ಯೆಹೋವನು ನನಗೆ ಪ್ರೀತಿಪೂರ್ವಕ ದಯೆಯ ದೇವರಾಗಿದ್ದಾನೆ
ಜಾನ್ ಆಂಡ್ರೋನೀಕೋಸ್ ಹೇಳಿದಂತೆ
ಅದು 1956ನೆಯ ಇಸವಿಯಾಗಿತ್ತು. ನನ್ನ ಮದುವೆಯಾಗಿ ಒಂಬತ್ತೇ ದಿನಗಳು ಕಳೆದಿದ್ದವು, ಅಷ್ಟರಲ್ಲೇ ನಾನು ಉತ್ತರ ಗ್ರೀಸ್ನ ಗೂಮೂಲ್ಜಿನದಲ್ಲಿರುವ ಅಪೀಲ್ ಕೋರ್ಟಿನ ಕಟಕಟೆಯಲ್ಲಿ ನಿಂತುಕೊಂಡಿದ್ದೆ. ದೇವರ ರಾಜ್ಯದ ಸುವಾರ್ತೆಯನ್ನು ಸಾರಿದ್ದಕ್ಕಾಗಿ ನನಗೆ ವಿಧಿಸಲ್ಪಟ್ಟಿದ್ದ 12 ತಿಂಗಳ ಸಜೆಯು ವಜಾಮಾಡಲ್ಪಡಬಹುದು ಎಂಬುದೇ ನನ್ನ ಆಶಾಕಿರಣವಾಗಿತ್ತು. ಸೆರೆಮನೆಯಲ್ಲಿ ಆರು ತಿಂಗಳುಗಳನ್ನು ಕಳೆಯುವಂತಹ ಆ ಕೋರ್ಟಿನ ನಿರ್ಣಯವು, ನನ್ನ ಆಶಾಕಿರಣವನ್ನು ನಂದಿಸಿಬಿಟ್ಟಿತು. ಮತ್ತು ಇದು ಮುಂದೆ ಬರಲಿದ್ದ ಅನೇಕಾನೇಕ ಪರೀಕ್ಷೆಗಳ ಒಂದು ಆರಂಭದ ಹಂತವಾಗಿತ್ತು. ಆದರೂ, ಈ ಎಲ್ಲ ಸಮಯಗಳಲ್ಲಿ ಯೆಹೋವನು ನನಗೆ ಪ್ರೀತಿಪೂರ್ವಕ ದಯೆಯ ಒಬ್ಬ ದೇವರಾಗಿ ಕಂಡುಬಂದನು.
ಅಕ್ಟೋಬರ್ 1, 1931ರಂದು ನಾನು ಜನಿಸಿದಾಗ, ನನ್ನ ಕುಟುಂಬವು ಕಾವಾಲಾ ಎಂಬ ಪಟ್ಟಣದಲ್ಲಿ ವಾಸಿಸುತ್ತಿತ್ತು; ಅಪೊಸ್ತಲ ಪೌಲನು ತನ್ನ ಎರಡನೆಯ ಮಿಷನೆರಿ ಪ್ರಯಾಣದಲ್ಲಿ ಸಂದರ್ಶಿಸಿದ ಮ್ಯಾಸಿಡೋನಿಯದ ನಿಯಪೊಲಿಸೇ ಇದಾಗಿತ್ತು. ನಾನು ಐದು ವರ್ಷ ಪ್ರಾಯದವನಿದ್ದಾಗ ನನ್ನ ಅಮ್ಮ ಯೆಹೋವನ ಸಾಕ್ಷಿಯಾದರು, ಮತ್ತು ಅವರು ಹೆಚ್ಚುಕಡಿಮೆ ಅನಕ್ಷರಸ್ಥರಾಗಿದ್ದರೂ, ದೇವರ ಪ್ರೀತಿಯನ್ನು ಹಾಗೂ ಆತನ ಭಯವನ್ನು ನನ್ನಲ್ಲಿ ಮೂಡಿಸಲು ತಮ್ಮ ಕೈಲಾದುದೆಲ್ಲವನ್ನೂ ಮಾಡಿದರು. ನನ್ನ ಅಪ್ಪ ವಿಪರೀತ ಸಾಂಪ್ರದಾಯಿಕ ವ್ಯಕ್ತಿಯಾಗಿದ್ದು, ಹಟಮಾರಿತನದಿಂದ ಗ್ರೀಕ್ ಆರ್ತೊಡಾಕ್ಸ್ ಸಂಪ್ರದಾಯವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು. ಬೈಬಲ್ ಸತ್ಯತೆಯಲ್ಲಿ ಅವರಿಗೆ ಕಿಂಚಿತ್ತೂ ಆಸಕ್ತಿ ಇರಲಿಲ್ಲವಾದುದರಿಂದ ಅವರು ನನ್ನ ತಾಯಿಯನ್ನು ವಿರೋಧಿಸುತ್ತಿದ್ದರು, ಮತ್ತು ಕೆಲವೊಮ್ಮೆ ಹಿಂಸಿಸುತ್ತಿದ್ದರು.
ಹೀಗೆ, ಒಂದು ವಿಭಜಿತ ಮನೆವಾರ್ತೆಯಲ್ಲಿ ನಾನು ಬೆಳೆದೆ; ನನ್ನ ತಂದೆಯವರು ತಾಯಿಯನ್ನು ಹೊಡೆದುಬಡಿದು, ಅವಹೇಳನ ಮಾಡಿ, ಕೊನೆಗೆ ನಮ್ಮನ್ನು ಬಿಟ್ಟು ಹೊರಟುಹೋದರು. ನನ್ನ ಬಾಲ್ಯಾವಸ್ಥೆಯ ಆರಂಭದಿಂದಲೇ, ನನ್ನನ್ನು ಹಾಗೂ ನನ್ನ ತಂಗಿಯನ್ನು ಅಮ್ಮ ಯಾವಾಗಲೂ ಕ್ರೈಸ್ತ ಕೂಟಗಳಿಗೆ ಕರೆದುಕೊಂಡುಹೋಗುತ್ತಿದ್ದರು. ಆದರೂ, ನಾನು 15 ವರ್ಷದವನಾದಾಗ, ಯೌವನಾವಸ್ಥೆಗೆ ಸಹಜವಾದ ಬಯಕೆಗಳು ಹಾಗೂ ಸ್ವತಂತ್ರ ಮನೋಭಾವವು ನನ್ನನ್ನು ಯೆಹೋವನ ಸಾಕ್ಷಿಗಳಿಂದ ದೂರಹೋಗುವಂತೆ ಮಾಡಿತು. ಹಾಗಿದ್ದರೂ, ನನ್ನನ್ನು ಸರಿಯಾದ ದಾರಿಗೆ ತರಲಿಕ್ಕಾಗಿ ನನ್ನ ನಂಬಿಗಸ್ತ ತಾಯಿಯವರು ತುಂಬ ಕಷ್ಟಪಟ್ಟರು, ಮತ್ತು ನನಗೆ ಸಹಾಯ ಮಾಡಲು ಪ್ರಯತ್ನಿಸುತ್ತಿರುವಾಗ ಅವರು ತುಂಬ ಕಣ್ಣೀರು ಸುರಿಸಿದ್ದರು.
ಬಡತನದ ಕಾರಣ ಹಾಗೂ ನಾನು ನಡೆಸುತ್ತಿದ್ದ ಕೀಳ್ಮಟ್ಟದ ಜೀವನದಿಂದಾಗಿ ನಾನು ತುಂಬ ಅಸ್ವಸ್ಥನಾದೆ ಮತ್ತು ಮೂರು ತಿಂಗಳಿಗಿಂತಲೂ ಹೆಚ್ಚು ಸಮಯದ ವರೆಗೆ ನಾನು ಹಾಸಿಗೆಯಲ್ಲಿಯೇ ಇರಬೇಕಾಯಿತು. ಆ ಸಮಯದಲ್ಲಿ, ನನ್ನ ತಾಯಿಗೆ ಸತ್ಯವನ್ನು ಕಲಿಸಿದ್ದ ಒಬ್ಬ ನಮ್ರ ಸಹೋದರನು, ದೇವರಿಗಾಗಿ ನನ್ನಲ್ಲಿ ಯಥಾರ್ಥ ಪ್ರೀತಿಯಿದೆ ಎಂಬುದನ್ನು ಅರಿತುಕೊಂಡನು. ಆತ್ಮಿಕವಾಗಿ ಪುನಃ ಚೇತರಿಸಿಕೊಳ್ಳಲು ನನಗೆ ಸಹಾಯ ಮಾಡಸಾಧ್ಯವಿದೆ ಎಂದು ಅವನಿಗನಿಸಿತು. ಬೇರೆಯವರು ಅವನಿಗೆ ಹೇಳಿದ್ದು: “ಜಾನ್ಗೆ ಸಹಾಯ ಮಾಡಲು ಪ್ರಯತ್ನಿಸಿ ನೀನು ನಿನ್ನ ಸಮಯವನ್ನು ಸುಮ್ಮನೆ ವ್ಯರ್ಥಮಾಡಿಕೊಳ್ಳುತ್ತಿರುವಿ; ಇನ್ನೆಂದಿಗೂ ಅವನು ಆತ್ಮಿಕ ವಿಷಯಗಳಲ್ಲಿ ಅಭಿರುಚಿಯನ್ನು ತೋರಿಸಲಾರನು.” ಆದರೆ ನನಗೆ ಸಹಾಯ ಮಾಡುವುದರಲ್ಲಿ ಈ ಸಹೋದರನು ತೋರಿಸಿದ ತಾಳ್ಮೆ ಹಾಗೂ ಪಟ್ಟುಹಿಡಿಯುವಿಕೆಗೆ ಪ್ರತಿಫಲ ಸಿಕ್ಕಿತು. 1952ರ ಆಗಸ್ಟ್ 15ರಂದು, 21ರ ಪ್ರಾಯದಲ್ಲಿ ನಾನು ನೀರಿನ ದೀಕ್ಷಾಸ್ನಾನದ ಮೂಲಕ ನನ್ನ ಸಮರ್ಪಣೆಯನ್ನು ಸಂಕೇತಿಸಿದೆ.
ನವವಿವಾಹಿತ—ಆದರೆ ಸೆರೆಮನೆಯಲ್ಲಿ
ಮೂರು ವರ್ಷಗಳ ಬಳಿಕ, ತುಂಬ ಒಳ್ಳೆಯ ಗುಣಗಳಿದ್ದು, ಆತ್ಮಿಕ ಮನೋಭಾವದ ಸಹೋದರಿಯಾಗಿದ್ದ ಮಾರ್ಥಳ ಪರಿಚಯ ನನಗಾಯಿತು, ಮತ್ತು ಸ್ವಲ್ಪದರಲ್ಲೇ ನಮ್ಮ ನಿಶ್ಚಿತಾರ್ಥವಾಯಿತು. ಒಂದು ದಿನ ಮಾರ್ಥ ನನಗೆ “ಇವತ್ತು ನಾನು ಮನೆಯಿಂದ ಮನೆಗೆ ಸುವಾರ್ತೆಯನ್ನು ಸಾರಲು ಹೋಗುವ ಮನಸ್ಸು ಮಾಡಿದ್ದೇನೆ. ನೀನು ಸಹ ನನ್ನೊಂದಿಗೆ ಬರಲು ಇಷ್ಟಪಡುತ್ತೀಯೊ?” ಎಂದು ಕೇಳಿದಾಗ ನಿಜವಾಗಿಯೂ ನನಗೆ ಅತ್ಯಾಶ್ಚರ್ಯವಾಯಿತು. ಅಷ್ಟರ ತನಕ ನಾನು ಎಂದೂ ಮನೆಯಿಂದ ಮನೆಯ ಸುವಾರ್ತೆಯಲ್ಲಿ ಭಾಗವಹಿಸಿರಲಿಲ್ಲ, ಆದರೆ ಹೆಚ್ಚಾಗಿ ನಾನು ಅನೌಪಚಾರಿಕ ಸಾಕ್ಷಿಕಾರ್ಯವನ್ನು ಮಾಡುತ್ತಿದ್ದೆ. ಆ ಸಮಯದಲ್ಲಿ ಗ್ರೀಸ್ನಲ್ಲಿ ಸಾರುವ ಕಾರ್ಯವು ನಿಷೇಧಿಸಲ್ಪಟ್ಟಿತ್ತು, ಮತ್ತು ನಾವು ನಮ್ಮ ಸಾರುವ ಚಟುವಟಿಕೆಯನ್ನು ಗುಪ್ತವಾಗಿ ನಡೆಸಬೇಕಾಗಿತ್ತು. ಇದರ ಫಲಿತಾಂಶವಾಗಿ ಅನೇಕರನ್ನು ಸೆರೆಹಿಡಿಯಲಾಗಿತ್ತು, ಕೋರ್ಟ್ ಕೇಸುಗಳು ನಡೆಯುತ್ತಿದ್ದವು, ಮತ್ತು ಸೆರೆಮನೆಯ ಕಠಿನ ಶಿಕ್ಷೆಗೆ ಒಳಪಡಿಸಲಾಗಿತ್ತು. ಆದರೂ, ನನ್ನ ನಿಶ್ಚಿತ ವಧುವಿಗೆ ಇಲ್ಲ ಎಂದು ಹೇಳಲು ನನ್ನಿಂದಾಗಲಿಲ್ಲ!
1956ರಲ್ಲಿ ಮಾರ್ಥ ನನ್ನ ಹೆಂಡತಿಯಾದಳು. ನಮ್ಮ ಮದುವೆಯಾಗಿ ಒಂಬತ್ತೇ ದಿನಗಳು ಕಳೆದಿದ್ದವಷ್ಟೇ, ಅಷ್ಟರಲ್ಲಿ ಗೂಮೂಲ್ಜಿನದಲ್ಲಿರುವ ಆ ಅಪೀಲ್ ಕೋರ್ಟಿನಿಂದ ಆರು ತಿಂಗಳ ಸೆರೆಮನೆ ಶಿಕ್ಷೆಯು ನನಗೆ ವಿಧಿಸಲ್ಪಟ್ಟಿತು. ಸ್ವಲ್ಪ ಸಮಯದ ಹಿಂದೆ, ನನ್ನ ತಾಯಿಯ ಸ್ನೇಹಿತೆಯಾಗಿದ್ದ ಒಬ್ಬ ಕ್ರೈಸ್ತ ಸಹೋದರಿಯ ಬಳಿ ನಾನು ಕೇಳಿದ್ದ ಒಂದು ಪ್ರಶ್ನೆಯನ್ನು ಇದು ನನ್ನ ಮನಸ್ಸಿಗೆ ತಂದಿತು: “ನಾನು ಒಬ್ಬ ನಿಜವಾದ ಯೆಹೋವನ ಸಾಕ್ಷಿಯಾಗಿದ್ದೇನೆ ಎಂಬುದನ್ನು ನಾನು ಹೇಗೆ ತೋರ್ಪಡಿಸಸಾಧ್ಯವಿದೆ? ನನ್ನ ನಂಬಿಕೆಯನ್ನು ರುಜುಪಡಿಸುವಂತಹ ಯಾವುದೇ ಸದವಕಾಶ ನನಗೆ ಎಂದೂ ಒದಗಿಬರಲಿಲ್ಲ.” ಸೆರೆಮನೆಯಲ್ಲಿ ನನ್ನನ್ನು ಭೇಟಿಯಾಗಲು ಈ ಸಹೋದರಿಯು ಬಂದಾಗ, ಆ ಪ್ರಶ್ನೆಯನ್ನು ಅವಳು ನನಗೆ ನೆನಪು ಹುಟ್ಟಿಸುತ್ತಾ ಹೇಳಿದ್ದು: “ನೀನು ಎಷ್ಟರ ಮಟ್ಟಿಗೆ ಯೆಹೋವನನ್ನು ಪ್ರೀತಿಸುತ್ತೀ ಎಂಬುದನ್ನು ಈಗ ಆತನಿಗೆ ತೋರಿಸಸಾಧ್ಯವಿದೆ. ಇದೇ ನಿನ್ನ ನೇಮಕ.”
ನನ್ನನ್ನು ಸೆರೆಮನೆಯಿಂದ ಜಾಮೀನಿನ ಮೇಲೆ ಬಿಡುಗಡೆಮಾಡಲಿಕ್ಕಾಗಿ ನನ್ನ ಲಾಯರ್ ಹಣ ಎತ್ತಲು ಪ್ರಯತ್ನಿಸುತ್ತಿದ್ದಾನೆ ಎಂಬುದು ನನಗೆ ಗೊತ್ತಾದಾಗ, ನನಗೆ ವಿಧಿಸಲ್ಪಟ್ಟಿರುವ ಸಜೆಯನ್ನು ಅನುಭವಿಸಲು ನಾನು ಇಷ್ಟಪಡುತ್ತೇನೆ ಎಂದು ಅವನಿಗೆ ಹೇಳಿದೆ. ಆರು ತಿಂಗಳ ಸೆರೆವಾಸದ ಕೊನೆಯಲ್ಲಿ, ನನ್ನ ಜೊತೆಯಲ್ಲಿದ್ದ ಸೆರೆವಾಸಿಗಳಲ್ಲಿ ಇಬ್ಬರು ಸತ್ಯವನ್ನು ಸ್ವೀಕರಿಸುವುದನ್ನು ನೋಡಿ ನಾನೆಷ್ಟು ಸಂತೋಷಗೊಂಡಿದ್ದೆ! ಮುಂದಿನ ವರ್ಷಗಳಲ್ಲಿ, ಸುವಾರ್ತೆಯ ಕಾರಣದಿಂದ ಅನೇಕ ಕೋರ್ಟ್ ಕೇಸ್ಗಳಲ್ಲಿ ನಾನು ಒಳಗೂಡಿದ್ದೆ.
ನಾವೆಂದೂ ವಿಷಾದಪಟ್ಟಿರದಂತಹ ಆಯ್ಕೆಗಳು
1959ರಲ್ಲಿ, ಅಂದರೆ ನನ್ನ ಬಿಡುಗಡೆಯಾಗಿ ಒಂದೆರಡು ವರ್ಷಗಳು ಕಳೆದ ಬಳಿಕ, ನಾನು ಸಭಾ ಸೇವಕನಾಗಿ ಅಥವಾ ಅಧ್ಯಕ್ಷ ಮೇಲ್ವಿಚಾರಕನಾಗಿ ಕಾರ್ಯನಡಿಸುತ್ತಿದ್ದೆ. ತದನಂತರ ಸಭಾ ಹಿರಿಯರ ತರಬೇತಿ ಶಿಕ್ಷಣವಾದ ಕಿಂಗ್ಡಮ್ ಮಿನಿಸ್ಟ್ರಿ ಸ್ಕೂಲ್ (ರಾಜ್ಯ ಶುಶ್ರೂಷಾ ಶಾಲೆ)ಗೆ ಹಾಜರಾಗುವಂತೆ ನನಗೆ ಕರೆ ಬಂತು. ಅದೇ ಸಮಯದಲ್ಲಿ, ಒಂದು ಸಾರ್ವಜನಿಕ ಆಸ್ಪತ್ರೆಯಲ್ಲಿ, ನನಗೆ ಹಾಗೂ ನನ್ನ ಕುಟುಂಬಕ್ಕೆ ಆರ್ಥಿಕ ಭದ್ರತೆಯನ್ನು ನೀಡಸಾಧ್ಯವಿದ್ದಂತಹ ಒಂದು ಖಾಯಂ ಕೆಲಸವು ಸಿಗುವುದರಲ್ಲಿತ್ತು. ನಾನು ಯಾವುದನ್ನು ಆಯ್ಕೆಮಾಡಬೇಕು? ಈಗಾಗಲೇ ನಾನು ಆ ಆಸ್ಪತ್ರೆಯಲ್ಲಿ ಮೂರು ತಿಂಗಳಿಂದ—ತಾತ್ಕಾಲಿಕವಾಗಿ—ಕೆಲಸಮಾಡುತ್ತಿದ್ದೆ. ಅಷ್ಟುಮಾತ್ರವಲ್ಲ, ಆಸ್ಪತ್ರೆಯ ಮೇಲ್ವಿಚಾರಕನು ಸಹ ನನ್ನ ಕೆಲಸದಿಂದ ತೃಪ್ತನಾಗಿದ್ದನು. ಆದರೂ, ಶುಶ್ರೂಷಾ ಶಾಲೆಗೆ ಹಾಜರಾಗುವಂತೆ ಆಮಂತ್ರಿಸಲ್ಪಟ್ಟಾಗ, ಸಂಬಳವಿಲ್ಲದ ರಜೆಯನ್ನು ಕೊಡಲು ಸಹ ಅವನು ಸಿದ್ಧನಿರಲಿಲ್ಲ. ಈ ಇಕ್ಕಟ್ಟಿನ ಬಗ್ಗೆ ಪ್ರಾರ್ಥನಾಪೂರ್ವಕವಾಗಿ ಆಲೋಚಿಸಿದ ಬಳಿಕ, ರಾಜ್ಯಾಭಿರುಚಿಗಳನ್ನು ಪ್ರಥಮವಾಗಿಡಲು ನಾನು ನಿರ್ಧರಿಸಿದೆ ಮತ್ತು ಕೆಲಸದ ಬೇಡಿಕೆಯನ್ನು ನಿರಾಕರಿಸಿದೆ.—ಮತ್ತಾಯ 6:33.
ಸುಮಾರು ಅದೇ ಸಮಯಕ್ಕೆ, ಡಿಸ್ಟ್ರಿಕ್ಟ್ ಹಾಗೂ ಸರ್ಕಿಟ್ ಮೇಲ್ವಿಚಾರಕರು ನಮ್ಮ ಸಭೆಯಲ್ಲಿ ಸೇವೆಮಾಡಲಿಕ್ಕಾಗಿ ಬಂದರು. ಗ್ರೀಕ್ ಮತ್ತು ಆರ್ತೊಡಾಕ್ಸ್ ಪಾದ್ರಿಗಳು ಹಾಗೂ ಅಧಿಕಾರಿಗಳ ಬಲವಾದ ವಿರೋಧದ ಕಾರಣ ನಾವು ನಮ್ಮ ಕೂಟಗಳನ್ನು ಗುಪ್ತವಾಗಿ ಖಾಸಗಿ ಮನೆಗಳಲ್ಲಿ ನಡೆಸಬೇಕಾಯಿತು. ಅಂತಹ ಒಂದು ಕೂಟವು ಮುಗಿದ ಬಳಿಕ, ಡಿಸ್ಟ್ರಿಕ್ಟ್ ಮೇಲ್ವಿಚಾರಕರು ನನ್ನ ಬಳಿಗೆ ಬಂದು, ನಿನಗೆ ಪೂರ್ಣ ಸಮಯದ ಸೇವೆಯನ್ನು ಆರಂಭಿಸುವ ಆಲೋಚನೆಯಿದೆಯೊ? ಎಂದು ಕೇಳಿದರು. ಅವರ ಸಲಹೆಯು ನನ್ನ ಹೃದಯವನ್ನು ಸ್ಪರ್ಶಿಸಿತು, ಏಕೆಂದರೆ ನಾನು ದೀಕ್ಷಾಸ್ನಾನ ಪಡೆದುಕೊಂಡಂದಿನಿಂದ ಇದೇ ನನ್ನ ಬಯಕೆಯಾಗಿತ್ತು. “ಪೂರ್ಣ ಸಮಯದ ಸೇವೆಯನ್ನು ಮಾಡಲು ನಾನು ತುಂಬ ಇಷ್ಟಪಡುತ್ತೇನೆ” ಎಂದು ಉತ್ತರಿಸಿದೆ. ಆದರೂ, ಒಬ್ಬ ಮಗಳನ್ನು ಬೆಳೆಸುವಂತಹ ದೊಡ್ಡ ಜವಾಬ್ದಾರಿಯು ಈಗಾಗಲೇ ನನ್ನ ಮೇಲಿತ್ತು. ಆ ಸಹೋದರರು ನನಗೆ ಹೇಳಿದ್ದು: “ಯೆಹೋವನಲ್ಲಿ ಭರವಸೆಯಿಡು, ಮತ್ತು ನಿನ್ನ ಯೋಜನೆಗಳು ಕೈಗೂಡುವಂತೆ ಮಾಡಲು ಆತನು ನಿನಗೆ ಸಹಾಯ ಮಾಡುವನು.” ಹೀಗೆ, ನಮ್ಮ ಕೌಟುಂಬಿಕ ಜವಾಬ್ದಾರಿಗಳನ್ನು ಅಲಕ್ಷಿಸದೆ, ನಾನೂ ನನ್ನ ಹೆಂಡತಿಯೂ ಜೊತೆಯಾಗಿ ಪೂರ್ಣ ಸಮಯದ ಸೇವೆಗೋಸ್ಕರ ನಮ್ಮ ಪರಿಸ್ಥಿತಿಗಳನ್ನು ಹೊಂದಿಸಿಕೊಳ್ಳಲು ಶಕ್ತರಾದೆವು; 1960ರ ಡಿಸೆಂಬರ್ ತಿಂಗಳಿನಲ್ಲಿ, ಪೂರ್ವ ಮ್ಯಾಸಿಡೋನಿಯದಲ್ಲಿ ನಾನು ಒಬ್ಬ ವಿಶೇಷ ಪಯನೀಯರನಾಗಿ ಸೇವೆಮಾಡಲು ಆರಂಭಿಸಿದೆ. ಆ ದೇಶದಲ್ಲಿದ್ದ ಕೇವಲ ಐದು ವಿಶೇಷ ಪಯನೀಯರರಲ್ಲಿ ನಾನೂ ಒಬ್ಬನಾಗಿದ್ದೆ.
ಸುಮಾರು ಒಂದು ವರ್ಷದ ವರೆಗೆ ಒಬ್ಬ ವಿಶೇಷ ಪಯನೀಯರನೋಪಾದಿ ಸೇವೆಮಾಡಿದ ಬಳಿಕ, ಒಬ್ಬ ಸಂಚರಣ ಮೇಲ್ವಿಚಾರಕನಾಗಿ ಸೇವೆಮಾಡುವಂತೆ ಆ್ಯಥೆನ್ಸ್ನಲ್ಲಿರುವ ಬ್ರಾಂಚ್ ಆಫೀಸು ನನಗೆ ಕರೆಕೊಟ್ಟಿತು. ಈ ರೀತಿಯ ಸೇವೆಯಲ್ಲಿ ಒಂದು ತಿಂಗಳ ತರಬೇತಿಯನ್ನು ಪಡೆದುಕೊಂಡು ನಾನು ಮನೆಗೆ ಹಿಂದಿರುಗಿ, ನನ್ನ ಅನುಭವಗಳನ್ನು ಮಾರ್ಥಳಿಗೆ ಹೇಳುತ್ತಿರುವಾಗಲೇ, ಒಂದು ದೊಡ್ಡ ಮ್ಯಾಂಗನೀಸ್ ಗಣಿಯ ಡೈರೆಕ್ಟರನು ಬಂದು, ರಿಫೈನಿಂಗ್ (ಸಂಸ್ಕರಣ) ವಿಭಾಗದ ಮ್ಯಾನೇಜರನಾಗಿ ಕಾರ್ಯನಡಿಸುವಂತೆ ಆಮಂತ್ರಿಸಿದನು ಮತ್ತು ಐದು ವರ್ಷದ ಕಾಂಟ್ರ್ಯಾಕ್ಟ್, ಒಂದು ಒಳ್ಳೆಯ ಮನೆ, ಮತ್ತು ವಾಹನವನ್ನು ಕೊಡುವ ಆಮಿಷ ತೋರಿಸಿದನು. ಉತ್ತರ ಕೊಡಲಿಕ್ಕಾಗಿ ನನಗೆ ಎರಡು ದಿನಗಳ ಗಡುವನ್ನು ಕೊಟ್ಟನು. ಪುನಃ, ಯಾವುದೇ ಹಿಂಜರಿಕೆಯಿಲ್ಲದೆ ನಾನು ಯೆಹೋವನಿಗೆ ಪ್ರಾರ್ಥಿಸಿದೆ: “ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು.” (ಯೆಶಾಯ 6:8) ನನ್ನ ಹೆಂಡತಿಯು ನನಗೆ ಪೂರ್ಣ ಸಹಕಾರ ನೀಡಿದಳು. ದೇವರಲ್ಲಿ ಭರವಸೆಯಿಟ್ಟು ನಾವು ಸಂಚರಣ ಕೆಲಸವನ್ನು ಆರಂಭಿಸಿದೆವು, ಮತ್ತು ತನ್ನ ಪ್ರೀತಿಪೂರ್ವಕ ದಯೆಯಿಂದ ಯೆಹೋವನು ನಮ್ಮನ್ನು ಎಂದೂ ನಿರಾಶೆಗೊಳಿಸಲಿಲ್ಲ.
ಕಷ್ಟದಲ್ಲಿಯೂ ಸುಖದಲ್ಲಿಯೂ ಸೇವೆಮಾಡುವುದು
ಕೆಲವೊಮ್ಮೆ ಆರ್ಥಿಕ ಸಮಸ್ಯೆಗಳು ಇದ್ದವಾದರೂ, ನಾವು ಸೇವೆಮಾಡುವುದನ್ನು ನಿಲ್ಲಿಸಲಿಲ್ಲ ಮತ್ತು ನಮ್ಮ ಆವಶ್ಯಕತೆಗಳನ್ನು ಯೆಹೋವನು ಪೂರೈಸಿದನು. ಆರಂಭದಲ್ಲಿ, ಒಂದು ಚಿಕ್ಕ ಮೋಟರ್ಸೈಕಲನ್ನು ಉಪಯೋಗಿಸಿ ನಾನು ಸಭೆಗಳನ್ನು ಸಂದರ್ಶಿಸುತ್ತಿದ್ದೆ; ಇದರಿಂದ ಸುಮಾರು 500 ಕಿಲೊಮೀಟರುಗಳಷ್ಟು ದೂರದ ಕ್ಷೇತ್ರಗಳನ್ನು ಆವರಿಸಸಾಧ್ಯವಿತ್ತು. ಅನೇಕವೇಳೆ ನಾನು ತೊಂದರೆಗಳನ್ನು ಅನುಭವಿಸಿದೆ, ಮತ್ತು ಕೆಲವೊಮ್ಮೆ ಅಪಘಾತಗಳೂ ಸಂಭವಿಸಿದವು. ಚಳಿಗಾಲದ ಒಂದು ಸಮಯದಲ್ಲಿ ಒಂದು ಸಭೆಯನ್ನು ಸಂದರ್ಶಿಸಿ ಮನೆಗೆ ಹಿಂದಿರುಗುತ್ತಿದ್ದಾಗ, ಭೋರ್ಗರೆಯುತ್ತಾ ರಭಸವಾಗಿ ಹರಿಯುತ್ತಿದ್ದ ಒಂದು ಹೊಳೆಯನ್ನು ದಾಟಬೇಕಾಗಿತ್ತು. ಹಾಗೆ ದಾಟುತ್ತಿದ್ದಾಗ ನನ್ನ ಮೋಟರ್ಸೈಕಲ್ ಕೆಟ್ಟುಹೋಯಿತು, ಮತ್ತು ನಾನು ಮೊಣಕಾಲಿನ ವರೆಗೆ ತೇವಗೊಂಡಿದ್ದೆ. ಆ ಮೇಲೆ ಮೋಟರ್ಸೈಕಲಿನ ಟೈರ್ ಪಂಕ್ಚರ್ ಆಯಿತು. ಯಾರ ಬಳಿಯಲ್ಲಿ ಪಂಪ್ ಇತ್ತೋ ಆ ದಾರಿಹೋಕನೊಬ್ಬನು ನನಗೆ ಸಹಾಯ ಮಾಡಿದನು, ಆದುದರಿಂದ ನಾನು ಸಮೀಪದಲ್ಲಿದ್ದ ಒಂದು ಹಳ್ಳಿಗೆ ಹೋಗಿ ನನ್ನ ಟೈರನ್ನು ರಿಪೇರಿಮಾಡಿಸಲು ಶಕ್ತನಾದೆ. ಚಳಿಯಿಂದ ಮರಗಟ್ಟಿ, ವಿಪರೀತ ಆಯಾಸಗೊಂಡಿದ್ದು, ಕೊನೆಗೂ ಮುಂಜಾನೆ ಮೂರು ಗಂಟೆಯಷ್ಟಕ್ಕೆ ನಾನು ಮನೆಯನ್ನು ತಲಪಿದೆ.
ಇನ್ನೊಂದು ಸಲ, ನಾನು ಒಂದು ಸಭೆಯಿಂದ ಇನ್ನೊಂದು ಸಭೆಗೆ ಹೋಗುತ್ತಿದ್ದಾಗ, ಮೋಟರ್ಸೈಕಲ್ ಸ್ಕಿಡ್ ಆಗಿ, ನನ್ನ ಮಂಡಿಯ ಮೇಲೆ ಬಿತ್ತು. ಇದರ ಫಲಿತಾಂಶವಾಗಿ ನನ್ನ ಪ್ಯಾಂಟ್ ಹರಿದು, ರಕ್ತದಿಂದ ತೋಯ್ದಿತ್ತು. ನನ್ನ ಬಳಿ ಇನ್ನೊಂದು ಜೊತೆ ಪ್ಯಾಂಟ್ ಇರಲಿಲ್ಲ, ಆದುದರಿಂದ ಆ ಸಾಯಂಕಾಲ ನಾನು ಇನ್ನೊಬ್ಬ ಸಹೋದರನ ಪ್ಯಾಂಟನ್ನು ಧರಿಸಿ ಭಾಷಣವನ್ನು ಕೊಟ್ಟೆ—ಆ ಪ್ಯಾಂಟ್ ದೊಗಲೆಯಾಗಿತ್ತು. ಆದರೂ, ಯಾವುದೇ ಸಂಕಷ್ಟವು, ಯೆಹೋವನ ಹಾಗೂ ನನ್ನ ಪ್ರಿಯ ಸಹೋದರರ ಸೇವೆಯನ್ನು ಮಾಡುವ ನನ್ನ ಬಯಕೆಗೆ ತಣ್ಣೀರೆರಚಸಾಧ್ಯವಿರಲಿಲ್ಲ.
ಇನ್ನೊಂದು ಅಪಘಾತದಲ್ಲಿ, ನನಗೆ ತುಂಬ ಏಟಾಗಿದ್ದು, ಅಂದರೆ ನನ್ನ ಕೈ ಮುರಿದು, ನನ್ನ ಮುಂದಿನ ಹಲ್ಲುಗಳು ಬಿದ್ದುಹೋಗಿದ್ದವು. ಆ ಸಮಯದಲ್ಲಿ, ಅಮೆರಿಕದಲ್ಲಿ ಜೀವಿಸುತ್ತಿದ್ದ ನನ್ನ ತಂಗಿ—ಅವಳು ಯೆಹೋವನ ಸಾಕ್ಷಿಯಾಗಿರಲಿಲ್ಲ—ನನ್ನನ್ನು ಭೇಟಿಮಾಡಿದಳು. ಒಂದು ಮೋಟರ್ಕಾರನ್ನು ಕೊಂಡುಕೊಳ್ಳಲು ಅವಳು ಸಹಾಯ ಮಾಡಿದಾಗ ನನಗೆ ಎಷ್ಟು ನಿರಾಳವಾದ ಅನಿಸಿಕೆಯಾಯಿತು! ಆ್ಯಥೆನ್ಸ್ ಬ್ರಾಂಚ್ನಲ್ಲಿರುವ ಸಹೋದರರಿಗೆ ನನ್ನ ಅಪಘಾತದ ಬಗ್ಗೆ ಗೊತ್ತಾದಾಗ, ಅವರು ನನಗೆ ಒಂದು ಉತ್ತೇಜನದಾಯಕ ಪತ್ರವನ್ನು ಕಳುಹಿಸಿದರು. ಮತ್ತು ಆ ಪತ್ರದಲ್ಲಿ ಬರೆದಿದ್ದ ಅನೇಕ ವಿಚಾರಗಳ ಜೊತೆಗೆ ಅವರು ರೋಮಾಪುರ 8:28ರಲ್ಲಿರುವ ಮಾತುಗಳನ್ನೂ ಸೇರಿಸಿದ್ದರು. ಆ ವಚನದ ಒಂದು ಭಾಗವು ಹೀಗೆ ಹೇಳುತ್ತದೆ: “ದೇವರನ್ನು ಪ್ರೀತಿಸುವವರ ಹಿತಕ್ಕಾಗಿ ತನ್ನ ಎಲ್ಲ ಕಾರ್ಯಗಳು ಅನುಕೂಲಕರವಾಗಿರುವಂತೆ ದೇವರು ಮಾಡುತ್ತಾನೆ” (NW). ಅನೇಕಾವರ್ತಿ ಈ ಆಶ್ವಾಸನೆಯು ನನ್ನ ಜೀವಿತದಲ್ಲಿ ತುಂಬ ನಿಜವಾಗಿ ಕಂಡುಬಂದಿದೆ!
ಸಂತೋಷಕರವಾದ ಅನಿರೀಕ್ಷಿತ ಘಟನೆ
1963ರಲ್ಲಿ, ಎಲ್ಲಿ ಜನರು ಪ್ರತಿಕ್ರಿಯೆಯನ್ನೇ ತೋರಿಸುತ್ತಿರಲಿಲ್ಲವೋ ಅಂತಹ ಒಂದು ಹಳ್ಳಿಯಲ್ಲಿ, ಒಬ್ಬ ವಿಶೇಷ ಪಯನೀಯರನೊಂದಿಗೆ ನಾನು ಸೇವೆಮಾಡುತ್ತಿದ್ದೆ. ನಾವು ಪ್ರತ್ಯೇಕವಾಗಿ ಕೆಲಸಮಾಡಲು ನಿರ್ಧರಿಸಿ, ಆ ಬೀದಿಯ ಒಂದೊಂದು ಭಾಗವನ್ನು ಒಬ್ಬೊಬ್ಬರು ತೆಗೆದುಕೊಂಡೆವು. ಒಂದು ಮನೆಯಲ್ಲಿ, ನಾನು ಬಾಗಿಲನ್ನು ತಟ್ಟಿದ ಕೂಡಲೆ ಒಬ್ಬ ಸ್ತ್ರೀಯು ತರಾತುರಿಯಿಂದ ಹೊರಗೆ ಬಂದು, ನನ್ನನ್ನು ಒಳಗೆ ಎಳೆದುಕೊಂಡು ಬಾಗಿಲನ್ನು ದಢಾರನೆ ಮುಚ್ಚಿ ಬೀಗಹಾಕಿದಳು. ಏನು ಸಂಭವಿಸುತ್ತಿದೆ ಎಂದು ತಿಳಿಯದ ಕಾರಣ ನಾನು ಕಕ್ಕಾಬಿಕ್ಕಿಯಾಗಿದ್ದೆ. ಸ್ವಲ್ಪ ಸಮಯದ ಬಳಿಕ, ಅವಳು ಆ ವಿಶೇಷ ಪಯನೀಯರನನ್ನು ಸಹ ಆತುರಾತುರವಾಗಿ ತನ್ನ ಮನೆಯೊಳಕ್ಕೆ ಕರೆದಳು. ತದನಂತರ ಆ ಸ್ತ್ರೀಯು ನಮಗೆ ಹೇಳಿದ್ದು: “ಶಬ್ದಮಾಡಬೇಡಿ! ಕದಲಬೇಡಿ!” ಸ್ವಲ್ಪ ಸಮಯವಾದ ಮೇಲೆ ಮನೆಯಿಂದ ಹೊರಗೆ ವಿರೋಧಿಗಳ ಧ್ವನಿಗಳು ಕೇಳಿಬಂದವು. ಜನರು ನಮ್ಮನ್ನು ಹುಡುಕುತ್ತಿದ್ದರು. ಗಲಾಟೆಯು ಶಾಂತವಾದ ಬಳಿಕ ಆ ಸ್ತ್ರೀಯು ನಮಗೆ ಹೀಗೆ ಹೇಳಿದಳು: “ನಿಮ್ಮನ್ನು ಕಾಪಾಡಲಿಕ್ಕಾಗಿಯೇ ನಾನು ಹೀಗೆ ಮಾಡಿದೆ. ನೀವು ನಿಜ ಕ್ರೈಸ್ತರಾಗಿದ್ದೀರಿ ಎಂದು ನಾನು ನಂಬುವುದರಿಂದ ನನಗೆ ನಿಮ್ಮ ಮೇಲೆ ಗೌರವವಿದೆ.” ನಾವು ಅವಳಿಗೆ ಮನಃಪೂರ್ವಕವಾಗಿ ಉಪಕಾರ ಹೇಳಿ, ಅನೇಕ ಬೈಬಲ್ ಸಾಹಿತ್ಯಗಳನ್ನು ಕೊಟ್ಟು, ಅಲ್ಲಿಂದ ಹೊರಟೆವು.
ಹದಿನಾಲ್ಕು ವರ್ಷಗಳ ಬಳಿಕ, ಗ್ರೀಸ್ನಲ್ಲಿ ನಡೆಯುತ್ತಿದ್ದ ಒಂದು ಜಿಲ್ಲಾ ಅಧಿವೇಶನಕ್ಕೆ ನಾನು ಹಾಜರಾಗಿದ್ದಾಗ, ಒಬ್ಬ ಸ್ತ್ರೀಯು ನನ್ನ ಬಳಿಗೆ ಬಂದು ಹೇಳಿದ್ದು: “ಸಹೋದರರೇ, ನಿಮಗೆ ನನ್ನ ನೆನಪಿದೆಯೆ? ಸುವಾರ್ತೆಯನ್ನು ಸಾರಲಿಕ್ಕಾಗಿ ನೀವು ನನ್ನ ಹಳ್ಳಿಗೆ ಬಂದಾಗ, ಶತ್ರುಗಳಿಂದ ನಿಮ್ಮನ್ನು ಕಾಪಾಡಿದ್ದ ಸ್ತ್ರೀಯೇ ನಾನು.” ಅವಳು ಜರ್ಮನಿಗೆ ವಲಸೆಹೋಗಿ, ಅಲ್ಲಿ ಬೈಬಲ್ ಅಭ್ಯಾಸ ಮಾಡಿ, ಯೆಹೋವನ ಜನರೊಂದಿಗೆ ಸಹವಾಸಿಸಿದಳು. ಈಗ, ಅವಳ ಇಡೀ ಕುಟುಂಬವು ಸತ್ಯದಲ್ಲಿತ್ತು.
ಈ ಎಲ್ಲ ವರ್ಷಗಳಲ್ಲಿ ನಮಗೆ ಅನೇಕ “ಶಿಫಾರಸ್ಸು ಪತ್ರಗಳನ್ನು” ಪಡೆದುಕೊಳ್ಳುವ ಆಶೀರ್ವಾದ ಸಿಕ್ಕಿದೆ. (2 ಕೊರಿಂಥ 3:1, NW) ಬೈಬಲ್ ಸತ್ಯತೆಯ ಜ್ಞಾನವನ್ನು ಪಡೆದುಕೊಳ್ಳುವುದರಲ್ಲಿ ಯಾರಿಗೆ ಸಹಾಯ ಮಾಡುವ ಸುಯೋಗ ನಮಗೆ ದೊರಕಿತ್ತೋ ಅವರಲ್ಲಿ ಅನೇಕರು ಇಂದು ಹಿರಿಯರು, ಶುಶ್ರೂಷಾ ಸೇವಕರು, ಮತ್ತು ಪಯನೀಯರರಾಗಿ ಸೇವೆಮಾಡುತ್ತಿದ್ದಾರೆ. 1960ಗಳಷ್ಟು ಹಿಂದೆ ನಾನು ಸೇವೆಮಾಡುತ್ತಿದ್ದ ಸರ್ಕಿಟ್ಗಳಲ್ಲಿದ್ದ ಕೆಲವೇ ಪ್ರಚಾರಕರು, 10,000ಕ್ಕಿಂತಲೂ ಹೆಚ್ಚು ಜನರು ಯೆಹೋವನ ಆರಾಧಕರಾಗಿ ಪರಿಣಮಿಸುವುದನ್ನು ನೋಡುವುದು ಎಷ್ಟು ರೋಮಾಂಚನೀಯವಾದದ್ದಾಗಿದೆ! ತನ್ನದೇ ಆದ ರೀತಿಯಲ್ಲಿ ನಮ್ಮನ್ನು ಉಪಯೋಗಿಸುವಂತಹ ನಮ್ಮ ಪ್ರೀತಿಪೂರ್ವಕ ದಯೆಯ ದೇವರಿಗೆ ಎಲ್ಲ ಕೀರ್ತಿಯು ಸಲ್ಲಬೇಕು.
“ಅಸ್ವಸ್ಥನಾಗಿ ಬಿದ್ದುಕೊಂಡಿರುವಾಗ”
ಸಂಚರಣ ಕೆಲಸವನ್ನು ಮಾಡುತ್ತಿದ್ದ ವರ್ಷಗಳಲ್ಲಿ, ಯಾವಾಗಲೂ ಸಂತೋಷದಿಂದಿರುವ ಮೂಲಕ ಮಾರ್ಥಳು ಅತ್ಯುತ್ತಮ ಸಹಾಯಕಿಯಾಗಿ ಪರಿಣಮಿಸಿದಳು. ಆದರೂ, 1976ರ ಅಕ್ಟೋಬರ್ ತಿಂಗಳಿನಲ್ಲಿ ಅವಳು ಗಂಭೀರವಾದ ರೀತಿಯಲ್ಲಿ ಅಸ್ವಸ್ಥಳಾದಳು ಮತ್ತು ತುಂಬ ಸಂಕಟಮಯವಾದ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಂಡಳು. ತದನಂತರ ಪಾರ್ಶ್ವವಾಯುವಿನಿಂದಾಗಿ ಅವಳು ಗಾಲಿಕುರ್ಚಿಯಲ್ಲೇ ಇರಬೇಕಾಯಿತು. ಈ ಖರ್ಚುವೆಚ್ಚಗಳನ್ನು ಹಾಗೂ ಭಾವನಾತ್ಮಕ ಬೇಗುದಿಯನ್ನು ನಾವು ಹೇಗೆ ತಡೆದುಕೊಂಡೆವು? ಈ ಸಂದರ್ಭದಲ್ಲಿಯೂ ನಾವು ಯೆಹೋವನಲ್ಲಿ ಭರವಸೆಯಿಟ್ಟೆವು. ಮತ್ತು ಆತನು ತನ್ನ ಪ್ರೀತಿಯ ಉದಾರ ಹಸ್ತವನ್ನು ಚಾಚಿ ನಮಗೆ ಸಹಾಯ ಮಾಡಿದಂತೆ ಅನಿಸಿತು. ನಾನು ಮ್ಯಾಸಿಡೋನಿಯದಲ್ಲಿ ಸೇವೆಮಾಡಲು ಹೋದಾಗ, ವೈದ್ಯಕೀಯ ಚಿಕಿತ್ಸೆಗಾಗಿ ಮಾರ್ಥಳು ಆ್ಯಥೆನ್ಸ್ನಲ್ಲಿದ್ದ ಒಬ್ಬ ಸಹೋದರನ ಮನೆಯಲ್ಲಿ ಉಳಿದುಕೊಂಡಳು. ಅವಳು ಫೋನ್ಮಾಡಿ, ಈ ಮಾತುಗಳಿಂದ ನನ್ನನ್ನು ಉತ್ತೇಜಿಸುತ್ತಿದ್ದಳು: “ನಾನು ಚೆನ್ನಾಗಿದ್ದೇನೆ. ನೀವು ಮಾತ್ರ ನಿಮ್ಮ ಕೆಲಸವನ್ನು ಮುಂದುವರಿಸಿ. ನನಗೆ ಪುನಃ ಚಲಿಸಲು ಆದಾಗ, ನನ್ನ ಗಾಲಿಕುರ್ಚಿಯಲ್ಲಿ ನಾನು ನಿಮ್ಮನ್ನು ಜೊತೆಗೂಡುವೆ.” ಮತ್ತು ಅವಳು ಹೇಳಿದಂತೆಯೇ ಮಾಡಿದಳು. ಬೆತೆಲ್ನಲ್ಲಿದ್ದ ನಮ್ಮ ಪ್ರೀತಿಯ ಸಹೋದರರು ನಮಗೆ ಅನೇಕ ಉತ್ತೇಜನದಾಯಕ ಪತ್ರಗಳನ್ನು ಕಳುಹಿಸಿದರು. “ಅಸ್ವಸ್ಥನಾಗಿ ಬಿದ್ದುಕೊಂಡಿರುವಾಗ ಯೆಹೋವನು ಅವನನ್ನು ಉದ್ಧರಿಸುವನು; ಅವನ ರೋಗವನ್ನೆಲ್ಲಾ ಪರಿಹರಿಸಿ ಆರೋಗ್ಯವನ್ನುಂಟು”ಮಾಡುವನು ಎಂಬ ಕೀರ್ತನೆ 41:3ರಲ್ಲಿರುವ ಮಾತುಗಳು ಮಾರ್ಥಳಿಗೆ ಅನೇಕಾವರ್ತಿ ಜ್ಞಾಪಿಸಲ್ಪಟ್ಟವು.
ಗುರುತರವಾದ ಈ ಆರೋಗ್ಯ ಸಮಸ್ಯೆಗಳ ಕಾರಣದಿಂದ, 1986ರಲ್ಲಿ, ಕಾವಾಲಾದಲ್ಲಿಯೇ ನಾನು ವಿಶೇಷ ಪಯನೀಯರನಾಗಿ ಸೇವೆಮಾಡುವುದು ಅನುಕೂಲಕರವಾಗಿರಸಾಧ್ಯವಿದೆ ಎಂದು ನಿರ್ಧರಿಸಲಾಯಿತು. ಕಾವಾಲಾದಲ್ಲಿ ನಮ್ಮ ಪ್ರೀತಿಯ ಮಗಳ ಕುಟುಂಬದ ಹತ್ತಿರವೇ ನಾನು ವಾಸಿಸುತ್ತಿದ್ದೇನೆ. ಕಳೆದ ಮಾರ್ಚ್ ತಿಂಗಳಿನಲ್ಲಿ ನನ್ನ ಪ್ರಿಯ ಮಾರ್ಥಳು ತೀರಿಹೋದಳು, ಮತ್ತು ಅವಳು ಕೊನೇ ವರೆಗೂ ನಂಬಿಗಸ್ತಳಾಗಿದ್ದಳು. ಅವಳು ಮರಣಪಡುವುದಕ್ಕೆ ಮೊದಲು, “ಹೇಗಿದ್ದೀರಿ?” ಎಂದು ಸಹೋದರರು ಅವಳನ್ನು ಕೇಳುತ್ತಿದ್ದಾಗಲೆಲ್ಲ, ಸಾಮಾನ್ಯವಾಗಿ ಅವಳು ಉತ್ತರಿಸುತ್ತಿದ್ದದ್ದು: “ನಾನು ಯೆಹೋವನೊಂದಿಗೆ ಆಪ್ತ ಸಂಬಂಧವನ್ನು ಇಟ್ಟುಕೊಂಡಿರುವುದರಿಂದ, ತುಂಬ ಚೆನ್ನಾಗಿದ್ದೇನೆ!” ನಾವು ಕೂಟಗಳಿಗಾಗಿ ತಯಾರಿಮಾಡುತ್ತಿದ್ದಾಗ ಅಥವಾ ಎಲ್ಲಿ ಕೊಯ್ಲಿನ ಕೆಲಸವು ಸಮೃದ್ಧವಾಗಿದೆಯೋ ಅಂತಹ ಕ್ಷೇತ್ರಗಳಲ್ಲಿ ಸೇವೆಮಾಡುವಂತೆ ಪ್ರಚೋದಿಸುವಂತಹ ಪತ್ರಗಳನ್ನು ಪಡೆದುಕೊಂಡಾಗ, ಮಾರ್ಥಳು ಹೀಗೆ ಹೇಳುತ್ತಿದ್ದಳು: “ಜಾನ್, ಎಲ್ಲಿ ಹೆಚ್ಚಿನ ಆವಶ್ಯಕತೆಯಿದೆಯೋ ಅಂತಹ ಸ್ಥಳದಲ್ಲಿ ಸೇವೆಮಾಡಲು ಹೋಗೋಣ.” ಅವಳು ಯಾವಾಗಲೂ ಹುರುಪಿನ ಮನೋಭಾವವನ್ನು ತೋರಿಸುತ್ತಿದ್ದಳು.
ಕೆಲವು ವರ್ಷಗಳ ಹಿಂದೆ, ನಾನು ಸಹ ಗುರುತರವಾದ ಆರೋಗ್ಯ ಸಮಸ್ಯೆಯನ್ನು ನಿಭಾಯಿಸಬೇಕಾಯಿತು. 1994ರ ಮಾರ್ಚ್ ತಿಂಗಳಿನಲ್ಲಿ, ಜೀವಕ್ಕೆ ಬೆದರಿಕೆಯನ್ನೊಡ್ಡುವಂತಹ ಹೃದಯದ ಸಮಸ್ಯೆಯು ನನಗಿದೆ ಮತ್ತು ಶಸ್ತ್ರಚಿಕಿತ್ಸೆಯು ಅತ್ಯಗತ್ಯ ಎಂದು ವೈದ್ಯಕೀಯ ಪರೀಕ್ಷೆಯಿಂದ ತಿಳಿದುಬಂತು. ಪುನಃ ಒಮ್ಮೆ, ಸಂಕಷ್ಟದ ಕಾಲಾವಧಿಯಲ್ಲಿ ಯೆಹೋವನ ಪ್ರೀತಿಯ ಹಸ್ತವು ನನಗೆ ಬೆಂಬಲ ನೀಡುತ್ತಿದೆ ಎಂಬ ಅನಿಸಿಕೆಯಾಯಿತು. ನಾನು ತುರ್ತುಚಿಕಿತ್ಸಾ ಕೊಠಡಿಯಿಂದ ಹೊರಗೆ ಬಂದಾಗ, ಒಬ್ಬ ಸರ್ಕಿಟ್ ಮೇಲ್ವಿಚಾರಕರು ನನ್ನ ಹಾಸಿಗೆಯ ಬಳಿ ನಿಂತುಕೊಂಡು ಮಾಡಿದ ಪ್ರಾರ್ಥನೆಯನ್ನು, ಹಾಗೂ ಸತ್ಯದಲ್ಲಿ ಸ್ವಲ್ಪ ಆಸಕ್ತಿಯನ್ನು ತೋರಿಸಿದ್ದ ನಾಲ್ಕು ಮಂದಿ ರೋಗಿಗಳೊಂದಿಗೆ ನನ್ನ ಆಸ್ಪತ್ರೆಯ ಕೋಣೆಯಲ್ಲೇ ನಾನು ನಡೆಸಿದ ಜ್ಞಾಪಕಾಚರಣೆಯನ್ನು ನಾನೆಂದೂ ಮರೆಯಲಾರೆ.
ಯೆಹೋವನು ನಮ್ಮ ಸಹಾಯಕನಾಗಿದ್ದಾನೆ
ಕಾಲವು ಹೊಟ್ಟಿನಂತೆ ಹಾರಿಹೋಗುತ್ತದೆ, ಮತ್ತು ನಮ್ಮ ಶರೀರವು ದುರ್ಬಲಗೊಳ್ಳುತ್ತದೆ. ಆದರೆ ಅಭ್ಯಾಸ ಹಾಗೂ ಸೇವೆಯ ಮೂಲಕ ದಿನೇ ದಿನೇ ನಮ್ಮ ಚೈತನ್ಯವು ನವೀಕರಣಗೊಳ್ಳುತ್ತಾ ಇರುತ್ತದೆ. (2 ಕೊರಿಂಥ 4:16) “ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು” ಎಂದು ನಾನು ಹೇಳಿದಂದಿನಿಂದ ಇಷ್ಟರ ವರೆಗೆ 39 ವರ್ಷಗಳು ಸಂದಿವೆ. ನಮ್ಮ ಜೀವಿತವು ಸಮೃದ್ಧವೂ, ಸಂತೋಷಭರಿತವೂ, ಪ್ರತಿಫಲದಾಯಕವೂ ಆದದ್ದಾಗಿದೆ. ಹೌದು, ಕೆಲವೊಮ್ಮೆ “ಕುಗ್ಗಿದವನೂ ದಿಕ್ಕಿಲ್ಲದವನೂ ಆಗಿದ್ದೇನೆ” ಎಂಬ ಅನಿಸಿಕೆ ನನಗಾಗಿದೆ. ಆದರೂ “ನನ್ನ ದೇವರೇ, ನೀನೇ ನನಗೆ ಸಹಾಯಕನೂ ರಕ್ಷಕನೂ ಆಗಿದ್ದೀ” ಎಂದು ಯೆಹೋವನಿಗೆ ದೃಢಭರವಸೆಯಿಂದ ಹೇಳಬಲ್ಲೆ. (ಕೀರ್ತನೆ 40:17) ಖಂಡಿತವಾಗಿಯೂ ಆತನು ನನಗೆ ಪ್ರೀತಿಪೂರ್ವಕ ದಯೆಯ ದೇವರಾಗಿ ಕಂಡುಬಂದಿದ್ದಾನೆ.
[ಪುಟ 25 ರಲ್ಲಿರುವ ಚಿತ್ರ]
1956ರಲ್ಲಿ ಮಾರ್ಥಳೊಂದಿಗೆ
[ಪುಟ 26 ರಲ್ಲಿರುವ ಚಿತ್ರ]
ಕಾವಾಲಾದಲ್ಲಿರುವ ಬಂದರು
[ಪುಟ 26 ರಲ್ಲಿರುವ ಚಿತ್ರ]
1997ರಲ್ಲಿ ಮಾರ್ಥಳೊಂದಿಗೆ