“ವಾಸ್ತವವಾದ ಜೀವ”ದಲ್ಲಿ ಆನಂದಿಸಿರಿ
ಯೆಹೋವ ದೇವರು ಮನುಷ್ಯನಿಗೆ ನಿತ್ಯತೆಯನ್ನು ಗ್ರಹಿಸುವ ಶಕ್ತಿಯನ್ನು ನೀಡಿದ್ದಾನೆ. (ಪ್ರಸಂಗಿ 3:11) ಆದರೂ ಇದು, ಮೃತ್ಯುವಿನ ಸಮ್ಮುಖದಲ್ಲಿ ಮನುಷ್ಯರನ್ನು ನಿಸ್ಸಹಾಯಕರನ್ನಾಗಿ ಮಾಡುವುದರ ಜೊತೆಗೆ, ಜೀವಿಸಬೇಕೆಂಬ ಅದಮ್ಯ ಬಯಕೆಯನ್ನೂ ಅವರಲ್ಲಿ ಕೆರಳಿಸುತ್ತದೆ.
ದೇವರ ಪ್ರೇರಿತ ವಾಕ್ಯವಾದ ಪವಿತ್ರ ಬೈಬಲು, ಮಹಾ ನಿರೀಕ್ಷೆಯನ್ನು ನಮ್ಮ ಮುಂದಿಡುತ್ತದೆ. (2 ತಿಮೊಥೆಯ 3:16) ಪ್ರೀತಿಯ ಸಾರವೇ ಆಗಿರುವ ಯೆಹೋವನು, ನಿತ್ಯತೆಯ ಪರಿಕಲ್ಪನೆಯನ್ನು ಗ್ರಹಿಸುವ ಸಾಮರ್ಥ್ಯವನ್ನು ಮನುಷ್ಯನಲ್ಲಿ ಉಂಟುಮಾಡಿ, ತದನಂತರ ಅವನು ಕೆಲವೇ ವರ್ಷಗಳ ಕಾಲ ಬದುಕುವಂತೆ ವಿಧಿಸುವ ಸಾಧ್ಯತೆ ಇರಲಿಲ್ಲ. ನಮ್ಮ ದುಸ್ಥಿತಿಯ ಕಾರಣ ಯಾತನೆಪಡಲಿಕ್ಕಾಗಿ ನಮ್ಮನ್ನು ಸೃಷ್ಟಿಸಿರುವ ವಿಚಾರವು, ದೇವರ ವ್ಯಕ್ತಿತ್ವಕ್ಕೆ ತೀರ ವಿರುದ್ಧವಾಗಿದೆ. ನಾವು “ಸ್ವಾಭಾವಿಕವಾಗಿ ಬೇಟೆಗೂ ಕೊಲೆಗೂ ಹುಟ್ಟಿರುವ ವಿವೇಕಶೂನ್ಯಪಶು”ಗಳಂತೆ ಸೃಷ್ಟಿಸಲ್ಪಡಲಿಲ್ಲ.—2 ಪೇತ್ರ 2:12.
ಯೆಹೋವ ದೇವರು ಆದಾಮಹವ್ವರನ್ನು ನಿತ್ಯತೆಯ ಸಹಜಪ್ರಜ್ಞೆಯೊಂದಿಗೆ ಸೃಷ್ಟಿಸಿದಾಗ, “ಬಹು ಒಳ್ಳೇ”ದಾಗಿದ್ದ ಯಾವುದನ್ನೊ ಆತನು ಉಂಟುಮಾಡಿದನು. ಅಂದರೆ, ಸದಾಕಾಲ ಬಾಳುವ ಸಾಮರ್ಥ್ಯದೊಂದಿಗೆ ಅವರನ್ನು ಸೃಷ್ಟಿಸಿದನು. (ಆದಿಕಾಂಡ 1:31) ಆದರೆ ದುಃಖಕರವಾಗಿ, ಪ್ರಥಮ ದಂಪತಿಗಳು ತಮ್ಮ ಇಚ್ಛಾಸ್ವಾತಂತ್ರ್ಯವನ್ನು ದುರುಪಯೋಗಿಸುತ್ತಾ, ಸೃಷ್ಟಿಕರ್ತನ ಸ್ಪಷ್ಟವಾದ ನಿಷೇಧಕ್ಕೆ ಅವಿಧೇಯರಾಗಿ, ಆರಂಭದಲ್ಲಿದ್ದ ಪರಿಪೂರ್ಣತೆಯನ್ನು ಕಳೆದುಕೊಂಡರು. ಈ ಕಾರಣ, ಅವರು ಮೃತರಾದರಲ್ಲದೆ ತಮ್ಮ ಸಂತತಿಗೂ ಅಪರಿಪೂರ್ಣತೆ ಹಾಗೂ ಮರಣವನ್ನು ಸಾಗಿಸಿದರು.—ಆದಿಕಾಂಡ 2:17; 3:1-24; ರೋಮಾಪುರ 5:12.
ಜೀವಿತದ ಉದ್ದೇಶ ಮತ್ತು ಮರಣದ ಅರ್ಥದ ಕುರಿತು, ಬೈಬಲಿನಲ್ಲಿ ಯಾವ ನಿಗೂಢತೆಯೂ ಇಲ್ಲ. ಸತ್ತವರಿಗೆ “ಯಾವ ತಿಳುವಳಿಕೆಯೂ ಇಲ್ಲ”ವೆಂದು ಮತ್ತು ಮರಣದಲ್ಲಿ “ಯಾವ ಕೆಲಸವೂ ಯುಕ್ತಿಯೂ ತಿಳುವಳಿಕೆಯೂ ಜ್ಞಾನವೂ ಇರುವದಿಲ್ಲ”ವೆಂದು ಅದು ಹೇಳುತ್ತದೆ. (ಪ್ರಸಂಗಿ 9:5, 10) ಬೇರೆ ಮಾತುಗಳಲ್ಲಿ ಹೇಳುವುದಾದರೆ, ಮೃತರು ಸಂಪೂರ್ಣವಾಗಿ ಮೃತರಾಗಿದ್ದಾರೆ. ಅಮರ ಆತ್ಮದ ಸಿದ್ಧಾಂತವು ಬೈಬಲಿನಲ್ಲಿಲ್ಲ, ಆದುದರಿಂದ ಸತ್ತವರ ಸ್ಥಿತಿಯ ಬಗ್ಗೆ ಯಾವ ಅಗಾಧವಾದ ನಿಗೂಢತೆಯನ್ನೂ ಬಗೆಹರಿಸುವ ಅಗತ್ಯವಿಲ್ಲ.—ಆದಿಕಾಂಡ 3:19; ಕೀರ್ತನೆ 146:4; ಪ್ರಸಂಗಿ 3:19, 20; ಯೆಹೆಜ್ಕೇಲ 18:4.a
ದೇವರು ಭೂಮಿಯನ್ನು “ಶೂನ್ಯಸ್ಥಾನವಾಗಿರಲೆಂದು” ಸೃಷ್ಟಿಸಲಿಲ್ಲ, ಬದಲಿಗೆ ಆತನಿಗೊಂದು ಉದ್ದೇಶವಿತ್ತು. ಆತನು ಪ್ರಮೋದವನೀಯ ಪರಿಸ್ಥಿತಿಗಳಲ್ಲಿ, ಪರಿಪೂರ್ಣ ಮನುಷ್ಯರ “ನಿವಾಸಕ್ಕಾಗಿಯೇ” ಅದನ್ನು ರೂಪಿಸಿದನು ಮತ್ತು ತನ್ನ ಉದ್ದೇಶವನ್ನು ದೇವರು ಬದಲಾಯಿಸಿರುವುದಿಲ್ಲ. (ಯೆಶಾಯ 45:18; ಮಲಾಕಿಯ 3:6) ಈ ಉದ್ದೇಶವನ್ನು ನೆರವೇರಿಸಲು ಆತನು ತನ್ನ ಪುತ್ರನನ್ನು ಈ ಭೂಮಿಗೆ ಕಳುಹಿಸಿದನು. ಮರಣದ ವರೆಗೆ ನಂಬಿಗಸ್ತನಾಗಿ ಉಳಿಯುವ ಮೂಲಕ, ಯೇಸು ಕ್ರಿಸ್ತನು ಮಾನವಕುಲಕ್ಕೆ ಪಾಪಮರಣಗಳಿಂದ ವಿಮೋಚನೆಯನ್ನು ಒದಗಿಸಿದನು. ವಾಸ್ತವದಲ್ಲಿ, ಯೇಸು ಹೇಳಿದ್ದು: “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.”—ಯೋಹಾನ 3:16.
ದೇವರು “ನೂತನಾಕಾಶಮಂಡಲವನ್ನೂ ನೂತನ ಭೂಮಂಡಲವನ್ನೂ” ಸೃಷ್ಟಿಸುವೆನೆಂದು ಬಹಳ ಕಾಲದ ಮುಂಚೆಯೇ ವಾಗ್ದಾನಿಸಿದ್ದನು. (ಯೆಶಾಯ 65:17; 2 ಪೇತ್ರ 3:13) ಅದರಲ್ಲಿ, ಸ್ವರ್ಗೀಯ ಜೀವಿತಕ್ಕಾಗಿ ನಂಬಿಗಸ್ತ ಕ್ರೈಸ್ತರ ಒಂದು ಚಿಕ್ಕ ಗುಂಪನ್ನು ಆತನು ಆರಿಸಿಕೊಳ್ಳುವುದು ಸಹ ಸೇರಿತ್ತು. ಯೇಸು ಕ್ರಿಸ್ತನ ಜೊತೆಗೆ ಅವರು ಒಂದು ಸರಕಾರೀ ಕೇಂದ್ರವನ್ನು ರೂಪಿಸುತ್ತಾರೆ. ಇದನ್ನೇ ಬೈಬಲು, “ಪರಲೋಕರಾಜ್ಯ” ಇಲ್ಲವೆ “ದೇವರ ರಾಜ್ಯ”ವೆಂದು ಸೂಚಿಸುತ್ತದೆ. ಅದು ‘ಭೂಲೋಕದಲ್ಲಿ ಇರುವ ಸಮಸ್ತವನ್ನೂ’ ಆಳುವುದು. (ಮತ್ತಾಯ 4:17; 12:28; ಎಫೆಸ 1:10; ಪ್ರಕಟನೆ 5:9, 10; 14:1, 3) ಎಲ್ಲ ದುಷ್ಟತನವನ್ನು ತೆಗೆದುಹಾಕಿ, ನಮ್ಮ ಭೂಮಿಯನ್ನು ಸ್ವಚ್ಛಗೊಳಿಸಿದ ನಂತರ, ದೇವರು “ನೂತನ ಭೂಮಂಡಲವನ್ನು” ಅಂದರೆ, ನೀತಿಯ ಹೊಸ ಮಾನವ ಸಮಾಜವನ್ನು ಸ್ಥಾಪಿಸುವನು. ಈ ದುಷ್ಟ ವಿಷಯಗಳ ವ್ಯವಸ್ಥೆಯ ಸನ್ನಿಹಿತವಾಗಿರುವ ನಾಶನದಿಂದ ದೇವರು ಯಾರನ್ನು ಸಂರಕ್ಷಿಸುತ್ತಾನೊ ಅವರು ಇದರಲ್ಲಿ ಸೇರಿರುವರು. (ಮತ್ತಾಯ 24:3, 7-14, 21; ಪ್ರಕಟನೆ 7:9, 13, 14) ಇವರೊಂದಿಗೆ, ವಾಗ್ದತ್ತ ಪುನರುತ್ಥಾನದ ಮೂಲಕ ಜೀವಂತಗೊಳಿಸಲ್ಪಡುವವರು ಸಹ ಸೇರಿಕೊಳ್ಳುವರು.—ಯೋಹಾನ 5:28, 29; ಅ. ಕೃತ್ಯಗಳು 24:15.
ಮುಂದಿನ ‘ವಾಸ್ತವವಾದ ಜೀವನ’
ಭಾವೀ ಭೂಪ್ರಮೋದವನದಲ್ಲಿರುವ ರೋಮಾಂಚಕಾರಿ ಜೀವನದ ವರ್ಣನೆಯನ್ನು ದೃಢೀಕರಿಸುತ್ತಾ, ದೇವರು ಹೇಳುವುದು, “ಇಗೋ, ಎಲ್ಲವನ್ನು ಹೊಸದುಮಾಡುತ್ತೇನೆ.” (ಪ್ರಕಟನೆ 21:5) ದೇವರು ಮಾನವಕುಲಕ್ಕಾಗಿ ಮಾಡಲಿರುವ ಅದ್ಭುತಕರವಾದ ಕ್ರಿಯೆಗಳನ್ನು ಮಾನವ ಮಿದುಳು ಸಂಪೂರ್ಣವಾಗಿ ಗ್ರಹಿಸಿಕೊಳ್ಳಲು ಸಾಧ್ಯವಿಲ್ಲ. ದೇವರು ಏದೆನ್ ತೋಟದಂತೆಯೇ ಇರುವ ಲೋಕವ್ಯಾಪಕ ಪ್ರಮೋದವನವನ್ನು ಉಂಟುಮಾಡುವನು. (ಲೂಕ 23:43) ಏದೆನಿನಲ್ಲಿ ಇದ್ದಂತೆಯೇ, ಕಣ್ಣಿಗೆ ಹಬ್ಬವನ್ನುಂಟುಮಾಡುವ ಸುಂದರವಾದ ಬಣ್ಣಗಳು, ಹಿತಕರವಾದ ಶಬ್ದ ಮತ್ತು ಸ್ವಾದಗಳು ಹೇರಳವಾಗಿರುವವು. ಬಡತನ ಹಾಗೂ ಆಹಾರದ ಅಭಾವಗಳು ಇನ್ನಿರಲಾರವು, ಏಕೆಂದರೆ ಆ ಸಮಯದ ಕುರಿತು ಬೈಬಲು ಹೇಳುವುದು: “ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.” (ಪ್ರಕಟನೆ 21:4; ಕೀರ್ತನೆ 72:16) ಕಾಯಿಲೆಗಳನ್ನು ಸಂಪೂರ್ಣವಾಗಿ ತೆಗೆದುಹಾಕಲಿರುವುದರಿಂದ, ಯಾವನೂ “ತಾನು ಅಸ್ವಸ್ಥನು” ಎಂದು ಹೇಳನು. (ಯೆಶಾಯ 33:24) ಹೌದು, ಮರಣವೆಂಬ ಮಾನವಕುಲದ ದೀರ್ಘಕಾಲದ ಶತ್ರುವನ್ನು ಸೇರಿಸಿ, ವೇದನೆಯ ಎಲ್ಲ ಕಾರಣಗಳು ಇಲ್ಲದೆ ಹೋಗುವವು. (1 ಕೊರಿಂಥ 15:26) “ನೂತನ ಭೂಮಂಡಲ” ಅಂದರೆ, ಕ್ರಿಸ್ತನ ಆಳ್ವಿಕೆಯ ಕೆಳಗಿರುವ ಹೊಸ ಮಾನವ ಸಮಾಜದ ಅಚ್ಚರಿಗೊಳಿಸುವ ದರ್ಶನದಲ್ಲಿ, ಅಪೊಸ್ತಲ ಯೋಹಾನನು ಒಂದು ಶಬ್ದವನ್ನು ಕೇಳಿಸಿಕೊಂಡನು. ಅದು ಹೇಳಿದ್ದು: “[ದೇವರು] ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ.” ಈ ದೈವಿಕ ವಾಗ್ದಾನದ ನೆರವೇರಿಕೆಗಿಂತಲೂ ಹೆಚ್ಚಿನ ಸಾಂತ್ವನ ಹಾಗೂ ಆನಂದವನ್ನು ಯಾವುದು ಕೊಡಸಾಧ್ಯವಿದೆ?
ಭಾವೀ ಜೀವನದ ವರ್ಣನೆಯನ್ನು ನೀಡುವಾಗ, ಮನುಷ್ಯನ ನೈತಿಕ ಹಾಗೂ ಆತ್ಮಿಕ ಆಕಾಂಕ್ಷೆಗಳನ್ನು ಪೂರೈಸಲಿರುವ ವಿಚಾರಗಳನ್ನೇ ಬೈಬಲು ವಿಶೇಷವಾಗಿ ಒತ್ತಿಹೇಳುತ್ತದೆ. ಈ ವರೆಗೆ ಮಾನವಕುಲವು ಯಾವುದಕ್ಕಾಗಿ ವ್ಯರ್ಥವಾಗಿ ಹೋರಾಡಿದೆಯೊ ಆ ಎಲ್ಲ ನ್ಯಾಯವಾದ ಆದರ್ಶಗಳು ಈಗ ಸಂಪೂರ್ಣವಾಗಿ ನೆರವೇರುವವು. (ಮತ್ತಾಯ 6:10) ಇವುಗಳಲ್ಲಿ ನ್ಯಾಯಕ್ಕಾಗಿರುವ ಅಪೇಕ್ಷೆಯು ಒಂದಾಗಿದೆ. ದುರ್ಬಲರ ಮೇಲೆ ದಬ್ಬಾಳಿಕೆ ನಡೆಸಿರುವ ಕ್ರೂರ ಹಿಂಸಕರಿಂದ ಅನೇಕ ವೇಳೆ ಸಂಕಟಕ್ಕೀಡಾದ ಕಾರಣ, ಮಾನವನ ಈ ಅಪೇಕ್ಷೆಯು ನೆರವೇರದೆ ಉಳಿದಿದೆ. (ಪ್ರಸಂಗಿ 8:9) ಕ್ರಿಸ್ತನ ಆಳ್ವಿಕೆಯಲ್ಲಿರುವ ಪರಿಸ್ಥಿತಿಗಳ ಬಗ್ಗೆ ಕೀರ್ತನೆಗಾರನು ಪ್ರವಾದನಾತ್ಮಕವಾಗಿ ಬರೆದುದು: “ಅವನ ದಿವಸಗಳಲ್ಲಿ ಯಥಾರ್ಥತೆಯು ಏಳಿಗೆ ಹೊಂದುವುದು, ಮತ್ತು ಶಾಂತಿಯು ಹೇರಳವಾಗಿರುವುದು.”—ಕೀರ್ತನೆ 72:7, ದ ನ್ಯೂ ಜೆರೂಸಲೇಮ್ ಬೈಬಲ್.
ಸಮಾನತೆ ಮತ್ತೊಂದು ಆಕಾಂಕ್ಷೆಯಾಗಿದ್ದು, ಇದಕ್ಕಾಗಿ ಅನೇಕರು ತ್ಯಾಗಗಳನ್ನು ಮಾಡಿದ್ದಾರೆ. “ಹೊಸ ಸೃಷ್ಟಿಯಲ್ಲಿ” ದೇವರು ಭೇದಭಾವವನ್ನು ಅಳಿಸಿಬಿಡುವನು. (ಮತ್ತಾಯ 19:28) ಎಲ್ಲರೂ ಏಕಪ್ರಕಾರದ ಘನತೆಯನ್ನು ಅನುಭವಿಸುವರು. ಇದು ಯಾವುದೊ ಕಠೋರವಾದ ಸರಕಾರದಿಂದ ವಿಧಿಸಲ್ಪಡುವ ಸಮಾನತೆಯಾಗಿರದು. ಬದಲಿಗೆ, ಇತರರ ಮೇಲೆ ಅಧಿಕಾರ ನಡೆಸುವಂತೆ ಇಲ್ಲವೆ ಸಾಕಷ್ಟು ವಸ್ತುಗಳನ್ನು ಶೇಖರಿಸಿಟ್ಟುಕೊಳ್ಳುವಂತೆ ಪ್ರೇರಿಸುವ ಲೋಭ ಹಾಗೂ ಅಹಂಕಾರವು ಮಾತ್ರವಲ್ಲದೆ, ಭೇದಭಾವದ ಎಲ್ಲ ಕಾರಣಗಳು ತೊಡೆದುಹಾಕಲ್ಪಡುವವು. ಯೆಶಾಯನು ಪ್ರವಾದಿಸಿದ್ದು: “ಅಲ್ಲಿನ ಜನರು ತಾವು ಕಟ್ಟಿದ ಮನೆಗಳಲ್ಲಿ ತಾವೇ ವಾಸಿಸುವರು, ತಾವು ಮಾಡಿದ ತೋಟಗಳ ಫಲವನ್ನು ತಾವೇ ಅನುಭವಿಸುವರು. ಒಬ್ಬನು ಕಟ್ಟಿದ ಮನೆಯಲ್ಲಿ ಬೇರೊಬ್ಬನು ವಾಸಿಸನು; ಒಬ್ಬನು ಮಾಡಿದ ತೋಟದ ಫಲವು ಇನ್ನೊಬ್ಬನಿಗೆ ವಶವಾಗದು.”—ಯೆಶಾಯ 65:21, 22.
ವ್ಯಕ್ತಿಗತ ಹಾಗೂ ಸಾಮೂಹಿಕ ಕಾದಾಟಗಳಲ್ಲಿ ಸುರಿಸಲ್ಪಟ್ಟ ರಕ್ತದ ನಿಮಿತ್ತ ಮನುಷ್ಯನು ಎಷ್ಟೊಂದು ಕಷ್ಟಾನುಭವಿಸಿದ್ದಾನೆ! ಇದು ಹೇಬೆಲನ ಕೊಲೆಯಿಂದ ಹಿಡಿದು ಇಂದು ನಡೆಯುತ್ತಿರುವ ಯುದ್ಧಗಳ ವರೆಗೂ ಮುಂದುವರಿದಿದೆ. ವ್ಯರ್ಥವಾಗಿಯೊ ಎಂಬಂತೆ, ಶಾಂತಿ ಸ್ಥಾಪನೆಗಾಗಿ ಮನುಷ್ಯರು ದೀರ್ಘ ಸಮಯದಿಂದ ನಿರೀಕ್ಷಿಸಿ, ಕಾದಿದ್ದಾರೆ! ಪುನಸ್ಸ್ಥಾಪಿತ ಪ್ರಮೋದವನದಲ್ಲಿ ಎಲ್ಲ ಮನುಷ್ಯರು ಶಾಂತಿಪ್ರಿಯರೂ ದೀನರೂ ಆಗಿದ್ದು, ಅವರು ಶಾಂತಿಯ ಸಮೃದ್ಧಿಯಲ್ಲಿ “ಮಹಾಸೌಖ್ಯದಿಂದ ಆನಂದಿಸುವರು.”—ಕೀರ್ತನೆ 37:11.
ಯೆಶಾಯ 11:9 ಹೇಳುವುದು: “ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವದು.” ಪಿತ್ರಾರ್ಜಿತವಾಗಿ ಪಡೆದಿರುವ ಅಪರಿಪೂರ್ಣತೆಯ ಕಾರಣ, ಬೇರೆ ವಿಷಯಗಳ ಜೊತೆಗೆ ಈ ಮೇಲಿನ ಮಾತುಗಳ ವ್ಯಾಪ್ತಿಯನ್ನು ನಾವು ಸಂಪೂರ್ಣವಾಗಿ ಇಂದು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಯಾವ ರೀತಿಯಲ್ಲಿ ದೇವರ ಪರಿಪೂರ್ಣ ಜ್ಞಾನವು ನಮ್ಮನ್ನು ಆತನೊಂದಿಗೆ ಐಕ್ಯಗೊಳಿಸುವುದು, ಯಾವ ರೀತಿಯಲ್ಲಿ ಸಂಪೂರ್ಣ ಆನಂದದಲ್ಲಿ ಪರಿಣಮಿಸುವುದು ಎಂಬುದನ್ನು ನಾವು ಮುಂದೆ ಕಲಿತುಕೊಳ್ಳಬಹುದು. ಆದರೆ ಯೆಹೋವನು ಶಕ್ತಿ, ವಿವೇಕ, ನ್ಯಾಯ, ಮತ್ತು ಪ್ರೀತಿಯಲ್ಲಿ ಅದ್ಭುತನಾದ ದೇವರಾಗಿದ್ದಾನೆಂದು ಶಾಸ್ತ್ರಗಳು ನಮಗೆ ತಿಳಿಸುವುದರಿಂದ, “ನೂತನ ಭೂಮಂಡಲ”ದ ನಿವಾಸಿಗಳೆಲ್ಲರ ಪ್ರಾರ್ಥನೆಗಳನ್ನು ಆತನು ಆಲಿಸುವನೆಂಬ ದೃಢಭರವಸೆ ನಮಗಿರಸಾಧ್ಯವಿದೆ.
‘ವಾಸ್ತವವಾದ ಜೀವ’ವು ನಿಶ್ಚಯ—ಅದನ್ನು ಬಿಗಿಯಾಗಿ ಹಿಡಿದುಕೊಳ್ಳಿರಿ!
ಅನೇಕರಿಗೆ ಉತ್ತಮವಾದೊಂದು ಲೋಕದಲ್ಲಿ ಅನಂತ ಜೀವನವು, ಕೇವಲ ಒಂದು ಹಗಲುಗನಸು ಇಲ್ಲವೆ ಭ್ರಮೆಯಾಗಿದೆ. ಆದರೆ ಯಾರಿಗೆ ಬೈಬಲಿನ ವಾಗ್ದಾನದಲ್ಲಿ ನಿಜವಾದ ನಂಬಿಕೆಯಿದೆಯೊ, ಅಂತಹವರಿಗೆ ಈ ನಿರೀಕ್ಷೆಯು ಒಂದು ನಿಜ ಸಂಗತಿಯಾಗಿದೆ. ಅದು ಅವರ ಜೀವಿತಗಳಿಗೆ ಒಂದು ಲಂಗರಿನಂತಿದೆ. (ಇಬ್ರಿಯ 6:19) ಹಡಗೊಂದು ಸ್ಥಿರವಾಗಿದ್ದು ಹೊಯ್ದಾಡದಿರುವಂತೆ ಒಂದು ಲಂಗರು ಸಹಾಯ ಮಾಡುವಂತೆಯೇ, ಅನಂತ ಜೀವನದ ನಿರೀಕ್ಷೆಯು ಜನರಲ್ಲಿ ಸ್ಥಿರತೆಯನ್ನೂ ಭರವಸೆಯನ್ನೂ ಮೂಡಿಸಿ, ಜೀವಿತದ ಗಂಭೀರವಾದ ಕಷ್ಟಗಳನ್ನು ಎದುರಿಸಿ ಅವುಗಳನ್ನು ಜಯಿಸುವಂತೆಯೂ ಅವರನ್ನು ಶಕ್ತಗೊಳಿಸುವುದು.
ದೇವರು ತನ್ನ ವಾಗ್ದಾನಗಳನ್ನು ನೆರವೇರಿಸುವನೆಂಬ ವಿಷಯದಲ್ಲಿ ನಾವು ನಿಶ್ಚಿತರಾಗಿರಸಾಧ್ಯವಿದೆ. ಆತನು ಆಣೆಯಿಡುವ ಮೂಲಕ, ಅಂದರೆ ಬದಲಾಯಿಸಲಾಗದ ಮಾತನ್ನು ನುಡಿಯುವ ಮೂಲಕ ಖಾತರಿಯನ್ನೂ ಒದಗಿಸಿದ್ದಾನೆ. ಅಪೊಸ್ತಲ ಪೌಲನು ಬರೆದುದು: “ಹಾಗೆಯೇ ದೇವರು ತನ್ನ ಸಂಕಲ್ಪವು ನಿಶ್ಚಲವಾದದ್ದೆಂಬದನ್ನು ವಾಗ್ದಾನದ ಫಲಕ್ಕೆ ಬಾಧ್ಯರಾಗುವವರಿಗೆ ಬಹು ಸ್ಪಷ್ಟವಾಗಿ ತೋರಿಸಬೇಕೆಂದು ಆಣೆಯಿಟ್ಟು ತನ್ನ ಮಾತನ್ನು ಸ್ಥಿರಪಡಿಸಿದನು. . . . ನಮ್ಮ ಮುಂದೆ ಇಟ್ಟಿರುವ ನಿರೀಕ್ಷೆಯನ್ನು ಹಿಡುಕೊಂಡವರಾದ ನಮಗೆ ಎರಡು ನಿಶ್ಚಲವಾದ ಆಧಾರಗಳು ಇರುವ ಕಾರಣ ಬಲವಾದ ಧೈರ್ಯವುಂಟಾಯಿತು.” (ಇಬ್ರಿಯ 6:17, 18) ದೇವರು ಎಂದಿಗೂ ನಿರರ್ಥಕಗೊಳಿಸಲಾರದಂತಹ “ಎರಡು ನಿಶ್ಚಲವಾದ ಆಧಾರಗಳು,” ಆತನ ವಾಗ್ದಾನ ಮತ್ತು ಆತನಿಟ್ಟಿರುವ ಆಣೆಯೇ ಆಗಿವೆ. ಇವುಗಳ ಮೇಲೆಯೇ ನಮ್ಮ ನಿರೀಕ್ಷೆಗಳು ಆಧಾರಿಸಿವೆ.
ದೇವರ ವಾಗ್ದಾನಗಳಲ್ಲಿರುವ ನಂಬಿಕೆಯು, ಬಹಳಷ್ಟು ಸಾಂತ್ವನ ಹಾಗೂ ಆತ್ಮಿಕ ಬಲವನ್ನು ಒದಗಿಸುತ್ತದೆ. ಇಸ್ರಾಯೇಲ್ ಜನಾಂಗದ ಒಬ್ಬ ನಾಯಕನಾಗಿದ್ದ ಯೆಹೋಶುವನಿಗೆ ಇಂತಹ ನಂಬಿಕೆಯಿತ್ತು. ಯೆಹೋಶುವನು ಇಸ್ರಾಯೇಲ್ಯರಿಗೆ ತನ್ನ ಕೊನೆಯ ಭಾಷಣವನ್ನು ನೀಡಿದಾಗ ವೃದ್ಧನಾಗಿದ್ದನು ಮತ್ತು ತಾನು ಹೆಚ್ಚು ದಿನ ಬದುಕಲಾರನೆಂಬುದು ಅವನಿಗೆ ಗೊತ್ತಿತ್ತು. ಆದರೂ, ದೇವರ ವಾಗ್ದಾನಗಳಲ್ಲಿ ಸಂಪೂರ್ಣವಾಗಿ ಭರವಸೆಯಿಟ್ಟದ್ದರಿಂದ ಉಂಟಾದ ಬಲವನ್ನು ಹಾಗೂ ಮುರಿಯಲಾರದ ನಿಷ್ಠೆಯನ್ನು ಅವನು ವ್ಯಕ್ತಪಡಿಸಿದನು. “ಭೂಲೋಕದವರೆಲ್ಲರೂ ಹೋಗುವ ಮಾರ್ಗವನ್ನು,” ಅಂದರೆ ಎಲ್ಲ ಮಾನವಕುಲವನ್ನು ಮರಣಕ್ಕೆ ನಡೆಸುವ ದಾರಿಯಲ್ಲಿ ತಾನೂ ಹೋಗಲಿದ್ದೇನೆಂದು ಹೇಳಿದ ಮೇಲೆ, “ನಿಮ್ಮ ದೇವರಾದ ಯೆಹೋವನು ನಿಮ್ಮ ವಿಷಯದಲ್ಲಿ ನುಡಿದ ಆಶೀರ್ವಚನಗಳಲ್ಲಿ ಒಂದೂ ವ್ಯರ್ಥವಾಗಲಿಲ್ಲ; ಎಲ್ಲವೂ ತಪ್ಪದೆ ನೆರವೇರಿದವೆಂಬದು ನಿಮಗೆ ಮಂದಟ್ಟಾಯಿತಲ್ಲಾ” ಎಂದು ಯೆಹೋಶುವನು ಹೇಳಿದನು. ದೇವರು ತನ್ನ ಎಲ್ಲ ವಾಗ್ದಾನಗಳನ್ನು ನೆರವೇರಿಸುತ್ತಾನೆಂದು ಯೆಹೋಶುವನು ಮೂರು ಬಾರಿ ಪುನರಾವರ್ತಿಸಿ ನುಡಿದನು.—ಯೆಹೋಶುವ 23:14.
ಬೇಗನೆ ಸ್ಥಾಪಿಸಲ್ಪಡಲಿರುವ ದೇವರ ಹೊಸ ಲೋಕದ ವಾಗ್ದಾನದಲ್ಲಿ ನಿಮಗೂ ಅದೇ ರೀತಿಯ ನಂಬಿಕೆಯಿರಸಾಧ್ಯವಿದೆ. ಬೈಬಲನ್ನು ಶ್ರದ್ಧಾಪೂರ್ವಕವಾಗಿ ಅಭ್ಯಾಸಿಸುವ ಮೂಲಕ, ಯೆಹೋವನು ಯಾರು ಮತ್ತು ಆತನು ನಿಮ್ಮ ಪೂರ್ಣ ಭರವಸೆಗೆ ಏಕೆ ಯೋಗ್ಯನಾಗಿದ್ದಾನೆ ಎಂಬುದನ್ನು ನೀವು ತಿಳಿದುಕೊಳ್ಳುವಿರಿ. (ಪ್ರಕಟನೆ 4:11) ಅಬ್ರಹಾಮ, ಸಾರ, ಇಸಾಕ, ಯಾಕೋಬ ಮತ್ತು ಗತಕಾಲದ ಇತರ ನಂಬಿಗಸ್ತರಿಗೆ, ಸತ್ಯ ದೇವರಾದ ಯೆಹೋವನ ಗಾಢಪರಿಚಯವಿದ್ದುದ್ದರಿಂದ ಅಚಲವಾದ ನಂಬಿಕೆಯಿತ್ತು. ಅವರು ತಮ್ಮ ಜೀವಮಾನದಲ್ಲಿ “ವಾಗ್ದಾನದ ಫಲಗಳನ್ನು ಹೊಂದದೆ” ಇದ್ದರೂ, ನಿರೀಕ್ಷೆಯಲ್ಲಿ ದೃಢರಾಗಿದ್ದರು. ಆದರೂ, “ಅವುಗಳನ್ನು ದೂರದಿಂದ ನೋಡಿ ಉಲ್ಲಾಸದೊಡನೆ ವಂದಿಸಿ”ದರು.—ಇಬ್ರಿಯ 11:13.
ಬೈಬಲ್ ಪ್ರವಾದನೆಗಳನ್ನು ಅರ್ಥಮಾಡಿಕೊಳ್ಳುವ ಮೂಲಕ, “ಸರ್ವಶಕ್ತನಾದ ದೇವರ ಮಹಾದಿನದ” ಆಗಮನವನ್ನು ನಾವು ಎದುರುನೋಡುತ್ತೇವೆ. ಆಗ ಈ ಭೂಮಿಯಿಂದ ಎಲ್ಲ ದುಷ್ಟತನವು ತೆಗೆದುಹಾಕಲ್ಪಡುವುದು. (ಪ್ರಕಟನೆ 16:14, 16) ಗತಕಾಲದ ನಂಬಿಗಸ್ತ ಪುರುಷರಂತೆ, ನಾವು ನಂಬಿಕೆಯಿಂದ ಹಾಗೂ ದೇವರಿಗಾಗಿ ಮತ್ತು “ವಾಸ್ತವವಾದ ಜೀವ”ಕ್ಕಾಗಿರುವ ಪ್ರೀತಿಯಿಂದ ಪ್ರಚೋದಿತರಾಗಿ, ಭವಿಷ್ಯತ್ತಿನ ಘಟನೆಗಳ ನಿರೀಕ್ಷೆಯಲ್ಲಿ ಭರವಸೆಯಿಂದ ಉಳಿಯಬೇಕಾಗಿದೆ. ತೀರ ಹತ್ತಿರವಿರುವ ಹೊಸ ಲೋಕವು, ಯೆಹೋವನಲ್ಲಿ ನಂಬಿಕೆಯಿಡುವವರಿಗೆ ಮತ್ತು ಆತನನ್ನು ಪ್ರೀತಿಸುವವರಿಗೆ ಬಲವಾದ ಉತ್ತೇಜನವನ್ನು ನೀಡುತ್ತದೆ. ಸನ್ನಿಹಿತವಾಗಿರುವ ದೇವರ ಮಹಾ ದಿನದಲ್ಲಿ ಆತನ ಅನುಗ್ರಹ ಹಾಗೂ ಸಂರಕ್ಷಣೆಯನ್ನು ಪಡೆದುಕೊಳ್ಳುವ ಸಲುವಾಗಿ, ಇಂತಹ ನಂಬಿಕೆ ಹಾಗೂ ಪ್ರೀತಿಯನ್ನು ನಾವು ಬೆಳೆಸಿಕೊಳ್ಳಬೇಕಾಗಿದೆ.—ಚೆಫನ್ಯ 2:3; 2 ಥೆಸಲೊನೀಕ 1:3; ಇಬ್ರಿಯ 10:37-39.
ಹಾಗಾದರೆ, ನೀವು ಜೀವವನ್ನು ಪ್ರೀತಿಸುತ್ತೀರೊ? ಅದಕ್ಕಿಂತಲೂ ಹೆಚ್ಚಾಗಿ “ವಾಸ್ತವವಾದ ಜೀವ”ವನ್ನು, ಅಂದರೆ ಒಂದು ಸಂತೋಷಕರ ಭವಿಷ್ಯತ್ತಿನ ಪ್ರತೀಕ್ಷೆಯನ್ನು, ಹೌದು ಅನಂತ ಜೀವನದ ನೋಟದೊಂದಿಗೆ ದೇವರ ಅನುಗ್ರಹವುಳ್ಳ ಸೇವಕನ ಜೀವವನ್ನು ನೀವು ಬಯಸುತ್ತೀರೊ? ನೀವು ಅದನ್ನೇ ಬಯಸುವುದಾದರೆ, ಅಪೊಸ್ತಲ ಪೌಲನ ಬುದ್ಧಿವಾದಕ್ಕೆ ಲಕ್ಷ್ಯಕೊಡಿರಿ. ನಾವು ‘ಅಸ್ಥಿರವಾದ ಐಶ್ವರ್ಯದ ಮೇಲೆ ನಿರೀಕ್ಷೆಯನ್ನಿಡದೆ . . . ದೇವರ ಮೇಲೆ ನಿರೀಕ್ಷೆಯನ್ನಿಡಬೇಕೆಂದು’ ಅವನು ಬರೆದನು. ಪೌಲನು ಮುಂದುವರಿಸಿ ಹೇಳಿದ್ದು: “ವಾಸ್ತವವಾದ ಜೀವವನ್ನು ಹೊಂದುವದಕ್ಕೋಸ್ಕರ . . . ಸತ್ಕಾರ್ಯಗಳಲ್ಲಿ ಐಶ್ವರ್ಯವಂತ”ರಾಗಿರಿ. ಇದು ದೇವರಿಗೆ ಘನತೆಯನ್ನು ತರುತ್ತದೆ.—1 ತಿಮೊಥೆಯ 6:17-19.
ಬೈಬಲ್ ಅಧ್ಯಯನದ ನೀಡಿಕೆಯನ್ನು ಯೆಹೋವನ ಸಾಕ್ಷಿಗಳಿಂದ ಸ್ವೀಕರಿಸುವ ಮೂಲಕ, “ನಿತ್ಯ ಜೀವ”ವನ್ನು ದಯಪಾಲಿಸುವ ಜ್ಞಾನವನ್ನು ನೀವು ಪಡೆದುಕೊಳ್ಳಸಾಧ್ಯವಿದೆ. (ಯೋಹಾನ 17:3) ಪ್ರೀತಿಪೂರ್ಣವಾಗಿ, ಬೈಬಲು ಎಲ್ಲರಿಗೆ ಈ ಪಿತೃಸಹಜವಾದ ಆಮಂತ್ರಣವನ್ನು ನೀಡುತ್ತದೆ: “ಕಂದಾ, ನನ್ನ ಉಪದೇಶವನ್ನು ಮರೆಯಬೇಡ, ನನ್ನ ಆಜ್ಞೆಗಳನ್ನು ಮನಃಪೂರ್ವಕವಾಗಿ ನಡಿಸು. ಅವು ನಿನ್ನ ದಿನಗಳನ್ನು ಹೆಚ್ಚಿಸಿ ನಿನ್ನ ಆಯುಷ್ಯವನ್ನು ವೃದ್ಧಿಗೊಳಿಸಿ ನಿನಗೆ ಸುಕ್ಷೇಮವನ್ನುಂಟುಮಾಡುವವು.”—ಜ್ಞಾನೋಕ್ತಿ 3:1, 2.
[ಅಧ್ಯಯನ ಪ್ರಶ್ನೆಗಳು]
a ಈ ವಿಷಯದ ವಿಸ್ತೃತ ಪರಿಶೀಲನೆಗಾಗಿ, ವಾಚ್ಟವರ್ ಸೊಸೈಟಿಯು ಪ್ರಕಾಶಿಸಿದ, ನಾವು ಮೃತರಾದಾಗ ಏನು ಸಂಭವಿಸುತ್ತದೆ? (ಇಂಗ್ಲಿಷ್) ಎಂಬ ಬ್ರೋಷರನ್ನು ನೋಡಿರಿ.