ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w99 7/15 ಪು. 29-31
  • ವಾಚಕರಿಂದ ಪ್ರಶ್ನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಾಚಕರಿಂದ ಪ್ರಶ್ನೆಗಳು
  • ಕಾವಲಿನಬುರುಜು—1999
  • ಅನುರೂಪ ಮಾಹಿತಿ
  • ವಾಚಕರಿಂದ ಪ್ರಶ್ನೆಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
  • “ಒಳ್ಳೇದನ್ನು ಮಾಡುವುದರಲ್ಲಿ ಬೇಸರಗೂಳ್ಳಬೇಡಿರಿ”
    ಕಾವಲಿನಬುರುಜು—1991
  • ಸಭೆಯಲ್ಲಿ ಶಾಂತಿ ಮತ್ತು ಪವಿತ್ರತೆ ಕಾಪಾಡಿ
    ಯೆಹೋವನ ಕೆಲಸವನ್ನು ಮಾಡಲು ನಾವು ಸಂಘಟಿತರು
  • ‘ನಿಮ್ಮ ಮಧ್ಯೆ ಪ್ರಯಾಸಪಟ್ಟು ಕೆಲಸಮಾಡುವವರನ್ನು ಮಾನ್ಯಮಾಡಿರಿ’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
ಇನ್ನಷ್ಟು
ಕಾವಲಿನಬುರುಜು—1999
w99 7/15 ಪು. 29-31

ವಾಚಕರಿಂದ ಪ್ರಶ್ನೆಗಳು

2 ಥೆಸಲೊನೀಕ 3:14ರಲ್ಲಿ ತಿಳಿಸಲ್ಪಟ್ಟಿರುವ ‘ಗುರುತಿಸಿಡುವುದು’ ಒಂದು ಔಪಚಾರಿಕ ಸಭಾ ಕಾರ್ಯಗತಿಯಾಗಿದೆಯೋ, ಅಥವಾ ಸ್ವಚ್ಫಂದ ವ್ಯಕ್ತಿಗಳಿಂದ ದೂರವಿರುವುದಕ್ಕಾಗಿ ಕ್ರೈಸ್ತರು ವೈಯಕ್ತಿಕವಾಗಿ ಕ್ರಿಯೆಗೈಯುವ ವಿಷಯವಾಗಿದೆಯೋ?

ಅಪೊಸ್ತಲ ಪೌಲನು ಥೆಸಲೊನೀಕದವರಿಗೆ ಏನನ್ನು ಬರೆದನೋ ಅದು, ಇಂತಹ ‘ಗುರುತಿಸಿಡುವಿಕೆಯಲ್ಲಿ’ ಸಭಾ ಹಿರಿಯರಿಗೆ ನಿರ್ದಿಷ್ಟವಾದ ಪಾತ್ರವಿದೆಯೆಂಬುದನ್ನು ಸೂಚಿಸುತ್ತದೆ. ಆದರೆ, ಕ್ರೈಸ್ತರು ಆತ್ಮಿಕ ಉದ್ದೇಶಗಳನ್ನು ಮನಸ್ಸಿನಲ್ಲಿಟ್ಟುಕೊಂಡವರಾಗಿ ತದನಂತರ ವ್ಯಕ್ತಿಗತವಾಗಿ ಕ್ರಿಯೆಗೈಯುತ್ತಾರೆ. ಪೌಲನು ಈ ಸಲಹೆಯನ್ನು ಕೊಟ್ಟಂತಹ ಸನ್ನಿವೇಶವನ್ನು ಪರಿಗಣಿಸುವ ಮೂಲಕ ನಾವು ಇದನ್ನು ಹೆಚ್ಚು ಉತ್ತಮವಾಗಿ ಗ್ರಹಿಸಬಲ್ಲೆವು.

ಸ್ತ್ರೀಪುರುಷರು ವಿಶ್ವಾಸಿಗಳಾಗುವಂತೆ ಸಹಾಯಮಾಡುತ್ತಾ, ಪೌಲನು ಥೆಸಲೊನೀಕ ಸಭೆಯನ್ನು ಸ್ಥಾಪಿಸಲು ಸಹಾಯಮಾಡಿದನು. (ಅ. ಕೃತ್ಯಗಳು 17:1-4) ಅನಂತರ ಅವರನ್ನು ಶ್ಲಾಘಿಸಿ, ಉತ್ತೇಜಿಸಲಿಕ್ಕೋಸ್ಕರ ಅವನು ಕೊರಿಂಥದಿಂದ ಪತ್ರವನ್ನು ಬರೆದನು. ಅದರಲ್ಲಿ ಪೌಲನು ಅಗತ್ಯವಿದ್ದಂತಹ ಸಲಹೆಯನ್ನೂ ನೀಡಿದನು. ‘ಮತ್ತೊಬ್ಬರ ಕಾರ್ಯದಲ್ಲಿ ತಲೆಹಾಕದೆ ಸುಮ್ಮಗಿದ್ದು ಸ್ವಂತ ಕಾರ್ಯವನ್ನೇ ನಡಿಸಿಕೊಂಡು ಕೈಯಾರೆ ಕೆಲಸಮಾಡುವಂತೆ’ ಅವನು ಅವರನ್ನು ಉತ್ತೇಜಿಸಿದನು. ಕೆಲವರು ಅದನ್ನು ಮಾಡುತ್ತಿರಲಿಲ್ಲ, ಆದುದರಿಂದ ಪೌಲನು ಹೀಗೆ ಕೂಡಿಸಿ ಹೇಳಿದನು: “ಸಹೋದರರೇ, ಅಕ್ರಮವಾಗಿ ನಡೆಯುವವರಿಗೆ ಬುದ್ಧಿಹೇಳಿರಿ, ಮನಗುಂದಿದವರನ್ನು ಧೈರ್ಯಪಡಿಸಿರಿ, ಬಲಹೀನರಿಗೆ ಆಧಾರವಾಗಿರಿ, ಎಲ್ಲರಲ್ಲಿಯೂ ದೀರ್ಘಶಾಂತರಾಗಿರಿ ಎಂದು ನಿಮ್ಮನ್ನು ಪ್ರಬೋಧಿಸುತ್ತೇವೆ.” ಅವರೊಳಗೆ “ಅಕ್ರಮವಾಗಿ ನಡೆಯುವವ”ರಿದ್ದುa, ಅವರಿಗೆ ಸಲಹೆಯ ಅಗತ್ಯವಿತ್ತೆಂಬುದು ಇದರಿಂದ ಸ್ಪಷ್ಟವಾಗುತ್ತದೆ.—1 ಥೆಸಲೊನೀಕ 1:2-10; 4:11; 5:14.

ಕೆಲವೊಂದು ತಿಂಗಳುಗಳ ಬಳಿಕ, ಪೌಲನು ಥೆಸಲೊನೀಕದವರಿಗೆ ತನ್ನ ಎರಡನೆಯ ಪತ್ರವನ್ನು ಬರೆದನು. ಅದರಲ್ಲಿ ಅವನು ಯೇಸುವಿನ ಭಾವೀ ಸಾನ್ನಿಧ್ಯದ ಕುರಿತಾಗಿ ಹೆಚ್ಚಿನ ವಿಷಯಗಳನ್ನು ತಿಳಿಸಿದನು. ‘ಯಾವ ಕೆಲಸವನ್ನೂ ಮಾಡದೆ [“ತಮಗೆ ಸಂಬಂಧಿಸದ,” NW] ಇತರರ ಕೆಲಸದಲ್ಲಿ ಮಾತ್ರ ತಲೆಹಾಕು’ತ್ತಿದ್ದು, ಅಕ್ರಮವಾಗಿ ನಡೆಯುತ್ತಿರುವವರೊಂದಿಗೆ ಹೇಗೆ ವ್ಯವಹರಿಸಬೇಕೆಂಬುದರ ಕುರಿತಾಗಿಯೂ ಅವನು ಹೆಚ್ಚಿನ ಮಾರ್ಗದರ್ಶನವನ್ನು ಕೊಟ್ಟನು. ಅಂತಹ ವ್ಯಕ್ತಿಗಳ ಕ್ರಿಯೆಗಳು, ಕಷ್ಟಪಟ್ಟು ದುಡಿಯುವವನಾಗಿದ್ದ ಪೌಲನ ಮಾದರಿ ಮತ್ತು ಒಬ್ಬ ವ್ಯಕ್ತಿಯು ತನ್ನನ್ನೇ ಪೋಷಿಸಿಕೊಳ್ಳಲು ಕೆಲಸಮಾಡುವಂತೆ ಅವನು ಕೊಟ್ಟ ಸ್ಪಷ್ಟ ಆಜ್ಞೆಗೆ ವಿರುದ್ಧವಾಗಿದ್ದವು. (2 ಥೆಸಲೊನೀಕ 3:7-12) ಈ ವಿಷಯದಲ್ಲಿ ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪೌಲನು ನಿರ್ದೇಶನವನ್ನು ಕೊಟ್ಟನು. ಆದರೆ ಈ ಕ್ರಮಗಳನ್ನು, ಹಿರಿಯರು ಅಕ್ರಮವಾಗಿ ನಡೆಯುವವರಿಗೆ ಬುದ್ಧಿವಾದ ಅಥವಾ ಸಲಹೆಯನ್ನು ಕೊಟ್ಟ ಬಳಿಕವೇ ತೆಗೆದುಕೊಳ್ಳಬೇಕಿತ್ತು. ಪೌಲನು ಬರೆದುದು:

“ಸಹೋದರರೇ, ನಮ್ಮಿಂದ ಹೊಂದಿದ ಬೋಧನೆಯನ್ನು ಅನುಸರಿಸದೆ ಅಕ್ರಮವಾಗಿ ನಡೆಯುವ ಪ್ರತಿ ಸಹೋದರನಿಗೆ ನೀವು ದೂರವಾಗಿರಬೇಕೆಂದು ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ನಿಮಗೆ ಆಜ್ಞಾಪಿಸುತ್ತೇವೆ. ಸಹೋದರರೇ, ನೀವಾದರೋ ಒಳ್ಳೇದನ್ನು ಮಾಡುವದರಲ್ಲಿ ಬೇಸರಗೊಳ್ಳಬೇಡಿರಿ. ಈ ಪತ್ರಿಕೆಯ ಮೂಲಕವಾಗಿ ಹೇಳಿರುವ ನಮ್ಮ ಮಾತಿಗೆ ಯಾವನಾದರೂ ಒಳಗಾಗದಿದ್ದರೆ ಅವನನ್ನು ಗುರುತು ಇಟ್ಟುಕೊಂಡು ಅವನಿಗೆ ನಾಚಿಕೆಯಾಗುವಂತೆ ಅವನ ಸಹವಾಸದಲ್ಲಿ ಸೇರಬೇಡಿರಿ. ಆದರೂ ಅವನನ್ನು ವೈರಿಯೆಂದು ಎಣಿಸದೆ ಸಹೋದರನೆಂದು ಎಣಿಸಿಕೊಂಡು ಬುದ್ಧಿಹೇಳಿರಿ.”—2 ಥೆಸಲೊನೀಕ 3:6, 13-15.

ಹೀಗೆ ತೆಗೆದುಕೊಳ್ಳಬೇಕಾದ ಮುಂದಿನ ಹೆಜ್ಜೆಗಳಲ್ಲಿ, ಅಕ್ರಮವಾಗಿ ನಡೆಯುವವರಿಂದ ದೂರಸರಿಯುವುದು, ಅವರನ್ನು ಗುರುತಿಸಿಡುವುದು, ಅವರೊಂದಿಗೆ ಸಹವಾಸಿಸುವುದನ್ನು ನಿಲ್ಲಿಸುವುದು ಸೇರಿತ್ತು. ಆದರೂ ಅವರಿಗೆ ಸಹೋದರರೋಪಾದಿ ಬುದ್ಧಿಹೇಳಬೇಕಿತ್ತು. ಮೇಲೆ ತಿಳಿಸಲ್ಪಟ್ಟಿರುವ ಕ್ರಮಗಳನ್ನು, ಸಭೆಯ ಸದಸ್ಯರು ಯಾವ ಪರಿಸ್ಥಿತಿಗಳಲ್ಲಿ ತೆಗೆದುಕೊಳ್ಳಬೇಕಿತ್ತು? ಇದನ್ನು ಸ್ಪಷ್ಟೀಕರಿಸಲು ಸಹಾಯಮಾಡಲಿಕ್ಕಾಗಿ, ಪೌಲನು ಇಲ್ಲಿ ಯಾವುದರ ಕುರಿತಾಗಿ ಸೂಚಿಸುತ್ತಿರಲಿಲ್ಲವೊ ಆ ಮೂರು ಸನ್ನಿವೇಶಗಳನ್ನು ಪರಿಗಣಿಸೋಣ.

1. ಕ್ರೈಸ್ತರೆಲ್ಲರೂ ಅಪರಿಪೂರ್ಣರು ಮತ್ತು ಕುಂದುಕೊರತೆಗಳುಳ್ಳವರೆಂದು ನಮಗೆ ಗೊತ್ತಿದೆ. ಆದರೆ, ಪ್ರೀತಿಯು ನಿಜ ಕ್ರೈಸ್ತತ್ವದ ಒಂದು ಚಿಹ್ನೆಯಾಗಿದೆ. ಮತ್ತು ಇದು ನಾವು ಇತರರ ತಪ್ಪುಗಳನ್ನು ಅರ್ಥಮಾಡಿಕೊಂಡು ಕ್ಷಮಿಸುವುದನ್ನು ಕೇಳಿಕೊಳ್ಳುತ್ತದೆ. ಉದಾಹರಣೆಗಾಗಿ, ಬಾರ್ನಬ ಮತ್ತು ಪೌಲನು ಮಾಡಿದಂತೆ, ಒಬ್ಬ ಕ್ರೈಸ್ತನು ಅಪರೂಪವಾಗಿ ಎಂದಾದರೂ ತೀಕ್ಷ್ಣ ವಾಗ್ವಾದವನ್ನು ಮಾಡಬಹುದು. (ಅ. ಕೃತ್ಯಗಳು 15:36-40) ಅಥವಾ ದಣಿವಿನಿಂದಾಗಿ, ಒಬ್ಬ ಕ್ರೈಸ್ತನು ಕಠೋರವಾಗಿ ಅಥವಾ ಚುಚ್ಚುವಂತಹ ಮಾತುಗಳನ್ನಾಡಬಹುದು. ಅಂತಹ ಸಂದರ್ಭಗಳಲ್ಲಿ ಪ್ರೀತಿಯನ್ನು ತೋರಿಸಿ ಬೈಬಲ್‌ ಸಲಹೆಯನ್ನು ಅನ್ವಯಿಸಿಕೊಳ್ಳುವ ಮೂಲಕ, ನಾವು ತಪ್ಪನ್ನು ಮುಚ್ಚಿಡುತ್ತ, ನಮ್ಮ ಜೊತೆ ಕ್ರೈಸ್ತನೊಂದಿಗೆ ವಾಸಿಸುವುದನ್ನು, ಒಡನಾಟವನ್ನು ಮತ್ತು ಕೆಲಸಮಾಡುವುದನ್ನು ಮುಂದುವರಿಸಬಹುದು. (ಮತ್ತಾಯ 5:23-25; 6:14; 7:1-15; 1 ಪೇತ್ರ 4:8) ಥೆಸಲೊನೀಕದವರಿಗೆ ಬರೆದ ಎರಡನೆಯ ಪತ್ರದಲ್ಲಿ ಪೌಲನು ಈ ರೀತಿಯ ಕುಂದುಕೊರತೆಗಳ ಕುರಿತಾಗಿ ಮಾತಾಡುತ್ತಿರಲಿಲ್ಲ ಎಂಬುದು ಸ್ಪಷ್ಟ.

2. ಪೌಲನು ಈ ಮುಂದೆ ತಿಳಿಸಲ್ಪಟ್ಟಿರುವ ಸನ್ನಿವೇಶದ ಕುರಿತಾಗಿಯೂ ತಿಳಿಸುತ್ತಿರಲಿಲ್ಲ: ಒಬ್ಬ ಕ್ರೈಸ್ತನು, ಯಾರ ರೀತಿನೀತಿಗಳು ಅಥವಾ ಮನೋಭಾವಗಳು ಒಳ್ಳೆಯದ್ದಾಗಿಲ್ಲವೊ—ಉದಾಹರಣೆಗಾಗಿ ಯಾರು ಮನೋರಂಜನೆ ಅಥವಾ ಭೌತಿಕ ವಿಷಯಗಳಿಗೆ ವಿಪರೀತ ಮಹತ್ವವನ್ನು ಕೊಡುತ್ತಾನೊ—ಅಂತಹ ವ್ಯಕ್ತಿಯೊಂದಿಗೆ ಮಿತವಾದ ಸಹವಾಸವನ್ನು ಮಾಡುವುದರ ಕುರಿತು ವೈಯಕ್ತಿಕ ಆಯ್ಕೆಯನ್ನು ಮಾಡಬಹುದು. ಅಥವಾ, ಒಬ್ಬ ಹೆತ್ತವರು ತನ್ನ ಮಗು, ಹೆತ್ತವರ ಅಧಿಕಾರವನ್ನು ಕಡೆಗಣಿಸುವ, ಒರಟಾದ ಅಥವಾ ಅಪಾಯಕರವಾದ ರೀತಿಯಲ್ಲಿ ಆಟವಾಡುವ, ಅಥವಾ ಕ್ರೈಸ್ತತ್ವವನ್ನು ಗಂಭೀರವಾಗಿ ಪರಿಗಣಿಸದಂತಹ ಯುವಜನರೊಂದಿಗೆ ಸಹವಾಸಮಾಡುವುದನ್ನು ಮಿತಗೊಳಿಸಬಹುದು. ಇವು, ಶುದ್ಧವಾಗಿ ವೈಯಕ್ತಿಕ ನಿರ್ಣಯಗಳಾಗಿವೆ ಮತ್ತು ಜ್ಞಾನೋಕ್ತಿ 13:20ರಲ್ಲಿರುವ ವಿಷಯಕ್ಕೆ ಹೊಂದಿಕೆಯಲ್ಲಿವೆ: “ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು; ಜ್ಞಾನಹೀನರ ಒಡನಾಡಿ ಸಂಕಟಪಡುವನು.”—1 ಕೊರಿಂಥ 15:33ನ್ನು ಹೋಲಿಸಿರಿ.

3. ಇನ್ನೂ ಹೆಚ್ಚು ಗಂಭೀರವಾದ ವಿಷಯದ ಕುರಿತಾಗಿ, ಅಂದರೆ ವಿಪರೀತ ಪಾಪವನ್ನು ಮಾಡುತ್ತಾ ಪಶ್ಚಾತ್ತಾಪಪಡದವನ ಕುರಿತಾಗಿ ಪೌಲನು ಕೊರಿಂಥದವರಿಗೆ ಬರೆದನು. ಪಶ್ಚಾತ್ತಾಪಪಡದ ಅಂತಹ ಪಾಪಿಗಳನ್ನು ಸಭೆಯಿಂದ ತೆಗೆದುಹಾಕಬೇಕಿತ್ತು. ಆ “ದುಷ್ಟ”ನನ್ನು ಸೈತಾನನಿಗೆ ಒಪ್ಪಿಸಿಕೊಡಬೇಕಾಗಿತ್ತು. ತದನಂತರ ನಿಷ್ಠಾವಂತ ಕ್ರೈಸ್ತರು ಅಂತಹ ದುಷ್ಟರೊಂದಿಗೆ ಬೆರೆಯಬಾರದಿತ್ತು; ಅವರನ್ನು ವಂದಿಸಲೂ ಬಾರದೆಂದು ಅಪೊಸ್ತಲ ಯೋಹಾನನು ಕ್ರೈಸ್ತರನ್ನು ಉತ್ತೇಜಿಸಿದನು. (1 ಕೊರಿಂಥ 5:1-13; 2 ಯೋಹಾನ 9-11) ಆದರೆ ಇದು ಕೂಡ 2 ಥೆಸಲೊನೀಕ 3:14ರಲ್ಲಿ ಕೊಡಲ್ಪಟ್ಟಿರುವ ಸಲಹೆಗೆ ಹೊಂದಿಕೊಳ್ಳುವುದಿಲ್ಲ.

ಥೆಸಲೊನೀಕದವರಿಗೆ ಬರೆದ ಎರಡನೆಯ ಪತ್ರದಲ್ಲಿ ಚರ್ಚಿಸಲ್ಪಟ್ಟಿರುವ “ಅಕ್ರಮವಾಗಿ ನಡೆಯುವವ”ರನ್ನು ಒಳಗೂಡಿರುವ ಸನ್ನಿವೇಶವು, ಮೇಲೆ ತಿಳಿಸಲ್ಪಟ್ಟಿರುವ ಮೂರೂ ಸನ್ನಿವೇಶಗಳಿಗಿಂತ ಭಿನ್ನವಾಗಿದೆ. ಇವರು ಇನ್ನೂ ‘ಸಹೋದರರು’ ಮತ್ತು ಆ ರೀತಿಯಲ್ಲಿ ಅವರಿಗೆ ಬುದ್ಧಿವಾದ ನೀಡುತ್ತ ಉಪಚರಿಸಬೇಕೆಂದು ಪೌಲನು ಬರೆದನು. ಹೀಗೆ, “ಅಕ್ರಮವಾಗಿ ನಡೆಯುವ” ಸಹೋದರರ ಕುರಿತಾದ ಸಮಸ್ಯೆಯು, ಕೇವಲ ಕ್ರೈಸ್ತರ ನಡುವಿನ ಒಂದು ವ್ಯಕ್ತಿಗತ ವಿಷಯವಾಗಿರಲಿಲ್ಲ. ಅದೇ ಸಮಯದಲ್ಲಿ, ಅದು ಪೌಲನು ಕೊರಿಂಥದಲ್ಲಿ ಒಂದು ಅನೈತಿಕತೆಯ ಪ್ರಕರಣದ ಸಂಬಂಧದಲ್ಲಿ ಮಾಡಿದಂತೆ ಸಭಾ ಹಿರಿಯರು ಬಹಿಷ್ಕಾರವನ್ನು ಅವಶ್ಯಪಡಿಸುವಷ್ಟು ಗಂಭೀರವಾದ ವಿಷಯವೂ ಆಗಿರಲಿಲ್ಲ. ಕೊರಿಂಥದಲ್ಲಿ ಬಹಿಷ್ಕರಿಸಲ್ಪಟ್ಟ ವ್ಯಕ್ತಿಯಂತೆ, “ಅಕ್ರಮವಾಗಿ ನಡೆಯುವವರು” ಗಂಭೀರವಾದ ಪಾಪವನ್ನು ಮಾಡಿದವರಾಗಿರಲಿಲ್ಲ.

ಥೆಸಲೊನೀಕದಲ್ಲಿದ್ದ “ಅಕ್ರಮವಾಗಿ ನಡೆಯುವವರು,” ಕ್ರೈಸ್ತತ್ವದಿಂದ ಗಂಭೀರವಾಗಿ ದಾರಿತಪ್ಪಿಹೋಗಿದ್ದರು. ಇವರು ಕೆಲಸಮಾಡುತ್ತಿರಲಿಲ್ಲ. ಇದಕ್ಕೆ ಒಂದು ಕಾರಣ, ಕ್ರಿಸ್ತನ ಪುನರಾಗಮನ ಹತ್ತಿರವಿದೆಯೆಂದು ಅವರು ನೆನಸುತ್ತಿದ್ದರು, ಅಥವಾ ಅವರು ಸೋಮಾರಿಗಳಾಗಿದ್ದರು. ಇನ್ನೂ ಹೆಚ್ಚಾಗಿ ಅವರು ‘ತಮಗೆ ಸಂಬಂಧಿಸದ ಕೆಲಸದಲ್ಲಿ ತಲೆಹಾಕುವ’ ಮೂಲಕ ಸಭೆಯಲ್ಲಿ ಶಾಂತಿಗೆಡಿಸುತ್ತಿದ್ದರು. ಪೌಲನು ತನ್ನ ಮೊದಲನೆಯ ಪತ್ರದಲ್ಲಿ ಕೊಟ್ಟ ಬುದ್ಧಿವಾದ ಮತ್ತು ಬೇರೆ ದೈವಿಕ ಬುದ್ಧಿವಾದದ ಮೇರೆಗೆ ಸಭಾ ಹಿರಿಯರು ಅವರಿಗೆ ಪದೇ ಪದೇ ಸಲಹೆ ಕೊಟ್ಟಿರಬಹುದು. (ಜ್ಞಾನೋಕ್ತಿ 6:6-11; 10:4, 5; 12:11, 24; 24:30-34) ಆದರೂ, ಅವರು ಸಭೆಗೆ ಕೆಟ್ಟ ಹೆಸರನ್ನು ತಂದು, ಬೇರೆಲ್ಲ ಕ್ರೈಸ್ತರ ನಡುವೆ ಹಬ್ಬಿಕೊಳ್ಳಸಾಧ್ಯವಿದ್ದ ಮಾರ್ಗಕ್ರಮವನ್ನು ಅನುಸರಿಸುತ್ತಿದ್ದರು. ಆದುದರಿಂದ ಕ್ರೈಸ್ತ ಹಿರಿಯನಾದ ಪೌಲನು ವ್ಯಕ್ತಿಗಳ ಹೆಸರನ್ನು ಸೂಚಿಸದೆ, ಬಹಿರಂಗವಾಗಿ ಅವರ ಅಕ್ರಮ ನಡತೆಯ ಕಡೆಗೆ ಗಮನಸೆಳೆದು, ಅವರ ತಪ್ಪಾದ ಮಾರ್ಗಕ್ರಮವನ್ನು ಬಯಲಿಗೆಳೆದನು.

ವ್ಯಕ್ತಿಗತ ಕ್ರೈಸ್ತರೋಪಾದಿ ಅವರು ಅಕ್ರಮವಾಗಿ ನಡೆಯುವವರನ್ನು ‘ಗುರುತಿಸಿಡು’ವುದು ಸೂಕ್ತವೆಂದು ಸಹ ಅವನು ಸಭೆಗೆ ತಿಳಿಯಪಡಿಸಿದನು. ಇದರರ್ಥ, ಯಾವ ಮಾರ್ಗಕ್ರಮದ ಕುರಿತಾಗಿ ಸಭೆಯನ್ನು ಬಹಿರಂಗವಾಗಿ ಎಚ್ಚರಿಸಲಾಗಿತ್ತೊ, ಅಂತಹ ಮಾರ್ಗಕ್ರಮಕ್ಕೆ ಅನುಗುಣವಾದ ಕ್ರಿಯೆಗಳುಳ್ಳ ವ್ಯಕ್ತಿಗಳನ್ನು ಕ್ರೈಸ್ತರು ಗಮನಿಸಬೇಕಾಗಿತ್ತು. ‘ಅಕ್ರಮವಾಗಿ ನಡೆಯುವ ಪ್ರತಿ ಸಹೋದರನಿಗೆ ದೂರವಾಗಿರಬೇಕೆಂದು’ ಪೌಲನು ಅವರಿಗೆ ಬುದ್ಧಿವಾದ ಕೊಟ್ಟನು. ಅವನು ಹಾಗಿದ್ದಾನೆಂದು ಅವನನ್ನು ಸಂಪೂರ್ಣವಾಗಿ ತೊರೆದುಬಿಡಬೇಕೆಂದು ಇದರರ್ಥವಲ್ಲ. ಯಾಕಂದರೆ, ಅವರು ಅವನನ್ನು ‘ಸಹೋದರನೆಂದು ಎಣಿಸಿಕೊಂಡು ಬುದ್ಧಿಹೇಳಬೇಕಿತ್ತು.’ ಕೂಟಗಳಲ್ಲಿ ಮತ್ತು ಪ್ರಾಯಶಃ ಶುಶ್ರೂಷೆಯಲ್ಲಿ ಅವರು ಅವನೊಂದಿಗೆ ಸಂಪರ್ಕವನ್ನು ಮುಂದುವರಿಸಬೇಕಿತ್ತು. ತಮ್ಮ ಸಹೋದರನು, ಬುದ್ಧಿವಾದಕ್ಕೆ ಪ್ರತಿಕ್ರಿಯಿಸಿ, ತನ್ನ ತಪ್ಪಾದ ಮಾರ್ಗಗಳನ್ನು ಬಿಟ್ಟುಬಿಡುವನೆಂಬ ನಿರೀಕ್ಷೆಯನ್ನು ಅವರು ಇಡಸಾಧ್ಯವಿತ್ತು.

ಯಾವ ಅರ್ಥದಲ್ಲಿ ಅವರು ಅವನಿಂದ ‘ದೂರವಿರ’ಬೇಕಿತ್ತು? ಇದು ಬಹುಶಃ ಸಾಮಾಜಿಕವಾಗಿ ಸಹವಾಸಿಸುವುದರ ಕುರಿತಾಗಿ ಇತ್ತು. (ಗಲಾತ್ಯ 2:12ನ್ನು ಹೋಲಿಸಿರಿ.) ಸಾಮಾಜಿಕ ರೀತಿಯಲ್ಲಿ ಅವನೊಂದಿಗೆ ವ್ಯವಹರಿಸುವುದನ್ನು ಅಥವಾ ಮನೋರಂಜನೆಯಲ್ಲಿ ಒಳಗೂಡುವುದನ್ನು ನಿಲ್ಲಿಸುವುದರಿಂದ, ನೀತಿನಿಷ್ಠೆಗಳುಳ್ಳ ಜನರು ಅವನ ರೀತಿನೀತಿಗಳನ್ನು ಇಷ್ಟಪಡುವುದಿಲ್ಲವೆಂಬುದನ್ನು ಅವನಿಗೆ ತೋರಿಸಬಹುದಿತ್ತು. ಅವನು ನಾಚಿಕೆಪಟ್ಟು ಬದಲಾಗದಿದ್ದರೂ, ಕಡಿಮೆಪಕ್ಷ ಇತರರು ಅವನ ಮಾರ್ಗಗಳ ಕುರಿತಾಗಿ ಕೇಳಿ ಅವನಂತಾಗುವ ಸಂಭಾವ್ಯತೆಯು ಕಡಿಮೆಯಾಗುತ್ತಿತ್ತು. ಅದೇ ಸಮಯದಲ್ಲಿ ಈ ವ್ಯಕ್ತಿಗತ ಕ್ರೈಸ್ತರು, ಸಕಾರಾತ್ಮಕ ವಿಷಯಗಳ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಬೇಕಾಗಿತ್ತು. ಪೌಲನು ಅವರಿಗೆ ಬುದ್ಧಿಹೇಳಿದ್ದು: “ಸಹೋದರರೇ, ನೀವಾದರೋ ಒಳ್ಳೇದನ್ನು ಮಾಡುವದರಲ್ಲಿ ಬೇಸರಗೊಳ್ಳಬೇಡಿರಿ.”—2 ಥೆಸಲೊನೀಕ 3:13.

ಅಪೊಸ್ತಲನ ಈ ಸಲಹೆಯು, ಚಿಕ್ಕಪುಟ್ಟ ತಪ್ಪನ್ನು ಮಾಡುವ ನಮ್ಮ ಸಹೋದರರನ್ನು ಕೀಳಾಗಿ ನೋಡುವುದು, ಅಥವಾ ಖಂಡಿಸುವುದಕ್ಕೆ ಆಧಾರವಾಗುವುದಿಲ್ಲ. ಅದಕ್ಕೆ ಬದಲಾಗಿ ಅದರ ಉದ್ದೇಶವು, ಕ್ರೈಸ್ತತ್ವಕ್ಕೆ ವಿರುದ್ಧವಾಗಿರುವ ಒಂದು ಶಾಂತಿಗೆಡಿಸುವ ಮಾರ್ಗಕ್ರಮವನ್ನು ಅನುಸರಿಸುವವನಿಗೆ ಸಹಾಯಮಾಡುವುದೇ ಆಗಿದೆ.

ಒಂದು ಜಟಿಲವಾದ ಕಾರ್ಯವಿಧಾನವನ್ನು ರಚಿಸಲು ಪ್ರಯತ್ನಿಸುತ್ತಾ ಪೌಲನು ಯಾವುದೇ ಸವಿಸ್ತಾರವಾದ ನಿಯಮಗಳನ್ನು ಸ್ಥಾಪಿಸಲಿಲ್ಲ. ಆದರೆ ಹಿರಿಯರು ಅಕ್ರಮವಾಗಿ ನಡೆಯುವವನಿಗೆ ಮೊದಲು ಸಲಹೆನೀಡಿ, ಸಹಾಯಮಾಡಲು ಪ್ರಯತ್ನಿಸಬೇಕೆಂಬುದು ಸ್ಪಷ್ಟ. ಅವರಿಗೆ ಯಾವುದೇ ಪ್ರತಿಫಲ ಸಿಗದಿದ್ದಲ್ಲಿ ಮತ್ತು ಆ ವ್ಯಕ್ತಿಯು ಶಾಂತಿಗೆಡಿಸುವಂತಹ ತನ್ನದೇ ಆದ ಮಾರ್ಗದಲ್ಲಿ ಮುಂದುವರಿಯುವಲ್ಲಿ, ಹಾಗೂ ಇದು ಹಬ್ಬಿಕೊಳ್ಳುವ ಪ್ರವೃತ್ತಿಯುಳ್ಳದ್ದಾಗಿರುವಲ್ಲಿ, ಆಗ ಅವರು ಸಭೆಯವರನ್ನು ಎಚ್ಚರಿಸುವ ತೀರ್ಮಾನಮಾಡಬಹುದು. ಅಂತಹ ಅಕ್ರಮ ನಡವಳಿಕೆಯನ್ನು ಏಕೆ ದೂರವಿಡಬೇಕೆಂಬುದರ ಕುರಿತು ಅವರು ಒಂದು ಭಾಷಣವನ್ನು ಏರ್ಪಡಿಸಬಹುದು. ಅವರು ಹೆಸರುಗಳನ್ನು ಹೇಳುವುದಿಲ್ಲ. ಆದರೆ ಅವರ ಈ ಎಚ್ಚರಿಕೆಯ ಭಾಷಣವು, ಸಭೆಯನ್ನು ಸಂರಕ್ಷಿಸಲು ಸಹಾಯಮಾಡುವುದು. ಇದು ಯಾಕಂದರೆ, ಅಂತಹ ಅಕ್ರಮ ನಡತೆಯನ್ನು ಸ್ಪಷ್ಟವಾಗಿ ತೋರಿಸುವ ಯಾವುದೇ ವ್ಯಕ್ತಿಯೊಂದಿಗೆ ಸಾಮಾಜಿಕ ಚಟುವಟಿಕೆಗಳನ್ನು ಸೀಮಿತಗೊಳಿಸಲು ಪ್ರತಿಕ್ರಿಯೆ ತೋರಿಸುವವರು ಹೆಚ್ಚಿನ ಮುಂಜಾಗ್ರತೆಯನ್ನು ವಹಿಸುವರು.

ಸಕಾಲದಲ್ಲಿ, ಅಕ್ರಮವಾಗಿ ನಡೆಯುವವನು ತನ್ನ ಮಾರ್ಗಗಳ ಕುರಿತು ನಾಚಿಕೆಪಟ್ಟು ಬದಲಾಗಲು ಪ್ರಚೋದಿಸಲ್ಪಡುವನೆಂದು ನಾವು ನಿರೀಕ್ಷಿಸುತ್ತೇವೆ. ಹಿರಿಯರು ಮತ್ತು ಸಭೆಯಲ್ಲಿರುವ ಇತರರು ಈ ಬದಲಾವಣೆಯನ್ನು ನೋಡಿದಾಗ, ಅವನೊಂದಿಗೆ ಬೆರೆಯುವುದರ ಕುರಿತಾಗಿ ಅವರು ವ್ಯಕ್ತಿಗತವಾಗಿ ಇಟ್ಟಿರುವ ಪರಿಮಿತಿಯನ್ನು ತೆಗೆದುಹಾಕಲು ಅವರು ವೈಯಕ್ತಿಕವಾಗಿ ನಿರ್ಣಯಿಸಬಹುದು.

ಹಾಗಾದರೆ, ಸಾರಾಂಶ ಇದಾಗಿದೆ: ಯಾರಾದರೂ ಅಕ್ರಮವಾಗಿ ನಡೆಯುತ್ತಿರುವಲ್ಲಿ, ಸಭಾ ಹಿರಿಯರು ಸಹಾಯ ಮತ್ತು ಸಲಹೆಯನ್ನು ನೀಡುವುದರಲ್ಲಿ ಮುಂದಾಳುತ್ವ ವಹಿಸುತ್ತಾರೆ. ಆ ವ್ಯಕ್ತಿಯು ತನ್ನ ತಪ್ಪನ್ನು ತಿದ್ದಿಕೊಳ್ಳದೆ, ಅಹಿತಕರವಾದ ಪ್ರಭಾವವಾಗಿ ಮುಂದುವರಿಯುವಲ್ಲಿ, ಬೈಬಲಿನ ದೃಷ್ಟಿಕೋನವನ್ನು ಸ್ಪಷ್ಟವಾಗಿ ತಿಳಿಸುವ ಒಂದು ಭಾಷಣದ ಮೂಲಕ ಹಿರಿಯರು ಸಭೆಯನ್ನು ಎಚ್ಚರಿಸಬಹುದು—ಇದು ಅವಿಶ್ವಾಸಿಗಳೊಂದಿಗಿನ ಪ್ರಣಯಾಚರಣೆ ಅಥವಾ ಬೇರೆ ಯಾವುದೇ ಅಯೋಗ್ಯ ಮಾರ್ಗಕ್ರಮದ ಕುರಿತಾಗಿರಸಾಧ್ಯವಿದೆ. (1 ಕೊರಿಂಥ 7:39; 2 ಕೊರಿಂಥ 6:14) ಈ ರೀತಿಯಲ್ಲಿ ಸಭೆಯಲ್ಲಿ ಅಪಾಯಸೂಚನೆಯನ್ನು ಪಡೆದಿರುವ ಕ್ರೈಸ್ತರು, ಇನ್ನೂ ಸಹೋದರರಾಗಿರುವ ಆದರೆ ಅಕ್ರಮವಾಗಿ ನಡೆಯುತ್ತಿರುವವರೊಂದಿಗೆ ತಮ್ಮ ಸಹವಾಸವನ್ನು ಮಿತಗೊಳಿಸುವ ವಿಷಯದಲ್ಲಿ ವೈಯಕ್ತಿಕ ನಿರ್ಣಯವನ್ನು ಮಾಡಬಲ್ಲರು.

[ಅಧ್ಯಯನ ಪ್ರಶ್ನೆಗಳು]

a ಈ ಶಬ್ದಗಳಿಗಿದ್ದ ಗ್ರೀಕ್‌ ಪದವನ್ನು, ಪಂಕ್ತಿಯಲ್ಲಿ ನಿಲ್ಲದ ಅಥವಾ ಶಿಸ್ತುಬದ್ಧವಾಗಿ ನಡೆಯದ ಸೈನಿಕರಿಗಾಗಿ, ಹಾಗೂ ತರಗತಿಗಳನ್ನು ತಪ್ಪಿಸಿಕೊಳ್ಳುತ್ತಿದ್ದ ಶಾಲೆಗಳ್ಳ ವಿದ್ಯಾರ್ಥಿಗಳಿಗಾಗಿ ಉಪಯೋಗಿಸಲಾಗುತ್ತಿತ್ತು.

[ಪುಟ 31 ರಲ್ಲಿರುವ ಚಿತ್ರ]

ಕ್ರೈಸ್ತ ಹಿರಿಯರು ಅಕ್ರಮವಾಗಿ ನಡೆಯುವವರಿಗೆ ಬುದ್ಧಿವಾದವನ್ನು ಕೊಡುತ್ತಾರೆ, ಆದರೆ ಅದೇ ಸಮಯದಲ್ಲಿ ಅವರನ್ನು ಜೊತೆ ವಿಶ್ವಾಸಿಗಳಾಗಿ ವೀಕ್ಷಿಸುತ್ತಾರೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ