“ಸತ್ಯವು ನಿಮ್ಮನ್ನು ಬಿಡುಗಡೆಮಾಡುವದು”
“ನೀವು . . . ಸತ್ಯವನ್ನು ತಿಳಿದುಕೊಳ್ಳುವಿರಿ; ಮತ್ತು ಸತ್ಯವು ನಿಮ್ಮನ್ನು ಬಿಡುಗಡೆಮಾಡುವದು.” ಯೆರೂಸಲೇಮಿನ ದೇವಾಲಯದಲ್ಲಿ ಸೇರಿದ್ದ ಜನಸಮುದಾಯಕ್ಕೆ ಬೋಧಿಸುತ್ತಿದ್ದಾಗ, ಯೇಸು ಹೀಗೆ ಹೇಳಿದನು. (ಯೋಹಾನ 8:32) ಯೇಸು ಬೋಧಿಸುತ್ತಿದ್ದ ವಿಷಯವು ಸತ್ಯವಾಗಿತ್ತು ಎಂಬುದನ್ನು ಯೇಸುವಿನ ಅಪೊಸ್ತಲರು ಸುಲಭವಾಗಿ ಅರ್ಥಮಾಡಿಕೊಳ್ಳಸಾಧ್ಯವಿತ್ತು. ಏಕೆಂದರೆ ತಮ್ಮ ಬೋಧಕನು ದೈವಿಕ ಮೂಲದಿಂದ ಬಂದವನಾಗಿದ್ದನು ಎಂಬುದಕ್ಕೆ ಅವರು ಅನೇಕ ಪುರಾವೆಗಳನ್ನು ನೋಡಿದ್ದರು.
ಆದರೆ, ಇಂದು ಕೆಲವರಿಗೆ, ಯೇಸು ಯಾವುದರ ಕುರಿತಾಗಿ ಮಾತಾಡಿದನೋ ಆ ಸತ್ಯವನ್ನು ಗುರುತಿಸುವುದು ತುಂಬ ಕಷ್ಟಕರವಾಗಿ ತೋರಬಹುದು. ಪ್ರವಾದಿಯಾದ ಯೆಶಾಯನ ದಿನಗಳಲ್ಲಿ ಇದ್ದಂತೆಯೇ, ಇಂದು ಸಹ “ಕೆಟ್ಟದ್ದನ್ನು ಒಳ್ಳೇದೆಂದೂ ಒಳ್ಳೇದನ್ನು ಕೆಟ್ಟದ್ದೆಂದೂ ಬೋಧಿಸಿ ಕತ್ತಲನ್ನು ಬೆಳಕೆಂದೂ ಬೆಳಕನ್ನು ಕತ್ತಲೆಂದೂ ಸಾಧಿಸಿ ಕಹಿಯು ಸಿಹಿ, ಸಿಹಿಯು ಕಹಿ ಎಂದು ಸ್ಥಾಪಿಸು”ವವರು ಇದ್ದಾರೆ. (ಯೆಶಾಯ 5:20) ಇತ್ತೀಚೆಗೆ ಅಸಂಖ್ಯಾತ ಅಭಿಪ್ರಾಯಗಳು, ತತ್ವಜ್ಞಾನಗಳು, ಮತ್ತು ಜೀವನ ಶೈಲಿಗಳು ಪ್ರವರ್ಧಿಸಲ್ಪಡುತ್ತಿರುವುದರಿಂದ, ಎಲ್ಲವೂ ಅಸಂಪೂರ್ಣವಾಗಿದೆ, ಮತ್ತು ಸತ್ಯವೆಂಬುದು ಇಲ್ಲವೇ ಇಲ್ಲ ಎಂದು ಅನೇಕರು ನೆನಸುತ್ತಾರೆ.
ಸತ್ಯವು ನಿಮ್ಮನ್ನು ಬಿಡುಗಡೆಮಾಡುವುದು ಎಂದು ಯೇಸು ತನ್ನ ಸಭಿಕರಿಗೆ ಹೇಳಿದಾಗ, ಅವರು ಹೀಗೆ ಹೇಳುವ ಮೂಲಕ ಪ್ರತಿಕ್ರಿಯಿಸಿದರು: “ನಾವು ಅಬ್ರಹಾಮನ ಸಂತಾನದವರು ನಾವು ಯಾರಿಗೂ ಎಂದೂ ದಾಸರಾಗಿಲ್ಲ; ನಿಮಗೆ ಬಿಡುಗಡೆಯಾಗುವದೆಂದು ನೀನು ಹೇಳುವದು ಹೇಗೆ?” (ಯೋಹಾನ 8:33) ತಮ್ಮನ್ನು ಬಿಡುಗಡೆಮಾಡಲು ಯಾರೊಬ್ಬರ ಅಥವಾ ಯಾವುದರ ಅಗತ್ಯವೂ ಇಲ್ಲ ಎಂದು ಅವರು ನೆನಸಿದರು. ಆದರೆ ಯೇಸು ಅವರಿಗೆ ತದನಂತರ ವಿವರಿಸಿದ್ದು: “ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಪಾಪಮಾಡುವವರೆಲ್ಲರು ಪಾಪಕ್ಕೆ ದಾಸರಾಗಿದ್ದಾರೆ.” (ಯೋಹಾನ 8:34) ಯೇಸು ಯಾವುದರ ಕುರಿತಾಗಿ ಮಾತಾಡುತ್ತಿದ್ದನೋ ಆ ಸತ್ಯವು, ಪಾಪದಿಂದ ವಿಮುಕ್ತರಾಗುವ ಅವಕಾಶವನ್ನು ನೀಡಸಾಧ್ಯವಿತ್ತು. ಯೇಸು ಹೇಳಿದ್ದು: “ಮಗನು ನಿಮ್ಮನ್ನು ಬಿಡುಗಡೆಮಾಡಿದರೆ ನಿಜವಾಗಿ ನಿಮಗೆ ಬಿಡುಗಡೆಯಾಗುವದು.” (ಯೋಹಾನ 8:36) ಆದುದರಿಂದ, ಜನರಿಗೆ ಬಿಡುಗಡೆಯನ್ನು ತರುವ ಆ ಸತ್ಯವು, ದೇವಕುಮಾರನಾದ ಯೇಸು ಕ್ರಿಸ್ತನ ಕುರಿತಾದ ಸತ್ಯವಾಗಿತ್ತು. ಯೇಸುವಿನ ಪರಿಪೂರ್ಣ ಜೀವದ ಯಜ್ಞಾರ್ಪಣೆಯಲ್ಲಿ ನಂಬಿಕೆಯಿಡುವುದರಿಂದ ಮಾತ್ರ, ನಾವು ಪಾಪ ಮತ್ತು ಮರಣದಿಂದ ಬಿಡುಗಡೆಯನ್ನು ಪಡೆದುಕೊಳ್ಳಸಾಧ್ಯವಿದೆ.
ಇನ್ನೊಂದು ಸಂದರ್ಭದಲ್ಲಿ ಯೇಸು ಹೇಳಿದ್ದು: “ಇವರನ್ನು ಸತ್ಯದಲ್ಲಿ ಸೇರಿಸಿ ಪ್ರತಿಷ್ಠೆ ಪಡಿಸು; ನಿನ್ನ ವಾಕ್ಯವೇ ಸತ್ಯವು.” (ಯೋಹಾನ 17:17) ಬೈಬಲಿನಲ್ಲಿ ತಿಳಿಸಲ್ಪಟ್ಟಿರುವಂತೆ, ದೇವರ ವಾಕ್ಯವು ತಾನೇ ಸತ್ಯವಾಗಿದೆ. ಅದು ಮೂಢನಂಬಿಕೆ ಹಾಗೂ ಸುಳ್ಳಾರಾಧನೆಯಿಂದ ಬಿಡುಗಡೆಯನ್ನು ತರಬಲ್ಲದು. ಯೇಸು ಕ್ರಿಸ್ತನ ಕುರಿತಾದ ಸತ್ಯವು ಬೈಬಲಿನಲ್ಲಿದೆ; ಜನರು ಅವನಲ್ಲಿ ನಂಬಿಕೆಯಿಡುವಂತೆ ಇದು ಮಾಡುತ್ತದೆ ಹಾಗೂ ಭವಿಷ್ಯತ್ತಿಗಾಗಿ ಆನಂದದಾಯಕವಾದ ನಿರೀಕ್ಷೆಯ ಮಾರ್ಗವನ್ನು ಸಹ ತೆರೆಯುತ್ತದೆ. ದೇವರ ವಾಕ್ಯದ ಸತ್ಯವನ್ನು ತಿಳಿದುಕೊಳ್ಳುವುದು ಅದ್ಭುತಕರವಾದ ಸಂಗತಿಯಾಗಿದೆ!
ಸತ್ಯವನ್ನು ತಿಳಿದುಕೊಳ್ಳುವುದು ಎಷ್ಟು ಅತ್ಯಾವಶ್ಯಕವಾಗಿದೆ? ಇಂದಿನ ಅನೇಕ ಧರ್ಮಗಳು ಬೈಬಲನ್ನು ಅನುಸರಿಸುವ ಪ್ರತಿಪಾದನೆಯನ್ನು ಮಾಡುತ್ತವಾದರೂ, ಅವು ಮಾನವ ತತ್ವಜ್ಞಾನಗಳು ಹಾಗೂ ಸಂಪ್ರದಾಯಗಳಿಂದ ಬಹಳವಾಗಿ ಪ್ರಭಾವಿತವಾಗಿವೆ. ಅನೇಕವೇಳೆ, ಧಾರ್ಮಿಕ ಮುಖಂಡರು ತಮ್ಮ ಸಂದೇಶದ ನಿಷ್ಕೃಷ್ಟತೆಯ ಕುರಿತು ಹೆಚ್ಚು ಚಿಂತಿತರಾಗಿರುವುದಿಲ್ಲ, ಬದಲಾಗಿ ತಾವು ಜನರಿಂದ ಅಂಗೀಕರಿಸಲ್ಪಡಬೇಕೆಂಬ ವಿಷಯದ ಕುರಿತು ಅವರು ಹೆಚ್ಚು ಚಿಂತಿತರಾಗಿರುವಂತೆ ತೋರುತ್ತದೆ. ನಾವು ಹೇಗೇ ಆರಾಧಿಸಲಿ, ಅದು ಪ್ರಾಮಾಣಿಕವಾಗಿರುವುದಾದರೆ ದೇವರು ಅದನ್ನು ಅಂಗೀಕರಿಸುತ್ತಾನೆ ಎಂಬುದು ಕೆಲವರ ಅಭಿಪ್ರಾಯ. ಆದರೆ ಯೇಸು ಕ್ರಿಸ್ತನು ವಿವರಿಸಿದ್ದು: “ಸತ್ಯಭಾವದಿಂದ ದೇವಾರಾಧನೆಮಾಡುವವರು ಆತ್ಮೀಯ ರೀತಿಯಲ್ಲಿ ಸತ್ಯಕ್ಕೆ ತಕ್ಕ ಹಾಗೆ ತಂದೆಯನ್ನು ಆರಾಧಿಸುವ ಕಾಲ ಬರುತ್ತದೆ; ಅದು ಈಗಲೇ ಬಂದಿದೆ; ತನ್ನನ್ನು ಆರಾಧಿಸಲಿಕ್ಕಾಗಿ ತಂದೆಯು ಅಂತಹ ಜನರನ್ನೇ ಹುಡುಕುತ್ತಿದ್ದಾನೆ.”—ಯೋಹಾನ 4:23, NW.
ದೇವರು ಅಂಗೀಕರಿಸುವಂತಹ ರೀತಿಯಲ್ಲಿ ನಾವು ಆತನನ್ನು ಆರಾಧಿಸಲು ಬಯಸುವುದಾದರೆ, ನಾವು ಸತ್ಯವನ್ನು ತಿಳಿದುಕೊಳ್ಳಲೇಬೇಕು. ಇದು ಅತಿ ಪ್ರಾಮುಖ್ಯವಾದ ಸಂಗತಿಯಾಗಿದೆ. ನಮ್ಮ ಅನಂತಕಾಲದ ಸಂತೋಷವು ಅದರ ಮೇಲೆ ಅವಲಂಬಿಸಿರುತ್ತದೆ. ಆದುದರಿಂದ, ಪ್ರತಿಯೊಬ್ಬರೂ ಸ್ವತಃ ಹೀಗೆ ಪ್ರಶ್ನಿಸಿಕೊಳ್ಳತಕ್ಕದ್ದು: ‘ನಾನು ಆರಾಧಿಸುವಂತಹ ವಿಧವು ದೇವರಿಗೆ ಮೆಚ್ಚಿಕೆಯಾಗಿದೆಯೊ? ದೇವರ ವಾಕ್ಯದ ಕುರಿತಾದ ಸತ್ಯವನ್ನು ಕಲಿಯುವುದರಲ್ಲಿ ನನಗೆ ನಿಜವಾಗಿಯೂ ಆಸಕ್ತಿಯಿದೆಯೊ? ಅಥವಾ ಸೂಕ್ಷ್ಮ ಪರಿಶೀಲನೆಯು ಹೊರಗೆಡಹುವಂತಹ ಸಂಗತಿಗಳಿಗೆ ನಾನು ಹೆದರುತ್ತೇನೋ?’