“ಯೆಹೋವ” ಅಥವಾ “ಯಾಹ್ವೆ”?
“ಸಂಘಟಿತಪದ,” “ಮಿಶ್ರಪದ,” “ವಿಲಕ್ಷಣಪದ.” ಯಾವ ಕಾರಣಕ್ಕಾಗಿ ಬೈಬಲಿನ ಹೀಬ್ರು ವಿದ್ವಾಂಸರು ಇಂತಹ ಅರ್ಥವತ್ತಾದ ಶಬ್ದಗಳನ್ನು ಉಪಯೋಗಿಸಿದರು? “ಯೆಹೋವ” ಎಂಬುದು ದೇವರ ಹೆಸರಿನ ಸರಿಯಾದ ಇಂಗ್ಲಿಷ್ ಉಚ್ಚಾರಣೆಯಾಗಿದೆಯೋ ಇಲ್ಲವೋ ಎಂಬ ವಿಚಾರವು ವಾಗ್ವಾದಕ್ಕೊಳಗಾಗಿತ್ತು. ಸುಮಾರು ನೂರು ವರ್ಷಗಳಿಗಿಂತಲೂ ಅಧಿಕ ಸಮಯದಿಂದ ಈ ವಾಗ್ವಾದವು ಪ್ರಬಲವಾಗಿದೆ. ಇಂದು, ಬಹುತೇಕ ವಿದ್ವಾಂಸರು ಎರಡು ಉಚ್ಚಾರಣಾ ಅಕ್ಷರವುಳ್ಳ “ಯಾಹ್ವೆ”ಯನ್ನು ಹೆಚ್ಚು ಇಷ್ಟಪಡುವಂತೆ ತೋರುತ್ತದೆ. ಆದರೆ “ಯೆಹೋವ” ಎಂಬ ಶಬ್ದದ ಉಚ್ಚಾರಣೆಯು ನಿಜವಾಗಿಯೂ ಅಷ್ಟೊಂದು “ವಿಲಕ್ಷಣ”ವಾಗಿದೆಯೊ?
ವಾಗ್ವಾದದ ಮೂಲಗಳನ್ನು ಶೋಧಿಸುವುದು
ಬೈಬಲಿಗನುಸಾರ, ಸ್ವತಃ ದೇವರೇ ತನ್ನ ಹೆಸರನ್ನು ಮಾನವಕುಲಕ್ಕೆ ತಿಳಿಯಪಡಿಸಿದನು. (ವಿಮೋಚನಕಾಂಡ 3:15) ದೇವರ ಪುರಾತನ ಸೇವಕರು ಆ ಹೆಸರನ್ನು ಸ್ವತಂತ್ರವಾಗಿ ಉಪಯೋಗಿಸಿದರೆಂದು ಶಾಸ್ತ್ರೀಯ ಪುರಾವೆಯು ತೋರಿಸುತ್ತದೆ. (ಆದಿಕಾಂಡ 12:8; ರೂತಳು 2:4) ಬೇರೆ ಜನಾಂಗಗಳಿಗೂ ದೇವರ ಹೆಸರು ಗೊತ್ತಿತ್ತು. (ಯೆಹೋಶುವ 2:9) ಬಾಬೆಲಿನಲ್ಲಿ ದೇಶಭ್ರಷ್ಟರಾಗಿದ್ದಂತಹ ಯೆಹೂದ್ಯರು ಹಿಂದಿರುಗಿಬಂದು, ಅನೇಕ ಜನಾಂಗಗಳ ಜನರೊಂದಿಗೆ ಸಂಪರ್ಕಮಾಡಿದ ಬಳಿಕ ಇದು ವಿಶೇಷವಾಗಿ ಸತ್ಯವಾಯಿತು. (ಕೀರ್ತನೆ 96:2-10; ಯೆಶಾಯ 12:4; ಮಲಾಕಿಯ 1:11) ದ ಇಂಟರ್‌ಪ್ರಿಟರ್ಸ್ ಡಿಕ್ಷ್‌ನೆರಿ ಆಫ್ ದ ಬೈಬಲ್ ಹೀಗೆ ಹೇಳುತ್ತದೆ: “ದೇಶಭ್ರಷ್ಟತೆಯ ನಂತರದ ಕಾಲಾವಧಿಯಲ್ಲಿ, ಅನೇಕ ವಿದೇಶೀಯರು ಯೆಹೂದ್ಯರ ಧರ್ಮದ ಕಡೆಗೆ ಆಕರ್ಷಿತರಾದರು ಎಂಬುದಕ್ಕೆ ಗಣನೀಯ ಪುರಾವೆಯಿದೆ.” ಆದರೂ ಸಾ.ಶ. ಪ್ರಥಮ ಶತಮಾನದಷ್ಟಕ್ಕೆ, ದೇವರ ಹೆಸರಿನ ಕುರಿತು ಒಂದು ಮೂಢನಂಬಿಕೆಯು ವಿಕಸಿಸಿತ್ತು. ಕಾಲಕ್ರಮೇಣ, ಯೆಹೂದಿ ಜನಾಂಗವು ದೇವರ ಹೆಸರನ್ನು ಬಹಿರಂಗವಾಗಿ ಉಪಯೋಗಿಸುವುದನ್ನು ನಿಲ್ಲಿಸಿಬಿಟ್ಟಿತು ಮಾತ್ರವಲ್ಲ, ಅವರಲ್ಲಿ ಕೆಲವರು ಅದನ್ನು ಉಚ್ಚರಿಸುವುದನ್ನು ಸಹ ನಿಷೇಧಿಸಿದರು. ಹೀಗೆ ದೇವರ ಹೆಸರಿನ ಸರಿಯಾದ ಉಚ್ಚಾರಣೆಯು ಕಾಣೆಯಾಯಿತು—ಅಥವಾ ನಿಜವಾಗಿಯೂ ಅದು ಕಾಣೆಯಾಯಿತೊ?
ಒಂದು ಹೆಸರಿನಲ್ಲಿ ಏನು ಕಂಡುಬರುತ್ತದೆ?
ಹೀಬ್ರು ಭಾಷೆಯಲ್ಲಿ ದೇವರ ಹೆಸರನ್ನು יהוה ಈ ಅಕ್ಷರಗಳಲ್ಲಿ ಬರೆಯಲಾಗುತ್ತದೆ. ಸಾಮಾನ್ಯವಾಗಿ ಈ ಅಕ್ಷರಗಳನ್ನು ಚತುರಕ್ಷರಿ (ನಾಲ್ಕು ಅಕ್ಷರಗಳುಳ್ಳ ದೇವರ ಹೆಸರು) ಎಂದು ಕರೆಯಲಾಗುತ್ತದೆ, ಮತ್ತು ಇವುಗಳನ್ನು ಬಲಭಾಗದಿಂದ ಎಡಭಾಗಕ್ಕೆ ಓದಲಾಗುತ್ತದೆ. ಬೈಬಲಿನಲ್ಲಿ ಕೊಡಲ್ಪಟ್ಟಿರುವ ಅನೇಕ ಜನರ ಹಾಗೂ ಸ್ಥಳಗಳ ಹೆಸರುಗಳಲ್ಲಿ, ದೇವರ ಹೆಸರಿನ ಸಂಕ್ಷಿಪ್ತ ರೂಪವು ಕಂಡುಬರುತ್ತದೆ. ಸೂಕ್ತವಾದ ಈ ನಾಮಪದಗಳು, ದೇವರ ಹೆಸರು ಹೇಗೆ ಉಚ್ಚರಿಸಲ್ಪಡುತ್ತಿತ್ತು ಎಂಬುದಕ್ಕೆ ಯಾವುದಾದರೂ ಸುಳಿವನ್ನು ಕೊಡಸಾಧ್ಯವಿದೆಯೊ?
ಅಮೆರಿಕದ ವಾಷಿಂಗ್ಟನ್ ಡಿ.ಸಿ.ಯಲ್ಲಿರುವ ವೆಸ್ಲಿ ಥಿಯೊಲಾಜಿಕಲ್ ಸೆಮಿನೆರಿಯ ನಿವೃತ್ತ ಪ್ರೊಫೆಸರರಾದ ಜಾರ್ಜ್ ಬುಚನನ್‌ರಿಗನುಸಾರ, ಉತ್ತರವು ಹೌದು ಎಂದಾಗಿದೆ. ಪ್ರೊಫೆಸರ್ ಬುಚನನ್ ವಿವರಿಸುವುದು: “ಪುರಾತನ ಕಾಲದಲ್ಲಿ, ಹೆತ್ತವರು ತಮ್ಮ ಮಕ್ಕಳಿಗೆ ತಮ್ಮ ದೇವದೇವತೆಗಳ ಹೆಸರನ್ನು ಇಡುತ್ತಿದ್ದರು. ಅಂದರೆ, ದೇವದೇವತೆಗಳ ಹೆಸರು ಹೇಗೆ ಉಚ್ಚರಿಸಲ್ಪಡುತ್ತಿತ್ತೋ ಅದೇ ರೀತಿ ಅವರ ಮಕ್ಕಳ ಹೆಸರುಗಳೂ ಉಚ್ಚರಿಸಲ್ಪಡುತ್ತಿದ್ದವು. ಜನರ ಹೆಸರುಗಳಲ್ಲಿ ಚತುರಕ್ಷರಿಯು ಉಪಯೋಗಿಸಲ್ಪಡುತ್ತಿತ್ತು, ಮತ್ತು ಅವರು ಯಾವಾಗಲೂ ತಮ್ಮ ಹೆಸರುಗಳ ನಡುವೆ ಸ್ವರಾಕ್ಷರವನ್ನು ಉಪಯೋಗಿಸಿದರು.”
ಬೈಬಲಿನಲ್ಲಿ ಕಂಡುಬರುವ, ದೇವರ ಹೆಸರಿನ ಸಂಕ್ಷಿಪ್ತ ರೂಪವನ್ನು ಒಳಗೊಂಡಿರುವ ಸೂಕ್ತವಾದ ನಾಮಪದಗಳ ಕೆಲವು ಉದಾಹರಣೆಗಳನ್ನು ಪರಿಗಣಿಸಿರಿ. ಯೋನಾತಾನನ ಹೆಸರನ್ನು ತೆಗೆದುಕೊಳ್ಳಿ. ಹೀಬ್ರು ಬೈಬಲಿನಲ್ಲಿ ಇದು ಯೊನಾತಾನ್ ಅಥವಾ ಯೆಹೋನಾತಾನ್ ಎಂದು ಕಂಡುಬರುತ್ತದೆ, ಮತ್ತು “ಯೆಹೋ ಅಥವಾ ಯೆಹೋವನು ಕೊಟ್ಟಿದ್ದಾನೆ” ಎಂಬುದೇ ಇದರ ಅರ್ಥವಾಗಿದೆ ಎಂದು ಪ್ರೊಫೆಸರ್ ಬುಚನನ್ ಹೇಳುತ್ತಾರೆ. ಎಲಿಯಹ್ ಅಥವಾ ಎಲಿಯಾಹು ಎಂಬುದು ಹೀಬ್ರು ಭಾಷೆಯಲ್ಲಿ ಪ್ರವಾದಿಯಾದ ಎಲೀಯನ ಹೆಸರಾಗಿದೆ. ಪ್ರೊಫೆಸರ್ ಬುಚನನ್ ಅವರಿಗನುಸಾರ, ಈ ಹೆಸರಿನ ಅರ್ಥ: “ಯಾಹು ಅಥವಾ ಯಾಹೂವನು ನನ್ನ ದೇವರಾಗಿದ್ದಾನೆ.” ತದ್ರೀತಿಯಲ್ಲಿ ಯೆಹೋಷಾಫಾಟ ಎಂಬುದಕ್ಕಿರುವ ಹೀಬ್ರು ಹೆಸರು ಯೆಹೊಷಾಫಾಟ್ ಎಂದಾಗಿದ್ದು, “ಯೆಹೊನು ನ್ಯಾಯ ನೀಡಿದನು” ಎಂಬುದು ಇದರ ಅರ್ಥವಾಗಿದೆ.
ಚತುರಕ್ಷರಿಯ ಎರಡು ಅಕ್ಷರಗಳುಳ್ಳ ಉಚ್ಚಾರಣೆಯು “ಯಾಹ್ವೆ”ಯಾಗಿದ್ದು, ಅದರಿಂದ ಓ ಎಂಬ ಸ್ವರಾಕ್ಷರವನ್ನು ಬಿಟ್ಟುಬಿಡಲಾಗಿದೆ; ವಾಸ್ತವದಲ್ಲಿ ಇದು ದೇವರ ಹೆಸರಿನ ಒಂದು ಭಾಗವಾಗಿದೆ. ದೇವರ ಹೆಸರನ್ನು ಒಳಗೂಡಿರುವ ಡಸನ್‌ಗಟ್ಟಲೆ ಬೈಬಲ್ ಹೆಸರುಗಳ ಮಧ್ಯದಲ್ಲಿರುವ ಈ ಸ್ವರಾಕ್ಷರವು, ಯೆಹೊನಾತಾನ್ ಹಾಗೂ ಯೊನಾತಾನ್ ಎಂಬ ಹೆಸರುಗಳಲ್ಲಿ ಹೇಗೆ ಕಾಣಸಿಗುತ್ತದೋ ಹಾಗೆಯೇ ಮೂಲ ಶಬ್ದಗಳಲ್ಲಿ ಹಾಗೂ ಅವುಗಳ ಸಂಕ್ಷಿಪ್ತ ರೂಪಗಳಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ. ಆದುದರಿಂದ, ದೇವರ ಹೆಸರಿನ ಕುರಿತು ಪ್ರೊಫೆಸರ್ ಬುಚನನ್ ಹೀಗೆ ಹೇಳುತ್ತಾರೆ: “ಏನೇ ಆಗಲಿ ಓ ಅಥವಾ ಒ ಎಂಬ ಸ್ವರಾಕ್ಷರ ಉಚ್ಚಾರವನ್ನು ಬಿಟ್ಟುಬಿಡಲು ಸಾಧ್ಯವಿಲ್ಲ. ಕೆಲವೊಮ್ಮೆ ಶಬ್ದವನ್ನು ‘ಯಾ’ ಎಂದು ಸಂಕ್ಷಿಪ್ತಗೊಳಿಸಲಾಗುತ್ತಿತ್ತು, ಆದರೆ ಎಂದೂ ‘ಯಾವೆ’ ಎಂದು ಸಂಕ್ಷಿಪ್ತಗೊಳಿಸಲ್ಪಟ್ಟಿರಲಿಲ್ಲ. . . . ಚತುರಕ್ಷರಿಯನ್ನು ಒಂದೇ ಅಕ್ಷರದಲ್ಲಿ ಉಚ್ಚರಿಸುತ್ತಿದ್ದಾಗ, ಅದು ‘ಯಾಹ್’ ಅಥವಾ ‘ಯೊ’ ಎಂದಾಗಿರುತ್ತಿತ್ತು. ಅದನ್ನು ಮೂರು ಅಕ್ಷರಗಳಲ್ಲಿ ಉಚ್ಚರಿಸುತ್ತಿದ್ದಾಗ, ಅದು ‘ಯಾಹೊವಾ’ ಅಥವಾ ‘ಯಾಹೂವಾ’ ಎಂದಾಗಿರಸಾಧ್ಯವಿದೆ. ಒಂದುವೇಳೆ ಅದನ್ನು ಎರಡೇ ಅಕ್ಷರಗಳಲ್ಲಿ ಎಂದಾದರೂ ಸಂಕ್ಷಿಪ್ತಗೊಳಿಸುತ್ತಿದ್ದಲ್ಲಿ, ಅದು ‘ಯಹೋ’ ಎಂದಾಗಿರಸಾಧ್ಯವಿದೆ.—ಬಿಬ್ಲಿಕಲ್ ಆರ್ಕಿಯಾಲೊಜಿ ರಿವ್ಯೂ.
ಹೀಬ್ರು ಆ್ಯಂಡ್ ಚಾಲ್ದೀ ಲೆಕ್ಸಿಕನ್ ಟು ದ ಓಲ್ಡ್ ಟೆಸ್ಟಮೆಂಟ್ ಸ್ಕ್ರಿಪ್ಚರ್ಸ್ ಎಂಬ ತನ್ನ ಪುಸ್ತಕದಲ್ಲಿ, 19ನೆಯ ಶತಮಾನದ ಹೀಬ್ರು ವಿದ್ವಾಂಸನಾದ ಗೆಸೇನೀಯಸ್‌ನು ಹೇಳಿದ ಹೇಳಿಕೆಯನ್ನು ಅರ್ಥಮಾಡಿಕೊಳ್ಳಲು ಈ ಹೇಳಿಕೆಗಳು ನಮಗೆ ಸಹಾಯ ಮಾಡುತ್ತವೆ: “יְהוָֹה [ಯೆಹೋವಾ] ಎಂಬ ಶಬ್ದವೇ [ದೇವರ ಹೆಸರಿನ] ನಿಜವಾದ ಉಚ್ಚಾರಣೆಯಾಗಿತ್ತೆಂದು ಪರಿಗಣಿಸುವವರು, ಯಾವುದೇ ಆಧಾರವಿಲ್ಲದೆ ತಮ್ಮ ಅಭಿಪ್ರಾಯದ ಪರವಾಗಿ ವಾದಿಸುತ್ತಿದ್ದಾರೆ ಎಂದು ಹೇಳಸಾಧ್ಯವಿಲ್ಲ. ಈ ರೀತಿಯಲ್ಲಿ ಉಚ್ಚರಿಸುವ ಮೂಲಕ, ಯಾವುದರಿಂದ ಸೂಕ್ತವಾದ ನಾಮಪದಗಳು ಆರಂಭವಾಗುತ್ತವೋ ಆ יְהוֹ [ಯಹೊ] ಮತ್ತು יוֹ [ಯೊ] ಎಂಬ ಸಂಕ್ಷಿಪ್ತ ಉಚ್ಚಾರಣೆಯನ್ನು ಹೆಚ್ಚು ಸಂತೃಪ್ತಕರವಾದ ರೀತಿಯಲ್ಲಿ ವಿವರಿಸಸಾಧ್ಯವಿದೆ.”
ಆದರೂ, ದ ಫೈವ್ ಬುಕ್ಸ್ ಆಫ್ ಮೋಸೆಸ್ ಎಂಬ ಪುಸ್ತಕದ ತನ್ನ ಇತ್ತೀಚಿನ ಭಾಷಾಂತರದ ಪೀಠಿಕೆಯಲ್ಲಿ ಎವ್‌ರೆಟ್ ಫಾಕ್ಸ್ ಸೂಚಿಸಿದ್ದು: “[ದೇವರ] ಹೀಬ್ರು ಹೆಸರಿನ ‘ಸರಿಯಾದ’ ಉಚ್ಚಾರಣೆಯನ್ನು ಕಂಡುಕೊಳ್ಳಲಿಕ್ಕಾಗಿ ಈ ಹಿಂದೆ ಮಾಡಲ್ಪಟ್ಟಿರುವ ಪ್ರಯತ್ನಗಳು ಮತ್ತು ಈಗ ಹೊಸದಾಗಿ ಮಾಡಲ್ಪಡುತ್ತಿರುವ ಪ್ರಯತ್ನಗಳಿಗೆ ಯಾವುದೇ ಯಶಸ್ಸು ದೊರಕಿಲ್ಲ; ಅಥವಾ ಕೆಲವೊಮ್ಮೆ ಕೇಳಿಬರುವ ‘ಯೆಹೋವ’ ಎಂಬ ಶಬ್ದವನ್ನಾಗಲಿ ಇಲ್ಲವೆ ವಿದ್ವಾಂಸರಿಂದ ಅತ್ಯಧಿಕವಾಗಿ ಉಪಯೋಗಿಸಲ್ಪಡುವ ‘ಯಾಹ್ವೆ’ ಎಂಬ ಶಬ್ದವನ್ನಾಗಲಿ ನಿರ್ಣಾಯಕವಾಗಿ ರುಜುಪಡಿಸಲು ಸಾಧ್ಯವಿಲ್ಲ.”
ವಿದ್ವಾಂಸರ ವಾಗ್ವಾದವು ಹೀಗೆಯೇ ಮುಂದುವರಿಯುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಮ್ಯಾಸರೀಟರು ಸ್ವರಾಕ್ಷರ ಪದ್ಧತಿಯನ್ನು ಕಂಡುಹಿಡಿಯುವುದಕ್ಕೆ ಮೊದಲೇ ಯೆಹೂದ್ಯರು ಸತ್ಯ ದೇವರ ಹೆಸರನ್ನು ಉಚ್ಚರಿಸುವುದನ್ನು ನಿಲ್ಲಿಸಿಬಿಟ್ಟಿದ್ದರು. ಹೀಗೆ, YHWH (יהוה) ಎಂಬ ವ್ಯಂಜನಾಕ್ಷರಗಳ ನಡುವೆ ಯಾವ ಸ್ವರಾಕ್ಷರಗಳು ಬರುತ್ತವೆ ಎಂಬುದನ್ನು ರುಜುಪಡಿಸಲು ಯಾವುದೇ ನಿಶ್ಚಿತ ವಿಧಾನವಿಲ್ಲ. ಆದರೂ, ಬೈಬಲಿನಲ್ಲಿ ಕೊಡಲ್ಪಟ್ಟಿರುವ ಹೆಸರುಗಳು ಇಂದಿಗೂ ಸರಿಯಾಗಿಯೇ ಉಚ್ಚರಿಸಲ್ಪಡುತ್ತಿದ್ದು, ಪುರಾತನ ಸಮಯದಲ್ಲಿ ದೇವರ ಹೆಸರನ್ನು ಹೇಗೆ ಉಚ್ಚರಿಸಲಾಗುತ್ತಿತ್ತು ಎಂಬುದಕ್ಕೆ ಸ್ಪಷ್ಟವಾದ ಸುಳಿವನ್ನು ಇವು ನೀಡುತ್ತವೆ. ಮತ್ತು ಈ ಸಂಗತಿಯ ಆಧಾರದ ಮೇಲೆ, “ಯೆಹೋವ” ಎಂಬುದು ಖಂಡಿತವಾಗಿಯೂ ಅಷ್ಟೊಂದು “ವಿಲಕ್ಷಣ”ವಾಗಿಲ್ಲ ಎಂದು ಕಡಿಮೆಪಕ್ಷ ಕೆಲವು ವಿದ್ವಾಂಸರಾದರೂ ಒಪ್ಪಿಕೊಳ್ಳುತ್ತಾರೆ.
[ಪುಟ 31 ರಲ್ಲಿರುವ ಚಿತ್ರ]
“ಯೆಹೋವ” ಎಂಬುದು ದೇವರ ಹೆಸರಿನ ಅತ್ಯಂತ ಜನಪ್ರಿಯ ಉಚ್ಚಾರಣೆಯಾಗಿದೆ