ಅವರು ಯೆಹೋವನ ಚಿತ್ತವನ್ನು ಮಾಡಿದರು
ಅತ್ಯಂತ ಮಹಾನ್ ಪುರುಷನು ಅತಿ ದೀನವಾದ ಕೆಲಸವೊಂದನ್ನು ಮಾಡುತ್ತಾನೆ
ಯೇಸುವಿಗೆ ತನ್ನ ಅಪೊಸ್ತಲರೊಂದಿಗೆ ಕಳೆಯಲಿಕ್ಕಿದ್ದ ಕೊನೆಯ ತಾಸುಗಳು ಅಮೂಲ್ಯವಾಗಿರುವವೆಂದು ಗೊತ್ತಿತ್ತು. ಬೇಗನೆ ಅವನು ಬಂಧಿಸಲ್ಪಡಲಿದ್ದನು, ಮತ್ತು ಅವನ ನಂಬಿಕೆಯು ಹಿಂದೆಂದೂ ಪರೀಕ್ಷಿಸಲ್ಪಡದ ರೀತಿಯಲ್ಲಿ ಪರೀಕ್ಷೆಗೊಳಗಾಗಲಿತ್ತು. ಮಹಾ ಆಶೀರ್ವಾದಗಳು ಅವನಿಗಾಗಿ ಕಾದಿವೆಯೆಂದೂ ಯೇಸುವಿಗೆ ಗೊತ್ತಿತ್ತು. ಬೇಗನೆ ಅವನು ದೇವರ ಬಲಗಡೆಯ ಸ್ಥಾನಕ್ಕೆ ಏರಿಸಲ್ಪಟ್ಟು, ‘ಎಲ್ಲಾ ಹೆಸರುಗಳಿಗಿಂತ ಶ್ರೇಷ್ಠವಾದ ಹೆಸರನ್ನು ಆತನು ಪಡೆಯಲಿದ್ದನು. ಆದದರಿಂದ ಸ್ವರ್ಗ ಮರ್ತ್ಯ ಪಾತಾಳಗಳಲ್ಲಿರುವವರೆಲ್ಲರೂ ಯೇಸುವಿನ ಹೆಸರಿನಲ್ಲಿ ಅಡ್ಡಬೀಳುವರು.’—ಫಿಲಿಪ್ಪಿ 2:9, 10.
ಆದರೂ, ಸನ್ನಿಹಿತವಾಗಿದ್ದ ಅವನ ಮರಣದ ಕುರಿತಾದ ಚಿಂತೆಯಾಗಲಿ ಇಲ್ಲವೆ ವಾಗ್ದತ್ತ ಬಹುಮಾನದ ಕುರಿತಾದ ಆತುರತೆಯಾಗಲಿ, ಯೇಸುವಿನ ಮನಸ್ಸನ್ನು ತನ್ನ ಅಪೊಸ್ತಲರ ಆವಶ್ಯಕತೆಗಳಿಂದ ವಿಚಲಿತಗೊಳಿಸಲಿಲ್ಲ. ಅವನು “ತನ್ನವರನ್ನು . . . ಸಂಪೂರ್ಣವಾಗಿ . . . ಪ್ರೀತಿಸುತ್ತಾ ಬಂದನು” ಎಂಬುದಾಗಿ ಯೋಹಾನನು ತದನಂತರ ತನ್ನ ಸುವಾರ್ತೆಯಲ್ಲಿ ದಾಖಲಿಸಿದನು. (ಯೋಹಾನ 13:1) ಪರಿಪೂರ್ಣ ಮಾನವನೋಪಾದಿ ತನ್ನ ಜೀವಿತದ ಈ ನಿರ್ಣಾಯಕ ಕೊನೆಯ ಗಳಿಗೆಯಲ್ಲಿ, ಯೇಸು ತನ್ನ ಅಪೊಸ್ತಲರಿಗೆ ಪ್ರಾಮುಖ್ಯವಾದೊಂದು ಪಾಠವನ್ನು ಕಲಿಸಿಕೊಟ್ಟನು.
ದೀನತೆಯಲ್ಲಿ ಒಂದು ಪಾಠ
ಪಸ್ಕವನ್ನು ಆಚರಿಸಲಿಕ್ಕಾಗಿ ಅಪೊಸ್ತಲರು ಯೇಸುವಿನೊಂದಿಗೆ ಯೆರೂಸಲೇಮಿನಲ್ಲಿನ ಒಂದು ಮೇಲ್ಕೋಣೆಯಲ್ಲಿದ್ದರು. ಈ ಮೊದಲು, ತಮ್ಮೊಳಗೆ ಯಾರು ಹೆಚ್ಚಿನವನೆಂದು ಅವರು ವಾದಿಸುತ್ತಿರುವುದನ್ನು ಯೇಸು ಕೇಳಿಸಿಕೊಂಡಿದ್ದನು. (ಮತ್ತಾಯ 18:1; ಮಾರ್ಕ 9:33, 34) ಇದರ ಬಗ್ಗೆ ಅವನು ಅವರೊಂದಿಗೆ ಚರ್ಚಿಸಿದ್ದನು ಮತ್ತು ಅವರ ದೃಷ್ಟಿಕೋನವನ್ನು ಸರಿಪಡಿಸಲು ಪ್ರಯತ್ನಿಸಿದ್ದನು. (ಲೂಕ 9:46-48) ಆದರೆ ಈಗ, ಯೇಸು ಆ ಪಾಠಗಳನ್ನು ಒಂದು ಭಿನ್ನವಾದ ರೀತಿಯಲ್ಲಿ ಒತ್ತಿಹೇಳಿದನು. ದೀನತೆಯ ಕುರಿತು ಮಾತಾಡಲು ಮಾತ್ರವಲ್ಲ, ಅದನ್ನು ಕಾರ್ಯರೂಪದಲ್ಲಿ ತೋರಿಸಲೂ ಅವನು ಇಷ್ಟಪಟ್ಟನು.
ಯೋಹಾನನು ಬರೆಯುವುದು: ಯೇಸು “ಊಟವನ್ನು ಬಿಟ್ಟು ಎದ್ದು ಹೊದ್ದಿದ್ದ ಮೇಲ್ಹೊದಿಕೆಯನ್ನು ತೆಗೆದಿಟ್ಟು ಕೈಪಾವುಡವನ್ನು ತಕ್ಕೊಂಡು ನಡುವಿಗೆ ಕಟ್ಟಿಕೊಂಡನು. ಆಗ ಬೋಗುಣಿಯಲ್ಲಿ ನೀರುಹಾಕಿಕೊಂಡು ಶಿಷ್ಯರ ಕಾಲುಗಳನ್ನು ತೊಳೆಯುವದಕ್ಕೂ ನಡುವಿಗೆ ಕಟ್ಟಿಕೊಂಡಿದ್ದ ಕೈಪಾವುಡದಿಂದ ಒರಸುವದಕ್ಕೂ ಪ್ರಾರಂಭಿಸಿದನು.”—ಯೋಹಾನ 13:4, 5.
ಪ್ರಾಚೀನ ಮಧ್ಯಪೂರ್ವದ ಬೆಚ್ಚಗಿನ ವಾತಾವರಣದಲ್ಲಿ, ಜನರು ಧೂಳು ತುಂಬಿದ ರಸ್ತೆಗಳಲ್ಲಿ ನಡೆಯುವಾಗ ಸಾಮಾನ್ಯವಾಗಿ ತೆರೆದ ಪಾದರಕ್ಷೆಗಳನ್ನು ಧರಿಸುತ್ತಿದ್ದರು. ಒಬ್ಬ ಸಾಮಾನ್ಯ ವ್ಯಕ್ತಿಯ ಮನೆಯನ್ನು ಪ್ರವೇಶಿಸುವಾಗ, ಅವರು ಆತಿಥೇಯನಿಂದ ಸ್ವಾಗತಿಸಲ್ಪಡುತ್ತಿದ್ದರು. ಬಂದವರು ತಮ್ಮ ಕಾಲುಗಳನ್ನು ತೊಳೆದುಕೊಳ್ಳುವಂತೆ ಅವನು ಪಾತ್ರೆಗಳನ್ನೂ ನೀರನ್ನೂ ಒದಗಿಸುತ್ತಿದ್ದನು. ಶ್ರೀಮಂತರ ಮನೆಗಳಲ್ಲಿ, ಸೇವಕನೊಬ್ಬನು ಕಾಲುಗಳನ್ನು ತೊಳೆಯುವ ಕೆಲಸವನ್ನು ಮಾಡುತ್ತಿದ್ದನು.—ನ್ಯಾಯಸ್ಥಾಪಕರು 19:21; 1 ಸಮುವೇಲ 25:40-42.
ಆದರೆ ಈ ಮೇಲಿನ ಕೋಣೆಯಲ್ಲಿ, ಯೇಸು ಮತ್ತು ಅವನ ಅಪೊಸ್ತಲರು ಯಾರ ಅತಿಥಿಗಳೂ ಆಗಿರಲಿಲ್ಲ. ಕಾಲುಗಳನ್ನು ತೊಳೆಯಲಿಕ್ಕಾಗಿ ಪಾತ್ರೆಗಳನ್ನು ಒದಗಿಸುವ ಆತಿಥೇಯನಾಗಲಿ, ಅವುಗಳನ್ನು ತೊಳೆಯಲು ಸೇವಕರಾಗಲಿ ಅಲ್ಲಿರಲಿಲ್ಲ. ಯೇಸು ಅವರ ಕಾಲುಗಳನ್ನು ತೊಳೆಯಲು ಆರಂಭಿಸಿದ್ದನ್ನು ನೋಡಿ, ಅಪೊಸ್ತಲರಿಗೆ ಮುಖಭಂಗವಾಯಿತು. ತಮ್ಮಲ್ಲಿ ಅತ್ಯಂತ ಮಹಾನ್ ಪುರುಷನು ಅತಿ ದೀನವಾದ ಕೆಲಸವೊಂದನ್ನು ಮಾಡುತ್ತಿದ್ದನು!
ಪೇತ್ರನು ತನ್ನ ಕಾಲುಗಳನ್ನು ತೊಳೆಯಲು ಆರಂಭದಲ್ಲಿ ಬಿಡಲಿಲ್ಲ. ಆದರೆ ಯೇಸು ಅವನಿಗೆ ಹೇಳಿದ್ದು: “ನಾನು ನಿನ್ನನ್ನು ತೊಳೆಯದಿದ್ದರೆ ನನ್ನ ಸಂಗಡ ನಿನಗೆ ಪಾಲಿಲ್ಲ.” ಎಲ್ಲ ಅಪೊಸ್ತಲರ ಕಾಲುಗಳನ್ನು ತೊಳೆದ ನಂತರ ಯೇಸು ಹೇಳಿದ್ದು: “ನಾನು ನಿಮಗೆ ಮಾಡಿದ್ದು ಏನೆಂದು ಗೊತ್ತಾಯಿತೋ? ನೀವು ನನ್ನನ್ನು ಗುರುವೆಂದೂ ಕರ್ತನೆಂದೂ ಕರೆಯುತ್ತೀರಿ; ನೀವು ಕರೆಯುವದು ಸರಿ; ನಾನು ಅಂಥವನೇ ಹೌದು. ಕರ್ತನೂ ಗುರುವೂ ಆಗಿರುವ ನಾನು ನಿಮ್ಮ ಕಾಲುಗಳನ್ನು ತೊಳೆದಿರಲಾಗಿ ನೀವು ಸಹ ಒಬ್ಬರ ಕಾಲನ್ನು ಒಬ್ಬರು ತೊಳೆಯುವ ಹಂಗಿನವರಾಗಿದ್ದೀರಿ. ನಾನು ನಿಮಗೆ ಮಾಡಿದ ಮೇರೆಗೆ ನೀವು ಸಹ ಮಾಡುವಂತೆ ನಿಮಗೆ ಮಾದರಿಯನ್ನು ತೋರಿಸಿದ್ದೇನೆ.”—ಯೋಹಾನ 13:6-15.
ಯೇಸು ಇಲ್ಲಿ, ಕಾಲುಗಳನ್ನು ತೊಳೆದುಕೊಳ್ಳುವ ಒಂದು ಸಂಸ್ಕಾರವನ್ನು ಆರಂಭಿಸಲಿಲ್ಲ. ಬದಲಿಗೆ ತನ್ನ ಅಪೊಸ್ತಲರು ಹೊಸ ಮನೋಭಾವವನ್ನು, ಅಂದರೆ ದೀನತೆಯನ್ನು ಹಾಗೂ ತಮ್ಮ ಸಹೋದರರಿಗಾಗಿ ಅತ್ಯಂತ ದೀನವಾದ ಕೆಲಸವನ್ನು ಮಾಡುವ ಇಚ್ಛೆಯನ್ನು ಬೆಳೆಸಿಕೊಳ್ಳುವಂತೆ ಅವನು ಸಹಾಯ ಮಾಡುತ್ತಿದ್ದನು. ಆ ವಿಷಯವನ್ನು ಅವರು ಅರ್ಥಮಾಡಿಕೊಂಡರೆಂಬುದು ಸ್ಪಷ್ಟ. ವರ್ಷಗಳಾನಂತರ, ಸುನ್ನತಿಯ ವಿವಾದವು ಎದ್ದಾಗ ಏನು ಸಂಭವಿಸಿತೆಂಬುದನ್ನು ಪರಿಗಣಿಸಿರಿ. ಆ ವಿಷಯವಾಗಿ “ಬಹು ವಿವಾದವು” ನಡೆಯಿತಾದರೂ, ಅಲ್ಲಿದ್ದವರು ಸುವ್ಯವಸ್ಥೆಯನ್ನು ಕಾಪಾಡಿಕೊಂಡರು ಮತ್ತು ಒಬ್ಬರಿನ್ನೊಬ್ಬರ ಅಭಿಪ್ರಾಯಗಳಿಗೆ ಗೌರವಪೂರ್ವಕವಾಗಿ ಕಿವಿಗೊಟ್ಟರು. ಅಲ್ಲದೆ, ಆ ಕೂಟದ ಅಧ್ಯಕ್ಷತೆ ವಹಿಸಿದ ವ್ಯಕ್ತಿಯು, ನಾವು ನಿರೀಕ್ಷಿಸಿದಂತೆ ಅಲ್ಲಿದ್ದ ಅಪೊಸ್ತಲರಲ್ಲಿ ಒಬ್ಬನಾಗಿರಲಿಲ್ಲ, ಬದಲಿಗೆ ಶಿಷ್ಯನಾದ ಯಾಕೋಬನಾಗಿದ್ದನು. ದೀನತೆಯನ್ನು ಪ್ರದರ್ಶಿಸುವುದರಲ್ಲಿ ಅಪೊಸ್ತಲರು ಸಾಕಷ್ಟು ಪ್ರಗತಿಯನ್ನು ಮಾಡಿದ್ದರೆಂಬುದನ್ನು ಅಪೊಸ್ತಲರ ಕೃತ್ಯಗಳಲ್ಲಿರುವ ಈ ವೃತ್ತಾಂತವು ತೋರಿಸಿಕೊಡುತ್ತದೆ.—ಅ. ಕೃತ್ಯಗಳು 15:6-29.
ನಮಗಿರುವ ಪಾಠ
ಯೇಸು ತನ್ನ ಶಿಷ್ಯರ ಕಾಲುಗಳನ್ನು ತೊಳೆಯುವ ಮೂಲಕ, ದೀನತೆಯಲ್ಲಿ ಒಂದು ಪ್ರಭಾವಕಾರಿ ಪಾಠವನ್ನು ಕಲಿಸಿದನು. ಯಾವಾಗಲೂ ಇತರರೇ ತಮಗೆ ಸೇವೆ ಸಲ್ಲಿಸುವಷ್ಟು ತಾವು ಪ್ರಮುಖರೆಂದು ಕ್ರೈಸ್ತರು ನೆನಸಬಾರದು. ಇಲ್ಲವೆ ಘನತೆ ಹಾಗೂ ಪ್ರತಿಷ್ಠೆಯ ಸ್ಥಾನಮಾನಗಳನ್ನು ಅವರು ಆಶಿಸಬಾರದು. ಬದಲಿಗೆ, ಅವರು ಯೇಸುವಿನ ಮಾದರಿಯನ್ನು ಅನುಸರಿಸಬೇಕು. ಅವನು “ಸೇವೆಮಾಡಿಸಿಕೊಳ್ಳುವದಕ್ಕೆ ಬರಲಿಲ್ಲ, ಸೇವೆ ಮಾಡುವದಕ್ಕೂ ಅನೇಕರನ್ನು ಬಿಡಿಸಿಕೊಳ್ಳುವದಕ್ಕಾಗಿ ತನ್ನ ಪ್ರಾಣವನ್ನು ಈಡುಕೊಡುವದಕ್ಕೂ ಬಂದನು.” (ಮತ್ತಾಯ 20:28) ಹೌದು, ಯೇಸುವಿನ ಹಿಂಬಾಲಕರು ಒಬ್ಬರು ಇನ್ನೊಬ್ಬರಿಗಾಗಿ ಅತಿ ದೀನವಾದ ಕೆಲಸಗಳನ್ನೂ ಮಾಡಲು ಸಿದ್ಧರಾಗಿರತಕ್ಕದ್ದು.
ಸಕಾರಣದಿಂದಲೇ ಪೇತ್ರನು ಬರೆದುದು: “ನೀವೆಲ್ಲರೂ ದೀನಮನಸ್ಸೆಂಬ ವಸ್ತ್ರದಿಂದ ಸೊಂಟಾಕಟ್ಟಿಕೊಂಡು ಒಬ್ಬರಿಗೊಬ್ಬರು ಸೇವೆಮಾಡಿರಿ. ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ. ದೀನರಿಗಾದರೋ ಕೃಪೆಯನ್ನು ಅನುಗ್ರಹಿಸುತ್ತಾನೆ.” (1 ಪೇತ್ರ 5:5) ‘ಸೊಂಟಾಕಟ್ಟಿಕೊಳ್ಳಿ’ ಎಂಬ ಗ್ರೀಕ್ ಪದವು, “ಒಬ್ಬ ಸೇವಕನ ಮೇಲ್ಬಟ್ಟೆ (ಏಪ್ರನ್)” ಎಂಬ ಅರ್ಥವುಳ್ಳ ಪದದಿಂದ ತೆಗೆಯಲ್ಪಟ್ಟಿದೆ. ಇದನ್ನು ಸಡಿಲವಾದ ನಿಲುವಂಗಿಯ ಮೇಲೆ ಧರಿಸಲಾಗುತ್ತದೆ. ಯೇಸು ಮೇಲ್ಬಟ್ಟೆಯನ್ನು ಕಟ್ಟಿಕೊಂಡು, ತನ್ನ ಅಪೊಸ್ತಲರ ಕಾಲುಗಳನ್ನು ತೊಳೆದ ಕ್ರಿಯೆಯ ಕುರಿತು ಪೇತ್ರನು ಸೂಚಿಸಿ ಹೇಳುತ್ತಿದ್ದಿರಬಹುದೊ? ಹೌದೆಂದು ನಿಶ್ಚಿತಭಾವದಿಂದ ಹೇಳಲು ಸಾಧ್ಯವಿಲ್ಲ. ಆದರೆ, ಯೇಸುವಿನ ದೀನ ಸೇವೆಯು ಪೇತ್ರನ ಮೇಲೆ ಅಚ್ಚಳಿಯದ ಪ್ರಭಾವವನ್ನು ಬೀರಿತು. ಅದು ಕ್ರಿಸ್ತನ ಎಲ್ಲ ಹಿಂಬಾಲಕರ ಮೇಲೆ ತದ್ರೀತಿಯ ಪ್ರಭಾವವನ್ನು ಬೀರತಕ್ಕದ್ದು.—ಕೊಲೊಸ್ಸೆ 3:12-14.