ಜೀವಿತದ ಅತ್ಯುತ್ತಮ ಮಾರ್ಗದಲ್ಲಿ ಐಕ್ಯರಾಗಿರುವುದು
ಲೋಕದ ಜನಸಂಖ್ಯೆಯು ಹೀಗೆಯೇ ಹೆಚ್ಚುತ್ತಾ ಹೋಗುವಲ್ಲಿ, ಶೀಘ್ರದಲ್ಲೇ ಭೂಮಿಯ ಮೇಲೆ ಆರುನೂರು ಕೋಟಿಯಷ್ಟು ಜನರು ಇರುವರು. ಅವರೆಲ್ಲರೂ ಏಕಮಾತ್ರ ಪೂರ್ವಜನಿಂದ ಬಂದಿರುವುದಾದರೂ, ತಾವು ಒಂದು ಭೌಗೋಲಿಕ ಕುಟುಂಬದ ಸದಸ್ಯರಾಗಿದ್ದೇವೆ, ವಿವೇಕಿಯೂ ಪ್ರೀತಿಪೂರ್ಣನೂ ಆದ ಒಬ್ಬನೇ ಸೃಷ್ಟಿಕರ್ತನಿಗೆ ಉತ್ತರವಾದಿಗಳಾಗಿದ್ದೇವೆ ಎಂಬುದನ್ನು ಅನೇಕರು ಒಪ್ಪಿಕೊಳ್ಳುವಂತೆ ಕಾಣುವುದಿಲ್ಲ. ರಾಷ್ಟ್ರಗಳು, ಜಾತಿಗಳು, ಮತ್ತು ಸಂಸ್ಕೃತಿಗಳ ನಡುವಿನ ಭಿನ್ನಾಭಿಪ್ರಾಯಗಳು ಹಾಗೂ ಕಲಹಗಳು, ಲೋಕದ ವಿಷಾದಕರ ಸನ್ನಿವೇಶಗಳ ಕರಾಳ ಚಿತ್ರಣವನ್ನು ನಮ್ಮ ಕಣ್ಣಮುಂದೆ ತರುತ್ತದೆ.
ಸದ್ಯದ ಲೋಕ ಸನ್ನಿವೇಶಗಳನ್ನು ನೋಡುವಾಗ, ಭೂವ್ಯಾಪಕ ಐಕ್ಯವು ಪೂರೈಸಲು ಅಸಾಧ್ಯವಾದ ಒಂದು ಗುರಿಯೋಪಾದಿ ಕಂಡುಬರಬಹುದು. ದ ಕೊಲಂಬಿಯ ಹಿಸ್ಟರಿ ಆಫ್ ದ ವರ್ಲ್ಡ್ ಹೇಳುವುದು: “ಐಕ್ಯವಾಗಿ ಜೀವಿಸುವುದು ಹೇಗೆ ಎಂಬ ಅತಿ ಪ್ರಾಮುಖ್ಯ ಪ್ರಶ್ನೆಗೆ, ಸಮಕಾಲೀನ ಲೋಕವು ಕಡಿಮೆಪಕ್ಷ ಒಂದು ಹೊಸ ಉಪಾಯವನ್ನು ಸೂಚಿಸಲು ಅಸಮರ್ಥವಾಗಿದೆ.”
ಏನೇ ಆಗಲಿ, ಭೂಮಿಯ ಸರ್ವ ನಿವಾಸಿಗಳನ್ನು ಐಕ್ಯಗೊಳಿಸುವುದಕ್ಕೆ ಯಾವುದೇ ಹೊಸ ಉಪಾಯದ ಅಗತ್ಯವಿಲ್ಲ. ಐಕ್ಯಭಾವಕ್ಕೆ ನಡಿಸುವ ಮಾರ್ಗವು ಪವಿತ್ರ ಶಾಸ್ತ್ರಗಳಲ್ಲಿ ಕೊಡಲ್ಪಟ್ಟಿದೆ. ಭೂಮಿಯನ್ನೂ ಅದರಲ್ಲಿರುವ ಸಮಸ್ತ ಜೀವರಾಶಿಗಳನ್ನೂ ಸೃಷ್ಟಿಸಿದಾತನನ್ನು ಆರಾಧಿಸುವುದು ಅದರ ಮುಖ್ಯ ವಿಚಾರವಾಗಿದೆ. ಆಲೋಚನೆ, ಉದ್ದೇಶ, ಮತ್ತು ಜೀವನ ಮಾರ್ಗಗಳ ನಿಜ ಐಕ್ಯಭಾವವು ಈಗಾಗಲೇ ದೇವಜನರ ನಡುವೆ ಅಸ್ತಿತ್ವದಲ್ಲಿದೆ. 233 ದೇಶಗಳಲ್ಲಿರುವ ಅವರು ಐವತ್ತೈದು ಲಕ್ಷಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದು, ದೇವರ ಜೀವನ ಮಾರ್ಗವು ಅತ್ಯುತ್ತಮ ಮಾರ್ಗವಾಗಿದೆ ಎಂಬ ನಿಶ್ಚಿತಾಭಿಪ್ರಾಯದಲ್ಲಿ ಐಕ್ಯರಾಗಿದ್ದಾರೆ. ಕೀರ್ತನೆಗಾರನಂತೆ ಅವರು ಹೀಗೆ ಪ್ರಾರ್ಥಿಸುತ್ತಾರೆ: “ಯೆಹೋವನೇ, ನಿನ್ನ ಮಾರ್ಗವನ್ನು ನನಗೆ ಬೋಧಿಸು; ನಿನ್ನ ಸತ್ಯತೆಯನ್ನು ನನ್ನ ದೃಷ್ಟಿಯಲ್ಲೇ ಇಟ್ಟುಕೊಂಡು ನಡೆಯುವೆನು. ನಾನು ನಿನ್ನ ನಾಮದಲ್ಲಿ ಭಯಭಕ್ತಿಯಿಂದಿರುವಂತೆ ಏಕಮನಸ್ಸನ್ನು ಅನುಗ್ರಹಿಸು.”—ಕೀರ್ತನೆ 86:11
ಈ ರೀತಿ ಜನರನ್ನು ಶುದ್ಧಾರಾಧನೆಯಲ್ಲಿ ಐಕ್ಯಗೊಳಿಸುವುದರ ಬಗ್ಗೆ, ಬಹಳ ಸಮಯದ ಹಿಂದೆಯೇ ಪ್ರವಾದಿಯಾದ ಯೆಶಾಯನು ಮುಂತಿಳಿಸಿದ್ದನು. ಅವನು ಬರೆದುದು: “ಅಂತ್ಯಕಾಲದಲ್ಲಿ ಯೆಹೋವನ ಮಂದಿರದ ಬೆಟ್ಟವು ಗುಡ್ಡಬೆಟ್ಟಗಳಿಗಿಂತ ಉನ್ನತೋನ್ನತವಾಗಿ ಬೆಳೆದು ನೆಲೆಗೊಳ್ಳುವದು; ಆಗ ಸಕಲದೇಶಗಳವರು ಅದರ ಕಡೆಗೆ ಪ್ರವಾಹಗಳಂತೆ ಬರುವರು. ಹೊರಟುಬಂದ ಬಹು ಜನಾಂಗದವರು—ಬನ್ನಿರಿ, ಯೆಹೋವನ ಪರ್ವತಕ್ಕೆ, ಯಾಕೋಬ್ಯರ ದೇವರ ಮಂದಿರಕ್ಕೆ, ಹೋಗೋಣ! ಆತನು ತನ್ನ ಮಾರ್ಗಗಳ ವಿಷಯವಾಗಿ ನಮಗೆ ಬೋಧನೆ ಮಾಡುವನು, ನಾವು ಆತನ ದಾರಿಗಳಲ್ಲಿ ನಡೆಯುವೆವು ಎಂದು ಹೇಳುವರು.”—ಯೆಶಾಯ 2:2, 3.
ಯೆಹೋವನ ಸಾಕ್ಷಿಗಳ ಐಕ್ಯಭಾವವು ಅಪೂರ್ವವಾದದ್ದಾಗಿದೆ. ಲೋಕವ್ಯಾಪಕವಾಗಿರುವ 87,000 ಸಭೆಗಳಲ್ಲಿ, ಪ್ರತಿ ವಾರ ಅವರು ತಮ್ಮ ಕೂಟಗಳಲ್ಲಿ ಒಂದೇ ರೀತಿಯ ಆತ್ಮಿಕ ಆಹಾರವನ್ನು ಪಡೆದುಕೊಳ್ಳುತ್ತಾರೆ. (ಮತ್ತಾಯ 24:45-47) 1998ರ ಮಧ್ಯ ಭಾಗದಿಂದ 1999ರ ಆರಂಭದ ತನಕ, ಸಾಕ್ಷಿಗಳ ತಮ್ಮ ಐಕ್ಯವನ್ನು ಇನ್ನೊಂದು ವಿಧದಲ್ಲಿ ತೋರ್ಪಡಿಸಿದರು. ಲೋಕವ್ಯಾಪಕವಾಗಿ ನಡೆದ ಮೂರು ದಿನದ “ದೇವರ ಜೀವನ ಮಾರ್ಗ” ಎಂಬ ತಮ್ಮ ಅಧಿವೇಶನಗಳಲ್ಲಿ ಒಟ್ಟುಗೂಡಿಬರುವ ಮೂಲಕ ಅವರದನ್ನು ವ್ಯಕ್ತಪಡಿಸಿದರು. 13 ದೇಶಗಳಲ್ಲಿ, ಈ ಒಟ್ಟುಗೂಡುವಿಕೆಗಳಲ್ಲಿ ಪ್ರತಿನಿಧಿಗಳ ದೊಡ್ಡ ತಂಡವು ಒಳಗೂಡಿದ್ದು, ಇವುಗಳನ್ನು ಅಂತಾರಾಷ್ಟ್ರೀಯ ಅಧಿವೇಶನಗಳೆಂದು ಕರೆಯಲಾಗಿತ್ತು. ಇನ್ನಿತರ ಒಟ್ಟುಗೂಡುವಿಕೆಗಳನ್ನು ಜಿಲ್ಲಾ ಅಧಿವೇಶನಗಳೆಂದು ಕರೆಯಲಾಗಿತ್ತು. ಆದರೆ ಈ ಎಲ್ಲ ಅಧಿವೇಶನಗಳು ಒಂದೇ ರೀತಿಯ ಆತ್ಮಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದವು.
ಸಂತೋಷಭರಿತರೂ, ಸುಶೋಭಿತ ಉಡುಪನ್ನು ತೊಟ್ಟವರೂ ಆಗಿದ್ದು, ಯೆಹೋವನಿಂದ ಕಲಿಸಲ್ಪಡುವುದಕ್ಕಾಗಿ ಸಭಾಂಗಣಗಳಿಗೆ ಹಾಗೂ ಕ್ರೀಡಾಂಗಣಗಳಿಗೆ ಪ್ರವಾಹದೋಪಾದಿ ಬರುತ್ತಿದ್ದ ಪ್ರತಿನಿಧಿಗಳನ್ನು ನೋಡುವುದು ಎಷ್ಟು ನಯನಮನೋಹರ ದೃಶ್ಯವಾಗಿತ್ತು! ಅಮೆರಿಕದ ಮಿಶಿಗನ್ನಲ್ಲಿ ನಡೆದ ಅಂತಾರಾಷ್ಟ್ರೀಯ ಅಧಿವೇಶನಕ್ಕೆ ಹೋಗಿದ್ದ ಒಬ್ಬ ಪ್ರತಿನಿಧಿಯ ಅಭಿವ್ಯಕ್ತಿಯು ತುಂಬ ವಿಶೇಷವಾಗಿತ್ತು. ಅವಳು ಹೇಳಿದ್ದು: “ಲೋಕದ ಎಲ್ಲ ಭಾಗಗಳಿಂದ—ಚೆಕ್ ರಿಪಬ್ಲಿಕ್, ಬಾರ್ಬೇಡಸ್, ನೈಜೀರಿಯ, ಹಂಗೆರಿ, ಇಂಗ್ಲೆಂಡ್, ಹಾಲೆಂಡ್, ಇಥಿಯೋಪಿಯ, ಕೆನ್ಯ, ಮತ್ತು ಇನ್ನಿತರ ಅನೇಕ ದೇಶಗಳಿಂದ—ಬಂದ ನಮ್ಮ ಸಹೋದರರು, ಪರಸ್ಪರ ಆಲಿಂಗಿಸುವುದನ್ನು ನೋಡುವುದು ತುಂಬ ಮನಮೋಹಕವಾದ ದೃಶ್ಯವಾಗಿತ್ತು! ಅವರಲ್ಲಿ ಒಬ್ಬರಿಗೆ ಇನ್ನೊಬ್ಬರಲ್ಲಿರುವ ಪ್ರೀತಿ ಹಾಗೂ ತಮ್ಮ ದೇವರಾದ ಯೆಹೋವನಲ್ಲಿರುವ ಪ್ರೀತಿಯ ಕಾರಣದಿಂದ, ಆನಂದಬಾಷ್ಪವನ್ನು ಸುರಿಸುತ್ತಾ ಸಹೋದರರು ಒಟ್ಟಿಗೆ ಐಕ್ಯರಾಗಿರುವುದನ್ನು ನೋಡುವುದು ಮನೋಹರವಾದ ನೋಟವಾಗಿತ್ತು.” ಭೂವ್ಯಾಪಕವಾಗಿ ಕೋಟಿಗಟ್ಟಲೆ ಜನರು ಹಾಜರಾಗಿ ಆನಂದವನ್ನು ಪಡೆದುಕೊಂಡ ಅಧಿವೇಶನದ ಕಾರ್ಯಕ್ರಮದ ಬಗ್ಗೆ ಮುಂದಿನ ಲೇಖನವು ಇನ್ನೂ ಹೆಚ್ಚನ್ನು ತಿಳಿಯಪಡಿಸುವುದು.
[ಪುಟ 3 ರಲ್ಲಿರುವ ಚಿತ್ರ ಕೃಪೆ]
Mountain High Maps® Copyright © 1997 Digital Wisdom, Inc.