ಸೌಲನು ಕ್ರೈಸ್ತರನ್ನು ಏಕೆ ಹಿಂಸಿಸಿದನು?
‘ನಜರೇತಿನ ಯೇಸುವಿನ ಹೆಸರಿಗೆ ವಿರುದ್ಧವಾಗಿ ಅನೇಕ ಕಾರ್ಯಗಳನ್ನು ನಡಿಸಬೇಕೆಂದು ನಾನೂ ಯೋಚಿಸಿಕೊಂಡಿದ್ದೆನು. ಯೆರೂಸಲೇಮಿನಲ್ಲಿ ಹಾಗೆಯೇ ನಡಿಸಿದೆನು. ಮಹಾಯಾಜಕರಿಂದ ಅಧಿಕಾರವನ್ನು ಪಡೆದು ದೇವಜನರಲ್ಲಿ ಅನೇಕರನ್ನು ಸೆರೆಮನೆಗಳಲ್ಲಿ ಇಡಿಸಿ ಅವರಿಗೆ ಮರಣದ ತೀರ್ಪಾದಾಗ ನನ್ನ ಸಮ್ಮತಿಯನ್ನು ಸೂಚಿಸಿದೆನು. ಎಲ್ಲಾ ಸಭಾಮಂದಿರಗಳಲ್ಲಿಯೂ ನಾನು ಅನೇಕಾವರ್ತಿ ಅವರನ್ನು ದಂಡಿಸಿ ಅವರಿಂದ ದೂಷಣೆಯ ಮಾತುಗಳನ್ನಾಡಿಸುವದಕ್ಕೆ ಪ್ರಯತ್ನಿಸಿದೆನು. ಇದಲ್ಲದೆ ಅವರ ಮೇಲೆ ಬಹು ಕೋಪಾವೇಶವುಳ್ಳವನಾಗಿ ಪರಪಟ್ಟಣಗಳ ತನಕ ಅವರನ್ನು ಹಿಂಸೆಪಡಿಸಿದೆನು.’ —ಅ. ಕೃತ್ಯಗಳು 26:9-11.
ಈಮೇಲಿನ ಮಾತುಗಳನ್ನು ಅಪೊಸ್ತಲ ಪೌಲನೆಂದು ಜ್ಞಾತವಾಗಿರುವ ತಾರ್ಸದ ಸೌಲನು ಹೇಳಿದ್ದನು. ಇದನ್ನು ಹೇಳುವ ಸಮಯದಲ್ಲಿ, ವಾಸ್ತವವಾಗಿ ಅವನು ಪರಿವರ್ತನೆಗೊಂಡಿದ್ದ ಒಬ್ಬ ಹೊಸ ವ್ಯಕ್ತಿಯಾಗಿದ್ದನು. ಇನ್ನು ಮುಂದೆ ಕ್ರೈಸ್ತತ್ವದ ವಿರೋಧಿಯಾಗಿರದೆ, ಈಗ ಅದರ ಬಹಳ ಅತ್ಯಾಸಕ್ತಿಯ ಪ್ರವರ್ತಕರಲೊಬ್ಬನಾದನು. ಆದರೆ ಇದಕ್ಕೂ ಮುಂಚೆ ಕ್ರೈಸ್ತರನ್ನು ಹಿಂಸಿಸಲು ಸೌಲನನ್ನು ಯಾವುದು ಪ್ರೇರೇಪಿಸಿತು? ಇಂತಹ ಕೃತ್ಯಗಳನ್ನು ‘ನಡಿಸಬೇಕೆಂಬ’ ಯೋಚನೆಯಾದರೂ ಅವನಿಗೆ ಹೇಗೆ ಬಂತು? ಅವನ ಕಥನದಿಂದ ನೀವು ಯಾವುದಾದರೂ ಪಾಠವನ್ನು ಸೆಳೆಯಬಲ್ಲಿರೋ?
ಸ್ತೆಫನನ ಮೇಲೆ ಕಲ್ಲೆಸೆಯುವಿಕೆ
ಸೌಲನು ಬೈಬಲಿನ ದಾಖಲೆಯಲ್ಲಿ ಪ್ರವೇಶಿಸುವುದು ಸ್ತೆಫನನ ಕೊಲೆಗಾರರೊಂದಿಗೆ ಸೇರಿದಾಗಲೇ. “ಅವನ (ಸ್ತೆಫನನ) ಮೇಲೆ ಬಿದ್ದು ಅವನನ್ನು ಊರ ಹೊರಕ್ಕೆ ನೂಕಿಕೊಂಡು ಹೋಗಿ ಕೊಲ್ಲುವದಕ್ಕೆ ಕಲ್ಲೆಸೆದರು. ಸಾಕ್ಷಿಯವರು ತಮ್ಮ ಬಟ್ಟೆಗಳನ್ನು ತೆಗೆದು ಸೌಲನೆಂಬ ಒಬ್ಬ ಯೌವನಸ್ಥನ ಕಾಲುಗಳ ಬಳಿಯಲ್ಲಿ ಇಟ್ಟರು.” “ಸೌಲನು ಅವನ ಕೊಲೆಗೆ ಸಮ್ಮತಿಸುವವನಾಗಿದ್ದನು.” (ಅ. ಕೃತ್ಯಗಳು 7:58; 8:1) ಈ ಆಕ್ರಮಣಕ್ಕೆ ಯಾವುದು ನಡೆಸಿತು? ಕಿಲಿಕ್ಯದಿಂದ ಬಂದ ಕೆಲವರನ್ನು ಸೇರಿಸಿ ಈ ಯೆಹೂದ್ಯರು ಸ್ತೆಫನನೊಂದಿಗೆ ತರ್ಕಮಾಡಿದರು, ಆದರೆ ಅವನೊಂದಿಗೆ ಜಯ ಸಾಧಿಸಲು ಅಶಕ್ತರಾದರು. ಕಿಲಿಕ್ಯದವನೂ ಆಗಿದ್ದ ಸೌಲನು ಅವರೊಂದಿಗೆ ಇದ್ದನೋ ಇಲ್ಲವೋ ಎಂಬದನ್ನು ನಮಗೆ ತಿಳಿಸಲಾಗಿಲ್ಲ. ಹೇಗೂ ಇರಲಿ, ಸ್ತೆಫನನನ್ನು ದೇವದೂಷಣೀಯ ಆರೋಪಕ್ಕೆ ಒಳಪಡಿಸಲು ಸುಳ್ಳು ಸಾಕ್ಷಿಗಳನ್ನು ಅವರು ಉಪಯೋಗಿಸಿದರು ಮತ್ತು ಸನ್ಹೇದ್ರಿನಿನ ಮುಂದೆ ಎಳೆದು ತಂದರು. (ಅ. ಕೃತ್ಯಗಳು 6:9-14) ಮಹಾಯಾಜಕನ ಅಧ್ಯಕ್ಷತೆಯಲ್ಲಿ ಈ ಸಭೆಯು ಯೆಹೂದಿ ಉಚ್ಚ ನ್ಯಾಯಾಲಯದಂತೆ ಕಾರ್ಯನಡಿಸಿತು. ಅತ್ಯುಚ್ಚ ಧಾರ್ಮಿಕ ನ್ಯಾಯಾಲಯದಂತೆ, ಅದರ ಸದಸ್ಯರು ಯಾವುದನ್ನು ತಾತ್ವಿಕ ಶುದ್ಧತೆಯೆಂದು ನೆನಸಿದರೋ ಅದನ್ನು ಸಂರಕ್ಷಿಸಿದರು. ಅವರ ದೃಷ್ಟಿಯಲ್ಲಿ ಸ್ತೆಫನನು ಮರಣಕ್ಕೆ ಪಾತ್ರನಾಗಿದ್ದನು. ಧರ್ಮಶಾಸ್ತ್ರವನ್ನು ಅನುಸರಿಸದ ಆರೋಪವನ್ನು ಅವರ ಮೇಲೆ ಹಾಕುವುದಕ್ಕೆ ಅವನು ಧೈರ್ಯ ಮಾಡಿದನು, ಅಲ್ಲವೇ? (ಅ. ಕೃತ್ಯಗಳು 7:53) ಅವರು ಅದನ್ನು ಅನುಸರಿಸುವ ವಿಧವನ್ನು ಅವನಿಗೆ ತೋರಿಸಿಕೊಡಲಿದ್ದರು!
ಆ ಅಭಿಪ್ರಾಯಕ್ಕೆ ಸೌಲನು ನೀಡಿದ ಸಮ್ಮತಿಯು ಅವನ ದೃಢನಂಬಿಕೆಗಳ ಸಮರ್ಥನೀಯತೆಯ ಪರಿಣಾಮವಾಗಿತ್ತು. ಅವನೊಬ್ಬ ಫರಿಸಾಯನಾಗಿದ್ದನು. ಈ ಬಲಶಾಲಿಯಾದ ಪಂಥವು, ನಿಯಮ ಮತ್ತು ಸಂಪ್ರದಾಯಗಳಿಗೆ ಕಟ್ಟುನಿಟ್ಟಿನ ಅನುಸರಣೆಯನ್ನು ಒತ್ತಾಯಪಡಿಸಿತು. ಈ ಸಿದ್ಧಾಂತಗಳಿಗೆ ಕ್ರೈಸ್ತ ಧರ್ಮವು ವಿರೋಧವನ್ನು ಎತ್ತಿತೋರಿಸುತ್ತಾ, ಹೀಗೆ ಯೇಸುವಿನ ಮೂಲಕ ರಕ್ಷಣೆಗಾಗಿ ಹೊಸ ಮಾರ್ಗವಿರುವುದನ್ನು ಕಲಿಸಿತು. ತಮ್ಮನ್ನು ರೋಮನ್ ಪ್ರಾಬಲ್ಯದ ದ್ವೇಷಭರಿತ ದಾಸ್ಯದಿಂದ ಮುಕ್ತಗೊಳಿಸಲು ಮಹಿಮಾಭರಿತ ರಾಜನಾದ ಮೆಸ್ಸೀಯನು ಬರಲಿರುವನೆಂದು ಪ್ರಥಮ ಶತಮಾನದ ಯೆಹೂದ್ಯರು ನಿರೀಕ್ಷಿಸಿದರು. ದೇವದೋಷಾರೋಪಣೆಯ ಆಧಾರದ ಮೇರೆಗೆ ಹಿರೀ ಸನ್ಹೇದ್ರಿನ್ ಎದುರು ಖಂಡಿಸಲಾದ ಮತ್ತು ತದನಂತರ ಶಾಪಗ್ರಸ್ತ ದುಷ್ಕರ್ಮಿಯಂತೆ ವಧಾಸ್ತಂಭದ ಮೇಲೆ ತೂಗುಹಾಕಲ್ಪಟ್ಟವನಾದ ಒಬ್ಬನನ್ನು ಮೆಸ್ಸೀಯನೆಂಬದಾಗಿ ಸ್ವೀಕರಿಸುವುದು ಅವರ ಮನಸ್ಸಿಗೆ ಪೂರ್ಣವಾಗಿ ಅಸಂಗತವಾಗಿರುವ, ತಿರಸ್ಕರಿಸಲ್ಪಟ್ಟಿರುವ ಹಾಗೂ ಅಸಹ್ಯವೂ ಆಗಿರುವ ವಿಚಾರವಾಗಿತ್ತು.
ವಧಾಸ್ತಂಭದ ಮೇಲೆ ತೂಗುಹಾಕಲ್ಪಟ್ಟ ಮನುಷ್ಯನೊಬ್ಬನು “ದೇವರ ಶಾಪವನ್ನು” ಹೊಂದಿದವನೆಂದು ನಿಯಮಶಾಸ್ತ್ರವು ವಿಧಿಸಿತು. (ಧರ್ಮೋಪದೇಶಕಾಂಡ 21:22, 23; ಗಲಾತ್ಯ 3:13) ಸೌಲನ ದೃಷ್ಟಿಕೋನದಿಂದ, “ಈ ಮಾತುಗಳು ಸ್ಪಷ್ಟವಾಗಿ ಯೇಸುವಿಗೆ ಅನ್ವಯಿಸುತ್ತವೆ” ಎಂದು ಫ್ರೆಡ್ರಿಕ್ ಎಫ್. ಬ್ರೂಸ್ ವ್ಯಾಖ್ಯಾನಿಸುತ್ತಾರೆ. “ಅವನು ದೇವರ ಶಾಪಕ್ಕೆ ಗುರಿಯಾಗಿ ಸತ್ತನು. ಹೀಗೆ, ಯೆಹೂದಿ ಸಂಪ್ರದಾಯದ ನಿಶ್ಚಿತ ಹೇಳಿಕೆಯ ಮೇರೆಗೆ, ಸರಿಸಾಟಿಯಿಲ್ಲದ ಪ್ರಮಾಣದಲ್ಲಿ ದೇವರ ಆಶೀರ್ವಾದ ತನ್ನೊಂದಿಗೆ ಇದೆಯೆಂಬುದಾಗಿ ಹೇಳಿಕೊಳ್ಳುವ ಮೆಸ್ಸೀಯನಾಗಿ ಅವನನ್ನು ಊಹಿಸಿಕೊಳ್ಳಲು ಸಾಧ್ಯವಿರಲಿಲ್ಲ. ಈ ಕಾರಣದಿಂದ ಯೇಸುವನ್ನು ಮೆಸ್ಸೀಯನಾಗಿ ಸಮರ್ಥಿಸುವುದು ದೇವದೂಷಣೆಯಾಗಿತ್ತು. ಇಂತಹ ಅಸಂಬದ್ಧ ಹೇಳಿಕೆಯನ್ನು ಮಾಡುವವರು ಧರ್ಮನಿಂದಕರಾಗಿ ಸಾಯುವದಕ್ಕೆ ಅರ್ಹರಾಗುತ್ತಿದ್ದರು.” ಸಮಯಾನಂತರ ಸೌಲನು ಸ್ವತಃ ಒಪ್ಪಿಕೊಂಡಂತೆ, ‘ಶಿಲುಬೆಗೆ ಹಾಕಲ್ಪಟ್ಟ. . .ಕ್ರಿಸ್ತನ ಸಂಗತಿಯು ಯೆಹೂದ್ಯರಿಗೆ ವಿಘ್ನ’ವಾಗಿತ್ತು.—1 ಕೊರಿಂಥ 1:23.
ಇಂತಹ ಕಲಿಸುವಿಕೆಯನ್ನು ಬಲು ನಿಶ್ಚಿತವಾದ ಪ್ರಯತ್ನಗಳಿಂದ ವಿರೋಧಿಸುವುದೇ ಸೌಲನ ಪ್ರತಿಕ್ರಿಯೆಯಾಗಿತ್ತು. ಅದನ್ನು ಅಳಿಸಿಹಾಕುವ ಪ್ರಯತ್ನದಲ್ಲಿ ಕ್ರೂರವಾದ ಬಲಪ್ರಯೋಗವನ್ನು ಸಹ ಉಪಯೋಗಿಸಲಾಗುತ್ತಿತ್ತು. ದೇವರು ತನ್ನಿಂದ ಅದನ್ನೇ ಬಯಸುತ್ತಿದ್ದನೆಂದು ಅವನು ಖಾತ್ರಿಯಿಂದಿದ್ದನು. ತಾನು ಪುಷ್ಟೀಕರಿಸಿದ ಮನೋಭಾವವನ್ನು ವರ್ಣಿಸುತ್ತಾ ಸೌಲನು ಹೀಗಂದನು: “ಮತಾಸಕ್ತಿಯನ್ನು ನೋಡಿದರೆ ನಾನು ಕ್ರೈಸ್ತಸಭೆಯ ಹಿಂಸಕನು, ಧರ್ಮಶಾಸ್ತ್ರದಲ್ಲಿ ಹೇಳಿರುವ ನೀತಿಯನ್ನು ನೋಡಿದರೆ ನಾನು ನಿರ್ದೋಷಿ”ಯಾಗಿರುತ್ತೇನೆ. “ನಾನು ದೇವರ ಸಭೆಯನ್ನು ಅತ್ಯಂತವಾಗಿ ಹಿಂಸೆಪಡಿಸಿ ಹಾಳು ಮಾಡುತ್ತಿದ್ದೆನು. ಇದಲ್ಲದೆ ನಾನು ನನ್ನ ಪಿತೃಗಳಿಂದ ಬಂದ ಸಂಪ್ರದಾಯಗಳಲ್ಲಿ ಬಹು ಅಭಿಮಾನವುಳ್ಳವನಾಗಿ ನನ್ನ ಜನರೊಳಗೆ ಸಮಪ್ರಾಯದವರಾದ ಅನೇಕರಿಗಿಂತ ಯೆಹೂದ್ಯ ಮತಾಚಾರದಲ್ಲಿ ಆಸಕ್ತನಾಗಿದ್ದೆನು.”—ಫಿಲಿಪ್ಪಿ 3:6; ಗಲಾತ್ಯ 1:13, 14.
ಹಿಂಸೆಯಲ್ಲಿ ಮುಂದಾಳು
ಸ್ತೆಫನನ ಮರಣಾನಂತರ, ಸೌಲನು ಕೇವಲ ಹಿಂಸೆಗೆ ಸಹಕಾರಿಯಾಗಿ ಮಾತ್ರವೇ ತಿಳಿಸಲ್ಪಟ್ಟಿರಲಿಲ್ಲ, ಆದರೆ ಅದರ ಸಮರ್ಥಕ ವಿಜೇತನಾಗಿಯೂ ಎಣಿಸಲ್ಪಟ್ಟಿದ್ದನು. ಈ ಕಾರಣದಿಂದ, ಶಿಷ್ಯರೊಂದಿಗೆ ತಾನು ಸೇರಿಕೊಳ್ಳಬೇಕೆಂಬ ಪ್ರಯತ್ನವನ್ನು ಮಾಡಿದಾಗಲೂ, ಅಂದರೆ ಅವನ ಮತಾಂತರದ ನಂತರವೂ, ಹಿಂಸಕನೆಂಬ ನಿಶ್ಚಿತ ಕುಪ್ರಸಿದ್ಧಿಯನ್ನು ಹೊಂದಿದ್ದರಿಂದ, ‘ಎಲ್ಲರು ಅವನನ್ನು ಶಿಷ್ಯನೆಂದು ನಂಬದೆ ಅವನಿಗೆ ಭಯಪಟ್ಟರು.’ ಅವನು ನಿಜವಾಗಿಯೂ ಒಬ್ಬ ಕ್ರೈಸ್ತನೆಂದು ಸ್ಪಷ್ಟವಾಗಿ ತಿಳಿದುಬಂದಾಗಲಂತೂ, ಅವನ ಮತಾಂತರವು ಶಿಷ್ಯರ ಮಧ್ಯೆ ಹರ್ಷ ಮತ್ತು ಉಪಕಾರಸ್ತುತಿಗೆ ಕಾರಣವಾಯಿತು. ಹಿಂದಿನ ಯಾರೋ ಒಬ್ಬ ವಿರೋಧಿಯು ಹೃದಯದಲ್ಲಿ ಪರಿವರ್ತನೆ ಮಾಡಿಕೊಂಡಿದ್ದಾನೆಂಬುದನ್ನು ಕೇವಲ ಕೇಳಿದರ ಕಾರಣದಿಂದ ಮಾತ್ರವಲ್ಲ, ‘ಪೂರ್ವದಲ್ಲಿ ನಮ್ಮನ್ನು ಹಿಂಸೆಪಡಿಸಿದ ಆ ಮನುಷ್ಯನು ತಾನು ಹಾಳುಮಾಡುತ್ತಿದ್ದ ಮತವನ್ನು ಈಗ ಪ್ರಸಿದ್ಧಿಪಡಿಸುತ್ತಿ’ದ್ದಾನೆಂಬ ಸುದ್ದಿಯಿಂದಲೂ ಉಲ್ಲಾಸಿಸಿದರು.—ಅ. ಕೃತ್ಯಗಳು 9:26; ಗಲಾತ್ಯ 1:23, 24.
ದಮಸ್ಕವು ಯೆರೂಸಲೇಮಿನಿಂದ ಸುಮಾರು 220 ಕಿಲೋಮೀಟರಿನಷ್ಟು ದೂರದಲ್ಲಿತ್ತು, ಅಂದರೆ ಏಳು ಅಥವಾ ಎಂಟು ದಿನಗಳ ಕಾಲ್ನಡಿಗೆಯನ್ನು ಆವರಿಸುತ್ತದೆ. ಆದರೂ ಸೌಲನು “ಶಿಷ್ಯರ ಮೇಲೆ ರೌದ್ರನಾಗಿದ್ದು ಬೆದರಿಕೆಯ ಮಾತುಗಳನ್ನಾಡುತ್ತಾ ಅವರನ್ನು ಸಂಹರಿಸಬೇಕೆಂದು” ಮಹಾಯಾಜಕನ ಬಳಿಗೆ ಹೋಗಿ ದಮಸ್ಕದಲ್ಲಿರುವ ಸಭಾಮಂದಿರಗಳಿಗೆ ಕಾಗದವನ್ನು ಕೊಡುವಂತೆ ಅವನಲ್ಲಿ ಕೇಳಿಕೊಂಡನು. ಯಾಕೆ? ಆ “ಮಾರ್ಗ”ಕ್ಕೆ ಸಂಬಂಧಪಟ್ಟವರನ್ನು ಹಿಡಿದು, ಅವರಿಗೆ ಬೇಡಿಹಾಕಿಸಿ ಯೆರೂಸಲೇಮಿಗೆ ಕರೆತರಲಾಗುವಂತೆ ಇದು ಸೌಲನಿಗೆ ಅವಕಾಶಕೊಡುತ್ತಿತ್ತು. ಅಧಿಕಾರಿಯುತ ಸಮ್ಮತಿಯೊಂದಿಗೆ, ಅವನು “ಮನೆಮನೆಗಳಲ್ಲಿ ಹೊಕ್ಕು ಗಂಡಸರನ್ನೂ ಹೆಂಗಸರನ್ನೂ ಎಳಕೊಂಡು ಬಂದು ಸೆರೆಮನೆಗೆ ಹಾಕಿಸಿ ಸಭೆಯನ್ನು ಹಾಳುಮಾಡುತ್ತಿದ್ದನು.” ಇತರರನ್ನು ಅವನು ‘ಸಭಾಮಂದಿರದೊಳಗೆ ಹೊಡಿಸುತ್ತಿದ್ದನು,’ ಮತ್ತು ಅವರ ಮರಣದಂಡನೆಯನ್ನು ಅನುಮೋದಿಸುತ್ತಾ ‘ಅವನು ಸಮ್ಮತಿಯನ್ನು ಸೂಚಿಸುತ್ತಿದ್ದನು.’ (ಅಕ್ಷರಶಃ, ‘ಅವನು ಓಟಿನ ಉರುಟು ಕಲ್ಲನ್ನು ಹಾಕಿದನು’)—ಅ. ಕೃತ್ಯಗಳು 8:3; 9:1, 2, 14; 22:5, 19; 26:10, NW ಪಾದಟಿಪ್ಪಣಿ.
ಗಮಲಿಯೇಲನ ಕೆಳಗೆ ಸೌಲನು ಪಡೆದ ವಿಧ್ಯಾಭ್ಯಾಸವನ್ನು ಮತ್ತು ಈಗ ಅವನಿಗೆ ದೊರೆತಿರುವ ಅಧಿಕಾರವನ್ನು ಗಮನಿಸುವಾಗ, ಅವನು ಕೇವಲ ಒಬ್ಬ ನ್ಯಾಯಶಾಸ್ತ್ರದ ವಿದ್ಯಾರ್ಥಿಯಾಗಿದ್ದಕ್ಕಿಂತಲೂ ಹೆಚ್ಚಾಗಿದ್ದನೆಂದು ಕೆಲವು ವಿದ್ವಾಂಸರು ನಂಬಿದ್ದರು. ಅಂದರೆ, ಯೆಹೂದಿಮತದಲ್ಲಿ ಅವನು ಅಧಿಕಾರದ ಮಟ್ಟವನ್ನು ಮುಟ್ಟುವಷ್ಟು ಪ್ರಗತಿಯನ್ನು ಮಾಡಿದ್ದನು. ಉದಾಹರಣೆಗೆ, ಸೌಲನು ಯೆರೂಸಲೇಮಿನ ಸಭಾಮಂದಿರದಲ್ಲಿ ಬೋಧಕನಾಗಿದ್ದಿರಬಹುದೆಂದು ಒಬ್ಬ ಲೇಖಕನು ಊಹಿಸುತ್ತಾನೆ. ಆದಾಗ್ಯೂ, ಸೌಲನು ‘ತನ್ನ ಸಮ್ಮತಿಯನ್ನು ಸೂಚಿಸಿರುವುದು,’ ನ್ಯಾಯಾಲಯದ ಒಬ್ಬ ಸದಸ್ಯನಾಗಿಯೋ ಅಥವಾ ಕ್ರೈಸ್ತರ ವಧೆಗೆ ತನ್ನ ನೈತಿಕ ಬೆಂಬಲವನ್ನು ವ್ಯಕ್ತಪಡಿಸುವ ಮೂಲಕವೋ ಎಂಬುದು ನಮಗೆ ನಿಶ್ಚಿತವಾಗಿ ಗೊತ್ತಿರುವುದಿಲ್ಲ.a
ಪ್ರಾರಂಭದಲ್ಲಿ ಎಲ್ಲ ಕ್ರೈಸ್ತರು, ಯೆಹೂದ್ಯರು ಅಥವಾ ಯೆಹೂದಿ ಮತಾಂತರಿಗಳಾಗಿದ್ದದರಿಂದ, ಸೌಲನು ಕ್ರೈಸ್ತತ್ವವನ್ನು ಯೆಹೂದಿಮತದ ಧರ್ಮಭ್ರಷ್ಟ ಚಳುವಳಿಯಾಗಿ ಗ್ರಹಿಸಿದನೆಂಬುದು ಸುವ್ಯಕ್ತ. ಮತ್ತು ಅದರ ಅನುಯಾಯಿಗಳನ್ನು ತಿದ್ದುವುದು ಅಧಿಕಾರಿಯುತ ಯೂದಾಯಮತದ ಜವಾಬ್ದಾರಿಯೆಂದು ಅವನು ಪರಿಗಣಿಸಿದನು. ವಿದ್ವಾಂಸ ಅರ್ಲಂಡ್ ಜೆ. ಹಲ್ಟಗ್ರೆನ್ ಹೇಳುವುದು, “ಹಿಂಸಕನಾದ ಪೌಲನು ಕ್ರೈಸ್ತತ್ವವನ್ನು, ಯೆಹೂದಿಮತದ ಪ್ರತ್ಯೇಕ ಧರ್ಮವಾಗಿ ಇಲ್ಲವೆ ಒಂದು ಪ್ರತಿಸ್ಪರ್ಧಿಯಾಗಿ ಕಂಡ ಕಾರಣ ಅದನ್ನು ವಿರೋಧಿಸಿದ್ದನೆಂದು ಹೇಳುವುದು ತಕ್ಕದ್ದಾಗಿರುವುದಿಲ್ಲ. ಕ್ರೈಸ್ತ ಚಳುವಳಿಯು ಯೆಹೂದಿ ಅಧಿಕಾರಕ್ಕೆ ಇನ್ನೂ ಅಧೀನವಾಗಿರುವುದಾಗಿ ಅವನು ಮತ್ತು ಇತರರು ಕಂಡುಕೊಂಡಿರಬೇಕು. ಲಭ್ಯವಿರುವ ಎಲ್ಲಾ ವಿಧಾನಗಳನ್ನು ಬಳಸುವ ಮೂಲಕ ಹಟಮಾರಿ ಯೆಹೂದ್ಯರು ತಪ್ಪೊಪ್ಪಿಕೊಂಡು ಈ ಮೂಲಕ ಸಂಪ್ರದಾಯಬದ್ಧತೆಗೆ ಹಿಂದಿರುಗುವಂತೆ ಬಲಾತ್ಕರಿಸುವುದೇ ಅವನ ಆಶಯವಾಗಿತ್ತು. (ಅ. ಕೃತ್ಯಗಳು 26:11) ಅವನ ಮುಂದೆ ತೆರೆದಿರುವ ಒಂದು ವಿಧಾನವು ಸೆರೆವಾಸವಾಗಿತ್ತು. ಇನ್ನೊಂದು ವಿಧಾನವು, ಮೂವರು ನ್ಯಾಯಾಧೀಶರ ಯಾವುದೇ ಸ್ಥಳೀಯ ನ್ಯಾಯಾಲಯದಲ್ಲಿ ರಬ್ಬಿ ಅಧಿಕಾರದ ವಿರುದ್ಧ ಹೋಗುವ ಅವಿಧೇಯತೆಗಾಗಿ ನೀಡಲ್ಪಡುವ ಶಿಕ್ಷೆಯಾಗಿದ್ದ ಸಭಾಮಂದಿರಗಳಲ್ಲಿ ಹೊಡೆಯುವುದಾಗಿತ್ತು. ಇದೊಂದು ಶಿಕ್ಷೆಯ ಸಾಮಾನ್ಯ ವಿಧವಾಗಿತ್ತು.
ದಮಸ್ಕದ ದಾರಿಯಲ್ಲಿ ಸೌಲನಿಗೆ ಯೇಸುವು ಪ್ರತ್ಯಕ್ಷನಾದಾಗ, ವಾಸ್ತವದಲ್ಲಿ, ಇವೆಲ್ಲಕ್ಕೂ ತಡೆಬಂತು. ಕ್ರೈಸ್ತತ್ವದ ಭೀಕರ ಹಿಂಸಕನಾದ ಸೌಲನು ತಕ್ಷಣ ಅದರ ಹುರುಪಿನ ಸಮರ್ಥಕನಾದನು ಮತ್ತು ಬಲುಬೇಗನೆ ದಮಸ್ಕದ ಯೆಹೂದ್ಯರು ಅವನನ್ನು ಕೊಲ್ಲುವುದಕ್ಕೆ ಹುಡುಕುತ್ತಿದ್ದರು. (ಅ. ಕೃತ್ಯಗಳು 9:1-23) ವಿರೋಧಾಭಾಸವೆಂಬಂತೆ, ಸೌಲನು ಒಬ್ಬ ಹಿಂಸಕನಾಗಿ ತಾನು ನೀಡಿದವುಗಳಿಗೆ ಸರಿಸಮವಾಗಿ ಅನೇಕ ಸಂಗತಿಗಳನ್ನು ಒಬ್ಬ ಕ್ರೈಸ್ತನಾಗಿ ತಾನು ಅನುಭವಿಸಲಿಕ್ಕಿದ್ದನು. ಹೀಗಾಗಿ ವರ್ಷಗಳಾನಂತರ ಅವನಿಗೆ ಹೀಗೆ ಹೇಳಸಾಧ್ಯವಿತ್ತು: “ಐದು ಸಾರಿ ಯೆಹೂದ್ಯರಿಂದ ನನಗೆ ಒಂದು ಕಡಿಮೆ ನಾಲ್ವತ್ತು ಏಟುಗಳು ಬಿದ್ದವು.”—2 ಕೊರಿಂಥ 11:24.
ಉತ್ಸಾಹವು ತಪ್ಪು ದಾರಿಗೆ ನಡೆಸಬಲ್ಲದು
“ಮೊದಲು ದೂಷಕನು ಹಿಂಸಕನು ಬಲಾತ್ಕಾರಿಯೂ ಆಗಿದ್ದೆನು,” ಪೌಲನೆಂದು ಚಿರಪರಿಚಿತನಾಗಿರುವ ಸೌಲನು ತನ್ನ ಮತಾಂತರದ ತರುವಾಯ ಹೀಗೆ ಬರೆದನು. “ನಾನು ಅವಿಶ್ವಾಸಿಯಾಗಿ ತಿಳಿಯದೆ ಹಾಗೆ ಮಾಡಿದ್ದರಿಂದ ನನ್ನ ಮೇಲೆ ಕರುಣೆ ಉಂಟಾಯಿತು.” (1 ತಿಮೊಥೆಯ 1:12,13) ಒಬ್ಬನು ಧರ್ಮದಲ್ಲಿ ಯಥಾರ್ಥನು ಮತ್ತು ಕ್ರಿಯಾಶೀಲನು ಆಗಿರುವುದು ತಾನೇ, ದೇವರ ಒಪ್ಪಿಗೆ ತಮ್ಮಲ್ಲಿದೆಯೆನ್ನುವುದಕ್ಕೆ ಖಾತ್ರಿಯಲ್ಲ. ಸೌಲನು ಅತ್ಯುತ್ಸಾಹಿಯಾಗಿದ್ದನು ಮತ್ತು ಮನಸ್ಸಾಕ್ಷಿಯ ಪ್ರಕಾರ ನಡೆದನು, ಆದರೂ ಇದು ಅವನನ್ನು ಯೋಗ್ಯನನ್ನಾಗಿ ಮಾಡಲಿಲ್ಲ. ಅವನ ಉತ್ಕಟ ಉತ್ಸಾಹವು ತಪ್ಪಾದ ದಾರಿಗೆ ನಡಿಸಿತು. (ರೋಮಾಪುರ 10:2,3ನ್ನು ಹೋಲಿಸಿರಿ.) ಇದು ನಾವು ಚಿಂತನೆಮಾಡುವಂತೆ ಕಾರ್ಯನಡಿಸಬೇಕು.
ದೇವರು ತಮ್ಮಿಂದ ಅಪೇಕ್ಷಿಸುವುದು ಕೇವಲ ಒಳ್ಳೇ ನಡತೆಯೇ ಆಗಿದೆಯೆಂದು ಇಂದು ಅನೇಕರು ದೃಢವಾಗಿ ಮನಗಾಣಿಸಲ್ಪಟ್ಟಿದ್ದಾರೆ. ಆದರೆ ಇದು ನಿಜವೋ? ಪ್ರತಿಯೊಬ್ಬನು ಪೌಲನ ಬುದ್ಧಿವಾದಕ್ಕೆ ಕಿವಿಗೊಡುವುದು ಬಹಳ ಉತ್ತಮ: “ಆದರೆ ಎಲ್ಲವನ್ನೂ ಪರಿಶೋಧಿಸಿ ಒಳ್ಳೇದನ್ನೇ ಭದ್ರವಾಗಿ ಹಿಡಿದುಕೊಳ್ಳಿರಿ.” (1 ಥೆಸಲೊನೀಕ 5:21) ಇದರ ಅರ್ಥವು, ದೇವರ ಸತ್ಯ ವಾಕ್ಯದ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳುವುದು, ಅನಂತರ ಅದಕ್ಕೆ ಪೂರ್ಣ ಹೊಂದಿಕೆಯಲ್ಲಿ ಜೀವಿಸುವುದೇ ಆಗಿದೆ. ಬೈಬಲಿನ ಪರಿಶೀಲನೆಯಿಂದ ನಮಗೆ ಬದಲಾವಣೆ ಮಾಡುವುದಕ್ಕಿದೆಯೆಂಬುದು ನಮ್ಮ ಗ್ರಹಿಕೆಗೆ ಬಂದರೆ, ನಾವದನ್ನು ವಿಳಂಬವಿಲ್ಲದೆ ನಮ್ಮೆಲ್ಲಾ ಸಾಮರ್ಥ್ಯಗಳಿಂದ ಮಾಡತಕ್ಕದು. ಬಹುಶಃ ನಮ್ಮಲ್ಲಿ ಕೆಲವರೇ ಪೌಲನಿದ್ದಷ್ಟು ಮಟ್ಟಿಗೆ ದೂಷಕರು, ಹಿಂಸಕರು ಅಥವಾ ಬಲಾತ್ಕಾರಿಗಳೂ ಆಗಿದ್ದಿರಬಹುದು. ಆದರೂ, ನಂಬಿಕೆ ಹಾಗೂ ನಿಷ್ಕೃಷ್ಟ ಜ್ಞಾನದ ಪ್ರಕಾರ ಕ್ರಿಯೆಗೈಯುವುದಾದರೆ ಮಾತ್ರವೇ, ಅವನಂತೆ ನಾವು ದೇವರ ಮೆಚ್ಚಿಗೆಯನ್ನು ಪಡೆಯಬಲ್ಲೆವು.—ಯೋಹಾನ 17:3,17.
[ಅಧ್ಯಯನ ಪ್ರಶ್ನೆಗಳು]
a ಏಮೀಲ್ ಶೂರರ್ ಅವರ, ಯೇಸು ಕ್ರಿಸ್ತನ ಸಮಯದಲ್ಲಿ ಯೆಹೂದಿ ಜನರ ಇತಿಹಾಸ (ಇಂಗ್ಲಿಷ್) ಎಂಬ ಪುಸ್ತಕದ ಪ್ರಕಾರ, (ಕ್ರಿ.ಪೂ175–ಕ್ರಿ.ಶ.135) ಹಿರೀ ಸನ್ಹೇದ್ರಿನ್ ಅಥವಾ ಎಪ್ಪತ್ತೊಂದು ಸದಸ್ಯರ ಸನ್ಹೇದ್ರಿನ್ ವಿಧಾನಗಳ ಬಗ್ಗೆ ಮಿಷ್ನದಲ್ಲಿ ಯಾವ ದಾಖಲೆಯು ಇಲ್ಲದ್ದಿದ್ದರೂ, ಇಪ್ಪತ್ತಮೂರು ಸದಸ್ಯರ ಚಿಕ್ಕ ಸನ್ಹೇದ್ರಿನ್ಗಳ ಕುರಿತಾದರೋ ಅತಿ ಸೂಕ್ಷ್ಮ ವಿವರಣೆಯನ್ನು ಸಾದರಪಡಿಸಲಾಗಿದೆ. ಚಿಕ್ಕ ಸನ್ಹೇದ್ರಿನ್ನಲ್ಲಿ ವಿಚಾರಣೆಯಾಗುತ್ತಿರುವ ಮರಣದಂಡನೆಗೆ ಯೋಗ್ಯವಾಗಿರುವ ಮೊಕದ್ದಮೆಯನ್ನು ಹಾಜರಾಗಸಾಧ್ಯವಿರುವ ಕಾನೂನು ವಿದ್ಯಾರ್ಥಿಗಳು ಆರೋಪಿಯ ಪರವಾಗಿ ಮಾತಾಡಲು ಅನುಮತಿಸಲ್ಪಟ್ಟರೇ ಹೊರತು ಅವರ ವಿರುದ್ಧ ವಾದಿಸಲಿಕ್ಕಿರಲಿಲ್ಲ. ಆದರೆ ಮರಣದಂಡನೆಯ ಅಪರಾಧವನ್ನು ಒಳಗೊಂಡಿರದ ಮೊಕದ್ದಮೆಗಳಲ್ಲಿ ಅವರು ಎರಡನ್ನೂ ಮಾಡಸಾಧ್ಯವಿತ್ತು.