ನಮ್ಮ ಕಾಲಗಳ ಸ್ಥಿತಿಗತಿಗೆ ನೀವು ಎಚ್ಚರವಾಗಿ ಇದ್ದೀರೊ?
ಸನ್ನಿಹಿತವಾಗಿರುವ ಅಪಾಯಕ್ಕೆ ಎಚ್ಚರವಾಗಿರುವುದರಿಂದ ಜೀವರಕ್ಷಣೆಯಾಗಬಲ್ಲದು ಅಥವಾ ಅದಕ್ಕೆ ಲಕ್ಷ್ಯಕೊಡದೆ ಇರುವ ಮೂಲಕ ಮರಣವೂ ಫಲಿಸಬಲ್ಲದು. ಜ್ವಾಲಾಮುಖಿಯ ಸಮಸ್ಯೆಯಿದ್ದ ಎರಡು ದ್ವೀಪಗಳಲ್ಲಿ ಸಂಭವಿಸಿದ ಘಟನೆಯಿಂದ ಇದನ್ನು ದೃಷ್ಟಾಂತಿಸಸಾಧ್ಯವಿದೆ.
ಮೇ 8, 1902ರಂದು, ಮಾರ್ಟಿನಿಕ್ನ ಕ್ಯಾರಿಬಿಯನ್ ದ್ವೀಪದಲ್ಲಿ, 20ನೆಯ ಶತಮಾನದ ಅತ್ಯಂತ ಮಾರಕ ಜ್ವಾಲಾಮುಖಿಯಾದ ಮೌಂಟ್ ಪೆಲಿಯು ಹೊರಚಿಮ್ಮಿತು. ಸೆಂಟ್ ಪಿಯರೇ ನಗರದ—ಇದು ಜ್ವಾಲಾಮುಖಿಯ ತಪ್ಪಲಿನಲ್ಲಿರುವ ಒಂದು ನಗರ—ಸುಮಾರು 30,000 ನಿವಾಸಿಗಳಲ್ಲಿ ಬಹುಮಟ್ಟಿಗೆ ಎಲ್ಲರನ್ನೂ ಅದು ಕೊಂದುಹಾಕಿತು.
1991ರ ಜೂನ್ ತಿಂಗಳಿನಲ್ಲಿ, ಮೌಂಟ್ ಪಿನಟೂಬೊ ಜ್ವಾಲಾಮುಖಿಯು ಸ್ಫೋಟಿಸಿತು. ಇದು ಬಹುಶಃ ಆ ಶತಮಾನದ ಅತಿ ದೊಡ್ಡ ಹೊರಚಿಮ್ಮುವಿಕೆಯಾಗಿತ್ತು. ಫಿಲಿಪ್ಪೀನ್ಸ್ನ ದಟ್ಟವಾದ ಜನಸಂದಣಿಯಿದ್ದ ಒಂದು ಕ್ಷೇತ್ರದಲ್ಲಿ ಅದು ಸಂಭವಿಸಿತು ಮತ್ತು ಸುಮಾರು 900 ಸಾವುಗಳಿಗೆ ಕಾರಣವಾಯಿತು. ಆದರೂ, ಈ ಬಾರಿ ಸಾವಿರಾರು ಜೀವಗಳನ್ನು ಕಾಪಾಡುವುದರಲ್ಲಿ ಎರಡು ವಿಷಯಗಳು ಸಹಾಯಮಾಡಿದವು: (1) ಅಪಾಯಕ್ಕೆ ಎಚ್ಚರವಾಗಿರುವುದು ಮತ್ತು (2) ಎಚ್ಚರಿಕೆಗಳಿಗೆ ಅನುಸಾರವಾಗಿ ಕ್ರಿಯೆಗೈಯಲು ಮನಃಪೂರ್ವಕವಾಗಿ ತಯಾರಿರುವುದು.
ಯೋಗ್ಯವಾದ ಕ್ರಿಯೆಯು ಜೀವಗಳನ್ನು ಕಾಪಾಡಿತು
ಮೌಂಟ್ ಪಿನಟೂಬೊ ಜ್ವಾಲಾಮುಖಿಯು, ನೂರಾರು ವರ್ಷಗಳ ವರೆಗೆ ಶಾಂತವಾಗಿತ್ತು. ಆದರೆ 1991ರ ಏಪ್ರಿಲ್ ತಿಂಗಳಿನಲ್ಲಿ, ಅದು ಸದ್ಯದಲ್ಲೇ ಸಂಭವಿಸಲಿರುವ ಹೊರಚಿಮ್ಮುವಿಕೆಯ ಸೂಚನೆಗಳನ್ನು ತೋರಿಸಲು ಆರಂಭಿಸಿತು. ಅದರ ಶಂಕುವಿನಾಕಾರದ ದಿಬ್ಬದಿಂದ ಆವಿ ಹಾಗೂ ಗಂಧಕದ ಡೈಆಕ್ಸೈಡ್ ಹೊರಬರಲು ಆರಂಭಿಸಿತು. ಸ್ಥಳಿಕ ನಿವಾಸಿಗಳಿಗೆ ಅನೇಕ ಬಾರಿ ಭೂಕಂಪಗಳ ಅನುಭವವಾಯಿತು, ಮತ್ತು ಘನೀಭವಿಸಿದ ಶಿಲಾಪ್ರವಾಹದ ಭಯಂಕರ ಗುಮ್ಮಟವು, ಆ ಪರ್ವತದಿಂದ ಹೊರಬರಲಾರಂಭಿಸಿತು. ಫಿಲಿಪ್ಪೀನ್ ಇನ್ಸ್ಟಿಟ್ಯೂಟ್ನ ಜ್ವಾಲಾಮುಖಿಶಾಸ್ತ್ರ ಮತ್ತು ಭೂಕಂಪಶಾಸ್ತ್ರದ ವಿಜ್ಞಾನಿಗಳು, ಅದರ ವಿಷಯದಲ್ಲಿ ಎಚ್ಚರಿಕೆ ವಹಿಸಿದರು ಹಾಗೂ ಸಕಾಲದಲ್ಲಿ ಸಮೀಪದಲ್ಲಿರುವ ಪಟ್ಟಣಗಳು ಮತ್ತು ಹಳ್ಳಿಗಳಿಂದ 35,000 ನಿವಾಸಿಗಳನ್ನು ಅಲ್ಲಿಂದ ಹೊರಡಿಸುವುದು ವಿವೇಕಯುತವೆಂದು ಅಧಿಕಾರಿಗಳಿಗೆ ಮನಗಾಣಿಸಿದರು.
ಯಾವುದೇ ಕಾರಣವಿಲ್ಲದೆ ಜನರು ತಮ್ಮ ಮನೆಗಳನ್ನು ಬಿಟ್ಟುಹೋಗಲು ಇಷ್ಟಪಡುವುದಿಲ್ಲ ಎಂಬುದು ಒಪ್ಪತಕ್ಕ ವಿಷಯವೇ. ಆದರೆ ಜ್ವಾಲಾಮುಖಿಯ ಸ್ಫೋಟನದ ಗಂಡಾಂತರಗಳನ್ನು ವರ್ಣಮಯವಾಗಿ ಚಿತ್ರಿಸಿದ ಒಂದು ವಿಡಿಯೋ ಚಿತ್ರವನ್ನು ತೋರಿಸುವ ಮೂಲಕ, ಅವರ ಹಿಂಜರಿತವನ್ನು ಹೋಗಲಾಡಿಸಲಾಯಿತು. ಆ ಸಾಮೂಹಿಕ ಹೊರಡೋಣವು ಸಮಯಕ್ಕೆ ಸರಿಯಾಗಿತ್ತು. ಎರಡು ದಿವಸಗಳ ಬಳಿಕ, ಕಿವುಡುಗೊಳಿಸುವಂತಹ ಒಂದು ಸ್ಫೋಟವು ಸಂಭವಿಸಿ, 8 ಘನ ಕಿಲೊಮೀಟರ್ಗಳಷ್ಟು ಬೂದಿಯನ್ನು ವಾಯುಮಂಡಲದೊಳಕ್ಕೆ ರಭಸವಾಗಿ ಎಸೆಯಿತು. ತದನಂತರ ಮಣ್ಣಿನ ಪ್ರವಾಹಗಳು, ಅಥವಾ ಮುರುಕಲು ಗುಪ್ಪೆ ಮತ್ತು ನೀರಿನ ಪ್ರವಹಿಸುವಿಕೆಯು, ನೂರಾರು ಮಂದಿಯನ್ನು ಕೊಂದುಹಾಕಿತು. ಬಹುಶಃ ಸಾವಿರಾರು ಮಂದಿ ಉಳಿಸಲ್ಪಟ್ಟರು. ಏಕೆಂದರೆ ಆ ಜನರು ಅಪಾಯಕ್ಕೆ ಎಚ್ಚರವಾಗಿದ್ದು, ಕೊಡಲ್ಪಟ್ಟ ಎಚ್ಚರಿಕೆಗಳಿಗೆ ಅನುಸಾರವಾಗಿ ಕ್ರಿಯೆಗೈದಿದ್ದರು.
ಮಾನವ-ನಿರ್ಮಿತ ದುರ್ಘಟನೆಯಿಂದ ರಕ್ಷಣೆ
ಸಾಮಾನ್ಯ ಶಕದ ಪ್ರಥಮ ಶತಮಾನದಲ್ಲಿ, ಯೆರೂಸಲೇಮಿನಲ್ಲಿ ಜೀವಿಸುತ್ತಿದ್ದ ಕ್ರೈಸ್ತರು ಸಹ, ತಮ್ಮ ಮನೆಗಳನ್ನು ಬಿಟ್ಟುಹೋಗಬೇಕೊ ಇಲ್ಲವೋ ಎಂಬ ವಿಷಯವನ್ನು ನಿರ್ಧರಿಸಬೇಕಿತ್ತು. ಸಾ.ಶ. 66ರಲ್ಲಿ, ಆ ನಗರದಿಂದ ಪಲಾಯನ ಮಾಡುವುದು, ಇತರ ನಿವಾಸಿಗಳ ಮೇಲೆ ಹಾಗೂ ಸಾ.ಶ. 70ರ ಪಸ್ಕ ಹಬ್ಬದ ಆಚರಣೆಗಾಗಿ ಯೆರೂಸಲೇಮಿಗೆ ಬಂದಿದ್ದ ಸಾವಿರಾರು ಮಂದಿ ಯೆಹೂದ್ಯರ ಮೇಲೆ ಒದಗಿಬಂದ ವಿನಾಶದಿಂದ ಅವರನ್ನು ಕಾಪಾಡಿತು. ರೋಮನ್ ಸೈನ್ಯಗಳು ತಪ್ಪಿಸಿಕೊಂಡುಹೋಗುವ ಅವಕಾಶವನ್ನು ಇಲ್ಲದಂತೆ ಮಾಡಿದಾಗ, ಕೋಟೆಗಳಿಂದ ಆವೃತವಾಗಿದ್ದ ಆ ಪಟ್ಟಣದ ಒಳಗೆ ಪಸ್ಕದ ಆಚರಣೆಗಾಗಿ ಹತ್ತು ಲಕ್ಷಕ್ಕಿಂತಲೂ ಹೆಚ್ಚು ಜನರಿದ್ದರು. ಬರ, ಅಧಿಕಾರಕ್ಕಾಗಿ ಹೋರಾಟಗಳು, ಮತ್ತು ರೋಮನರ ನಿರ್ದಯವಾದ ಆಕ್ರಮಣಗಳಿಂದಾಗಿ, ಅಲ್ಲಿ ಹತ್ತು ಲಕ್ಷಕ್ಕಿಂತಲೂ ಹೆಚ್ಚು ಮರಣಗಳು ಸಂಭವಿಸಿದವು.
ರೋಮ್ನ ವಿರುದ್ಧ ಯೆಹೂದಿ ಕ್ರಾಂತಿಯನ್ನು ಕೊನೆಗೊಳಿಸಿದ ಆ ದುರ್ಘಟನೆಯು, ಇದ್ದಕ್ಕಿದ್ದಂತೆಯೇ ಸಂಭವಿಸಲಿಲ್ಲ. ಅನೇಕ ದಶಕಗಳಿಗೆ ಮೊದಲೇ ಯೇಸು ಕ್ರಿಸ್ತನು, ಯೆರೂಸಲೇಮ್ ಮುತ್ತಿಗೆ ಹಾಕಲ್ಪಡುವುದೆಂದು ಮುಂತಿಳಿಸಿದ್ದನು. ಅವನು ಹೇಳಿದ್ದು: “ದಂಡುಗಳು ಯೆರೂಸಲೇಮ್ ಪಟ್ಟಣಕ್ಕೆ ಮುತ್ತಿಗೆ ಹಾಕಿರುವದನ್ನು ನೀವು ಕಾಣುವಾಗ ಅದು ಹಾಳಾಗುವ ಕಾಲ ಸಮೀಪವಾಯಿತೆಂದು ತಿಳುಕೊಳ್ಳಿರಿ. ಆಗ ಯೂದಾಯದಲ್ಲಿರುವವರು ಬೆಟ್ಟಗಳಿಗೆ ಓಡಿ ಹೋಗಲಿ; ಆ ಪಟ್ಟಣದಲ್ಲಿರುವವರು ಅದರೊಳಗಿಂದ ಹೊರಟುಹೋಗಲಿ; ಹಳ್ಳಿಯವರು ಅದರೊಳಕ್ಕೆ ಹೋಗದಿರಲಿ.” (ಲೂಕ 21:20, 21) ಆ ಸೂಚನೆಗಳು ಸ್ಪಷ್ಟವಾಗಿದ್ದವು, ಮತ್ತು ಯೇಸುವಿನ ಹಿಂಬಾಲಕರು ಅವುಗಳನ್ನು ಗಂಭೀರವಾಗಿ ಪರಿಗಣಿಸಿದರು.
ನಾಲ್ಕನೆಯ ಶತಮಾನದ ಇತಿಹಾಸಕಾರನಾದ ಕೈಸರೈಯದ ಯೂಸೀಬಿಯಸನು ವರದಿಸುವುದೇನೆಂದರೆ, ಯೂದಾಯದ ಎಲ್ಲ ಕ್ರೈಸ್ತರು ಯೇಸುವಿನ ಎಚ್ಚರಿಕೆಗೆ ಅನುಸಾರವಾಗಿ ಕ್ರಿಯೆಗೈದರು. ಸಾ.ಶ. 66ರಲ್ಲಿ ಯೆರೂಸಲೇಮಿಗೆ ಹಾಕಿದ್ದ ತಮ್ಮ ಮೊದಲ ಮುತ್ತಿಗೆಯನ್ನು ರೋಮನರು ಹಿಂದೆಗೆದುಕೊಂಡಾಗ, ಅನೇಕ ಯೆಹೂದಿ ಕ್ರೈಸ್ತರು, ಪೆರಿಯದ ರೋಮನ್ ಪ್ರಾಂತದಲ್ಲಿರುವ ಪೆಲ ಎಂಬ ಅನ್ಯದೇಶೀಯ ನಗರಕ್ಕೆ ಹೊರಟುಹೋದರು. ನಮ್ಮ ಕಾಲಗಳ ಸ್ಥಿತಿಗತಿಗೆ ಎಚ್ಚರವಾಗಿರುವ ಮೂಲಕ ಮತ್ತು ಯೇಸುವಿನ ಎಚ್ಚರಿಕೆಗೆ ಅನುಸಾರವಾಗಿ ಕ್ರಿಯೆಗೈಯುವ ಮೂಲಕ, “ಇತಿಹಾಸದಲ್ಲೇ ಅತ್ಯಂತ ಭೀಕರ ಮುತ್ತಿಗೆಗಳಲ್ಲಿ ಒಂದು” ಎಂದು ವರ್ಣಿಸಲ್ಪಟ್ಟಿರುವ ಮುತ್ತಿಗೆಯಿಂದ ಅವರು ಪಾರಾದರು.
ಇಂದು, ತದ್ರೀತಿಯ ಎಚ್ಚರಿಕೆಯು ಅತ್ಯಗತ್ಯವಾಗಿದೆ. ಹಾಗೆಯೇ ತಕ್ಕದಾದ ಕ್ರಿಯೆಯೂ ಅಗತ್ಯವಾಗಿದೆ. ಅದಕ್ಕೆ ಕಾರಣವನ್ನು ಮುಂದಿನ ಲೇಖನವು ವಿವರಿಸುವುದು.
[ಪುಟ 3 ರಲ್ಲಿರುವ ಚಿತ್ರ ಕೃಪೆ]
Godo-Foto, West Stock