ಅವರು ಯೆಹೋವನ ಚಿತ್ತವನ್ನು ಮಾಡಿದರು
ಶುದ್ಧಾರಾಧನೆಯನ್ನು ಮುಂದುವರಿಸಲು ಮಾಡಲ್ಪಟ್ಟ ಸ್ವಪ್ರೇರಿತ ಕಾಣಿಕೆ
ಯೆಹೋವನ ರಕ್ಷಣಾ ಸಾಮರ್ಥ್ಯವನ್ನು ಇಸ್ರಾಯೇಲ್ಯರು ಕಣ್ಣಾರೆ ಕಂಡಿದ್ದರು. ಕೆಂಪು ಸಮುದ್ರದ ನೀರು ತಮ್ಮ ಮುಂದೆ ಅದ್ಭುತಕರವಾದ ರೀತಿಯಲ್ಲಿ ಇಬ್ಭಾಗವಾದಾಗ, ಅವರು ಒಣನೆಲದ ಮೇಲೆ ನಡೆದುಕೊಂಡು ಹೋಗಿ ಐಗುಪ್ತ್ಯರ ಸೇನೆಗಳಿಂದ ಪಾರಾಗಿದ್ದರು. ಬೆನ್ನಟ್ಟಿ ಬರುತ್ತಿದ್ದ ಸೇನೆಯ ಮೇಲೆ ಅದೇ ನೀರು ರಭಸದಿಂದ ಮುನ್ನುಗ್ಗಿ ಬಂದದ್ದನ್ನು ಅವರು ದಡದಿಂದ ನೋಡಬಹುದಿತ್ತು. ಯೆಹೋವನು ಅವರ ಜೀವಗಳನ್ನು ಸಂರಕ್ಷಿಸಿದ್ದನು!—ವಿಮೋಚನಕಾಂಡ 14:21-31.
ಆದರೆ ದೇವರು ತಮಗಾಗಿ ಮಾಡಿದ್ದನ್ನು ಕೆಲವು ಇಸ್ರಾಯೇಲ್ಯರು ಲಘುವಾಗಿ ಎಣಿಸಿದ್ದು ವಿಷಾದಕರ ಸಂಗತಿ. ಮೋಶೆಯು ಸೀನಾಯಿ ಬೆಟ್ಟದ ಮೇಲಿದ್ದಾಗ, ಅವರು ತಮ್ಮ ಬಂಗಾರದ ಒಡವೆಗಳನ್ನು ಆರೋನನಿಗೆ ಕೊಟ್ಟು, ಆರಾಧನೆಗಾಗಿ ಒಂದು ಮೂರ್ತಿಯನ್ನು ಮಾಡುವಂತೆ ತಗಾದೆಮಾಡಿದರು. ಮೋಶೆಯು ಹಿಂದಿರುಗಿದಾಗ, ಈ ದಂಗೆಕೋರರ ಗುಂಪು ತಿನ್ನುತ್ತಾ, ಕುಡಿಯುತ್ತಾ, ಕುಣಿಯುತ್ತಾ ಮತ್ತು ಆ ಬಂಗಾರದ ಬಸವನ ಮುಂದೆ ತಲೆಬಾಗುತ್ತಾ ಇರುವುದನ್ನು ಕಂಡನು! ಯೆಹೋವನ ನಿರ್ದೇಶನದಲ್ಲಿ, ಸುಮಾರು 3,000 ಜನರು ಕೊಲ್ಲಲ್ಪಟ್ಟರು. ಇವರು ಆ ದಂಗೆಯ ಪ್ರಧಾನ ಪ್ರಚೋದಕರಾಗಿದ್ದಿರಬಹುದು. ಯೆಹೋವನಿಗೇ ಅನನ್ಯ ಭಕ್ತಿಯನ್ನು ನೀಡುವುದರ ಬಗ್ಗೆ ಅಂದು ದೇವರ ಜನರು ಒಂದು ಮಹತ್ವದ ಪಾಠವನ್ನು ಕಲಿತುಕೊಂಡರು.—ವಿಮೋಚನಕಾಂಡ 32:1-6, 19-29.
ಈ ಘಟನೆಯ ನಂತರ, ದೇವದರ್ಶನದ ಗುಡಾರವನ್ನು, ಅಂದರೆ ಸ್ಥಳದಿಂದ ಸ್ಥಳಕ್ಕೆ ಸಾಗಿಸಬಹುದಾದ ಆರಾಧನೆಯ ಗುಡಾರವನ್ನು ಕಟ್ಟಬೇಕೆಂಬ ದೇವರ ಆಜ್ಞೆಯನ್ನು ಕಾರ್ಯರೂಪಕ್ಕೆ ತರಲು ಮೋಶೆಯು ಸಿದ್ಧನಾದನು. ಈ ನಿರ್ಮಾಣ ಯೋಜನೆಗೆ ದುಬಾರಿಯಾದ ಸಾಮಗ್ರಿಗಳು ಮತ್ತು ಕುಶಲ ಕಾರ್ಮಿಕರ ಅಗತ್ಯವಿತ್ತು. ಇವು ಎಲ್ಲಿಂದ ಬರುವವು? ಮತ್ತು ಬೈಬಲಿನ ಈ ವೃತ್ತಾಂತದಿಂದ ನಾವು ಏನನ್ನು ಕಲಿತುಕೊಳ್ಳಬಲ್ಲೆವು?
ಸಾಮಗ್ರಿಗಳ ಹಾಗೂ ಕೌಶಲಗಳ ಕಾಣಿಕೆ
ಮೋಶೆಯ ಮೂಲಕ ಯೆಹೋವನು ಇಸ್ರಾಯೇಲ್ಯರಿಗೆ ಆಜ್ಞಾಪಿಸಿದ್ದು: “ನೀವು ನಿಮ್ಮನಿಮ್ಮೊಳಗೆ ಯೆಹೋವನಿಗೆ ಕಾಣಿಕೆಯನ್ನು ಎತ್ತಿ ಕೊಡಬೇಕು; ಮನಃಪೂರ್ವಕವಾಗಿ ಕಾಣಿಕೆಯನ್ನು ಕೊಡುವವರೇ ತರಬೇಕು.” ಯಾವ ರೀತಿಯ ಕಾಣಿಕೆಯನ್ನು ಅವರು ಕೊಡಬಹುದಿತ್ತು? ಮೋಶೆಯು ಪಟ್ಟಿಮಾಡಿದ ವಸ್ತುಗಳಲ್ಲಿ, ಚಿನ್ನ, ಬೆಳ್ಳಿ, ತಾಮ್ರ, ದಾರ, ವಸ್ತ್ರ, ಕಟ್ಟಿಗೆ, ಮತ್ತು ರತ್ನಗಳು ಸೇರಿದ್ದವು.—ವಿಮೋಚನಕಾಂಡ 35:5-9.
ಇಂತಹ ಉದಾರ ಕಾಣಿಕೆಯನ್ನು ನೀಡಲು, ಇಸ್ರಾಯೇಲ್ಯರು ಸಾಕಷ್ಟು ಸ್ಥಿತಿವಂತರಾಗಿದ್ದರು. ಅವರು ಐಗುಪ್ತ ದೇಶವನ್ನು ಬಿಟ್ಟುಬಂದಾಗ, ತಮ್ಮೊಂದಿಗೆ ಅನೇಕ ವಸ್ತ್ರಗಳನ್ನು ತೆಗೆದುಕೊಂಡರಲ್ಲದೆ, ಬೆಳ್ಳಿಬಂಗಾರದ ವಸ್ತುಗಳನ್ನು ಸಹ ತೆಗೆದುಕೊಂಡು ಬಂದಿದ್ದರು ಎಂಬುದನ್ನು ಜ್ಞಾಪಕಕ್ಕೆ ತಂದುಕೊಳ್ಳಿರಿ. ವಾಸ್ತವದಲ್ಲಿ ಅವರು “ಐಗುಪ್ತ್ಯರ ಸೊತ್ತನ್ನು ಸುಲುಕೊಂಡರು.”a (ವಿಮೋಚನಕಾಂಡ 12:35, 36) ಈ ಮೊದಲು, ಸುಳ್ಳು ಆರಾಧನೆಗಾಗಿ ಒಂದು ಮೂರ್ತಿಯನ್ನು ಮಾಡುವಂತೆ ಇಸ್ರಾಯೇಲ್ಯರು ತಮ್ಮ ಒಡವೆಗಳನ್ನು ಸ್ವಇಚ್ಛೆಯಿಂದ ಕೊಟ್ಟಿದ್ದರು. ಆದರೆ ಈಗ, ಸತ್ಯ ಆರಾಧನೆಯನ್ನು ಮುಂದುವರಿಸಲಿಕ್ಕಾಗಿ ಕಾಣಿಕೆಯನ್ನು ನೀಡುವಂತೆ ಕೇಳಿಕೊಳ್ಳಲ್ಪಟ್ಟಾಗ, ಅವರು ಮೊದಲಿನಷ್ಟೇ ಅತ್ಯಾಸಕ್ತರಾಗಿರುವರೊ?
ಪ್ರತಿಯೊಬ್ಬರು ಇಷ್ಟಿಷ್ಟು ಮೊತ್ತವನ್ನು ಕೊಡಬೇಕೆಂದು ಮೋಶೆಯು ನಿಗದಿಪಡಿಸಲಿಲ್ಲ ಎಂಬುದನ್ನು ಗಮನಿಸಿರಿ. ಇಲ್ಲವೆ ಕೊಡುವಿಕೆಯನ್ನು ಪ್ರಚೋದಿಸಲಿಕ್ಕಾಗಿ ಅವನು ಅವರಲ್ಲಿ ಅಪರಾಧಿಭಾವವನ್ನು ಸಹ ಉಂಟುಮಾಡಲಿಲ್ಲ. ಬದಲಿಗೆ, ಅವನು “ಮನಃಪೂರ್ವಕವಾಗಿ ಕಾಣಿಕೆಯನ್ನು ಕೊಡು”ವವರಲ್ಲಿ ವಿನಂತಿಸಿಕೊಂಡನು. ದೇವರ ಜನರನ್ನು ಒತ್ತಾಯಪಡಿಸುವ ಅಗತ್ಯವನ್ನು ಮೋಶೆಯು ಕಾಣಲಿಲ್ಲ. ಪತ್ರಿಯೊಬ್ಬರು, ಅವನು ಅಥವಾ ಅವಳು, ತಮ್ಮಿಂದ ಸಾಧ್ಯವಾದುದನ್ನು ಕೊಡುವರೆಂಬ ಪೂರ್ಣ ಭರವಸೆ ಅವನಿಗಿತ್ತು.—ಹೋಲಿಸಿ 2 ಕೊರಿಂಥ 8:10-12.
ಹಾಗಿದ್ದರೂ, ನಿರ್ಮಾಣ ಯೋಜನೆಗೆ ಸಾಮಗ್ರಿಗಳ ದಾನಕ್ಕಿಂತಲೂ ಹೆಚ್ಚಿನದ್ದು ಅಗತ್ಯವಾಗಿತ್ತು. ಯೆಹೋವನು ಇಸ್ರಾಯೇಲ್ಯರಿಗೆ ಹೀಗೂ ಹೇಳಿದನು: “ನಿಮ್ಮಲ್ಲಿರುವ ಜಾಣರೆಲ್ಲರು ಬಂದು ಯೆಹೋವನು ಆಜ್ಞಾಪಿಸಿದವುಗಳನ್ನೆಲ್ಲಾ ಮಾಡಬೇಕು.” ಹೌದು, ಈ ನಿರ್ಮಾಣ ಯೋಜನೆಯು ಕುಶಲ ಕೆಲಸವನ್ನು ಕೇಳಿಕೊಂಡಿತು. ವಾಸ್ತವವಾಗಿ, ಕಟ್ಟಿಗೆಯ ಕೆಲಸ, ಲೋಹದ ಕೆಲಸ, ಮತ್ತು ರತ್ನಾಭರಣಗಳಿಂದ ಅಲಂಕರಿಸುವ ಕೆಲಸಗಳಂತಹ ‘ಸಕಲಶಿಲ್ಪಶಾಸ್ತ್ರಜ್ಞಾನವು’ ಈ ಯೋಜನೆಯನ್ನು ಪೂರ್ಣಗೊಳಿಸಲು ಅಗತ್ಯವಾಗಿರಲಿತ್ತು. ನಿಶ್ಚಯವಾಗಿಯೂ ಯೆಹೋವನು ಆ ಕಾರ್ಮಿಕರ ಕೌಶಲಗಳನ್ನು ಮಾರ್ಗದರ್ಶಿಸಲಿದ್ದನು, ಮತ್ತು ಆ ಯೋಜನೆಗೆ ಲಭಿಸುವ ಯಶಸ್ಸು ಯೋಗ್ಯವಾಗಿಯೇ ಆತನಿಗೆ ಸಲ್ಲಲಿಕ್ಕಿತ್ತು.—ವಿಮೋಚನಕಾಂಡ 35:10, 30-35; 36:1, 2.
ಇಸ್ರಾಯೇಲ್ಯರು ತಮ್ಮ ಸಂಪನ್ಮೂಲಗಳನ್ನು ಮತ್ತು ಕೌಶಲಗಳನ್ನು ನೀಡಿಕೊಳ್ಳುವಂತೆ ಕೇಳಿಕೊಳ್ಳಲ್ಪಟ್ಟಾಗ, ಅವರು ಅತ್ಯಾಸಕ್ತಿಯಿಂದ ಪ್ರತಿಕ್ರಿಯಿಸಿದರು. ಬೈಬಲಿನ ವೃತ್ತಾಂತವು ತಿಳಿಸುವುದು: “ಯಾರಾರನ್ನು ಹೃದಯವು ಪ್ರೇರಿಸಿತೋ ಯಾರಾರ ಮನಸ್ಸು ಸಿದ್ಧವಾಗಿತ್ತೋ ಅವರೆಲ್ಲರೂ ಬಂದು ದೇವದರ್ಶನದ ಗುಡಾರದ ಕೆಲಸಕ್ಕೋಸ್ಕರವೂ ಅದರ ಸಮಸ್ತಸೇವೆಗೋಸ್ಕರವೂ ದೀಕ್ಷಾವಸ್ತ್ರಗಳಿಗೋಸ್ಕರವೂ ಯೆಹೋವನಿಗೆ ಕಾಣಿಕೆಗಳನ್ನು ತಂದರು. ಸಿದ್ಧಚಿತ್ತರಾದ ಗಂಡಸರೂ ಹೆಂಗಸರೂ ಬಂದು ಯೆಹೋವನಿಗೆ . . . ಕಾಣಿಕೆಗಳನ್ನು . . . ಸಮರ್ಪಿಸಿದರು.”—ವಿಮೋಚನಕಾಂಡ 35:21, 22.
ನಮಗಾಗಿರುವ ಪಾಠ
ಇಂದು ದೇವರ ರಾಜ್ಯದ ಸುವಾರ್ತೆಯನ್ನು ಸಾರುವಂತಹ ಬೃಹತ್ ಕೆಲಸವು, ಸ್ವಯಂಪ್ರೇರಿತ ದಾನಗಳಿಂದ ನಡೆಸಲ್ಪಡುತ್ತದೆ. ಅನೇಕ ವೇಳೆ ಇವು ಹಣದ ರೂಪದಲ್ಲಿರುತ್ತವೆ. ಬೇರೆ ವಿದ್ಯಮಾನಗಳಲ್ಲಿ, ರಾಜ್ಯ ಸಭಾಗೃಹ, ಸಮ್ಮೇಳನ ಸಭಾಂಗಣ, ಮತ್ತು ಬ್ರಾಂಚ್ ಕಟ್ಟಡಗಳ ನಿರ್ಮಾಣ ಕಾರ್ಯದಲ್ಲಿ ಸಹಾಯಮಾಡಲು, ಕ್ರೈಸ್ತ ಸಹೋದರ ಸಹೋದರಿಯರು ತಮ್ಮಲ್ಲಿರುವ ಹೇರಳವಾದ ಅನುಭವಜ್ಞಾನವನ್ನು ಉಪಯೋಗಿಸಿದ್ದಾರೆ. ಮತ್ತು ಲೋಕದ ಸುತ್ತಲೂ ಇರುವ ನೂರಕ್ಕಿಂತಲೂ ಹೆಚ್ಚಿನ ಬೆತೆಲ್ ಮನೆಗಳಲ್ಲಿ ಮಾಡಲ್ಪಡಬೇಕಾದ ಕೆಲಸವೂ ಇದೆ. ಈ ಕೆಲಸವು ವಿಭಿನ್ನ ಕೌಶಲಗಳನ್ನು ಅಗತ್ಯಪಡಿಸುತ್ತದೆ. ಇಂತಹ ಕಾಣಿಕೆಗಳನ್ನು ಮನಃಪೂರ್ವಕವಾಗಿ ಮಾಡಿರುವವರ ಪರಿಶ್ರಮವನ್ನು ಯೆಹೋವನು ಮರೆಯಲಾರನೆಂಬ ವಿಷಯದಲ್ಲಿ ಅವರು ನಿಶ್ಚಿತರಾಗಿರಬಲ್ಲರು!—ಇಬ್ರಿಯ 6:10.
ಕ್ರೈಸ್ತ ಶುಶ್ರೂಷೆಯಲ್ಲಿ ನಮ್ಮಲ್ಲಿ ಪ್ರತಿಯೊಬ್ಬರಿಗೂ ಇರುವ ಪಾಲಿಗೆ, ಇದೇ ತತ್ವವು ಅನ್ವಯಿಸುತ್ತದೆ. ಸಾರುವ ಕಾರ್ಯದಲ್ಲಿ ಹುರುಪಿನಿಂದ ಭಾಗವಹಿಸಲಿಕ್ಕಾಗಿ ಸಮಯವನ್ನು ಕೊಂಡುಕೊಳ್ಳುವಂತೆ ನಾವೆಲ್ಲರೂ ಪ್ರಚೋದಿಸಲ್ಪಟ್ಟಿದ್ದೇವೆ. (ಮತ್ತಾಯ 24:14; ಎಫೆಸ 5:15-17) ಕೆಲವರು ಇದನ್ನು ಪೂರ್ಣ ಸಮಯದ ಸೌವಾರ್ತಿಕರಂತೆ ಇಲ್ಲವೆ ಪಯನೀಯರರಂತೆ ಮಾಡುತ್ತಾರೆ. ಇತರರು ತಮ್ಮ ಪರಿಸ್ಥಿತಿಗಳ ಕಾರಣ, ಶುಶ್ರೂಷೆಯಲ್ಲಿ ಪಯನೀಯರರಷ್ಟು ಸಮಯವನ್ನು ವ್ಯಯಿಸಲು ಶಕ್ತರಾಗಿರುವುದಿಲ್ಲ. ಹಾಗಿದ್ದರೂ, ಅವರು ಕೂಡ ಯೆಹೋವನನ್ನು ಪ್ರಸನ್ನಪಡಿಸುತ್ತಾರೆ. ದೇವದರ್ಶನದ ಕಾಣಿಕೆಗಳ ವಿಷಯದಲ್ಲಿ ಸತ್ಯವಾಗಿದ್ದಂತೆಯೇ, ಈಗ ನಮ್ಮಲ್ಲಿ ಪ್ರತಿಯೊಬ್ಬರೂ ಇಷ್ಟಿಷ್ಟು ಮೊತ್ತವನ್ನು ಕೊಡಬೇಕೆಂದು ಯೆಹೋವನು ನಿಗದಿಪಡಿಸುವುದಿಲ್ಲ. ಆದರೆ, ತನ್ನನ್ನು ಪ್ರತಿಯೊಬ್ಬರೂ ತಮ್ಮ ಪೂರ್ಣ ಹೃದಯ, ಪ್ರಾಣ, ಮನಸ್ಸು, ಮತ್ತು ಬಲದಿಂದ ಸೇವಿಸಬೇಕೆಂಬುದನ್ನು ಆತನು ಕೇಳಿಕೊಳ್ಳುತ್ತಾನೆ. (ಮಾರ್ಕ 12:30) ನಾವು ಅದನ್ನು ಮಾಡುತ್ತಿರುವುದಾದರೆ, ಶುದ್ಧಾರಾಧನೆಯನ್ನು ಮುಂದುವರಿಸಲು ನಾವು ಮಾಡುವಂತಹ ಸ್ವಪ್ರೇರಿತ ಕಾಣಿಕೆಗಳಿಗಾಗಿ ಆತನು ನಮಗೆ ಪ್ರತಿಫಲವನ್ನು ಕೊಡುವನೆಂಬ ವಿಷಯದಲ್ಲಿ ನಿಶ್ಚಿತರಾಗಿರಸಾಧ್ಯವಿದೆ.—ಇಬ್ರಿಯ 11:6.
[ಅಧ್ಯಯನ ಪ್ರಶ್ನೆಗಳು]
a ಇದು ಸುಲಿಗೆಯಾಗಿರಲಿಲ್ಲ. ಇಸ್ರಾಯೇಲ್ಯರು ಐಗುಪ್ತ್ಯರಿಂದ ಕಾಣಿಕೆಗಳನ್ನು ಕೇಳಿಕೊಂಡರು, ಮತ್ತು ಅವರಿಂದ ಮುಕ್ತವಾಗಿ ಪಡೆದುಕೊಂಡರು. ಅಲ್ಲದೆ, ಇಸ್ರಾಯೇಲ್ಯರನ್ನು ಗುಲಾಮರನ್ನಾಗಿ ಮಾಡುವ ಹಕ್ಕು ಐಗುಪ್ತ್ಯರಿಗೆ ಇರದಿದ್ದ ಕಾರಣ, ದೇವರ ಜನರು ಕೈಗೊಂಡ ಅನೇಕ ವರ್ಷಗಳ ದುಡಿತಕ್ಕಾಗಿ ಅವರು ಹಣವನ್ನು ಸಲ್ಲಿಸುವ ಹಂಗಿನಲ್ಲಿದ್ದರು.