ಮರಣಾನಂತರದ ಜೀವಿತ—ಜನರು ನಂಬುವುದೇನು?
“ಒಬ್ಬ ಮನುಷ್ಯನು ಸತ್ತು ಪುನಃ ಬದುಕಾನೇ?”—ಯೋಬ. 14:14.
1, 2. ತಮ್ಮ ಪ್ರಿಯ ವ್ಯಕ್ತಿಯನ್ನು ಮರಣದಲ್ಲಿ ಕಳೆದುಕೊಳ್ಳುವ ಅನೇಕರು ಹೇಗೆ ಸಾಂತ್ವನವನ್ನು ಕಂಡುಕೊಳ್ಳುತ್ತಾರೆ?
ನ್ಯೂಯಾರ್ಕ್ ನಗರದ ಒಂದು ಶವಾಗಾರದಲ್ಲಿ ಕ್ಯಾನ್ಸರಿಗೆ ಬಲಿಯಾದ 17 ವರ್ಷದ ಯುವಕನ ಶವಪೆಟ್ಟಿಗೆಯ ಹತ್ತಿರ ಮಿತ್ರರು ಹಾಗೂ ಕುಟುಂಬದ ಸದಸ್ಯರು ಮೌನವಾಗಿ ಒಟ್ಟುಗೂಡುತ್ತಾರೆ. ದುಃಖದಿಂದ ಎದೆಯೊಡೆದ ತಾಯಿ, ಕಣ್ಣೀರು ಸುರಿಸುತ್ತಾ ಹೇಳುವುದು: “ಟಾಮಿ ಈಗ ನೆಮ್ಮದಿಯಿಂದ ಇದ್ದಾನೆ. ದೇವರು ಟಾಮಿಯನ್ನು ತನ್ನಲ್ಲಿಗೆ ಕರೆದುಕೊಂಡಿದ್ದಾನೆ.” ಇದನ್ನೇ ನಂಬುವಂತೆ ಆಕೆಗೆ ಕಲಿಸಲಾಗಿತ್ತು.
2 ಸುಮಾರು 11,000 ಕಿಲೊಮೀಟರುಗಳ ದೂರದಲ್ಲಿ, ಅಂದರೆ ಭಾರತದ ಜಾಮ್ನಗರದಲ್ಲಿ, ಮೂವರು ಗಂಡುಮಕ್ಕಳಲ್ಲಿ ಹಿರಿಯವನು ತಮ್ಮ ಮೃತ ತಂದೆಯ ಚಿತೆಗೆ ಬೆಂಕಿಯಿಡುತ್ತಾನೆ. ಬೆಂಕಿಯ ಚಟಪಟ ಶಬ್ದದೊಂದಿಗೆ, ಪೂಜಾರಿಯು ಸಂಸ್ಕೃತ ಭಾಷೆಯಲ್ಲಿ ಮಂತ್ರಗಳ ಪಠಣಮಾಡುತ್ತಾನೆ: “ಎಂದೆಂದಿಗೂ ಮೃತ್ಯುವನ್ನಪ್ಪದ ಆತ್ಮವು ಬ್ರಹ್ಮನೊಂದಿಗೆ ಲೀನವಾಗುವ ತನ್ನ ಪ್ರಯತ್ನದಲ್ಲಿ ಮುಂದುವರಿಯುವಂತಾಗಲಿ.”
3. ಜನರು ಯುಗಯುಗಾಂತರಗಳಿಂದ ಯಾವ ಪ್ರಶ್ನೆಗಳ ಕುರಿತು ಪರ್ಯಾಲೋಚಿಸುತ್ತಾ ಬಂದಿದ್ದಾರೆ?
3 ಮರಣದ ವಾಸ್ತವಿಕತೆಯು ಎಲ್ಲೆಡೆಯೂ ಇದೆ. (ರೋಮಾಪುರ 5:12) ಆದಕಾರಣ ಮರಣವೇ ಎಲ್ಲ ವಿಷಯಗಳ ಅಂತ್ಯವೊ ಎಂದು ನಾವು ನೆನಸುವುದು ತೀರ ಸಾಧಾರಣ ವಿಷಯ. ಗಿಡಮರಗಳ ಸ್ವಾಭಾವಿಕ ಕಾಲಚಕ್ರದ ಕುರಿತು, ಯೆಹೋವ ದೇವರ ಒಬ್ಬ ನಂಬಿಗಸ್ತ ಸೇವಕನಾದ ಯೋಬನು ಗಮನಿಸಿದ್ದು: “ಕಡಿದ ಮರವೂ ತಾನು ಮೊಳೆಯುವದನ್ನು ನಿಲ್ಲಿಸದೆ ಮತ್ತೆ ಚಿಗುರೇನೆಂದು ನಿರೀಕ್ಷಿಸುತ್ತದಲ್ಲವೇ!” ಹಾಗಾದರೆ ಮನುಷ್ಯರ ಕುರಿತೇನು? “ಒಬ್ಬ ಮನುಷ್ಯನು ಸತ್ತು ಪುನಃ ಬದುಕಾನೇ?” ಎಂದು ಯೋಬನು ಕೇಳಿದನು. (ಯೋಬ 14:7, 14) ಮರಣಾನಂತರದ ಜೀವಿತವಿದೆಯೋ? ಹಾಗಿರುವಲ್ಲಿ, ಅದು ಯಾವ ರೀತಿಯ ಜೀವಿತವಾಗಿದೆ? ಜನರು ನಂಬವುದೇನು? ಮತ್ತು ಏಕೆ? ಎಂಬಂತಹ ಪ್ರಶ್ನೆಗಳ ಕುರಿತು, ಎಲ್ಲಾ ರೀತಿಯ ಜನರು ಯುಗಯುಗಾಂತರಗಳಿಂದ ಪರ್ಯಾಲೋಚಿಸುತ್ತಾ ಬಂದಿದ್ದಾರೆ.
ಹಲವಾರು ಉತ್ತರಗಳಾದರೂ, ಒಂದೇ ಮೂಲವಿಷಯ
4. ಮರಣಾನಂತರದ ಜೀವಿತದ ಬಗ್ಗೆ ವಿಭಿನ್ನ ಧರ್ಮಗಳ ಜನರು ಏನು ನಂಬುತ್ತಾರೆ?
4 ಜನರು ತಮ್ಮ ಮರಣದ ನಂತರ ಸ್ವರ್ಗಕ್ಕಾಗಲಿ ನರಕಕ್ಕಾಗಲಿ ಹೋಗುತ್ತಾರೆಂದು ಅನೇಕ ನಾಮಮಾತ್ರದ ಕ್ರೈಸ್ತರು ನಂಬುತ್ತಾರೆ. ಹಿಂದೂಗಳಾದರೊ ಪುನರ್ಜನ್ಮದಲ್ಲಿ ನಂಬಿಕೆಯಿಡುತ್ತಾರೆ. ಮುಸ್ಲಿಮರ ನಂಬಿಕೆಗನುಸಾರ, ಮರಣದ ನಂತರ ನ್ಯಾಯತೀರ್ಪಿನ ದಿನವೊಂದಿರುವುದು. ಆ ದಿನದಂದು ಅಲ್ಲಾಹು ಪ್ರತಿಯೊಬ್ಬನ ಜೀವನ ಕ್ರಮವನ್ನು ತೂಗಿನೋಡಿ, ಅವನನ್ನು ಜನ್ನತ್ (ಸ್ವರ್ಗ) ಇಲ್ಲವೆ ದೋಸಕ್ (ನರಕ)ಗೆ ಕಳುಹಿಸುವನು. ಕೆಲವೊಂದು ದೇಶಗಳಲ್ಲಿ ಸತ್ತವರ ಕುರಿತಾದ ನಂಬಿಕೆಗಳು, ಸ್ಥಳೀಯ ಸಂಪ್ರದಾಯ ಮತ್ತು ನಾಮಮಾತ್ರದ ಕ್ರೈಸ್ತತ್ವದ ಸಂಮಿಶ್ರಣವಾಗಿದೆ. ಉದಾಹರಣೆಗೆ ಶ್ರೀಲಂಕದಲ್ಲಿ, ಕುಟುಂಬದ ಒಬ್ಬ ಸದಸ್ಯನು ಸತ್ತಾಗ, ಬುದ್ಧರು ಮತ್ತು ಕ್ಯಾತೊಲಿಕರು ತಮ್ಮ ಮನೆಯ ಬಾಗಿಲುಗಳನ್ನು ಹಾಗೂ ಕಿಟಕಿಗಳನ್ನು ವಿಶಾಲವಾಗಿ ತೆರೆದಿಟ್ಟು, ಮೃತನ ಕಾಲುಗಳು ಮುಂಬಾಲಿಗಿನ ಕಡೆಗೆ ಮುಖಮಾಡುವಂತೆ ಶವಪೆಟ್ಟಿಗೆಯನ್ನು ಇರಿಸುತ್ತಾರೆ. ಇಂತಹ ಕ್ರಮಗಳು ಮೃತನ ಆತ್ಮದ ನಿರ್ಗಮನವನ್ನು ಸರಾಗಗೊಳಿಸುವವೆಂದು ಅವರು ನಂಬುತ್ತಾರೆ. ಪಶ್ಚಿಮ ಆಫ್ರಿಕದಲ್ಲಿರುವ ಅನೇಕ ಕ್ಯಾತೊಲಿಕರ ಮತ್ತು ಪ್ರಾಟೆಸ್ಟಂಟರ ಸಂಪ್ರದಾಯಕ್ಕನುಸಾರ, ಯಾರಾದರೊಬ್ಬರು ಸಾಯುವಲ್ಲಿ ಸತ್ತವನ ಆತ್ಮವನ್ನು ಯಾರೂ ನೋಡಸಾಧ್ಯವಾಗದಂತೆ ಕನ್ನಡಿಗಳನ್ನು ಹೊದಿಕೆಗಳಿಂದ ಮುಚ್ಚಲಾಗುತ್ತದೆ. ತರುವಾಯ, 40 ದಿನಗಳ ಬಳಿಕ, ಸ್ವರ್ಗಕ್ಕೆ ಆತ್ಮದ ಆರೋಹಣವನ್ನು ಕುಟುಂಬದವರು ಮತ್ತು ಮಿತ್ರರು ಸೇರಿ ಆಚರಿಸುತ್ತಾರೆ.
5. ಹೆಚ್ಚಿನ ಧರ್ಮಗಳು ಸಹಮತಿಸುವ ಒಂದು ಮುಖ್ಯ ನಂಬಿಕೆಯು ಯಾವುದು?
5 ಇಷ್ಟೆಲ್ಲ ವೈವಿಧ್ಯವಿದ್ದರೂ, ಹೆಚ್ಚಿನ ಧರ್ಮಗಳು ಕೊನೇಪಕ್ಷ ಒಂದು ವಿಷಯದಲ್ಲಾದರೂ ಸಹಮತದಿಂದಿವೆ. ವ್ಯಕ್ತಿಯೊಬ್ಬನಲ್ಲಿ ಯಾವುದೊ ವಿಷಯವು ಅಮರವಾಗಿದ್ದು, ಅದು ದೇಹದ ಮರಣದ ನಂತರವೂ ಜೀವಿಸುವುದನ್ನು ಮುಂದುವರಿಸುತ್ತದೆ ಎಂದು ಅವರು ನಂಬುತ್ತಾರೆ. ಬಹುಮಟ್ಟಿಗೆ ಕ್ರೈಸ್ತಪ್ರಪಂಚದ ಎಲ್ಲ ಧಾರ್ಮಿಕ ಗುಂಪುಗಳು ಮತ್ತು ಪಂಗಡಗಳು, ಮನುಷ್ಯನಲ್ಲಿ ಅಮರವಾದದ್ದೇನೊ ಇದೆಯೆಂಬ ನಂಬಿಕೆಯನ್ನು ಪ್ರತಿಪಾದಿಸುತ್ತವೆ. ಈ ನಂಬಿಕೆಯು, ಯೆಹೂದಿಮತದ ಒಂದು ಪ್ರಧಾನ ತತ್ವವಾಗಿದೆ. ಇದು ಪುನರ್ಜನ್ಮವೆಂಬ ಹಿಂದೂ ಧರ್ಮದ ಬೋಧನೆಯ ಮೂಲಾಧಾರವೂ ಆಗಿದೆ. ದೇಹದ ಮರಣದ ನಂತರ ರೂಹ್ (ಆತ್ಮ) ಜೀವಿಸುತ್ತಾ ಮುಂದುವರಿಯುತ್ತದೆ ಎಂದು ಮುಸ್ಲಿಮರು ನಂಬುತ್ತಾರೆ. ಆಸ್ಟ್ರೇಲಿಯದ ಮೂಲ ನಿವಾಸಿಗಳು, ಆಫ್ರಿಕದ ಸರ್ವಚೇತನವಾದಿಗಳು, ಶಿಂಟೊ ಧರ್ಮದವರು, ಮತ್ತು ಬುದ್ಧರು, ಇದೇ ವಿಷಯವನ್ನು ಬೇರೆ ಬೇರೆ ರೀತಿಯಲ್ಲಿ ಕಲಿಸುತ್ತಾರೆ.
6. ಮನುಷ್ಯನಿಗೆ ಅಮರ ಆತ್ಮ ಇದೆಯೆಂಬ ವಿಚಾರವನ್ನು ಕೆಲವು ಪಂಡಿತರು ಹೇಗೆ ವೀಕ್ಷಿಸುತ್ತಾರೆ?
6 ಆದರೆ, ಇನ್ನೊಂದು ಕಡೆ ಪ್ರಜ್ಞೆಯುಳ್ಳ ಜೀವಿತವು ಮರಣದಲ್ಲಿ ಕೊನೆಗೊಳ್ಳುತ್ತದೆಂಬ ದೃಷ್ಟಿಕೋನವನ್ನು ಕೆಲವರು ಹೊಂದಿದ್ದಾರೆ. ದೇಹದಿಂದ ಪ್ರತ್ಯೇಕವಾಗಿರುವ ವ್ಯಕ್ತಿಸ್ವರೂಪವಿಲ್ಲದ ಯಾವುದೊ ರೂಪದಲ್ಲಿ, ಭಾವನಾತ್ಮಕ ಹಾಗೂ ಬುದ್ಧಿಗ್ರಾಹ್ಯ ಜೀವಿತವು ಮುಂದುವರಿಯುತ್ತದೆಂಬ ವಿಚಾರವು ಅವರಿಗೆ ವಿಚಿತ್ರವಾಗಿ ತೋರುತ್ತದೆ. ವ್ಯಕ್ತಿಗತ ಅಮರತ್ವದಲ್ಲಿ ನಂಬಿಕೆಯನ್ನಿಡಲು ಬಯಸದ ವ್ಯಕ್ತಿಗಳಲ್ಲಿ, ಗತಕಾಲದ ಪ್ರಸಿದ್ಧ ತತ್ವಜ್ಞಾನಿಗಳಾದ ಅರಿಸ್ಟಾಟಲ್ ಮತ್ತು ಎಪಿಕ್ಯೂರಸ್, ವೈದ್ಯನಾದ ಹಿಪ್ಪೊಕ್ರೇಟಸ್, ಸ್ಕಾಟಿಷ್ ತತ್ವಜ್ಞಾನಿ ಡೇವಿಡ್ ಹ್ಯೂಮ್, ಅರೆಬಿಯನ್ ವಿದ್ವಾಂಸನಾದ ಎವಿರಾವೀಸ್, ಮತ್ತು ಸ್ವಾತಂತ್ರ್ಯದ ತರುವಾಯ ಭಾರತದ ಮೊದಲನೆಯ ಪ್ರಧಾನ ಮಂತ್ರಿಯಾದ ಜವಹರಲಾಲ್ ನೆಹರೂ ಕೆಲವರಾಗಿದ್ದರು.
7. ಆತ್ಮದ ಬೋಧನೆಯ ವಿಷಯದಲ್ಲಿ ಯಾವ ಪ್ರಾಮುಖ್ಯ ಪ್ರಶ್ನೆಗಳನ್ನು ಈಗ ಪರಿಗಣಿಸಬೇಕಾಗಿದೆ?
7 ಇಂತಹ ವ್ಯತಿರಿಕ್ತವಾದ ವಿಚಾರಗಳು ಮತ್ತು ನಂಬಿಕೆಗಳನ್ನು ಎದುರಿಸುತ್ತಿರುವ ನಾವು, ನಮ್ಮೊಳಗೆ ಒಂದು ಅಮರ ಆತ್ಮವು ನಿಜವಾಗಿಯೂ ಇದೆಯೊ? ಎಂದು ಪ್ರಶ್ನಿಸಿಕೊಳ್ಳಬೇಕು. ಇಲ್ಲವೆಂದರೆ, ಇಂತಹ ಒಂದು ಸುಳ್ಳು ಬೋಧನೆಯು ಇಂದಿನ ಅತ್ಯಧಿಕ ಧರ್ಮಗಳ ಒಂದು ಸಮಗ್ರ ಭಾಗವಾಗಿರುವುದು ಹೇಗೆ? ಈ ವಿಚಾರವು ಎಲ್ಲಿಂದ ಬಂತು? ಏಕೆಂದರೆ, ನಮ್ಮ ಭವಿಷ್ಯತ್ತು ಅದರ ಮೇಲೆ ಅವಲಂಬಿಸಿರುವುದರಿಂದ ಈ ಪ್ರಶ್ನೆಗಳಿಗೆ ಸರಿಯಾದ ಹಾಗೂ ತೃಪ್ತಿಕರ ಉತ್ತರಗಳನ್ನು ಕಂಡುಕೊಳ್ಳುವುದು ಆವಶ್ಯಕವಾಗಿದೆ. (1 ಕೊರಿಂಥ 15:19) ಆದರೆ, ಆತ್ಮದ ಸಿದ್ಧಾಂತವು ಹೇಗೆ ಆರಂಭಿಸಿತು ಎಂಬುದನ್ನು ನಾವು ಮೊದಲು ಪರಿಶೀಲಿಸೋಣ.
ಸಿದ್ಧಾಂತದ ಜನನ
8. ಅಮರ ಆತ್ಮದ ಬೋಧನೆಯನ್ನು ಕಲಿಸುವುದರಲ್ಲಿ ಸಾಕ್ರೆಟಿಸ್ ಮತ್ತು ಪ್ಲೇಟೊ ಯಾವ ಪಾತ್ರವನ್ನು ವಹಿಸಿದರು?
8 ಸಾ.ಶ.ಪೂ. ಐದನೆಯ ಶತಮಾನದ ಗ್ರೀಕ್ ತತ್ವಜ್ಞಾನಿಗಳಾದ ಸಾಕ್ರೆಟಿಸ್ ಮತ್ತು ಪ್ಲೇಟೊ, ಅಮರ ಆತ್ಮವೊಂದಿದೆ ಎಂಬ ನಂಬಿಕೆಯನ್ನು ಬೋಧಿಸುವುದರಲ್ಲಿ ಪ್ರಥಮರೆಂಬ ಮನ್ನಣೆಯನ್ನು ಪಡೆದವರಾಗಿದ್ದಾರೆ. ಹಾಗಿದ್ದರೂ ಈ ವಿಚಾರದ ಮೂಲಪ್ರವರ್ತಕರು ಇವರಾಗಿರಲಿಲ್ಲ. ಬದಲಿಗೆ ಈ ವಿಚಾರಕ್ಕೆ ಅವರು ಮೆರಗನ್ನು ನೀಡಿ, ಅದನ್ನೊಂದು ತಾತ್ವಿಕ ಬೋಧನೆಯನ್ನಾಗಿ ಮಾಡಿದರು. ಹೀಗೆ, ಇದು ಅವರ ದಿನದ ಮತ್ತು ಭವಿಷ್ಯತ್ತಿನ ಎಲ್ಲ ಸುಸಂಸ್ಕೃತ ವರ್ಗದ ಜನರಿಗೆ ಆಕರ್ಷಕವಾಗಿತ್ತು. ವಾಸ್ತವ ಸಂಗತಿಯೇನೆಂದರೆ, ಪ್ರಾಚೀನ ಪರ್ಷಿಯದ ಪಾರ್ಸಿಮತದವರು ಮತ್ತು ಅವರಿಗಿಂತಲೂ ಮುಂಚೆ ಅಸ್ತಿತ್ವದಲ್ಲಿದ್ದ ಐಗುಪ್ತದವರು ಸಹ, ಮನುಷ್ಯನಲ್ಲಿ ಅಮರವಾದದ್ದೇನೊ ಇದೆಯೆಂದು ನಂಬಿದ್ದರು. ಹಾಗಾದರೆ, ಈ ಬೋಧನೆಯ ಉಗಮವು ಯಾವುದು? ಎಂಬುದೇ ಒಂದು ಪ್ರಶ್ನೆಯಾಗಿ ಉಳಿದಿದೆ.
9. ಐಗುಪ್ತ, ಪರ್ಷಿಯ ಮತ್ತು ಗ್ರೀಸ್ ಸಂಸ್ಕೃತಿಗಳು, ಯಾವ ಪ್ರಭಾವಕ್ಕೆ ಒಳಗಾದವು?
9 ಬಬಿಲೋನಿಯ ಮತ್ತು ಅಸ್ಸೀರಿಯದ ಧರ್ಮ (ಇಂಗ್ಲಿಷ್) ಎಂಬ ಗ್ರಂಥವು ಹೇಳುವುದು: “ಪ್ರಾಚೀನ ಲೋಕದಲ್ಲಿ, ಬಬಿಲೋನಿಯದ ಧರ್ಮವು ಐಗುಪ್ತ, ಪರ್ಷಿಯ, ಮತ್ತು ಗ್ರೀಸ್ ದೇಶಗಳ ಮೇಲೆ ಭಾರಿ ಪ್ರಭಾವವನ್ನು ಬೀರಿತು.” ಐಗುಪ್ತದ ಧಾರ್ಮಿಕ ನಂಬಿಕೆಗಳ ಕುರಿತು, ಆ ಗ್ರಂಥವು ಹೀಗೆ ಹೇಳುತ್ತದೆ: “ಎಲ್-ಅಮಾರ್ನಾ ಫಲಕಗಳು ತೋರಿಸುವಂತೆ, ಐಗುಪ್ತ ಮತ್ತು ಬಾಬಿಲೋನಿಯದ ಮಧ್ಯೆ ಪುರಾತನ ಸಮಯಗಳಿಂದಲೂ ಸಂಪರ್ಕವಿದ್ದ ಕಾರಣ, ಐಗುಪ್ತದ ಪಂಥಗಳೊಳಗೆ ಬಬಿಲೋನಿಯದ ವಿಚಾರಧಾರೆಗಳು ಮತ್ತು ಸಂಪ್ರದಾಯಗಳು ವಿಲೀನವಾಗಲು ಸಾಕಷ್ಟು ಅವಕಾಶಗಳು ಇದ್ದವೆಂಬುದರಲ್ಲಿ ಸಂದೇಹವೇ ಇಲ್ಲ.”a ಹಳೆಯ ಪರ್ಷಿಯನ್ ಮತ್ತು ಗ್ರೀಕ್ ಸಂಸ್ಕೃತಿಗಳ ಕುರಿತು ಇದನ್ನೇ ಹೇಳಸಾಧ್ಯವಿದೆ.
10. ಮರಣಾನಂತರದ ಜೀವಿತದ ಕುರಿತು ಬಬಿಲೋನಿಯರ ದೃಷ್ಟಿಕೋನವು ಏನಾಗಿತ್ತು?
10 ಆದರೆ ಮನುಷ್ಯನಲ್ಲಿ ಅಮರವಾದದ್ದೇನೋ ಇದೆಯೆಂದು ಪ್ರಾಚೀನ ಬಬಿಲೋನಿಯರು ನಂಬಿದರೊ? ಅಮೆರಿಕದ ಪೆನ್ಸಿಲ್ವೇನಿಯ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಮಾರಿಸ್ ಜ್ಯಾಸ್ಟ್ರೋ ಜೂನಿಯರ್ ಈ ವಿಷಯದಲ್ಲಿ ಬರೆದುದು: “[ಬಬಿಲೋನಿಯದ] ಪ್ರಜೆಗಳಾಗಲಿ ಇಲ್ಲವೆ ಧಾರ್ಮಿಕ ನಾಯಕರಾಗಲಿ, ಜೀವದ ಸಂಪೂರ್ಣ ನಿರ್ನಾಮದ ಪ್ರತೀಕ್ಷೆಯನ್ನು ಹೊಂದಿರಲೇ ಇಲ್ಲ. [ಅವರ ದೃಷ್ಟಿಯಲ್ಲಿ] ಮರಣವು, ಮತ್ತೊಂದು ರೀತಿಯ ಜೀವಿತಕ್ಕೆ ಕೇವಲ ಒಂದು ಮಾರ್ಗವಾಗಿತ್ತು. [ಸದ್ಯದ ಜೀವಿತದ] ಅಮರತ್ವವನ್ನು ಹೊಂದದೇ ಹೋದಲ್ಲಿ, ಮರಣವು ನಮ್ಮನ್ನು ಬೇರೊಂದು ರೀತಿಯ ಅಸ್ತಿತ್ವಕ್ಕೆ ಖಂಡಿತವಾಗಿಯೂ ನಡೆಸುವುದು ಎಂಬುದನ್ನು ಇದು ಖಚಿತಪಡಿಸುತ್ತದೆ.” ಹೌದು, ಮರಣದ ನಂತರ, ಯಾವುದೊ ಒಂದು ರೀತಿಯ ಜೀವಿತವು, ಯಾವುದೊ ಒಂದು ರೂಪದಲ್ಲಿ ಮುಂದುವರಿಯುತ್ತದೆಂದು ಬಬಿಲೋನಿಯರು ನಂಬಿದರು. ಈ ಅಭಿಪ್ರಾಯವನ್ನು ವ್ಯಕ್ತಪಡಿಸಲಿಕ್ಕಾಗಿ, ಮರಣಾನಂತರದ ಜೀವಿತದಲ್ಲಿ ಉಪಯೋಗಿಸಸಾಧ್ಯವಾಗುವಂತೆ ಅವರು ಮೃತರೊಂದಿಗೆ ಕೆಲವೊಂದು ವಸ್ತುಗಳನ್ನು ಹೂಣಿಡುತ್ತಿದ್ದರು.
11, 12. ಜಲಪ್ರಳಯದ ನಂತರ, ಮನುಷ್ಯನಲ್ಲಿ ಅಮರ ಆತ್ಮವಿದೆ ಎಂಬ ಬೋಧನೆಯು ಎಲ್ಲಿ ಜನ್ಮತಾಳಿತು?
11 ಮನುಷ್ಯನಲ್ಲಿ ಅಮರವಾದದ್ದೇನೋ ಇದೆ ಎಂಬ ಬೋಧನೆಯು ಪ್ರಾಚೀನ ಬಬಿಲೋನಿನಷ್ಟು ಹಳೆಯದೆಂಬುದು ತೀರ ಸ್ಪಷ್ಟ. ಅದು ಪರಿಗಣನೆಗೆ ಅರ್ಹವಾದ ವಿಷಯವೊ? ನಿಶ್ಚಯವಾಗಿಯೂ ಹೌದು, ಏಕೆಂದರೆ ಬೈಬಲಿಗನುಸಾರ, ಬಾಬೆಲ್ ಇಲ್ಲವೆ ಬಬಿಲೋನ್ ಎಂಬ ನಗರವು ನೋಹನ ಮರಿಮೊಮ್ಮಗನಾದ ನಿಮ್ರೋದನಿಂದ ಸ್ಥಾಪಿಸಲ್ಪಟ್ಟಿತು. ನೋಹನ ದಿನದಲ್ಲಾದ ಭೌಗೋಲಿಕ ಜಲಪ್ರಳಯದ ನಂತರ, ಎಲ್ಲ ಜನರು ಒಂದೇ ಭಾಷೆಯನ್ನಾಡಿದರು ಮತ್ತು ಅವರೆಲ್ಲರಿಗೂ ಒಂದೇ ಧರ್ಮವಿತ್ತು. ನಿಮ್ರೋದನು “ಅತಿಸಾಹಸಿಯಾದ ಬೇಟೆಗಾರನು” [“ಯೆಹೋವನಿಗೆ ಎದುರಾಗಿದ್ದನು,” NW] ಮಾತ್ರವಲ್ಲ, ಅವನೂ ಅವನ ಹಿಂಬಾಲಕರೂ ತಮಗಾಗಿ “ದೊಡ್ಡ ಹೆಸರನ್ನು ಪಡೆ”ದುಕೊಳ್ಳಲು ಬಯಸಿದರು. ಹೀಗೆ ನಗರವನ್ನು ಸ್ಥಾಪಿಸುವ ಮೂಲಕ ಮತ್ತು ಅಲ್ಲೊಂದು ಗೋಪುರವನ್ನು ಕಟ್ಟುವ ಮೂಲಕ, ನಿಮ್ರೋದನು ಭಿನ್ನವಾದೊಂದು ಧರ್ಮವನ್ನು ಆರಂಭಿಸಿದನು.—ಆದಿಕಾಂಡ 10:1, 6, 8-10; 11:1-4.
12 ನಿಮ್ರೋದನು ಕ್ರೂರ ಮರಣವನ್ನು ಅನುಭವಿಸಿದನೆಂದು ಸಂಪ್ರದಾಯವು ಹೇಳುತ್ತದೆ. ಅವನ ಮರಣದ ನಂತರ, ಬಬಿಲೋನ್ಯರು ತಮ್ಮ ನಗರದ ಸ್ಥಾಪಕ, ನಿರ್ಮಾಣಿಕ ಮತ್ತು ಪ್ರಥಮ ರಾಜನನ್ನು ಉನ್ನತ ಸ್ಥಾನದಲ್ಲಿಡಲು ಖಂಡಿತವಾಗಿಯೂ ಬಯಸಿದ್ದಿರಬೇಕು. ಮಾರ್ದುಕ್ (ಮೆರೋದಾಕ್) ದೇವತೆಯು ಬಬಿಲೋನಿನ ಸ್ಥಾಪಕನೆಂದು ಪರಿಗಣಿಸಲ್ಪಟ್ಟದ್ದರಿಂದ, ಮತ್ತು ಹಲವಾರು ಬಬಿಲೋನಿಯದ ರಾಜರುಗಳಿಗೆ ಅವನ ಹೆಸರನ್ನೇ ಇಡಲಾದುದರಿಂದ, ಮಾರ್ದುಕ್ ದೈವೀಕರಿಸಲ್ಪಟ್ಟ ನಿಮ್ರೋದನನ್ನು ಪ್ರತಿನಿಧಿಸುತ್ತಾನೆಂದು ಕೆಲವು ವಿದ್ವಾಂಸರು ಸೂಚಿಸಿದ್ದಾರೆ. (2 ಅರಸು 25:27; ಯೆಶಾಯ 39:1; ಯೆರೆಮೀಯ 50:2) ಇದು ಸತ್ಯವಾಗಿರುವಲ್ಲಿ, ಮರಣದಿಂದ ಬದುಕಿ ಉಳಿಯುವ ಅಮರವಾದದ್ದೇನೋ ಮನುಷ್ಯನಲ್ಲಿದೆ ಎಂಬ ವಿಚಾರವು, ನಿಮ್ರೋದನ ಮರಣದ ಸಮಯದಲ್ಲಾದರೂ ಪ್ರಚಲಿತವಾಗಿದ್ದಿರಬೇಕು. ವಿಷಯವು ಏನೇ ಆಗಿರಲಿ, ಮನುಷ್ಯನಲ್ಲಿ ಅಮರ ಆತ್ಮವಿದೆ ಎಂಬ ಬೋಧನೆಯು, ಬಾಬೆಲ್ ಇಲ್ಲವೆ ಬಬಿಲೋನಿನಲ್ಲಿ ಜನ್ಮತಾಳಿತೆಂದು ಇತಿಹಾಸದ ಪುಟಗಳು ತೋರಿಸುತ್ತವೆ. ಇದು ಜಲಪ್ರಳಯದ ನಂತರ ಸಂಭವಿಸಿದ ವಿಷಯವಾಗಿತ್ತು.
13. ಅಮರ ಆತ್ಮದ ಬೋಧನೆಯು ಭೂಮಿಯ ಎಲ್ಲೆಡೆಯೂ ಹೇಗೆ ಹರಡಿಕೊಂಡಿತು, ಮತ್ತು ಇದರ ಪರಿಣಾಮವು ಏನಾಗಿತ್ತು?
13 ಬಾಬೆಲ್ನಲ್ಲಿ ಗೋಪುರವನ್ನು ಕಟ್ಟುತ್ತಿರುವವರ ಭಾಷೆಯನ್ನು ಗೊಂದಲಕ್ಕೀಡುಮಾಡುವ ಮೂಲಕ ದೇವರು ಅವರ ಉದ್ದೇಶವನ್ನು ಭಂಗಪಡಿಸಿದನೆಂದು ಬೈಬಲ್ ತೋರಿಸುತ್ತದೆ. ಇನ್ನು ಮುಂದೆ ಒಬ್ಬರಿಗೊಬ್ಬರು ಸಂಭಾಷಿಸಲು ಸಾಧ್ಯವಾಗದಿದ್ದ ಕಾರಣ, ಅವರು ತಮ್ಮ ನಿರ್ಮಾಣ ಕಾರ್ಯವನ್ನು ತ್ಯಜಿಸಿ “ಅಲ್ಲಿಂದ ಭೂಲೋಕದಲ್ಲೆಲ್ಲಾ ಚದರಿ”ಹೋದರು. (ಆದಿಕಾಂಡ 11:5-9) ಈ ಭಾವೀ ನಿರ್ಮಾಣಿಕರ ಭಾಷೆಯು ಬದಲಾಗಿದ್ದರೂ, ಅವರ ಆಲೋಚನಾಕ್ರಮ ಮತ್ತು ಸಂಕಲ್ಪಗಳು ಬದಲಾಗಿರಲಿಲ್ಲವೆಂಬುದನ್ನು ನಾವು ಮರೆಯಬಾರದು. ಈ ಕಾರಣ, ಅವರು ಹೋದಲ್ಲೆಲ್ಲಾ ಅವರ ಧಾರ್ಮಿಕ ವಿಚಾರಗಳೂ ಅವರನ್ನು ಹಿಂಬಾಲಿಸಿದವು. ಈ ರೀತಿಯಲ್ಲಿ, ಅಮರ ಆತ್ಮದ ಬೋಧನೆಯೊಂದಿಗೆ ಸೇರಿಸಿ, ಬಬಿಲೋನಿನ ಧಾರ್ಮಿಕ ಬೋಧನೆಗಳು ಭೂಮಿಯ ಎಲ್ಲೆಡೆಯೂ ಹರಡಿ, ಲೋಕದ ಪ್ರಧಾನ ಧರ್ಮಗಳ ಅಸ್ತಿವಾರವಾದವು. ಹೀಗೆ, ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವು ಸ್ಥಾಪಿಸಲ್ಪಟ್ಟಿತು. ಇದನ್ನು ಬೈಬಲಿನಲ್ಲಿ, “ಬಾಬೆಲೆಂಬ ಮಹಾ ನಗರಿ, ಭೂಮಿಯಲ್ಲಿರುವ ಜಾರಸ್ತ್ರೀಯರಿಗೂ ಅಸಹ್ಯವಾದ ಕಾರ್ಯಗಳಿಗೂ ತಾಯಿ” ಎಂದು ಸೂಕ್ತವಾಗಿಯೇ ವರ್ಣಿಸಲಾಗಿದೆ.—ಪ್ರಕಟನೆ 17:5.
ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವು ಮೂಡಲ ದಿಕ್ಕಿಗೆ ವಿಸ್ತರಿಸುತ್ತದೆ
14. ಭಾರತ ಉಪಖಂಡದೊಳಗೆ ಬಬಿಲೋನಿನ ಧಾರ್ಮಿಕ ನಂಬಿಕೆಗಳು ಹೇಗೆ ಹರಡಿಕೊಂಡವು?
14 ಸುಮಾರು 3,500 ವರ್ಷಗಳ ಹಿಂದೆ, ಬಿಳಿ ಚರ್ಮದ ಆರ್ಯನ್ ಜನರ ಒಂದು ದೊಡ್ಡ ಸಮೂಹವು, ವಾಯವ್ಯ ದಿಕ್ಕಿನಿಂದ ಇಂದು ಮುಖ್ಯವಾಗಿ ಪಾಕಿಸ್ತಾನ್ ಮತ್ತು ಭಾರತದಲ್ಲಿರುವ ಸಿಂಧೂ ಕಣಿವೆಗೆ ವಲಸೆ ಬಂದಿತು. ಅಲ್ಲಿಂದ ಅವರು ಗಂಗಾ ನದಿಯ ಬಯಲುಗಳಲ್ಲಿ ಮತ್ತು ಭಾರತದ ಆದ್ಯಂತ ಹರಡಿಕೊಂಡರು. ಹೀಗೆ, ವಲಸೆಬಂದವರ ಧಾರ್ಮಿಕ ನಂಬಿಕೆಗಳು, ಪ್ರಾಚೀನ ಇರಾನ್ ಹಾಗೂ ಬಬಿಲೋನಿಯದ ಬೋಧನೆಗಳ ಮೇಲೆ ಆಧರಿಸಿದ್ದವೆಂದು ಕೆಲವು ಪರಿಣತರು ಹೇಳುತ್ತಾರೆ. ಈ ಧಾರ್ಮಿಕ ನಂಬಿಕೆಗಳು, ಹಿಂದೂ ಧರ್ಮದ ಬೇರುಗಳಾಗಿ ಪರಿಣಮಿಸಿದವು.
15. ಅಮರ ಆತ್ಮದ ವಿಚಾರವು ಪ್ರಸ್ತುತ ದಿನದ ಹಿಂದೂ ಧರ್ಮವನ್ನು ಹೇಗೆ ಪ್ರಭಾವಿಸಿತು?
15 ಭಾರತದಲ್ಲಿ, ಅಮರ ಆತ್ಮದ ನಂಬಿಕೆಯು ಪುನರ್ಜನ್ಮವೆಂಬ ಸಿದ್ಧಾಂತವಾಗಿ ರೂಪತಾಳಿತು. ಮನುಷ್ಯರಲ್ಲಿ ಸಾರ್ವತ್ರಿಕವಾಗಿರುವ ದುಷ್ಟತನ ಹಾಗೂ ಕಷ್ಟಾನುಭವದ ಸಮಸ್ಯೆಗಳನ್ನು ಜಯಿಸಲು ಪ್ರಯತ್ನಿಸುತ್ತಿದ್ದ ಹಿಂದೂ ಮುನಿಗಳು, ಕರ್ಮದ ಬೋಧನೆಯನ್ನು ಅಂದರೆ ಬಿತ್ತಿದ್ದನ್ನು ಕೊಯ್ಯುವ ಬೋಧನೆಯನ್ನು ಕಲಿಸಿದರು. ಈ ಬೋಧನೆಯನ್ನು ಅಮರ ಆತ್ಮದ ನಂಬಿಕೆಯೊಂದಿಗೆ ಜೋಡಿಸುತ್ತಾ, ಅವರು ಪುನರ್ಜನ್ಮದ ಬೋಧನೆಯನ್ನು ರೂಪಿಸಿದರು. ಒಬ್ಬನ ಜೀವಿತದ ಗುಣ ಅವಗುಣಗಳಿಗೆ ಮುಂದಿನ ಜನ್ಮದಲ್ಲಿ ಪ್ರತಿಫಲ ಇಲ್ಲವೆ ದಂಡ ಸಿಗುತ್ತದೆಂದು ಅವರು ಕಲಿಸಿದರು. ನಂಬಿಗಸ್ತರ ಗುರಿಯು ಮೋಕ್ಷ, ಅಂದರೆ ಪುನರ್ಜನ್ಮಗಳ ಚಕ್ರದಿಂದ ಬಿಡುಗಡೆ ಹೊಂದಿ ಬ್ರಹ್ಮನೊಂದಿಗೆ ಐಕ್ಯವಾಗುವುದೇ ಆಗಿದೆ. ಹೀಗೆ, ಹಿಂದೂ ಧರ್ಮವು ಹರಡಿದಂತೆ ಪುನರ್ಜನ್ಮದ ಬೋಧನೆಯೂ ಹರಡಿಕೊಂಡಿತು. ಮತ್ತು ಈ ಸಿದ್ಧಾಂತವು ಪ್ರಸ್ತುತ ದಿನದ ಹಿಂದೂ ಧರ್ಮದ ಮೂಲಾಧಾರವಾಗಿದೆ.
16. ಮರಣಾನಂತರದ ಜೀವಿತದ ಕುರಿತಾದ ಯಾವ ನಂಬಿಕೆಯು, ಪೂರ್ವ ಏಷಿಯದ ಒಂದು ದೊಡ್ಡ ಜನಸಮೂಹದ ಧಾರ್ಮಿಕ ಆಚಾರವಿಚಾರಗಳನ್ನು ಪ್ರಭಾವಿಸಿದೆ?
16 ಹಿಂದೂ ಧರ್ಮದಿಂದ, ಬೌದ್ಧ ಧರ್ಮ, ಜೈನ್ ಧರ್ಮ, ಮತ್ತು ಸಿಖ್ ಧರ್ಮಗಳು ಹುಟ್ಟಿಕೊಂಡವು. ಇವು ಕೂಡ ಪುನರ್ಜನ್ಮದ ನಂಬಿಕೆಗೆ ಅಂಟಿಕೊಳ್ಳುತ್ತವೆ. ಮತ್ತು ಬೌದ್ಧ ಧರ್ಮವು ಚೈನ, ಕೊರಿಯ, ಜಪಾನ್ ಮತ್ತು ಪೂರ್ವ ಏಷಿಯದ ಹಲವೆಡೆ ವ್ಯಾಪಿಸಿದಂತೆ, ಅದು ಆ ಇಡೀ ಕ್ಷೇತ್ರದ ಸಂಸ್ಕೃತಿ ಹಾಗೂ ಧರ್ಮವನ್ನು ಬಹಳವಾಗಿ ಪ್ರಭಾವಿಸಿತು. ಇದು ಬೌದ್ಧ ಧರ್ಮ, ಪ್ರೇತವ್ಯವಹಾರವಾದ ಮತ್ತು ಪೂರ್ವಜರ ಆರಾಧನೆಗಳಿಂದ ಕೆಲವೊಂದು ಅಂಶಗಳನ್ನು ತೆಗೆದು ಬೆರೆಸಿರುವ ಧರ್ಮಗಳಿಗೆ ಜನ್ಮನೀಡಿತು. ಇವುಗಳಲ್ಲಿ ಟೌಇಸಮ್, ಕನ್ಫ್ಯೂಷಿಯಾನಿಸಮ್, ಮತ್ತು ಶಿಂಟೊ ಧರ್ಮಗಳು ಪ್ರಧಾನವಾಗಿವೆ. ಹೀಗೆ, ದೇಹವು ಮರಣದಲ್ಲಿ ನಶಿಸಿದ ನಂತರ ಜೀವವು ಮುಂದುವರಿಯುತ್ತದೆ ಎಂಬ ನಂಬಿಕೆಯು, ಲೋಕದ ಒಂದು ದೊಡ್ಡ ಜನಸಮೂಹದ ಧಾರ್ಮಿಕ ಆಚಾರವಿಚಾರಗಳನ್ನು ಪ್ರಭಾವಿಸಿದೆ.
ಯೆಹೂದಿಮತ, ಕ್ರೈಸ್ತಪ್ರಪಂಚ, ಮತ್ತು ಇಸ್ಲಾಮ್ ಧರ್ಮದ ಕುರಿತೇನು?
17. ಮರಣಾನಂತರದ ಜೀವಿತದ ಕುರಿತು ಪ್ರಾಚೀನ ಯೆಹೂದ್ಯರ ನಂಬಿಕೆಯು ಏನಾಗಿತ್ತು?
17 ಮರಣಾನಂತರದ ಜೀವಿತದ ಕುರಿತು, ಯೆಹೂದಿಮತ, ಕ್ರೈಸ್ತಪ್ರಪಂಚ, ಮತ್ತು ಇಸ್ಲಾಮ್ ಧರ್ಮಗಳನ್ನು ಅನುಸರಿಸುವವರು ಏನನ್ನು ನಂಬುತ್ತಾರೆ? ಈ ಮೂರು ಧರ್ಮಗಳಲ್ಲಿ, ಯೆಹೂದಿಮತವು ತೀರ ಹಳೆಯದು. ಅದರ ಬೇರುಗಳು ಅಬ್ರಹಾಮನ ಸಮಯಕ್ಕೆ, ಅಂದರೆ ಸುಮಾರು 4,000 ವರ್ಷಗಳಷ್ಟು ಹಿಂದಕ್ಕೆ ಹೋಗುತ್ತವೆ. ಇದು ಸಾಕ್ರೆಟಿಸ್ ಮತ್ತು ಪ್ಲೇಟೊರವರು, ಅಮರ ಆತ್ಮದ ಸಿದ್ಧಾಂತಕ್ಕೆ ಬೇಕಾದ ರೂಪವನ್ನು ಕೊಟ್ಟ ಸಮಯಕ್ಕಿಂತಲೂ ತುಂಬ ಹಿಂದಿನ ಸಮಯವಾಗಿತ್ತು. ಪ್ರಾಚೀನ ಯೆಹೂದ್ಯರು ಅಂತರ್ಗತವಾಗಿರುವ ಮಾನವ ಅಮರತ್ವದಲ್ಲಿ ಅಲ್ಲ, ಮೃತರ ಪುನರುತ್ಥಾನದಲ್ಲಿ ನಂಬಿಕೆಯಿಟ್ಟರು. (ಮತ್ತಾಯ 22:31, 32; ಇಬ್ರಿಯ 11:19) ಹಾಗಾದರೆ, ಅಮರ ಆತ್ಮದ ಸಿದ್ಧಾಂತವು ಯೆಹೂದಿಮತವನ್ನು ಪ್ರವೇಶಿಸಿದ್ದು ಹೇಗೆ? ಇತಿಹಾಸವು ಇದಕ್ಕೆ ಉತ್ತರವನ್ನು ನೀಡುತ್ತದೆ.
18, 19. ಅಮರ ಆತ್ಮದ ಸಿದ್ಧಾಂತವು ಯೆಹೂದಿಮತವನ್ನು ಹೇಗೆ ಪ್ರವೇಶಿಸಿತು?
18 ಸಾ.ಶ.ಪೂ. 332ರಲ್ಲಿ, ಮಹಾ ಅಲೆಕ್ಸಾಂಡರನು ಯೆರೂಸಲೇಮನ್ನು ಸೇರಿಸಿ, ಮಧ್ಯ ಪೂರ್ವವನ್ನು ಜಯಿಸಿಕೊಂಡನು. ಅಲೆಕ್ಸಾಂಡರನ ಉತ್ತರಾಧಿಕಾರಿಗಳು ಗ್ರೀಕೀಕರಣದ ಕಾರ್ಯಕ್ರಮವನ್ನು ಮುಂದುವರಿಸಿದಂತೆ, ಗ್ರೀಕ್ ಮತ್ತು ಯೆಹೂದಿ ಸಂಸ್ಕೃತಿಗಳ ಬೆರಕೆಯು ನಡೆಯಿತು. ಸಕಾಲದಲ್ಲಿ, ಗ್ರೀಕ್ ವಿಚಾರದಲ್ಲಿ ಚಿರಪರಿಚಿತರಾದ ಯೆಹೂದ್ಯರಲ್ಲಿ ಕೆಲವರು ತತ್ವಜ್ಞಾನಿಗಳಾಗಿಯೂ ಪರಿಣಮಿಸಿದರು.
19 ಸಾ.ಶ. ಒಂದನೆಯ ಶತಮಾನದ ಅಲೆಕ್ಸಾಂಡ್ರಿಯದ ಫಿಲೊ, ಅಂತಹ ಒಬ್ಬ ಗ್ರೀಕ್ ತತ್ವಜ್ಞಾನಿಯಾಗಿದ್ದನು. ಅವನು ಪ್ಲೇಟೊ ಅನ್ನು ಪೂಜ್ಯಭಾವದಿಂದ ಕಂಡು, ಗ್ರೀಕ್ ತತ್ವಜ್ಞಾನದ ಪರಿಭಾಷೆಯಲ್ಲಿ ಯೆಹೂದಿಮತವನ್ನು ವಿವರಿಸಲು ಪ್ರಯತ್ನಿಸಿದನು. ಹೀಗೆ, ಅವನು ಮುಂದಿನ ಯೆಹೂದಿ ವಿಚಾರವಂತರಿಗೆ ದಾರಿಯನ್ನು ಮಾಡಿಕೊಟ್ಟನು. ರಬ್ಬಿಗಳ ಮೌಖಿಕ ನಿಯಮಗಳ ಕುರಿತ ಲಿಖಿತ ವ್ಯಾಖ್ಯಾನವಾದ ಟಾಲ್ಮುಡ್ ಕೂಡ ಗ್ರೀಕ್ ವಿಚಾರದಿಂದ ಪ್ರಭಾವಿಸಲ್ಪಟ್ಟಿದೆ. ಎನ್ಸೈಕ್ಲೊಪೀಡಿಯ ಜುಡೈಕಾ ಹೇಳುವುದು, “ಟಾಲ್ಮುಡ್ನ ರಬ್ಬಿಗಳು, ಮರಣದ ನಂತರ ಆತ್ಮದ ನಿರಂತರ ಅಸ್ತಿತ್ವದಲ್ಲಿ ನಂಬಿಕೆಯಿಟ್ಟರು.” ಕಬಾಲದಂತಹ ತರುವಾಯ ಬಂದ ಯೆಹೂದಿ ಗುಪ್ತವಿದ್ಯಾ ಸಾಹಿತ್ಯವು, ಪುನರ್ಜನ್ಮವನ್ನು ಕಲಿಸುವಷ್ಟರ ಮಟ್ಟಿಗೆ ಹೋಗುತ್ತದೆ. ಹೀಗೆ, ಗ್ರೀಕ್ ತತ್ವಜ್ಞಾನದ ಹಿಂಬಾಗಿಲಿನಿಂದ ಅಮರ ಆತ್ಮದ ವಿಚಾರವು ಯೆಹೂದಿಮತದೊಳಗೆ ಪ್ರವೇಶಿಸಿತು. ಕ್ರೈಸ್ತಪ್ರಪಂಚದೊಳಗೆ ಈ ಬೋಧನೆಯ ಪ್ರವೇಶದ ಕುರಿತು ಏನು ಹೇಳಬಹುದು?
20, 21. (ಎ) ಪ್ಲೇಟೊನಿಕ್ ಇಲ್ಲವೆ ಗ್ರೀಕ್ ತತ್ವಜ್ಞಾನದ ಸಂಬಂಧದಲ್ಲಿ, ಆದಿ ಕ್ರೈಸ್ತರ ನಿಲುವು ಏನಾಗಿತ್ತು? (ಬಿ) ಕ್ರೈಸ್ತ ಬೋಧನೆಗಳೊಂದಿಗೆ ಪ್ಲೇಟೊವಿನ ವಿಚಾರಗಳ ಬೆರಕೆಗೆ ಯಾವುದು ನಡೆಸಿತು?
20 ಯಥಾರ್ಥವಾದ ಕ್ರೈಸ್ತತ್ವವು ಯೇಸು ಕ್ರಿಸ್ತನೊಂದಿಗೆ ಆರಂಭಿಸಿತು. ಯೇಸುವಿನ ಕುರಿತು, ಊನಾಮೂನೋ ಡಿ ಮಿಗ್ವೇಲ್ ಬರೆದದ್ದು: “ಅವನು [ಗ್ರೀಕ್] ಪ್ಲೇಟೊನಿಕ್ ರೀತಿಗನುಸಾರ ಅಮರ ಆತ್ಮದಲ್ಲಿ ಅಲ್ಲ, ಬದಲಿಗೆ ಯೆಹೂದಿ ರೀತಿಗನುಸಾರ ಶರೀರದ ಪುನರುತ್ಥಾನದಲ್ಲಿ ನಂಬಿದನು.” ಅವನು ಕೊನೆಗೊಳಿಸಿದ್ದು: “ಅಮರ ಆತ್ಮವು . . . ಕ್ರೈಸ್ತೇತರ ತಾತ್ವಿಕ ಸಿದ್ಧಾಂತವಾಗಿದೆ.” ಇದನ್ನು ಮನಸ್ಸಿನಲ್ಲಿಟ್ಟುಕೊಂಡು, ಅಪೊಸ್ತಲ ಪೌಲನು ಪ್ರಥಮ ಶತಮಾನದ ಕ್ರೈಸ್ತರನ್ನು, “ಕ್ರಿಸ್ತನನ್ನು ಅನುಸರಿಸದೆ ಮನುಷ್ಯರ ಸಂಪ್ರದಾಯಗಳನ್ನೂ ಪ್ರಾಪಂಚಿಕಬಾಲಬೋಧೆಯನ್ನೂ ಅನುಸರಿಸುವವರ” ಮತ್ತು “ಮೋಸವಾದ ನಿರರ್ಥಕ ತತ್ವಜ್ಞಾನಬೋಧನೆ”ಯ ವಿರುದ್ಧ ಏಕೆ ಎಚ್ಚರಿಸಿದನೆಂಬುದನ್ನು ನಾವು ನೋಡಸಾಧ್ಯವಿದೆ.—ಕೊಲೊಸ್ಸೆ 2:8.
21 ಹಾಗಾದರೆ, ಈ “ಕ್ರೈಸ್ತೇತರ ತಾತ್ವಿಕ ಸಿದ್ಧಾಂತವು” ಕ್ರೈಸ್ತಪ್ರಪಂಚದಲ್ಲಿ ಯಾವಾಗ ಮತ್ತು ಹೇಗೆ ಒಳಹೊಕ್ಕಿತು? ದ ನ್ಯೂ ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕ ವಿವರಿಸುವುದು: “ಸಾ.ಶ. ಎರಡನೆಯ ಶತಮಾನದ ಮಧ್ಯಭಾಗದಿಂದ, ಗ್ರೀಕ್ ತತ್ವಜ್ಞಾನದಲ್ಲಿ ಒಂದಿಷ್ಟು ತರಬೇತಿಯನ್ನು ಪಡೆದುಕೊಂಡಿದ್ದ ಕ್ರೈಸ್ತರು, ತಮ್ಮ ಸ್ವಂತ ಬೌದ್ಧಿಕ ತೃಪ್ತಿಗಾಗಿ ಮತ್ತು ಶಿಕ್ಷಿತ ಕ್ರೈಸ್ತೇತರನ್ನು ಮತಾಂತರಿಸುವ ಉದ್ದೇಶದಿಂದ ತಮ್ಮ ನಂಬಿಕೆಯನ್ನು ಗ್ರೀಕ್ ತತ್ವಜ್ಞಾನಕ್ಕನುಸಾರ ವ್ಯಕ್ತಪಡಿಸುವ ಅಗತ್ಯವನ್ನು ಮನಗಂಡರು. ತಮ್ಮ ಉದ್ದೇಶಕ್ಕೆ ಯೋಗ್ಯವಾಗಿದ್ದ ತತ್ವಜ್ಞಾನವು, ಪ್ಲೇಟೋನಿಕ್ ವಾದವಾಗಿತ್ತು.” ಹೀಗೆ, ಕ್ರೈಸ್ತಪ್ರಪಂಚದ ತತ್ವಗಳ ಮೇಲೆ ಸಾಕಷ್ಟು ಪ್ರಭಾವವನ್ನು ಬೀರಿದ ಇಂತಹ ಇಬ್ಬರು ತತ್ವಜ್ಞಾನಿಗಳು, ಅಲೆಕ್ಸಾಂಡ್ರಿಯದ ಆರಿಜನ್ ಮತ್ತು ಹಿಪ್ಪೊವಿನ ಆಗಸ್ಟೀನ್ ಆಗಿದ್ದರು. ಇಬ್ಬರೂ ಪ್ಲೇಟೊವಿನ ವಿಚಾರಗಳಿಂದ ಆಳವಾಗಿ ಪ್ರಭಾವಿಸಲ್ಪಟ್ಟಿದ್ದರು ಮತ್ತು ಆ ವಿಚಾರಗಳನ್ನು ಕ್ರೈಸ್ತ ಬೋಧನೆಗಳಲ್ಲಿ ಬೆರೆಸುವ ಕಾರ್ಯದಲ್ಲಿ ಅಗ್ರಗಣ್ಯರಾಗಿದ್ದರು.
22. ಅಮರ ಆತ್ಮ ಇಲ್ಲವೆ ರೂಹುವಿನ ಬೋಧನೆಯು ಇಸ್ಲಾಮ್ ಧರ್ಮದಲ್ಲಿ ಹೇಗೆ ಪ್ರಧಾನವಾಗಿ ಉಳಿದಿದೆ?
22 ಯೆಹೂದಿಮತ ಹಾಗೂ ಕ್ರೈಸ್ತಪ್ರಪಂಚದಲ್ಲಿ ಅಮರ ಆತ್ಮದ ವಿಚಾರವು ಗ್ರೀಕ್ ತತ್ವಜ್ಞಾನದ ಪ್ರಭಾವದಿಂದ ಉಂಟಾಗಿದ್ದರೂ, ಈ ಪರಿಕಲ್ಪನೆಯು ಮೊದಲಿನಿಂದಲೂ ಇಸ್ಲಾಮ್ ಧರ್ಮದಲ್ಲಿ ಬೇರೂರಿತ್ತು. ಇಸ್ಲಾಮ್ ಧರ್ಮದ ಪವಿತ್ರ ಗಂಥವಾದ ಕೊರಾನ್, ಮರಣದ ನಂತರ ಜೀವಿಸುತ್ತಾ ಮುಂದುವರಿಯುವ ಒಂದು ಆತ್ಮ (ಅರೆಬಿಕ್: ರೂಹ್) ಮನುಷ್ಯನಿಗೆ ಇದೆಯೆಂದು ಕಲಿಸುತ್ತದೆ. ಈ ಆತ್ಮದ ಇಲ್ಲವೆ ರೂಹುವಿನ ಅಂತಿಮ ವಿಧಿಯು, ಹರ್ಷೋಲ್ಲಾಸದ ಸ್ವರ್ಗೀಯ ತೋಟ (ಜನ್ನತ್) ಇಲ್ಲವೆ ಉರಿಯುವ ನರಕ (ದೋಸಕ್) ಆಗಿದೆಯೆಂದು ಅದು ತಿಳಿಸುತ್ತದೆ. ಅರಬ್ ವಿದ್ವಾಂಸರು ಇಸ್ಲಾಮ್ ಬೋಧನೆಗಳನ್ನು ಮತ್ತು ಗ್ರೀಕ್ ತತ್ವಜ್ಞಾನವನ್ನು ಸೇರಿಸಲು ಪ್ರಯತ್ನಿಸಿದ್ದಾರೆಂದು ಇದರಿಂದ ಹೇಳಸಾಧ್ಯವಿದೆ. ಅರಬ್ ಲೋಕವು ಅರಿಸ್ಟಾಟಲ್ನ ಕೃತಿಗಳಿಂದ ಒಂದಿಷ್ಟು ಮಟ್ಟಿಗಾದರೂ ಪ್ರಭಾವಿಸಲ್ಪಟ್ಟಿತು. ಹಾಗಿದ್ದರೂ, ಅಮರ ಆತ್ಮ ಇಲ್ಲವೆ ರೂಹ್ ಮುಸ್ಲಿಮರ ನಂಬಿಕೆಯಾಗಿ ಇನ್ನೂ ಇಳಿದಿದೆ.
23. ಮರಣಾನಂತರದ ಜೀವಿತದ ಕುರಿತು ಯಾವ ಆಸಕ್ತಿಕರ ಪ್ರಶ್ನೆಗಳು ಮುಂದಿನ ಲೇಖನದಲ್ಲಿ ಪರಿಗಣಿಸಲ್ಪಡುವವು?
23 ಸ್ಪಷ್ಟವಾಗಿಯೇ, ಮನುಷ್ಯನಲ್ಲಿ ಅಮರವಾದದ್ದೇನೋ ಇದೆಯೆಂಬ ಬೋಧನೆಯ ಮೇಲೆ ಆಧರಿಸಿ, ಲೋಕದಾದ್ಯಂತವಿರುವ ಧರ್ಮಗಳು ಮರಣಾನಂತರದ ಜೀವಿತದ ಕುರಿತು ತಬ್ಬಿಬ್ಬುಗೊಳಿಸುವ ಹಲವಾರು ನಂಬಿಕೆಗಳನ್ನು ವಿಕಸಿಸಿಕೊಂಡಿವೆ. ಮತ್ತು ಇಂತಹ ನಂಬಿಕೆಗಳು ನೂರಾರು ಕೋಟಿ ಜನರನ್ನು ಬಾಧಿಸಿವೆ ಮತ್ತು ಅವರ ಮೇಲೆ ಪ್ರಭುತ್ವ ನಡೆಸಿವೆ. ಈ ಎಲ್ಲಾ ಗೊಂದಲಗಳನ್ನು ಎದುರಿಸುವ ನಾವು, ಹೀಗೆ ಕೇಳುವಂತೆ ಒತ್ತಾಯಿಸಲ್ಪಡುತ್ತೇವೆ: ಮರಣಹೊಂದುವಾಗ ನಮಗೆ ಏನು ಸಂಭವಿಸುತ್ತದೆ ಎಂಬುದರ ಕುರಿತು ಸತ್ಯವನ್ನು ತಿಳಿದುಕೊಳ್ಳಲು ಸಾಧ್ಯವೊ? ಮರಣಾನಂತರದ ಜೀವಿತವಿದೆಯೊ? ಇದರ ಕುರಿತು ಬೈಬಲು ಏನನ್ನು ತಿಳಿಸುತ್ತದೆ? ಇದನ್ನು ನಾವು ಮುಂದಿನ ಲೇಖನದಲ್ಲಿ ಪರಿಗಣಿಸುವೆವು.
[ಅಧ್ಯಯನ ಪ್ರಶ್ನೆಗಳು]
a ಎಲ್-ಅಮಾರ್ನಾ, ಆಕಟಾಟನ್ ಎಂಬ ಐಗುಪ್ತ ನಗರದ ಅವಶೇಷಗಳ ಸ್ಥಾನವಾಗಿದೆ. ಇದನ್ನು ಸಾ.ಶ.ಪೂ. 14ನೆಯ ಶತಮಾನದಲ್ಲಿ ಕಟ್ಟಲಾಯಿತೆಂದು ಹೇಳಲಾಗಿದೆ.
ನೀವು ವಿವರಿಸಬಲ್ಲಿರೊ?
◻ ಮರಣಾನಂತರದ ಜೀವಿತದ ಕುರಿತು ಹೆಚ್ಚಿನ ಧರ್ಮಗಳಲ್ಲಿರುವ ಸಾಮಾನ್ಯ ನಂಬಿಕೆಯೇನು?
◻ ಅಮರ ಆತ್ಮದ ಸಿದ್ಧಾಂತವು ಪ್ರಾಚೀನ ಬಬಿಲೋನಿನಲ್ಲಿ ಜನ್ಮತಾಳಿತೆಂದು ಇತಿಹಾಸ ಹಾಗೂ ಬೈಬಲ್ ಹೇಗೆ ಸೂಚಿಸುತ್ತವೆ?
◻ ಬಬಿಲೋನಿನ ನಂಬಿಕೆಯಾಗಿರುವ ಅಮರ ಆತ್ಮದಿಂದ ಮೂಡಲ ಧರ್ಮಗಳು ಹೇಗೆ ಪ್ರಭಾವಿಸಲ್ಪಟ್ಟಿವೆ?
◻ ಅಮರ ಆತ್ಮದ ಬೋಧನೆಯು, ಯೆಹೂದಿಮತ, ಕ್ರೈಸ್ತಪ್ರಪಂಚ ಮತ್ತು ಇಸ್ಲಾಮ್ ಧರ್ಮಗಳೊಳಗೆ ಹೇಗೆ ಪ್ರವೇಶಿಸಿತು?
[ಪುಟ 12,13 ರಲ್ಲಿರುವಚಿತ್ರ]
ಮಹಾ ಅಲೆಕ್ಸಾಂಡರನ ವಿಜಯವು, ಗ್ರೀಕ್ ಮತ್ತು ಯೆಹೂದಿ ಸಂಸ್ಕೃತಿಗಳ ಬೆರಕೆಗೆ ನಡೆಸಿತು
ಕ್ರೈಸ್ತತ್ವದೊಂದಿಗೆ ಗ್ರೀಕ್ ತತ್ವಜ್ಞಾನವನ್ನು ಬೆರಸಲು ಆಗಸ್ಟೀನ್ ಪ್ರಯತ್ನಿಸಿದನು
[ಕೃಪೆ]
ಅಲೆಕ್ಸಾಂಡರ್: Musei Capitolini, Roma; ಆಗಸ್ಟೀನ್: ಮಹಾ ಪುರುಷರು ಮತ್ತು ಜನಪ್ರಿಯ ಸ್ತ್ರೀಯರು ಎಂಬ ಇಂಗ್ಲಿಷ್ ಪುಸ್ತಕದಿಂದ