ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w99 2/15 ಪು. 4-8
  • ಯಶಸ್ವಿ ವಿವಾಹಕ್ಕೆ ಏನು ಅಗತ್ಯ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯಶಸ್ವಿ ವಿವಾಹಕ್ಕೆ ಏನು ಅಗತ್ಯ?
  • ಕಾವಲಿನಬುರುಜು—1999
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ವಿವಾಹದ ಕಡೆಗೆ ಒಂದು ನೋಟ
  • ನಿಮ್ಮನ್ನೇ ಪರೀಕ್ಷಿಸಿಕೊಳ್ಳಿರಿ
  • ನಿಮ್ಮ ಭಾವೀ ಸಂಗಾತಿಯತ್ತ ಒಂದು ನೋಟ
  • ಬಹುಮಾನಗಳು ಮತ್ತು ಜವಾಬ್ದಾರಿಗಳು
  • ಒಂದು ಯಶಸ್ವೀ ವಿವಾಹಕ್ಕಾಗಿ ತಯಾರಿಸುವುದು
    ಕುಟುಂಬ ಸಂತೋಷದ ರಹಸ್ಯ
  • ವಿವಾಹ—ಪ್ರೀತಿಭರಿತ ದೇವರ ಒಂದು ಕೊಡುಗೆ
    “ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ”
  • ಇಂದಿನ ಜಗತ್ತಿನಲ್ಲೂ ವಿವಾಹವು ಯಶಸ್ವಿಯಾಗಬಲ್ಲದು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
  • ನಿಮ್ಮ ವಿವಾಹ ಜೀವನವನ್ನು ಯಶಸ್ವಿಗೊಳಿಸಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2016
ಇನ್ನಷ್ಟು
ಕಾವಲಿನಬುರುಜು—1999
w99 2/15 ಪು. 4-8

ಯಶಸ್ವಿ ವಿವಾಹಕ್ಕೆ ಏನು ಅಗತ್ಯ?

ಈಜುವುದನ್ನು ಮೊದಲು ಕಲಿತುಕೊಳ್ಳದೆ ನೀವು ನದಿಗೆ ಧುಮುಕುವಿರೊ? ಅಂತಹ ತಿಳಿಗೇಡಿತನವು ಅಪಾಯಕರವಾಗಿರಬಲ್ಲದು, ನೀವು ನಿಮ್ಮ ಜೀವವನ್ನೂ ಕಳೆದುಕೊಳ್ಳಬಹುದು. ಆದರೆ ಇದರ ಕುರಿತು ಸ್ವಲ್ಪ ಯೋಚಿಸಿರಿ: ಒಳಗೊಂಡಿರುವ ಜವಾಬ್ದಾರಿಗಳನ್ನು ಹೊತ್ತುಕೊಳ್ಳುವುದು ಹೇಗೆಂಬುದರ ಕುರಿತು ಸ್ವಲ್ಪವೂ ಅರಿವಿಲ್ಲದೆ, ಅಸಂಖ್ಯಾತ ಜನರು ವಿವಾಹಬಂಧದೊಳಗೆ ಮುನ್ನುಗ್ಗುತ್ತಾರೆ.

ಯೇಸು ಹೇಳಿದ್ದು: “ನಿಮ್ಮಲ್ಲಿ ಯಾವನಾದರೂ ಒಂದು ಬುರುಜನ್ನು ಕಟ್ಟಿಸಬೇಕೆಂದು ಯೋಚಿಸಿದರೆ ಅವನು ಮೊದಲು ಕೂತುಕೊಂಡು—ಅದಕ್ಕೆ ಎಷ್ಟು ಖರ್ಚು ಹಿಡಿದೀತು, ಅದನ್ನು ತೀರಿಸುವದಕ್ಕೆ ಸಾಕಾಗುವಷ್ಟು ಹಣ ನನ್ನಲ್ಲಿ ಉಂಟೋ ಎಂದು ಲೆಕ್ಕಮಾಡುವದಿಲ್ಲವೇ?” (ಲೂಕ 14:28) ಹೀಗೆ, ಒಂದು ಬುರುಜನ್ನು ಕಟ್ಟುವ ಮುಂಚೆ ಏನನ್ನು ಮಾಡಬೇಕೋ, ಅದನ್ನೇ ಒಂದು ವಿವಾಹವನ್ನು ಕಟ್ಟಲಿಕ್ಕಾಗಿಯೂ ಮಾಡುವುದು ಅಗತ್ಯವಾಗಿದೆ. ಮದುವೆಯಾಗಲು ಬಯಸುವವರು, ತಾವು ವಿವಾಹದ ಬೇಡಿಕೆಗಳನ್ನು ಪೂರೈಸಸಾಧ್ಯವಿದೆಯೆಂಬುದನ್ನು ಖಾತ್ರಿಪಡಿಸಿಕೊಳ್ಳಲು ವಿವಾಹದ ಕಷ್ಟನಷ್ಟಗಳನ್ನು ಮೊದಲೇ ಜಾಗರೂಕತೆಯಿಂದ ಗುಣಿಸಿ ನೋಡಬೇಕು.

ವಿವಾಹದ ಕಡೆಗೆ ಒಂದು ನೋಟ

ಜೀವನದ ಸುಖದುಃಖಗಳನ್ನು ಹಂಚಿಕೊಳ್ಳಲು ಒಬ್ಬ ಸಂಗಾತಿಯಿರುವುದು, ನಿಜವಾಗಿಯೂ ಒಂದು ಆಶೀರ್ವಾದವಾಗಿದೆ. ಏಕಾಂಗಿತನ ಅಥವಾ ಹತಾಶೆಯಿಂದಾಗಿ ಉಂಟಾಗುವ ಶೂನ್ಯತೆಯನ್ನು ವಿವಾಹವು ತುಂಬಿಸಬಲ್ಲದು. ಪ್ರೀತಿ, ಸಾಂಗತ್ಯ, ಮತ್ತು ಆಪ್ತತೆಗಾಗಿರುವ ನಮ್ಮ ಸ್ವಭಾವಸಿದ್ಧ ಅಭಿಲಾಷೆಯನ್ನು ಅದು ಪೂರೈಸಬಲ್ಲದು. ಆದಾಮನನ್ನು ಸೃಷ್ಟಿಸಿದ ಬಳಿಕ ದೇವರು ಸಕಾರಣದಿಂದಲೇ ಹೀಗಂದನು: “ಮನುಷ್ಯನು ಒಂಟಿಗನಾಗಿರುವದು ಒಳ್ಳೇದಲ್ಲ; ಅವನಿಗೆ ಸರಿಬೀಳುವ ಸಹಕಾರಿಯನ್ನು ಉಂಟುಮಾಡುವೆನು.”—ಆದಿಕಾಂಡ 2:18; 24:67; 1 ಕೊರಿಂಥ 7:9.

ಹೌದು, ವಿವಾಹಿತರಾಗಿರುವುದು ಕೆಲವೊಂದು ಸಮಸ್ಯೆಗಳನ್ನು ಬಗೆಹರಿಸಬಲ್ಲದು. ಆದರೆ ಅದೇ ಸಮಯದಲ್ಲಿ ಅದು ಕೆಲವೊಂದು ಹೊಸ ಸಮಸ್ಯೆಗಳನ್ನೂ ತರುವುದು. ಏಕೆ? ಏಕೆಂದರೆ ವಿವಾಹವು, ಅನುರೂಪದಲ್ಲಿರಬಹುದಾದರೂ ಭಿನ್ನವಾಗಿರುವ ಎರಡು ವ್ಯಕ್ತಿತ್ವಗಳ ಸಂಮಿಳನವಾಗಿದೆ. ಆದುದರಿಂದ ಒಂದು ಒಳ್ಳೇ ಜೋಡಿಯಂತೆ ತೋರುವ ದಂಪತಿಗಳ ಮಧ್ಯೆಯೂ ಆಗಾಗ ಘರ್ಷಣೆಗಳು ಏಳುತ್ತವೆ. ಮದುವೆಯಾಗುವವರಿಗೆ “ಶರೀರಸಂಬಂಧವಾಗಿ ಕಷ್ಟ ಸಂಭವಿಸುವುದು”—ಅಥವಾ ದ ನ್ಯೂ ಇಂಗ್ಲಿಷ್‌ ಬೈಬಲ್‌ ಅದನ್ನು ಭಾಷಾಂತರಿಸುವಂತೆ, “ಶಾರೀರಿಕ ಜೀವನದಲ್ಲಿ ವೇದನೆ ಮತ್ತು ದುಃಖವಿರುವುದು” ಎಂದು ಕ್ರೈಸ್ತ ಅಪೊಸ್ತಲ ಪೌಲನು ಬರೆದನು.—1 ಕೊರಿಂಥ 7:28.

ಪೌಲನು ನಿರಾಶಾವಾದಿಯಾಗಿದ್ದನೊ? ಖಂಡಿತವಾಗಿಯೂ ಇಲ್ಲ! ಮದುವೆಯಾಗುವುದರ ಕುರಿತು ಯೋಚಿಸುವವರು, ವಾಸ್ತವಿಕವಾಗಿ ಯೋಚಿಸುವಂತೆ ಅವನು ಪ್ರಚೋದಿಸುತ್ತಿದ್ದನಷ್ಟೇ. ಒಬ್ಬ ವ್ಯಕ್ತಿಯ ಕಡೆಗೆ ಆಕರ್ಷಿತರಾಗುವುದರಿಂದ ಸಿಗುವ ಭ್ರಾಂತಿಸುಖದ ಅನಿಸಿಕೆಯು, ಮದುವೆಯ ನಂತರದ ತಿಂಗಳುಗಳು ಮತ್ತು ವರ್ಷಗಳಲ್ಲಿನ ವಿವಾಹಿತ ಜೀವನವು ಹೇಗಿರುವುದೆಂಬುದನ್ನು ನಿಷ್ಕೃಷ್ಟವಾಗಿ ಚಿತ್ರಿಸುವುದಿಲ್ಲ. ಪ್ರತಿಯೊಂದು ವಿವಾಹದಲ್ಲಿ ಸವಾಲುಗಳು ಮತ್ತು ಸಮಸ್ಯೆಗಳು ಇದ್ದೇ ಇರುತ್ತವೆ. ಅವು ಏಳುವವೊ ಎಂಬುದು ಮುಖ್ಯ ಸಂಗತಿಯಲ್ಲ ಬದಲಾಗಿ, ಅವು ಎದ್ದಾಗ ಅವುಗಳನ್ನು ಎದುರಿಸುವುದು ಹೇಗೆಂಬುದೇ ಮುಖ್ಯ ಸಂಗತಿಯಾಗಿದೆ.

ಸಮಸ್ಯೆಗಳು ಏಳುವಾಗ, ಗಂಡಹೆಂಡತಿಯರು ತಾವು ಒಬ್ಬರನ್ನೊಬ್ಬರು ನಿಜವಾಗಿ ಎಷ್ಟು ಪ್ರೀತಿಸುತ್ತೇವೆಂಬುದನ್ನು ತೋರಿಸಲು ಒಂದು ಅವಕಾಶ ಒದಗಿಬರುತ್ತದೆ. ದೃಷ್ಟಾಂತಕ್ಕಾಗಿ: ವಿಹಾರನೌಕೆಯೊಂದು ಹಡಗುಕಟ್ಟೆಯಲ್ಲಿ ಲಂಗರಿಗೆ ಬಿಗಿದಿದ್ದು, ಸುಮ್ಮನೆ ನಿಂತಿರುವಾಗ ಭವ್ಯವಾಗಿ ತೋರಬಹುದು. ಆದರೆ ಆ ವಿಹಾರನೌಕೆಯು ಸಮುದ್ರಯಾನಕ್ಕೆ ಯೋಗ್ಯವಾಗಿದೆಯೊ ಇಲ್ಲವೊ ಎಂಬುದು, ಅದು ಸಮುದ್ರದಲ್ಲಿರುವಾಗ, ಪ್ರಾಯಶಃ ಬಿರುಗಾಳಿಯೊಂದರ ಅಪ್ಪಳಿಸುವ ಅಲೆಗಳನ್ನು ಎದುರಿಸುವಾಗಲೇ ಸಾಬೀತಾಗುವುದು. ಹಾಗೆಯೇ, ಒಂದು ವಿವಾಹ ಬಂಧವು ಎಷ್ಟು ಬಲವಾಗಿದೆ ಎಂಬುದು ಕೇವಲ ಪ್ರೀತಿಯ ಪ್ರಶಾಂತ ಕ್ಷಣಗಳಲ್ಲಿ ಗೊತ್ತಾಗುವುದಿಲ್ಲ. ದಂಪತಿಗಳು ಕಷ್ಟಆಪತ್ತುಗಳಂತಹ ಬಿರುಗಾಳಿಗಳಿಗೆ ಸಿಲುಕಿ ಸುರಕ್ಷಿತವಾಗಿ ಹೊರಬರುವಂತಹ ಸಂಕಷ್ಟಕರ ಪರಿಸ್ಥಿತಿಗಳಲ್ಲೇ ಅದು ರುಜುವಾಗುವುದು.

ಹೀಗೆ ಸುರಕ್ಷಿತವಾಗಿ ಹೊರಬರಲು, ಒಬ್ಬ ವಿವಾಹಿತ ದಂಪತಿಗಳಿಗೆ ಬದ್ಧತೆಯು ಅಗತ್ಯ. ಯಾಕಂದರೆ ಒಬ್ಬ ಪುರುಷನು “ತನ್ನ ಹೆಂಡತಿಯನ್ನು ಸೇರಿಕೊಳ್ಳುವನು; ಅವರಿಬ್ಬರು ಒಂದೇ ಶರೀರವಾಗಿರುವರು” ಎಂಬುದು ದೇವರ ಉದ್ದೇಶವಾಗಿತ್ತು. (ಆದಿಕಾಂಡ 2:24) ಇಂದು, ಬದ್ಧತೆ ಎಂಬ ಪದದಿಂದ ಅನೇಕ ಜನರು ಹೆದರುತ್ತಾರೆ. ಆದರೆ ಇಬ್ಬರು ವ್ಯಕ್ತಿಗಳು ಒಬ್ಬರನ್ನೊಬ್ಬರು ನಿಜವಾಗಿಯೂ ಪ್ರೀತಿಸುವಾಗ, ಜೊತೆಯಾಗಿ ಬಾಳುವ ಒಂದು ಗಂಭೀರ ಪ್ರತಿಜ್ಞೆಯನ್ನು ಮಾಡಲು ಬಯಸುವುದು ಒಂದು ನ್ಯಾಯಸಮ್ಮತ ಸಂಗತಿಯಾಗಿದೆ. ಬದ್ಧತೆಯಿಂದಾಗಿ ವಿವಾಹಕ್ಕೆ ಘನತೆಯು ದಕ್ಕುತ್ತದೆ. ಏನೇ ಆಗಲಿ, ಒಬ್ಬ ದಂಪತಿಗಳು ಒಬ್ಬರನ್ನೊಬ್ಬರು ಬೆಂಬಲಿಸುವರು ಎಂಬ ಭರವಸೆಗೆ ಅದು ಆಧಾರವನ್ನು ನೀಡುತ್ತದೆ.a ಅಂತಹ ಬದ್ಧತೆಯನ್ನು ಮಾಡಲು ನೀವು ಸಿದ್ಧರಾಗಿಲ್ಲವಾದರೆ, ನೀವು ಮದುವೆಯಾಗಲು ನಿಜವಾಗಿ ಸಿದ್ಧರಾಗಿಲ್ಲ. (ಪ್ರಸಂಗಿ 5:4, 5ನ್ನು ಹೋಲಿಸಿ.) ಈಗಾಗಲೇ ಮದುವೆಯಾಗಿರುವವರು ಸಹ, ಒಂದು ಬಾಳುವ ವಿವಾಹಕ್ಕಾಗಿ ಬದ್ಧತೆಯು ಎಷ್ಟು ಆವಶ್ಯಕವಾಗಿದೆಯೆಂಬ ವಿಷಯದಲ್ಲಿ ಗಣ್ಯತೆಯನ್ನು ಹೆಚ್ಚಿಸುವ ಅಗತ್ಯವಿರಬಹುದು.

ನಿಮ್ಮನ್ನೇ ಪರೀಕ್ಷಿಸಿಕೊಳ್ಳಿರಿ

ನೀವು ಒಬ್ಬ ಸಂಗಾತಿಯಲ್ಲಿ ಬಯಸುವ ಗುಣಗಳ ಒಂದು ಪಟ್ಟಿಯನ್ನೇ ಮಾಡಬಲ್ಲಿರಿ ಎಂಬುದು ನಿಸ್ಸಂದೇಹ. ಆದರೆ, ಒಂದು ವಿವಾಹಕ್ಕೆ ನೀವು ಹೇಗೆ ನೆರವನ್ನು ನೀಡಬಲ್ಲಿರೆಂಬುದನ್ನು ನಿರ್ಧರಿಸಲು ನಿಮ್ಮನ್ನೇ ಪರೀಕ್ಷಿಸಿಕೊಳ್ಳುವುದು ಹೆಚ್ಚು ಕಷ್ಟಕರ. ಮದುವೆಯ ಪ್ರತಿಜ್ಞೆಗಳನ್ನು ಮಾಡುವ ಮುಂಚೆ ಮತ್ತು ಅನಂತರವೂ ಸ್ವ-ಪರಿಶೀಲನೆಯು ಅತ್ಯಾವಶ್ಯಕ. ಉದಾಹರಣೆಗಾಗಿ, ಈ ಮುಂದಿನ ಪ್ರಶ್ನೆಗಳನ್ನು ಕೇಳಿಕೊಳ್ಳಿರಿ.

• ನನ್ನ ಸಂಗಾತಿಗೆ ನಾನು ಜೀವನಪರ್ಯಂತವೂ ಬದ್ಧನಾಗಿರಲು ಸಿದ್ಧನಾಗಿದ್ದೇನೊ?—ಮತ್ತಾಯ 19:6.

ಬೈಬಲ್‌ ಪ್ರವಾದಿಯಾದ ಮಲಾಕಿಯನ ದಿನಗಳಲ್ಲಿ, ಅನೇಕ ಗಂಡಂದಿರು ಪ್ರಾಯಶಃ ಯುವ ಸ್ತ್ರೀಯರನ್ನು ಮದುವೆಯಾಗಲಿಕ್ಕೋಸ್ಕರ ತಮ್ಮ ಸಂಗಾತಿಗಳನ್ನು ತೊರೆದುಬಿಟ್ಟರು. ತನ್ನ ವೇದಿಯು, ತೊರೆಯಲ್ಪಟ್ಟಿರುವ ಹೆಂಡತಿಯರ ಕಣ್ಣೀರಿನಿಂದ ತೊಯ್ದುಹೋಗಿದೆ ಎಂದು ಯೆಹೋವನು ಹೇಳಿದನು ಮತ್ತು ಆ ರೀತಿಯಲ್ಲಿ ತಮ್ಮ ಸಂಗಾತಿಗಳೊಂದಿಗೆ “ಅನ್ಯಾಯ ಮಾಡುವವರನ್ನು” ಆತನು ಖಂಡಿಸಿದನು.—ಮಲಾಕಿಯ 2:13-16.

• ನಾನು ಮದುವೆಯಾಗುವುದರ ಕುರಿತು ಯೋಚಿಸುತ್ತಿರುವುದಾದರೆ, ಲೈಂಗಿಕ ಭಾವನೆಗಳು ತುಂಬ ಪ್ರಬಲವಾಗಿದ್ದು, ಸರಿಯಾದ ಆಯ್ಕೆಯನ್ನು ಮಾಡದಿರುವಂತೆ ತಡೆಗಟ್ಟುವ ಯುವ ಪ್ರಾಯವನ್ನು ನಾನು ದಾಟಿದ್ದೇನೊ?—1 ಕೊರಿಂಥ 7:36.

“ತೀರ ಎಳೆಯ ಪ್ರಾಯದಲ್ಲೇ ಮದುವೆಯಾಗುವುದು ತುಂಬ ಅಪಾಯಕಾರಿ,” ಎಂದು ಮದುವೆಯಾಗುವಾಗ 22 ವರ್ಷದವಳಾಗಿದ್ದ ನಿಕ್ಕಿ ಹೇಳುತ್ತಾಳೆ. ಅವಳು ಎಚ್ಚರಿಸುವುದು: “ನಿಮ್ಮ ಭಾವನೆಗಳು, ಗುರಿಗಳು, ಮತ್ತು ಅಭಿರುಚಿಗಳು, ನಿಮ್ಮ ಹದಿಪ್ರಾಯದ ಕೊನೆಯಿಂದ ಹಿಡಿದು, ನಿಮ್ಮ 20ರ ನಡು ಅಥವಾ ಕೊನೆ ಭಾಗದ ವರೆಗೆ ಬದಲಾಗುತ್ತಾ ಇರುವವು.” ಒಬ್ಬ ವ್ಯಕ್ತಿಯು ಮದುವೆಗೆ ಸಿದ್ಧನಾಗಿದ್ದಾನೊ ಇಲ್ಲವೊ ಎಂಬುದನ್ನು ಕೇವಲ ವಯಸ್ಸಿನಿಂದ ಅಳೆಯಲು ಸಾಧ್ಯವಿಲ್ಲ ಎಂಬುದು ನಿಜ. ಆದರೆ, ಲೈಂಗಿಕ ಅನಿಸಿಕೆಗಳು ಪ್ರಾರಂಭವಾಗುವ ಮತ್ತು ವಿಶೇಷವಾಗಿ ಪ್ರಬಲವಾಗಿರುವ ಯುವ ಪ್ರಾಯದಲ್ಲೇ ಮದುವೆಯಾಗುವುದು, ಒಬ್ಬ ವ್ಯಕ್ತಿಯ ಯೋಚನಾ ರೀತಿಯನ್ನು ವಕ್ರಗೊಳಿಸಿ, ಅವನನ್ನು ಭಾವೀ ಸಮಸ್ಯೆಗಳಿಗೆ ಕುರುಡಾಗಿಸಬಲ್ಲದು.

• ಒಂದು ಯಶಸ್ವಿ ವಿವಾಹಕ್ಕೆ ನೆರವುನೀಡುವಂತೆ ಸಹಾಯಮಾಡುವ ಯಾವ ಗುಣಲಕ್ಷಣಗಳು ನನ್ನಲ್ಲಿವೆ?—ಗಲಾತ್ಯ 5:22, 23.

ಅಪೊಸ್ತಲ ಪೌಲನು ಕೊಲೊಸ್ಸೆಯವರಿಗೆ ಬರೆದುದು: “ನೀವು ದೇವರಿಂದ ಆರಿಸಿಕೊಂಡವರೂ ಪ್ರತಿಷ್ಠಿತರೂ ಪ್ರಿಯರೂ ಆಗಿರುವದರಿಂದ ಕನಿಕರ ದಯೆ ದೀನಭಾವ ಸಾತ್ವಿಕತ್ವ ದೀರ್ಘಶಾಂತಿ ಎಂಬ ಸದ್ಗುಣಗಳನ್ನು ಧರಿಸಿಕೊಳ್ಳಿರಿ.” (ಕೊಲೊಸ್ಸೆ 3:12) ಮದುವೆಯಾಗುವುದರ ಕುರಿತು ಯೋಚಿಸುತ್ತಿರುವವರಿಗೆ ಹಾಗೂ ಈಗಾಗಲೇ ಮದುವೆಯಾದವರಿಗೆ ಈ ಸಲಹೆಯು ಸೂಕ್ತವಾಗಿದೆ.

• ಕಷ್ಟದ ಸಮಯಗಳಲ್ಲಿ ಒಬ್ಬ ಸಂಗಾತಿಯನ್ನು ಬೆಂಬಲಿಸಲು ಅಗತ್ಯವಿರುವ ಪ್ರೌಢತೆಯು ನನ್ನಲ್ಲಿದೆಯೊ?—ಗಲಾತ್ಯ 6:2.

ಒಬ್ಬ ವೈದ್ಯನು ಹೇಳುವುದು: “ಸಮಸ್ಯೆಗಳು ಏಳುವಾಗ, ಸಾಮಾನ್ಯವಾಗಿ ಸಂಗಾತಿಯನ್ನು ದೂರಲಾಗುತ್ತದೆ. ದೋಷಿ ಯಾರು ಎಂಬುದು ಪ್ರಾಮುಖ್ಯ ಸಂಗತಿಯಲ್ಲ. ಬದಲಾಗಿ, ಗಂಡಹೆಂಡತಿಯರಿಬ್ಬರೂ ವೈವಾಹಿಕ ಸಂಬಂಧವನ್ನು ಉತ್ತಮಗೊಳಿಸಲು ಹೇಗೆ ಸಹಕರಿಸಬಲ್ಲರು ಎಂಬುದೇ ಪ್ರಾಮುಖ್ಯ.” ವಿವೇಕಿ ರಾಜನಾದ ಸೊಲೊಮೋನನ ಮಾತುಗಳು, ವಿವಾಹಿತ ದಂಪತಿಗಳಿಗೆ ಅನ್ವಯವಾಗುತ್ತವೆ. “ಒಬ್ಬನಿಗಿಂತ ಇಬ್ಬರು ಲೇಸು; . . . ಒಬ್ಬನು ಬಿದ್ದರೆ ಇನ್ನೊಬ್ಬನು ಎತ್ತುವನು; ಬಿದ್ದಾಗ ಎತ್ತುವವನು ಇನ್ನೊಬ್ಬನಿಲ್ಲದಿದ್ದರೆ ಅವನ ಗತಿ ದುರ್ಗತಿಯೇ.”—ಪ್ರಸಂಗಿ 4:9, 10.

• ನಾನು ಸಾಮಾನ್ಯವಾಗಿ ಉಲ್ಲಾಸಿತನೂ ಆಶಾವಾದಿಯೂ ಆಗಿದ್ದೇನೊ, ಅಥವಾ ಹೆಚ್ಚಿನ ಸಮಯ ಗಂಟುಮೋರೆ ಹಾಕಿಕೊಂಡು ನಕಾರಾತ್ಮಕ ಮನೋಭಾವದವನಾಗಿದ್ದೇನೊ?—ಜ್ಞಾನೋಕ್ತಿ 15:15.

ಒಬ್ಬ ನಕಾರಾತ್ಮಕ ಮನೋಭಾವದ ವ್ಯಕ್ತಿಯು ಪ್ರತಿಯೊಂದು ದಿನವನ್ನು ಕೆಟ್ಟದ್ದೆಂದು ಪರಿಗಣಿಸುತ್ತಾನೆ. ಮದುವೆಯಿಂದಾಗಿ ಅವನ ಮನೋಭಾವವೇನೂ ಅದ್ಭುತಕರವಾಗಿ ಬದಲಾಗುವುದಿಲ್ಲ! ಬಹುಮಟ್ಟಿಗೆ ಟೀಕಾತ್ಮಕನಾಗಿರುವ ಅಥವಾ ನಿರಾಶಾವಾದಿಯಾಗಿರುವ ಒಬ್ಬ ಅವಿವಾಹಿತ ವ್ಯಕ್ತಿಯು, ಮದುವೆಯಾದ ನಂತರವೂ ಟೀಕಾತ್ಮಕನು ಹಾಗೂ ನಿರಾಶಾವಾದಿ ಆಗಿಯೇ ಉಳಿಯುತ್ತಾನೆ. ಅಂತಹ ನಕಾರಾತ್ಮಕವಾದ ಹೊರನೋಟವು, ವಿವಾಹದ ಮೇಲೆ ತುಂಬ ಒತ್ತಡವನ್ನು ಹಾಕಬಲ್ಲದು.—ಜ್ಞಾನೋಕ್ತಿ 21:9ನ್ನು ಹೋಲಿಸಿರಿ.

• ಒತ್ತಡದ ಕೆಳಗಿರುವಾಗ ನಾನು ಶಾಂತಚಿತ್ತನಾಗಿರುತ್ತೇನೊ, ಅಥವಾ ಕೋಪವನ್ನು ಹತೋಟಿ ಮೀರಿ ವ್ಯಕ್ತಪಡಿಸುತ್ತೇನೊ?—ಗಲಾತ್ಯ 5:19, 20.

ಕ್ರೈಸ್ತರನ್ನು ‘ಕೋಪಿಸುವದರಲ್ಲಿ ನಿಧಾನವಾಗಿರುವಂತೆ’ ಆಜ್ಞಾಪಿಸಲಾಗಿದೆ. (ಯಾಕೋಬ 1:19) ಮದುವೆಯ ಮುಂಚೆ ಮತ್ತು ಅನಂತರ ಒಬ್ಬ ಪುರುಷ ಅಥವಾ ಸ್ತ್ರೀಯು ಈ ಸಲಹೆಗನುಸಾರ ಜೀವಿಸುವ ಸಾಮರ್ಥ್ಯವನ್ನು ವಿಕಸಿಸಿಕೊಳ್ಳಬೇಕು: “ಕೋಪಮಾಡಬೇಕಾದರೂ ಪಾಪ ಮಾಡಬೇಡಿರಿ; ಸೂರ್ಯನು ಮುಳುಗುವದಕ್ಕಿಂತ ಮುಂಚೆ ನಿಮ್ಮ ಸಿಟ್ಟು ತೀರಲಿ.”—ಎಫೆಸ 4:26.

ನಿಮ್ಮ ಭಾವೀ ಸಂಗಾತಿಯತ್ತ ಒಂದು ನೋಟ

“ಜಾಣನು ವಿವೇಚನೆ ಮಾಡಿ ಹೆಜ್ಜೆ ಇಡುವನು” ಎಂದು ಬೈಬಲಿನ ಒಂದು ಜ್ಞಾನೋಕ್ತಿ ತಿಳಿಸುತ್ತದೆ. (ಜ್ಞಾನೋಕ್ತಿ 14:15, ಪವಿತ್ರ ಬೈಬಲ್‌) ಒಬ್ಬ ವಿವಾಹ ಸಂಗಾತಿಯನ್ನು ಆರಿಸಿಕೊಳ್ಳುವಾಗ ಇದು ಖಂಡಿತವಾಗಿಯೂ ಸತ್ಯ. ಒಬ್ಬ ವಿವಾಹ ಸಂಗಾತಿಯನ್ನು ಆಯ್ಕೆಮಾಡುವುದು, ಒಬ್ಬ ಪುರುಷನು ಅಥವಾ ಸ್ತ್ರೀಯು ಮಾಡುವ ಅತಿ ಪ್ರಾಮುಖ್ಯ ನಿರ್ಣಯಗಳಲ್ಲಿ ಒಂದಾಗಿದೆ. ಆದರೆ, ಅನೇಕ ಜನರು ತಾವು ಯಾವ ಕಾರನ್ನು ಖರೀದಿಸುವೆವು ಅಥವಾ ಯಾವ ಕಾಲೇಜಿಗೆ ಹೋಗುವೆವು ಎಂಬುದನ್ನು ನಿರ್ಣಯಿಸಲು ಎಷ್ಟು ಸಮಯವನ್ನು ಉಪಯೋಗಿಸುತ್ತಾರೊ, ಅಷ್ಟು ಸಮಯವನ್ನು ತಾವು ಯಾವ ವ್ಯಕ್ತಿಯನ್ನು ವಿವಾಹವಾಗುವೆವೆಂಬುದನ್ನು ನಿರ್ಣಯಿಸಲು ಉಪಯೋಗಿಸುವುದಿಲ್ಲ.

ಕ್ರೈಸ್ತ ಸಭೆಯಲ್ಲಿ ಯಾರಿಗೆ ಜವಾಬ್ದಾರಿಯನ್ನು ವಹಿಸಲಾಗುತ್ತದೊ ಅವರ ‘ಅರ್ಹತೆಯನ್ನು ಪ್ರಥಮವಾಗಿ ಪರೀಕ್ಷಿಸಲಾಗುತ್ತದೆ.’ (1 ತಿಮೊಥೆಯ 3:10, NW) ನೀವು ಮದುವೆಯಾಗಲು ಯೋಚಿಸುತ್ತಿರುವುದಾದರೆ, ಆ ವ್ಯಕ್ತಿಯ ‘ಅರ್ಹತೆಯ’ ಕುರಿತು ಖಾತ್ರಿಪಡಿಸಿಕೊಳ್ಳಲು ಬಯಸುವಿರಿ. ಉದಾಹರಣೆಗಾಗಿ ಮುಂದಿರುವ ಪ್ರಶ್ನೆಗಳನ್ನು ಪರಿಗಣಿಸಿರಿ. ಇವುಗಳನ್ನು ಒಬ್ಬ ಸ್ತ್ರೀಯ ದೃಷ್ಟಿಕೋನದಿಂದ ಕೇಳಲಾಗಿರುವುದಾದರೂ, ಅವುಗಳಲ್ಲಿನ ಅನೇಕ ತತ್ವಗಳು ಪುರುಷನಿಗೂ ಅನ್ವಯವಾಗುತ್ತವೆ. ಮತ್ತು ಈಗಾಗಲೇ ವಿವಾಹಿತರಾಗಿರುವವರು ಸಹ, ಈ ಅಂಶಗಳನ್ನು ಪರಿಗಣಿಸುವುದು ಉಪಯುಕ್ತಕರವಾಗಿರುವುದು.

• ಜನರು ಅವನ ಕುರಿತು ಏನನ್ನು ಆಡಿಕೊಳ್ಳುತ್ತಾರೆ?—ಫಿಲಿಪ್ಪಿ 2:19-22.

“ಆಕೆಯ ಪತಿಯು ನ್ಯಾಯಸ್ಥಾನದಲ್ಲಿ ದೇಶದ ಹಿರಿಯರ ಮಧ್ಯೆ ಕೂತಿರುವಾಗ [“ಊರಿನ ದ್ವಾರಗಳಲ್ಲಿ,” NW] ಪ್ರಸಿದ್ಧನಾಗಿ ಕಾಣುವ” ಒಬ್ಬ ಗಂಡನನ್ನು ಜ್ಞಾನೋಕ್ತಿ 31:23 ವರ್ಣಿಸುತ್ತದೆ. ಊರಿನ ಹಿರಿಯರು ನ್ಯಾಯತೀರ್ಪನ್ನು ಮಾಡಲಿಕ್ಕಾಗಿ ಊರಿನ ದ್ವಾರಗಳಲ್ಲಿ ಕುಳಿತುಕೊಳ್ಳುತ್ತಿದ್ದರು. ಆದುದರಿಂದ, ಸಾರ್ವಜನಿಕರು ಅವನಲ್ಲಿ ಭರವಸೆಯನ್ನಿಡುವಂತಹ ಜವಾಬ್ದಾರಿ ಅವನಿಗಿತ್ತೆಂಬುದು ಸುವ್ಯಕ್ತ. ಒಬ್ಬ ವ್ಯಕ್ತಿಯನ್ನು ಇತರರು ವೀಕ್ಷಿಸುವ ರೀತಿಯು, ಆ ವ್ಯಕ್ತಿಗೆ ಯಾವ ರೀತಿಯ ಹೆಸರಿದೆಯೆಂಬುದನ್ನು ತೋರಿಸುತ್ತದೆ. ಅವನ ಅಧಿಕಾರದ ಅಧೀನದಲ್ಲಿ ಯಾರಾದರೂ ಇರುವಲ್ಲಿ, ಅವರು ಅವನನ್ನು ವೀಕ್ಷಿಸುವ ವಿಧವನ್ನೂ ಗಮನಿಸಿರಿ. ಅವನ ಸಂಗಾತಿಯೋಪಾದಿ ಸಮಯಾನಂತರ ನೀವು ಅವನನ್ನು ಹೇಗೆ ವೀಕ್ಷಿಸುವಿರೆಂಬುದನ್ನು ಇದು ನಿಮಗೆ ಸೂಚಿಸಬಹುದು.—1 ಸಮುವೇಲ 25:3, 23-25ನ್ನು ಹೋಲಿಸಿರಿ.

• ಅವನಿಗೆ ಯಾವ ರೀತಿಯ ನೈತಿಕ ಮಟ್ಟಗಳಿವೆ?

ದೈವಿಕ ವಿವೇಕವು “ಮೊದಲು ಪರಿಶುದ್ಧ”ವಾಗಿದೆ. (ಯಾಕೋಬ 3:17) ನಿಮ್ಮ ಭಾವೀ ಸಂಗಾತಿಯು, ದೇವರ ಮುಂದೆ ತನ್ನ ಮತ್ತು ನಿಮ್ಮ ನಿಲುವಿಗಿಂತ ಹೆಚ್ಚಾಗಿ, ತನ್ನ ಸ್ವಂತ ಲೈಂಗಿಕ ತೃಷೆಯನ್ನು ತಣಿಸುವುದರಲ್ಲಿ ಹೆಚ್ಚು ಆಸಕ್ತನಾಗಿದ್ದಾನೊ? ದೇವರ ಮಟ್ಟಗಳಿಗನುಸಾರ ಜೀವಿಸಲು ಅವನು ಈಗ ಯಾವುದೇ ಪ್ರಯತ್ನವನ್ನು ಮಾಡದಿರುವಲ್ಲಿ, ಮದುವೆಯ ನಂತರ ಅವನದನ್ನು ಮಾಡುವನೆಂದು ನಂಬಲು ಯಾವ ಆಧಾರವಿದೆ?—ಆದಿಕಾಂಡ 39:7-12.

• ಅವನು ನನ್ನನ್ನು ಹೇಗೆ ಉಪಚರಿಸುತ್ತಾನೆ?—ಎಫೆಸ 5:28, 29.

ತನ್ನ ಹೆಂಡತಿಯಲ್ಲಿ “ಭರವಸವಿಡುವ” ಒಬ್ಬ ಗಂಡನ ಕುರಿತಾಗಿ ಜ್ಞಾನೋಕ್ತಿ ಎಂಬ ಬೈಬಲ್‌ ಪುಸ್ತಕವು ತಿಳಿಸುತ್ತದೆ. ಇನ್ನೂ ಹೆಚ್ಚಾಗಿ ಅವನು ‘ಆಕೆಯನ್ನು ಕೊಂಡಾಡುತ್ತಾನೆ.’ (ಜ್ಞಾನೋಕ್ತಿ 31:11, 29) ಅವನು ಅತಿಯಾಗಿ ಈರ್ಷ್ಯೆಪಡುವವನಾಗಿಲ್ಲ, ಅಥವಾ ಅವಳಿಂದ ನಿರೀಕ್ಷಿಸುವಂತಹ ವಿಷಯಗಳಲ್ಲಿ ಅನ್ಯಾಯಸ್ಥನಾಗಿರುವುದಿಲ್ಲ. ಮೇಲಣಿಂದ ಬರುವ ವಿವೇಕವು, “ಸಮಾಧಾನಕರವಾದದ್ದು, ವಿನಯವುಳ್ಳದ್ದು, . . . ಕರುಣೆ ಮುಂತಾದ ಒಳ್ಳೇ ಫಲಗಳಿಂದ ತುಂಬಿರುವಂಥದು ಆಗಿದೆ” ಎಂದು ಯಾಕೋಬನು ಬರೆದನು.—ಯಾಕೋಬ 3:17.

• ತನ್ನ ಸ್ವಂತ ಕುಟುಂಬದ ಸದಸ್ಯರನ್ನು ಅವನು ಹೇಗೆ ಉಪಚರಿಸುತ್ತಾನೆ?—ವಿಮೋಚನಕಾಂಡ 20:12.

ಹೆತ್ತವರಿಗೆ ಗೌರವವನ್ನು ತೋರಿಸುವುದು ಕೇವಲ ಮಕ್ಕಳಿಗಾಗಿರುವ ಒಂದು ಆವಶ್ಯಕತೆಯಲ್ಲ. ಬೈಬಲ್‌ ಹೇಳುವುದು: “ಹೆತ್ತ ತಂದೆಯ ಮಾತಿಗೆ ಕಿವಿಗೊಡು; ಮುಪ್ಪಿನಲ್ಲಿಯೂ ತಾಯಿಯನ್ನು ಅಸಡ್ಡೆಮಾಡಬೇಡ.” (ಜ್ಞಾನೋಕ್ತಿ 23:22) ಆಸಕ್ತಿಕರವಾಗಿ, ಡಾಕ್ಟರ್‌ ಡಬ್ಲ್ಯೂ. ಹ್ಯೂಗ್‌ ಮಿಸಿಲ್ಡಿನ್‌ ಬರೆದುದು: “ಭಾವೀ ವಧೂ-ವರರು ಒಬ್ಬರು ಇನ್ನೊಬ್ಬರ ಮನೆಗಳನ್ನು ಅನೌಪಚಾರಿಕವಾಗಿ ಸಂದರ್ಶಿಸಿ, ತನ್ನ ‘ನಿಶ್ಚಿತ ವರನು’ ಮತ್ತು ಅವನ ಹೆತ್ತವರ ನಡುವಿನ ಸಂಬಂಧವನ್ನು ಗಮನಿಸುವಲ್ಲಿ, ಅನೇಕ ವೈವಾಹಿಕ ತೊಂದರೆಗಳು ಮತ್ತು ಅನನುರೂಪತೆಗಳನ್ನು ತಪ್ಪಿಸಸಾಧ್ಯವಿದೆ ಅಥವಾ ಕಡಿಮೆಪಕ್ಷ ಮುಂಗಾಣಬಹುದು. ಅವನು ತನ್ನ ಹೆತ್ತವರನ್ನು ಹೇಗೆ ವೀಕ್ಷಿಸುತ್ತಾನೊ, ಅದೇ ರೀತಿಯಲ್ಲಿ ಅವನು ತನ್ನ ಸಂಗಾತಿಯನ್ನು ವೀಕ್ಷಿಸುವನು. ಒಬ್ಬ ವ್ಯಕ್ತಿಯು ಹೀಗೆ ಕೇಳಿಕೊಳ್ಳಬೇಕು: ‘ಅವನು ತನ್ನ ಹೆತ್ತವರನ್ನು ಉಪಚರಿಸುವಂತಹ ರೀತಿಯಲ್ಲೇ ನನ್ನನ್ನೂ ಉಪಚರಿಸಲು ಬಯಸುತ್ತೇನೊ?’ ಮತ್ತು ಅವನ ಹೆತ್ತವರು ಅವನೊಂದಿಗೆ ಹೇಗೆ ನಡೆದುಕೊಳ್ಳುತ್ತಾರೊ ಅದು, ಅವನು ತನ್ನನ್ನೇ ಹೇಗೆ ನಡೆಸಿಕೊಳ್ಳುತ್ತಾನೆ ಮತ್ತು ಮಧುಚಂದ್ರದ ನಂತರ ನೀವು ಅವನೊಂದಿಗೆ ಯಾವ ರೀತಿಯಲ್ಲಿ ವರ್ತಿಸುವಂತೆ ಅಪೇಕ್ಷಿಸುವನೆಂಬುದನ್ನು ನಿಮಗೆ ಚೆನ್ನಾಗಿ ತೋರಿಸಿಕೊಡುವುದು.”

• ಅವನು ಕೋಪಾವೇಶಗಳಿಗೆ ತುತ್ತಾಗುತ್ತಾನೊ ಅಥವಾ ನಿಂದಾತ್ಮಕ ಮಾತುಗಳನ್ನು ಉಪಯೋಗಿಸುತ್ತಾನೊ?

ಬೈಬಲ್‌ ಸಲಹೆಕೊಡುವುದು: “ಧ್ವೇಷಭರಿತ ಕಟುಭಾವ ಮತ್ತು ಕೋಪ ಮತ್ತು ಕ್ರೋಧ ಮತ್ತು ಅರಚುವಿಕೆ ಮತ್ತು ನಿಂದಾತ್ಮಕ ಮಾತು ನಿಮ್ಮಿಂದ ದೂರಮಾಡಲ್ಪಡಲಿ.” (ಎಫೆಸ 4:31, NW) “ಕುತರ್ಕ ವಾಗ್ವಾದಗಳನ್ನು ಮಾಡುವ ಭ್ರಾಂತಿ”ಯಿರುವ ಕೆಲವು ಕ್ರೈಸ್ತರ ಕುರಿತಾಗಿ ಪೌಲನು ತಿಮೊಥೆಯನನ್ನು ಎಚ್ಚರಿಸಿದನು. ಮತ್ತು ಇವರು “ಹೊಟ್ಟೇಕಿಚ್ಚು ಜಗಳ ದೂಷಣೆ [“ನಿಂದಾತ್ಮಕ ಮಾತು,” NW] ದುಸ್ಸಂಶಯ . . . ನಿತ್ಯವಾದ ಕಚ್ಚಾಟ”ಗಳಿಗೆ ಎಡೆಮಾಡಿಕೊಡುವರು.—1 ತಿಮೊಥೆಯ 6:4, 5.

ಇದಕ್ಕೆ ಕೂಡಿಸಿ, ಸಭೆಯಲ್ಲಿ ವಿಶೇಷ ಸುಯೋಗಗಳಿಗೆ ಅರ್ಹನಾಗುವವನು “ಹೊಡೆದಾಡುವವನು” ಆಗಿರಬಾರದು, ಮೂಲ ಗ್ರೀಕ್‌ ಭಾಷೆಗನುಸಾರ “ಗುದ್ದಾಡುವವನಾಗಿರಬಾರದು” ಎಂದು ಪೌಲನು ಬರೆದನು. (1 ತಿಮೊಥೆಯ 3:3, NW ಪಾದಟಿಪ್ಪಣಿ) ಅವನು ಜನರನ್ನು ದೈಹಿಕವಾಗಿ ಹೊಡೆಯುವವನು ಅಥವಾ ಮಾತುಗಳ ಮೂಲಕ ಬೆದರಿಸುವವನಾಗಿರಬಾರದು. ಕೋಪದ ಕ್ಷಣದಲ್ಲಿ ಹಿಂಸಾತ್ಮಕನಾಗುವ ಪ್ರವೃತ್ತಿಯುಳ್ಳ ವ್ಯಕ್ತಿಯು ಒಬ್ಬ ಯೋಗ್ಯ ವಿವಾಹ ಸಂಗಾತಿಯಲ್ಲ.

• ಅವನ ಗುರಿಗಳೇನು?

ಕೆಲವರು ಐಶ್ವರ್ಯವನ್ನು ಬೆನ್ನಟ್ಟುತ್ತಾ, ತಪ್ಪಿಸಿಕೊಳ್ಳಲಾಗದ ಫಲಿತಾಂಶಗಳನ್ನು ಕೊಯ್ಯುತ್ತಾರೆ. (1 ತಿಮೊಥೆಯ 6:9, 10) ಇತರರು ಯಾವುದೇ ಗುರಿಗಳಿಲ್ಲದೆ, ಜೀವನದಲ್ಲಿ ಅಡ್ಡಾದಿಡ್ಡಿಯಾಗಿ ಅಲೆಯುತ್ತಿರುತ್ತಾರೆ. (ಜ್ಞಾನೋಕ್ತಿ 6:6-11) ಆದರೆ ಒಬ್ಬ ದೈವಭಕ್ತಿಯುಳ್ಳ ವ್ಯಕ್ತಿಗೆ, “ನಾನೂ ನನ್ನ ಮನೆಯವರೂ ಯೆಹೋವನನ್ನೇ ಸೇವಿಸುವೆವು” ಎಂದು ಹೇಳಿದ ಯೆಹೋಶುವನಂತಹದ್ದೇ ದೃಢನಿರ್ಧಾರವು ಇರುವುದು.—ಯೆಹೋಶುವ 24:15.

ಬಹುಮಾನಗಳು ಮತ್ತು ಜವಾಬ್ದಾರಿಗಳು

ವಿವಾಹವು ಒಂದು ದೈವಿಕ ಏರ್ಪಾಡಾಗಿದೆ. ಅದು ಯೆಹೋವ ದೇವರಿಂದ ಅಧೀಕೃತಗೊಳಿಸಲ್ಪಟ್ಟು, ಸ್ಥಾಪಿಸಲ್ಪಟ್ಟಿತು. (ಆದಿಕಾಂಡ 2:22-24) ಒಬ್ಬ ಪುರುಷ ಮತ್ತು ಸ್ತ್ರೀಯು ಒಬ್ಬರಿಗೊಬ್ಬರು ಸಹಾಯವನ್ನು ನೀಡಲಿಕ್ಕಾಗಿ ಅವರ ನಡುವೆ ಒಂದು ಶಾಶ್ವತ ಬಂಧವನ್ನು ರಚಿಸಲಿಕ್ಕೋಸ್ಕರ ದೇವರು ವಿವಾಹದ ಏರ್ಪಾಡನ್ನು ಮಾಡಿದನು. ಬೈಬಲ್‌ ತತ್ವಗಳು ಅನ್ವಯಿಸಲ್ಪಡುವಾಗ, ಜೀವನವು ಆನಂದಕರವಾಗುವುದನ್ನು ಒಬ್ಬ ಗಂಡಹೆಂಡತಿಯು ಕಂಡುಕೊಳ್ಳುವರು.—ಪ್ರಸಂಗಿ 9:7-9.

ಆದರೆ ನಾವೀಗ ‘ಕಠಿನಕಾಲಗಳಲ್ಲಿ’ ಜೀವಿಸುತ್ತಿದ್ದೇವೆಂಬುದನ್ನು ಅರಿತುಕೊಳ್ಳಬೇಕು. ಈ ಸಮಯಾವಧಿಯಲ್ಲಿ, ಜನರು “ಸ್ವಾರ್ಥಚಿಂತಕರೂ ಹಣದಾಸೆಯವರೂ ಬಡಾಯಿಕೊಚ್ಚುವವರು ಅಹಂಕಾರಿಗಳೂ . . . ಮಮತೆಯಿಲ್ಲದವರೂ ಸಮಾಧಾನವಾಗದವರೂ . . . ದ್ರೋಹಿಗಳೂ ದುಡುಕಿನವರೂ ಉಬ್ಬಿಕೊಂಡವರೂ” ಆಗಿರುವರೆಂದು ಬೈಬಲ್‌ ಮುಂತಿಳಿಸಿದೆ. (2 ತಿಮೊಥೆಯ 3:1-4) ಈ ಗುಣಲಕ್ಷಣಗಳು ಒಬ್ಬ ವ್ಯಕ್ತಿಯ ವಿವಾಹದ ಮೇಲೆ ಹಾನಿಕರ ಪ್ರಭಾವವನ್ನು ಬೀರಬಲ್ಲವು. ಆದುದರಿಂದ ಮದುವೆಯಾಗಲಿರುವವರು, ಗಂಭೀರವಾಗಿ ಕಷ್ಟನಷ್ಟಗಳನ್ನು ಗುಣಿಸಿ ನೋಡಬೇಕು. ಮತ್ತು ಈಗಾಗಲೇ ಮದುವೆಯಾಗಿರುವವರು, ಬೈಬಲಿನಲ್ಲಿರುವ ದೈವಿಕ ಮಾರ್ಗದರ್ಶನವನ್ನು ಕಲಿತುಕೊಂಡು, ಅದನ್ನು ಅನ್ವಯಿಸಿಕೊಳ್ಳುವ ಮೂಲಕ ತಮ್ಮ ಬಂಧವನ್ನು ಬಲಪಡಿಸಲು ಕೆಲಸಮಾಡುತ್ತಾ ಇರಬೇಕು.

ಮದುವೆಯ ಕುರಿತು ಯೋಚಿಸುವವರು, ಮದುವೆ ದಿನಕ್ಕಿಂತಲೂ ಮುಂದಕ್ಕೆ ನೋಡುವುದು ಒಳ್ಳೆಯದು. ಮತ್ತು ಎಲ್ಲರೂ, ಕೇವಲ ಮದುವೆಯಾಗುವ ಕ್ರಿಯೆಯನ್ನು ಮಾತ್ರವಲ್ಲ, ವಿವಾಹಿತರಾಗಿ ಉಳಿಯುವ ಜೀವನವನ್ನು ಪರಿಗಣಿಸಬೇಕು. ಕೇವಲ ಪ್ರಣಯಸಂಬಂಧವಾಗಿ ಮಾತ್ರವಲ್ಲ, ಬದಲಾಗಿ ವಾಸ್ತವಿಕವಾಗಿ ಯೋಚಿಸುವಂತೆ, ಮಾರ್ಗದರ್ಶನಕ್ಕಾಗಿ ಯೆಹೋವನ ಕಡೆಗೆ ನೋಡಿರಿ. ಹಾಗೆ ಮಾಡುವ ಮೂಲಕ, ನೀವು ಒಂದು ಯಶಸ್ವೀ ವಿವಾಹದಲ್ಲಿ ಆನಂದಿಸುವ ಸಂಭವನೀಯತೆ ಹೆಚ್ಚು.

[ಪಾದಟಿಪ್ಪಣಿ]

a  ಪುನರ್‌ವಿವಾಹವಾಗುವ ಸಾಧ್ಯತೆಯೊಂದಿಗೆ, ವಿಚ್ಛೇದನವನ್ನು ಪಡೆಯಲಿಕ್ಕಾಗಿ ಬೈಬಲ್‌ ಒಂದೇ ಒಂದು ಆಧಾರವನ್ನು ಕೊಡುತ್ತದೆ. ಅದು “ಜಾರತ್ವ,” ವಿವಾಹಬಾಹಿರ ಲೈಂಗಿಕ ಸಂಬಂಧವೇ ಆಗಿದೆ.—ಮತ್ತಾಯ 19:9, NW.

[ಪುಟ 5 ರಲ್ಲಿರುವ ಚೌಕ]

“ಪ್ರೀತಿಯ ಕುರಿತಾಗಿ ನಾನು ಓದಿರುವವುಗಳಲ್ಲೇ ಅತ್ಯುತ್ತಮವಾದ ವರ್ಣನೆ”

“ನೀವು ಒಬ್ಬ ವ್ಯಕ್ತಿಯನ್ನು ನಿಜವಾಗಿ ಪ್ರೀತಿಸುತ್ತಿದ್ದೀರೊ ಎಂಬುದನ್ನು ನೀವು ಹೇಗೆ ಕಂಡುಹಿಡಿಯುವಿರಿ?” ಎಂದು ಡಾಕ್ಟರ್‌ ಕೆವಿನ್‌ ಲೇಮ್ಯಾನ್‌ ಬರೆಯುತ್ತಾರೆ. “ಪ್ರೀತಿಯ ವರ್ಣನೆಯನ್ನೊಳಗೊಂಡ ಒಂದು ಪ್ರಾಚೀನ ಪುಸ್ತಕ ಒಂದಿದೆ. ಆ ಪುಸ್ತಕವು ಸುಮಾರು ಎರಡು ಸಾವಿರ ವರ್ಷ ಹಳೆಯದಾಗಿದ್ದರೂ, ಪ್ರೀತಿಯ ಕುರಿತಾಗಿ ನಾನು ಓದಿರುವವುಗಳಲ್ಲೇ ಅತ್ಯುತ್ತಮವಾದ ವರ್ಣನೆಯಾಗಿದೆ.”

ಡಾಕ್ಟರ್‌ ಲೇಮ್ಯಾನ್‌, 1 ಕೊರಿಂಥ 13:4-8ರಲ್ಲಿ ಬೈಬಲಿನಲ್ಲಿ ಕಂಡುಬರುವ ಕ್ರೈಸ್ತ ಅಪೊಸ್ತಲ ಪೌಲನ ಮಾತುಗಳಿಗೆ ಸೂಚಿಸುತ್ತಿದ್ದರು:

“ಪ್ರೀತಿ ಬಹು ತಾಳ್ಮೆಯುಳ್ಳದ್ದು, ಪ್ರೀತಿ ದಯೆ ತೋರಿಸುವದು. ಪ್ರೀತಿಯು ಹೊಟ್ಟೆಕಿಚ್ಚುಪಡುವದಿಲ್ಲ, ಹೊಗಳಿಕೊಳ್ಳುವದಿಲ್ಲ; ಉಬ್ಬಿಕೊಳ್ಳುವದಿಲ್ಲ; ಮರ್ಯಾದೆಗೆಟ್ಟು ನಡೆಯುವದಿಲ್ಲ, ಸ್ವಪ್ರಯೋಜನವನ್ನು ಚಿಂತಿಸುವದಿಲ್ಲ, ಸಿಟ್ಟುಗೊಳ್ಳುವದಿಲ್ಲ, ಅಪಕಾರವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವದಿಲ್ಲ; ಅನ್ಯಾಯವನ್ನು ನೋಡಿ ಸಂತೋಷಪಡದೆ ಸತ್ಯಕ್ಕೆ ಜಯವಾಗುವಲ್ಲಿ ಸಂತೋಷಪಡುತ್ತದೆ; ಎಲ್ಲವನ್ನೂ ಅಡಗಿಸಿಕೊಳ್ಳುತ್ತದೆ, ಎಲ್ಲವನ್ನೂ ನಂಬುತ್ತದೆ, ಎಲ್ಲವನ್ನೂ ನಿರೀಕ್ಷಿಸುತ್ತದೆ, ಎಲ್ಲವನ್ನೂ ಸಹಿಸಿಕೊಳ್ಳುತ್ತದೆ. ಪ್ರೀತಿಯು ಎಂದಿಗೂ ಬಿದ್ದುಹೋಗುವದಿಲ್ಲ.”

[ಪುಟ 8 ರಲ್ಲಿರುವ ಚೌಕ]

ಭಾವೋದ್ವೇಗಗಳು ಮೋಸಕರವಾಗಿರಬಲ್ಲವು

ಬೈಬಲ್‌ ಸಮಯಗಳ ಶೂಲೇಮ್ಯ ಹುಡುಗಿಗೆ, ಪ್ರಣಯಸಂಬಂಧಿತ ಭಾವೋದ್ವೇಗಗಳ ಮೋಸಕರ ಶಕ್ತಿಯ ಕುರಿತಾಗಿ ಚೆನ್ನಾಗಿ ತಿಳಿದಿತ್ತೆಂಬುದು ಸುವ್ಯಕ್ತ. ಶಕ್ತಿಶಾಲಿ ರಾಜನಾದ ಸೊಲೊಮೋನನು ಅವಳ ಮನಸ್ಸನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾಗ, “ಉಚಿತಕಾಲಕ್ಕೆ ಮುಂಚೆ ಪ್ರೀತಿಯನ್ನು ಹುಟ್ಟಿಸಿ ಬೆಳೆಯಿಸಬಾರದೆಂದು” ಅವಳು ತನ್ನ ಗೆಳತಿಯರಿಗೆ ಹೇಳಿದಳು. (ಪರಮ ಗೀತ 2:7) ತಾನು ಭಾವೋದ್ವೇಗಕ್ಕೆ ಒಳಗಾಗುವಂತೆ ಗೆಳತಿಯರು ತನ್ನ ಮೇಲೆ ಒತ್ತಡ ಹೇರುವುದನ್ನು ಈ ಬುದ್ಧಿವಂತೆ ಯೌವನಸ್ಥೆಯು ಇಷ್ಟಪಡಲಿಲ್ಲ. ಇಂದು ಮದುವೆಯ ಕುರಿತು ಯೋಚಿಸುತ್ತಿರುವವರಿಗೂ ಇದು ವ್ಯಾವಹಾರಿಕವಾಗಿದೆ. ನಿಮ್ಮ ಭಾವೋದ್ವೇಗಗಳ ಮೇಲೆ ಬಲವಾದ ಹಿಡಿತವನ್ನಿಟ್ಟುಕೊಳ್ಳಿರಿ. ನೀವು ಮದುವೆಯಾಗುವಲ್ಲಿ, ನೀವು ಒಬ್ಬ ವ್ಯಕ್ತಿಯನ್ನು ಪ್ರೀತಿಸುವುದರಿಂದಲೇ ಮಾಡಬೇಕೇ ವಿನಃ, ಕೇವಲ ಮದುವೆಯಾಗುವುದರ ಕಲ್ಪನೆಯನ್ನು ಪ್ರೀತಿಸುವುದರಿಂದಲ್ಲ.

[ಪುಟ 6 ರಲ್ಲಿರುವ ಚಿತ್ರ]

ತುಂಬ ಸಮಯದ ಹಿಂದೆ ಮದುವೆಯಾದವರು ಸಹ ತಮ್ಮ ವೈವಾಹಿಕ ಬಂಧಗಳನ್ನು ಬಲಪಡಿಸಬಲ್ಲರು

[ಪುಟ 7 ರಲ್ಲಿರುವ ಚಿತ್ರ]

ಅವನು ತನ್ನ ಹೆತ್ತವರನ್ನು ಹೇಗೆ ಉಪಚರಿಸುತ್ತಾನೆ?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ