ಸಂಪತ್ತು ಮತ್ತು ವಿವೇಕವಿದ್ದ ಒಬ್ಬ ಅರಸ
ಐಶ್ವರ್ಯವು ನಿಮಗೆ ಸಂತೋಷವನ್ನು ಉಂಟುಮಾಡುವುದೆಂದು ನೀವು ನೆನಸುತ್ತೀರೊ? ಯಾರೋ ಒಬ್ಬರು ನಿಮಗೆ ದೊಡ್ಡ ಮೊತ್ತದ ಹಣವನ್ನು ಕೊಡುವಲ್ಲಿ, ನೀವು ಸಂತೋಷಿಸಲಾರಿರೊ? ಬಹುಶಃ ನೀವು ಸಂತೋಷಿಸುವಿರಿ. ಹಾಗೆಯೇ ಅದನ್ನು ಖರ್ಚುಮಾಡುವ ವಿಧಗಳ ಕುರಿತು ನೀವು ಯೋಚಿಸಬಹುದು.
ಜೀವಿತವನ್ನು ಹೆಚ್ಚು ಸುಖಕರವಾಗಿಯೂ ಆನಂದದಾಯಕವಾಗಿಯೂ ಮಾಡಲು, ಖರೀದಿಸಬೇಕಾದ ವಸ್ತುಗಳು ಹೇರಳವಾಗಿವೆ ಎಂಬುದು ಒಪ್ಪತಕ್ಕ ವಿಷಯವೇ. ರೋಗ ಇಲ್ಲವೆ ನಿರುದ್ಯೋಗದಂತಹ ಅನಿರೀಕ್ಷಿತ ಸಮಸ್ಯೆಗಳು ಬರುವಾಗ, ಹಣವು “ಸಂರಕ್ಷಣೆಗಾಗಿಯೂ” (NW) ಕಾರ್ಯನಡಿಸಬಲ್ಲದು.—ಪ್ರಸಂಗಿ 7:12.
ಆದರೆ ಹಣ ಮತ್ತು ಸಂತೋಷದ ನಡುವಿನ ಸಂಬಂಧವೇನು? ಸಂತೋಷವು ಸಂಪತ್ತಿನ ಉಪಫಲವಾಗಿದೆ ಎಂದು ಅನೇಕರು ನೆನಸುವಂತೆ ನೀವೂ ನೆನಸುತ್ತೀರೊ? ಈ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳುವುದು ಕಷ್ಟಕರವಾಗಿರಬಹುದು, ಏಕೆಂದರೆ ಹಣವನ್ನು ಸುಲಭವಾಗಿ ಅಳೆಯಸಾಧ್ಯವಿದೆ, ಇಲ್ಲವೆ ಲೆಕ್ಕಿಸಸಾಧ್ಯವಿದೆ, ಆದರೆ ಸಂತೋಷವನ್ನು ಅಳೆಯಸಾಧ್ಯವಿಲ್ಲ. ನೀವು ಸಂತೋಷವನ್ನು ತಕ್ಕಡಿಯ ಮೇಲಿರಿಸಿ ತೂಗಸಾಧ್ಯವಿಲ್ಲ.
ಹಾಗಿರುವಾಗಲೂ, ಕೆಲವು ಶ್ರೀಮಂತರು ಸಂತೋಷದಿಂದಿರುವಂತೆ ತೋರಿದರೂ ಇತರರ ಸ್ಥಿತಿ ಸಂಕಟಕರವಾಗಿರುತ್ತದೆ. ಬಡವರಾಗಿರುವವರ ವಿಷಯದಲ್ಲಿಯೂ ಇದು ಸತ್ಯವಾಗಿದೆ. ಆದರೂ, ಹೆಚ್ಚಿನ ಹಣವು ಹೆಚ್ಚಿನ ಸಂತೋಷವನ್ನು ತರುವುದೆಂದು ಅಧಿಕಾಂಶ ಜನರು—ಈಗಾಗಲೇ ಧನವಂತರಾಗಿರುವವರು ಕೂಡ—ನಂಬುತ್ತಾರೆ.
ಇಂತಹ ವಿಷಯಗಳ ಕುರಿತು ಬರೆದಂತಹ ಒಬ್ಬ ವ್ಯಕ್ತಿ, ಪ್ರಾಚೀನ ಇಸ್ರಾಯೇಲಿನ ಅರಸನಾದ ಸೊಲೊಮೋನನಾಗಿದ್ದನು. ಅವನು ಜೀವಿಸಿದ್ದವರಲ್ಲಿಯೇ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬನಾಗಿದ್ದನು. ಅವನಲ್ಲಿದ್ದ ಅಪಾರ ಸಂಪತ್ತಿನ ವಿವರಣೆಯ ಕುರಿತು, ನೀವು ಬೈಬಲಿನ ಒಂದನೆಯ ಅರಸುಗಳು ಪುಸ್ತಕದ, 10ನೆಯ ಅಧ್ಯಾಯದಲ್ಲಿ ಓದಸಾಧ್ಯವಿದೆ. ಉದಾಹರಣೆಗೆ, 14 ಮತ್ತು 15ನೆಯ ವಚನಗಳು ಹೀಗೆ ಹೇಳುವುದನ್ನು ಗಮನಿಸಿರಿ: “ಸೊಲೊಮೋನನಿಗೆ . . . ಪ್ರತಿವರುಷ ಆರುನೂರರುವತ್ತಾರು ತಲಾಂತು ಬಂಗಾರವು ದೊರಕುತ್ತಿತ್ತು.” (ಓರೆಅಕ್ಷರಗಳು ನಮ್ಮವು.) ಆ ಸಂಖ್ಯೆಯು 25 ಟನ್ಗಳಷ್ಟು ಬಂಗಾರಕ್ಕೆ ಸರಿಸಮವಾಗಿದೆ. ಇಂದು, ಅಷ್ಟೊಂದು ಬಂಗಾರದ ಮೌಲ್ಯವು, ರೂ. 7,75,00,00,000ಗಳಿಗಿಂತಲೂ ಹೆಚ್ಚಾಗಿರುವುದು!
ಆದರೂ, ಸೊಲೊಮೋನನು ಕೇವಲ ಐಶ್ವರ್ಯವಂತನಾಗಿರಲಿಲ್ಲ; ದೇವರು ಅವನಿಗೆ ವಿವೇಕವನ್ನು ನೀಡುವ ಮೂಲಕ ಆಶೀರ್ವದಿಸಿದ್ದನು. ಬೈಬಲು ಹೇಳುವುದು: “ಅರಸನಾದ ಸೊಲೊಮೋನನು ಐಶ್ವರ್ಯದಲ್ಲಿಯೂ ಜ್ಞಾನದಲ್ಲಿಯೂ ಭೂಲೋಕದ ಎಲ್ಲಾ ಅರಸರಿಗಿಂತ ಮಿಗಿಲಾಗಿದ್ದನು. ಭೂಲೋಕದವರೆಲ್ಲರೂ ದೇವರು ಅವನಿಗೆ ಅನುಗ್ರಹಿಸಿದ ಜ್ಞಾನವಾಕ್ಯಗಳನ್ನು ಕೇಳುವದಕ್ಕೋಸ್ಕರ ಅವನ ದರ್ಶನಕ್ಕೆ ಬಂದರು.” (1 ಅರಸುಗಳು 10:23, 24) ಸೊಲೊಮೋನನ ಬರಹಗಳು ಬೈಬಲ್ ದಾಖಲೆಯ ಒಂದು ಭಾಗವಾಗಿರುವುದರಿಂದ, ನಾವು ಕೂಡ ಅವನ ವಿವೇಕದಿಂದ ಪ್ರಯೋಜನವನ್ನು ಪಡೆದುಕೊಳ್ಳಸಾಧ್ಯವಿದೆ. ಸಂಪತ್ತು ಮತ್ತು ಸಂತೋಷದ ನಡುವಿನ ಸಂಬಂಧದ ಕುರಿತು ಅವನಿಗೆ ಏನು ಹೇಳಲಿಕ್ಕಿತ್ತು ಎಂಬುದನ್ನು ನಾವು ನೋಡೋಣ.
[ಪುಟ 3 ರಲ್ಲಿರುವ ಚಿತ್ರ ಕೃಪೆ]
Reproduced from Die Heilige Schrift - Übersetzt von Dr. Joseph Franz von Allioli. Druck und Verlag von Eduard Hallberger, Stuttgart