ಅವರು ಯೆಹೋವನ ಚಿತ್ತವನ್ನು ಮಾಡಿದರು
ಯೇಸು ಮಕ್ಕಳೊಂದಿಗೆ ಸಮಯವನ್ನು ಕಳೆದನು
ಯೇಸುವಿನ ಮೂರೂವರೆ ವರ್ಷದ ಶುಶ್ರೂಷೆಯು ಅಂತ್ಯವಾಗುತ್ತಾ ಇತ್ತು. ಸ್ವಲ್ಪ ಸಮಯದೊಳಗೆ ಅವನು ಯೆರೂಸಲೇಮನ್ನು ಪ್ರವೇಶಿಸಿ, ಒಂದು ಯಾತನಾಮಯ ಮರಣವನ್ನು ಅನುಭವಿಸಲಿದ್ದನು. ತನಗೆ ಮುಂದೇನು ಕಾದಿದೆಯೆಂಬುದು ಅವನಿಗೆ ಚೆನ್ನಾಗಿ ತಿಳಿದಿತ್ತು. ಯಾಕಂದರೆ ಅವನು ತನ್ನ ಶಿಷ್ಯರಿಗೆ ಹೀಗೆ ಹೇಳಿದ್ದನು: “ಮನುಷ್ಯಕುಮಾರನು ಜನರ ಕೈಗೆ ಒಪ್ಪಿಸಲ್ಪಡುತ್ತಾನೆ; ಅವರು ಅವನನ್ನು ಕೊಲ್ಲುವರು.”—ಮಾರ್ಕ 9:31.
ನಿಶ್ಚಯವಾಗಿಯೂ, ಯೇಸು ತನ್ನ ಜೀವಿತದ ಉಳಿದಿದ್ದ ಪ್ರತಿಯೊಂದು ದಿನ, ಪ್ರತಿ ತಾಸು, ಪ್ರತಿ ಕ್ಷಣವನ್ನು ಸದುಪಯೋಗಿಸಲು ಬಯಸಿದ್ದಿರಬೇಕು. ಅವನ ಶಿಷ್ಯರಿಗೆ ಈಗಲೂ ಗಮನದ ಅಗತ್ಯವಿತ್ತು. ನಮ್ರತೆಯ ಅಗತ್ಯದ ವಿಷಯದಲ್ಲಿ ಮತ್ತು ಸದಾ ಅಸ್ತಿತ್ವದಲ್ಲಿರುವ, ಎಡವಿಬೀಳುವ ಅಪಾಯದ ಕುರಿತಾಗಿ ಬಲವಾದ ಬುದ್ಧಿವಾದವು ಅವರಿಗೆ ಈಗಲೂ ಅಗತ್ಯವಿದೆಯೆಂಬುದನ್ನು ಯೇಸು ಮನಗಂಡನು. (ಮಾರ್ಕ 9:35-37, 42-48) ಅವರಿಗೆ ವಿವಾಹ, ವಿವಾಹವಿಚ್ಛೇದನ ಮತ್ತು ಅವಿವಾಹಿತತೆಯ ಕುರಿತಾದ ಉಪದೇಶವೂ ಅಗತ್ಯವಿತ್ತು. (ಮತ್ತಾಯ 19:3-12) ತಾನು ಬೇಗನೆ ಸಾಯಲಿದ್ದೇನೆಂಬುದನ್ನು ತಿಳಿದವನಾಗಿ, ಯೇಸು ತನ್ನ ಶಿಷ್ಯರೊಂದಿಗೆ ಸಂಕ್ಷಿಪ್ತವಾಗಿ ಮತ್ತು ತುರ್ತು ಪ್ರಜ್ಞೆಯೊಂದಿಗೆ ಮಾತಾಡಿದ್ದಿರಬೇಕೆಂಬುದು ನಿಸ್ಸಂದೇಹ. ಅವನಿಗೆ ಸಮಯ ತುಂಬ ಪ್ರಾಮುಖ್ಯವಾದ ವಿಷಯವಾಗಿತ್ತು. ಮತ್ತು ಈ ವಾಸ್ತವಾಂಶವೇ, ಯೇಸು ಮುಂದೆ ಮಾಡಿದಂತಹ ಸಂಗತಿಯನ್ನು ಇನ್ನೂ ಹೆಚ್ಚು ಗಮನಾರ್ಹವನ್ನಾಗಿ ಮಾಡಿತು.
ಯೇಸು ಮಕ್ಕಳನ್ನು ಸ್ವಾಗತಿಸುತ್ತಾನೆ
ಬೈಬಲ್ ವೃತ್ತಾಂತವು ಹೇಳುವುದು: “ಬಳಿಕ ಕೆಲವರು ತಮ್ಮ ಚಿಕ್ಕ ಮಕ್ಕಳನ್ನು ಯೇಸುವಿನಿಂದ ಮುಟ್ಟಿಸಬೇಕೆಂದು ಆತನ ಬಳಿಗೆ” ತಂದರು. ಶಿಷ್ಯರು ಇದನ್ನು ನೋಡಿದಾಗ, ಅವರು ತತ್ಕ್ಷಣವೇ ತಮ್ಮ ಅಸಮ್ಮತಿಯನ್ನು ವ್ಯಕ್ತಪಡಿಸಿದರು. ಯೇಸು ತುಂಬ ಗಣ್ಯವ್ಯಕ್ತಿ, ಅಥವಾ ಮಕ್ಕಳ ಕುರಿತಾಗಿ ಚಿಂತಿಸಲು ಅವನಿಗೆ ಬಿಡುವಿಲ್ಲವೆಂದು ಅವರು ತರ್ಕಿಸಿರಬಹುದು. ಆದುದರಿಂದ, ಯೇಸು ಶಿಷ್ಯರೊಂದಿಗೆಯೇ ಕೋಪಗೊಂಡಾಗ, ಅವರಿಗಾದ ಆಶ್ಚರ್ಯವನ್ನು ಊಹಿಸಿಕೊಳ್ಳಿರಿ! “ಮಕ್ಕಳನ್ನು ನನ್ನ ಹತ್ತಿರಕ್ಕೆ ಬರಗೊಡಿಸಿರಿ; ಅವುಗಳಿಗೆ ಅಡ್ಡಿಮಾಡಬೇಡಿರಿ; ದೇವರ ರಾಜ್ಯವು ಇಂಥವರದೇ” ಎಂದು ಅವನು ಅವರಿಗೆ ಹೇಳಿದನು. ಅನಂತರ ಯೇಸು ಕೂಡಿಸಿ ಹೇಳಿದ್ದು: “ನಿಮಗೆ ಸತ್ಯವಾಗಿ ಹೇಳುತ್ತೇನೆ, ಯಾವನು ಶಿಶುಭಾವದಿಂದ ದೇವರ ರಾಜ್ಯವನ್ನು ಅಂಗೀಕರಿಸುವದಿಲ್ಲವೋ ಅವನು ಅದರಲ್ಲಿ ಸೇರುವದೇ ಇಲ್ಲ.”—ಮಾರ್ಕ 10:13-15.
ಮಕ್ಕಳಲ್ಲಿ ಯೇಸು ಶ್ಲಾಘನೀಯ ಗುಣಗಳನ್ನು ಕಂಡನು. ಅವರು ಸಾಮಾನ್ಯವಾಗಿ ಕುತೂಹಲಿಗಳು ಮತ್ತು ಭರವಸಾರ್ಹರೂ ಆಗಿರುತ್ತಾರೆ. ಅವರು ತಮ್ಮ ಹೆತ್ತವರ ಮಾತುಗಳನ್ನು ಕೇಳಿ, ಇತರ ಮಕ್ಕಳ ಮುಂದೆ ಹೆತ್ತವರ ಪರವಹಿಸಿ ಸಮರ್ಥಿಸುತ್ತಾರೆ ಸಹ. ಅವರ ಗ್ರಹಿಸುವ, ಕಲಿಯುವ ಸ್ವಭಾವವು, ದೇವರ ರಾಜ್ಯವನ್ನು ಪ್ರವೇಶಿಸಲು ಬಯಸುವವರೆಲ್ಲರೂ ಅನುಕರಿಸಲಿಕ್ಕಾಗಿ ಅರ್ಹವಾಗಿದೆ. ಯೇಸು ಹೇಳಿದಂತೆ, “ದೇವರ ರಾಜ್ಯವು ಇಂಥವರದೇ.”—ಮತ್ತಾಯ 18:1-5ನ್ನು ಹೋಲಿಸಿರಿ.
ಆದರೆ ಯೇಸು ಈ ಮಕ್ಕಳನ್ನು ಕೇವಲ ದೃಷ್ಟಾಂತಕ್ಕಾಗಿ ಉಪಯೋಗಿಸುತ್ತಿರಲಿಲ್ಲ. ಅವನಿಗೆ ಅವರೊಂದಿಗೆ ಇರಲು ನಿಜವಾಗಿಯೂ ಇಷ್ಟವಿತ್ತೆಂದು ಆ ವೃತ್ತಾಂತವು ಸ್ಪಷ್ಟಪಡಿಸುತ್ತದೆ. ಯೇಸು “ಅವುಗಳನ್ನು ಅಪ್ಪಿಕೊಂಡು ಅವುಗಳ ಮೇಲೆ ಕೈಯಿಟ್ಟು ಆಶೀರ್ವದಿಸಿದನು” ಎಂದು ಮಾರ್ಕನು ವರದಿಸುತ್ತಾನೆ. (ಮಾರ್ಕ 10:16) ಯೇಸು ‘ಅವುಗಳನ್ನು ಅಪ್ಪಿಕೊಂಡನು’a ಎಂಬ ಹೃದಯೋಲ್ಲಾಸಗೊಳಿಸುವ ವಿವರವನ್ನು ಕೇವಲ ಮಾರ್ಕನ ವೃತ್ತಾಂತವು ಸೇರಿಸುತ್ತದೆ. ಈ ರೀತಿಯಲ್ಲಿ, ಯೇಸು ಆ ಮಕ್ಕಳನ್ನು ಕೇವಲ ‘ಮುಟ್ಟಲಿಕ್ಕಾಗಿ’ ಅವನ ಬಳಿಗೆ ತಂದಿದ್ದ ವಯಸ್ಕರ ನಿರೀಕ್ಷೆಗಿಂತಲೂ ಹೆಚ್ಚನ್ನು ಅವನು ಮಾಡಿದನು.
ಯೇಸು ಮಕ್ಕಳ ‘ಮೇಲೆ ಕೈಯಿಟ್ಟನು’ ಎಂಬುದರ ಅರ್ಥವೇನು? ಇಲ್ಲಿ ದೀಕ್ಷಾಸ್ನಾನದಂತಹ, ಧಾರ್ಮಿಕ ಸಂಸ್ಕಾರದ ಯಾವುದೇ ಸೂಚನೆ ಇಲ್ಲ. ಕೆಲವೊಂದು ಸಂದರ್ಭಗಳಲ್ಲಿ, ಕೈಗಳನ್ನಿಡುವುದು ಒಂದು ನೇಮಕವನ್ನು ನೀಡುವುದನ್ನು ಅರ್ಥೈಸುತ್ತಿದ್ದಾಗ, ಬೇರೆ ಕೆಲವೊಂದು ಸಂದರ್ಭಗಳಲ್ಲಿ, ಅದು ಕೇವಲ ಆಶೀರ್ವದಿಸುವುದನ್ನು ಸೂಚಿಸುತ್ತಿತ್ತು. (ಆದಿಕಾಂಡ 48:14; ಅ. ಕೃತ್ಯಗಳು 6:6) ಆದುದರಿಂದ ಯೇಸು ಆ ಮಕ್ಕಳಿಗೆ ಆಶೀರ್ವಾದವನ್ನು ಕೊಡುತ್ತಿದ್ದಿರಬಹುದು ಅಷ್ಟೇ.
ಏನೇ ಆಗಲಿ, ಮಾರ್ಕನು ‘ಆಶೀರ್ವದಿಸು’ (ಕಾಟ್ಯುಲೊಜಿಯೊ) ಎಂಬ ಪದಕ್ಕೆ, ಹೆಚ್ಚು ಬಲವಾದ ಪದವನ್ನು ಉಪಯೋಗಿಸುತ್ತಾ, ಹೆಚ್ಚು ಮಹತ್ತ್ವವನ್ನು ಕೊಡುತ್ತಾನೆ. ಯೇಸು ಮಕ್ಕಳನ್ನು ಉತ್ಸಾಹದಿಂದ, ಕೋಮಲವಾಗಿ ಮತ್ತು ಹೃದಯೋಲ್ಲಾಸದಿಂದ ಆಶೀರ್ವದಿಸಿದನೆಂದು ಇದು ಸೂಚಿಸುತ್ತದೆ. ಅವನು ಮಕ್ಕಳನ್ನು, ಸಮಯವನ್ನು ಹಾಳುಮಾಡುವ ಹೊರೆಯೋಪಾದಿ ನೋಡಲಿಲ್ಲವೆಂಬುದು ಸ್ಪಷ್ಟ.
ನಮಗಾಗಿ ಪಾಠ
ಮಕ್ಕಳೊಂದಿಗೆ ಮತ್ತು ವಯಸ್ಕರೊಂದಿಗೆ ಯೇಸು ವ್ಯವಹರಿಸಿದ ರೀತಿಯು, ಭಯಪಡಿಸುವಂತಹದ್ದೂ ಆಗಿರಲಿಲ್ಲ ಇಲ್ಲವೆ ತುಚ್ಛಗೊಳಿಸುವಂತಹದ್ದೂ ಆಗಿರಲಿಲ್ಲ. “ಅವನು ಮಂದಸ್ಮಿತನಾಗಿ, ಮುಕ್ತಮನಸ್ಸಿನಿಂದ ನಗುತ್ತಿದ್ದಿರಬಹುದು” ಎಂದು ಒಂದು ರೆಫರೆನ್ಸ್ ಕೃತಿ ಹೇಳುತ್ತದೆ. ಎಲ್ಲ ವಯೋವರ್ಗದ ಜನರು ಅವನೊಂದಿಗೆ ಇರಲು ಮುಜುಗರಪಡದೇ ಇರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಯೇಸುವಿನ ಮಾದರಿಯ ಕುರಿತು ಪರ್ಯಾಲೋಚಿಸುತ್ತಾ, ನಾವು ನಮ್ಮನ್ನೇ ಹೀಗೆ ಕೇಳಿಕೊಳ್ಳಬಹುದು, ‘ಇತರರು ನಾನು ಸ್ನೇಹಶೀಲ ವ್ಯಕ್ತಿಯಾಗಿದ್ದೇನೆ ಎಂದು ನೆನಸುತ್ತಾರೊ?’ ‘ನಾನು ಇತರರ ಚಟುವಟಿಕೆಗಳು ಮತ್ತು ಅಭಿರುಚಿಗಳ ಕುರಿತು ಯೋಚಿಸಲು ಸಮಯವಿಲ್ಲದಷ್ಟು ಕಾರ್ಯಮಗ್ನನಾಗಿ ತೋರುತ್ತೇನೊ?’ ಜನರಲ್ಲಿ ಪ್ರಾಮಾಣಿಕವಾದ ಆಸಕ್ತಿಯನ್ನು ಬೆಳೆಸಿಕೊಳ್ಳುವುದು, ಯೇಸು ಮಾಡಿದಂತೆ ನಾವು ನಮ್ಮನ್ನೇ ಇತರರಿಗಾಗಿ ಕೊಡುವಂತೆ ಪ್ರಚೋದಿಸುವುದು. ಇತರರು ನಮ್ಮ ಪ್ರಾಮಾಣಿಕವಾದ ಕಾಳಜಿಯನ್ನು ನೋಡಿ, ನಮ್ಮ ಕಡೆಗೆ ಆಕರ್ಷಿತರಾಗುವರು.—ಜ್ಞಾನೋಕ್ತಿ 11:25.
ಮಾರ್ಕನ ವೃತ್ತಾಂತವು ತೋರಿಸುವಂತೆ, ಯೇಸು ಮಕ್ಕಳೊಂದಿಗಿರಲು ಸಂತೋಷಿಸಿದನು. ಅವರು ಆಟವಾಡುತ್ತಿರುವುದನ್ನು ಗಮನಿಸಲು ಅವನು ಸಮಯ ತೆಗೆದುಕೊಂಡನೆಂಬುದು ವ್ಯಕ್ತ. ಯಾಕಂದರೆ ತನ್ನ ದೃಷ್ಟಾಂತಗಳಲ್ಲೊಂದರಲ್ಲಿ ಅವನು ಅವರ ಆಟಗಳ ಕುರಿತಾಗಿ ಮಾತಾಡುತ್ತಾನೆ. (ಮತ್ತಾಯ 11:16-19) ಯೇಸು ಆಶೀರ್ವದಿಸಿದಂತಹ ಮಕ್ಕಳಲ್ಲಿ ಕೆಲವರು, ಅವನು ಯಾರು ಮತ್ತು ಏನನ್ನು ಕಲಿಸಿದನೊ ಅದನ್ನು ಗ್ರಹಿಸಲು ಸಾಧ್ಯವಾಗದಷ್ಟು ಚಿಕ್ಕವರಾಗಿದ್ದಿರಬಹುದು. ಆದರೆ ಇದರಿಂದಾಗಿ, ತಾನು ಸುಮ್ಮನೇ ಸಮಯವನ್ನು ಹಾಳುಮಾಡುತ್ತಿದ್ದೇನೆ ಎಂದು ಅವನು ಭಾವಿಸಲಿಲ್ಲ. ಅವನು ಮಕ್ಕಳೊಂದಿಗೆ ಸಮಯವನ್ನು ಕಳೆದನು ಯಾಕಂದರೆ ಅವನು ಅವರನ್ನು ಪ್ರೀತಿಸಿದನು. ತನ್ನ ಶುಶ್ರೂಷೆಯಲ್ಲಿ ಯೇಸು ಭೇಟಿಮಾಡಿದ ಮಕ್ಕಳಲ್ಲಿ ಅನೇಕರು, ತದನಂತರ ಆತನ ಶಿಷ್ಯರಾಗಿ ಪರಿಣಮಿಸುತ್ತಾ ಆತನ ಪ್ರೀತಿಗೆ ಪ್ರತಿಕ್ರಿಯೆ ತೋರಿಸಲು ಪ್ರಚೋದಿಸಲ್ಪಟ್ಟಿದ್ದಿರಬಹುದು.
ತನ್ನ ಜೀವಿತದ ಕೊನೆಯ ನಿರ್ಣಾಯಕ ವಾರಗಳಲ್ಲಿ ಯೇಸು ಮಕ್ಕಳೊಂದಿಗೆ ಸಮಯವನ್ನು ಕಳೆದಿರುವಲ್ಲಿ, ನಿಶ್ಚಯವಾಗಿಯೂ ನಾವು ಮಕ್ಕಳಿಗಾಗಿ ನಮ್ಮ ಕಾರ್ಯಮಗ್ನ ಶೆಡ್ಯೂಲಿನಲ್ಲಿ ಸ್ವಲ್ಪ ಸಮಯವನ್ನು ತೆಗೆದಿಡಬಲ್ಲೆವು. ಪಿತೃಹೀನ ಬಾಲಕ ಬಾಲಕಿಯರಂತಹ, ವಿಶೇಷ ಅಗತ್ಯಗಳುಳ್ಳ ಮಕ್ಕಳಿಗೆ ನಾವು ವಿಶೇಷ ಗಮನಕೊಡುವವರಾಗಿರಬೇಕು. ಮಕ್ಕಳಿಗೆ ಗಮನವನ್ನು ಕೊಡುವಾಗ ಅವರು ನಿಜವಾಗಿಯೂ ಏಳಿಗೆಹೊಂದುತ್ತಾರೆ. ಮತ್ತು ನಾವು ಅವರಿಗೆ ನಮ್ಮಿಂದ ಸಾಧ್ಯವಿರುವಷ್ಟು ಪ್ರೀತಿ ಮತ್ತು ಸಹಾಯವನ್ನು ಕೊಡಬೇಕೆಂಬುದು ಯೆಹೋವನ ಅಪೇಕ್ಷೆಯಾಗಿದೆ.—ಕೀರ್ತನೆ 10:14.
[ಪಾದಟಿಪ್ಪಣಿ]
a This footnote is missing in Kannada.