ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w98 8/1 ಪು. 4-6
  • ಕಟ್ಟಕಡೆಗೆ—ಎಲ್ಲರಿಗೂ ನ್ಯಾಯ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಕಟ್ಟಕಡೆಗೆ—ಎಲ್ಲರಿಗೂ ನ್ಯಾಯ
  • ಕಾವಲಿನಬುರುಜು—1998
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ನಾವು ನಂಬಸಾಧ್ಯವಿರುವ ಒಂದು ವಾಗ್ದಾನ
  • ಅನ್ಯಾಯವು ಜಯಿಸಲ್ಪಡಸಾಧ್ಯವಿದೆ
  • ನೀತಿಯ ಬೀಜಗಳನ್ನು ಬಿತ್ತುವುದು
  • ನಮಗೆ ನ್ಯಾಯ ಸಿಗುತ್ತಾ?
    ಇತರ ವಿಷಯಗಳು
  • ಯೆಹೋವನು—ನಿಜ ನ್ಯಾಯ ಮತ್ತು ನೀತಿಯ ಮೂಲನು
    ಕಾವಲಿನಬುರುಜು—1998
  • “ಆತನು ನಡಿಸುವದೆಲ್ಲಾ ನ್ಯಾಯ”
    ಯೆಹೋವನ ಸಮೀಪಕ್ಕೆ ಬನ್ನಿರಿ
  • ಯೆಹೋವನನ್ನು ಅನುಕರಿಸಿರಿ—ನ್ಯಾಯ ಮತ್ತು ನೀತಿಯನ್ನು ಆಚರಿಸಿರಿ
    ಕಾವಲಿನಬುರುಜು—1998
ಇನ್ನಷ್ಟು
ಕಾವಲಿನಬುರುಜು—1998
w98 8/1 ಪು. 4-6

ಕಟ್ಟಕಡೆಗೆ—ಎಲ್ಲರಿಗೂ ನ್ಯಾಯ

“ಘಾಸಿಗೊಂಡ ಧ್ವನಿಗಳಿಗೆ, ಕಳವಳಗೊಂಡ ಧ್ವನಿಗಳಿಗೆ, ಕೇಳಿಸಿಕೊಳ್ಳಲ್ಪಡದೆ ಇರುವುದರಿಂದ ಹತಾಶರಾದ ಧ್ವನಿಗಳಿಗೆ ನಾವು ಹೊಸತಾದ ವಿಧಗಳಲ್ಲಿ ಕಿವಿಗೊಡಲು ಪ್ರಯತ್ನಿಸುವೆವು. . . . ನಿಯಮದಲ್ಲಿರುವ ವಿಷಯಕ್ಕೆ ಜೀವವನ್ನು ಕೊಡುವುದೇ ಉಳಿದಿರುವ ಸಂಗತಿ: ಕಟ್ಟಕಡೆಗೆ ಎಲ್ಲರೂ ದೇವರ ಮುಂದೆ, ಘನತೆಯಲ್ಲಿ ಸಮಾನರಾಗಿ ಜನಿಸಿರುವಂತೆ, ಮನುಷ್ಯರ ಮುಂದೆಯೂ ಘನತೆಯಲ್ಲಿ ಸಮಾನರಾಗಿ ಜನಿಸಿದ್ದಾರೆ ಎಂಬುದನ್ನು ಅಂತಿಮವಾಗಿ ನಿಶ್ಚೈಸಿಕೊಳ್ಳುವುದೇ ಆಗಿದೆ.”—ಯು.ಎಸ್‌. ರಾಷ್ಟ್ರಾಧ್ಯಕ್ಷ ರಿಚರ್ಡ್‌ ಮಿಲ್ಹಸ್‌ ನಿಕ್ಸನ್‌, ಉದ್ಘಾಟನೆಯ ಭಾಷಣ, 1969, ಜನವರಿ 20.

ರಾಜರು, ರಾಷ್ಟ್ರಾಧ್ಯಕ್ಷರು, ಮತ್ತು ಮುಖ್ಯಮಂತ್ರಿಗಳು ಅಧಿಕಾರದ ಗದ್ದುಗೆಯನ್ನೇರುವಾಗ, ಅವರು ನ್ಯಾಯದ ಬಗ್ಗೆ ಮಾತಾಡಲು ಒಲವುಳ್ಳವರಾಗಿರುತ್ತಾರೆ. ಅಮೆರಿಕದ ಮಾಜಿ ರಾಷ್ಟ್ರಾಧ್ಯಕ್ಷರಾದ ರಿಚರ್ಡ್‌ ನಿಕ್ಸನ್‌ ಇದಕ್ಕೆ ಹೊರತೇನೂ ಆಗಿರಲಿಲ್ಲ. ಆದರೆ ಅವರ ಬಲವತ್ತಾದ ಮಾತುಗಳನ್ನು ಇತಿಹಾಸದ ನಿಷ್ಪಕ್ಷಪಾತದ ಬೆಳಕಿನಲ್ಲಿ ನೋಡುವಾಗ, ಅವು ತಮ್ಮ ಕಳೆಯನ್ನು ಕಳೆದುಕೊಳ್ಳುತ್ತವೆ. ‘ನಿಯಮಕ್ಕೆ ಜೀವವನ್ನು ಕೊಡಲು’ ನಿಕ್ಸನ್‌ ವಾಗ್ದಾನಿಸಿದರಾದರೂ, ಅನಂತರ ಅವರು ನಿಯಮವನ್ನು ಮುರಿದುದಕ್ಕಾಗಿ ದೋಷಿಯಾಗಿ ಕಂಡುಕೊಳ್ಳಲ್ಪಟ್ಟರು ಮತ್ತು ತಮ್ಮ ಅಧಿಕಾರವನ್ನು ತ್ಯಜಿಸುವಂತೆ ಒತ್ತಾಯಿಸಲ್ಪಟ್ಟರು. ಮೂರು ದಶಕಗಳ ಅನಂತರ, ‘ಘಾಸಿಗೊಂಡ, ಕಳವಳಗೊಂಡ, ಹತಾಶ ಧ್ವನಿಗಳು’ ಕೇಳಿಸಿಕೊಳ್ಳಲ್ಪಡಲು ಒಂದೇ ಸಮನೆ ಮೊರೆಯಿಡುತ್ತಾ ಇವೆ.

ಅಂಥ ಧ್ವನಿಗಳನ್ನು ಆಲಿಸಿ, ಅವರ ಸಂಕಟಗಳಿಗಾಗಿ ಏನಾದರೂ ಮಾಡುವುದು, ಅಸಂಖ್ಯಾತ ಸದುದ್ದೇಶವುಳ್ಳ ಮುಖಂಡರು ಕಂಡುಕೊಂಡಿರುವಂತೆ, ಸುಲಭವಾದ ಕೆಲಸವಾಗಿರುವುದಿಲ್ಲ. ‘ಎಲ್ಲರಿಗೂ ನ್ಯಾಯ’ ಕೈಗೆಟುಕದ ಗುರಿಯಾಗಿ ರುಜುವಾಗಿದೆ. ಆದರೂ, ಅನೇಕ ಶತಮಾನಗಳ ಹಿಂದೆ, ನಮ್ಮ ಗಮನಕ್ಕೆ ಅರ್ಹವಾಗಿರುವ ಒಂದು ವಾಗ್ದಾನವು ಅಂದರೆ—ನ್ಯಾಯದ ಸಂಬಂಧದಲ್ಲಿನ ಒಂದು ಅಪೂರ್ವವಾದ ವಾಗ್ದಾನವು ಮಾಡಲ್ಪಟ್ಟಿತು.

ತಾನು ಸ್ವತಃ ಆರಿಸಿಕೊಳ್ಳಲಿರುವ “ಸೇವಕ”ನನ್ನು ಕಳುಹಿಸುವೆನು ಎಂದು ತನ್ನ ಜನರಿಗೆ ಪ್ರವಾದಿಯಾದ ಯೆಶಾಯನ ಮುಖಾಂತರ ದೇವರು ಆಶ್ವಾಸನೆಯನ್ನು ನೀಡಿದನು. “ಇವನಲ್ಲಿ ನನ್ನ ಆತ್ಮವನ್ನು ಇರಿಸಿದ್ದೇನೆ” ಎಂದು ಯೆಹೋವನು ಅವರಿಗೆ ಹೇಳಿದನು. “ಆತನು ಜನಾಂಗಗಳಿಗೆ ನ್ಯಾಯವನ್ನು ತರುವನು” (NW). (ಯೆಶಾಯ 42:1-3) ಪ್ರತಿಯೊಂದು ರಾಷ್ಟ್ರಕ್ಕೆ ಬಾಳುವ ನ್ಯಾಯವನ್ನು ಅರ್ಥೈಸುವ ಪ್ರಚೋದನಾತ್ಮಕವಾದ ಘೋಷಣೆಯೊಂದನ್ನು ಮಾಡಲು ಯಾವ ಮಾನವ ಪ್ರಭುವೂ ಸಾಹಸಮಾಡಲಾರನು. ಈ ವಾಗ್ದಾನವನ್ನು ನಂಬಸಾಧ್ಯವೋ? ಅಂಥ ಒಂದು ಅಸಾಧಾರಣವಾದ ಸಾಧನೆಯು ಎಂದಾದರೂ ಕೈಗೂಡಸಾಧ್ಯವೋ?

ನಾವು ನಂಬಸಾಧ್ಯವಿರುವ ಒಂದು ವಾಗ್ದಾನ

ವಾಗ್ದಾನವೊಂದು ಅದನ್ನು ಮಾಡುವವನಷ್ಟೇ ಭರವಸಾರ್ಹವಾದದ್ದಾಗಿರುತ್ತದೆ. ಈ ವಿದ್ಯಮಾನದಲ್ಲಿ, ತನ್ನ “ಸೇವಕ”ನು ಲೋಕದಾದ್ಯಂತವಾಗಿ ನ್ಯಾಯವನ್ನು ಸ್ಥಾಪಿಸುವನೆಂದು ಘೋಷಿಸುವವನು ಸರ್ವಶಕ್ತನಾದ ದೇವರೇ ಹೊರತು ಇನ್ನಾರೂ ಅಲ್ಲ. ರಾಜಕಾರಣಿಗಳಂತೆ, ಯೆಹೋವನು ವಾಗ್ದಾನಗಳನ್ನು ಲಘುವಾಗಿ ಮಾಡುವುದಿಲ್ಲ. ‘ದೇವರು ಸುಳ್ಳಾಡಸಾಧ್ಯವಿಲ್ಲ’ (NW) ಎಂದು ನಮಗೆ ಬೈಬಲು ಆಶ್ವಾಸನೆಯನ್ನು ನೀಡುತ್ತದೆ. (ಇಬ್ರಿಯ 6:18) “ನಾನು ದೃಢಸಂಕಲ್ಪಿಸಿದ್ದೇ ಮಾಡಲ್ಪಡುವುದು” ಎಂದು ದೇವರು ಒತ್ತಿಹೇಳುತ್ತಾನೆ.—ಯೆಶಾಯ 14:24, ಟುಡೇಸ್‌ ಇಂಗ್ಲಿಷ್‌ ವರ್ಷನ್‌.

ಆ ವಾಗ್ದಾನದಲ್ಲಿ ನಮಗಿರುವ ಭರವಸೆಯು, ದೇವರ ಆಯ್ದುಕೊಂಡ “ಸೇವಕ”ನಾದ ಯೇಸು ಕ್ರಿಸ್ತನ ದಾಖಲೆಯಿಂದ ಸಹ ಬಲಪಡಿಸಲ್ಪಟ್ಟಿದೆ. ನ್ಯಾಯವನ್ನು ಸ್ಥಾಪಿಸುವವನು, ಅದನ್ನು ಪ್ರೀತಿಸಿ, ಅದಕ್ಕನುಸಾರ ಜೀವಿಸಬೇಕು. ‘ನೀತಿಯನ್ನು ಪ್ರೀತಿಸಿ, ಅನೀತಿಯನ್ನು ದ್ವೇಷಿಸಿದ’ ಒಬ್ಬ ವ್ಯಕ್ತಿಯೋಪಾದಿ ಯೇಸು ಕಳಂಕರಹಿತ ದಾಖಲೆಯನ್ನು ಬಿಟ್ಟುಹೋದನು. (ಇಬ್ರಿಯ 1:9) ಅವನು ಹೇಳಿದಂಥ ಸಂಗತಿಗಳು, ಅವನು ಜೀವಿಸಿದ ರೀತಿ, ಮತ್ತು ಅವನು ಮೃತನಾದ ವಿಧವು, ಅವೆಲ್ಲವೂ ಅವನು ನಿಜವಾಗಿಯೂ ಒಬ್ಬ ನ್ಯಾಯವಂತ ಮನುಷ್ಯನಾಗಿದ್ದನು ಎಂಬುದನ್ನು ರುಜುಪಡಿಸುತ್ತವೆ. ಯೇಸುವಿನ ಮರಣದ ಸಮಯದಲ್ಲಿ, ಯೇಸುವಿನ ವಿಚಾರಣೆ ಮತ್ತು ಅವನ ವಧೆಯ ಸಾಕ್ಷಿಯಾಗಿದ್ದ ರೋಮನ್‌ ಸೇನಾಪತಿಯು ಹೀಗೆ ಹೇಳುವಂತೆ ಪ್ರಚೋದಿಸಲ್ಪಟ್ಟನು: “ಈ ಮನುಷ್ಯನು ಸತ್ಪುರುಷನೇ [“ನೀತಿವಂತನು,” NW] ನಿಜ.”—ಲೂಕ 23:47.

ಯೇಸು ನೀತಿವಂತನಾಗಿ ಜೀವಿಸಿದನು ಮಾತ್ರವಲ್ಲ, ತನ್ನ ದಿನದಲ್ಲಿ ಅಷ್ಟೊಂದು ವ್ಯಾಪಕವಾಗಿದ್ದ ಅನ್ಯಾಯವನ್ನು ನಿರೋಧಿಸಿದನು. ಅವನು ಇದನ್ನು, ಸರಕಾರವನ್ನು ಉರುಳಿಸುವ ಅಥವಾ ಕ್ರಾಂತಿಕಾರಿಯ ರೀತಿಯಲ್ಲಿ ಅಲ್ಲ, ಅದಕ್ಕೆ ಬದಲಾಗಿ ಕಿವಿಗೊಡುವ ಪ್ರತಿಯೊಬ್ಬರಿಗೂ ನಿಜ ನ್ಯಾಯದ ಬಗ್ಗೆ ಕಲಿಸುವ ಮೂಲಕವೇ ಮಾಡಿದನು. ಅವನ ಪರ್ವತ ಪ್ರಸಂಗವು, ನಿಜ ನ್ಯಾಯ ಹಾಗೂ ನೀತಿಯನ್ನು ಹೇಗೆ ಆಚರಣೆಗೆ ತರಸಾಧ್ಯವಿದೆ ಎಂಬುದರ ಪ್ರಬಲವಾದ ವಿವರಣೆಯಾಗಿದೆ.—ಮತ್ತಾಯ, ಅಧ್ಯಾಯಗಳು 5-7.

ಯೇಸು ತಾನು ಏನನ್ನು ಸಾರಿದನೋ ಅದನ್ನೇ ಆಚರಿಸಿದನು. ಯೆಹೂದಿ ಸಮಾಜದ “ಅಸ್ಪೃಶ್ಯರು” ಆದ ವಿಷಾದನೀಯ ಕುಷ್ಟರೋಗಿಗಳನ್ನು ಅವನು ತುಚ್ಛವಾಗಿ ಎಣಿಸಲಿಲ್ಲ. ಅದಕ್ಕೆ ಬದಲಾಗಿ, ಅವನು ಅವರೊಂದಿಗೆ ಮಾತಾಡಿದನು, ಅವರನ್ನು ಸ್ಪರ್ಶಿಸಿದನು, ಮತ್ತು ಅವರನ್ನು ವಾಸಿ ಸಹ ಮಾಡಿದನು. (ಮಾರ್ಕ 1:40-42) ಅವನು ಭೇಟಿಯಾದ ಎಲ್ಲ ಜನರು, ಬಡವರು ಹಾಗೂ ದಬ್ಬಾಳಿಕೆಗೊಳಗಾದವರು ಕೂಡ ಅವನಿಗೆ ಗಣ್ಯ ವ್ಯಕ್ತಿಗಳಾಗಿದ್ದರು. (ಮತ್ತಾಯ 9:36) “ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿ ಕೊಡುವೆನು” ಎಂದು ಅವನು ಅವರಿಗೆ ಹೇಳಿದನು.—ಮತ್ತಾಯ 11:28.

ಇದಕ್ಕಿಂತಲೂ ಹೆಚ್ಚಾಗಿ, ಯೇಸು ತನ್ನ ಸುತ್ತಮುತ್ತಲಿದ್ದ ಅನ್ಯಾಯವು ತನ್ನನ್ನು ಭ್ರಷ್ಟಗೊಳಿಸುವಂತೆ ಅಥವಾ ಕಟುವಾಗಿಸುವಂತೆ ಬಿಡಲಿಲ್ಲ. ಅವನೆಂದೂ ಕೆಟ್ಟದ್ದಕ್ಕೆ ಬದಲಾಗಿ ಕೆಟ್ಟದ್ದನ್ನು ಹಿಂತಿರುಗಿಸಲಿಲ್ಲ. (1 ಪೇತ್ರ 2:22, 23) ಅತಿ ಘೋರ ಯಾತನೆಯನ್ನು ಅನುಭವಿಸುತ್ತಿದ್ದಾಗಲೂ, ಅವನು ತನ್ನನ್ನು ಶಿಲುಬೆಗೇರಿಸಿದ ಆ ಸೈನಿಕರ ಪರವಾಗಿಯೇ ತನ್ನ ಸ್ವರ್ಗೀಯ ತಂದೆಗೆ ಪ್ರಾರ್ಥಿಸಿದನು. “ತಂದೆಯೇ, ಅವರಿಗೆ ಕ್ಷಮಿಸು; ತಾವು ಏನು ಮಾಡುತ್ತೇವೆಂಬದನ್ನು ಅರಿಯರು” ಎಂದು ಅವನು ಬೇಡಿಕೊಂಡನು. (ಲೂಕ 23:34) ನಿಶ್ಚಯವಾಗಿಯೂ, ಯೇಸು ‘ನ್ಯಾಯವು ಏನಾಗಿದೆಯೆಂಬುದನ್ನು ರಾಷ್ಟ್ರಗಳಿಗೆ ಸ್ಪಷ್ಟಪಡಿಸಿದನು.’ (ಮತ್ತಾಯ 12:18) ಒಂದು ನ್ಯಾಯವಾದ ಲೋಕವನ್ನು ಸ್ಥಾಪಿಸುವ ದೇವರ ಅಪೇಕ್ಷೆಯ ವಿಷಯದಲ್ಲಿ ಆತನ ಸ್ವಂತ ಪುತ್ರನ ಜೀವಂತ ಮಾದರಿಗಿಂತಲೂ ಇನ್ಯಾವ ಶ್ರೇಷ್ಠ ರುಜುವಾತು ನಮಗಿದೆ?

ಅನ್ಯಾಯವು ಜಯಿಸಲ್ಪಡಸಾಧ್ಯವಿದೆ

ಅನ್ಯಾಯವು ಜಯಿಸಲ್ಪಡಸಾಧ್ಯವಿದೆ ಎಂಬ ಸಜೀವ ರುಜುವಾತು ಇಂದಿನ ಲೋಕದಲ್ಲಿ ಈಗಲೂ ಸಿಗುತ್ತದೆ. ವ್ಯಕ್ತಿಪರವಾಗಿ, ಹಾಗೂ ಸಂಸ್ಥಾಪನೆಯಾಗಿಯೂ ಯೆಹೋವನ ಸಾಕ್ಷಿಗಳು ಪೂರ್ವಕಲ್ಪಿತ ಅಭಿಪ್ರಾಯ, ಪಕ್ಷಪಾತ, ಕುಲಸಂಬಂಧ ವಾದ ಹಾಗೂ ಹಿಂಸೆಯನ್ನು ಹತೋಟಿಗೆ ತರಲು ಪ್ರಯತ್ನಿಸಿದ್ದಾರೆ. ಈ ಮುಂದಿನ ಉದಾಹರಣೆಯನ್ನು ಪರಿಗಣಿಸಿರಿ.

ಪೆದ್ರೋa ತಾನು ವಾಸಿಸುತ್ತಿದ್ದ ಸ್ಪೆಯ್ನ್‌ ಪ್ರಾಂತದ, ಬಾಸ್ಕ್‌ ಕಂಟ್ರಿಗೆ ನ್ಯಾಯವನ್ನು ತರುವ ಏಕಮಾತ್ರ ವಿಧವು, ವಿನಾಶಕಾರಿ ಕೃತ್ಯವನ್ನೆಸಗುವುದೇ ಎಂದು ನಂಬಿದನು. ಈ ಉದ್ದೇಶಕ್ಕಾಗಿ ಅವನು ತನಗೆ ಫ್ರಾನ್ಸಿನಲ್ಲಿರುವ ಪ್ಯಾರಮಿಲಿಟರಿ ತರಬೇತಿಯನ್ನು ನೀಡಿದ ಒಂದು ಭಯೋತ್ಪಾದಕ ಸಂಸ್ಥೆಯ ಸದಸ್ಯನಾದನು. ಅವನ ತರಬೇತಿಯು ಪೂರ್ಣಗೊಂಡಾದ ಬಳಿಕ, ಅವನು ಒಂದು ಭಯೋತ್ಪಾದಕ ತಂಡವನ್ನು ರಚಿಸಲು ಮತ್ತು ಪೊಲೀಸ್‌ ವಾಸಸ್ಥಾನಗಳನ್ನು ಸ್ಫೋಟಿಸಲು ಆಜ್ಞಾಪಿಸಲ್ಪಟ್ಟನು. ಅವನನ್ನು ಪೊಲೀಸರು ಬಂಧಿಸಿದಾಗ ಅವನ ತಂಡವು ಆಗಲೇ ಸ್ಫೋಟಕಗಳನ್ನು ತಯಾರಿಸುತ್ತಿತ್ತು. ಅವನು ಸೆರೆಮನೆಯಲ್ಲಿ 18 ತಿಂಗಳುಗಳನ್ನು ಕಳೆದನಾದರೂ, ಅವನು ಸೆರೆಮನೆಯ ಸರಪಳಿಗಳ ಹಿಂದೆಯಿಂದಲೇ ತನ್ನ ರಾಜಕೀಯ ಚಟುವಟಿಕೆಯನ್ನು ಮುಂದುವರಿಸಿದನು. ಅವನು ಉಪವಾಸ ಸತ್ಯಾಗ್ರಹಗಳಲ್ಲಿ ಭಾಗವಹಿಸುತ್ತಿದ್ದನು ಮತ್ತು ಒಂದು ಸಂದರ್ಭದಲ್ಲಿ ಅವನು ತನ್ನ ಮಣಿಕಟ್ಟನ್ನು ಕತ್ತರಿಸಿಕೊಂಡನು.

ಪೆದ್ರೋ ತಾನು ನ್ಯಾಯಕ್ಕಾಗಿ ಹೋರಾಡುತ್ತಿದ್ದೆನೆಂದು ಭಾವಿಸಿದನು. ಅನಂತರ ಅವನಿಗೆ ಯೆಹೋವ ಮತ್ತು ಆತನ ಉದ್ದೇಶಗಳ ಕುರಿತಾದ ವಿಷಯಗಳು ತಿಳಿದುಬಂದವು. ಪೆದ್ರೋ ಸೆರೆಮನೆಯಲ್ಲಿದ್ದಾಗ, ಅವನ ಪತ್ನಿಯು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಾಸಿಸಲು ತೊಡಗಿದಳು, ಮತ್ತು ಅವನು ಬಿಡುಗಡೆಗೊಂಡಾಗ, ಅವಳು ಅವರ ಕೂಟಗಳಲ್ಲಿ ಒಂದಕ್ಕೆ ಬರುವಂತೆ ಅವನನ್ನು ಆಮಂತ್ರಿಸಿದಳು. ಅವನು ಆ ಸಂದರ್ಭದಲ್ಲಿ ಎಷ್ಟು ಆನಂದಿಸಿದನೆಂದರೆ ಅವನು ಒಂದು ಬೈಬಲ್‌ ಅಭ್ಯಾಸಕ್ಕೆ ಕೇಳಿಕೊಂಡನು. ಆ ಅಭ್ಯಾಸವು ಅವನ ಹೊರನೋಟದಲ್ಲಿ ಮತ್ತು ಜೀವನಶೈಲಿಯಲ್ಲಿ ಮಹತ್ತರವಾದ ಬದಲಾವಣೆಗಳನ್ನು ಮಾಡುವಂತೆ ಅವನನ್ನು ನಡೆಸಿತು. ಕೊನೆಯದಾಗಿ, 1989ರಲ್ಲಿ ಪೆದ್ರೋ ಮತ್ತು ಅವನ ಪತ್ನಿ ದೀಕ್ಷಾಸ್ನಾನಪಡೆದುಕೊಂಡರು.

“ಒಬ್ಬ ಭಯೋತ್ಪಾದಕನಾಗಿದ್ದಾಗ ನಾನು ನಿಜವಾಗಿಯೂ ಎಂದೂ ಯಾರನ್ನೂ ಕೊಲ್ಲಲಿಲ್ಲ ಎಂಬುದಕ್ಕಾಗಿ ನಾನು ಯೆಹೋವನಿಗೆ ಉಪಕಾರ ಹೇಳುತ್ತೇನೆ,” ಎಂದು ಪೆದ್ರೋ ಹೇಳುತ್ತಾನೆ. “ನಾನು ಈಗ ನಿಜ ಶಾಂತಿ ಮತ್ತು ನ್ಯಾಯದ—ದೇವರ ರಾಜ್ಯದ ಸುವಾರ್ತೆಯ—ಸಂದೇಶವನ್ನು ಜನರಿಗೆ ನೀಡಲು ದೇವರ ಆತ್ಮದ ಕತ್ತಿಯಾದ ಬೈಬಲನ್ನು ಉಪಯೋಗಿಸುತ್ತೇನೆ.” ಈಗ ಯೆಹೋವನ ಸಾಕ್ಷಿಗಳ ಹಿರಿಯನಾಗಿ ಸೇವೆಸಲ್ಲಿಸುತ್ತಿರುವ ಪೆದ್ರೋ ನಾಶಗೊಳಿಸಲು ಸಂಕಲ್ಪಿಸಿದ್ದ ಆ ವಾಸಸ್ಥಾನಗಳನ್ನು ಈಗಷ್ಟೇ ಭೇಟಿಮಾಡಿದನು. ಈ ಸಲ ಅವನು ಅಲ್ಲಿ ವಾಸಿಸುವ ಕುಟುಂಬಗಳಿಗೆ ಶಾಂತಿಯ ಒಂದು ಸಂದೇಶವನ್ನು ಸಾರುವ ಉದ್ದೇಶಕ್ಕಾಗಿ ಹೋದನು.

ಯೆಹೋವನ ಸಾಕ್ಷಿಗಳು ಈ ಬದಲಾವಣೆಗಳನ್ನು ಮಾಡುತ್ತಾರೆ ಏಕೆಂದರೆ, ಅವರು ಒಂದು ನೀತಿಯುಕ್ತ ಲೋಕಕ್ಕಾಗಿ ಹಂಬಲಿಸುತ್ತಾರೆ. (2 ಪೇತ್ರ 3:13) ಇದನ್ನು ತರುವ ದೇವರ ವಾಗ್ದಾನದಲ್ಲಿ ಅವರು ಸಂಪೂರ್ಣ ಭರವಸೆಯನ್ನಿಡುವುದಾದರೂ, ನ್ಯಾಯವಾಗಿ ಜೀವಿಸುವುದು ಸಹ ತಮ್ಮ ಕರ್ತವ್ಯವೆಂದು ಅವರು ಗ್ರಹಿಸುತ್ತಾರೆ. ನಮ್ಮ ಭಾಗವನ್ನು ನಾವು ಮಾಡಬೇಕೆಂಬುದನ್ನು ದೇವರು ಅಪೇಕ್ಷಿಸುತ್ತಾನೆ ಎಂಬುದನ್ನು ಬೈಬಲು ಸ್ಪಷ್ಟವಾಗಿ ತಿಳಿಸುತ್ತದೆ.

ನೀತಿಯ ಬೀಜಗಳನ್ನು ಬಿತ್ತುವುದು

ಅನ್ಯಾಯವನ್ನು ಎದುರಿಸುವಾಗ, ‘ನ್ಯಾಯತೀರಿಸುವ ದೇವರು ಎಲ್ಲಿ?’ ಎಂದು ಗಟ್ಟಿಯಾಗಿ ಕೂಗಿಕೊಳ್ಳುವಂತೆ ನಮಗನಿಸಬಹುದು ನಿಜ. ಅದು ಮಲಾಕಿಯನ ದಿನದಲ್ಲಿದ್ದ ಯೆಹೂದಿಯರ ಉದ್ಗಾರವಾಗಿತ್ತು. (ಮಲಾಕಿಯ 2:17) ಅವರ ದೂರನ್ನು ದೇವರು ಗಂಭೀರವಾಗಿ ತೆಗೆದುಕೊಂಡನೋ? ಅದಕ್ಕೆ ವಿರುದ್ಧವಾಗಿ, ಅದು ಆತನಿಗೆ “ಬೇಸರ”ವನ್ನು ಉಂಟುಮಾಡಿತು, ಇತರ ವಿಷಯಗಳೊಂದಿಗೆ ಅವರು ಸ್ವತಃ ತಮ್ಮ ವಯಸ್ಸಾದ ಹೆಂಡತಿಯರೊಂದಿಗೆ ಮೋಸದಿಂದ ವ್ಯವಹರಿಸುತ್ತಿದ್ದರು. ಹುರುಳಿಲ್ಲದ ನೆಪಗಳಿಗಾಗಿ ಅವರಿಗೆ ವಿಚ್ಛೇದನ ನೀಡುತ್ತಿದ್ದರು. ‘ಅವರು ದ್ರೋಹದ ಮಾಡಿದ್ದ ತಮ್ಮ ಸಹಚಾರಿಣಿಗಳೂ ಒಡಂಬಡಿಕೆಯ ಪತ್ನಿಯರೂ ಆಗಿದ್ದ ಯೌವನದ ಹೆಂಡತಿಯರ’ ಕುರಿತು ಯೆಹೋವನು ತನ್ನ ಚಿಂತೆಯನ್ನು ವ್ಯಕ್ತಪಡಿಸಿದ್ದನು.—ಮಲಾಕಿಯ 2:14.

ನಾವೇ ಅನ್ಯಾಯವಾಗಿ ನಡೆದುಕೊಳ್ಳುವುದಾದರೆ ಅನ್ಯಾಯದ ಕುರಿತು ದೂರುವುದು ನ್ಯಾಯಸಮ್ಮತವೋ? ಅದಕ್ಕೆ ಬದಲಾಗಿ, ಪೂರ್ವಕಲ್ಪಿತ ಅಭಿಪ್ರಾಯ ಮತ್ತು ಕುಲಸಂಬಂಧ ವಾದವನ್ನು ನಮ್ಮ ಹೃದಯಗಳಿಂದ ತೆಗೆದುಹಾಕುವ ಮೂಲಕ, ನಿಷ್ಪಕ್ಷಪಾತಿಗಳೂ ಎಲ್ಲರನ್ನೂ ಪ್ರೀತಿಸುವವರೂ ಆಗಿರುವುದರ ಮೂಲಕ, ಕೆಟ್ಟದ್ದಕ್ಕೆ ಕೆಟ್ಟದ್ದನ್ನು ಹಿಂತಿರುಗಿಸದೇ ಇರುವ ಮೂಲಕ ಯೇಸುವನ್ನು ಅನುಕರಿಸಲು ನಾವು ಪ್ರಯತ್ನಿಸುವುದಾದರೆ, ನಾವು ನ್ಯಾಯವನ್ನು ನಿಜವಾಗಿಯೂ ಪ್ರೀತಿಸುತ್ತೇವೆಂದು ತೋರಿಸುತ್ತೇವೆ.

ನಾವು ನ್ಯಾಯವನ್ನು ಕೊಯ್ಯಬೇಕಾದರೆ, ನಾವು ‘ನೀತಿಯ ಬೀಜವನ್ನು ಬಿತ್ತುವಂತೆ’ ನಮ್ಮನ್ನು ಬೈಬಲು ಪ್ರಚೋದಿಸುತ್ತದೆ. (ಹೋಶೇಯ 10:12) ಅದು ಎಷ್ಟೇ ಚಿಕ್ಕದಾಗಿ ತೋರಿಬರಲಿ, ಅನ್ಯಾಯದ ಮೇಲಿನ ಪ್ರತಿಯೊಂದು ವೈಯಕ್ತಿಕ ವಿಜಯವು ಪ್ರಾಮುಖ್ಯವಾಗಿದೆ. ಮಾರ್ಟಿನ್‌ ಲೂಥರ್‌ ಕಿಂಗ್‌ ಜೂನಿಯರ್‌, ತಮ್ಮ ಬರ್ಮಿಂಗ್‌ಹ್ಯಾಮ್‌ ಸೆರೆಮನೆಯಿಂದ ಪತ್ರ (ಇಂಗ್ಲಿಷ್‌) ಎಂಬುದರಲ್ಲಿ ಬರೆದುದು, “ಯಾವುದೇ ಕಡೆಯಲ್ಲಿರುವ ಅನ್ಯಾಯವು ಎಲ್ಲೆಲ್ಲಿಯೂ ಇರುವ ನ್ಯಾಯಕ್ಕೆ ಬೆದರಿಕೆಯಾಗಿದೆ.” ‘ನೀತಿಯನ್ನು ಹುಡುಕುವ’ವರೇ (NW) ದೇವರು ಬಲು ಬೇಗನೇ ಬರಲಿರುವ ತನ್ನ ನೀತಿಯುಕ್ತ ಹೊಸ ಲೋಕದ ಬಾಧ್ಯಸ್ಥರಾಗುವುದಕ್ಕಾಗಿ ಆರಿಸಿಕೊಳ್ಳುವ ಜನರಾಗಿರುವರು.—ಚೆಫನ್ಯ 2:3.

ಮಾನವ ವಾಗ್ದಾನಗಳ ಅದೃಢ ಅಡಿಪಾಯದ ಮೇಲೆ ನಾವು ನ್ಯಾಯಕ್ಕಾಗಿ ನಮ್ಮ ನಿರೀಕ್ಷೆಯನ್ನು ಕಟ್ಟಸಾಧ್ಯವಿಲ್ಲವಾದರೂ, ನಮ್ಮ ಪ್ರೀತಿಪರ ಸೃಷ್ಟಿಕರ್ತನ ವಾಕ್ಯದ ಮೇಲೆ ನಾವು ಭರವಸೆಯನ್ನಿಡಸಾಧ್ಯವಿದೆ. ಆದುದರಿಂದಲೇ ಯೇಸು ತನ್ನ ಹಿಂಬಾಲಕರಿಗೆ ದೇವರ ರಾಜ್ಯವು ಬರುವಂತೆ ಪ್ರಾರ್ಥಿಸುತ್ತಾ ಇರಲು ಹೇಳಿದನು. (ಮತ್ತಾಯ 6:9, 10) ಆ ರಾಜ್ಯದ ನೇಮಿತ ರಾಜನಾದ ಯೇಸು, “ಮೊರೆಯಿಡುವ ಬಡವರನ್ನೂ ದಿಕ್ಕಿಲ್ಲದೆ ಕುಗ್ಗಿದವರನ್ನೂ ಉದ್ಧರಿಸುವನು. ದೀನದರಿದ್ರರ ಮೇಲೆ ಕರುಣೆಯುಳ್ಳವನಾಗಿ ಅವರ ಪ್ರಾಣಗಳನ್ನು ಸಂತೈಸುವನು.”—ಕೀರ್ತನೆ 72:12, 13.

ಸ್ಪಷ್ಟವಾಗಿಯೇ, ಅನ್ಯಾಯವು ಶಾಶ್ವತವಾದುದಲ್ಲ. ಭೂಮಿಯ ಮೇಲಿನ ಕ್ರಿಸ್ತನ ಆಳ್ವಿಕೆಯು ಅನ್ಯಾಯವನ್ನು ನಿರಂತರಕ್ಕೂ ಜಯಿಸುವುದು. ದೇವರು ತನ್ನ ಪ್ರವಾದಿಯಾದ ಯೆರೆಮೀಯನ ಮುಖಾಂತರ ನಮಗೆ ಆಶ್ವಾಸನೆಯನ್ನು ನೀಡುವುದು: “ನಾನು ಮಾಡಿದ ವಾಗ್ದಾನವನ್ನು ನೆರವೇರಿಸುವ ಕಾಲವು ಬರುತ್ತಿದೆ . . . ಆ ಸಮಯದಲ್ಲಿ ನಾನು ದಾವೀದನ ನೀತಿಯುಕ್ತ ವಂಶದವನಾದ ಒಬ್ಬ ರಾಜನನ್ನು ಆಯ್ಕೆಮಾಡುವೆನು. ಆ ರಾಜನು ದೇಶದಲ್ಲೆಲ್ಲ ಯಾವುದು ಯುಕ್ತವೋ ಅದನ್ನು ಮತ್ತು ನ್ಯಾಯವಾದುದನ್ನು ಮಾಡುವನು.”—ಯೆರೆಮೀಯ 33:14, 15, TEV.

[ಪಾದಟಿಪ್ಪಣಿ]

a ಒಂದು ಬದಲಿ ಹೆಸರು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ