ನಿಮ್ಮ ಮನಸ್ಸಾಕ್ಷಿಯನ್ನು ನೀವು ನಂಬಸಾಧ್ಯವಿದೆಯೊ?
ಸಾಮಾನ್ಯ ಪರಿಸ್ಥಿತಿಗಳಲ್ಲಿ, ದಿಕ್ಸೂಚಿಯು ಒಂದು ಭರವಸಾರ್ಹ ಉಪಕರಣವಾಗಿದೆ. ಭೂಮಿಯ ಕಾಂತಕ್ಷೇತ್ರದಿಂದ ನಿರ್ದೇಶಿಸಲ್ಪಟ್ಟ ಅದರ ಸೂಜಿಯು, ಸದಾ ಉತ್ತರದಿಕ್ಕಿನ ಕಡೆಗೆ ಸೂಚಿಸುತ್ತಿರುತ್ತದೆ. ಹೀಗೆ, ಪ್ರಯಾಣಿಕರಿಗೆ ಮಾರ್ಗದರ್ಶನ ನೀಡಲು ಹೆಗ್ಗುರುತುಗಳು ಇರದಿದ್ದಾಗ, ಅವರು ನಿರ್ದೇಶನಕ್ಕಾಗಿ ದಿಕ್ಸೂಚಿಯ ಮೇಲೆ ಅವಲಂಬಿಸಸಾಧ್ಯವಿದೆ. ಆದರೆ ದಿಕ್ಸೂಚಿಯ ಹತ್ತಿರ ಕಾಂತತ್ವವುಳ್ಳ ಒಂದು ವಸ್ತುವನ್ನು ಇರಿಸಿದಾಗ, ಏನು ಸಂಭವಿಸುತ್ತದೆ? ಸೂಜಿಯು ಉತ್ತರದಿಕ್ಕಿನ ಕಡೆಗೆ ತಿರುಗಿರುವ ಬದಲು, ಅಯಸ್ಕಾಂತದ ಕಡೆಗೆ ವಾಲುವುದು. ಅದು ಇನ್ನು ಮುಂದೆ ಒಂದು ವಿಶ್ವಾಸನೀಯ ಮಾರ್ಗದರ್ಶಿಯಾಗಿರುವುದಿಲ್ಲ.
ತದ್ರೀತಿಯ ಸಂಗತಿಯು, ಮಾನವ ಮನಸ್ಸಾಕ್ಷಿಗೆ ಸಂಭವಿಸಬಲ್ಲದು. ಅದೊಂದು ವಿಶ್ವಾಸನೀಯ ಮಾರ್ಗದರ್ಶಿಯೋಪಾದಿ ಕಾರ್ಯನಡಿಸಲಿಕ್ಕಾಗಿ, ಸೃಷ್ಟಿಕರ್ತನು ಆ ಸಾಮರ್ಥ್ಯವನ್ನು ನಮ್ಮಲ್ಲಿ ಇರಿಸಿದನು. ನಾವು ದೇವರ ಸ್ವರೂಪದಲ್ಲಿ ಸೃಷ್ಟಿಸಲ್ಪಟ್ಟಿರುವುದರಿಂದ, ನಿರ್ಣಯಗಳನ್ನು ಮಾಡಬೇಕಾದಾಗ, ಈ ಮನಸ್ಸಾಕ್ಷಿಯು ನಮ್ಮನ್ನು ಸದಾ ಸರಿಯಾದ ದಿಕ್ಕಿಗೆ ಮಾರ್ಗದರ್ಶಿಸಬೇಕು. ನಾವು ದೇವರ ನೈತಿಕ ಮಟ್ಟಗಳನ್ನು ಪ್ರತಿಬಿಂಬಿಸುವಂತೆ ಅದು ನಮ್ಮನ್ನು ಪ್ರೇರೇಪಿಸಬೇಕು. (ಆದಿಕಾಂಡ 1:27) ಅನೇಕಾವರ್ತಿ ಅದು ಹಾಗೆ ಪ್ರೇರೇಪಿಸುತ್ತದೆ. ಉದಾಹರಣೆಗೆ, ದೇವರ ಧರ್ಮಶಾಸ್ತ್ರವಿಲ್ಲದಿರುವ ಕೆಲವರು, ‘ಸ್ವಾಭಾವಿಕವಾಗಿ ಧರ್ಮಶಾಸ್ತ್ರದಲ್ಲಿ ಹೇಳಿದಂತೆ ನಡೆಯುತ್ತಾರೆಂದು’ ಕ್ರೈಸ್ತ ಅಪೊಸ್ತಲ ಪೌಲನು ಬರೆದನು. ಏಕೆ? ಏಕೆಂದರೆ “ಇದಕ್ಕೆ ಅವರ ಮನಸ್ಸು ಸಹ ಸಾಕ್ಷಿ ನುಡಿಯುತ್ತದೆ.”—ರೋಮಾಪುರ 2:14, 15.
ಆದರೂ, ಈ ಮನಸ್ಸಾಕ್ಷಿಯು ತಾನು ಪ್ರತಿಕ್ರಿಯಿಸಬೇಕಾದ ಸಮಯದಲ್ಲೆಲ್ಲ ಪ್ರತಿಕ್ರಿಯಿಸುವುದಿಲ್ಲ. ಮಾನವ ಅಪರಿಪೂರ್ಣತೆಯ ಕಾರಣ, ನಮಗೆ ತಪ್ಪೆಂದು ತಿಳಿದಿರುವ ಕೆಲಸಗಳನ್ನೇ ಮಾಡುವ ಪ್ರವೃತ್ತಿ ನಮ್ಮಲ್ಲಿದೆ. “ಅಂತರಾತ್ಮದೊಳಗೆ ದೇವರ ನಿಯಮದಲ್ಲಿ ಆನಂದಪಡುವವನಾಗಿದ್ದೇನೆ. ಆದರೆ ನನ್ನ ಅಂಗಗಳಲ್ಲಿ ಬೇರೊಂದು ನಿಯಮ ಉಂಟೆಂದು ನೋಡುತ್ತೇನೆ. ಅದು ನನ್ನ ಮನಸ್ಸಿನಲ್ಲಿರುವ ನಿಯಮಕ್ಕೆ ವಿರುದ್ಧವಾಗಿ ಕಾದಾಡಿ ನನ್ನನ್ನು ಸೆರೆಹಿಡಿದು ನನ್ನ ಅಂಗಗಳಲ್ಲಿರುವ ಪಾಪದ ನಿಯಮಕ್ಕೆ ವಶಮಾಡುವಂಥದಾಗಿದೆ” ಎಂದು ಪೌಲನು ಒಪ್ಪಿಕೊಂಡನು. (ರೋಮಾಪುರ 7:22, 23) ನಾವು ಪದೇ ಪದೇ ತಪ್ಪಾದ ಪ್ರವೃತ್ತಿಗಳಿಗೆ ಅಧೀನರಾಗುವುದಾದರೆ, ನಮ್ಮ ಮನಸ್ಸಾಕ್ಷಿಯು ಕ್ರಮೇಣ ಜಡವಾಗಿ, ಇಂತಹ ನಡತೆಯು ತಪ್ಪಾಗಿದೆಯೆಂದು ಅದು ನಮಗೆ ಹೇಳುವುದನ್ನು ಕೊನೆಗೆ ನಿಲ್ಲಿಸಿಬಿಡುವುದು.
ಆದರೆ, ಅಪರಿಪೂರ್ಣತೆಯ ಎದುರಿನಲ್ಲೂ, ನಾವು ನಮ್ಮ ಮನಸ್ಸಾಕ್ಷಿಯನ್ನು ದೇವರ ಮಟ್ಟಗಳಿಗೆ ಸರಿಹೊಂದಿಸಸಾಧ್ಯವಿದೆ. ಹಾಗೆ ಮಾಡುವುದು ಅತ್ಯಾವಶ್ಯಕವೂ ಆಗಿದೆ. ಒಂದು ಶುದ್ಧವಾದ ಮತ್ತು ಸರಿಯಾಗಿ ತರಬೇತುಗೊಳಿಸಲ್ಪಟ್ಟ ಮನಸ್ಸಾಕ್ಷಿಯು, ದೇವರೊಂದಿಗೆ ಆದರಣೀಯ, ವೈಯಕ್ತಿಕ ಸಂಬಂಧಕ್ಕೆ ನಡೆಸುವುದಲ್ಲದೆ, ನಮ್ಮ ರಕ್ಷಣೆಗೂ ಅತ್ಯಾವಶ್ಯಕವಾಗಿದೆ. (ಇಬ್ರಿಯ 10:22; 1 ಪೇತ್ರ 1:15, 16) ಅಲ್ಲದೆ, ಒಳ್ಳೆಯ ಮನಸ್ಸಾಕ್ಷಿಯು, ಜೀವಿತದಲ್ಲಿ ವಿವೇಕಯುತ ನಿರ್ಣಯಗಳನ್ನು ಮಾಡುವಂತೆ ನಮಗೆ ಸಹಾಯ ಮಾಡುವುದು. ಇದು ನಮ್ಮನ್ನು ಶಾಂತಿ ಮತ್ತು ಸಂತೋಷಕ್ಕೆ ನಡೆಸುವುದು. ಇಂತಹ ಮನಸ್ಸಾಕ್ಷಿಯುಳ್ಳ ವ್ಯಕ್ತಿಯೊಬ್ಬನ ಕುರಿತು, ಕೀರ್ತನೆಗಾರನು ಹೇಳಿದ್ದು: “ದೇವರ ಧರ್ಮೋಪದೇಶವು ಅವನ ಹೃದಯದಲ್ಲಿರುವದು; ಅವನು ಜಾರುವದೇ ಇಲ್ಲ.”—ಕೀರ್ತನೆ 37:31.
ಮನಸ್ಸಾಕ್ಷಿಯನ್ನು ತರಬೇತುಗೊಳಿಸುವುದು
ಮನಸ್ಸಾಕ್ಷಿಯನ್ನು ತರಬೇತುಗೊಳಿಸುವುದರಲ್ಲಿ, ನಿಯಮಗಳ ಒಂದು ಪಟ್ಟಿಯನ್ನು ಕೇವಲ ಕಂಠಪಾಠ ಮಾಡಿ, ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದಕ್ಕಿಂತ ಹೆಚ್ಚಿನದ್ದು ಸೇರಿದೆ. ಯೇಸುವಿನ ದಿನದಲ್ಲಿದ್ದ ಫರಿಸಾಯರು ಇದನ್ನೇ ಮಾಡಿದರು. ಈ ಧಾರ್ಮಿಕ ಮುಖಂಡರು ಧರ್ಮಶಾಸ್ತ್ರವನ್ನು ಚೆನ್ನಾಗಿ ತಿಳಿದುಕೊಂಡಿದ್ದರು. ಮತ್ತು ಧರ್ಮಶಾಸ್ತ್ರವನ್ನು ಮೀರಿ ನಡೆಯದಂತೆ ಜನರಿಗೆ ಸಹಾಯಮಾಡುವ ಉದ್ದೇಶದಿಂದ, ಅವರು ಪ್ರತಿಯೊಂದು ಸಣ್ಣಪುಟ್ಟ ವಿಷಯಕ್ಕೂ ನಿಯಮವನ್ನು ಮಾಡಿಕೊಂಡಿದ್ದರು. ಆದುದರಿಂದಲೇ, ಸಬ್ಬತ್ ದಿನದಂದು ಯೇಸುವಿನ ಶಿಷ್ಯರು ತೆನೆಗಳನ್ನು ಕಿತ್ತು, ಕಾಳುಗಳನ್ನು ತಿಂದಾಗ, ಅದನ್ನು ನೋಡಿ ಫರಿಸಾಯರು ಕೂಡಲೇ ಪ್ರತಿಭಟಿಸಿದರು. ಮತ್ತು ಸಬ್ಬತ್ ದಿನದಂದು, ಯೇಸು ಕೈಬತ್ತಿಹೋದ ಮನುಷ್ಯನನ್ನು ಗುಣಪಡಿಸಿದಾಗಲೂ ಅವರು ಆಕ್ಷೇಪಿಸಿದರು. (ಮತ್ತಾಯ 12:1, 2, 9, 10) ಫರಿಸಾಯರ ಸಂಪ್ರದಾಯಕ್ಕನುಸಾರ, ಈ ಎರಡೂ ಕೃತ್ಯಗಳು ನಾಲ್ಕನೆಯ ಆಜ್ಞೆಯ ಉಲ್ಲಂಘನೆಯಾಗಿದ್ದವು.—ವಿಮೋಚನಕಾಂಡ 20:8-11.
ಫರಿಸಾಯರು ಧರ್ಮಶಾಸ್ತ್ರದ ಅಧ್ಯಯನ ಮಾಡಿದರೆಂಬುದರಲ್ಲಿ ಸಂದೇಹವಿಲ್ಲ. ಆದರೆ ಅವರ ಮನಸ್ಸಾಕ್ಷಿಗಳು ದೇವರ ಮಟ್ಟಗಳಿಗೆ ಸರಿಯಾಗಿ ಹೊಂದಿಕೊಂಡಿದ್ದವೊ? ಸ್ವಲ್ಪವೂ ಇಲ್ಲ! ಸಬ್ಬತ್ ನಿಯಮದ ಘೋರ ಉಲ್ಲಂಘನೆಯೆಂದು ತಾವು ನೆನಸಿದ ವಿಷಯದ ಕುರಿತು ಅನ್ಯಾಯವಾಗಿ ಟೀಕಿಸಿದ ಬಳಿಕ, ಫರಿಸಾಯರು ಯೇಸುವನ್ನು “ಯಾವ ಉಪಾಯದಿಂದ ಕೊಲ್ಲೋಣ ಎಂದು” ತಮ್ಮೊಳಗೆ ಆಲೋಚನೆ ಮಾಡತೊಡಗಿದರು. (ಮತ್ತಾಯ 12:14) ಸಬ್ಬತ್ ದಿನದಂದು ತಾಜಾ ತೆನೆಗಳನ್ನು ಕಿತ್ತು ತಿಂದ ಮತ್ತು ರೋಗಿಯನ್ನು ಗುಣಪಡಿಸಿದ ಸಂಗತಿಗಳಿಂದ, ಈ ಸ್ವನೀತಿವಂತ ಧಾರ್ಮಿಕ ಮುಖಂಡರು ಸಿಟ್ಟಿಗೆದ್ದರೂ, ಯೇಸುವಿನ ಕೊಲೆಯ ಸಂಚುಹೂಡುವುದರಲ್ಲಿ ಅವರು ಸ್ವಲ್ಪವೂ ಹಿಂಜರಿಯಲಿಲ್ಲ!
ಮಹಾ ಯಾಜಕರು ಸಹ, ತದ್ರೀತಿಯ ವಕ್ರವಾದ ಆಲೋಚನೆಯನ್ನೇ ತೋರ್ಪಡಿಸಿದರು. ಯೇಸುವನ್ನು ಹಿಡಿದುಕೊಡಲಿಕ್ಕಾಗಿ, ಯೂದನಿಗೆ ದೇವಾಲಯದ ಬೊಕ್ಕಸದಿಂದ 30 ಬೆಳ್ಳಿ ನಾಣ್ಯಗಳನ್ನು ಕೊಟ್ಟಾಗ, ಈ ಭ್ರಷ್ಟ ಪುರುಷರಲ್ಲಿ ದೋಷಿಭಾವನೆಯೇ ಇರಲಿಲ್ಲ. ಆದರೆ ಯೂದನು ಅನಿರೀಕ್ಷಿತವಾಗಿ ಹಣವನ್ನು ದೇವಾಲಯದೊಳಕ್ಕೆ ಎಸೆದುಬಿಟ್ಟಾಗ, ಈ ಮಹಾ ಯಾಜಕರ ಮನಸ್ಸಾಕ್ಷಿಗಳು ಧರ್ಮಶಾಸ್ತ್ರ ಸಂಬಂಧವಾದ ಉಭಯಸಂಕಟವನ್ನು ಎದುರಿಸಿದವು. “ಅದು [ಆ ನಾಣ್ಯಗಳು] ಜೀವಹತ್ಯಕ್ಕೆ ಕೊಟ್ಟ ಕ್ರಯವಾದ್ದರಿಂದ ಅದನ್ನು ಕಾಣಿಕೇಪೆಟ್ಟಿಗೆಯಲ್ಲಿ ಹಾಕಬಾರದು” ಎಂದು ಅವರು ಹೇಳಿದರು. (ಮತ್ತಾಯ 27:3-6) ಈಗ ಯೂದನ ಹಣವು ಅಶುದ್ಧವಾಗಿತ್ತೆಂದು ಆ ಮಹಾ ಯಾಜಕರು ಚಿಂತಿಸಿದರು. (ಧರ್ಮೋಪದೇಶಕಾಂಡ 23:18ನ್ನು ಹೋಲಿಸಿರಿ.) ಆದರೂ, ಈ ಪುರುಷರೇ, ದೇವರ ಪುತ್ರನನ್ನು ಹಿಡಿದುಕೊಡಲಿಕ್ಕಾಗಿ ಹಣವನ್ನು ಖರ್ಚು ಮಾಡುವುದರಲ್ಲಿ ಯಾವ ತಪ್ಪನ್ನೂ ಕಾಣಲಿಲ್ಲ!
ದೇವರ ಆಲೋಚನೆಗೆ ಹೊಂದಿಕೊಂಡಿರುವುದು
ಮನಸ್ಸಾಕ್ಷಿಯನ್ನು ತರಬೇತುಗೊಳಿಸುವುದರಲ್ಲಿ, ಮನಸ್ಸನ್ನು ವಿಧಿನಿಷೇಧಗಳ ಒಂದು ಪಟ್ಟಿಯಿಂದ ತುಂಬಿಸುವುದಕ್ಕಿಂತ ಹೆಚ್ಚಿನದ್ದು ಅಗತ್ಯವಾಗಿದೆ, ಎಂದು ಈ ಮೇಲಿನ ಉದಾಹರಣೆಗಳು ತೋರಿಸುತ್ತವೆ. ದೇವರ ನಿಯಮಗಳ ಜ್ಞಾನವು ಅತ್ಯಾವಶ್ಯಕವಾಗಿದೆ, ಮತ್ತು ಅವುಗಳಿಗೆ ವಿಧೇಯರಾಗುವುದು ರಕ್ಷಣೆಗೆ ಅಗತ್ಯವೆಂಬುದು ಒಪ್ಪತಕ್ಕದ್ದು. (ಕೀರ್ತನೆ 19:7-11) ಆದರೆ, ದೇವರ ನಿಯಮಗಳನ್ನು ಕಲಿತುಕೊಳ್ಳುವುದರೊಂದಿಗೆ, ಆತನ ಆಲೋಚನೆಗೆ ಹೊಂದಿಕೊಳ್ಳುವ ಒಂದು ಹೃದಯವನ್ನು ನಾವು ಬೆಳೆಸಿಕೊಳ್ಳಲೇಬೇಕು. ಆಗ ನಾವು, ಯೆಶಾಯನು ಬರೆದ ಯೆಹೋವನ ಪ್ರವಾದನೆಯ ನೆರವೇರಿಕೆಯನ್ನು ಅನುಭವಿಸಬಲ್ಲೆವು. ಅದು ಹೇಳುವುದು: “ನಿಮ್ಮ ಬೋಧಕನನ್ನು ಕಣ್ಣಾರೆ ಕಾಣುವಿರಿ; ನೀವು ಬಲಕ್ಕಾಗಲಿ ಎಡಕ್ಕಾಗಲಿ ತಿರುಗಿಕೊಳ್ಳುವಾಗ ಇದೇ ಮಾರ್ಗ, ಇದರಲ್ಲೇ ನಡೆಯಿರಿ ಎಂದು ನಿಮ್ಮ ಹಿಂದೆ ಆಡುವ ಮಾತು ನಿಮ್ಮ ಕಿವಿಗೆ ಬೀಳುವದು.”—ಯೆಶಾಯ 30:20, 21; 48:17.
ಇದರ ಅರ್ಥ, ನಾವೊಂದು ಗಂಭೀರವಾದ ನಿರ್ಣಯವನ್ನು ಮಾಡಬೇಕಾದಾಗ, ನಾವೇನು ಮಾಡಬೇಕೆಂದು ಆ ಸಮಯದಲ್ಲಿ ಒಂದು ಅಕ್ಷರಾರ್ಥ ಧ್ವನಿಯು ನಮಗೆ ಹೇಳುವುದಿಲ್ಲವೆಂಬುದು ನಿಶ್ಚಯ. ಆದರೂ, ಸಂಗತಿಗಳ ಕುರಿತಾದ ನಮ್ಮ ಆಲೋಚನೆಯು ದೇವರ ಆಲೋಚನೆಗೆ ಹೊಂದಿಕೊಂಡಿರುವಾಗ, ಆತನನ್ನು ಮೆಚ್ಚಿಸುವಂತಹ ನಿರ್ಣಯಗಳನ್ನು ನಾವು ಮಾಡುವಂತೆ ನಮ್ಮ ಮನಸ್ಸಾಕ್ಷಿಯು ನೆರವು ನೀಡಲು ಸುಸಜ್ಜಿತವಾಗಿರುವುದು.—ಜ್ಞಾನೋಕ್ತಿ 27:11.
ಸಾ.ಶ.ಪೂ. 18ನೆಯ ಶತಮಾನದಲ್ಲಿ ಜೀವಿಸಿದ ಯೋಸೇಫನನ್ನು ಪರಿಗಣಿಸಿರಿ. ಪೋಟೀಫರನ ಹೆಂಡತಿಯು ತನ್ನೊಂದಿಗೆ ವ್ಯಭಿಚಾರಮಾಡುವಂತೆ ಯೋಸೇಫನನ್ನು ಪೀಡಿಸಿದಾಗ, ಅವನು ಹೀಗೆ ಹೇಳುತ್ತಾ ನಿರಾಕರಿಸಿದನು: “ನಾನು ಇಂಥಾ ಮಹಾ ದುಷ್ಕೃತ್ಯವನ್ನು ನಡಿಸಿ ದೇವರಿಗೆ ವಿರುದ್ಧವಾಗಿ ಹೇಗೆ ಪಾಪಮಾಡಲಿ”? (ಆದಿಕಾಂಡ 39:9) ಯೋಸೇಫನ ದಿನದಲ್ಲಿ, ವ್ಯಭಿಚಾರವನ್ನು ಖಂಡಿಸುವ ಯಾವುದೇ ಲಿಖಿತ ನಿಯಮವನ್ನು ದೇವರು ಕೊಟ್ಟಿರಲಿಲ್ಲ. ಅದಲ್ಲದೆ ಯೋಸೇಫನು, ಕುಟುಂಬದ ಪ್ರಭಾವದಿಂದ ಅಥವಾ ಹಿರಿಯರ ಕಟ್ಟಳೆಗಳಿಂದ ದೂರವಾದ ಐಗುಪ್ತದಲ್ಲಿ ವಾಸಿಸುತ್ತಿದ್ದನು. ಹಾಗಾದರೆ, ಈ ಶೋಧನೆಯನ್ನು ಎದುರಿಸುವಂತೆ ಯೋಸೇಫನನ್ನು ಶಕ್ತಗೊಳಿಸಿದ್ದು ಯಾವುದು? ಸರಳವಾಗಿ ಹೇಳುವುದಾದರೆ, ಅದು ಅವನ ತರಬೇತುಗೊಳಿಸಲ್ಪಟ್ಟ ಮನಸ್ಸಾಕ್ಷಿಯಾಗಿತ್ತು. ಪತಿಪತ್ನಿ “ಒಂದೇ ಶರೀರವಾಗಿರುವರು” ಎಂಬ ದೇವರ ದೃಷ್ಟಿಕೋನವನ್ನು ಯೋಸೇಫನು ಅಂಗೀಕರಿಸಿದನು. (ಆದಿಕಾಂಡ 2:24) ಆದುದರಿಂದ, ಮತ್ತೊಬ್ಬನ ಪತ್ನಿಯೊಂದಿಗೆ ಸಂಬಂಧ ಇಟ್ಟುಕೊಳ್ಳುವುದು ತಪ್ಪೆಂದು ಅವನು ಮನಗಂಡನು. ಈ ವಿಷಯದಲ್ಲಿ, ಯೋಸೇಫನ ಆಲೋಚನೆಯು ದೇವರ ಆಲೋಚನೆಗೆ ಹೊಂದಿಕೊಂಡಿತ್ತು. ವ್ಯಭಿಚಾರದಂತಹ ಕೃತ್ಯವು, ಅವನ ನೈತಿಕ ಅರಿವಿಗೆ ವಿರುದ್ಧವಾಗಿತ್ತು.
ಇಂದು, ಕೆಲವರು ಮಾತ್ರ ಯೋಸೇಫನಂತೆ ಇರುತ್ತಾರೆ. ಲೈಂಗಿಕ ಅನೈತಿಕತೆಯು ಎಲ್ಲೆಡೆಯೂ ಇದೆ, ಮತ್ತು ನೈತಿಕವಾಗಿ ಶುದ್ಧರಾಗಿರುವಂತೆ ತಾವು ತಮ್ಮ ಸೃಷ್ಟಿಕರ್ತನಿಗೆ, ಸ್ವತಃ ತಮಗೇ, ಇಲ್ಲವೆ ತಮ್ಮ ವಿವಾಹ ಸಂಗಾತಿಗಳಿಗೆ ಯಾವ ರೀತಿಯಲ್ಲೂ ಜವಾಬ್ದಾರರಲ್ಲವೆಂದು ಅನೇಕರಿಗೆ ಅನಿಸುತ್ತದೆ. ಈ ಸನ್ನಿವೇಶವು ಯೆರೆಮೀಯನ ಪುಸ್ತಕದಲ್ಲಿ ವರ್ಣಿಸಿದಂತಹ ಸನ್ನಿವೇಶದಂತಿದೆ: “ಯಾವನೂ ತನ್ನ ಅಧರ್ಮದ ವಿಷಯವಾಗಿ ಪಶ್ಚಾತ್ತಾಪಪಟ್ಟು—ಆಹಾ, ನಾನು ಎಂಥಾ ಕೆಲಸ ಮಾಡಿದೆ ಎಂದುಕೊಳ್ಳುತ್ತಿರಲಿಲ್ಲ; ಯುದ್ಧದಲ್ಲಿ ರಭಸವಾಗಿ ಓಡುವ ಕುದುರೆಯಂತೆ ಪ್ರತಿಯೊಬ್ಬನೂ ತನ್ನ ತನ್ನ ಮಾರ್ಗಕ್ಕೇ ತ್ವರೆಪಡುತ್ತಾನೆ.” (ಯೆರೆಮೀಯ 8:6) ಆದುದರಿಂದ, ನಾವು ದೇವರ ಆಲೋಚನೆಗೆ ಹೊಂದಿಕೊಂಡಿರುವ ಅಗತ್ಯ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿರುತ್ತದೆ. ಅದನ್ನು ಮಾಡುವಂತೆ ನಮಗೆ ನೆರವು ನೀಡಲಿಕ್ಕಾಗಿ, ಒಂದು ಅದ್ಭುತಕರವಾದ ಏರ್ಪಾಡು ನಮ್ಮಲ್ಲಿದೆ.
ಮನಸ್ಸಾಕ್ಷಿಯನ್ನು ತರಬೇತುಗೊಳಿಸಲಿಕ್ಕಾಗಿರುವ ಒಂದು ನೆರವು
ಪ್ರೇರಿತ ಶಾಸ್ತ್ರವಚನಗಳು “ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಶಿಕ್ಷೆಗೂ ಉಪಯುಕ್ತವಾಗಿದೆ. ಅದರಿಂದ ದೇವರ ಮನುಷ್ಯನು ಪ್ರವೀಣನಾಗಿ ಸಕಲಸತ್ಕಾರ್ಯಕ್ಕೆ ಸನ್ನದ್ಧನಾಗುವನು.” (2 ತಿಮೊಥೆಯ 3:16, 17) ಸರಿತಪ್ಪಿನ ನಡುವೆ ಭೇದಕಲ್ಪಿಸುವ ಸಲುವಾಗಿ, ಯಾವುದನ್ನು ಬೈಬಲು “ಜ್ಞಾನೇಂದ್ರಿಯ”ಗಳು ಎಂದು ಕರೆಯುತ್ತದೊ ಅವನ್ನು ತರಬೇತುಗೊಳಿಸಲು, ಬೈಬಲಿನ ಅಧ್ಯಯನವು ನಮಗೆ ಸಹಾಯ ಮಾಡುವುದು. (ಇಬ್ರಿಯ 5:14) ನಾವು ದೇವರು ಪ್ರೀತಿಸುವ ವಿಷಯಗಳಿಗಾಗಿ ಪ್ರೀತಿಯನ್ನು, ಆತನು ದ್ವೇಷಿಸುವ ಸಂಗತಿಗಳಿಗಾಗಿ ಹೇಸಿಗೆಯನ್ನು ಬೆಳೆಸಿಕೊಳ್ಳುವಂತೆ ಅದು ಸಹಾಯ ಮಾಡುವುದು.—ಕೀರ್ತನೆ 97:10; 139:21.
ಹಾಗಾದರೆ ಬೈಬಲ್ ಅಧ್ಯಯನದ ಗುರಿಯು, ಕೇವಲ ಬೈಬಲಿನ ವಿಸ್ತೃತ ಜ್ಞಾನಕ್ಕಿಂತಲೂ ಸತ್ಯದ ನಿಜಾರ್ಥ ಮತ್ತು ಪ್ರಾಯೋಗಿಕ ಮಹತ್ವವನ್ನು ತಿಳಿದುಕೊಳ್ಳುವುದೇ ಆಗಿದೆ. ವಾಚ್ಟವರ್ ಪತ್ರಿಕೆಯ, 1976, ಸೆಪ್ಟೆಂಬರ್ 1ರ ಸಂಚಿಕೆಯು ಹೇಳಿದ್ದು: “ಶಾಸ್ತ್ರಗಳ ಅಧ್ಯಯನವನ್ನು ಮಾಡುವಾಗ, ನಾವು ದೇವರ ನ್ಯಾಯ, ಪ್ರೀತಿ ಮತ್ತು ನೀತಿಯನ್ನು ಗ್ರಹಿಸಿಕೊಳ್ಳಲು ಪ್ರಯತ್ನಿಸಬೇಕು. ಈ ಗುಣಗಳು, ತಿನ್ನುವ ಮತ್ತು ಉಸಿರಾಡುವ ಕ್ರಿಯೆಗಳಂತೆ, ನಮ್ಮ ಜೀವನರೀತಿಯ ಒಂದು ಭಾಗವಾಗುವ ಹಾಗೆ ಅವುಗಳನ್ನು ಆಳವಾಗಿ ನಮ್ಮ ಹೃದಯಗಳಲ್ಲಿ ನಾಟಿಸಬೇಕು. ಸರಿತಪ್ಪುಗಳ ತೀಕ್ಷ್ಣವಾದ ಅರಿವನ್ನು ಬೆಳೆಸಿಕೊಳ್ಳುವ ಮೂಲಕ, ನಾವು ನೈತಿಕ ಹೊಣೆಗಾರಿಕೆಯ ಪ್ರಜ್ಞೆಗೆ ಹೆಚ್ಚು ಸಂಪೂರ್ಣವಾಗಿ ಜಾಗೃತರಾಗಿರಲು ಪ್ರಯತ್ನಿಸಬೇಕು. ಇದಕ್ಕಿಂತಲೂ ಮಿಗಿಲಾಗಿ, ನಮ್ಮ ಪರಿಪೂರ್ಣ ಧರ್ಮವಿಧಾಯಕ ಮತ್ತು ನ್ಯಾಯಾಧಿಪತಿಯ ಕಡೆಗೆ ಜವಾಬ್ದಾರರಾಗಿರುವ ಬಲವಾದ ಅನಿಸಿಕೆ, ನಮ್ಮ ಮನಸ್ಸಾಕ್ಷಿಗಾಗುವಂತೆ ನಾವು ಮಾಡಬೇಕು. (ಯೆಶಾ. 33:22) ಆದುದರಿಂದ, ನಾವು ದೇವರ ಕುರಿತು ಅನೇಕ ಸಂಗತಿಗಳನ್ನು ತಿಳಿದುಕೊಳ್ಳುತ್ತಿರುವಾಗ, ಆತನನ್ನು ಜೀವಿತದ ಪ್ರತಿಯೊಂದು ವಿಷಯದಲ್ಲಿ ಅನುಕರಿಸಲು ನಾವು ಪ್ರಯತ್ನಿಸುತ್ತಿರಬೇಕು.”
‘ಕ್ರಿಸ್ತನ ಮನಸ್ಸನ್ನು’ ಪಡೆದುಕೊಳ್ಳುವುದು
ಬೈಬಲಿನ ಅಧ್ಯಯನವು, ‘ಕ್ರಿಸ್ತನ ಮನಸ್ಸನ್ನು’ ಪಡೆದುಕೊಳ್ಳುವಂತೆಯೂ ನಮಗೆ ಸಹಾಯ ಮಾಡುವುದು. ಇದು ಯೇಸುವಿನಿಂದ ಪ್ರದರ್ಶಿಸಲ್ಪಟ್ಟ ವಿಧೇಯತೆ ಹಾಗೂ ದೀನಭಾವದ ಮಾನಸಿಕ ಪ್ರವೃತ್ತಿಯಾಗಿದೆ. (1 ಕೊರಿಂಥ 2:16) ತನ್ನ ತಂದೆಯ ಚಿತ್ತವನ್ನು ಮಾಡುವುದು, ಯೋಚನೆ ಮಾಡದೆಯೇ ರೂಢಿಗತವಾಗಿ ಅನುಸರಿಸಲ್ಪಡುವ ದಿನಚರಿಯಾಗಿರಲಿಲ್ಲ, ಬದಲಿಗೆ ಅದು ಅವನಿಗೆ ಆನಂದವನ್ನು ತರುವಂತಹದ್ದಾಗಿತ್ತು. ಅವನ ಮನೋಭಾವವು ಕೀರ್ತನೆಗಾರನಾದ ದಾವೀದನಿಂದ ಪ್ರವಾದನಾತ್ಮಕವಾಗಿ ವರ್ಣಿಸಲ್ಪಟ್ಟಿತು. ಅವನು ಬರೆದುದು: “ನನ್ನ ದೇವರೇ, ನಿನ್ನ ಚಿತ್ತವನ್ನು ಅನುಸರಿಸುವದೇ ನನ್ನ ಸಂತೋಷವು; ನಿನ್ನ ಧರ್ಮೋಪದೇಶವು ನನ್ನ ಅಂತರಂಗದಲ್ಲಿದೆ.”a—ಕೀರ್ತನೆ 40:8.
ಮನಸ್ಸಾಕ್ಷಿಯನ್ನು ತರಬೇತುಗೊಳಿಸುವುದರಲ್ಲಿ, ‘ಕ್ರಿಸ್ತನ ಮನಸ್ಸನ್ನು’ ಪಡೆದುಕೊಳ್ಳುವುದು ಅತ್ಯಾವಶ್ಯಕವಾಗಿದೆ. ಯೇಸು ಭೂಮಿಯ ಮೇಲೆ ಪರಿಪೂರ್ಣ ಮನುಷ್ಯನಾಗಿದ್ದಾಗ, ಮಾನವ ಪರಿಮಿತಿಯೊಳಗೆ ಸಾಧ್ಯವಿದ್ದಷ್ಟು ಸಂಪೂರ್ಣವಾಗಿ, ತನ್ನ ತಂದೆಯ ಗುಣಗಳನ್ನು ಹಾಗೂ ವ್ಯಕ್ತಿತ್ವವನ್ನು ಪ್ರತಿಬಿಂಬಿಸಿದನು. ಆದುದರಿಂದಲೇ, ಅವನು ಹೀಗೆ ಹೇಳಸಾಧ್ಯವಾಯಿತು, “ನನ್ನನ್ನು ನೋಡಿದವನು ತಂದೆಯನ್ನು ನೋಡಿದ್ದಾನೆ.” (ಯೋಹಾನ 14:9) ಯೇಸು ತಾನು ಭೂಮಿಯ ಮೇಲೆ ಎದುರಿಸಿದ ಪ್ರತಿಯೊಂದು ಸನ್ನಿವೇಶದಲ್ಲಿ, ಅವನು ಏನು ಮಾಡಬೇಕೆಂದು ಅವನ ತಂದೆಯು ಬಯಸಿದನೊ ಅದನ್ನೇ ಮಾಡಿದನು. ಆದಕಾರಣ, ನಾವು ಯೇಸುವಿನ ಜೀವನದ ಕುರಿತು ಅಧ್ಯಯನ ಮಾಡುವಾಗ, ಯೆಹೋವ ದೇವರು ಎಂತಹವನಾಗಿದ್ದಾನೆ ಎಂಬುದರ ಸ್ಪಷ್ಟವಾದ ಚಿತ್ರವು ನಮಗೆ ಕಾಣಸಿಗುತ್ತದೆ.
ಯೆಹೋವನು “ಕನಿಕರವೂ ದಯೆಯೂ ಉಳ್ಳ ದೇವರು; ದೀರ್ಘಶಾಂತನೂ ಪ್ರೀತಿಯೂ ನಂಬಿಕೆಯೂ ಉಳ್ಳವನು” ಎಂದು ನಾವು ಓದುತ್ತೇವೆ. (ವಿಮೋಚನಕಾಂಡ 34:6) ಯೇಸು ತನ್ನ ಅಪೊಸ್ತಲರೊಂದಿಗೆ ವ್ಯವಹರಿಸಿದಾಗ, ಈ ಗುಣಗಳನ್ನು ಆಗಿಂದಾಗ್ಗೆ ಪ್ರದರ್ಶಿಸಿದನು. ತಮ್ಮಲ್ಲಿ ಯಾರು ಹೆಚ್ಚಿನವರೆಂದು ಅವರು ಪುನಃ ಪುನಃ ವಾದಿಸಿದಾಗ, “ನಿಮ್ಮಲ್ಲಿ ದೊಡ್ಡವನಾಗಬೇಕೆಂದಿರುವವನು ನಿಮ್ಮ ಸೇವಕನಾಗಿರಬೇಕು; ನಿಮ್ಮಲ್ಲಿ ಮೊದಲನೆಯವನಾಗಬೇಕೆಂದಿರುವವನು ನಿಮ್ಮ ಆಳಾಗಿರಬೇಕು” ಎಂಬುದಾಗಿ ಯೇಸು ತಾಳ್ಮೆಯಿಂದ ಅವರಿಗೆ ತನ್ನ ನಡೆನುಡಿಗಳಿಂದ ಕಲಿಸಿದನು. (ಮತ್ತಾಯ 20:26, 27) ಯೇಸುವಿನ ಜೀವಿತವನ್ನು ಪರಿಗಣಿಸುವ ಮೂಲಕ, ನಾವು ದೇವರ ಆಲೋಚನೆಗೆ ಹೊಂದಿಕೊಂಡಿರಸಾಧ್ಯವಿದೆ ಎಂದು ತೋರಿಸಲಿಕ್ಕಾಗಿ, ಇದು ಕೇವಲ ಒಂದು ಉದಾಹರಣೆಯಾಗಿದೆ.
ನಾವು ಯೇಸುವಿನ ಕುರಿತು ಹೆಚ್ಚು ಕಲಿತಷ್ಟು, ನಮ್ಮ ಸ್ವರ್ಗೀಯ ತಂದೆಯಾದ ಯೆಹೋವನನ್ನು ಅನುಕರಿಸಲು ಸುಸಜ್ಜಿತರಾಗಿರುವೆವು. (ಎಫೆಸ 5:1, 2) ದೇವರ ಆಲೋಚನೆಗೆ ಹೊಂದಿಕೊಂಡಿರುವ ಒಂದು ಮನಸ್ಸಾಕ್ಷಿಯು, ನಮ್ಮನ್ನು ಸರಿಯಾದ ಮಾರ್ಗದಲ್ಲಿ ನಡೆಸುವುದು. ಆತನಲ್ಲಿ ಭರವಸೆಯಿಡುವವರಿಗೆ ಯೆಹೋವನು ವಾಗ್ದಾನಿಸುವುದು: “ನಿನ್ನನ್ನು ಉಪದೇಶಿಸಿ ನಡೆಯಬೇಕಾದ ಮಾರ್ಗವನ್ನು ತಿಳಿಸುವೆನು; ನಿನ್ನನ್ನು ಕಟಾಕ್ಷಿಸಿ ಆಲೋಚನೆಹೇಳುವೆನು.”—ಕೀರ್ತನೆ 32:8.
ತರಬೇತುಗೊಂಡ ಮನಸ್ಸಾಕ್ಷಿಯಿಂದ ಪ್ರಯೋಜನ ಪಡೆದುಕೊಳ್ಳುವುದು
ಅಪರಿಪೂರ್ಣ ಮಾನವರ ಹಟಮಾರಿತನವನ್ನು ಬಲ್ಲವನಾಗಿದ್ದ ಮೋಶೆಯು, ಇಸ್ರಾಯೇಲ್ಯರಿಗೆ ಎಚ್ಚರಿಕೆ ನೀಡಿದ್ದು: “ನಾನು ಈಗ ನಿಮಗೆ ಹೇಳಿದ ಎಚ್ಚರಿಕೆಯ ಮಾತುಗಳನ್ನೆಲ್ಲಾ ಮನಸ್ಸಿನಲ್ಲಿಟ್ಟುಕೊಳ್ಳಿರಿ, ಮತ್ತು ನಿಮ್ಮ ಸಂತತಿಯವರಿಗೆ ಈ ಧರ್ಮಶಾಸ್ತ್ರದ ನಿಯಮಗಳನ್ನು ಅನುಸರಿಸಬೇಕೆಂದು ಆಜ್ಞಾಪಿಸಿರಿ.” (ಧರ್ಮೋಪದೇಶಕಾಂಡ 32:46) ನಾವು ಕೂಡ ದೇವರ ನಿಯಮವನ್ನು ನಮ್ಮ ಹೃದಯಗಳಲ್ಲಿ ಬರೆದುಕೊಳ್ಳಬೇಕು. ಹಾಗೆ ಮಾಡುವುದಾದರೆ, ನಮ್ಮ ಮನಸ್ಸಾಕ್ಷಿಯು ನಮ್ಮ ಹೆಜ್ಜೆಗಳನ್ನು ನಿರ್ದೇಶಿಸುವ ಮತ್ತು ಸರಿಯಾದ ನಿರ್ಣಯಗಳನ್ನು ಮಾಡುವಂತೆ ನಮಗೆ ನೆರವು ನೀಡುವ ಸಾಧ್ಯತೆಯು ಹೆಚ್ಚಾಗಿರುವುದು.
ನಾವು ನಿಶ್ಚಯವಾಗಿಯೂ ಜಾಗರೂಕರಾಗಿರಬೇಕು. ಬೈಬಲ್ ಜ್ಞಾನೋಕ್ತಿಯು ಹೇಳುವುದು: “ಮನುಷ್ಯದೃಷ್ಟಿಗೆ ಸರಳವಾಗಿ ತೋರುವ ಒಂದು ದಾರಿಯುಂಟು. ಅದು ಕಟ್ಟಕಡೆಗೆ ಮರಣಮಾರ್ಗವೇ.” (ಜ್ಞಾನೋಕ್ತಿ 14:12) ವಿಷಯವು ಅನೇಕ ವೇಳೆ ಹೀಗಿರುವುದೇಕೆ? ಏಕೆಂದರೆ, ಬೈಬಲು ಅದನ್ನು ಹೀಗೆ ಹೇಳುತ್ತದೆ: “ಹೃದಯವು ಎಲ್ಲಕ್ಕಿಂತಲೂ ವಂಚಕ; ಗುಣವಾಗದ ರೋಗಕ್ಕೆ ಒಳಗಾಗಿದೆ; ಅದನ್ನು ಯಾರು ತಿಳಿದಾರು?” (ಯೆರೆಮೀಯ 17:9) ಆದುದರಿಂದ ನಾವೆಲ್ಲರೂ ಜ್ಞಾನೋಕ್ತಿ 3:5, 6ರ ಬುದ್ಧಿವಾದವನ್ನು ಅನುಸರಿಸುವ ಅಗತ್ಯವಿದೆ: “ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು.”
[ಪಾದಟಿಪ್ಪಣಿ]
a ಇಬ್ರಿಯರಿಗೆ ಬರೆದ ಪತ್ರದಲ್ಲಿ, ಅಪೊಸ್ತಲ ಪೌಲನು 40ನೆಯ ಕೀರ್ತನೆಯ ಮಾತುಗಳನ್ನು ಯೇಸು ಕ್ರಿಸ್ತನಿಗೆ ಅನ್ವಯಿಸಿದನು.—ಇಬ್ರಿಯ 10:5-10.
[ಪುಟ 7 ರಲ್ಲಿರುವ ಚಿತ್ರ]
ಒಂದು ದಿಕ್ಸೂಚಿಯಂತೆ, ಬೈಬಲ್ ಶಿಕ್ಷಿತ ಮನಸ್ಸಾಕ್ಷಿಯು ನಮ್ಮನ್ನು ಸರಿಯಾದ ದಿಕ್ಕಿನಲ್ಲಿ ನಡೆಸಬಲ್ಲದು
[ಕೃಪೆ]
Compass: Courtesy, Peabody Essex Museum, Salem, Mass.