ಯೇಸು ನಿಮ್ಮ ಜೀವಿತವನ್ನು ಹೇಗೆ ಬದಲಾಯಿಸಶಕ್ತನು?
ಸುಮಾರು 2000 ವರ್ಷಗಳ ಹಿಂದೆ ಪ್ಯಾಲೆಸ್ಟೈನ್ನಲ್ಲಿ ಜೀವಿಸಿದ್ದ ಯೇಸು ಕ್ರಿಸ್ತನು ಮಹಾ ಬೋಧಕನಾಗಿದ್ದನು. ಅವನ ಬಾಲ್ಯದ ಕುರಿತು ನಮಗೆ ತಿಳಿದಿರುವ ಮಾಹಿತಿಯು ಬಹಳ ಕಡಿಮೆ. ಹೀಗಿದ್ದರೂ, ಸುಮಾರು 30 ವರ್ಷ ಪ್ರಾಯದವನಾದಾಗ, ಅವನು “ಸತ್ಯದ ವಿಷಯದಲ್ಲಿ ಸಾಕ್ಷಿಹೇಳುವ” ತನ್ನ ಶುಶ್ರೂಷೆಯನ್ನು ಪ್ರಾರಂಭಿಸಿದನೆಂಬುದಕ್ಕೆ ಸಾಕಷ್ಟು ದೃಢ ಆಧಾರವಿದೆ. (ಯೋಹಾನ 18:37; ಲೂಕ 3:21-23) ಯೇಸುವಿನ ಜೀವಿತದ ವೃತ್ತಾಂತಗಳನ್ನು ಬರೆದ ನಾಲ್ವರು ಶಿಷ್ಯರು, ಹಿಂಬಾಲಿಸಿ ಬಂದ ಮೂರುವರೆ ವರ್ಷಗಳ ಮೇಲೆ ಗಮನವನ್ನು ಕೇಂದ್ರೀಕರಿಸುತ್ತಾರೆ.
ತನ್ನ ಶುಶ್ರೂಷೆಯ ಸಮಯದಲ್ಲಿ, ಯೇಸು ಕ್ರಿಸ್ತನು ಲೋಕದ ಅನೇಕ ಕೆಡುಕುಗಳಿಗೆ ಪರಿಹಾರವಾಗಿರಬಲ್ಲ ಆಜ್ಞೆಯೊಂದನ್ನು ತನ್ನ ಶಿಷ್ಯರಿಗೆ ಕೊಟ್ಟನು. ಅದೇನಾಗಿತ್ತು? ಯೇಸು ಹೇಳಿದ್ದು: “ನಾನು ನಿಮಗೆ ಒಂದು ಹೊಸ ಆಜ್ಞೆಯನ್ನು ಕೊಡುತ್ತೇನೆ; ಏನಂದರೆ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು; ನಾನು ನಿಮ್ಮನ್ನು ಪ್ರೀತಿಸಿದ ಮೇರೆಗೆ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು.” (ಯೋಹಾನ 13:34) ಹೌದು, ಮಾನವಕುಲದ ಅನೇಕ ಸಮಸ್ಯೆಗಳಿಗೆ ಪರಿಹಾರವು ಪ್ರೀತಿಯಾಗಿದೆ. ಇನ್ನೊಂದು ಸಂದರ್ಭದಲ್ಲಿ, ಅತಿ ಮುಖ್ಯವಾದ ಆಜ್ಞೆಯು ಯಾವುದೆಂದು ಯೇಸುವಿಗೆ ಕೇಳಲಾದಾಗ, ಅವನು ಉತ್ತರಿಸಿದ್ದು: “ನಿನ್ನ ದೇವರಾಗಿರುವ ಕರ್ತನನ್ನು [“ಯೆಹೋವನನ್ನು,” NW] ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ನಿನ್ನ ಪೂರ್ಣಬುದ್ಧಿಯಿಂದಲೂ ಪ್ರೀತಿಸಬೇಕು ಎಂಬ ಆಜ್ಞೆಯೇ ಮುಖ್ಯವಾದದ್ದು ಮತ್ತು ಮೊದಲನೆಯದು. ಇದಕ್ಕೆ ಸಮಾನವಾದ ಎರಡನೆಯ ಆಜ್ಞೆ ಒಂದು ಉಂಟು, ಅದು ಯಾವುದೆಂದರೆ—ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು.”—ಮತ್ತಾಯ 22:37-40.
ದೇವರನ್ನು ಮತ್ತು ಜೊತೆ ಮಾನವರನ್ನು ಹೇಗೆ ಪ್ರೀತಿಸಬೇಕೆಂಬುದನ್ನು ಯೇಸು ತನ್ನ ನಡೆ-ನುಡಿಗಳಲ್ಲಿ ನಮಗೆ ತೋರಿಸಿದನು. ನಾವೀಗ ಕೆಲವು ಉದಾಹರಣೆಗಳನ್ನು ಪರಿಗಣಿಸೋಣ ಮತ್ತು ಅವನಿಂದ ಏನನ್ನು ಕಲಿಯಬಹುದೆಂಬುದನ್ನು ನೋಡೋಣ.
ಅವನ ಬೋಧನೆಗಳು
ಇತಿಹಾಸದಲ್ಲಿನ ಸುಪ್ರಸಿದ್ಧ ಪ್ರಸಂಗಗಳಲ್ಲೊಂದರಲ್ಲಿ, ಯೇಸು ಕ್ರಿಸ್ತನು ತನ್ನ ಹಿಂಬಾಲಕರಿಗೆ, “ಯಾವನೂ ಇಬ್ಬರು ಯಜಮಾನರಿಗೆ ಸೇವೆಮಾಡಲಾರನು. ಅವನು ಒಬ್ಬನನ್ನು ದ್ವೇಷಿಸಿ ಮತ್ತೊಬ್ಬನನ್ನು ಪ್ರೀತಿಸುವನು; ಇಲ್ಲವೆ ಒಬ್ಬನನ್ನು ಹೊಂದಿಕೊಂಡು ಮತ್ತೊಬ್ಬನನ್ನು ತಾತ್ಸಾರಮಾಡುವನು. ನೀವು ದೇವರನ್ನೂ ಧನವನ್ನೂ ಕೂಡ ಸೇವಿಸಲಾರಿರಿ” ಎಂದು ಹೇಳಿದನು. (ಮತ್ತಾಯ 6:24) ಹಣವು ಎಲ್ಲ ಸಮಸ್ಯೆಗಳನ್ನು ಪರಿಹರಿಸುತ್ತದೆಂದು ಅನೇಕ ಜನರು ನಂಬುವ ಈ ಕಾಲದಲ್ಲಿ, ದೇವರನ್ನು ನಮ್ಮ ಜೀವಿತಗಳಲ್ಲಿ ಪ್ರಥಮವಾಗಿ ಇಡುವ ಯೇಸುವಿನ ಬೋಧನೆಯು ನಮ್ಮ ಸಮಯಕ್ಕೆ ಪ್ರಾಯೋಗಿಕವಾಗಿದೆಯೋ? ನಿಜ, ನಮಗೆ ಬದುಕಲು ಹಣ ಬೇಕೇಬೇಕು. (ಪ್ರಸಂಗಿ 7:12) ಆದರೂ, ನಾವು “ಧನವನ್ನು” ನಮ್ಮ ಯಜಮಾನನನ್ನಾಗಿ ಮಾಡಿಕೊಂಡರೆ, “ಹಣದಾಸೆ”ಯು ನಮ್ಮನ್ನು ನಿಯಂತ್ರಿಸುವುದು, ನಮ್ಮ ಇಡೀ ಜೀವಿತವನ್ನು ಹತೋಟಿಯಲ್ಲಿಡುವುದು. (1 ತಿಮೊಥೆಯ 6:9, 10) ಈ ಪಾಶಕ್ಕೆ ಸಿಲುಕಿಕೊಂಡಿರುವ ಅನೇಕರು, ತಮ್ಮ ಕುಟುಂಬವನ್ನು ಆರೋಗ್ಯವನ್ನು ಮತ್ತು ತಮ್ಮ ಜೀವವನ್ನು ಕೂಡ ಕಳೆದುಕೊಂಡಿದ್ದಾರೆ.
ಇನ್ನೊಂದು ಕಡೆಯಲ್ಲಿ, ದೇವರನ್ನು ನಮ್ಮ ಯಜಮಾನನನ್ನಾಗಿ ವೀಕ್ಷಿಸುವುದು ಜೀವನಕ್ಕೆ ಅರ್ಥವನ್ನು ಕೊಡುತ್ತದೆ. ಸೃಷ್ಟಿಕರ್ತನಾಗಿರುವ ಆತನು ಜೀವದ ಬುಗ್ಗೆಯಾಗಿದ್ದಾನೆ ಮತ್ತು ಹೀಗೆ, ಆತನೊಬ್ಬನೇ ನಮ್ಮ ಆರಾಧನೆಗೆ ಯೋಗ್ಯನು. (ಕೀರ್ತನೆ 36:9; ಪ್ರಕಟನೆ 4:11) ಆತನ ಗುಣಗಳ ಕುರಿತು ಕಲಿಯುವವರು ಮತ್ತು ಆತನನ್ನು ಪ್ರೀತಿಸುವುದಕ್ಕೆ ತೊಡಗುವವರು, ಆತನ ಆಜ್ಞೆಗಳನ್ನು ಅನುಸರಿಸಲು ಪ್ರೇರಿಸಲ್ಪಡುತ್ತಾರೆ. (ಪ್ರಸಂಗಿ 12:13; 1 ಯೋಹಾನ 5:3) ಹೀಗೆ ಮಾಡುವುದಾದರೆ, ನಮಗೆ ನಾವು ಪ್ರಯೋಜನವನ್ನು ತಂದುಕೊಳ್ಳುತ್ತೇವೆ.—ಯೆಶಾಯ 48:17.
ಪರ್ವತ ಪ್ರಸಂಗದಲ್ಲಿ, ಜೊತೆ ಮಾನವರಿಗೆ ಪ್ರೀತಿ ತೋರಿಸುವುದು ಹೇಗೆಂಬುದನ್ನು ಸಹ ಯೇಸು ತನ್ನ ಶಿಷ್ಯರಿಗೆ ಕಲಿಸಿದನು. ಅವನು ಹೇಳಿದ್ದು: “ಅಂತು ಜನರು ನಿಮಗೆ ಏನೇನು ಮಾಡಬೇಕೆಂದು ಅಪೇಕ್ಷಿಸುತ್ತೀರೋ ಅದನ್ನೇ ನೀವು ಅವರಿಗೆ ಮಾಡಿರಿ.” (ಮತ್ತಾಯ 7:12) ಯೇಸು ಇಲ್ಲಿ ಉಪಯೋಗಿಸಿದ “ಜನರು” ಎಂಬ ಪದವು ಒಬ್ಬನ ವೈರಿಯನ್ನು ಸಹ ಒಳಗೂಡುತ್ತದೆ. ಅದೇ ಪ್ರಸಂಗದಲ್ಲಿ, ಅವನಂದದ್ದು: “ನಿಮ್ಮ ವೈರಿಗಳನ್ನು ಪ್ರೀತಿಸಿರಿ; ನಿಮ್ಮನ್ನು ಹಿಂಸೆ ಪಡಿಸುವವರಿಗೋಸ್ಕರ ದೇವರನ್ನು ಪ್ರಾರ್ಥಿಸಿರಿ.” (ಮತ್ತಾಯ 5:43, 44) ನಾವಿಂದು ಎದುರಿಸುವ ಅನೇಕ ಸಮಸ್ಯೆಗಳನ್ನು ಇಂತಹ ಪ್ರೀತಿಯು ಬಗೆಹರಿಸಲಾರದೋ? ಮೋಹನ್ದಾಸ್ ಗಾಂಧಿ ಹಾಗೆ ನೆನಸಿದರು. ಅವರು ಹೀಗಂದದ್ದು ಉಲ್ಲೇಖನೀಯವೇ ಆಗಿದೆ: “ಪರ್ವತ ಪ್ರಸಂಗದಲ್ಲಿ ಯೇಸುವಿನಿಂದ ನೀಡಲ್ಪಟ್ಟ ಬೋಧನೆಗಳಿಗೆ [ನಾವು] ಒಮ್ಮತಿಸಿದ್ದಾದರೆ . . ಇಡೀ ಲೋಕದ ಸಮಸ್ಯೆಗಳನ್ನು ಪರಿಹರಿಸುತ್ತಿದ್ದೆವು.” ಪ್ರೀತಿಯ ಕುರಿತಾದ ಯೇಸುವಿನ ಬೋಧನೆಗಳು ಒಂದು ವೇಳೆ ಅನ್ವಯಿಸಲ್ಪಡುವಲ್ಲಿ, ಮಾನವಕುಲದ ಅನೇಕ ಕೆಡುಕುಗಳನ್ನು ನಾವು ಪರಿಹರಿಸಸಾಧ್ಯವಿದೆ.
ಅವನ ಕಾರ್ಯಗಳು
ಪ್ರೀತಿಯನ್ನು ತೋರಿಸುವುದು ಹೇಗೆ ಎಂಬುದರ ಅಗಾಧ ಸತ್ಯಗಳನ್ನು ಯೇಸು ಕಲಿಸಿದನು ಮಾತ್ರವಲ್ಲ, ತಾನು ಕಲಿಸಿದ್ದನ್ನು ಅವನು ಸ್ವತಃ ಆಚರಿಸಿದನು. ಉದಾಹರಣೆಗೆ, ಅವನು ಇತರರ ಹಿತಚಿಂತನೆಯನ್ನು ತನ್ನದ್ದಕ್ಕಿಂತಲೂ ಮುಂದಾಗಿ ಇಟ್ಟನು. ಒಂದು ದಿನ ಯೇಸು ಮತ್ತು ಅವನ ಶಿಷ್ಯರು ಒಂದು ಊಟವನ್ನು ಸಹ ಮಾಡಲು ಸಮಯವಿರದೆ ಜನರಿಗೆ ಸಹಾಯಮಾಡುವುದರಲ್ಲಿಯೇ ತೀರಾ ಕಾರ್ಯಮಗ್ನರಾಗಿದ್ದರು. ತನ್ನ ಶಿಷ್ಯರಿಗೆ ಕೊಂಚ ಸಮಯದ ವಿಶ್ರಾಂತಿಯ ಅಗತ್ಯವಿದ್ದದ್ದನ್ನು ಗಮನಿಸಿದ ಯೇಸು ಅವರನ್ನು ಏಕಾಂತ ಸ್ಥಳಕ್ಕೆ ಕರೆತಂದನು. ಆದರೆ ಅವರಲ್ಲಿಗೆ ತಲುಪಿದಾಗ, ಅವರಿಗಾಗಿ ಕಾದಿರುವ ಒಂದು ಗುಂಪನ್ನು ಕಂಡುಕೊಂಡರು. ಸ್ವಲ್ಪ ವಿರಾಮದ ಅಗತ್ಯವಿದೆಯೆಂದು ನೀವು ಭಾವಿಸುತ್ತಿದ್ದಾಗ ಜನರ ಗುಂಪು ನಿಮ್ಮಿಂದ ಕೆಲಸವನ್ನು ನಿರೀಕ್ಷಿಸುವುದಾದರೆ, ಆಗ ನೀವು ಹೇಗೆ ಪ್ರತಿಕ್ರಿಯಿಸುವಿರಿ? ಆದರೆ, ಯೇಸು “ಕನಿಕರಪಟ್ಟು,” “ಅವರಿಗೆ ಬಹಳ ಉಪದೇಶ”ಮಾಡಲು ಪ್ರಾರಂಭಿಸಿದನು. (ಮಾರ್ಕ 6:34) ಯೇಸುವಿಗೆ ಇತರರ ಕಡೆಗೆ ಇಂತಹ ಪರಿಗಣನೆಯಿದ್ದ ಕಾರಣದಿಂದಲೇ ಅವರಿಗೆ ಸಹಾಯ ನೀಡಲು ಆತನು ಯಾವಾಗಲೂ ಪ್ರೇರಿಸಲ್ಪಟ್ಟನು.
ಯೇಸು ಜನರಿಗೆ ಕಲಿಸುವುದಕ್ಕಿಂತಲೂ ಹೆಚ್ಚನ್ನು ಮಾಡಿದನು. ಅವನು ಪ್ರಾಯೋಗಿಕ ಸಹಾಯವನ್ನು ಸಹ ನೀಡಿದನು. ಉದಾಹರಣೆಗೆ, ಒಂದು ಸಂದರ್ಭದಲ್ಲಿ ಬಹಳ ಹೊತ್ತಿನ ವರೆಗೆ ಅವನಿಗೆ ಕಿವಿಗೊಡುತ್ತಿದ್ದ 5,000ಕ್ಕಿಂತಲೂ ಹೆಚ್ಚಿನ ಜನರಿಗೆ ಊಟವನ್ನು ಕೊಟ್ಟನು. ಇದಾಗಿ ಸ್ವಲ್ಪದ್ದರಲ್ಲಿ, ಮೂರು ದಿನಗಳಿಂದ ಅವನಿಗೆ ಕಿವಿಗೊಡುತ್ತಿದ್ದ 4,000ಕ್ಕಿಂತಲೂ ಹೆಚ್ಚು ಜನರಿದ್ದ ಇನ್ನೊಂದು ದೊಡ್ಡ ಗುಂಪು ಏನೂ ಊಟವಿಲ್ಲದೆ ಇದ್ದಾಗ ಯೇಸು ಆಹಾರವನ್ನು ಒದಗಿಸಿದನು. ಮೊದಲನೆಯ ಸಂದರ್ಭದಲ್ಲಿ, ಅವನು ಐದು ರೊಟ್ಟಿ ಮತ್ತು ಎರಡು ಮೀನುಗಳನ್ನು ಉಪಯೋಗಿಸಿದನು, ಮತ್ತು ಎರಡನೆಯ ಸಂದರ್ಭದಲ್ಲಿ ಏಳು ರೊಟ್ಟಿಗಳನ್ನು ಮತ್ತು ಕೆಲವು ಸಣ್ಣ ಮೀನುಗಳನ್ನು ಬಳಸಿದನು. (ಮತ್ತಾಯ 14:14-22; 15:32-38) ಅದ್ಭುತಗಳೋ? ಹೌದು, ಅವನು ಅದ್ಭುತಗಳನ್ನು ನಡಿಸುವವನಾಗಿದ್ದನು.
ಯೇಸು ಅನೇಕ ರೋಗಿಗಳನ್ನು ಸಹ ವಾಸಿಮಾಡಿದನು. ಅವನು ಕುರುಡರನ್ನು, ಕುಂಟರನ್ನು, ಕುಷ್ಠರೋಗಿಗಳನ್ನು ಹಾಗೂ ಕಿವುಡರನ್ನು ಸ್ವಸ್ಥಗೊಳಿಸಿದನು. ಅಷ್ಟೇಕೆ, ಅವನು ಸತ್ತವರನ್ನು ಸಹ ಎಬ್ಬಿಸಿದನು! (ಲೂಕ 7:22; ಯೋಹಾನ 11:30-45) ಒಮ್ಮೆ ಒಬ್ಬ ಕುಷ್ಠರೋಗಿಯು ಅವನನ್ನು ಹೀಗೆಂದು ಬೇಡಿಕೊಳ್ಳುತ್ತಾನೆ: “ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧಮಾಡಬಲ್ಲೆ.” ಯೇಸು ಹೇಗೆ ಪ್ರತಿಕ್ರಿಯಿಸಿದನು? “ಆತನು ಕನಿಕರಪಟ್ಟು ಕೈನೀಡಿ ಅವನನ್ನು ಮುಟ್ಟಿ—ನನಗೆ ಮನಸ್ಸುಂಟು; ಶುದ್ಧವಾಗು ಅಂದನು.” (ಮಾರ್ಕ 1:40, 41) ಇಂತಹ ಅದ್ಭುತಗಳ ಮೂಲಕ, ಯೇಸು ಪೀಡಿತರ ಕಡೆಗೆ ತನ್ನ ಪ್ರೀತಿಯನ್ನು ಪ್ರದರ್ಶಿಸಿದನು.
ಯೇಸುವಿನ ಅದ್ಭುತಗಳನ್ನು ನಂಬುವುದು ನಿಮಗೆ ಕಷ್ಟವಾಗಿ ಕಾಣುತ್ತದೋ? ಕೆಲವರಿಗೆ ಕಷ್ಟವಾಗಿರುತ್ತದೆ. ಆದಾಗ್ಯೂ, ಯೇಸು ತನ್ನ ಅದ್ಭುತಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ನಡೆಸಿದನೆಂಬುದನ್ನು ನೆನಪಿಸಿಕೊಳ್ಳಿ. ಪ್ರತಿಯೊಂದು ಸಂದರ್ಭದಲ್ಲೂ ಅವನಲ್ಲಿ ತಪ್ಪುಗಳನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದ ವಿರೋಧಿಗಳು ಸಹ, ಅವನೊಬ್ಬ ಅದ್ಭುತ ನಡಿಸುವವನೆಂಬ ನಿಜತ್ವವನ್ನು ಅವರಿಂದ ನಿರಾಕರಿಸಲಾಗಲಿಲ್ಲ. (ಯೋಹಾನ 9:1-34) ಇನ್ನೂ ಹೆಚ್ಚಾಗಿ, ಅವನ ಅದ್ಭುತಗಳಿಗೆ ಒಂದು ಉದ್ದೇಶವಿತ್ತು. ದೇವರಿಂದ ಕಳುಹಿಸಲ್ಪಟ್ಟವನಾಗಿ ಅವನನ್ನು ಜನರು ಗುರುತಿಸುವಂತೆ ಇವು ಸಹಾಯಮಾಡಿದವು.—ಯೋಹಾನ 6:14.
ಅದ್ಭುತಗಳನ್ನು ನಡೆಸುವಾಗ ಯೇಸು ಜನರ ಗಮನವನ್ನು ತನ್ನ ಕಡೆಗೆ ಸೆಳೆಯಲಿಲ್ಲ. ಅದರ ಬದಲು ಅವನು ತನ್ನ ಅಧಿಕಾರದ ಮೂಲನಾಗಿರುವ ದೇವರನ್ನು ಮಹಿಮೆಪಡಿಸಿದನು. ಕಪೆರ್ನೌಮಿನಲ್ಲಿ ಅವನು ಜನರಿಂದ ತುಂಬಿದ ಮನೆಯೊಂದರಲ್ಲಿ ಇದ್ದನು. ಒಬ್ಬ ಪಾರ್ಶ್ವವಾಯು ರೋಗಿಯು ಗುಣವಾಗಲು ಬಯಸಿದನಾದರೂ ಒಳಗೆ ಪ್ರವೇಶಿಸಲು ಅವನಿಗಾಗಲಿಲ್ಲ. ಆದುದರಿಂದ ಅವನ ಸ್ನೇಹಿತರು ಅವನನ್ನು ಮೇಲ್ಚಾವಣಿಯ ಮೂಲಕ ಹಾಸಿಗೆಯಲ್ಲಿ ಕೆಳಗಿಳಿಸಿದರು. ಅವರ ನಂಬಿಕೆಯನ್ನು ನೋಡಿ, ಯೇಸು ಪಾರ್ಶ್ವವಾಯು ರೋಗಿಯನ್ನು ಗುಣಪಡಿಸಿದನು. ಇದರ ಪರಿಣಾಮವಾಗಿ, ಜನರು “ದೇವರನ್ನು ಕೊಂಡಾಡು”ತ್ತಾ ಹೀಗೆ ಹೇಳಿದರು: “ಇದುವರೆಗೆ ನಾವು ಇಂಥದನ್ನು ಎಂದಿಗೂ ನೋಡಿದ್ದೇ ಇಲ್ಲ.” (ಮಾರ್ಕ 2:1-4, 11, 12) ಯೇಸುವಿನ ಅದ್ಭುತಗಳು ಅವನ ದೇವರಾದ ಯೆಹೋವನಿಗೆ ಸ್ತುತಿಯನ್ನು ತಂದವು ಮತ್ತು ಅಗತ್ಯದಲ್ಲಿದ್ದವರಿಗೆ ಸಹಾಯಮಾಡಿದವು.
ಏನೇ ಆದರೂ, ರೋಗಿಗಳನ್ನು ಅದ್ಭುತಕರವಾಗಿ ವಾಸಿಮಾಡುವುದು ಯೇಸುವಿನ ಶುಶ್ರೂಷೆಯ ಪ್ರಮುಖ ತಿರುಳಾಗಿರಲಿಲ್ಲ. ಯೇಸುವಿನ ಜೀವಿತದ ವೃತ್ತಾಂತವನ್ನು ಬರೆದ ಒಬ್ಬನು ಹೀಗೆಂದು ವಿವರಿಸುತ್ತಾನೆ: “ಯೇಸು ದೇವಕುಮಾರನಾದ ಕ್ರಿಸ್ತನೆಂದು ನೀವು ನಂಬುವಂತೆಯೂ, ನಂಬಿ ಆತನ ಹೆಸರಿನ ಮೂಲಕವಾಗಿ ಜೀವವನ್ನೂ ಪಡಕೊಳ್ಳುವಂತೆಯೂ ಇಷ್ಟೆಲ್ಲಾ ಬರೆದದೆ.” (ಯೋಹಾನ 20:31) ಹೌದು, ನಂಬುವ ಮಾನವರು ಜೀವವನ್ನು ಗಳಿಸಲು ಸಾಧ್ಯವಾಗುವಂತೆ ಯೇಸು ಭೂಮಿಗೆ ಬಂದನು.
ಅವನ ಯಜ್ಞಾರ್ಪಣೆ
‘ಯೇಸು ಭೂಮಿಗೆ ಬಂದನೋ?’ ಎಂದು ನೀವು ಕೇಳಬಹುದು. ‘ಅವನು ಎಲ್ಲಿಂದ ಬಂದನು?’ ಯೇಸು ಸ್ವತಃ ಹೇಳಿದ್ದು: “ನನ್ನ ಚಿತ್ತದಂತೆ ನಡೆಯುವದಕ್ಕಾಗಿ ನಾನು ಬಂದಿಲ್ಲ, ನನ್ನನ್ನು ಕಳುಹಿಸಿದಾತನ ಚಿತ್ತವನ್ನೇ ನೆರವೇರಿಸುವದಕ್ಕೆ ಪರಲೋಕದಿಂದ ಬಂದೆನು.” (ಯೋಹಾನ 6:38) ದೇವರ ಏಕಜಾತ ಪುತ್ರನಾಗಿ ಅವನಿಗೆ ಮಾನವಪೂರ್ವ ಅಸ್ತಿತ್ವವೊಂದಿತ್ತು. ಹಾಗಾದರೆ ಅವನನ್ನು ಭೂಮಿಗೆ ಕಳುಹಿಸಿದಾತನ ಚಿತ್ತವು ಏನಾಗಿತ್ತು? “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು” ಎಂದು ಸುವಾರ್ತೆಯ ಬರಹಗಾರರಲ್ಲಿ ಒಬ್ಬನಾದ ಯೋಹಾನನು ಹೇಳುತ್ತಾನೆ, “ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.” (ಯೋಹಾನ 3:16) ಇದು ಹೇಗೆ ಸಾಧ್ಯವಾಯಿತು?
ಮರಣವು ಮಾನವಕುಲದ ಅನಿವಾರ್ಯ ಅನುಭವವಾದದ್ದು ಹೇಗೆ ಎಂಬುದನ್ನು ಬೈಬಲು ಪ್ರಕಟಪಡಿಸುತ್ತದೆ. ಪ್ರಥಮ ಮಾನವ ಜೋಡಿಯು ಸದಾಕಾಲ ಜೀವಿಸುವ ಪ್ರತೀಕ್ಷೆಯೊಂದಿಗೆ ದೇವರಿಂದ ಜೀವವನ್ನು ಪಡೆದಿತ್ತು. ಹೀಗಿದ್ದರೂ, ಅವರು ತಮ್ಮ ನಿರ್ಮಾಣಿಕನ ವಿರುದ್ಧ ದಂಗೆಯೇಳಲು ಆರಿಸಿದರು. (ಆದಿಕಾಂಡ 3:1-19) ಈ ಕೃತ್ಯದ ಪರಿಣಾಮವಾಗಿ, ಅಂದರೆ ಮೊದಲ ಮಾನವ ಪಾಪದ ಫಲವಾಗಿ ಆದಾಮ ಹವ್ವರ ಸಂತತಿಯು ಮರಣವನ್ನು ಬಾಧ್ಯವಾಗಿ ಪಡೆಯಿತು. (ರೋಮಾಪುರ 5:12) ಮಾನವಕುಲವು ವಾಸ್ತವವಾದ ಜೀವವನ್ನು ಪಡೆಯಬೇಕಾದರೆ, ಪಾಪ ಮತ್ತು ಮರಣವು ನಿರ್ಮೂಲಗೊಳಿಸಲ್ಪಡಲೇಬೇಕು.
ತಳಿಶಾಸ್ತ್ರದ ಯಾವುದೋ ಒಂದು ವಿಧದ ಮೂಲಕ ಮರಣವನ್ನು ತೆಗೆದುಹಾಕುವುದು ಯಾವ ವಿಜ್ಞಾನಿಗೂ ಸಾಧ್ಯವಿಲ್ಲದ್ದಿದ್ದರೂ, ಮಾನವಕುಲದ ಸೃಷ್ಟಿಕರ್ತನಿಗೆ ವಿಧೇಯ ಮಾನವರನ್ನು ಪರಿಪೂರ್ಣತೆಗೆ ತಂದು, ಹೀಗೆ ಅವರು ಸದಾಕಾಲ ಜೀವಿಸುವುದಕ್ಕೆ ಸಾಧ್ಯಮಾಡುವ ಸಾಮರ್ಥ್ಯವಿದೆ. ಬೈಬಲಿನಲ್ಲಿ ಈ ಒದಗಿಸುವಿಕೆಯನ್ನು ಪ್ರಾಯಶ್ಚಿತ್ತವೆಂದು ಕರೆಯಲಾಗಿದೆ. ಪ್ರಥಮ ಮಾನವ ಜೋಡಿಯು ತಮ್ಮನ್ನು ಮತ್ತು ತಮ್ಮ ಸಂತತಿಯವರನ್ನು ಪಾಪ ಮತ್ತು ಮರಣದ ದಾಸ್ವತಕ್ಕೆ ಮಾರಿತು. ಸರಿ ಯಾವುದು ಹಾಗೂ ತಪ್ಪು ಯಾವುದು ಎಂಬುದರ ಕುರಿತು ತಮ್ಮ ಸ್ವಂತ ನಿರ್ಣಯಗಳನ್ನು ಮಾಡುತ್ತಾ, ಹೀಗೆ ದೇವರಿಗೆ ವಿಧೇಯರಾಗುವ ಪರಿಪೂರ್ಣ ಮಾನವ ಜೀವವನ್ನು ದೇವರಿಂದ ಸ್ವತಂತ್ರರಾಗಿರುವ ಜೀವಕ್ಕೆ ಮಾರಿಬಿಟ್ಟರು. ಪರಿಪೂರ್ಣ ಮಾನವ ಜೀವವನ್ನು ಮರಳಿ ಪಡೆಯಬೇಕಾದರೆ, ನಮ್ಮ ಮೊದಲ ಹೆತ್ತವರು ಕಳೆದುಕೊಂಡ ಪರಿಪೂರ್ಣ ಮಾನವಜೀವಕ್ಕೆ ಸಮಾನವಾಗಿರುವ ಕ್ರಯವನ್ನು ತೆರಲೇಬೇಕಾಗಿತ್ತು. ಬಾಧ್ಯತೆಯಾಗಿ ಬಂದ ಅಪರಿಪೂರ್ಣತೆಯ ಕಾರಣ, ಮಾನವರು ಆ ಕ್ರಯವನ್ನು ಒದಗಿಸಲು ಅನರ್ಹರಾಗಿದ್ದರು.—ಕೀರ್ತನೆ 49:7.
ಆದುದರಿಂದ ಯೆಹೋವ ದೇವರು ಸಹಾಯಮಾಡಲು ತಾನಾಗಿ ಮುಂದೆ ಬಂದನು. ಆತನು ತನ್ನ ಏಕಜಾತಪುತ್ರನ ಪರಿಪೂರ್ಣ ಜೀವವನ್ನು ಒಬ್ಬ ಕನ್ನಿಕೆಯ ಗರ್ಭಕ್ಕೆ ಸ್ಥಳಾಂತರಿಸಿದನು, ಇವಳು ಯೇಸುವಿಗೆ ಜನ್ಮನೀಡಿದಳು. ದಶಕಗಳಿಂದಲೂ, ಕನ್ನಿಕೆಯ ಮೂಲಕ ಜನ್ಮತಾಳುವ ವಿಚಾರವನ್ನು ನೀವು ಒಂದು ವೇಳೆ ತಿರಸ್ಕರಿಸಿದ್ದಿರಬಹುದು. ಹೇಗಿದ್ದರೂ, ಇಂದು ವಿಜ್ಞಾನಿಗಳು ಜೀವಕೋಶ ವಿದಳನದಿಂದ ಸಸ್ತನಿ ಪ್ರಾಣಿಗಳನ್ನು ಹಾಗೂ ಒಂದು ಪ್ರಾಣಿಯಿಂದ ಇನ್ನೊಂದಕ್ಕೆ ವಂಶಾಣುಗಳನ್ನು ಸಾಗಿಸಿದ್ದಾರೆ. ಹಾಗಾದರೆ, ಗರ್ಭಧಾರಣೆ ಹಾಗೂ ಜನನದ ಬೇರೆ ಯಾವುದೇ ವಿಧಾನವನ್ನು ಸೃಷ್ಟಿಕರ್ತನು ಉಪಯೋಗಿಸಸಾಧ್ಯವಿರಲಿಲ್ಲ ಎಂಬುದನ್ನು ಯಾರು ತಾನೇ ಯೋಗ್ಯವಾಗಿ ಪ್ರಶ್ನಿಸಬಲ್ಲರು?
ಪರಿಪೂರ್ಣ ಮಾನವ ಜೀವವು ಅಸ್ತಿತ್ವದಲ್ಲಿದ್ದುದರಿಂದ, ಪಾಪ ಮತ್ತು ಮರಣದಿಂದ ಮಾನವಕುಲವನ್ನು ವಿಮೋಚಿಸುವ ಕ್ರಯವು ಲಭ್ಯವಾಯಿತು. ಆದರೂ, ಭೂಮಿಯ ಮೇಲೆ ಯೇಸುವಾಗಿ ಹುಟ್ಟಿದ ಮಗು, ಮಾನವಕುಲದ ರೋಗಗಳನ್ನು ನಿವಾರಿಸುವ ‘ಚಿಕಿತ್ಸೆ’ಯನ್ನು ಒದಗಿಸಶಕ್ತನಾಗುವ ‘ವೈದ್ಯ’ನಾಗಬೇಕಾದರೆ ಪ್ರೌಢಾವಸ್ಥೆಗೆ ಬೆಳೆಯಬೇಕಾಗಿತ್ತು. ಅವನಿದನ್ನು ಒಂದು ಪರಿಪೂರ್ಣ, ಪಾಪರಹಿತ ಜೀವಿತವನ್ನು ನಡೆಸುವುದರ ಮೂಲಕ ಮಾಡಿದನು. ಪಾಪದ ಕೆಳಗೆ ಮಾನವಕುಲವು ಅನುಭವಿಸುತ್ತಿರುವ ಕಡು ಸಂಕಷ್ಟವನ್ನು ಅವನು ನೋಡಿದನು. ಅಷ್ಟೇ ಅಲ್ಲ, ಅವನು ಮನುಷ್ಯನ ದೈಹಿಕ ಸೀಮಿತವನ್ನು ಸಹ ಅನುಭವಿಸಿದನು. ಇದು ಅವನನ್ನು ಹೆಚ್ಚು ಸಹಾನುಭೂತಿಯುಳ್ಳ ವೈದ್ಯನನ್ನಾಗಿ ಮಾಡಿತು. (ಇಬ್ರಿಯ 4:15) ಭೂಮಿಯ ಮೇಲಿನ ತನ್ನ ಜೀವಿತದ ಸಮಯದಲ್ಲಿ ಅವನು ನಡೆಸಿದ ಅದ್ಭುತಕರವಾದ ವಾಸಿಮಾಡುವಿಕೆಯು, ತನಗೆ ರೋಗಿಗಳನ್ನು ಗುಣಪಡಿಸುವ ಇಚ್ಛೆ ಮತ್ತು ಶಕ್ತಿಗಳೆರಡೂ ಇವೆ ಎಂಬುದನ್ನು ರುಜುಪಡಿಸಿತು.—ಮತ್ತಾಯ 4:23.
ಭೂಮಿಯ ಮೇಲಿನ ಮೂರುವರೆ ವರ್ಷಗಳ ಶುಶ್ರೂಷೆಯ ನಂತರ, ಯೇಸು ತನ್ನ ವಿರೋಧಿಗಳಿಂದ ಕೊಲ್ಲಲ್ಪಟ್ಟನು. ಒಬ್ಬ ಪರಿಪೂರ್ಣ ಮನುಷ್ಯನು ಘೋರ ಪರೀಕ್ಷೆಗಳ ಎದುರಿನಲ್ಲೂ ಸೃಷ್ಟಿಕರ್ತನಿಗೆ ವಿಧೇಯನಾಗಸಾಧ್ಯವಿದೆ ಎಂಬುದನ್ನು ಅವನು ತೋರಿಸಿದನು. (1 ಪೇತ್ರ 2:22) ಅವನ ಯಜ್ಞಾರ್ಪಿತ ಪರಿಪೂರ್ಣ ಮಾನವ ಜೀವವು ಪ್ರಾಯಶ್ಚಿತ್ತ ಬೆಲೆಯಾಗಿದ್ದುದರಿಂದ ಪಾಪ ಮತ್ತು ಮರಣದಿಂದ ಮಾನವಕುಲವನ್ನು ವಿಮೋಚಿಸುವುದಕ್ಕೆ ಶಕ್ತವಾಯಿತು. ಯೇಸು ಕ್ರಿಸ್ತನು ಹೇಳಿದ್ದು: “ಪ್ರಾಣವನ್ನೇ ಸ್ನೇಹಿತರಿಗೋಸ್ಕರ ಕೊಡುವ ಪ್ರೀತಿಗಿಂತ ಹೆಚ್ಚಿನ ಪ್ರೀತಿಯು ಯಾವದೂ ಇಲ್ಲ.” (ಯೋಹಾನ 15:13) ಅವನ ಮರಣದ ಮೂರು ದಿನಗಳ ನಂತರ, ಯೇಸು ಆತ್ಮ ಜೀವಿತಕ್ಕೆ ಪುನರುತ್ಥಾನಗೊಳಿಸಲ್ಪಟ್ಟನು ಮತ್ತು ಕೆಲವು ವಾರಗಳ ನಂತರ ಪ್ರಾಯಶ್ಚಿತ್ತ ಬೆಲೆಯನ್ನು ಯೆಹೋವ ದೇವರಿಗೆ ಒಪ್ಪಿಸಲು ಅವನು ಪರಲೋಕಕ್ಕೆ ಏರಿಹೋದನು. (1 ಕೊರಿಂಥ 15:3, 4; ಇಬ್ರಿಯ 9:11-14) ಹೀಗೆ ಮಾಡುವುದರ ಮೂಲಕ, ತನ್ನನ್ನು ಹಿಂಬಾಲಿಸುವವರಿಗೆ ಅವನ ಪ್ರಾಯಶ್ಚಿತ್ತ ಯಜ್ಞದ ಮೌಲ್ಯವನ್ನು ಅನ್ವಯಿಸುವುದಕ್ಕೆ ಯೇಸು ಶಕ್ತನಾದನು.
ಈ ರೀತಿಯಲ್ಲಿ ಆತ್ಮಿಕ, ಭಾವನಾತ್ಮಕ ಮತ್ತು ದೈಹಿಕ ರೋಗಗಳ ವಾಸಿಮಾಡುವಿಕೆಯಿಂದ ಪ್ರಯೋಜನವನ್ನು ಪಡೆದುಕೊಳ್ಳಲು ನೀವು ಸಿದ್ಧರಿರುವಿರೋ? ಹಾಗೆ ಮಾಡಲು, ಯೇಸು ಕ್ರಿಸ್ತನಲ್ಲಿ ನಂಬಿಕೆಯಿಡುವ ಆವಶ್ಯಕತೆಯಿದೆ. ನೀವಾಗಿಯೇ ವೈದ್ಯನ ಬಳಿಗೆ ಏಕೆ ಬರಬಾರದು? ಯೇಸು ಕ್ರಿಸ್ತನ ಕುರಿತು ಮತ್ತು ನಂಬಿಗಸ್ತ ಮಾನವಕುಲವನ್ನು ರಕ್ಷಿಸುವುದರಲ್ಲಿ ಅವನ ಪಾತ್ರವನ್ನು ಕಲಿಯುವುದರ ಮೂಲಕ ನೀವದನ್ನು ಮಾಡಶಕ್ತರಾಗುವಿರಿ. ನಿಮಗೆ ಸಹಾಯಮಾಡಲು ಯೆಹೋವನ ಸಾಕ್ಷಿಗಳು ಸಂತೋಷಿಸುವರು.
[ಪುಟ 5 ರಲ್ಲಿರುವ ಚಿತ್ರ]
ರೋಗಿಗಳನ್ನು ಗುಣಪಡಿಸುವ ಇಚ್ಛೆ ಮತ್ತು ಶಕ್ತಿಗಳೆರಡೂ ಯೇಸುವಿನಲ್ಲಿ ಇದ್ದವು
[ಪುಟ 7 ರಲ್ಲಿರುವ ಚಿತ್ರ]
ಯೇಸುವಿನ ಮರಣವು ನಿಮ್ಮನ್ನು ಹೇಗೆ ಪ್ರಭಾವಿಸುತ್ತದೆ?