ಸೌಲ—ಕರ್ತನು ಆರಿಸಿಕೊಂಡ ಸಾಧನ
ತಾರ್ಸದ ಸೌಲನು ಕ್ರಿಸ್ತನ ಹಿಂಬಾಲಕರ ಕಟು ವೈರಿಯಾಗಿದ್ದನು. ಆದರೆ, ಕರ್ತನು ಅವನಿಗಾಗಿ ಬೇರೆಯೇ ಆದ ಭವಿಷ್ಯತ್ತನ್ನು ಕಾದಿರಿಸಿದ್ದನು. ಸೌಲನು ಯಾವುದರ ವಿರುದ್ಧ ಅಷ್ಟೊಂದು ಆವೇಶದಿಂದ ಹೋರಾಡಿದನೊ ಅದೇ ಉದ್ದೇಶದ ಒಬ್ಬ ಗಮನಾರ್ಹ ಪ್ರತಿನಿಧಿಯಾಗಲಿದ್ದನು. ಯೇಸು ಹೇಳಿದ್ದು: “ಆ ಮನುಷ್ಯನು [ಸೌಲನು] ಅನ್ಯಜನರಿಗೂ ಅರಸುಗಳಿಗೂ ಇಸ್ರಾಯೇಲ್ಯರಿಗೂ ನನ್ನ ಹೆಸರನ್ನು ತಿಳಿಸುವದಕ್ಕಾಗಿ ನಾನು ಆರಿಸಿಕೊಂಡ ಸಾಧನವಾಗಿದ್ದಾನೆ.”—ಅ. ಕೃತ್ಯಗಳು 9:15.
ಸೌಲನಿಗೆ ಕರುಣೆಯು ತೋರಿಸಲ್ಪಟ್ಟಾಗ, “ದೂಷಕ”ನಾಗಿದ್ದ ಅವನು ಸಂಪೂರ್ಣ ಪರಿವರ್ತನೆ ಹೊಂದಿ, ಕರ್ತನಾದ ಯೇಸು ಕ್ರಿಸ್ತನು “ಆರಿಸಿಕೊಂಡ ಸಾಧನ”ವಾದನು. (1 ತಿಮೊಥೆಯ 1:12, 13) ಸೌಲನು ಕ್ರೈಸ್ತ ಅಪೊಸ್ತಲನಾದ ಪೌಲನಾಗಿ ಪರಿವರ್ತನೆ ಹೊಂದಿದಾಗ, ಸ್ತೆಫನನನ್ನು ಕಲ್ಲೆಸೆದು ಕೊಲ್ಲುವಂತೆ ಮತ್ತು ಯೇಸುವಿನ ಶಿಷ್ಯರ ಮೇಲೆ ಮಾಡಲಾದ ಇತರ ದಾಳಿಗಳಲ್ಲಿ ಭಾಗವಹಿಸುವಂತೆ ಅವನನ್ನು ಪ್ರಚೋದಿಸಿದ ಶಕ್ತಿಸಾಮರ್ಥ್ಯಗಳು ತೀರ ಭಿನ್ನವಾದ ಉದ್ದೇಶಗಳಿಗಾಗಿ ಬಳಸಲ್ಪಟ್ಟವು. ಯೇಸು ಸೌಲನಲ್ಲಿ ಅಪೇಕ್ಷಣೀಯ ಗುಣಗಳನ್ನು ಕಂಡನೆಂಬುದು ಸ್ಪಷ್ಟ. ಯಾವ ಗುಣಗಳು? ಸೌಲನು ಯಾರಾಗಿದ್ದನು? ಸತ್ಯಾರಾಧನೆಯನ್ನು ಉನ್ನತಿಗೆ ತರುವುದರಲ್ಲಿ ಬಳಸಲ್ಪಡುವಂತೆ ಅವನ ಹಿನ್ನೆಲೆಯು ಅವನನ್ನು ಯೋಗ್ಯನನ್ನಾಗಿ ಮಾಡಿದ್ದು ಹೇಗೆ? ಅವನ ಅನುಭವದಿಂದ ನಾವು ಏನನ್ನಾದರೂ ಕಲಿಯಬಲ್ಲೆವೋ?
ಸೌಲನ ಕೌಟುಂಬಿಕ ಹಿನ್ನೆಲೆ
ಸ್ತೆಫನನ ಕೊಲೆಯ ನಂತರ, ಅಂದರೆ ಸಾ.ಶ. 33ರ ಪಂಚಾಶತ್ತಮದ ಸಮಯದಲ್ಲಿ ಸೌಲನು ಒಬ್ಬ “ಯೌವನಸ್ಥ”ನಾಗಿದ್ದನು. ಅವನು ಫಿಲೆಮೋನನಿಗೆ ಸಾ.ಶ. 60-61ರ ಸಮಯದಲ್ಲಿ ಪತ್ರ ಬರೆದಾಗ, “ಮುದುಕ”ನಾಗಿದ್ದನು. (ಅ. ಕೃತ್ಯಗಳು 7:58; ಫಿಲೆಮೋನ 9) ಪುರಾತನ ಸಮಯಗಳಲ್ಲಿ ವಯಸ್ಸನ್ನು ಲೆಕ್ಕಿಸುವ ವಿಧಾನಕ್ಕನುಸಾರ, “ಯೌವನಸ್ಥ”ನೆಂದರೆ ಬಹುಶಃ 24ರಿಂದ 40ರ ನಡುವಿನ ಪ್ರಾಯವಾಗಿತ್ತು; “ಮುದುಕ”ನೆಂದರೆ 50-56ರ ನಡುವಿನ ಪ್ರಾಯವಾಗಿತ್ತೆಂದು ಪಂಡಿತರು ಸೂಚಿಸುತ್ತಾರೆ. ಹೀಗೆ, ಯೇಸುವಿನ ಜನನವಾದ ಕೆಲವೇ ವರ್ಷಗಳಲ್ಲಿ ಸೌಲನು ಜನಿಸಿದ್ದಿರಬಹುದು.
ಆ ಸಮಯದಲ್ಲಿ ಯೆಹೂದ್ಯರು ಲೋಕದ ಅನೇಕ ಭಾಗಗಳಲ್ಲಿ ಜೀವಿಸಿದರು. ಯೂದಾಯದಿಂದ ಅವರು ಚದರಿಹೋದ ಕಾರಣಗಳಲ್ಲಿ, ಇತರ ರಾಷ್ಟ್ರಗಳ ವಿಜಯ, ದಾಸತ್ವ, ಗಡೀಪಾರು ಮಾಡುವಿಕೆ, ವ್ಯಾಪಾರ, ಮತ್ತು ಸ್ವಯಂಕೃತ ವಲಸೆಹೋಗುವಿಕೆ ಕೆಲವಾಗಿದ್ದವು. ಹೀಗೆ ಚದರಿಹೋಗಿದ್ದ ಯೆಹೂದ್ಯರಲ್ಲಿ ಅವರ ಕುಟುಂಬವು ಸೇರಿದ್ದರೂ, ಧರ್ಮಶಾಸ್ತ್ರಕ್ಕೆ ಅವರು ತೋರಿಸಿದ ನಿಷ್ಠೆಯನ್ನು ಸೌಲನು ಒತ್ತಿಹೇಳುತ್ತಾನೆ. “ಹುಟ್ಟಿದ ಎಂಟನೆಯ ದಿನದಲ್ಲಿ ನನಗೆ ಸುನ್ನತಿಯಾಯಿತು; ನಾನು ಇಸ್ರಾಯೇಲ್ ವಂಶದವನು, ಬೆನ್ಯಾಮೀನನ ಕುಲದವನು, ಇಬ್ರಿಯರಿಂದ ಹುಟ್ಟಿದ ಇಬ್ರಿಯನು; ನೇಮನಿಷ್ಠೆಗಳನ್ನು ನೋಡಿದರೆ ನಾನು ಫರಿಸಾಯನು” ಎಂದು ತನ್ನ ಕುರಿತು ಹೇಳಿದನು. ಸೌಲನಿಗೆ, ತನ್ನ ಕುಲದ ಒಬ್ಬ ಪ್ರಧಾನ ಸದಸ್ಯನಾದ ಇಸ್ರಾಯೇಲಿನ ಪ್ರಥಮ ಅರಸನಿಗಿದ್ದ ಅದೇ ಹೀಬ್ರು ಹೆಸರಿತ್ತು. ಜನ್ಮದಿಂದ ರೋಮನ್ ಪ್ರಜೆಯಾಗಿದ್ದ ಕಾರಣ, ತಾರ್ಸದ ಸೌಲನಿಗೆ ಪೌಲುಸ್ ಎಂಬ ಲ್ಯಾಟಿನ್ ಹೆಸರೂ ಇತ್ತು.—ಫಿಲಿಪ್ಪಿ 3:5; ಅ. ಕೃತ್ಯಗಳು 13:21; 22:25-29.
ಸೌಲನು ಒಬ್ಬ ರೋಮನ್ ಪ್ರಜೆಯಾಗಿ ಜನಿಸಿದ್ದನೆಂಬುದರ ಅರ್ಥವು, ಅವನ ಪೂರ್ವಜರಲ್ಲಿ ಒಬ್ಬನು ಪೌರತ್ವದ ಗೌರವವನ್ನು ಪಡೆದುಕೊಂಡಿದ್ದನೆಂಬುದೇ. ಹೇಗೆ? ಹಲವಾರು ಸಾಧ್ಯತೆಗಳಿವೆ. ಪೌರತ್ವವನ್ನು ಪಿತ್ರಾರ್ಜಿತವಾಗಿ ಪಡೆದುಕೊಳ್ಳುವುದಲ್ಲದೆ, ಅದನ್ನು ವಿಶೇಷ ಯೋಗ್ಯತೆಗಳಿಗಾಗಿ, ಕೇವಲ ರಾಜಕೀಯ ಔಚಿತ್ಯಕ್ಕಾಗಿ, ಇಲ್ಲವೆ ರಾಜ್ಯಕ್ಕೆ ಮಾಡಲ್ಪಟ್ಟ ಒಂದು ವಿಶೇಷವಾದ ಸೇವೆಗಾಗಿ ಬಹುಮಾನದ ರೂಪದಲ್ಲಿ ವ್ಯಕ್ತಿಗಳಿಗೆ ಇಲ್ಲವೆ ಗುಂಪುಗಳಿಗೆ ಅನುಗ್ರಹಿಸಸಾಧ್ಯವಿತ್ತು. ರೋಮಿನ ಪ್ರಜೆಯೊಬ್ಬನಿಂದ ತನ್ನ ಸ್ವಾತಂತ್ರ್ಯವನ್ನು ಖರೀದಿಸಲು ಶಕ್ತನಾಗಿರುವ ಒಬ್ಬ ದಾಸನು, ಇಲ್ಲವೆ ಒಬ್ಬ ರೋಮನ್ ಪ್ರಜೆಯಿಂದ ಸ್ವತಂತ್ರಗೊಳಿಸಲ್ಪಟ್ಟ ದಾಸನು ಸ್ವತಃ ಒಬ್ಬ ರೋಮನ್ ಪ್ರಜೆಯಾಗಸಾಧ್ಯವಿತ್ತು. ರೋಮನ್ ಪಡೆಗಳಿಂದ ನಿವೃತ್ತನಾದ ಒಬ್ಬ ಸೈನಿಕನು ಕೂಡ ರೋಮನ್ ಪ್ರಜೆಯಾಗಸಾಧ್ಯವಿತ್ತು. ರೋಮನ್ ವಸಾಹತುಗಳಲ್ಲಿ ವಾಸಿಸುತ್ತಿರುವ ಸ್ಥಳೀಯರು ಸಕಾಲದಲ್ಲಿ ಪ್ರಜೆಗಳಾಗಸಾಧ್ಯವಿತ್ತು. ನಿರ್ದಿಷ್ಟವಾದ ಕಾಲಾವಧಿಗಳಲ್ಲಿ ಪೌರತ್ವವನ್ನು ಹಣದ ದೊಡ್ಡ ಮೊತ್ತಕ್ಕೆ ಖರೀದಿಸಸಾಧ್ಯವಿತ್ತೆಂದೂ ಹೇಳಲಾಗಿದೆ. ಪೌರತ್ವವು ಸೌಲನ ಕುಟುಂಬವನ್ನು ಹೇಗೆ ಪ್ರವೇಶಿಸಿತೆಂಬುದು ಒಂದು ರಹಸ್ಯವಾಗಿಯೇ ಉಳಿದಿದೆ.
ರೋಮನ್ ಪ್ರಾಂತವಾದ ಕಿಲಿಕ್ಯ (ಈಗ ದಕ್ಷಿಣ ಟರ್ಕಿಯಲ್ಲಿ) ಕ್ಷೇತ್ರದ ಪ್ರಧಾನ ನಗರವೂ ರಾಜಧಾನಿಯೂ ಆಗಿದ್ದ ತಾರ್ಸದಿಂದ ಸೌಲನು ಬಂದನೆಂಬುದು ನಮಗೆ ಗೊತ್ತಿದೆ. ಆ ಕ್ಷೇತ್ರದಲ್ಲಿ ಸಾಕಷ್ಟು ದೊಡ್ಡ ಯೆಹೂದಿ ಸಮುದಾಯವು ವಾಸಿಸುತ್ತಿದ್ದರೂ, ಅಲ್ಲಿನ ಜೀವಿತವು ಸೌಲನನ್ನು ಅನ್ಯಜನರ ಸಂಸ್ಕೃತಿಗೂ ಒಡ್ಡಿದ್ದಿರಬಹುದು. ತಾರ್ಸವು ದೊಡ್ಡ ಹಾಗೂ ಅನುಕೂಲವಾದ ನಗರವಾಗಿದ್ದು, ಗ್ರೀಕ್ ಸಂಬಂಧಿತ ವಿದ್ಯಾಕೇಂದ್ರವೆಂಬ ಪ್ರಸಿದ್ಧಿಯನ್ನು ಪಡೆದಿತ್ತು. ಪ್ರಥಮ ಶತಮಾನದಲ್ಲಿ ಅದರ ಜನಸಂಖ್ಯೆಯು 3,00,000ದಿಂದ 5,00,000 ಆಗಿದ್ದಿರಬಹುದೆಂದು ಅಂದಾಜು ಮಾಡಲಾಗಿದೆ. ಅದು ಏಷಿಯ ಮೈನರ್, ಸಿರಿಯ, ಮತ್ತು ಮೆಸೊಪೊಟೇಮಿಯದ ನಡುವಿನ ಮುಖ್ಯ ಹೆದ್ದಾರಿಯಲ್ಲಿ ಒಂದು ವ್ಯಾಪಾರ ಕೇಂದ್ರವಾಗಿತ್ತು. ತಾರ್ಸದ ಏಳಿಗೆಗೆ ವಾಣಿಜ್ಯ ಹಾಗೂ ಧಾನ್ಯ, ದ್ರಾಕ್ಷಾರಸ, ಮತ್ತು ನಾರುಬಟ್ಟೆಯನ್ನು ಮುಖ್ಯವಾಗಿ ಉತ್ಪಾದಿಸಿದ ಸುತ್ತಮುತ್ತಲಿನ ಬಯಲುಸೀಮೆಯ ಫಲವತ್ತತೆಯು ಕಾರಣವಾಗಿತ್ತು. ಅದರ ಯಶಸ್ವಿಕರ ಬಟ್ಟೆ ಉದ್ಯಮದಿಂದ ಮೇಕೆ ಕೂದಲಿನ ಬಟ್ಟೆಯು ಉತ್ಪಾದಿಸಲ್ಪಡುತ್ತಿತ್ತು. ಮತ್ತು ಗುಡಾರಗಳನ್ನು ಮಾಡಲು ಇದನ್ನು ಬಳಸಲಾಯಿತು.
ಸೌಲನ ಶಿಕ್ಷಣ
ಸೌಲನು ಅಥವಾ ಪೌಲನು ಗುಡಾರಗಳನ್ನು ಮಾಡುವ ಮೂಲಕ ತನಗೆ ಬೇಕಾದ ಸರಬರಾಯಿಗಳನ್ನು ಒದಗಿಸಿಕೊಂಡನಲ್ಲದೆ, ತನ್ನ ಮಿಷನೆರಿ ಚಟುವಟಿಕೆಗಳನ್ನೂ ಬೆಂಬಲಿಸಿಕೊಂಡನು. (ಅ. ಕೃತ್ಯಗಳು 18:2, 3; 20:34) ಗುಡಾರಮಾಡುವ ಕೆಲಸವು, ತಾನು ನೆಲೆಸಿದ್ದ ತಾರ್ಸದಲ್ಲಿ ವಿಶೇಷ ಕೆಲಸವಾಗಿತ್ತು. ಗುಡಾರಮಾಡುವ ಈ ಕೆಲಸವನ್ನು ಸೌಲನು ಚಿಕ್ಕವನಾಗಿದ್ದಾಗ ತನ್ನ ತಂದೆಯಿಂದ ಕಲಿತುಕೊಂಡಿದ್ದಿರಬಹುದು.
ಭಾಷೆಗಳ ವಿಷಯದಲ್ಲಿ, ವಿಶೇಷವಾಗಿ ರೋಮನ್ ಸಾಮ್ರಾಜ್ಯದ ಸಾಮಾನ್ಯ ಭಾಷೆಯಾಗಿದ್ದ ಗ್ರೀಕ್ ಭಾಷೆಯಲ್ಲಿ ಸೌಲನಿಗಿದ್ದ ಪರಿಣತಿಯು ಕೂಡ, ಅವನ ಮಿಷನೆರಿ ಕೆಲಸದಲ್ಲಿ ಅತ್ಯಮೂಲ್ಯವಾಗಿ ಪರಿಣಮಿಸಿತು. (ಅ. ಕೃತ್ಯಗಳು 21:37–22:2) ಅವನು ಬಳಸಿದ ಗ್ರೀಕ್ ಭಾಷೆಯು ಅತ್ಯುತ್ತಮವಾಗಿತ್ತೆಂದು ಅವನ ಬರಹದ ವಿಶ್ಲೇಷಕರು ಹೇಳುತ್ತಾರೆ. ಅವನ ಶಬ್ದಭಂಡಾರವು ಪಾಂಡಿತ್ಯಪೂರ್ಣವೂ ಇಲ್ಲವೆ ಸಾಹಿತ್ಯಾತ್ಮಕವೂ ಆಗಿರುವುದಿಲ್ಲ. ಬದಲಿಗೆ ಅವನು ಹಲವಾರು ಬಾರಿ ಉದ್ಧರಿಸಿದ ಇಲ್ಲವೆ ಅರ್ಥವಿವರಿಸಿದ ಹೀಬ್ರು ಶಾಸ್ತ್ರಗಳ ಗ್ರೀಕ್ ಭಾಷಾಂತರವಾದ ಸೆಪ್ಟುಅಜಿಂಟ್‌ನ ಭಾಷೆಯಂತೆಯೇ ಇದೆ. ಇದರ ಆಧಾರದ ಮೇಲೆ, ಸೌಲನು ಬಹುಶಃ ಒಂದು ಯೆಹೂದಿ ಶಾಲೆಯಲ್ಲಿ ಗ್ರೀಕ್ ಭಾಷೆಯ ಉತ್ತಮ ಪ್ರಾಥಮಿಕ ಶಿಕ್ಷಣವನ್ನು ಪಡೆದಿರಬಹುದೆಂದು ಹಲವಾರು ಪಂಡಿತರು ಊಹಿಸುತ್ತಾರೆ. “ಪುರಾತನ ಸಮಯದಲ್ಲಿ ಒಂದು ಉತ್ತಮ ಶಿಕ್ಷಣವು, ಅದರಲ್ಲೂ ಗ್ರೀಕ್ ಶಿಕ್ಷಣವು ಉಚಿತವಾಗಿರಲಿಲ್ಲ; ಅದಕ್ಕೆ ಹಣವನ್ನು ನೀಡಬೇಕಾಗಿತ್ತು ಎಂಬುದರಲ್ಲಿ ಯಾವ ಸಂದೇಹವೂ ಇರಲಿಲ್ಲ” ಎಂದು ಪಂಡಿತ ಮಾರ್ಟಿನ್ ಹೆಂಗಲ್ ಹೇಳುತ್ತಾರೆ. ಹೀಗೆ, ಸೌಲನು ಒಂದು ಹೆಸರುವಾಸಿ ಕುಟುಂಬದಿಂದ ಬಂದವನೆಂದು ಅವನ ಶಿಕ್ಷಣವು ಸೂಚಿಸುತ್ತದೆ.
ಬಹುಶಃ ಸೌಲನು 13 ವರ್ಷದವನಾಗಿದ್ದಾಗ, ಮನೆಯಿಂದ ಸುಮಾರು 840 ಕಿಲೊಮೀಟರುಗಳಷ್ಟು ದೂರದಲ್ಲಿದ್ದ ಯೆರೂಸಲೇಮಿನಲ್ಲಿ ತನ್ನ ವಿದ್ಯಾಭಾಸವನ್ನು ಮುಂದುವರಿಸಿದನು. ಅವನು ಫರಿಸಾಯರ ಸಂಪ್ರದಾಯದಲ್ಲಿ ಸುಪ್ರಸಿದ್ಧ ಹಾಗೂ ಗೌರವಾನಿತ್ವ ಶಿಕ್ಷಕನಾಗಿದ್ದ ಗಮಲಿಯೇಲನ ಪಾದಸನ್ನಿಧಿಯಲ್ಲಿ ಶಿಕ್ಷಣಪಡೆದನು. (ಅ. ಕೃತ್ಯಗಳು 22:3; 23:6) ಇಂದಿನ ವಿಶ್ವವಿದ್ಯಾಲಯದ ಶಿಕ್ಷಣಕ್ಕೆ ಸರಿಹೋಲುವ ಆ ಶಿಕ್ಷಣವು, ಸೌಲನಿಗೆ ಯೆಹೂದಿಮತದಲ್ಲಿ ಪ್ರಾಧಾನ್ಯವನ್ನು ಪಡೆದುಕೊಳ್ಳುವ ಅವಕಾಶವನ್ನು ತೆರೆಯಿತು.a
ಸಾಮರ್ಥ್ಯಗಳ ಸದುಪಯೋಗ
ಗ್ರೀಕ್ ಸಂಬಂಧಿತ ಹಾಗೂ ರೋಮನ್ ನಗರದಲ್ಲಿದ್ದ ಒಂದು ಯೆಹೂದಿ ಕುಟುಂಬದಲ್ಲಿ ಜನಿಸಿದ ಸೌಲನು, ಮೂರು ಸಮುದಾಯಗಳಿಂದ ಪ್ರಭಾವಿತನಾಗಿದ್ದನು. ಅವನ ಅಸಂಕುಚಿತ ಬಹುಭಾಷೀಯ ಹಿನ್ನೆಲೆಯು “ಯಾರಾರಿಗೆ ಎಂಥೆಂಥವನಾಗಬೇಕೋ ಅಂಥಂಥವ”ನಾಗಲು ಅವನಿಗೆ ನಿಸ್ಸಂದೇಹವಾಗಿಯೂ ಸಹಾಯಮಾಡಿತು. (1 ಕೊರಿಂಥ 9:19-23) ಅವನಿಗಿದ್ದ ರೋಮನ್ ಪೌರತ್ವವು, ಶುಶ್ರೂಷೆಯನ್ನು ಕಾನೂನುಬದ್ಧವಾಗಿ ಸಂರಕ್ಷಿಸುವಂತೆ ಮತ್ತು ರೋಮನ್ ಸಾಮ್ರಾಜ್ಯದಲ್ಲಿ ಅತ್ಯಂತ ದೊಡ್ಡ ಅಧಿಕಾರಿಯ ಮುಂದೆ ಸುವಾರ್ತೆಯನ್ನು ಕೊಂಡೊಯ್ಯುವಂತೆ ಅನುಮತಿಸಿತು. (ಅ. ಕೃತ್ಯಗಳು 16:37-40; 25:11, 12) ಸೌಲನ ಹಿನ್ನೆಲೆ, ಶಿಕ್ಷಣ, ಮತ್ತು ವ್ಯಕ್ತಿತ್ವವು ಪುನರುತ್ಥಿತ ಯೇಸುವಿಗೆ ತಿಳಿದಿತ್ತು. ಆದಕಾರಣ, ಯೇಸು ಅನನೀಯನಿಗೆ ಹೇಳಿದ್ದು: “ನೀನು ಹೋಗು; ಆ ಮನುಷ್ಯನು ಅನ್ಯಜನರಿಗೂ ಅರಸುಗಳಿಗೂ ಇಸ್ರಾಯೇಲ್ಯರಿಗೂ ನನ್ನ ಹೆಸರನ್ನು ತಿಳಿಸುವದಕ್ಕಾಗಿ ನಾನು ಆರಿಸಿಕೊಂಡ ಸಾಧನವಾಗಿದ್ದಾನೆ. ಅವನು ನನ್ನ ಹೆಸರಿನ ನಿಮಿತ್ತ ಎಷ್ಟು ಹಿಂಸೆ ಅನುಭವಿಸಬೇಕೆಂಬದನ್ನು ನಾನೇ ಅವನಿಗೆ ತೋರಿಸುವೆನು.” (ಅ. ಕೃತ್ಯಗಳು 9:13-16) ಸರಿಯಾದ ರೀತಿಯಲ್ಲಿ ಪ್ರಯೋಗಿಸಲ್ಪಟ್ಟ ಸೌಲನ ಹುರುಪು, ದೂರದ ಕ್ಷೇತ್ರಗಳಲ್ಲಿ ರಾಜ್ಯದ ಸಂದೇಶವನ್ನು ಸಾರುವುದರಲ್ಲಿ ಸಾಧಕವಾಗಿತ್ತು.
ಯೇಸು ಸೌಲನನ್ನು ವಿಶೇಷವಾದ ನಿಯೋಗಕ್ಕಾಗಿ ಆರಿಸಿಕೊಂಡಿರುವುದು ಕ್ರೈಸ್ತ ಇತಿಹಾಸದಲ್ಲಿ ಒಂದು ಅದ್ವಿತೀಯ ಘಟನೆಯಾಗಿತ್ತು. ಆದರೂ, ಪ್ರಸ್ತುತ ದಿನದ ಎಲ್ಲ ಕ್ರೈಸ್ತರಿಗೆ, ಸುವಾರ್ತೆಯನ್ನು ಸಾರುವುದರಲ್ಲಿ ಪರಿಣಾಮಕಾರಿಯಾಗಿ ಉಪಯೋಗಿಸಲ್ಪಡಬಹುದಾದ ವ್ಯಕ್ತಿಗತ ಸಾಮರ್ಥ್ಯಗಳು ಮತ್ತು ಗುಣವೈಶಿಷ್ಟ್ಯಗಳಿವೆ. ಯೇಸು ತನ್ನಿಂದ ಏನನ್ನು ಬಯಸಿದನೆಂಬುದನ್ನು ಸೌಲನು ಅರ್ಥಮಾಡಿಕೊಂಡಾಗ ಅವನು ಹಿಂಜರಿಯಲಿಲ್ಲ. ರಾಜ್ಯದ ಅಭಿರುಚಿಗಳನ್ನು ಪ್ರವರ್ಧಿಸಲು ತನ್ನಿಂದ ಸಾಧ್ಯವಾದುದೆಲ್ಲವನ್ನು ಅವನು ಮಾಡಿದನು. ಇದು ನಿಮ್ಮ ವಿಷಯದಲ್ಲಿ ಸತ್ಯವಾಗಿದೆಯೊ?
[ಅಧ್ಯಯನ ಪ್ರಶ್ನೆಗಳು]
a ಸೌಲನು ಗಮಲಿಯೇಲನಿಂದ ಪಡೆದಿರಬಹುದಾದ ಶಿಕ್ಷಣದ ಸಾರಾಂಶ ಮತ್ತು ಸ್ವರೂಪದ ವಿಷಯದಲ್ಲಿ, 1996, ಜುಲೈ 15ರ ಕಾವಲಿನಬುರುಜು ಪತ್ರಿಕೆಯ 26-9ನೆಯ ಪುಟಗಳನ್ನು ನೋಡಿರಿ.
[ಪುಟ 30 ರಲ್ಲಿರುವ ಚೌಕ/ಚಿತ್ರಗಳು]
ರೋಮನ್ ಪೌರತ್ವದ ನೋಂದಣಿ ಮತ್ತು ಪ್ರಮಾಣೀಕರಣ
ರೋಮನ್ ಪ್ರಜೆಗಳ ವಿಧಿಬದ್ಧ ಮಕ್ಕಳ ನೋಂದಣಿಯು, ಸಾ.ಶ. 4 ಮತ್ತು 9ರಲ್ಲಿ ಜಾರಿಗೆ ತರಲ್ಪಟ್ಟ ಆಗಸ್ಟಸ್‌ನ ಎರಡು ಆಜ್ಞೆಗಳಿಂದ ಸ್ಥಾಪಿಸಲ್ಪಟ್ಟಿತು. ನೋಂದಣಿಯು ಜನನವಾದ 30 ದಿನಗಳೊಳಗೆ ನಡೆಯಬೇಕಿತ್ತು. ಪ್ರಾಂತಗಳಲ್ಲಿರುವ ಒಂದು ಕುಟುಂಬವು ಸೂಕ್ತವಾದ ಸಾರ್ವಜನಿಕ ದಾಖಲು ಕಚೇರಿಗೆ ಹೋಗಿ, ಮಗು ವಿವಾಹಬದ್ಧವಾಗಿ ಹುಟ್ಟಿದೆ ಮತ್ತು ರೋಮನ್ ಪೌರತ್ವವನ್ನು ಪಡೆದದ್ದೂ ಆಗಿದೆ ಎಂದು ಒಬ್ಬ ನ್ಯಾಯಧೀಶನ ಮುಂದೆ ಪ್ರಕಟನೆ ನೀಡಬೇಕಿತ್ತು. ಹೆತ್ತವರ ಹೆಸರುಗಳು, ಮಗುವಿನ ಲಿಂಗ ಮತ್ತು ಹೆಸರು, ಮತ್ತು ಜನನ ದಿನಾಂಕವನ್ನು ನೋಂದಾಯಿಸಿಕೊಳ್ಳಲಾಗುತ್ತಿತ್ತು. ಈ ನಿಯಮಗಳು ಜಾರಿಗೆ ಬರುವ ಮುಂಚೆಯೇ, ಎಲ್ಲ ರೋಮನ್ ನಗರಪಾಲಿಕೆಗಳಲ್ಲಿ, ವಸಾಹತುಗಳಲ್ಲಿ, ಮತ್ತು ಪ್ರಾಂತಗಳಲ್ಲಿದ್ದ ಪ್ರಜೆಗಳ ನೋಂದಣಿಯು ಜನಗಣತಿಯ ಮೂಲಕ ಐದು ವರ್ಷಗಳಿಗೊಮ್ಮೆ ನವೀಕರಿಸಲಾಗುತ್ತಿತ್ತು.
ಸರಿಯಾಗಿ ಇಡಲ್ಪಟ್ಟ ದಾಖಲೆಗಳ ಸಂಗ್ರಹದಿಂದ ಒಬ್ಬ ವ್ಯಕ್ತಿಯ ಸ್ಥಾನಮಾನವನ್ನು ಕಂಡುಹಿಡಿಯಸಾಧ್ಯವಿತ್ತು. ಅಂತಹ ದಾಖಲೆಗಳ ಸಮರ್ಥನಾ ಪತ್ರಗಳು, ಸುಲಭವಾಗಿ ಒಯ್ಯಬಹುದಾದ ಮರದ ಫಲಕಗಳ (ಮಡಿಸಬಹುದಾದ ಫಲಕಗಳು) ರೂಪದಲ್ಲಿ ಖರೀದಿಸಸಾಧ್ಯವಿತ್ತು. ಕೆಲವು ಪಂಡಿತರಿಗನುಸಾರ, ಪೌಲನು ರೋಮನ್ ಪೌರತ್ವವನ್ನು ಪ್ರತಿಪಾದಿಸಿದಾಗ, ದೃಢೀಕರಣಕ್ಕಾಗಿ ಅವನೊಂದು ಪ್ರಮಾಣಪತ್ರವನ್ನು ತಂದು ಮಂಡಿಸಲು ಶಕ್ತನಾಗಿದ್ದಿರಬಹುದು. (ಅ. ಕೃತ್ಯಗಳು 16:37; 22:25-29; 25:11) ರೋಮನ್ ಪೌರತ್ವಕ್ಕೆ “ಪವಿತ್ರ ಗುಣಮಟ್ಟ”ವಿತ್ತೆಂದು ವೀಕ್ಷಿಸಲಾಗುತ್ತಿದ್ದ ಕಾರಣ, ಅದನ್ನು ಪಡೆದಿದ್ದ ವ್ಯಕ್ತಿಯು ಅನೇಕ ಸುಯೋಗಗಳಿಗೆ ಅರ್ಹನಾಗಿದ್ದನು ಮತ್ತು ಖೋಟಾ ದಾಖಲೆಗಳ ತಯಾರಿಕೆಯು ಬಹಳ ಗಂಭೀರವಾದ ಪಾಪವಾಗಿತ್ತು. ಒಬ್ಬನ ಸ್ಥಾನಮಾನದ ಕುರಿತು ತಪ್ಪು ನಿರೂಪಣೆಯನ್ನು ಮಾಡುವುದು ಮರಣ ದಂಡನೆಗೆ ಅರ್ಹವಾದ ಸಂಗತಿಯಾಗಿತ್ತು.
[ಕೃಪೆ]
Historic Costume in Pictures/Dover Publications, Inc., New York
[ಪುಟ 31 ರಲ್ಲಿರುವ ಚೌಕ/ಚಿತ್ರಗಳು]
ಸೌಲನ ರೋಮನ್ ಹೆಸರು
ರೋಮನ್ ಪ್ರಜೆಯಾಗಿರುವ ಪ್ರತಿಯೊಬ್ಬ ಪುರುಷನ ಹೆಸರಿಗೆ ಕಡಿಮೆ ಪಕ್ಷ ಮೂರು ಅಂಶಗಳಿರುತ್ತಿದ್ದವು. ಅವನಿಗೊಂದು ಪ್ರಥಮ ಹೆಸರು, ಮನೆತನದ ಹೆಸರು (ಅವನ ಜಾತಿ, ಇಲ್ಲವೆ ವಂಶದೊಂದಿಗೆ ಸಂಬಂಧಿಸಿದ್ದು), ಮತ್ತು ಒಂದು ಅಡ್ಡಹೆಸರಿರುತ್ತಿತ್ತು. ಒಂದು ಪ್ರಸಿದ್ಧ ಉದಾಹರಣೆಯು ಗೇಯಸ್ ಜೂಲಿಯಸ್ ಸೀಸರ್ ಆಗಿದೆ. ಬೈಬಲಿನಲ್ಲಿ ಪೂರ್ಣವಾದ ರೋಮನ್ ಹೆಸರುಗಳಿಲ್ಲ, ಆದರೆ ಅಗ್ರಿಪ್ಪನಿಗೆ ಮಾರ್ಕುಸ್ ಜೂಲಿಯಸ್ ಅಗ್ರಿಪ್ಪ ಎಂಬ ಹೆಸರಿತ್ತೆಂದು ಐಹಿಕ ಮೂಲಗಳು ತಿಳಿಸುತ್ತವೆ. ಗಲ್ಲಿಯೋ, ಲೂಷಿಯಸ್ ಯೂನಿಯಸ್ ಗಲ್ಲಿಯೋ ಆಗಿದ್ದನು. (ಅ. ಕೃತ್ಯಗಳು 18:12; 25:13) ಒಬ್ಬ ವ್ಯಕ್ತಿಯ ಮೂರು ಹೆಸರುಗಳಲ್ಲಿ ಕೊನೆಯ ಎರಡು ಹೆಸರುಗಳುಳ್ಳ ಶಾಸ್ತ್ರೀಯ ಉದಾಹರಣೆಗಳು, ಪೊಂತ್ಯ ಪಿಲಾತನು (ಕೆಳಗಿರುವ ಸ್ಮಾರಕ), ಸೆರ್ಗ್ಯಪೌಲ, ಕ್ಲೌದ್ಯ ಲೂಸ್ಯ, ಮತ್ತು ಪೋರ್ಕಿಯ ಫೆಸ್ತ ಆಗಿವೆ.—ಅ. ಕೃತ್ಯಗಳು 4:27; 13:7; 23:26; 24:27.
ಪೌಲುಸ್ ಎಂಬುದು ಸೌಲನ ಪ್ರಥಮ ಹೆಸರೊ ಇಲ್ಲವೆ ಅವನ ಅಡ್ಡಹೆಸರೊ ಎಂಬುದನ್ನು ನಿಶ್ಚಿತವಾಗಿ ಹೇಳಲು ಸಾಧ್ಯವಿಲ್ಲ. ಒಬ್ಬನು ತನ್ನ ಕುಟುಂಬದವರಿಂದ ಹಾಗೂ ಪರಿಚಯಸ್ಥರಿಂದ ಅನೌಪಚಾರಿಕವಾಗಿ ಕರೆಯಲ್ಪಡುವ ಮತ್ತೊಂದು ಹೆಸರನ್ನು ಕೂಡಿಸುವುದು ಅಸಾಮಾನ್ಯವೇನೂ ಆಗಿರಲಿಲ್ಲ. ಅಲ್ಲದೆ, ರೋಮನ್ ಹೆಸರಲ್ಲದ ಸೌಲ ಎಂಬ ಹೆಸರು ಒಂದು ಬದಲಿ ಹೆಸರಿನಂತೆಯೂ ಬಳಸಲ್ಪಡಬಹುದಿತ್ತು. “ರೋಮನ್ ಹೆಸರಿನೋಪಾದಿ [ಸೌಲ] ಎಂಬ ಹೆಸರು ಎಂದಿಗೂ ಯೋಗ್ಯವಾಗಿರದಿದ್ದರೂ, ಸ್ಥಳಿಕ ಹೆಸರಿನಂತೆ ಒಬ್ಬ ರೋಮನ್ ಪ್ರಜೆಗೆ ಕೊಡಲ್ಪಡುವ ಉಪಹೆಸರಿನ ರೂಪದಲ್ಲಿ ಅದು ಬಹಳ ಯೋಗ್ಯವಾಗಿರುತ್ತದೆ” ಎಂದು ಒಬ್ಬ ಪಂಡಿತನು ಹೇಳುತ್ತಾನೆ. ಬಹುಭಾಷೀಯ ಕ್ಷೇತ್ರಗಳಲ್ಲಿ, ಯಾವ ಹೆಸರುಗಳನ್ನು ವ್ಯಕ್ತಿಯು ಬಳಸಲು ಆಯ್ದುಕೊಳ್ಳುವನೆಂಬುದನ್ನು ಪರಿಸ್ಥಿತಿಗಳು ನಿರ್ಧರಿಸಬಹುದು.
[ಕೃಪೆ]
Photograph by Israel Museum, ©Israel Antiquities Authority