ಅನ್ಯಾಯವು ಅನಿವಾರ್ಯವೋ?
“ಇಷ್ಟೆಲ್ಲ ಆದರೂ ಜನರು ನಿಜವಾಗಿಯೂ ಆಂತರ್ಯದಲ್ಲಿ ಒಳ್ಳೆಯವರಾಗಿದ್ದಾರೆ ಎಂದು ನಾನು ನಂಬುತ್ತೇನೆ. ಗಲಿಬಿಲಿ, ಸಂಕಟ ಮತ್ತು ಸಾವನ್ನು ಒಳಗೊಂಡಿರುವ ಆಧಾರದ ಮೇಲಂತೂ ನನ್ನ ನಿರೀಕ್ಷೆಗಳನ್ನು ಕಟ್ಟಲು ನನಗಾಗುವುದಿಲ್ಲ.”—ಆ್ಯನ ಫ್ರಾಂಕ್.
ಆ್ಯನ ಫ್ರಾಂಕ್ ಎಂಬ 15 ವರ್ಷ ಪ್ರಾಯದ ಒಬ್ಬ ಯುವ ಯೆಹೂದಿ ಹುಡುಗಿಯು, ಅವಳು ಸಾಯುವುದಕ್ಕೆ ಸ್ವಲ್ಪ ಮುಂಚೆ ತನ್ನ ಡೈರಿಯಲ್ಲಿ ಆ ಹೃದಯಸ್ಪರ್ಶಿ ಮಾತುಗಳನ್ನು ಬರೆದಳು. ಎರಡು ವರ್ಷಕ್ಕಿಂತಲೂ ಹೆಚ್ಚು ಸಮಯದ ವರೆಗೆ, ಅವಳ ಕುಟುಂಬವು ಅಮ್ಸಟರ್ಡಮ್‌ನಲ್ಲಿ ಒಂದು ಅಟ್ಟದಲ್ಲಿ ಬಚ್ಚಿಟ್ಟುಕೊಳ್ಳುತ್ತಾ, ಅವಿತುಕೊಂಡಿತ್ತು. ನಾಜಿಗಳಿಗೆ ಅವರು ಎಲ್ಲಿದ್ದಾರೆಂಬುದನ್ನು ಒಬ್ಬ ವ್ಯಕ್ತಿಯು ಹೇಳಿ, ದ್ರೋಹಬಗೆದಾಗ, ಉತ್ತಮವಾದೊಂದು ಲೋಕದ ಬಗ್ಗೆ ಅವಳಿಗಿದ್ದ ನಿರೀಕ್ಷೆಗಳು ನುಚ್ಚುನೂರಾದವು. 1945ರ ಮುಂದಿನ ವರ್ಷವೇ, ಆ್ಯನ ಬರ್ಗನ್-ಬೆಲ್ಸನ್ ಕೂಟ ಶಿಬಿರದಲ್ಲಿ ಟೈಫಸ್ ಜ್ವರದಿಂದ ಸತ್ತುಹೋದಳು. ಅದೇ ರೀತಿಯ ದುರಂತಮಯ ಅಂತ್ಯವನ್ನು ಇನ್ನೂ ಅರವತ್ತು ಲಕ್ಷ ಮಂದಿ ಯೆಹೂದಿಯರು ಹೊಂದಿದರು.
ಒಂದು ಇಡೀ ಜನಸಮೂಹವನ್ನು ನಿರ್ಮೂಲಮಾಡುವ ಹಿಟ್ಲರನ ಪೈಶಾಚಿಕ ಸಂಚು ನಮ್ಮ ಶತಮಾನವು ನೋಡಿರುವ ಅತ್ಯಂತ ಕೀಳ್ಮಟ್ಟದ ಜಾತಿ ಅನ್ಯಾಯವಾಗಿರಬಹುದಾದರೂ, ಇದು ಏಕಮಾತ್ರ ವಿದ್ಯಮಾನವಾಗಿರುವುದಿಲ್ಲ. 1994ರಲ್ಲಿ ರುವಾಂಡದಲ್ಲಿ ಐದು ಲಕ್ಷಕ್ಕಿಂತಲೂ ಹೆಚ್ಚು ಟೂಟ್ಸಿ ಜನರು ಸಾಮೂಹಿಕ ಹತ್ಯೆಗೊಳಗಾದರು, ಅವರು ಕೇವಲ “ಬೇರೆ” ಕುಲಕ್ಕೆ ಸೇರಿದ್ದವರೆಂಬ ಕಾರಣಕ್ಕಾಗಿಯೇ. ಮತ್ತು ಪ್ರಥಮ ವಿಶ್ವ ಯುದ್ಧದಲ್ಲಿ, ಸುಮಾರು ಹತ್ತು ಲಕ್ಷ ಅರ್ಮೆನೀಯರು ಕುಲಸಂಬಂಧಿತ ಶುದ್ಧೀಕರಣದಲ್ಲಿ ಸತ್ತುಹೋದರು.
ಅನ್ಯಾಯದ ಕ್ರೂರ ಮುಖಗಳು
ಜನಹತ್ಯೆಯು ಅನ್ಯಾಯದ ಏಕಮಾತ್ರ ಮುಖವಾಗಿರುವುದಿಲ್ಲ. ಸಾಮಾಜಿಕ ಅನ್ಯಾಯದ ಕಾರಣವಾಗಿ, ಮನುಕುಲದ ಸುಮಾರು ಐದರಷ್ಟು ಭಾಗವು ಪೂರಾ ಜೀವಮಾನವನ್ನು ಬಡತನದಲ್ಲಿ ಸವೆಯಿಸುತ್ತದೆ. ಇನ್ನೂ ಕೆಟ್ಟ ವಿಷಯವೆಂದರೆ, ಆ್ಯಂಟಿ ಸ್ಲೇವರಿ ಇಂಟರ್‌ನ್ಯಾಷನಲ್ ಎಂಬ ಮಾನವ ಹಕ್ಕುಗಳ ಗುಂಪು ಲೆಕ್ಕಹಾಕುವಂತೆ, 20,00,00,000ಕ್ಕಿಂತಲೂ ಹೆಚ್ಚಿನ ಜನರು ದಾಸತ್ವದಲ್ಲಿದ್ದಾರೆ. ಇತಿಹಾಸದಲ್ಲಿಯೇ ಹಿಂದೆಂದೂ ಇದ್ದಿರದಷ್ಟು ಹೆಚ್ಚಿನ ಜನರು ಇಂದು ಲೋಕದಲ್ಲಿ ಗುಲಾಮರಾಗಿರುವ ಸಾಧ್ಯತೆಯಿದೆ. ಅವರು ಬಹಿರಂಗ ಹರಾಜುಗಳಲ್ಲಿ ಮಾರಲ್ಪಡದೇ ಇರಬಹುದಾದರೂ, ಅವರು ಕೆಲಸಮಾಡುವ ಪರಿಸ್ಥಿತಿಗಳು ಹಿಂದಿನ ಸಮಯಗಳಲ್ಲಿದ್ದ ಹೆಚ್ಚಿನ ಗುಲಾಮರ ಸ್ಥಿತಿಗಿಂತಲೂ ಬಹಳ ಕೀಳ್ಮಟ್ಟದ್ದಾಗಿವೆ.
ಕಾನೂನುರೀತ್ಯ ಅನ್ಯಾಯವು, ಲಕ್ಷಾಂತರ ಜನರ ಮೂಲಭೂತ ಹಕ್ಕುಗಳನ್ನು ಅವರಿಂದ ಕಸಿದುಕೊಳ್ಳುತ್ತದೆ. “ಲೋಕದ ಯಾವುದೋ ಒಂದು ಮೂಲೆಯಲ್ಲಿ, ಮಾನವ ಹಕ್ಕುಗಳ ಘೋರಕೃತ್ಯಗಳು ಕಾರ್ಯತಃ ಪ್ರತಿದಿನ ಗೈಯಲ್ಪಡುತ್ತವೆ” ಎಂದು ಆ್ಯಮ್ನಿಸ್ಟಿ ಇಂಟರ್‌ನ್ಯಾಷನಲ್ ತನ್ನ 1996ರ ವರದಿಯಲ್ಲಿ ತಿಳಿಸುತ್ತದೆ. “ಬಡವರೂ ಪ್ರತಿಕೂಲ ಸ್ಥಿತಿಯಲ್ಲಿರುವವರೂ, ವಿಶೇಷವಾಗಿ ಸ್ತ್ರೀಯರು, ಮಕ್ಕಳು, ವೃದ್ಧ ಜನರು ಹಾಗೂ ನಿರಾಶ್ರಿತರು ಹೆಚ್ಚು ಸುಲಭಬೇಧ್ಯರಾಗಿದ್ದಾರೆ.” ಆ ವರದಿಯು ಹೇಳುವುದು: “ಕೆಲವು ದೇಶಗಳಲ್ಲಿ, ಆ ರಾಷ್ಟ್ರದ ಸರಕಾರೀ ರಚನೆಗಳು ಕಾರ್ಯತಃ ಕುಸಿದುಬಿದ್ದಿದ್ದು, ದುರ್ಬಲರನ್ನು ಬಲಿಷ್ಠರಿಂದ ರಕ್ಷಿಸುವುದಕ್ಕೆ ಯಾವುದೇ ಕಾನೂನುರೀತ್ಯ ಅಧಿಕಾರವಿಲ್ಲ.”
1996ರ ಅವಧಿಯಲ್ಲಿ, ನೂರಕ್ಕಿಂತಲೂ ಹೆಚ್ಚಿನ ದೇಶಗಳಲ್ಲಿ ಹತ್ತಾರು ಸಾವಿರಾರು ಮಂದಿ ಬಂಧಿಸಲ್ಪಟ್ಟು, ಹಿಂಸಿಸಲ್ಪಟ್ಟರು. ಮತ್ತು ಇತ್ತೀಚಿನ ವರ್ಷಗಳಲ್ಲಿ, ಲಕ್ಷಾಂತರ ಜನರು ಕಾಣೆಯಾಗಿದ್ದಾರೆ, ಇವರು ಭದ್ರತಾ ಪಡೆಗಳು ಅಥವಾ ಭಯೋತ್ಪಾದಕ ಗುಂಪುಗಳಿಂದ ಅಪಹರಿಸಲ್ಪಟ್ಟಿದ್ದಾರೆ. ಅವರಲ್ಲಿ ಅನೇಕರು ಸತ್ತುಹೋಗಿರಬಹುದೆಂದು ನೆನಸಲಾಗಿದೆ.
ಯುದ್ಧಗಳು ತಪ್ಪಿಸಿಕೊಳ್ಳಲಾಗದ ಅನ್ಯಾಯವಾಗಿವೆಯಾದರೂ ಅವು ಇನ್ನೂ ತುಂಬ ಹೆಚ್ಚಾಗುತ್ತಿವೆ. ಆಧುನಿಕ ಯುದ್ಧಾಚರಣೆಯ ಗುರಿಗಳು, ಸ್ತ್ರೀಯರು ಹಾಗೂ ಮಕ್ಕಳನ್ನು ಒಳಗೊಂಡ ನಾಗರಿಕರು ಗುರಿಯಾಗಿದ್ದಾರೆ. ಮತ್ತು ಇದು ಕೇವಲ ನಗರಗಳ ಮೇಲೆ ಗೊತ್ತುಗುರಿಯಿಲ್ಲದ ಬಾಂಬುದಾಳಿಗಳನ್ನು ಮಾಡುವುದರ ಕಾರಣದಿಂದಲ್ಲ. ಮಿಲಿಟರಿ ಕಾರ್ಯಾಚರಣೆಯ ಭಾಗದೋಪಾದಿ, ಸ್ತ್ರೀಯರು ಮತ್ತು ಬಾಲಕಿಯರ ಮೇಲೆ ನಿಯತಕ್ರಮವಾಗಿ ಅತ್ಯಾಚಾರ ನಡಿಸಲಾಗುತ್ತದೆ ಮತ್ತು ಅನೇಕ ಬಂಡಾಯಗಾರ ಗುಂಪುಗಳು, ಮಕ್ಕಳನ್ನು ಹಂತಕರೋಪಾದಿ ತರಬೇತುಗೊಳಿಸಲಿಕ್ಕಾಗಿ, ಬಲಾತ್ಕಾರವಾಗಿ ಮಕ್ಕಳನ್ನು ಅಪಹರಿಸುತ್ತಾರೆ. ಅಂಥ ಪ್ರವೃತ್ತಿಗಳ ಕುರಿತು ಹೇಳಿಕೆಯನ್ನು ನೀಡುತ್ತಾ, “ಮಕ್ಕಳ ಮೇಲೆ ಶಸ್ತ್ರಸಜ್ಜಿತ ಹೋರಾಟದ ಪರಿಣಾಮ” ಎಂಬ ವಿಶ್ವ ಸಂಸ್ಥೆಯ ವರದಿಯು ಹೇಳುವುದು: “ಲೋಕದ ಹೆಚ್ಚೆಚ್ಚು ಜನಸಂಖ್ಯೆಯು ವಿಷಾದಕರವಾಗಿ ನೈತಿಕತೆಯನ್ನು ಕಳೆದುಕೊಂಡಿದೆ.”
ಈ ನೈತಿಕ ಶೂನ್ಯವು, ಜಾತೀಯ, ಸಾಮಾಜಿಕ, ಕಾನೂನುರೀತ್ಯ ಅಥವಾ ಮಿಲಿಟರಿ ಅನ್ಯಾಯದಲ್ಲಿ ಮುಳುಗಿರುವ ಒಂದು ಲೋಕಕ್ಕೆ ನಡೆಸಿದೆ ಎಂಬುದರಲ್ಲಿ ಸಂದೇಹವೇ ಇಲ್ಲ. ಇದೇನೂ ಹೊಸತಲ್ಲ ನಿಜ. ಎರಡು ಸಾವಿರದ ಐನೂರಕ್ಕಿಂತಲೂ ಹೆಚ್ಚು ವರ್ಷಗಳ ಹಿಂದೆಯೇ, ಒಬ್ಬ ಇಬ್ರಿಯ ಪ್ರವಾದಿಯು ಪ್ರಲಾಪಿಸಿದ್ದು: “ನಿಯಮವು ಬಲಹೀನವೂ ನಿಷ್ಪ್ರಯೋಜಕವೂ ಆಗಿದೆ ಮತ್ತು ನ್ಯಾಯವು ಎಂದೂ ನೀಡಲ್ಪಡುವುದಿಲ್ಲ. ನೀತಿವಂತರಿಗಿಂತಲೂ ದುಷ್ಟ ಜನರು ಉತ್ತಮವಾದುದನ್ನು ಪಡೆದುಕೊಳ್ಳುತ್ತಾರೆ ಮತ್ತು ಹೀಗೆ ನ್ಯಾಯವು ವಕ್ರಗೊಳಿಸಲ್ಪಟ್ಟಿದೆ.” (ಹಬಕ್ಕೂಕ 1:4, ಟುಡೇಸ್ ಇಂಗ್ಲಿಷ್ ವರ್ಷನ್) ಅನ್ಯಾಯವು ಯಾವಾಗಲೂ ವ್ಯಾಪಕವಾಗಿ ಇರುವುದಾದರೂ, 20ನೆಯ ಶತಮಾನವು ಮೊದಲನೆಯ ಸ್ಥಾನವನ್ನು ತೆಗೆದುಕೊಳ್ಳುತ್ತದೆ, ಏಕೆಂದರೆ ಅನ್ಯಾಯದ ಮಟ್ಟವು ಹೊಸ ಶಿಖರವನ್ನು ಮುಟ್ಟಿದೆ.
ಅನ್ಯಾಯವು ಚಿಂತೆಮಾಡಬೇಕಾದ ವಿಷಯವೋ?
ಅನ್ಯಾಯದ ಪರಿಣಾಮವಾಗಿ ವೈಯಕ್ತಿಕವಾಗಿ ನೀವು ನೋವನ್ನು ಅನುಭವಿಸುವಾಗ ಅದು ಚಿಂತೆಯನ್ನು ಉಂಟುಮಾಡುತ್ತದೆ. ಇದು ಚಿಂತೆಮಾಡಬೇಕಾದ ವಿಷಯವಾಗಿದೆ ಏಕೆಂದರೆ ಇದು ಮನುಕುಲದ ಅಧಿಕಾಂಶ ಜನರ ಸಂತೋಷದ ಹಕ್ಕನ್ನು ಕಸಿದುಕೊಳ್ಳುತ್ತದೆ. ಮತ್ತು ಅನ್ಯಾಯವು ಆಗಾಗ್ಗೆ ರಕ್ತಮಯ ಘರ್ಷಣೆಗಳನ್ನು ಆಗಾಗ್ಗೆ ಹೊತ್ತಿಸುವುದರಿಂದಲೂ ಇದು ಚಿಂತೆಮಾಡಬೇಕಾದ ವಿಷಯವಾಗಿದೆ. ಈ ಘರ್ಷಣೆಗಳು ಪ್ರತಿಯಾಗಿ ಅನ್ಯಾಯದ ಜ್ವಾಲೆಯು ಉರಿಯುತ್ತಾ ಇರುವಂತೆ ಮಾಡುತ್ತದೆ.
ಶಾಂತಿ ಹಾಗೂ ಸಂತೋಷವು ನ್ಯಾಯಕ್ಕೆ ಬಿಡಿಸಲಾಗದಂಥ ರೀತಿಯಲ್ಲಿ ಜೋಡಿಸಲ್ಪಟ್ಟಿದೆ. ಆದರೆ ಅನ್ಯಾಯವು ನಿರೀಕ್ಷೆಯನ್ನು ನುಚ್ಚುನೂರಾಗಿಸಿ, ಆಶಾವಾದವನ್ನು ಹೊಸಕಿಹಾಕಿಬಿಡುತ್ತದೆ. ಆ್ಯನ ಫ್ರಾಂಕ್ ದುಃಖಕರವಾಗಿ ಕಂಡುಕೊಂಡಂತೆ, ಜನರಿಗೆ ತಮ್ಮ ನಿರೀಕ್ಷೆಗಳನ್ನು ಗಲಿಬಿಲಿ, ಸಂಕಟ ಮತ್ತು ಸಾವನ್ನು ಒಳಗೊಂಡಿರುವ ಆಧಾರದ ಮೇಲೆ ಕಟ್ಟಸಾಧ್ಯವಿಲ್ಲ. ಅವಳಂತೆ, ನಾವೆಲ್ಲರೂ ಯಾವುದೋ ಒಂದು ಉತ್ತಮ ವ್ಯವಸ್ಥೆಗಾಗಿ ಹಂಬಲಿಸುತ್ತೇವೆ.
ಈ ಅಭಿಲಾಷೆಯು, ಮಾನವ ಸಮಾಜದಲ್ಲಿ ಒಂದಿಷ್ಟು ಮಟ್ಟದ ನ್ಯಾಯವನ್ನು ತರಲು ಪ್ರಯತ್ನಿಸುವಂತೆ ಪ್ರಾಮಾಣಿಕ ಜನರನ್ನು ನಡೆಸಿದೆ. ಅದನ್ನು ಪೂರೈಸಲು, ವಿಶ್ವ ಸಂಸ್ಥೆಯ ಜನೆರಲ್ ಅಸೆಂಬ್ಲಿಯಿಂದ 1948ರಲ್ಲಿ ಅಂಗೀಕರಿಸಲ್ಪಟ್ಟ, ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯು ಹೇಳಿದ್ದು: “ಎಲ್ಲಾ ಮಾನವರು ಸ್ವತಂತ್ರವಾಗಿ ಮತ್ತು ಸಮಾನವಾದ ಘನತೆ ಮತ್ತು ಹಕ್ಕುಗಳೊಂದಿಗೆ ಜನಿಸಿರುತ್ತಾರೆ. ಅವರು ವಿವೇಚನೆ ಮತ್ತು ಮನಸ್ಸಾಕ್ಷಿಯೊಂದಿಗೆ ಸಂಪನ್ನಮಾಡಲ್ಪಟ್ಟಿರುತ್ತಾರೆ ಮತ್ತು ಒಬ್ಬರು ಇನ್ನೊಬ್ಬರೊಂದಿಗೆ ಸಹೋದರತ್ವದ ಆತ್ಮದೊಂದಿಗೆ ವರ್ತಿಸತಕ್ಕದ್ದು.”
ಇವುಗಳು ನಿಜವಾಗಿಯೂ ಉದಾತ್ತವಾದ ಮಾತುಗಳಾಗಿವೆ. ಆದರೆ ಮನುಕುಲವು ಆ ಪೋಷಿಸಲ್ಪಟ್ಟ ಗುರಿಯನ್ನು—ಎಲ್ಲಿ ಪ್ರತಿಯೊಬ್ಬನೂ ಸಮಾನ ಹಕ್ಕುಗಳನ್ನು ಅನುಭವಿಸುವನೋ ಹಾಗೂ ಪ್ರತಿಯೊಬ್ಬನೂ ತನ್ನ ಜೊತೆಮಾನವನನ್ನು ತನ್ನ ಸಹೋದರನಂತೆ ನೋಡಿಕೊಳ್ಳುವನೋ ಅಂತಹ ಒಂದು ನ್ಯಾಯಯುತ ಸಮಾಜವನ್ನು—ತಲಪುವುದರಲ್ಲಿ ಇನ್ನೂ ತಪ್ಪಿಹೋಗಿದೆ. ಈ ಹೇತುವನ್ನು ಗ್ರಹಿಸುವಲ್ಲಿ, ಯುಎನ್ ಡಿಕ್ಲರೇಷನ್‌ನ ಪೀಠಿಕಾ ಟಿಪ್ಪಣಿಯು ಹೇಳುವಂತೆ, “ಲೋಕದಲ್ಲಿ ಸ್ವಾತಂತ್ರ್ಯ, ನ್ಯಾಯ, ಹಾಗೂ ಶಾಂತಿಯ ಅಡಿಪಾಯ”ವಾಗಿ ಕಾರ್ಯನಡಿಸುವುದು.
ಇನ್ನೆಂದೂ ತೆಗೆದುಹಾಕಲ್ಪಡದ ರೀತಿಯಲ್ಲಿ ಅನ್ಯಾಯವು ಮಾನವ ಸಮಾಜದ ರಚನೆಯಲ್ಲಿ ತಳವೂರಿದೆಯೋ? ಅಥವಾ ಸ್ವಾತಂತ್ರ್ಯ, ನ್ಯಾಯ, ಹಾಗೂ ಶಾಂತಿಗಾಗಿ ಒಂದು ಬಲವಾದ ಅಡಿಪಾಯವನ್ನು ಹೇಗಾದರೂ ಹಾಕಸಾಧ್ಯವಿದೆಯೋ? ಹಾಕಸಾಧ್ಯವಿರುವುದಾದರೆ, ಯಾರು ಅಂಥ ಒಂದು ಅಡಿಪಾಯವನ್ನು ಹಾಕಿ, ಎಲ್ಲರೂ ಅದರಿಂದ ಪ್ರಯೋಜನವನ್ನು ಪಡೆದುಕೊಳ್ಳುವರೆಂದು ಖಾತ್ರಿಪಡಿಸಿಕೊಳ್ಳುವರು?
[ಪುಟ 3 ರಲ್ಲಿರುವ ಚಿತ್ರ ಕೃಪೆ]
UPI/Corbis-Bettmann