ಕಲೀಜಿಯಂಟರು—ಬೈಬಲ್ ಅಧ್ಯಯನವು ಅವರನ್ನು ಭಿನ್ನರನ್ನಾಗಿ ಮಾಡಿತು
ನೀವು ಕಲೀಜಿಯಂಟರ ಬಗ್ಗೆ ಕೇಳಿಸಿಕೊಂಡಿದ್ದೀರೊ?
17ನೆಯ ಶತಮಾನದ ಈ ಚಿಕ್ಕ ಡಚ್ ಧಾರ್ಮಿಕ ಗುಂಪು, ಆ ಸಮಯದ ಸುಸ್ಥಾಪಿತ ಚರ್ಚುಗಳಿಂದ ಭಿನ್ನವಾಗಿತ್ತು. ಅದು ಹೇಗೆ, ಮತ್ತು ನಾವು ಅವರಿಂದ ಏನನ್ನು ಕಲಿತುಕೊಳ್ಳಬಲ್ಲೆವು? ಇದನ್ನು ಕಂಡುಹಿಡಿಯಲು ನಾವು ಗತಕಾಲಕ್ಕೆ ಪ್ರಯಾಣ ಬೆಳೆಸೋಣ.
ಯಾಕೋಬ್ಯೂಸ್ ಆರ್ಮಿನಿಯಸ್ (ಇಲ್ಲವೆ ಯಾಕೋಪ್ ಹಾರ್ಮೆನ್ಸನ್) ಆ್ಯಮ್ಸ್ಟರ್ಡ್ಯಾಮ್ ನಗರವನ್ನು 1587ರಲ್ಲಿ ತಲಪಿದನು. ಒಂದು ಕೆಲಸವನ್ನು ಕಂಡುಕೊಳ್ಳುವುದು ಅವನಿಗೆ ಕಷ್ಟಕರವಾಗಿರಲಿಲ್ಲ, ಏಕೆಂದರೆ ಅವನ ಅರ್ಹತೆಗಳ ಪಟ್ಟಿಯು ಬಹಳ ಪ್ರಭಾವಕಾರಿಯಾಗಿತ್ತು. 21ರ ಪ್ರಾಯದಲ್ಲಿ ಅವನು ಹಾಲೆಂಡ್ನ ಲೈಡನ್ ವಿಶ್ವವಿದ್ಯಾನಿಲಯದಿಂದ ಪದವಿಪ್ರಾಪ್ತಿಯನ್ನು ಹೊಂದಿದನು. ತರುವಾಯ ಪ್ರೊಟೆಸ್ಟಂಟ್ ಸುಧಾರಕ ಜಾನ್ ಕ್ಯಾಲ್ವಿನ್ನ ಉತ್ತರಾಧಿಕಾರಿಯಾದ ಟೇಯಾಡಾರ್ ಡ ಬೀಸನೊಂದಿಗೆ ದೇವತಾಶಾಸ್ತ್ರವನ್ನು ಅಭ್ಯಸಿಸುತ್ತಾ, ಅವನು ಸ್ವಿಟ್ಸ್ರ್ಲೆಂಡ್ನಲ್ಲಿ ಆರು ವರ್ಷಗಳನ್ನು ಕಳೆದನು. ಈ ಕಾರಣ ಆ್ಯಮ್ಸ್ಟರ್ಡ್ಯಾಮಿನ ಪ್ರೊಟೆಸ್ಟಂಟರು 27 ವರ್ಷ ಪ್ರಾಯದ ಆರ್ಮಿನಿಯಸನ್ನು ತಮ್ಮ ಪಾಸ್ಟರುಗಳಲ್ಲಿ ಒಬ್ಬನಾಗಿ ನೇಮಿಸಲು ನಿಸ್ಸಂದೇಹವಾಗಿಯೂ ಸಂತೋಷಿಸಿದರು! ಆದರೆ, ಕೆಲವೊಂದು ವರ್ಷಗಳ ತರುವಾಯ, ಚರ್ಚಿನ ಅನೇಕ ಸದಸ್ಯರು ತಮ್ಮ ಈ ಆಯ್ಕೆಗಾಗಿ ವಿಷಾದಿಸಿದರು. ಏಕೆ?
ಪೂರ್ವಾದೃಷ್ಟದ ವಿವಾದಾಂಶ
ಆರ್ಮಿನಿಯಸ್ ತಮ್ಮ ಪಾಸ್ಟರುಗಳಲ್ಲಿ ಒಬ್ಬನಾದ ಕೂಡಲೇ, ಪೂರ್ವಾದೃಷ್ಟ ಸಿದ್ಧಾಂತದ ವಿಷಯದಲ್ಲಿ ಆ್ಯಮ್ಸ್ಟರ್ಡ್ಯಾಮಿನ ಪ್ರೊಟೆಸ್ಟಂಟರಲ್ಲಿ ಕರ್ಷಣವು ಎದ್ದಿತು. ಇದು ಕ್ಯಾಲ್ವಿನ್ವಾದದ ಮೂಲಭೂತ ಸಿದ್ಧಾಂತವಾಗಿದ್ದರೂ, ಕೆಲವರಿಗೆ ರಕ್ಷಣೆಯನ್ನು ಮತ್ತು ಇನ್ನೂ ಕೆಲವರಿಗೆ ನರಕ ಯಾತನೆಯನ್ನು ಪ್ರಾರಂಭದಲ್ಲೇ ನಿರ್ಧರಿಸಿದ್ದ ದೇವರು, ಕ್ರೂರಿಯೂ ಅನ್ಯಾಯಗಾರನೂ ಆಗಿದ್ದನೆಂದು ಚರ್ಚಿನ ಕೆಲವು ಸದಸ್ಯರು ಭಾವಿಸಿದರು. ಬೀಸನ ವಿದ್ಯಾರ್ಥಿಯಾಗಿದ್ದ ಆರ್ಮಿನಿಯಸ್, ಭಿನ್ನಮತೀಯರನ್ನು ಸರಿಪಡಿಸುವನೆಂದು ಕ್ಯಾಲ್ವಿನ್ವಾದಿಗಳು ನಿರೀಕ್ಷಿಸಿದರು. ಕ್ಯಾಲ್ವಿನ್ವಾದಿಗಳನ್ನು ನಿಬ್ಬೆರಗಾಗಿಸುತ್ತಾ, ಆರ್ಮಿನಿಯಸ್ ಭಿನ್ನಮತೀಯರ ಪಕ್ಷವಹಿಸಿದನು. 1593ರಲ್ಲಿ ಈ ಕಲಹವು ಎಷ್ಟು ಬೆಳೆದಿತ್ತೆಂದರೆ, ಅದು ಆ ನಗರದ ಪ್ರೊಟೆಸ್ಟಂಟರನ್ನು ಎರಡು ಗುಂಪುಗಳಾಗಿ ವಿಂಗಡಿಸಿತು. ಆ ಸಿದ್ಧಾಂತವನ್ನು ಬೆಂಬಲಿಸಿದವರು ಒಂದು ಗುಂಪಿನವರಾದರೆ, ಅದನ್ನು ತಿರಸ್ಕರಿಸಿದ ಮಿತವಾದಿಗಳು ಮತ್ತೊಂದು ಗುಂಪಿನವರಾಗಿದ್ದರು.
ಕೆಲವೇ ವರ್ಷಗಳೊಳಗೆ, ಈ ಸ್ಥಳೀಯ ಕಲಹವು ರಾಷ್ಟ್ರವ್ಯಾಪಕ ಪ್ರೊಟೆಸ್ಟಂಟ್ ಭೇದಭಾವವಾಗಿ ಪರಿಣಮಿಸಿತು. ಕೊನೆಯದಾಗಿ, ನವೆಂಬರ್ 1618ರಲ್ಲಿ ಇದನ್ನು ಇತ್ಯರ್ಥಮಾಡಲಾಯಿತು. ಸೇನೆ ಮತ್ತು ಸಾರ್ವಜನಿಕ ಅಭಿಪ್ರಾಯದ ಬೆಂಬಲಪಡೆದಿದ್ದ ಕ್ಯಾಲ್ವಿನ್ವಾದಿಗಳು, ಭಿನ್ನಾಭಿಪ್ರಾಯಿಗಳನ್ನು (ಆಗ ರೆಮನ್ಸ್ಟ್ರಾಂಟರೆಂದು ಕರೆಯಲ್ಪಟ್ಟರುa) ಪ್ರೊಟೆಸ್ಟಂಟ್ ಸಿನಡ್ ಆಫ್ ಡಾಡ್ರೆಕ್ಟ್ ಎಂಬ ರಾಷ್ಟ್ರೀಯ ಸಭೆಗೆ ಆಹ್ವಾನಿಸಿದರು. ಕೂಟದ ಕೊನೆಯಲ್ಲಿ, ಎಲ್ಲ ರೆಮನ್ಸ್ಟ್ರಾಂಟ್ ಧರ್ಮಪಾಲಕರಿಗೆ ಒಂದು ಆಯ್ಕೆಯು ನೀಡಲ್ಪಟ್ಟಿತು: ಇನ್ನೆಂದೂ ಸಾರುವುದಿಲ್ಲವೆಂದು ಬರೆದುಕೊಡಿ, ಇಲ್ಲವೆ ದೇಶವನ್ನು ಬಿಟ್ಟುಹೋಗಿ. ಹೆಚ್ಚಿನವರು ಪರದೇಶವಾಸವನ್ನು ಆಯ್ದುಕೊಂಡರು. ರೆಮನ್ಸ್ಟ್ರಾಂಟ್ ಧರ್ಮಪಾಲಕರು ಬಿಟ್ಟುಹೋಗಿದ್ದ ಪಾಸ್ಟರ್ ವೃತ್ತಿಯನ್ನು ಕಟ್ಟಾ ಕ್ಯಾಲ್ವಿನ್ವಾದಿಗಳು ವಹಿಸಿಕೊಂಡರು. ಕ್ಯಾಲ್ವಿನ್ವಾದವು ವಿಜಯಿಯಾಗಿತ್ತು ಇಲ್ಲವೆ ಹಾಗೆಂದು ಸಿನಡ್ ಭಾವಿಸಿತು.
ಕಲೀಜಿಯಂಟರ ಜನನ ಹಾಗೂ ಬೆಳವಣಿಗೆ
ಎಲ್ಲೆಡೆಯೂ ಸಂಭವಿಸಿದಂತೆ, ಲೈಡನ್ನ ಬಳಿ ವಾರ್ಮಾಂಟ್ ಹಳ್ಳಿಯಲ್ಲಿದ್ದ ರೆಮನ್ಸ್ಟ್ರಾಂಟ್ ಸಭೆಯು ತನ್ನ ಪಾಸ್ಟರನನ್ನು ಕಳೆದುಕೊಂಡಿತು. ಆದರೆ ಬೇರೆ ಸ್ಥಳಗಳಿಗೆ ಅಸದೃಶವಾಗಿ, ಆ ಸಭೆಯು ಸಿನಡ್ ನೇಮಿಸಿದ ಪಾಸ್ಟರನನ್ನು ಸ್ವೀಕರಿಸಲಿಲ್ಲ. ಅಲ್ಲದೆ 1620ರಲ್ಲಿ ಒಬ್ಬ ರೆಮನ್ಸ್ಟ್ರಾಂಟ್ ಧರ್ಮಪಾಲಕನು ವಾರ್ಮಾಂಟ್ನಲ್ಲಿದ್ದ ಸಭೆಯನ್ನು ನೋಡಿಕೊಳ್ಳಲು ತನ್ನ ಜೀವವನ್ನು ಗಂಡಾಂತರಕ್ಕೀಡುಮಾಡುತ್ತಾ ಹಿಂದಿರುಗಿದಾಗ, ಅವನನ್ನೂ ಕೆಲವು ಸಭಾ ಸದಸ್ಯರು ತಿರಸ್ಕರಿಸಿದರು. ಈ ಸದಸ್ಯರು ಯಾವುದೇ ಪಾದ್ರಿಯ ಸಹಾಯವಿಲ್ಲದೆ ರಹಸ್ಯವಾಗಿ ತಮ್ಮ ಧಾರ್ಮಿಕ ಕೂಟಗಳನ್ನು ನಡೆಸುತ್ತಿದ್ದರು. ತರುವಾಯ, ಈ ಕೂಟಗಳು ಕಾಲೇಜುಗಳೆಂದು ಕರೆಯಲ್ಪಟ್ಟವು ಮತ್ತು ಹಾಜರಾಗುತ್ತಿದ್ದವರು ಕಲೀಜಿಯಂಟರೆಂದು ಕರೆಯಲ್ಪಟ್ಟರು.
ಕಲೀಜಿಯಂಟರ ಗುಂಪು ಒಂದು ತತ್ವದ ಕಾರಣ ಉದ್ಭವಿಸದೆ ಸನ್ನಿವೇಶದ ಕಾರಣ ಉದ್ಭವಿಸಿದರೂ, ಆ ಸನ್ನಿವೇಶವು ಬೇಗನೆ ಬದಲಾಯಿತು. ವೈದಿಕ ಮೇಲ್ವಿಚಾರಣೆಯಿಲ್ಲದೆ ಕೂಡಿಬರುವುದರಿಂದ, ಈ ಗುಂಪು ಸುಸ್ಥಾಪಿತ ಚರ್ಚುಗಳಿಗಿಂತಲೂ ಬೈಬಲಿಗೆ ಮತ್ತು ಆದಿ ಕ್ರೈಸ್ತರ ಮಾರ್ಗಕ್ರಮಕ್ಕೆ ಹೆಚ್ಚು ನಿಕಟವಾಗಿ ಅನುವರ್ತಿಸುತ್ತಿತ್ತೆಂದು ಸಭಾ ಸದಸ್ಯನಾದ ಕೈಸ್ಬರ್ಟ್ ವಾನ್ ಡರ್ ಕೋಡ ವಾದಿಸಿದನು. ವೈದಿಕ ವರ್ಗವು, ಒಂದು ಕಸಬನ್ನು ಕಲಿತುಕೊಳ್ಳಲು ಸಿದ್ಧರಾಗಿರದ ಪುರುಷರಿಗಾಗಿ ಕೆಲಸಗಳನ್ನು ಸೃಷ್ಟಿಸುವ ನೆಪದಲ್ಲಿ, ಅಪೊಸ್ತಲರ ಮರಣದ ನಂತರ ಕಂಡುಹಿಡಿಯಲ್ಪಟ್ಟಿತೆಂದು ಅವನು ಹೇಳಿದನು.
ವಾನ್ ಡರ್ ಕೋಡ ಮತ್ತು ಏಕಾಭಿಪ್ರಾಯವುಳ್ಳ ಸದಸ್ಯರು 1621ರಲ್ಲಿ ತಮ್ಮ ಕೂಟಗಳನ್ನು ನಡೆಸಲು ಪಕ್ಕದ ಹಳ್ಳಿಯಾದ ರೈನ್ಸ್ಬರ್ಕ್ಗೆ ಸ್ಥಳಾಂತರಿಸಿದರು.b ಕೆಲವು ವರ್ಷಗಳ ತರುವಾಯ, ಧಾರ್ಮಿಕ ಹಿಂಸೆಯನ್ನು ಸಹಿಷ್ಣುತೆಯು ಸ್ಥಾನಪಲ್ಲಟಗೊಳಿಸಿದಾಗ, ಕಲೀಜಿಯಂಟರ ಕೂಟಗಳ ಸತ್ಕೀರ್ತಿಯು ದೇಶದ ಎಲ್ಲೆಡೆಯೂ ಹಬ್ಬಿ, ಇತಿಹಾಸಗಾರ ಸೆಕ್ಫ್ರೀಟ್ ಸಿಲ್ವರ್ಬರ್ಕ್ ಹೇಳಿದಂತೆ, “ವಿಭಿನ್ನ ಬಣ್ಣದ ಹಕ್ಕಿಗಳನ್ನು” ಆಕರ್ಷಿಸಿತು. ಅವರಲ್ಲಿ ರೆಮನ್ಸ್ಟ್ರಾಂಟರು, ಮೆನೊನೈಟರು, ಸಸಿನಿಯನರು, ಮತ್ತು ದೇವತಾಶಾಸ್ತ್ರಜ್ಞರೂ ಇದ್ದರು. ಕೆಲವರು ರೈತರಾಗಿದ್ದರು. ಇತರರು ಕವಿಗಳು, ಮುದ್ರಣಕಾರರು, ವೈದ್ಯರು, ಮತ್ತು ವೃತ್ತಿಪರರಾಗಿದ್ದರು. ತತ್ವಜ್ಞಾನಿ ಸ್ಪಿನೋಸ (ಬೆನೆಡಿಕ್ಟಸ್ ಡಿ ಸ್ಪಿನೋಸ) ಮತ್ತು ಶಿಕ್ಷಕ ಯೋಹಾನ್ ಆಮಾಸ್ ಕಮಿನಿಯಸ್ (ಅಥವಾ ಯಾನ್ ಕಾಮೆನ್ಸ್ಕೀ) ಮತ್ತು ಪ್ರಸಿದ್ಧ ಬಣ್ಣಗಾರ ರೆಮ್ಬ್ರಾಂಟ್ ವಾನ್ ರೈನ್ ಈ ಚಳುವಳಿಗೆ ಸಮ್ಮತಿಸೂಚಿಸಿದರು. ಈ ದೈವಭಕ್ತ ಜನರು ತಮ್ಮೊಂದಿಗೆ ತಂದ ಬೇರೆ ಬೇರೆ ವಿಚಾರಗಳು, ಕಲೀಜಿಯಂಟ್ ನಂಬಿಕೆಯ ಬೆಳವಣಿಗೆಯನ್ನು ಪ್ರಭಾವಿಸಿದವು.
ಈ ಸಕ್ರಿಯ ಗುಂಪು 1640ರ ತರುವಾಯ ತ್ವರಿತಗತಿಯಲ್ಲಿ ಬೆಳೆಯಿತು. ರಾಟರ್ಡ್ಯಾಮ್, ಆ್ಯಮ್ಸ್ಟರ್ಡ್ಯಾಮ್, ಲೇವಾರ್ಡನ್, ಮತ್ತು ಇತರ ನಗರಗಳಲ್ಲಿ ಕಾಲೇಜುಗಳು ವಿಕಸಿಸಿಕೊಂಡವು. ಇತಿಹಾಸದ ಪ್ರೊಫೆಸರ್ ಆ್ಯಂಡ್ರೂ ಸಿ. ಫಿಕ್ಸ್ ಗಮನಿಸುವುದೇನೆಂದರೆ, 1650 ಮತ್ತು 1700ರ ನಡುವೆ, “ಕಲೀಜಿಯಂಟ್ ಗುಂಪು . . . ಹದಿನೇಳನೆಯ ಶತಮಾನದ ಹಾಲೆಂಡ್ನ ಅತ್ಯಂತ ಪ್ರಮುಖ ಮತ್ತು ಪ್ರಭಾವಕಾರಿ ಧಾರ್ಮಿಕ ಶಕ್ತಿಗಳಲ್ಲಿ ಒಂದಾಗಿ ಬೆಳೆಯಿತು.”
ಕಲೀಜಿಯಂಟರ ನಂಬಿಕೆಗಳು
ಗ್ರಹಣಶಕ್ತಿ, ತಾಳ್ಮೆ, ಮತ್ತು ಮಾತಿನ ಸ್ವಾತಂತ್ರ್ಯ, ಇವು ಕಲೀಜಿಯಂಟ್ ಚಳುವಳಿಯ ವಿಶಿಷ್ಟ ಗುಣಗಳಾಗಿದ್ದ ಕಾರಣ, ಒಬ್ಬೊಬ್ಬ ಕಲೀಜಿಯಂಟರು ವಿಭಿನ್ನ ನಂಬಿಕೆಗಳನ್ನು ನಂಬಲು ಸ್ವತಂತ್ರರಾಗಿದ್ದರು. ಹಾಗಿದ್ದರೂ, ಕೆಲವೊಂದು ಸಾಮಾನ್ಯ ನಂಬಿಕೆಗಳಲ್ಲಿ ಅವರು ಒಂದಾಗಿ ಸೇರಿಸಲ್ಪಟ್ಟಿದ್ದರು. ಉದಾಹರಣೆಗೆ, ಎಲ್ಲ ಕಲೀಜಿಯಂಟರು ವೈಯಕ್ತಿಕ ಬೈಬಲ್ ಅಧ್ಯಯನದ ಮಹತ್ವವನ್ನು ಗಣ್ಯಮಾಡಿದರು. ಪ್ರತಿಯೊಬ್ಬ ಸದಸ್ಯನು “ಮತ್ತೊಬ್ಬನಿಂದ ದೇವರ ಕುರಿತು ತಿಳಿದುಕೊಳ್ಳದೆ, ಸ್ವತಃ ತನಿಖೆಮಾಡಬೇಕು” ಎಂದು ಒಬ್ಬ ಕಲೀಜಿಯಂಟ್ ಬರೆದನು. ಅವರು ಹಾಗೆಯೇ ಮಾಡಿದರು. 19ನೆಯ ಶತಮಾನದ ಚರ್ಚ್ ಇತಿಹಾಸಗಾರ ಯಾಕೋಬ್ಯೂಸ್ ವಾನ್ ಸ್ಲೇಗನುಸಾರ, ಆ ಸಮಯದ ಬೇರೆ ಯಾವುದೇ ಧಾರ್ಮಿಕ ಗುಂಪುಗಳಿಗಿಂತಲೂ ಕಲೀಜಿಯಂಟರಲ್ಲಿ ಬೈಬಲ್ ಜ್ಞಾನವು ಹೆಚ್ಚಾಗಿತ್ತು. ಬೈಬಲನ್ನು ಕೌಶಲಪೂರ್ಣವಾಗಿ ಬಳಸುವ ಅವರ ಸಾಮರ್ಥ್ಯಕ್ಕಾಗಿ ವಿರೋಧಿಗಳು ಸಹ ಕಲೀಜಿಯಂಟರನ್ನು ಶ್ಲಾಘಿಸಿದರು.
ಕಲೀಜಿಯಂಟರು ಬೈಬಲನ್ನು ಎಷ್ಟು ಹೆಚ್ಚಾಗಿ ಅಭ್ಯಾಸಿಸಿದರೊ ಅಷ್ಟು ಹೆಚ್ಚು, ಸುಸ್ಥಾಪಿತ ಚರ್ಚುಗಳ ನಂಬಿಕೆಗಳಿಗಿಂತ ಭಿನ್ನವಾದ ನಂಬಿಕೆಗಳನ್ನು ವಿಕಸಿಸಿಕೊಂಡರು. 17ನೆಯ ಶತಮಾನದಿಂದ 20ನೆಯ ಶತಮಾನದ ವರೆಗಿನ ಗ್ರಂಥಮೂಲಗಳು, ಅವರ ನಂಬಿಕೆಗಳಲ್ಲಿ ಕೆಲವನ್ನು ವರ್ಣಿಸುತ್ತವೆ:
ಆದಿ ಚರ್ಚು. ಸಮ್ರಾಟ ಕಾನ್ಸ್ಟಂಟೀನ್ನ ಸಮಯದಲ್ಲಿ ಆದಿಯ ಚರ್ಚು ರಾಜಕೀಯ ವಿಷಯಗಳಲ್ಲಿ ಒಳಗೊಂಡಾಗ, ಅದು ಕ್ರಿಸ್ತನೊಂದಿಗಿನ ತನ್ನ ಆತ್ಮಿಕ ಒಡಂಬಡಿಕೆಯನ್ನು ಉಲ್ಲಂಘಿಸಿ, ಪವಿತ್ರಾತ್ಮನ ಪ್ರೇರಣೆಯನ್ನು ಕಳೆದುಕೊಂಡಿತೆಂದು, ಕಲೀಜಿಯಂಟನೂ ದೇವತಾಶಾಸ್ತ್ರಜ್ಞನೂ ಆಗಿದ್ದ ಆ್ಯಡಮ್ ಬಾರೇಲ್ 1644ರಲ್ಲಿ ಬರೆದನು. ಈ ಕಾರಣ, ಸುಳ್ಳು ಬೋಧನೆಗಳು ಹೆಚ್ಚಾಗಿ, ತನ್ನ ದಿನದ ವರೆಗೂ ಮುಂದುವರಿದವೆಂದು ಅವನು ಕೂಡಿಸಿ ಹೇಳಿದನು.
ಸುಧಾರಣೆ. ಲೂಥರ್, ಕ್ಯಾಲ್ವಿನ್, ಮತ್ತು ಇತರರಿಂದ ನಡೆಸಲ್ಪಟ್ಟ 16ನೆಯ ಶತಮಾನದ ಸುಧಾರಣೆಯು, ಚರ್ಚನ್ನು ಸುಧಾರಿಸುವುದರಲ್ಲಿ ಹೆಚ್ಚು ಪ್ರಭಾವಕಾರಿಯಾಗಿರಲಿಲ್ಲ. ಬದಲಿಗೆ, ಪ್ರಧಾನ ಕಲೀಜಿಯಂಟ್ ಮತ್ತು ವೈದ್ಯನಾದ ಕೇಲೇನಸ್ ಆಬ್ರಾಹಾಮ್ಸಸೋನ್ (1622-1706) ಎಂಬವನಿಗನುಸಾರ, ಸುಧಾರಣೆಯು ಜಗಳ ಹಾಗೂ ದ್ವೇಷದ ಕಾರಣವಾದುದರಿಂದ, ಅದು ಧಾರ್ಮಿಕ ಸನ್ನಿವೇಶವನ್ನು ಇನ್ನೂ ಕೆಡಿಸಿತು. ನಿಜವಾದ ಸುಧಾರಣೆಯು ಹೃದಯವನ್ನು ಬದಲಾಯಿಸತಕ್ಕದ್ದು. ಆದರೆ ಸುಧಾರಣೆಯು ಇದನ್ನು ಮಾಡುವುದರಲ್ಲಿ ವಿಫಲಗೊಂಡಿತ್ತು.
ಚರ್ಚು ಮತ್ತು ವೈದಿಕರು. ಸುಸ್ಥಾಪಿತ ಚರ್ಚುಗಳು ಭ್ರಷ್ಟವೂ, ಲೌಕಿಕವೂ, ಮತ್ತು ದೈವಿಕ ಅಧಿಕಾರವಿಲ್ಲದ್ದೂ ಆಗಿದ್ದವು. ಧರ್ಮವನ್ನು ಗಂಭೀರವಾಗಿ ಪರಿಗಣಿಸುವವನೊಬ್ಬನು, ತಾನು ಸೇರಿಕೊಂಡಿರುವ ಚರ್ಚಿನ ಪಾಪಗಳಲ್ಲಿ ಭಾಗಿಯಾಗದಂತೆ ಅದನ್ನು ಬಿಟ್ಟುಬರುವುದಕ್ಕಿಂತ ಉತ್ತಮವಾದ ಬೇರೆ ಮಾರ್ಗ ಇರಲಿಲ್ಲ. ಕಲೀಜಿಯಂಟರ ಪ್ರಕಾರ, ವೈದಿಕ ವೃತ್ತಿಯು ಶಾಸ್ತ್ರಗಳಿಗೆ ವಿರುದ್ಧವಾಗಿದ್ದು, “ಕ್ರೈಸ್ತ ಸಭೆಯ ಆತ್ಮಿಕ ಕ್ಷೇಮಕ್ಕೆ ಹಾನಿಕರವಾಗಿತ್ತು.”
ರಾಜ್ಯ ಮತ್ತು ಪ್ರಮೋದವನ. ಆ್ಯಮಸ್ಟರ್ಡ್ಯಾಮ್ ಕಾಲೇಜಿನ ಸ್ಥಾಪಕರಲ್ಲಿ ಒಬ್ಬರಾದ ಡ್ಯಾನೀಯಲ್ ಡ ಬ್ರೇನ್ (1594-1664) ಬರೆದದ್ದೇನೆಂದರೆ, ಕ್ರಿಸ್ತನ ರಾಜ್ಯವು ಒಬ್ಬನ ಹೃದಯದಲ್ಲಿ ನೆಲೆಸಿರುವ ಆತ್ಮಿಕ ರಾಜ್ಯವಲ್ಲ. ರಾಟರ್ಡ್ಯಾಮಿನಲ್ಲಿ ಒಬ್ಬ ಕಲೀಜಿಯಂಟ್ ಆಗಿದ್ದ ಶಿಕ್ಷಕ ಜೇಕಬ್ ಆಸ್ಟನ್ಸ್ ಹೇಳಿದ್ದೇನೆಂದರೆ, “ಮೂಲಪಿತೃಗಳು ಭೌಮಿಕ ವಾಗ್ದಾನಗಳಿಗೆ ಎದುರುನೋಡಿದರು.” ತದ್ರೀತಿಯಲ್ಲಿ, ಭೂಮಿಯು ಒಂದು ಪ್ರಮೋದವನವಾಗಿ ರೂಪಾಂತರಿಸಲ್ಪಡುವ ಸಮಯಕ್ಕಾಗಿ ಕಲೀಜಿಯಂಟರು ಕಾಯುತ್ತಿದ್ದರು.
ತ್ರಯೈಕ್ಯ. ಸಸಿನಿಯನ್ ನಂಬಿಕೆಗಳಿಂದ ಪ್ರಭಾವಿತರಾದ ಕೆಲವು ಪ್ರಮುಖ ಕಲೀಜಿಯಂಟರು, ತ್ರಯೈಕ್ಯ ಸಿದ್ಧಾಂತವನ್ನು ತಿರಸ್ಕರಿಸಿದರು.c ಉದಾಹರಣೆಗೆ ತ್ರಯೈಕ್ಯದಂತಹ ವಿವೇಚನೆಗೆ ವಿರುದ್ಧವಾಗಿರುವ ಯಾವುದೇ ಸಿದ್ಧಾಂತವು “ಅಸಾಧ್ಯವೂ ಸುಳ್ಳಾದದ್ದೂ” ಆಗಿದೆಯೆಂದು ಡ್ಯಾನಿಯಲ್ ಸ್ವಿಕರ್ (1621-78) ಬರೆದನು. 1694ರಲ್ಲಿ ಕಲೀಜಿಯಂಟ್ ರೇನೀರ್ ರೋಲೆವೊ ಎಂಬವನಿಂದ ಭಾಷಾಂತರಿಸಲ್ಪಟ್ಟ ಬೈಬಲ್ ಅನುವಾದವು ಪ್ರಕಟವಾಯಿತು. “ಮತ್ತು ವಾಕ್ಯವು ದೇವರಾಗಿತ್ತು” ಎಂಬ ಸಾಂಪ್ರದಾಯಿಕ ತರ್ಜುಮೆಯ ಬದಲು, ಅದು ಯೋಹಾನ 1:1ರ ಕೊನೆಯ ಭಾಗವನ್ನು ಹೀಗೆ ಭಾಷಾಂತರಿಸಿತು: “ಮತ್ತು ವಾಕ್ಯವು ಒಬ್ಬ ದೇವನಾಗಿತ್ತು.”d
ಸಾಪ್ತಾಹಿಕ ಕೂಟಗಳು
ನಂಬಿಕೆಗಳ ವಿಷಯದಲ್ಲಿ ಎಲ್ಲ ಕಲೀಜಿಯಂಟರು ಸಹಮತದಲ್ಲಿ ಇರಲಿಲ್ಲವಾದರೂ, ವಿಭಿನ್ನ ನಗರಗಳಲ್ಲಿರುವ ಅವರ ಕಾಲೇಜುಗಳು ಒಂದೇ ರೀತಿಯಲ್ಲಿ ಕಾರ್ಯಮಾಡಿದವು. ಕಲೀಜಿಯಂಟ್ ಚಳುವಳಿಯ ಆದಿಯ ದಿನಗಳಲ್ಲಿ, ಕೂಟಗಳನ್ನು ಮುಂಚಿತವಾಗಿ ತಯಾರಿಸಲೇ ಇಲ್ಲವೆಂದು ಇತಿಹಾಸಕಾರ ವಾನ್ ಸ್ಲೇ ವರದಿಸುತ್ತಾರೆ. “ಪ್ರವಾದಿಸುವ” ಅಗತ್ಯದ ವಿಷಯದಲ್ಲಿ ಅಪೊಸ್ತಲ ಪೌಲನ ಮಾತುಗಳ ಆಧಾರದ ಮೇಲೆ, ಎಲ್ಲ ಪುರುಷ ಸದಸ್ಯರು ಸಭೆಯನ್ನು ಮುಕ್ತವಾಗಿ ಸಂಬೋಧಿಸಬಹುದಿತ್ತೆಂದು ಕಲೀಜಿಯಂಟರಿಗೆ ಅನಿಸಿತು. (1 ಕೊರಿಂಥ 14:1, 3, 26) ಫಲಸ್ವರೂಪವಾಗಿ, ಕೂಟಗಳು ರಾತ್ರಿ ತುಂಬ ಹೊತ್ತಿನ ವರೆಗೆ ನಡೆಯುತ್ತಿದ್ದವು ಮತ್ತು ಹಾಜರಿದ್ದ ಕೆಲವರು “ನಿದ್ರಿಸಿ” ಬಿಡುತ್ತಿದ್ದರು.
ತರುವಾಯ, ಕೂಟಗಳು ಹೆಚ್ಚು ಕ್ರಮಬದ್ಧವಾದವು. ಕಲೀಜಿಯಂಟರು ರವಿವಾರಗಳಂದು ಮಾತ್ರವಲ್ಲ ವಾರದ ಬೇರೆ ದಿನಗಳ ಸಾಯಂಕಾಲಗಳಲ್ಲಿಯೂ ಕೂಡಿಬರುತ್ತಿದ್ದರು. ಭಾಷಣಕಾರನೂ ಸಭೆಯೂ ಆ ವರ್ಷದ ಎಲ್ಲ ಕೂಟಗಳಿಗಾಗಿ ಮುಂಚಿತವಾಗಿ ತಯಾರಿಸಸಾಧ್ಯವಾಗುವಂತೆ, ಒಂದು ಮುದ್ರಿತ ಕಾರ್ಯಕ್ರಮವು ಪರಿಗಣಿಸಲ್ಪಡಬೇಕಾದ ಬೈಬಲ್ ವಚನಗಳನ್ನು ಮತ್ತು ಭಾಷಣಕಾರನ ಹೆಸರನ್ನೂ ಪಟ್ಟಿಮಾಡುತ್ತಿತ್ತು. ಕೂಟವು ಸಂಗೀತ ಹಾಗೂ ಪ್ರಾರ್ಥನೆಯೊಂದಿಗೆ ಆರಂಭವಾದ ಮೇಲೆ, ಒಬ್ಬ ಭಾಷಣಕಾರನು ಆ ಬೈಬಲ್ ವಚನಗಳನ್ನು ವಿವರಿಸಿದನು. ಆ ಭಾಷಣವು ಮುಗಿದ ನಂತರ, ಚರ್ಚಿಸಲ್ಪಟ್ಟ ವಿಷಯದ ಕುರಿತು ಅಲ್ಲಿದ್ದ ಪುರುಷರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವಂತೆ ಅವನು ಕೇಳಿಕೊಂಡನು. ತರುವಾಯ, ಅವೇ ವಚನಗಳ ಅನ್ವಯವನ್ನು ಎರಡನೆಯ ಭಾಷಣಕಾರನು ತೋರಿಸಿಕೊಟ್ಟನು. ಪ್ರಾರ್ಥನೆ ಮತ್ತು ಸಂಗೀತವು ಕೂಟವನ್ನು ಮುಕ್ತಾಯಗೊಳಿಸಿದವು.
ಫ್ರೀಸ್ಲೆಂಡ್ ಕ್ಷೇತ್ರದ ಹಾರ್ಲಿಂಗನ್ ಪಟ್ಟಣದಲ್ಲಿದ್ದ ಕಲೀಜಿಯಂಟರು, ತಮ್ಮ ಕೂಟಗಳನ್ನು ವೇಳಾಪಟ್ಟಿಗನುಸಾರ ನಡೆಸಲು ಉತ್ತಮವಾದೊಂದು ವಿಧಾನವನ್ನು ಅನುಸರಿಸಿದರು. ಭಾಷಣಕಾರನು ತನ್ನ ನಿಗದಿತ ಸಮಯವನ್ನು ಮೀರಿ ಮಾತಾಡುವುದಾದರೆ, ಅವನು ಒಂದಿಷ್ಟು ಮೊತ್ತವನ್ನು ದಂಡವಾಗಿ ತೆರಬೇಕಾಗಿತ್ತು.
ರಾಷ್ಟ್ರೀಯ ಸಮ್ಮೇಳನಗಳು
ದೊಡ್ಡ ಒಕ್ಕೂಟಗಳ ಅಗತ್ಯವನ್ನೂ ಕಲೀಜಿಯಂಟರು ಮನಗಂಡರು. ಆದುದರಿಂದ, 1640ರಲ್ಲಿ ಆರಂಭಿಸುತ್ತಾ, ದೇಶದಾದ್ಯಂತವಿದ್ದ ಎಲ್ಲ ಕಲೀಜಿಯಂಟರು ವರ್ಷಕ್ಕೆ ಎರಡು ಬಾರಿ (ವಸಂತಕಾಲದಲ್ಲಿ ಮತ್ತು ಬೇಸಗೆಕಾಲದಲ್ಲಿ) ರೈನ್ಸ್ಬರ್ಕ್ಗೆ ಪ್ರಯಾಣಿಸಿದರು. ಈ ಒಕ್ಕೂಟಗಳಿಂದಾಗಿ, ಅವರು “ಎಲ್ಲಾ ಕಡೆಗಳಿಂದಲೂ ಬಂದ ತಮ್ಮ ಸಹೋದರರ ವಿಚಾರಗಳು, ಅನಿಸಿಕೆಗಳು, ನಂಬಿಕೆಗಳು, ಮತ್ತು ಚಟುವಟಿಕೆಗಳೊಂದಿಗೆ ಚಿರಪರಿಚಿತ”ರಾಗುವಂತೆ ಮಾಡಿತೆಂದು ಇತಿಹಾಸಕಾರ ಫಿಕ್ಸ್ ಬರೆಯುತ್ತಾರೆ.
ಸಂದರ್ಶಿಸುತ್ತಿದ್ದ ಕೆಲವು ಕಲೀಜಿಯಂಟರು ಹಳ್ಳಿಗರಿಂದ ರೂಮುಗಳನ್ನು ಬಾಡಿಗೆಗೆ ಪಡೆದುಕೊಂಡರಾದರೂ, ಇತರರು ಕಲೀಜಿಯಂಟರ ಸ್ವತ್ತಾಗಿದ್ದ 30 ಕೋಣೆಗಳ ಒಂದು ದೊಡ್ಡ ಮನೆಯಲ್ಲಿ ಇಲ್ಲವೆ ಕ್ರೋಟೆ ಹೋಸ್ನಲ್ಲಿ ತಂಗಿದರು. ಅಲ್ಲಿ 60ರಿಂದ 70 ಜನರಿಗೆ ಊಟವನ್ನು ಬಡಿಸಲಾಗುತ್ತಿತ್ತು. ಊಟದ ನಂತರ, ಸಂದರ್ಶಕರು ಆ ಭವನದ ದೊಡ್ಡ ತೋಟದಲ್ಲಿ ನಡೆದಾಡಿ ‘ದೇವರ ಕೆಲಸಗಳಲ್ಲಿ, ಸದ್ದಿಲ್ಲದ ಸಂಭಾಷಣೆಯಲ್ಲಿ, ಇಲ್ಲವೆ ಧ್ಯಾನದಲ್ಲಿ’ ಆನಂದಿಸಬಹುದಿತ್ತು.
ದೀಕ್ಷಾಸ್ನಾನವು ಅಗತ್ಯವೆಂದು ಎಲ್ಲ ಕಲೀಜಿಯಂಟರಿಗೆ ಅನಿಸದಿದ್ದರೂ, ಅನೇಕರಿಗೆ ಅದು ಅಗತ್ಯವೆಂದು ಅನಿಸಿತು. ಹೀಗೆ ದೀಕ್ಷಾಸ್ನಾನವು ದೊಡ್ಡ ಒಕ್ಕೂಟಗಳ ಒಂದು ವೈಶಿಷ್ಟ್ಯವಾಯಿತು. ಆ ಸಮಾರಂಭವು ಸಾಮಾನ್ಯವಾಗಿ ಶನಿವಾರ ಬೆಳಗ್ಗೆ ನಡೆಯಿತೆಂದು ಇತಿಹಾಸಕಾರ ವಾನ್ ಸ್ಲೇ ಹೇಳುತ್ತಾರೆ. ಸಂಗೀತ ಮತ್ತು ಪ್ರಾರ್ಥನೆಯ ತರುವಾಯ, ದೀಕ್ಷಾಸ್ನಾನದ ಅಗತ್ಯದ ಕುರಿತು ಒಂದು ಭಾಷಣವಿರುತ್ತಿತ್ತು. ದೀಕ್ಷಾಸ್ನಾನ ಪಡೆದುಕೊಳ್ಳಲು ಬಯಸುವ ವಯಸ್ಕರು, “ಯೇಸು ಕ್ರಿಸ್ತನು ಜೀವಂತ ದೇವರ ಪುತ್ರನೆಂದು ನಾನು ನಂಬುತ್ತೇನೆ” ಎಂಬಂತಹ ನಂಬಿಕೆಯ ಅರಿಕೆಯನ್ನು ಮಾಡುವಂತೆ ಭಾಷಣಕಾರನು ಆಮಂತ್ರಿಸುತ್ತಿದ್ದನು. ಪ್ರಾರ್ಥನೆಮಾಡಿ ಭಾಷಣವನ್ನು ಕೊನೆಗೊಳಿಸಿದ ತರುವಾಯ, ನೆರೆದಿರುವ ಎಲ್ಲರು ದೀಕ್ಷಾಸ್ನಾನದ ಕೊಳಕ್ಕೆ ಹೋಗುತ್ತಿದ್ದರು. ಅಲ್ಲಿ ದೀಕ್ಷಾಸ್ನಾನ ಪಡೆದುಕೊಳ್ಳಲು ಬಯಸುವ ಸ್ತ್ರೀಪುರುಷರು ನೀರಿನಲ್ಲಿ ಮೊಣಕಾಲೂರಿರುವ ಕಾರಣ, ನೀರು ಅವರ ಭುಜಗಳನ್ನು ಮುಟ್ಟುತ್ತಿತ್ತು. ತರುವಾಯ ದೀಕ್ಷಾಸ್ನಾನ ಮಾಡಿಸುವವನು ಹೊಸ ವಿಶ್ವಾಸಿಯ ತಲೆಯನ್ನು ಮುಂದಕ್ಕೆ ಮತ್ತು ನೀರಿನೊಳಗೆ ನಿಧಾನವಾಗಿ ತಳ್ಳಿದನು. ಸಮಾರಂಭದ ನಂತರ, ಎಲ್ಲರೂ ಮತ್ತೊಂದು ಭಾಷಣಕ್ಕಾಗಿ ತಮ್ಮ ಆಸನಗಳಿಗೆ ಹಿಂದಿರುಗುತ್ತಿದ್ದರು.
ಶನಿವಾರ ಮಧ್ಯಾಹ್ನ ಐದು ಗಂಟೆಗೆ, ಸಂಕ್ಷಿಪ್ತವಾದ ಬೈಬಲ್ ವಾಚನ, ಸಂಗೀತ ಹಾಗೂ ಪ್ರಾರ್ಥನೆಯೊಂದಿಗೆ ನಿಜವಾದ ಕೂಟವು ಆರಂಭವಾಗುತ್ತಿತ್ತು. ಒಬ್ಬ ಭಾಷಣಕಾರನು ಯಾವಾಗಲೂ ಉಪಸ್ಥಿತನಾಗಿದ್ದಾನೆ ಎಂಬುದನ್ನು ಖಚಿತಪಡಿಸಲು, ರಾಟರ್ಡ್ಯಾಮ್, ಲೈಡನ್, ಆ್ಯಮ್ಸ್ಟರ್ಡ್ಯಾಮ್, ಮತ್ತು ಉತ್ತರ ಹಾಲೆಂಡ್ನ ಸಭೆಗಳು ಪ್ರತಿ ಸಮ್ಮೇಳನಕ್ಕೆ ಭಾಷಣಕಾರರನ್ನು ಸರದಿಯಾಗಿ ಒದಗಿಸುತ್ತಿದ್ದವು. ಭಾನುವಾರ ಬೆಳಗ್ಗೆ ಕರ್ತನ ಸಂಧ್ಯಾಭೋಜನವನ್ನು ಆಚರಿಸಲಾಗುತ್ತಿತ್ತು. ಒಂದು ಭಾಷಣ, ಪ್ರಾರ್ಥನೆ, ಮತ್ತು ಸಂಗೀತದ ತರುವಾಯ, ಅಲ್ಲಿದ್ದ ಸ್ತ್ರೀಪುರುಷರು ರೊಟ್ಟಿ ಹಾಗೂ ದ್ರಾಕ್ಷಾರಸದಲ್ಲಿ ಪಾಲ್ಗೊಳ್ಳುತ್ತಿದ್ದರು. ಭಾನುವಾರ ಸಂಜೆ ಅನೇಕ ಭಾಷಣಗಳಿದ್ದವು, ಮತ್ತು ಸೋಮವಾರ ಬೆಳಗ್ಗೆ ಎಲ್ಲರೂ ಅಂತಿಮ ಭಾಷಣಕ್ಕಾಗಿ ಕೂಡಿ ಬರುತ್ತಿದ್ದರು. ಈ ಅಧಿವೇಶನಗಳಲ್ಲಿ ಕೊಡಲ್ಪಟ್ಟ ಹೆಚ್ಚಿನ ಭಾಷಣಗಳು, ವ್ಯಾವಹಾರಿಕ ಸ್ವರೂಪದ್ದಾಗಿದ್ದು, ವಿವರಣೆಗಿಂತಲೂ ಅನ್ವಯದ ಮೇಲೆ ಹೆಚ್ಚಿನ ಒತ್ತನ್ನು ನೀಡಿದವೆಂದು ವಾನ್ ಸ್ಲೇ ಗಮನಿಸುತ್ತಾರೆ.
ಈ ಒಕ್ಕೂಟಗಳಿಗೆ ಬೇಕಾದ ಎಲ್ಲ ಸೌಕರ್ಯಗಳನ್ನು ಒದಗಿಸಲು ರೈನ್ಸ್ಬರ್ಕ್ ಹಳ್ಳಿಯು ಸಂತೋಷಿಸಿತು. ಊಟಕ್ಕೆ ಸಾಕಷ್ಟು ಹಣವನ್ನು ಖರ್ಚುಮಾಡಿದ ಅಪರಿಚಿತರ ಸಮೂಹವು, ಹಳ್ಳಿಗೆ ಒಳ್ಳೆಯ ವರಮಾನದ ಮೂಲವಾಗಿತ್ತೆಂದು 18ನೆಯ ಶತಮಾನದ ಒಬ್ಬ ವೀಕ್ಷಕನು ಬರೆದನು. ಅಲ್ಲದೆ, ಪ್ರತಿಯೊಂದು ಅಧಿವೇಶನದ ತರುವಾಯ, ರೈನ್ಸ್ಬರ್ಕ್ನ ಬಡವರಿಗೆ ಕಲೀಜಿಯಂಟರು ಒಂದಿಷ್ಟು ಹಣವನ್ನು ದಾನವಾಗಿ ನೀಡುತ್ತಿದ್ದರು. ಆ ಕೂಟಗಳು 1787ರಲ್ಲಿ ರದ್ದುಮಾಡಲ್ಪಟ್ಟಾಗ, ಆ ಹಳ್ಳಿಗೆ ಭಾರಿ ನಷ್ಟವುಂಟಾಯಿತು ಎಂಬುದರಲ್ಲಿ ಸಂಶಯವೇ ಇಲ್ಲ. ಇದಾದ ಮೇಲೆ, ಕಲೀಜಿಯಂಟ್ ಚಳುವಳಿಯು ಕಣ್ಮರೆಯಾಯಿತು. ಏಕೆ?
ಅವರು ಕಣ್ಮರೆಯಾದ ಕಾರಣ
ಹದಿನೇಳನೆಯ ಶತಮಾನದ ಅಂತ್ಯದೊಳಗಾಗಿ, ಧರ್ಮದಲ್ಲಿ ವಿವೇಚನೆಯ ಪಾತ್ರದ ಕುರಿತು ಒಂದು ಕಲಹವು ಎದ್ದಿತ್ತು. ದೈವಿಕ ಪ್ರಕಟನೆಗಿಂತ ಮಾನವೀಯ ವಿವೇಚನೆಯು ಹೆಚ್ಚೆಂದು ಕೆಲವು ಕಲೀಜಿಯಂಟರಿಗೆ ಅನಿಸಿದರೂ, ಇತರರು ಇದಕ್ಕೆ ಸಮ್ಮತಿಸಲಿಲ್ಲ. ಕಟ್ಟಕಡೆಗೆ, ಈ ಕಲಹವು ಇಡೀ ಕಲೀಜಿಯಂಟ್ ಚಳುವಳಿಯನ್ನು ಇಬ್ಭಾಗವಾಗಿ ವಿಭಾಜಿಸಿತು. ಆ ಕಲಹದ ಎರಡೂ ಪಕ್ಷಗಳಲ್ಲಿದ್ದ ಪ್ರಧಾನ ಪ್ರತಿಪಾದಕರು ಸತ್ತ ಮೇಲೆಯೇ, ಕಲೀಜಿಯಂಟರು ಮತ್ತೆ ಒಂದಾದರು. ಹಾಗಿದ್ದರೂ, ಈ ವಿಭಜನೆಯ ನಂತರ, ಚಳುವಳಿಯು “ಪುನಃ ಮೊದಲಿನಂತೆ ಇರಲೇ ಇಲ್ಲ” ಎಂದು ಇತಿಹಾಸಕಾರ ಫಿಕ್ಸ್ ಗಮನಿಸುತ್ತಾರೆ.
ಹದಿನೆಂಟನೆಯ ಶತಮಾನದ ಪ್ರೊಟೆಸ್ಟಂಟ್ ಚರ್ಚುಗಳಲ್ಲಿ ಕಂಡುಬಂದ ಹೆಚ್ಚಿನ ಸಹಿಷ್ಣುತೆಯು ಕೂಡ, ಕಲೀಜಿಯಂಟರ ಅವನತಿಗೆ ಕಾರಣವಾಯಿತು. ಕಲೀಜಿಯಂಟ್ ತತ್ವಗಳಾದ ವಿವೇಚನೆ ಮತ್ತು ಸಹಿಷ್ಣುತೆ ಸಮಾಜದಿಂದ ಹೆಚ್ಚು ಸ್ವೀಕೃತವಾದಂತೆ, “ಒಂದು ಕಾಲದಲ್ಲಿ ಪ್ರತ್ಯೇಕವಾಗಿದ್ದ ಕಲೀಜಿಯಂಟರ ಬೆಳಕು, ಜ್ಞಾನೋದಯದ ಪ್ರಕಾಶಮಾನ ಬೆಳಕಿನಲ್ಲಿ ಕರಗಿಹೋಯಿತು.” 18ನೆಯ ಶತಮಾನದ ಅಂತ್ಯದೊಳಗೆ, ಹೆಚ್ಚಿನ ಕಲೀಜಿಯಂಟರನ್ನು ಮೆನೊನೈಟರು ಮತ್ತು ಬೇರೆ ಧಾರ್ಮಿಕ ಗುಂಪುಗಳವರು ತಮ್ಮ ಕಡೆಗೆ ಸೆಳೆದುಕೊಂಡರು.
ಕಲೀಜಿಯಂಟರ ಗುರಿ ಏಕಾಭಿಪ್ರಾಯ ಆಗಿರಲಿಲ್ಲವಾದುದರಿಂದ, ಕಲೀಜಿಯಂಟರ ಸಂಖ್ಯೆಯಷ್ಟೇ ಅವರ ಅಭಿಪ್ರಾಯಗಳೂ ಹೇರಳವಾಗಿದ್ದವು. ಇದನ್ನು ಗ್ರಹಿಸಿದ ಅವರು, ಅಪೊಸ್ತಲ ಪೌಲನು ಕ್ರೈಸ್ತರನ್ನು ಪ್ರೇರಿಸಿದಂತೆ ತಾವು “ಒಂದೇ ಅಭಿಪ್ರಾಯ”ವುಳ್ಳವರೆಂದು ಪ್ರತಿಪಾದಿಸಲಿಲ್ಲ. (1 ಕೊರಿಂಥ 1:10) ಆದರೆ ಅದೇ ಸಮಯದಲ್ಲಿ, ಏಕಾಭಿಪ್ರಾಯದಂತಹ ಮೂಲಭೂತ ಕ್ರೈಸ್ತ ನಂಬಿಕೆಗಳು ವಾಸ್ತವ ಸಂಗತಿಗಳಾಗುವ ಸಮಯಕ್ಕಾಗಿ ಕಲೀಜಿಯಂಟರು ಎದುರುನೋಡಿದರು.
ಸತ್ಯ ಜ್ಞಾನವು ಕಲೀಜಿಯಂಟರ ದಿನಗಳಲ್ಲಿ ಇನ್ನೂ ಹೆಚ್ಚಾಗಿರಲಿಲ್ಲ ಎಂಬ ವಿಷಯವನ್ನು ಪರಿಗಣಿಸುವಾಗ, ಇಂದಿನ ಅನೇಕ ಧರ್ಮಗಳು ಅನುಸರಿಸಬಹುದಾದ ಒಂದು ಮಾದರಿಯನ್ನು ಅವರಿಟ್ಟರು. (ಹೋಲಿಸಿ ದಾನಿಯೇಲ 12:4.) ಬೈಬಲ್ ಅಧ್ಯಯನಕ್ಕೆ ಅವರು ನೀಡಿದ ಮಹತ್ವವು, ಅಪೊಸ್ತಲ ಪೌಲನ ಸಲಹೆಗೆ ಹೊಂದಿಕೆಯಲ್ಲಿತ್ತು: ‘ಎಲ್ಲವನ್ನೂ ಪರಿಶೋಧಿಸಿರಿ.’ (1 ಥೆಸಲೊನೀಕ 5:21) ವೈಯಕ್ತಿಕ ಬೈಬಲ್ ಅಧ್ಯಯನದಿಂದ ಕೆಲವೊಂದು ಧಾರ್ಮಿಕ ಸಿದ್ಧಾಂತಗಳು ಮತ್ತು ಆಚರಣೆಗಳು ಬೈಬಲಿನ ಮೇಲೆ ಆಧರಿಸಿಯೇ ಇಲ್ಲವೆಂದು ಯಾಕೋಬ್ಯೂಸ್ ಆರ್ಮಿನಿಯಸ್ ಮತ್ತು ಇತರರಿಗೆ ತಿಳಿದುಬಂದಿತು. ಅವರು ಇದನ್ನು ಗ್ರಹಿಸಿಕೊಂಡಾಗ, ತಾವು ಸುಸ್ಥಾಪಿತ ಧರ್ಮದಿಂದ ಭಿನ್ನರೆಂಬುದನ್ನು ತೋರಿಸಿಕೊಳ್ಳುವ ಧೈರ್ಯ ಅವರಲ್ಲಿತ್ತು. ನೀವೂ ಅದನ್ನೇ ಮಾಡಿರುವಿರೊ?
[ಅಧ್ಯಯನ ಪ್ರಶ್ನೆಗಳು]
a 1610ರಲ್ಲಿ, ಭಿನ್ನಾಭಿಪ್ರಾಯಿಗಳು ಡಚ್ ಪ್ರಭುಗಳಿಗೆ ಒಂದು ಸಾರ್ವಜನಿಕ ಮನವೆ (ವಿರೋಧಕ್ಕಾಗಿರುವ ಕಾರಣಗಳನ್ನು ತಿಳಿಸಿದಂತಹ ಒಂದು ದಾಖಲೆ)ಯನ್ನು ಕಳುಹಿಸಿದ್ದರು. ಇದಾದ ಬಳಿಕ ಅವರನ್ನು ರೆಮನ್ಸ್ಟ್ರಾಂಟರೆಂದು ಕರೆಯಲಾಯಿತು.
b ಈ ಸ್ಥಳದ ಕಾರಣ, ಕಲೀಜಿಯಂಟರು ರೈನ್ಸ್ಬರ್ಗರ್ಸ್ ಎಂಬುದಾಗಿಯೂ ಕರೆಯಲ್ಪಟ್ಟರು.
c ನವೆಂಬರ್ 22, 1988ರ ಅವೇಕ್! ಪತ್ರಿಕೆಯಲ್ಲಿ, 19ನೆಯ ಪುಟದಲ್ಲಿರುವ “ಸಸಿನಿಯನ್ಸ್—ಅವರು ತ್ರಯೈಕ್ಯವನ್ನು ಏಕೆ ತಿರಸ್ಕರಿಸಿದರು?” ಎಂಬುದನ್ನು ನೋಡಿರಿ.
d Het Nieuwe Testament van onze Heer Jezus Christus, uit het Grieksch vertaald door Reijnier Rooleeuw, M.D. (ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಹೊಸ ಒಡಂಬಡಿಕೆ, ರೇನೀರ್ ರೋಲೆವೊ, ಎಮ್.ಡಿ. ಅವರಿಂದ ಗ್ರೀಕ್ ಭಾಷೆಯಿಂದ ಭಾಷಾಂತರಿಸಲ್ಪಟ್ಟದ್ದು)
[ಪುಟ 24 ರಲ್ಲಿರುವ ಚಿತ್ರ]
ರೆಮ್ಬ್ರಾಂಟ್ ವಾನ್ ರೈನ್ಸ್
[ಪುಟ 26 ರಲ್ಲಿರುವ ಚಿತ್ರ]
ಕಲೀಜಿಯಂಟರು ಪ್ರಥಮವಾಗಿ ಆರಂಭಗೊಂಡ ವಾರ್ಮಾಂಟ್ ಹಳ್ಳಿ, ಮತ್ತು ದೀಕ್ಷಾಸ್ನಾನಗಳು ನಡೆದ ಡ ವ್ಲೀಟ್ ನದಿ
[ಪುಟ 23 ರಲ್ಲಿರುವ ಚಿತ್ರ ಕೃಪೆ]
ಹಿನ್ನೆಲೆ: Courtesy of the American Bible Society Library, New York