ನಿಜವಾಗಿಯೂ ಪ್ರಾಮುಖ್ಯವಾಗಿರುವ ಸಹಸ್ರ ವರ್ಷಕ್ಕಾಗಿ ಸಿದ್ಧರಾಗಿರಿ!
ಕ್ರಿಸ್ತನ ಸಾವಿರ ವರ್ಷದಾಳಿಕೆಯು ಮಾನವ ಕುಟುಂಬಕ್ಕೆ ಅಸಂಖ್ಯಾತ ಆಶೀರ್ವಾದಗಳನ್ನು ತರುವುದು. ಯೇಸುವಿನ ಪ್ರೀತಿಪೂರ್ಣ ಮಾರ್ಗದರ್ಶನೆಯ ಕೆಳಗೆ, ಮಾನವಕುಲವು ಸದ್ಯದ ಶೋಚನೀಯ ಸ್ಥಿತಿಯಿಂದ ಮೇಲೆತ್ತಲ್ಪಟ್ಟು, ಮಹಿಮಾಯುತವಾದ ಪರಿಪೂರ್ಣತೆಗೆ ಏರಿಸಲ್ಪಡುವುದು. ಇದು ನಿಮಗೆ ಏನನ್ನು ಅರ್ಥೈಸಸಾಧ್ಯವಿದೆ ಎಂಬುದರ ಬಗ್ಗೆ ತುಸು ಯೋಚಿಸಿರಿ. ಪರಿಪೂರ್ಣ ಆರೋಗ್ಯ! ಪ್ರತಿ ದಿನ ಬೆಳಗ್ಗೆ ಏಳುವಾಗ ಹಿಂದಿನ ದಿನಕ್ಕಿಂತಲೂ ಹೆಚ್ಚು ತಾಜಾತನವನ್ನು ಅನುಭವಿಸುವುದನ್ನು ಊಹಿಸಿಕೊಳ್ಳಿರಿ. ಲಕ್ಷಾಂತರ ಸ್ತ್ರೀಪುರುಷರು ಮತ್ತು ಮಕ್ಕಳು, ಆ ಸಂತೋಷಭರಿತ ಸಮಯದಲ್ಲಿ ಜೀವಿಸುವುದನ್ನು ಎದುರುನೋಡುತ್ತಿದ್ದಾರೆ. ಆ ಸಮಯಕ್ಕಾಗಿ ಅವರು ಹಾತೊರೆಯುತ್ತಿದ್ದಾರೆ, ಅದಕ್ಕಾಗಿ ಪ್ರಾರ್ಥಿಸುತ್ತಿದ್ದಾರೆ. ಈ ಆಶೀರ್ವಾದಗಳನ್ನು ತಾವೆಲ್ಲರೂ ಖಂಡಿತವಾಗಿಯೂ ಅನುಭವಿಸಸಾಧ್ಯವಿದೆ ಎಂಬುದನ್ನು ಅವರ ಬೈಬಲ್ ಅಭ್ಯಾಸವು ಅವರಿಗೆ ಮನಗಾಣಿಸಿದೆ.
ಆದರೂ, ಯೇಸು ಕ್ರಿಸ್ತನು ತನ್ನ ಸಾವಿರ ವರ್ಷದಾಳಿಕೆಯನ್ನು ಆರಂಭಿಸುವುದಕ್ಕೆ ಮೊದಲು, ತನ್ನ ಆಳ್ವಿಕೆಯನ್ನು ವಿರೋಧಿಸುವಂತಹ ಜನರೆಲ್ಲರನ್ನೂ ಭೂಮಿಯಿಂದ ತೆಗೆದುಹಾಕಬೇಕು. ಬೈಬಲಿನಲ್ಲಿ ಅರ್ಮಗೆದೋನ್ ಎಂದು ಕರೆಯಲ್ಪಟ್ಟಿರುವಂತಹ ಯುದ್ಧದಲ್ಲಿ ಅವನು ಈ ಕೆಲಸವನ್ನು ಮಾಡುವನು. (ಪ್ರಕಟನೆ 16:16) ಭೂಮಿಯಲ್ಲಿರುವ ನಿಜ ಕ್ರೈಸ್ತರು ಈ ಹೋರಾಟದಲ್ಲಿ ಭಾಗವಹಿಸುವುದಿಲ್ಲ. ಅದು ದೇವರ ಯುದ್ಧವಾಗಿದೆ. ಮತ್ತು ಈ ಯುದ್ಧವು ಒಂದೇ ಒಂದು ನಿಗದಿತ ಸ್ಥಳದಲ್ಲಿ ನಡೆಯುವುದಿಲ್ಲ. ಭೂಮಿಯ ಒಂದು ಮೂಲೆಯಿಂದ ಇನ್ನೊಂದು ಮೂಲೆಯ ವರೆಗೂ ಇದು ವ್ಯಾಪಿಸುವುದು ಎಂದು ಬೈಬಲು ಹೇಳುತ್ತದೆ. ಕ್ರಿಸ್ತನ ಆಳ್ವಿಕೆಯ ಶತ್ರುಗಳೆಲ್ಲರೂ ಯುದ್ಧದಲ್ಲಿ ಸಂಹರಿಸಲ್ಪಡುವರು. ಅವರಲ್ಲಿ ಯಾರೊಬ್ಬರೂ ತಪ್ಪಿಸಿಕೊಳ್ಳಸಾಧ್ಯವಿಲ್ಲ!—ಯೆರೆಮೀಯ 25:33.
ತದನಂತರ ಯೇಸು ಪಿಶಾಚನಾದ ಸೈತಾನನ ಕಡೆಗೆ ಹಾಗೂ ಅವನ ದೆವ್ವಗಳ ಕಡೆಗೆ ತನ್ನ ಗಮನವನ್ನು ಹರಿಸುವನು. ಪ್ರಕಟನೆಯ ಪುಸ್ತಕದ ಬರಹಗಾರನು ತಾನು ಕಂಡ ದರ್ಶನವನ್ನು ವರ್ಣಿಸುವಾಗ, ಈ ದೃಶ್ಯವನ್ನು ನೀವು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಿರಿ: “ಆಗ ಒಬ್ಬ ದೇವದೂತನು [ಯೇಸು ಕ್ರಿಸ್ತನು] ಅಧೋಲೋಕದ ಬೀಗದ ಕೈಯನ್ನೂ ದೊಡ್ಡ ಸರಪಣಿಯನ್ನೂ ಕೈಯಲ್ಲಿ ಹಿಡಿದುಕೊಂಡು ಪರಲೋಕದಿಂದ ಇಳಿದು ಬರುವದನ್ನು ಕಂಡೆನು. ಅವನು ಪಿಶಾಚನೂ ಸೈತಾನನೂ ಆಗಿರುವ ಪುರಾತನಸರ್ಪನೆಂಬ ಘಟಸರ್ಪನನ್ನು ಹಿಡಿದು ಸಾವಿರ ವರುಷ ಬಂಧನದಲ್ಲಿಟ್ಟನು.” (ಪ್ರಕಟನೆ 20:1, 2) ಆ ಮೇಲೆ, ಸೈತಾನನೂ ಅವನ ದೆವ್ವಗಳೂ ಸದಾಕಾಲಕ್ಕೂ ನಾಶಮಾಡಲ್ಪಡುವವು.—ಮತ್ತಾಯ 25:41.
“ಯಾರಿಂದಲೂ ಎಣಿಸಲಾಗದಂಥ ಮಹಾ ಸಮೂಹವು” ಅರ್ಮಗೆದೋನ್ ಯುದ್ಧವನ್ನು ಪಾರಾಗುವುದು. (ಪ್ರಕಟನೆ 7:9) ಒಬ್ಬ ಕುರುಬನು ತನ್ನ ಕುರಿಗಳನ್ನು ಜೀವರಕ್ಷಕ ನೀರಿನ ಬಳಿಗೆ ನಡಿಸುವಂತೆಯೇ, ಕ್ರಿಸ್ತನು “ಜೀವಜಲದ ಒರತೆ”ಗಳಿಂದ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಇವರನ್ನು ಮಾರ್ಗದರ್ಶಿಸುವನು. (ಪ್ರಕಟನೆ 7:17) ಸೈತಾನನಿಂದ ಹಾಗೂ ಅವನ ದೆವ್ವಗಳಿಂದ ತಮ್ಮ ಆತ್ಮಿಕ ಪ್ರಗತಿಗೆ ಯಾವುದೇ ಅಡೆತಡೆಯಿಲ್ಲದಿರುವುದರಿಂದ, ಅರ್ಮಗೆದೋನ್ ಯುದ್ಧದಿಂದ ಪಾರಾದವರಿಗೆ ಕ್ರಮೇಣ ತಮ್ಮ ಪಾಪಪೂರ್ಣ ಪ್ರವೃತ್ತಿಗಳನ್ನು ಜಯಿಸುವಂತೆ ಸಹಾಯವು ಕೊಡಲ್ಪಡುವುದು ಮತ್ತು ಕಟ್ಟಕಡೆಗೆ ಅವರು ಪರಿಪೂರ್ಣತೆಯನ್ನು ತಲಪುವರು!
ಕ್ರಿಸ್ತನ ಪ್ರೀತಿಪೂರ್ಣ ಆಳ್ವಿಕೆಯ ಕೆಳಗೆ, ಜೀವನ ಪರಿಸ್ಥಿತಿಗಳು ಪ್ರಗತಿಪರವಾಗಿ ಉತ್ತಮಗೊಳ್ಳುವವು. ಯೇಸು ಕ್ರಿಸ್ತನ ಮೂಲಕ ಯೆಹೋವ ದೇವರು, ವೇದನೆ ಮತ್ತು ದುಃಖದ ಎಲ್ಲ ಮೂಲಗಳನ್ನು ಸಂಪೂರ್ಣವಾಗಿ ತೆಗೆದುಹಾಕುವನು. ಆತನು “ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ.” (ಪ್ರಕಟನೆ 21:4) ಪ್ರವಾದಿಯಾದ ಯೆಶಾಯನು ಅದರ ಚಿತ್ರಣವನ್ನು ಈ ಮಾತುಗಳಿಂದ ಪೂರ್ಣಗೊಳಿಸುತ್ತಾನೆ: “ಆಗ ಕುರುಡರ ಕಣ್ಣು ಕಾಣುವದು, ಕಿವುಡರ ಕಿವಿ ಕೇಳುವದು, ಕುಂಟನು ಜಿಂಕೆಯಂತೆ ಹಾರುವನು, ಮೂಕನ ನಾಲಿಗೆಯು ಹರ್ಷಧ್ವನಿಗೈಯುವದು.” (ಯೆಶಾಯ 35:5, 6) ಮತ್ತು ಪುನಃ ಎಂದೂ ಸಾಯಬೇಕಾಗಿಲ್ಲದ ಪ್ರತೀಕ್ಷೆಯೊಂದಿಗೆ ಮೃತಪಟ್ಟಿರುವ “ದೊಡ್ಡವರೂ ಚಿಕ್ಕವರೂ” ಪುನರುತ್ಥಾನಗೊಳಿಸಲ್ಪಡುವರು!—ಪ್ರಕಟನೆ 20:12.
ಅರ್ಮಗೆದೋನ್ ಯುದ್ಧದಲ್ಲಿ ಪಾರಾಗಲಿರುವ “ಮಹಾ ಸಮೂಹವು” ಈಗಲೂ ಒಟ್ಟುಗೂಡಿಸಲ್ಪಡುತ್ತಾ ಇದೆ. ಕ್ರಿಸ್ತನ ಸಹಸ್ರ ವರ್ಷದಾಳಿಕೆಗಾಗಿ ಅವರು ಸಿದ್ಧರಾಗುತ್ತಿದ್ದಾರೆ. ಆ ಆಳ್ವಿಕೆಯು ಯಾವಾಗ ಆರಂಭವಾಗುವುದು ಎಂಬುದು ಅವರಿಗೆ ಗೊತ್ತಿಲ್ಲವಾದರೂ, ದೇವರು ನಿಷ್ಕರ್ಷೆಮಾಡಿರುವ ಸಮಯಕ್ಕೆ ಸರಿಯಾಗಿ ಅದು ಆರಂಭವಾಗುವುದು ಎಂಬ ದೃಢವಿಶ್ವಾಸ ಅವರಿಗಿದೆ. ನೀವು ಸಹ ಅವರಲ್ಲಿ ಒಬ್ಬರಾಗಿರಸಾಧ್ಯವಿದೆ. ಆದರೆ ನೀವು ಸಹ ಸಿದ್ಧರಾಗಬೇಕು—ಅಂದರೆ ನಿಮ್ಮ ಸಂಪತ್ತನ್ನು ಮಾರಿ, ಭೂಮಿಯ ಒಂದು ನಿರ್ದಿಷ್ಟ ಸ್ಥಳಕ್ಕೆ ಪ್ರಯಾಣಿಸುವ ಮೂಲಕ ಅಲ್ಲ, ಬದಲಾಗಿ ಒಂದು ಬೈಬಲ್ ಅಭ್ಯಾಸದ ಸಹಾಯದಿಂದ ಯೆಹೋವ ದೇವರ ಬಗ್ಗೆ ಮತ್ತು ಆತನ ಉದ್ದೇಶಗಳ ಬಗ್ಗೆ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳುವ ಮೂಲಕವೇ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಒಂದು ಬೈಬಲ್ ಅಭ್ಯಾಸವು ಹೇಗೆ ಪ್ರಯೋಜನದಾಯಕವಾಗಿರಸಾಧ್ಯವಿದೆ ಎಂಬುದನ್ನು ಯೆಹೋವನ ಸಾಕ್ಷಿಗಳು ನಿಮಗೆ ಉಚಿತವಾಗಿ ಮತ್ತು ಯಾವುದೇ ನಿರ್ಬಂಧವಿಲ್ಲದೆ ತೋರಿಸಲು ಇಷ್ಟಪಡುವರು. ಇನ್ನೂ ಹೆಚ್ಚಿನ ಮಾಹಿತಿಯನ್ನು ಒದಗಿಸಲು ಈ ಪತ್ರಿಕೆಯ ಪ್ರಕಾಶಕರು ಸಂತೋಷಿಸುವರು.
[ಪುಟ 7 ರಲ್ಲಿರುವ ಚೌಕ]
ಒಂದು ಸಾವಿರ ವರ್ಷ—ಅಕ್ಷರಾರ್ಥವೊ ಅಥವಾ ಸಾಂಕೇತಿಕವೊ?
ಬೈಬಲಿನ ಪ್ರಕಟನೆಯ ಪುಸ್ತಕದಲ್ಲಿ ಅಧಿಕಾಂಶ ಭಾಗವು ಸಾಂಕೇತಿಕ ಭಾಷೆಯಲ್ಲಿ ಬರೆಯಲ್ಪಟ್ಟಿರುವುದರಿಂದ, ಒಂದು ಪ್ರಶ್ನೆಯು ಏಳುತ್ತದೆ. ಅದೇನೆಂದರೆ, ಪ್ರಕಟನೆ ಪುಸ್ತಕದಲ್ಲಿ ತಿಳಿಸಲ್ಪಟ್ಟಿರುವ ಕ್ರಿಸ್ತನ ಸಾವಿರ ವರ್ಷದಾಳಿಕೆಯ ಕುರಿತಾಗಿ ಏನು? ಇದು ಅಕ್ಷರಾರ್ಥ ಕಾಲಾವಧಿಯಾಗಿದೆಯೊ ಅಥವಾ ಸಾಂಕೇತಿಕ ಕಾಲಾವಧಿಯಾಗಿದೆಯೊ?
ಇದು ಅಕ್ಷರಾರ್ಥವಾದ ಒಂದು ಸಾವಿರ ವರ್ಷಗಳ ಕಾಲಾವಧಿಯನ್ನು ಅರ್ಥೈಸುತ್ತದೆ ಎಂಬುದಕ್ಕೆ ಅನೇಕಾನೇಕ ಪುರಾವೆಗಳಿವೆ. ಇದನ್ನು ಪರಿಗಣಿಸಿರಿ: ಯಾವಾಗ ಮಾನವಕುಲವು ನ್ಯಾಯವಿಚಾರಣೆಗೆ ಒಳಗಾಗುತ್ತದೋ ಆ ಕ್ರಿಸ್ತನ ಸಾವಿರ ವರ್ಷದಾಳಿಕೆಯನ್ನು ಒಂದು ದಿವಸ ಎಂದು ಅಪೊಸ್ತಲ ಪೌಲನು ಸೂಚಿಸುತ್ತಾನೆ. (ಅ. ಕೃತ್ಯಗಳು 17:31; ಪ್ರಕಟನೆ 20:4) ಯೆಹೋವನ ಎಣಿಕೆಯಲ್ಲಿ ಒಂದು ದಿನವು (24 ತಾಸುಗಳು) ಒಂದು ಸಾವಿರ ವರ್ಷಗಳಿಗೆ ಸಮಾನವಾಗಿದೆ ಎಂದು ಅಪೊಸ್ತಲ ಪೇತ್ರನು ಬರೆದನು. (2 ಪೇತ್ರ 3:8) ಈ ನ್ಯಾಯವಿಚಾರಣೆಯ “ದಿನವು” ಅಕ್ಷರಾರ್ಥವಾಗಿ ಒಂದು ಸಾವಿರ ವರ್ಷಗಳಷ್ಟು ದೀರ್ಘವಾಗಿದೆ ಎಂಬುದನ್ನು ಅದು ಸೂಚಿಸುತ್ತದೆ. ಇದಕ್ಕೆ ಕೂಡಿಸಿ, ಪ್ರಕಟನೆ 20:3, 5-7ರಲ್ಲಿ, “ಒಂದು ಸಾವಿರ ವರುಷ” ಎಂಬುದಾಗಿ ಅಲ್ಲ, ಬದಲಾಗಿ “ಆ ಸಾವಿರ ವರುಷ” ಎಂಬುದಾಗಿ ನಾಲ್ಕು ಕಡೆಗಳಲ್ಲಿ ನಾವು ಓದುತ್ತೇವೆ. ಇದು ಒಂದು ನಿಶ್ಚಿತ ಕಾಲಾವಧಿಯನ್ನು ಸೂಚಿಸುತ್ತಿರುವಂತೆ ತೋರುತ್ತದೆ.