ನಿಮ್ಮ ಕೆಲಸವು ಬೆಂಕಿಯನ್ನು ಎದುರಿಸಿ ನಿಲ್ಲುವುದೊ?
“ಪ್ರತಿಯೊಬ್ಬ ವ್ಯಕ್ತಿಯು ತಾನು [ಅಸ್ತಿವಾರದ ಮೇಲೆ] ಹೇಗೆ ಕಟ್ಟುತ್ತಿದ್ದಾನೆ ಎಂಬುದರ ಬಗ್ಗೆ ಎಚ್ಚರದಿಂದಿರಬೇಕು.”—1 ಕೊರಿಂಥ 3:10, ಪರಿಶುದ್ಧ ಬೈಬಲ್.*
1. ಭಾವೀ ಶಿಷ್ಯರ ವಿಷಯದಲ್ಲಿ ನಂಬಿಗಸ್ತ ಕ್ರೈಸ್ತರು ಯಾವ ನಿರೀಕ್ಷೆಯನ್ನಿಟ್ಟುಕೊಳ್ಳುತ್ತಾರೆ?
ಒಬ್ಬ ಕ್ರೈಸ್ತ ವಿವಾಹಿತ ದಂಪತಿಗಳು, ತಮ್ಮ ನವಜಾತ ಶಿಶುವನ್ನು ಎವೆಯಿಕ್ಕದೆ ನೋಡುತ್ತಾರೆ. ಒಬ್ಬ ರಾಜ್ಯ ಪ್ರಚಾರಕನು, ಬೈಬಲ್ ವಿದ್ಯಾರ್ಥಿಯ ಕಾತುರದ, ಆಸಕ್ತಿತುಂಬಿರುವ ಮುಖಭಾವವನ್ನು ನೋಡುತ್ತಾನೆ. ವೇದಿಕೆಯಿಂದ ಭಾಷಣಕೊಡುತ್ತಿರುವ ಒಬ್ಬ ಕ್ರೈಸ್ತ ಹಿರಿಯನು, ಸಭಿಕರ ಮಧ್ಯೆ ಕುಳಿತುಕೊಂಡಿರುವ, ಹೊಸತಾಗಿ ಆಸಕ್ತನಾಗಿರುವ ಒಬ್ಬ ವ್ಯಕ್ತಿಯು ತನ್ನ ಬೈಬಲಿನಲ್ಲಿ ವಚನಗಳನ್ನು ಆತುರಾತುರವಾಗಿ ತೆರೆದುನೋಡುತ್ತಿರುವುದನ್ನು ಗಮನಿಸುತ್ತಾನೆ. ಯೆಹೋವನ ಈ ನಂಬಿಗಸ್ತ ಸೇವಕರ ಹೃದಯಗಳು ನಿರೀಕ್ಷೆಯಿಂದ ತುಂಬಿವೆ. ‘ಈ ವ್ಯಕ್ತಿಯು ಯೆಹೋವನನ್ನು ಪ್ರೀತಿಸಿ, ಸೇವಿಸಲಾರಂಭಿಸಿ—ನಂಬಿಗಸ್ತನಾಗಿ ಉಳಿಯುವನೊ?’ ಎಂದು ಅವರು ಕುತೂಹಲಪಡುವುದು ಸಹಜ. ಖಂಡಿತವಾಗಿಯೂ ಇಂತಹ ಫಲಿತಾಂಶವು ತನ್ನಷ್ಟಕ್ಕೆ ತಾನೇ ಬರುವುದಿಲ್ಲ. ಅದಕ್ಕೆ ಶ್ರಮ ಆವಶ್ಯಕ.
2. ಕಲಿಸುವ ಕೆಲಸದ ಮಹತ್ವವನ್ನು ಅಪೊಸ್ತಲ ಪೌಲನು ಇಬ್ರಿಯ ಕ್ರೈಸ್ತರಿಗೆ ಹೇಗೆ ಜ್ಞಾಪಿಸಿದನು, ಮತ್ತು ಇದು ನಮಗೆ ಯಾವ ಸ್ವಪರೀಕ್ಷಣೆಯನ್ನು ಮಾಡುವಂತೆ ಪ್ರಚೋದಿಸಬೇಕು?
2 ಒಬ್ಬ ಕುಶಲ ಶಿಕ್ಷಕನಾದ ಅಪೊಸ್ತಲ ಪೌಲನು, ಕಲಿಸುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದ ಮಹತ್ವವನ್ನು ಹೀಗೆ ಬರೆದಾಗ ಒತ್ತಿಹೇಳಿದನು: ‘ನೀವು ಇಷ್ಟರೊಳಗೆ ಬೋಧಕರಾಗಿರಬೇಕಾಗಿತ್ತು.’ (ಇಬ್ರಿಯ 5:12) ಅವನು ಸಂಬೋಧಿಸುತ್ತಿದ್ದ ಕ್ರೈಸ್ತರು ಬಹಳ ಹಿಂದೆ ವಿಶ್ವಾಸಿಗಳಾಗಿದ್ದರಾದರೂ, ತೀರ ಕಡಿಮೆ ಪ್ರಗತಿಯನ್ನು ಮಾಡಿದ್ದರು. ಅವರು ಇತರರಿಗೆ ಕಲಿಸಲು ಸಿದ್ಧರಾಗಿರಲಿಲ್ಲ ಮಾತ್ರವಲ್ಲ, ಸ್ವತಃ ಅವರಿಗೇ ಸತ್ಯದ ಮೂಲಭೂತ ಅಂಶಗಳನ್ನು ಜ್ಞಾಪಿಸುವ ಅಗತ್ಯವಿತ್ತು. ಇಂದು ನಾವೆಲ್ಲರೂ, ಶಿಕ್ಷಕರೋಪಾದಿ ನಮಗಿರುವ ಸಾಮರ್ಥ್ಯಗಳನ್ನು ವಿಮರ್ಶಿಸಲು ಆಗಿಂದಾಗ್ಗೆ ಸಮಯವನ್ನು ತೆಗೆದುಕೊಂಡು, ನಾವು ಹೇಗೆ ಅಭಿವೃದ್ಧಿಯನ್ನು ಮಾಡಸಾಧ್ಯವಿದೆಯೆಂಬುದನ್ನು ನೋಡಬೇಕು. ಜೀವಗಳು ಅಪಾಯದಲ್ಲಿವೆ. ನಾವೇನು ಮಾಡಬಲ್ಲೆವು?
3. (ಎ) ಒಬ್ಬ ವ್ಯಕ್ತಿಯನ್ನು ಕ್ರೈಸ್ತ ಶಿಷ್ಯನನ್ನಾಗಿ ಮಾಡುವ ಕಾರ್ಯಗತಿಯನ್ನು ಅಪೊಸ್ತಲ ಪೌಲನು ಯಾವುದಕ್ಕೆ ಹೋಲಿಸಿದನು? (ಬಿ) ಕ್ರೈಸ್ತ ಕಟ್ಟಡ ಕಟ್ಟುವವರೋಪಾದಿ, ನಮಗೆ ಯಾವ ಮಹಾ ಸುಯೋಗವಿದೆ?
3 ಒಂದು ವಿಸ್ತೃತ ದೃಷ್ಟಾಂತದಲ್ಲಿ, ಪೌಲನು ಶಿಷ್ಯರನ್ನಾಗಿ ಮಾಡುವ ಕೆಲಸವನ್ನು, ಒಂದು ಕಟ್ಟಡವನ್ನು ನಿರ್ಮಿಸುವ ಕಾರ್ಯವಿಧಾನಕ್ಕೆ ಹೋಲಿಸಿದನು. ಹೀಗೆ ಹೇಳುತ್ತಾ ಅವನು ಆರಂಭಿಸಿದನು: “ನಾವು ದೇವರ ಜೊತೆಕೆಲಸದವರು; ನೀವು ದೇವರ ಹೊಲವೂ ದೇವರ ಕಟ್ಟಡವೂ ಆಗಿದ್ದೀರಿ.” (1 ಕೊರಿಂಥ 3:9) ಹೀಗಿರುವುದರಿಂದ, ಜನರನ್ನು ಒಳಗೊಳ್ಳುವ ಒಂದು ನಿರ್ಮಾಣ ಕಾರ್ಯದಲ್ಲಿ ನಾವು ಪಾಲ್ಗೊಳ್ಳುತ್ತೇವೆ; ಅವರು ಕ್ರಿಸ್ತನ ಶಿಷ್ಯರಾಗಿ ಪರಿಣಮಿಸುವಂತೆ ನಾವು ಅವರಿಗೆ ಸಹಾಯಮಾಡುತ್ತೇವೆ. ‘ಸಮಸ್ತವನ್ನು ಕಟ್ಟಿದಾತನ’ ಜೊತೆ ಕೆಲಸಗಾರರೋಪಾದಿ ನಾವು ಹಾಗೆ ಮಾಡುತ್ತೇವೆ. (ಇಬ್ರಿಯ 3:4) ಇದು ಎಂತಹ ಒಂದು ಸುಯೋಗ! ಕೊರಿಂಥದವರಿಗೆ ಪೌಲನು ಕೊಟ್ಟ ಪ್ರೇರಿತ ಸಲಹೆಯು, ನಾವು ನಮ್ಮ ಕೆಲಸದಲ್ಲಿ ಹೆಚ್ಚು ನಿಪುಣರಾಗುವಂತೆ ಹೇಗೆ ಸಹಾಯಮಾಡಬಲ್ಲದು ಎಂಬುದನ್ನು ನೋಡೋಣ. ನಾವು ನಿರ್ದಿಷ್ಟವಾಗಿ ನಮ್ಮ “ಬೋಧನಾ ಕಲೆಯ” ಮೇಲೆ ಗಮನವನ್ನು ಕೇಂದ್ರೀಕರಿಸುವೆವು.—2 ತಿಮೊಥೆಯ 4:2, NW.
ಸರಿಯಾದ ಅಸ್ತಿವಾರವನ್ನು ಹಾಕುವುದು
4. (ಎ) ಕ್ರೈಸ್ತ ನಿರ್ಮಾಣ ಕಾರ್ಯದಲ್ಲಿ ಪೌಲನ ಪಾತ್ರ ಏನಾಗಿತ್ತು? (ಬಿ) ಯೇಸು ಮತ್ತು ಅವನ ಕೇಳುಗರಿಗೆ, ಒಳ್ಳೆಯ ಅಸ್ತಿವಾರಗಳ ಮಹತ್ವವು ತಿಳಿದಿತ್ತೆಂದು ಏಕೆ ಹೇಳಸಾಧ್ಯವಿದೆ?
4 ಒಂದು ಕಟ್ಟಡವು ಸ್ಥಿರವೂ ಬಾಳಿಕೆಬರುವಂತಹದ್ದೂ ಆಗಿರಬೇಕಾದಲ್ಲಿ, ಅದಕ್ಕೆ ಒಂದು ಒಳ್ಳೆಯ ಅಸ್ತಿವಾರವನ್ನು ಹಾಕುವ ಅಗತ್ಯವಿದೆ. ಹೀಗಿರುವುದರಿಂದ ಪೌಲನು ಬರೆದುದು: “ದೇವರು ನನಗೆ ಕೃಪೆಯಿಂದ ಒಪ್ಪಿಸಿದ ಕೆಲಸವನ್ನು ನಡಿಸಿ ನಾನು ಪ್ರವೀಣಶಿಲ್ಪಿಯಂತೆ ಅಸ್ತಿವಾರ ಹಾಕಿದೆನು.” (1 ಕೊರಿಂಥ 3:10) ತದ್ರೀತಿಯ ದೃಷ್ಟಾಂತವನ್ನು ಉಪಯೋಗಿಸುತ್ತಾ, ಒಂದು ಬಿರುಗಾಳಿಯನ್ನು ಪಾರಾದ ಮನೆಯ ಕುರಿತಾಗಿ ಯೇಸು ಕ್ರಿಸ್ತನು ತಿಳಿಸಿದನು. ಏಕೆಂದರೆ ಆ ಮನೆಕಟ್ಟುವವನು ಒಂದು ದೃಢವಾದ ಅಸ್ತಿವಾರವನ್ನು ಹಾಕಿದ್ದನು. (ಲೂಕ 6:47-49) ಅಸ್ತಿವಾರಗಳ ಮಹತ್ವದ ಕುರಿತಾಗಿ ಯೇಸುವಿಗೆ ಎಲ್ಲವೂ ತಿಳಿದಿತ್ತು. ಯೆಹೋವನು ಭೂಮಿಯ ಅಸ್ತಿವಾರವನ್ನುa ಹಾಕಿದಾಗ ಅವನು ಜೊತೆಯಲ್ಲಿದ್ದನು. (ಜ್ಞಾನೋಕ್ತಿ 8:29-31) ಯೇಸುವಿನ ಕೇಳುಗರಿಗೂ ಒಳ್ಳೆಯ ಅಸ್ತಿವಾರಗಳ ಮಹತ್ವವು ತಿಳಿದಿತ್ತು. ಪ್ಯಾಲೆಸ್ಟೀನ್ನಲ್ಲಿ ಕೆಲವೊಮ್ಮೆ ಸಂಭವಿಸುತ್ತಿದ್ದ ನೆರೆಗಳು ಮತ್ತು ಭೂಕಂಪಗಳನ್ನು ಸ್ಥಿರವಾದ ಅಸ್ತಿವಾರಗಳುಳ್ಳ ಮನೆಗಳು ಮಾತ್ರ ಪಾರಾಗಸಾಧ್ಯವಿತ್ತು. ಆದರೆ ಪೌಲನ ಮನಸ್ಸಿನಲ್ಲಿದ್ದ ಅಸ್ತಿವಾರವು ಯಾವುದಾಗಿತ್ತು?
5. ಕ್ರೈಸ್ತ ಸಭೆಯ ಅಸ್ತಿವಾರ ಯಾರು, ಮತ್ತು ಇದು ಹೇಗೆ ಮುಂತಿಳಿಸಲ್ಪಟ್ಟಿತ್ತು?
5 ಪೌಲನು ಬರೆದುದು: “ಹಾಕಿರುವ ಅಸ್ತಿವಾರವು ಯೇಸು ಕ್ರಿಸ್ತನೇ; ಆ ಅಸ್ತಿವಾರವನ್ನಲ್ಲದೆ ಮತ್ತೊಂದು ಅಸ್ತಿವಾರವನ್ನು ಯಾರೂ ಹಾಕಲಾರರಷ್ಟೆ.” (1 ಕೊರಿಂಥ 3:11) ಯೇಸು ಒಂದು ಅಸ್ತಿವಾರಕ್ಕೆ ಹೋಲಿಸಲ್ಪಟ್ಟಿರುವುದು ಇದೇ ಮೊದಲ ಬಾರಿಯಲ್ಲ. ವಾಸ್ತವದಲ್ಲಿ ಯೆಶಾಯ 28:16 ಮುಂತಿಳಿಸಿದ್ದು: “ಕರ್ತನಾದ ಯೆಹೋವನು ಹೀಗೆ ಹೇಳುತ್ತಾನೆ—ಇಗೋ, ಪರೀಕ್ಷಿತವಾಗಿಯೂ ಮಾನ್ಯವಾಗಿಯೂ ಇರುವ ಮೂಲೆಗಲ್ಲನ್ನು ಚೀಯೋನಿನಲ್ಲಿ ಸ್ಥಿರವಾದ ಅಸ್ತಿವಾರವನ್ನಾಗಿ ಇಡುತ್ತೇನೆ.” ತನ್ನ ಮಗನು ಕ್ರೈಸ್ತ ಸಭೆಯ ಅಸ್ತಿವಾರವಾಗಬೇಕು ಎಂಬುದನ್ನು ಯೆಹೋವನು ಬಹಳ ಹಿಂದೆಯೇ ಉದ್ದೇಶಿಸಿದ್ದನು.—ಕೀರ್ತನೆ 118:22; ಎಫೆಸ 2:19-22; 1 ಪೇತ್ರ 2:4-6.
6. ಕೊರಿಂಥದ ಕ್ರೈಸ್ತರಲ್ಲಿ ಪೌಲನು ಯುಕ್ತವಾದ ಅಸ್ತಿವಾರವನ್ನು ಹೇಗೆ ಹಾಕಿದನು?
6 ಪ್ರತಿಯೊಬ್ಬ ಕ್ರೈಸ್ತನಿಗೂ ಯಾವುದು ಅಸ್ತಿವಾರವಾಗಿದೆ? ಪೌಲನು ಹೇಳಿದಂತೆ, ಒಬ್ಬ ನಿಜ ಕ್ರೈಸ್ತನಿಗೆ ದೇವರ ವಾಕ್ಯದಲ್ಲಿರುವ ಅಸ್ತಿವಾರವಾದ ಯೇಸು ಕ್ರಿಸ್ತನಲ್ಲದೆ, ಇನ್ಯಾವ ಅಸ್ತಿವಾರವೂ ಇಲ್ಲ. ಪೌಲನು ನಿಶ್ಚಯವಾಗಿಯೂ ಅಂತಹ ಒಂದು ಅಸ್ತಿವಾರವನ್ನು ಹಾಕಿದನು. ತತ್ವಜ್ಞಾನವನ್ನು ತುಂಬ ಉಚ್ಚವಾಗಿ ಮಾನ್ಯಮಾಡಲಾಗುತ್ತಿದ್ದ ಕೊರಿಂಥ ನಗರದಲ್ಲಿ, ಅವನು ಜನರನ್ನು ಲೌಕಿಕ ವಿವೇಕದೊಂದಿಗೆ ಪ್ರಭಾವಿಸಲು ಪ್ರಯತ್ನಿಸಲಿಲ್ಲ. ಬದಲಾಗಿ, ಜನಾಂಗಗಳು ‘ಮೂರ್ಖತನ’ ಎಂದು ಕಡೆಗಣಿಸುತ್ತಿದ್ದ, ‘ಕ್ರಿಸ್ತನು ಕಂಬಕ್ಕೇರಿಸಲ್ಪಟ್ಟ’ ವಿಷಯವನ್ನು ಪೌಲನು ಸಾರಿದನು. (1 ಕೊರಿಂಥ 1:23, NW) ಯೆಹೋವನ ಉದ್ದೇಶಗಳಲ್ಲಿ ಯೇಸು ಮುಖ್ಯ ಪಾತ್ರವನ್ನು ವಹಿಸುತ್ತಾನೆಂದು ಪೌಲನು ಕಲಿಸಿದನು.—2 ಕೊರಿಂಥ 1:20; ಕೊಲೊಸ್ಸೆ 2:2, 3.
7. ಪೌಲನು ತನ್ನನ್ನೇ “ಪ್ರವೀಣಶಿಲ್ಪಿ” ಎಂದು ಸೂಚಿಸಿಹೇಳಿರುವ ಸಂಗತಿಯಿಂದ ನಾವೇನನ್ನು ಕಲಿತುಕೊಳ್ಳಸಾಧ್ಯವಿದೆ?
7 ಪೌಲನು ತಾನು “ಪ್ರವೀಣಶಿಲ್ಪಿಯಂತೆ” ಕಲಿಸಿದೆನೆಂದು ಹೇಳಿದನು. ಈ ಹೇಳಿಕೆಯಿಂದ ಅವನು ಆತ್ಮಪ್ರಶಂಸೆಯನ್ನು ಮಾಡಿಕೊಳ್ಳುತ್ತಿರಲಿಲ್ಲ. ಅದು, ಯೆಹೋವನು ಅವನಿಗೆ ಕೊಟ್ಟಿದ್ದಂತಹ ಒಂದು ಅದ್ಭುತಕರವಾದ ವರದಾನದ ಅಂಗೀಕಾರವಾಗಿತ್ತಷ್ಟೇ. ಆ ವರದಾನವು, ಕೆಲಸವನ್ನು ವ್ಯವಸ್ಥಿತಗೊಳಿಸುವುದು ಅಥವಾ ನಿರ್ದೇಶಿಸುವುದೇ ಆಗಿತ್ತು. (1 ಕೊರಿಂಥ 12:28) ಪ್ರಥಮ ಶತಮಾನದ ಕ್ರೈಸ್ತರಿಗೆ ದಯಪಾಲಿಸಲ್ಪಟ್ಟ ಅದ್ಭುತಕರ ವರದಾನಗಳು ನಮಗೆ ಇಂದು ಇಲ್ಲವೆಂಬುದು ಒಪ್ಪತಕ್ಕ ಮಾತೇ. ಮತ್ತು ನಾವು ಪ್ರತಿಭಾವಂತ ಶಿಕ್ಷಕರಾಗಿದ್ದೇವೆಂದು ನೆನಸದಿರಬಹುದು. ಆದರೆ, ಒಂದು ಪ್ರಾಮುಖ್ಯ ಅರ್ಥದಲ್ಲಿ ನಾವು ನಿಜವಾಗಿಯೂ ಪ್ರತಿಭಾವಂತ ಶಿಕ್ಷಕರಾಗಿದ್ದೇವೆ. ಇದನ್ನು ಪರಿಗಣಿಸಿರಿ: ಯೆಹೋವನು ನಮಗೆ ಸಹಾಯಮಾಡಲು ತನ್ನ ಪವಿತ್ರಾತ್ಮವನ್ನು ಒದಗಿಸುತ್ತಾನೆ. (ಲೂಕ 12:11, 12ನ್ನು ಹೋಲಿಸಿರಿ.) ಮತ್ತು ನಮಗೆ ಯೆಹೋವನಿಗಾಗಿ ಪ್ರೀತಿ, ಮತ್ತು ಆತನ ವಾಕ್ಯದ ಮೂಲಭೂತ ಬೋಧನೆಗಳ ಜ್ಞಾನವೂ ಇದೆ. ಇತರರಿಗೆ ಕಲಿಸಲು ಇವು ನಿಜವಾಗಿಯೂ ಅದ್ಭುತಕರವಾದ ವರದಾನಗಳಾಗಿವೆ. ಯುಕ್ತವಾದ ಅಸ್ತಿವಾರವನ್ನು ಹಾಕಲಿಕ್ಕಾಗಿ ಅವುಗಳನ್ನು ಉಪಯೋಗಿಸುವ ದೃಢನಿರ್ಧಾರವನ್ನು ಮಾಡೋಣ.
8. ಭಾವೀ ಶಿಷ್ಯರಲ್ಲಿ ಕ್ರಿಸ್ತನನ್ನು ನಾವು ಅಸ್ತಿವಾರವಾಗಿ ಹಾಕುವುದು ಹೇಗೆ?
8 ನಾವು ಕ್ರಿಸ್ತನನ್ನು ಅಸ್ತಿವಾರವನ್ನಾಗಿ ಹಾಕುವಾಗ, ಅವನನ್ನು ಗೋದಲಿಯಲ್ಲಿರುವ ಒಂದು ಅಸಹಾಯಕ ಶಿಶುವಿನೋಪಾದಿ, ಅಥವಾ ತ್ರಯೈಕ್ಯದಲ್ಲಿರುವಂತೆ ಯೆಹೋವನಿಗೆ ಸಮಾನನಾದ ವ್ಯಕ್ತಿಯೋಪಾದಿ ಪ್ರಸ್ತುತಪಡಿಸುವುದಿಲ್ಲ. ಅಂತಹ ಅಶಾಸ್ತ್ರೀಯ ವಿಚಾರಗಳು, ನಕಲಿ ಕ್ರೈಸ್ತರಿಗಾಗಿ ಒಂದು ಅಸ್ತಿವಾರವಾಗಿದೆ. ಇದಕ್ಕೆ ಬದಲಾಗಿ, ಅವನು ಜೀವಿಸಿರುವವರಲ್ಲೇ ಅತ್ಯಂತ ಮಹಾನ್ ಪುರುಷನಾಗಿದ್ದಾನೆ, ನಮಗಾಗಿ ತನ್ನ ಪರಿಪೂರ್ಣ ಜೀವವನ್ನು ಕೊಟ್ಟನು, ಮತ್ತು ಅವನು ಇಂದು ಸ್ವರ್ಗದಲ್ಲಿ ಆಳುತ್ತಿರುವ ಯೆಹೋವನ ಅಭಿಷಿಕ್ತ ರಾಜನಾಗಿದ್ದಾನೆಂದು ನಾವು ಕಲಿಸುತ್ತೇವೆ. (ರೋಮಾಪುರ 5:8; ಪ್ರಕಟನೆ 11:15) ನಮ್ಮ ವಿದ್ಯಾರ್ಥಿಗಳು, ಯೇಸುವಿನ ಹೆಜ್ಜೆಜಾಡಿನಲ್ಲಿ ನಡೆಯುವಂತೆ ಮತ್ತು ಅವನ ಗುಣಗಳನ್ನು ಅನುಕರಿಸುವಂತೆ ಅವರನ್ನು ಪ್ರಚೋದಿಸಲೂ ನಾವು ಪ್ರಯತ್ನಿಸುತ್ತೇವೆ. (1 ಪೇತ್ರ 2:21) ಶುಶ್ರೂಷೆಗಾಗಿ ಯೇಸುವಿಗಿದ್ದ ಹುರುಪು, ದೀನದಲಿತರಿಗಾಗಿ ಅವನಿಗಿದ್ದ ಕರುಣೆ, ತಮ್ಮ ಸ್ವಂತ ಅಪರಾಧಿಭಾವದಿಂದ ಮುದುಡಿಹೋಗಿರುವ ಪಾಪಿಗಳ ಕಡೆಗಿನ ಅವನ ದಯೆ, ಕಷ್ಟಗಳ ಎದುರಿನಲ್ಲಿ ಅವನ ಅಚಲವಾದ ಧೈರ್ಯ ಇಂಥವುಗಳಿಂದ ಅವರು ಗಾಢವಾಗಿ ಪ್ರಚೋದಿಸಲ್ಪಡುವಂತೆ ನಾವು ಬಯಸುತ್ತೇವೆ. ನಿಜವಾಗಿಯೂ, ಯೇಸು ಒಂದು ವೈಭವಯುಕ್ತ ಅಸ್ತಿವಾರವಾಗಿದ್ದಾನೆ. ಆದರೆ ಮುಂದೇನು?
ಸರಿಯಾದ ಸಾಮಗ್ರಿಗಳೊಂದಿಗೆ ಕಟ್ಟುವುದು
9. ಪೌಲನು ಪ್ರಧಾನವಾಗಿ ಅಸ್ತಿವಾರವನ್ನು ಹಾಕುವವನಾಗಿದ್ದರೂ, ತಾನು ಕಲಿಸಿದಂತಹ ಸತ್ಯವನ್ನು ಅಂಗೀಕರಿಸಿದವರ ಕುರಿತು ಅವನಿಗೆ ಯಾವ ಚಿಂತೆಯಿತ್ತು?
9 ಪೌಲನು ಬರೆದುದು: “ಆ ಅಸ್ತಿವಾರದ ಮೇಲೆ ಚಿನ್ನ ಬೆಳ್ಳಿ ರತ್ನ ಕಟ್ಟಿಗೆ ಹುಲ್ಲು ಆಪು ಮುಂತಾದವುಗಳಲ್ಲಿ ಯಾವದರಿಂದ ಕಟ್ಟಿದರೂ ಅವನವನ ಕೆಲಸವು ವ್ಯಕ್ತವಾಗುವದು. ಕ್ರಿಸ್ತನು ಬರುವ ದಿನವು ಬೆಂಕಿಯೊಡನೆ ಉದಯವಾಗಿ ಆ ಕೆಲಸವನ್ನು ಸ್ಪಷ್ಟವಾಗಿ ತೋರಿಸುವದು; ಅವನವನ ಕೆಲಸವೆಂಥದೋ ಆ ಬೆಂಕಿ ಶೋಧಿಸುವದು.” (1 ಕೊರಿಂಥ 3:12, 13) ಪೌಲನ ಅರ್ಥವೇನಾಗಿತ್ತು? ಹಿನ್ನೆಲೆಯನ್ನು ಪರಿಗಣಿಸಿರಿ. ಪೌಲನು ಪ್ರಧಾನವಾಗಿ ಅಸ್ತಿವಾರವನ್ನು ಹಾಕುವವನಾಗಿದ್ದನು. ತನ್ನ ಮಿಷನೆರಿ ಪ್ರಯಾಣಗಳಲ್ಲಿ, ಅವನು ನಗರದಿಂದ ನಗರಕ್ಕೆ ಪ್ರಯಾಣಿಸುತ್ತಾ, ಕ್ರಿಸ್ತನ ಕುರಿತಾಗಿ ಹಿಂದೆಂದೂ ಕೇಳಿಸಿಕೊಂಡಿರದ ಅನೇಕ ಜನರಿಗೆ ಸಾರಿದನು. (ರೋಮಾಪುರ 15:20) ಅವನು ಕಲಿಸಿದಂತಹ ಸತ್ಯವನ್ನು ಜನರು ಸ್ವೀಕರಿಸಿದಂತೆ, ಸಭೆಗಳು ರಚಿಸಲ್ಪಟ್ಟವು. ಪೌಲನು ಈ ನಂಬಿಗಸ್ತರ ಕುರಿತಾಗಿ ತುಂಬ ಆಸಕ್ತಿಯನ್ನು ವಹಿಸಿದನು. (2 ಕೊರಿಂಥ 11:28, 29) ಆದರೆ ಅವನ ಕೆಲಸದಿಂದಾಗಿ ಅವನು ಪ್ರಯಾಣಿಸುತ್ತಾ ಇರಬೇಕಿತ್ತು. ಆದುದರಿಂದ ಕೊರಿಂಥದಲ್ಲಿ 18 ತಿಂಗಳುಗಳ ವರೆಗೆ ಇದ್ದು, ಅಸ್ತಿವಾರವನ್ನು ಹಾಕಿದ ನಂತರ, ಅವನು ಇತರ ನಗರಗಳಲ್ಲಿ ಸಾರಲು ಹೊರಟು ಹೋದನು. ಆದರೂ, ಅವನು ಅಲ್ಲಿ ಮಾಡಿದಂತಹ ಕೆಲಸವನ್ನು ಇತರರು ಹೇಗೆ ಮುಂದುವರಿಸಿಕೊಂಡು ಹೋದರೆಂಬುದನ್ನು ತಿಳಿದುಕೊಳ್ಳಲು ಅವನು ತುಂಬ ಆಸಕ್ತನಾಗಿದ್ದನು.—ಅ. ಕೃತ್ಯಗಳು 18:8-11; 1 ಕೊರಿಂಥ 3:6.
10, 11. (ಎ) ಕಟ್ಟುವ ಸಾಮಾಗ್ರಿಗಳಲ್ಲಿ ವಿಭಿನ್ನ ಪ್ರಕಾರಗಳನ್ನು ಪೌಲನು ಹೇಗೆ ಹೋಲಿಸಿದನು? (ಬಿ) ಪ್ರಾಚೀನ ಕೊರಿಂಥದಲ್ಲಿ ಪ್ರಾಯಶಃ ಯಾವ ರೀತಿಯ ಕಟ್ಟಡಗಳಿದ್ದವು? (ಸಿ) ಯಾವ ರೀತಿಯ ಕಟ್ಟಡಗಳು ಬೆಂಕಿಯನ್ನು ಎದುರಿಸಿ ನಿಲ್ಲಬಲ್ಲವು, ಮತ್ತು ಕ್ರೈಸ್ತ ಶಿಷ್ಯರನ್ನಾಗಿ ಮಾಡುವವರಿಗೆ ಅದು ಯಾವ ಪಾಠವನ್ನು ಕಲಿಸುತ್ತದೆ?
10 ಪೌಲನು ಕೊರಿಂಥದಲ್ಲಿ ಹಾಕಿದಂತಹ ಅಸ್ತಿವಾರದ ಮೇಲೆ ಕಟ್ಟುತ್ತಿದ್ದ ಕೆಲವರು, ಒಳ್ಳೆಯ ಕೆಲಸವನ್ನು ಮಾಡುತ್ತಿರಲಿಲ್ಲವೆಂದು ತೋರುತ್ತಿತ್ತು. ಸಮಸ್ಯೆಯೇನೆಂಬುದನ್ನು ತೋರಿಸಲು, ಪೌಲನು ಎರಡು ವಿಧಗಳ ಕಟ್ಟುವ ಸಾಮಗ್ರಿಗಳನ್ನು ಹೋಲಿಸುತ್ತಾನೆ: ಒಂದು ಬದಿಯಲ್ಲಿ ಚಿನ್ನ, ಬೆಳ್ಳಿ, ಮತ್ತು ರತ್ನಗಳು; ಇನ್ನೊಂದು ಬದಿ ಕಟ್ಟಿಗೆ, ಹುಲ್ಲು, ಮತ್ತು ಆಪು. ಒಂದು ಕಟ್ಟಡವನ್ನು ಉತ್ತಮವಾದ, ಬಾಳಿಕೆಬರುವಂತಹ, ಅಗ್ನಿನಿರೋಧಕ ಸಾಮಗ್ರಿಗಳೊಂದಿಗೆ ಕಟ್ಟಬಹುದು; ಅಥವಾ ತಾತ್ಕಾಲಿಕ ಮತ್ತು ಭಸ್ಮವಾಗುವಂತಹ ಸಾಮಗ್ರಿಗಳನ್ನು ಉಪಯೋಗಿಸುತ್ತಾ ಒಂದು ಕಟ್ಟಡವನ್ನು ತರಾತುರಿಯಿಂದ ಕಟ್ಟಬಹುದು. ಕೊರಿಂಥದಂತಹ ದೊಡ್ಡ ನಗರದಲ್ಲಿ, ಎರಡೂ ರೀತಿಯ ಕಟ್ಟಡಗಳು ಇದ್ದವೆಂಬುದು ನಿಸ್ಸಂದೇಹ. ಬೃಹತ್ಗಾತ್ರದ, ದುಬಾರಿ ಕಲ್ಲುಗಳಿಂದ, ಕಟ್ಟಲ್ಪಟ್ಟ ದೊಡ್ಡ ದೊಡ್ಡ ದೇವಾಲಯಗಳು ಇದ್ದವು. ಆ ದೇವಾಲಯಗಳು ಪ್ರಾಯಶಃ ಕೆಲವು ಭಾಗಗಳಲ್ಲಿ ಚಿನ್ನ ಮತ್ತು ಬೆಳ್ಳಿಯಿಂದb ಲೇಪಿಸಲ್ಪಟ್ಟಿದ್ದವು ಅಥವಾ ಅಲಂಕರಿಸಲ್ಪಟ್ಟವು. ಈ ಬಾಳಿಕೆಬರುವಂತಹ ಕಟ್ಟಡಗಳು, ಒರಟಾದ ಕಟ್ಟಿಗೆಗಳಿಂದ ಕಟ್ಟಲ್ಪಟ್ಟ ಮತ್ತು ಹುಲ್ಲಿನ ಛಾವಣಿಗಳಿದ್ದಂತಹ ಹತ್ತಿರದ ಗುಡಿಸಿಲುಗಳು, ಜೋಪಡಿಗಳು, ಮತ್ತು ಮಾರುಕಟ್ಟೆಯ ಅಂಗಡಿಗಳಿಗಿಂತ ಭವ್ಯವಾಗಿ ಕಾಣಿಸಿಕೊಳ್ಳುತ್ತಿದ್ದಿರಬಹುದು.
11 ಈ ಕಟ್ಟಡಗಳಿಗೆ ಬೆಂಕಿ ತಗಲಿದರೆ ಏನಾಗುತ್ತಿತ್ತು? ಇದಕ್ಕೆ ಉತ್ತರವು ನಮ್ಮ ದಿನದಲ್ಲಿ ಎಷು ಸ್ಪಷ್ಟವಾಗಿದೆಯೊ, ಪೌಲನ ದಿನದಲ್ಲೂ ಅಷ್ಟೇ ಸ್ಪಷ್ಟವಾಗಿತ್ತು. ವಾಸ್ತವದಲ್ಲಿ, ಹಿಂದೆ ಸಾ.ಶ.ಪೂ. 146ರಲ್ಲಿ ಕೊರಿಂಥ ನಗರವು ಜಯಿಸಲ್ಪಟ್ಟು, ರೋಮನ್ ಸೇನಾಪತಿಯಾದ ಮಮಿಯಸ್ ಅದಕ್ಕೆ ಬೆಂಕಿಹಚ್ಚಿದಾಗ, ಕಟ್ಟಿಗೆ, ಹುಲ್ಲು ಅಥವಾ ಆಪುವಿನ ಅನೇಕ ಕಟ್ಟಡಗಳು ಖಂಡಿತವಾಗಿಯೂ ಸಂಪೂರ್ಣವಾಗಿ ನಾಶಗೊಳಿಸಲ್ಪಟ್ಟವು. ಕಲ್ಲುಗಳಿಂದ ಕಟ್ಟಲ್ಪಟ್ಟ, ಚಿನ್ನ ಬೆಳ್ಳಿಯಿಂದ ಅಲಂಕರಿಸಲ್ಪಟ್ಟ ಭದ್ರವಾದ ಕಟ್ಟಡಗಳಿಗೇನಾಯಿತು? ನಿಸ್ಸಂದೇಹವಾಗಿ, ಇವು ಪಾರಾದವು. ಕೊರಿಂಥದಲ್ಲಿನ ಪೌಲನ ವಿದ್ಯಾರ್ಥಿಗಳು ದಿನಾಲೂ ಇಂತಹ ಕಟ್ಟಡಗಳನ್ನು ದಾಟಿಹೋಗುತ್ತಿದ್ದಿರಬಹುದು. ಇವು, ತುಂಬ ಸಮಯದ ಹಿಂದೆ, ತಮಗಿಂತ ಕಡಿಮೆ ಬಾಳಿಕೆಬರುವ ನೆರೆಯವರನ್ನು ನೆಲಸಮಗೊಳಿಸಿದಂತಹ ವಿಪತ್ತುಗಳನ್ನು ಪಾರಾಗಿ ಉಳಿದಂತಹ ಭವ್ಯ ಕಲ್ಲಿನ ಕಟ್ಟಡಗಳಾಗಿದ್ದವು. ಪೌಲನು ತನ್ನ ಅಭಿಪ್ರಾಯವನ್ನು ಎಷ್ಟು ಬಲವಾಗಿ ಒತ್ತಿಹೇಳಿದನು! ಕಲಿಸುತ್ತಿರುವಾಗ, ನಾವು ನಮ್ಮನ್ನು ಕಟ್ಟುವವರೋಪಾದಿ ಪರಿಗಣಿಸಬೇಕು. ಸಾಧ್ಯವಿರುವಷ್ಟು ಅತ್ಯುತ್ತಮವಾದ, ಅತಿ ಹೆಚ್ಚು ಬಾಳಿಕೆಬರುವಂತಹ ಸಾಮಗ್ರಿಗಳನ್ನು ನಾವು ಉಪಯೋಗಿಸಲು ಬಯಸುತ್ತೇವೆ. ಹೀಗೆ ಮಾಡುವ ಮೂಲಕ ನಮ್ಮ ಕೆಲಸವು ಬಹು ಕಾಲ ಬಾಳುವ ಸಂಭವವು ಹೆಚ್ಚು. ಆ ಬಾಳಿಕೆಬರುವ ಸಾಮಗ್ರಿಗಳು ಯಾವವು, ಮತ್ತು ಅವುಗಳನ್ನು ಉಪಯೋಗಿಸುವುದು ಏಕೆ ಅತ್ಯಾವಶ್ಯಕ?
ನಿಮ್ಮ ಕೆಲಸವು ಬೆಂಕಿಯನ್ನು ಎದುರಿಸಿ ನಿಲ್ಲುವುದೊ?
12. ಕೊರಿಂಥದ ಕೆಲವು ಕ್ರೈಸ್ತರು ಯಾವ ವಿಧಗಳಲ್ಲಿ ಕಟ್ಟುವ ಕೆಲಸವನ್ನು ಅಸಡ್ಡೆಯಿಂದ ಮಾಡುತ್ತಿದ್ದರು?
12 ಕೊರಿಂಥದ ಕೆಲವು ಕ್ರೈಸ್ತರು, ಚೆನ್ನಾಗಿ ಕಟ್ಟುತ್ತಿರಲಿಲ್ಲವೆಂದು ಪೌಲನಿಗನಿಸಿತು. ದೋಷವೇನಾಗಿತ್ತು? ಪೂರ್ವಾಪರವು ತೋರಿಸುವಂತೆ, ಸಭೆಯ ಐಕ್ಯಕ್ಕೆ ಅಪಾಯವಾಗುತ್ತಿದ್ದರೂ, ಮಾನವ ವ್ಯಕ್ತಿತ್ವಗಳನ್ನು ಶ್ಲಾಘಿಸಲಾಗುತ್ತಿದ್ದುದರಿಂದ, ಸಭೆಯು ವಿಭಜಿತಗೊಂಡಿತ್ತು. ಕೆಲವರು “ನಾನು ಪೌಲನವನು” ಎಂದು ಹೇಳುತ್ತಿದ್ದಾಗ, ಇತರರು “ನಾನು ಅಪೊಲ್ಲೋಸನವನು” ಎಂದು ಹೇಳುತ್ತಿದ್ದರು. ಕೆಲವರು ತಾವು ತುಂಬ ಬುದ್ಧಿವಂತರೆಂದು ಎಣಿಸಿಕೊಳ್ಳುತ್ತಿದ್ದರೆಂದು ತೋರುತ್ತದೆ. ಇದರ ಫಲಿತಾಂಶವು, ಶಾರೀರಿಕ ಯೋಚನಾರೀತಿ, ಆತ್ಮಿಕ ಅಪಕ್ವತೆ, ಮತ್ತು ವ್ಯಾಪಕ “ಹೊಟ್ಟೆಕಿಚ್ಚು ಜಗಳಗಳ” ಒಂದು ವಾತಾವರಣ ಆಗಿತ್ತೆಂಬುದು ಆಶ್ಚರ್ಯಗೊಳಿಸುವ ಸಂಗತಿಯಲ್ಲ. (1 ಕೊರಿಂಥ 1:12; 3:1-4, 18) ಈ ಮನೋಭಾವಗಳು ಸಭೆಯಲ್ಲಿ ಮತ್ತು ಶುಶ್ರೂಷೆಯಲ್ಲಿ ಮಾಡಲ್ಪಟ್ಟ ಕಲಿಸುವಿಕೆಯಲ್ಲಿ ನಿಶ್ಚಯವಾಗಿಯೂ ಪ್ರತಿಬಿಂಬಿಸಲ್ಪಟ್ಟವು. ಇದರ ಪರಿಣಾಮವಾಗಿ, ಕಳಪೆ ಸಾಮಗ್ರಿಗಳೊಂದಿಗೆ ಕಟ್ಟಲ್ಪಟ್ಟಿರುವ ಕಟ್ಟಡದಂತೆ ಅವರ ಶಿಷ್ಯರನ್ನಾಗಿ ಮಾಡುವ ಕೆಲಸವು ಅಸಡ್ಡೆಯಿಂದ ಮಾಡಲ್ಪಟ್ಟಿತು. ಅದು “ಬೆಂಕಿ”ಯನ್ನು ಪಾರಾಗಲು ಸಾಧ್ಯವಿರಲಿಲ್ಲ. ಪೌಲನು ಯಾವ ಬೆಂಕಿಯ ಕುರಿತಾಗಿ ಮಾತಾಡುತ್ತಿದ್ದನು?
13. ಪೌಲನ ದೃಷ್ಟಾಂತದಲ್ಲಿನ ಬೆಂಕಿಯು ಏನನ್ನು ಪ್ರತಿನಿಧಿಸುತ್ತದೆ, ಮತ್ತು ಎಲ್ಲ ಕ್ರೈಸ್ತರಿಗೆ ಯಾವುದರ ಅರಿವಿರಬೇಕು?
13 ನಾವೆಲ್ಲರೂ ಜೀವನದಲ್ಲಿ ಎದುರಿಸುವ ಬೆಂಕಿಯು, ನಮ್ಮ ನಂಬಿಕೆಯ ಪರೀಕ್ಷೆಗಳಾಗಿವೆ. (ಯೋಹಾನ 15:20; ಯಾಕೋಬ 1:2, 3) ನಾವು ಯಾರಿಗೆ ಸತ್ಯವನ್ನು ಕಲಿಸುತ್ತೇವೊ ಅವರೆಲ್ಲರ ಪರೀಕ್ಷೆಯಾಗುವುದು ಖಂಡಿತ ಎಂದು ನಮಗಿಂದು ತಿಳಿಯುವ ಅಗತ್ಯವಿರುವಂತೆಯೇ, ಕೊರಿಂಥದಲ್ಲಿದ್ದ ಕ್ರೈಸ್ತರಿಗೂ ತಿಳಿಯುವ ಅಗತ್ಯವಿತ್ತು. ನಾವು ಸರಿಯಾಗಿ ಕಲಿಸದಿದ್ದರೆ, ದುಃಖಕರ ಫಲಿತಾಂಶಗಳಿರಬಹುದು. ಪೌಲನು ಎಚ್ಚರಿಸಿದ್ದು: “ಒಬ್ಬನು ಕಟ್ಟಿದ್ದು [“ಒಬ್ಬನ ಕೆಲಸವು,” NW] ಸುಟ್ಟುಹೋದರೆ ಅವನಿಗೆ ಸಂಬಳವು ನಷ್ಟವಾಗುವದು; ತಾನಾದರೋ ರಕ್ಷಣೆ ಹೊಂದುವನು, ಆದರೆ ಬೆಂಕಿಯೊಳಗೆ ತಪ್ಪಿಸಿಕೊಂಡವನ ಹಾಗಿರುವನು.”c—1 ಕೊರಿಂಥ 3:14, 15.
14. (ಎ) ಕ್ರೈಸ್ತ ಶಿಷ್ಯರನ್ನು ಮಾಡುವವರಿಗೆ ಹೇಗೆ “ನಷ್ಟ” ಆಗಬಹುದು, ಆದರೆ ಅವರು ಬೆಂಕಿಯ ಮೂಲಕವೊ ಎಂಬಂತೆ ರಕ್ಷಣೆಯನ್ನು ಹೇಗೆ ಪಡೆಯುವರು? (ಬಿ) ನಷ್ಟವನ್ನು ಅನುಭವಿಸುವ ಸಂಭವವನ್ನು ನಾವು ಹೇಗೆ ಕಡಿಮೆಗೊಳಿಸಬಲ್ಲೆವು?
14 ಇವು ಖಂಡಿತವಾಗಿಯೂ ಗಂಭೀರವಾದ ಮಾತುಗಳಾಗಿವೆ! ಒಬ್ಬ ವ್ಯಕ್ತಿಯು ಒಬ್ಬ ಶಿಷ್ಯನಾಗುವಂತೆ ಸಹಾಯಮಾಡಲು ಕಷ್ಟಪಟ್ಟು, ತದನಂತರ ಆ ವ್ಯಕ್ತಿಯು ಪ್ರಲೋಭನೆ ಅಥವಾ ಹಿಂಸೆಗೆ ಬಲಿಯಾಗಿ, ಕೊನೆಯಲ್ಲಿ ಸತ್ಯದ ಮಾರ್ಗವನ್ನು ಬಿಟ್ಟುಹೋಗುವುದನ್ನು ನೋಡುವುದು ತುಂಬ ವೇದನಾಮಯ ಆಗಿರಸಾಧ್ಯವಿದೆ. ಅಂತಹ ಸಂದರ್ಭಗಳಲ್ಲಿ ನಾವು ನಷ್ಟವನ್ನು ಅನುಭವಿಸಬೇಕೆಂದು ಹೇಳುವಾಗ, ಪೌಲನು ಇದನ್ನು ಅಂಗೀಕರಿಸುತ್ತಾನೆ. ಆ ಅನುಭವವು ಎಷ್ಟು ವೇದನಾಮಯ ಆಗಿರಬಹುದೆಂದರೆ, ನಮ್ಮ ರಕ್ಷಣೆಯು, “ಬೆಂಕಿಯೊಳಗೆ ತಪ್ಪಿಸಿಕೊಂಡ” ಹಾಗೆ ಎಂದು ವರ್ಣಿಸಲ್ಪಟ್ಟಿದೆ. ಬೆಂಕಿಯಲ್ಲಿ ಎಲ್ಲವನ್ನು ಕಳೆದುಕೊಂಡು, ತುಂಬ ಕಷ್ಟದಿಂದ ಪಾರಾದ ಒಬ್ಬ ಮನುಷ್ಯನಂತೆಯೇ. ನಮ್ಮ ಕಡೆಯಿಂದ, ನಾವು ನಷ್ಟದ ಅಪಾಯವನ್ನು ಹೇಗೆ ಕಡಿಮೆಗೊಳಿಸಸಾಧ್ಯವಿದೆ? ಬಾಳಿಕೆಬರುವಂತಹ ಸಾಮಗ್ರಿಗಳೊಂದಿಗೆ ಕಟ್ಟಿರಿ! ನಮ್ಮ ವಿದ್ಯಾರ್ಥಿಗಳ ಹೃದಯಗಳನ್ನು ಸ್ಪರ್ಶಿಸುವಂತಹ ರೀತಿಯಲ್ಲಿ ಕಲಿಸುತ್ತಾ, ವಿವೇಕ, ವಿವೇಚನಾಶಕ್ತಿ, ಯೆಹೋವನ ಭಯ, ಮತ್ತು ಪ್ರಾಮಾಣಿಕ ನಂಬಿಕೆಯಂತಹ ಅಮೂಲ್ಯ ಕ್ರೈಸ್ತ ಗುಣಗಳನ್ನು ಬೆಲೆಯುಳ್ಳದ್ದೆಂದು ಎಣಿಸುವಂತೆ ನಾವು ಪ್ರಚೋದಿಸುವುದಾದರೆ, ಆಗ ಬಾಳಿಕೆಬರುವಂತಹ, ಅಗ್ನಿನಿರೋಧಕ ಸಾಮಗ್ರಿಗಳೊಂದಿಗೆ ಕಟ್ಟುತ್ತಿದ್ದೇವೆ. (ಕೀರ್ತನೆ 19:9, 10; ಜ್ಞಾನೋಕ್ತಿ 3:13-15; 1 ಪೇತ್ರ 1:6, 7) ಈ ಗುಣಗಳನ್ನು ವಿಕಸಿಸಿಕೊಳ್ಳುವವರು ದೇವರ ಚಿತ್ತವನ್ನು ಮಾಡುತ್ತಾ ಮುಂದುವರಿಯುವರು; ಸದಾಕಾಲವೂ ಜೀವಿಸುವ ದೃಢವಾದ ನಿರೀಕ್ಷೆ ಅವರಿಗಿದೆ. (1 ಯೋಹಾನ 2:17) ಪೌಲನ ದೃಷ್ಟಾಂತವನ್ನು ನಾವು ಹೇಗೆ ಕಾರ್ಯರೂಪಕ್ಕೆ ಹಾಕಬಲ್ಲೆವು? ಕೆಲವು ಉದಾಹರಣೆಗಳನ್ನು ಪರಿಗಣಿಸಿರಿ.
15. ನಮ್ಮ ಬೈಬಲ್ ವಿದ್ಯಾರ್ಥಿಗಳ ಸಂಬಂಧದಲ್ಲಿ ನಾವು ಕಟ್ಟುವ ಕೆಲಸವನ್ನು ಅಸಡ್ಡೆಯಿಂದ ಮಾಡುತ್ತಿಲ್ಲವೆಂಬುದನ್ನು ನಾವು ಯಾವ ರೀತಿಗಳಲ್ಲಿ ಖಚಿತಪಡಿಸಿಕೊಳ್ಳಬಹುದು?
15 ಬೈಬಲ್ ವಿದ್ಯಾರ್ಥಿಗಳಿಗೆ ಕಲಿಸುವಾಗ, ನಾವು ಯೆಹೋವ ದೇವರಿಗಿಂತ ಮನುಷ್ಯರಿಗೆ ಹೆಚ್ಚು ಮಹತ್ವವನ್ನು ಎಂದೂ ಕೊಡಬಾರದು. ಅವರು ನಮ್ಮನ್ನು ವಿವೇಕದ ಪ್ರಧಾನ ಮೂಲವಾಗಿ ಪರಿಗಣಿಸಬೇಕೆಂಬುದು ನಮ್ಮ ಗುರಿಯಲ್ಲ. ಅವರು ಯೆಹೋವ, ಆತನ ವಾಕ್ಯ ಮತ್ತು ಆತನ ಸಂಸ್ಥೆಯಿಂದ ಮಾರ್ಗದರ್ಶನವನ್ನು ಪಡೆದುಕೊಳ್ಳುವಂತೆ ನಾವು ಬಯಸುತ್ತೇವೆ. ಆ ಉದ್ದೇಶದಿಂದ, ಅವರ ಪ್ರಶ್ನೆಗಳಿಗೆ ಉತ್ತರದಲ್ಲಿ ನಾವು ನಮ್ಮ ಸ್ವಂತ ಅಭಿಪ್ರಾಯಗಳನ್ನು ಕೊಡುವುದಿಲ್ಲ. ಬದಲಾಗಿ, ಅವರು ಬೈಬಲನ್ನು ಮತ್ತು “ನಂಬಿಗಸ್ತನೂ ವಿವೇಕಿಯೂ ಅದ ಆಳು” ಒದಗಿಸಿರುವ ಪ್ರಕಾಶನಗಳನ್ನು ಉಪಯೋಗಿಸುತ್ತಾ ಉತ್ತರಗಳನ್ನು ಕಂಡುಹಿಡಿಯುವಂತೆ ನಾವು ಕಲಿಸುತ್ತೇವೆ. (ಮತ್ತಾಯ 24:45-47) ತದ್ರೀತಿಯ ಕಾರಣಗಳಿಗೋಸ್ಕರ, ನಾವು ನಮ್ಮ ಬೈಬಲ್ ವಿದ್ಯಾರ್ಥಿಗಳ ಒಡೆಯರೋ ಎಂಬಂತೆ ಇರದಿರಲು ಜಾಗರೂಕರಾಗಿರಬೇಕು. ಬೇರೆಯವರು ಅವರಲ್ಲಿ ಆಸಕ್ತಿಯನ್ನು ವ್ಯಕ್ತಪಡಿಸುವಾಗ ಅಸಮಾಧಾನಪಡುವ ಬದಲಿಗೆ, ನಮ್ಮ ವಿದ್ಯಾರ್ಥಿಗಳು ಸಭೆಯಲ್ಲಿ ಸಾಧ್ಯವಿರುವಷ್ಟು ಮಂದಿಯನ್ನು ತಿಳಿದುಕೊಳ್ಳಲು ಮತ್ತು ಗಣ್ಯಮಾಡಲು, ತಮ್ಮ ವಾತ್ಸಲ್ಯದಲ್ಲಿ “ವಿಶಾಲ”ರಾಗುವಂತೆ ನಾವು ಪ್ರೋತ್ಸಾಹಿಸಬೇಕು.—2 ಕೊರಿಂಥ 6:12, 13.
16. ಹಿರಿಯರು ಅಗ್ನಿನಿರೋಧಕ ಸಾಮಗ್ರಿಗಳೊಂದಿಗೆ ಹೇಗೆ ಕಟ್ಟಬಲ್ಲರು?
16 ಕ್ರೈಸ್ತ ಹಿರಿಯರು ಸಹ, ಶಿಷ್ಯರನ್ನು ಕಟ್ಟುವುದರಲ್ಲಿ ಒಂದು ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಸಭೆಯ ಮುಂದೆ ಕಲಿಸುವಾಗ, ಅವರು ಅಗ್ನಿನಿರೋಧಕ ಸಾಮಗ್ರಿಗಳಿಂದ ಕಟ್ಟಲು ಪ್ರಯತ್ನಿಸುತ್ತಾರೆ. ಅವರ ಕಲಿಸುವ ಸಾಮರ್ಥ್ಯ, ಅನುಭವ ಮತ್ತು ವ್ಯಕ್ತಿತ್ವವು ತುಂಬ ಭಿನ್ನವಾಗಿರಬಹುದು. ಆದರೆ ತಮ್ಮ ಹಿಂದೆ ಹಿಂಬಾಲಕರನ್ನು ಸೆಳೆಯಲು ಅವರು ಈ ಭಿನ್ನತೆಗಳನ್ನು ದುರುಪಯೋಗಿಸುವುದಿಲ್ಲ. (ಅ. ಕೃತ್ಯಗಳು 20:29, 30ನ್ನು ಹೋಲಿಸಿರಿ.) ಕೊರಿಂಥದಲ್ಲಿದ್ದ ಕೆಲವರು, “ನಾನು ಪೌಲನವನು” ಅಥವಾ “ನಾನು ಅಪೊಲ್ಲೋಸನವನು” ಎಂದು ಏಕೆ ಹೇಳುತ್ತಿದ್ದರೆಂದು ನಮಗೆ ಸರಿಯಾಗಿ ತಿಳಿದಿಲ್ಲ. ಆದರೆ ನಂಬಿಗಸ್ತ ಹಿರಿಯರು ಆ ರೀತಿಯ ಯಾವುದೇ ವಿಭಾಜಕ ಯೋಚನಾರೀತಿಯನ್ನು ಉತ್ತೇಜಿಸಲಿಲ್ಲವೆಂದು ನಾವು ನಿಶ್ಚಿತರಾಗಿರಬಲ್ಲೆವು. ಪೌಲನು ಅಂತಹ ಅಭಿಪ್ರಾಯಗಳಿಂದ ಸಂತೋಷಪಡಲಿಲ್ಲ, ಬದಲಿಗೆ ಅವನು ಅವುಗಳನ್ನು ಖಡಾಖಂಡಿತವಾಗಿ ಖಂಡಿಸಿದನು. (1 ಕೊರಿಂಥ 3:5-7) ತದ್ರೀತಿಯಲ್ಲಿ ಇಂದು, ಹಿರಿಯರು ತಾವು “ದೇವರ ಮಂದೆಯನ್ನು” ಪರಾಮರಿಸುತ್ತಿದ್ದೇವೆಂಬುದನ್ನು ಮನಸ್ಸಿನಲ್ಲಿಡುತ್ತಾರೆ. (1 ಪೇತ್ರ 5:2, ಓರೆಅಕ್ಷರಗಳು ನಮ್ಮವು.) ಅದು ಯಾವುದೇ ಮನುಷ್ಯನ ಮಂದೆಯಲ್ಲ. ಆದುದರಿಂದ ಒಬ್ಬ ಪುರುಷನು, ಮಂದೆಯ ಮೇಲಾಗಲಿ, ಹಿರಿಯರ ಮಂಡಲಿಯ ಮೇಲಾಗಲಿ, ಆಧಿಪತ್ಯನಡಿಸುವ ಯಾವುದೇ ಪ್ರವೃತ್ತಿಯ ವಿರುದ್ಧ ದೃಢರಾಗಿ ನಿಲ್ಲುತ್ತಾರೆ. ಸಭೆಗೆ ಸೇವೆಸಲ್ಲಿಸುವ, ಹೃದಯಗಳನ್ನು ತಲಪುವ ಮತ್ತು ಯೆಹೋವನನ್ನು ಪೂರ್ಣಪ್ರಾಣದಿಂದ ಸೇವೆಸಲ್ಲಿಸಲು ಕುರಿಗಳಿಗೆ ಸಹಾಯಮಾಡುವ ದೀನಬಯಕೆಯಿಂದ ಪ್ರಚೋದಿಸಲ್ಪಡುವಷ್ಟು ಸಮಯ, ಹಿರಿಯರು ಅಗ್ನಿನಿರೋಧಕ ಸಾಮಗ್ರಿಗಳೊಂದಿಗೆ ಕಟ್ಟುತ್ತಾರೆ.
17. ಕ್ರೈಸ್ತ ಹೆತ್ತವರು ಅಗ್ನಿನಿರೋಧಕ ಸಾಮಗ್ರಿಗಳೊಂದಿಗೆ ಕಟ್ಟಲು ಹೇಗೆ ಪ್ರಯತ್ನಿಸುತ್ತಾರೆ?
17 ಕ್ರೈಸ್ತ ಹೆತ್ತವರು ಸಹ ಈ ವಿಷಯದ ಕುರಿತು ತುಂಬ ಚಿಂತಿತರಾಗಿದ್ದಾರೆ. ತಮ್ಮ ಮಕ್ಕಳು ಸದಾಕಾಲ ಜೀವಿಸುವಂತೆ ಅವರು ಬಹಳ ಹಾತೊರೆಯುತ್ತಾರೆ. ಆದುದರಿಂದಲೇ ಅವರು ತಮ್ಮ ಮಕ್ಕಳ ಹೃದಯಗಳಲ್ಲಿ ದೇವರ ವಾಕ್ಯದ ತತ್ವಗಳನ್ನು “ಬೇರೂರಿಸಲು” ಇಷ್ಟೊಂದು ಕಷ್ಟಪಡುತ್ತಾರೆ. (ಧರ್ಮೋಪದೇಶಕಾಂಡ 6:6, 7) ಸತ್ಯವು, ನಿಯಮಗಳ ಒಂದು ಕಟ್ಟು ಅಥವಾ ವಾಸ್ತವಾಂಶಗಳ ಮಾಲೆ ಮಾತ್ರವಲ್ಲ, ಒಂದು ತೃಪ್ತಿಕರ, ಪ್ರತಿಫಲದಾಯಕ ಮತ್ತು ಸಂತೋಷದ ಜೀವನ ಮಾರ್ಗವಾಗಿದೆ ಎಂಬುದನ್ನು ತಮ್ಮ ಮಕ್ಕಳು ತಿಳಿದುಕೊಳ್ಳುವಂತೆ ಅವರು ಬಯಸುತ್ತಾರೆ. (1 ತಿಮೊಥೆಯ 1:11) ತಮ್ಮ ಮಕ್ಕಳನ್ನು ಕ್ರಿಸ್ತನ ನಂಬಿಗಸ್ತ ಶಿಷ್ಯರನ್ನಾಗಿ ಕಟ್ಟಲಿಕ್ಕಾಗಿ, ಪ್ರೀತಿಪರ ಹೆತ್ತವರು ಅಗ್ನಿನಿರೋಧಕ ಸಾಮಗ್ರಿಗಳನ್ನು ಉಪಯೋಗಿಸಲು ಪ್ರಯತ್ನಿಸುತ್ತಾರೆ. ಅವರು ತಮ್ಮ ಮಕ್ಕಳೊಂದಿಗೆ ತಾಳ್ಮೆಯಿಂದ ಕೆಲಸಮಾಡುತ್ತಾರೆ, ಯೆಹೋವನು ದ್ವೇಷಿಸುವಂತಹ ಗುಣಗಳನ್ನು ತೆಗೆದುಹಾಕಲು ಮತ್ತು ಆತನು ಪ್ರೀತಿಸುವಂತಹ ಗುಣಗಳನ್ನು ಬೆಳೆಸಿಕೊಳ್ಳುವಂತೆ ಅವರಿಗೆ ಸಹಾಯಮಾಡುತ್ತಾರೆ.—ಗಲಾತ್ಯ 5:22, 23.
ಯಾರು ಜವಾಬ್ದಾರರು?
18. ಒಬ್ಬ ಶಿಷ್ಯನು ಸ್ವಸ್ಥಕರ ಬೋಧನೆಯನ್ನು ತಿರಸ್ಕರಿಸುವಾಗ, ಅದು ಅವನಿಗೆ ಕಲಿಸಿ, ತರಬೇತಿಗೊಳಿಸಲು ಪ್ರಯತ್ನಿಸುತ್ತಿರುವವನ ತಪ್ಪಾಗಿರುವುದಿಲ್ಲ ಏಕೆ?
18 ಈ ಚರ್ಚೆಯು ಒಂದು ಪ್ರಾಮುಖ್ಯ ಪ್ರಶ್ನೆಯನ್ನು ಎಬ್ಬಿಸುತ್ತದೆ. ನಾವು ಸಹಾಯಮಾಡಲು ಪ್ರಯತ್ನಿಸುವ ಒಬ್ಬ ವ್ಯಕ್ತಿಯು, ಸತ್ಯವನ್ನು ಬಿಟ್ಟುಹೋಗುವುದಾದರೆ, ನಾವು ಶಿಕ್ಷಕರೋಪಾದಿ ತಪ್ಪಿಬಿದ್ದಿದ್ದೇವೆ, ಕಳಪೆ ಸಾಮಗ್ರಿಗಳೊಂದಿಗೆ ಕಟ್ಟಿದ್ದೇವೆ ಎಂಬುದನ್ನು ಅದು ಅರ್ಥೈಸುತ್ತದೊ? ಹಾಗೇನಿಲ್ಲ. ಶಿಷ್ಯರನ್ನು ಕಟ್ಟುವ ಕೆಲಸದಲ್ಲಿ ಪಾಲ್ಗೊಳ್ಳುವುದು, ದೊಡ್ಡ ಜವಾಬ್ದಾರಿಯ ಕೆಲಸವೆಂದು ಪೌಲನ ಮಾತುಗಳು ನಿಶ್ಚಯವಾಗಿ ನಮಗೆ ಜ್ಞಾಪಕಹುಟ್ಟಿಸುತ್ತವೆ. ಚೆನ್ನಾಗಿ ಕಟ್ಟಲಿಕ್ಕಾಗಿ ನಮ್ಮಿಂದ ಸಾಧ್ಯವಿರುವುದೆಲ್ಲವನ್ನು ಮಾಡಲು ನಾವು ಬಯಸುತ್ತೇವೆ. ಆದರೆ ನಾವು ಸಹಾಯಮಾಡಲು ಪ್ರಯತ್ನಿಸಿದವರು ಸತ್ಯದಿಂದ ದೂರ ಸರಿಯುವಾಗ ನಾವು ಇಡೀ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾ, ಅಪರಾಧಿಭಾವನ್ನು ಹೊತ್ತುಕೊಳ್ಳುವಂತೆ ದೇವರ ವಾಕ್ಯವು ಹೇಳುವುದಿಲ್ಲ. ಕಟ್ಟುವವರೋಪಾದಿ ನಮ್ಮ ಸ್ವಂತ ಪಾತ್ರವಲ್ಲದೆ, ಬೇರೆ ಅಂಶಗಳು ಕೂಡ ಒಳಗೂಡಿವೆ. ಉದಾಹರಣೆಗಾಗಿ, ತನ್ನ ಕಟ್ಟುವ ಕೆಲಸವನ್ನು ಚೆನ್ನಾಗಿ ಮಾಡಿರದ ಶಿಕ್ಷಕನ ಕುರಿತಾಗಿಯೂ ಪೌಲನು ಹೇಳುವ ವಿಷಯವನ್ನು ಗಮನಿಸಿರಿ: “ಅವನಿಗೆ ಸಂಬಳವು ನಷ್ಟವಾಗುವದು; ತಾನಾದರೋ ರಕ್ಷಣೆ ಹೊಂದುವನು.” (1 ಕೊರಿಂಥ 3:15) ಈ ಶಿಕ್ಷಕನು ಕಟ್ಟಕಡೆಗೆ ರಕ್ಷಣೆಯನ್ನು ಪಡೆಯುವುದಾದರೂ, ಅವನು ತನ್ನ ವಿದ್ಯಾರ್ಥಿಯಲ್ಲಿ ಕಟ್ಟಲು ಪ್ರಯತ್ನಿಸಿದ ಕ್ರೈಸ್ತ ವ್ಯಕ್ತಿತ್ವವು ಒಂದು ಅಗ್ನಿಸದೃಶ ಪರೀಕ್ಷೆಯಲ್ಲಿ ‘ಸುಟ್ಟುಹೋಗು’ವಲ್ಲಿ ನಾವು ಯಾವ ತೀರ್ಮಾನಕ್ಕೆ ಬರಬೇಕು? ಒಬ್ಬ ವಿದ್ಯಾರ್ಥಿಯು ಒಂದು ನಂಬಿಗಸ್ತ ಮಾರ್ಗಕ್ರಮದಲ್ಲಿ ಮುಂದುವರಿಯಲಿ ಇಲ್ಲವೇ ಮುಂದುವರಿಯದಿರಲಿ, ಅವನು ತನ್ನ ನಿರ್ಣಯಗಳಿಗೆ ಯೆಹೋವನ ಮುಂದೆ ಸ್ವತಃ ಜವಾಬ್ದಾರನಾಗಿದ್ದಾನೆ.
19. ಮುಂದಿನ ಲೇಖನದಲ್ಲಿ ನಾವೇನನ್ನು ಪರಿಗಣಿಸುವೆವು?
19 ವೈಯಕ್ತಿಕ, ಅಥವಾ ವ್ಯಕ್ತಿಗತ ಜವಾಬ್ದಾರಿಯು ತುಂಬ ಪ್ರಾಮುಖ್ಯ ವಿಷಯವಾಗಿದೆ. ಅದು ನಮ್ಮಲ್ಲಿ ಪ್ರತಿಯೊಬ್ಬರನ್ನು ಪ್ರಭಾವಿಸುತ್ತದೆ. ಬೈಬಲು ನಿರ್ದಿಷ್ಟವಾಗಿ ಈ ವಿಷಯದ ಕುರಿತು ಏನನ್ನು ಕಲಿಸುತ್ತದೆ? ನಮ್ಮ ಮುಂದಿನ ಲೇಖನವು ಇದನ್ನು ಪರಿಗಣಿಸುವುದು.
[ಅಧ್ಯಯನ ಪ್ರಶ್ನೆಗಳು]
a ‘ಭೂಮಿಯ ಅಸ್ತಿವಾರ’ವು, ಭೂಮಿಯನ್ನು ಮತ್ತು ಬೇರೆಲ್ಲ ಆಕಾಶಸ್ಥ ಕಾಯಗಳನ್ನು ಸ್ಥಿರವಾಗಿ ನೆಲೆಗೊಳಿಸಿರುವ ಭೌತಿಕ ಶಕ್ತಿಗಳಿಗೆ ಸೂಚಿಸುತ್ತಿರಬಹುದು. ಇದಕ್ಕೆ ಕೂಡಿಸಿ, ಸ್ವತಃ ಭೂಮಿಯೇ, ಎಂದೂ ‘ಕದಲದ’ ಅಥವಾ ನಾಶವಾಗದಂತಹ ರೀತಿಯಲ್ಲಿ ರಚಿಸಲ್ಪಟ್ಟಿದೆ.—ಕೀರ್ತನೆ 104:5.
b ಪೌಲನು ತಿಳಿಸಿದಂತಹ “ರತ್ನಗಳು,” ವಜ್ರ ಮತ್ತು ಪದ್ಮರಾಗಗಳಂತಹ, ಮಾಣಿಕ್ಯಗಳಾಗಿರಲಿಕ್ಕಿಲ್ಲ. ಅವು, ಅಮೃತಶಿಲೆ, ಅಲಬಾಸ್ಟರ್ ಅಥವಾ ಗ್ರಾನೈಟ್ ಕಲ್ಲುಗಳಂತಹ ದುಬಾರಿಯಾದ ಕಟ್ಟಡ ಕಲ್ಲುಗಳಾಗಿದ್ದಿರಬಹುದು.
c ಪೌಲನು ಕಟ್ಟುವವನ ರಕ್ಷಣೆಯನ್ನು ಅಲ್ಲ, ಬದಲಾಗಿ ಕಟ್ಟುವವನ “ಕೆಲಸ”ದ ರಕ್ಷಣೆಯನ್ನು ಸಂದೇಹಿಸುತ್ತಿದ್ದನು. ದ ನ್ಯೂ ಇಂಗ್ಲಿಷ್ ಬೈಬಲ್ ಈ ವಚನವನ್ನು ಹೀಗೆ ಭಾಷಾಂತರಿಸುತ್ತದೆ: “ಒಬ್ಬ ಮನುಷ್ಯನ ಕಟ್ಟಡವು ನಿಲ್ಲುವಲ್ಲಿ, ಅವನಿಗೆ ಬಹುಮಾನ ಸಿಗುವುದು; ಅದು ಸುಟ್ಟುಹೋಗುವಲ್ಲಿ, ಅವನು ನಷ್ಟವನ್ನು ಸಹಿಸಬೇಕಾಗುವುದು, ಆದರೆ ಅವನು ಒಂದು ಬೆಂಕಿಯಿಂದ ಪಾರಾದಂತೆಯೇ ತನ್ನ ಜೀವದೊಂದಿಗೆ ಪಾರಾಗುವನು.”
ನೀವು ಹೇಗೆ ಉತ್ತರಿಸುವಿರಿ?
◻ ಒಬ್ಬ ನಿಜ ಕ್ರೈಸ್ತನಿಗೆ ಯಾವುದು “ಅಸ್ತಿವಾರ”ವಾಗಿದೆ, ಮತ್ತು ಅದನ್ನು ಹೇಗೆ ಹಾಕಲಾಗುತ್ತದೆ?
◻ ವಿಭಿನ್ನ ಪ್ರಕಾರಗಳ ಕಟ್ಟುವ ಸಾಮಗ್ರಿಗಳಿಂದ ನಾವೇನನ್ನು ಕಲಿತುಕೊಳ್ಳಬಲ್ಲೆವು?
◻ “ಬೆಂಕಿ” ಏನನ್ನು ಪ್ರತಿನಿಧಿಸುತ್ತದೆ, ಮತ್ತು ಅದು ಕೆಲವರಿಗೆ “ನಷ್ಟ”ವನ್ನು ಹೇಗೆ ಉಂಟುಮಾಡಬಲ್ಲದು?
◻ ಬೈಬಲ್ ಶಿಕ್ಷಕರು, ಹಿರಿಯರು ಮತ್ತು ಹೆತ್ತವರು ಅಗ್ನಿನಿರೋಧಕ ಸಾಮಗ್ರಿಗಳೊಂದಿಗೆ ಹೇಗೆ ಕಟ್ಟಸಾಧ್ಯವಿದೆ?
[ಪುಟ 9 ರಲ್ಲಿರುವ ಚಿತ್ರ]
ಅನೇಕ ಪ್ರಾಚೀನ ನಗರಗಳಲ್ಲಿ, ಅಗ್ನಿನಿರೋಧಕ ಕಲ್ಲಿನ ಕಟ್ಟಡಗಳು, ದುರ್ಬಲವಾದ ಕಟ್ಟಡಗಳೊಂದಿಗೆ ಇರುತ್ತಿದ್ದವು
*Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.