ರಾಜ್ಯ ಘೋಷಕರು ವರದಿ ಮಾಡುತ್ತಾರೆ
ಪ್ರತಿಯೊಂದು ಅವಕಾಶವನ್ನು ಉಪಯೋಗಿಸಿಕೊಳ್ಳುವುದು
ಲೋಕವ್ಯಾಪಕವಾಗಿ ಯೆಹೋವನ ಸಾಕ್ಷಿಗಳು ತಮ್ಮ ಬೈಬಲಿನ ಶೈಕ್ಷಣಿಕ ಕಾರ್ಯಕ್ಕೆ ಪ್ರಸಿದ್ಧರಾಗಿದ್ದಾರೆ. ಆದರೆ ಸಮಾಜಕ್ಕೆ ಇನ್ನಿತರ ಪ್ರಯೋಜನಗಳನ್ನು ತರುವಂತಹ ಕಾರ್ಯಕ್ರಮಗಳನ್ನು ಸಹ ಅವರು ನಡೆಸುತ್ತಾರೆ. ಎಕ್ವಡಾರ್ನಿಂದ ಬಂದ ಈ ಕೆಳಗಿನ ಅನುಭವಗಳು ತೋರಿಸುವಂತೆ, ಈ ಸಾರ್ವಜನಿಕ ಸೇವೆಯು ಚೆನ್ನಾಗಿ ಅಂಗೀಕರಿಸಲ್ಪಟ್ಟಿದೆ.
◻ ಒಂದು ದೊಡ್ಡ ಗಾಜಿನ ಕಾರ್ಖಾನೆಯ ನಿರ್ವಾಹಕ ಮಂಡಲಿಯು, ತಮ್ಮ ನೌಕರರಿಗಾಗಿ ಕೌಟುಂಬಿಕ ಮೌಲ್ಯಗಳ ಕುರಿತಾದ ಒಂದು ಉಪನ್ಯಾಸವನ್ನು ಏರ್ಪಡಿಸಲು ಬಯಸಿತು. ಮಾನವ ಸಂಪನ್ಮೂಲಗಳ ನಿರ್ದೇಶಕನು, ಅನೇಕ ಕ್ಯಾಥೊಲಿಕ್ ಪಾದ್ರಿಗಳನ್ನು ಅದರಲ್ಲಿ ಭಾಗವಹಿಸುವಂತೆ ಕರೆಕೊಟ್ಟನಾದರೂ ಅವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಈ ವಿಷಯದ ಕುರಿತು ಭಾಷಣ ನೀಡಲು ಕೆಲವೇ ಮಂದಿ ಪಾದ್ರಿಗಳು ಅರ್ಹರಾಗಿದ್ದದರಿಂದ, ಯಾರೂ ದೊರೆಯುವ ಸಾಧ್ಯತೆಯಿಲ್ಲವೆಂದು ಪಾದ್ರಿಯೊಬ್ಬನು ನಿರ್ದೇಶಕನಿಗೆ ಹೇಳಿದನು. ಇದನ್ನು ಕೇಳಿಸಿಕೊಂಡ ಸಾಕ್ಷಿ ನೌಕರಳೊಬ್ಬಳು, ಆಗಾಗ್ಗೆ ವ್ಯಾಪಾರದ ಟೆರಿಟೊರಿಯಲ್ಲಿ ಸಾಕ್ಷಿಕಾರ್ಯವನ್ನು ಮಾಡುವ ಒಬ್ಬ ಸಹೋದರನು ಈ ಕಾರ್ಖಾನೆಯನ್ನು ಸಂದರ್ಶಿಸುವಂತೆ ಏರ್ಪಾಡುಗಳನ್ನು ಮಾಡಿದಳು.
ಮರುದಿನವೇ, ಆ ಸಾಕ್ಷಿಯು ಪ್ರಸ್ತಾಪಿಸಲ್ಪಟ್ಟ ಅಭ್ಯಾಸ ಉಪನ್ಯಾಸದೊಂದಿಗೆ ಮಾನವ ಸಂಪನ್ಮೂಲಗಳ ನಿರ್ದೇಶಕನನ್ನು ಸಂಧಿಸಿದನು. ವಾಚ್ ಟವರ್ ಸೊಸೈಟಿಯ ವಿವಿಧ ಪ್ರಕಾಶನಗಳಿಂದ ತೆಗೆಯಲ್ಪಟ್ಟ ವಸ್ತುವಿಷಯಗಳ ಪಟ್ಟಿಯೊಂದನ್ನು ತಯಾರಿಸಲಾಯಿತು. ಆ ನಿರ್ದೇಶಕನು ಪ್ರಭಾವಿತನಾದನು. ಮಾನವ ಸಂಬಂಧಗಳು, ಕೆಲಸದ ಸ್ಥಳದಲ್ಲಿನ ನೈತಿಕ ತತ್ವಗಳು, ಮತ್ತು ಕುಟುಂಬದಲ್ಲಿನ ನೈತಿಕ ತತ್ವಗಳು ಎಂಬ ಮೂರು ವಿಷಯಗಳನ್ನು ಅವನು ಚರ್ಚೆಗಾಗಿ ಆರಿಸಿಕೊಂಡನು. ತದನಂತರ ನೌಕರರ ಇಡೀ ತಂಡದೊಂದಿಗೆ ಈ ಮಾಹಿತಿಯನ್ನು ಪರಿಗಣಿಸಲಿಕ್ಕಾಗಿ ಏರ್ಪಾಡುಗಳು ಮಾಡಲ್ಪಟ್ಟವು.
ಆ ನೌಕರರು ಏಳು ಗುಂಪುಗಳಾಗಿ ವಿಭಾಗಿಸಲ್ಪಟ್ಟರು. ಪ್ರತಿಯೊಂದು ಗುಂಪಿನಲ್ಲಿ 30 ಜನರಿದ್ದರು. ಬಳಿಕ ಮೂವರು ಅರ್ಹ ಸಹೋದರರು ಅವರಿಗೆ ಮಾಹಿತಿಯನ್ನು ಪ್ರಸ್ತುತಪಡಿಸಿದರು. ಫಲಿತಾಂಶಗಳೇನಾಗಿದ್ದವು? ಬಹಳಷ್ಟು ನೌಕರರು ತಮ್ಮ ಮನೆಗಳಿಗೆ ಭೇಟಿ ನೀಡುವಂತೆ ಕೇಳಿಕೊಂಡರು, ಮತ್ತು 216 ಬೈಬಲ್ ಅಭ್ಯಾಸ ಸಹಾಯಕಗಳು ವಿತರಿಸಲ್ಪಟ್ಟವು. ಆ ಆಡಳಿತ ಮಂಡಲಿಯ ಮೇಲೆ ಎಷ್ಟು ಒಳ್ಳೆಯ ಪ್ರಭಾವ ಬೀರಲ್ಪಟ್ಟಿತೆಂದರೆ, ಭಾಷಣಗಳ ಇನ್ನೊಂದು ಸರಣಿಯನ್ನು ತಯಾರಿಸಬಲ್ಲರೋ ಎಂದು ಅವರು ಸಾಕ್ಷಿಗಳನ್ನು ಕೇಳಿಕೊಂಡರು.
◻ ಇತ್ತೀಚೆಗೆ, ಶಾಲೆಯಲ್ಲಿ ಧರ್ಮದ ವಿಷಯವು ಕಲಿಸಲ್ಪಡುವಂತೆ ಅನುಮತಿಸುವ ಒಂದು ನಿಯಮವನ್ನು ಎಕ್ವಡಾರ್ ಜಾರಿಗೆ ತಂದಿತು. ಮಿಷನೆರಿ ಸಹೋದರಿಯೊಬ್ಬಳು ಒಂದು ಪ್ರಾಥಮಿಕ ಶಾಲೆಯ ಸೂಪರಿಂಟೆಂಡೆಂಟ್ ಅನ್ನು ಭೇಟಿ ಮಾಡಿ, ಈ ಹೊಸ ನಿಯಮವು ಹೇಗೆ ಕಾರ್ಯನಡಿಸುತ್ತಿದೆ ಎಂದು ಕೇಳಿದಳು. ಮರಿಯಳ ಆರಾಧನೆಯ ಕುರಿತಾದ ಒಂದು ಕಾರ್ಯಕ್ರಮವನ್ನು ಆರಂಭಿಸಲು ಪ್ರಯತ್ನವನ್ನು ಮಾಡಲಾಯಿತಾದರೂ, ಅದು ಕೈಗೂಡಿರಲಿಲ್ಲವೆಂದು ಆ ಸೂಪರಿಂಟೆಂಡೆಂಟ್ ವಿವರಿಸಿದಳು. ಅಂತಹ ಆರಾಧನೆಯು ಕ್ಯಾಥೊಲಿಕರಲ್ಲದ ಇತರ ಮಕ್ಕಳಿಗೆ ಸಮಸ್ಯೆಗಳನ್ನು ತಂದೊಡ್ಡಸಾಧ್ಯವಿದೆ ಎಂದು ಆ ಸಹೋದರಿಯು ಹೇಳಿದಾಗ, ಸೂಪರಿಂಟೆಂಡೆಂಟ್ ಒಪ್ಪಿಕೊಂಡಳು. “ಆದರೂ, ಬೈಬಲಿನಿಂದ ನೈತಿಕ ತತ್ವಗಳನ್ನು ಕಲಿಸಲಿಕ್ಕಾಗಿ ನಮ್ಮಲ್ಲಿ ಒಂದು ಕಾರ್ಯಕ್ರಮವಿದೆ, ಅದು ಒಂದು ನಿರ್ದಿಷ್ಟವಾದ ಧರ್ಮವನ್ನು ಅಂಗೀಕರಿಸುವಂತೆ ವ್ಯಕ್ತಿಯೊಬ್ಬನನ್ನು ಹಂಗಿಗೆ ಒಳಪಡಿಸುವುದಿಲ್ಲ” ಎಂದು ಮಿಷನೆರಿಯು ಹೇಳಿದಳು. ಆ ಸೂಪರಿಂಟೆಂಡೆಂಟ್ ಉತ್ತರಿಸಿದ್ದು: “ನಿಮಗೆ ಯಾವಾಗ ಬರಲು ಸಾಧ್ಯ? ನಾಳಿದ್ದು ಬರಸಾಧ್ಯವೊ?” ಮಿಷನೆರಿಯು ಮಹಾ ಬೋಧಕನಿಗೆ ಕಿವಿಗೊಡುವುದು ಎಂಬ ಪುಸ್ತಕವನ್ನು ಅವಳಿಗೆ ತೋರಿಸಿದ ಅನಂತರ, ಅವರು “ಶಾಂತಶೀಲರು ಧನ್ಯರು” ಎಂಬ ಅಧ್ಯಾಯವನ್ನು ಪರಿಗಣಿಸುವರೆಂಬ ನಿರ್ಧಾರವು ಮಾಡಲ್ಪಟ್ಟಿತು.
ಆ ಮಿಷನೆರಿಯು ಹಿಂದಿರುಗಿದಾಗ, ಅವಳು ಏಳು ತರಗತಿಗಳನ್ನು ಸಂದರ್ಶಿಸುತ್ತಾ, ಮೂರು ತಾಸುಗಳನ್ನು ವ್ಯಯಿಸಿದಳು. ಆಗ ಸೂಪರಿಂಟೆಂಡೆಂಟ್ ಸಹ ಅದಕ್ಕೆ ಕಿವಿಗೊಡುತ್ತಿದ್ದಳು. ಐದನೆಯ ತರಗತಿಯೊಂದಿಗಿನ ಒಂದು ಸೆಶನ್ನ ಬಳಿಕ, ವಿದ್ಯಾರ್ಥಿಗಳಲ್ಲಿ ಒಬ್ಬನು ಹೇಳಿದ್ದು: “ಮಿಸ್, ಆರನೆಯ ತರಗತಿಯನ್ನೂ ಖಂಡಿತವಾಗಿ ಭೇಟಿ ಮಾಡಿ. ಅವರು ಯಾವಾಗಲೂ ನಮಗೆ ಹೊಡೆಯಲು ಮತ್ತು ಜಗಳವನ್ನು ಆರಂಭಿಸಲು ಪ್ರಯತ್ನಿಸುತ್ತಾರೆ!” ಶಿಕ್ಷಕಿಯೊಬ್ಬಳು ಹೇಳಿದ್ದು: “ಹಿಂಸಾಚಾರವು ಅತಿ ಮಹತ್ವದ ಒಂದು ವಿಷಯವಾಗಿದೆ. ಈ ವಿಚಾರವನ್ನು ಚರ್ಚಿಸಲಿಕ್ಕಾಗಿ ನಮಗೆ ಹೆಚ್ಚಿನ ಸಮಯದ ಅಗತ್ಯವಿದೆ.”
ವಿಧೇಯತೆ ಮತ್ತು ಸುಳ್ಳಾಡುವುದು ಎಂಬಂತಹ ವಿಷಯಗಳನ್ನು ಚರ್ಚಿಸಲಿಕ್ಕಾಗಿ, ಶಾಲೆಗೆ ಪುನರ್ಭೇಟಿಗಳನ್ನು ಮಾಡಲು ಏರ್ಪಾಡುಗಳು ಮಾಡಲ್ಪಟ್ಟವು. ಇಷ್ಟರ ವರೆಗೆ ಫಲಿತಾಂಶಗಳು ಬಹಳ ಸಕಾರಾತ್ಮಕವಾಗಿವೆ. ಈಗ ಆ ಮಿಷನೆರಿ ಸಹೋದರಿಯು ಬೀದಿಯಲ್ಲಿ ನಡೆಯುತ್ತಿರುವಾಗ, ಅವಳನ್ನು ಅಭಿವಂದಿಸಲಿಕ್ಕಾಗಿ ಮತ್ತು ಬೈಬಲ್ ಪ್ರಶ್ನೆಗಳನ್ನು ಕೇಳಲಿಕ್ಕಾಗಿ ಮಕ್ಕಳು ಅವಳ ಬಳಿಗೆ ಓಡೋಡಿ ಬರುತ್ತಾರೆ. ಇನ್ನಿತರರು ಅವಳನ್ನು ತಮ್ಮ ಹೆತ್ತವರಿಗೆ ಹೆಮ್ಮೆಯಿಂದ ಪರಿಚಯಿಸುತ್ತಾರೆ. ಅಷ್ಟುಮಾತ್ರವಲ್ಲದೆ, ಶಾಲಾಮಕ್ಕಳಲ್ಲಿ ಇಬ್ಬರೊಂದಿಗೆ ಮನೆ ಬೈಬಲ್ ಅಭ್ಯಾಸವು ಆರಂಭಿಸಲ್ಪಟ್ಟಿದೆ.