ನಿಮ್ಮ ಜೀವಿತವನ್ನು ಅತ್ಯುತ್ತಮವಾದ ವಿಧದಲ್ಲಿ ಉಪಯೋಗಿಸಿಕೊಳ್ಳಿರಿ
ತಂದೆಯು ಕ್ಯಾನ್ಸರಿನಿಂದಾಗಿ ಮರಣಾವಸ್ಥೆಯಲ್ಲಿ, ಮನೆಯಲ್ಲಿ ಹಾಸಿಗೆಯ ಮೇಲೆ ಮಲಗಿಕೊಂಡಿದ್ದನು. ಅವನ ಮಗನು ವರ್ಕ್ಷಾಪಿನಲ್ಲಿ ತನ್ನ ತಂದೆಯ ಮರಗೆಲಸದ ಸಾಧನಗಳನ್ನು ಅಚ್ಚುಕಟ್ಟಾಗಿಡುತ್ತಿದ್ದನು. ಅವನು ಆ ಸಾಧನಗಳನ್ನು ಉಪಯೋಗಿಸಿದಂತೆ, ತನ್ನ ತಂದೆಯು ಅವುಗಳಿಂದ ಮಾಡಿದ್ದ ಅದ್ಭುತಕರವಾದ ವಸ್ತುಗಳ ಕುರಿತು ಅವನು ನೆನಸಿಕೊಂಡನು. ಆ ವರ್ಕ್ಷಾಪ್ ಮನೆಗೆ ಅಂಟಿಕೊಂಡೇ ಇದ್ದರೂ, ತನ್ನ ತಂದೆಯು ಇನ್ನೆಂದಿಗೂ ಇಲ್ಲಿಗೆ ಬರುವುದಿಲ್ಲ, ಅವರು ಅಷ್ಟು ಕುಶಲತೆಯಿಂದ ಉಪಯೋಗಿಸುತ್ತಿದ್ದ ಆ ಸಾಧನಗಳನ್ನು ಮತ್ತೆಂದಿಗೂ ಹಿಡಿದುಕೊಳ್ಳುವುದಿಲ್ಲ ಎಂಬುದು ಅವನಿಗೆ ಗೊತ್ತಿತ್ತು. ಆ ಸಮಯವು ದಾಟಿಹೋಗಿತ್ತು.
ಆ ಮಗನು ಪ್ರಸಂಗಿ 9:10ರಲ್ಲಿರುವ ಶಾಸ್ತ್ರವಚನವನ್ನು ನೆನಸಿಕೊಂಡನು: “ನಿನ್ನ ಕೈಗೆ ಸಿಕ್ಕಿದ ಕೆಲಸವನ್ನೆಲ್ಲಾ ನಿನ್ನ ಪೂರ್ಣಶಕ್ತಿಯಿಂದ ಮಾಡು; ನೀನು ಸೇರಬೇಕಾದ ಪಾತಾಳದಲ್ಲಿ [ಸಮಾಧಿ] ಯಾವ ಕೆಲಸವೂ ಯುಕ್ತಿಯೂ ತಿಳುವಳಿಕೆಯೂ ಜ್ಞಾನವೂ ಇರುವದಿಲ್ಲ.” ಆ ಶಾಸ್ತ್ರವಚನವು ಅವನಿಗೆ ಚೆನ್ನಾಗಿ ತಿಳಿದಿತ್ತು. ಮರಣವು ಒಂದು ನಿಷ್ಕ್ರಿಯ ಸ್ಥಿತಿಯಾಗಿದೆ ಎಂಬ ಬೈಬಲ್ ಸತ್ಯವನ್ನು ಇತರರಿಗೆ ಕಲಿಸುವಾಗ, ಅವನು ಅದನ್ನು ಅನೇಕ ಬಾರಿ ಉಪಯೋಗಿಸಿದ್ದನು. ಈಗ ಸೊಲೊಮೋನನ ವಾದದ ಪ್ರಾಬಲ್ಯವು ಅವನ ಹೃದಯವನ್ನು ತಾಕಿತು—ನಾವು ನಮ್ಮ ಜೀವಿತವನ್ನು ಸಂಪೂರ್ಣವಾಗಿ ಅನುಭವಿಸಬೇಕು ಮತ್ತು ನಮ್ಮಿಂದ ಸಾಧ್ಯವಿರುವಾಗಲೇ ನಮ್ಮ ದಿನಗಳನ್ನು ಆನಂದಿಸಬೇಕು. ಏಕೆಂದರೆ ಹಾಗೆ ಅನುಭವಿಸಿ, ಆನಂದಿಸದೇ ಹೋಗುವ ಸಮಯವು ಬರುವುದು.
ಜೀವಿತವನ್ನು ಆನಂದಿಸಿರಿ
ಜೀವಿತದಲ್ಲಿ ಆನಂದವನ್ನು ಕಂಡುಕೊಳ್ಳುವಂತೆ ತನ್ನ ಓದುಗರಿಗೆ ಜ್ಞಾನಿಯಾದ ಅರಸ ಸೊಲೊಮೋನನು ಪ್ರಸಂಗಿ ಪುಸ್ತಕದುದ್ದಕ್ಕೂ ಪ್ರೇರೇಪಿಸುತ್ತಾನೆ. ಉದಾಹರಣೆಗೆ, 3ನೆಯ ಅಧ್ಯಾಯವು ಹೇಳುವುದು: “ಮನುಷ್ಯರು ತಮ್ಮ ಜೀವಮಾನದಲ್ಲೆಲ್ಲಾ ಉಲ್ಲಾಸವಾಗಿ ಸುಖವನ್ನನುಭವಿಸುವದಕ್ಕಿಂತ ಇನ್ನೇನೂ ಅವರಿಗೆ ಮೇಲಿಲ್ಲವೆಂದು ನಾನು ಗ್ರಹಿಸಿದ್ದೇನೆ. ಇದಲ್ಲದೆ ಪ್ರತಿಯೊಬ್ಬನು ಅನ್ನಪಾನಗಳನ್ನು ತೆಗೆದುಕೊಂಡು ತನ್ನ ನಾನಾ ಪ್ರಯಾಸಗಳಲ್ಲಿಯೂ ಸುಖವನ್ನನುಭವಿಸುವದು ದೇವರ ಅನುಗ್ರಹವೇ ಎಂದು ನನಗೆ ಗೊತ್ತಿದೆ.”—ಪ್ರಸಂಗಿ 3:12, 13.
ಈ ಪರ್ಯಾಲೋಚನೆಯನ್ನು ಪುನರಾವರ್ತಿಸುವಂತೆ ಸೊಲೊಮೋನನು ದೇವರಿಂದ ಪ್ರೇರಿಸಲ್ಪಟ್ಟನು: “ಇಗೋ ನಾನು ಕಂಡದ್ದು ಇದೇ; ದೇವರು ಒಬ್ಬನಿಗೆ ದಯಪಾಲಿಸಿರುವ ಜೀವಮಾನದ ದಿನಗಳಲ್ಲೆಲ್ಲಾ ಅವನು ಅನ್ನಪಾನಗಳನ್ನು ತೆಗೆದುಕೊಂಡು ತಾನು ಲೋಕದೊಳಗೆ ಪಡುವ ಪ್ರಯಾಸದಲ್ಲಿಯೂ ಸುಖವನ್ನನುಭವಿಸುವದು ಮೇಲಾಗಿಯೂ ಉಚಿತವಾಗಿಯೂ ಇದೆ; ಇದೇ ಅವನ ಪಾಲು.”—ಪ್ರಸಂಗಿ 5:18.
ಅದೇ ರೀತಿಯಲ್ಲಿ, ಅವನು ಯುವ ಜನರಿಗೆ ಹೀಗೆ ಪ್ರೋತ್ಸಾಹಿಸುತ್ತಾನೆ: “ಯೌವನಸ್ಥನೇ, ಪ್ರಾಯದಲ್ಲಿ ಆನಂದಿಸು; ಯೌವನದ ದಿನಗಳಲ್ಲಿ ಹೃದಯವು ನಿನ್ನನ್ನು ಹರ್ಷಗೊಳಿಸಲಿ; ಮನಸ್ಸಿಗೆ ತಕ್ಕಂತೆಯೂ ಕಣ್ಣಿಗೆ ಸರಿಬೀಳುವ ಹಾಗೆಯೂ ನಡೆದುಕೋ.” (ಪ್ರಸಂಗಿ 11:9ಎ) ಯೌವನದ ಶಕ್ತಿಸಾಮರ್ಥ್ಯವನ್ನು ಸಂಪೂರ್ಣವಾಗಿ ಆನಂದಿಸುವುದು ಎಷ್ಟೊಂದು ಉತ್ತಮವಾಗಿರುವುದು!—ಜ್ಞಾನೋಕ್ತಿ 20:29.
‘ನಿನ್ನ ಸೃಷ್ಟಿಕರ್ತನನ್ನು ಸ್ಮರಿಸು’
ನಮ್ಮ ಹೃದಯ ಅಥವಾ ಕಣ್ಗಳಿಗೆ ಪ್ರಿಯವಾಗಬಹುದಾದ ಪ್ರತಿಯೊಂದನ್ನೂ ಬೆನ್ನಟ್ಟುವುದು ಬುದ್ಧಿಮತೆಯ ವಿಷಯವೆಂದು ಸೊಲೊಮೋನನು ಹೇಳಲಿಲ್ಲ ನಿಜ. (1 ಯೋಹಾನ 2:16ನ್ನು ಹೋಲಿಸಿರಿ.) ಅವನು ಮುಂದೆ ಬರೆಯುವ ವಿಷಯದಿಂದ ಇದು ಸ್ಪಷ್ಟವಾಗುತ್ತದೆ: “ಆದರೆ ಈ ಎಲ್ಲಾ ವಿಷಯಗಳಲ್ಲಿಯೂ [ನಿನ್ನ ಆಸೆಗಳನ್ನು ತಣಿಸಬಹುದಾದ ಬೆನ್ನಟ್ಟುವಿಕೆಗಳು] ದೇವರು ನಿನ್ನನ್ನು ನ್ಯಾಯವಿಚಾರಣೆಗೆ ಗುರಿಮಾಡುವನೆಂದು ತಿಳಿದಿರು.” (ಪ್ರಸಂಗಿ 11:9ಬಿ) ನಮ್ಮ ವಯಸ್ಸು ಏನೇ ಆಗಿರಲಿ, ನಾವು ನಮ್ಮ ಜೀವಿತಗಳನ್ನು ಹೇಗೆ ಉಪಯೋಗಿಸುತ್ತೇವೆ ಎಂಬುದನ್ನು ದೇವರು ನೋಡುತ್ತಾನೆ ಮತ್ತು ಅದಕ್ಕನುಗುಣವಾಗಿ ನ್ಯಾಯತೀರಿಸುತ್ತಾನೆ ಎಂಬುದನ್ನು ನಾವು ಜ್ಞಾಪಿಸಿಕೊಳ್ಳಬೇಕು.
ಸ್ವಾರ್ಥಪರ ಜೀವಿತವನ್ನು ಜೀವಿಸಿ, ವೃದ್ಧಾಪ್ಯದಲ್ಲಿ ದೈವಿಕ ಭಕ್ತಿಯನ್ನು ಮುಂದೂಡಸಾಧ್ಯವಿದೆ ಎಂದು ಸಮರ್ಥಿಸುವುದು ಎಷ್ಟೊಂದು ಮೂರ್ಖತನವಾಗಿರುವುದು! ನಮ್ಮ ಜೀವಿತವು ಯಾವುದೇ ಸಮಯದಲ್ಲಿ ಕೊನೆಗೊಳ್ಳಬಹುದು. ಹಾಗೆ ಆಗದಿದ್ದರೂ, ವೃದ್ಧಾಪ್ಯದಲ್ಲಿ ದೇವರಿಗೆ ಸೇವೆಸಲ್ಲಿಸುವುದು ಸುಲಭವಾಗಿರಲಿಕ್ಕಿಲ್ಲ. ಈ ಸತ್ಯಾಂಶವನ್ನು ಗ್ರಹಿಸುತ್ತಾ ಸೊಲೊಮೋನನು ಬರೆಯುವುದು: “ಕಷ್ಟದ ದಿನಗಳೂ ಸಂತೋಷವಿಲ್ಲವೆಂದು ನೀನು ಹೇಳುವ ವರುಷಗಳೂ ಸಮೀಪಿಸುವುದರೊಳಗಾಗಿ ಯೌವನದಲ್ಲಿಯೇ ನಿನ್ನ ಸೃಷ್ಟಿಕರ್ತನನ್ನು ಸ್ಮರಿಸು.”—ಪ್ರಸಂಗಿ 12:1.
ವೃದ್ಧಾಪ್ಯವು ತನ್ನ ಆಹುತಿಯನ್ನು ತೆಗೆದುಕೊಳ್ಳುತ್ತದೆ. ಸಾಂಕೇತಿಕ ಪದಗಳಲ್ಲಿ ಸೊಲೊಮೋನನು ವೃದ್ಧಾಪ್ಯದ ಪರಿಣಾಮಗಳನ್ನು ಮುಂದೆ ವಿವರಿಸುತ್ತಾನೆ. ಕೈಗಳು ಮತ್ತು ತೋಳುಗಳು ನಡುಗುತ್ತವೆ, ಕಾಲುಗಳು ಶಕ್ತಿಹೀನವಾಗುತ್ತವೆ ಮತ್ತು ಹಲ್ಲುಗಳು ಕಡಿಮೆಯಾಗುತ್ತವೆ. ಕೂದಲು ಬೆಳ್ಳಗಾಗಿ, ಉದುರಿಹೋಗುತ್ತದೆ. ನಿದ್ರೆಯು ಎಷ್ಟು ಲಘುವಾಗಿರುತ್ತದೆ ಎಂದರೆ, ಒಂದು ಪಕ್ಷಿಯ ಶಬ್ದದಿಂದ ಒಬ್ಬ ವ್ಯಕ್ತಿಯು ಎಚ್ಚರಗೊಳ್ಳುತ್ತಾನೆ. ದೃಷ್ಟಿ, ಶ್ರವಣ, ಸ್ಪರ್ಶ, ವಾಸನೆ ಮತ್ತು ರುಚಿಯಂಥ ಇಂದ್ರಿಯಗಳೆಲ್ಲವೂ ಕ್ರಮವಾಗಿ ಶಕ್ತಿಯನ್ನು ಕಳೆದುಕೊಳ್ಳುತ್ತವೆ. ಬಲಹೀನಗೊಂಡ ದೇಹವು ರಸ್ತೆಗಳಲ್ಲಿ ಬಿದ್ದುಹೋಗುವ ಭಯಕ್ಕೆ ಮತ್ತು ಇನ್ನಿತರ “ವಿಪರೀತ ದಿಗಿಲುಗಳಿಗೆ” ಎಡೆಮಾಡಿಕೊಡುತ್ತದೆ. ಕಟ್ಟಕಡೆಗೆ ಆ ವ್ಯಕ್ತಿಯು ಸತ್ತುಹೋಗುತ್ತಾನೆ.—ಪ್ರಸಂಗಿ 12:2-7.
ಯೌವನಕಾಲದಲ್ಲಿ ‘ತಮ್ಮ ಸೃಷ್ಟಿಕರ್ತನನ್ನು ಸ್ಮರಿಸಲು’ ತಪ್ಪಿಹೋಗಿರುವವರಿಗೆ ವೃದ್ಧಾಪ್ಯವು ವಿಶೇಷವಾಗಿ ವಿಪತ್ಕಾರಿಯಾಗಿರುತ್ತದೆ. ಒಬ್ಬ ವ್ಯಕ್ತಿಯು ಅವನ ಅಥವಾ ಅವಳ ಜೀವಿತವನ್ನು ಸುಮ್ಮನೆ ಹಾಳುಮಾಡಿದ ಕಾರಣ, ಆ ವ್ಯಕ್ತಿಗೆ ವೃದ್ಧಾಪ್ಯದ ಕಾಲದಲ್ಲಿ ‘ಸಂತೋಷವಿರುವುದಿಲ್ಲ.’ ಭಕ್ತಿಹೀನ ಜೀವನಶೈಲಿಯು ವೃದ್ಧಾಪ್ಯದ ಸಮಸ್ಯೆಗಳು ಹಾಗೂ ನೋವುಗಳನ್ನು ಸಹ ಹೆಚ್ಚಿಸಬಹುದು. (ಜ್ಞಾನೋಕ್ತಿ 5:3-11) ದುಃಖಕರವಾಗಿ, ಅಂಥವರು ಮುಂದೆ ಭವಿಷ್ಯತ್ತನಲ್ಲ, ಬದಲಾಗಿ ಸಮಾಧಿಯನ್ನು ಕಾಣುತ್ತಿದ್ದಾರೆ.
ವೃದ್ಧಾಪ್ಯದಲ್ಲಿ ಉಲ್ಲಾಸಿಸುವುದು
ವೃದ್ಧರು ಜೀವಿತವನ್ನು ಆನಂದಿಸಸಾಧ್ಯವಿಲ್ಲ ಎಂಬುದನ್ನು ಇದು ಅರ್ಥೈಸುವುದಿಲ್ಲ. ಬೈಬಲಿನಲ್ಲಿ “ದಿನಗಳ ಮತ್ತು ಜೀವಿತದ ವ್ಯಾಪ್ತಿ”ಯು (NW) ಸಹ ದೇವರ ಆಶೀರ್ವಾದದೊಂದಿಗೆ ಸಂಬಂಧಿಸಿದೆ. (ಜ್ಞಾನೋಕ್ತಿ 3:1, 2) ಯೆಹೋವನು ತನ್ನ ಮಿತ್ರನಾದ ಅಬ್ರಹಾಮನಿಗೆ ಹೇಳಿದ್ದು: “ನೀನಂತೂ . . . ತುಂಬಾ ವೃದ್ಧನಾಗಿ ಉತ್ತರಕ್ರಿಯೆಯನ್ನು ಹೊಂದುವಿ.” (ಆದಿಕಾಂಡ 15:15) ವೃದ್ಧಾಪ್ಯದ ತೊಂದರೆಗಳ ಮಧ್ಯೆಯೂ, ಅಬ್ರಹಾಮನು ಯೆಹೋವನಿಗೆ ಅರ್ಪಿಸಲ್ಪಟ್ಟ ಜೀವಿತದ ಕುರಿತು ಸಂತೃಪ್ತಿಯೊಂದಿಗೆ ಹಿಂದೆ ನೋಡುವ ಮೂಲಕ, ಅವನು ತನ್ನ ಮುಪ್ಪಿನ ವರ್ಷಗಳಲ್ಲಿ ಶಾಂತಿಯನ್ನು ಮತ್ತು ಪ್ರಶಾಂತತೆಯನ್ನು ಕಂಡುಕೊಂಡನು. ದೇವರ ರಾಜ್ಯವಾದ, “ಶಾಶ್ವತವಾದ ಅಸ್ತಿವಾರಗಳುಳ್ಳ ಪಟ್ಟಣ”ಕ್ಕಾಗಿ ಅವನು ನಂಬಿಕೆಯಿಂದಲೂ ಮುನ್ನೋಡಿದನು. (ಇಬ್ರಿಯ 11:10) ಹೀಗೆ ಅವನು “ಮುದುಕನಾಗಿ, ಸಂತೃಪ್ತಿಯಿಂದ” ಸತ್ತನು.—ಆದಿಕಾಂಡ 25:8, NW.
ಆದುದರಿಂದ ಸೊಲೊಮೋನನು ಪ್ರೇರೇಪಿಸಿದ್ದು: “ಬಹು ವರುಷ ಬದುಕುವವನು ಅವುಗಳಲ್ಲೆಲ್ಲಾ ಆನಂದಿಸಲಿ.” (ಪ್ರಸಂಗಿ 11:8) ನಾವು ಯುವಪ್ರಾಯದವರಾಗಿರಲಿ ಇಲ್ಲವೇ ವೃದ್ಧರಾಗಿರಲಿ, ನಿಜವಾದ ಸಂತೋಷವು ನಮಗೆ ದೇವರೊಂದಿಗಿರುವ ಸಂಬಂಧದೊಂದಿಗೆ ಹೆಣೆಯಲ್ಪಟ್ಟಿದೆ.
ವರ್ಕ್ಷಾಪಿನಲ್ಲಿದ್ದ ಆ ಯುವ ವ್ಯಕ್ತಿಯು ತನ್ನ ತಂದೆಯ ಕೊನೆಯ ಸಾಧನವನ್ನು ಕೆಳಗಿಡುವಾಗ, ಈ ವಿಷಯಗಳನ್ನು ಅವನು ಜ್ಞಾಪಿಸಿಕೊಂಡನು. ತನಗೆ ಗೊತ್ತಿದ್ದ ಎಲ್ಲ ಜನರನ್ನು ಅವನು ನೆನಸಿಕೊಂಡನು, ಅವರು ತಮ್ಮ ಜೀವಿತಗಳನ್ನು ಅತ್ಯುತ್ತಮವಾದ ವಿಧದಲ್ಲಿ ಉಪಯೋಗಿಸಿಕೊಳ್ಳಲು ಪ್ರಯತ್ನಿಸಿದ್ದರಾದರೂ, ಅವರು ಸಂತೋಷವನ್ನು ಕಂಡುಕೊಳ್ಳಲಿಲ್ಲ, ಏಕೆಂದರೆ ಅವರಿಗೆ ಸೃಷ್ಟಿಕರ್ತನೊಂದಿಗೆ ಸಂಬಂಧವಿರಲಿಲ್ಲ. ಒಬ್ಬನ ಜೀವಿತಾವಧಿಯಲ್ಲಿ ಆನಂದಿಸುವಂತೆ ಪ್ರೋತ್ಸಾಹನೆಯನ್ನು ನೀಡಿದ ಬಳಿಕ, ವಿಷಯಗಳನ್ನು ಈ ನುಡಿಗಳೊಂದಿಗೆ ಸೊಲೊಮೋನನು ಸಾರಾಂಶಿಸಿದ್ದು ಎಷ್ಟೊಂದು ತಕ್ಕದ್ದಾಗಿದೆ: “ವಿಷಯವು ತೀರಿತು; ಎಲ್ಲವೂ ಕೇಳಿ ಮುಗಿಯಿತು; ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳು; ಮನುಷ್ಯರೆಲ್ಲರ [ಕರ್ತವ್ಯವು] ಇದೇ.”—ಪ್ರಸಂಗಿ 12:13.