ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w99 10/1 ಪು. 3-4
  • ಇಷ್ಟು ಕೊಂಚ ಸಮಯ ಏಕಿದೆ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಇಷ್ಟು ಕೊಂಚ ಸಮಯ ಏಕಿದೆ?
  • ಕಾವಲಿನಬುರುಜು—1999
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಪುಷ್ಕಳ ಸಮಯ
  • ಕೊಂಚವಾಗುತ್ತ ಹೋಗುವ ಸಮಯ
  • ಕೊಂಚ ಸಮಯದ ಸಮಸ್ಯೆಯಿರುವುದು ಕೇವಲ ನಮಗಲ್ಲ
  • ಈಗ ನಮಗೆ ದೊರಕುವ ಸಮಯವನ್ನು ಬುದ್ಧಿವಂತಿಕೆಯಿಂದ ಉಪಯೋಗಿಸುವುದು
  • ನಮ್ಮ ದಿನಗಳನ್ನು ಎಣಿಸುವ ವಿಧವನ್ನು ಯೆಹೋವನು ತೋರಿಸುತ್ತಾನೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
  • ಕಾಲ ಮತ್ತು ನಿತ್ಯತೆ—ಅವುಗಳ ಕುರಿತು ನಮಗೆ ನಿಜವಾಗಿಯೂ ತಿಳಿದಿರುವುದೇನು?
    ಕಾವಲಿನಬುರುಜು—1999
  • ನಿತ್ಯತೆಯನ್ನು ಮನಸ್ಸಿನಲ್ಲಿಟ್ಟುಕೊಂಡು ದೇವರೊಂದಿಗೆ ನಡೆಯುವುದು
    ಕಾವಲಿನಬುರುಜು—1998
  • ನಿತ್ಯತೆಯ ಅರಸನನ್ನು ಸ್ತುತಿಸಿರಿ!
    ಕಾವಲಿನಬುರುಜು—1996
ಇನ್ನಷ್ಟು
ಕಾವಲಿನಬುರುಜು—1999
w99 10/1 ಪು. 3-4

ಇಷ್ಟು ಕೊಂಚ ಸಮಯ ಏಕಿದೆ?

ಸಮಯ. ಈ ಶಬ್ದದ ಅರ್ಥವನ್ನು ನಿಖರವಾಗಿ ವಿವರಿಸುವುದು ನಮಗೆ ಕಷ್ಟಕರವಾಗಿರಬಹುದಾದರೂ, ನಮಗೆ ಸಾಕಷ್ಟು ಸಮಯವೇ ಇರುವುದಿಲ್ಲ ಎಂಬುದು ನಮಗೆಲ್ಲರಿಗೂ ಚೆನ್ನಾಗಿ ಗೊತ್ತಿರುವ ಸಂಗತಿಯಾಗಿದೆ. ಸಮಯವು ಬೇಗನೆ ಕಳೆದುಹೋಗುತ್ತದೆ ಎಂಬುದೂ ನಮಗೆ ತಿಳಿದಿದೆ. ವಾಸ್ತವದಲ್ಲಿ, “ಕಾಲವು ಹಾರಿಹೋಗುತ್ತದೆ” ಎಂದು ನಾವು ಕೆಲವೊಮ್ಮೆ ನಿಟ್ಟುಸಿರುಬಿಡುತ್ತೇವೆ.

ಆದರೂ, 1877ರಲ್ಲಿ ಆಸ್ಟಿನ್‌ ಡಾಬ್ಸನ್‌ ಎಂಬ ಇಂಗ್ಲಿಷ್‌ ಕವಿಯು ನೀಡಿದ ಹೇಳಿಕೆಯು ಹೆಚ್ಚು ಅರ್ಥವತ್ತಾಗಿತ್ತು. ಅವನು ಹೇಳಿದ್ದು: “ಸಮಯವು ಕಳೆದುಹೋಗುತ್ತದೆ ಎಂದು ನೀವು ಹೇಳುತ್ತೀರಲ್ಲವೆ? ಖಂಡಿತವಾಗಿಯೂ ಇಲ್ಲ. ಸಮಯವು ಹಾಗೇ ಉಳಿಯುತ್ತದೆ, ಆದರೆ ನಾವು ಇಲ್ಲವಾಗುತ್ತೇವೆ ಅಷ್ಟೇ.” 1921ರಲ್ಲಿ ಡಾಬ್ಸನ್‌ ಮರಣಪಟ್ಟಂದಿನಿಂದ ಹೆಚ್ಚುಕಡಿಮೆ 80 ವರ್ಷ ಅವನು ಇಲ್ಲದೆ ಹೋಗಿದ್ದಾನೆ; ಆದರೆ ಸಮಯವು ಮಾತ್ರ ಮುಂದುವರಿಯುತ್ತಲೇ ಇದೆ.

ಪುಷ್ಕಳ ಸಮಯ

ಮಾನವಕುಲದ ಸೃಷ್ಟಿಕರ್ತನ ಕುರಿತು ಬೈಬಲು ನಮಗೆ ಹೇಳುವುದು: “ಬೆಟ್ಟಗಳು ಉಂಟಾಗುವದಕ್ಕಿಂತ, ಭೂಮಿಯೂ ಅದರ ದೇಶಗಳೂ ನಿರ್ಮಾಣವಾಗುವದಕ್ಕಿಂತ ಮುಂಚಿನಿಂದ ಯುಗಯುಗಾಂತರಗಳಲ್ಲಿಯೂ ನೀನೇ ದೇವರು.” (ಕೀರ್ತನೆ 90:2) ಅಥವಾ ದ ನ್ಯೂ ಜೆರೂಸಲೇಮ್‌ ಬೈಬಲ್‌ ಅದನ್ನು ಹೀಗೆ ಭಾಷಾಂತರಿಸುತ್ತದೆ: “ಅನಂತಾನಂತ ಕಾಲದಿಂದಲೂ ನೀನೇ ದೇವರಾಗಿದ್ದೀ.” ಆದುದರಿಂದ, ದೇವರು ಇರುವಷ್ಟರ ತನಕ ಸಮಯವೂ ಇರುತ್ತದೆ—ಅಂದರೆ ಸದಾಕಾಲಕ್ಕೂ ಇರುತ್ತದೆ!

ಯಾರು ಸಮಯದ ನಿತ್ಯತೆಯನ್ನು ತನ್ನ ವಶದಲ್ಲಿಟ್ಟುಕೊಂಡಿದ್ದಾನೋ ಆ ದೇವರಿಗೆ ತದ್ವಿರುದ್ಧವಾಗಿ, ಮಾನವರ ಕುರಿತು ನಾವು ಓದುವುದು: “ನಿನ್ನ ರೋಷದಿಂದ ನಮ್ಮ ಕಾಲವೆಲ್ಲಾ ಸಂದುಹೋಯಿತು; ನಮ್ಮ ವರುಷಗಳು ನಿಟ್ಟುಸಿರಿನಂತೆ ತೀರಿಹೋದವು. ನಮ್ಮ ಆಯುಷ್ಕಾಲವು ಎಪ್ಪತ್ತು ವರುಷ; ಬಲ ಹೆಚ್ಚಿದ್ದರೆ ಎಂಭತ್ತು. ಕಷ್ಟಸಂಕಟಗಳೇ ಅದರ ಆಡಂಬರ. ಅದು ಬೇಗನೆ ಗತಿಸಿಹೋಗುತ್ತದೆ; ನಾವು ಹಾರಿ ಹೋಗುತ್ತೇವೆ.”—ಕೀರ್ತನೆ 90:9, 10.

ಮನುಷ್ಯನು ಸದಾಕಾಲ ಜೀವಿಸುವುದು ದೇವರ ಉದ್ದೇಶವಾಗಿದೆ ಎಂದು ಬೈಬಲು ಸ್ಪಷ್ಟವಾಗಿ ಬೋಧಿಸುತ್ತದಾದರೂ, ಇಂದು ಜೀವನವು ಏಕೆ ಇಷ್ಟು ಅಲ್ಪಕಾಲದ್ದಾಗಿದೆ? (ಆದಿಕಾಂಡ 1:27, 28; ಕೀರ್ತನೆ 37:29) ದೇವರ ಉದ್ದೇಶದಂತೆ ಮಾನವರು ಅಪರಿಮಿತ ಜೀವನಾಯುಷ್ಯವನ್ನು ಪಡೆಯುವುದಕ್ಕೆ ಬದಲಾಗಿ, ಅವರು ಸರಾಸರಿ 30,000ಕ್ಕಿಂತಲೂ ಕಡಿಮೆ ದಿನಗಳ ವರೆಗೆ ಮಾತ್ರ ಏಕೆ ಜೀವಿಸುತ್ತಾರೆ? ಮಾನವರಿಗೆ ಇಷ್ಟು ಕೊಂಚ ಸಮಯ ಏಕಿದೆ? ಈ ದುಃಖಕರ ಸನ್ನಿವೇಶಕ್ಕೆ ಯಾರು ಅಥವಾ ಯಾವುದು ಕಾರಣವಾಗಿದೆ? ಈ ಪ್ರಶ್ನೆಗಳಿಗೆ ಬೈಬಲು ಸ್ಪಷ್ಟವಾದ ಹಾಗೂ ಸಂತೃಪ್ತಿಕರವಾದ ಉತ್ತರಗಳನ್ನು ನೀಡುತ್ತದೆ.a

ಕೊಂಚವಾಗುತ್ತ ಹೋಗುವ ಸಮಯ

ಇತ್ತೀಚಿನ ದಶಕಗಳಲ್ಲಿ ಜೀವನಗತಿಯು ತುಂಬ ವೇಗವಾಗಿ ಸಾಗುತ್ತಿದೆ ಎಂಬುದನ್ನು ಹಳೇಕಾಲದವರು ಸಮರ್ಥಿಸುತ್ತಾರೆ. ಕಳೆದ 200 ವರ್ಷಗಳಲ್ಲಿ, ಒಂದು ವಾರದಲ್ಲಿ ಕೆಲಸಮಾಡುವ ತಾಸುಗಳು 80ರಿಂದ 38ಕ್ಕೆ ಇಳಿದಿವೆ, “ಆದರೂ ಸಮಯದ ಅಭಾವದ ಕುರಿತು ನಾವು ದೂರುವುದನ್ನು ಇದು ನಿಲ್ಲಿಸಿಲ್ಲ” ಎಂದು ಪತ್ರಕರ್ತೆ ಡಾ. ಸೀಬಿಲ ಫ್ರಿಚ್‌ ಹೇಳಿದರು. ಅವರು ಸ್ಪಷ್ಟಪಡಿಸಿದ್ದು: “ಸಾಕಷ್ಟು ಸಮಯವಿಲ್ಲ; ಸಮಯವು ತುಂಬ ಬೆಲೆಬಾಳುವಂತಹದ್ದು; ಶ್ವಾಸಕ್ಕಾಗಿ ಮೇಲುಸಿರು ಬಿಡುವಂತೆ ಸಮಯಕ್ಕಾಗಿ ಮೇಲುಸಿರು ಬಿಡುವುದು; ಅವಸರದ ಜೀವನ.”

ಹೊಸ ಹೊಸ ಶೋಧನೆಗಳು, ಈ ಮುಂಚಿನ ಸಂತತಿಗಳವರು ಕನಸಿನಲ್ಲೂ ನೆನಸಿರದಂತಹ ಸದವಕಾಶಗಳು ಹಾಗೂ ಸಾಧ್ಯತೆಗಳನ್ನು ಇಂದು ಸಾಕಾರಗೊಳಿಸಿವೆ. ಅನೇಕಾನೇಕ ಚಟುವಟಿಕೆಗಳಲ್ಲಿ ಒಳಗೂಡುವ ಸಾಧ್ಯತೆ ಹೆಚ್ಚುತ್ತಿರುವಾಗ, ಆ ಚಟುವಟಿಕೆಗಳನ್ನು ನಿಭಾಯಿಸಲು ಸಮಯವೇ ಇಲ್ಲ ಎಂಬ ಆಶಾಭಂಗವು ಸಹ ಹೆಚ್ಚಾಗುತ್ತಿದೆ. ಇಂದು ಲೋಕದ ಅನೇಕ ಭಾಗಗಳಲ್ಲಿ ಜನರು, ಒಂದು ನಿಗದಿತ ಸಮಯದಿಂದ ಇನ್ನೊಂದಕ್ಕೆ ತ್ವರೆಯಾಗಿ ಮುನ್ನುಗ್ಗುತ್ತಾ, ಅತಿ ಕಟ್ಟುನಿಟ್ಟಾದ ಕಾಲತಖ್ತೆಗನುಸಾರ ಜೀವಿಸುತ್ತಾರೆ. ಬೆಳಗ್ಗೆ 7:00 ಗಂಟೆಗೆ ತಂದೆ ಕೆಲಸಕ್ಕೆ ಹೋಗಬೇಕು, 8:30ರೊಳಗೆ ತಾಯಿ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು, 9:40ಕ್ಕೆ ಅಜ್ಜ ವೈದ್ಯರ ಬಳಿಗೆ ಹೋಗಬೇಕು, ಮತ್ತು ಸಾಯಂಕಾಲ 7:30ರಷ್ಟಕ್ಕೆ ನಾವೆಲ್ಲರೂ ಒಂದು ಮುಖ್ಯವಾದ ಕೂಟಕ್ಕೆ ಸಿದ್ಧರಾಗಬೇಕು. ಒಂದರ ಬಳಿಕ ಇನ್ನೊಂದು ಕೆಲಸವನ್ನು ಪೂರೈಸುವ ಆತುರದಲ್ಲಿ, ಯಾವುದೇ ರೀತಿಯ ವಿನೋದಕ್ಕೆ ಸಮಯವೇ ಉಳಿಯುವುದಿಲ್ಲ. ಮತ್ತು ನಮ್ಮ ದೈನಂದಿನ ಹೆಣಗಾಟದ ಕುರಿತು, ಸ್ಪರ್ಧಾತ್ಮಕ ಕೆಲಸಗಳ ಕುರಿತು ನಾವು ದೂರುತ್ತೇವೆ.

ಕೊಂಚ ಸಮಯದ ಸಮಸ್ಯೆಯಿರುವುದು ಕೇವಲ ನಮಗಲ್ಲ

ಯಾರ ಒಳಸಂಚು ಮಾನವಕುಲದ ಅಲ್ಪಾವಧಿಯ ಜೀವನಾಯುಷ್ಯಕ್ಕೆ ಕಾರಣವಾಯಿತೋ ಆ ದೇವರ ವಿರೋಧಿಯಾಗಿರುವ ಪಿಶಾಚನಾದ ಸೈತಾನನು, ಈಗ ತನ್ನ ದುಷ್ಟತನಕ್ಕೆ ತಾನೇ ಆಹುತಿಯಾಗಿದ್ದಾನೆ. (ಹೋಲಿಸಿರಿ ಗಲಾತ್ಯ 6:7, 8.) ಪರಲೋಕದಲ್ಲಿ ಮೆಸ್ಸೀಯ ರಾಜ್ಯದ ಜನನದ ಕುರಿತು ಮಾತಾಡುತ್ತಾ, ಪ್ರಕಟನೆ 12:12 ನಮಗೆ ನಿರೀಕ್ಷೆಗಾಗಿ ಕಾರಣಗಳನ್ನು ಕೊಡುತ್ತದೆ. ಅದು ಹೇಳುವುದು: “ಪರಲೋಕವೇ, ಅದರಲ್ಲಿ ವಾಸಮಾಡುವವರೇ, ಹರ್ಷಗೊಳ್ಳಿರಿ. ಭೂಮಿಯೇ, ಸಮುದ್ರವೇ, ನಿಮ್ಮ ದುರ್ಗತಿಯನ್ನು ಏನು ಹೇಳಲಿ; ಸೈತಾನನು ತನಗಿರುವ ಕಾಲವು ಸ್ವಲ್ಪವೆಂದು ತಿಳಿದು ಮಹಾ ರೌದ್ರವುಳ್ಳವನಾಗಿ ನಿಮ್ಮ ಕಡೆಗೆ ಇಳಿದುಬಂದಿದ್ದಾನೆ.” (ಓರೆ ಅಕ್ಷರಗಳು ನಮ್ಮವು.)

ವಿಶ್ವಾಸಾರ್ಹವಾದ ಬೈಬಲ್‌ ಕಾಲಗಣನಶಾಸ್ತ್ರ ಹಾಗೂ ಬೈಬಲ್‌ ಪ್ರವಾದನೆಯ ನೆರವೇರಿಕೆಗನುಸಾರ, ಆ ‘ಸ್ವಲ್ಪ ಕಾಲಾವಧಿಯ’ ಕೊನೆಯ ಹಂತದಲ್ಲಿ ನಾವಿಂದು ಜೀವಿಸುತ್ತಿದ್ದೇವೆ. ಸೈತಾನನ ಸ್ವಾತಂತ್ರ್ಯದ ಗಡುವು ಇನ್ನೇನು ಮುಗಿದುಹೋಗಲಿದೆ ಎಂಬುದನ್ನು ತಿಳಿದುಕೊಳ್ಳುವುದು ಎಂತಹ ಒಂದು ಆನಂದದಾಯಕ ಸಂಗತಿ! ಅವನನ್ನು ಅಧೋಲೋಕದಲ್ಲಿ ಬಂಧಿಸಿದ ಬಳಿಕ, ವಿಧೇಯ ಮಾನವರಿಗೆ ಪರಿಪೂರ್ಣತೆಯು ಕೊಡಲ್ಪಡುವುದು. ಮತ್ತು ಆಗ, ಆರಂಭದಲ್ಲೇ ಯೆಹೋವನು ಮಾನವರಿಗಾಗಿ ಉದ್ದೇಶಿಸಿದ್ದಂತಹ ನಿತ್ಯಜೀವವನ್ನು ಅವರು ಪಡೆದುಕೊಳ್ಳಸಾಧ್ಯವಿದೆ. (ಪ್ರಕಟನೆ 21:1-4) ಆಗ ಸಮಯದ ಕೊರತೆಯು ಇನ್ನೆಂದಿಗೂ ಒಂದು ಸಮಸ್ಯೆಯಾಗಿರದು.

ನಿತ್ಯಜೀವವನ್ನು ಪಡೆದುಕೊಳ್ಳುವುದು, ಅಂದರೆ ಸದಾಕಾಲ ಜೀವಿಸುವುದು ಏನನ್ನು ಅರ್ಥೈಸುವುದು ಎಂಬುದನ್ನು ನೀವು ಊಹಿಸಿಕೊಳ್ಳಬಲ್ಲಿರೊ? ನೀವು ಮಾಡಿಮುಗಿಸಲು ಅಸಮರ್ಥವಾದ ಕೆಲಸಗಳ ಬಗ್ಗೆ ಇನ್ನೆಂದಿಗೂ ಕೊರಗಬೇಕಾದ ಅಗತ್ಯವಿರುವುದಿಲ್ಲ. ಆ ಕೆಲಸವನ್ನು ಮಾಡಿಮುಗಿಸಲು ನಿಮಗೆ ಇನ್ನೂ ಹೆಚ್ಚಿನ ಸಮಯದ ಆವಶ್ಯಕತೆಯಿರುವಲ್ಲಿ, ಅದಕ್ಕೆ ನಾಳೆಯಿದೆ, ಅಥವಾ ಮುಂದಿನ ವಾರವಿದೆ, ಅಥವಾ ಮುಂದಿನ ವರುಷವಿದೆ—ವಾಸ್ತವದಲ್ಲಿ, ನಿತ್ಯತೆಯು ನಿಮ್ಮ ದೃಷ್ಟಿಯುದ್ದಕ್ಕೂ ವ್ಯಾಪಿಸಿರುತ್ತದೆ!

ಈಗ ನಮಗೆ ದೊರಕುವ ಸಮಯವನ್ನು ಬುದ್ಧಿವಂತಿಕೆಯಿಂದ ಉಪಯೋಗಿಸುವುದು

ಮಾನವರ ಮೇಲೆ ಪ್ರಭಾವ ಬೀರಲಿಕ್ಕಾಗಿ ತನಗೆ ಉಳಿದಿರುವ ಸಮಯವು ತುಂಬ ಕೊಂಚವಾಗಿದೆ ಎಂಬುದನ್ನು ಸೈತಾನನು ಮನಗಂಡಿದ್ದಾನೆ. ಆದುದರಿಂದ, ಜನರನ್ನು ತುಂಬ ಕಾರ್ಯಮಗ್ನರಾಗಿರಿಸಲು ಅವನು ಎಷ್ಟರ ಮಟ್ಟಿಗೆ ಪ್ರಯತ್ನಿಸುತ್ತಾನೆಂದರೆ, ದೇವರ ಸ್ಥಾಪಿತ ರಾಜ್ಯದ ಕುರಿತಾದ ಸುವಾರ್ತೆಯನ್ನು ಕೇಳಿಸಿಕೊಳ್ಳಲು ಅವರಿಗೆ ಸಮಯವೇ ಇರುವುದಿಲ್ಲ. ಹೀಗಿರುವುದರಿಂದ, ಈ ಕೆಳಗಿನ ದೈವಿಕ ಸಲಹೆಗೆ ನಾವು ಕಿವಿಗೊಡುವುದು ಒಳ್ಳೇದು: “ನೀವು ನಡಕೊಳ್ಳುವ ರೀತಿಯನ್ನು ಕುರಿತು ಚೆನ್ನಾಗಿ ನೋಡಿಕೊಳ್ಳಿರಿ. ಜ್ಞಾನವಿಲ್ಲದವರಾಗಿರದೆ ಜ್ಞಾನವಂತರಾಗಿರ್ರಿ. ಈ ದಿನಗಳು ಕೆಟ್ಟವುಗಳಾಗಿವೆ; ಆದದರಿಂದ ಕಾಲವನ್ನು ಸುಮ್ಮನೆ ಕಳಕೊಳ್ಳದೆ ಅದನ್ನು ಬೆಲೆಯುಳ್ಳದ್ದೆಂದು ಉಪಯೋಗಿಸಿಕೊಳ್ಳಿರಿ. ಮತ್ತು ಬುದ್ಧಿಹೀನರಾಗಿ ನಡೆಯದೆ ಕರ್ತನ [“ಯೆಹೋವನ,” NW] ಚಿತ್ತವೇನೆಂಬದನ್ನು ವಿಚಾರಿಸಿ ತಿಳಿದವರಾಗಿರ್ರಿ.”—ಎಫೆಸ 5:15-17.

ನಿಷ್ಪ್ರಯೋಜಕ ಬೆನ್ನಟ್ಟುವಿಕೆಗಳಿಗಾಗಿ ನಮ್ಮ ಸಮಯವನ್ನು ನಾವು ಹಾಳುಮಾಡುವುದಕ್ಕೆ ಬದಲಾಗಿ, ಅತಿ ಪ್ರಾಮುಖ್ಯವಾದ ಕೆಲಸಗಳಿಗಾಗಿ ನಮ್ಮ ಸಮಯವನ್ನು ನಾವು ಬುದ್ಧಿವಂತಿಕೆಯಿಂದ ಉಪಯೋಗಿಸುವುದು ಎಷ್ಟು ಅತ್ಯಾವಶ್ಯಕವಾದದ್ದಾಗಿದೆ! “ನಮ್ಮ ದಿನಗಳು ಕೊಂಚವೇ ಎಂದು ಎಣಿಸಿಕೊಳ್ಳುವ ಹಾಗೆ ನಮಗೆ ಕಲಿಸು; ಆಗ ಜ್ಞಾನದ ಹೃದಯವನ್ನು ಪಡಕೊಳ್ಳುವೆವು” ಎಂಬ ಹೃತ್ಪೂರ್ವಕ ಮಾತುಗಳಿಂದ ಮೋಶೆಯು ಯೆಹೋವ ದೇವರಿಗೆ ಮೊರೆಯಿಟ್ಟಾಗ ಅವನಲ್ಲಿ ಎಂತಹ ಮನೋಭಾವವಿತ್ತೋ ಅದೇ ಮನೋಭಾವವನ್ನು ನಾವು ಸಹ ಬೆಳೆಸಿಕೊಳ್ಳತಕ್ಕದ್ದು.—ಕೀರ್ತನೆ 90:12.

ಇಂದಿನ ಲೋಕದಲ್ಲಿ ಪ್ರತಿಯೊಬ್ಬರೂ ಕಾರ್ಯನಿರತರಾಗಿದ್ದಾರೆ ಎಂಬುದು ನಿಜ. ಆದರೂ, ದೇವರ ರಾಜ್ಯದ ಕೆಳಗೆ ನಿತ್ಯಜೀವವನ್ನು ಪಡೆದುಕೊಳ್ಳಲಿಕ್ಕಾಗಿರುವ ದೇವರ ಆವಶ್ಯಕತೆಗಳ ಕುರಿತು ಕಲಿತುಕೊಳ್ಳಲಿಕ್ಕಾಗಿ, ನಿಮ್ಮ ಅಮೂಲ್ಯ ಸಮಯದಲ್ಲಿ ಸ್ವಲ್ಪ ಸಮಯವನ್ನು ಬದಿಗಿರಿಸುವಂತೆ ಯೆಹೋವನ ಸಾಕ್ಷಿಗಳು ನಿಮ್ಮನ್ನು ಪ್ರೋತ್ಸಾಹಿಸುತ್ತಾರೆ. ಬೈಬಲನ್ನು ಕ್ರಮಬದ್ಧವಾಗಿ ಅಭ್ಯಾಸಿಸುವುದರಲ್ಲಿ, “ಯೆಹೋವನ ಚಿತ್ತವೇನೆಂಬದನ್ನು ವಿಚಾರಿಸಿ ತಿಳಿ”ದುಕೊಳ್ಳುವುದರಲ್ಲಿ ವ್ಯಯಿಸುವ ಒಂದು ತಾಸು, ಈ ಕೆಳಗಿನ ಮಾತುಗಳ ನೆರವೇರಿಕೆಯನ್ನು ವೈಯಕ್ತಿಕವಾಗಿ ಅನುಭವಿಸುವಂತೆ ನಿಮ್ಮನ್ನು ಶಕ್ತರನ್ನಾಗಿ ಮಾಡಬಹುದು: “ಕೆಟ್ಟದ್ದಕ್ಕೆ ಹೋಗದೆ ಒಳ್ಳೆಯದನ್ನೇ ಮಾಡು; ಆಗ ನೀನು ಯಾವಾಗಲೂ [ದೇಶದಲ್ಲಿ] ವಾಸವಾಗಿರುವಿ. ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.”—ಕೀರ್ತನೆ 37:27, 29.

[ಅಧ್ಯಯನ ಪ್ರಶ್ನೆಗಳು]

a ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ, ನಿತ್ಯಜೀವಕ್ಕೆ ನಡೆಸುವ ಜ್ಞಾನ ಎಂಬ ಪುಸ್ತಕದ 6ನೆಯ ಅಧ್ಯಾಯವನ್ನು ನೋಡಿರಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ