‘ಅವಮಾನಕ್ಕೆ ಗುರಿಯಾಗದ ಕೆಲಸದವನಾಗಿರಲು’ ಶ್ರಮಿಸುವುದು
ಆ್ಯಂಡ್ರೇ ಸಾಪಾರವರು ಹೇಳಿರುವಂತೆ
ಎರಡನೆಯ ವಿಶ್ವ ಯುದ್ಧವು ಬಿರುಸಿನಿಂದ ನಡೆಯುತ್ತಾ ಇತ್ತು. ಅದು ವರ್ಣಿಸಲಸಾಧ್ಯವಾದಷ್ಟು ಕಗ್ಗೊಲೆ ಮತ್ತು ಹತಾಶೆಯಲ್ಲಿ ಫಲಿಸಿತು. ನಾನು ನಾರ್ವೇಯ, ನಾರ್ವಿಕ್ ಎಂಬ ಸ್ಥಳಕ್ಕೆ ಹತ್ತಿರದಲ್ಲಿದ್ದ ಜರ್ಮನ್ ನೌಕಾಪಡೆಯಲ್ಲಿ ಒಬ್ಬ ಸಿಗ್ನಲ್ಮ್ಯಾನ್ ಆಗಿದ್ದರಿಂದ, ಮನುಷ್ಯನ ಪಾಶವೀಯತೆಯನ್ನು ಕಣ್ಣಾರೆ ಕಂಡೆ. ರಾತ್ರಿ ಸಮಯದಲ್ಲಿ, ಸಮುದ್ರದ ಒಳಚಾಚುಗಳ ಮರೆಯಲ್ಲಿದ್ದಾಗ, ಉತ್ತರ ಧ್ರುವ ಪ್ರಭೆಯ ದಿವ್ಯ ಸೌಂದರ್ಯವು, ನಾನು ಜೀವಿತದ ಕುರಿತಾಗಿ ಗಾಢವಾಗಿ ಯೋಚಿಸುವಂತೆ ಮಾಡಿತು. ಇಂತಹ ಸಂಗತಿಗಳನ್ನು ಸೃಷ್ಟಿಸಿದ ದೇವರು, ಯುದ್ಧದ ಹುಚ್ಚುತನಕ್ಕೆ ಜವಾಬ್ದಾರನಾಗಿರಲು ಸಾಧ್ಯವೇ ಇಲ್ಲವೆಂದು ನನಗೆ ಖಂಡಿತವಾಗಿ ತಿಳಿದಿತ್ತು.
ಚೆಕ್ ಗಡಿಯ ಹತ್ತಿರ, ಲಾಸಾಟ್ (ಈಗ ಪೊಲೆಂಡ್ನಲ್ಲಿದೆ) ಎಂಬ ಚಿಕ್ಕ ಹಳ್ಳಿಯಲ್ಲಿ ನಾನು 1923ನೆಯ ಇಸವಿಯಲ್ಲಿ ಜನಿಸಿದೆ. ಒಂದು ಬಡ ರೈತ ಕುಟುಂಬದಲ್ಲಿ ನಾನು ಬೆಳೆದು ದೊಡ್ಡವನಾದೆ. ನನ್ನ ಹೆತ್ತವರು ಸಂಪ್ರದಾಯಸ್ಥ ಕ್ಯಾತೊಲಿಕರಾಗಿದ್ದರು. ಮತ್ತು ನಮ್ಮ ಜೀವಿತಗಳಲ್ಲಿ ಧರ್ಮಕ್ಕೆ ತುಂಬ ಪ್ರಮುಖ ಸ್ಥಾನವಿತ್ತು. ಆದರೆ, ಆರಂಭದಿಂದಲೇ ನನಗೆ ನನ್ನ ಧರ್ಮದ ಕುರಿತಾಗಿ ಸಂದೇಹಗಳಿದ್ದವು. ನಮ್ಮ ಹಳ್ಳಿಯಲ್ಲಿ ಮೂರು ಪ್ರಾಟೆಸ್ಟೆಂಟ್ ಕುಟುಂಬಗಳಿದ್ದವು. ಕ್ಯಾತೊಲಿಕ್ ಸಮುದಾಯವು ಆ ಕುಟುಂಬಗಳನ್ನು ಸಮಾಜದಿಂದ ಬಹಿಷ್ಕರಿಸಿತು. ಹೀಗೇಕೆ ಮಾಡಲಾಗುತ್ತಿದೆಯೆಂದು ನನಗೆ ಅರ್ಥವಾಗುತ್ತಿರಲಿಲ್ಲ. ಶಾಲೆಯಲ್ಲಿ ನಮಗೆ ಕ್ಯಾಟಿಕಿಸಮನ್ನು ಕಲಿಸಲಾಗುತ್ತಿತ್ತು. ಆದರೆ ಒಂದು ಸಲ ನಾನು ಪಾದ್ರಿಗೆ, ತ್ರಯೈಕ್ಯವನ್ನು ವಿವರಿಸಿಹೇಳುವಂತೆ ಕೇಳಿದಾಗ, ಉತ್ತರವನ್ನು ಕೊಡುವ ಬದಲಿಗೆ ನನಗೆ ಬೆತ್ತದಿಂದ ಹತ್ತು ಏಟುಗಳನ್ನು ಕೊಟ್ಟರು. ಆದರೆ ನಾನು 17 ವರ್ಷ ಪ್ರಾಯದವನಾಗಿದ್ದಾಗ, ನಡೆದಂತಹ ಒಂದು ಘಟನೆಯಿಂದ ನಾನು ಚರ್ಚಿನ ವಿಷಯದಲ್ಲಿ ಇನ್ನೂ ಹೆಚ್ಚು ನಿರಾಶನಾದೆ. ನನ್ನ ಅಜ್ಜಅಜ್ಜಿಯರು, ಒಂದು ತಿಂಗಳ ಅಂತರದಲ್ಲಿ ಮರಣಹೊಂದಿದರು. ಅವರಿಬ್ಬರ ಶವಸಂಸ್ಕಾರಗಳಿಗೆ ನನ್ನ ತಾಯಿಯ ಬಳಿ ಸಾಕಷ್ಟು ಹಣವಿರಲಿಲ್ಲ. ಆದುದರಿಂದ, ತಾನು ಅದನ್ನು ಸ್ವಲ್ಪ ಸಮಯದ ನಂತರ ಕೊಡಬಹುದೊ ಎಂದು ಪಾದ್ರಿಗೆ ಅವರು ಕೇಳಿದರು. “ನಿನ್ನ ಹೆತ್ತವರ ಬಳಿ ಕೆಲವೊಂದು ಸಾಮಾನುಗಳಿದ್ದವಲ್ಲ, ಅವುಗಳನ್ನು ಮಾರಿ ಶವಸಂಸ್ಕಾರಕ್ಕಾಗಿ ಆ ಹಣವನ್ನು ಉಪಯೋಗಿಸು” ಎಂದು ಆ ಪಾದ್ರಿ ಉತ್ತರಕೊಟ್ಟನು.
ಇದಕ್ಕಿಂತಲೂ ಕೆಲವು ವರ್ಷಗಳ ಹಿಂದೆ, 1933ರಲ್ಲಿ ಹಿಟ್ಲರನು ಅಧಿಕಾರಕ್ಕೆ ಬಂದನು. ಆಗ ನಮಗೆ ಪೊಲಿಷ್ ಭಾಷೆಯನ್ನಾಡಲು ಅನುಮತಿಯಿರಲಿಲ್ಲ; ನಾವು ಜರ್ಮನ್ ಭಾಷೆಯನ್ನೇ ಮಾತಾಡಬೇಕಿತ್ತು. ಹಾಗೆ ಮಾಡಲು ನಿರಾಕರಿಸಿದವರು, ಅಥವಾ ಜರ್ಮನ್ ಭಾಷೆಯನ್ನು ಕಲಿಯಲು ಸಾಧ್ಯವಿಲ್ಲದವರು ಕ್ರಮೇಣವಾಗಿ ಕಾಣೆಯಾದರು. ನಮಗೆ ಅನಂತರ ತಿಳಿಸಲಾದಂತೆ, ಅವರನ್ನು ಯಾತನಾ ಶಿಬಿರಗಳಿಗೆ ಕಳುಹಿಸಲಾಗಿತ್ತು. ನಮ್ಮ ಹಳ್ಳಿಯ ಹೆಸರನ್ನು ಸಹ, ಗ್ರೂನ್ಫ್ಲೀಸ್ ಎಂಬ ಒಂದು ಜರ್ಮನ್ ಹೆಸರಿಗೆ ಬದಲಾಯಿಸಲಾಯಿತು. ನಾನು 14 ವರ್ಷದವನಾಗಿದ್ದಾಗ ಶಾಲೆಗೆ ಹೋಗುವುದನ್ನು ನಿಲ್ಲಿಸಿದೆ. ನಾನು ಹಿಟ್ಲರ್ ಯುವಕರ ಸಂಸ್ಥೆಯ ಸದಸ್ಯನಾಗಿರದಿದ್ದರಿಂದ, ಉದ್ಯೋಗ ಸಿಗುವುದು ಕಷ್ಟಕರವಾಯಿತು. ಕಟ್ಟಕಡೆಗೆ, ನನ್ನನ್ನು ಒಬ್ಬ ಅಪ್ರೆಂಟಿಸ್ ಕಮ್ಮಾರನನ್ನಾಗಿ ಕೆಲಸಕ್ಕೆ ಇಟ್ಟುಕೊಳ್ಳಲಾಯಿತು. ಯುದ್ಧವು ಆರಂಭಗೊಂಡ ನಂತರ, ಚರ್ಚಿನಲ್ಲಿ ಹಿಟ್ಲರ್ ಮತ್ತು ಜರ್ಮನ್ ಪಡೆಗಳಿಗಾಗಿ ಪ್ರಾರ್ಥನೆಗಳನ್ನು ಮಾಡಲಾಗುತ್ತಿತ್ತು. ವಿರೋಧಿ ಪಕ್ಷದಲ್ಲೂ ವಿಜಯಕ್ಕಾಗಿ ತದ್ರೀತಿಯ ಪ್ರಾರ್ಥನೆಗಳನ್ನು ಮಾಡಲಾಗುತ್ತಿದೆಯೊ ಎಂದು ನಾನು ಯೋಚಿಸುತ್ತಿದ್ದೆ.
ಜರ್ಮನ್ ನೌಕಾಪಡೆಯಲ್ಲಿ ಕೆಲಸ
1941ರ ಡಿಸೆಂಬರ್ ತಿಂಗಳಲ್ಲಿ ನಾನು ಜರ್ಮನ್ ನೌಕಾಪಡೆಯನ್ನು ಸೇರಿದೆ. 1942ರ ಆದಿ ಭಾಗದಲ್ಲಿ, ನನ್ನನ್ನು ಒಂದು ಬೇಹು ಹಡಗಿನಲ್ಲಿ (ಸ್ಕೌಟ್ ಶಿಪ್) ಕೆಲಸಮಾಡಲು ನಾರ್ವೇಯ ಕರಾವಳಿಗೆ ಕಳುಹಿಸಲಾಯಿತು. ಟ್ರಾನ್ಹೇಮ್ ಮತ್ತು ಆಸ್ಲೋವಿನ ನಡುವೆ ಸೈನಿಕರನ್ನು, ಯುದ್ಧ ಸಾಮಗ್ರಿಯನ್ನು ಅಥವಾ ಸರಕನ್ನು ಒಯ್ಯುತ್ತಿದ್ದ ಹಡಗುಗಳಿಗೆ ಬೆಂಗಾವಲಾಗಿ ಹೋಗುವಂತೆ ನನಗೆ ಹೇಳಲಾಯಿತು. ನಾನು ಸಮುದ್ರಯಾನದಲ್ಲಿದ್ದಾಗ, ಇಬ್ಬರು ನಾವಿಕರು, ಬೈಬಲಿನಲ್ಲಿ ಮುಂತಿಳಿಸಲ್ಪಟ್ಟಿರುವ ಲೋಕದ ಅಂತ್ಯದ ಕುರಿತಾಗಿ ಮಾತಾಡುತ್ತಿರುವುದನ್ನು ಕೇಳಿಸಿಕೊಂಡೆ. ಅವರು ಬಹಿರಂಗವಾಗಿ ಮಾತಾಡಲು ಹೆದರುತ್ತಿದ್ದರಾದರೂ, ತಮ್ಮ ಹೆತ್ತವರು ಯೆಹೋವನ ಸಾಕ್ಷಿಗಳೊಂದಿಗೆ ಸಹವಾಸಿಸುತ್ತಾರೆಂದೂ, ತಾವು ಅವರ ಮಾದರಿಯನ್ನು ಅನುಕರಿಸಿಲ್ಲವೆಂದೂ ಅವರು ನನಗೆ ಹೇಳಿದರು. ಆಗಲೇ ನಾನು ಯೆಹೋವನ ಸಾಕ್ಷಿಗಳ ಬಗ್ಗೆ ಕೇಳಿಸಿಕೊಂಡದ್ದು.
ಯುದ್ಧವು ಅಂತ್ಯಗೊಂಡಾಗ, ಬ್ರಿಟಿಷರು ನಮ್ಮನ್ನು ಸೆರೆಯಾಳುಗಳಾಗಿ ಒಯ್ದು, ನಮ್ಮನ್ನು ಜರ್ಮನಿಗೆ ಹಿಂದಿರುಗಿಸಲು ಅಮೆರಿಕನರಿಗೆ ಒಪ್ಪಿಸಿದರು. ಯಾರ ಮನೆಗಳು ಈಗ ಸೋವಿಯಟ್ ವಲಯದಲ್ಲಿದ್ದವೊ, ಅವರನ್ನು ಕಲ್ಲಿದ್ದಲಿನ ಗಣಿಗಳಲ್ಲಿ ಕೆಲಸಮಾಡಲು ಉತ್ತರ ಫ್ರಾನ್ಸ್ನ ಲೀಏವಾನ್ನಲ್ಲಿರುವ ಒಂದು ಸೆರೆಮನೆಯ ಶಿಬಿರಕ್ಕೆ ಕಳುಹಿಸಲಾಯಿತು. ಇದು ನಡೆದದ್ದು ಆಗಸ್ಟ್ 1945ರಲ್ಲಿ. ನನ್ನ ಫ್ರೆಂಚ್ ಕಾವಲುಗಾರರಲ್ಲಿ ಒಬ್ಬನಿಗೆ, ನೀನು ಯಾವ ಧರ್ಮದವನೆಂದು ನಾನು ಕೇಳಿದ್ದು ನೆನಪಿದೆ. “ಕ್ಯಾತೊಲಿಕ್” ಎಂದು ಅವನು ಉತ್ತರಿಸಿದನು. ನಾನು ಸಹ ಒಬ್ಬ ಕ್ಯಾತೊಲಿಕನಾಗಿದ್ದರಿಂದ, ನಾವೇಕೆ ಶತ್ರುಗಳಾಗಿದ್ದೇವೆಂದು ಅವನಿಗೆ ಕೇಳಿದೆ. “ಅದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದರಿಂದ ಏನೂ ಪ್ರಯೋಜನವಿಲ್ಲ. ಎಷ್ಟೋ ಶತಮಾನಗಳಿಂದ ಹೀಗೆ ನಡೆಯುತ್ತಾ ಬಂದಿದೆ” ಎಂದು ಅವನು ಉತ್ತರಿಸಿದನು. ಒಂದೇ ಧರ್ಮದ ಜನರು, ಪರಸ್ಪರ ಜಗಳವಾಡಿ ಕೊಲ್ಲುವುದು ನನಗೆ ವಿಚಿತ್ರವೆನಿಸಿತು.
ಕಲ್ಲಿದ್ದಲಿನ ಗಣಿಯೊಂದರಲ್ಲಿ ಬೆಳಕಿನ ಕಿರಣ
ಸ್ಥಳಿಕ ಗಣಿತೋಡುವವರೊಂದಿಗೆ ನಾನು ಕೆಲಸಮಾಡಿದ ಮೊದಲನೆಯ ದಿನ, ಏವನ್ಸ್ ಎಮ್ಯಾಟ್ ಎಂಬವನೊಬ್ಬನು ತನ್ನ ಸ್ಯಾಂಡ್ವಿಚ್ಗಳನ್ನು ನನ್ನೊಂದಿಗೆ ಹಂಚಿಕೊಂಡನು. ಅವನು ಮೂಲತಃ ಅಮೆರಿಕದ ಓಹಾಯೋದವನಾಗಿದ್ದನು. ಹಲವಾರು ವರ್ಷಗಳಿಂದ ಅವನು ಫ್ರಾನ್ಸ್ನಲ್ಲಿ ವಾಸಿಸಿದ್ದನು. ಇನ್ನು ಮುಂದೆ ಯುದ್ಧವಿಲ್ಲದಿರುವ ಒಂದು ಜಗತ್ತಿನ ಕುರಿತಾಗಿ ಅವನು ನನ್ನೊಂದಿಗೆ ಮಾತಾಡಿದನು. ಅವನ ದಯಾಪರ ಮನೋಭಾವವನ್ನು ನೋಡಿ ನಾನು ಆಶ್ಚರ್ಯಪಟ್ಟೆ. ನಾನೊಬ್ಬ ಜರ್ಮನ್ ಮತ್ತು ಅವನೊಬ್ಬ ಅಮೆರಿಕನ್ ಆಗಿದ್ದರೂ ಅವನಿಗೆ ನನ್ನ ಕಡೆಗೆ ಯಾವುದೇ ವೈರತ್ವವಿರಲಿಲ್ಲ. 1948ರ ಆರಂಭದ ವರೆಗೆ ನಮಗೆ ಯಾವುದೇ ಸಂಪರ್ಕವಿರಲಿಲ್ಲ. ಆಗ ಅವನು ನನಗೆ “ಶಾಂತಿಯ ಪ್ರಭು” (ಇಂಗ್ಲಿಷ್) ಎಂಬ ಶೀರ್ಷಿಕೆಯುಳ್ಳ ಒಂದು ಪುಸ್ತಿಕೆಯನ್ನು ಕೊಟ್ಟನು. ಕೊನೆಗೂ, ಯುದ್ಧವನ್ನು ದ್ವೇಷಿಸುತ್ತಾ, ಸ್ವತಃ ಒಳ್ಳೇತನದಿಂದ ತುಂಬಿರುವ ಒಬ್ಬ ದೇವರ ಕುರಿತು ನಾನು ಕಲಿತುಕೊಂಡೆ. ಉತ್ತರ ಧ್ರುವ ಪ್ರಭೆಯನ್ನು ವೀಕ್ಷಿಸುತ್ತಿದ್ದಾಗ, ನಾನು ಈ ರೀತಿಯ ದೇವರ ಕುರಿತಾಗಿಯೇ ಊಹಿಸುತ್ತಿದ್ದೆ. ಇದನ್ನು ಕಲಿಸುವ ಧರ್ಮವನ್ನು ನಾನು ಕಂಡುಕೊಳ್ಳಲು ನಿರ್ಧರಿಸಿದೆ. ಆದರೆ ಏವನ್ಸ್, ಗಣಿಯ ಇನ್ನೊಂದು ಭಾಗದಲ್ಲಿ ಕೆಲಸಮಾಡುತ್ತಿದ್ದರಿಂದ ನಾನು ಅವನನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಸೆರೆಮನೆ ಶಿಬಿರದಲ್ಲಿದ್ದ ಎಲ್ಲ ವಿಭಿನ್ನ ಧಾರ್ಮಿಕ ಗುಂಪುಗಳ ಬಳಿಗೆ ಹೋಗಿ, ಅವರಿಗೆ ಆ ಪುಸ್ತಿಕೆಯ ಕುರಿತಾಗಿ ಏನಾದರೂ ತಿಳಿದಿದೆಯೊ ಎಂದು ಕೇಳಿದೆ. ಆದರೆ ಅದರಿಂದ ಏನೂ ಪ್ರಯೋಜನವಾಗಲಿಲ್ಲ.
ಕೊನೆಯಲ್ಲಿ, 1948ರ ಏಪ್ರಿಲ್ ತಿಂಗಳಿನಲ್ಲಿ ನಾನು ಸೆರೆಮನೆ ಶಿಬಿರದಿಂದ ಬಿಡುಗಡೆಗೊಳಿಸಲ್ಪಟ್ಟು ಒಬ್ಬ ಸ್ವತಂತ್ರ ಕಾರ್ಮಿಕನಾದೆ. ಮುಂದಿನ ಭಾನುವಾರವೇ ಬೀದಿಯಲ್ಲಿ ಒಂದು ಚಿಕ್ಕ ಗಂಟೆಯು ಬಾರಿಸಲ್ಪಡುತ್ತಿರುವುದನ್ನು ಕೇಳಿದಾಗ ಚಕಿತನಾದೆ. ಏವನ್ಸ್ನನ್ನು ನೋಡಿದಾಗ ನನಗೆಷ್ಟು ಸಂತೋಷವಾಯಿತೆಂದರೆ ನಾನದನ್ನು ವರ್ಣಿಸಲಾರೆ! ಒಂದು ಬಹಿರಂಗ ಭಾಷಣದ ಶೀರ್ಷಿಕೆಯನ್ನು ಘೋಷಿಸುತ್ತಿದ್ದ ಬೋರ್ಡ್ಗಳನ್ನು ಹಿಂದೆಮುಂದೆ ಧರಿಸಿಕೊಂಡಿದ್ದ ಯೆಹೋವನ ಸಾಕ್ಷಿಗಳ ಒಂದು ಗುಂಪಿನಲ್ಲಿ ಅವನಿದ್ದನು. ಗಂಟೆಯನ್ನು ಬಾರಿಸುತ್ತಿದ್ದವರು, ಈಗ ಫ್ರಾನ್ಸ್ನಲ್ಲಿ ಬ್ರಾಂಚ್ ಕಮಿಟಿಯ ಸದಸ್ಯರಾಗಿರುವ ಮಾರ್ಸೊ ಲರ್ವಾ ಆಗಿದ್ದರು. ತನ್ನ ನಂಬಿಕೆಗಾಗಿ ಯಾತನಾ ಶಿಬಿರಗಳಲ್ಲಿ ಕಷ್ಟಾನುಭವಿಸಿದ್ದ ಯೋಸೆಫ್ ಕೂಲ್ಚಾಕ್ ಎಂಬ ಜರ್ಮನ್ ಭಾಷೆಯನ್ನಾಡುತ್ತಿದ್ದ ಪೊಲೆಂಡಿನ ಒಬ್ಬ ವ್ಯಕ್ತಿಗೆ ನನ್ನನ್ನು ಪರಿಚಯಿಸಲಾಯಿತು. ಆ ಸಂಜೆ ನಾನು ಕೂಟಕ್ಕೆ ಬರುವಂತೆ ಅವನು ನನ್ನನ್ನು ಆಮಂತ್ರಿಸಿದನು. ಅಲ್ಲಿ ಏನನ್ನು ಹೇಳಲಾಗುತ್ತಿತ್ತೊ ಅದರಲ್ಲಿ ಹೆಚ್ಚಿನದ್ದು ನನಗೆ ಅರ್ಥವಾಗಲಿಲ್ಲ. ಅಲ್ಲಿ ಹಾಜರಿದ್ದವರೆಲ್ಲರೂ ತಮ್ಮ ಕೈಯನ್ನೆತ್ತಿದಾಗ, ಅವರು ಯಾಕೆ ಹಾಗೆ ಮಾಡುತ್ತಿದ್ದಾರೆಂದು ನನ್ನ ಪಕ್ಕದಲ್ಲಿ ಕುಳಿತುಕೊಂಡಿದ್ದ ವ್ಯಕ್ತಿಗೆ ಕೇಳಿದೆ. “ಅವರು ಮುಂದಿನ ವಾರ ಸಾರಲಿಕ್ಕಾಗಿ ಡನ್ಕರ್ಕ್ ನಗರಕ್ಕೆ ಹೋಗುವವರಾಗಿದ್ದಾರೆ” ಎಂದು ಅವನು ಹೇಳಿದನು. “ನಾನು ಸಹ ಹೋಗಬಹುದಾ?” ಎಂದು ಕೇಳಿದೆ. “ಖಂಡಿತವಾಗಿಯೂ ಹೋಗಬಹುದು!” ಎಂದು ನನಗೆ ಉತ್ತರ ಸಿಕ್ಕಿತು. ಆದುದರಿಂದ, ಮುಂದಿನ ಭಾನುವಾರ, ನಾನು ಮನೆಯಿಂದ ಮನೆಗೆ ಸಾರುತ್ತಾ ಇದ್ದೆ. ನಾವು ಭೇಟಿ ಮಾಡಿದ ಎಲ್ಲರೂ ಒಳ್ಳೆಯ ಪ್ರತಿಕ್ರಿಯೆಯನ್ನು ತೋರಿಸದಿದ್ದರೂ, ನಾನು ಅದರಲ್ಲಿ ತುಂಬ ಆನಂದಿಸಿದೆ ಮತ್ತು ಸ್ವಲ್ಪ ಸಮಯದೊಳಗೆ ಕ್ರಮವಾಗಿ ಸಾರಲು ಆರಂಭಿಸಿದೆ.
ನನ್ನ ಕೋಪವನ್ನು ನಿಯಂತ್ರಿಸಲು ಕಲಿತುಕೊಳ್ಳುವುದು
ಸ್ವಲ್ಪ ಸಮಯದ ಬಳಿಕ, ಬಿಡುಗಡೆಗೊಳಿಸಲ್ಪಟ್ಟ ಜರ್ಮನ್ ಸಿಪಾಯಿಗಳ ವಾಸಸ್ಥಾನಗಳಲ್ಲಿ ಆ ಸಾಕ್ಷಿಗಳು ಸಾರಲಾರಂಭಿಸಿದರು. ಇದು ನನಗೆ ಸುಲಭವಾಗಿರಲಿಲ್ಲ, ಯಾಕಂದರೆ ಅಲ್ಲಿರುವವರೆಲ್ಲರಿಗೆ ನನ್ನ ಮುಂಗೋಪದ ಕುರಿತಾಗಿ ಚೆನ್ನಾಗಿ ತಿಳಿದಿತ್ತು. ಯಾರಾದರೂ ನಾನು ಸಾರುತ್ತಿದ್ದಾಗ ಗೇಲಿಮಾಡುತ್ತಿದ್ದರೆ, “ನೀನು ಹುಷಾರಾಗಿರು, ಇಲ್ಲದಿದ್ದರೆ ಏನಾಗುವುದೆಂದು ನೋಡಿಕೊ” ಎಂದು ಹೇಳುತ್ತಾ ಆ ವ್ಯಕ್ತಿಯನ್ನು ಬೆದರಿಸುತ್ತಿದ್ದೆ. ಒಮ್ಮೆ ನಾನು ಗಣಿಯಲ್ಲಿ ಕೆಲಸಮಾಡುತ್ತಿದ್ದಾಗ, ಯಾರೋ ಒಬ್ಬನು ಯೆಹೋವನನ್ನು ಅಣಕಿಸಿದ್ದಕ್ಕಾಗಿ ನಾನು ಅವನಿಗೆ ಹೊಡೆದಿದ್ದೆ.
ಆದರೆ ಯೆಹೋವನ ಸಹಾಯದೊಂದಿಗೆ, ನಾನು ನನ್ನ ವ್ಯಕ್ತಿತ್ವದಲ್ಲಿ ಬದಲಾವಣೆಗಳನ್ನು ಮಾಡಲು ಶಕ್ತನಾದೆ. ಒಂದು ದಿನ ನಾವು ಆ ವಾಸಸ್ಥಾನಗಳಲ್ಲಿ ಸಾರುತ್ತಿದ್ದಾಗ, ಮದ್ಯಪಾನ ಮಾಡಿ ಅಮಲೇರಿದ್ದ ಪುರುಷರ ಒಂದು ಗುಂಪು, ಕೆಲವು ಸಾಕ್ಷಿಗಳಿಗೆ ತೊಂದರೆ ಕೊಡುತ್ತಿತ್ತು. ನನ್ನ ಮುಂಗೋಪದ ಕುರಿತಾಗಿ ತಿಳಿದಿದ್ದರಿಂದ, ನಾನು ಮಧ್ಯೆ ಪ್ರವೇಶಿಸುವುದರಿಂದ ನನ್ನನ್ನು ತಡೆಯಲು ಸಹೋದರರು ಪ್ರಯತ್ನಿಸಿದರು. ಆದರೆ ಆ ಪುರುಷರಲ್ಲೊಬ್ಬನು ನನ್ನ ಕಡೆಗೆ ಸಿಟ್ಟಿನಿಂದ ದಾಪುಗಾಲು ಹಾಕುತ್ತಾ, ತನ್ನ ಜಾಕೇಟನ್ನು ಬಿಚ್ಚಲಾರಂಭಿಸಿದನು. ನಾನು ನನ್ನ ಸೈಕಲಿನಿಂದ ಇಳಿದು, ಅದನ್ನು ಅವನಿಗೆ ಹಿಡಿದುಕೊಳ್ಳಲು ಕೊಟ್ಟು, ನನ್ನ ಕೈಗಳನ್ನು ನನ್ನ ಪ್ಯಾಂಟಿನ ಜೇಬುಗಳಲ್ಲಿ ಹಾಕಿದೆ. ಇದರಿಂದ ಅವನು ಎಷ್ಟು ಆಶ್ಚರ್ಯಗೊಂಡನೆಂದರೆ, ನನಗೆ ಏನು ಹೇಳಲಿಕ್ಕಿತ್ತೊ ಅದನ್ನು ಅವನು ಆಲಿಸಿದನು. ಮನೆಗೆ ಹೋಗಿ ಮಲಗಿ ಅನಂತರ ಬಹಿರಂಗ ಭಾಷಣಕ್ಕೆ ಬರುವಂತೆ ನಾನು ಅವನಿಗೆ ಹೇಳಿದೆ. ಅವನು ಹಾಗೆಯೇ ಮಾಡಿದನು, ಮತ್ತು ಸಾಯಂಕಾಲ 3:00 ಗಂಟೆಗೆ ಸರಿಯಾಗಿ ಅವನು ಅಲ್ಲಿದ್ದನು. ಕಟ್ಟಕಡೆಗೆ, ಹಿಂದೆ ಸೆರೆಯಾಳುಗಳಾಗಿದ್ದ ಸುಮಾರು 20 ಮಂದಿ ಸತ್ಯಕ್ಕೆ ಬಂದರು. ನಾನು 1948ರ ಸೆಪ್ಟೆಂಬರ್ ತಿಂಗಳಲ್ಲಿ ದೀಕ್ಷಾಸ್ನಾನವನ್ನು ಪಡೆದುಕೊಂಡೆ.
ಒಂದು ಕಾರ್ಯಮಗ್ನ ಆದರೂ ಪ್ರತಿಫಲದಾಯಕ ಕಾರ್ಯತಖ್ತೆ
ನಾವು ಸಾರಬೇಕಾದ ಟೆರಿಟೊರಿಗಳನ್ನು ನೋಡಿಕೊಳ್ಳುವ ಮತ್ತು ಬಹಿರಂಗ ಭಾಷಣಗಳನ್ನು ಕೊಡಸಾಧ್ಯವಿರುವ ನಿವೇಶನಗಳನ್ನು ಹುಡುಕುವ ಜವಾಬ್ದಾರಿಯನ್ನು ನನಗೆ ವಹಿಸಲಾಯಿತು. ಇದನ್ನು ಮಾಡಲಿಕ್ಕಾಗಿ, ನಾನು ಗಣಿಗಳಲ್ಲಿ ಕೊನೆಯ ಷಿಫ್ಟ್ನಲ್ಲಿ ಕೆಲಸಮಾಡುವ ಮುಂಚೆ ನನ್ನ ಪುಟ್ಟ ಮೋಟರ್ಸೈಕಲ್ನಲ್ಲಿ ಕೆಲವೊಮ್ಮೆ ಸುಮಾರು 50 ಕಿಲೊಮೀಟರ್ಗಳಷ್ಟು ದೂರ ಪ್ರಯಾಣಿಸಿದ್ದೇನೆ. ನಂತರ, ವಾರಾಂತ್ಯಗಳಲ್ಲಿ ನಾವು ಬಸ್ನಲ್ಲಿ ಟೆರಿಟೊರಿಗೆ ಹೋಗಿ, ಭಾಷಣಕರ್ತನೊಂದಿಗೆ ಇಬ್ಬರು ಅಥವಾ ನಾಲ್ವರು ಪ್ರಚಾರಕರನ್ನು ಅಲ್ಲಿ ಇಳಿಸಿ ಮುಂದೆಸಾಗುತ್ತಿದ್ದೆವು. ದೊಡ್ಡ ಪಟ್ಟಣಗಳಲ್ಲಿ ಒಂದು ಸೂಕ್ತ ಜಾಗ ಸಿಕ್ಕಿದಾಗ, ನಾವು ನಮ್ಮ ಸೂಟ್ಕೇಸ್ಗಳನ್ನು ಒಂದರ ಮೇಲೊಂದನ್ನು ಇಟ್ಟು, ಅದನ್ನು ಭಾಷಣಕರ್ತನ ಸ್ಟ್ಯಾಂಡ್ ಆಗಿ ಉಪಯೋಗಿಸುತ್ತಿದ್ದೆವು. ಹೆಚ್ಚಾಗಿ ನಾವು ಜನರನ್ನು ಆಮಂತ್ರಿಸುತ್ತಿದ್ದ ಬಹಿರಂಗ ಭಾಷಣದ ಶೀರ್ಷಿಕೆಯನ್ನು ಪ್ರಚಾರಮಾಡಲು, ಹಿಂದೆಮುಂದೆ ಬೋರ್ಡ್ಗಳನ್ನು ಧರಿಸುತ್ತಿದ್ದೆವು.
1951ರಲ್ಲಿ, ರೀಮ್ಸ್ನಿಂದ ಬಂದಿದ್ದ ಸೇನೆಟ್ ಶೋಫೊರ್ ಎಂಬ ಸಾಕ್ಷಿಯ ಭೇಟಿಯಾಯಿತು. ಮೊದಲ ನೋಟದಲ್ಲೇ ಪ್ರೀತಿ ಅರಳಿತು. ಒಂದು ವರ್ಷದ ಬಳಿಕ, ನಾವು 1952ರ ಮೇ 17ರಂದು ನಾವು ಮದುವೆಯಾದೆವು. ಡುಏದ ಹತ್ತಿರಲ್ಲಿದ್ದ ಗಣಿ ಪಟ್ಟಣವಾದ ಪೆಕಾನ್ಕೂರ್ಗೆ ನಾವು ಸ್ಥಳಾಂತರಿಸಿದೆವು. ಸ್ವಲ್ಪ ಸಮಯದ ನಂತರ, ನನಗೆ ಆರೋಗ್ಯದ ಸಮಸ್ಯೆಗಳು ಆರಂಭವಾದವು. ಗಣಿಗಳಲ್ಲಿ ಕೆಲಸಮಾಡುವುದರಿಂದ ಉಂಟಾದ ಶ್ವಾಸಕೋಶದ ಅಸ್ವಸ್ಥತೆಯಾದ ಸಿಲಿಕೋಸಿಸ್ ಇದೆಯೆಂದು ತಿಳಿಸಲಾಯಿತು. ಆದರೆ ನನಗೆ ಬೇರೆ ಯಾವುದೇ ರೀತಿಯ ಕೆಲಸವು ಸಿಗಲಿಲ್ಲ. ಆದುದರಿಂದ 1955ರಲ್ಲಿ, ಜರ್ಮನಿಯ ನ್ಯೂರೆಂಬರ್ಗ್ನಲ್ಲಿ ನಡೆದ ಅಂತಾರಾಷ್ಟ್ರೀಯ ಸಮ್ಮೇಳನದ ಸಮಯದಲ್ಲಿ, ನಮಗೆ ರೈನ್ ನದಿಯ ಪಕ್ಕದಲ್ಲಿರುವ ಒಂದು ಚಿಕ್ಕ ಉದ್ಯಮ ಪಟ್ಟಣವಾಗಿರುವ ಕೇಲ್ನಲ್ಲಿದ್ದ ಒಂದು ಚಿಕ್ಕ ಸಭೆಗೆ ಸಹಾಯಮಾಡಲು ಕೇಳಲ್ಪಟ್ಟಾಗ, ನಮಗೆ ಅಲ್ಲಿ ಹೋಗಲು ಯಾವುದೇ ಅಡ್ಡಿಗಳಿರಲಿಲ್ಲ. ಆ ಸಮಯದಲ್ಲಿ ಸಭೆಯಲ್ಲಿ ಕೇವಲ 45 ಪ್ರಚಾರಕರಿದ್ದರು. ಮುಂದಿನ ಏಳು ವರ್ಷಗಳ ವರೆಗೆ ನಾವು ಈ ಸಭೆಯೊಂದಿಗೆ ಕೆಲಸಮಾಡಿದೆವು ಮತ್ತು ಪ್ರಚಾರಕರ ಸಂಖ್ಯೆಯು 95ಕ್ಕೆ ಏರಿತು.
ಇನ್ನೂ ಹೆಚ್ಚಿನ ಸೇವಾ ಸುಯೋಗಗಳು
ಆ ಸಭೆಯು ದೃಢವಾಗಿ ಸ್ಥಾಪನೆಯಾಗಿರುವುದನ್ನು ನೋಡಿ, ಫ್ರಾನ್ಸ್ನಲ್ಲಿ ವಿಶೇಷ ಪಯನೀಯರುಗಳಾಗಿ ಕೆಲಸಮಾಡುವ ನೇಮಕವನ್ನು ಕೊಡುವಂತೆ ಸೊಸೈಟಿಗೆ ಕೇಳಿಕೊಂಡೆವು. ನಾವು ಪ್ಯಾರಿಸ್ಗೆ ನೇಮಿಸಲ್ಪಟ್ಟಾಗ ನಮಗೆ ತುಂಬ ಆಶ್ಚರ್ಯವಾಯಿತು. ಅಲ್ಲಿ ನಾವು ಕಳೆದಂತಹ ಎಂಟು ತಿಂಗಳು, ತುಂಬ ಆನಂದಮಯವಾಗಿದ್ದವು. ಸೇನೆಟ್ ಮತ್ತು ನಾನು ಒಟ್ಟಿಗೆ 42 ಬೈಬಲ್ ಅಭ್ಯಾಸಗಳನ್ನು ನಡೆಸುವ ಸುಯೋಗ ನಮಗಿತ್ತು. ನಮ್ಮ ವಿದ್ಯಾರ್ಥಿಗಳಲ್ಲಿ ಐದು ಮಂದಿ ನಾವು ಅಲ್ಲಿದ್ದಾಗಲೇ ದೀಕ್ಷಾಸ್ನಾನಪಡೆದುಕೊಂಡರು ಮತ್ತು ಇತರ 11 ಮಂದಿ ತದನಂತರ ಸತ್ಯವನ್ನು ಸ್ವೀಕರಿಸಿದರು.
ನಾವು ಲ್ಯಾಟಿನ ಕ್ವಾರ್ಟರ್ನಲ್ಲಿ ವಾಸಿಸುತ್ತಿದ್ದರಿಂದ, ನಾವು ಸಾರ್ಬನ್ ವಿಶ್ವವಿದ್ಯಾನಿಲಯದ ಅನೇಕ ಪ್ರೊಫೆಸರ್ಗಳನ್ನು ಭೇಟಿಯಾಗುತ್ತಿದ್ದೆವು. ಭಕ್ತಿಚಿಕಿತ್ಸೆಯನ್ನು ನಡಿಸುತ್ತಿದ್ದ, ತತ್ವಜ್ಞಾನದ ಒಬ್ಬ ನಿವೃತ್ತ ಪ್ರೊಫೆಸರನು ಬೈಬಲನ್ನು ಅಭ್ಯಾಸಿಸಿ, ಕೊನೆಯಲ್ಲಿ ಒಬ್ಬ ಯೆಹೋವನ ಸಾಕ್ಷಿಯಾದನು. ಒಂದು ದಿನ, ಜೆಸ್ಯುಟ್ ಶಿಕ್ಷಕರೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದ ಒಬ್ಬ ಸಿವಿಲ್ ಇಂಜಿನಿಯರನೊಂದಿಗೆ ನಾನು ಒಂದು ಬೈಬಲ್ ಚರ್ಚೆಯನ್ನು ಆರಂಭಿಸಿದೆ. ಅವನು ನಮ್ಮ ಮನೆಗೆ ಮಧ್ಯಾಹ್ನ ಮೂರು ಗಂಟೆಗೆ ಬಂದು, ರಾತ್ರಿ ಹತ್ತು ಗಂಟೆಗೆ ಹೊರಟಹೋದನು. ಒಂದೂವರೆ ತಾಸುಗಳ ನಂತರ, ಅವನು ಪುನಃ ಹಿಂದಿರುಗಿದಾಗ ನಮಗೆ ಆಶ್ಚರ್ಯವಾಯಿತು. ಅವನು ಒಬ್ಬ ಜೆಸ್ಯುಟ್ ವ್ಯಕ್ತಿಯೊಂದಿಗೆ ಮಾತಾಡಿದ್ದನಂತೆ, ಆದರೆ ಬೈಬಲ್ ಪ್ರವಾದನೆಯ ಕುರಿತಾಗಿ ತನಗಿದ್ದ ಪ್ರಶ್ನೆಗಳನ್ನು ಆ ವ್ಯಕ್ತಿ ಉತ್ತರಿಸಲಿಲ್ಲ ಎಂದು ಅವನು ಹೇಳಿದನು. ಮುಂಜಾನೆ ಒಂದು ಗಂಟೆಗೆ ಅವನು ತನ್ನ ಮನೆಗೆ ಹೊರಟನು, ಆದರೆ ಪುನಃ ಏಳು ಗಂಟೆಗೆ ಹಿಂದಿರುಗಿ ಬಂದನು. ಸಮಯಾನಂತರ ಅವನು ಸಹ ಒಬ್ಬ ಯೆಹೋವನ ಸಾಕ್ಷಿಯಾದನು. ಸತ್ಯಕ್ಕಾಗಿ ಜನರಿಗಿದ್ದ ಅಂತಹ ದಾಹವು, ನನಗೂ ನನ್ನ ಪತ್ನಿಗೂ ತುಂಬ ಉತ್ತೇಜನವನ್ನು ಕೊಟ್ಟಿತು.
ಪ್ಯಾರಿಸ್ನಲ್ಲಿ ಸೇವೆ ಸಲ್ಲಿಸಿದ ನಂತರ, ಫ್ರಾನ್ಸ್ನ ಪೂರ್ವ ಕ್ಷೇತ್ರದಲ್ಲಿ ಸಂಚರಣ ಮೇಲ್ವಿಚಾರಕನಾಗಿ ಸೇವೆಮಾಡಲು ನನ್ನನ್ನು ಆಮಂತ್ರಿಸಲಾಯಿತು. ಫ್ರೆಂಚ್ ಮತ್ತು ಜರ್ಮನ್ ಭಾಷೆಯನ್ನಾಡುವ ಸಭೆಗಳನ್ನು ಸಂದರ್ಶಿಸಿ, ನಮ್ಮ ಸಹೋದರರನ್ನು ಬಲಪಡಿಸುವುದು ನಮಗೆ ತುಂಬ ಆನಂದವನ್ನು ತಂದಿತು. ಲೊರೇನ್ನಲ್ಲಿ, ರಾಂಬಾಸ್ ಸಭೆಯನ್ನು ಭೇಟಿಮಾಡುತ್ತಿದ್ದಾಗ, ನಾನು ಸ್ಟಾನೀಸ್ವಾಸ್ ಆಂಬ್ರಾಸ್ಚಾಕ್ನನ್ನು ಭೇಟಿಯಾದೆ. ಅವನು ಯುದ್ಧದ ಸಮಯದಲ್ಲಿ ಮಿತ್ರಪಡೆಗಳ ಜಲಾಂತರ್ಗಾಮಿಯಲ್ಲಿ ಕೆಲಸಮಾಡಿದ್ದ ಮತ್ತು ನಾರ್ವೇಯ ಸಮುದ್ರಕ್ಷೇತ್ರಗಳಲ್ಲಿ ಯುದ್ಧಮಾಡಿದ್ದ ಪೊಲೆಂಡಿನ ಒಬ್ಬ ವ್ಯಕ್ತಿಯಾಗಿದ್ದನು. ನಾವು ಒಂದೇ ಸಮುದ್ರದಲ್ಲಿ ಯಾನಮಾಡುತ್ತಿದ್ದರೂ, ವಿರುದ್ಧ ಪಕ್ಷಗಳಲ್ಲಿದ್ದೆವು. ಆದರೆ ಈಗ ನಾವು ನಮ್ಮ ದೇವರಾದ ಯೆಹೋವನನ್ನು ಸೇವಿಸುತ್ತಾ ಜೊತೆಯಾಗಿ ಕೆಲಸಮಾಡುತ್ತಿದ್ದ ಸಹೋದರರಾಗಿದ್ದೆವು. ಪ್ಯಾರಿಸ್ನಲ್ಲಿನ ಇನ್ನೊಂದು ಸಮ್ಮೇಳನದಲ್ಲಿ, ನನಗೆ ಪರಿಚಯವಿದ್ದ ಒಬ್ಬ ವ್ಯಕ್ತಿಯನ್ನು ನೋಡಿದೆ. ಉತ್ತರ ಫ್ರಾನ್ಸ್ನಲ್ಲಿ ನಾನು ಸೆರೆಯಾಳಾಗಿದ್ದ ಶಿಬಿರದ ಕಮಾಂಡರ್ ಅವನಾಗಿದ್ದನು. ಆ ಅಧಿವೇಶನದ ಸಮಯದಲ್ಲಿ ಜೊತೆಯಾಗಿ ಕೆಲಸಮಾಡಲು ನಾವು ಬಹಳ ಸಂತೋಷಪಟ್ಟೆವು! ದೇವರ ವಾಕ್ಯವು ಎಷ್ಟು ಪ್ರಭಾವಶಾಲಿಯಾಗಿದೆಯೆಂದರೆ, ಒಮ್ಮೆ ಶತ್ರುಗಳಾಗಿದ್ದವರನ್ನು ಸಹೋದರರು ಮತ್ತು ಆಪ್ತ ಸ್ನೇಹಿತರನ್ನಾಗಿ ಮಾಡುತ್ತದೆ!
ದುಃಖಕರವಾಗಿ, ಸಂಚರಣ ಕೆಲಸದಲ್ಲಿ 14 ವರ್ಷಗಳನ್ನು ಕಳೆದ ನಂತರ, ನನ್ನ ಕ್ಷೀಣಿಸುತ್ತಿರುವ ಆರೋಗ್ಯದಿಂದಾಗಿ ನಾನು ಅದನ್ನು ನಿಲ್ಲಿಸಬೇಕಾಯಿತು. ಆದರೆ ನನ್ನ ಹೆಂಡತಿ ಮತ್ತು ನಾನು ಯೆಹೋವನ ಸೇವೆಯಲ್ಲಿ ನಮ್ಮಿಂದಾಗುವಷ್ಟನ್ನು ಮಾಡಲು ದೃಢನಿಶ್ಚಯವುಳ್ಳವರಾಗಿದ್ದೆವು. ಆದುದರಿಂದ ನಮಗೆ ಪೂರ್ವ ಫ್ರಾನ್ಸ್ನಲ್ಲಿರುವ ಮಲ್ಹೌಸ್ ಪಟ್ಟಣದಲ್ಲಿ ವಸತಿ ಹಾಗೂ ಉದ್ಯೋಗವನ್ನು ಪಡೆದುಕೊಂಡೆವು ಮತ್ತು ನಾವು ಪಯನೀಯರರಾದೆವು (ಪೂರ್ಣ ಸಮಯದ ಸೌವಾರ್ತಿಕರು).
ಅನೇಕ ವರ್ಷಗಳಿಂದ ನನಗೆ ದೊರಕಿರುವ ಇನ್ನೊಂದು ಆನಂದವು, ರಾಜ್ಯ ಸಭಾಗೃಹಗಳ ನಿರ್ಮಾಣ ಕಾರ್ಯದಲ್ಲಿ ನನ್ನ ಒಳಗೂಡುವಿಕೆಯಾಗಿದೆ. 1985ರಲ್ಲಿ, ಪೂರ್ವ ಫ್ರಾನ್ಸ್ಗಾಗಿ ಒಂದು ನಿರ್ಮಾಣಕಾರ್ಯ ತಂಡವನ್ನು ಸಂಘಟಿಸಲು ನನ್ನನ್ನು ಕೇಳಿಕೊಳ್ಳಲಾಯಿತು. ಕುಶಲ ಕೆಲಸಗಾರರನ್ನು ಉಪಯೋಗಿಸುವ ಮತ್ತು ಸಿದ್ಧಮನಸ್ಸಿನ ಸ್ವಯಂಸೇವಕರನ್ನು ತರಬೇತಿಗೊಳಿಸುವ ಮೂಲಕ ನಾವು ಒಂದು ತಂಡವನ್ನು ರಚಿಸಲು ಶಕ್ತರಾಗಿದ್ದೆವು. ಈ ತಂಡವು, 80ಕ್ಕಿಂತಲೂ ಹೆಚ್ಚು ಸಭಾಗೃಹಗಳ ನಿರ್ಮಾಣಕಾರ್ಯದಲ್ಲಿ ಅಥವಾ ಯೆಹೋವನ ಆರಾಧನೆಗಾಗಿ ಅವು ಯೋಗ್ಯವಾಗಿರುವಂತೆ ಅವುಗಳ ಜೀರ್ಣೋದ್ಧಾರದಲ್ಲಿ ಪಾಲ್ಗೊಂಡಿತು. 1993ರಲ್ಲಿ, ದಕ್ಷಿಣ ಅಮೆರಿಕದ ಫ್ರೆಂಚ್ ಗಯಾನದಲ್ಲಿ ಒಂದು ಅಸೆಂಬ್ಲಿ ಹಾಲ್ ಮತ್ತು ಐದು ರಾಜ್ಯ ಸಭಾಗೃಹಗಳ ನಿರ್ಮಾಣದಲ್ಲಿ ಕೆಲಸಮಾಡಲು ನಾನು ತುಂಬ ಸಂತೋಷಪಟ್ಟೆ!
ಸಂಕಷ್ಟಗಳ ಎದುರಿನಲ್ಲೂ ಮುಂದೊತ್ತುವುದು
ದೇವಪ್ರಭುತ್ವ ಚಟುವಟಿಕೆಯ ಕಳೆದ 50 ವರ್ಷಗಳಲ್ಲಿ, ನನ್ನ ಜೀವಿತವು ಮಹಾನಂದಗಳು ಮತ್ತು ಸೇವಾ ಸುಯೋಗಗಳಿಂದ ತುಂಬಿದೆಯೆಂದು ನಾನು ಖಂಡಿತವಾಗಿಯೂ ಹೇಳಸಾಧ್ಯವಿದೆ. ನನ್ನೊಂದಿಗೆ 43 ವರ್ಷಗಳ ವರೆಗೆ ಜೊತೆಯಾಗಿ ಬಾಳಿದ ನನ್ನ ಪ್ರಿಯ ಪತ್ನಿ 1995ರಲ್ಲಿ ಮರಣಹೊಂದಿದಳು. ಇದು ನನಗೆ ಅತೀವ ದುಃಖ ತಂದಿತು, ನಾನು ಈಗಲೂ ದುಃಖಿಸುತ್ತೇನೆ. ಆದರೆ ಯೆಹೋವನು ನನಗೆ ಬಲವನ್ನು ಒದಗಿಸುತ್ತಾನೆ, ಮತ್ತು ನನ್ನ ಆತ್ಮಿಕ ಸಹೋದರ ಸಹೋದರಿಯರು, ಸಮಯ ದಾಟಿದಂತೆ ನನ್ನ ನೋವನ್ನು ಸ್ವಲ್ಪಮಟ್ಟಿಗೆ ಕಡಿಮೆಗೊಳಿಸುವಂತಹ ಪ್ರೀತಿ ಮತ್ತು ಬೆಂಬಲವನ್ನು ನೀಡಿದ್ದಾರೆ.
1963ರಲ್ಲಿ, ಜರ್ಮನಿ ಮ್ಯೂನಿಕ್ನಲ್ಲಿನ ಒಂದು ಸಮ್ಮೇಳನದಲ್ಲಿ ಒಬ್ಬ ಅಭಿಷಿಕ್ತ ಸಹೋದರನು ಹೇಳಿದ ಮಾತುಗಳನ್ನು ನಾನು ಈಗಲೂ ಸ್ಪಷ್ಟವಾಗಿ ನೆನಪಿಸಿಕೊಳ್ಳಬಲ್ಲೆ. ಅವರಂದದ್ದು: “ಆ್ಯಂಡ್ರೇ, ಎಡಬಲಕ್ಕೆ ನೋಡಬೇಡ. ಯಾತನಾ ಶಿಬಿರಗಳಲ್ಲಿದ್ದ ಸಹೋದರರು ಅನೇಕ ಪರೀಕ್ಷೆಗಳನ್ನು ಎದುರಿಸಬೇಕಾಯಿತು. ಈಗ ಕೆಲಸವನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ. ನಮ್ಮ ಕುರಿತಾಗಿ ನಾವೇ ಎಂದೂ ಮರುಗಬಾರದು. ಆದುದರಿಂದ ನೀನು ಮುಂದೊತ್ತುತ್ತಾ ಇರು!” ನಾನು ಇದನ್ನು ಯಾವಾಗಲೂ ಮನಸ್ಸಿನಲ್ಲಿಟ್ಟುಕೊಂಡಿದ್ದೇನೆ. ಅಸ್ವಸ್ಥತೆ ಮತ್ತು ವೃದ್ಧಾಪ್ಯದಿಂದಾಗಿ ನಾನು ಹೆಚ್ಚನ್ನು ಮಾಡಲು ಸಾಧ್ಯವಾಗದಿರುವುದರಿಂದ, ಇಬ್ರಿಯ 6:10ರಲ್ಲಿರುವ ಮಾತುಗಳು ನನಗೆ ಯಾವಾಗಲೂ ಸಾಂತ್ವನವನ್ನು ಕೊಡುತ್ತವೆ: “ಈ ಕೆಲಸವನ್ನೂ ಇದರಲ್ಲಿ ನೀವು ದೇವರ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯನ್ನೂ ಆತನು ಮರೆಯುವದಕ್ಕೆ ಅನ್ಯಾಯಸ್ಥನಲ್ಲ.” ಒಬ್ಬ ವ್ಯಕ್ತಿಗೆ, ಯೆಹೋವನ ಸೇವೆಯನ್ನು ಮಾಡುವುದಕ್ಕಿಂತಲೂ ದೊಡ್ಡ ಸುಯೋಗವಿರಸಾಧ್ಯವಿಲ್ಲ. ಕಳೆದ 50 ವರ್ಷಗಳಿಂದ, ‘ಅವಮಾನಕ್ಕೆ ಗುರಿಯಾಗದ ಕೆಲಸದವನಾಗಿರುವುದು’ ನನ್ನ ಗುರಿಯಾಗಿತ್ತು ಮತ್ತು ಈಗಲೂ ನನ್ನ ಗುರಿ ಅದೇ ಆಗಿದೆ.—2 ತಿಮೊಥೆಯ 2:15.
[ಪುಟ 22 ರಲ್ಲಿರುವ ಚಿತ್ರ]
ನಾರ್ವೆಯ ಸಮುದ್ರದ ಒಳಚಾಚುಗಳಲ್ಲಿ ನಾನು ಕೆಲಸಮಾಡುತ್ತಿದ್ದಂತಹದ್ದೇ ರೀತಿಯ ಹಡಗು
[ಪುಟ 23 ರಲ್ಲಿರುವ ಚಿತ್ರ]
ಉತ್ತರ ಫ್ರಾನ್ಸ್ನಲ್ಲಿ ಸೈಕಲ್ನಲ್ಲಿ ಪ್ರಯಾಣಿಸುತ್ತಾ ಸಾರುತ್ತಿರುವುದು
[ಪುಟ 23 ರಲ್ಲಿರುವ ಚಿತ್ರ]
ಒಂದರ ಮೇಲೊಂದಾಗಿ ಇಡಲ್ಪಟ್ಟ ಸೂಟ್ಕೇಸುಗಳು, ಬಹಿರಂಗ ಭಾಷಣಕ್ಕಾಗಿ ಭಾಷಣಕರ್ತನ ಸ್ಟ್ಯಾಂಡ್ ಆಗುತ್ತಿತ್ತು
[ಪುಟ 24 ರಲ್ಲಿರುವ ಚಿತ್ರ]
1952ರಲ್ಲಿ ನಮ್ಮ ಮದುವೆಯ ಸಮಯದಲ್ಲಿ ನನ್ನ ಪತ್ನಿ ಸೀನೆಟ್ಳೊಂದಿಗೆ