ಕಮ್ಯೂನಿಸ್ಟ್ ನಿಷೇಧದ ಕೆಳಗೆ ಸುಮಾರು 40 ವರ್ಷಗಳು
ಮಿಕಾಯಿಲ್ ವಸೀಲಾವಿಚ್ ಸವಿಟ್ಸ್ಕೀ ಅವರು ಹೇಳಿದಂತೆ
ಏಪ್ರಿಲ್ 1, 1956ರ ದ ವಾಚ್ಟವರ್ ಪತ್ರಿಕೆಯು, 1951ರ ಏಪ್ರಿಲ್ 1, 7, ಮತ್ತು 8ರಂದು ನಡೆದ ಯೆಹೋವನ ಸಾಕ್ಷಿಗಳ “ಒಂದು ಮಹಾ ಶುದ್ಧೀಕರಣವನ್ನು (ನಿರ್ಮೂಲನ ಕಾರ್ಯವನ್ನು)” ವರದಿಸಿತು. “ರಷ್ಯದಲ್ಲಿರುವ ಯೆಹೋವನ ಸಾಕ್ಷಿಗಳು ಈ ತಾರೀಖುಗಳನ್ನು ಎಂದಿಗೂ ಮರೆಯಲಾರರು. ಈ ಮೂರು ದಿನಗಳಂದು, ಪಶ್ಚಿಮ ಯುಕ್ರೇನ್, ವೈಟ್ ರಷ್ಯ [ಬೆಲಾರಸ್], ಬೆಸ್ಸಾರೇಬಿಯ, ಮಾಲ್ಡೇವಿಯ, ಲ್ಯಾಟ್ವೀಯ, ಲಿತುಏನಿಯ, ಮತ್ತು ಎಸ್ಟೋನಿಯಲ್ಲಿದ್ದ ಎಲ್ಲ ಯೆಹೋವನ ಸಾಕ್ಷಿಗಳು, ಅಂದರೆ ಸುಮಾರು ಏಳು ಸಾವಿರಕ್ಕಿಂತಲೂ ಹೆಚ್ಚಿನ ಸ್ತ್ರೀಪುರುಷರು . . . ಬಂಡಿಗಳಲ್ಲಿ ತುಂಬಿಸಲ್ಪಟ್ಟು ರೈಲುನಿಲ್ದಾಣಗಳಿಗೆ ಸಾಗಿಸಲ್ಪಟ್ಟರು. ಅಲ್ಲಿ ಅವರನ್ನು ಎತ್ತಿನ ಗಾಡಿಗಳಲ್ಲಿ ದೂರದ ಪ್ರದೇಶಗಳಿಗೆ ಕಳುಹಿಸಲಾಯಿತು” ಎಂದು ವಾಚ್ಟವರ್ ಪತ್ರಿಕೆಯು ವಿವರಿಸಿತು.
ಏಪ್ರಿಲ್ 8, 1951ರಂದು, ನನ್ನ ಹೆಂಡತಿ, ಎಂಟು ತಿಂಗಳು ಪ್ರಾಯದ ನನ್ನ ಮಗ, ನನ್ನ ಹೆತ್ತವರು, ನನ್ನ ತಮ್ಮ ಮತ್ತು ಯುಕ್ರೇನಿನ ಟರ್ನೊಪಲ್ನ ಒಳಗೂ ಹೊರಗೂ ಇದ್ದ ಇನ್ನೂ ಅನೇಕ ಸಾಕ್ಷಿಗಳನ್ನು ಅವರ ಮನೆಗಳಿಂದ ಹೊಡೆದೋಡಿಸಲಾಯಿತು. ಎತ್ತಿನ ಗಾಡಿಗಳಲ್ಲಿ ಅವರನ್ನು ತುಂಬಿಸಿದ ಬಳಿಕ, ಅವರು ಸುಮಾರು ಎರಡು ವಾರಗಳ ಕಾಲ ಸಂಚರಿಸಿದರು. ಕೊನೆಗೆ ಅವರನ್ನು ಬೈಕಲ್ ಸರೋವರದ ಪಶ್ಚಿಮ ಭಾಗದಲ್ಲಿರುವ ಸೈಬೀರಿಯನ್ ಟೈಗಾ (ಉತ್ತರ ಧ್ರುವದ ಅರಣ್ಯ)ದಲ್ಲಿ ಇಳಿಸಲಾಯಿತು.
ಈ ನಿರ್ಮೂಲನ ಕಾರ್ಯದಲ್ಲಿ ನಾನೇಕೆ ಇರಲಿಲ್ಲ? ಆ ಸಮಯದಲ್ಲಿ ನಾನು ಎಲ್ಲಿದ್ದೆ ಮತ್ತು ತರುವಾಯ ನಮಗೆಲ್ಲರಿಗೂ ಏನು ಸಂಭವಿಸಿತು ಎಂಬುದನ್ನು ತಿಳಿಸುವ ಮೊದಲು, ನಾನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾದದ್ದು ಹೇಗೆಂದು ಹೇಳುತ್ತೇನೆ.
ಬೈಬಲ್ ಸತ್ಯವು ನಮಗೆ ಸಿಕ್ಕಿದ್ದು
ಸೆಪ್ಟೆಂಬರ್ 1947ರಲ್ಲಿ, ನಾನು ಕೇವಲ 15 ವರ್ಷದವನಾಗಿದ್ದಾಗ, ಟರ್ನೊಪಲ್ನಿಂದ ಸುಮಾರು 50 ಕಿಲೊಮೀಟರುಗಳಷ್ಟು ದೂರದಲ್ಲಿದ್ದ ಸ್ಲಾವ್ಯಾಟಿನ್ ಎಂಬ ಚಿಕ್ಕ ಹಳ್ಳಿಯಲ್ಲಿದ್ದ ನಮ್ಮ ಮನೆಗೆ ಇಬ್ಬರು ಯೆಹೋವನ ಸಾಕ್ಷಿಗಳು ಭೇಟಿಯಿತ್ತರು. ಈ ಯುವತಿಯರು ಹೇಳುತ್ತಿದ್ದ ವಿಷಯವನ್ನು ನಾನೂ ನನ್ನ ತಾಯಿಯೂ ಆಲಿಸುತ್ತಾ ಇದ್ದಂತೆ, ಇದು ಕೇವಲ ಮತ್ತೊಂದು ಧರ್ಮವಲ್ಲವೆಂದು ನನಗನಿಸಿತು. ಆ ಇಬ್ಬರಲ್ಲಿ ಒಬ್ಬಾಕೆಯ ಹೆಸರು ಮರೀಯ ಎಂದಾಗಿತ್ತು. ಅವರು ತಮ್ಮ ನಂಬಿಕೆಯನ್ನು ವಿವರಿಸಿ, ಬೈಬಲಿನ ಕುರಿತಾದ ನಮ್ಮ ಪ್ರಶ್ನೆಗಳಿಗೆ ಸ್ಪಷ್ಟವಾದ ಉತ್ತರವನ್ನು ನೀಡಿದರು.
ಬೈಬಲು ದೇವರ ವಾಕ್ಯವೆಂದು ನಾನು ನಂಬಿದ್ದರೂ, ಚರ್ಚಿನಿಂದಾಗಿ ಬಹಳಷ್ಟು ನಿರಾಶೆಗೊಂಡಿದ್ದೆ. ಚರ್ಚಿನ ಕುರಿತು ನನ್ನ ಅಜ್ಜ ಹೀಗೆ ಹೇಳುತ್ತಿದ್ದರು: “ಪಾದ್ರಿಗಳು ನರಕಾಗ್ನಿಯಲ್ಲಿನ ಚಿತ್ರಹಿಂಸೆಯ ಕುರಿತಾದ ಪ್ರಸಂಗದಿಂದ ಜನರನ್ನು ಹೆದರಿಸುತ್ತಾರಾದರೂ, ಸ್ವತಃ ಅವರು ಯಾವುದರ ಬಗ್ಗೆಯೂ ಹೆದರುವುದಿಲ್ಲ. ಅವರು ಕೇವಲ ಬಡವರನ್ನು ವಂಚಿಸಿ, ಸುಲಿಗೆ ಮಾಡುತ್ತಾರೆ.” ಎರಡನೆಯ ಜಾಗತಿಕ ಯುದ್ಧದ ಆರಂಭದಲ್ಲಿ, ನಮ್ಮ ಹಳ್ಳಿಯ ಪೋಲಿಷ್ ನಿವಾಸಿಗಳ ವಿರುದ್ಧ ನಡೆದ ಹಿಂಸಾಚಾರ ಹಾಗೂ ಲೂಟಿಯ ನೆನಪು ನನಗೆ ಈಗಲೂ ಇದೆ. ಈ ದಾಳಿಗಳು ಗ್ರೀಕ್ ಕ್ಯಾತೊಲಿಕ್ ಪಾದ್ರಿಯಿಂದ ಸಂಯೋಜಿಸಲ್ಪಟ್ಟಿದ್ದವು. ತರುವಾಯ ಕೊಲೆಯಾದ ಅನೇಕರನ್ನು ನಾನು ನೋಡಿದೆ, ಮತ್ತು ಇಂತಹ ಕ್ರೂರಕೃತ್ಯಗಳ ಕಾರಣಗಳನ್ನು ತಿಳಿದುಕೊಳ್ಳಲು ನಾನು ಆಸಕ್ತನಾಗಿದ್ದೆ.
ನಾನು ಬೈಬಲನ್ನು ಸಾಕ್ಷಿಗಳೊಂದಿಗೆ ಅಭ್ಯಾಸಿಸಿದಂತೆ ವಿಷಯಗಳನ್ನು ಅರ್ಥಮಾಡಿಕೊಂಡೆ. ನಾನು ಮೂಲಭೂತ ಬೈಬಲ್ ಸತ್ಯಗಳನ್ನು ಕಲಿತುಕೊಂಡೆ. ಅವುಗಳಲ್ಲಿ ನರಕಾಗ್ನಿ ಇಲ್ಲವೆಂಬ ಮತ್ತು ಯುದ್ಧ ಹಾಗೂ ರಕ್ತಪಾತವನ್ನು ಪ್ರವರ್ಧಿಸಲು ಪಿಶಾಚನಾದ ಸೈತಾನನು ಸುಳ್ಳು ಧರ್ಮವನ್ನು ಉಪಯೋಗಿಸುತ್ತಾನೆಂಬ ವಾಸ್ತವಾಂಶವೂ ಸೇರಿತ್ತು. ನನ್ನ ವೈಯಕ್ತಿಕ ಅಧ್ಯಯನದ ಸಮಯದಲ್ಲಿ ಆಗಾಗ ಅಧ್ಯಯನವನ್ನು ನಿಲ್ಲಿಸಿ, ನಾನು ಕಲಿತುಕೊಳ್ಳುತ್ತಿರುವ ವಿಷಯಗಳಿಗಾಗಿ ಯೆಹೋವನಿಗೆ ಹೃತ್ಪೂರ್ವಕ ಉಪಕಾರವನ್ನು ಸಲ್ಲಿಸುತ್ತಿದ್ದೆ. ಈ ಬೈಬಲ್ ಸತ್ಯಗಳನ್ನು ನಾನು ನನ್ನ ತಮ್ಮನಾದ ಸ್ಟಾಕನೊಂದಿಗೆ ಹಂಚಿಕೊಂಡೆ, ಮತ್ತು ಅವನು ಇವುಗಳನ್ನು ಅಂಗೀಕರಿಸಿದಾಗ ತುಂಬ ಸಂತೋಷಪಟ್ಟೆ.
ನಾನು ಕಲಿತುಕೊಂಡದ್ದನ್ನು ಕಾರ್ಯರೂಪಕ್ಕೆ ಹಾಕುವುದು
ವೈಯಕ್ತಿಕ ಬದಲಾವಣೆಗಳು ಬಹಳಷ್ಟು ಅಗತ್ಯವೆಂದು ಮನಗಂಡ ನಾನು, ಕೂಡಲೇ ಧೂಮಪಾನವನ್ನು ನಿಲ್ಲಿಸಿಬಿಟ್ಟೆ. ಸಂಘಟಿತ ಬೈಬಲ್ ಅಧ್ಯಯನಕ್ಕಾಗಿ ಇತರರೊಂದಿಗೆ ಕ್ರಮವಾಗಿ ಕೂಡಿಬರುವುದರ ಅಗತ್ಯವನ್ನೂ ನಾನು ತಿಳಿದುಕೊಂಡೆ. ಇದನ್ನು ಮಾಡಲು ನಾನು ಕಾಡಿನಲ್ಲಿ ಸುಮಾರು 10 ಕಿಲೊಮೀಟರುಗಳಷ್ಟು ದೂರ ನಡೆದು, ಕೂಟಗಳು ನಡೆಯುತ್ತಿದ್ದ ಒಂದು ಗುಪ್ತವಾದ ಸ್ಥಳಕ್ಕೆ ಬರುತ್ತಿದ್ದೆ. ಕೆಲವೊಮ್ಮೆ ಬೆರಳೆಣಿಕೆಯಷ್ಟು ಸ್ತ್ರೀಯರು ಮಾತ್ರ ಕೂಟಗಳಿಗೆ ಬರಸಾಧ್ಯವಿತ್ತು. ಆ ಸಮಯಗಳಲ್ಲಿ ನನಗೆ ದೀಕ್ಷಾಸ್ನಾನ ಆಗಿರಲಿಲ್ಲವಾದರೂ ಕೂಟಗಳನ್ನು ನಡೆಸುವಂತೆ ನನ್ನನ್ನು ಕೇಳಿಕೊಳ್ಳಲಾಗುತ್ತಿತ್ತು.
ಬೈಬಲ್ ಸಾಹಿತ್ಯವನ್ನು ಹೊಂದಿರುವುದು ಬಹಳ ಅಪಾಯಕರವಾಗಿತ್ತು. ಮತ್ತು ಅವುಗಳೊಂದಿಗೆ ದಸ್ತಗಿರಿ ಮಾಡಲ್ಪಟ್ಟಲ್ಲಿ, 25 ವರ್ಷಗಳ ಸೆರೆಮನೆವಾಸದ ಶಿಕ್ಷೆಯು ವಿಧಿಸಲ್ಪಡಬಹುದಿತ್ತು. ಹಾಗಿದ್ದರೂ, ನನ್ನದೇ ಆದ ಲೈಬ್ರರಿ ಇರಬೇಕೆಂದು ನಾನು ಬಯಸಿದೆ. ನಮ್ಮ ನೆರೆಯವರಲ್ಲಿ ಒಬ್ಬರು ಯೆಹೋವನ ಸಾಕ್ಷಿಗಳೊಂದಿಗೆ ಅಧ್ಯಯನ ಮಾಡಿದ್ದರೂ, ಭಯದ ಕಾರಣ ಅದನ್ನು ನಿಲ್ಲಿಸಿ, ತಮ್ಮಲ್ಲಿದ್ದ ಸಾಹಿತ್ಯವನ್ನು ತೋಟದಲ್ಲಿ ಹೂತಿಟ್ಟಿದ್ದರು. ಆ ವ್ಯಕ್ತಿಯು ತನ್ನೆಲ್ಲ ಪುಸ್ತಕ ಹಾಗೂ ಪತ್ರಿಕೆಗಳನ್ನು ಅಗೆದು ನನಗೆ ಕೊಟ್ಟಾಗ ನಾನು ಯೆಹೋವನಿಗೆ ಬಹಳಷ್ಟು ಆಭಾರಿಯಾಗಿದ್ದೆ. ಅವುಗಳನ್ನು ನನ್ನ ತಂದೆಯ ಜೇನುಗೂಡಿನಲ್ಲಿ ಅಡಗಿಸಿಟ್ಟೆ. ಅಲ್ಲಿ ಹುಡುಕುವ ಸಾಹಸವನ್ನು ಯಾರೂ ಮಾಡುತ್ತಿರಲಿಲ್ಲ.
ಜುಲೈ 1949ರಲ್ಲಿ ನಾನು ಯೆಹೋವನಿಗೆ ನನ್ನ ಜೀವಿತವನ್ನು ಸಮರ್ಪಿಸಿಕೊಂಡು, ಅದರ ಸಂಕೇತವಾಗಿ ದೀಕ್ಷಾಸ್ನಾನ ಪಡೆದುಕೊಂಡೆ. ಅದು ನನ್ನ ಜೀವಿತದ ಅತ್ಯಂತ ಸಂತೋಷಕರವಾದ ದಿನವಾಗಿತ್ತು. ಸತ್ಯ ಕ್ರೈಸ್ತನಾಗಿರುವುದು ಸುಲಭವಲ್ಲವೆಂದು ಮತ್ತು ಮುಂದೆ ಅನೇಕ ಪರೀಕ್ಷೆಗಳು ಕಾದಿವೆಯೆಂದು, ಗುಪ್ತವಾಗಿ ನನಗೆ ದೀಕ್ಷಾಸ್ನಾನವನ್ನು ಮಾಡಿಸಿದ ಸಾಕ್ಷಿಯು ಒತ್ತಿಹೇಳಿದನು. ಅವನ ಮಾತುಗಳು ಎಷ್ಟು ಸತ್ಯವೆಂಬುದನ್ನು ನಾನು ಬೇಗನೆ ತಿಳಿದುಕೊಂಡೆ! ಆದರೂ, ಸ್ನಾತ ಸಾಕ್ಷಿಯೋಪಾದಿ ನನ್ನ ಜೀವನವು ಸಂತೋಷವಾಗಿ ಆರಂಭಗೊಂಡಿತು. ನನ್ನ ದೀಕ್ಷಾಸ್ನಾನವಾಗಿ ಎರಡು ತಿಂಗಳುಗಳ ಬಳಿಕ, ನಾನು ಮರೀಯಳನ್ನು ವಿವಾಹವಾದೆ. ಪ್ರಥಮವಾಗಿ ತಾಯಿಗೆ ಮತ್ತು ನನಗೆ ಸತ್ಯವನ್ನು ಪರಿಚಯಿಸಿದ ಇಬ್ಬರು ಸಾಕ್ಷಿಗಳಲ್ಲಿ ಅವಳು ಒಬ್ಬಳಾಗಿದ್ದಳು.
ನನ್ನ ಮೊದಲ ಪರೀಕ್ಷೆಯು ಹಠಾತ್ತನೆ ಬಂದಿತು
ಏಪ್ರಿಲ್ 16, 1950ರಂದು, ನಾನು ಪ್ಯಾಡ್ಗಿಟ್ಸೀ ಎಂಬ ಚಿಕ್ಕ ಪಟ್ಟಣದಿಂದ ಮನೆಗೆ ಹಿಂದಿರುಗುತ್ತಿದ್ದಾಗ, ಸೈನಿಕರನ್ನು ಎದುರುಗೊಂಡೆ. ನಮ್ಮ ಅಧ್ಯಯನದ ಗುಂಪಿಗೆ ನಾನು ಒಯ್ಯುತ್ತಿದ್ದ ಕೆಲವೊಂದು ಬೈಬಲ್ ಸಾಹಿತ್ಯವು ಅವರ ಕೈಗೆ ಸಿಕ್ಕಿಬಿತ್ತು. ನಾನು ಬಂಧಿಸಲ್ಪಟ್ಟೆ. ನಾನು ಬಂಧನದಲ್ಲಿದ್ದ ಆರಂಭದ ದಿನಗಳಲ್ಲಿ ದೊಣ್ಣೆಯಿಂದ ಹೊಡೆಯಲ್ಪಟ್ಟೆನಲ್ಲದೆ, ತಿನ್ನುವ ಇಲ್ಲವೆ ಮಲಗುವ ಅನುಮತಿ ನನಗಿರಲಿಲ್ಲ. ನನ್ನ ಕೈಗಳನ್ನು ತಲೆಯ ಮೇಲಿಟ್ಟುಕೊಂಡು ಒಂದು ನೂರು ಬಸ್ಕಿಯನ್ನು ಮಾಡುವಂತೆ ಆದೇಶಿಸಲ್ಪಟ್ಟೆ. ಅದನ್ನು ಪೂರ್ಣಗೊಳಿಸುವಷ್ಟು ಶಕ್ತಿ ನನ್ನಲ್ಲಿರಲಿಲ್ಲ. ತರುವಾಯ ಒಂದು ತಣ್ಣನೆಯ ತಳಮನೆಯಲ್ಲಿ 24 ಗಂಟೆಗಳ ಕಾಲ ನನ್ನನ್ನು ಕೂಡಿಹಾಕಲಾಯಿತು.
ಈ ಎಲ್ಲ ದುರುಪಚಾರದ ಉದ್ದೇಶವು, ನನ್ನ ಪ್ರತಿಭಟನಾ ಶಕ್ತಿಯನ್ನು ಕುಗ್ಗಿಸುವುದು ಮತ್ತು ನನ್ನಿಂದ ಮಾಹಿತಿಯನ್ನು ಸಂಗ್ರಹಿಸುವುದೇ ಆಗಿತ್ತು. “ಈ ಸಾಹಿತ್ಯವು ನಿನಗೆ ಎಲ್ಲಿಂದ ಸಿಕ್ಕಿತು, ಮತ್ತು ಯಾರಿಗಾಗಿ ಅದನ್ನು ಒಯ್ಯುತ್ತಿರುವೆ?” ಎಂದು ಅವರು ಕೇಳಿದರು. ನಾನು ಯಾವ ವಿಷಯವನ್ನೂ ಅವರಿಗೆ ಹೇಳಲಿಲ್ಲ. ಯಾವ ನಿಯಮದ ಆಧಾರದ ಮೇಲೆ ನನ್ನ ನ್ಯಾಯವಿಚಾರಣೆ ಆಗಲಿತ್ತೊ, ಆ ನಿಯಮದ ಒಂದು ಭಾಗವನ್ನು ನನ್ನ ಮುಂದೆ ಓದಲಾಯಿತು. ಸೋವಿಯಟ್ ವಿರೋಧಿ ಸಾಹಿತ್ಯವನ್ನು ವಿತರಿಸುವುದು ಮತ್ತು ಇಟ್ಟುಕೊಳ್ಳುವುದು ಮರಣದಂಡನೆಗೆ ಇಲ್ಲವೆ 25 ವರ್ಷಗಳ ಸೆರೆಮನೆವಾಸದ ಶಿಕ್ಷೆಗೆ ಅರ್ಹವಾಗಿದೆ ಎಂದು ಅದು ತಿಳಿಸಿತು.
“ನೀನು ಯಾವ ರೀತಿಯ ದಂಡನೆಯನ್ನು ಇಷ್ಟಪಡುವಿ?” ಎಂದು ಅವರು ಕೇಳಿದರು.
“ಎರಡನ್ನೂ ನಾನು ಇಷ್ಟಪಡುವುದಿಲ್ಲ. ಬದಲಿಗೆ, ನನ್ನ ಭರವಸೆಯು ಯೆಹೋವನಲ್ಲಿದೆ, ಮತ್ತು ಆತನು ಏನನ್ನು ಅನುಮತಿಸುತ್ತಾನೊ ಅದನ್ನು ನಾನು ಆತನ ಸಹಾಯದಿಂದಲೇ ಸ್ವೀಕರಿಸುವೆ” ಎಂದು ಉತ್ತರಿಸಿದೆ.
ಏಳು ದಿನಗಳ ನಂತರ ನನ್ನನ್ನು ಬಿಡುಗಡೆಮಾಡಿದ್ದನ್ನು ನೋಡಿ ನನಗೆ ಬಹಳ ಆಶ್ಚರ್ಯವಾಯಿತು. ಆ ಅನುಭವವು ಯೆಹೋವನ ವಾಗ್ದಾನದ ಸತ್ಯತೆಯನ್ನು ನಾನು ಗಣ್ಯಮಾಡುವಂತೆ ಸಹಾಯ ಮಾಡಿತು: “ನಾನು ನಿನ್ನನ್ನು ಎಂದಿಗೂ ಕೈಬಿಡುವದಿಲ್ಲ, ಎಂದಿಗೂ ತೊರೆಯುವದಿಲ್ಲ.”—ಇಬ್ರಿಯ 13:5.
ನಾನು ಮನೆಗೆ ಹಿಂದಿರುಗಿದಾಗ, ತುಂಬ ಅಸ್ವಸ್ಥನಾಗಿದ್ದೆ. ತಂದೆಯವರು ವೈದ್ಯನಲ್ಲಿಗೆ ನನ್ನನ್ನು ಕರೆದುಕೊಂಡು ಹೋದ ಕಾರಣ, ನಾನು ಬೇಗನೆ ಚೇತರಿಸಿಕೊಂಡೆ. ಕುಟುಂಬದಲ್ಲಿದ್ದವರ ಧಾರ್ಮಿಕ ನಂಬಿಕೆಗಳಲ್ಲಿ ತಂದೆಯವರಿಗೆ ವಿಶ್ವಾಸವಿರದಿದ್ದರೂ, ಆರಾಧನೆಯ ವಿಷಯದಲ್ಲಿ ಅವರು ನಮ್ಮನ್ನು ಸಮರ್ಥಿಸಿದರು.
ಸೆರೆಮನೆವಾಸ ಮತ್ತು ದೇಶಭ್ರಷ್ಟತೆ
ಕೆಲವು ತಿಂಗಳುಗಳ ನಂತರ, ನಾನು ಸೋವಿಯಟ್ ಸೇನೆಯಲ್ಲಿ ಒತ್ತಾಯದಿಂದ ಸೇರಿಸಿಕೊಳ್ಳಲ್ಪಟ್ಟೆ. ಸೇನೆಗೆ ಸೇರಲು ನನ್ನ ಮನಸ್ಸಾಕ್ಷಿಯು ಒಪ್ಪುವುದಿಲ್ಲವೆಂಬ ನನ್ನ ನಿರ್ಧಾರವನ್ನು ನಾನು ಅವರಿಗೆ ವಿವರಿಸಿದೆ. (ಯೆಶಾಯ 2:4) ಆದರೆ, ಫೆಬ್ರವರಿ 1951ರಲ್ಲಿ, ನನಗೆ ನಾಲ್ಕು ವರ್ಷಗಳ ಸೆರೆವಾಸದ ಶಿಕ್ಷೆಯು ವಿಧಿಸಲ್ಪಟ್ಟು, ಟರ್ನೊಪಲ್ನಲ್ಲಿರುವ ಸೆರೆಮನೆಗೆ ಕಳುಹಿಸಲಾಯಿತು. ತದನಂತರ, 120 ಕಿಲೊಮೀಟರುಗಳಷ್ಟು ದೂರದಲ್ಲಿದ್ದ ಲವೀಫ್ ಎಂಬ ದೊಡ್ಡ ನಗರದಲ್ಲಿರುವ ಸೆರೆಮನೆಗೆ ನನ್ನನ್ನು ಸ್ಥಳಾಂತರಿಸಲಾಯಿತು. ಅಲ್ಲಿದ್ದಾಗ, ಅನೇಕ ಸಾಕ್ಷಿಗಳನ್ನು ಸೈಬೀರಿಯಕ್ಕೆ ಗಡೀಪಾರು ಮಾಡಲಾಗಿದೆ ಎಂಬ ವಿಷಯವು ನನಗೆ ತಿಳಿದುಬಂತು.
ಇಸವಿ 1951ರ ಬೇಸಗೆ ಕಾಲದಲ್ಲಿ, ನಮ್ಮಲ್ಲಿ ಒಂದಿಷ್ಟು ಜನರನ್ನು ಸೈಬೀರಿಯದ ಆಚೆಗೆ, ಅಂದರೆ ಪೂರ್ವದೇಶಕ್ಕೆ ಕಳುಹಿಸಲಾಯಿತು. ನಾವು 11,000 ಕಿಲೊಮೀಟರುಗಳಷ್ಟು ದೂರ, 11 ಸಮಯ ವಲಯ (ಟೈಮ್ ಸೋನ್)ಗಳನ್ನು ದಾಟುತ್ತಾ, ಒಂದು ತಿಂಗಳಿನ ವರೆಗೆ ಸಂಚರಿಸಿದೆವು! ಒಮ್ಮೆ ಮಾತ್ರ, ರೈಲುಗಾಡಿಯಲ್ಲಿ ಎರಡು ವಾರಗಳಿಗಿಂತಲೂ ಹೆಚ್ಚಿನ ಸಮಯದ ವರೆಗೆ ಪ್ರಯಾಣಿಸಿದ ಬಳಿಕ, ಸ್ನಾನಮಾಡಲು ಸಾಧ್ಯವಾಗುವಂತೆ ಒಂದು ಸ್ಥಳದಲ್ಲಿ ನಾವು ಪ್ರಯಾಣವನ್ನು ನಿಲ್ಲಿಸಿದೆವು. ಅದು ಸೈಬೀರಿಯದ ನೂವೊಸಬರ್ಸ್ಸ್ ಎಂಬ ಊರಿನಲ್ಲಿದ್ದ ಸಾರ್ವಜನಿಕ ಸ್ನಾನಗೃಹವಾಗಿತ್ತು.
ಅಲ್ಲಿ, ಸೆರೆವಾಸಿಗಳ ಒಂದು ದೊಡ್ಡ ಸಮೂಹದ ಮಧ್ಯೆ, “ಇಲ್ಲಿ ಯೆಹೋನಾದಾಬ ಕುಟುಂಬಕ್ಕೆ ಸೇರಿದವರು ಯಾರು?” ಎಂಬ ಪ್ರಶ್ನೆಯನ್ನು ಒಬ್ಬ ವ್ಯಕ್ತಿಯು ಗಟ್ಟಿ ಧ್ವನಿಯಲ್ಲಿ ಕೇಳಿದನು. ಆ ಸಮಯದಲ್ಲಿ “ಯೆಹೋನಾದಾಬ” ಎಂಬ ಪದವು, ಭೂಮಿಯ ಮೇಲೆ ಅನಂತ ಜೀವದ ನಿರೀಕ್ಷೆಯುಳ್ಳವರನ್ನು ಗುರುತಿಸಲಿಕ್ಕಾಗಿ ಉಪಯೋಗಿಸಲ್ಪಡುತ್ತಿತ್ತು. (2 ಅರಸು 10:15-17; ಕೀರ್ತನೆ 37:11, 29) ಕೂಡಲೇ ಹಲವಾರು ಸೆರೆವಾಸಿಗಳು ತಮ್ಮನ್ನು ಸಾಕ್ಷಿಗಳಾಗಿ ಗುರುತಿಸಿಕೊಂಡರು. ಎಂತಹ ಆನಂದದಿಂದ ನಾವು ಒಬ್ಬರನ್ನೊಬ್ಬರು ಅಭಿವಂದಿಸಿದೆವು!
ಸೆರೆಮನೆಯಲ್ಲಿ ಆತ್ಮಿಕ ಚಟುವಟಿಕೆ
ನಾವು ನಮ್ಮ ಗಮ್ಯಸ್ಥಾನವನ್ನು ತಲಪಿದ ನಂತರ, ಒಬ್ಬರನ್ನೊಬ್ಬರು ಗುರುತಿಸಲು ಸಾಧ್ಯವಾಗುವಂತೆ ನೂವೊಸಬರ್ಸ್ಸ್ನಲ್ಲಿರುವಾಗಲೇ ಒಂದು ಸಂಕೇತ ಪದವನ್ನು ಉಪಯೋಗಿಸಲು ಒಪ್ಪಿಕೊಂಡೆವು. ನಮ್ಮೆಲ್ಲರನ್ನೂ ವ್ಲಾಡಿವೊಸ್ಟೊಕ್ ಎಂಬ ಸ್ಥಳದ ಹತ್ತಿರವಿರುವ ಜಪಾನೀ ಸಮುದ್ರದ ತೀರದಲ್ಲಿನ ಶಿಬಿರದಲ್ಲಿ ಹಾಕಲಾಯಿತು. ಅಲ್ಲಿ ನಾವು ಬೈಬಲ್ ಅಧ್ಯಯನಕ್ಕಾಗಿ ಕ್ರಮವಾದ ಕೂಟಗಳನ್ನು ಏರ್ಪಡಿಸಿದೆವು. ದೀರ್ಘ ಸಮಯದ ವರೆಗೆ ಸೆರೆಮನೆವಾಸದ ಶಿಕ್ಷೆ ವಿಧಿಸಲಾಗಿದ್ದ ಪ್ರೌಢ ಹಾಗೂ ವೃದ್ಧ ಸಹೋದರರೊಂದಿಗೆ ಇರುವುದು ನನ್ನನ್ನು ಆತ್ಮಿಕವಾಗಿ ಬಲಪಡಿಸಿತು. ಅವರು ಕಾವಲಿನಬುರುಜು ಪತ್ರಿಕೆಗಳಿಂದ ತಾವು ಜ್ಞಾಪಿಸಿಕೊಂಡ ಬೈಬಲ್ ವಚನಗಳು ಹಾಗೂ ಅದಕ್ಕೆ ಸಂಬಂಧಿಸಿದ ವಿಚಾರಗಳನ್ನು ಉಪಯೋಗಿಸುತ್ತಾ, ಸರದಿಯಾಗಿ ಕೂಟಗಳನ್ನು ನಡೆಸಿದರು.
ಪ್ರಶ್ನೆಗಳು ಕೇಳಲ್ಪಟ್ಟವು, ಮತ್ತು ಸಹೋದರರು ಉತ್ತರಗಳನ್ನು ನೀಡಿದರು. ನಮ್ಮಲ್ಲಿ ಅನೇಕರು ಖಾಲಿಯಾಗಿರುವ ಸಿಮೆಂಟ್ ಚೀಲಗಳಿಂದ ಹಾಳೆಯ ತುಂಡುಗಳನ್ನು ಕತ್ತರಿಸಿ, ಅವುಗಳಲ್ಲಿ ಟಿಪ್ಪಣಿಗಳನ್ನು ಬರೆದುಕೊಂಡೆವು. ಆ ಟಿಪ್ಪಣಿಗಳನ್ನು ನಮ್ಮ ವೈಯಕ್ತಿಕ ಲೈಬ್ರರಿಯಂತೆ ಉಪಯೋಗಿಸಲು ಅವುಗಳನ್ನು ಒಟ್ಟಿಗೆ ಜೋಡಿಸಿಟ್ಟುಕೊಂಡೆವು. ಒಂದೆರಡು ತಿಂಗಳುಗಳ ನಂತರ, ದೀರ್ಘ ಕಾಲಾವಧಿಯ ಶಿಕ್ಷೆಯುಳ್ಳವರು ಸೈಬೀರಿಯದ ಉತ್ತರದಿಕ್ಕಿನಲ್ಲಿರುವ ಶಿಬಿರಗಳಿಗೆ ಕಳುಹಿಸಲ್ಪಟ್ಟರು. ಚಿಕ್ಕವರಾಗಿದ್ದ ನಾವು ಮೂವರು ಸಹೋದರರು, ಜಪಾನಿನಿಂದ 650 ಕಿಲೊಮೀಟರುಗಳಿಗಿಂತಲೂ ಕಡಿಮೆ ದೂರದಲ್ಲಿದ್ದ ನಕೋಟ್ಕಾ ಎಂಬ ನಗರಕ್ಕೆ ಸ್ಥಳಾಂತರಿಸಲ್ಪಟ್ಟೆವು. ಅಲ್ಲಿಯ ಸೆರೆಮನೆಯಲ್ಲಿ ನಾನು ಎರಡು ವರ್ಷಗಳನ್ನು ಕಳೆದೆ.
ಕೆಲವೊಮ್ಮೆ ನಮಗೆ ಕಾವಲಿನಬುರುಜು ಪತ್ರಿಕೆಯ ಒಂದು ಪ್ರತಿಯು ಸಿಗುತ್ತಿತ್ತು. ಅದು ಅನೇಕ ತಿಂಗಳುಗಳ ವರೆಗೆ ನಮಗೆ ಆತ್ಮಿಕ ಆಹಾರವನ್ನು ಒದಗಿಸಿತು. ತರವಾಯ ನಾವು ಪತ್ರಗಳನ್ನೂ ಪಡೆದುಕೊಳ್ಳಲಾರಂಭಿಸಿದೆವು. (ಈಗ ಗಡೀಪಾರು ಮಾಡಲ್ಪಟ್ಟಿದ್ದ) ನನ್ನ ಕುಟುಂಬದವರಿಂದ ನಾನು ಪ್ರಥಮ ಪತ್ರವನ್ನು ಪಡೆದಾಗ, ನಾನು ಅತ್ತುಬಿಟ್ಟೆ. ಅದು ಮುನ್ನುಡಿಯಲ್ಲಿ ಉಲ್ಲೇಖಿಸಲ್ಪಟ್ಟಂತೆ, ಸಾಕ್ಷಿಗಳ ಮನೆಗಳು ಆಕ್ರಮಣಕ್ಕೆ ಒಳಗಾಗಿ, ಅವರಿಗೆ ಅಲ್ಲಿಂದ ಹೊರಡಲು ಕೇವಲ ಎರಡು ತಾಸುಗಳ ಸಮಯಾವಕಾಶ ನೀಡಲಾಯಿತೆಂದು ವಿವರಿಸಿತು.
ಪುನಃ ನನ್ನ ಕುಟುಂಬದೊಂದಿಗೆ
ನನ್ನ ನಾಲ್ಕು ವರ್ಷದ ಶಿಕ್ಷಾವಧಿಯಲ್ಲಿ ಎರಡು ವರ್ಷಗಳನ್ನು ಮುಗಿಸಿದ ಬಳಿಕ ಡಿಸೆಂಬರ್ 1952ರಲ್ಲಿ ನನ್ನನ್ನು ಬಿಡುಗಡೆ ಮಾಡಲಾಯಿತು. ಸೈಬೀರಿಯದ ಟುಲೂನ್ನ ಹತ್ತಿರವಿದ್ದ ಗ್ಯಡ್ಯಲೇ ಎಂಬ ಚಿಕ್ಕ ಹಳ್ಳಿಗೆ ಕಳುಹಿಸಲ್ಪಟ್ಟಿದ್ದ ನನ್ನ ಕುಟುಂಬದೊಂದಿಗೆ ಜೊತೆಗೂಡಿದೆ. ಮತ್ತೆ ಅವರೊಂದಿಗಿರುವುದು ನಿಜವಾಗಿಯೂ ಸ್ವಾರಸ್ಯಕರವಾಗಿತ್ತು. ನನ್ನ ಮಗ ಈವಾನ್ ಮೂರು ವರ್ಷದವನಾಗಿದ್ದ, ಮತ್ತು ನನ್ನ ಮಗಳು ಆ್ಯನ ಎರಡು ವರ್ಷದವಳಾಗಿದ್ದಳು. ಆದರೆ ನನ್ನ ಸ್ವಾತಂತ್ರ್ಯವು ಬಹಳವಾಗಿ ನಿರ್ಬಂಧಿಸಲ್ಪಟ್ಟಿತ್ತು. ನನ್ನ ಪಾಸ್ಪೋರ್ಟನ್ನು ಸ್ಥಳೀಯ ಅಧಿಕಾರಿಗಳು ಕಿತ್ತುಕೊಂಡು, ನನ್ನ ಮೇಲೆ ತೀವ್ರವಾದ ನಿಗಾ ಇಡಲಾಯಿತು. ನಾನು ಮನೆಯಿಂದ ಮೂರು ಕಿಲೊಮೀಟರುಗಳಿಗಿಂತಲೂ ಹೆಚ್ಚು ದೂರ ಪ್ರಯಾಣಿಸುವಂತಿರಲಿಲ್ಲ. ತರುವಾಯ, ಟುಲೂನ್ನಲ್ಲಿದ್ದ ಮಾರುಕಟ್ಟೆಗೆ ನಾನು ಕುದುರೆಯ ಮೇಲೆ ಹೋಗಿಬರಬಹುದಿತ್ತು. ತುಂಬ ಎಚ್ಚರಿಕೆ ವಹಿಸುತ್ತಾ, ಅಲ್ಲಿದ್ದ ಸಾಕ್ಷಿಗಳನ್ನು ನಾನು ಭೇಟಿಯಾಗುತ್ತಿದ್ದೆ.
ಅಷ್ಟರೊಳಗೆ ನಮಗೆ ಆ್ಯನ ಮತ್ತು ನಾಡ್ಯಾ ಎಂಬ ಇಬ್ಬರು ಹೆಣ್ಣುಮಕ್ಕಳು ಮತ್ತು ಈವಾನ್ ಹಾಗೂ ಕೊಲ್ಯಾ ಎಂಬ ಇಬ್ಬರು ಗಂಡುಮಕ್ಕಳಿದ್ದರು. 1958ರಲ್ಲಿ ವಲೊಡ್ಯಾ ಎಂಬ ಮಗನ ಜನನವಾಯಿತು. 1961ರಲ್ಲಿ ಗಾಲ್ಯಾ ಎಂಬ ಮಗಳ ಜನನವಾಯಿತು.
ಕೆಜಿಬಿ (ಮಾಜಿ ಭದ್ರತಾ ನಿಯೋಗ)ಯವರು ಅನೇಕ ವೇಳೆ ನನ್ನನ್ನು ಬಂಧಿಸಿ, ತನಿಖೆ ನಡೆಸಿದರು. ಅವರ ಉದ್ದೇಶವು ನನ್ನಿಂದ ಸಭೆಯ ಕುರಿತಾದ ಮಾಹಿತಿಯನ್ನು ಪಡೆದುಕೊಳ್ಳುವುದು ಮಾತ್ರವಲ್ಲ, ನಾನು ಅವರೊಂದಿಗೆ ಸಹಕರಿಸುತ್ತಿದ್ದೇನೆ ಎಂಬ ಸಂಶಯವನ್ನೂ ಹುಟ್ಟಿಸುವುದಾಗಿತ್ತು. ಆದಕಾರಣ ಅವರು ನನ್ನನ್ನು ಒಂದು ಒಳ್ಳೆಯ ಹೋಟೆಲಿಗೆ ಕರೆದುಕೊಂಡು ಹೋಗಿ, ನಾನು ನಗುತ್ತಿರುವಂತೆ ಮತ್ತು ಅವರೊಂದಿಗೆ ಮಜಾಮಾಡುತ್ತಿರುವಂತೆ ತೋರುವ ಭಾವಚಿತ್ರಗಳನ್ನು ತೆಗೆಯಲು ಪ್ರಯತ್ನಿಸಿದರು. ಅವರ ಉದ್ದೇಶವನ್ನು ಅರಿತವನಾದ ನಾನು, ಕಷ್ಟದಿಂದ ಸದಾ ಮುಖವನ್ನು ಸಿಂಡರಿಸಿಕೊಂಡಿರುತ್ತಿದ್ದೆ. ನಾನು ಬಂಧಿಸಲ್ಪಟ್ಟಾಗಲೆಲ್ಲಾ, ಸಹೋದರರಿಗೆ ಸಂಭವಿಸಿದ ಎಲ್ಲವನ್ನೂ ಕೂಲಂಕುಷವಾಗಿ ಹೇಳುತ್ತಿದ್ದೆ. ಹೀಗೆ, ಅವರೆಂದಿಗೂ ನನ್ನ ನಿಷ್ಠೆಯನ್ನು ಸಂದೇಹಿಸಲಿಲ್ಲ.
ಶಿಬಿರಗಳೊಂದಿಗೆ ಸಂಪರ್ಕ
ವರ್ಷಗಳು ಉರುಳಿದಂತೆ, ನೂರಾರು ಸಾಕ್ಷಿಗಳು ಸೆರೆಯ ಶಿಬಿರಗಳಲ್ಲಿ ಹಾಕಲ್ಪಟ್ಟರು. ಆ ಸಮಯದಲ್ಲಿ, ಸೆರೆಯಲ್ಲಿದ್ದ ಸಹೋದರರಿಗೆ ಸಾಹಿತ್ಯವನ್ನು ಸರಬರಾಜು ಮಾಡುತ್ತಾ ಅವರೊಂದಿಗೆ ಕ್ರಮವಾದ ಸಂಪರ್ಕವನ್ನು ಇಟ್ಟುಕೊಂಡೆವು. ಇದನ್ನು ಹೇಗೆ ಮಾಡಲಾಯಿತು? ಸಹೋದರ ಸಹೋದರಿಯರು ಒಂದು ಶಿಬಿರದಿಂದ ಬಿಡುಗಡೆಗೊಳಿಸಲ್ಪಟ್ಟಾಗ, ಬಿಗಿಯಾದ ಕಾವಲಿನ ಎದುರಿನಲ್ಲೂ ಸಾಹಿತ್ಯವು ರಹಸ್ಯವಾಗಿ ಸೆರೆಮನೆಯ ಒಳಗಡೆ ತರಲ್ಪಡಬಹುದಾದ ವಿಧಾನಗಳ ಕುರಿತು ನಾವು ಅವರಿಂದ ಕಲಿತುಕೊಂಡೆವು. ಸುಮಾರು ಹತ್ತು ವರ್ಷಗಳ ಕಾಲ, ನಾವು ಪೊಲೆಂಡ್ ಮತ್ತು ಇತರ ದೇಶಗಳಿಂದ ಪಡೆದುಕೊಂಡಂತಹ ಪತ್ರಿಕೆ ಹಾಗೂ ಪುಸ್ತಕಗಳನ್ನು, ಈ ಶಿಬಿರಗಳಲ್ಲಿದ್ದ ನಮ್ಮ ಸಹೋದರರಿಗೆ ಸರಬರಾಯಿ ಮಾಡಶಕ್ತರಾಗಿದ್ದೆವು.
ನಮ್ಮ ಕ್ರೈಸ್ತ ಸಹೋದರಿಯರಲ್ಲಿ ಅನೇಕರು, ಅನೇಕ ತಾಸುಗಳ ವರೆಗೆ ಸಾಹಿತ್ಯವನ್ನು ಎಷ್ಟೊಂದು ಅಲ್ಪ ಗಾತ್ರದ ಬರವಣಿಗೆಯಲ್ಲಿ ನಕಲುಮಾಡಿದರೆಂದರೆ, ಒಂದು ಇಡೀ ಪತ್ರಿಕೆಯನ್ನು ಬೆಂಕಿಕಡ್ಡಿಯ ಪೆಟ್ಟಿಗೆಯಷ್ಟು ಚಿಕ್ಕದಾದ ಡಬ್ಬಿಯೊಳಗೆ ಬಚ್ಚಿಡಬಹುದಿತ್ತು! 1991ರಲ್ಲಿ, ನಾವು ನಿಷೇಧದ ಕೆಳಗೆ ಇರದಿದ್ದಾಗ ಮತ್ತು ಸುಂದರವಾದ ವರ್ಣರಂಜಿತ ಪತ್ರಿಕೆಗಳನ್ನು ಪಡೆದುಕೊಳ್ಳುತ್ತಿದ್ದಾಗ, ನಮ್ಮ ಸಹೋದರಿಯರಲ್ಲಿ ಒಬ್ಬರು ಹೇಳಿದ್ದು: “ನಮ್ಮನ್ನು ಈಗ ಯಾರೂ ನೆನಸಿಕೊಳ್ಳಲಾರರು.” ಅವರ ಅಭಿಪ್ರಾಯವು ತಪ್ಪಾಗಿತ್ತು. ಮನುಷ್ಯರು ಮರೆತುಬಿಡಬಹುದಾದರೂ, ಇಂತಹ ನಿಷ್ಠಾವಂತರ ಕೆಲಸವನ್ನು ಯೆಹೋವನು ಎಂದೆಂದಿಗೂ ಮರೆಯುವುದಿಲ್ಲ!—ಇಬ್ರಿಯ 6:10.
ಪುನಸ್ಸ್ಥಾಪನೆ ಮತ್ತು ದುರಂತಗಳು
ಇಸವಿ 1967ರ ಕೊನೆಯ ಭಾಗದಲ್ಲಿ, ಇರ್ಕುಟ್ಸ್ನಲ್ಲಿದ್ದ ನನ್ನ ತಮ್ಮನ ಮನೆಯ ಮೇಲೆ ದಾಳಿಮಾಡಲಾಯಿತು. ಬೈಬಲ್ ಸಾಹಿತ್ಯದ ಫಿಲ್ಮ್ ಮತ್ತು ಪ್ರತಿಗಳು ಅಲ್ಲಿ ಕಂಡುಕೊಳ್ಳಲ್ಪಟ್ಟವು. ತಪ್ಪಿತಸ್ಥನೆಂದು ತೀರ್ಮಾನಿಸಲ್ಪಟ್ಟ ಅವನಿಗೆ, ಮೂರು ವರ್ಷಗಳ ಶಿಕ್ಷಾವಧಿಯು ವಿಧಿಸಲಾಯಿತು. ಆದರೆ, ನಮ್ಮ ಮನೆಯ ಮೇಲೆ ದಾಳಿಮಾಡಿದಾಗ, ಅವರಿಗೆ ಏನೂ ಸಿಗಲಿಲ್ಲ. ಹಾಗಿದ್ದರೂ, ಅಧಿಕಾರಿಗಳಿಗೆ ನಮ್ಮ ಮೇಲೆ ಸಂಶಯವಿದ್ದ ಕಾರಣ, ನನ್ನ ಕುಟುಂಬವು ಬೇರೆ ಸ್ಥಳಕ್ಕೆ ಹೋಗಬೇಕಾಯಿತು. ಕಾಕಸಸ್ನಲ್ಲಿರುವ ನವಿನಮಿಸ್ಕ್ ನಗರದ ಪಶ್ಚಿಮಕ್ಕೆ ಸುಮಾರು 5,000 ಕಿಲೊಮೀಟರುಗಳಷ್ಟು ದೂರದಲ್ಲಿದ್ದ ಸ್ಥಳಕ್ಕೆ ನಾವು ಸ್ಥಳಾಂತರಿಸಿದೆವು. ಅಲ್ಲಿ ನಾವು ಅನೌಪಚಾರಿಕ ಸಾಕ್ಷಿಕಾರ್ಯದಲ್ಲಿ ಮಗ್ನರಾಗಿದ್ದೆವು.
ಜೂನ್ 1969ರಲ್ಲಿ, ಶಾಲಾ ರಜಾದಿನಗಳ ಪ್ರಥಮ ದಿನದಂದು ಒಂದು ದುರ್ಘಟನೆಯು ನಡೆಯಿತು. ಹೈ-ವೋಲ್ಟೇಜ್ ವಿದ್ಯುತ್ ಟ್ರಾನ್ಸ್ಫಾರ್ಮರ್ನ ಬಳಿಯಲ್ಲಿದ್ದ ಒಂದು ಚೆಂಡನ್ನು ತೆಗೆಯಲು ಹೋದಾಗ, ನಮ್ಮ 12 ವರ್ಷ ವಯಸ್ಸಿನ ಮಗನಾದ ಕೊಲ್ಯಾ ವಿದ್ಯುತ್ತಿನ ತೀವ್ರವಾದ ಆಘಾತವನ್ನು ಅನುಭವಿಸಿದನು. ಅವನ ದೇಹದ ಮುಕ್ಕಾಲು ಭಾಗವು ಸುಟ್ಟುಹೋಗಿತ್ತು. ಆಸ್ಪತ್ರೆಯಲ್ಲಿ ಅವನು ನನ್ನ ಕಡೆಗೆ ತಿರುಗಿ, ಕೇಳಿದ್ದು: “ಆ ದ್ವೀಪಕ್ಕೆ ಮತ್ತೊಮ್ಮೆ ನಾವಿಬ್ಬರೂ ಸೇರಿ ಹೋಗಸಾಧ್ಯವೊ?” (ನಾವು ಉಲ್ಲಾಸದಿಂದ ಭೇಟಿನೀಡಲು ಹೋಗುತ್ತಿದ್ದ ಒಂದು ದ್ವೀಪದ ಕುರಿತು ಅವನು ಮಾತಾಡುತ್ತಿದ್ದನು.) “ಸರಿ ಕೊಲ್ಯಾ, ನಾವು ಮತ್ತೊಮ್ಮೆ ಆ ದ್ವೀಪಕ್ಕೆ ಹೋಗೋಣ. ಯೇಸು ಕ್ರಿಸ್ತನು ನಿನ್ನನ್ನು ಮತ್ತೆ ಎಬ್ಬಿಸುವಾಗ, ನಾವು ಖಂಡಿತವಾಗಿಯೂ ಆ ದ್ವೀಪಕ್ಕೆ ಹೋಗುವೆವು” ಎಂಬುದಾಗಿ ನಾನು ಹೇಳಿದೆ. ಅರೆಪ್ರಜ್ಞಾವಸ್ಥೆಯಲ್ಲಿದ್ದ ಅವನು ತನ್ನ ಅಚ್ಚುಮೆಚ್ಚಿನ ರಾಜ್ಯಗೀತೆಯನ್ನು ಹಾಡುತ್ತಾ ಇದ್ದನು. ಅವನು ಸಭೆಯ ಗಾನಮೇಳದಲ್ಲಿ ಆ ಗೀತೆಯನ್ನು ತನ್ನ ತುತೂರಿಯಲ್ಲಿ ಆನಂದದಿಂದ ನುಡಿಸುತ್ತಿದ್ದನು. ಪುನರುತ್ಥಾನದ ನಿರೀಕ್ಷೆಯಲ್ಲಿ ಬಲವಾದ ನಂಬಿಕೆಯುಳ್ಳವನಾಗಿ, ಅವನು ಮೂರು ದಿನಗಳ ತರುವಾಯ ಮರಣಹೊಂದಿದನು.
ಮುಂದಿನ ವರ್ಷ, ನಮ್ಮ 20 ವರ್ಷ ವಯಸ್ಸಿನ ಮಗನಾದ ಈವಾನ್, ಮಿಲಿಟರಿ ಸೇವೆಗಾಗಿ ಒತ್ತಾಯದಿಂದ ಸೇರಿಸಿಕೊಳ್ಳಲ್ಪಟ್ಟನು. ಆ ಸೇವೆಯನ್ನು ಸಲ್ಲಿಸಲು ಅವನು ನಿರಾಕರಿಸಿದಾಗ, ಅವನನ್ನು ದಸ್ತಗಿರಿಮಾಡಿ, ಮೂರು ವರ್ಷಗಳ ಕಾಲ ಸೆರೆಮನೆಯಲ್ಲಿಟ್ಟರು. 1971ರಲ್ಲಿ ನನ್ನನ್ನು ಮಿಲಿಟರಿ ಸೇವೆಗೆ ಸೇರಿಸಿಕೊಂಡು, ಸೇವೆ ಸಲ್ಲಿಸದಿದ್ದರೆ ಸೆರೆವಾಸದ ಬೆದರಿಕೆಯನ್ನು ಮತ್ತೆ ಹಾಕಲಾಯಿತು. ನನ್ನ ಮೊಕದ್ದಮೆಯು ಅನೇಕ ತಿಂಗಳುಗಳ ವರೆಗೆ ಮುಂದುವರಿಯಿತು. ಈ ಮಧ್ಯೆ, ನನ್ನ ಹೆಂಡತಿಯು ಕ್ಯಾನ್ಸರಿನಿಂದ ಅಸ್ವಸ್ಥಳಾದುದರಿಂದ, ಅವಳಿಗೆ ಹೆಚ್ಚಿನ ಗಮನವು ಬೇಕಾಗಿತ್ತು. ಈ ಕಾರಣ, ನನ್ನ ಮೊಕದ್ದಮೆಯನ್ನು ವಜಾಮಾಡಲಾಯಿತು. ಮರಿಯಾ 1972ರಲ್ಲಿ ಮರಣಹೊಂದಿದಳು. ಅವಳು ನಂಬಿಗಸ್ತ ಸಂಗಾತಿಯಾಗಿ ಯೆಹೋವನಿಗೆ ತನ್ನ ಮರಣದ ವರೆಗೆ ನಿಷ್ಠಾವಂತಳಾಗಿದ್ದಳು.
ಎಲ್ಲೆಡೆಯೂ ಹರಡಿದ ನಮ್ಮ ಕುಟುಂಬ
ನಾನು ನೀನಳನ್ನು 1973ರಲ್ಲಿ ವಿವಾಹವಾದೆ. ಅವಳೊಬ್ಬ ಸಾಕ್ಷಿಯಾದ ಕಾರಣ, 1960ರಲ್ಲಿ ಅವಳ ತಂದೆ ಅವಳನ್ನು ಮನೆಯಿಂದ ಹೊರಹಾಕಿದ್ದನು. ಅವಳು ಶಿಬಿರಗಳಲ್ಲಿದ್ದ ಆ ಸಹೋದರರಿಗಾಗಿ ಪತ್ರಿಕೆಗಳನ್ನು ನಕಲುಮಾಡುವುದರಲ್ಲಿ ಕಷ್ಟಪಟ್ಟು ದುಡಿದಿದ್ದ ಹುರುಪುಳ್ಳ ಶುಶ್ರೂಷಕಿಯರಲ್ಲಿ ಒಬ್ಬಳಾಗಿದ್ದಳು. ನನ್ನ ಮಕ್ಕಳೂ ಅವಳನ್ನು ಪ್ರೀತಿಸತೊಡಗಿದರು.
ನವಿನಮಿಸ್ಕ್ನಲ್ಲಿನ ನಮ್ಮ ಚಟುವಟಿಕೆಯಿಂದ ಅಧಿಕಾರಿಗಳು ಬಹಳಷ್ಟು ಸಿಡಿಮಿಡಿಗೊಂಡು, ಅಲ್ಲಿಂದ ನಾವು ಸ್ಥಳಾಂತರಿಸುವಂತೆ ಒತ್ತಾಯಿಸಿದರು. ಹೀಗೆ, 1975ರಲ್ಲಿ ನನ್ನ ಹೆಂಡತಿ, ನನ್ನ ಹೆಣ್ಣುಮಕ್ಕಳು, ಮತ್ತು ನಾನು ಜಾರ್ಜಿಯದ ದಕ್ಷಿಣ ಕಾಕಸಸ್ ಕ್ಷೇತ್ರಕ್ಕೆ ಸ್ಥಳಾಂತರಿಸಿದೆವು. ಅದೇ ಸಮಯದಲ್ಲಿ, ನನ್ನ ಗಂಡುಮಕ್ಕಳಾದ ಈವಾನ್ ಮತ್ತು ವಲೊಡ್ಯಾ ಕಸಕ್ಸ್ತಾನ್ನ ದಕ್ಷಿಣ ಎಲ್ಲೆಯಲ್ಲಿರುವ ಸಾಂಬುಲ್ಗೆ ಸ್ಥಳಾಂತರಿಸಿದರು.
ಜಾರ್ಜಿಯದಲ್ಲಿ ಯೆಹೋವನ ಸಾಕ್ಷಿಗಳ ಚಟುವಟಿಕೆಯು ಆಗ ತಾನೇ ಆರಂಭವಾಗಿತ್ತು. ಕಪ್ಪು ಸಮುದ್ರದ ತೀರದಲ್ಲಿರುವ ಗಾಗ್ರ ಮತ್ತು ಸಕಮೀ ಕ್ಷೇತ್ರದ ಒಳಗೂ ಹೊರಗೂ ನಾವು ಅನೌಪಚಾರಿಕವಾಗಿ ಸಾಕ್ಷಿನೀಡಿದೆವು. ಮತ್ತು ಒಂದು ವರ್ಷದ ನಂತರ, ಹತ್ತು ಹೊಸ ಸಾಕ್ಷಿಗಳು ಬೆಟ್ಟದ ನದಿಯಲ್ಲಿ ದೀಕ್ಷಾಸ್ನಾನವನ್ನು ಪಡೆದುಕೊಂಡರು. ಅಲ್ಲಿಂದ ಹೊರಡುವಂತೆ ಅಧಿಕಾರಿಗಳು ಮತ್ತೆ ಒತ್ತಾಯಿಸಿದರು. ಹೀಗೆ ನಾವು ಪೂರ್ವ ಜಾರ್ಜಿಯಕ್ಕೆ ಸ್ಥಳಾಂತರಿಸಿದೆವು. ಅಲ್ಲಿ ಕುರಿಸದೃಶ ಜನರನ್ನು ಕಂಡುಕೊಳ್ಳುವ ನಮ್ಮ ಪ್ರಯತ್ನಗಳನ್ನು ನಾವು ಇನ್ನಷ್ಟು ಹೆಚ್ಚಿಸಿದಾಗ, ಯೆಹೋವನು ನಮ್ಮನ್ನು ಆಶೀರ್ವದಿಸಿದನು.
ನಾವು ಸಣ್ಣ ಗುಂಪುಗಳಾಗಿ ಸೇರಿಬಂದೆವು. ಭಾಷೆಯು ಒಂದು ದೊಡ್ಡ ಸಮಸ್ಯೆಯಾಗಿತ್ತು, ಏಕೆಂದರೆ ನಮಗೆ ಜಾರ್ಜಿಯನ್ ಭಾಷೆ ಗೊತ್ತಿರಲಿಲ್ಲ, ಮತ್ತು ಕೆಲವು ಜಾರ್ಜಿಯನರಿಗೆ ರಷ್ಯನ್ ಭಾಷೆ ಬರುತ್ತಿರಲಿಲ್ಲ. ಮೊದಮೊದಲು ನಾವು ರಷ್ಯನ್ ಭಾಷೆಯವರೊಂದಿಗೆ ಮಾತ್ರ ಬೈಬಲ್ ಅಧ್ಯಯನಗಳನ್ನು ಮಾಡಿದೆವು. ಶೀಘ್ರದಲ್ಲೇ, ಜಾರ್ಜಿಯನ್ ಭಾಷೆಯಲ್ಲಿ ಸಾರುವ ಮತ್ತು ಕಲಿಸುವ ಕೆಲಸವು ತೀವ್ರಗೊಂಡಿತು, ಮತ್ತು ಈಗ ಜಾರ್ಜಿಯದಲ್ಲಿ ಸಾವಿರಾರು ರಾಜ್ಯ ಪ್ರಚಾರಕರಿದ್ದಾರೆ.
ಇಸವಿ 1979ರಲ್ಲಿ, ಕೆಜಿಬಿ ಒತ್ತಡಕ್ಕೆ ಮಣಿದ ನನ್ನ ಧಣಿಯು ಆ ದೇಶವನ್ನು ಬಿಟ್ಟುಹೋಗುವಂತೆ ನನಗೆ ಹೇಳಿದನು. ಆ ಸಮಯದಲ್ಲೇ ಒಂದು ಕಾರಿನ ಅಪಘಾತದಲ್ಲಿ ನಾಡ್ಯಾ ಎಂಬ ನನ್ನ ಮಗಳು ಮತ್ತು ಅವಳ ಚಿಕ್ಕ ಮಗಳು ಮರಣಹೊಂದಿದರು. ಹಿಂದಿನ ವರ್ಷವಷ್ಟೇ ನವಿನಮಿಸ್ಕ್ನಲ್ಲಿ ನನ್ನ ತಾಯಿಯು ಯೆಹೋವನಿಗೆ ನಂಬಿಗಸ್ತರಾಗಿ ಸೇವೆಸಲ್ಲಿಸಿ ಮರಣಹೊಂದಿದ್ದರು, ಮತ್ತು ನನ್ನ ತಂದೆ ಹಾಗೂ ತಮ್ಮನನ್ನು ಅಗಲಿದ್ದರು. ಆದಕಾರಣ, ನಾವು ಅಲ್ಲಿಗೆ ಹಿಂದಿರುಗಲು ತೀರ್ಮಾನಿಸಿದೆವು.
ತಾಳಿಕೊಂಡದ್ದರ ಆಶೀರ್ವಾದಗಳು
ನವಿನಮಿಸ್ಕ್ನಲ್ಲಿ ನಾವು ಬೈಬಲ್ ಸಾಹಿತ್ಯವನ್ನು ಭೂಗತವಾಗಿ ಉತ್ಪಾದಿಸುತ್ತಿದ್ದೆವು. ಒಮ್ಮೆ, 1980ರ ಮಧ್ಯಭಾಗದಲ್ಲಿ ಅಧಿಕಾರಿಗಳು ನನಗೆ ಕರೆಕಳಿಸಿದಾಗ, ನಮ್ಮ ಪತ್ರಿಕೆಗಳನ್ನು ಅಡಗಿಸಿಡುತ್ತಿರುವಂತೆ ನಾನು ಕನಸುಕಂಡದ್ದರ ಕುರಿತು ಅವರಿಗೆ ಹೇಳಿದೆ. ಅವರು ನಕ್ಕುಬಿಟ್ಟರು. ನಾನು ಅಲ್ಲಿಂದ ಹೊರಡುತ್ತಿದ್ದಾಗ, ಅವರಲ್ಲಿ ಒಬ್ಬರು ಹೇಳಿದ್ದು: “ನಿಮ್ಮ ಸಾಹಿತ್ಯವನ್ನು ಹೇಗೆ ಅಡಗಿಸಿಡಬೇಕೆಂಬುದರ ಕುರಿತು ನಿಮಗೆ ಇನ್ನು ಮುಂದೆ ಕನಸುಗಳು ಬೀಳದಿರಲಿ.” ಅವರು ಕೊನೆಗೊಳಿಸಿದ್ದು: “ಬೇಗನೆ ನಿಮ್ಮ ಸಾಹಿತ್ಯವು ಅಲಮಾರುಗಳಲ್ಲಿ ಪ್ರದರ್ಶಿಸಲ್ಪಡುವವು, ಮತ್ತು ನೀವು ಕೂಟಗಳಿಗೆ ನಿಮ್ಮ ಹೆಂಡತಿಯೊಂದಿಗೆ ಕೈಯಲ್ಲಿ ಬೈಬಲನ್ನು ಹಿಡಿದುಕೊಂಡು ಹೋಗುವಿರಿ.”
ನನ್ನ ಮಗಳಾದ ಆ್ಯನ, 1989ರಲ್ಲಿ ಮಿದುಳಿನ ಊತದಿಂದ ಮರಣಹೊಂದಿದಾಗ ನಾವು ಬಹಳಷ್ಟು ದುಃಖಿಸಿದೆವು. ಅವಳು ಕೇವಲ 38 ವರ್ಷದವಳಾಗಿದ್ದಳು. ಅದೇ ವರ್ಷದ ಆಗಸ್ಟ್ ತಿಂಗಳಿನಲ್ಲಿ, ನವಿನಮಿಸ್ಕ್ನಲ್ಲಿದ್ದ ಸಾಕ್ಷಿಗಳು ಒಂದು ರೈಲುಗಾಡಿಯನ್ನು ಬಾಡಿಗೆಗೆ ತೆಗೆದುಕೊಂಡು, ಅಂತಾರಾಷ್ಟ್ರೀಯ ಅಧಿವೇಶನಕ್ಕೆ ಹಾಜರಾಗಲು ಪೊಲೆಂಡ್ನ ವಾರ್ಸೊಗೆ ಪ್ರಯಾಣಿಸಿದರು. ಸೋವಿಯಟ್ ಒಕ್ಕೂಟದಿಂದ ಬಂದ ಸಾವಿರಾರು ಜನರನ್ನು ಸೇರಿಸಿ, 60,366 ಜನರು ಅಲ್ಲಿದ್ದರು. ನಾವು ಕನಸು ಕಾಣುತ್ತಿರುವಂತೆಯೇ ನಮಗೆ ಭಾಸವಾಯಿತು! ಇದಾದ ಎರಡು ವರ್ಷಗಳೊಳಗೆ, ಮಾರ್ಚ್ 27, 1991ರಂದು, ಮಾಸ್ಕೊದಲ್ಲಿ ಯೆಹೋವನ ಸಾಕ್ಷಿಗಳ ಧಾರ್ಮಿಕ ಸಂಸ್ಥೆಗೆ ಕಾನೂನಿನ ಮನ್ನಣೆ ದೊರಕಿಸಿದ ಐತಿಹಾಸಿಕ ಪ್ರಮಾಣ ಪತ್ರಕ್ಕೆ ಸಹಿಹಾಕಿದ, ಸೋವಿಯಟ್ ಒಕ್ಕೂಟದಲ್ಲಿ ದೀರ್ಘ ಸಮಯದಿಂದ ಕಾರ್ಯಮಾಡುತ್ತಿದ್ದ ಐವರು ಹಿರಿಯರಲ್ಲಿ ಒಬ್ಬನಾಗಿರುವ ಸುಯೋಗವು ನನ್ನದಾಗಿತ್ತು!
ಬದುಕಿ ಉಳಿದಿರುವ ನನ್ನ ಮಕ್ಕಳು ಯೆಹೋವನನ್ನು ನಂಬಿಗಸ್ತರಾಗಿ ಸೇವಿಸುತ್ತಿರುವುದು ನನಗೆ ಆನಂದವನ್ನು ತಂದಿದೆ. ಮತ್ತು ನಾನು ದೇವರ ನೂತನ ಲೋಕಕ್ಕಾಗಿ ಎದುರುನೋಡುತ್ತಿದ್ದೇನೆ. ಅಲ್ಲಿ ನಾನು ಪುನಃ ಆ್ಯನ, ನಾಡ್ಯಾ ಮತ್ತು ಅವಳ ಮಗಳು, ಹಾಗೂ ಕೊಲ್ಯಾನನ್ನು ನೋಡುವೆ. ಅವನ ಪುನರುತ್ಥಾನವಾದಾಗ, ಹಲವಾರು ವರ್ಷಗಳ ಹಿಂದೆ ನಾವಿಬ್ಬರೂ ಬಹಳಷ್ಟು ಆನಂದಿಸುತ್ತಿದ್ದ ಆ ದ್ವೀಪಕ್ಕೆ ಅವನನ್ನು ಕರೆದುಕೊಂಡು ಹೋಗುವ ನನ್ನ ಮಾತನ್ನು ನಾನು ಈಡೇರಿಸುವೆ.
ಈ ಮಧ್ಯೆ, ಈ ವಿಶಾಲವಾದ ದೇಶದಲ್ಲಿ ಬೈಬಲ್ ಸತ್ಯವು ತೀವ್ರಗತಿಯಲ್ಲಿ ಬೆಳದಿರುವುದನ್ನು ನೋಡುವುದು ಮಹದಾನಂದದ ವಿಷಯವೇ ಸರಿ! ನಾನು ಜೀವನದಲ್ಲಿ ಸಾಕಷ್ಟು ಸಂತೋಷವನ್ನು ಅನುಭವಿಸಿದ್ದೇನೆ ಮತ್ತು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿರುವಂತೆ ಅನುಮತಿಸಿದ್ದಕ್ಕಾಗಿ ನಾನು ಆತನಿಗೆ ಆಭಾರಿಯಾಗಿದ್ದೇನೆ. ಕೀರ್ತನೆ 34:8ರ ಸತ್ಯತೆಯ ವಿಷಯದಲ್ಲಿ ನನಗೆ ಮನದಟ್ಟಾಗಿದೆ: “ಯೆಹೋವನು ಸರ್ವೋತ್ತಮನೆಂದು ಅನುಭವ ಸವಿದು ನೋಡಿರಿ. ಆತನನ್ನು ಆಶ್ರಯಿಸಿಕೊಂಡವರು ಎಷ್ಟೋ ಧನ್ಯರು.”
[ಪುಟ 25 ರಲ್ಲಿರುವ ಚಿತ್ರ]
ನಾನು ಟುಲೂನ್ನಲ್ಲಿದ್ದ ನನ್ನ ಕುಟುಂಬವನ್ನು ಪುನಃ ಸೇರಿಕೊಂಡ ವರ್ಷ
[ಪುಟ 26 ರಲ್ಲಿರುವ ಚಿತ್ರ]
ಮೇಲೆ: ಸೈಬೀರಿಯದ ಟುಲೂನ್ನಲ್ಲಿರುವ ನಮ್ಮ ಮನೆಯ ಮುಂಭಾಗದಲ್ಲಿ, ನನ್ನ ತಂದೆ ಹಾಗೂ ನನ್ನ ಮಕ್ಕಳು
ಮೇಲೆ ಬಲಕ್ಕೆ: ಕಾರ್ ಅಪಘಾತದಲ್ಲಿ ಮೃತರಾದ ನನ್ನ ಪುತ್ರಿ ನಾಡ್ಯಾ ಮತ್ತು ಅವಳ ಮಗಳು
ಬಲಕ್ಕೆ: 1968ರಲ್ಲಿ ತೆಗೆದ ನನ್ನ ಕುಟುಂಬದ ಭಾವಚಿತ್ರ