ಅವರು ಯೆಹೋವನ ಚಿತ್ತವನ್ನುಮಾಡಿದರು
ಪೌಲನು ಕೇಡಿನ ಮೇಲೆ ಜಯಸಾಧಿಸುತ್ತಾನೆ
ಪೌಲನು ಆಶಾರಹಿತ ಸ್ಥಿತಿಯಲ್ಲಿದ್ದಾನೆ. ಅವನು ಮತ್ತು ಅವನೊಂದಿಗೆ 275 ಜನರು, ಮಧ್ಯಸಾಗರದ ಈಶಾನ್ಯಪೂರ್ವ ವಾಯು (ಯೂರೋಕ್ವಿಲೊ) ಎಂಬ ಹುಚ್ಚುಗಾಳಿಯಲ್ಲಿ ಸಿಲುಕಿಕೊಂಡ ಒಂದು ಹಡಗಿನಲ್ಲಿದ್ದಾರೆ. ಬಿರುಗಾಳಿಯು ಎಷ್ಟು ತೀವ್ರವಾಗಿದೆ ಎಂದರೆ, ಅವರಿಗೆ ಸೂರ್ಯನಾಗಲಿ ನಕ್ಷತ್ರಗಳಾಗಲಿ ಕಾಣಿಸುತ್ತಿಲ್ಲ. ಈ ಕಾರಣ, ಪ್ರಯಾಣಿಕರು ತುಂಬ ಹೆದರಿದ್ದಾರೆ. ಹಾಗಿದ್ದರೂ, “ಹಡಗು ನಷ್ಟವಾಗುವದೇ ಹೊರತು ನಿಮ್ಮಲ್ಲಿ ಒಬ್ಬರಿಗೂ ಪ್ರಾಣನಷ್ಟವಾಗುವದಿಲ್ಲ”ವೆಂದು, ಪೌಲನು ಕನಸಿನಲ್ಲಾದ ದೈವಿಕ ಪ್ರಕಟನೆಯನ್ನು ತಿಳಿಸುವ ಮೂಲಕ ಅವರನ್ನು ಸಂತೈಸುತ್ತಾನೆ.—ಅ. ಕೃತ್ಯಗಳು 27:14, 20-22.
ಬಿರುಗಾಳಿಯ 14ನೆಯ ರಾತ್ರಿಯಂದು, ನಾವಿಕರು ಒಂದು ಆಶ್ಚರ್ಯಕರವಾದ ಸಂಗತಿಯನ್ನು ಕಂಡುಕೊಳ್ಳುತ್ತಾರೆ—ನೀರು ಕೇವಲ 20 ಮಾರುದ್ದವಿದೆ.a ಒಂದಿಷ್ಟು ಅಂತರವನ್ನು ಅತಿಕ್ರಮಿಸಿದ ನಂತರ, ಅವರು ಮತ್ತೊಂದು ಪರೀಕ್ಷೆಯನ್ನು ಮಾಡುತ್ತಾರೆ. ಈಗಲಾದರೊ, ನೀರು 15 ಮಾರುದ್ದವಾಗಿದೆ. ನೆಲವು ಹತ್ತಿರವೇ ಇದೆ! ಆದರೆ ಆ ಶುಭಸುದ್ದಿಗೆ ಒಂದು ಗಂಭೀರವಾದ ಸೂಚಿತಾರ್ಥವಿದೆ. ಆಳವಿಲ್ಲದ ನೀರಿನಲ್ಲಿ ರಾತ್ರಿಯೆಲ್ಲ ಹೊಯ್ದಾಡಿದ ಹಡಗು ಬಂಡೆಗಳಿಗೆ ಅಪ್ಪಳಿಸಿ ನುಚ್ಚುನೂರಾಗಸಾಧ್ಯವಿತ್ತು. ಆದುದರಿಂದ, ನಾವಿಕರು ಲಂಗರುಗಳನ್ನು ಹಾಕುತ್ತಾರೆ. ಅವರಲ್ಲಿ ಕೆಲವರು ಸಣ್ಣ ದೋಣಿಯನ್ನು ಸಮುದ್ರದಲ್ಲಿ ಇಳಿಸಿ, ಹಡಗನ್ನು ಬಿಟ್ಟು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು.b ಆದರೆ ಪೌಲನು ಅವರನ್ನು ತಡೆಯುತ್ತಾನೆ. ಅವನು ಶತಾಧಿಪತಿಗೂ ಸಿಪಾಯಿಗಳಿಗೂ ಹೇಳುವುದು: “ಇವರು ಹಡಗಿನಲ್ಲಿ ನಿಲ್ಲದೆ ಹೋದರೆ ನೀವೂ ಉಳುಕೊಳ್ಳುವದಕ್ಕಾಗುವದಿಲ್ಲ.” ಶತಾಧಿಪತಿಯು ಪೌಲನ ಮಾತಿಗೆ ಕಿವಿಗೊಡುತ್ತಾನೆ, ಆ ಕಾರಣ ಎಲ್ಲ 276 ಪ್ರಯಾಣಿಕರು ಯಾವಾಗ ಬೆಳಗಾದೀತು ಎಂದು ಕಾಯುತ್ತಾರೆ.—ಅ. ಕೃತ್ಯಗಳು 27:27-32.
ಹಡಗೊಡೆತ
ಮರುದಿನ ಬೆಳಗ್ಗೆ, ಪ್ರಯಾಣಿಕರು ಉಸುಬಿನ ದಡವುಳ್ಳ ಒಂದು ಕೊಲ್ಲಿಯನ್ನು ನೋಡುತ್ತಾರೆ. ನವ ಉಲ್ಲಾಸದಿಂದ, ನಾವಿಕರು ಚುಕ್ಕಾಣಿಗಳ ಕಟ್ಟುಗಳನ್ನು ಬಿಚ್ಚಿ, ದೊಡ್ಡ ಹಾಯಿಯನ್ನು ಗಾಳಿಗೆ ಎತ್ತಿಕಟ್ಟುತ್ತಾರೆ. ಹರ್ಷಧ್ವನಿಗಳೊಂದಿಗೆ, ಹಡಗು ದಡದ ಕಡೆಗೆ ಚಲಿಸತೊಡಗುತ್ತದೆ.—ಅ. ಕೃತ್ಯಗಳು 27:39, 40.
ಆದರೆ, ಹಠಾತ್ತನೆ, ಹಡಗು ಮರಳದಿಬ್ಬಕ್ಕೆ ಸಿಕ್ಕಿಕೊಳ್ಳುತ್ತದೆ. ಹಡಗಿನ ಹಿಂಭಾಗವು ಉಗ್ರವಾದ ಅಲೆಗಳ ಹೊಡೆತದಿಂದ ಒಡೆದುಹೋಗುತ್ತದೆ. ಎಲ್ಲ ಪ್ರಯಾಣಿಕರು ಹಡಗನ್ನು ತೊರೆಯಲೇಬೇಕಿತ್ತು! (ಅ. ಕೃತ್ಯಗಳು 27:41) ಆದರೆ ಇದೊಂದು ಸಮಸ್ಯೆಯನ್ನು ಒಡ್ಡುತ್ತದೆ. ಪೌಲನನ್ನು ಸೇರಿಸಿ, ಹಡಗಿನಲ್ಲಿರುವ ಅನೇಕರು ಸೆರೆಯಾಳುಗಳಾಗಿದ್ದರು. ರೋಮನ್ ಕಾನೂನಿಗನುಸಾರ, ತನ್ನ ಸೆರೆಯಾಳು ತಪ್ಪಿಸಿಕೊಳ್ಳುವಂತೆ ಬಿಡುವ ಸೈನಿಕನು, ಆ ಸೆರೆಯಾಳಿಗೆ ವಿಧಿಸಿದ್ದ ಶಿಕ್ಷೆಯನ್ನು ಅನುಭವಿಸಬೇಕಾಗುತ್ತಿತ್ತು. ಉದಾಹರಣೆಗೆ, ಒಬ್ಬ ಕೊಲೆಗಾರನು ತಪ್ಪಿಸಿಕೊಳ್ಳುವಲ್ಲಿ, ಅಜಾಗರೂಕನಾಗಿದ್ದ ಸೈನಿಕನು ಅದಕ್ಕಾಗಿ ತನ್ನ ಜೀವವನ್ನು ತೆರಬೇಕಾಗುತ್ತಿತ್ತು.
ಇಂತಹ ಸನ್ನಿವೇಶಗಳು ಏಳಬಹುದೆಂದು ಭಯಪಟ್ಟ ಸೈನಿಕರು, ಎಲ್ಲ ಸೆರೆಯಾಳುಗಳನ್ನು ಕೊಂದುಹಾಕಲು ನಿರ್ಧರಿಸಿದರು. ಆದರೆ, ಪೌಲನೊಂದಿಗೆ ಸ್ನೇಹದಿಂದಿದ್ದ ಶತಾಧಿಪತಿಯು ಹಸ್ತಕ್ಷೇಪಮಾಡುತ್ತಾನೆ. ಈಜು ಬಲ್ಲವರು ನೀರಿನಲ್ಲಿ ಧುಮುಕಿ ತೀರಕ್ಕೆ ಹೋಗಬೇಕೆಂದು ಅವನು ಆಜ್ಞಾಪಿಸಿದನು. ಈಜಲು ಬಾರದಿರುವವರು, ಹಲಗೆಗಳ ಮೇಲೆ ಇಲ್ಲವೆ ಹಡಗಿನ ತುಂಡುಗಳ ಮೇಲೆ ಹೋಗಬೇಕಿತ್ತು. ಒಬ್ಬೊಬ್ಬರಾಗಿ ಎಲ್ಲ ಪ್ರಯಾಣಿಕರು ಹಡಗನ್ನು ಬಿಟ್ಟು ದಡವನ್ನು ಸೇರುತ್ತಾರೆ. ಪೌಲನ ಮಾತುಗಳಂತೆಯೇ, ಯಾರೊಬ್ಬರೂ ಜೀವನಷ್ಟವನ್ನು ಅನುಭವಿಸುವುದಿಲ್ಲ!—ಅ. ಕೃತ್ಯಗಳು 27:42-44.
ಮೆಲೀತೆ ದ್ವೀಪದಲ್ಲಿ ಅದ್ಭುತಕಾರ್ಯ
ಬಳಲಿಹೋದ ಗುಂಪು, ಮೆಲೀತೆ ದ್ವೀಪದಲ್ಲಿ ಆಶ್ರಯ ಪಡೆದುಕೊಳ್ಳುತ್ತದೆ. ಅಲ್ಲಿನ ನಿವಾಸಿಗಳು “ಅನ್ಯ ಭಾಷೆಯನ್ನಾಡುವವರು,” ಅಂದರೆ ಅಕ್ಷರಾರ್ಥವಾಗಿ “ಅನಾಗರಿಕರು” (ಗ್ರೀಕ್ ಭಾಷೆಯಲ್ಲಿ, ವಾರ್ವಾರೊಸ್).c ಆದರೆ ಮೆಲೀತೆಯ ಜನರು, ಒರಟು ಜನರಲ್ಲ. ಪೌಲನೊಂದಿಗೆ ಪ್ರಯಾಣಿಸುತ್ತಿದ್ದ ಲೂಕನು ವರದಿಸುವುದೇನೆಂದರೆ, ಅವರು “ನಮಗೆ ಮಾಡಿದ ಉಪಕಾರವು ಅಷ್ಟಿಷ್ಟಲ್ಲ. ಮಳೆಯು ಆಗಲೇ ಹೊಯ್ಯುತ್ತಿದ್ದರಿಂದಲೂ ಚಳಿಯಾಗಿರುವದರಿಂದಲೂ ಅವರು ಬೆಂಕಿಯನ್ನು ಹೊತ್ತಿಸಿ ನಮ್ಮೆಲ್ಲರನ್ನು ಸೇರಿಸಿಕೊಂಡರು.” ಪೌಲನು ಸಹ ಮೆಲೀತೆಯ ನಿವಾಸಿಗಳೊಂದಿಗೆ ಸೇರಿ, ಕಟ್ಟಿಗೆಗಳನ್ನು ಕೂಡಿಸಿ ಬೆಂಕಿಯ ಮೇಲೆ ಹಾಕುತ್ತಾನೆ.—ಅ. ಕೃತ್ಯಗಳು 28:1-3.
ಇದ್ದಕ್ಕಿದ್ದಹಾಗೆ, ಹಾವೊಂದು ಪೌಲನ ಕೈಗೆ ಸುತ್ತಿಕೊಳ್ಳುತ್ತದೆ! ಪೌಲನು ಖಂಡಿತವಾಗಿಯೂ ಒಬ್ಬ ಕೊಲೆಗಾರನೆಂದು ದ್ವೀಪವಾಸಿಗಳು ಭಾವಿಸಿಕೊಳ್ಳುತ್ತಾರೆ. ದೇಹದ ಯಾವ ಭಾಗವು ಪಾಪವೆಸಗಿತೊ, ಆ ಭಾಗವನ್ನು ಆಕ್ರಮಿಸುವ ಮೂಲಕ ದೇವರು ಪಾಪಿಗಳನ್ನು ದಂಡಿಸುತ್ತಾನೆಂದು ಅವರು ನೆನಸಿರಬಹುದು. ಆದರೆ, ದ್ವೀಪವಾಸಿಗಳಿಗೆ ಆಶ್ಚರ್ಯವಾಗುವಂತೆ, ಪೌಲನು ಆ ಹಾವನ್ನು ಬೆಂಕಿಯೊಳಗೆ ಝಾಡಿಸಿಬಿಡುತ್ತಾನೆ. ಲೂಕನ ಪ್ರತ್ಯಕ್ಷಸಾಕ್ಷ್ಯವು ಹೇಳುವಂತೆ, “[ಪೌಲನು] ಬಾತುಹೋದಾನು ಇಲ್ಲವೆ ಅಕಸ್ಮಾತ್ತಾಗಿ ಸತ್ತುಬಿದ್ದಾನು ಎಂದು ಅವರು ನೋಡಿಕೊಂಡೇ ಇದ್ದರು.” ಆದರೆ ಬೇಗನೆ ದ್ವೀಪವಾಸಿಗಳು ತಮ್ಮ ಮನಸ್ಸನ್ನು ಬದಲಾಯಿಸಿ, ಪೌಲನು ಒಬ್ಬ ದೇವರೆಂದು ಹೇಳತೊಡಗಿದರು.—ಅ. ಕೃತ್ಯಗಳು 28:3-6.
ಮುಂದಿನ ಮೂರು ತಿಂಗಳುಗಳನ್ನು ಪೌಲನು ಮೆಲೀತೆಯಲ್ಲಿ ಕಳೆಯುತ್ತಾನೆ. ಆ ಸಮಯದಲ್ಲಿ ಪೌಲನನ್ನು ಆದರದಿಂದ ಸತ್ಕರಿಸಿದ ಆ ದ್ವೀಪದ ಮುಖ್ಯಸ್ಥನಾದ ಪೊಪ್ಲಿಯನ ತಂದೆಯನ್ನು ಮತ್ತು ರೋಗಗ್ರಸ್ತರಾಗಿದ್ದ ಇತರರನ್ನು ಅವನು ವಾಸಿಮಾಡುತ್ತಾನೆ. ಅಲ್ಲದೆ, ಪೌಲನು ಸತ್ಯದ ಬೀಜಗಳನ್ನು ಬಿತ್ತುತ್ತಾನೆ. ಇದು ಮೆಲೀತೆಯ ಉದಾರ ನಿವಾಸಿಗಳಿಗೆ ಅನೇಕ ಆಶೀರ್ವಾದಗಳನ್ನು ತಂದಿತು.—ಅ. ಕೃತ್ಯಗಳು 28:7-11.
ನಮಗಿರುವ ಪಾಠ
ತನ್ನ ಶುಶ್ರೂಷೆಯ ಆದ್ಯಂತ, ಪೌಲನು ಅನೇಕ ಪಂಥಾಹ್ವಾನಗಳನ್ನು ಎದುರಿಸಿದನು. (2 ಕೊರಿಂಥ 11:23-27) ಈ ಮೇಲಿನ ವೃತ್ತಾಂತದಲ್ಲಿ, ಅವನು ಸುವಾರ್ತೆಯ ಕಾರಣ ಒಬ್ಬ ಸೆರೆಯಾಳಾಗಿದ್ದನು. ತರುವಾಯ, ಭೀಷಣ ಬಿರುಗಾಳಿ ಮತ್ತು ಹಡಗೊಡೆತಗಳಂತಹ ಅನಿರೀಕ್ಷಿತ ಪರೀಕ್ಷೆಗಳನ್ನು ಅವನು ಎದುರಿಸಬೇಕಾಗಿತ್ತು. ಇಷ್ಟೆಲ್ಲ ಸಂಭವಿಸಿದರೂ, ತಾನು ಸುವಾರ್ತೆಯ ಒಬ್ಬ ಹುರುಪುಳ್ಳ ಸೌವಾರ್ತಿಕನಾಗಿರಬೇಕೆಂಬ ನಿರ್ಧಾರದಿಂದ ಪೌಲನೆಂದೂ ವಿಚಲಿತನಾಗಲಿಲ್ಲ. ಅನುಭವದಿಂದ ಅವನು ಬರೆದುದು: “ನಾನು ತೃಪ್ತನಾಗಿದ್ದರೂ ಹಸಿದವನಾಗಿದ್ದರೂ, ಸಮೃದ್ಧಿಯುಳ್ಳವನಾದರೂ ಕೊರತೆಯುಳ್ಳವನಾದರೂ, ಯಾವ ತರದ ಸ್ಥಿತಿಯಲ್ಲಿರುವವನಾದರೂ ಅದರ ಗುಟ್ಟು ನನಗೆ ತಿಳಿದದೆ. ನನ್ನನ್ನು ಬಲಪಡಿಸುವಾತನಲ್ಲಿದ್ದುಕೊಂಡು ಎಲ್ಲಕ್ಕೂ ಶಕ್ತನಾಗಿದ್ದೇನೆ.”—ಫಿಲಿಪ್ಪಿ 4:12, 13.
ಸತ್ಯ ದೇವರ ಹುರುಪುಳ್ಳ ಶುಶ್ರೂಷಕರಾಗಿರಬೇಕೆಂಬ ನಮ್ಮ ನಿರ್ಧಾರವನ್ನು ಜೀವಿತದ ಸಮಸ್ಯೆಗಳು ಎಂದಿಗೂ ಬಲಹೀನಗೊಳಿಸದಿರಲಿ! ಒಂದು ಅನಿರೀಕ್ಷಿತ ಪರೀಕ್ಷೆಯು ಏಳುವಾಗ, ನಾವು ನಮ್ಮ ಭಾರವನ್ನು ಯೆಹೋವನ ಮೇಲೆ ಹಾಕುತ್ತೇವೆ. (ಕೀರ್ತನೆ 55:22) ಅನಂತರ, ಆ ಪರೀಕ್ಷೆಯನ್ನು ಸಹಿಸಿಕೊಳ್ಳುವಂತೆ ಆತನು ಹೇಗೆ ಸಾಧ್ಯಮಾಡುತ್ತಾನೆಂಬುದನ್ನು ನಾವು ತಾಳ್ಮೆಯಿಂದ ಕಾದುನೋಡುತ್ತೇವೆ. ಈ ಮಧ್ಯೆ, ಆತನು ನಮಗಾಗಿ ಚಿಂತಿಸುತ್ತಾನೆಂಬ ಭರವಸೆಯೊಂದಿಗೆ ನಾವು ನಂಬಿಗಸ್ತಿಕೆಯಿಂದ ಆತನನ್ನು ಸೇವಿಸುತ್ತಾ ಮುಂದುವರಿಯುತ್ತೇವೆ. (1 ಕೊರಿಂಥ 10:13; 1 ಪೇತ್ರ 5:7) ಸ್ಥಿರಚಿತ್ತರಾಗಿ ಉಳಿಯುವ ಮೂಲಕ, ಏನೇ ಆಗಲಿ, ನಾವು ಪೌಲನಂತೆ ಕೇಡಿನ ಮೇಲೆ ಜಯಸಾಧಿಸಬಲ್ಲೆವು.
[ಅಧ್ಯಯನ ಪ್ರಶ್ನೆಗಳು]
a ಒಂದು ಮಾರು, ನಾಲ್ಕು ಮೊಳಗಳು ಇಲ್ಲವೆ ಸುಮಾರು 1.8 ಮೀಟರುಗಳಷ್ಟೆಂದು ಸಾಮಾನ್ಯವಾಗಿ ವೀಕ್ಷಿಸಲಾಗುತ್ತದೆ.
b ದಡದ ಹತ್ತಿರ ಹಡಗೊಂದಕ್ಕೆ ಲಂಗರು ಹಾಕಿದಾಗ, ದಡವನ್ನು ಸೇರಲು ಸಣ್ಣ, ಹಗುರ ದೋಣಿಯನ್ನು ಬಳಸಲಾಯಿತು. ನಾವಿಕರು ತಮ್ಮ ಜೀವಗಳನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿದ್ದು, ಪ್ರಯಾಣಿಕರನ್ನು ಉಳಿಸುವ ಯಾವ ಪ್ರಯತ್ನವನ್ನೂ ಮಾಡುತ್ತಿರಲಿಲ್ಲವೆಂದು ಸ್ಪಷ್ಟವಾಗುತ್ತದೆ.
c ವಿಲ್ಫ್ರೆಡ್ ಫಂಕ್ ಅವರ ವರ್ಡ್ ಆರಿಜಿನ್ಸ್ ಗಮನಿಸುವುದು: “ಗ್ರೀಕರು ತಮ್ಮ ಭಾಷೆಯನ್ನು ಬಿಟ್ಟು ಬೇರೆಲ್ಲ ಭಾಷೆಗಳನ್ನು ತುಚ್ಛೀಕರಿಸಿದರು. ಆ ಭಾಷೆಯು ‘ವಾರ್-ವಾರ್’ ಶಬ್ದವನ್ನುಂಟುಮಾಡಿದ ಕಾರಣ, ಅದನ್ನು ಉಪಯೋಗಿಸುವವರನ್ನು ಅವರು ವಾರ್ವಾರೊಸ್ ಎಂದು ಕರೆದರು.”