ನೀವು ಬೈಬಲನ್ನು ನಂಬಸಾಧ್ಯವೊ?
ಈ ಆಧುನಿಕ ಲೋಕದಲ್ಲೂ ಬೈಬಲಿನಲ್ಲಿ ನಂಬಿಕೆಯನ್ನಿಡುವ ಅನೇಕ ಜನರಿದ್ದಾರೆ. ದೃಷ್ಟಾಂತಕ್ಕಾಗಿ, ಇತ್ತೀಚೆಗೆ ಅಮೆರಿಕನರಲ್ಲಿ ಕೆಲವು ಜನರ ನಡುವೆ ನಡೆಸಲ್ಪಟ್ಟ ಸಮೀಕ್ಷೆಯೊಂದರಲ್ಲಿ 80 ಪ್ರತಿಶತ ಮಂದಿ, ಬೈಬಲು ದೇವರ ಪ್ರೇರಿತ ವಾಕ್ಯವಾಗಿದೆ ಎಂಬ ನಂಬಿಕೆಯನ್ನು ವ್ಯಕ್ತಪಡಿಸಿದರು. ನಿಮ್ಮ ಕ್ಷೇತ್ರದಲ್ಲಿ ಇಷ್ಟೊಂದು ಜನರು ಬೈಬಲನ್ನು ನಂಬದೆ ಇರಬಹುದು. ಆದರೆ ಬೈಬಲನ್ನು ನಂಬುವವರು, ಚರ್ಚಿನಲ್ಲಿ ಪಾದ್ರಿಗಳು ಬೈಬಲನ್ನು ಕಲಿಸುವುದನ್ನು ನಿರೀಕ್ಷಿಸುವುದು ನ್ಯಾಯಸಮ್ಮತ. ಆದರೆ ಅನೇಕವೇಳೆ ಅವರಿಗೆ ಅದನ್ನು ಕಲಿಸಲಾಗುವುದಿಲ್ಲ. ಉದಾಹರಣೆಗಾಗಿ, ಮರಣಾನಂತರದ ಶಿಕ್ಷೆಯ ಕುರಿತಾದ ಬೋಧನೆಯನ್ನು ತೆಗೆದುಕೊಳ್ಳಿರಿ.
ಶುದ್ಧಿಲೋಕ ಅಥವಾ ಅಗ್ನಿಮಯ ನರಕದ ಕುರಿತಾಗಿ ಬೈಬಲು ಕಲಿಸುತ್ತದೊ? ಇಂದು ಕ್ರೈಸ್ತಪ್ರಪಂಚದ ಅನೇಕ ವಿದ್ವಾಂಸರು ಇಲ್ಲ ಎಂದು ಉತ್ತರಿಸುವರು. ಹೊಸ ಕ್ಯಾಥೊಲಿಕ್ ವಿಶ್ವಕೋಶ (ಇಂಗ್ಲಿಷ್) ತಿಳಿಸುವುದು: “ಮೂಲಭೂತವಾಗಿ, ಶುದ್ಧಿಲೋಕದ ಕುರಿತಾದ ಕ್ಯಾಥೊಲಿಕ್ ಬೋಧನೆಯು, ಪವಿತ್ರ ಶಾಸ್ತ್ರಗಳ ಮೇಲಲ್ಲ, ಬದಲಾಗಿ ಸಂಪ್ರದಾಯದ ಮೇಲೆ ಆಧಾರಿಸಲ್ಪಟ್ಟಿದೆ.” ನರಕದ ಕುರಿತಾಗಿ ದೇವತಾಶಾಸ್ತ್ರಜ್ಞ ಡಿಕ್ಷನರಿಯು (ಇಂಗ್ಲಿಷ್) ಹೇಳುವುದು: “ನರಕಾಗ್ನಿಯು, ಆದಿ ಕ್ರೈಸ್ತರ ಬೋಧನೆಯ ಭಾಗವಾಗಿತ್ತೆಂದು ಹೊಸ ಒಡಂಬಡಿಕೆಯಲ್ಲಿ ಎಲ್ಲಿಯೂ ತಿಳಿಸಲ್ಪಟ್ಟಿಲ್ಲ.”
ಆ್ಯಂಗ್ಲಿಕನ್ ಚರ್ಚಿನ ಬೋಧನೆಗಳನ್ನು ಪರೀಕ್ಷಿಸುವ ಮಂಡಲಿಯು ಇತ್ತೀಚೆಗೆ, ನರಕಾಗ್ನಿಯ ಬೋಧನೆಯನ್ನು ಸಂಪೂರ್ಣವಾಗಿ ತ್ಯಜಿಸುವಂತೆ ಶಿಫಾರಸ್ಸು ಮಾಡಿದಾಗ, ಅದು ವಾರ್ತಾಪತ್ರಿಕೆಗಳಲ್ಲಿ ಮುಖ್ಯ ಸಮಾಚಾರವಾಯಿತು. ಲಿಫೀಲ್ಡ್ ಕ್ಯಾತೀಡ್ರಲ್‌ನ ಪಾದ್ರಿಯಾದ ಡಾ. ಟಾಮ್ ರೈಟ್ ತಿಳಿಸುವುದೇನೆಂದರೆ, ನರಕದ ಕುರಿತಾದ ಗತಕಾಲದ ಚಿತ್ರಣವು, “ದೇವರನ್ನು ಒಬ್ಬ ರಾಕ್ಷಸನನ್ನಾಗಿ ಮಾಡಿದೆ ಮತ್ತು ಅನೇಕರಲ್ಲಿ ತೀಕ್ಷ್ಣವಾದ ಮಾನಸಿಕ ವೇದನೆಯನ್ನು ಉಂಟುಮಾಡಿದೆ.” ನರಕವು “ಸಂಪೂರ್ಣವಾಗಿ ಅಸ್ತಿತ್ವರಹಿತ”ವೆಂದು ಆ ಮಂಡಲಿಯ ವರದಿಯು ವರ್ಣಿಸುತ್ತದೆ.a ತದ್ರೀತಿಯಲ್ಲಿ, ಹೊಸ ಕ್ಯಾಥೊಲಿಕ್ ವಿಶ್ವಕೋಶವು (ಇಂಗ್ಲಿಷ್) ಕ್ಯಾಥೊಲಿಕ್ ದೃಷ್ಟಿಕೋನದ ಕುರಿತಾಗಿ ಗಮನಿಸಿದ್ದು: “ಇಂದು ದೇವತಾಶಾಸ್ತ್ರವು, ದೇವರಿಗೆ ನರಕದೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ತಿಳಿಸುತ್ತದೆ.”
ವಾಸ್ತವದಲ್ಲಿ, ಮೃತರ ಸ್ಥಿತಿಯ ಕುರಿತಾಗಿ ಬೈಬಲು ಕಲಿಸುವಂತಹ ಸಂಗತಿಯು, ಶುದ್ಧಿಲೋಕ ಮತ್ತು ನರಕಾಗ್ನಿಯ ಬೋಧನೆಗಳಿಗೆ ತದ್ವಿರುದ್ಧವಾಗಿದೆ. ಬೈಬಲಿಗನುಸಾರ, ಸತ್ತವರು ಪ್ರಜ್ಞಾಹೀನರಾಗಿದ್ದಾರೆ. ಅವರಿಗೆ ನೋವಿನ ಅನುಭವವಾಗುವುದಿಲ್ಲ. “ಜೀವಿತರಿಗೆ ಸಾಯುತ್ತೇವೆಂಬ ತಿಳುವಳಿಕೆಯು ಉಂಟಷ್ಟೇ; ಸತ್ತವರಿಗೋ ಯಾವ ತಿಳುವಳಿಕೆಯೂ [“ಪ್ರಜ್ಞೆ,” NW] ಇಲ್ಲ.” (ಪ್ರಸಂಗಿ 9:5) ಬೈಬಲು ಸತ್ತವರಿಗಾಗಿ ಭಾವೀ ಪುನರುತ್ಥಾನದ ನಿರೀಕ್ಷೆಯನ್ನು ಕೊಡುತ್ತದೆ. ಯೇಸುವಿನ ಸ್ನೇಹಿತನಾದ ಲಾಜರನು ಸತ್ತಾಗ, ಯೇಸು ಮರಣವನ್ನು ನಿದ್ರೆಗೆ ಹೋಲಿಸಿದನು. ಲಾಜರನ ತಂಗಿಯಾದ ಮಾರ್ಥಳು ಬೈಬಲಿನಲ್ಲಿ ಕಲಿಸಲ್ಪಟ್ಟಿರುವ ಇದೇ ನಿರೀಕ್ಷೆಯನ್ನು ವ್ಯಕ್ತಪಡಿಸಿದಳು. ಅವಳು ಹೇಳಿದ್ದು: “ಸತ್ತವರಿಗೆ ಕಡೇ ದಿನದಲ್ಲಿ ಪುನರುತ್ಥಾನವಾಗುವಾಗ ಅವನೂ ಎದ್ದುಬರುವನೆಂದು ನಾನು ಬಲ್ಲೆನು.” ಲಾಜರನನ್ನು ಸತ್ತವರಿಂದ ಎಬ್ಬಿಸುವ ಮೂಲಕ, ಮಾನವಕುಲಕ್ಕಾಗಿರುವ ಆ ನಿರೀಕ್ಷೆಯನ್ನು ಯೇಸು ದೃಢೀಕರಿಸಿದನು.—ಯೋಹಾನ 5:28, 29; 11:11-14, 24, 44.
ಮನುಷ್ಯನೊಳಗೆ, ಪ್ರತ್ಯೇಕ ಮತ್ತು ಅಮರವಾದ ಯಾವುದೊ ಒಂದು ಭಾಗವಿದೆಯೆಂಬ ಬೋಧನೆಯು ಬೈಬಲಿನಿಂದಲ್ಲ, ಬದಲಾಗಿ ಗ್ರೀಕ್ ತತ್ವಜ್ಞಾನದಿಂದ ಆರಂಭಿಸಿತೆಂದು ಇತಿಹಾಸಕಾರರು ಹೇಳುತ್ತಾರೆ. ಮನುಷ್ಯನಿಗೆ, ಒಂದು ಭೌತಿಕ ದೇಹ ಮತ್ತು ಅದರೊಳಗೆ ರೂಪವಿಲ್ಲದ ಯಾವುದೊ ಒಂದು ಭಾಗವಿದೆಯೆಂದು ಪ್ರಾಚೀನಕಾಲದ ಹೀಬ್ರೂ ಜನರು ನೆನಸುತ್ತಿರಲಿಲ್ಲವೆಂದು ಹೊಸ ಕ್ಯಾಥೊಲಿಕ್ ವಿಶ್ವಕೋಶವು ಗಮನಿಸುತ್ತದೆ.
“ಹೊಸ ಒಡಂಬಡಿಕೆಯು, ಗ್ರೀಕ್ ತತ್ವಜ್ಞಾನಕ್ಕನುಸಾರವಾಗಿ ಆತ್ಮದ ಅಮರತ್ವವನ್ನು ಕಲಿಸುವುದಿಲ್ಲವೆಂದು” ಕ್ಯಾಥೊಲಿಕ್ ವಿದ್ವಾಂಸರು ಇತ್ತೀಚೆಗೆ “ಸಮರ್ಥಿಸಿದ್ದಾರೆ” ಎಂದು ಅದೇ ವಿಶ್ವಕೋಶ ಗಮನಿಸುತ್ತದೆ. ಅದು ಹೀಗೆ ಸಮಾಪ್ತಿಗೊಳಿಸುತ್ತದೆ: “ಉತ್ತರವು, ತತ್ವಜ್ಞಾನ ಸಂಬಂಧಿತ ಊಹೆಯಲ್ಲಲ್ಲ, ಬದಲಾಗಿ ಪುನರುತ್ಥಾನದ ದೈವಿಕ ಕೊಡುಗೆಯಲ್ಲಿ ಅಡಕವಾಗಿದೆ.”
ಬೈಬಲೊ ಸಂಪ್ರದಾಯವೊ?
ಬೈಬಲೇತರ ವಿಚಾರಗಳು ಚರ್ಚ್ ಬೋಧನೆಯ ಭಾಗವಾದದ್ದಾದರೂ ಹೇಗೆ? ಬೈಬಲ್ ತಮ್ಮ ಅತಿ ಪ್ರಧಾನ ಪ್ರಮಾಣಗ್ರಂಥವಾಗಿದೆ ಎಂದು ಅನೇಕ ಚರ್ಚುಗಳು ಹೇಳಿಕೊಳ್ಳುತ್ತವೆ. ದೃಷ್ಟಾಂತಕ್ಕಾಗಿ, ಇತ್ತೀಚೆಗೆ ಪೋಪ್ ಜಾನ್ ಪಾಲ್ II, ಶಾಸ್ತ್ರವಚನಗಳನ್ನು “ಕ್ಯಾಥೊಲಿಕರು ಸಂಪೂರ್ಣವಾಗಿ ಸತ್ಯವೆಂದು ಮತ್ತು ನಮ್ಮ ನಂಬಿಕೆಯ ಸರ್ವೋಚ್ಚ ಪ್ರಮಾಣವಾಗಿ ಸ್ವೀಕರಿಸುವ” ಅಗತ್ಯದ ಕುರಿತಾಗಿ ಮಾತಾಡಿದರು. ಆದರೆ ಇಂದು ಕ್ರೈಸ್ತಪ್ರಪಂಚದ ಬೋಧನೆಗಳು, ಪ್ರಥಮ ಶತಮಾನದ ಕ್ರೈಸ್ತರ ಬೋಧನೆಗಳಂತೆ ಇಲ್ಲವೆಂದು ಜನರು ಸಾಮಾನ್ಯವಾಗಿ ಒಪ್ಪಿಕೊಳ್ಳುತ್ತಾರೆ. ಹೆಚ್ಚಿನ ಚರ್ಚುಗಳು ಆ ಬದಲಾವಣೆಗಳನ್ನು, ಸಮಯ ದಾಟಿದಂತೆ ಚರ್ಚ್ ಬೋಧನೆಯಲ್ಲಾದ ನಿಧಾನ ವಿಕಸನದ ಭಾಗವಾಗಿ ಪರಿಗಣಿಸುತ್ತಾರೆ. ಇನ್ನೂ ಹೆಚ್ಚಾಗಿ, ಕ್ಯಾಥೊಲಿಕ್ ಚರ್ಚಿನ ದೃಷ್ಟಿಕೋನವೇನೆಂದರೆ, ಚರ್ಚ್ ಸಂಪ್ರದಾಯಕ್ಕೆ ಶಾಸ್ತ್ರವಚನಗಳಿಗಿರುವಷ್ಟೇ ಅಧಿಕಾರವಿದೆ. ಹೊಸ ಕ್ಯಾಥೊಲಿಕ್ ವಿಶ್ವಕೋಶ (ಇಂಗ್ಲಿಷ್) ಹೇಳುವುದೇನೆಂದರೆ, ಚರ್ಚು “ಯಾವುದೇ ಬೋಧನೆಯನ್ನು ಸಂಪ್ರದಾಯದಿಂದ ಸ್ವತಂತ್ರವಾಗಿ ಕೇವಲ ಶಾಸ್ತ್ರವಚನದ ಆಧಾರದ ಮೇಲೆ, ಮತ್ತು ಶಾಸ್ತ್ರವಚನದಿಂದ ಸ್ವತಂತ್ರವಾಗಿ ಕೇವಲ ಸಂಪ್ರದಾಯದ ಆಧಾರದ ಮೇಲೆ ಪರಿಗಣಿಸುವುದಿಲ್ಲ.”
ಅನೇಕ ವರ್ಷಗಳಿಂದ, ಚರ್ಚುಗಳು ಶಾಸ್ತ್ರೀಯ ಬೋಧನೆಗಳನ್ನು, ಸಂಪ್ರದಾಯದ ಮೇಲೆ ಆಧಾರಿಸಲ್ಪಟ್ಟ ಬೋಧನೆಗಳೊಂದಿಗೆ ಸ್ಥಾನಪಲ್ಲಟಗೊಳಿಸಿವೆ. ವಾಸ್ತವದಲ್ಲಿ, ಬೈಬಲಿನ ಬೋಧನೆಗಳು ತಪ್ಪಾಗಿವೆಯೆಂದು, ಇಂದು ಅನೇಕ ಚರ್ಚುಗಳು ಪರಿಗಣಿಸುತ್ತವೆ. ಉದಾಹರಣೆಗಾಗಿ, ಹೊಸ ಕ್ಯಾಥೊಲಿಕ್ ವಿಶ್ವಕೋಶ ತಿಳಿಸುವುದೇನೆಂದರೆ, “ವಿಜ್ಞಾನ ಮತ್ತು ಇತಿಹಾಸದ ಕುರಿತಾದ ಆಧುನಿಕ ಜ್ಞಾನಕ್ಕೆ ಹೋಲಿಸುವಾಗ, ಅನೇಕ ಬೈಬಲ್ ಹೇಳಿಕೆಗಳು ನೈಜವಾಗಿಲ್ಲ.” ಸತ್ತವರು ಪ್ರಜ್ಞಾಹೀನರಾಗಿದ್ದಾರೆಂಬ ಬೈಬಲ್ ಬೋಧನೆಯ ಕುರಿತಾಗಿ ಮಾತಾಡುತ್ತಾ, ಅದು ಕೂಡಿಸುವುದು: “ಧಾರ್ಮಿಕ ವಿಷಯಗಳಲ್ಲೂ, . . . ಮರಣಾನಂತರದ ಜೀವಿತದ ಕುರಿತಾಗಿ ಹಳೆಯ ಒಡಂಬಡಿಕೆಯು ಅಸ್ಪಷ್ಟವಾಗಿದೆ.” ಆ ವಿಶ್ವಕೋಶವು ಇದಕ್ಕೆ ಉದಾಹರಣೆಯೋಪಾದಿ ಕೀರ್ತನೆ 6:5ನ್ನು ಉಲ್ಲೇಖಿಸುತ್ತದೆ: “ಮೃತರಿಗೆ ನಿನ್ನ ಜ್ಞಾಪಕವಿರುವದಿಲ್ಲವಲ್ಲಾ; ಪಾತಾಳದಲ್ಲಿ [ಅಥವಾ ಹೇಡೀಸ್‌ನಲ್ಲಿ] ನಿನ್ನನ್ನು ಸ್ತುತಿಸುವವರು ಯಾರು?” ಬೈಬಲು ದೋಷಮುಕ್ತವಾಗಿದೆಯೆಂದು ಕೆಲವು ಪ್ರಾಟೆಸ್ಟಂಟ್ ಸೆಮಿನರಿಗಳು ಮತ್ತು ಕಾಲೇಜ್‌ಗಳು ಇನ್ನು ಮುಂದೆ ಕಲಿಸುವುದಿಲ್ಲ. ಇನ್ನೊಂದು ಕಡೆ, ಕ್ಯಾಥೊಲಿಕ್ ಚರ್ಚ್ ನಂಬುವುದೇನೆಂದರೆ, ಬೈಬಲಿನಲ್ಲಿ ಏನು ಕಲಿಸಲ್ಪಟ್ಟಿದೆಯೊ ಅದನ್ನು ವಿವರಿಸುವ ಅಧಿಕಾರ ಅದಕ್ಕಿದೆ. ಆದರೆ, ‘ಅಂತಹ ವಿವರಣೆಗಳು ಶಾಸ್ತ್ರವಚನಗಳನ್ನು ವಿರೋಧಿಸುವುದಾದರೆ ಆಗೇನು?’ ಎಂದು ನೀವು ಸೋಜಿಗಪಡಬಹುದು.
ಶಾಸ್ತ್ರವಚನಗಳ ಮಹತ್ವ
ಅನೇಕವೇಳೆ ಹೀಗೆ ಹೇಳುತ್ತಾ, ಯೇಸು ಶಾಸ್ತ್ರವಚನಗಳನ್ನು ತನ್ನ ಪ್ರಮಾಣಗ್ರಂಥವಾಗಿ ಪದೇಪದೇ ಉಲ್ಲೇಖಿಸಿದನು: “ಎಂದು ಬರೆದದೆ.” (ಮತ್ತಾಯ 4:4, 7, 10; ಲೂಕ 19:46) ಮನುಷ್ಯನ ವೈವಾಹಿಕ ಸ್ಥಿತಿಯ ಕುರಿತಾಗಿ ಯೇಸು ಮಾತಾಡಿದಾಗ, ಅವನು ಗ್ರೀಕ್ ತತ್ವಜ್ಞಾನ ಸಂಬಂಧಿತ ಊಹೆಗೆ ಸೂಚಿಸುತ್ತಿರಲಿಲ್ಲ, ಬದಲಾಗಿ ಸೃಷ್ಟಿಯ ಕುರಿತಾದ ಆದಿಕಾಂಡದ ವೃತ್ತಾಂತಕ್ಕೆ ಸೂಚಿಸಿದನು. (ಆದಿಕಾಂಡ 1:27; 2:24; ಮತ್ತಾಯ 19:3-9) ಯೇಸು ಶಾಸ್ತ್ರವಚನಗಳನ್ನು, ದೇವ ಪ್ರೇರಿತವಾದವುಗಳು ಮತ್ತು ವಾಸ್ತವಿಕವಾದವುಗಳೆಂದು ಪರಿಗಣಿಸಿದನು. ದೇವರಿಗೆ ಪ್ರಾರ್ಥಿಸುತ್ತಿದ್ದಾಗ ಅವನು ಹೇಳಿದ್ದು: “ನಿನ್ನ ವಾಕ್ಯವೇ ಸತ್ಯವು.”—ಯೋಹಾನ 17:17.b
ತನ್ನ ದಿನದಲ್ಲಿದ್ದ ಧಾರ್ಮಿಕ ಮುಖಂಡರ ಕಡೆಗೆ ಯೇಸು ವ್ಯಕ್ತಪಡಿಸಿದ ಅಸಮ್ಮತಿಯನ್ನು ಬೈಬಲು ದಾಖಲಿಸುತ್ತದೆ: “ನೀವು ಸಂಪ್ರದಾಯವನ್ನು ಹಿಡಿದು ನಡಿಸುವದಕ್ಕಾಗಿ ದೇವರ ಆಜ್ಞೆಯನ್ನು ವ್ಯರ್ಥಮಾಡುತ್ತೀರಿ; . . . ನೀವು ಕಲಿಸುತ್ತಾ ಬಂದಿರುವ ಸಂಪ್ರದಾಯದಿಂದ ದೇವರ ವಾಕ್ಯವನ್ನು ನಿರರ್ಥಕಮಾಡುತ್ತೀರಿ.” (ಮಾರ್ಕ 7:6-13) ತದ್ರೀತಿಯಲ್ಲಿ ಅಪೊಸ್ತಲ ಪೌಲನು, ತನ್ನ ಬೋಧನೆಯಲ್ಲಿ ಗ್ರೀಕ್ ತತ್ವಜ್ಞಾನ ಅಥವಾ ದೋಷಯುಕ್ತ ಸಂಪ್ರದಾಯಗಳನ್ನು ಮಿಶ್ರಗೊಳಿಸುವ ಒತ್ತಡಕ್ಕೆ ಮಣಿಯಲಿಲ್ಲ. ಅವನು ಎಚ್ಚರಿಸಿದ್ದು: “ಕ್ರಿಸ್ತನನ್ನು ಅನುಸರಿಸದೆ ಮನುಷ್ಯರ ಸಂಪ್ರದಾಯಗಳನ್ನೂ ಪ್ರಾಪಂಚಿಕಬಾಲಬೋಧೆಯನ್ನೂ ಅನುಸರಿಸುವವರು ನಿಮ್ಮಲ್ಲಿ ಬಂದು ಮೋಸವಾದ ನಿರರ್ಥಕ ತತ್ವಜ್ಞಾನಬೋಧನೆಯಿಂದ ನಿಮ್ಮ ಮನಸ್ಸನ್ನು ಕೆಡಿಸಿ ನಿಮ್ಮನ್ನು ವಶಮಾಡಿಕೊಂಡಾರು, ಎಚ್ಚರಿಕೆಯಾಗಿರ್ರಿ.” (ಕೊಲೊಸ್ಸೆ 2:8; 1 ಕೊರಿಂಥ 1:22, 23; 2:1-13) ಕ್ರೈಸ್ತರು ಕಾಪಾಡಿಕೊಳ್ಳುವಂತೆ ಪೌಲನು ಉತ್ತೇಜಿಸಿದ ಕೆಲವು ಸಂಪ್ರದಾಯಗಳು ಅಥವಾ ಬೋಧನೆಗಳಿದ್ದವು. ಆದರೆ ಇವು ಶಾಸ್ತ್ರಗಳ ಮೇಲೆ ಆಧರಿಸಲ್ಪಟ್ಟು, ಅವುಗಳೊಂದಿಗೆ ಸಂಪೂರ್ಣವಾಗಿ ಹೊಂದಿಕೆಯಲ್ಲಿದ್ದವು. (2 ಥೆಸಲೊನೀಕ 2:13-15) ಪೌಲನು ಬರೆದುದು: “ದೈವಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಶಿಕ್ಷೆಗೂ ಉಪಯುಕ್ತವಾಗಿದೆ. ಅದರಿಂದ ದೇವರ ಮನುಷ್ಯನು [ಪೂರ್ಣ ರೀತಿಯಲ್ಲಿ] ಪ್ರವೀಣನಾಗಿ ಸಕಲಸತ್ಕಾರ್ಯಕ್ಕೆ ಸನ್ನದ್ಧನಾಗುವನು.”—2 ತಿಮೊಥೆಯ 3:16, 17.
ಜನರು ಶಾಸ್ತ್ರವಚನಗಳಿಂದ ತಿರುಗಿಬೀಳುವರೆಂದು ಪೌಲನಿಗೆ ಗೊತ್ತಿತ್ತು. ಅವನು ತಿಮೊಥೆಯನನ್ನು ಎಚ್ಚರಿಸಿದ್ದು: “ಜನರು ಸ್ವಸ್ಥಬೋಧನೆಯನ್ನು ಸಹಿಸಲಾರದ ಕಾಲವು ಬರುತ್ತದೆ; . . . ಅವರು ಸತ್ಯಬೋಧನೆಗೆ ಕಿವಿಗೊಡದೆ . . . ಹೋಗುವರು.” ಅವನು ತಿಮೊಥೆಯನನ್ನು ಉತ್ತೇಜಿಸಿದ್ದು: “ಆದರೆ ನೀನು ಎಲ್ಲಾ ವಿಷಯಗಳಲ್ಲಿ ಸ್ವಸ್ಥಚಿತ್ತನಾಗಿರು.” (2 ತಿಮೊಥೆಯ 4:3-5) ಆದರೆ ಹೇಗೆ? ಒಂದು ವಿಧವು, “ಸದ್ಗುಣವುಳ್ಳ”ವರಾಗಿರುವುದೇ. ಈ ಬೈಬಲ್ ಪದವನ್ನು ಒಂದು ಗ್ರೀಕ್ ನಿಘಂಟು ಹೀಗೆ ಅರ್ಥನಿರೂಪಿಸುತ್ತದೆ: “ಕಲಿಯಲಿಕ್ಕಾಗಿ ಮತ್ತು ಯಾವುದೇ ವಿಷಯವನ್ನು ನ್ಯಾಯಯುತವಾಗಿ ತೂಗಿನೋಡಲಿಕ್ಕಾಗಿರುವ ಸಿದ್ಧಮನಸ್ಸು.” ಪ್ರಥಮ ಶತಮಾನದ ಬೆರೋಯದಲ್ಲಿನ ಪೌಲನ ಕೇಳುಗರನ್ನು ವರ್ಣಿಸಲು ಲೂಕನು ಈ ಅಭಿವ್ಯಕ್ತಿಯನ್ನು ಉಪಯೋಗಿಸಿದನು. ಪೌಲನ ಬೋಧನೆಗಳು ಅವರಿಗೆ ಹೊಸದಾಗಿದ್ದವು, ಮತ್ತು ಅವರು ತಪ್ಪಾದ ದಾರಿಯಲ್ಲಿ ನಡೆಸಲ್ಪಡಲು ಬಯಸಲಿಲ್ಲ. ಅವರನ್ನು ಶ್ಲಾಘಿಸುತ್ತಾ, ಲೂಕನು ಬರೆದುದು: “ಆ ಸಭೆಯವರು [ಬೆರೋಯದವರು] ಥೆಸಲೋನಿಕದವರಿಗಿಂತ ಸದ್ಗುಣವುಳ್ಳವರಾಗಿದ್ದು ದೇವರ ವಾಕ್ಯವನ್ನು ಸಿದ್ಧಮನಸ್ಸಿನಿಂದ ಅಂಗೀಕರಿಸಿ ಇವರು ಹೇಳುವ ಮಾತು ಹೌದೋ ಏನೋ ಎಂಬ ವಿಷಯದಲ್ಲಿ ಪ್ರತಿದಿನವೂ ಶಾಸ್ತ್ರಗ್ರಂಥಗಳನ್ನು ಶೋಧಿಸುತ್ತಿದ್ದರು.” ಸದ್ಗುಣವುಳವರಾಗಿದ್ದರೂ, ಬೆರೋಯದವರು ಸಂದೇಹವಾದಿಗಳು ಅಥವಾ ಯಾವುದೇ ವಿಷಯವನ್ನು ಕೂಡಲೇ ನಂಬಿಬಿಡುವ ಮನಸ್ಸುಳ್ಳವರಾಗಿರಲಿಲ್ಲ. ಬದಲಿಗೆ, ಅವರ ಪ್ರಾಮಾಣಿಕ ತನಿಖೆಯ ಫಲಿತಾಂಶವಾಗಿ, “ಅವರಲ್ಲಿ ಬಹಳ ಮಂದಿ ನಂಬಿದರು.”—ಅ. ಕೃತ್ಯಗಳು 17:11, 12.
ಬೈಬಲಿಗನುಸಾರ ಜೀವಿಸುವ ಪ್ರಯೋಜನಗಳು
ಆದಿ ಕ್ರೈಸ್ತರು, ಬೈಬಲಿನ ಕಡೆಗಿನ ವಿಧೇಯತೆ ಮತ್ತು ಸ್ವತ್ಯಾಗಿ ಪ್ರೀತಿಗಾಗಿ ಪ್ರಸಿದ್ಧರಾಗಿದ್ದರು. ಆದರೆ ಇಂದು ಅನೇಕ ಜನರು, ‘ಭಕ್ತಿಯ ವೇಷವಿದ್ದು ಅದರ ಬಲವನ್ನು ಬೇಡವೆನ್ನುವವರು’ ಆಗಿದ್ದಾರೆ. (2 ತಿಮೊಥೆಯ 3:5) ಕ್ರೈಸ್ತತ್ವದ ಮೂಲರೂಪಕ್ಕೆ ಹೊಂದಿಕೆಯಲ್ಲಿರದ ಇಂದಿನ ಕ್ರೈಸ್ತತ್ವದ ಯಾವುದೇ ರೂಪವು, ಜನರ ಮೇಲೆ ಒಳ್ಳೆಯ ಪ್ರಭಾವವನ್ನು ಬೀರಲಾರದು. ಕ್ರೈಸ್ತಪ್ರಪಂಚದ ಹೆಚ್ಚಿನ ಭಾಗದಲ್ಲಿ, ಹೆಚ್ಚುತ್ತಿರುವ ಹಿಂಸಾಚಾರ, ಅನೈತಿಕತೆ, ಕುಟುಂಬ ಕುಸಿತ ಮತ್ತು ಪ್ರಾಪಂಚಿಕತೆಯು ಏಕಿದೆ ಎಂಬುದಕ್ಕೆ ಇದು ಕಾರಣವನ್ನು ಕೊಡುತ್ತದೊ? ಕೆಲವು “ಕ್ರೈಸ್ತ” ದೇಶಗಳಲ್ಲಿ, ಕ್ರೂರ ಕುಲಸಂಬಂಧವಾದ ಯುದ್ಧಗಳು, ಒಂದೇ ಧರ್ಮದ ಸದಸ್ಯರೊಳಗೂ ನಡೆಯುತ್ತದೆ.
ಬೆರೋಯದವರ ಸದ್ಗುಣ ಮನೋಭಾವವು ಅಳಿದುಹೋಗಿದೆಯೊ? ಬೈಬಲಿನಲ್ಲಿ ನಂಬುವ ಮತ್ತು ಅದಕ್ಕನುಸಾರ ಜೀವಿಸುವ ಯಾವುದೇ ಜನರ ಗುಂಪು ಇಂದು ಇದೆಯೊ?
ಎನ್‌ಸೈಕ್ಲೊಪೀಡಿಯ ಕಾನೇಡಿಯಾನಾ ಗಮನಿಸಿದ್ದು: “ಯೆಹೋವನ ಸಾಕ್ಷಿಗಳ ಕೆಲಸವು, ನಮ್ಮ ಶಕದ ಪ್ರಥಮ ಮತ್ತು ಎರಡನೆಯ ಶತಮಾನಗಳಲ್ಲಿ ಯೇಸು ಮತ್ತು ಅವನ ಶಿಷ್ಯರು ಆಚರಿಸಿದ ಆದಿ ಕ್ರೈಸ್ತತ್ವದ ಪುನರುಜ್ಜೀವನ ಮತ್ತು ಪುನರ್‌ಸ್ಥಾಪನೆಯಾಗಿದೆ.” ಸಾಕ್ಷಿಗಳಿಗೆ ಸೂಚಿಸುತ್ತಾ, ಹೊಸ ಕ್ಯಾಥೊಲಿಕ್ ವಿಶ್ವಕೋಶ ಗಮನಿಸುವುದು: “ಅವರು ಬೈಬಲನ್ನು ತಮ್ಮ ನಂಬಿಕೆಯ ಮತ್ತು ನಡತೆಯ ಮಟ್ಟದ ಏಕಮಾತ್ರ ಮೂಲದೋಪಾದಿ ಪರಿಗಣಿಸುತ್ತಾರೆ.”
ಲೋಕದಾದ್ಯಂತವಿರುವ ಯೆಹೋವನ ಸಾಕ್ಷಿಗಳು, ತಮ್ಮ ಆತ್ಮಿಕ ಸಮೃದ್ಧಿ, ಶಾಂತಿ ಮತ್ತು ಸಂತೋಷಕ್ಕಾಗಿ ಜ್ಞಾತರಾಗಿರುವುದಕ್ಕಾಗಿ, ಇದು ಒಂದು ಪ್ರಮುಖ ಕಾರಣವಾಗಿದೆಯೆಂಬುದು ನಿಸ್ಸಂದೇಹ. ಆದುದರಿಂದ ನಾವು ನಮ್ಮ ವಾಚಕರಿಗೆ, ಆತ್ಮಿಕವಾಗಿ ಸ್ವಸ್ಥಕರವಾದ ಬೈಬಲಿನ ಬೋಧನೆಗಳ ಕುರಿತು ಹೆಚ್ಚನ್ನು ಕಲಿಯುವಂತೆ ಉತ್ತೇಜಿಸುತ್ತೇವೆ. ಹೆಚ್ಚಿನ ಜ್ಞಾನವು, ಬೈಬಲಿನಲ್ಲಿ ಇನ್ನೂ ಹೆಚ್ಚಿನ ಭರವಸೆ ಮತ್ತು ದೇವರಲ್ಲಿ ಹೆಚ್ಚು ಬಲವಾದ ನಂಬಿಕೆಗೂ ನಡಿಸಸಾಧ್ಯವಿದೆ. ಅಂತಹ ನಂಬಿಕೆಯ ನಿತ್ಯ ಪ್ರಯೋಜನಗಳಿಗಾಗಿ ನಾವು ಪ್ರಯತ್ನಿಸುವುದು ಸಾರ್ಥಕ.
[ಅಧ್ಯಯನ ಪ್ರಶ್ನೆಗಳು]
a ನ್ಯಾಷನಲ್ ಪಬ್ಲಿಕ್ ರೇಡಿಯೊ—“ಮಾರ್ನಿಂಗ್ ಎಡಿಷನ್”
b ಬೈಬಲಿನ ಭರವಸಾರ್ಹತೆಯ ಕುರಿತಾದ ಹೆಚ್ಚಿನ ಮಾಹಿತಿಗಾಗಿ, ವಾಚ್‌ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ ಸಕಲ ಜನರಿಗಾಗಿರುವ ಗ್ರಂಥ ಎಂಬ ಬ್ರೋಷರನ್ನು ನೋಡಿರಿ.
[ಪುಟ 6 ರಲ್ಲಿರುವ ಚಿತ್ರ]
ಅಪೊಸ್ತಲ ಪೌಲನು ಮತ್ತು ಇತರರು ಮಾರುಕಟ್ಟೆಯಲ್ಲಿ ಸಾರಿದರು
[ಪುಟ 7 ರಲ್ಲಿರುವ ಚಿತ್ರ]
ಯೆಹೋವನ ಸಾಕ್ಷಿಗಳು “ಬೈಬಲನ್ನು ತಮ್ಮ ನಂಬಿಕೆಯ ಮತ್ತು ನಡತೆಯ ಮಟ್ಟದ ಏಕಮಾತ್ರ ಮೂಲದೋಪಾದಿ ಪರಿಗಣಿಸುತ್ತಾರೆ”