ಹಿತಕರ ಸಂವಾದ—ಸುಖೀ ವಿವಾಹಕ್ಕೆ ಕೀಲಿ ಕೈ
ರಾಬರ್ಟ್ ಬ್ಯಾರನ್ ಎಂಬ ವ್ಯಕ್ತಿ 1778ರಲ್ಲಿ, ಇಬ್ಬಗೆಯ ಕೆಲಸ ಮಾಡುವ ಲೀವರ್ ಟಂಬ್ಲರ್ ಬೀಗದ ಆವಿಷ್ಕಾರಮಾಡಿದರು. ಆಧುನಿಕ ಸಮಯದ ಬೀಗಗಳನ್ನು ಇದರ ಆಧಾರದ ಮೇಲೆಯೇ ತಯಾರಿಸಲಾಗುತ್ತದೆ. ಅವನ ಈ ವಿನ್ಯಾಸದ ಬೀಗದಲ್ಲಿ, ಅದರ ಎರಡು ಟಂಬ್ಲರ್ಗಳನ್ನು ಒಂದೇ ಸಮಯದಲ್ಲಿ ಎತ್ತುವ ಸಾಮರ್ಥ್ಯವುಳ್ಳ ಒಂದೇ ಒಂದು ಕೀಲಿ ಕೈಯನ್ನು ಬಳಸಬೇಕಾಗುತ್ತಿತ್ತು.
ತದ್ರೀತಿಯಲ್ಲಿ ವಿವಾಹ ಜೀವನದ ಯಶಸ್ಸು, ಗಂಡಹೆಂಡತಿಯರಿಬ್ಬರೂ ಐಕ್ಯದಿಂದ ಜೊತೆಯಾಗಿ ಕೆಲಸಮಾಡುವುದರ ಮೇಲೆ ಹೊಂದಿಕೊಂಡಿರುತ್ತದೆ. ಸುಖೀ ವಿವಾಹದ ಅಮೂಲ್ಯ ಸಂತೋಷಗಳ ಲಾಕರನ್ನು ತೆರೆದು ಅದನ್ನು ಅನುಭವಿಸಲಿಕ್ಕಾಗಿ ಅತ್ಯಾವಶ್ಯಕವಾಗಿರುವ ಒಂದು ಸಂಗತಿಯು, ಹಿತಕರವಾದ ಸಂವಾದವೇ.
ಹಿತಕರ ಸಂವಾದದಲ್ಲಿ ಒಳಗೂಡಿರುವ ಸಂಗತಿ
ಹಿತಕರವಾದ ಸಂವಾದದಲ್ಲಿ ಏನೆಲ್ಲಾ ಒಳಗೂಡಿದೆ? ಒಂದು ಶಬ್ದಕೋಶವು ಸಂವಾದವನ್ನು ಹೀಗೆ ಅರ್ಥನಿರೂಪಿಸುತ್ತದೆ: “ವಿಚಾರಗಳನ್ನು, ಅಭಿಪ್ರಾಯಗಳನ್ನು ಅಥವಾ ಮಾಹಿತಿಯನ್ನು, ಮಾತು, ಬರಹ ಅಥವಾ ಸಂಕೇತಗಳ ಮೂಲಕ ದಾಟಿಸುವುದು ಅಥವಾ ವಿನಿಮಯಮಾಡಿಕೊಳ್ಳುವುದು.” ಆದುದರಿಂದ, ಸಂವಾದದಲ್ಲಿ ಭಾವನೆಗಳು ಮತ್ತು ವಿಚಾರಗಳ ಹಂಚಿಕೊಳ್ಳುವಿಕೆಯು ಒಳಗೂಡಿರುತ್ತದೆ. ಆದರೆ ಹಿತಕರವಾದ ಸಂವಾದದಲ್ಲಿ, ಹುರಿದುಂಬಿಸುವ, ಚೈತನ್ಯಗೊಳಿಸುವ, ಸದ್ಗುಣಶೀಲ, ಸ್ತುತಿಯೋಗ್ಯ ಮತ್ತು ಸಾಂತ್ವನಪಡಿಸುವ ವಿಷಯಗಳು ಒಳಗೂಡಿವೆ.—ಎಫೆಸ 4:29-32; ಫಿಲಿಪ್ಪಿ 4:8.
ವಿಶ್ವಾಸ, ಭರವಸೆ ಮತ್ತು ಪರಸ್ಪರರನ್ನು ಅರ್ಥಮಾಡಿಕೊಳ್ಳುವುದರಿಂದ ಹಿತಕರ ಸಂವಾದವು ಸಾಧ್ಯವಾಗುತ್ತದೆ. ವಿವಾಹವು ಒಂದು ಜೀವನಪರ್ಯಂತ ಸಂಬಂಧವಾಗಿದೆ ಎಂದು ವೀಕ್ಷಿಸಲ್ಪಡುವಲ್ಲಿ ಮತ್ತು ಅದು ಸಫಲವಾಗುವಂತೆ ಮಾಡಲು ನಿಜವಾದ ಬದ್ಧತೆ ಇರುವಲ್ಲಿ ಈ ಗುಣಗಳು ಫಲಿಸಬಲ್ಲವು. ಅಂತಹ ಒಂದು ಸಂಬಂಧದ ಕುರಿತಾಗಿ ಹೇಳಿಕೆಯನ್ನೀಯುತ್ತಾ, 18ನೆಯ ಶತಮಾನದ ಪ್ರಬಂಧಕಾರ ಜೋಸೆಫ್ ಆ್ಯಡಿಸನ್ ಬರೆದುದು: “ಪರಸ್ಪರ ಸಾಂತ್ವನ ಮತ್ತು ಸುಖದ ಉದ್ದೇಶಕ್ಕಾಗಿ, ಇಬ್ಬರು ವ್ಯಕ್ತಿಗಳು ಇತರ ಎಲ್ಲಾ ಮನುಷ್ಯರಿಂದ ಒಬ್ಬರನ್ನೊಬ್ಬರನ್ನು ಆಯ್ಕೆಮಾಡಿಕೊಳ್ಳುತ್ತಾರೆ. ಈ ಕೃತ್ಯದಿಂದ ಅವರು ತಮ್ಮ ಜೀವಿತದ ಅಂತ್ಯದ ವರೆಗೂ ಪರಸ್ಪರರ ಕುಂದುಕೊರತೆಗಳು ಹಾಗೂ ಪರಿಪೂರ್ಣತೆಗಳ ಸಂಬಂಧದಲ್ಲಿ ಹಾಸ್ಯಪ್ರವೃತ್ತಿಯುಳ್ಳವರು, ವಿಶಾಲಮನಸ್ಸಿನವರು, ವಿವೇಚನಾಶೀಲರು, ಕ್ಷಮಿಸುವವರು, ತಾಳ್ಮೆಯುಳ್ಳವರು ಮತ್ತು ಉಲ್ಲಾಸಗುಣವುಳ್ಳವರಾಗಿರುವಂತೆ ತಮ್ಮನ್ನೇ ನಿರ್ಬಂಧಿಸಿಕೊಳ್ಳುತ್ತಾರೆ.” ಇಂತಹ ಒಂದು ಸಂಬಂಧವು ಎಷ್ಟು ಸಂತೋಷಕರವಾದದ್ದಾಗಿದೆ! ಅಮೂಲ್ಯ ರತ್ನಗಳಂತಹ ಈ ಗುಣಗಳು ನಿಮ್ಮ ವಿವಾಹವನ್ನೂ ಶೋಭಾಯಮಾನಗೊಳಿಸಬಲ್ಲವು, ಯಾಕಂದರೆ ಹಿತಕರವಾದ ಸಂವಾದದ ಮೂಲಕ ನೀವು ಅವುಗಳನ್ನು ನಿಮ್ಮದಾಗಿರಿಸಿಕೊಳ್ಳಬಲ್ಲಿರಿ.
ಹಿತಕರ ಸಂವಾದಕ್ಕೆ ಅಡಚಣೆಗಳು
ಹೆಚ್ಚಿನ ದಂಪತಿಗಳು ವೈವಾಹಿಕ ಜೀವನವನ್ನು ಆಶಾವಾದದೊಂದಿಗೂ, ಸುಖದ ಭ್ರಮೆಯೊಂದಿಗೂ ಆರಂಭಿಸುತ್ತಾರೆ. ಆದರೆ ಅನೇಕರಿಗೆ ಆ ಸುಖದ ಭ್ರಾಂತಿಯು ಬೇಗನೆ ಮಾಯವಾಗಿ, ಆಶಾವಾದವು ಬಾಡಿಹೋಗುತ್ತದೆ. ಆತ್ಮವಿಶ್ವಾಸದ ಸ್ಥಾನದಲ್ಲಿ, ನಿರಾಶೆ, ಕೋಪ, ವೈರತ್ವ ಮತ್ತು ತೀವ್ರವಾದ ದ್ವೇಷದ ಕಟುವಾದ ಮಿಶ್ರಭಾವನೆಗಳು ಬರಬಹುದು. ಆಗ ವೈವಾಹಿಕ ಜೀವನವು, “ಮರಣವು ಅಗಲಿಸುವವರೆಗೂ” ಸಹಿಸಿಕೊಂಡುಹೋಗುವಂತಹ ಪರಿಸ್ಥಿತಿಯಾಗುತ್ತದೆ. ಆದುದರಿಂದ ಸುಖೀ ವಿವಾಹಕ್ಕೆ ಆವಶ್ಯಕವಾಗಿರುವ ಹಿತಕರವಾದ ಸಂವಾದವನ್ನು ಉತ್ತಮಗೊಳಿಸಲು ಅಥವಾ ಮುಂದುವರಿಸಿಕೊಂಡು ಹೋಗಲು ಕೆಲವೊಂದು ಅಡಚಣೆಗಳನ್ನು ದಾಟಬೇಕಾಗುತ್ತದೆ.
ಹಿತಕರ ಸಂವಾದಕ್ಕೆ ಒಂದು ದೊಡ್ಡ ಅಡಚಣೆಯು, ಒಂದು ನಿರ್ದಿಷ್ಟ ಮಾಹಿತಿ ಅಥವಾ ವ್ಯಕ್ತಪಡಿಸಲಾಗುವ ಬಯಕೆಗೆ ವಿವಾಹ ಸಂಗಾತಿಯು ಹೇಗೆ ಪ್ರತಿಕ್ರಿಯೆ ತೋರಿಸುವನೆಂಬ ಭಯವೇ. ಉದಾಹರಣೆಗೆ, ತನ್ನೊಳಗೆ ಉಂಟಾಗುತ್ತಿರುವ ಒಂದು ಗಂಭೀರವಾದ ದೈಹಿಕ ಅಸಾಮರ್ಥ್ಯದ ಕುರಿತು ತಿಳಿದುಬಂದಾಗ ತನ್ನನ್ನು ತ್ಯಜಿಸಿಬಿಡಲಾಗುವುದೆಂಬ ಭಯವಿರಬಹುದು. ಅಥವಾ ಶೀಘ್ರದಲ್ಲೇ ನಡೆಯಲಿರುವ ಚಿಕಿತ್ಸೆಯಿಂದಾಗಿ ತನ್ನ ರೂಪದಲ್ಲಿ ಇಲ್ಲವೇ ಕೆಲಸ ಮಾಡುವ ಸಾಮರ್ಥ್ಯದಲ್ಲಿ ಬದಲಾವಣೆಯಾಗುವುದನ್ನು ತನ್ನ ಸಂಗಾತಿಗೆ ಹೇಗೆ ವಿವರಿಸುವುದು ಎಂಬ ಭಯವು ತಲೆದೋರಬಹುದು. ಇಂತಹ ಸಂದರ್ಭಗಳಲ್ಲಿ, ಮುಕ್ತವಾದ ಸಂವಾದ ಮತ್ತು ಭವಿಷ್ಯತ್ತಿಗಾಗಿ ವಿಚಾರಪೂರ್ವಕ ಯೋಜನೆಯು ಹಿಂದೆಂದಿಗಿಂತಲೂ ಹೆಚ್ಚು ಆವಶ್ಯಕವಾಗಿರುತ್ತದೆ. ಆಗಿಂದಾಗ್ಗೆ ದಯಾಪರವಾದ ಕೃತ್ಯಗಳ ಜೊತೆಯಲ್ಲಿ, ನಿನ್ನನ್ನು ಈಗಲೂ ಪ್ರೀತಿಸುತ್ತಿದ್ದೇನೆಂಬ ಆಶ್ವಾಸನೆಯನ್ನು ಕೊಡುವ ಮಾತುಗಳು ವೈಯಕ್ತಿಕ ಆಸಕ್ತಿಯನ್ನು ಹೊರಗೆಡುವುದು. ಮತ್ತು ಇದು ನಿಜವಾಗಿಯೂ ತೃಪ್ತಿದಾಯಕವಾದ ವೈವಾಹಿಕ ಜೀವನಕ್ಕೆ ಸಹಾಯಮಾಡುವುದು. ವಿವಾಹಸಂಬಂಧದಲ್ಲೇ ಈ ಜ್ಞಾನೋಕ್ತಿಯ ಸತ್ಯತೆಯು ಹೆಚ್ಚು ವ್ಯಕ್ತವಾಗಬೇಕು: “ಮಿತ್ರನ [“ನಿಜವಾದ ಸಂಗಾತಿಯ,” NW] ಪ್ರೀತಿಯು ನಿರಂತರ; ಸಹೋದರನ ಜನ್ಮವು ಆಪತ್ತಿನಲ್ಲಿ ಸಾರ್ಥಕ.”—ಜ್ಞಾನೋಕ್ತಿ 17:17.
ಹಿತಕರ ಸಂವಾದಕ್ಕೆ ಇನ್ನೊಂದು ಅಡಚಣೆಯು, ತೀವ್ರ ಅಸಮಾಧಾನವಾಗಿದೆ. ಸುಖೀ ವಿವಾಹವು, ಉದಾರವಾಗಿ ಕ್ಷಮಿಸುವ ಇಬ್ಬರು ವ್ಯಕ್ತಿಗಳ ಸಂಮಿಲನವಾಗಿದೆಯೆಂಬ ಹೇಳಿಕೆಯು ಯಥೋಚಿತವಾಗಿದೆ. ಆ ವರ್ಣನೆಗೆ ಹೊಂದಿಕೆಯಲ್ಲಿರಲು, ಒಬ್ಬ ವಿವಾಹಿತ ದಂಪತಿಯು, “ಸೂರ್ಯನು ಮುಳುಗುವದಕ್ಕಿಂತ ಮುಂಚೆ ನಿಮ್ಮ ಸಿಟ್ಟು ತೀರಲಿ” ಎಂದು ಅಪೊಸ್ತಲ ಪೌಲನು ನೀಡಿದ ವ್ಯಾವಹಾರಿಕ ಸಲಹೆಯನ್ನು ಅನುಸರಿಸಲು ಸರ್ವ ಪ್ರಯತ್ನವನ್ನು ಮಾಡಬೇಕು. (ಎಫೆಸ 4:26) ಮನಸ್ಸಿನಲ್ಲೇ ಕೋಪ ಅಥವಾ ತೀವ್ರ ಅಸಮಾಧಾನವನ್ನು ಇಟ್ಟುಕೊಂಡಿರುವ ಬದಲಿಗೆ, ಈ ಸಲಹೆಯನ್ನು ಅನ್ವಯಿಸಿಕೊಳ್ಳಲು ನಿಶ್ಚಯವಾಗಿಯೂ ನಮ್ರವಾದ ಸಂವಾದವು ಆವಶ್ಯಕ. ಒಂದು ಸುಖೀ ವಿವಾಹದಲ್ಲಿ ಸಂಗಾತಿಗಳು ನಿತ್ಯವೂ ಕೋಪ ಮಾಡಿಕೊಳ್ಳುವುದಿಲ್ಲ, ಜಗಳವಾಡುವುದಿಲ್ಲ ಅಥವಾ ದ್ವೇಷವನ್ನು ಸಾಧಿಸುವುದಿಲ್ಲ. (ಜ್ಞಾನೋಕ್ತಿ 30:33) ತೀವ್ರ ಅಸಮಾಧಾನವನ್ನು ಮನಸ್ಸಿನಲ್ಲಿಟ್ಟುಕೊಳ್ಳದ ದೇವರನ್ನು ಅವರು ಅನುಕರಿಸಲು ಪ್ರಯತ್ನಿಸುತ್ತಾರೆ. (ಯೆರೆಮೀಯ 3:12) ಹೌದು, ಅವರು ಅಂತರಾಳದಿಂದ ನಿಜವಾಗಿಯೂ ಒಬ್ಬರನ್ನೊಬ್ಬರು ಕ್ಷಮಿಸುತ್ತಾರೆ.—ಮತ್ತಾಯ 18:35.
ಯಾವುದೇ ರೀತಿಯ ಸಂವಾದಕ್ಕೆ ಇನ್ನೊಂದು ನಿಶ್ಚಿತ ಅಡಚಣೆಯು, ಮೌನ ಉಪಚಾರವಾಗಿದೆ. ಇದರಲ್ಲಿ, ಬಾಡಿದ ಮೋರೆ, ವ್ಯಸನವನ್ನು ಸೂಚಿಸುವ ನಿಟ್ಟುಸಿರುಗಳು, ಯಂತ್ರ ಮಾನವನಂಥ ವರ್ತನೆಗಳು, ಮತ್ತು ಮಾತಾಡದೆ ಇರುವುದು ಒಳಗೂಡಿರುತ್ತದೆ. ಈ ರೀತಿಯಲ್ಲಿ ವರ್ತಿಸುವ ವಿವಾಹ ಸಂಗಾತಿಯು, ಯಾವುದೋ ಒಂದು ರೀತಿಯ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾನೆ. ಆದರೆ ಮೌನವಾಗಿರುವುದು ಅಥವಾ ಬಾಡಿದ ಮೋರೆಯನ್ನು ಹೊತ್ತುಕೊಂಡಿರುವುದಕ್ಕಿಂತಲೂ, ವೈಯಕ್ತಿಕ ಅನಿಸಿಕೆಗಳನ್ನು ಮುಚ್ಚುಮರೆಯಿಲ್ಲದೆ ಮತ್ತು ಹಿತಕರ ರೀತಿಯಲ್ಲಿ ಬಾಯಿಬಿಟ್ಟು ಹೇಳುವುದೇ ವಿವಾಹವನ್ನು ಹೆಚ್ಚು ಉತ್ತಮಗೊಳಿಸುವುದು.
ಒಬ್ಬ ಸಂಗಾತಿಯು ಮಾತಾಡುತ್ತಿರುವಾಗ, ಸರಿಯಾಗಿ ಆಲಿಸದಿರುವುದು ಅಥವಾ ಆಲಿಸದೇ ಇರುವುದು, ವಿವಾಹದಲ್ಲಿ ಉತ್ತಮ ಸಂವಾದವನ್ನು ನಡೆಸಲಿಕ್ಕಾಗಿ ದಾಟಬೇಕಾದ ಇನ್ನೊಂದು ತಡೆಯಾಗಿದೆ. ಪ್ರಾಯಶಃ, ನಾವು ತುಂಬ ದಣಿದವರಾಗಿದ್ದು ಅಥವಾ ತೀರ ಕಾರ್ಯಮಗ್ನರಾಗಿರುವುದರಿಂದ, ಪರಸ್ಪರರನ್ನು ಜಾಗರೂಕತೆಯಿಂದ ಆಲಿಸಲು ಬೇಕಾಗಿರುವ ಮಾನಸಿಕ ಮತ್ತು ಭಾವನಾತ್ಮಕ ಶಕ್ತಿಯನ್ನು ಒಟ್ಟುಗೂಡಿಸಲು ಸಾಧ್ಯವಾಗುವುದಿಲ್ಲ. ಅಪಾರ್ಥಮಾಡಿಕೊಳ್ಳಲಾಗಿರುವ ಏರ್ಪಾಡುಗಳ ಕುರಿತಾಗಿ ವಾಗ್ವಾದಗಳು ಸ್ಫೋಟಿಸಬಹುದು. ತಾನು ಅದನ್ನು ಸ್ಪಷ್ಟವಾಗಿ ತಿಳಿಸಿದ್ದೇನೆಂದು ಒಬ್ಬ ಸಂಗಾತಿಯು ಹೇಳುತ್ತಿರುವಾಗ, ಇನ್ನೊಬ್ಬ ಸಂಗಾತಿಯು ತಾನು ಅದರ ಕುರಿತಾಗಿ ಕೇಳಿಸಿಕೊಳ್ಳುತ್ತಿರುವುದು ಇದೇ ಮೊದಲ ಬಾರಿ ಎಂದು ಪಟ್ಟುಹಿಡಿಯಬಹುದು. ನ್ಯೂನ ಸಂವಾದವೇ ಇಂತಹ ತೊಂದರೆಗಳಿಗೆ ಕಾರಣವೆಂಬುದು ಸುವ್ಯಕ್ತ.
ಹಿತಕರ ಸಂವಾದಕ್ಕೆ ಒತ್ತಾಸೆಕೊಡುವ ವಿಧ
ಪ್ರೀತಿಪರ, ಹಿತಕರವಾದ ಸಂವಾದವನ್ನು ನಡೆಸಲಿಕ್ಕಾಗಿ ಸಮಯವನ್ನು ಬದಿಗಿರಿಸುವುದು ಎಷ್ಟು ಪ್ರಾಮುಖ್ಯ! ಕೆಲವರು ಇತರರ ಜೀವಿತಗಳನ್ನು ವೀಕ್ಷಿಸುತ್ತಾ ಟಿವಿ ಮುಂದೆ ಎಷ್ಟು ಸಮಯವನ್ನು ಕಳೆಯುತ್ತಾರೆಂದರೆ, ಅವರಿಗೆ ತಮ್ಮ ಸ್ವಂತ ಜೀವನದ ಕಡೆಗೆ ಗಮನ ಕೊಡಲು ಸಮಯವೇ ಇರುವುದಿಲ್ಲ. ಆದುದರಿಂದ, ಹಿತಕರವಾದ ಸಂವಾದವನ್ನು ನಡೆಸಲಿಕ್ಕಾಗಿ ತೆಗೆದುಕೊಳ್ಳಬೇಕಾದ ಒಂದು ಅತ್ಯಾವಶ್ಯಕ ಕ್ರಮವು, ಟಿವಿಯನ್ನು ಆಫ್ಮಾಡಿಬಿಡುವುದೇ ಆಗಿದೆ.
ಮಾತಾಡುವುದಕ್ಕೆ ಸರಿಯಾದ ಸಮಯ ಇರುವಂತೆಯೇ, ಸುಮ್ಮನಿರುವುದಕ್ಕಾಗಿಯೂ ಒಂದು ಸಮಯವಿದೆ. ವಿವೇಕಿ ಪುರುಷನೊಬ್ಬನು ಹೇಳಿದ್ದು: “ಪ್ರತಿಯೊಂದು ಕಾರ್ಯಕ್ಕೂ . . . ತಕ್ಕ ಸಮಯವುಂಟು. . . . ಸುಮ್ಮನಿರುವ ಸಮಯ, ಮಾತಾಡುವ ಸಮಯ.” ಮಾತಾಡಲು ಸರಿಯಾದ ಮಾತುಗಳೂ ಇವೆ. “ಸಮಯೋಚಿತವಾದ ವಚನದಲ್ಲಿ ಎಷ್ಟೋ ಸ್ವಾರಸ್ಯ!” ಎನ್ನುತ್ತದೆ ಜ್ಞಾನೋಕ್ತಿ. (ಪ್ರಸಂಗಿ 3:1, 7; ಜ್ಞಾನೋಕ್ತಿ 15:23) ಆದುದರಿಂದ, ನೀವು ಒಂದು ಪ್ರಾಮುಖ್ಯ ವಿಷಯವನ್ನು ತಿಳಿಸಬೇಕಾದರೆ ಅಥವಾ ನಿಮ್ಮ ಮನಸ್ಸಿನಲ್ಲಿರುವ ಚಿಂತೆಯನ್ನು ವ್ಯಕ್ತಪಡಿಸಬೇಕಾದರೆ, ಅದಕ್ಕೆ ಅತ್ಯುತ್ತಮವಾದ ಸಮಯ ಯಾವುದೆಂದು ನಿರ್ಧರಿಸಿರಿ. ನಿಮ್ಮನ್ನೇ ಹೀಗೆ ಕೇಳಿಕೊಳ್ಳಿರಿ: ‘ನನ್ನ ಸಂಗಾತಿಯು ದಣಿದಿದ್ದಾನೋ, ಅಥವಾ ಅವನು ಆರಾಮದಿಂದಿದ್ದು, ಖುಷಿಯಲ್ಲಿದ್ದಾನೋ? ನಾನು ಹೇಳ ಬಯಸುವ ವಿಷಯವು, ನನ್ನ ಸಂಗಾತಿಯನ್ನು ಸಿಡಿದೇಳುವಂತೆ ಮಾಡಬಹುದೋ? ಕಳೆದ ಬಾರಿ ನಾವು ಈ ವಿಷಯದ ಕುರಿತಾಗಿ ಮಾತಾಡಿದಾಗ ನಾನು ಉಪಯೋಗಿಸಿದ ಯಾವ ಮಾತುಗಳು ನನ್ನ ಸಂಗಾತಿಯನ್ನು ತಳಮಳಗೊಳಿಸಿತು?’
ಮಾಡಲಾಗುವ ಒಂದು ಬೇಡಿಕೆಯೊಂದಿಗೆ ಸಹಕರಿಸುವುದು ಅಥವಾ ಅದಕ್ಕನುಗುಣವಾಗಿ ನಡೆಯುವುದರಿಂದ ತಮಗೆ ಯಾವ ಪ್ರಯೋಜನವಾಗುವುದೆಂದು ಮನವರಿಕೆಯಾದಾಗಲೇ ಜನರು ಅತ್ಯುತ್ತಮವಾಗಿ ಪ್ರತಿಕ್ರಿಯಿಸುತ್ತಾರೆಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಒಳ್ಳೆಯದು. ವಿವಾಹ ಸಂಗಾತಿಗಳ ನಡುವೆ ಒಂದು ರೀತಿಯ ಒತ್ತಡ ಆರಂಭವಾಗಿರುವಲ್ಲಿ, ಅವರಲ್ಲೊಬ್ಬರು ಹೀಗೆ ಹೇಳುವ ಪ್ರವೃತ್ತಿಯುಳ್ಳವರಾಗಿರಬಹುದು: “ಒಂದು ವಿಷಯವು ನನ್ನನ್ನು ಕಾಡಿಸುತ್ತಿದೆ, ಮತ್ತು ನಾವು ಅದನ್ನು ಈಗಿಂದೀಗಲೇ ಸರಿಪಡಿಸಿಕೊಳ್ಳಬೇಕು!” ಉಪಯೋಗಿಸಲಾಗುವ ಶಬ್ದಗಳು ಪರಿಸ್ಥಿತಿಗಳ ಮೇಲೆ ಅವಲಂಬಿಸಿರುತ್ತವೆ ನಿಜ. ಆದರೆ ಸಾಧಾರಣಮಟ್ಟಿಗೆ ಹೀಗೆ ಹೇಳುವುದು ಹೆಚ್ಚು ಉತ್ತಮ: “ನಾವು ಈ ಹಿಂದೆ ಒಮ್ಮೆ ಚರ್ಚಿಸಿರುವ ವಿಷಯ ಮತ್ತು ನಾವು ಅದನ್ನು ಹೇಗೆ ಬಗೆಹರಿಸಬಹುದೆಂಬುದರ ಕುರಿತಾಗಿ ನಾನು ಯೋಚಿಸುತ್ತಾ ಇದ್ದೆ.” ನಿಮ್ಮ ಸಂಗಾತಿಯು ಯಾವ ರೀತಿಯ ಮಾತುಗಳನ್ನು ಗಣ್ಯಮಾಡುವರೆಂದು ನೀವು ನೆನಸುತ್ತೀರಿ?
ಹೌದು, ಯಾವುದೇ ವಿಷಯವನ್ನು ಹೇಗೆ ತಿಳಿಸಲಾಗುತ್ತದೆಂಬುದು ಅತಿ ಪ್ರಾಮುಖ್ಯ. ಅಪೊಸ್ತಲ ಪೌಲನು ಬರೆದುದು: “ನಿಮ್ಮ ಸಂಭಾಷಣೆ ಯಾವಾಗಲೂ ಇಂಪಾಗಿಯೂ ರಸವತ್ತಾಗಿಯೂ ಇರಲಿ.” (ಕೊಲೊಸ್ಸೆ 4:6) ನಿಮ್ಮ ಸ್ವರ ಮತ್ತು ನಿಮ್ಮ ಮಾತುಗಳನ್ನು ಇಂಪಾಗಿರಿಸುವಂತೆ ಪ್ರಯತ್ನಿಸಿರಿ. “ಸವಿನುಡಿಯು ಜೇನುಕೊಡ; ಅದು ಆತ್ಮಕ್ಕೆ ಸಿಹಿ, ಎಲುಬುಗಳಿಗೆ ಕ್ಷೇಮ” ಎಂಬುದನ್ನು ಮನಸ್ಸಿನಲ್ಲಿಡಿರಿ.—ಜ್ಞಾನೋಕ್ತಿ 16:24.
ಕೆಲವು ದಂಪತಿಗಳಿಗೆ, ಮನೆಯಲ್ಲಿ ಕೆಲವೊಂದು ಕೆಲಸಗಳನ್ನು ಒಟ್ಟುಗೂಡಿ ಮಾಡುವುದು, ಸಂವಾದಕ್ಕಾಗಿ ಒಂದು ಒಳ್ಳೆಯ ವಾತಾವರಣವನ್ನು ಸೃಷ್ಟಿಸಬಹುದು. ಅಂತಹ ಸಹಕಾರವು, ಹಂಚಿಕೊಳ್ಳುವ ಗುಣವನ್ನು ಪ್ರವರ್ಧಿಸುವುದು ಮತ್ತು ಅದೇ ಸಮಯದಲ್ಲಿ ಹಿತಕರವಾದ ಸಂವಾದಕ್ಕೂ ಸಮಯವನ್ನು ಮಾಡಿಕೊಡುವುದು. ಇನ್ನಿತರ ವಿವಾಹ ಸಂಗಾತಿಗಳಿಗೆ, ಯಾವುದೇ ಕೆಲಸವನ್ನು ಮಾಡಲು ಪ್ರಯತ್ನಿಸದೆ ಸುಮ್ಮನೆ ಜೊತೆಯಾಗಿ ಸಮಯವನ್ನು ಕಳೆಯುವುದೇ ಹಿತಕರವಾದ ಸಂವಾದವನ್ನು ನಡೆಸಲು ಹೆಚ್ಚು ಉತ್ತಮ ಮತ್ತು ಸಹಾಯಕರವಾಗಿರುವುದಾಗಿ ತೋರಬಹುದು.
ಅನ್ಯೋನ್ಯವಾಗಿರುವ ವಿವಾಹ ಸಂಗಾತಿಗಳು ಸಂವಾದಿಸುವ ರೀತಿಯನ್ನು ಗಮನಿಸುವ ಮೂಲಕವೂ ಬಹಳಷ್ಟನ್ನು ಕಲಿಯಸಾಧ್ಯವಿದೆ. ಅವರು ಹಾಗಿರಲು ಕಾರಣವೇನು? ಅವರ ಹೊಂದಾಣಿಕೆಯು ಮತ್ತು ಅವರು ಅನಾಯಾಸವಾಗಿ ನಡೆಸುವ ಸಂವಾದವು, ವೈಯಕ್ತಿಕ ಪ್ರಯತ್ನ, ತಾಳ್ಮೆ ಮತ್ತು ಪ್ರೀತಿಪರ ಪರಿಗಣನೆಯಿಂದ ಪರಿಣಮಿಸಿರಬಹುದು. ಸ್ವತಃ ಅವರಿಗೆ ಬಹಳಷ್ಟನ್ನು ಕಲಿತುಕೊಳ್ಳಲಿಕ್ಕಿದ್ದಿರಬಹುದು. ಯಾಕಂದರೆ ಸಂತೋಷಕರ ವಿವಾಹಗಳು ತಮ್ಮಿಂದ ತಾವೇ ಉಂಟಾಗುವುದಿಲ್ಲ. ಆದುದರಿಂದ, ನಿಮ್ಮ ಸಂಗಾತಿಯ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಳ್ಳುವುದು, ಅವನ ಅಥವಾ ಅವಳ ಅಗತ್ಯಗಳನ್ನು ಗ್ರಹಿಸಿಕೊಳ್ಳುವುದು, ಮತ್ತು ಒಂದು ವಿವೇಚನಾಯುಕ್ತ ಮಾತಿನ ಮೂಲಕ ಒತ್ತಡವನ್ನುಂಟುಮಾಡುವ ಸನ್ನಿವೇಶಗಳನ್ನು ತಗ್ಗಿಸುವುದು ಎಷ್ಟು ಪ್ರಾಮುಖ್ಯ! (ಜ್ಞಾನೋಕ್ತಿ 16:23) ಆದುದರಿಂದ ನೀವು ವಿವಾಹಿತರಾಗಿರುವಲ್ಲಿ, ನಿಮ್ಮ ಸಂಗಾತಿಯು ನಿಮ್ಮೊಂದಿಗೆ ಜೀವಿಸಲು ಆನಂದಪಡುವಂತಹ ಮತ್ತು ಸುಲಭವಾಗಿ ಕ್ಷಮಿಸುವಂತಹ ಒಬ್ಬ ವ್ಯಕ್ತಿಯಾಗಿರಲು ಪ್ರಯತ್ನಿಸಿರಿ. ನಿಮ್ಮ ವೈವಾಹಿಕ ಜೀವನವು ಸಫಲವಾಗಲು ಇದು ಖಂಡಿತವಾಗಿಯೂ ತುಂಬ ಸಹಾಯಕಾರಿಯಾಗಿರುವುದು.
ಜನರು, ಸಂತೋಷಕರ ಹಾಗೂ ಶಾಶ್ವತವಾದ ವಿವಾಹದಲ್ಲಿ ಆನಂದಿಸಬೇಕೆಂದು ಯೆಹೋವ ದೇವರು ಬಯಸುತ್ತಾನೆ. (ಆದಿಕಾಂಡ 2:18, 21) ಆದರೆ ಇದರ ಕೀಲಿ ಕೈಯು, ವಿವಾಹಬಂಧದಲ್ಲಿ ಐಕ್ಯರಾಗಿರುವವರ ಕೈಯಲ್ಲಿದೆ. ಸಫಲ ವೈವಾಹಿಕ ಜೀವನಕ್ಕಾಗಿರುವ ಬಾಗಿಲನ್ನು ತೆರೆಯಲು ನಿಜವಾಗಿಯೂ ಜೊತೆಯಾಗಿ ಕೆಲಸಮಾಡುವ ಇಬ್ಬರು ಪ್ರೀತಿಪರ ವ್ಯಕ್ತಿಗಳ ಅಗತ್ಯವಿದೆ. ಮತ್ತು ಹಿತಕರವಾದ ಸಂವಾದದ ಕೌಶಲದಲ್ಲಿ ಪರಿಣತರಾಗುವ ಮೂಲಕವೇ ಆ ಬಾಗಿಲನ್ನು ಅವರು ತೆರೆಯಬಲ್ಲರು.
[ಪುಟ 22 ರಲ್ಲಿರುವ ಚಿತ್ರ]
ಟಿವಿಯನ್ನು ಆಫ್ಮಾಡಿಬಿಡುವುದರಿಂದ ಸಂವಾದಿಸಲು ಹೆಚ್ಚು ಸಮಯ ಸಿಗುವುದು
[ಪುಟ 23 ರಲ್ಲಿರುವ ಚಿತ್ರ]
ಹಿತಕರವಾದ ಸಂವಾದವು, ಶಾಶ್ವತವಾದ ಪ್ರೀತಿಯಲ್ಲಿ ಹೃದಯಗಳನ್ನು ಬಂಧಿಸುವಂತೆ ಸಹಾಯಮಾಡುತ್ತದೆ