ದೇವರಿಗೆ ಸೇವೆ ಸಲ್ಲಿಸುವೆನೆಂದು ಕೊಟ್ಟ ವಚನವನ್ನು ಪಾಲಿಸುವುದು
ಫ್ರಾನ್ಸ್ ಗುಡ್ಲಿಕ್ಕೀಸ್ ಹೇಳಿದಂತೆ
ನೂರಕ್ಕಿಂತಲೂ ಹೆಚ್ಚು ಸೈನಿಕರಿದ್ದ ನನ್ನ ದಳದಲ್ಲಿ ಕೇವಲ ನಾಲ್ಕು ಮಂದಿ ಜೀವಂತರಾಗಿದ್ದೆವು. ಸಾವು ನನ್ನ ಮುಂದೆಯೇ ಇರಲಾಗಿ, ನಾನು ಮೊಣಕಾಲೂರಿ ದೇವರಿಗೆ ಹೀಗೆ ವಚನ ಕೊಟ್ಟೆ: ‘ಈ ಯುದ್ಧದಿಂದ ನಾನು ಪಾರಾಗಿ ಉಳಿದರೆ, ಎಂದೆಂದಿಗೂ ನಿನ್ನ ಸೇವೆಯನ್ನು ಮಾಡುವೆ.’
ನಾನು ಜರ್ಮನಿಯ ಸೇನೆಯಲ್ಲಿ ಒಬ್ಬ ಸೈನಿಕನಾಗಿದ್ದಾಗ, ಸುಮಾರು 54 ವರ್ಷಗಳ ಹಿಂದೆ ಅಂದರೆ ಏಪ್ರಿಲ್ 1945ರಲ್ಲಿ, ಆ ಪ್ರತಿಜ್ಞೆಯನ್ನು ಮಾಡಿದೆ. ಅದು, IIನೆಯ ವಿಶ್ವ ಯುದ್ಧವು ಇನ್ನೇನು ಕೊನೆಗೊಳ್ಳಲಿದ್ದ ಮತ್ತು ಸೋವಿಯಟ್ ಸೇನೆಯು ಬರ್ಲಿನ್ ಮೇಲೆ ಒಂದು ಸಂಪೂರ್ಣ ಮಿಲಿಟರಿ ದಾಳಿಯನ್ನು ಮಾಡುತ್ತಿದ್ದ ಸಮಯವಾಗಿತ್ತು. ನಮ್ಮ ಸೈನಿಕರು, ಬರ್ಲಿನ್ನಿಂದ 65ಕ್ಕಿಂತಲೂ ಕಡಿಮೆ ಕಿಲೊಮೀಟರ್ ದೂರದಲ್ಲಿದ್ದ ಆಡರ್ ನದಿಯ ಪಕ್ಕದಲ್ಲೇ ಇದ್ದ ಸೇಲೊ ಪಟ್ಟಣದ ಹತ್ತಿರದಲ್ಲಿದ್ದರು. ನಮ್ಮನ್ನು ಹಗಲೂ ರಾತ್ರಿ ಸತತವಾಗಿ ಫಿರಂಗಿ ಗುಂಡುಗಳ ದಾಳಿಗೆ ಗುರಿಮಾಡಲಾಗುತ್ತಿತ್ತು ಮತ್ತು ನನ್ನ ದಳವು ನಾಶವಾಗುತ್ತಾ ಇತ್ತು.
ಆಗಲೇ, ನನ್ನ ಜೀವನದಲ್ಲಿ ಮೊತ್ತಮೊದಲ ಬಾರಿ ನಾನು ಭಾವೋದ್ವೇಗಗೊಂಡು, ಕಣ್ಣೀರು ಸುರಿಸುತ್ತಾ ದೇವರಿಗೆ ಪ್ರಾರ್ಥಿಸಿದೆ. ದೇವಭಕ್ತಳಾದ ನನ್ನ ತಾಯಿ ಅನೇಕಸಲ ಉಲ್ಲೇಖಿಸಿ ಹೇಳುತ್ತಿದ್ದ ಒಂದು ಬೈಬಲ್ ವಚನವು ಆಗ ನನ್ನ ನೆನಪಿಗೆ ಬಂತು: “ಕಷ್ಟಕಾಲದಲ್ಲಿ ನನಗೆ ಮೊರೆಯಿಡಿರಿ; ಬಿಡಿಸುವೆನು; ಆಗ ನನ್ನನ್ನು ಕೊಂಡಾಡುವಿರಿ.” (ಕೀರ್ತನೆ 50:15) ನಾನು ಅಲ್ಲಿ ಕಂದಕಗಳಲ್ಲಿದ್ದು, ಜೀವಭಯದಲ್ಲಿದ್ದಾಗಲೇ ನಾನು ದೇವರಿಗೆ ಈ ಮೇಲೆ ತಿಳಿಸಲ್ಪಟ್ಟಿರುವ ವಚನವನ್ನು ಕೊಟ್ಟೆ. ನಾನದನ್ನು ಪಾಲಿಸಲು ಶಕ್ತನಾದದ್ದು ಹೇಗೆ? ಮತ್ತು ನಾನು ಜರ್ಮನ್ ಸೇನೆಯ ಸದಸ್ಯನಾಗಿ ಪರಿಣಮಿಸಿದ್ದು ಹೇಗೆ?
ಲಿತ್ಯೂಏನಿಯದಲ್ಲಿ ಬೆಳೆದದ್ದು
IIನೆಯ ವಿಶ್ವ ಯುದ್ಧದ ಸಮಯ, ಅಂದರೆ 1918ರಲ್ಲಿ ಲಿತ್ಯುಏನಿಯವು ಸ್ವಾತಂತ್ರ್ಯವನ್ನು ಪಡೆದು, ಪ್ರಜಾಪ್ರಭುತ್ವ ಸರಕಾರ ವ್ಯವಸ್ಥೆಯನ್ನು ಸ್ಥಾಪಿಸಿಕೊಂಡಿತು. ನಾನು ಬಾಲ್ಟಿಕ್ ಸಮುದ್ರದ ಹತ್ತಿರದಲ್ಲಿದ್ದ ಮೇಮಲ್ (ಕ್ಲೈಪಡ) ಜಿಲ್ಲೆಯಲ್ಲಿ 1925ರಲ್ಲಿ ಜನಿಸಿದೆ. ಆ ಜಿಲ್ಲೆಯು ನನ್ನ ಜನನದ ಒಂದು ವರ್ಷದ ಮುಂಚೆಯೇ ಲಿತ್ಯುಏನಿಯದ ಭಾಗವಾಗಿ ಸೇರಿಸಲ್ಪಟ್ಟಿತ್ತು.
ನನ್ನ ಐದು ಮಂದಿ ಸಹೋದರಿಯರ ಮತ್ತು ನನ್ನ ಬಾಲ್ಯದ ದಿನಗಳು ಆನಂದಮಯವಾಗಿದ್ದವು. ನಮ್ಮ ತಂದೆಯು ಒಬ್ಬ ಆಪ್ತ ಮಿತ್ರನಂತಿದ್ದು, ಯಾವಾಗಲೂ ಮಕ್ಕಳಾದ ನಮ್ಮೊಂದಿಗೆ ಜೊತೆಯಾಗಿ ಕೆಲಸಮಾಡುತ್ತಿದ್ದರು. ನನ್ನ ಹೆತ್ತವರು ಇವ್ಯಾಂಜಲಿಕಲ್ ಚರ್ಚಿನ ಸದಸ್ಯರಾಗಿದ್ದರಾದರೂ ಅವರು ಎಂದೂ ಅಲ್ಲಿಗೆ ಹೋಗುತ್ತಿರಲಿಲ್ಲ. ಯಾಕಂದರೆ ಪಾದ್ರಿಯ ಕಪಟತನವನ್ನು ನೋಡಿ ತಾಯಿ ಜಿಗುಪ್ಸೆಗೊಂಡಿದ್ದರು. ಆದರೂ ಅವರು ದೇವರನ್ನು ಮತ್ತು ಆತನ ವಾಕ್ಯವಾದ ಬೈಬಲನ್ನು ಪ್ರೀತಿಸುತ್ತಿದ್ದರು ಮತ್ತು ಅದನ್ನು ಉತ್ಸುಕತೆಯಿಂದ ಓದುತ್ತಿದ್ದರು.
1939ರಲ್ಲಿ ಲಿತ್ಯುಏನಿಯದ ಯಾವ ಭಾಗದಲ್ಲಿ ನಾವು ಜೀವಿಸುತ್ತಿದ್ದೆವೊ ಅದನ್ನು ಜರ್ಮನಿಯು ವಶಪಡಿಸಿಕೊಂಡಿತು. ಅನಂತರ 1943ರ ಆರಂಭದ ಭಾಗದಲ್ಲಿ, ಜರ್ಮನಿಯ ಸೇನೆಯಲ್ಲಿ ಮಿಲಿಟರಿ ಸೇವೆಗಾಗಿ ನನ್ನನ್ನು ಕರೆಯಲಾಯಿತು. ಒಂದು ಹೋರಾಟದಲ್ಲಿ ನಾನು ಗಾಯಗೊಂಡೆನಾದರೂ ಅದರಿಂದ ಚೇತರಿಸಿಕೊಂಡ ಬಳಿಕ ಪೂರ್ವ ದಿಕ್ಕಿನಲ್ಲಿದ್ದ ರಣರಂಗಕ್ಕೆ ಹಿಂದಿರುಗಿದೆ. ಇಷ್ಟರೊಳಗೆ ಯುದ್ಧದ ಸ್ಥಿತಿಯಲ್ಲಿ ಏರುಪಾರಾಗಿತ್ತು ಮತ್ತು ಸೋವಿಯಟ್ ಸೇನೆಯನ್ನು ಎದುರಿಸಲಾಗದೆ ಜರ್ಮನರು ಹಿಮ್ಮೆಟ್ಟುತ್ತಿದ್ದರು. ಪೀಠಿಕೆಯಲ್ಲಿ ತಿಳಿಸಲ್ಪಟ್ಟಿರುವಂತೆ, ನಾನು ಸಾವಿನ ದವಡೆಯಿಂದ ಪಾರಾದದ್ದು ಆಗಲೇ.
ನನ್ನ ಮಾತನ್ನು ಪಾಲಿಸುವುದು
ಯುದ್ಧದ ಸಮಯದಲ್ಲಿ, ನನ್ನ ಹೆತ್ತವರು ಲೈಪ್ಸಿಗ್ನ ಆಗ್ನೇಯ ದಿಕ್ಕಿನಲ್ಲಿ ಜರ್ಮನಿಯ ಆಶಾಟ್ಸ್ ಎಂಬಲ್ಲಿಗೆ ಸ್ಥಳಾಂತರಿಸಿದರು. ಯುದ್ಧಾನಂತರದ ಅವಧಿಯಲ್ಲಿ ಅವರನ್ನು ಹುಡುಕುವುದು ತುಂಬ ಕಷ್ಟಕರವಾಗಿತ್ತು. ಆದರೆ ಕೊನೆಯಲ್ಲಿ ನಮ್ಮ ಪುನರ್ಮಿಲನವಾದಾಗ ನಮ್ಮ ಸಂತೋಷಕ್ಕೆ ಪಾರವೇ ಇರಲಿಲ್ಲ! ಅನಂತರ, ಏಪ್ರಿಲ್ 1947ರಲ್ಲಿ ನಾನು ತಾಯಿಯೊಂದಿಗೆ ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಾದ ಮ್ಯಾಕ್ಸ್ ಶೂಬರ್ಟ್ರು ನೀಡಿದ ಸಾರ್ವಜನಿಕ ಭಾಷಣಕ್ಕೆ ಹೋದೆ. ಸತ್ಯ ಧರ್ಮವನ್ನು ಕಂಡುಕೊಂಡಿದ್ದೇನೆಂದು ತಾಯಿಗೆ ಮನವರಿಕೆಯಾಯಿತು ಮತ್ತು ಇನ್ನೂ ಕೆಲವೊಂದು ಕೂಟಗಳಿಗೆ ಹಾಜರಾದ ನಂತರ ನನಗೂ ಹಾಗೆಯೇ ಅನಿಸಿತು.
ಅದಾಗಿ ಸ್ವಲ್ಪ ಸಮಯದೊಳಗೆ ತಾಯಿಯು ಒಂದು ಏಣಿಯಿಂದ ಕೆಳಗೆಬಿದ್ದು ಗಾಯಮಾಡಿಕೊಂಡರು. ಇದರಿಂದ ನರಳಿ ಕೆಲವು ತಿಂಗಳುಗಳ ನಂತರ ಅವರು ಸತ್ತುಹೋದರು. ತಮ್ಮ ಮರಣದ ಮುಂಚೆ ಆಸ್ಪತ್ರೆಯಲ್ಲಿದ್ದಾಗ, ಅವರು ನನ್ನನ್ನು ಭಾವಪೂರ್ವಕವಾಗಿ ಉತ್ತೇಜಿಸಿದ್ದು: “ನನ್ನ ಮಕ್ಕಳಲ್ಲಿ ಕಡಿಮೆಪಕ್ಷ ಒಬ್ಬನಾದರೂ ದೇವರ ಮಾರ್ಗವನ್ನು ಕಂಡುಹಿಡಿಯಲೆಂದು ನಾನು ಎಷ್ಟೋ ಸಲ ಪ್ರಾರ್ಥಿಸಿದ್ದೇನೆ. ನನ್ನ ಪ್ರಾರ್ಥನೆಗಳು ಉತ್ತರಿಸಲ್ಪಟ್ಟಿವೆಯೆಂದು ನನಗೀಗ ಅನಿಸುತ್ತದೆ, ಮತ್ತು ಈಗ ನಾನು ನೆಮ್ಮದಿಯಿಂದ ಸಾಯಬಲ್ಲೆ.” ತಾಯಿ ಸತ್ತವರೊಳಗಿಂದ ಎದ್ದುಬರುವಾಗ, ಅವರ ಪ್ರಾರ್ಥನೆಗಳು ಈಡೇರಿದವೆಂಬುದನ್ನು ತಿಳಿದುಕೊಳ್ಳುವ ಸಮಯಕ್ಕಾಗಿ ನಾನೆಷ್ಟು ಕಾತುರನಾಗಿದ್ದೇನೆ!—ಯೋಹಾನ 5:28.
ಸಹೋದರ ಶೂಬರ್ಟ್ರ ಭಾಷಣವನ್ನು ಕೇಳಿದ ಕೇವಲ ನಾಲ್ಕು ತಿಂಗಳುಗಳ ನಂತರ ಆಗಸ್ಟ್ 8, 1947ರಂದು, ಲೈಪ್ಸಿಗ್ನಲ್ಲಿ ನಡೆದ ಒಂದು ಸಮ್ಮೇಳನದಲ್ಲಿ ದೀಕ್ಷಾಸ್ನಾನವನ್ನು ತೆಗೆದುಕೊಳ್ಳುವ ಮೂಲಕ ನಾನು ಯೆಹೋವ ದೇವರಿಗೆ ಮಾಡಿದ್ದ ಸಮರ್ಪಣೆಯನ್ನು ಸಂಕೇತಿಸಿದೆ. ಕಟ್ಟಕಡೆಗೆ, ನಾನು ದೇವರಿಗೆ ಕೊಟ್ಟ ಮಾತನ್ನು ಪೂರೈಸುವರೆ ಕ್ರಮಗಳನ್ನು ಕೈಗೊಳ್ಳಲಾರಂಭಿಸಿದ್ದೆ. ಸ್ವಲ್ಪ ಸಮಯದೊಳಗೆ ನಾನೊಬ್ಬ ಪಯನೀಯರ್, ಅಂದರೆ ಯೆಹೋವನ ಸಾಕ್ಷಿಗಳ ಒಬ್ಬ ಪೂರ್ಣ ಸಮಯದ ಶುಶ್ರೂಷಕನಾದೆ. ತದನಂತರ ಜರ್ಮನ್ ಡೆಮೊಕ್ರ್ಯಾಟಿಕ್ ರಿಪಬ್ಲಿಕ್ ಅಥವಾ ಪೂರ್ವ ಜರ್ಮನಿಯಾಗಿ ಪರಿಣಮಿಸಿದ ಕ್ಷೇತ್ರದಲ್ಲಿ, ಆಗ ಬಹುಮಟ್ಟಿಗೆ 400 ಪಯನೀಯರರು ವಾಸಿಸುತ್ತಿದ್ದರು.
ನಂಬಿಕೆಯ ಆರಂಭದ ಪರೀಕ್ಷೆಗಳು
ನಾನು ಜರ್ಮನಿಯ ಸೋಶಿಯಲಿಸ್ಟ್ ಯೂನಿಟ್ ಪಾರ್ಟಿ (SED)ಯನ್ನು ಸೇರಿಕೊಳ್ಳುವಲ್ಲಿ, ಸರಕಾರದಿಂದ ಪ್ರಾಯೋಜಿತವಾದ ವಿಶ್ವವಿದ್ಯಾನಿಲಯದ ಶಿಕ್ಷಣವು ಸಿಗುವುದೆಂಬ ಆಮಿಷವನ್ನೊಡ್ಡಿ, ಆಸ್ಚಾಟ್ಸ್ನಲ್ಲಿದ್ದ ಒಬ್ಬ ನೆರೆಯವನು ಮಾರ್ಕ್ಸ್ವಾದದಲ್ಲಿ ನನ್ನ ಆಸಕ್ತಿಯನ್ನು ಕೆರಳಿಸಲು ಪ್ರಯತ್ನಿಸಿದನು. ಯೇಸು ಸಹ ಸೈತಾನನ ನೀಡಿಕೆಯನ್ನು ತಳ್ಳಿಹಾಕಿದಂತೆಯೇ ನಾನೂ ಆ ನೀಡಿಕೆಯನ್ನು ನಿರಾಕರಿಸಿದೆ.—ಮತ್ತಾಯ 4:8-10.
1949ರ ಏಪ್ರಿಲ್ ತಿಂಗಳಿನಲ್ಲಿ ಒಂದು ದಿನ ಇಬ್ಬರು ಪೊಲೀಸರು ನನ್ನ ಕೆಲಸದ ಸ್ಥಳಕ್ಕೆ ಬಂದು, ನಾನು ಅವರೊಂದಿಗೆ ಹೋಗುವಂತೆ ಒತ್ತಾಯಿಸಿದರು. ನನ್ನನ್ನು ಸೋವಿಯಟ್ ಇಂಟೆಲಿಜೆನ್ಸ್ ಸರ್ವಿಸ್ನ ಸ್ಥಳಿಕ ಕಛೇರಿಗೆ ಕರೆದೊಯ್ಯಲಾಯಿತು. ಅಲ್ಲಿ, ನಾನು ಪಾಶ್ಚಾತ್ಯ ಬಂಡವಾಳಗಾರರಿಗೋಸ್ಕರ ಕೆಲಸಮಾಡುತ್ತಿದ್ದೇನೆಂಬ ಆರೋಪವನ್ನು ಹೊರಿಸಲಾಯಿತು. ಮನೆಯಿಂದ ಮನೆಗೆ ಹೋಗುವ ಕೆಲಸವನ್ನು ಮುಂದುವರಿಸಿಕೊಂಡು, ಯಾರಾದರೂ ಸೋವಿಯಟ್ ಒಕ್ಕೂಟದ ಕುರಿತಾಗಿ ಅಥವಾ ಎಸ್.ಇ.ಡಿ.ಯ ಕುರಿತಾಗಿ ನಕಾರಾತ್ಮಕವಾಗಿ ಮಾತಾಡುವಲ್ಲಿ ಅಥವಾ ಯೆಹೋವನ ಸಾಕ್ಷಿಗಳ ಕೂಟಗಳನ್ನು ಯಾರಾದರೂ ಸಂದರ್ಶಿಸುವಲ್ಲಿ ಅವರ ಕುರಿತಾಗಿ ತಮಗೆ ವರದಿಸುವುದಾದರೆ ನಾನು ದೋಷಮುಕ್ತನಾಗಿ ರುಜುವಾಗುವೆನೆಂದು ಅವರು ಹೇಳಿದರು. ನಾನು ಅವರ ಈ ಮಾತಿಗೆ ಒಪ್ಪದಿದ್ದಾಗ, ನನ್ನನ್ನು ಸೆರೆಯಲ್ಲಿಡಲಾಯಿತು. ಅನಂತರ ನನ್ನನ್ನು ಮಿಲಿಟರಿ ಕೋರ್ಟ್ನಂತಿದ್ದ ಕೋರ್ಟಿಗೆ ಕರೆದೊಯ್ಯಲಾಯಿತು. ನನ್ನ ಶಿಕ್ಷೆ: ಸೈಬೀರಿಯದಲ್ಲಿ 15 ವರ್ಷಗಳ ಕಠಿನ ದುಡಿಮೆ!
ಆದರೂ ನಾನು ಶಾಂತನಾಗಿದ್ದೆ ಮತ್ತು ಇದನ್ನು ನೋಡಿ ಆ ಅಧಿಕಾರಿಗಳು ಪ್ರಭಾವಿತರಾದರು. ಅನಂತರ ಅವರು, ನನ್ನ ಶಿಕ್ಷೆಯು ಇನ್ನೂ ಜಾರಿಯಲ್ಲಿರುವುದು, ಆದರೆ ನಾನು ಅವರೊಂದಿಗೆ ಸಹಕರಿಸಲು ಮನಸ್ಸು ಮಾಡುವ ತನಕ, ವಾರಕ್ಕೊಮ್ಮೆ ಠಾಣೆಗೆ ಬಂದು ವರದಿಸಬೇಕೆಂದು ಹೇಳಿದರು. ಹೆಚ್ಚು ಪ್ರೌಢ ಸಾಕ್ಷಿಗಳ ಸಲಹೆಯನ್ನು ಬಯಸುತ್ತಾ, ನಾನು ಮ್ಯಾಗ್ಡಬರ್ಗ್ಗೆ ಪ್ರಯಾಣಿಸಿದೆ. ಆ ಸಮಯದಲ್ಲಿ ವಾಚ್ಟವರ್ ಸೊಸೈಟಿಯ ಬ್ರಾಂಚ್ ಆಫೀಸ್ ಅಲ್ಲಿತ್ತು. ಆ ಪ್ರಯಾಣವು ಸುಲಭವಾಗಿರಲಿಲ್ಲ ಯಾಕಂದರೆ ನನ್ನ ಮೇಲೆ ಕಣ್ಣಿಡಲಾಗಿತ್ತು. ಮ್ಯಾಗ್ಡಬರ್ಗ್ನಲ್ಲಿದ್ದ ಕಾನೂನು ಇಲಾಖೆಯಲ್ಲಿ ಕೆಲಸಮಾಡುತ್ತಿದ್ದ ಅರ್ನ್ಸ್ಟ್ ವೌ ನನಗೆ ಹೇಳಿದ್ದು: “ಹೋರಾಡಿದರೆ ಜಯಿಸುವಿ. ರಾಜಿಮಾಡಿಕೊಂಡರೆ, ಸೋತುಹೋದಿಯೆಂದು ಅರ್ಥ. ಕೂಟ ಶಿಬಿರದಲ್ಲಿ ನಾವು ಅದನ್ನೇ ಕಲಿತುಕೊಂಡೆವು.”a ದೇವರ ಸೇವೆ ಮಾಡಲು ನಾನು ಕೊಟ್ಟ ಮಾತನ್ನು ನಡೆಸಿಕೊಡುವಂತೆ ಆ ಸಲಹೆಯೇ ನನಗೆ ಸಹಾಯಮಾಡಿತು.
ನಿಷೇಧ ಮತ್ತು ಪುನರ್ಬಂಧನ
ಜುಲೈ 1950ರಲ್ಲಿ, ನಾನು ಸಂಚರಣ ಮೇಲ್ವಿಚಾರಕನಾಗಿ ಸೇವೆಸಲ್ಲಿಸುವಂತೆ ಪುನಃ ಶಿಫಾರಸ್ಸು ಮಾಡಲಾಯಿತು. ಆದರೆ ಆಗಸ್ಟ್ 30ರಂದು, ಪೊಲೀಸರು ಮ್ಯಾಗ್ಡಬರ್ಗ್ನಲ್ಲಿರುವ ನಮ್ಮ ಆಫೀಸಿನ ಮೇಲೆ ದಾಳಿ ನಡಿಸಿದರು ಮತ್ತು ನಮ್ಮ ಸಾರುವ ಕಾರ್ಯವನ್ನು ನಿಷೇಧಿಸಲಾಯಿತು. ಆದುದರಿಂದ ನನ್ನ ನೇಮಕವನ್ನು ಬದಲಾಯಿಸಲಾಯಿತು. ಪಾಲ್ ಹಿರ್ಶ್ಬರ್ಗ ಮತ್ತು ನನಗೆ ಸುಮಾರು 50 ಸಭೆಗಳೊಂದಿಗೆ ಕೆಲಸಮಾಡಲಿಕ್ಕಿತ್ತು. ನಿಷೇಧದ ಕೆಳಗೂ ಸಹೋದರರು ತಮ್ಮ ಶುಶ್ರೂಷೆಯನ್ನು ಮುಂದುವರಿಸಿಕೊಂಡು ಹೋಗುವುದರಲ್ಲಿ ವ್ಯವಸ್ಥಿತರಾಗಿರುವಂತೆ ನಾವು ಅವರಿಗೆ ಸಹಾಯಮಾಡಬೇಕಿತ್ತು. ಪ್ರತಿಯೊಂದು ಸಭೆಯೊಂದಿಗೆ ನಾವು ಎರಡು ಅಥವಾ ಮೂರು ದಿನಗಳನ್ನು ಕಳೆಯುತ್ತಿದ್ದೆವು. ಮುಂದಿನ ತಿಂಗಳುಗಳಲ್ಲಿ ಆರು ಸಲ ಪೊಲೀಸರು ನನ್ನನ್ನು ಬಂಧಿಸುವುದರಿಂದ ತಪ್ಪಿಸಿಕೊಂಡೆ!
ಒಂದು ಸಭೆಯಲ್ಲಿ ಯಾರೊ ಒಬ್ಬ ವ್ಯಕ್ತಿಯು ನುಸುಳಿಕೊಂಡು ಗುಪ್ತವಾಗಿ ನಮ್ಮ ಕುರಿತಾಗಿ ಸರಕಾರದ ಭದ್ರತಾ ಇಲಾಖೆ, ಸ್ಟಾಸಿಗೆ ನಮ್ಮ ಕುರಿತಾಗಿ ತಿಳಿಸಿದನು. ಆದ್ದರಿಂದ, ಜುಲೈ 1951ರಲ್ಲಿ ಪಾಲ್ ಮತ್ತು ನಾನು ಬೀದಿಯಲ್ಲಿದ್ದಾಗ, ಬಂದೂಕು ಎತ್ತಿಹಿಡಿದಿದ್ದ ಐದು ಮಂದಿ ನಮ್ಮನ್ನು ದಸ್ತಗಿರಿಮಾಡಿದರು. ಹಿನ್ನೋಟ ಬೀರುವಾಗ, ನಾವು ಯೆಹೋವನ ಸಂಸ್ಥೆಯ ಮೇಲೆ ಸಾಕಷ್ಟು ಆತುಕೊಂಡಿರದಿದ್ದರಿಂದಲೇ ಹಾಗಾಯಿತೆಂದು ಅನಿಸುತ್ತದೆ. ನಾವು ಎಂದಿಗೂ ಜೊತೆಯಾಗಿ ಪ್ರಯಾಣಿಸಬಾರದೆಂದು ಹಿರಿಯ ಸಹೋದರರು ನಮಗೆ ಹೇಳಿದ್ದರು. ನಮ್ಮ ಅತಿಯಾದ ಆತ್ಮವಿಶ್ವಾಸದಿಂದಾಗಿ ನಾವು ನಮ್ಮ ಸ್ವಾತಂತ್ರವನ್ನು ಕಳೆದುಕೊಂಡೆವು! ಅಷ್ಟುಮಾತ್ರವಲ್ಲದೆ, ನಮ್ಮ ದಸ್ತಗಿರಿಯಾಗುವ ಪಕ್ಷದಲ್ಲಿ ನಾವೇನು ಹೇಳುವೆವೆಂಬುದನ್ನು ನಾವು ಮುಂಚಿತವಾಗಿ ಚರ್ಚಿಸಿರಲೇ ಇಲ್ಲ.
ಸೆರೆಮನೆಯ ಕೋಣೆಯಲ್ಲಿದ್ದಾಗ, ನಾನು ನನ್ನ ಸಹೋದರರಿಗೆ ದ್ರೋಹಬಗೆಯದಂತೆ ಅಥವಾ ನನ್ನ ನಂಬಿಕೆಯ ವಿಷಯದಲ್ಲಿ ರಾಜಿಮಾಡಿಕೊಳ್ಳದಂತೆ ಸಹಾಯಮಾಡಲು, ಕಣ್ಣೀರುಸುರಿಸುತ್ತಾ ಯೆಹೋವನನ್ನು ಬೇಡಿಕೊಂಡೆ. ನಾನು ನಿದ್ದೆಹೋದ ನಂತರ, ನನ್ನ ಮಿತ್ರನಾದ ಪಾಲ್ನ ಧ್ವನಿಯಿಂದ ತಟ್ಟನೆ ಎಚ್ಚರಗೊಂಡೆ. ನಾನಿದ್ದ ಕೋಣೆಯ ಮೇಲಿನ ಕೋಣೆಯಲ್ಲಿ ಸ್ಟಾಸಿಯವರು ಅವನನ್ನು ಪ್ರಶ್ನಿಸುತ್ತಾ ಇದ್ದರು. ಆ ರಾತ್ರಿ ತುಂಬ ಸೆಕೆಯಾಗುತ್ತಿದ್ದದರಿಂದ ಬಾಲ್ಕನಿಯ ಬಾಗಿಲನ್ನು ತೆರೆದಿಡಲಾಗಿತ್ತು. ಮತ್ತು ನಾನು ಎಲ್ಲವನ್ನೂ ಮಂದವಾಗಿ ಕೇಳಸಾಧ್ಯವಿತ್ತು. ಅನಂತರ ಅವರು ನನ್ನನ್ನು ವಿಚಾರಣೆಗೊಳಪಡಿಸಿದಾಗ ನಾನೂ ಅದೇ ರೀತಿಯ ಉತ್ತರಗಳನ್ನು ಕೊಟ್ಟಾಗ ಅಧಿಕಾರಿಗಳಿಗೆ ಆಶ್ಚರ್ಯವಾಯಿತು. “ಕಷ್ಟಕಾಲದಲ್ಲಿ ನನಗೆ ಮೊರೆಯಿಡಿರಿ; ಬಿಡಿಸುವೆನು; ಆಗ ನನ್ನನ್ನು ಕೊಂಡಾಡುವಿರಿ” ಎಂಬ ತಾಯಿಯ ಅಚ್ಚುಮೆಚ್ಚಿನ ವಚನವು ಪುನಃ ಪುನಃ ನನ್ನ ಮನಸ್ಸಿಗೆ ಮರುಕಳಿಸುತ್ತಾ ಇತ್ತು ಮತ್ತು ನನಗೆ ತುಂಬ ಉತ್ತೇಜನವು ಸಿಕ್ಕಿತು.—ಕೀರ್ತನೆ 50:15.
ನಮ್ಮನ್ನು ಪ್ರಶ್ನಿಸಿಯಾದ ನಂತರ, ಪಾಲ್ ಮತ್ತು ನಾನು ಹಾಲದಲ್ಲಿ ಮತ್ತು ಅನಂತರ ಮ್ಯಾಗ್ಡಬರ್ಗ್ನಲ್ಲಿರುವ ಸ್ಟಾಸೀ ಸೆರೆಮನೆಯಲ್ಲಿ ವಿಚಾರಣಾ ಪೂರ್ವ ಬಂಧನದಲ್ಲಿದ್ದೆವು. ಮ್ಯಾಗ್ಡಬರ್ಗ್ನಲ್ಲಿದ್ದಾಗ ಆಗಾಗ್ಗೆ ನಾನು, ಆ ಸಮಯದಲ್ಲಿ ಮುಚ್ಚಿಟ್ಟಿದ್ದ ನಮ್ಮ ಬ್ರಾಂಚ್ ಸೌಕರ್ಯಗಳನ್ನು ನೋಡಸಾಧ್ಯವಿತ್ತು. ಸೆರೆಮನೆಯಲ್ಲಿರುವ ಬದಲಿಗೆ ಅಲ್ಲಿ ಕೆಲಸಮಾಡುತ್ತಾ ಇರುತ್ತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತೆಂದು ನಾನು ಆಶಿಸಿದೆ! 1952ರ ಫೆಬ್ರವರಿಯಲ್ಲಿ, ನಮ್ಮ ಶಿಕ್ಷೆಯನ್ನು ಪ್ರಕಟಿಸಲಾಯಿತು: “ಸೆರೆಮನೆಯಲ್ಲಿ 10 ವರ್ಷ ಮತ್ತು 20 ವರ್ಷಗಳ ವರೆಗೆ ನಾಗರಿಕ ಹಕ್ಕುಗಳ ನಷ್ಟ.”
ಸೆರೆಮನೆಯಲ್ಲಿ ನಂಬಿಕೆಯನ್ನು ಕಾಪಾಡಿಕೊಳ್ಳುವುದು
ಕಡಿಮೆ ಪಕ್ಷ ಹತ್ತು ವರ್ಷಗಳ ಸೆರೆವಾಸ ಶಿಕ್ಷೆಯನ್ನು ಪಡೆದಿದ್ದ ಯೆಹೋವನ ಸಾಕ್ಷಿಗಳು, ಸೆರೆಮನೆಯಲ್ಲಿದ್ದಾಗ ಸ್ವಲ್ಪ ಸಮಯದ ವರೆಗೆ ಒಂದು ವಿಶೇಷ ರೀತಿಯ ಗುರುತನ್ನು ತಮ್ಮ ಬಟ್ಟೆಯ ಮೇಲೆ ಧರಿಸುತ್ತಿದ್ದರು. ಪ್ಯಾಂಟಿನ ಒಂದು ಕಾಲಿನಲ್ಲಿ ಮತ್ತು ಜಾಕೆಟಿನ ಒಂದು ತೋಳಿನಲ್ಲಿ ಒಂದು ಕೆಂಪು ಪಟ್ಟಿಯನ್ನು ಹೊಲಿಸಲಾಗುತ್ತಿತ್ತು. ಅಲ್ಲದೆ, ನಾವು ಅಪಾಯಕಾರಿಯಾದ ಅಪರಾಧಿಗಳಾಗಿದ್ದೇವೆಂದು ಕಾವಲುಗಾರರಿಗೆ ಎಚ್ಚರಿಸಲಿಕ್ಕಾಗಿ, ನಮ್ಮ ಸೆರೆಮನೆ ಕೋಣೆಯ ಬಾಗಿಲಿನ ಹೊರಗೆ ಕೆಂಪು ರಟ್ಟಿನ ಉರುಟಾದ ತುಂಡನ್ನು ಅಂಟಿಸಲಾಗುತ್ತಿತ್ತು.
ಪಾತಕಿಗಳಲ್ಲೇ ಅತಿ ಕೆಟ್ಟವರಾಗಿದ್ದೇವೊ ಎಂಬಂತೆ ಅಧಿಕಾರಿಗಳು ನಮ್ಮನ್ನು ಪರಿಗಣಿಸುತ್ತಿದ್ದರು. ನಮ್ಮ ಬಳಿ ಒಂದು ಬೈಬಲನ್ನು ಸಹ ಇಟ್ಟುಕೊಳ್ಳಲು ಸಾಧ್ಯವಿರಲಿಲ್ಲ. ಅದಕ್ಕೆ ಕಾರಣ ಒಬ್ಬ ಕಾವಲುಗಾರನು ಹೇಳಿದಂತಿದೆ: “ತನ್ನ ಕೈಯಲ್ಲಿ ಬೈಬಲನ್ನು ಹಿಡಿದುಕೊಂಡಿರುವ ಒಬ್ಬ ಯೆಹೋವನ ಸಾಕ್ಷಿಯು, ಬಂದೂಕನ್ನು ಹಿಡಿದಿರುವ ಒಬ್ಬ ಅಪರಾಧಿಯಂತಿದ್ದಾನೆ.” ಬೈಬಲಿನ ಚೂರುಪಾರು ಭಾಗಗಳನ್ನು ಪಡೆಯಲಿಕ್ಕಾಗಿ, ನಾವು ರಷ್ಯನ್ ಬರಹಗಾರ ಲೀಯೊ ಟಾಲ್ಸ್ಟಾಯ್ ಕೃತಿಗಳನ್ನು ಓದುತ್ತಿದ್ದೆವು, ಯಾಕಂದರೆ ಅವನು ಅನೇಕವೇಳೆ ತನ್ನ ಪುಸ್ತಕಗಳಲ್ಲಿ ಬೈಬಲ್ ವಚನಗಳನ್ನು ಉಲ್ಲೇಖಿಸುತ್ತಿದ್ದನು. ನಾವು ಈ ಬೈಬಲ್ ವಚನಗಳನ್ನು ಬಾಯಿಪಾಠ ಮಾಡಿಕೊಂಡೆವು.
1951ರಲ್ಲಿ ನನ್ನ ದಸ್ತಗಿರಿಯಾಗುವ ಮುಂಚೆ, ಎಲ್ಸಾ ರೀಮ ಎಂಬವಳೊಂದಿಗೆ ನನ್ನ ನಿಶ್ಚಿತಾರ್ಥವಾಗಿತ್ತು. ಅವಳು ಸಾಧ್ಯವಿರುವಷ್ಟು ಬಾರಿ ನನ್ನನ್ನು ಭೇಟಿಮಾಡಲು ಸೆರೆಮನೆಗೆ ಬರುತ್ತಿದ್ದಳು ಮತ್ತು ತಿಂಗಳಿಗೊಮ್ಮೆ ಆಹಾರದ ಪೊಟ್ಟಣವನ್ನು ಕಳುಹಿಸುತ್ತಿದ್ದಳು. ಆ ಪೊಟ್ಟಣದಲ್ಲಿ ಅವಳು ಆತ್ಮಿಕ ಆಹಾರವನ್ನೂ ಬಚ್ಚಿಡುತ್ತಿದ್ದಳು. ಒಂದು ಸಲ ಕೆಲವೊಂದು ಸಾಸೆಜ್ಗಳಲ್ಲಿ ಅವಳು ವಾಚ್ಟವರ್ ಪತ್ರಿಕೆಯ ಕೆಲವೊಂದು ಲೇಖನಗಳನ್ನು ತುಂಬಿಸಿದಳು. ಸಾಮಾನ್ಯವಾಗಿ ಕಾವಲುಗಾರರು, ಸಾಸೆಜ್ಗಳೊಳಗೆ ಏನಾದರೂ ಬಚ್ಚಿಡಲ್ಪಟ್ಟಿದೆಯೊ ಎಂದು ನೋಡಲು ಅವುಗಳನ್ನು ಕತ್ತರಿಸುತ್ತಿದ್ದರು. ಆದರೆ ಈ ಸಲ, ಆ ಪೊಟ್ಟಣವು ಕೆಲಸಮುಗಿಯುವ ಸಮಯದಲ್ಲಿ ಬಂದು ತಲಪಿದ್ದರಿಂದ, ಅದನ್ನು ಅವರು ಚೆಕ್ ಮಾಡಲಿಲ್ಲ.
ಆ ಸಮಯದಲ್ಲಿ ಕಾರ್ಲ್ ಹೈಂಟ್ಸ್ ಕ್ಲೇಬರ್ ಮತ್ತು ನನ್ನೊಂದಿಗೆ ಸೆರೆಮನೆಯಲ್ಲಿ ಸಾಕ್ಷಿಗಳಾಗಿರದಿದ್ದ ಮೂವರು ಸೆರೆವಾಸಿಗಳಿದ್ದರು. ಅವರ ಕಣ್ತಪ್ಪಿಸಿ ನಾವು ದ ವಾಚ್ಟವರ್ ಪತ್ರಿಕೆಯನ್ನು ಹೇಗೆ ಓದಸಾಧ್ಯವಿತ್ತು? ನಾವು ಒಂದು ಪುಸ್ತಕವನ್ನು ಓದುತ್ತಿದ್ದೇವೊ ಎಂಬಂತೆ ನಟಿಸುತ್ತಿದ್ದೆವು, ಆದರೆ ವಾಸ್ತವದಲ್ಲಿ ಅದರೊಳಗೆ ವಾಚ್ಟವರ್ ಲೇಖನಗಳನ್ನು ಬಚ್ಚಿಟ್ಟುಕೊಳ್ಳುತ್ತಿದ್ದೆವು. ಸೆರೆಮನೆಯಲ್ಲಿದ್ದ ಜೊತೆ ಸಾಕ್ಷಿಗಳಿಗೂ ನಾವು ಈ ಅಮೂಲ್ಯವಾದ ಆತ್ಮಿಕ ಆಹಾರವನ್ನು ದಾಟಿಸಿದೆವು.
ಸೆರೆಮನೆಯಲ್ಲಿದ್ದಾಗ, ದೇವರ ರಾಜ್ಯದ ಕುರಿತಾಗಿ ಇತರರಿಗೆ ತಿಳಿಸುವ ಅವಕಾಶಗಳ ಲಾಭ ಪಡೆದುಕೊಂಡೆವು. ನನ್ನ ಜೊತೆ ಸೆರೆವಾಸಿಗಳಲ್ಲೊಬ್ಬನು, ಇದರ ಫಲಿತಾಂಶವಾಗಿ ಒಬ್ಬ ವಿಶ್ವಾಸಿಯಾದುದನ್ನು ನೋಡಲು ನಾನು ಉಲ್ಲಾಸಿಸಿದೆ.—ಮತ್ತಾಯ 24:14.
ಪೂರ್ಣ ಸಮಯದ ಶುಶ್ರೂಷೆಗೆ ಹಿಂದಿರುಗುವುದು
ಸೆರೆಮನೆಯಲ್ಲಿ ಬಹುಮಟ್ಟಿಗೆ ಆರು ವರ್ಷಗಳನ್ನು ಕಳೆದ ನಂತರ, ಏಪ್ರಿಲ್ 1, 1957ರಲ್ಲಿ ನನ್ನನ್ನು ಬಿಡುಗಡೆಮಾಡಲಾಯಿತು. ಎರಡು ವಾರಗಳ ನಂತರ, ನಾನು ಎಲ್ಸಾಳನ್ನು ಮದುವೆಯಾದೆ. ನನ್ನ ಬಿಡುಗಡೆಯಾಗಿದೆಯೆಂದು ಸ್ಟಾಸಿಯವರಿಗೆ ಗೊತ್ತಾದಾಗ, ನನ್ನನ್ನು ಪುನಃ ಸೆರೆಮನೆಗೆ ಹಾಕಲಿಕ್ಕಾಗಿ ಅವರು ಕಾರಣವನ್ನು ಹುಡುಕಿದರು. ಪುನಃ ಸೆರೆಮನೆಗೆ ಹಿಂದಿರುಗುವ ಸಾಧ್ಯತೆಯನ್ನು ತೊಲಗಿಸಲು ಎಲ್ಸಾ ಮತ್ತು ನಾನು ಪಶ್ಚಿಮ ಬರ್ಲಿನ್ನಲ್ಲಿ ವಾಸಿಸಲು ಗಡಿದಾಟಿದೆವು.
ನಾವು ಪಶ್ಚಿಮ ಬರ್ಲಿನ್ಗೆ ಬಂದು ತಲಪಿದಾಗ, ನಮ್ಮ ಯೋಜನೆಗಳೇನೆಂದು ಸೊಸೈಟಿಯು ತಿಳಿದುಕೊಳ್ಳಲು ಬಯಸಿತು. ನಮ್ಮಲ್ಲಿ ಒಬ್ಬರು ಪಯನೀಯರ್ ಸೇವೆಯನ್ನು ಮಾಡುವೆವು, ಇನ್ನೊಬ್ಬರು ಐಹಿಕ ಉದ್ಯೋಗಕ್ಕೆ ಹೋಗುವೆವೆಂದು ನಾವು ವಿವರಿಸಿದೆವು.
“ನೀವು ಇಬ್ಬರೂ ಪಯನೀಯರರಾದರೆ ಹೇಗೆ?” ಎಂದು ನಮಗೆ ಕೇಳಲಾಯಿತು.
“ಅದು ಸಾಧ್ಯವಿರುವಲ್ಲಿ, ನಾವು ಈಗಿಂದೀಗಲೇ ಆರಂಭಿಸುವೆವು” ಎಂದು ಉತ್ತರಿಸಿದೆವು.
ಹೀಗೆ, ನಮ್ಮನ್ನು ಪೋಷಿಸಿಕೊಳ್ಳಲಿಕ್ಕಾಗಿ ಸಹಾಯಮಾಡಲು ಪ್ರತಿ ತಿಂಗಳು ನಮಗೆ ಸ್ವಲ್ಪ ಹಣವನ್ನು ಕೊಡಲಾಯಿತು ಮತ್ತು ನಾವು 1958ರಲ್ಲಿ ಸ್ಪೆಷಲ್ ಪಯನೀಯರ್ ಸೇವೆಯನ್ನು ಆರಂಭಿಸಿದೆವು. ನಾವು ಯಾರೊಂದಿಗೆ ಬೈಬಲನ್ನು ಅಭ್ಯಾಸಿಸಿದೆವೊ ಆ ವ್ಯಕ್ತಿಗಳು ಯೆಹೋವನ ಸೇವಕರಾಗಲು ತಮ್ಮ ಜೀವಿತಗಳಲ್ಲಿ ಬದಲಾವಣೆಗಳನ್ನು ಮಾಡುವುದನ್ನು ನೋಡುವುದು ನಮಗೆ ಎಷ್ಟು ಆನಂದವನ್ನು ತರುತ್ತಿತ್ತು! ಸ್ಪೆಷಲ್ ಪಯನೀಯರ್ ಸೇವೆಯ ಮುಂದಿನ ಹತ್ತು ವರ್ಷಗಳಲ್ಲಿ, ನಾವು ಪತಿಪತ್ನಿಯೋಪಾದಿ ನಿಕಟವಾಗಿ ಕೆಲಸಮಾಡಲು ಕಲಿತೆವು. ಎಲ್ಸಾ ಯಾವಾಗಲೂ ನನ್ನ ಪಕ್ಕದಲ್ಲೇ ಇರುತ್ತಿದ್ದಳು. ನಾನು ಕಾರ್ ಅನ್ನು ರಿಪೇರಿ ಮಾಡುತ್ತಿದ್ದಾಗಲೂ ಪಕ್ಕದಲ್ಲಿರುತ್ತಿದ್ದಳು! ಅಲ್ಲದೆ ನಾವು ಓದುವುದನ್ನು, ಅಭ್ಯಾಸಮಾಡುವುದನ್ನು ಮತ್ತು ಪ್ರಾರ್ಥನೆಯನ್ನೂ ಜೊತೆಯಾಗಿಯೇ ಮಾಡಿದೆವು.
1969ರಲ್ಲಿ ನಮ್ಮನ್ನು ಸಂಚರಣ ಕೆಲಸಕ್ಕೆ ನೇಮಿಸಲಾಯಿತು. ಇದರರ್ಥ, ಪ್ರತಿ ವಾರ ಒಂದು ಭಿನ್ನ ಸಭೆಯಲ್ಲಿರುವ ಸದಸ್ಯರ ಅಗತ್ಯಗಳನ್ನು ಪೂರೈಸಲಿಕ್ಕಾಗಿ ಸಭೆಗಳನ್ನು ಭೇಟಿಮಾಡುವುದು. ಸಂಚರಣ ಕೆಲಸದಲ್ಲಿ ಅನುಭವಿಯಾಗಿದ್ದ ಯೋಸೆಫ್ ಬಾರ್ತ್ರವರು ನನಗೆ ಈ ಬುದ್ಧಿವಾದವನ್ನು ಕೊಟ್ಟರು: “ನಿಮ್ಮ ನೇಮಕದಲ್ಲಿ ಯಶಸ್ವಿಯಾಗಬೇಕಾದರೆ, ಸಹೋದರರೊಂದಿಗೆ ಒಬ್ಬ ಸಹೋದರನಂತೆ ವರ್ತಿಸಿರಿ ಅಷ್ಟೇ.” ನಾನು ಆ ಬುದ್ಧಿವಾದವನ್ನು ಅನ್ವಯಿಸಲು ಪ್ರಯತ್ನಿಸಿದೆ. ಇದರಿಂದಾಗಿ ಜೊತೆ ಸಾಕ್ಷಿಗಳೊಂದಿಗೆ ನಮಗೆ ಒಂದು ಬೆಚ್ಚಗಿನ ಮತ್ತು ಸಾಮರಸ್ಯವುಳ್ಳ ಸಂಬಂಧವಿತ್ತು. ಇದು, ಅಗತ್ಯವಿದ್ದಾಗಲೆಲ್ಲಾ ಸಲಹೆ ಕೊಡುವುದನ್ನು ಸುಲಭವನ್ನಾಗಿ ಮಾಡಿತು.
1972ರಲ್ಲಿ, ಎಲ್ಸಾಳಿಗೆ ಕ್ಯಾನ್ಸರ್ ರೋಗವಿದೆಯೆಂದು ಪತ್ತೆಹಚ್ಚಲಾಯಿತು ಮತ್ತು ಅವಳಿಗೆ ಶಸ್ತ್ರಚಿಕಿತ್ಸೆಯನ್ನು ಮಾಡಲಾಯಿತು. ಅನಂತರ ಅವಳಿಗೆ ಸಂಧಿವಾತವೂ ಆರಂಭವಾಯಿತು. ಇದರಿಂದ ಅವಳಿಗೆ ತುಂಬ ನೋವಾಗುತ್ತಿದ್ದರೂ, ನಾನು ಸಭೆಗಳಿಗೆ ಸೇವೆ ಸಲ್ಲಿಸುತ್ತಿದ್ದಾಗ ಪ್ರತಿ ವಾರ ಅವಳು ನನ್ನೊಂದಿಗೆ ಬರುತ್ತಿದ್ದಳು. ಅವಳಿಗೆ ಸಾಧ್ಯವಾಗುವಷ್ಟರ ಮಟ್ಟಿಗೆ ಸಹೋದರಿಯರೊಂದಿಗೆ ಶುಶ್ರೂಷೆಯಲ್ಲಿ ಕೆಲಸಮಾಡುತ್ತಿದ್ದಳು.
ಅಗತ್ಯಗಳಿಗೆ ಹೊಂದಿಕೊಳ್ಳುವುದು
1984ರಲ್ಲಿ ನನ್ನ ಅತ್ತೆಮಾವಂದಿರಿಗೆ ಸತತವಾದ ಆರೈಕೆಯ ಅಗತ್ಯಬಿತ್ತು. ಆದುದರಿಂದ ಅವರ ಆರೈಕೆಯನ್ನು ಮಾಡಲಿಕ್ಕಾಗಿ ನಾವು ಸಂಚರಣಾ ಕೆಲಸವನ್ನು ನಿಲ್ಲಿಸಿದೆವು. ನಾಲ್ಕು ವರ್ಷಗಳ ಬಳಿಕ ಅವರು ಸಾಯುವ ವರೆಗೂ ಅವರನ್ನು ನೋಡಿಕೊಂಡೆವು. (1 ತಿಮೊಥೆಯ 5:8) ಅನಂತರ 1989ರಲ್ಲಿ ಎಲ್ಸಾ ತುಂಬ ಗಂಭೀರವಾಗಿ ಅಸ್ವಸ್ಥಳಾದಳು. ಸಂತೋಷಕರವಾಗಿ, ಅವಳು ಸಾಧಾರಣ ಮಟ್ಟಿಗೆ ಚೇತರಿಸಿಕೊಂಡಳು. ಆದರೆ ಮನೆಯ ಎಲ್ಲ ಕೆಲಸಗಳನ್ನು ನಾನು ಮಾಡುವ ಅಗತ್ಯವಿದೆ. ಯಾವಾಗಲೂ ನೋವಿನಿಂದ ನರಳುತ್ತಿರುವ ಒಬ್ಬ ವ್ಯಕ್ತಿಯೊಂದಿಗೆ ವ್ಯವಹರಿಸುವ ರೀತಿಯನ್ನು ನಾನು ಇನ್ನೂ ಕಲಿಯುತ್ತಾ ಇದ್ದೇನೆ. ಆದರೆ, ಆ ಮಾನಸಿಕ ಮತ್ತು ಭಾವನಾತ್ಮಕ ಒತ್ತಡದ ಮಧ್ಯೆಯೂ ನಾವು ಆತ್ಮಿಕ ವಿಷಯಗಳಿಗಾಗಿರುವ ನಮ್ಮ ಪ್ರೀತಿಯನ್ನು ಉಳಿಸಿಕೊಂಡಿದ್ದೇವೆ.
ಸಂತೋಷಕರವಾಗಿ, ಈಗಲೂ ನಮ್ಮ ಹೆಸರುಗಳು ಪಯನೀಯರ್ ಪಟ್ಟಿಯಲ್ಲಿದೆ. ನಮಗಿರುವ ಸ್ಥಾನ ಅಥವಾ ನಾವು ಎಷ್ಟು ಮಾಡಬಲ್ಲೆವೆಂಬುದು ಪ್ರಾಮುಖ್ಯ ಸಂಗತಿಯಲ್ಲ, ಬದಲಾಗಿ ನಾವು ನಂಬಿಗಸ್ತರಾಗಿರುವುದೇ ಪ್ರಾಮುಖ್ಯವೆಂಬುದನ್ನು ನಾವು ಗ್ರಹಿಸಲಾರಂಭಿಸಿದ್ದೇವೆ. ನಮ್ಮ ದೇವರಾದ ಯೆಹೋವನನ್ನು ನಾವು ಕೇವಲ ಕೆಲವೊಂದು ವರ್ಷಗಳಿಗಲ್ಲ, ಬದಲಾಗಿ ನಿತ್ಯತೆಗೂ ಸೇವಿಸಲು ಬಯಸುತ್ತೇವೆ. ನಮ್ಮ ಅನುಭವವು ಭವಿಷ್ಯತ್ತಿಗಾಗಿ ಅದ್ಭುತವಾದ ತರಬೇತಿಯಾಗಿದೆ. ಮತ್ತು ತುಂಬ ಕಷ್ಟಕರವಾದ ಪರಿಸ್ಥಿತಿಗಳಲ್ಲೂ ನಾವು ಆತನನ್ನು ಸ್ತುತಿಸುವಂತೆ ಯೆಹೋವನು ನಮಗೆ ಬಲವನ್ನು ಕೊಟ್ಟಿದ್ದಾನೆ.—ಫಿಲಿಪ್ಪಿ 4:13.
[ಅಧ್ಯಯನ ಪ್ರಶ್ನೆಗಳು]
a ಅರ್ನ್ಸ್ಟ್ ವೌರವರ ಜೀವನ ಕಥೆಯು, ಆಗಸ್ಟ್ 1, 1991ರ ದ ವಾಚ್ಟವರ್ ಪತ್ರಿಕೆಯ 25ರಿಂದ 29ನೆಯ ಪುಟಗಳಲ್ಲಿ ಬಂದಿತ್ತು.
[ಪುಟ 23 ರಲ್ಲಿರುವ ಚಿತ್ರ]
ಮ್ಯಾಗ್ಡಬರ್ಗ್ನಲ್ಲಿ ನಾನು ಇಲ್ಲಿ ಸೆರೆಯಲ್ಲಿಡಲ್ಪಟ್ಟೆ
[ಕೃಪೆ]
Gedenkstätte Moritzplatz Magdeburg für die Opfer politischer Gewalt; Foto: Fredi Fröschki, Magdeburg
[ಪುಟ 23 ರಲ್ಲಿರುವ ಚಿತ್ರ]
1957ರಲ್ಲಿ ನಾವು ಮದುವೆಯಾದಾಗ
[ಪುಟ 23 ರಲ್ಲಿರುವ ಚಿತ್ರ]
ಇಂದು ಎಲ್ಸಾಳೊಂದಿಗೆ