತಿಕ್ರಿಯೆ ತೋರಿಸುತ್ತಿದ್ದಾರೆ. ಇದಕ್ಕಾಗಿ ದೇವರು ಸಮಯವನ್ನು ಅನುಮತಿಸಿದ್ದಾನಾದರೂ, ನಾವು ಆತನ ತಾಳ್ಮೆಯನ್ನು ತಡಮಾಡುವಿಕೆಯೆಂದು ತಪ್ಪುತಿಳಿಯಬಾರದು. “ಕರ್ತನು [“ಯೆಹೋವನು,” NW] ತನ್ನ ವಾಗ್ದಾನವನ್ನು ನೆರವೇರಿಸುವದಕ್ಕೆ ತಡಮಾಡುತ್ತಾನೆಂಬದಾಗಿ ಕೆಲವರು ಅರ್ಥಮಾಡಿಕೊಳ್ಳುವ ಪ್ರಕಾರ ಆತನು ತಡಮಾಡುವವನಲ್ಲ. ಯಾವನಾದರೂ ನಾಶವಾಗುವದರಲ್ಲಿ ಆತನು ಇಷ್ಟಪಡದೆ ಎಲ್ಲರೂ ತನ್ನ ಕಡೆಗೆ ತಿರುಗಿಕೊಳ್ಳಬೇಕೆಂದು ಅಪೇಕ್ಷಿಸುವವನಾಗಿದ್ದು ನಿಮ್ಮ ವಿಷಯದಲ್ಲಿ ದೀರ್ಘಶಾಂತಿಯುಳ್ಳವನಾಗಿದ್ದಾನೆ.”—2 ಪೇತ್ರ 3:9.
23 ನಾವು ಯೆಹೋವನ ಮಹಾ ದಿನಕ್ಕಾಗಿ ಕಾಯುತ್ತಿರುವಾಗ, 2 ಪೇತ್ರ 3:11, 12ರಲ್ಲಿ ದಾಖಲಿಸಲ್ಪಟ್ಟಿರುವ ಆ ಅಪೊಸ್ತಲನ ಮಾತುಗಳನ್ನು ಹೃದಯಕ್ಕೆ ತೆಗೆದುಕೊಳ್ಳೋಣ: “ಇವೆಲ್ಲವುಗಳು ಹೀಗೆ ಲಯವಾಗಿ ಹೋಗುವದರಿಂದ ನೀವು ದೇವರ ದಿನದ ಪ್ರತ್ಯಕ್ಷತೆಯನ್ನು ಎದುರುನೋಡುತ್ತಾ ಹಾರೈಸುತ್ತಾ ಎಷ್ಟೋ ಪರಿಶುದ್ಧವಾದ ನಡವಳಿಕೆಯೂ [“ಪವಿತ್ರ ಕೃತ್ಯಗಳು,” NW] ಭಕ್ತಿಯೂ [“ದೇವಭಕ್ತಿಯ ಕ್ರಿಯೆಗಳು,” NW] ಉಳ್ಳವರಾಗಿರಬೇಕಲ್ಲಾ; ಆ ದಿನದಲ್ಲಿ ಆಕಾಶಮಂಡಲವು ಬೆಂಕಿ ಹತ್ತಿ ಲಯವಾಗಿ ಹೋಗುವದು, ಸೂರ್ಯ ಚಂದ್ರ ನಕ್ಷತ್ರಗಳು ಉರಿದು ಕರಗಿ ಹೋಗುವವು.” ಈ ಕೃತ್ಯಗಳು ಮತ್ತು ಕ್ರಿಯೆಗಳು ನಿಶ್ಚಯವಾಗಿಯೂ, ಅಂತ್ಯವು ಬರುವ ಮುಂಚೆ ರಾಜ್ಯದ ಸುವಾರ್ತೆಯನ್ನು ಸಾರುವುದರಲ್ಲಿ ಒಂದು ನಿರಂತರ ಮತ್ತು ಅರ್ಥಪೂರ್ಣ ಪಾಲನ್ನು ತೆಗೆದುಕೊಳ್ಳುವ ಮೂಲಕ ಯೆಹೋವನ ಮಿಡತೆ ಸೈನ್ಯದೊಂದಿಗೆ ನಾವು ಸಮವಾಗಿ ಹೆಜ್ಜೆಹಾಕುವುದನ್ನು ಒಳಗೊಳ್ಳುತ್ತದೆ.—ಮಾರ್ಕ 13:10.
24, 25. (ಎ) ಯೆಹೋವನ ಮಿಡತೆ ಸೈನ್ಯದ ಕೆಲಸದಲ್ಲಿ ಪಾಲ್ಗೊಳ್ಳುವ ಸುಯೋಗಕ್ಕೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ? (ಬಿ) ಯೋವೇಲನು ಯಾವ ಅರ್ಥಭರಿತ ಪ್ರಶ್ನೆಯನ್ನು ಎಬ್ಬಿಸುತ್ತಾನೆ?
24 ಯೆಹೋವನ ಮಹಾ ಮತ್ತು ಭಯಪ್ರೇರಕ ದಿನವು ಎರಗುವ ಸಮಯದ ತನಕ ದೇವರ ಮಿಡತೆ ಸೈನ್ಯವು ತನ್ನ ಈ ಕೆಲಸವನ್ನು ನಿಲ್ಲಿಸದು. ಈ ನಿಲ್ಲಿಸಲಾಗದ ಮಿಡತೆ ಪಡೆಯ ಅಸ್ತಿತ್ವವೇ, ಯೆಹೋವನ ದಿನವು ಸಮೀಪವಾಗಿದೆಯೆಂಬುದಕ್ಕೆ ಗಮನಾರ್ಹವಾದ ರುಜುವಾತಾಗಿದೆ. ಯೆಹೋವನ ಮಹಾ ಮತ್ತು ಭಯಪ್ರೇರಕ ದಿನದ ಮುಂಚಿನ ಕೊನೆಯ ಆಕ್ರಮಣದಲ್ಲಿ, ದೇವರ ಅಭಿಷಿಕ್ತ ಮಿಡತೆಗಳ ಮತ್ತು ಅವುಗಳ ಸಂಗಾತಿಗಳ ನಡುವೆ ಸೇವೆ ಸಲ್ಲಿಸಲು ನೀವು ಹರ್ಷಿತರಾಗಿಲ್ಲವೊ?
25 ಯೆಹೋವನ ಆ ದಿನವು ಎಷ್ಟು ಮಹತ್ತರವಾದುದಾಗಿರುವುದು! ಈ ಪ್ರಶ್ನೆಯು ಎಬ್ಬಿಸಲ್ಪಟ್ಟಿರುವುದು ಆಶ್ಚರ್ಯಕರವಲ್ಲ: “ಅದನ್ನು ತಾಳಿಕೊಳ್ಳುವವರು ಯಾರು?” (ಯೋವೇಲ 2:11) ಈ ಪ್ರಶ್ನೆ ಮತ್ತು ಇತರ ಅನೇಕ ಪ್ರಶ್ನೆಗಳು ಮುಂದಿನ ಎರಡು ಲೇಖನಗಳಲ್ಲಿ ಪರಿಗಣಿಸಲ್ಪಡುವವು.
ನೀವು ವಿವರಿಸಬಲ್ಲಿರೊ?
◻ ಯೆಹೋವನು ಯೆಹೂದದ ಮೇಲೆ ಬರಲಿದ್ದ ಮಿಡತೆಗಳ ಉಪದ್ರವದ ಕುರಿತಾಗಿ ಎಚ್ಚರಿಸಿದ್ದೇಕೆ?
◻ ಯೋವೇಲ ಪ್ರವಾದಿಯ ಆಧುನಿಕ ದಿನದ ನೆರವೇರಿಕೆಯಲ್ಲಿ, ಯೆಹೋವನ ಮಿಡತೆಗಳು ಯಾರು?
◻ ಕ್ರೈಸ್ತಪ್ರಪಂಚದ ಮುಖಂಡರು ಮಿಡತೆ ಉಪದ್ರವಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ, ಮತ್ತು ಅವರಲ್ಲಿ ಕೆಲವರು ಅದರ ಫಲಿತಾಂಶಗಳಿಂದ ಹೇಗೆ ಪಾರಾಗುತ್ತಾರೆ?
◻ 20ನೆಯ ಶತಮಾನದಲ್ಲಿ ಮಿಡತೆ ಉಪದ್ರವವು ಎಷ್ಟು ವಿಸ್ತೃತವಾಗಿದೆ, ಮತ್ತು ಎಷ್ಟರ ವರೆಗೆ ಅದು ಮುಂದುವರಿಯುವುದು?
[ಪುಟ 10 ರಲ್ಲಿರುವ ಚಿತ್ರ]
ಮಿಡತೆ ಉಪದ್ರವವು, ಇನ್ನೂ ಹೆಚ್ಚು ಕೆಟ್ಟದ್ದಾದ ಯಾವುದೊ ವಿಷಯದ ಮುನ್ಸೂಚಕವಾಗಿತ್ತು
[ಪುಟ 10 ರಲ್ಲಿರುವ ಚಿತ್ರ]
ಫಲಬಿಡದ ಮರ: FAO photo/G. Singh
[ಪುಟ 10 ರಲ್ಲಿರುವ ಚಿತ್ರ]
ಯೆಹೋವ ದೇವರು ಆಧುನಿಕ ದಿನದ ಮಿಡತೆ ಉಪದ್ರವದ ಹಿಂದೆ ಇದ್ದಾನೆ
[ಕೃಪೆ]
ಮಿಡತೆ: FAO photo/G. Tortoli; ಮಿಡತೆ ಹಿಂಡು: FAO photo/Desert Locust Survey