ಯೇಸು ಕ್ರಿಸ್ತನಲ್ಲಿ ಯಾಕೆ ನಂಬಿಕೆಯಿಡಬೇಕು?
“ಕ್ರೈಸ್ತರಲ್ಲದ ಅನೇಕ ಜನರು ಸಹ, ಅವನನ್ನು ಒಬ್ಬ ವಿವೇಕವುಳ್ಳ ಮಹಾ ಬೋಧಕನಾಗಿದ್ದನೆಂದು ನಂಬುತ್ತಾರೆ. ಅವನು ನಿಶ್ಚಯವಾಗಿಯೂ ಜೀವಿಸಿರುವವರಲ್ಲಿಯೇ ಅತ್ಯಂತ ಪ್ರಭಾವಶಾಲಿಯಾದ ವ್ಯಕ್ತಿಗಳಲ್ಲೊಬ್ಬನಾಗಿದ್ದನು.” (ದ ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯ) “ಅವನು” ಯಾರು? ಅವನು ಕ್ರೈಸ್ತತ್ವದ ಸ್ಥಾಪಕನಾದ ಯೇಸು ಕ್ರಿಸ್ತನು.
ಎನ್ಸೈಕ್ಲೊಪೀಡಿಯವು ಹಾಗೆ ಹೇಳುತ್ತದಾದರೂ, ಪ್ರಾಚ್ಯ ಮತ್ತು ಇನ್ನಿತರ ಕಡೆಗಳಲ್ಲಿರುವ ಕೋಟಿಗಟ್ಟಲೆ ಜನರಿಗೆ, ಯೇಸು ಕ್ರಿಸ್ತನು ಒಬ್ಬ ಅಪರಿಚಿತನಾಗಿದ್ದು, ಮಾಧ್ಯಮಿಕ ಶಾಲೆಯ ಪಠ್ಯಪುಸ್ತಕಗಳಿಂದ ನೆನಪಿಸಶಕ್ತವಾಗಿರುವ ಕೇವಲ ಒಂದು ಹೆಸರಿಗಿಂತ ಹೆಚ್ಚೇನೂ ಆಗಿರುವುದಿಲ್ಲ. ಕ್ರೈಸ್ತಪ್ರಪಂಚದ ಚರ್ಚುಗಳಲ್ಲಿ ಸಹ, ತಮಗೆ ಯೇಸುವಿನ ಕುರಿತು ನಿಜವಾಗಿಯೂ ಗೊತ್ತಿಲ್ಲವೆಂದು ಹೇಳುವ ಮತ್ತು ಬೈಬಲಿನಲ್ಲಿ ಕಂಡುಬರುವ ಅವನ ಜೀವನದ ಕುರಿತು ಈಗಲೂ ಅಸ್ತಿತ್ವದಲ್ಲಿರುವ ನಾಲ್ಕು ವೃತ್ತಾಂತಗಳ (ಸುವಾರ್ತೆಗಳ) ಸತ್ಯತೆಯನ್ನು ಸಂದೇಹಿಸುವ ದೇವತಾಶಾಸ್ತ್ರಜ್ಞರು ಮತ್ತು ಪಾದ್ರಿಗಳು ಇದ್ದಾರೆ.
ಸುವಾರ್ತಾ ಬರಹಗಾರರು ಯೇಸುವಿನ ಜೀವನ ಚರಿತ್ರೆಯ ಕುರಿತು ಸುಳ್ಳಾದ ರಚನೆಯನ್ನು ಮಾಡಿರಬಹುದೋ? ಖಂಡಿತವಾಗಿಯೂ ಇಲ್ಲ! ಪ್ರಸಿದ್ಧ ಇತಿಹಾಸಕಾರ ವಿಲ್ ಡುರಾಂಟ್ ಈ ಸುವಾರ್ತಾ ವೃತ್ತಾಂತಗಳನ್ನು ವಿಶ್ಲೇಷಿಸಿದ ಬಳಿಕ ಬರೆದದ್ದು: “ಅಂಥ ಬಲಶಾಲಿ ಮತ್ತು ಒಂದು ಆಕರ್ಷಕ ವ್ಯಕ್ತಿತ್ವವನ್ನು, ನೈತಿಕತೆಯಲ್ಲಿ ಅಷ್ಟು ಉನ್ನತವಾದ ಮತ್ತು ಮಾನವ ಸಹೋದರತ್ವದ ಅಷ್ಟೊಂದು ಪ್ರೇರಕವಾದ ಒಂದು ನೋಟವನ್ನು ಒಂದು ಸಂತತಿಯಲ್ಲಿ ಕೇವಲ ಕೆಲವೇ ಸರಳ ಮನುಷ್ಯರು ರಚಿಸುವುದು ತಾನೇ, ಸುವಾರ್ತೆಗಳಲ್ಲಿ ದಾಖಲೆಯಾದ ಯಾವುದೇ ಅದ್ಭುತಕ್ಕಿಂತ ಹೆಚ್ಚು ನಂಬಲಸಾಧ್ಯವಾದ ಒಂದು ಅದ್ಭುತವಾಗಬಹುದು. ಎರಡು ಶತಮಾನಗಳ ವರೆಗೆ ಬೈಬಲಿನ ಮೂಲಪಾಠವನ್ನು ವಿಮರ್ಶಿಸಿದ ಬಳಿಕವೂ, ಕ್ರಿಸ್ತನ ಜೀವನ, ನಡತೆ ಮತ್ತು ಬೋಧನೆಗಳು ನ್ಯಾಯಸಮ್ಮತವಾದ ರೀತಿಯಲ್ಲಿ ಸ್ಪಷ್ಟವಾಗಿ ಉಳಿದಿವೆ ಮತ್ತು ಪಾಶ್ಚಾತ್ಯ ಮನುಷ್ಯನ ಇತಿಹಾಸದಲ್ಲಿ ಅತ್ಯಾಕರ್ಷಕ ಅಂಶವನ್ನು ರೂಪಿಸಿವೆ.”
ಹೀಗಿದ್ದರೂ, ಯೇಸು ಕ್ರಿಸ್ತನ ನಾಮಮಾತ್ರದ ಅನುಯಾಯಿಗಳು ಮಾಡುತ್ತಿರುವ ಕೃತ್ಯಗಳ ಕಾರಣ, ಅವನು ತಮ್ಮ ಗಮನಕ್ಕೆ ಅನರ್ಹನೆಂದು ಹೇಳಿ ನಿರಾಕರಿಸುವವರು ಇದ್ದಾರೆ. ಜಪಾನಿನಲ್ಲಿರುವ ಕೆಲವರು ಹೀಗೆನ್ನುತ್ತಾರೆ: ‘ಅವರು ಪರಮಾಣು ಬಾಂಬನ್ನು ನಾಗಾಸಾಕಿಯ ಮೇಲೆ ಬೀಳಿಸಿದರು.’ ‘ಜಪಾನಿನಲ್ಲಿರುವ ಬೇರೆಲ್ಲಾ ದೊಡ್ಡ ನಗರಗಳಿಗಿಂತಲೂ ನಾಗಾಸಾಕಿಯಲ್ಲಿ ಹೆಚ್ಚು ಕ್ರೈಸ್ತರಿದ್ದರು.’ ಆದರೆ ರೋಗಿಯು ಡಾಕ್ಟರನ ಸೂಚನೆಯನ್ನು ಪಾಲಿಸಲು ತಪ್ಪುವುದಾದರೆ, ತನ್ನ ರೋಗಕ್ಕಾಗಿ ವೈದ್ಯನನ್ನು ದೂರುವುದು ಯುಕ್ತವೋ? ಮಾನವಕುಲದ ರೋಗಗಳನ್ನು ನಿಭಾಯಿಸುವುದಕ್ಕೆ ಯೇಸುವಿನ ಔಷಧಸೂಚಿಯನ್ನು ಕ್ರೈಸ್ತರೆಂದು ಹೇಳಿಕೊಳ್ಳುವ ಅನೇಕರು ಬಹಳ ಕಾಲದಿಂದಲೂ ನಿರಾಕರಿಸಿದ್ದಾರೆ. ಆದರೂ, ನಮ್ಮ ದಿನನಿತ್ಯದ ಸಮಸ್ಯೆಗಳಿಗೆ ಹಾಗೂ ಲೋಕದಾದ್ಯಂತ ಇರುವ ಮಾನವಕುಲದ ಸಂಕಷ್ಟಗಳಿಗೆ ಯೇಸುವು ಪರಿಹಾರವನ್ನು ಕೊಟ್ಟಿದ್ದಾನೆ. ಈ ಕಾರಣಕ್ಕಾಗಿಯೇ, ಅವನು ಎಂತಹ ರೀತಿಯ ವ್ಯಕ್ತಿಯಾಗಿದ್ದನೆಂಬುದನ್ನು ನೀವಾಗಿಯೇ ತಿಳಿದುಕೊಳ್ಳುವಂತೆ ಮುಂದಿನ ಲೇಖನವನ್ನು ಓದಲು ನಿಮ್ಮನ್ನು ನಾವು ಆಮಂತ್ರಿಸುತ್ತೇವೆ.