ನಮ್ಮ “ದೇಶ”ದ ಮೇಲೆ ಯೆಹೋವನ ಆಶೀರ್ವಾದ
“ಈ ತೊರೆಯು ಎಲ್ಲೆಲ್ಲಿ ಹರಿದರೂ ಅಲ್ಲಲ್ಲಿ ಜೀವವುಂಟಾಗುವದು.”—ಯೆಹೆಜ್ಕೇಲ 47:9.
1, 2. (ಎ) ನೀರು ಎಷ್ಟು ಪ್ರಾಮುಖ್ಯ? (ಬಿ) ಯೆಹೆಜ್ಕೇಲನ ದರ್ಶನದಲ್ಲಿನ ನದಿಯ ನೀರು ಏನನ್ನು ಚಿತ್ರಿಸುತ್ತದೆ?
ನೀರು ಒಂದು ವಿಶೇಷ ದ್ರವವಾಗಿದೆ. ಎಲ್ಲ ಭೌತಿಕ ಜೀವನವು ಅದರ ಮೇಲೆ ಅವಲಂಬಿಸಿದೆ. ನೀರಿಲ್ಲದೆ ನಮ್ಮಲ್ಲಿ ಯಾರೂ ಹೆಚ್ಚು ಸಮಯ ಬದುಕಲಾರೆವು. ಸ್ವಚ್ಛತೆಗಾಗಿಯೂ ನಾವು ಅದನ್ನೇ ಅವಲಂಬಿಸಿದ್ದೇವೆ, ಏಕೆಂದರೆ ನೀರು ಕಲ್ಮಶಗಳನ್ನು ಕರಗಿಸಿ, ಅವುಗಳನ್ನು ತೊಳೆದುಹಾಕಬಲ್ಲದು. ಆದುದರಿಂದ ನಾವು ನಮ್ಮ ದೇಹಗಳನ್ನು, ನಮ್ಮ ಬಟ್ಟೆಗಳನ್ನು, ಮತ್ತು ನಮ್ಮ ಆಹಾರ ವಸ್ತುಗಳನ್ನು ಸಹ ಅದರಿಂದ ತೊಳೆಯುತ್ತೇವೆ. ಹಾಗೆ ಮಾಡುವುದು ನಮ್ಮ ಜೀವಗಳನ್ನು ರಕ್ಷಿಸಬಹುದು.
2 ಜೀವಕ್ಕಾಗಿ ಯೆಹೋವನು ಮಾಡಿರುವ ಆತ್ಮಿಕ ಒದಗಿಸುವಿಕೆಗಳನ್ನು ಚಿತ್ರಿಸಲಿಕ್ಕಾಗಿ ಬೈಬಲು ನೀರನ್ನು ಉಪಯೋಗಿಸುತ್ತದೆ. (ಯೆರೆಮೀಯ 2:13; ಯೋಹಾನ 4:7-15) ಈ ಒದಗಿಸುವಿಕೆಗಳಲ್ಲಿ, ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞದ ಮೂಲಕ ಮತ್ತು ದೇವರ ವಾಕ್ಯದಲ್ಲಿ ಕಂಡುಬರುವ ಆತನ ಜ್ಞಾನದ ಮೂಲಕ ಮಾಡಲ್ಪಡುವ ಆತನ ಜನರ ಶುದ್ಧೀಕರಣವು ಒಳಗೂಡಿದೆ. (ಎಫೆಸ 5:25-27) ಯೆಹೆಜ್ಕೇಲನ ಆಲಯ ದರ್ಶನದಲ್ಲಿ, ಆಲಯದಿಂದ ಹರಿದುಬರುವ ಅದ್ಭುತ ನದಿಯು ಅಂತಹ ಜೀವದಾಯಕ ಆಶೀರ್ವಾದಗಳನ್ನು ಸಂಕೇತಿಸುತ್ತದೆ. ಆದರೆ ಆ ನದಿಯು ಯಾವಾಗ ಹರಿಯುತ್ತದೆ, ಮತ್ತು ಅದು ಇಂದು ನಮಗೆ ಯಾವ ಅರ್ಥದಲ್ಲಿದೆ?
ಪುನಸ್ಥಾಪಿತ ದೇಶದಲ್ಲಿ ಒಂದು ನದಿ ಹರಿಯುತ್ತದೆ
3. ಯೆಹೆಜ್ಕೇಲ 47:2-12ರಲ್ಲಿ ವರದಿಸಲ್ಪಟ್ಟಿರುವಂತೆ ಯೆಹೆಜ್ಕೇಲನು ಏನನ್ನು ಅನುಭವಿಸಿದನು?
3 ಬಾಬೆಲಿನಲ್ಲಿ ಬಂಧಿಗಳಾಗಿದ್ದಾಗ, ಯೆಹೆಜ್ಕೇಲನ ಜನರಿಗೆ ಯೆಹೋವನ ಒದಗಿಸುವಿಕೆಗಳ ಅಗತ್ಯವು ತೀವ್ರವಾಗಿತ್ತು. ಆದುದರಿಂದ, ಪವಿತ್ರಾಲಯದಿಂದ ನೀರು ತೊಟ್ಟಿಕ್ಕಿ, ದಾರ್ಶನಿಕ ಆಲಯದ ಮೂಲಕ ಹೊರಗೆ ಹರಿದುಬರುವುದನ್ನು ನೋಡುವುದು, ಯೆಹೆಜ್ಕೇಲನಿಗೆ ಎಷ್ಟು ಉತ್ತೇಜನದಾಯಕವಾಗಿತ್ತು! ಒಬ್ಬ ದೇವದೂತನು ಆ ಪ್ರವಾಹವನ್ನು 1,000 ಮೊಳಗಳ ಅಂತರಗಳಲ್ಲಿ ಅಳೆಯುತ್ತಾನೆ. ಅದರ ಆಳವು, ಪಾದಗಳಿಂದ ಮೊಣಕಾಲಿನ ವರೆಗೆ, ಮೊಣಕಾಲಿನಿಂದ ಸೊಂಟದ ವರೆಗೆ ಹೆಚ್ಚಾಗುತ್ತ, ಈಜಾಡುವುದನ್ನು ಅವಶ್ಯಪಡಿಸುವಷ್ಟು ದೊಡ್ಡದಾದ ಒಂದು ತೊರೆಯಾಗುತ್ತದೆ. ಆ ನದಿಯು ಜೀವ ಮತ್ತು ಫಲೋತ್ಪತ್ತಿಯನ್ನು ತರುತ್ತದೆ. (ಯೆಹೆಜ್ಕೇಲ 47:2-11) ಯೆಹೆಜ್ಕೇಲನಿಗೆ ಹೀಗೆ ಹೇಳಲಾಯಿತು: “ತೊರೆಯ ಎರಡು ದಡಗಳಲ್ಲಿಯೂ ಸಕಲ ಫಲವೃಕ್ಷಗಳು ಬೆಳೆಯುವವು.” (ಯೆಹೆಜ್ಕೇಲ 47:12ಎ) ಆ ತೊರೆಯು, ಒಂದು ನಿರ್ಜೀವ ಜಲಾಶಯವಾಗಿರುವ ಮೃತ ಸಮುದ್ರವನ್ನು ಪ್ರವೇಶಿಸಿದಂತೆ, ಜೀವವು ಪುಟಿದೇಳುತ್ತದೆ! ಮೀನುಗಳು ಅಸಂಖ್ಯಾತವಾಗುತ್ತವೆ. ಒಂದು ಮೀನುಗಾರಿಕಾ ಉದ್ಯಮವು ವರ್ಧಿಸುತ್ತದೆ.
4, 5. ಒಂದು ನದಿಯ ಕುರಿತಾದ ಯೋವೇಲನ ಪ್ರವಾದನೆಯು ಯೆಹೆಜ್ಕೇಲನ ಪ್ರವಾದನೆಗೆ ಹೇಗೆ ಹೋಲುತ್ತದೆ, ಮತ್ತು ಇದು ಮಹತ್ವಪೂರ್ಣವಾಗಿರುವುದು ಏಕೆ?
4 ಈ ಮನೋಹರವಾದ ಪ್ರವಾದನೆಯು, ಗಡೀಪಾರಾದ ಯೆಹೂದ್ಯರಿಗೆ ಎರಡು ಶತಮಾನಗಳಿಗಿಂತಲೂ ಹಿಂದೆ ದಾಖಲಿಸಲ್ಪಟ್ಟಿದ್ದ ಒಂದು ಪ್ರವಾದನೆಯನ್ನು ಜ್ಞಾಪಕಕ್ಕೆ ತಂದಿರಬಹುದು: “ಯೆಹೋವನ ಆಲಯದೊಳಗಿಂದ ಬುಗ್ಗೆಯು ಉಕ್ಕಿಬಂದು ಜಾಲಿಯ ಹಳ್ಳವನ್ನು ತಂಪುಮಾಡುವದು.”a (ಯೋವೇಲ 3:18) ಯೆಹೆಜ್ಕೇಲನ ಪ್ರವಾದನೆಯಂತೆಯೇ, ಯೋವೇಲನ ಪ್ರವಾದನೆಯು ದೇವರ ಮನೆ ಅಂದರೆ ಆಲಯದಿಂದ ಹರಿದುಬರುವ ಮತ್ತು ಒಂದು ಬಂಜರು ಪ್ರದೇಶವನ್ನು ಸಜೀವಗೊಳಿಸುವ ಒಂದು ನದಿಯ ಕುರಿತು ಮುಂತಿಳಿಸುತ್ತದೆ.
5 ಯೋವೇಲನ ಪ್ರವಾದನೆಯು, ನಮ್ಮ ಸಮಯದಲ್ಲಿ ಪೂರ್ಣಗೊಳ್ಳುತ್ತಿದೆಯೆಂದು ಕಾವಲಿನಬುರುಜು ಪತ್ರಿಕೆಯು ದೀರ್ಘ ಸಮಯದಿಂದ ವಿವರಿಸಿದೆ.b ಹಾಗಾದರೆ, ಅದಕ್ಕೆ ಸಮಾನವಾದ ಯೆಹೆಜ್ಕೇಲನ ದರ್ಶನಕ್ಕೂ ಇದು ಅನ್ವಯಿಸುತ್ತದೆ. ಪ್ರಾಚೀನ ಇಸ್ರಾಯೇಲಿನಲ್ಲಿದ್ದಂತೆಯೇ ಇಂದು ದೇವರ ಜನರ ಪುನಸ್ಸ್ಥಾಪಿತ ದೇಶದಲ್ಲಿ, ಯೆಹೋವನ ಆಶೀರ್ವಾದಗಳು ಖಂಡಿತವಾಗಿಯೂ ಹರಿದಿವೆ.
ಆಶೀರ್ವಾದಗಳ ದೊಡ್ಡ ಪ್ರವಾಹ
6. ದಾರ್ಶನಿಕ ವೇದಿಯ ಮೇಲೆ ರಕ್ತದ ಚಿಮುಕಿಸುವಿಕೆಯು, ಯೆಹೂದ್ಯರಿಗೆ ಏನನ್ನು ಜ್ಞಾಪಕಹುಟ್ಟಿಸಬೇಕಿತ್ತು?
6 ದೇವರ ಪುನಸ್ಸ್ಥಾಪಿತ ಜನರ ಮೇಲೆ ಸುರಿಸಲ್ಪಟ್ಟ ಆಶೀರ್ವಾದಗಳ ಮೂಲವೇನು? ಆ ನೀರು ದೇವರ ಆಲಯದಿಂದ ಹರಿದುಬರುತ್ತದೆಂಬುದನ್ನು ಗಮನಿಸಿರಿ. ತದ್ರೀತಿಯಲ್ಲಿ ಇಂದು, ಆಶೀರ್ವಾದಗಳು ಯೆಹೋವನ ಮಹಾನ್ ಆತ್ಮಿಕ ಆಲಯದ—ಶುದ್ಧಾರಾಧನೆಗಾಗಿರುವ ಏರ್ಪಾಡಿನ—ಮೂಲಕ ಯೆಹೋವನಿಂದ ಬರುತ್ತವೆ. ಯೆಹೆಜ್ಕೇಲನ ದರ್ಶನವು ಒಂದು ಪ್ರಾಮುಖ್ಯ ವಿವರವನ್ನು ಕೂಡಿಸುತ್ತದೆ. ಒಳಗಣ ಪ್ರಾಕಾರದಲ್ಲಿ, ವೇದಿಯ ತುಸು ದಕ್ಷಿಣದಲ್ಲಿ ಪ್ರವಾಹವು ಹರಿಯುತ್ತದೆ. (ಯೆಹೆಜ್ಕೇಲ 47:1) ವೇದಿಯು, ದಾರ್ಶನಿಕ ಆಲಯದ ಮಧ್ಯದಲ್ಲೇ ಇದೆ. ಯೆಹೋವನು ಅದರ ಕುರಿತಾಗಿ ಯೆಹೆಜ್ಕೇಲನಿಗೆ ಸೂಕ್ಷ್ಮವಾಗಿ ವಿವರಿಸುತ್ತಾನೆ, ಮತ್ತು ಆ ವೇದಿಯ ಮೇಲೆ ಯಜ್ಞದ ರಕ್ತವು ಚಿಮುಕಿಸಲ್ಪಡುವಂತೆ ಆತನು ಆಜ್ಞೆಯನ್ನು ಕೊಡುತ್ತಾನೆ. (ಯೆಹೆಜ್ಕೇಲ 43:13-18, 20) ಆ ವೇದಿಯು ಎಲ್ಲ ಇಸ್ರಾಯೇಲ್ಯರಿಗೆ ಮಹತ್ವಾರ್ಥವುಳ್ಳದ್ದಾಗಿತ್ತು. ಯೆಹೋವನೊಂದಿಗಿನ ಅವರ ಒಡಂಬಡಿಕೆಯು, ಸೀನಾಯಿ ಪರ್ವತದ ತಪ್ಪಲಿನಲ್ಲಿ ಒಂದು ವೇದಿಯ ಮೇಲೆ ಮೋಶೆಯು ರಕ್ತವನ್ನು ಚಿಮುಕಿಸಿದಾಗ, ತುಂಬ ಸಮಯದ ಹಿಂದೆಯೇ ಸ್ಥಿರಗೊಳಿಸಲ್ಪಟ್ಟಿತು. (ವಿಮೋಚನಕಾಂಡ 24:4-8) ಆದುದರಿಂದ, ದಾರ್ಶನಿಕ ವೇದಿಯ ಮೇಲೆ ರಕ್ತದ ಚಿಮುಕಿಸುವಿಕೆಯು, ಅವರು ತಮ್ಮ ಪುನಸ್ಸ್ಥಾಪಿತ ದೇಶಕ್ಕೆ ಹಿಂದಿರುಗಿದ ಬಳಿಕ, ಯೆಹೋವನೊಂದಿಗಿನ ತಮ್ಮ ಒಡಂಬಡಿಕೆಯನ್ನು ಅವರು ಪಾಲಿಸಿದಷ್ಟು ಸಮಯ ಆತನ ಆಶೀರ್ವಾದಗಳು ಅವರಿಗೆ ಹರಿಯುವವೆಂಬ ವಿಷಯವನ್ನು ಅವರಿಗೆ ಜ್ಞಾಪಕಹುಟ್ಟಿಸಬೇಕಿತ್ತು.—ಧರ್ಮೋಪದೇಶಕಾಂಡ 28:1-14.
7. ಸಾಂಕೇತಿಕ ವೇದಿಯು ಇಂದು ಕ್ರೈಸ್ತರಿಗೆ ಯಾವ ಅರ್ಥವನ್ನು ಹೊಂದುತ್ತದೆ?
7 ತದ್ರೀತಿಯಲ್ಲಿ, ಇಂದು ದೇವಜನರು ಒಂದು ಹೆಚ್ಚು ಉತ್ತಮವಾದ ಹೊಸ ಒಡಂಬಡಿಕೆಯ ಮೂಲಕ ಆಶೀರ್ವದಿಸಲ್ಪಟ್ಟಿದ್ದಾರೆ. (ಯೆರೆಮೀಯ 31:31-34) ಅದು ಕೂಡ, ಯೇಸು ಕ್ರಿಸ್ತನ ರಕ್ತದ ಮೂಲಕ ಬಹು ಸಮಯದ ಹಿಂದೆಯೇ ಸ್ಥಿರಗೊಳಿಸಲ್ಪಟ್ಟಿತು. (ಇಬ್ರಿಯ 9:15-20) ಇಂದು ನಾವು ಆ ಒಡಂಬಡಿಕೆಯಲ್ಲಿ ಸಹಭಾಗಿಗಳಾಗಿರುವ ಅಭಿಷಿಕ್ತರಲ್ಲಿ ಒಬ್ಬರಾಗಿರಲಿ, ಅಥವಾ ಆ ಒಡಂಬಡಿಕೆಯ ಫಲಾನುಭವಿಗಳಾದ ಬೇರೆ ಕುರಿಗಳಲ್ಲಿ ಒಬ್ಬರಾಗಿರಲಿ, ಆ ಸಾಂಕೇತಿಕ ವೇದಿಯು ನಮಗೆ ಮಹತ್ವಾರ್ಥವುಳ್ಳದ್ದಾಗಿದೆ. ಆ ವೇದಿಯು, ಕ್ರಿಸ್ತನ ಯಜ್ಞದ ಸಂಬಂಧದಲ್ಲಿ ದೇವರ ಚಿತ್ತವನ್ನು ಸಂಕೇತಿಸುತ್ತದೆ. (ಯೋಹಾನ 10:16; ಇಬ್ರಿಯ 10:10) ಆ ಸಾಂಕೇತಿಕ ವೇದಿಯು, ಆತ್ಮಿಕ ಆಲಯದ ಮಧ್ಯದಲ್ಲೇ ಇರುವಂತೆ, ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞವು ಶುದ್ಧಾರಾಧನೆಯ ಕೇಂದ್ರಸ್ಥಾನದಲ್ಲಿದೆ. ಅದು ನಮ್ಮ ಪಾಪಗಳ ಕ್ಷಮಾಪಣೆಗಾಗಿ ಮತ್ತು ಈ ಕಾರಣದಿಂದ ಭವಿಷ್ಯತ್ತಿಗಾಗಿರುವ ನಮ್ಮ ಎಲ್ಲ ನಿರೀಕ್ಷೆಗಳಿಗಾಗಿ ಆಧಾರವಾಗಿದೆ. (1 ಯೋಹಾನ 2:2) ಹೀಗಿರುವುದರಿಂದ ನಾವು ಹೊಸ ಒಡಂಬಡಿಕೆಯೊಂದಿಗೆ ಸಂಬಂಧಿಸಿರುವ ನಿಯಮವಾದ, “ಕ್ರಿಸ್ತನ ನಿಯಮ”ಕ್ಕನುಸಾರವಾಗಿ ಜೀವಿಸಲು ಪ್ರಯತ್ನಿಸುತ್ತೇವೆ. (ಗಲಾತ್ಯ 6:2) ನಾವದನ್ನು ಮಾಡುವಷ್ಟು ಸಮಯ, ಜೀವಕ್ಕಾಗಿರುವ ಯೆಹೋವನ ಒದಗಿಸುವಿಕೆಗಳಿಂದ ಪ್ರಯೋಜನ ಹೊಂದುವೆವು.
8. (ಎ) ದಾರ್ಶನಿಕ ದೇವಾಲಯದಲ್ಲಿನ ಒಳಗಣ ಪ್ರಾಕಾರದಲ್ಲಿ ಏನು ಇರಲಿಲ್ಲ? (ಬಿ) ದಾರ್ಶನಿಕ ದೇವಾಲಯದಲ್ಲಿನ ಯಾಜಕರು ತಮ್ಮನ್ನು ಹೇಗೆ ಶುದ್ಧಪಡಿಸಿಕೊಳ್ಳಸಾಧ್ಯವಿತ್ತು?
8 ಅಂತಹ ಪ್ರಯೋಜನಗಳಲ್ಲಿ ಒಂದು, ಯೆಹೋವನ ಮುಂದೆ ಒಂದು ಶುದ್ಧವಾದ ನಿಲುವಾಗಿದೆ. ದಾರ್ಶನಿಕ ಆಲಯದ ಒಳಗಣ ಪ್ರಾಕಾರದಲ್ಲಿ, ದೇವದರ್ಶನದ ಗುಡಾರ ಹಾಗೂ ಸೊಲೊಮೋನನ ಆಲಯದಲ್ಲಿ ತುಂಬ ಪ್ರಮುಖವಾಗಿದ್ದ—ತದನಂತರ ಸಮುದ್ರವೆಂದು ಕರೆಯಲ್ಪಟ್ಟಂಥ, ಯಾಜಕರು ತೊಳೆಯಲು ಬಳಸುತ್ತಿದ್ದ ಒಂದು ದೊಡ್ಡ ಗಂಗಾಳವು ಇರಲಿಲ್ಲ. (ವಿಮೋಚನಕಾಂಡ 30:18-21; 2 ಪೂರ್ವಕಾಲವೃತ್ತಾಂತ 4:2-6) ಹಾಗಾದರೆ, ಯೆಹೆಜ್ಕೇಲನ ದಾರ್ಶನಿಕ ಆಲಯದಲ್ಲಿನ ಯಾಜಕರು ಶುದ್ಧೀಕರಣಕ್ಕಾಗಿ ಏನನ್ನು ಉಪಯೋಗಿಸಸಾಧ್ಯವಿತ್ತು? ಒಳಗಣ ಪ್ರಾಕಾರದಿಂದ ಹರಿದುಬರುತ್ತಿದ್ದ ಆ ಅದ್ಭುತಕರ ಪ್ರವಾಹವನ್ನೇ! ಹೌದು, ಒಂದು ಶುದ್ಧವಾದ ಅಥವಾ ಪವಿತ್ರ ನಿಲುವನ್ನು ಹೊಂದಲಿಕ್ಕಾಗಿ ಅಗತ್ಯವಾಗಿರುವ ಸಾಧನದೊಂದಿಗೆ ಯೆಹೋವನು ಅವರನ್ನು ಆಶೀರ್ವದಿಸಲಿದ್ದನು.
9. ಅಭಿಷಿಕ್ತರು ಮತ್ತು ಮಹಾ ಸಮೂಹದವರು ಇಂದು ಒಂದು ಶುದ್ಧವಾದ ನಿಲುವನ್ನು ಹೇಗೆ ಪಡೆದುಕೊಳ್ಳಸಾಧ್ಯವಿದೆ?
9 ತದ್ರೀತಿಯಲ್ಲಿ ಇಂದು ಅಭಿಷಿಕ್ತರು, ಯೆಹೋವನ ಮುಂದೆ ಒಂದು ಶುದ್ಧವಾದ ನಿಲುವಿನೊಂದಿಗೆ ಆಶೀರ್ವದಿಸಲ್ಪಟ್ಟಿದ್ದಾರೆ. ಆತನು ಅವರನ್ನು ನೀತಿವಂತರೆಂದು ಘೋಷಿಸುತ್ತಾ, ಅವರನ್ನು ಪವಿತ್ರರೋಪಾದಿ ಪರಿಗಣಿಸುತ್ತಾನೆ. (ರೋಮಾಪುರ 5:1, 2) ಯಾಜಕರಲ್ಲದ ಕುಲಗಳು ಚಿತ್ರಿಸುವ “ಮಹಾ ಸಮೂಹ”ದ ಕುರಿತೇನು? ಅವರು ಹೊರಗಣ ಪ್ರಾಕಾರದಲ್ಲಿ ಆರಾಧಿಸುತ್ತಾರೆ, ಮತ್ತು ಅದೇ ಪ್ರವಾಹವು, ದಾರ್ಶನಿಕ ಆಲಯದ ಆ ಭಾಗದ ಮೂಲಕವೂ ಹರಿದುಹೋಗುತ್ತದೆ. ಮಹಾ ಸಮೂಹವು ಆತ್ಮಿಕ ಆಲಯದ ಅಂಗಣದಲ್ಲಿ ಆರಾಧಿಸುತ್ತಿರುವಾಗ, ಅವರು ಶುಭ್ರವಾದ ಬಿಳಿ ನಿಲುವಂಗಿಗಳನ್ನು ಧರಿಸಿರುವುದನ್ನು ಅಪೊಸ್ತಲ ಯೋಹಾನನು ನೋಡಿದ್ದು ಎಷ್ಟು ಯುಕ್ತವಾಗಿದೆ! (ಪ್ರಕಟನೆ 7:9-14) ಅವನತಿಗಿಳಿದಿರುವ ಈ ಲೋಕವು ಅವರನ್ನು ಎಷ್ಟೇ ಕೆಟ್ಟದ್ದಾಗಿ ಉಪಚರಿಸಿದರೂ, ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞದಲ್ಲಿ ಅವರು ನಂಬಿಕೆಯನ್ನು ಇಡುವಷ್ಟು ಸಮಯ, ಯೆಹೋವನು ಅವರನ್ನು ನಿರ್ಮಲರೂ ಶುದ್ಧರೂ ಆಗಿ ವೀಕ್ಷಿಸುತ್ತಾನೆಂಬ ಆಶ್ವಾಸನೆ ಅವರಿಗಿರಸಾಧ್ಯವಿದೆ. ಅವರು ನಂಬಿಕೆಯನ್ನಿಡುವುದು ಹೇಗೆ? ಪ್ರಾಯಶ್ಚಿತ್ತ ಯಜ್ಞದಲ್ಲಿ ಪೂರ್ಣ ವಿಶ್ವಾಸವನ್ನಿಡುತ್ತಾ, ಯೇಸುವಿನ ಹೆಜ್ಜೆಜಾಡನ್ನು ಹಿಂಬಾಲಿಸುವ ಮೂಲಕವೇ.—1 ಪೇತ್ರ 2:21.
10, 11. ಸಾಂಕೇತಿಕ ನೀರಿನ ಒಂದು ಪ್ರಮುಖ ವೈಶಿಷ್ಟ್ಯ ಯಾವುದು, ಮತ್ತು ಇದು ಆ ನದಿಯ ಮಹತ್ತರವಾದ ವಿಸ್ತರಣೆಗೆ ಹೇಗೆ ಸಂಬಂಧಿಸುತ್ತದೆ?
10 ಈಗಾಗಲೇ ತಿಳಿಸಲ್ಪಟ್ಟಿರುವಂತೆ, ಈ ಸಾಂಕೇತಿಕ ನೀರಿನ ಇನ್ನೊಂದು ಅತ್ಯಾವಶ್ಯಕ ವೈಶಿಷ್ಟ್ಯವಿದೆ—ಅದು ಜ್ಞಾನವಾಗಿದೆ. ಪುನಸ್ಸ್ಥಾಪಿತ ಇಸ್ರಾಯೇಲಿನಲ್ಲಿ, ಯೆಹೋವನು ಯಾಜಕತ್ವದ ಮೂಲಕ ತನ್ನ ಜನರಿಗೆ ಶಾಸ್ತ್ರೀಯ ಉಪದೇಶವನ್ನು ಕೊಟ್ಟನು. (ಯೆಹೆಜ್ಕೇಲ 44:23) ತುಲನಾತ್ಮಕ ವಿಧದಲ್ಲಿ, ಯೆಹೋವನು “ರಾಜವಂಶಸ್ಥರಾದ ಯಾಜಕರ” ಮೂಲಕ, ತನ್ನ ಸತ್ಯ ವಾಕ್ಯದ ಕುರಿತಾದ ಹೇರಳವಾದ ಉಪದೇಶವನ್ನು ನೀಡುವ ಮೂಲಕ ತನ್ನ ಜನರನ್ನು ಇಂದು ಆಶೀರ್ವದಿಸಿದ್ದಾನೆ. (1 ಪೇತ್ರ 2:9) ಯೆಹೋವ ದೇವರ ಕುರಿತು, ಮಾನವಕುಲಕ್ಕಾಗಿ ಆತನಿಗಿರುವ ಉದ್ದೇಶಗಳ ಕುರಿತು, ಮತ್ತು ವಿಶೇಷವಾಗಿ ಯೇಸು ಕ್ರಿಸ್ತನು ಮತ್ತು ಮೆಸ್ಸೀಯ ಸಂಬಂಧಿತ ರಾಜ್ಯದ ಕುರಿತಾದ ಜ್ಞಾನವು, ಈ ಕಡೇ ದಿನಗಳಲ್ಲಿ ಸದಾ ಸಮೃದ್ಧವಾಗಿ ಹರಿಯುತ್ತಿದೆ. ನಾವು ಪಡೆಯುತ್ತಿರುವ, ಆತ್ಮಿಕ ಚೈತನ್ಯದ ಆಳವಾಗುತ್ತಿರುವ ಈ ಪ್ರವಾಹವು ಎಷ್ಟು ಅಮೋಘವಾದದ್ದಾಗಿದೆ!—ದಾನಿಯೇಲ 12:4.
11 ಆ ದೇವದೂತನು ಅಳೆದಂತಹ ಆ ನದಿಯು ಪ್ರಗತಿಪರವಾಗಿ ಆಳವಾಗುತ್ತಾ ಹೋದಂತೆಯೇ, ಯೆಹೋವನಿಂದ ಬರುವ ಜೀವದಾಯಕ ಆಶೀರ್ವಾದಗಳ ಹರಿಯುವಿಕೆಯು ನಮ್ಮ ಆಶೀರ್ವದಿತ ಆತ್ಮಿಕ ದೇಶದೊಳಗೆ ಬರುತ್ತಿರುವ ಜನರ ಅಗತ್ಯಗಳ ಕಾಳಜಿವಹಿಸಲಿಕ್ಕಾಗಿ ಗಮನಾರ್ಹವಾಗಿ ಹೆಚ್ಚಾಗಿದೆ. ಇನ್ನೊಂದು ಪುನಸ್ಸ್ಥಾಪನೆಯ ಪ್ರವಾದನೆಯು ಮುಂತಿಳಿಸಿದ್ದು: “ಚಿಕ್ಕವನಿಂದ ಒಂದು ಕುಲವಾಗುವದು, ಅಲ್ಪನಿಂದ ಬಲವಾದ ಜನಾಂಗವಾಗುವದು; ಯೆಹೋವನೆಂಬ ನಾನು ಕ್ಲುಪ್ತಕಾಲದಲ್ಲಿ ಇದನ್ನು ಬಲುಬೇಗನೆ ಉಂಟುಮಾಡುವೆನು.” (ಯೆಶಾಯ 60:22) ಈ ಮಾತುಗಳು ಸತ್ಯವಾಗಿ ಪರಿಣಮಿಸಿವೆ—ಇಂದು ಕೋಟಿಗಟ್ಟಲೆ ಜನರು ನಮ್ಮೊಂದಿಗೆ ಶುದ್ಧಾರಾಧನೆಯಲ್ಲಿ ಜೊತೆಗೂಡಲು ನೆರೆದಿದ್ದಾರೆ! ತನ್ನ ಕಡೆಗೆ ತಿರುಗುವವರೆಲ್ಲರಿಗೆ ಯೆಹೋವನು ಸಮೃದ್ಧವಾದ ‘ನೀರನ್ನು’ ಲಭ್ಯಗೊಳಿಸಿದ್ದಾನೆ. (ಪ್ರಕಟನೆ 22:17) ತನ್ನ ಐಹಿಕ ಸಂಸ್ಥೆಯು, ನೂರಾರು ಭಾಷೆಗಳಲ್ಲಿ ಬೈಬಲುಗಳನ್ನು ಮತ್ತು ಬೈಬಲ್ ಸಾಹಿತ್ಯವನ್ನು ಲೋಕದಾದ್ಯಂತ ವಿತರಿಸುವಂತೆ ಆತನು ಏರ್ಪಾಡನ್ನು ಮಾಡಿದ್ದಾನೆ. ತದ್ರೀತಿಯಲ್ಲಿ, ಸತ್ಯದ ಸ್ಫಟಿಕದಷ್ಟು ಸ್ಪಷ್ಟವಾದ ನೀರುಗಳನ್ನು ಎಲ್ಲರಿಗೆ ಒದಗಿಸಲಿಕ್ಕಾಗಿ, ಲೋಕವ್ಯಾಪಕವಾಗಿ ಕ್ರೈಸ್ತ ಕೂಟಗಳು ಮತ್ತು ಇದರಂತಹ ಅಧಿವೇಶನಗಳು ಸಹ ಏರ್ಪಡಿಸಲ್ಪಟ್ಟಿವೆ. ಅಂತಹ ಒದಗಿಸುವಿಕೆಗಳು ಜನರ ಮೇಲೆ ಹೇಗೆ ಪ್ರಭಾವ ಬೀರುತ್ತವೆ?
ಆ ನೀರು ಜೀವವನ್ನು ತರುತ್ತದೆ!
12. (ಎ) ಯೆಹೆಜ್ಕೇಲನ ದರ್ಶನದಲ್ಲಿನ ವೃಕ್ಷಗಳು ಅಷ್ಟೊಂದು ಫಲವನ್ನು ಉತ್ಪಾದಿಸಲು ಶಕ್ತರಾಗಿರುವುದು ಏಕೆ? (ಬಿ) ಕಡೇ ದಿವಸಗಳಲ್ಲಿ ಈ ಫಲಪ್ರದ ವೃಕ್ಷಗಳು ಏನನ್ನು ಪ್ರತಿನಿಧಿಸುತ್ತವೆ?
12 ಯೆಹೆಜ್ಕೇಲನ ದರ್ಶನದಲ್ಲಿನ ನದಿಯು, ಜೀವ ಮತ್ತು ಆರೋಗ್ಯವನ್ನು ತರುತ್ತದೆ. ನದಿಯ ಬದಿಗಳಲ್ಲಿ ಬೆಳೆಯಲಿರುವ ವೃಕ್ಷಗಳ ಕುರಿತಾಗಿ ಯೆಹೆಜ್ಕೇಲನಿಗೆ ತಿಳಿದುಬರುವಾಗ, ಅವನಿಗೆ ಹೀಗೆ ಹೇಳಲಾಗುತ್ತದೆ: “ಅವುಗಳ ಎಲೆ ಬಾಡದು, ಹಣ್ಣು ತೀರದು; . . . ಅವುಗಳ ಹಣ್ಣು ಆಹಾರಕ್ಕೂ ಸೊಪ್ಪು ಔಷಧಕ್ಕೂ ಅನುಕೂಲಿಸುವವು.” ಈ ವೃಕ್ಷಗಳು ಇಂತಹ ಆಶ್ಚರ್ಯಕರ ರೀತಿಯಲ್ಲಿ ಏಕೆ ಫಲವನ್ನು ಕೊಡುತ್ತವೆ? ಅವುಗಳಿಗಾಗಿ “ತೊರೆಯ ನೀರು ಪವಿತ್ರಾಲಯದೊಳಗಿಂದ ಹೊರಟುಬರುವ ಕಾರಣವೇ.” (ಯೆಹೆಜ್ಕೇಲ 47:12ಬಿ) ಈ ಸಾಂಕೇತಿಕ ವೃಕ್ಷಗಳು, ಯೇಸುವಿನ ಪ್ರಾಯಶ್ಚಿತ್ತ ಯಜ್ಞದ ಆಧಾರದ ಮೇಲೆ ಮಾನವಕುಲವನ್ನು ಪರಿಪೂರ್ಣತೆಗೆ ಪುನಸ್ಸ್ಥಾಪಿಸಲಿಕ್ಕಾಗಿರುವ ದೇವರ ಎಲ್ಲ ಒದಗಿಸುವಿಕೆಗಳನ್ನು ಮುನ್ಚಿತ್ರಿಸುತ್ತವೆ. ಈ ಸಮಯದಲ್ಲಿ ಭೂಮಿಯ ಮೇಲೆ ಆತ್ಮಿಕ ಪೋಷಣೆ ಮತ್ತು ಗುಣಪಡಿಸುವಿಕೆಯನ್ನು ಒದಗಿಸುವುದರಲ್ಲಿ, ಅಭಿಷಿಕ್ತ ಉಳಿಕೆಯವರು ಮುಂದಾಳತ್ವವನ್ನು ವಹಿಸುತ್ತಾರೆ. ಈ 1,44,000 ಮಂದಿಯಲ್ಲಿ ಎಲ್ಲರೂ ತಮ್ಮ ಸ್ವರ್ಗೀಯ ಬಹುಮಾನವನ್ನು ಪಡೆದುಕೊಂಡ ಬಳಿಕ, ಕ್ರಿಸ್ತನೊಂದಿಗೆ ಉಪರಾಜರುಗಳಾಗಿರುವ ಇವರ ಯಾಜಕೀಯ ಸೇವೆಯಿಂದ ಬರುವ ಪ್ರಯೋಜನಗಳು, ಕಟ್ಟಕಡೆಗೆ ಆದಾಮಸಂಬಂಧಿತ ಮರಣದ ಮೇಲಿನ ಸಂಪೂರ್ಣ ವಿಜಯಕ್ಕೆ ನಡೆಸುತ್ತಾ, ಭವಿಷ್ಯತ್ತಿಗೆ ವ್ಯಾಪಿಸುವವು.—ಪ್ರಕಟನೆ 5:9, 10; 21:2-4.
13. ನಮ್ಮ ಸಮಯದಲ್ಲಿ ಯಾವ ಗುಣಪಡಿಸುವಿಕೆಯು ನಡೆಸಲ್ಪಟ್ಟಿದೆ?
13 ಆ ದಾರ್ಶನಿಕ ನದಿಯು, ನಿರ್ಜೀವ ಮೃತ ಸಮುದ್ರದೊಳಕ್ಕೆ ಹರಿದು, ಅದು ಹರಿಯುವಲ್ಲೆಲ್ಲ ಗುಣಪಡಿಸುತ್ತದೆ. ಈ ಸಮುದ್ರವು, ಆತ್ಮಿಕವಾಗಿ ಮೃತವಾಗಿರುವ ಪರಿಸರವನ್ನು ಚಿತ್ರಿಸುತ್ತದೆ. ಆದರೆ “ಈ ತೊರೆಯು ಎಲ್ಲೆಲ್ಲಿ ಹರಿಯುತ್ತದೋ ಅಲ್ಲಲ್ಲಿ ಗುಂಪುಗುಂಪಾಗಿ ಚಲಿಸುವ ಸಕಲವಿಧಜಲಜಂತುಗಳು ಬದುಕಿ ಬಾಳುವವು.” (ಯೆಹೆಜ್ಕೇಲ 47:9) ತದ್ರೀತಿಯಲ್ಲಿ, ಕಡೇ ದಿವಸಗಳಲ್ಲಿ ಜೀವಜಲವು ಒಳಹೊಕ್ಕಿರುವಲ್ಲೆಲ್ಲ, ಜನರು ಆತ್ಮಿಕವಾಗಿ ಜೀವಿತರಾಗುತ್ತಿದ್ದಾರೆ. ಹಾಗೆ ಪುನರುಜ್ಜೀವಿಸಲ್ಪಟ್ಟವರಲ್ಲಿ ಪ್ರಥಮರು, 1919ರಲ್ಲಿ ಇದ್ದ ಅಭಿಷಿಕ್ತ ಉಳಿಕೆಯವರಾಗಿದ್ದರು. ಅವರು ಒಂದು ಮರಣಸದೃಶ, ನಿಷ್ಕ್ರಿಯ ಸ್ಥಿತಿಯಿಂದ ಆತ್ಮಿಕವಾಗಿ ಜೀವಿತರಾದರು. (ಯೆಹೆಜ್ಕೇಲ 37:1-14; ಪ್ರಕಟನೆ 11:3, 7-12) ಅಂದಿನಿಂದ ಆ ಅತ್ಯಾವಶ್ಯಕ ನೀರುಗಳು, ಆತ್ಮಿಕವಾಗಿ ಮೃತರಾಗಿರುವ ಇತರರನ್ನೂ ತಲಪಿವೆ. ಮತ್ತು ಇವರು ಜೀವಿತರಾಗಿ, ಯೆಹೋವನನ್ನು ಪ್ರೀತಿಸುವ ಮತ್ತು ಸೇವಿಸುವ, ಬೇರೆ ಕುರಿಗಳ ಸದಾ ಹೆಚ್ಚುತ್ತಿರುವ ಮಹಾ ಸಮೂಹವನ್ನು ರಚಿಸಿರುತ್ತಾರೆ. ಬೇಗನೆ ಈ ಒದಗಿಸುವಿಕೆಯು, ಪುನರುತ್ಥಿತ ವ್ಯಕ್ತಿಗಳ ಸಮೂಹಗಳಿಗೂ ವಿಸ್ತರಿಸಲ್ಪಡುವುದು.
14. ಮೃತ ಸಮುದ್ರದ ದಡದುದ್ದಕ್ಕೂ ಅಭಿವೃದ್ಧಿಯಾಗುವ ಮೀನುಗಾರಿಕಾ ಉದ್ಯಮವು ಇಂದು ಏನನ್ನು ಚೆನ್ನಾಗಿ ಚಿತ್ರಿಸುತ್ತದೆ?
14 ಆತ್ಮಿಕ ಜೀವಶಕ್ತಿಯು, ಉತ್ಪಾದಕತೆಯಲ್ಲಿ ಫಲಿಸುತ್ತದೆ. ಹಿಂದೆ ಸತ್ತ ಸ್ಥಿತಿಯಲ್ಲಿದ್ದ ಸಮುದ್ರದ ದಡಗಳಲ್ಲಿ ಏಳಿಗೆಹೊಂದುವ ಮೀನುಗಾರಿಕಾ ಉದ್ಯಮದಿಂದ ಇದು ದೃಷ್ಟಾಂತಿಸಲ್ಪಟ್ಟಿದೆ. ಯೇಸು ತನ್ನ ಹಿಂಬಾಲಕರಿಗೆ ಹೇಳಿದ್ದು: “ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ನಿಮ್ಮನ್ನು ಮಾಡುವೆನು.” (ಮತ್ತಾಯ 4:19) ಕಡೇ ದಿವಸಗಳಲ್ಲಿ, ಅಭಿಷಿಕ್ತರಲ್ಲಿ ಉಳಿದವರ ಒಟ್ಟುಗೂಡಿಸುವಿಕೆಯೊಂದಿಗೆ ಆ ಮೀನು ಹಿಡಿಯುವ ಕೆಲಸವು ಆರಂಭವಾಯಿತು, ಆದರೆ ಅದು ಅಲ್ಲಿಗೆ ನಿಲ್ಲಲಿಲ್ಲ. ನಿಷ್ಕೃಷ್ಟ ಜ್ಞಾನದ ಆಶೀರ್ವಾದವನ್ನು ಸೇರಿಸಿ, ಯೆಹೋವನ ಆತ್ಮಿಕ ಆಲಯದಿಂದ ಜೀವದಾಯಕ ನೀರು ಎಲ್ಲ ರಾಷ್ಟ್ರಗಳ ಜನರನ್ನು ಪ್ರಭಾವಿಸುತ್ತದೆ. ಆ ತೊರೆಯು ಹರಿದಿರುವಲ್ಲೆಲ್ಲ, ಆತ್ಮಿಕ ಜೀವವು ಫಲಿಸಿದೆ.
15. ಜೀವಕ್ಕಾಗಿರುವ ದೇವರ ಒದಗಿಸುವಿಕೆಗಳನ್ನು ಎಲ್ಲರೂ ಸ್ವೀಕರಿಸಲಿಕ್ಕಿಲ್ಲವೆಂದು ಯಾವುದು ತೋರಿಸುತ್ತದೆ, ಮತ್ತು ಅಂತಹವರಿಗಾಗಿ ಅಂತ್ಯ ಫಲವು ಏನಾಗಿರುವುದು?
15 ಈಗ ಎಲ್ಲರೂ ಜೀವದ ಸಂದೇಶಕ್ಕೆ ಅನುಕೂಲಕರವಾಗಿ ಪ್ರತಿಕ್ರಿಯಿಸುವುದಿಲ್ಲವೆಂಬುದು ನಿಜ. ಕ್ರಿಸ್ತನ ಸಹಸ್ರ ವರ್ಷದಾಳಿಕೆಯ ಸಮಯದಲ್ಲಿ ಪುನರುತ್ಥಾನಗೊಳಿಸಲ್ಪಡುವವರೆಲ್ಲರೂ ಹಾಗೆ ಪ್ರತಿಕ್ರಿಯಿಸಲಿಕ್ಕಿಲ್ಲ. (ಯೆಶಾಯ 65:20; ಪ್ರಕಟನೆ 21:8) ಆ ಸಮುದ್ರದ ಕೆಲವೊಂದು ಭಾಗಗಳು ಗುಣವಾಗಲಿಲ್ಲವೆಂದು ಆ ದೇವದೂತನು ಘೋಷಿಸುತ್ತಾನೆ. ಈ ಸವುಳುಹೊಂಡಗಳು, ನಿರ್ಜೀವ ಸ್ಥಳಗಳು ‘ಉಪ್ಪಿನ ಗಣಿಯಾಗುವವು.’ (ಯೆಹೆಜ್ಕೇಲ 47:11) ನಮ್ಮ ದಿನದ ಜನರ ವಿಷಯದಲ್ಲಾದರೊ, ಯೆಹೋವನ ಜೀವದಾಯಕ ನೀರು ಯಾರಿಗೆ ನೀಡಲಾಗುತ್ತದೊ ಅವರೆಲ್ಲರೂ ಅದನ್ನು ಸ್ವೀಕರಿಸುವುದಿಲ್ಲ. (ಯೆಶಾಯ 6:10) ಅರ್ಮಗೆದೋನಿನಲ್ಲಿ, ಆತ್ಮಿಕವಾಗಿ ನಿರ್ಜೀವವಾದ ಮತ್ತು ಅಸ್ವಸ್ಥಕರ ಸ್ಥಿತಿಯಲ್ಲಿ ಉಳಿಯಲು ಆರಿಸಿಕೊಳ್ಳುವವರೆಲ್ಲರೂ ಉಪ್ಪಿನ ಗಣಿಗಳಾಗುವರು ಅಂದರೆ, ಶಾಶ್ವತವಾಗಿ ನಾಶಗೊಳಿಸಲ್ಪಡುವರು. (ಪ್ರಕಟನೆ 19:11-21) ಆದರೆ, ಈ ನೀರುಗಳನ್ನು ನಂಬಿಗಸ್ತಿಕೆಯಿಂದ ಕುಡಿಯುತ್ತಿರುವವರು, ಬದುಕುಳಿದು ಈ ಪ್ರವಾದನೆಯ ಕೊನೆಯ ನೆರವೇರಿಕೆಯನ್ನು ನೋಡುವ ನಿರೀಕ್ಷೆಯನ್ನು ಇಟ್ಟುಕೊಳ್ಳಸಾಧ್ಯವಿದೆ.
ನದಿಯು ಪ್ರಮೋದವನದಲ್ಲಿ ಹರಿಯುತ್ತದೆ
16. ಯೆಹೆಜ್ಕೇಲನ ಆಲಯ ದರ್ಶನವು ಯಾವಾಗ ಮತ್ತು ಹೇಗೆ ತನ್ನ ಕೊನೆಯ ನೆರವೇರಿಕೆಯನ್ನು ಪಡೆದುಕೊಳ್ಳುವುದು?
16 ಇತರ ಪುನಸ್ಸ್ಥಾಪನಾ ಪ್ರವಾದನೆಗಳಂತೆ, ಯೆಹೆಜ್ಕೇಲನ ಆಲಯ ದರ್ಶನದ ಕೊನೆಯ ನೆರವೇರಿಕೆಯು ಸಹಸ್ರವರ್ಷದಾಳಿಕೆಯ ಸಮಯದಲ್ಲಿ ಆಗುವುದು. ಆಗ ಆ ಯಾಜಕ ವರ್ಗವು ಭೂಮಿಯ ಮೇಲೆ ಇರುವುದಿಲ್ಲ. “ಅವರು ದೇವರಿಗೂ ಕ್ರಿಸ್ತನಿಗೂ ಯಾಜಕರಾಗಿ ಕ್ರಿಸ್ತನೊಂದಿಗೆ [ಸ್ವರ್ಗದಲ್ಲಿ] ಆ ಸಾವಿರ ವರುಷ ಆಳುವರು.” (ಪ್ರಕಟನೆ 20:6) ಈ ಸ್ವರ್ಗೀಯ ಯಾಜಕರು, ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞದ ಪೂರ್ಣ ಪ್ರಯೋಜನಗಳನ್ನು ಒದಗಿಸುವುದರಲ್ಲಿ ಕ್ರಿಸ್ತನೊಂದಿಗೆ ಜೊತೆಗೂಡಿರುವರು. ಹೀಗೆ ನೀತಿವಂತ ಮಾನವಕುಲವು ರಕ್ಷಿಸಲ್ಪಟ್ಟು, ಪರಿಪೂರ್ಣತೆಗೆ ಪುನಸ್ಸ್ಥಾಪಿಸಲ್ಪಡುವುದು!—ಯೋಹಾನ 3:17.
17, 18. (ಎ) ಪ್ರಕಟನೆ 22:1, 2ರಲ್ಲಿ ಜೀವದಾಯಕ ನದಿಯು ಹೇಗೆ ವರ್ಣಿಸಲ್ಪಟ್ಟಿದೆ, ಮತ್ತು ಆ ದರ್ಶನವು ಅನ್ವಯವಾಗುವ ಮುಖ್ಯ ಸಮಯವು ಯಾವಾಗ? (ಬಿ) ಪ್ರಮೋದವನದಲ್ಲಿ, ಜೀವಜಲದ ನದಿಯು ಹೆಚ್ಚು ವಿಸ್ತಾರಗೊಳ್ಳುವುದು ಏಕೆ?
17 ಕಾರ್ಯತಃ, ಯೆಹೆಜ್ಕೇಲನು ನೋಡಿರುವ ಆ ನದಿಯು, ಆಗ ಅತಿ ಪ್ರಭಾವಶಾಲಿಯಾದ ಜೀವಜಲದೊಂದಿಗೆ ಹರಿಯುವುದು. ಪ್ರಕಟನೆ 22:1, 2ರಲ್ಲಿ ದಾಖಲಿಸಲ್ಪಟ್ಟಿರುವ ಪ್ರವಾದನೆಯ ಅನ್ವಯಕ್ಕೆ ಇದು ಮಹತ್ವದ ಸಮಯವಾಗಿದೆ: “ಆ ಮೇಲೆ ಅವನು ಸ್ಫಟಿಕದಂತೆ ಪ್ರಕಾಶಮಾನವಾಗಿದ್ದ ಜೀವಜಲದ ನದಿಯನ್ನು ನನಗೆ ತೋರಿಸಿದನು. ಅದು ದೇವರ ಮತ್ತು ಯಜ್ಞದ ಕುರಿಯಾದಾತನ ಸಿಂಹಾಸನದಿಂದ ಹೊರಟು ಪಟ್ಟಣದ ಬೀದಿಯ ಮಧ್ಯದಲ್ಲಿ ಹರಿಯುತ್ತಿತ್ತು. ಆ ನದಿಯ ಉಭಯ ಪಾರ್ಶ್ವಗಳಲ್ಲಿ ಜೀವವೃಕ್ಷವಿತ್ತು; ಅದು ತಿಂಗಳು ತಿಂಗಳಿಗೆ ಫಲವನ್ನು ಫಲಿಸುತ್ತಾ ಹನ್ನೆರಡು ತರದ ಫಲಗಳನ್ನು ಕೊಡುತ್ತದೆ. ಆ ಮರದ ಎಲೆಗಳು ಜನಾಂಗದವರನ್ನು ವಾಸಿಮಾಡುವದಕ್ಕೆ ಪ್ರಯೋಜನವಾಗಿವೆ.”
18 ಸಹಸ್ರ ವರ್ಷದಾಳಿಕೆಯ ಸಮಯದಲ್ಲಿ, ಶಾರೀರಿಕ, ಮಾನಸಿಕ ಮತ್ತು ಭಾವನಾತ್ಮಕವಾದ ಎಲ್ಲ ಅಸ್ವಸ್ಥತೆಗಳು ಗುಣಪಡಿಸಲ್ಪಡುವವು. ಇದು ಸಾಂಕೇತಿಕ ಮರಗಳ ಮೂಲಕ “ಜನಾಂಗದವರನ್ನು ವಾಸಿಮಾಡುವ”ದನ್ನು ಚೆನ್ನಾಗಿ ಚಿತ್ರಿಸುತ್ತದೆ. ಕ್ರಿಸ್ತನ ಮತ್ತು 1,44,000 ಮಂದಿಯ ಮೂಲಕ ಕೊಡಲ್ಪಡುವ ಒದಗಿಸುವಿಕೆಗಳ ಕಾರಣದಿಂದ, “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು.” (ಯೆಶಾಯ 33:24) ಮತ್ತು ಆಗ ಆ ನದಿಯು, ಅತಿ ಹೆಚ್ಚಾಗಿ ವಿಸ್ತಾರಗೊಳ್ಳುವ ಸಮಯವನ್ನು ಪ್ರವೇಶಿಸುವುದು. ಈ ಶುದ್ಧವಾದ ಜೀವಜಲವನ್ನು ಕುಡಿಯಲಿರುವ ಲಕ್ಷಗಟ್ಟಲೆ, ಪ್ರಾಯಶಃ ಕೋಟಿಗಟ್ಟಲೆ ಪುನರುತ್ಥಿತ ಮಾನವರಿಗೆ ಅನುಕೂಲಮಾಡಿಕೊಳ್ಳಲಿಕ್ಕಾಗಿ, ಅದು ಹೆಚ್ಚು ಅಗಲಗೊಳಿಸಲ್ಪಡುವುದು ಮತ್ತು ಹೆಚ್ಚು ಆಳಗೊಳಿಸಲ್ಪಡುವುದು. ದರ್ಶನದಲ್ಲಿನ ಆ ನದಿಯು ತನ್ನ ನೀರುಗಳು ಹರಿಯುವಲ್ಲೆಲ್ಲ ಜೀವವನ್ನು ತರುತ್ತಾ, ಮೃತ ಸಮುದ್ರವನ್ನು ಗುಣಪಡಿಸಿತು. ಪ್ರಮೋದವನದಲ್ಲಿ ಸ್ತ್ರೀಪುರುಷರು, ತಮಗೆ ಒದಗಿಸಲ್ಪಟ್ಟಿರುವ ಪ್ರಾಯಶ್ಚಿತ್ತದ ಪ್ರಯೋಜನಗಳಲ್ಲಿ ನಂಬಿಕೆಯನ್ನಿಡುವುದಾದರೆ, ಬಾಧ್ಯತೆಯಾಗಿ ಪಡೆದಿರುವ ಆದಾಮಸಂಬಂಧಿತ ಮರಣದಿಂದ ಗುಣಪಡಿಸಲ್ಪಡುತ್ತ, ಪೂರ್ಣವಾದ ಅರ್ಥದಲ್ಲಿ ಜೀವಕ್ಕೆ ಬರುವರು. ಆ ದಿನಗಳಲ್ಲಿ “ಪುಸ್ತಕಗಳು” ತೆರೆಯಲ್ಪಡುವವು ಎಂದು ಪ್ರಕಟನೆ 20:12 ಮುಂತಿಳಿಸುತ್ತದೆ. ಅವು, ತಿಳುವಳಿಕೆಯ ಹೆಚ್ಚಿನ ಬೆಳಕನ್ನು ಕೊಡುವವು. ಮತ್ತು ಇದರಿಂದ ಪುನರುತ್ಥಿತ ವ್ಯಕ್ತಿಗಳು ಪ್ರಯೋಜನಪಡೆಯುವರು. ದುಃಖಕರವಾಗಿ, ಕೆಲವರು ಪ್ರಮೋದವನದಲ್ಲಿಯೂ ಗುಣಹೊಂದಲು ನಿರಾಕರಿಸುವರು. ಈ ದಂಗೆಕೋರರು, ನಿತ್ಯ ನಾಶನದ ‘ಉಪ್ಪಿನ ಗಣಿಗಳು’ ಆಗುತ್ತಾರೆ.—ಪ್ರಕಟನೆ 20:15.
19. (ಎ) ಪ್ರಮೋದವನದಲ್ಲಿ, ದೇಶದ ಹಂಚುವಿಕೆಯು ಹೇಗೆ ನೆರವೇರುವುದು? (ಬಿ) ಪ್ರಮೋದವನದಲ್ಲಿನ ಯಾವ ವೈಶಿಷ್ಟ್ಯವನ್ನು ನಗರವು ಚಿತ್ರಿಸುತ್ತದೆ? (ಸಿ) ನಗರವು ದೇವಾಲಯದಿಂದ ಸ್ವಲ್ಪ ದೂರದಲ್ಲಿ ಇರುವುದರ ಅರ್ಥವೇನು?
19 ಅಲ್ಲದೆ ಆ ಸಮಯದಲ್ಲಿ ಯೆಹೆಜ್ಕೇಲನ ದರ್ಶನದಲ್ಲಿನ ದೇಶದ ಪಾಲುಮಾಡುವಿಕೆಯು ಸಹ ತನ್ನ ಕೊನೆಯ ನೆರೆವೇರಿಕೆಯನ್ನು ಹೊಂದುವುದು. ತನ್ನ ದರ್ಶನದಲ್ಲಿ ಯೆಹೆಜ್ಕೇಲನು, ಆ ದೇಶವು ಸರಿಯಾಗಿ ಹಂಚಲ್ಪಡುವುದನ್ನು ನೋಡಿದನು; ತದ್ರೀತಿಯಲ್ಲಿ ಪ್ರತಿಯೊಬ್ಬ ನಂಬಿಗಸ್ತ ಕ್ರೈಸ್ತನು ತನಗೆ, ಪ್ರಮೋದವನದಲ್ಲಿ ಒಂದು ಸ್ಥಳ, ಒಂದು ಬಾಧ್ಯತೆಯಿರುವುದೆಂದು ನಿಶ್ಚಿತನಾಗಿರಬಲ್ಲನು. ಒಬ್ಬ ವ್ಯಕ್ತಿಗೆ ತನ್ನ ಸ್ವಂತ ಮನೆಯನ್ನು ಹೊಂದಿ, ಪರಾಮರಿಸಲ್ಪಡಬೇಕೆಂಬ ಅಪೇಕ್ಷೆಯು, ಒಂದು ವ್ಯವಸ್ಥಿತ ರೀತಿಯಲ್ಲಿ ಪೂರೈಸಲ್ಪಡುವುದು. (ಯೆಶಾಯ 65:21; 1 ಕೊರಿಂಥ 14:33) ಯೆಹೆಜ್ಕೇಲನು ನೋಡಿರುವ ನಗರವು, ಹೊಸ ಭೂಮಿಗಾಗಿ ಯೆಹೋವನು ಉದ್ದೇಶಿಸಿರುವ ಆಡಳಿತ ಏರ್ಪಾಡನ್ನು ಸೂಕ್ತವಾಗಿ ಚಿತ್ರಿಸುತ್ತದೆ. ಅಭಿಷಿಕ್ತ ಯಾಜಕವರ್ಗವು ಇನ್ನು ಮುಂದೆ ಮಾನವಕುಲದವರ ನಡುವೆ ಶಾರೀರಿಕವಾಗಿ ಉಪಸ್ಥಿತರಿರುವುದಿಲ್ಲ. ನಗರವು ಆಲಯದಿಂದ ಸ್ವಲ್ಪ ದೂರದಲ್ಲಿ, ಅಂದರೆ “ಅಪವಿತ್ರ” ದೇಶದಲ್ಲಿ ಇರುವುದನ್ನು ಚಿತ್ರಿಸುವ ಮೂಲಕ ದರ್ಶನವು ಇದನ್ನು ಸೂಚಿಸುತ್ತದೆ. (ಯೆಹೆಜ್ಕೇಲ 48:15, NW) ಆದರೆ 1,44,000 ಮಂದಿ ಕ್ರಿಸ್ತನೊಂದಿಗೆ ಸ್ವರ್ಗದಲ್ಲಿ ಆಳುವಾಗ, ರಾಜನಿಗೆ ಭೂಮಿಯ ಮೇಲೂ ಪ್ರತಿನಿಧಿಗಳಿರುವರು. ಅವನ ಮಾನವ ಪ್ರಜೆಗಳು, ಪ್ರಭು ವರ್ಗದ ಪ್ರೀತಿಪರ ಮಾರ್ಗದರ್ಶನ ಮತ್ತು ನಿರ್ದೇಶನದಿಂದ ತುಂಬ ಪ್ರಯೋಜನಹೊಂದುವರು. ಆದರೆ ಸರಕಾರದ ಮುಖ್ಯ ಸ್ಥಾನವು, ಭೂಮಿಯ ಮೇಲಲ್ಲ, ಸ್ವರ್ಗದಲ್ಲಿರುವುದು. ಪ್ರಭು ವರ್ಗವನ್ನು ಸೇರಿಸಿ, ಭೂಮಿಯಲ್ಲಿರುವವರೆಲ್ಲರೂ ಮೆಸ್ಸೀಯ ಸಂಬಂಧಿತ ರಾಜ್ಯದ ಅಧೀನದಲ್ಲಿರುವರು.—ದಾನಿಯೇಲ 2:44; 7:14, 18, 22.
20, 21. (ಎ) ನಗರದ ಹೆಸರು ಸೂಕ್ತವಾಗಿದೆ ಏಕೆ? (ಬಿ) ಯೆಹೆಜ್ಕೇಲನ ದರ್ಶನದ ಕುರಿತಾದ ನಮ್ಮ ತಿಳುವಳಿಕೆಯು, ನಾವು ಸ್ವತಃ ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳುವಂತೆ ಮಾಡಬೇಕು?
20 ಯೆಹೆಜ್ಕೇಲನ ಪ್ರವಾದನೆಯ ಕೊನೆಯ ಮಾತುಗಳನ್ನು ಗಮನಿಸಿರಿ: “ಅದನ್ನು ನಿರ್ಮಿಸಿದಂದಿನಿಂದ ಆ ಪಟ್ಟಣಕ್ಕೆ ಯೆಹೋವನ ನೆಲೆ ಎಂಬ ಹೆಸರಾಗುವದು.” (ಯೆಹೆಜ್ಕೇಲ 48:35) ಈ ಪಟ್ಟಣವು ಮನುಷ್ಯರಿಗೆ ಅಧಿಕಾರ ಅಥವಾ ಪ್ರಭಾವವನ್ನು ಕೊಡಲಿಕ್ಕಾಗಿ ಇರುವುದಿಲ್ಲ; ಅಥವಾ ಯಾವುದೇ ಮಾನವನ ಇಷ್ಟವನ್ನು ಜಾರಿಗೊಳಿಸಲಿಕ್ಕಾಗಿ ಇರುವುದಿಲ್ಲ. ಅದು ಯೆಹೋವನ ನಗರವಾಗಿದ್ದು, ಅದು ಆತನ ಮನಸ್ಸನ್ನು ಮತ್ತು ಪ್ರೀತಿಪರ, ವಿವೇಚನಾಯುಕ್ತ ಮಾರ್ಗಗಳನ್ನು ಪ್ರತಿಬಿಂಬಿಸುವುದು. (ಯಾಕೋಬ 3:17) ಯೆಹೋವನು ರೂಪಿಸಿದ ಮಾನವಕುಲದ “ನೂತನ ಭೂಮಂಡಲ” ಸಮಾಜವನ್ನು ಅಪಾರವಾಗಿ ಶಾಶ್ವತ ಭವಿಷ್ಯತ್ತಿನೊಂದಿಗೆ ಆಶೀರ್ವದಿಸುವನೆಂಬ ಹೃದಯೋಲ್ಲಾಸದ ಆಶ್ವಾಸನೆಯನ್ನು ಇದು ನಮಗೆ ಕೊಡುತ್ತದೆ.—2 ಪೇತ್ರ 3:13.
21 ನಮ್ಮ ಮುಂದಿರುವ ಪ್ರತೀಕ್ಷೆಯಿಂದ ನಾವು ರೋಮಾಂಚಿತರಾಗುವುದಿಲ್ಲವೊ? ಆದುದರಿಂದ, ‘ಯೆಹೆಜ್ಕೇಲನ ದರ್ಶನದಲ್ಲಿ ಪ್ರಕಟಿಸಲ್ಪಟ್ಟಿರುವ ಅದ್ಭುತಕರ ಆಶೀರ್ವಾದಗಳಿಗೆ ನಾನು ಹೇಗೆ ಪ್ರತಿಕ್ರಿಯಿಸುತ್ತೇನೆ? ಅಭಿಷಿಕ್ತ ಉಳಿಕೆಯವರು ಮತ್ತು ಪ್ರಭುವರ್ಗದ ಭಾವೀ ಸದಸ್ಯರನ್ನು ಒಳಗೂಡಿಸಿ, ಪ್ರೀತಿಪರ ಮೇಲ್ವಿಚಾರಕರಿಂದ ಮಾಡಲ್ಪಡುವ ಕೆಲಸವನ್ನು ನಾನು ನಂಬಿಗಸ್ತಿಕೆಯಿಂದ ಬೆಂಬಲಿಸುತ್ತೇನೋ? ಶುದ್ಧಾರಾಧನೆಯನ್ನು ನಾನು ನನ್ನ ಜೀವಿತದ ಕೇಂದ್ರಸ್ಥಾನವಾಗಿ ಮಾಡಿದ್ದೇನೊ? ಇಂದು ಇಷ್ಟು ಸಮೃದ್ಧವಾಗಿ ಹರಿಯುತ್ತಿರುವ ಜೀವಜಲದ ಪೂರ್ಣ ಪ್ರಯೋಜನವನ್ನು ನಾನು ಪಡೆದುಕೊಳ್ಳುತ್ತಿದ್ದೇನೊ?’ ಎಂದು ನಮ್ಮಲ್ಲಿ ಪ್ರತಿಯೊಬ್ಬರು ಕೇಳಿಕೊಳ್ಳುವುದು ಒಳ್ಳೆಯದು. ನಮ್ಮಲ್ಲಿ ಪ್ರತಿಯೊಬ್ಬರೂ ಎಲ್ಲ ನಿತ್ಯತೆಗೂ ಹಾಗೆ ಮಾಡುತ್ತಾ ಇದ್ದು, ಯೆಹೋವನ ಒದಗಿಸುವಿಕೆಗಳಲ್ಲಿ ಹರ್ಷಿಸುತ್ತಾ ಇರೋಣ!
[ಅಧ್ಯಯನ ಪ್ರಶ್ನೆಗಳು]
a ಈ ಹಳ್ಳವು, ಕಿದ್ರೋನ್ ಕಣಿವೆಗೆ ಸೂಚಿಸಬಹುದು. ಅದು ಯೆರೂಸಲೇಮಿನ ಆಗ್ನೇಯ ದಿಕ್ಕಿನತ್ತ ಚಾಚಿಕೊಂಡು, ಮೃತ ಸಮುದ್ರದಲ್ಲಿ ಅಂತ್ಯಗೊಳ್ಳುತ್ತದೆ. ಅದರ ಕೆಳಗಿನ ಪಥವು ನೀರಿಲ್ಲದ್ದಾಗಿದೆ ಮತ್ತು ವರ್ಷವಿಡೀ ಒಣಗಿರುತ್ತದೆ.
b ದ ವಾಚ್ಟವರ್ ಪತ್ರಿಕೆಯ 1881ರ, ಮೇ 1 ಹಾಗೂ 1981ರ ಜೂನ್ 1ನೆಯ ಸಂಚಿಕೆಯನ್ನು ನೋಡಿರಿ.
ನೀವು ಹೇಗೆ ಉತ್ತರಿಸುವಿರಿ?
◻ ದೇವಾಲಯದಿಂದ ಹರಿಯುವ ನೀರು ಏನನ್ನು ಚಿತ್ರಿಸುತ್ತದೆ?
◻ ಸಾಂಕೇತಿಕ ನದಿಯ ಮೂಲಕ ಯೆಹೋವನು ಯಾವ ಗುಣಪಡಿಸುವಿಕೆಯನ್ನು ನಡಿಸಿದ್ದಾನೆ, ಮತ್ತು ನದಿಯು ಏಕೆ ದೊಡ್ಡದಾಗುತ್ತಾ ಹೋಗಿದೆ?
◻ ನದಿಯ ದಡದಲ್ಲಿರುವ ವೃಕ್ಷಗಳು ಏನನ್ನು ಚಿತ್ರಿಸುತ್ತವೆ?
◻ ಸಹಸ್ರ ವರ್ಷದಾಳಿಕೆಯ ಸಮಯದಲ್ಲಿ ನಗರವು ಏನನ್ನು ಚಿತ್ರಿಸುವುದು, ಮತ್ತು ಆ ನಗರದ ಹೆಸರು ಏಕೆ ಸೂಕ್ತವಾಗಿದೆ?
[ಪುಟ 23 ರಲ್ಲಿರುವ ಚಿತ್ರ]
ಜೀವಜಲದ ನದಿಯು, ರಕ್ಷಣೆಗಾಗಿರುವ ದೇವರ ಒದಗಿಸುವಿಕೆಯನ್ನು ಪ್ರತಿನಿಧಿಸುತ್ತದೆ