ಅಹಂಕಾರದ ಪರಿಣಾಮ—ಎಷ್ಟು ಗಂಭೀರ?
ಉದ್ದೇಶಪೂರ್ವಕವಾಗಿ ನಿಮ್ಮನ್ನು ತುಂಬ ಕೀಳಾಗಿ ನೋಡುವಂತಹ ಒಬ್ಬ ವ್ಯಕ್ತಿಯೊಂದಿಗೆ ನೀವು ಎಂದಾದರೂ ವ್ಯವಹರಿಸಿದ್ದೀರೊ? ಒಬ್ಬ ಮ್ಯಾನೇಜರನೊ, ಒಬ್ಬ ಅಧಿಕಾರಿಯೊ, ಒಬ್ಬ ಮೇಲ್ವಿಚಾರಕನೊ, ಅಥವಾ ಒಬ್ಬ ಸಂಬಂಧಿಕನೊ ನಿಮ್ಮನ್ನು ಕೀಳಾಗಿ ನೋಡಿರಬಹುದು ಇಲ್ಲವೆ ಕಡೆಗಣಿಸಿರಬಹುದು. ಆ ವ್ಯಕ್ತಿಯ ಕುರಿತು ನಿಮ್ಮ ಅನಿಸಿಕೆ ಏನು? ಅವನ ವ್ಯಕ್ತಿತ್ವವು ನಿಮ್ಮನ್ನು ಆಕರ್ಷಿಸಿತ್ತೊ? ಇಲ್ಲವೇ ಇಲ್ಲ! ಏಕೆ? ಏಕೆಂದರೆ ಆ ವ್ಯಕ್ತಿಯ ಅಹಂಕಾರವು ನಿಮಗೆ ಅಡ್ಡಗೋಡೆಯಾಗಿ, ಅವನೊಂದಿಗೆ ಮಾತಾಡದಂತೆ ಮಾಡುತ್ತದೆ.
ಅಹಂಕಾರವು, ಬೇರೆ ಎಲ್ಲರನ್ನೂ ತುಚ್ಛವಾಗಿ ಕಾಣುವಂತೆ ಮಾಡುತ್ತದೆ, ಮತ್ತು ತಾನು ಎಲ್ಲರಿಗಿಂತ ಶ್ರೇಷ್ಟನೆಂದು ಯಾವಾಗಲೂ ಭಾವಿಸುವಂತೆ ಮಾಡುತ್ತದೆ. ಅಂತಹ ಮನೋಭಾವವುಳ್ಳ ಒಬ್ಬ ವ್ಯಕ್ತಿಯು ಇತರರ ಕುರಿತು ಒಳ್ಳೇದನ್ನು ಹೇಳುವುದು ತೀರ ಅಪರೂಪ. “ಹೌದು, ಅವನಲ್ಲಿ ಕೆಲವೊಂದು ಒಳ್ಳೇ ಗುಣಗಳಿರಬಹುದು. ಆದರೆ ಅವನಿಗೆ ಈ ಸಮಸ್ಯೆಯಿದೆ ಅಥವಾ ಅವನು ಇಂತಹ ತಪ್ಪನ್ನು ಮಾಡುತ್ತಾನೆ” ಎಂದು ಬೇರೆಯವರ ಬಗ್ಗೆ ಅವನು ಯಾವಾಗಲೂ ಏನಾದರೊಂದು ನಕಾರಾತ್ಮಕ ಹೇಳಿಕೆಯನ್ನೇ ಹೇಳುತ್ತಿರುತ್ತಾನೆ.
ಬಂಗಾರದ ಆಲೋಚನೆಗಳು ಬೆಳ್ಳಿಯ ಮಾತುಗಳಲ್ಲಿ (ಇಂಗ್ಲಿಷ್) ಎಂಬ ಪುಸ್ತಕದಲ್ಲಿ, ಅಹಂಕಾರವನ್ನು “ಎಂದೂ ಜಯಿಸಲಾರದಂತಹ ಒಂದು ದುರ್ಗುಣವಾಗಿದೆ. ಅದು ಒಬ್ಬ ವ್ಯಕ್ತಿಯನ್ನು ಹಾಳುಮಾಡುತ್ತದೆ, ಮತ್ತು ಅವನ ಬಗ್ಗೆ ಹೊಗಳಲು ಯಾವುದೇ ಕಾರಣವಿರುವುದಿಲ್ಲ” ಎಂದು ವರ್ಣಿಸಲಾಗಿದೆ. ಯಾರೇ ಆಗಲಿ ಅಂತಹ ವ್ಯಕ್ತಿಯೊಂದಿಗೆ ಸಂಬಂಧ ಬೆಳೆಸಲು ಮುಜುಗರಪಡುವುದರಲ್ಲಿ ಕಿಂಚಿತ್ತಾದರೂ ಆಶ್ಚರ್ಯವಿದೆಯೊ? ನಿಜ ಹೇಳಬೇಕೆಂದರೆ, ಅಹಂಕಾರದ ಪರಿಣಾಮದಿಂದಾಗಿ ಅನೇಕವೇಳೆ ಅಂಥವರಿಗೆ ನಿಜವಾದ ಸ್ನೇಹಿತರೇ ಇರುವುದಿಲ್ಲ. “ಆದರೆ ಲೋಕವು ದೀನ ಜನರನ್ನು ಇಷ್ಟಪಡುತ್ತದೆ, ಅಂದರೆ ಕೇವಲ ತಾವು ದೀನರೆಂದು ಹೇಳಿಕೊಂಡು ಹೆಮ್ಮೆಪಡುವವರನ್ನಲ್ಲ, ಬದಲಾಗಿ ಆಂತರ್ಯದಲ್ಲಿ ನಿಜವಾಗಿಯೂ ದೀನರಾಗಿರುವವರನ್ನು ಅದು ಪ್ರೀತಿಸುತ್ತದೆ” ಎಂದು ಅದೇ ಪುಸ್ತಕವು ಮುಂದುವರಿಸಿ ಹೇಳುತ್ತದೆ. ಬೈಬಲು ಸೂಕ್ತವಾಗಿಯೇ ಹೀಗೆ ಹೇಳುತ್ತದೆ: “ಗರ್ವವು ಮನುಷ್ಯನನ್ನು ದೀನಸ್ಥಿತಿಗೆ ತರುವದು; ದೀನಮನಸ್ಸುಳ್ಳವನು ಮಾನವನ್ನು ಪಡೆಯುವನು.”—ಜ್ಞಾನೋಕ್ತಿ 29:23.
ಸ್ನೇಹದ ಮೇಲೆ ಅಹಂಕಾರವು ಬೀರುವ ಪರಿಣಾಮ ಅಥವಾ ಜನರಿಂದ ದೊರೆಯುವ ಮಾನಕ್ಕಿಂತಲೂ ಹೆಚ್ಚಾಗಿ, ದೇವರೊಂದಿಗಿರುವ ಒಬ್ಬನ ಸಂಬಂಧದ ಮೇಲೆ ಅದು ಎಂತಹ ಪ್ರಭಾವವನ್ನು ಬೀರುತ್ತದೆ? ಗರ್ವಿಷ್ಟನೂ, ಹಟಮಾರಿಯೂ, ದುರಹಂಕಾರಿಯೂ ಆಗಿರುವಂತಹ ಒಬ್ಬ ವ್ಯಕ್ತಿಯನ್ನು ದೇವರು ಹೇಗೆ ಪರಿಗಣಿಸುತ್ತಾನೆ? ಅಹಂಕಾರ ಅಥವಾ ದೀನಭಾವಗಳಂತಹ ಈ ಗುಣಗಳನ್ನು ದೇವರು ಗಮನಿಸುತ್ತಾನೊ?
ದೀನಭಾವದ ಕುರಿತಾದ ಒಂದು ಪಾಠ
ಜ್ಞಾನೋಕ್ತಿ ಪುಸ್ತಕದ ಪ್ರೇರಿತ ಬರಹಗಾರನು ಹೇಳಿದ್ದು: “ಗರ್ವದಿಂದ ಭಂಗ ಉಬ್ಬಿನಿಂದ ದೊಬ್ಬು. ಸೊಕ್ಕಿನವರ ಸಂಗಡ ಸೂರೆಯನ್ನು ಹಂಚಿಕೊಳ್ಳುವದಕ್ಕಿಂತಲೂ ದೀನರ ಸಂಗಡ ದೈನ್ಯದಿಂದಿರುವದು ವಾಸಿ.” (ಜ್ಞಾನೋಕ್ತಿ 16:18, 19) ಈ ಮಾತುಗಳ ವಿವೇಕವು, ಅರಾಮ್ಯ ಸೇನಾಪತಿಯಾದ ನಾಮಾನನ ವಿಷಯದಲ್ಲಿ ಸತ್ಯವೆಂದು ಕಂಡುಬಂತು. ಇಸ್ರಾಯೇಲ್ಯ ಪ್ರವಾದಿಯಾದ ಎಲೀಷನ ಕಾಲದಲ್ಲಿ ನಾಮಾನನು ಜೀವಿಸಿದ್ದನು.
ನಾಮಾನನು ಒಬ್ಬ ಕುಷ್ಠರೋಗಿಯಾಗಿದ್ದನು. ಈ ರೋಗವನ್ನು ಗುಣಪಡಿಸಿಕೊಳ್ಳುವ ಉದ್ದೇಶದಿಂದ ಅವನು ಸಮಾರ್ಯಕ್ಕೆ ಪ್ರಯಾಣ ಬೆಳೆಸಿದನು. ಎಲೀಷನೇ ನೇರವಾಗಿ ತನ್ನೊಂದಿಗೆ ಮಾತಾಡುತ್ತಾನೆಂದು ಅವನು ನಿರೀಕ್ಷಿಸಿದ್ದನು. ಆದರೆ ಆ ಪ್ರವಾದಿಯು, ತನ್ನ ಸೇವಕನನ್ನು ನಾಮಾನನ ಬಳಿಗೆ ಕಳುಹಿಸಿ, ಯೊರ್ದನ್ ಹೊಳೆಗೆ ಹೋಗಿ ಅದರಲ್ಲಿ ಏಳು ಸಾರಿ ಸ್ನಾನಮಾಡು ಎಂದಷ್ಟೇ ಹೇಳಿಸಿದನು. ಈ ರೀತಿಯ ಉಪಚಾರ ಹಾಗೂ ಸಲಹೆಯಿಂದ ನಾಮಾನನು ಅವಮಾನಿತನಾದನು. ತನ್ನ ಸೇವಕನನ್ನು ಕಳುಹಿಸುವುದಕ್ಕೆ ಬದಲಾಗಿ, ಆ ಪ್ರವಾದಿಯೇ ಬಂದು ತನ್ನ ಬಳಿ ಏಕೆ ವೈಯಕ್ತಿಕವಾಗಿ ಮಾತಾಡಲಿಲ್ಲ? ಅಷ್ಟುಮಾತ್ರವಲ್ಲ, ಅರಾಮ್ಯದಲ್ಲಿರುವ ಯಾವುದೇ ನದಿಯು ಯೊರ್ದನ್ ನದಿಯಷ್ಟೇ ಚೆನ್ನಾಗಿತ್ತಲ್ಲ! ಹಾಗೆ ನೆನಸಲು ಅಹಂಕಾರವೇ ಅವನ ಸಮಸ್ಯೆಯಾಗಿತ್ತು. ಫಲಿತಾಂಶವೇನು? ಬುದ್ಧಿವಾದವು ಅವನ ಮನಸ್ಸನ್ನು ಒಡಂಬಡಿಸಿತು. “ಅವನು ಯೊರ್ದನಿಗೆ ಹೋಗಿ ಏಳು ಸಾರಿ ಅದರಲ್ಲಿ ಮುಣುಗಿ ಎದ್ದನು. ಕೂಡಲೆ ದೇವರ ಮನುಷ್ಯನ ಮಾತಿಗನುಸಾರವಾಗಿ ಅವನ ದೇಹವು ಕೂಸಿನ ದೇಹದಂತೆ ಶುದ್ಧವಾಯಿತು.”—2 ಅರಸು 5:14.
ಕೆಲವೊಮ್ಮೆ ಸ್ವಲ್ಪ ದೀನಭಾವವನ್ನು ತೋರಿಸುವುದರಿಂದ ಬಹಳಷ್ಟು ಪ್ರಯೋಜನಗಳನ್ನು ಪಡೆದುಕೊಳ್ಳಸಾಧ್ಯವಿದೆ.
ಗರ್ವದ ಪರಿಣಾಮ
ಅಹಂಕಾರಕ್ಕೆ ನಾವು ತೆರಬೇಕಾದ ಬೆಲೆಯು, ನಾವು ಕೇವಲ ಕೆಲವು ಪ್ರಯೋಜನಗಳನ್ನು ಅಥವಾ ಲಾಭಗಳನ್ನು ಕಳೆದುಕೊಳ್ಳುವುದಕ್ಕಿಂತಲೂ ಹೆಚ್ಚಿನದ್ದನ್ನು ಒಳಗೂಡಿದೆ. ಇನ್ನೊಂದು ರೀತಿಯ ಅಹಂಕಾರವಿದೆ. “ವಿಪರೀತ ಅಹಂಕಾರ ಅಥವಾ ಆತ್ಮಾಭಿಮಾನವಿದ್ದು, ಪ್ರತೀಕಾರವೇ ಇದರ ಫಲಿತಾಂಶವಾಗಿದೆ” ಎಂದು ಇದರ ಅರ್ಥನಿರೂಪಿಸಸಾಧ್ಯವಿದೆ. ಅಹಂಕಾರ ಮತ್ತು ಕ್ರೂರಭಾವವು ಇದರಲ್ಲಿ ಸೇರಿದೆ . . . , ಅಂದರೆ ಒಬ್ಬ ವ್ಯಕ್ತಿಯು ತನ್ನ ಜೊತೆಮಾನವನ ಕಡೆಗೆ ದಯದಾಕ್ಷಿಣ್ಯವಿಲ್ಲದೆ ವರ್ತಿಸುವಂತೆ ಮಾಡುವ ಗರ್ವದಿಂದ ಕೂಡಿದ ತಿರಸ್ಕಾರಭಾವವು ಇದರಲ್ಲಿ ಸೇರಿದೆ.
ಈ ರೀತಿಯ ದುರಹಂಕಾರದ ಒಂದು ಸ್ಪಷ್ಟ ಉದಾಹರಣೆಯು ಬೈಬಲಿನಲ್ಲಿ ಕಂಡುಬರುತ್ತದೆ. ಅಮ್ಮೋನಿಯರ ಅರಸನಾದ ಹಾನೂನನ ಉದಾಹರಣೆಯೇ ಇದಾಗಿದೆ. ಇನ್ಸೈಟ್ ಆನ್ ದ ಸ್ಕ್ರಿಪ್ಚರ್ಸ್ ಹೀಗೆ ವಿವರಿಸುತ್ತದೆ: “ಹಾನೂನನ ತಂದೆಯಾದ ನಾಹಾಷನು ದಾವೀದನಿಗೆ ದಯೆತೋರಿಸಿದ್ದರಿಂದ, ಹಾನೂನನ ತಂದೆಯು ಸತ್ತಾಗ, ಅವನನ್ನು ಸಾಂತ್ವನಗೊಳಿಸಲಿಕ್ಕಾಗಿ ದಾವೀದನು ಸಂದೇಶವಾಹಕರನ್ನು ಕಳುಹಿಸಿದನು. ಆದರೆ ದಾವೀದನು ನಗರವನ್ನು ರಹಸ್ಯವಾಗಿ ಸಂಚರಿಸಿ ನೋಡಲಿಕ್ಕಾಗಿ ಈ ಕಪಟೋಪಾಯವನ್ನು ರಚಿಸಿದ್ದಾನೆ ಎಂದು ಪ್ರಭುಗಳು ಹೇಳಿದ್ದನ್ನು ಹಾನೂನನು ನಿಜವೆಂದು ನಂಬಿ, ಅವನು ದಾವೀದನ ಸೇವಕರನ್ನು ಹಿಡಿಸಿ ಗಡ್ಡದ ಅರ್ಧಭಾಗವನ್ನು ಬೋಳಿಸಿ ಅವರ ನಿಲುವಂಗಿಗಳನ್ನು ಕುಂಡಿಯಿಂದ ಕೆಳಗಿನ ಭಾಗವನ್ನೆಲ್ಲಾ ಕತ್ತರಿಸಿ ಕಳುಹಿಸಿಬಿಡುವ ಮೂಲಕ ಅವರನ್ನು ಅವಮಾನಮಾಡಿದನು.”a ಈ ಘಟನೆಯ ಕುರಿತು ವಿದ್ವಾಂಸನಾದ ವಿಲಿಯಮ್ ಬಾರ್ಕ್ಲೆ ಹೇಳುವುದು: “ಈ ರೀತಿಯ ಉಪಚಾರವು [ವಿಪರೀತ ದುರಹಂಕಾರ]ವಾಗಿತ್ತು. ಇದರಲ್ಲಿ ಮುಖಭಂಗ, ದೌರ್ಜನ್ಯ, ಸಾರ್ವಜನಿಕ ಅಪಮಾನ ಎಲ್ಲವೂ ಒಟ್ಟಿಗೆ ಸೇರಿತ್ತು.”—2 ಸಮುವೇಲ 10:1-5.
ಹೌದು, ಅಹಂಕಾರಿಯಾದ ಒಬ್ಬ ವ್ಯಕ್ತಿ, ದುರಹಂಕಾರ ತೋರಿಸುವ, ಇತರರನ್ನು ಧಿಕ್ಕರಿಸುವ, ಇತರರನ್ನು ಅವಮಾನಿಸುವ ಪ್ರವೃತ್ತಿಯುಳ್ಳವನಾಗಿರುತ್ತಾನೆ. ಇನ್ನೊಬ್ಬರನ್ನು ನಿರ್ದಯೆಯಿಂದ, ವ್ಯಕ್ತಿಸ್ವರೂಪವಿಲ್ಲದೇ ನೋಯಿಸುವುದರಲ್ಲಿ ಅವನು ಆನಂದಿಸುತ್ತಾನೆ ಮತ್ತು ಆ ಇನ್ನೊಬ್ಬ ವ್ಯಕ್ತಿಗೆ ಮುಜುಗರವಾಗುವಾಗ ಮತ್ತು ಅವನಿಗೆ ಕೆಟ್ಟ ಹೆಸರು ಬರುವಾಗ ಅದನ್ನು ನೋಡಿ ಹಿಗ್ಗುತ್ತಾನೆ. ಇನ್ನೊಬ್ಬರ ಸ್ವಗೌರವಕ್ಕೆ ಮಸಿಬಳಿಯುವುದು ಅಥವಾ ಇನ್ನೊಬ್ಬರ ಹೆಸರನ್ನು ಹಾಳುಮಾಡುವುದು ಇಬ್ಬಾಯಿ ಕತ್ತಿಯಂತಿದೆ. ಇದರ ಫಲಿತಾಂಶವೇನೆಂದರೆ, ಒಬ್ಬ ಸ್ನೇಹಿತನನ್ನು ಕಳೆದುಕೊಳ್ಳುವುದು, ಹಾಗೂ ಬಹಳಮಟ್ಟಿಗೆ ಅವನನ್ನು ಒಬ್ಬ ವೈರಿಯನ್ನಾಗಿ ಮಾಡಿಕೊಳ್ಳುವುದೇ ಆಗಿದೆ.
ನಿಜ ಕ್ರೈಸ್ತನೊಬ್ಬನು ‘ತನ್ನ ನೆರೆಯವನನ್ನು ತನ್ನಂತೆಯೇ ಪ್ರೀತಿಸಬೇಕು’ ಎಂದು ಅವನ ಗುರುವು ಆಜ್ಞಾಪಿಸಿರುವಾಗ, ಒಬ್ಬ ಕ್ರೈಸ್ತನು ಇಂತಹ ವೇದನಾಮಯ ಅಹಂಕಾರವನ್ನು ಹೇಗೆ ತೋರಿಸಸಾಧ್ಯವಿದೆ? (ಮತ್ತಾಯ 7:12; 22:39) ಇದು ದೇವರು ಹಾಗೂ ಕ್ರಿಸ್ತನು ಏನನ್ನು ಪ್ರತಿನಿಧಿಸುತ್ತಾರೋ ಅದಕ್ಕೆ ಸಂಪೂರ್ಣವಾಗಿ ವ್ಯತಿರಿಕ್ತವಾದದ್ದಾಗಿದೆ. ಈ ಕಾರಣದಿಂದಲೇ, ಬಾರ್ಕ್ಲೇ ಈ ಅತಿ ಪ್ರಾಮುಖ್ಯ ವಿಚಾರವನ್ನು ತಿಳಿಸಿದರು: “ಅಹಂಕಾರವು ಒಬ್ಬ ಮನುಷ್ಯನು ದೇವರನ್ನು ನಿರ್ಲಕ್ಷಿಸುವಂತೆ ಮಾಡುತ್ತದೆ.” “ಯೆಹೋವನೇ ಇಲ್ಲ” ಎಂದು ಹೇಳುವುದು ಸಹ ಅಹಂಕಾರವೇ ಆಗಿದೆ. (ಕೀರ್ತನೆ 14:1, NW) ಅಥವಾ ಕೀರ್ತನೆ 10:4ರಲ್ಲಿ (NW) ಹೀಗೆ ವ್ಯಕ್ತಪಡಿಸಲಾಗಿದೆ: “ದುಷ್ಟನು ತನ್ನ ದುರಹಂಕಾರದ ಪರಿಣಾಮವಾಗಿ ಯಾವ ಹುಡುಕಾಟವನ್ನೂ ಮಾಡದೆ, ದೇವರೇ ಇಲ್ಲವೆಂದು ಸದಾ ಯೋಚಿಸುತ್ತಿರುತ್ತಾನೆ.” ಅಂತಹ ಅಹಂಕಾರ ಅಥವಾ ಜಂಬವು ಒಬ್ಬನನ್ನು ಸ್ನೇಹಿತರಿಂದ ಹಾಗೂ ಸಂಬಂಧಿಕರಿಂದ ದೂರಮಾಡುತ್ತದೆ ಮಾತ್ರವಲ್ಲ, ದೇವರಿಂದಲೂ ವಿಮುಖಗೊಳಿಸುತ್ತದೆ. ಅಹಂಕಾರದಿಂದ ಎಂತಹ ಪರಿಣಾಮ!
ಅಹಂಕಾರವು ನಿಮ್ಮನ್ನು ತಿಂದುಹಾಕುವಂತೆ ಬಿಡಬೇಡಿ
ಬೇರೆ ಬೇರೆ ರೀತಿಯ ಅಹಂಕಾರವಿರಸಾಧ್ಯವಿದೆ; ರಾಷ್ಟ್ರೀಯತೆ, ಕುಲ, ವರ್ಗ, ಜಾತಿಯಿಂದ ಬರುವ ಅಹಂಕಾರ, ಶಿಕ್ಷಣ, ಐಶ್ವರ್ಯ, ಘನತೆ, ಮತ್ತು ಅಧಿಕಾರದಿಂದ ಬರುವ ಅಹಂಕಾರ. ಒಂದಲ್ಲ ಒಂದು ರೀತಿಯಲ್ಲಿ ಅಹಂಕಾರವು ಸುಲಭವಾಗಿ ನಿಮ್ಮೊಳಗೆ ನುಸುಳಿ, ನಿಮ್ಮ ವ್ಯಕ್ತಿತ್ವವನ್ನೇ ಹಾಳುಮಾಡಸಾಧ್ಯವಿದೆ.
ತನ್ನ ಅಧಿಕಾರಿಗಳೊಂದಿಗೆ ಅಥವಾ ಸಮಾನಸ್ಥರೊಂದಿಗೆ ವ್ಯವಹರಿಸುವಾಗ ಒಬ್ಬನು ತುಂಬ ದೀನವ್ಯಕ್ತಿಯೋಪಾದಿ ಕಂಡುಬರಬಹುದು. ಆದರೆ ದೀನಭಾವದವನಂತೆ ತೋರುವ ಈ ವ್ಯಕ್ತಿಗೆ ಒಂದು ಅಧಿಕಾರದ ಸ್ಥಾನವು ಸಿಗುವಾಗ ಏನಾಗುತ್ತದೆ? ಇದ್ದಕ್ಕಿದ್ದಂತೆ ಅವನು ದಬ್ಬಾಳಿಕೆ ನಡೆಸಲು ಆರಂಭಿಸುತ್ತಾನೆ ಮತ್ತು ತನ್ನ ಕೈಕೆಳಗಿರುವ ಜನರನ್ನು ಸಂಕಷ್ಟಕ್ಕೆ ಒಡ್ಡುತ್ತಾನೆ. ಅಧಿಕಾರವನ್ನು ಸೂಚಿಸುವ ಒಂದು ಸಮವಸ್ತ್ರವನ್ನು ಹಾಗೂ ಲಾಂಛನವನ್ನು ಧರಿಸಿದಾಕ್ಷಣ ಒಬ್ಬ ವ್ಯಕ್ತಿಯು ಹೀಗಾಗಬಹುದು. ಸರಕಾರದ ಹುದ್ದೆಯಲ್ಲಿರುವವರು ಸಹ, ಸಾರ್ವಜನಿಕರೊಂದಿಗೆ ವ್ಯವಹರಿಸುವಾಗ, ನಾವು ಜನರ ಸೇವೆಮಾಡಲಿಕ್ಕಾಗಿ ಅಲ್ಲ, ಜನರು ನಮ್ಮ ಸೇವೆಮಾಡಲಿಕ್ಕಾಗಿ ಇದ್ದಾರೆ ಎಂದು ಭಾವಿಸಿ ಅಹಂಕಾರದಿಂದ ವರ್ತಿಸಸಾಧ್ಯವಿದೆ. ಅಹಂಕಾರವು ನಿಮ್ಮನ್ನು ತುಂಬ ಒರಟು ವ್ಯಕ್ತಿಗಳನ್ನಾಗಿಯೂ, ಭಾವಶೂನ್ಯರನ್ನಾಗಿಯೂ ಮಾಡಬಲ್ಲದು; ಆದರೆ ದೀನಭಾವವು ನಿಮ್ಮನ್ನು ದಯಾಪರರನ್ನಾಗಿ ಮಾಡಬಲ್ಲದು.
ಯೇಸು ತನ್ನ ಶಿಷ್ಯರೊಂದಿಗೆ ಅಹಂಕಾರದಿಂದಲೂ ಒರಟಾಗಿಯೂ ವರ್ತಿಸಸಾಧ್ಯವಿತ್ತು. ಅಪರಿಪೂರ್ಣರೂ, ಉದ್ರೇಕದಿಂದ ವರ್ತಿಸುವವರೂ ಆಗಿದ್ದ ಹಿಂಬಾಲಕರೊಂದಿಗೆ ಅವನು ಒಳ್ಳೆಯ ರೀತಿಯಲ್ಲಿ ವ್ಯವಹರಿಸಿದ ಒಬ್ಬ ಪರಿಪೂರ್ಣ ಮನುಷ್ಯನು, ಅಂದರೆ ದೇವರ ಪುತ್ರನಾಗಿದ್ದನು. ಆದರೂ ತನಗೆ ಕಿವಿಗೊಟ್ಟಂತಹ ಜನರಿಗೆ ಅವನು ಯಾವ ಆಮಂತ್ರಣವನ್ನು ಕೊಟ್ಟನು? “ಎಲೈಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿ ಕೊಡುವೆನು. ನಾನು ಸಾತ್ವಿಕನೂ ದೀನ ಮನಸ್ಸುಳ್ಳವನೂ ಆಗಿರುವದರಿಂದ ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಲ್ಲಿ ಕಲಿತುಕೊಳ್ಳಿರಿ; ಆಗ ನಿಮ್ಮ ಆತ್ಮಗಳಿಗೆ ವಿಶ್ರಾಂತಿಸಿಕ್ಕುವದು. ಯಾಕಂದರೆ ನನ್ನ ನೊಗವು ಮೃದುವಾದದ್ದು; ನನ್ನ ಹೊರೆಯು ಹೌರವಾದದ್ದು.”—ಮತ್ತಾಯ 11:28-30.
ನಾವು ಯಾವಾಗಲೂ ಯೇಸುವಿನ ಮಾದರಿಯನ್ನು ಅನುಸರಿಸಲು ಪ್ರಯತ್ನಿಸುತ್ತೇವೊ? ಅಥವಾ ನಾವು ಒರಟು ಜನರೂ, ಕಠಿನರೂ, ದಬ್ಬಾಳಿಕೆ ನಡೆಸುವವರೂ, ನಿಷ್ಕರುಣಿಗಳೂ, ಅಹಂಕಾರಿಗಳೂ ಆಗಿದ್ದೇವೊ? ಇತರರನ್ನು ಪೀಡಿಸುವುದಕ್ಕೆ ಬದಲಾಗಿ, ಯೇಸುವಿನಂತೆ ಅವರಿಗೆ ಚೈತನ್ಯ ನೀಡಲು ಪ್ರಯತ್ನಿಸೋಣ. ಅಹಂಕಾರವು ನಿಮ್ಮ ವ್ಯಕ್ತಿತ್ವವನ್ನು ಹಾಳುಮಾಡುತ್ತದಾದ್ದರಿಂದ, ಅದನ್ನು ದೂರಮಾಡಿರಿ.
ಈ ಎಲ್ಲ ವಿಷಯಗಳನ್ನು ಪರಿಗಣಿಸುವಲ್ಲಿ, ನಿಮ್ಮ ಸ್ವಾಭಿಮಾನವನ್ನು ಕಾಪಾಡಿಕೊಳ್ಳುವುದು ತಪ್ಪೊ?
ಒಣಹೆಮ್ಮೆಗೆ ಪ್ರತಿಯಾಗಿ ಸ್ವಾಭಿಮಾನ
ಸ್ವತಃ ನಿಮ್ಮ ವಿಷಯದಲ್ಲಿ ಸ್ವಲ್ಪ ಮಟ್ಟಿಗೆ ಸ್ವಾಭಿಮಾನವಿರುವುದು ಸೂಕ್ತವಾದದ್ದೂ ಸಮಂಜಸವಾದದ್ದೂ ಆಗಿದೆ. ಸ್ವಾಭಿಮಾನದ ಅರ್ಥ, ಸ್ವತಃ ನಿಮ್ಮ ಬಗ್ಗೆ ನಿಮಗೆ ಗೌರವವಿರುವುದೇ ಆಗಿದೆ. ಅಂದರೆ, ಬೇರೆಯವರು ನಿಮ್ಮ ಬಗ್ಗೆ ಏನು ನೆನಸುತ್ತಾರೆ ಎಂಬುದರ ಕುರಿತು ನೀವು ಚಿಂತಿಸುತ್ತೀರಿ. ನಿಮ್ಮ ಹೊರತೋರಿಕೆ ಹಾಗೂ ನಿಮ್ಮ ಸತ್ಕೀರ್ತಿಯ ಕುರಿತು ನೀವು ಕಾಳಜಿವಹಿಸುತ್ತೀರಿ. “ನೀನು ಯಾರೊಂದಿಗೆ ಸಹವಾಸಮಾಡುತ್ತೀ ಎಂಬುದನ್ನು ಹೇಳು, ಆಗ ನೀನು ಯಾರೆಂಬುದನ್ನು ನಾನು ನಿನಗೆ ಹೇಳುತ್ತೇನೆ” ಎಂಬ ಸ್ಪ್ಯಾನಿಷ್ ಗಾದೆಮಾತು ಸತ್ಯವಾಗಿದೆ. ಯಾರು ಕೊಳಕರೂ, ಸೋಮಾರಿಗಳೂ, ಅಸಂಸ್ಕೃತರೂ, ಭಂಡಬಾಯಿಯವರೂ ಆಗಿದ್ದಾರೋ ಅವರೊಂದಿಗೆ ನೀವು ಸಹವಾಸಮಾಡಲು ಇಷ್ಟಪಡುವಲ್ಲಿ, ನೀವು ಸಹ ಅವರಂತೆಯೇ ಆಗುವಿರಿ. ಅವರ ಮನೋಭಾವಗಳು ನಿಮ್ಮ ಮೇಲೂ ಪ್ರಭಾವ ಬೀರುವವು, ಮತ್ತು ಅವರಂತೆ ನೀವು ಸಹ ಸ್ವಾಭಿಮಾನವನ್ನು ಕಳೆದುಕೊಳ್ಳುವಿರಿ.
ಇನ್ನೊಂದು ಕಡೆಯಲ್ಲಿ ಅಹಂಕಾರವು ಒಣಹೆಮ್ಮೆಗೆ ಅಥವಾ ವ್ಯರ್ಥತೆಗೆ ನಡಿಸುತ್ತದೆ. ಯೇಸುವಿನ ದಿನದಲ್ಲಿದ್ದ ಶಾಸ್ತ್ರಿಗಳು ಹಾಗೂ ಫರಿಸಾಯರು, ತಮ್ಮ ಸಂಪ್ರದಾಯಗಳು ಹಾಗೂ ಅತಿ ಧಾರ್ಮಿಕ ತೋರಿಕೆಯ ವಿಷಯದಲ್ಲಿ ಹೆಮ್ಮೆಯುಳ್ಳವರಾಗಿದ್ದರು. ಯೇಸು ಅವರ ಕುರಿತು ಎಚ್ಚರಿಕೆ ನೀಡಿದ್ದು: “ಅವರು ತಮ್ಮ ಕೆಲಸಗಳನ್ನೆಲ್ಲಾ ಜನರಿಗೆ ಕಾಣಬೇಕೆಂದು ಮಾಡುತ್ತಾರೆ. ತಾವು ಕಟ್ಟಿಕೊಳ್ಳುವ ಜ್ಞಾಪಕ ಪಟ್ಟಿಗಳನ್ನು ಅಗಲಮಾಡುತ್ತಾರೆ, [ಹೆಚ್ಚು ಧರ್ಮಶ್ರದ್ಧೆಯುಳ್ಳವರು ಎಂದು ತೋರ್ಪಡಿಸಿಕೊಳ್ಳಲಿಕ್ಕಾಗಿ] ಗೊಂಡೆಗಳನ್ನು ಉದ್ದಮಾಡುತ್ತಾರೆ. ಇದಲ್ಲದೆ ಔತಣಪ್ರಸ್ತಗಳಲ್ಲಿ ಪ್ರಥಮಸ್ಥಾನ, ಸಭಾಮಂದಿರಗಳಲ್ಲಿ ಮುಖ್ಯ ಪೀಠಗಳು, ಅಂಗಡೀಬೀದಿಗಳಲ್ಲಿ ನಮಸ್ಕಾರಗಳು, ಜನರಿಂದ ಬೋಧಕರನ್ನಿಸಿಕೊಳ್ಳುವದು, ಇವುಗಳೇ ಅವರಿಗೆ ಇಷ್ಟ.”—ಮತ್ತಾಯ 23:5-7.
ಹಾಗಾದರೆ, ಒಂದು ಸಮತೂಕವಾದ ಮನೋಭಾವವು ಇರಬೇಕು. ಯೆಹೋವನು ಕೇವಲ ಹೊರ ತೋರಿಕೆಯನ್ನಲ್ಲ, ಹೃದಯವನ್ನು ನೋಡುತ್ತಾನೆ ಎಂಬುದನ್ನು ಸಹ ಜ್ಞಾಪಕದಲ್ಲಿಡಿ. (1 ಸಮುವೇಲ 16:7; ಯೆರೆಮೀಯ 17:10) ಸ್ವನೀತಿಯು ದೇವರ ನೀತಿಯಲ್ಲ. ಆದರೂ, ಈಗ ಏಳುವ ಪ್ರಶ್ನೆಯೇನೆಂದರೆ, ನಾವು ಹೇಗೆ ನಿಜವಾದ ದೀನಭಾವವನ್ನು ಬೆಳೆಸಿಕೊಳ್ಳಸಾಧ್ಯವಿದೆ ಮತ್ತು ಅಹಂಕಾರದ ಪರಿಣಾಮದಿಂದ ತಪ್ಪಿಸಿಕೊಳ್ಳಸಾಧ್ಯವಿದೆ?
[ಪಾದಟಿಪ್ಪಣಿ]
a ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟದ್ದು.
[ಪುಟ 4 ರಲ್ಲಿರುವ ಚಿತ್ರ]
ನಾಮಾನನು ತೋರಿಸಿದ ಸ್ವಲ್ಪ ದೀನಭಾವವು ಬಹಳಷ್ಟು ಪ್ರಯೋಜನಗಳನ್ನು ತಂದಿತು