ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w99 9/1 ಪು. 19-24
  • ನಿಮ್ಮ ಜೀವನವನ್ನು ಸಫಲಗೊಳಿಸಿರಿ!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿಮ್ಮ ಜೀವನವನ್ನು ಸಫಲಗೊಳಿಸಿರಿ!
  • ಕಾವಲಿನಬುರುಜು—1999
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ನಮಗೆ ದೇವರ ನಿಯಮಗಳ ಅಗತ್ಯವಿರುವ ಕಾರಣ
  • ‘ದಿನಗಳನ್ನು ಎಣಿಸುವುದು’
  • ತಪ್ಪಿತಸ್ಥರ ಬಗ್ಗೆ ಅಸೂಯೆಪಡುವುದರಿಂದ ದೂರವಿರಿ
  • ಒಡನಾಡಿಗಳ ವಿಷಯದಲ್ಲಿ ಜಾಗ್ರತೆ!
  • ಬೈಬಲ್‌ ವಾಚನದ ಪ್ರಯೋಜನಗಳು
  • ದೇವರ ಮಾರ್ಗದ ಅನುಸರಣೆಯು ಸಫಲತೆಗೆ ನಡೆಸುತ್ತದೆ
  • ಸಮೃದ್ಧಿಯು ನಿಮ್ಮ ನಂಬಿಕೆಯನ್ನು ಪರೀಕ್ಷಿಸಬಲ್ಲದು
    ಕಾವಲಿನಬುರುಜು—1993
  • ಯೆಹೋವನ ಮನಸ್ಸನ್ನು ಸಂತೋಷಪಡಿಸುವ ಯುವ ಜನರು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
  • ಇತರ ಯೌವನಸ್ಥರು ಏಕೆ ಎಲ್ಲಾ ವಿನೋದವನ್ನು ಅನುಭವಿಸುತ್ತಾರೆ?
    ಎಚ್ಚರ!—1996
  • ನೀವು ಹೇಗೆ ಯಶಸ್ವಿಗಳಾಗಬಲ್ಲಿರಿ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2007
ಇನ್ನಷ್ಟು
ಕಾವಲಿನಬುರುಜು—1999
w99 9/1 ಪು. 19-24

ನಿಮ್ಮ ಜೀವನವನ್ನು ಸಫಲಗೊಳಿಸಿರಿ!

‘ಯಾವನು ದುಷ್ಟರ ಆಲೋಚನೆಯಂತೆ ನಡೆಯದೆ . . . ಇರುವನೋ ಅವನು ಎಷ್ಟೋ ಧನ್ಯನು. . . . ಅವನ ಕಾರ್ಯವೆಲ್ಲವೂ ಸಫಲವಾಗುವದು.’—ಕೀರ್ತನೆ 1:1, 3.

1. (ಎ) ಲೋಕದ ಅನೇಕ ಯುವ ಜನರು ಸಫಲತೆಯನ್ನು ಹೇಗೆ ವೀಕ್ಷಿಸುತ್ತಾರೆ? (ಬಿ) ಒಬ್ಬ ಸಫಲ ವ್ಯಕ್ತಿಯನ್ನು ಬೈಬಲು ಹೇಗೆ ವರ್ಣಿಸುತ್ತದೆ?

ಸಫಲತೆ ಎಂಬ ಈ ಪದವು ನಿಮಗೆ ಏನನ್ನು ಅರ್ಥೈಸುತ್ತದೆ? “ವ್ಯಾಪಾರ ಉದ್ಯಮದಲ್ಲಿ ಸಫಲನಾಗುವುದೇ ನನ್ನ ಪರಮ ಧ್ಯೇಯವಾಗಿದೆ” ಎಂದು ಒಬ್ಬ ಯುವಕನು ಹೇಳಿದನು. “ಸುಖೀ ಕುಟುಂಬ ಜೀವನವನ್ನು ಅನುಭವಿಸುವುದೇ ನನ್ನ ಮಹತ್ವಾಕಾಂಕ್ಷೆಯಾಗಿದೆ” ಎಂದು ಹದಿವಯಸ್ಕಳೊಬ್ಬಳು ಹೇಳಿದಳು. ಆದರೆ, ಮತ್ತೊಬ್ಬ ಯುವತಿಯು ಹೇಳಿದ್ದು: “ಒಂದು ಸುಂದರವಾದ ಮನೆ, ಸೊಗಸಾದ ಕಾರನ್ನು . . . ಪಡೆದಿರುವುದೇ ನನ್ನ ಆಸೆ. . . . ನಾನು ನನ್ನ ಬಗ್ಗೆ ಚಿಂತಿಸುತ್ತೇನೆ ಅಷ್ಟೇ.” ಆದರೆ ಸಮಸ್ಯೆಯೇನೆಂದರೆ, ಹಣವಾಗಲಿ, ಕುಟುಂಬವಾಗಲಿ, ಲಾಭಕರವಾದ ಉದ್ಯೋಗವೇ ಆಗಲಿ, ನಿಜವಾದ ಸಫಲತೆಗೆ ಸೋಪಾನವಾಗಿರುವುದಿಲ್ಲ. ಕೀರ್ತನೆ 1:1-3ರಲ್ಲಿ ನಾವು ಓದುವುದು: ‘ಯಾವನು ದುಷ್ಟರ ಆಲೋಚನೆಯಂತೆ ನಡೆಯದೆ . . . ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದಪಡುವವನಾಗಿ . . . ಇರುವನೋ ಅವನು ಎಷ್ಟೋ ಧನ್ಯನು. . . . ಅವನ ಕಾರ್ಯವೆಲ್ಲವೂ ಸಫಲವಾಗುವದು.’

2. ನಿಜವಾದ ಸಫಲತೆಯನ್ನು ಎಲ್ಲಿ ಕಂಡುಕೊಳ್ಳಬಹುದು, ಮತ್ತು ಅದನ್ನು ಪಡೆದುಕೊಳ್ಳಸಾಧ್ಯವಿರುವ ಏಕೈಕ ವಿಧಾನವು ಯಾವುದು?

2 ಯಾವ ಮನುಷ್ಯನೂ ನೀಡಸಾಧ್ಯವಿರದಂತಹ ವಿಷಯವನ್ನು ಬೈಬಲು ಇಲ್ಲಿ ವಾಗ್ದಾನಿಸುತ್ತದೆ. ಅದು ಯಥಾರ್ಥವಾದ ಸಫಲತೆಯೇ ಆಗಿದೆ! ಆದರೆ ಅದು ಹಣಕಾಸಿನ ಲಾಭದ ಕುರಿತು ಹೇಳುತ್ತಿಲ್ಲ. ಬೈಬಲು ತಾನೇ ಎಚ್ಚರಿಸುವುದು: “ಹಣದಾಸೆಯು ಸಕಲವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ.” (1 ತಿಮೊಥೆಯ 6:10) ದೇವರನ್ನು ಮೆಚ್ಚಿಸುವ ಮೂಲಕ, ಅಂದರೆ ಯೆಹೋವನ ನಿಯಮವನ್ನು ಅನುಸರಿಸುವ ಮೂಲಕ ನಾವು ನಿಜವಾದ ಸಫಲತೆಯನ್ನು ಕಂಡುಕೊಳ್ಳಸಾಧ್ಯವಿದೆ. ನಿಜವಾದ ಸಂತೃಪ್ತಿ ಹಾಗೂ ಯಥಾರ್ಥವಾದ ಸಂತೋಷಕ್ಕೆ ಇದೇ ಮೂಲವಾಗಿದೆ! ಆದರೆ, ಯೆಹೋವನ ನಿಯಮಕ್ಕೆ ಅಧೀನವಾಗಿದ್ದು, ಮಾಡಬೇಕಾದ ಎಲ್ಲ ವಿಷಯಗಳ ಬಗ್ಗೆ ನಿರ್ದೇಶಿಸಲ್ಪಡುವಂತಹ ವಿಚಾರವು ಅಷ್ಟೇನೂ ಆಕರ್ಷಕವಾಗಿರಲಾರದು. ಹಾಗಿದ್ದರೂ, ಯೇಸು ಹೇಳಿದ್ದು: “ತಮ್ಮ ಆತ್ಮಿಕ ಅಗತ್ಯದ ಅರಿವುಳ್ಳವರು ಸಂತೋಷಿತರು.” (ಮತ್ತಾಯ 5:3, NW) ನೀವು ಆತ್ಮಿಕ ಅಗತ್ಯಗಳೊಂದಿಗೆ ಸೃಷ್ಟಿಸಲ್ಪಟ್ಟಿದ್ದೀರಿ ಎಂಬುದು ಅಲ್ಲಗಳೆಯಲಾಗದ ವಿಷಯವಾಗಿದೆ. ಇದರಲ್ಲಿ, ದೇವರನ್ನು ಅರಿತುಕೊಳ್ಳುವ ಮತ್ತು ಆತನ ಉದ್ದೇಶಗಳನ್ನು ತಿಳಿದುಕೊಳ್ಳುವ ತೀವ್ರವಾದ ಅಗತ್ಯವೂ ಸೇರಿರುತ್ತದೆ. ಆದುದರಿಂದ, ಈ ಅಗತ್ಯಗಳನ್ನು ಪೂರೈಸಿ, “ಯೆಹೋವನ ಧರ್ಮಶಾಸ್ತ್ರ”ವನ್ನು ಅನುಸರಿಸುವುದಾದರೆ ಮಾತ್ರ, ನೀವು ನಿಜವಾದ ಸಂತೋಷವನ್ನು ಅನುಭವಿಸಸಾಧ್ಯವಿದೆ.

ನಮಗೆ ದೇವರ ನಿಯಮಗಳ ಅಗತ್ಯವಿರುವ ಕಾರಣ

3. ಯೆಹೋವನು ‘ನಮ್ಮ ಹೆಜ್ಜೆಗಳನ್ನು ಮಾರ್ಗದರ್ಶಿಸುವಂತೆ’ ಅನುಮತಿಸಲು ನಾವು ಸಂತೋಷಿತರಾಗಿರಬೇಕು ಏಕೆ?

3 ಪ್ರವಾದಿಯಾದ ಯೆರೆಮೀಯನು ಬರೆದುದು: “ಯೆಹೋವನೇ, ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿಲ್ಲವೆಂದು ನನಗೆ ಗೊತ್ತು; ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.” (ಯೆರೆಮೀಯ 10:23) ಇದು ಆಬಾಲವೃದ್ಧರನ್ನು ಸೇರಿಸಿ, ಎಲ್ಲ ಮಾನವರ ವಿಷಯದಲ್ಲಿ ಸತ್ಯವಾಗಿದೆ. ನಮ್ಮ ಸ್ವಂತ ಹೆಜ್ಜೆಗಳನ್ನು ಸರಿಯಾದ ಮಾರ್ಗದಲ್ಲಿ ನಡೆಸಲು ಅಗತ್ಯವಾದ ವಿವೇಕ, ಅನುಭವ, ಮತ್ತು ಜ್ಞಾನದ ಕೊರತೆ ನಮ್ಮಲ್ಲಿರುವುದರ ಜೊತೆಗೆ, ಹಾಗೆ ನಡೆಸುವ ಹಕ್ಕು ಸಹ ನಮಗೆ ಇರುವುದಿಲ್ಲ. ಪ್ರಕಟನೆ 4:11ರಲ್ಲಿ (NW) ಬೈಬಲು ಹೇಳುವುದು: “ಯೆಹೋವನೇ, ನಮ್ಮ ದೇವರು ಕೂಡ, ನೀನು ಮಹಿಮೆ, ಗೌರವ ಮತ್ತು ಶಕ್ತಿಯನ್ನು ಪಡೆಯಲು ಅರ್ಹನು, ಏಕೆಂದರೆ ಸಕಲ ಸಂಗತಿಗಳನ್ನು ನೀನು ಸೃಷ್ಟಿಸಿದ್ದೀ, ಮತ್ತು ನಿನ್ನ ಚಿತ್ತದ ಕಾರಣ ಅವು ಅಸ್ತಿತ್ವಕ್ಕೆ ಬಂದವು ಮತ್ತು ಸೃಷ್ಟಿಸಲ್ಪಟ್ಟವು.” ನಮ್ಮ ಸೃಷ್ಟಿಕರ್ತನೋಪಾದಿ, ಯೆಹೋವನು “ಜೀವದ ಬುಗ್ಗೆ” ಆಗಿದ್ದಾನೆ. (ಕೀರ್ತನೆ 36:9) ಈ ಕಾರಣ, ನಾವು ನಮ್ಮ ಜೀವಿತಗಳನ್ನು ಹೇಗೆ ಉಪಯೋಗಿಸಬೇಕೆಂಬುದರ ಕುರಿತು, ಇತರರಿಗಿಂತಲೂ ಹೆಚ್ಚು ಉತ್ತಮವಾಗಿ ಆತನಿಗೆ ತಿಳಿದಿದೆ. ಆದುದರಿಂದ, ನಮ್ಮಿಂದ ಸಂತೋಷವನ್ನು ಕಸಿದುಕೊಳ್ಳುವ ಉದ್ದೇಶದಿಂದಲ್ಲ, ಬದಲಿಗೆ ನಾವು ಸ್ವತಃ ಪ್ರಯೋಜನ ಪಡೆದುಕೊಳ್ಳುವಂತೆ ನಮಗೆ ಸಹಾಯ ಮಾಡಲಿಕ್ಕಾಗಿ ಆತನು ನಿಯಮಗಳನ್ನು ರಚಿಸಿದನು. (ಯೆಶಾಯ 48:17) ದೇವರ ನಿಯಮವನ್ನು ಕಡೆಗಣಿಸುವಲ್ಲಿ, ನೀವು ವಿಫಲರಾಗುವಿರಿ ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ.

4. ಅನೇಕ ಯುವ ಜನರು ತಮ್ಮ ಜೀವಿತಗಳನ್ನು ನಾಶಪಡಿಸಿಕೊಳ್ಳುವುದು ಏಕೆ?

4 ಉದಾಹರಣೆಗೆ, ಅನೇಕಾನೇಕ ಯುವ ಜನರು ತಮ್ಮ ಜೀವಿತಗಳನ್ನು, ಅಮಲೌಷಧಗಳು, ಸ್ವೇಚ್ಛಾಚಾರ, ಮತ್ತು ಇತರ ದುಶ್ಚಟಗಳಿಂದಾಗಿ ನಾಶಪಡಿಸಿಕೊಳ್ಳುತ್ತಿರುವುದು ಏಕೆಂದು ನೀವು ಎಂದಾದರೂ ಯೋಚಿಸಿದ್ದೀರೊ? ಕೀರ್ತನೆ 36:1, 2 ವಿವರಿಸುವುದು: “ಪಾಪವು ದುಷ್ಟನ ಮನಸ್ಸಿನೊಳಗೆ ನುಡಿಯುತ್ತಿರುವದರಿಂದ ಅವನ ಕಣ್ಣೆದುರಿಗೆ ದೇವರ ಭಯವೇ ಇಲ್ಲ. ಅದು ಅವರನ್ನು ವಂಚಿಸಿ—ನಿನ್ನ ತಪ್ಪು ಬೈಲಿಗೆ ಬರುವದಿಲ್ಲ. ಹೇಯವಾಗುವದಿಲ್ಲ ಎಂದು ಊದಿಬಿಡುತ್ತದೆ.” ಅವರಲ್ಲಿ ಸ್ವಸ್ಥಕರವಾದ “ದೇವರ ಭಯವೇ” ಇಲ್ಲದಿರುವುದರಿಂದ, ಕೆಟ್ಟ ವರ್ತನೆಗೆ ಯಾವ ಪರಿಣಾಮಗಳೂ ಇರುವುದಿಲ್ಲವೆಂದು ನೆನಸುತ್ತಾ, ಅನೇಕ ಯುವ ಜನರು ಸ್ವತಃ ಮೋಸಕ್ಕೊಳಗಾಗುತ್ತಾರೆ. ಆದರೆ, ಕಟ್ಟಕಡೆಗೆ ಎಂದೂ ಬದಲಾಗದ ಈ ಸತ್ಯವನ್ನು ಅವರು ಎದುರಿಸಲೇಬೇಕು: “ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು. ತನ್ನ ಶರೀರಭಾವವನ್ನು ಕುರಿತು ಬಿತ್ತುವವನು ಆ ಭಾವದಿಂದ ನಾಶನವನ್ನು ಕೊಯ್ಯುವನು. ಆತ್ಮನನ್ನು ಕುರಿತು ಬಿತ್ತುವವನು ಆತ್ಮನಿಂದ ನಿತ್ಯಜೀವವನ್ನು ಕೊಯ್ಯುವನು.”—ಗಲಾತ್ಯ 6:7, 8.

‘ದಿನಗಳನ್ನು ಎಣಿಸುವುದು’

5, 6. (ಎ) ಯುವ ಜನರು ‘ತಮ್ಮ ದಿನಗಳನ್ನು ಎಣಿಸಬೇಕು’ ಏಕೆ, ಮತ್ತು ಹಾಗೆ ಎಣಿಸುವುದರ ಅರ್ಥವೇನಾಗಿದೆ? (ಬಿ) ‘ನಮ್ಮ ಸೃಷ್ಟಿಕರ್ತನನ್ನು ಸ್ಮರಿಸಿಕೊಳ್ಳುವುದರ’ ಅರ್ಥವೇನಾಗಿದೆ?

5 ನಿಮ್ಮ ಜೀವನವನ್ನು ಸಫಲಗೊಳಿಸಿ, “ನಿತ್ಯಜೀವವನ್ನು ಕೊಯ್ಯ”ಸಾಧ್ಯವಾಗುವಂತೆ ನೀವು ಏನು ಮಾಡಬಲ್ಲಿರಿ? ಮೋಶೆಯು ಬರೆದುದು: “ನಮ್ಮ ಆಯುಷ್ಕಾಲವು ಎಪ್ಪತ್ತು ವರುಷ; ಬಲ ಹೆಚ್ಚಿದ್ದರೆ ಎಂಭತ್ತು. . . . ಅದು ಬೇಗನೆ ಗತಿಸಿಹೋಗುತ್ತದೆ; ನಾವು ಹಾರಿ ಹೋಗುತ್ತೇವೆ.” (ಕೀರ್ತನೆ 90:10) ನೀವು ಮರಣದ ಬಗ್ಗೆ ಯೋಚಿಸುವುದೇ ವಿರಳ. ವಾಸ್ತವದಲ್ಲಿ ಅನೇಕ ಯುವ ಜನರು, ತಾವು ಅವಿನಾಶಿಗಳೊ ಎಂಬಂತೆ ನಡೆದುಕೊಳ್ಳುತ್ತಾರೆ. ಆದರೆ ಜೀವನವು ಅಲ್ಪಕಾಲದ್ದೆಂಬ ವೇದನಾಮಯ ನಿಜತ್ವವನ್ನು ಮೋಶೆಯು ನಮ್ಮ ಮುಂದೆ ಸಾದರಪಡಿಸುತ್ತಾನೆ. ಕೆಲವೊಮ್ಮೆ ನಾವು 70 ಇಲ್ಲವೆ 80 ವರ್ಷಗಳ ವರೆಗೆ ಜೀವಿಸುವೆವೆಂಬ ಖಾತ್ರಿಯೂ ನಮಗಿರುವುದಿಲ್ಲ. “ಕಾಲವೂ ಮುಂಗಾಣದ ಸಂಭವವೂ,” ಯುವ ಪ್ರಾಯದವರ ಮತ್ತು ಆರೋಗ್ಯವಂತರ ಜೀವವನ್ನೂ ತೆಗೆದುಕೊಳ್ಳಬಹುದು. (ಪ್ರಸಂಗಿ 9:11, NW) ಹಾಗಾದರೆ, ಈಗ ನೀವು ಅನುಭವಿಸುತ್ತಿರುವ ಈ ಅಮೂಲ್ಯವಾದ ಜೀವನವನ್ನು ಹೇಗೆ ಉಪಯೋಗಿಸುವಿರಿ? ಮೋಶೆಯು ಪ್ರಾರ್ಥಿಸಿದ್ದು: “ನಾವು ವಿವೇಕದ ಹೃದಯವನ್ನು ಪಡೆದುಕೊಳ್ಳುವ ವಿಧದಲ್ಲಿ, ನಮ್ಮ ದಿನಗಳನ್ನು ಹೇಗೆ ಎಣಿಸಬೇಕೆಂಬುದನ್ನು ನಮಗೆ ತೋರಿಸು.”—ಕೀರ್ತನೆ 90:12, NW.

6 ನಿಮ್ಮ ದಿನಗಳನ್ನು ಎಣಿಸುವುದು ಎಂಬುದರ ಅರ್ಥವೇನಾಗಿದೆ? ಇದು, ನೀವು ಎಷ್ಟು ದೀರ್ಘಕಾಲ ಬದುಕಬಹುದೆಂಬ ವಿಚಾರದ ಕುರಿತೇ ಸದಾ ಯೋಚಿಸುತ್ತಿರುವುದನ್ನು ಅರ್ಥೈಸುವುದಿಲ್ಲ. ಬದಲಿಗೆ ಯೆಹೋವನ ಜನರು, ಆತನಿಗೆ ಗೌರವವನ್ನು ತರುವಂತಹ ರೀತಿಯಲ್ಲಿ ತಮ್ಮ ಉಳಿದ ದಿನಗಳನ್ನು ಹೇಗೆ ಉಪಯೋಗಿಸಸಾಧ್ಯವಿದೆ ಎಂಬುದನ್ನು ಆತನು ಅವರಿಗೆ ಕಲಿಸಿಕೊಡುವಂತೆ ಮೋಶೆಯು ಪ್ರಾರ್ಥಿಸುತ್ತಿದ್ದನು. ದೇವರ ಸ್ತುತಿಗಾಗಿ ಉಪಯೋಗಿಸಸಾಧ್ಯವಿರುವ ಪ್ರತಿಯೊಂದು ದಿನವನ್ನು ಒಂದು ಅತ್ಯಮೂಲ್ಯ ಮಾಧ್ಯಮವಾಗಿ ವೀಕ್ಷಿಸುತ್ತಾ, ನೀವು ನಿಮ್ಮ ಜೀವಿತದ ದಿನಗಳನ್ನು ಎಣಿಸುತ್ತಿದ್ದೀರೊ? “ನಿನ್ನ ಹೃದಯದಿಂದ ಕರಕರೆಯನ್ನೂ ದೇಹದಿಂದ ಶ್ರಮೆಯನ್ನೂ ತೊಲಗಿಸು; ಬಾಲ್ಯವೂ ಪ್ರಾಯವೂ ವ್ಯರ್ಥವಷ್ಟೆ. . . . ಯೌವನದಲ್ಲಿಯೇ ನಿನ್ನ ಸೃಷ್ಟಿಕರ್ತನನ್ನು ಸ್ಮರಿಸು” ಎಂಬ ಉತ್ತೇಜನವನ್ನು ಬೈಬಲು ಯುವ ಜನರಿಗೆ ಕೊಡುತ್ತದೆ. (ಪ್ರಸಂಗಿ 11:10-12:1) ಸೃಷ್ಟಿಕರ್ತನನ್ನು ಸ್ಮರಿಸುವುದು, ಆತನು ಅಸ್ತಿತ್ವದ್ದಲ್ಲಿದ್ದಾನೆಂದು ನಂಬುವುದನ್ನು ಮಾತ್ರ ಅರ್ಥೈಸುವುದಿಲ್ಲ. “ನೀನು ನಿನ್ನ ರಾಜ್ಯವನ್ನು ಪಡೆದವನಾಗಿ ಬರುವಾಗ ನನ್ನನ್ನು ನೆನಸಿಕೋ” ಎಂದು ಒಬ್ಬ ಅಪರಾಧಿಯು ಕ್ರಿಸ್ತನಲ್ಲಿ ಬೇಡಿಕೊಂಡಾಗ, ತನ್ನ ಹೆಸರನ್ನು ಜ್ಞಾಪಿಸಿಕೊಳ್ಳುವುದಕ್ಕಿಂತಲೂ ಹೆಚ್ಚಿನದ್ದನ್ನು ಯೇಸು ಮಾಡಬೇಕೆಂದು ಅವನು ಬಯಸಿದನು. ಯೇಸು ಕ್ರಿಯೆಗೈಯುವಂತೆ, ಅಂದರೆ ತನ್ನನ್ನು ಪುನರುತ್ಥಾನಗೊಳಿಸುವಂತೆ ಅವನು ಬಯಸಿದನು! (ಲೂಕ 23:42; ಹೋಲಿಸಿ ಆದಿಕಾಂಡ 40:14, 23; ಯೋಬ 14:13.) ಅಂತೆಯೇ, ಯೆಹೋವನನ್ನು ಸ್ಮರಿಸುವುದರಲ್ಲಿ, ಕ್ರಿಯೆಗಳು ಅಥವಾ ಆತನನ್ನು ಮೆಚ್ಚಿಸುವ ಕಾರ್ಯಗಳು ಸೇರಿರುತ್ತವೆ. ನೀವು ಯೆಹೋವನನ್ನು ಸ್ಮರಿಸುತ್ತಿದ್ದೀರಿ ಎಂದು ಹೇಳಸಾಧ್ಯವಿದೆಯೊ?

ತಪ್ಪಿತಸ್ಥರ ಬಗ್ಗೆ ಅಸೂಯೆಪಡುವುದರಿಂದ ದೂರವಿರಿ

7. ಕೆಲವು ಯುವ ಜನರು ತಮ್ಮ ಸೃಷ್ಟಿಕರ್ತನನ್ನು ಮರೆತುಬಿಡಲು ಆಯ್ದುಕೊಳ್ಳುವುದೇಕೆ? ಉದಾಹರಣೆಯೊಂದನ್ನು ಕೊಡಿರಿ.

7 ಸಾಕ್ಷಿಯಾಗಿರುವುದರಿಂದ ತಾವು ಬಹಳವಾಗಿ ನಿರ್ಬಂಧಿಸಲ್ಪಡುವೆವೆಂಬ ಕಾರಣಕ್ಕಾಗಿ ಅನೇಕ ಯುವ ಜನರು, ಯೆಹೋವನನ್ನು ಮರೆತುಬಿಡಲು ಆರಿಸಿಕೊಳ್ಳುತ್ತಾರೆ. ಸ್ಪೇಯ್ನ್‌ನ ಒಬ್ಬ ಸಹೋದರನು ತನ್ನ ಹದಿಹರೆಯದ ಭಾವನೆಗಳನ್ನು ಜ್ಞಾಪಿಸಿಕೊಳ್ಳುವುದು: “ನಾನು ಲೋಕದ ಆಕರ್ಷಣೆಗೆ ಸುಲಭವಾಗಿ ಏಕೆ ಸೋತುಹೋದೆನೆಂದರೆ, ನನಗೆ ಸತ್ಯವು ಕಠಿನವೂ ಅನಮ್ಯವೂ ಆಗಿ ತೋರಿತು. ಅದು ಶಿಸ್ತಿನಿಂದ ಕುಳಿತುಕೊಳ್ಳುವುದನ್ನು, ಅಧ್ಯಯನ ಮಾಡುವುದನ್ನು, ಕೂಟಗಳಿಗೆ ಹೋಗುವುದನ್ನು, ಟೈ ಕಟ್ಟಿಕೊಳ್ಳುವುದನ್ನು ಅಗತ್ಯಪಡಿಸಿತು. ಆದರೆ ನನಗೆ ಇಂತಹ ವಿಷಯಗಳನ್ನು ಮಾಡುವುದರಲ್ಲಿ ಯಾವ ಆಸಕ್ತಿಯೂ ಇರಲಿಲ್ಲ.” ನೀವು ದೇವರ ಸೇವೆಯನ್ನು ಮಾಡುತ್ತಿರುವುದರಿಂದ ಏನನ್ನೊ ಕಳೆದುಕೊಳ್ಳುತ್ತಿದ್ದೀರೆಂದು ನಿಮಗೆ ಕೆಲವೊಮ್ಮೆ ಅನಿಸುತ್ತದೊ? ಬೈಬಲಿನ ಬರಹಗಾರರಲ್ಲಿ ಒಬ್ಬನು, ಇದೇ ರೀತಿಯ ಅನಿಸಿಕೆಗಳುಳ್ಳವನಾಗಿದ್ದನು ಎಂಬುದನ್ನು ತಿಳಿದುಕೊಳ್ಳುವುದು ನಿಮಗೆ ಆಶ್ಚರ್ಯವನ್ನು ಉಂಟುಮಾಡಬಹುದು. ನಿಮ್ಮ ಬೈಬಲನ್ನು ಕೀರ್ತನೆ 73ನೆಯ ಅಧ್ಯಾಯಕ್ಕೆ ತೆರೆದು, ಅದನ್ನು ದಯವಿಟ್ಟು ಓದಿರಿ.

8. ಆಸಾಫನು ಏಕೆ “ಜಂಬಗಾರರ ವಿಷಯದಲ್ಲಿ ಅಸೂಯೆಪಟ್ಟನು”?

8 ಈ ಕೀರ್ತನೆಯನ್ನು ನಾವು ವಿಸ್ತೃತವಾಗಿ ಪರಿಶೀಲಿಸೋಣ. 2ನೆಯ ಮತ್ತು 3ನೆಯ ವಚನಗಳು ಹೇಳುವುದು: “ನಾನು ದುಷ್ಟರ ಸೌಭಾಗ್ಯವನ್ನು ಕಂಡು ಸೊಕ್ಕಿನವರ ಮೇಲೆ ಉರಿಗೊಂಡೆನು [“ಜಂಬಗಾರರ ವಿಷಯದಲ್ಲಿ ಅಸೂಯೆಪಟ್ಟೆನು,” NW]. ನನ್ನ ಕಾಲುಗಳು ಜಾರಿದವುಗಳೇ; ನನ್ನ ಹೆಜ್ಜೆಗಳು ತಪ್ಪಿದವುಗಳೇ.” ಈ ಕೀರ್ತನೆಯನ್ನು ಆಸಾಫನು ಬರೆದನೆಂಬುದನ್ನು ಅದರ ಮೇಲ್ಬರಹವು ತೋರಿಸುತ್ತದೆ. ಆಸಾಫನು ಲೇವಿಯ ಕುಲದ ಸಂಗೀತಗಾರನಾಗಿದ್ದು, ರಾಜ ದಾವೀದನ ಸಮಕಾಲೀನ ವ್ಯಕ್ತಿಯಾಗಿದ್ದನು. (1 ಪೂರ್ವಕಾಲವೃತ್ತಾಂತ 25:1, 2; 2 ಪೂರ್ವಕಾಲವೃತ್ತಾಂತ 29:30) ದೇವರ ಆಲಯದಲ್ಲಿ ಸೇವೆಸಲ್ಲಿಸುವ ಅತ್ಯುತ್ತಮ ಸುಯೋಗವು ಅವನಿಗಿದ್ದರೂ, ನಿಯಮರಾಹಿತ್ಯದ ಬಗ್ಗೆ ಜಂಬಕೊಚ್ಚಿಕೊಂಡವರನ್ನು ನೋಡಿ ಅವನು ‘ಅಸೂಯೆಪಟ್ಟನು.’ ಅವರು ಶಾಂತಿ ಮತ್ತು ಭದ್ರತೆಯಲ್ಲಿ ಆನಂದಿಸುತ್ತಾ, ಸುಖದ ಸುಪ್ಪತ್ತಿಗೆಯಲ್ಲಿರುವಂತೆ ಅವನಿಗೆ ತೋರಿತು. ವಾಸ್ತವದಲ್ಲಿ ಅವರ ಸಫಲತೆಯು, ‘ಅವರ ಹೃದಯಗಳ ಕಲ್ಪನೆಗಳನ್ನೂ ಮೀರಿದ್ದವು.’ (ವಚನಗಳು 5, 7) ಅವರು ತಮ್ಮ ಸಾಹಸಕಾರ್ಯಗಳ ಬಗ್ಗೆ “ಹೆಮ್ಮೆ”ಪಟ್ಟುಕೊಂಡರು, ಅಂದರೆ ಅಹಂಕಾರದಿಂದ ಮಾತಾಡಿದರು. (ವಚನ 8) ಅವರು ಪರಲೋಕದಲ್ಲಾಗಲಿ ಭೂಲೋಕದಲ್ಲಾಗಲಿ ಇರುವ ಯಾರನ್ನೂ ಲೆಕ್ಕಿಸದೆ, “ಮೇಲುಲೋಕದವರೋ ಎಂಬಂತೆ ದೊಡ್ಡ ಬಾಯಿಮಾಡುತ್ತಾರೆ. ಭೂಲೋಕದಲ್ಲೆಲ್ಲಾ ಅವರ ಮಾತೇ ಮುಂದು.”—ವಚನ 9.

9. ಇಂದು ಕೆಲವು ಕ್ರೈಸ್ತ ಯುವ ಜನರು ಆಸಾಫನಂತೆ ಹೇಗೆ ಯೋಚಿಸಬಹುದು?

9 ಬಹುಶಃ ಶಾಲೆಯಲ್ಲಿರುವ ನಿಮ್ಮ ಸಮಾನಸ್ಥರ ಕುರಿತಾಗಿಯೂ ಇದನ್ನೇ ಹೇಳಸಾಧ್ಯವಿದೆ. ಅವರು ತಮ್ಮ ಲೈಂಗಿಕ ಸ್ವೇಚ್ಛಾವರ್ತನೆಯ ಕುರಿತು, ಅಸಭ್ಯ ಪಾರ್ಟಿಗಳ ಕುರಿತು, ಮತ್ತು ಮದ್ಯಸಾರ ಹಾಗೂ ಅಮಲೌಷಧಗಳಲ್ಲಿ ತಾವು ಲೋಲುಪರಾದ ವಿಷಯದ ಕುರಿತು ನಾಚಿಕೆಯಿಲ್ಲದೆ ಬಡಾಯಿಕೊಚ್ಚಿಕೊಳ್ಳುವುದನ್ನು ನೀವು ಕೇಳಿಸಿಕೊಂಡಿರಬಹುದು. ಅವರ ಸುಖವಿಲಾಸದ ಜೀವನವನ್ನು, ಕ್ರೈಸ್ತರೋಪಾದಿ ನೀವು ನಡೆಯಬೇಕಾದ ಇಕ್ಕಟ್ಟಾದ ದಾರಿಗೆ ಹೋಲಿಸುವಾಗ, ಕೆಲವೊಮ್ಮೆ ನೀವು “ಜಂಬಗಾರರ ವಿಷಯದಲ್ಲಿ ಅಸೂಯೆ”ಪಡಬಹುದು. (ಮತ್ತಾಯ 7:13, 14) ಆಸಾಫನು ಎಂತಹ ಮಟ್ಟವನ್ನು ತಲಪಿದನೆಂದರೆ, ಅವನು ಘೋಷಿಸಿದ್ದು: “ನನ್ನ ಮನಸ್ಸನ್ನು ನಿರ್ಮಲಮಾಡಿಕೊಂಡದ್ದೂ ಶುದ್ಧತ್ವದಲ್ಲಿ ಕೈತೊಳಕೊಂಡದ್ದೂ ವ್ಯರ್ಥವೇ ಸರಿ. ನಾನು ಯಾವಾಗಲೂ ವ್ಯಾಧಿಪೀಡಿತನಾಗಿದ್ದು ಪ್ರತಿದಿನವೂ ದಂಡಿಸಲ್ಪಡುತ್ತಾ ಇದ್ದೇನಲ್ಲಾ.” (ವಚನಗಳು 13, 14) ಹೌದು, ಅವನು ದೇವರಿಗೆ ಸೇವೆಸಲ್ಲಿಸುವುದರ ಮತ್ತು ಸತ್ಯವಂತನಾಗಿ ಜೀವಿಸುವುದರ ಉಪಯುಕ್ತತೆಯನ್ನು ಪ್ರಶ್ನಿಸಲಾರಂಭಿಸಿದನು.

10, 11. (ಎ) ಆಸಾಫನ ಮನೋಭಾವದಲ್ಲಿ ಬದಲಾವಣೆಯನ್ನು ಉಂಟುಮಾಡಲು ಯಾವುದು ಕಾರಣವಾಗಿತ್ತು? (ಬಿ) ತಪ್ಪಿತಸ್ಥರು “ಅಪಾಯಕರ ಸ್ಥಳದಲ್ಲಿ” ಇರುವುದು ಹೇಗೆ? ಉದಾಹರಣೆಯೊಂದನ್ನು ಕೊಡಿರಿ.

10 ಈ ರೀತಿಯ ಹತಾಶೆಯನ್ನು ಆಸಾಫನು ಬಹಳ ಸಮಯದ ವರೆಗೆ ಅನುಭವಿಸಲಿಲ್ಲ. ದುಷ್ಟರ ಶಾಂತಿಯು ಒಂದು ತಾತ್ಕಾಲಿಕವಾದ ಭ್ರಮೆಯಲ್ಲದೆ ಮತ್ತೇನೂ ಅಲ್ಲವೆಂಬುದನ್ನು ಅವನು ಬೇಗನೆ ಗ್ರಹಿಸಿದನು! ಅವನು ಪ್ರಕಟಿಸಿದ್ದು: “ನೀನು ಅವರನ್ನು ಅಪಾಯಕರ ಸ್ಥಳದಲ್ಲಿಟ್ಟು, ಬೀಳಿಸಿ ನಾಶಮಾಡಿಬಿಡುತ್ತೀ. ಅವರು ನಿಮಿಷಮಾತ್ರದಲ್ಲಿಯೇ ಹಾಳಾಗಿ ಹೋಗುತ್ತಾರೆ; ಭಯಂಕರರೀತಿಯಿಂದ ಸಂಹಾರವಾಗಿ ಮುಗಿದುಹೋಗುತ್ತಾರೆ.” (ವಚನಗಳು 18, 19) ನಿಮ್ಮ ಸಮಾನಸ್ಥರಲ್ಲಿ ಅನೇಕರು ತದ್ರೀತಿಯ “ಅಪಾಯಕರ ಸ್ಥಳದಲ್ಲಿ” ಇದ್ದಾರೆ. ಇಂದಲ್ಲ ನಾಳೆ, ಅವರ ಭಕ್ತಿಹೀನ ವರ್ತನೆಯು ಅವರನ್ನು ಹುಡುಕಿಕೊಂಡು ಬಂದು, ಅನಪೇಕ್ಷಿತ ಗರ್ಭಧಾರಣೆ, ರತಿರವಾನಿತ ರೋಗ, ಸೆರೆವಾಸ ಇಲ್ಲವೆ ಮರಣದಲ್ಲಿ ಅವರನ್ನು ಕೆಡವಿಹಾಕುವುದು! ಇನ್ನೂ ಕೀಳಾದ ಸಂಗತಿಯೇನೆಂದರೆ, ಆಗ ಅವರು ದೇವರಿಂದಲೂ ದೂರ ಸರಿದಿರುತ್ತಾರೆ.—ಯಾಕೋಬ 4:4.

11 ಸ್ಪೇಯ್ನ್‌ನಲ್ಲಿರುವ ಒಬ್ಬ ಯುವ ಸಾಕ್ಷಿಯು ಈ ಸತ್ಯವನ್ನು ಸ್ವತಃ ಅನುಭವಿಸಿದಳು. ಅವಳು ಯುವತಿಯಾಗಿದ್ದಾಗ, ಇಬ್ಬಗೆಯ ಜೀವನವನ್ನು ನಡೆಸಿದಳು ಮತ್ತು ಭಕ್ತಿಹೀನ ಯುವ ಜನರ ಗುಂಪಿನೊಂದಿಗೆ ಬಹಳವಾಗಿ ಸಹವಾಸಿಸಿದಳು. ಬೇಗನೆ ಅವಳು, ಆ ಗುಂಪಿನಲ್ಲಿದ್ದ ಒಬ್ಬ ಅಮಲೌಷಧ ವ್ಯಸನಿಯನ್ನು ಪ್ರೀತಿಸತೊಡಗಿದಳು. ಅಮಲೌಷಧಗಳನ್ನು ಸ್ವತಃ ಅವಳು ಸೇವಿಸದಿದ್ದರೂ, ಅವನಿಗಾಗಿ ಅಮಲೌಷಧಗಳನ್ನು ಖರೀದಿಸುತ್ತಿದ್ದಳು. “ಮೊನೆಸೂಜಿಯ ಮೂಲಕ ಅಮಲೌಷಧವನ್ನು ದೇಹದೊಳಗೆ ಸೇರಿಸಲು ನಾನು ಅವನಿಗೆ ಸಹಾಯ ಮಾಡುತ್ತಿದ್ದೆ” ಎಂದು ಅವಳು ಒಪ್ಪಿಕೊಳ್ಳುತ್ತಾಳೆ. ಸಂತೋಷಕರವಾದ ವಿಷಯವೇನೆಂದರೆ, ಈ ಸಹೋದರಿಗೆ ತನ್ನ ತಪ್ಪಿನ ಅರಿವಾಯಿತು ಮತ್ತು ಅವಳು ಆತ್ಮಿಕ ಆರೋಗ್ಯಕ್ಕೆ ಪುನಃಸ್ಥಾಪಿಸಲ್ಪಟ್ಟಳು. ಆದರೆ ಒಂದಿಷ್ಟು ಸಮಯದ ನಂತರ, ಅಮಲೌಷಧಗಳನ್ನು ಉಪಯೋಗಿಸುತ್ತಿದ್ದ ಅವಳ ಗೆಳೆಯನು ಏಡ್ಸ್‌ನಿಂದಾಗಿ ಮೃತನಾದನೆಂದು ಗೊತ್ತಾದಾಗ, ಅವಳಿಗೆ ಭಾರಿ ಆಘಾತವಾಯಿತು. ಹೌದು, ಕೀರ್ತನೆಗಾರನು ಹೇಳಿದಂತೆಯೇ, ಭಕ್ತಿಹೀನರು “ಅಪಾಯಕರ ಸ್ಥಳದಲ್ಲಿ” ಇದ್ದಾರೆ. ಕೆಲವರು ತಮ್ಮ ಸ್ವಚ್ಛಂದವಾದ ಜೀವನಶೈಲಿಯಿಂದಾಗಿ ಅನಿರೀಕ್ಷಿತವಾಗಿ ಮರಣಹೊಂದಬಹುದು. ಉಳಿದವರು ತಮ್ಮ ಜೀವನರೀತಿಯನ್ನು ಬದಲಾಯಿಸದಿದ್ದರೆ, ಅವರಿಗೆ ನಿಕಟ ಭವಿಷ್ಯತ್ತಿನಲ್ಲಿ “ಯೇಸುಕರ್ತನು ತನ್ನ ಶಕ್ತಿಯನ್ನು ತೋರ್ಪಡಿಸುವ ದೇವದೂತರಿಂದ ಕೂಡಿದವನಾಗಿ ಉರಿಯುವ ಬೆಂಕಿಯಲ್ಲಿ ಆಕಾಶದಿಂದ ಪ್ರತ್ಯಕ್ಷನಾಗುವ ಕಾಲದಲ್ಲಿ . . . ದೇವರನ್ನರಿಯದವರಿಗೂ ತನ್ನ ಸುವಾರ್ತೆಗೆ ಒಳಪಡದವರಿಗೂ ಪ್ರತೀಕಾರವನ್ನು ಸಲ್ಲಿಸುವನು.”—2 ಥೆಸಲೊನೀಕ 1:7, 8.

12. ತಪ್ಪಿತಸ್ಥರನ್ನು ನೋಡಿ ಅಸೂಯೆಪಡುವುದು ಮೂರ್ಖತನವಾಗಿದೆ ಎಂಬುದನ್ನು ಜಪಾನಿನ ಒಬ್ಬ ಯುವಕನು ಹೇಗೆ ಮನಗಂಡನು?

12 ಹಾಗಾದರೆ, “ದೇವರನ್ನರಿಯದವ”ರನ್ನು ಕಂಡು ಅಸೂಯೆಪಡುವುದು ಎಷ್ಟೊಂದು ಮೂರ್ಖತನವಾಗಿದೆ! ಅದರ ಬದಲು, ಯೆಹೋವನನ್ನು ಅರಿತು, ಸದಾಕಾಲ ಜೀವಿಸುವ ನಿರೀಕ್ಷೆಯುಳ್ಳವರನ್ನು ಕಂಡು ಅಸೂಯೆಪಡುವುದು ಎಷ್ಟೋ ಮೇಲು. ಜಪಾನಿನ ಒಬ್ಬ ಯುವ ಸಹೋದರನು ಇದನ್ನು ಮನಗಂಡನು. ಯುವಕನಾಗಿದ್ದಾಗ, ಅವನು ಸಹ “ಹೆಚ್ಚಿನ ಸ್ವಾತಂತ್ರ್ಯವನ್ನು ಬಯಸಿದನು.” ಅವನು ವಿವರಿಸುವುದು: “ನಾನು ಏನನ್ನೊ ಕಳೆದುಕೊಳ್ಳುತ್ತಿದ್ದೇನೆಂದು ಭಾವಿಸಿದೆ. ಆಗ, ನನ್ನ ಜೀವಿತದಲ್ಲಿ ಸತ್ಯಕ್ಕೆ ಯಾವುದೇ ಸ್ಥಾನವಿರದಿದ್ದರೆ ಜೀವನವು ಹೇಗಿರಬಹುದೆಂದು ನಾನು ಯೋಚಿಸತೊಡಗಿದೆ. ಕೇವಲ 70 ಇಲ್ಲವೆ 80 ವರ್ಷಗಳ ವರೆಗೆ ಜೀವಿಸಿ, ಆಮೇಲೆ ಸತ್ತುಹೋಗುವುದನ್ನು ನಾನು ಕಲ್ಪಿಸಿಕೊಂಡೆ. ಆದರೆ ಯೆಹೋವನು ನಮಗೆ ನಿತ್ಯಜೀವದ ನಿರೀಕ್ಷೆಯನ್ನು ಎತ್ತಿಹಿಡಿಯುತ್ತಾನೆಂಬುದು ಕೊಡಲೇ ನನ್ನ ಮನಸ್ಸಿಗೆ ಹೊಳೆಯಿತು! ಇದನ್ನು ಗ್ರಹಿಸಿದಾಗ, ನಾನು ಪಡೆದುಕೊಂಡಿದ್ದ ಸತ್ಯವನ್ನು ಗಣ್ಯಮಾಡಲಾರಂಭಿಸಿದೆ.” ಆದರೂ, ದೇವರ ನಿಯಮವನ್ನು ಅನುಸರಿಸದ ಜನರ ಮಧ್ಯೆ ನಂಬಿಗಸ್ತರಾಗಿ ಉಳಿಯುವುದು ಸುಲಭವಾದ ವಿಷಯವಾಗಿರುವುದಿಲ್ಲ. ಹಾಗಾದರೆ, ಈ ಒತ್ತಡಗಳನ್ನು ಪ್ರತಿರೋಧಿಸಲು ನೀವು ಮಾಡಸಾಧ್ಯವಿರುವ ಕೆಲವು ವಿಷಯಗಳಾವುವು?

ಒಡನಾಡಿಗಳ ವಿಷಯದಲ್ಲಿ ಜಾಗ್ರತೆ!

13, 14. ಒಡನಾಡಿಗಳ ವಿಷಯದಲ್ಲಿ ಜಾಗರೂಕರಾಗಿರುವುದು ಏಕೆ ಪ್ರಾಮುಖ್ಯವಾಗಿದೆ?

13 ಕೀರ್ತನೆ 1:1-3ರಲ್ಲಿ ದಾಖಲಾದ, ಒಬ್ಬ ಸಫಲ ಪುರುಷನ ಕುರಿತಾದ ವರ್ಣನೆಯನ್ನು ನಾವು ಪುನಃ ನೋಡೋಣ: “ಯಾವನು ದುಷ್ಟರ ಆಲೋಚನೆಯಂತೆ ನಡೆಯದೆ ಪಾಪಾತ್ಮರ ಮಾರ್ಗದಲ್ಲಿ ನಿಂತುಕೊಳ್ಳದೆ ಧರ್ಮನಿಂದಕರೊಡನೆ ಕೂತುಕೊಳ್ಳದೆ ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದಪಡುವವನಾಗಿ ಅದನ್ನೇ ಹಗಲಿರುಳು ಧ್ಯಾನಿಸುತ್ತಿರುವನೋ ಅವನು ಎಷ್ಟೋ ಧನ್ಯನು. ಅವನು ನೀರಿನ ಕಾಲಿವೆಗಳ ಬಳಿಯಲ್ಲಿ ಬೆಳೆದಿರುವ ಮರದ ಹಾಗಿರುವನು. ಅಂಥ ಮರವು ತಕ್ಕ ಕಾಲದಲ್ಲಿ ಫಲಕೊಡುತ್ತದಲ್ಲಾ; ಅದರ ಎಲೆ ಬಾಡುವದೇ ಇಲ್ಲ, ಅದರಂತೆ ಅವನ ಕಾರ್ಯವೆಲ್ಲವೂ ಸಫಲವಾಗುವದು.”

14 ನಿಮ್ಮ ಒಡನಾಡಿಗಳು ಮುಖ್ಯವಾದ ಪಾತ್ರ ವಹಿಸುತ್ತಾರೆಂಬುದನ್ನು ಮೊದಲಾಗಿ ತಿಳಿದುಕೊಳ್ಳಿರಿ. ಜ್ಞಾನೋಕ್ತಿ 13:20 ಹೇಳುವುದು: “ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು; ಜ್ಞಾನಹೀನರ ಒಡನಾಡಿ ಸಂಕಟಪಡುವನು.” ಇದರರ್ಥ ನೀವು ಯೆಹೋವನ ಸಾಕ್ಷಿಗಳಾಗಿರದ ಯುವ ಜನರ ಕಡೆಗೆ, ಉದಾಸೀನರೂ, ಸ್ನೇಹಭಾವವಿಲ್ಲದವರೂ, ಅಸಭ್ಯರೂ ಆಗಿರಬೇಕೆಂದಲ್ಲ. ನಮ್ಮ ನೆರೆಯವರನ್ನು ಪ್ರೀತಿಸಿ, “ಎಲ್ಲರ ಸಂಗಡ ಸಮಾಧಾನ”ದಿಂದಿರುವಂತೆ ಬೈಬಲು ನಮ್ಮನ್ನು ಪ್ರೇರಿಸುತ್ತದೆ. (ರೋಮಾಪುರ 12:18; ಮತ್ತಾಯ 22:39) ಆದರೆ ಬೈಬಲಿನ ಮಟ್ಟಗಳನ್ನು ಅನುಸರಿಸದ ಜನರೊಂದಿಗೆ ನೀವು ನಿಕಟವಾಗಿ ಸಹವಾಸಿಸುವಲ್ಲಿ, ನೀವು ಅವರ ‘ಆಲೋಚನೆಯಂತೆ ನಡೆಯುತ್ತಿರುವುದನ್ನು’ ಬೇಗನೆ ಕಂಡುಕೊಳ್ಳಬಹುದು.

ಬೈಬಲ್‌ ವಾಚನದ ಪ್ರಯೋಜನಗಳು

15. ಯುವ ಜನರು, ಬೈಬಲ್‌ ವಾಚನಕ್ಕಾಗಿ ಬಯಕೆಯನ್ನು ಹೇಗೆ ಬೆಳೆಸಿಕೊಳ್ಳಬಲ್ಲರು?

15 ಸಫಲ ಪುರುಷನೊಬ್ಬನು ದೇವರ ಧರ್ಮಶಾಸ್ತ್ರದ ವಾಚನದಲ್ಲಿ ಆನಂದಿಸಿ, ಅದನ್ನು ‘ಹಗಲಿರುಳು ತಗ್ಗುದನಿಯಲ್ಲಿ ಓದು’ತ್ತಾನೆಂಬುದನ್ನೂ ಕೀರ್ತನೆಗಾರನು ಗಮನಿಸಿದನು. (ಕೀರ್ತನೆ 1:1, 2, NW) ಬೈಬಲ್‌ ವಾಚನವು ಅಷ್ಟೇನೂ ಸುಲಭವಾಗಿರುವುದಿಲ್ಲ, ಏಕೆಂದರೆ ಅದರಲ್ಲಿರುವ “ಕೆಲವು ಮಾತುಗಳು ತಿಳಿಯುವುದಕ್ಕೆ ಕಷ್ಟವಾಗಿವೆ.” (2 ಪೇತ್ರ 3:16) ಆದರೆ, ಬೈಬಲ್‌ ವಾಚನವು ಬಲವಂತದಿಂದ ಮಾಡುವ ಒಂದು ಕೆಲಸವಾಗಿರುವ ಅಗತ್ಯವಿಲ್ಲ. ದೇವರ ವಾಕ್ಯದ ‘ಶುದ್ಧ ಹಾಲಿಗಾಗಿ ಬಯಕೆಯನ್ನು ಬೆಳೆಸಿಕೊಳ್ಳಲು’ ಸಾಧ್ಯವಿದೆ. (1 ಪೇತ್ರ 2:2) ಪ್ರತಿ ದಿನ ಒಂದಿಷ್ಟು ಭಾಗವನ್ನು ಮಾತ್ರ ಓದಲು ಪ್ರಯತ್ನಿಸಿರಿ. ಅದರಲ್ಲಿರುವ ವಿಷಯಗಳು ನಿಮಗೆ ಅರ್ಥವಾಗದಿದ್ದರೆ, ಅದರ ಕುರಿತು ಸ್ವಲ್ಪ ಸಂಶೋಧನೆಯನ್ನು ಮಾಡಿರಿ. ತದನಂತರ, ನೀವು ಓದಿರುವ ವಿಷಯದ ಕುರಿತು ಯೋಚಿಸಿರಿ. (ಕೀರ್ತನೆ 77:11, 12) ಓದುತ್ತಿರುವ ವಿಷಯದ ಮೇಲೆ ಮನಸ್ಸನ್ನು ಕೇಂದ್ರೀಕರಿಸುವುದು ನಿಮಗೆ ಕಷ್ಟವಾಗಿದ್ದರೆ, ಅದನ್ನು “ತಗ್ಗುದನಿಯಲ್ಲಿ” ಓದಿರಿ. ಸಕಾಲದಲ್ಲಿ, ಬೈಬಲ್‌ ವಾಚನಕ್ಕಾಗಿರುವ ನಿಮ್ಮ ಪ್ರೀತಿಯು ಖಂಡಿತವಾಗಿಯೂ ಹೆಚ್ಚುವುದು. ಬ್ರೆಸಿಲಿನ ಒಬ್ಬ ಯುವ ಸಹೋದರಿಯು ಜ್ಞಾಪಿಸಿಕೊಳ್ಳುವುದು: “ಯೆಹೋವನು ನನ್ನಿಂದ ತುಂಬ ದೂರವಿರುವ ವ್ಯಕ್ತಿಯಂತೆ ನನಗೆ ಯಾವಾಗಲೂ ಅನಿಸುತ್ತಿತ್ತು. ಆದರೆ ಈಗ, ಕೆಲವಾರು ತಿಂಗಳುಗಳಿಂದ ನಾನು ನನ್ನ ವೈಯಕ್ತಿಕ ಅಧ್ಯಯನದಲ್ಲಿ ಮತ್ತು ಬೈಬಲ್‌ ವಾಚನದಲ್ಲಿ ಸುಧಾರಣೆಯನ್ನು ಮಾಡಿರುವುದರಿಂದ, ಯೆಹೋವನೊಂದಿಗಿನ ನನ್ನ ಸಂಬಂಧವು ಬಲವಾಗಿರುವಂತೆ ನನಗನಿಸುತ್ತದೆ. ಆತನು ನಿಜವಾಗಿಯೂ ಒಬ್ಬ ವ್ಯಕ್ತಿಯಾಗಿದ್ದಾನೆಂಬ ಅನಿಸಿಕೆ ಈಗ ನನ್ನಲ್ಲಿ ಬಲವಾಗಿದೆ.”

16. ಸಭಾ ಕೂಟಗಳಿಂದ ನಾವು ಹೆಚ್ಚಿನ ಪ್ರಯೋಜನವನ್ನು ಹೇಗೆ ಪಡೆದುಕೊಳ್ಳಸಾಧ್ಯವಿದೆ?

16 ನಿಮ್ಮ ಆತ್ಮಿಕ ಬೆಳವಣಿಗೆಗಾಗಿ ಸಭಾ ಕೂಟಗಳಿಗೆ ಹಾಜರಾಗುವುದು ಸಹ ಅತ್ಯಾವಶ್ಯಕವಾಗಿದೆ. ನೀವು ‘ಹೇಗೆ ಕಿವಿಗೊಡಬೇಕು ಎಂಬ ವಿಷಯಕ್ಕೆ ಗಮನವನ್ನು ಕೊಡುವುದಾದರೆ’ ಹೆಚ್ಚಿನ ಉತ್ತೇಜನವನ್ನು ಪಡೆದುಕೊಳ್ಳಸಾಧ್ಯವಿದೆ. (ಲೂಕ 8:18) ಕೂಟಗಳು ಆಸಕ್ತಿಕರವಾಗಿಲ್ಲವೆಂದು ನಿಮಗೆ ಕೆಲವೊಮ್ಮೆ ಅನಿಸುತ್ತದೊ? ಹಾಗಾದರೆ, ‘ಕೂಟಗಳು ಆಸಕ್ತಿಕರವಾಗಿರುವಂತೆ ನಾನು ಏನು ಮಾಡುತ್ತೇನೆ? ನಾನು ಗಮನಕೊಡುತ್ತೇನೊ? ನಾನು ತಯಾರಿಸುತ್ತೇನೊ? ನಾನು ಉತ್ತರಗಳನ್ನು ಕೊಡುತ್ತೇನೊ?’ ಎಂಬುದಾಗಿ ನಿಮ್ಮನ್ನೇ ಪ್ರಶ್ನಿಸಿಕೊಳ್ಳಿರಿ. ಎಷ್ಟೆಂದರೂ, ನಾವು “ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುತ್ತಿರಬೇಕೆಂತಲೂ ಸತ್ಕಾರ್ಯಮಾಡಬೇಕೆಂತಲೂ ಒಬ್ಬರನ್ನೊಬ್ಬರು ಪ್ರೇರೇಪಿ”ಸಬೇಕೆಂದೂ ಬೈಬಲ್‌ ನಮಗೆ ಹೇಳುತ್ತದೆ. (ಇಬ್ರಿಯ 10:24, 25) ಇದನ್ನು ಮಾಡಲು ನೀವು ಕೂಟಗಳಲ್ಲಿ ಭಾಗವಹಿಸಬೇಕು! ಮತ್ತು ಅದಕ್ಕೆ ಮುಂಚೆ ನೀವು ಖಂಡಿತವಾಗಿಯೂ ಅಭ್ಯಾಸಮಾಡಬೇಕು. ಒಬ್ಬ ಯುವ ಸಹೋದರಿಯು ಒಪ್ಪಿಕೊಳ್ಳುವುದು: “ಕೂಟಗಳಿಗಾಗಿ ತಯಾರಿಸುವಾಗ ಅದರಲ್ಲಿ ಭಾಗವಹಿಸುವುದು ತುಂಬ ಸುಲಭವಾಗಿರುತ್ತದೆ.”

ದೇವರ ಮಾರ್ಗದ ಅನುಸರಣೆಯು ಸಫಲತೆಗೆ ನಡೆಸುತ್ತದೆ

17. ಬೈಬಲಿನ ಶ್ರದ್ಧಾಪೂರ್ವಕ ವಾಚಕನು, ಹೇಗೆ “ನೀರಿನ ಕಾಲಿವೆಗಳ ಬಳಿಯಲ್ಲಿ ಬೆಳೆದಿರುವ ಮರದ ಹಾಗಿರುವನು”?

17 ಸಫಲನಾಗಿರುವ ಪುರುಷನು “ನೀರಿನ ಕಾಲಿವೆಗಳ ಬಳಿಯಲ್ಲಿ ಬೆಳೆದಿರುವ ಮರದ ಹಾಗಿರುವನು” ಎಂಬುದಾಗಿಯೂ ಕೀರ್ತನೆಗಾರನು ವರ್ಣಿಸುತ್ತಾನೆ. ನೀರಿನ ಕಾಲಿವೆಗಳು, ಹಣ್ಣುತೋಟಗಳಿಗೆ ನೀರು ಹಾಯಿಸಲು ಉಪಯೋಗಿಸಲ್ಪಟ್ಟ ನೀರು ಹಳ್ಳಗಳನ್ನು ಸೂಚಿಸಿದ್ದಿರಬಹುದು. (ಯೆಶಾಯ 44:4) ದೈನಿಕ ಬೈಬಲ್‌ ವಾಚನವು, ಪೋಷಣೆ ಹಾಗೂ ಚೈತನ್ಯವನ್ನು ನೀಡುವ ಸಮೃದ್ಧವಾದ ಉಗಮಕ್ಕೆ ಜೋಡಿಸಲ್ಪಟ್ಟಿರುವಂತಿದೆ. (ಯೆರೆಮೀಯ 17:8) ಹೀಗೆ, ನೀವು ಕಷ್ಟತೊಂದರೆಗಳನ್ನು ತಾಳಿಕೊಳ್ಳಲು ಬೇಕಾದ ಬಲವನ್ನು ದಿನನಿತ್ಯವೂ ಪಡೆದುಕೊಳ್ಳುವಿರಿ. ಅಷ್ಟುಮಾತ್ರವಲ್ಲದೆ, ಯೆಹೋವನ ಆಲೋಚನೆಯನ್ನು ನೀವು ಗ್ರಹಿಸಿಕೊಂಡಿರುವುದರಿಂದ, ವಿವೇಕಯುತ ನಿರ್ಣಯಗಳನ್ನು ಮಾಡಲು ಬೇಕಾದ ಬುದ್ಧಿಯು ನಿಮ್ಮಲ್ಲಿರುವುದು.

18. ಯೆಹೋವನ ಸೇವೆಯಲ್ಲಿ ಒಬ್ಬ ಯುವ ವ್ಯಕ್ತಿಯ ಸಫಲತೆಯನ್ನು ಯಾವುದು ಖಚಿತಪಡಿಸುವುದು?

18 ಕೆಲವೊಮ್ಮೆ, ಯೆಹೋವನಿಗೆ ಸೇವೆಸಲ್ಲಿಸುವುದು ಕಷ್ಟಕರವಾಗಿ ತೋರಬಲ್ಲದು. ಹಾಗಿದ್ದರೂ, ಅದು ತೀರ ಕಠಿನವಾದದ್ದೆಂದು ಭಾವಿಸಬೇಡಿ. (ಧರ್ಮೋಪದೇಶಕಾಂಡ 30:11) ನಮ್ಮ ಮುಖ್ಯ ಗುರಿಯು ಯೆಹೋವನನ್ನು ಮೆಚ್ಚಿಸಿ, ಆತನ ಮನಸ್ಸನ್ನು ಸಂತೋಷಗೊಳಿಸುವುದೇ ಆಗಿರುವಲ್ಲಿ, ಕಟ್ಟಕಡೆಗೆ ‘ನೀವು ಮಾಡುವ ಕಾರ್ಯವೆಲ್ಲವೂ ಸಫಲವಾಗುವದು’ ಎಂದು ಬೈಬಲ್‌ ವಾಗ್ದಾನಿಸುತ್ತದೆ. (ಜ್ಞಾನೋಕ್ತಿ 27:11) ಈ ಕಾರ್ಯದಲ್ಲಿ ನೀವು ಒಬ್ಬಂಟಿಗರಲ್ಲ ಎಂಬುದು ನಿಮಗೆ ನೆನಪಿರಲಿ. ಯೆಹೋವನ ಮತ್ತು ಯೇಸು ಕ್ರಿಸ್ತನ ಬೆಂಬಲವು ನಿಮಗಿದೆ. (ಮತ್ತಾಯ 28:20; ಇಬ್ರಿಯ 13:5) ನೀವು ಎದುರಿಸುವ ಒತ್ತಡಗಳನ್ನು ಅವರು ತಿಳಿದಿದ್ದಾರೆ, ಮತ್ತು ನಿಮ್ಮನ್ನು ಅವರು ಎಂದಿಗೂ ತೊರೆಯಲಾರರು. (ಕೀರ್ತನೆ 55:22) ಅಲ್ಲದೆ ನಿಮಗೆ “ಸಹೋದರರ” ಇಡೀ ಬಳಗದ ಹಾಗೂ ನಿಮ್ಮ ಹೆತ್ತವರು ದೇವಭಯವುಳ್ಳವರಾಗಿದ್ದರೆ, ಅವರ ಬೆಂಬಲವು ಸಹ ಇದೆ. (1 ಪೇತ್ರ 2:17) ಇಂತಹ ಬೆಂಬಲದೊಂದಿಗೆ ನಿಮ್ಮ ದೃಢನಿರ್ಧಾರ ಹಾಗೂ ಪ್ರಯತ್ನವು ಜೊತೆಸೇರಿದರೆ, ನೀವು ಈಗ ಮಾತ್ರವಲ್ಲ ಎಂದೆಂದಿಗೂ ಸಫಲವಾದ ಜೀವನದಲ್ಲಿ ಆನಂದಿಸುವಿರಿ!

ಪುನರ್ವಿಮರ್ಶೆಗಾಗಿ ಪ್ರಶ್ನೆಗಳು

◻ ನಿಜವಾದ ಸಫಲತೆಯು ಏನಾಗಿದೆ?

◻ ನಮ್ಮ ಹೆಜ್ಜೆಗಳನ್ನು ಮಾರ್ಗದರ್ಶಿಸಲು ನಮಗೆ ಯೆಹೋವನ ಆವಶ್ಯಕತೆ ಇರುವುದೇಕೆ?

◻ ಯುವ ಜನರು ‘ತಮ್ಮ ದಿನಗಳನ್ನು ಎಣಿಸುವುದು’ ಹೇಗೆ?

◻ ತಪ್ಪಿತಸ್ಥರನ್ನು ಕಂಡು ಅಸೂಯೆಪಡುವುದು ಏಕೆ ಮೂರ್ಖತನವಾಗಿದೆ?

◻ ಯುವ ಜನರು ಸಫಲಪೂರ್ಣವಾದ ಜೀವಿತವನ್ನು ಅನುಭವಿಸುವಂತೆ, ದೈನಿಕ ಬೈಬಲ್‌ ವಾಚನ ಹಾಗೂ ಕ್ರಮವಾದ ಕೂಟದ ಹಾಜರಿಯು ಹೇಗೆ ಸಹಾಯ ಮಾಡಸಾಧ್ಯವಿದೆ?

[ಪುಟ 20 ರಲ್ಲಿರುವ ಚಿತ್ರ]

ಅನೇಕ ಯುವ ಜನರಲ್ಲಿ ಆರೋಗ್ಯಕರವಾದ “ದೇವರ ಭಯವೇ” ಇಲ್ಲದಿರುವ ಕಾರಣ, ಅವರು ವಿನಾಶಕಾರಿ ವರ್ತನೆಯಲ್ಲಿ ಒಳಗೊಳ್ಳುತ್ತಾರೆ

[ಪುಟ 22 ರಲ್ಲಿರುವ ಚಿತ್ರ]

ತಮ್ಮ ಕ್ರಿಯೆಗಳಿಗೆ ತಕ್ಕ ಪರಿಣಾಮಗಳಿರುವವು ಎಂಬುದನ್ನು ಯುವ ಜನರು ಅನೇಕ ವೇಳೆ ಮರೆತುಬಿಡುತ್ತಾರೆ

[ಪುಟ 23 ರಲ್ಲಿರುವ ಚಿತ್ರ]

ಬೈಬಲ್‌ ವಾಚನಕ್ಕಾಗಿ ಪ್ರೀತಿಯನ್ನು ಬೆಳೆಸಿಕೊಳ್ಳಿರಿ

[ಪುಟ 23 ರಲ್ಲಿರುವ ಚಿತ್ರ]

ನೀವು ಕೂಟಗಳಲ್ಲಿ ಭಾಗವಹಿಸುವುದಾದರೆ, ಅವುಗಳಲ್ಲಿ ಬಹಳವಾಗಿ ಆನಂದಿಸುವಿರಿ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ