ಪೌಲನ ಜೊತೆ ಕೆಲಸಗಾರರು–ಅವರು ಯಾರಾಗಿದ್ದರು?
ಬೈಬಲಿನ ಅಪೊಸ್ತಲರ ಕೃತ್ಯಗಳು ಪುಸ್ತಕದಲ್ಲಿ ಮತ್ತು ಪೌಲನ ಪತ್ರಿಕೆಗಳಲ್ಲಿ ಕೆಲವು ನೂರು ವ್ಯಕ್ತಿಗಳ ಕುರಿತು ಸೂಚಿಸಲಾಗಿದೆ. ಇವರು “ಅನ್ಯಜನರಿಗೆ ಅಪೊಸ್ತಲ”ನಾಗಿದ್ದ ಪೌಲನೊಂದಿಗೆ ವೈಯಕ್ತಿಕ ಸಂಪರ್ಕವನ್ನು ಇಟ್ಟುಕೊಂಡಿದ್ದ ಪ್ರಥಮ ಶತಮಾನದ ಕ್ರೈಸ್ತಸಭೆಯ ಸದಸ್ಯರಾಗಿದ್ದರು. (ರೋಮಾಪುರ 11:13) ಇವರಲ್ಲಿ ಅನೇಕರ ಬಗ್ಗೆ ಬಹಳಷ್ಟು ಮಾಹಿತಿಯಿದೆ. ಪ್ರಾಯಶಃ, ನೀವು ಅಪೊಲ್ಲೋಸ, ಬಾರ್ನಬ ಮತ್ತು ಸೀಲರ ಚಟುವಟಿಕೆಗಳೊಂದಿಗೆ ಚಿರಪರಿಚಿತರಾಗಿರಬಹುದು. ಇನ್ನೊಂದೆಡೆ, ಪ್ರಾಯಶಃ ನಿಮಗೆ ಆರ್ಖಿಪ್ಪ, ಕ್ಲೌದ್ಯ, ದಾಮರಿ, ಲೀನ, ಪೆರ್ಸೀಸ, ಪೂದೆಯ ಮತ್ತು ಸೋಪತ್ರರ ಬಗ್ಗೆ ವಿವರಿಸಲು ಹೆಚ್ಚು ಕಷ್ಟವಾಗಬಹುದು.
ವಿಭಿನ್ನ ಕಾಲಾವಧಿಗಳಲ್ಲಿ ಮತ್ತು ವ್ಯತ್ಯಾಸವಾದ ಪರಿಸ್ಥಿತಿಗಳ ಕೆಳಗೆ, ಅನೇಕ ವ್ಯಕ್ತಿಗಳು ಪೌಲನ ಶುಶ್ರೂಷೆಯನ್ನು ಬೆಂಬಲಿಸುವುದರಲ್ಲಿ ಸಕ್ರಿಯ ಪಾತ್ರ ವಹಿಸಿದರು. ಅರಿಸ್ತಾರ್ಕ, ಲೂಕ ಮತ್ತು ತಿಮೊಥೆಯನಂಥ ಕೆಲವರು ಅನೇಕ ವರ್ಷಗಳ ವರೆಗೆ ಅಪೊಸ್ತಲನ ಜೊತೆಯಲ್ಲಿ ಸೇವೆಮಾಡಿದರು. ಅವನು ಸೆರೆವಾಸದಲ್ಲಿದ್ದಾಗ ಅಥವಾ ಪ್ರಯಾಣಿಸುತ್ತಿದ್ದಾಗ, ಕೆಲವರು ಅವನೊಂದಿಗೆ ಸಹಪ್ರಯಾಣಿಕರಾಗಿಯೂ ಇಲ್ಲವೆ ಆತಿಥೇಯ ಅಥವಾ ಅತಿಥಿಸತ್ಕಾರಿಣಿಯಾಗಿಯೂ ಇದ್ದರು. ದುಃಖಕರವಾಗಿ, ಅಲೆಕ್ಸಾಂದರ, ದೇಮ, ಹೆರ್ಮೊಗೇನ, ಫುಗೇಲ ಮುಂತಾದವರು ಕ್ರೈಸ್ತ ನಂಬಿಕೆಯಲ್ಲಿ ಪಟ್ಟುಹಿಡಿಯಲಿಲ್ಲ.
ಪೌಲನ ಹಲವಾರು ಇತರ ಸ್ನೇಹಿತರಲ್ಲಿ ಅಸುಂಕ್ರಿತ, ಹೆರ್ಮಾನ, ಯೂಲ್ಯ, ಅಥವಾ ಫಿಲೊಲೊಗ ಎಂಬ ಕೆಲವು ವ್ಯಕ್ತಿಗಳನ್ನು ಉಲ್ಲೇಖಿಸುವಾಗ, ನಮಗೆ ಅವರ ಹೆಸರುಗಳಲ್ಲದೆ ಅಷ್ಟೇನೂ ಹೆಚ್ಚು ಗೊತ್ತಿಲ್ಲ. ನೇರ್ಯನ ತಂಗಿ ಅಥವಾ ರೂಫನ ತಾಯಿ ಇಲ್ಲವೆ ಖ್ಲೋಯೆಯ ಮನೆಯವರ ಹೆಸರು ಸಹ ನಮಗೆ ಗೊತ್ತಿಲ್ಲ. (ರೋಮಾಪುರ 16:13-15; 1 ಕೊರಿಂಥ 1:11) ಹೀಗಿದ್ದರೂ, ಈ ನೂರು ಅಥವಾ ಹೆಚ್ಚಿನ ವ್ಯಕ್ತಿಗಳ ಕುರಿತು ನಮ್ಮಲ್ಲಿರುವ ಅಲ್ಪ-ಸ್ವಲ್ಪ ಮಾಹಿತಿಯ ಪರಿಶೀಲನೆಯು, ಅಪೊಸ್ತಲ ಪೌಲನು ಕಾರ್ಯನಿರ್ವಹಿಸಿದ ವಿಧದ ಮೇಲೆ ಬೆಳಕು ಚೆಲ್ಲುತ್ತದೆ. ಇದು ನಮಗೆ, ದೊಡ್ಡ ಸಂಖ್ಯೆಯಲ್ಲಿ ಜೊತೆ ವಿಶ್ವಾಸಿಗಳಿಂದ ಸುತ್ತುವರಿಯಲ್ಪಟ್ಟಿರುವ ಮತ್ತು ಅವರೊಂದಿಗೆ ನಿಕಟವಾಗಿ ಕೆಲಸಮಾಡುವುದರಿಂದ ಸಿಗುವ ಕೆಲವು ಪ್ರಯೋಜನಗಳ ಕುರಿತು ಸಹ ಕಲಿಸುತ್ತದೆ.
ಸಂಚಾರಿ ಸಂಗಡಿಗರು, ಆತಿಥೇಯ, ಮತ್ತು ಅತಿಥಿಸತ್ಕಾರಿಣಿಯರು
ಅಪೊಸ್ತಲ ಪೌಲನ ಶುಶ್ರೂಷೆಯಲ್ಲಿ ಬಹಳಷ್ಟು ಪ್ರಯಾಣಗಳು ಒಳಗೂಡಿದ್ದವು. ಅಪೊಸ್ತಲರ ಕೃತ್ಯಗಳೊಂದರಲ್ಲಿಯೇ ದಾಖಲಿಸಲಾದ ಭೂಮಿ ಹಾಗೂ ಸಮುದ್ರ ಸಂಚಾರದ ವಿಸ್ತಾರವು ಸುಮಾರು 16,000 ಕಿಲೋಮೀಟರಷ್ಟಿತ್ತೆಂದು ಒಬ್ಬ ಬರಹಗಾರನು ಲೆಕ್ಕಹಾಕುತ್ತಾನೆ. ಆಗಿನ ಪ್ರಯಾಣವು ಆಯಾಸಕರವಾಗಿತ್ತು ಮಾತ್ರವಲ್ಲ ಅಪಾಯಕರವೂ ಆಗಿತ್ತು. ಅವನು ಎದುರಿಸಿದ ನಾನಾವಿಧವಾದ ಗಂಡಾಂತರಗಳಲ್ಲಿ ಹಡಗುಒಡೆತ, ನದಿಗಳ ಅಪಾಯಗಳು, ಕಳ್ಳರ ಅಪಾಯಗಳು, ಕಾಡಿನಲ್ಲಿ ಅಪಾಯಗಳು ಮತ್ತು ಸಮುದ್ರದಲ್ಲಿ ಅಪಾಯಗಳು ಸೇರಿದ್ದವು. (2 ಕೊರಿಂಥ 11:25, 26)ಯುಕ್ತವಾಗಿಯೇ, ಪೌಲನು ಒಂದು ಸ್ಥಳದಿಂದ ಇನ್ನೊಂದಕ್ಕೆ ಪ್ರಯಾಣಿಸುವಾಗ ಒಬ್ಬೊಂಟಿಗನಾಗಿದ್ದ ಸಂದರ್ಭಗಳು ಬಹಳ ವಿರಳ.
ಪೌಲನ ಸಂಗಡಿಗರು, ಸಾಹಚರ್ಯ, ಉತ್ತೇಜನ ಮತ್ತು ಶುಶ್ರೂಷೆಯಲ್ಲಿ ಪ್ರಾಯೋಗಿಕ ಸಹಾಯದ ಮೂಲವಾಗಿದ್ದರು. ಕೆಲವು ಸಂದರ್ಭಗಳಲ್ಲಿ ಹೊಸ ವಿಶ್ವಾಸಿಗಳ ಆತ್ಮಿಕ ಅಗತ್ಯಗಳನ್ನು ಪರಾಂಬರಿಸಲು ಪೌಲನು ಅವರನ್ನು ಅಲ್ಲೇ ಬಿಟ್ಟು ಬರುತ್ತಿದ್ದನು. (ಅ. ಕೃತ್ಯಗಳು 17:14; ತೀತ 1:5) ಆದರೆ ಸಂಗಡಿಗರ ಉಪಸ್ಥಿತಿಯು ಸುರಕ್ಷೆಗಾಗಿ ಮತ್ತು ಪ್ರಯಾಣದ ಕಡುಕಷ್ಟಗಳನ್ನು ಎದುರಿಸಲು ಬೆಂಬಲಕ್ಕಾಗಿ ಅವಶ್ಯವಾಗಿತ್ತೆಂದು ತೋರುತ್ತದೆ. ಹೀಗಾಗಿ, ಪೌಲನ ಸಂಚಾರಿ ಸಂಗಡಿಗರಾಗಿದ್ದರೆಂದು ನಮಗೆ ತಿಳಿದಿರುವ ಸೋಪತ್ರನು ಸೆಕುಂದನು, ಗಾಯನು ಮತ್ತು ತ್ರೊಫಿಮನು ಆತನ ಸೇವೆಯ ಯಶಸ್ಸಿನಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸಿದ್ದಿರಬಹುದು.—ಅ. ಕೃತ್ಯಗಳು 20:4.
ಆತಿಥೇಯ ಮತ್ತು ಅತಿಥಿಸತ್ಕಾರಿಣಿಯರಿಂದ ತೋರಿಸಲ್ಪಟ್ಟ ಆದರಣೆಯು ಕಡಿಮೆ ಆದರಾತಿಥ್ಯವುಳ್ಳದ್ದಾಗಿರಲಿಲ್ಲ. ಪೌಲನು ಸಾರುವ ಕಾರ್ಯಾಚರಣೆಯೊಂದನ್ನು ನಡಿಸುವ ಯೋಜನೆಯಿಂದ ಪಟ್ಟಣವೊಂದಕ್ಕೆ ತಲುಪಿದಾಗ ಅಥವಾ ರಾತ್ರಿ ಅಲ್ಲಿ ನಿಲ್ಲಲು ಬಯಸಿದಾಗ, ಆದ್ಯತೆಯು ತಂಗುವ ಸ್ಥಳವನ್ನು ಕಂಡುಕೊಳ್ಳುವುದೇ ಆಗಿರುತ್ತಿತ್ತು. ಪೌಲನಷ್ಟು ವ್ಯಾಪಕವಾಗಿ ಸಂಚರಿಸಿರುವ ಯಾವನಾದರೂ, ಅಕ್ಷರಶಃ ಹತ್ತಾರು ಬೇರೆ-ಬೇರೆ ಹಾಸಿಗೆಗಳಲ್ಲಿ ಅವಶ್ಯವಾಗಿ ನಿದ್ರಿಸಿರುತ್ತಾನೆ. ಅವನು ಪ್ರತಿಸಲ ಛತ್ರವೊಂದರಲ್ಲಿ ತಂಗಬಹುದಿತ್ತು, ಆದರೆ ಇತಿಹಾಸಕಾರರು ವರ್ಣಿಸುವಂತೆ, ಇವು “ಅಪಾಯಕಾರಿ ಹಾಗೂ ಅಸಹ್ಯ ಸ್ಥಳ’’ಗಳಾಗಿದುದ್ದರಿಂದ, ಸಾಧ್ಯವಿದ್ದಲ್ಲೆಲ್ಲ ಪೌಲನು ಪ್ರಾಯಶಃ ಜೊತೆ ವಿಶ್ವಾಸಿಗಳೊಂದಿಗೆ ತಂಗುತ್ತಿದ್ದನು.
ಪೌಲನ ಆತಿಥೇಯರಲ್ಲಿ ಮತ್ತು ಅತಿಥಿಸತ್ಕಾರಿಣಿಯರಲ್ಲಿ ಕೆಲವರ ಹೆಸರುಗಳು ನಮಗೆ ಗೊತ್ತಿವೆ—ಅಕ್ವಿಲ ಮತ್ತು ಪ್ರಿಸ್ಕ, ಗಾಯ, ಯಾಸೋನ, ಲುದ್ಯ, ಮ್ನಾಸೋನ, ಮತ್ತು ಫಿಲೆಮೋನ. (ಅ. ಕೃತ್ಯಗಳು 16:14, 15; 17:7; 18:2, 3; 21:8, 16; ರೋಮಾಪುರ 16:23; ಫಿಲೆಮೋನ 1, 22) ಫಿಲಿಪ್ಪಿ, ಥೆಸಲೊನೀಕ ಮತ್ತು ಕೊರಿಂಥದಲ್ಲಿರುವ ಇಂಥ ವಾಸಸ್ಥಳಗಳು ಪೌಲನಿಗೆ ತನ್ನ ಮಿಷನೆರಿ ಚಟುವಟಿಕೆಯನ್ನು ವ್ಯವಸ್ಥಾಪಿಸುವ ಕೇಂದ್ರಸ್ಥಳವಾದವು. ಕೊರಿಂಥದಲ್ಲಿ, ಅಪೊಸ್ತಲನು ತನ್ನ ಸಾರುವ ಕೆಲಸವನ್ನು ಮುಂದರಿಸಸಾಧ್ಯವಾಗುವಂತೆ ಸ್ಥಳಾವಕಾಶವನ್ನು ಒದಗಿಸಲು ತೀತಯುಸ್ತನೆಂಬವನು ತನ್ನ ಮನೆಯನ್ನು ತೆರೆದನು.—ಅ. ಕೃತ್ಯಗಳು 18:7.
ಸ್ನೇಹಿತರ ದೊಡ್ಡ ಗುಂಪು
ನಿರೀಕ್ಷಿಸಸಾಧ್ಯವಿರುವಂತೆ, ಪೌಲನು ಭಿನ್ನ-ಭಿನ್ನ ಸನ್ನಿವೇಶಗಳಲ್ಲಿ ತನ್ನ ಪರಿಚಯಸ್ಥರೊಂದಿಗೆ ಭೇಟಿಯಾಗುತ್ತಿದ್ದ ಕಾರಣ, ಅವರು ವಿವಿಧ ರೀತಿಗಳಲ್ಲಿ ಜ್ಞಾಪಿಸಿಕೊಳ್ಳಲ್ಪಡುತ್ತಾರೆ. ದೃಷ್ಟಾಂತಕ್ಕೆ, ಜೊತೆ ವಿಶ್ವಾಸಿ ಸ್ತ್ರೀಯರಾದ ಮರಿಯ, ಪೆರ್ಸೀಸ, ತ್ರುಫೈನ ಮತ್ತು ತ್ರುಫೋಸ ತಮ್ಮ ಶ್ರಮದ ಹಾಗೂ ಕಠಿಣ ಪ್ರಯಾಸಗಳಿಗಾಗಿ ಪ್ರಶಂಸಿಸಲ್ಪಟ್ಟರು. (ರೋಮಾಪುರ 16:1, 2, 6, 12) ಪೌಲನು ಕ್ರಿಸ್ಪನಿಗೆ, ಗಾಯನಿಗೆ ಮತ್ತು ಸ್ತೆಫನನ ಮನೆಯವರಿಗೆ ದೀಕ್ಷಾಸ್ನಾನಮಾಡಿಸಿದನು. ದಿಯೊನುಸ್ಯನೂ ಮತ್ತು ದಾಮರಿಯೆಂಬಾಕೆಯು ಅವನಿಂದ ಅಥೇನೆಯಲ್ಲಿ ಸತ್ಯದ ಸಂದೇಶವನ್ನು ಸ್ವೀಕರಿಸಿದರು. (ಅ. ಕೃತ್ಯಗಳು 17:34; 1 ಕೊರಿಂಥ 1:14, 16) ಪೌಲನಿಗಿಂತಲೂ ದೀರ್ಘಸಮಯದಿಂದ ವಿಶ್ವಾಸಿಗಳಾಗಿದ್ದ ‘‘ಅಪೊಸ್ತಲರಲ್ಲಿ ಪ್ರಸಿದ್ಧರಾಗಿದ್ದ” ಆಂದ್ರೋನಿಕ ಮತ್ತು ಯೂನ್ಯರು ಅವನ “ಜೊತೆಸೆರೆಯವರಾಗಿ” ಕರೆಯಲ್ಪಟ್ಟಿದ್ದಾರೆ. ಬಹುಶಃ, ಇವರು ಯಾವುದೋ ಒಂದು ಸಂದರ್ಭದಲ್ಲಿ ಅವನೊಂದಿಗೆ ಸೆರೆಯಲ್ಲಿದ್ದಿರಬಹುದು. ಪೌಲನು ಇವರಿಬ್ಬರನ್ನೂ, ಹೆರೊಡೀಯೋನ, ಯಾಸೋನ, ಲೂಕ್ಯ ಮತ್ತು ಸೋಸಿಪತ್ರರಂತೆಯೇ, ತನ್ನ ‘‘ಸ್ವಜನರಾಗಿ’’ ಕರೆದಿದ್ದಾನೆ. (ರೋಮಾಪುರ 16:7, 11, 21) ಇಲ್ಲಿ ಉಪಯೋಗಿಸಲಾದ ಗ್ರೀಕ್ ಪದವು ‘‘ಸ್ವದೇಶದವನು’’ ಎನ್ನುವ ಅರ್ಥವನ್ನು ಕೊಡುವಾಗ, ಅದರ ಮೂಲ ಅರ್ಥವು “ಒಂದೇ ಸಂತಾನದ ರಕ್ತ ಸಂಬಂಧಿಗಳು” ಎಂದಾಗಿರುತ್ತದೆ.
ಪೌಲನ ಸ್ನೇಹಿತರಲ್ಲಿ ಅನೇಕರು ಸುವಾರ್ತೆಗೋಸ್ಕರ ಪ್ರಯಾಣಗಳನ್ನು ಮಾಡಿದರು. ಅವನ ಹೆಚ್ಚು ಚಿರಪರಿಚಿತ ಸಹಪ್ರಯಾಣಿಕರಲ್ಲದೆ, ತಮ್ಮ ಸಭೆಯ ಆತ್ಮಿಕ ಪರಿಸ್ಥಿತಿಯ ಕುರಿತು ಪ್ರಸ್ತಾಪಿಸಲು ಪೌಲನೊಂದಿಗೆ ಕೊರಿಂಥದಿಂದ ಎಫೆಸಕ್ಕೆ ಪ್ರಯಾಣ ಬೆಳೆಸಿದವರಲ್ಲಿ ಅಖಾಯಿಕ, ಫೊರ್ತುನಾತ ಮತ್ತು ಸ್ತೆಫನ ಇದ್ದರು. ಕ್ರೇತ ದ್ವೀಪದಲ್ಲಿ ಸೇವೆಸಲ್ಲಿಸುತ್ತಿದ್ದ ತೀತನನ್ನು ಸಂಧಿಸಲು ಅರ್ತೆಮ ಮತ್ತು ತುಖಿಕ ಪ್ರಯಾಣವನ್ನು ಬೆಳೆಸಲು ತಯಾರಿದ್ದರು ಮತ್ತು ಜೇನನು ಅಪೊಲ್ಲೋಸನೊಂದಿಗೆ ಸಂಚಾರವನ್ನು ಕೈಗೊಳ್ಳಲಿದ್ದನು.—1 ಕೊರಿಂಥ 16:17; ತೀತ 3:12, 13.
ಪೌಲನು ಕೆಲವರ ಕುರಿತು, ಚಿಕ್ಕದಾದರೂ ಚಿತ್ತಾಕರ್ಷಕ ವಿವರಣೆಯನ್ನು ನೀಡುತ್ತಾನೆ. ಉದಾಹರಣೆಗೆ, ‘‘ಆಸ್ಯ ಸೀಮೆಯಲ್ಲಿ ಪ್ರಥಮಫಲ’’ವಾಗಿರುವ ಎಪೈನೆತನು, ಕೊರಿಂಥದ ‘‘ಪಟ್ಟಣದ ಖಜಾನೆಯ ಮೇಲ್ವಿಚಾರಕ’’ನಾಗಿರುವ ಎರಸ್ತನು, ವೈದ್ಯನಾಗಿರುವ ಲೂಕನು, ಧೂಮ್ರವರ್ಣದ ವಸ್ತ್ರಗಳನ್ನು ಮಾರುವವಳು ಆಗಿದ್ದ ಲುದ್ಯಳು, ಮತ್ತು ರೋಮಾಪುರದವರಿಗೆ ಪತ್ರಿಕೆಯನ್ನು ಬರೆಯಲು ತೆರ್ತ್ಯನೆಂಬುವವನನ್ನು ಪೌಲನು ಉಪಯೋಗಿಸಿದ್ದನೆಂಬ ಮಾಹಿತಿಯು ನಮಗೆ ನೀಡಲಾಗಿದೆ. (ರೋಮಾಪುರ 16:5, 22, 23; ಅ. ಕೃತ್ಯಗಳು 16:14; ಕೊಲೊಸ್ಸೆ 4:14) ಇಂತಹ ವ್ಯಕ್ತಿಗಳ ಕುರಿತು ತಿಳಿದುಕೊಳ್ಳಬಯಸುವ ಯಾವನೊಬ್ಬನಿಗೂ, ಈ ತುಣುಕು ವಿವರಗಳು ತಮ್ಮ ಸಂಕ್ಷಿಪ್ತತೆಯಲ್ಲಿ ಮನಸ್ಸನ್ನು ಆಕರ್ಷಿಸುತ್ತವೆ.
ಪೌಲನ ಇತರ ಒಡನಾಡಿಗಳು ವೈಯಕ್ತಿಕ ಸಂದೇಶಗಳನ್ನು ಪಡೆದರು, ಇವು, ಈಗ ಬೈಬಲಿನಲ್ಲಿ ದಾಖಲಿಸಲ್ಪಟ್ಟಿವೆ. ಉದಾಹರಣೆಗೆ, ಕೊಲೊಸ್ಸೆಯವರಿಗೆ ಬರೆದ ತನ್ನ ಪತ್ರಿಕೆಯಲ್ಲಿ ಪೌಲನು ಆರ್ಖಿಪ್ಪನಿಗೆ ಪ್ರಭೋದಿಸಿದ್ದು: ‘‘ನೀನು ಕರ್ತನಿಂದ ಹೊಂದಿರುವ ಸೇವೆಯನ್ನು ನೆರವೇರಿಸುವದಕ್ಕೆ ಎಚ್ಚರವಾಗಿರಬೇಕು’’ (ಕೊಲೊಸ್ಸೆ 4:17) ಯುವೊದ್ಯ ಮತ್ತು ಸಂತುಕೆಯರಿಗೆ ಕೆಲವು ವೈಯಕ್ತಿಕ ಸಂಘರ್ಷಣೆಗಳನ್ನು ಇತ್ಯರ್ಥಮಾಡಲಿಕ್ಕಿತ್ತೆಂದು ವ್ಯಕ್ತವಾಗುತ್ತದೆ. ಹೀಗೆ, ಫಿಲಿಪ್ಪಿಯಲ್ಲಿದ್ದ ಒಬ್ಬ ಅನಾಮಧೇಯನಾದ “ಸತ್ಯ ಸಯುಜನ’’ನ ಮೂಲಕ ಅವರು ‘‘ಕರ್ತನಲ್ಲಿ ಒಂದೇ ಮನಸ್ಸುಳ್ಳವರಾಗಿರ’’ಬೇಕೆಂದು ಪೌಲನು ಪ್ರೋತ್ಸಾಹಿಸಿದನು. (ಫಿಲಿಪ್ಪಿ 4:2, 3) ಖಂಡಿತವಾಗಿಯೂ, ಇದು ನಮಗೆಲ್ಲರಿಗೂ ಒಳ್ಳೆಯ ಸಲಹೆಯಾಗಿದೆ.
ಸೆರೆಯಲ್ಲಿದ್ದಾಗಲೂ ನಿಷ್ಠೆಯ ಬೆಂಬಲ
ಪೌಲನು ಹಲವಾರು ಬಾರಿ ಸೆರೆಮನೆಯಲ್ಲಿದ್ದನು. (2 ಕೊರಿಂಥ 11:23) ಆ ಸಂದರ್ಭಗಳಲ್ಲಿ ಒಂದುವೇಳೆ ಕೆಲವು ಸ್ಥಳೀಯ ಕ್ರೈಸ್ತರು ಇದ್ದಿದ್ದಲ್ಲಿ, ಅವನ ಅನುಭವವು ಹೆಚ್ಚು ಸಹನೀಯವಾಗುವಂತೆ ತಮ್ಮಿಂದಾದುದೆಲ್ಲವನ್ನು ಮಾಡಲು ಪ್ರಯತ್ನಿಸಿದ್ದಿರಲೇಬೇಕು. ಪೌಲನು ರೋಮಿನಲ್ಲಿ ತನ್ನ ಮೊದಲ ಸೆರೆಮನೆವಾಸವನ್ನು ಅನುಭವಿಸುತ್ತಿದ್ದಾಗ, ತಾನೇ ಬಾಡಿಗೆಗೆ ತೆಗೆದುಕೊಂಡಿದ್ದ ಮನೆಯಲ್ಲಿ ಎರಡು ವರುಷಗಳ ತನಕ ತಂಗುವಂತೆ ಅನುಮತಿಸಲ್ಪಟ್ಟನು. ಇದು, ತನ್ನ ಸ್ನೇಹಿತರ ಭೇಟಿಯನ್ನು ಸಾಧ್ಯಮಾಡಿತು. (ಅ. ಕೃತ್ಯಗಳು 28:30) ಈ ಸಮಯಾವಧಿಯಲ್ಲಿ, ಅವನು ಎಫೆಸ, ಫಿಲಿಪ್ಪಿ ಮತ್ತು ಕೊಲೊಸ್ಸೆಯ ಸಭೆಯವರಿಗೆ ಮಾತ್ರವಲ್ಲ ಫಿಲೆಮೋನನಿಗೂ ಪತ್ರಗಳನ್ನು ಬರೆದನು. ತನ್ನ ಸೆರೆವಾಸದ ವೇಳೆಯಲ್ಲಿ ಪೌಲನೊಂದಿಗೆ ಆಪ್ತರಾಗಿದ್ದವರ ಕುರಿತು ಬಹಳಷ್ಟನ್ನು ಈ ಮೂಲಗಳು ಹೇಳುತ್ತವೆ
ಉದಾಹರಣೆಗೆ, ಫಿಲೆಮೋನನ ಓಡಿಹೋದ ಒನೇಸಿಮನೆಂಬ ದಾಸನು ತುಖಿಕನಂತೆಯೆ, ಪೌಲನನ್ನು ರೋಮಿನಲ್ಲಿ ಸಂಧಿಸಿದನು. ಹಾಗೆಯೇ, ಒನೇಸಿಮನು ತನ್ನ ಯಾಜಮಾನನಿದ್ದಲ್ಲಿಗೆ ಹಿಂದಿರುಗುವಾಗ ತುಖಿಕನು ಅವನ ಪ್ರಯಾಣದಲ್ಲಿ ಜೊತಗೂಡಲಿಕ್ಕಿದ್ದನೆಂಬುದನ್ನು ನಾವು ಕಲಿಯುತ್ತೇವೆ. (ಕೊಲೊಸ್ಸೆ4:7-9) ಇವರಲ್ಲಿ ಫಿಲಿಪ್ಪಿಯಿಂದ ದೀರ್ಘ ಪ್ರಯಾಣವನ್ನು ಮಾಡಿದ ಎಪಫ್ರೊದೀತನೆಂಬವನು ತನ್ನ ಸಭೆಯಿಂದ ಕೊಡುಗೆಯನ್ನು ತಂದಿದ್ದನು ಮತ್ತು ತದನಂತರ ಅಸ್ವಸ್ಥನಾದನು. (ಫಿಲಿಪ್ಪಿ 2:25; 4:18) ರೋಮಿನಲ್ಲಿ ಪೌಲನೊಂದಿಗೆ ನಿಕಟವಾಗಿ ಕೆಲಸಮಾಡಿದವರಲ್ಲಿ ಅರಿಸ್ತಾರ್ಕನು ಮಾರ್ಕನು ಮತ್ತು ಯೂಸ್ತನೆನಿಸಿಕೊಳ್ಳುವ ಯೇಸುವಿನ ಕುರಿತು ಪೌಲನು ಹೇಳಿದ್ದು: ‘‘ಇವರು ಮಾತ್ರವೇ ದೇವರ ರಾಜ್ಯಾಭಿವೃದ್ಧಿಗಾಗಿ ನನ್ನ ಜೊತೆಗೆಲಸದವರಾಗಿದ್ದಾರೆ; ಇವರಿಂದ ನನಗೆ ಉಪಶಮನ ಉಂಟಾಯಿತು.” (ಕೊಲೊಸ್ಸೆ4:10, 11) ಈ ಎಲ್ಲಾ ನಂಬಿಗಸ್ತರ ಜೊತೆಗೆ, ತಿಮೊಥಿ ಮತ್ತು ಲೂಕನ ಉತ್ತಮ ಪರಿಚಯವಿದೆ ಅಷ್ಟೇ ಅಲ್ಲ, ಕಾಲಕ್ರಮೇಣ ಇಹಲೋಕದ ಪ್ರೀತಿಗಾಗಿ ಪೌಲನನ್ನು ತೊರೆದ ದೇಮನ ಪರಿಚಯವು ಸಹ ನಮಗಿದೆ.—ಕೊಲೊಸ್ಸೆ 1:1; 4:14; 2 ತಿಮೊಥೆಯ 4:10; ಫಿಲೆಮೋನ 24.
ಸ್ಪಷ್ಟವಾಗಿ, ಇವರಲ್ಲಿ ಯಾರೂ ರೋಮಿನವರಾಗಿರಲಿಲ್ಲವಾದರೂ, ಇವರು ತಮ್ಮನ್ನು ಪೌಲನ ಪಕ್ಷದಲ್ಲಿರಿಸಿಕೊಂಡರು. ಬಹುಶಃ ಕೆಲವರು ಅವನ ಸೆರೆಮನೆವಾಸದ ವೇಳೆಯಲ್ಲಿ ನಿರ್ದಿಷ್ಟವಾಗಿ ಸಹಾಯನೀಡಲು ಹೋಗಿದ್ದಿರಬಹುದು. ಕೆಲವರು ಅವನಿಗಾಗಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಿದ್ದರು, ಇತರರು ದೂರದ ಪ್ರಚಾರ ಕೆಲಸಗಳಿಗಾಗಿ ಕಳುಹಿಸಲ್ಪಡುತ್ತಿದ್ದರು ಮತ್ತು ಇನ್ನು ಕೆಲವರು ಪೌಲನು ಹೇಳಿದಂತೆ ಪತ್ರಗಳನ್ನು ಬರೆಯುತ್ತಿದ್ದರು. ಇವರೆಲ್ಲರು ಪೌಲನಿಗೆ ಮತ್ತು ದೇವರ ಕಾರ್ಯಕ್ಕೆ ತೋರಿಸಿದ ಆಪ್ತತೆ ಹಾಗೂ ನಿಷ್ಠೆಯ ಗಾಢತೆಗೆ ಎಂಥ ಪ್ರಬಲ ಸಾಕ್ಷ್ಯವಾಗಿದ್ದರು!
ಪೌಲನ ಕೆಲವು ಪತ್ರಿಕೆಗಳ ಸಮಾಪ್ತಿಗಳಿಂದ, ನಮಗೆ ಗೊತ್ತಿರುವ ಕೆಲವು ಹೆಸರುಗಳಿಗಿಂತಲೂ ಹೆಚ್ಚು, ಕ್ರೈಸ್ತ ಸಹೋದರ ಮತ್ತು ಸಹೋದರಿಯರ ವಿಶಾಲವಾದ ಸಾಹಚರ್ಯದಿಂದ ಪೌಲನು ಸುತ್ತುವರಿಯಲ್ಪಟ್ಟಿದ್ದಿರಬಹುದೆಂದು ನಾವು ಗ್ರಹಿಸುತ್ತೇವೆ. ಬೇರೆ ಬೇರೆ ಸಂದರ್ಭಗಳಲ್ಲಿ ಅವನು ಬರೆದದ್ದು: ‘‘ದೇವಜನರೆಲ್ಲರೂ ನಿಮಗೆ ವಂದನೆ ಹೇಳುತ್ತಾರೆ’’ ಮತ್ತು ‘‘ನನ್ನೊಂದಿಗಿರುವವರೆಲ್ಲರೂ ನಿನಗೆ ವಂದನೆಹೇಳುತ್ತಾರೆ.’’—2 ಕೊರಿಂಥ 13:13; ತೀತ 3:15; ಫಿಲಿಪ್ಪಿ 4:22.
ರೋಮಿನಲ್ಲಿ ಪೌಲನ ಎರಡನೇ ಕಠಿಣ ಬಂಧಿವಾಸದ ವೇಳೆಗೆ, ತನ್ನ ಹುತಾತ್ಮತೆಯು ಸಮೀಪಿಸುವದನ್ನು ಕಾಣುವಾಗ, ಅವನ ಆಲೋಚನೆಯಲ್ಲಿ ಅವನ ಜೊತೆ ಕೆಲಸದವರೇ ತುಂಬಿದ್ದರು. ಅವರಲ್ಲಿ ಕನಿಷ್ಟಪಕ್ಷ ಕೆಲವರ ಚಟುವಟಿಕೆಯನ್ನಾದರೂ ಅವನು ಸಕ್ರಿಯವಾಗಿ ಮೇಲ್ವಿಚಾರಣೆ ಮತ್ತು ಸುಸಂಘಟನೆ ಮಾಡುತ್ತಿದ್ದನು. ತೀತನು ಮತ್ತು ತುಖಿಕನು ಪ್ರಚಾರಕೆಲಸಕ್ಕಾಗಿ ಕಳುಹಿಸಲ್ಪಟ್ಟಿದ್ದರು, ಕ್ರೆಸ್ಕನು ಗಲಾತ್ಯಕ್ಕೆ ಹೋಗಿದ್ದನು, ಎರಸ್ತನು ಕೊರಿಂಥದಲ್ಲೇ ತಂಗಿದನು, ತ್ರೊಫಿಮನು ಅಸೌಖ್ಯವಾಗಿದುದ್ದರಿಂದ ಮಿಲೇತದಲ್ಲಿ ಬಿಡಲ್ಪಟ್ಟನು, ಆದರೆ ಮಾರ್ಕ ಮತ್ತು ತಿಮೋಥೆಯನು ಅವನೊಂದಿಗೆ ಬರಲಿದ್ದರು. ಹಾಗಿದ್ದರೂ, ಲೂಕನು ಪೌಲನ ಪಕ್ಕದಲ್ಲಿದ್ದನು ಮತ್ತು ಅಪೊಸ್ತಲನು ತಿಮೊಥೆಯನಿಗೆ ಎರಡನೆಯ ಪತ್ರಿಕೆಯನ್ನು ಬರೆದಾಗ ಅನೇಕ ಇತರ ವಿಶ್ವಾಸಿಗಳಾದ ಯುಬೂಲನು, ಪೂದೆಯನು, ಲೀನನು, ಮತ್ತು ಕ್ಲೌದ್ಯಳು ತಮ್ಮ ವಂದನೆಯನ್ನು ಕಳುಹಿಸಲು ಅಲ್ಲಿದ್ದರು. ಇವರು ನಿಸ್ಸಂದೇಹವಾಗಿ, ಪೌಲನಿಗೆ ಸಹಾಯಮಾಡಲು ತಮ್ಮಿಂದಾದುದೆಲ್ಲವನ್ನು ಮಾಡುತ್ತಿದ್ದರು. ಅದೇ ಸಮಯದಲ್ಲಿ, ಪೌಲನು ಸ್ವತಃ ಪ್ರಿಸ್ಕಳಿಗೂ ಅಕ್ವಿಲ್ಲನಿಗೂ ಹಾಗೂ ಒನೆಸಿಫೊರನ ಮನೆಯವರಿಗೂ ವಂದನೆಯನ್ನು ಕಳುಹಿಸಿದ್ದನು. ದುಃಖಕರವಾಗಿ, ಈ ಸಂಕಷ್ಟದ ಸಮಯದಲ್ಲಿ ದೇಮನು ಅವನನ್ನು ಬಿಟ್ಟುಹೋದನು, ಮತ್ತು ಅಲೆಕ್ಸಾಂದ್ರನು ಅವನಿಗೆ ಬಹಳ ಕೇಡುಮಾಡಿದನು.—2 ತಿಮೊಥೆಯ 4:9-21.
‘‘ನಾವು ದೇವರ ಜೊತೆಕೆಲಸದವರು’’
ಪೌಲನು ಸಾರುವ ಚಟುವಟಿಕೆಯಲ್ಲಿ ಅಪರೂಪವಾಗಿ ಒಬ್ಬೊಂಟಿಗನಾಗಿರುತ್ತಿದ್ದನು. ವ್ಯಾಖ್ಯಾನಕಾರನಾಗಿರುವ ಇ. ಅರ್ಲ್ ಎಲೀಸ್ ಹೇಳಿದ್ದು: ‘‘ದೃಷ್ಟಿಗೋಚರಕ್ಕೆ ಬರುವ ಚಿತ್ರದಲ್ಲಿ ಭಾರೀ ಸಂಖ್ಯೆಯಲ್ಲಿರುವ ಸಂಗಡಿಗರೊಂದಿಗೆ ಒಬ್ಬ ಮಿಷನೆರಿಯು ಕಾಣಬರುತ್ತಾನೆ. ವಾಸ್ತವವಾಗಿ, ಪೌಲನು ಸಂಗಡಿಗರಿಲ್ಲದೆ ಬಹಳ ವಿರಳವಾಗಿ ಕಾಣಸಿಗುತ್ತಾನೆ.’’ ದೇವರ ಪವಿತ್ರಾತ್ಮದ ಮಾರ್ಗದರ್ಶನೆಯ ಕೆಳಗೆ, ಪೌಲನು ಅನೇಕ ಜನರನ್ನು ಸಜ್ಜುಗೊಳಿಸಲು ಮತ್ತು ಪರಿಣಾಮಕಾರಿ ಮಿಷನೆರಿ ಕಾರ್ಯಚರಣೆಯನ್ನು ವ್ಯವಸ್ಥಾಪಿಸಲು ಸಾಧ್ಯವಾಯಿತು. ಅವನು ಆಪ್ತ ಸಂಗಡಿಗರಿಂದ, ತಾತ್ಕಾಲಿಕ ಸಹಾಯಕರಿಂದ, ಕೆಲವು ಬಲಶಾಲಿ ವ್ಯಕ್ತಿತ್ವವುಳ್ಳವರಿಂದ ಹಾಗೂ ಅನೇಕ ದೀನ ಸೇವಕರಿಂದಲೂ ಸುತ್ತುವರಿಯಲ್ಪಟ್ಟಿದ್ದನು. ಆದರೂ ಇವರು ಕೇವಲ ಸಹಕರ್ಮಿಗಳಾಗಿರಲಿಲ್ಲ. ಅವರು ಪೌಲನೊಂದಿಗೆ ಎಷ್ಟರಮಟ್ಟಿಗೆ ಕೆಲಸಮಾಡಿದ್ದರು ಮತ್ತು ಸಹವಸಿಸಿದ್ದರು ಎಂಬುದು ನಮಗೆ ತಿಳಿದಿಲ್ಲವಾದರೂ, ಅವರ ಮಧ್ಯೆ ಇದ್ದ ಕ್ರೈಸ್ತ ಪ್ರೀತಿ ಮತ್ತು ಆತ್ಮೀಯ ಸ್ನೇಹಭಾವದ ಬಂಧವು ಸುಸ್ಪಷ್ಟವಾಗಿ ಕಾಣಬರುತ್ತದೆ.
ಅಪೊಸ್ತಲ ಪೌಲನಿಗೆ ‘ಸ್ನೇಹಕ್ಕಾಗಿ ಅಸಾಧಾರಣ ಪ್ರತಿಭೆ’ಯಿತ್ತೆಂದು ಹೇಳಲಾಗುವ ವ್ಯಕ್ತಿತ್ವವಿತ್ತು. ಸುವಾರ್ತೆಯನ್ನು ಜನಾಂಗಗಳಿಗೆ ಕೊಂಡ್ಯೊಯಲು ಬಹಳಷ್ಟು ಶ್ರಮಪಟ್ಟನು. ಆದರೆ, ಅವನದನ್ನು ಒಬ್ಬೊಂಟಿಗನಾಗಿ ಮಾಡಲು ಯತ್ನಿಸಲಿಲ್ಲ. ಅವನು ವ್ಯವಸ್ಥಾಪಿತ ಕ್ರೈಸ್ತ ಸಭೆಯೊಂದಿಗೆ ಸಹಕರಿಸಿದನು ಮಾತ್ರವಲ್ಲ, ಅದರ ಪೂರ್ಣ ಸದುಪಯೋಗವನ್ನು ಮಾಡಿದನು. ಪೌಲನು ತಾನು ಸಾಧಿಸಿದ ಗುರಿಗಳಿಗಾಗಿ ತನ್ನನ್ನು ತಾನೇ ಪ್ರಶಂಸಿಸಿಕೊಳ್ಳಲಿಲ್ಲ, ಆದರೆ ಬೆಳವಣಿಗೆಗೆ ಕಾರಣಭೂತನಾದ ದೇವರಿಗೆ ಎಲ್ಲಾ ಮಹಿಮೆಯನ್ನು ಕೊಡುತ್ತಾ ತನ್ನನ್ನು ಒಬ್ಬ ದಾಸನಾಗಿ ದೀನತೆಯಿಂದ ಒಪ್ಪಿಕೊಂಡನು.—1 ಕೊರಿಂಥ 3:5-7; 9:16; ಫಿಲಿಪ್ಪಿ 1:1.
ಪೌಲನ ಸಮಯಗಳು ನಮ್ಮ ಸಮಯಕ್ಕಿಂತ ಎಷ್ಟೋ ಭಿನ್ನವಾಗಿರುವುದಾದರೂ, ಇಂದು ಕ್ರೈಸ್ತ ಸಭೆಯಲ್ಲಿರುವ ಯಾವನೊಬ್ಬನೂ ತಾನು ಸ್ವತಂತ್ರನಾಗಬಲ್ಲೆನು ಇಲ್ಲವೆ ತನಗೆ ಸ್ವತಂತ್ರನಾಗುವ ಅಗತ್ಯವಿದೆಯೆಂದು ಎಣಿಸಬಾರದು. ಅದಕ್ಕೆ ಬದಲು, ನಾವು ಯಾವಾಗಲೂ ದೇವರ ಸಂಸ್ಥಾಪನೆಯೊಂದಿಗೆ, ನಮ್ಮ ಸ್ಥಳೀಯ ಸಭೆಯೊಂದಿಗೆ ಮತ್ತು ನಮ್ಮ ಜೊತೆ ವಿಶ್ವಾಸಿಗಳೊಂದಿಗೆ ಕೆಲಸಮಾಡುತ್ತಿರಬೇಕು. ನಮಗೆ ಅನುಕೂಲವಾದ ಸಮಯಗಳಲ್ಲಿ ಹಾಗೂ ಅನಾನುಕೂಲಕರವಾದ ಸಮಯಗಳಲ್ಲಿ ಅವರ ಸಹಾಯ, ಬೆಂಬಲ ಹಾಗೂ ಸ್ವಾಂತನದ ಅಗತ್ಯವಿರುತ್ತದೆ. ‘ಲೋಕದಲ್ಲಿರುವ ಸಹೋದರರ ಇಡೀ ಬಳಗ’ದ ಭಾಗವಾಗಿರುವ ಅಮೂಲ್ಯವಾದ ಸುಯೋಗ ನಮಗಿದೆ. (1 ಪೇತ್ರ 5:9, NW) ನಾವು ನಂಬಿಗಸ್ತರಾಗಿಯೂ ಮತ್ತು ಪ್ರೀತಿಪೂರ್ವಕವಾಗಿಯೂ ಹೆಗಲಿಗೆ ಹೆಗಲು ಕೊಟ್ಟು ಕೆಲಸಮಾಡುವುದಾದರೆ ಮತ್ತು ಅವರೆಲ್ಲರೊಂದಿಗೆ ಸಹಕರಿಸುವುದಾದರೆ, ಆಗ ಪೌಲನಂತೆ, ನಾವು ಕೂಡ ಹೀಗೆ ಹೇಳಬಲ್ಲೆವು: ‘‘ನಾವು ದೇವರ ಜೊತೆಕೆಲಸದವರು.’’—1 ಕೊರಿಂಥ 3:9.
[ಪುಟ 42 ರಲ್ಲಿರುವ ಚಿತ್ರ]
ಅಪೊಲ್ಲೋಸ
ಅರಿಸ್ತಾರ್ಕ
ಬಾರ್ನಬ
ಲುದ್ಯ
ಒನೆಸಿಫೊರ
ತೆರ್ತ್ಯ
ತುಖಿಕ