ನಿರುತ್ಸಾಹವನ್ನು ಹೇಗೆ ನಿಭಾಯಿಸಸಾಧ್ಯವಿದೆ?
ವ್ಯಕ್ತಿಯೊಬ್ಬನು ನಿರುತ್ಸಾಹದ ವಿರುದ್ಧ ಹೇಗೆ ಹೋರಾಡಿ ಜಯಿಸಬಲ್ಲನು? ಯೆಹೋವನ ಸಾಕ್ಷಿಗಳ ಸಭೆಗಳಿಗೆ ಕ್ರಮವಾಗಿ ಭೇಟಿನೀಡುವ ಸಂಚರಣ ಮೇಲ್ವಿಚಾರಕರಲ್ಲಿ ಅನೇಕರಿಗೆ ಈ ಪ್ರಶ್ನೆಯನ್ನು ಕೇಳಲಾಯಿತು. ಯಾವ ಕ್ರೈಸ್ತನನ್ನಾದರೂ ಬಾಧಿಸಬಲ್ಲ ಈ ನಿರುತ್ಸಾಹದ ಕಾರಣಗಳನ್ನು ಮತ್ತು ಇದಕ್ಕಿರುವ ಪರಿಹಾರಗಳನ್ನು ವಿಶ್ಲೇಷಿಸಲು, ಅವರ ಉತ್ತರಗಳು ನಮಗೆ ಸಹಾಯಮಾಡಬಲ್ಲವು.
ನಿರುತ್ಸಾಹದೊಂದಿಗೆ ವ್ಯವಹರಿಸಲು ವಿಶ್ಲೇಷಣಕ್ಕಿಂತಲೂ ಹೆಚ್ಚಿನದರ ಅಗತ್ಯವಿದೆ. ಇದರ ರೋಗಲಕ್ಷಣಗಳಲ್ಲಿ, ಪ್ರಾರ್ಥನೆ ಇಲ್ಲವೆ ವೈಯಕ್ತಿಕ ಅಧ್ಯಯನದಲ್ಲಿ ಆಸಕ್ತಿಯಿಲ್ಲದಿರುವುದು, ಕೂಟಗಳಿಗೆ ಕ್ರಮವಾಗಿ ಹಾಜರಾಗದಿರುವುದು, ಉತ್ಸಾಹವಿಲ್ಲದಿರುವುದು, ಮತ್ತು ಕ್ರೈಸ್ತ ಸಂಗಾತಿಗಳ ಕಡೆಗೆ ಒಂದಿಷ್ಟು ಭಾವಶೂನ್ಯತೆಯನ್ನು ಹೊಂದಿರುವುದು ಸಹ ಸೇರಿದೆ. ಆದರೆ, ಎದ್ದುಕಾಣುವಂತಹ ರೋಗಲಕ್ಷಣಗಳಲ್ಲೊಂದು, ಸೌವಾರ್ತಿಕ ಕೆಲಸದಲ್ಲಿರಬೇಕಾದ ಹುರುಪಿನ ತಗ್ಗುವಿಕೆಯಾಗಿದೆ. ನಾವು ಈ ರೋಗಲಕ್ಷಣಗಳನ್ನು ಪರಿಶೀಲಿಸಿ, ಕೆಲವು ಪರಿಹಾರಗಳನ್ನು ಪರಿಗಣಿಸೋಣ.
ನಮ್ಮ ಸೌವಾರ್ತಿಕ ಕೆಲಸದಲ್ಲಿ ನಿರುತ್ಸಾಹ
ಶಿಷ್ಯರನ್ನಾಗಿ ಮಾಡುವ ನಿಯೋಗಕ್ಕೆ ಸಂಬಂಧಿಸಿದ ಕಷ್ಟತೊಂದರೆಗಳ ಕುರಿತು ಯೇಸು ಕ್ರಿಸ್ತನಿಗೆ ತಿಳಿದಿತ್ತು. (ಮತ್ತಾಯ 28:19, 20) ಅವನು ತನ್ನ ಹಿಂಬಾಲಕರನ್ನು ‘ತೋಳಗಳ ನಡುವೆ ಕುರಿಗಳಂತೆ’ ಕಳುಹಿಸಿದನು. ಸಾರುವ ಚಟುವಟಿಕೆಯು ಅವರ ಮೇಲೆ ಹಿಂಸೆಯನ್ನು ತರುವುದೆಂದು ಅವನಿಗೆ ಗೊತ್ತಿತ್ತು. (ಮತ್ತಾಯ 10:16-23) ಹಾಗಿದ್ದರೂ, ನಿರುತ್ಸಾಹಿತರಾಗಲು ಇದೊಂದು ಕಾರಣವಾಗಿರಲಿಲ್ಲ. ವಾಸ್ತವದಲ್ಲಿ, ಯೆಹೋವನ ಮೇಲೆ ಪ್ರಾರ್ಥನಾಪೂರ್ವಕವಾಗಿ ಆತುಕೊಂಡಿರುವ ದೇವರ ಸೇವಕರು, ಅನೇಕ ವೇಳೆ ಹಿಂಸೆಯಿಂದ ಬಲಪಡಿಸಲ್ಪಟ್ಟಿದ್ದಾರೆ.—ಅ. ಕೃತ್ಯಗಳು 4:29-31; 5:41, 42.
ಕ್ರಿಸ್ತನ ಶಿಷ್ಯರು ತೀಕ್ಷ್ಣವಾದ ಹಿಂಸೆಯನ್ನು ಅನುಭವಿಸದಿದ್ದರೂ, ಜನರು ಅವರನ್ನು ಯಾವಾಗಲೂ ಆದರದಿಂದ ಸ್ವಾಗತಿಸಲಿಲ್ಲ. (ಮತ್ತಾಯ 10:11-15) ತದ್ರೀತಿಯಲ್ಲಿ, ಇಂದು ಯೆಹೋವನ ಸಾಕ್ಷಿಗಳು ಪಾಲ್ಗೊಳ್ಳುವ ಸಾರುವ ಕೆಲಸವು ಯಾವಾಗಲೂ ನಿರಾತಂಕವಾಗಿ ಮಾಡಲ್ಪಡುವುದಿಲ್ಲ.a ಅನೇಕರಿಗೆ, ದೇವರಲ್ಲಿ ನಂಬಿಕೆ ಎಂಬುದು ಒಂದು ವೈಯಕ್ತಿಕ ವಿಷಯವಾಗಿರುವುದರಿಂದ, ಇದರ ಕುರಿತು ಚರ್ಚಿಸಲು ಅವರು ಬಯಸುವುದಿಲ್ಲ. ಇನ್ನೂ ಕೆಲವರು, ಒಂದು ಧಾರ್ಮಿಕ ಸಂಸ್ಥೆಯ ಬಗ್ಗೆ ನಿರ್ದಿಷ್ಟವಾದ ಅವಿಚಾರಾಭಿಪ್ರಾಯವುಳ್ಳವರಾಗಿದ್ದು, ಅದರೊಂದಿಗೆ ಯಾವ ಸಂಬಂಧವನ್ನೂ ಹೊಂದಿರಲು ಬಯಸುವುದಿಲ್ಲ. ಉದಾಸೀನತೆ, ಫಲಿತಾಂಶಗಳ ಕೊರತೆ, ಇಲ್ಲವೆ ಇನ್ನಿತರ ಹಲವಾರು ಸಮಸ್ಯೆಗಳು, ನಿರುತ್ಸಾಹದ ದುಸ್ಸಾಧ್ಯ ಮೂಲಗಳಾಗಿರಸಾಧ್ಯವಿದೆ ಎಂಬುದರಲ್ಲಿ ಸಂದೇಹವೇ ಇಲ್ಲ. ಈ ಅಡೆತಡೆಗಳನ್ನು ಹೇಗೆ ಜಯಿಸಸಾಧ್ಯವಿದೆ?
ಉತ್ತಮ ಫಲಿತಾಂಶಗಳನ್ನು ಪಡೆದುಕೊಳ್ಳುವುದು
ಶುಶ್ರೂಷೆಯಿಂದ ನಮಗೆ ಸಿಗುವ ಆನಂದವು, ಆ ಕಾರ್ಯದಿಂದ ಬರುವ ಫಲಿತಾಂಶಗಳ ಮೇಲೆ ಸ್ವಲ್ಪ ಮಟ್ಟಿಗೆ ಅವಲಂಬಿಸಿದೆ. ಹಾಗಾದರೆ, ನಾವು ಹೆಚ್ಚು ಫಲಪ್ರದವಾದ ಶುಶ್ರೂಷೆಯನ್ನು ಹೇಗೆ ಅನುಭವಿಸಸಾಧ್ಯವಿದೆ? ನಾವು ‘ಮನುಷ್ಯರನ್ನು ಹಿಡಿಯುವ ಬೆಸ್ತರು’ ಎಂಬುದನ್ನು ಜ್ಞಾಪಕದಲ್ಲಿಟ್ಟುಕೊಳ್ಳೋಣ. (ಮಾರ್ಕ 1:16-18) ಪುರಾತನ ಇಸ್ರಾಯೇಲಿನಲ್ಲಿದ್ದ ಬೆಸ್ತರು, ಅತ್ಯಧಿಕ ಪ್ರಮಾಣದ ಮೀನನ್ನು ಹಿಡಿಯಲು ಸಾಧ್ಯವಾಗುವ ಸಮಯದಲ್ಲಿ, ಅಂದರೆ ರಾತ್ರಿಯ ವೇಳೆಯಲ್ಲಿ ಮೀನು ಹಿಡಿಯಲು ಹೋಗುತ್ತಿದ್ದರು. ನಾವು ಸಹ ನಮ್ಮ ಟೆರಿಟೊರಿಯನ್ನು ವಿಶ್ಲೇಷಿಸುವ ಅಗತ್ಯವಿದೆ. ಹೀಗೆ ಮಾಡುವುದರಿಂದ, ಅಧಿಕಾಂಶ ಜನರು ಮನೆಯಲ್ಲಿರುವ ಮತ್ತು ನಮ್ಮ ಸಂದೇಶಕ್ಕೆ ಹೆಚ್ಚು ಅನುಕೂಲಕರವಾಗಿ ಪ್ರತಿಕ್ರಿಯಿಸುವ ಸಮಯದಲ್ಲಿ ನಾವು “ಮೀನು ಹಿಡಿಯಲು” ಹೋಗಬಹುದು. ಇದು ಸಾಯಂಕಾಲದ, ವಾರಾಂತ್ಯದ, ಇಲ್ಲವೆ ಬೇರೆ ಯಾವುದಾದರೊಂದು ಸಮಯವಾಗಿರಬಹುದು. ಒಬ್ಬ ಸಂಚರಣ ಮೇಲ್ವಿಚಾರಕನಿಗನುಸಾರ, ಜನರು ಕೆಲಸಕ್ಕೆ ಹೋಗುವ ಕ್ಷೇತ್ರಗಳಲ್ಲಿ ಇದು ವ್ಯಾವಹಾರಿಕವಾಗಿದೆ. ಸಾಯಂಕಾಲದ ಸಾಕ್ಷಿಕಾರ್ಯವು ಅನೇಕವೇಳೆ ಅತ್ಯುತ್ತಮ ಫಲಿತಾಂಶಗಳನ್ನು ತರುತ್ತದೆ ಎಂದು ಅವನು ಹೇಳುತ್ತಾನೆ. ಟೆಲಿಫೋನ್ ಇಲ್ಲವೆ ಅನೌಪಚಾರಿಕ ಸಾಕ್ಷಿಕಾರ್ಯದ ಮೂಲಕ ಸಹ ಹೆಚ್ಚಿನ ಜನರನ್ನು ತಲಪಸಾಧ್ಯವಿದೆ.
ಶುಶ್ರೂಷೆಯಲ್ಲಿ ಪಟ್ಟುಹಿಡಿದು ಮುಂದುವರಿಯುವುದು ಒಳ್ಳೆಯ ಫಲಿತಾಂಶಗಳನ್ನು ತರುತ್ತದೆ. ಪೂರ್ವ ಯೂರೋಪ್ ಮತ್ತು ಆಫ್ರಿಕದ ಕೆಲವು ದೇಶಗಳಲ್ಲಿ, ರಾಜ್ಯದ ಸಾರುವಿಕೆಯು ಚೆನ್ನಾಗಿ ಮುಂದುವರಿದಿದೆ, ಮತ್ತು ಇದರಿಂದಾಗಿ ಬಹಳಷ್ಟು ಅಭಿವೃದ್ಧಿಯಾಗಿದೆ. ತದ್ರೀತಿಯಲ್ಲಿ, ಫಲಪ್ರದವಲ್ಲವೆಂದು ಬಹಳ ಹಿಂದೆಯೇ ಪರಿಗಣಿಸಲ್ಪಟ್ಟ ಇಲ್ಲವೆ ಪದೇ ಪದೇ ಆವರಿಸಲ್ಪಡುವ ಟೆರಿಟೊರಿಗಳಲ್ಲಿ ಸಹ, ಅನೇಕ ಸಭೆಗಳು ಸ್ಥಾಪಿಸಲ್ಪಟ್ಟಿವೆ. ಹಾಗಿದ್ದರೂ, ನಿಮ್ಮ ಕ್ಷೇತ್ರದಲ್ಲಿ ಇಂತಹ ಫಲಿತಾಂಶಗಳು ದೊರಕದಿದ್ದಲ್ಲಿ ಆಗೇನು?
ಉತ್ತಮ ಮನೋಭಾವವನ್ನು ಕಾಪಾಡಿಕೊಳ್ಳುವುದು
ಯೇಸು ನಿರೂಪಿಸಿದ ಗುರಿಗಳು ನಮ್ಮ ಮನಸ್ಸಿನಲ್ಲಿ ಸ್ಪಷ್ಟವಾಗಿ ಬೇರೂರಿದ್ದರೆ, ಶುಶ್ರೂಷೆಯಲ್ಲಿ ನಾವು ಎದುರಿಸುವ ಉದಾಸೀನತೆಯಿಂದ ನಿರುತ್ಸಾಹಿತರಾಗದಿರಲು ಇದು ನಮಗೆ ಸಹಾಯ ಮಾಡುವುದು. ತನ್ನ ಶಿಷ್ಯರು ಯೋಗ್ಯರನ್ನು ಹುಡುಕಿ ಕಂಡುಹಿಡಿಯುವಂತೆ ಯೇಸು ಬಯಸಿದನೇ ಹೊರತು, ಗುಂಪು ಗುಂಪಾಗಿ ಜನರ ಮತಾಂತರವನ್ನು ನಡೆಸುವಂತೆ ಬಯಸಲಿಲ್ಲ. ಪುರಾತನ ಇಸ್ರಾಯೇಲಿನಲ್ಲಿ ಅಧಿಕಾಂಶ ಇಸ್ರಾಯೇಲ್ಯರು ಪ್ರವಾದಿಗಳಿಗೆ ಕಿವಿಗೊಡದಂತೆಯೇ, ಹೆಚ್ಚಿನ ಜನರು ಸುವಾರ್ತೆಯನ್ನು ಅಂಗೀಕರಿಸಲಾರರು ಎಂಬುದಾಗಿ ಯೇಸು ಅನೇಕ ಸಂದರ್ಭಗಳಲ್ಲಿ ತಿಳಿಸಿದನು.—ಯೆಹೆಜ್ಕೇಲ 9:4; ಮತ್ತಾಯ 10:11-15; ಮಾರ್ಕ 4:14-20.
“ತಮ್ಮ ಆತ್ಮಿಕ ಅಗತ್ಯದ ಅರಿವುಳ್ಳ” (NW) ಜನರು, ‘ರಾಜ್ಯದ ಸುವಾರ್ತೆಯನ್ನು’ ಕೃತಜ್ಞತೆಯಿಂದ ಸ್ವೀಕರಿಸುತ್ತಾರೆ. (ಮತ್ತಾಯ 5:3; 24:14) ದೇವರು ನಿರ್ದಿಷ್ಟವಾಗಿ ತಿಳಿಸುವ ವಿಧದಲ್ಲಿ ಆತನಿಗೆ ಸೇವೆಸಲ್ಲಿಸಲು ಅವರು ಬಯಸುತ್ತಾರೆ. ಆದಕಾರಣ, ನಮ್ಮ ಚಟುವಟಿಕೆಯ ಫಲಿತಾಂಶಗಳು, ಈ ಸಂದೇಶವನ್ನು ಪ್ರಸ್ತುತಪಡಿಸಲು ನಮಗಿರುವ ಸಾಮರ್ಥ್ಯಕ್ಕಿಂತಲೂ, ಜನರ ಹೃದಯದ ಸ್ಥಿತಿಗೆ ಹೆಚ್ಚಾಗಿ ಸಂಬಂಧಿಸಿದೆ. ಸುವಾರ್ತೆಯನ್ನು ಆಕರ್ಷಕವಾಗಿ ಮಾಡಲು ನಮ್ಮಿಂದ ಸಾಧ್ಯವಾದುದನ್ನು ನಾವು ಮಾಡಬೇಕೆಂಬುದರಲ್ಲಿ ಸಂದೇಹವಿಲ್ಲ. ಆದರೂ, ಫಲಿತಾಂಶಗಳು ದೇವರ ಮೇಲೆ ಅವಲಂಬಿಸಿವೆ, ಏಕೆಂದರೆ ಯೇಸು ಹೇಳಿದ್ದು: “ನನ್ನನ್ನು ಕಳುಹಿಸಿಕೊಟ್ಟಂಥ ತಂದೆಯು ಎಳೆದ ಹೊರತು ಯಾವನೂ ನನ್ನ ಬಳಿಗೆ ಬರಲಾರನು.”—ಯೋಹಾನ 6:44.
ನಮ್ಮ ಸೌವಾರ್ತಿಕ ಕೆಲಸವು ಯೆಹೋವನ ನಾಮವನ್ನು ಪ್ರಸಿದ್ಧಿಪಡಿಸುತ್ತದೆ. ಜನರು ನಮ್ಮ ಸಂದೇಶಕ್ಕೆ ಕಿವಿಗೊಡಲಿ ಅಥವಾ ಕಿವಿಗೊಡದೇ ಇರಲಿ, ನಮ್ಮ ಸಾರುವ ಚಟುವಟಿಕೆಯು ಯೆಹೋವನ ಪವಿತ್ರ ನಾಮದ ಪವಿತ್ರೀಕರಣಕ್ಕೆ ನೆರವು ನೀಡುತ್ತದೆ. ಅಲ್ಲದೆ, ನಮ್ಮ ಸೌವಾರ್ತಿಕ ಕೆಲಸದ ಮೂಲಕ, ನಾವು ಕ್ರಿಸ್ತನ ಶಿಷ್ಯರೆಂಬುದನ್ನು ತೋರಿಸಿಕೊಡುತ್ತೇವೆ ಮಾತ್ರವಲ್ಲ, ನಮ್ಮ ದಿನದಲ್ಲಿ ನಡೆಯುತ್ತಿರುವ ಅತ್ಯಂತ ಪ್ರಮುಖ ನಿಯೋಗದಲ್ಲಿ ಭಾಗವಹಿಸುವ ಸುಯೋಗವೂ ನಮಗಿದೆ.—ಮತ್ತಾಯ 6:9; ಯೋಹಾನ 15:8.
ನಿರುತ್ಸಾಹ ಮತ್ತು ಸಂಬಂಧಗಳು
ಕುಟುಂಬದಲ್ಲಿ ಇಲ್ಲವೆ ಸಭೆಯಲ್ಲಿರುವ ಕೆಲವು ಮಾನವ ಸಂಬಂಧಗಳು ಸಹ ನಿರುತ್ಸಾಹವನ್ನು ಉಂಟುಮಾಡಬಲ್ಲವು. ಉದಾಹರಣೆಗೆ, ನಮ್ಮನ್ನು ಯಾರೂ ಸರಿಯಾಗಿ ಅರ್ಥಮಾಡಿಕೊಳ್ಳುವುದಿಲ್ಲ ಎಂಬ ಅನಿಸಿಕೆ ಇರಬಹುದು. ಜೊತೆ ವಿಶ್ವಾಸಿಗಳ ಅಪರಿಪೂರ್ಣತೆಗಳು ಸಹ ನಮ್ಮಲ್ಲಿ ನಿರುತ್ಸಾಹವನ್ನು ಉಂಟುಮಾಡಬಹುದು. ಇಂತಹ ಸನ್ನಿವೇಶದಲ್ಲೂ ಶಾಸ್ತ್ರಗಳು ನಮಗೆ ಬಹಳಷ್ಟು ನೆರವನ್ನು ನೀಡಬಲ್ಲವು.
ಲೋಕವ್ಯಾಪಕವಾಗಿರುವ ‘ಸಹೋದರರ ಇಡೀ ಬಳಗವು’ (NW) ಒಂದು ದೊಡ್ಡ ಆತ್ಮಿಕ ಕುಟುಂಬವನ್ನು ರೂಪಿಸುತ್ತದೆ. (1 ಪೇತ್ರ 2:17) ಆದರೆ, ವೈವಿಧ್ಯಮಯ ವ್ಯಕ್ತಿತ್ವದ ಕಾರಣ ನಮ್ಮಲ್ಲಿ ಸಮಸ್ಯೆಗಳು ಏಳುವಾಗ, ನಾವು ಒಂದು ಐಕ್ಯ ಸಂಸ್ಥೆಗೆ ಸೇರಿದವರೆಂಬ ಭಾವನೆಯು ಕಾಣೆಯಾಗಿ ಬಿಡುತ್ತದೆ. ಪ್ರಥಮ ಶತಮಾನದ ಕ್ರೈಸ್ತರು ಇಂತಹ ಸಮಸ್ಯೆಗಳಿಗೆ ಹೊರತಾಗಿರಲಿಲ್ಲ ಎಂಬುದು ಸ್ಪಷ್ಟ, ಏಕೆಂದರೆ ತಮ್ಮೊಳಗೆ ಐಕ್ಯಭಾವವನ್ನು ಕಾಪಾಡಿಕೊಳ್ಳುವಂತೆ ಅಪೊಸ್ತಲ ಪೌಲನು ಸತತವಾಗಿ ಅವರಿಗೆ ಜ್ಞಾಪಕಹುಟ್ಟಿಸಬೇಕಾಗಿತ್ತು. ಉದಾಹರಣೆಗೆ, ಯುವೊದ್ಯ ಮತ್ತು ಸಂತುಕೆ ಎಂಬ ಇಬ್ಬರು ಕ್ರೈಸ್ತ ಸ್ತ್ರೀಯರು, ತಮ್ಮಲ್ಲಿದ್ದ ಭಿನ್ನಾಭಿಪ್ರಾಯವನ್ನು ಇತ್ಯರ್ಥಮಾಡಿಕೊಳ್ಳುವಂತೆ ಅವನು ಉತ್ತೇಜಿಸಿದನು.—1 ಕೊರಿಂಥ 1:10; ಎಫೆಸ 4:1-3; ಫಿಲಿಪ್ಪಿ 4:2, 3.
ಸಮಸ್ಯೆಯು ಇದಾಗಿರುವಲ್ಲಿ, ನಾವು ನಮ್ಮ ಸಹೋದರ ಸಹೋದರಿಯರ ಕಡೆಗೆ ಯಥಾರ್ಥವಾದ ಪ್ರೀತಿಯ ಜ್ವಾಲೆಯನ್ನು ಪುನಃ ಹೇಗೆ ಹೊತ್ತಿಸಸಾಧ್ಯವಿದೆ? ಕ್ರಿಸ್ತನು ಅವರಿಗಾಗಿಯೂ ಮರಣಹೊಂದಿದನೆಂದು ಮತ್ತು ನಮ್ಮಂತೆಯೇ ಅವರು ಕೂಡ ಅವನ ಪ್ರಾಯಶ್ಚಿತ್ತ ಯಜ್ಞದಲ್ಲಿ ನಂಬಿಕೆಯನ್ನಿಟ್ಟಿದ್ದಾರೆಂದು ಸ್ವತಃ ಜ್ಞಾಪಿಸಿಕೊಳ್ಳುವ ಮೂಲಕವೇ. ನಮ್ಮ ಸಹೋದರರಲ್ಲಿ ಅನೇಕರು ನಮಗಾಗಿ ತಮ್ಮ ಜೀವಗಳನ್ನು ಗಂಡಾಂತರಕ್ಕೆ ಒಳಪಡಿಸುತ್ತಾ, ಯೇಸು ಕ್ರಿಸ್ತನನ್ನು ಅನುಕರಿಸಲು ಸಹ ಸಿದ್ಧರಾಗಿದ್ದಾರೆ ಎಂಬುದನ್ನು ನಾವು ಮನಸ್ಸಿನಲ್ಲಿ ಇಡತಕ್ಕದ್ದು.
ಕೆಲವು ವರ್ಷಗಳ ಹಿಂದೆ ಫ್ರಾನ್ಸಿನ ಪ್ಯಾರಿಸ್ನಲ್ಲಿ, ರಾಜ್ಯ ಸಭಾಗೃಹದ ಹೊರಗೆ ಬಿದ್ದಿದ್ದ ಒಂದು ಸೂಟ್ಕೇಸನ್ನು, ಅಂದರೆ ಒಳಗಡೆ ಬಾಂಬ್ ಇದ್ದ ಸೂಟ್ಕೇಸನ್ನು ಕೂಡಲೇ ಕೈಗೆತ್ತಿಕೊಂಡು ಕೆಳಗಿಳಿದು ಓಡಲು ಒಬ್ಬ ಯುವ ಸಾಕ್ಷಿಯು ಹಿಂಜರಿಯಲಿಲ್ಲ. ಅವನು ಹಲವಾರು ಮೆಟ್ಟಿಲುಗಳನ್ನು ಇಳಿದು, ಅದನ್ನು ಒಂದು ಒರತೆಯಲ್ಲಿ ಎಸೆದಾಗ, ಅದು ಸ್ಫೋಟಿಸಿತು. ಹೀಗೆ ತನ್ನ ಜೀವವನ್ನು ಗಂಡಾಂತರಕ್ಕೆ ಒಡ್ಡಲು ಅವನು ಹೇಗೆ ಪ್ರಚೋದಿಸಲ್ಪಟ್ಟನೆಂದು ಕೇಳಿದಾಗ, ಅವನು ಉತ್ತರಿಸಿದ್ದು: “ನಮ್ಮೆಲ್ಲರ ಜೀವಗಳು ಅಪಾಯದಲ್ಲಿವೆ ಎಂಬುದನ್ನು ನಾನು ಗ್ರಹಿಸಿದೆ. ಎಲ್ಲರೂ ಕೊಲ್ಲಲ್ಪಡುವುದಕ್ಕಿಂತಲೂ ನಾನೊಬ್ಬನೇ ಸಾಯುವುದು ಉತ್ತಮವೆಂದು ನಾನು ನೆನಸಿದೆ.”b ಯೇಸುವಿನ ಮಾದರಿಯನ್ನು ಇಷ್ಟು ನಿಕಟವಾಗಿ ಅನುಸರಿಸಲು ಸಿದ್ಧರಾಗಿರುವ ಇಂತಹ ಸಂಗಾತಿಗಳಿರುವುದು ಎಂತಹ ಒಂದು ಆಶೀರ್ವಾದವಾಗಿದೆ!
ಇದಲ್ಲದೆ, ಎರಡನೆಯ ಜಾಗತಿಕ ಯುದ್ಧವು ನಡೆಯುತ್ತಿದ್ದಾಗ, ಶಿಬಿರ ಕೂಟಗಳಲ್ಲಿ ಬಂದಿಗಳಾಗಿದ್ದ ಯೆಹೋವನ ಸಾಕ್ಷಿಗಳ ಮಧ್ಯೆ ನೆಲೆಸಿದ್ದ ಸಹಕಾರ ಮನೋಭಾವದ ಕುರಿತು ನಾವು ಮನನಮಾಡಸಾಧ್ಯವಿದೆ.c ಅಷ್ಟೇ ನಂಬಿಗಸ್ತರಾಗಿ, ಇತ್ತೀಚಿನ ಸಮಯಗಳಲ್ಲಿ ಮಲಾವಿಯಲ್ಲಿರುವ ನಮ್ಮ ಸಹೋದರ ಸಹೋದರಿಯರು, ಸತ್ಯ ಕ್ರೈಸ್ತರೋಪಾದಿ ತಮ್ಮ ಸಮಗ್ರತೆಯನ್ನು ಕಾಪಾಡಿಕೊಂಡಿದ್ದಾರೆ. ಇಂತಹ ಪ್ರತಿಕೂಲ ಪರಿಸ್ಥಿತಿಗಳಲ್ಲಿ ಸ್ಥಳಿಕ ಸಭೆಯಲ್ಲಿರುವ ನಮ್ಮ ಸಹೋದರರು ಕೂಡ ತದ್ರೀತಿಯಲ್ಲಿ ಕ್ರಿಯೆಗೈಯುವರು ಎಂಬ ವಿಚಾರವು ತಾನೇ, ದಿನನಿತ್ಯದ ಒತ್ತಡಗಳನ್ನು ಮತ್ತು ತೊಂದರೆಗಳನ್ನು ಕಡೆಗಣಿಸುವಂತೆ ಅಥವಾ ಅಲ್ಪವೆಂದೆಣಿಸುವಂತೆ ಪ್ರೇರೇಪಿಸುವುದಿಲ್ಲವೊ? ನಾವು ಕ್ರಿಸ್ತನ ಮನಸ್ಸನ್ನು ಬೆಳೆಸಿಕೊಳ್ಳುವುದಾದರೆ, ನಮ್ಮ ಜೊತೆ ವಿಶ್ವಾಸಿಗಳೊಂದಿಗಿನ ನಮ್ಮ ಅನುದಿನದ ಸಂಬಂಧಗಳು, ನಿರುತ್ಸಾಹದ ಮೂಲವಲ್ಲ, ಚೈತನ್ಯದ ಮೂಲವಾಗಿರುವವು.
ನಿರುತ್ಸಾಹಿತರನ್ನಾಗಿ ಮಾಡುವ ವೈಯಕ್ತಿಕ ಅನಿಸಿಕೆಗಳು
“ಕೋರಿದ್ದಕ್ಕೆ ತಡವಾದರೆ ಮನಸ್ಸು ಬಳಲುವದು; ಕೈಗೂಡಿದ ಇಷ್ಟಾರ್ಥವು ಜೀವವೃಕ್ಷವು.” (ಜ್ಞಾನೋಕ್ತಿ 13:12) ಈ ಹಳೆಯ ವ್ಯವಸ್ಥೆಯ ಅಂತ್ಯವು ಬೇಗನೆ ಬರುತ್ತಿಲ್ಲವೆಂಬುದು, ಯೆಹೋವನ ಸೇವಕರಲ್ಲಿ ಕೆಲವರ ದೃಷ್ಟಿಕೋನವಾಗಿದೆ. ಅನೇಕ ಅವಿಶ್ವಾಸಿಗಳಂತೆಯೇ ಕ್ರೈಸ್ತರು ಸಹ, ತಾವು ಜೀವಿಸುತ್ತಿರುವ ಈ ಸಮಯಾವಧಿಯನ್ನು ‘ಕಠಿನವೂ ನಿಭಾಯಿಸಲು ಕಷ್ಟಕರವೂ’ ಆಗಿ ಕಂಡುಕೊಳ್ಳುತ್ತಾರೆ.—2 ತಿಮೊಥೆಯ 3:1-5.
ಆದರೆ, ಅವಿಶ್ವಾಸಿಗಳಿಗೆ ಅಸದೃಶವಾಗಿ, ಕ್ರೈಸ್ತರು ಈ ಸಂಕಟಮಯ ಪರಿಸ್ಥಿತಿಗಳಲ್ಲಿ ಯೇಸುವಿನ ಸಾನ್ನಿಧ್ಯದ “ಸೂಚನೆ”ಯನ್ನು ನೋಡಲು ಹರ್ಷಿಸಬೇಕು. ಏಕೆಂದರೆ ದೇವರ ರಾಜ್ಯವು ಈ ದುಷ್ಟ ವಿಷಯಗಳ ವ್ಯವಸ್ಥೆಗೆ ಬೇಗನೆ ಅಂತ್ಯವನ್ನು ತರಲಿರುವುದು ಎಂಬುದನ್ನು ಇದು ಸೂಚಿಸುತ್ತದೆ. (ಮತ್ತಾಯ 24:3-14) ಮತ್ತು ಪರಿಸ್ಥಿತಿಯು ನಿಜವಾಗಿಯೂ ತೀರ ಹದಗೆಡುವಾಗ, ಅಂದರೆ “ಮಹಾ ಸಂಕಟ”ದ ಸಮಯದಲ್ಲಿ, ಈ ಘಟನೆಗಳು ನಮಗೆ ಆನಂದವನ್ನು ತರಬಲ್ಲವು, ಏಕೆಂದರೆ ಅವು ದೇವರ ಸನ್ನಿಹಿತವಾಗಿರುವ ಹೊಸ ಲೋಕದ ಘೋಷಣೆಯನ್ನು ಮಾಡುತ್ತವೆ.—ಮತ್ತಾಯ 24:21; 2 ಪೇತ್ರ 3:13.
ಪ್ರಚಲಿತ ದಿನದ ಕಾರ್ಯಕಲಾಪಗಳಲ್ಲಿ ರಾಜ್ಯವು ಹಸ್ತಕ್ಷೇಪ ಮಾಡುವುದೆಂಬ ವಿಷಯವನ್ನು ಒಬ್ಬ ಕ್ರೈಸ್ತನು ತನ್ನ ಮನಸ್ಸಿನಿಂದ ದೂರ ತಳ್ಳಿಹಾಕುವಾಗ, ಅವನು ಪ್ರಾಪಂಚಿಕ ಬೆನ್ನಟ್ಟುವಿಕೆಗಳಿಗೆ ಹೆಚ್ಚೆಚ್ಚು ಸಮಯವನ್ನು ವ್ಯಯಿಸುವಂತೆ ಇದು ಮಾಡುವುದು. ಐಹಿಕ ಕೆಲಸ ಮತ್ತು ಮನೋರಂಜನೆಯು ತನ್ನೆಲ್ಲ ಸಮಯ ಹಾಗೂ ಶಕ್ತಿಯನ್ನು ಉಪಯೋಗಿಸಿಕೊಳ್ಳುವಂತೆ ಅವನು ಬಿಡುವುದಾದರೆ, ತನಗಿರುವ ಶಾಸ್ತ್ರೀಯ ಜವಾಬ್ದಾರಿಗಳನ್ನು ಯೋಗ್ಯವಾಗಿ ನೆರವೇರಿಸುವುದು ಅವನಿಗೆ ಕಷ್ಟಕರವಾಗಿರುವುದು. (ಮತ್ತಾಯ 6:24, 33, 34) ಇಂತಹ ಮನೋಭಾವವು ಆಶಾಭಂಗವನ್ನು ಉಂಟುಮಾಡಿ, ತದನಂತರ ನಿರುತ್ಸಾಹಕ್ಕೆ ನಡೆಸುತ್ತದೆ. ಒಬ್ಬ ಸಂಚರಣ ಮೇಲ್ವಿಚಾರಕನು ಹೇಳಿಕೆ ನೀಡಿದ್ದು: “ಈ ಹಳೆಯ ವಿಷಯಗಳ ವ್ಯವಸ್ಥೆಯಲ್ಲಿ, ಹೊಸ ಲೋಕದ ಜೀವನ ಶೈಲಿಯನ್ನು ಅನುಸರಿಸಲು ಪ್ರಯತ್ನಿಸುವುದು ತೀರ ಅವಾಸ್ತವಿಕವಾದದ್ದಾಗಿದೆ.”
ಅತ್ಯುತ್ತಮ ಪರಿಹಾರಗಳಲ್ಲಿ ಎರಡು
ರೋಗನಿರ್ಣಯವನ್ನು ಮಾಡಿದ ಮೇಲೆ, ವ್ಯಕ್ತಿಯೊಬ್ಬನು ಪರಿಣಾಮಕಾರಿಯಾದ ಪರಿಹಾರವನ್ನು ಹೇಗೆ ಕಂಡುಕೊಳ್ಳಸಾಧ್ಯವಿದೆ? ಲಭ್ಯವಿರುವ ಅತ್ಯುತ್ತಮ ವಿಧಾನಗಳಲ್ಲಿ ವೈಯಕ್ತಿಕ ಅಧ್ಯಯನವು ಒಂದಾಗಿದೆ. ಏಕೆ? ಏಕೆಂದರೆ, “ನಾವು ಏನನ್ನು ಮಾಡುತ್ತಾ ಇದ್ದೇವೊ, ಅದನ್ನು ಏಕೆ ಮಾಡುತ್ತಾ ಇದ್ದೇವೆಂಬುದನ್ನು ಅದು ನಮಗೆ ಜ್ಞಾಪಕಹುಟ್ಟಿಸುತ್ತದೆ” ಎಂಬುದಾಗಿ ಒಬ್ಬ ಸಂಚರಣ ಮೇಲ್ವಿಚಾರಕನು ಹೇಳಿದನು. ಇನ್ನೊಬ್ಬನು ವಿವರಿಸಿದ್ದು: “ನಿರ್ಬಂಧದ ಕಾರಣ ಸಾರುವುದು ಸಕಾಲದಲ್ಲಿ ಒಂದು ಹೊರೆಯಾಗಿ ಪರಿಣಮಿಸುತ್ತದೆ.” ಆದರೆ ನಾವು ಅಂತ್ಯವನ್ನು ಸಮೀಪಿಸಿದಂತೆ, ನಮಗಿರುವ ಪಾತ್ರದ ಸ್ಪಷ್ಟವಾದ ನೋಟವನ್ನು ಪುನಃ ಪಡೆದುಕೊಳ್ಳುವಂತೆ, ಒಳ್ಳೆಯ ವೈಯಕ್ತಿಕ ಅಧ್ಯಯನವು ನಮಗೆ ಸಹಾಯ ಮಾಡುತ್ತದೆ. ಅದೇ ವಿಚಾರಸರಣಿಯನ್ನು ಮುಂದುವರಿಸುತ್ತಾ, ದೇವರ ಚಿತ್ತವನ್ನು ಮಾಡುವುದರಲ್ಲಿ ನಿಜವಾದ ಸಂತೋಷವನ್ನು ಕಂಡುಕೊಳ್ಳಬೇಕಾದರೆ, ಆತ್ಮಿಕವಾಗಿ ಚೆನ್ನಾಗಿ ಉಣ್ಣುವ ಅಗತ್ಯವಿದೆ ಎಂಬುದನ್ನು ಶಾಸ್ತ್ರಗಳು ಸತತವಾಗಿ ನಮಗೆ ಜ್ಞಾಪಕಹುಟ್ಟಿಸುತ್ತವೆ.—ಕೀರ್ತನೆ 1:1-3; 19:7-10; 119:1, 2.
ಉತ್ತೇಜನದಾಯಕ ಕುರಿಪಾಲನೆಯ ಭೇಟಿಗಳನ್ನು ಮಾಡುವ ಮೂಲಕ, ನಿರುತ್ಸಾಹದ ಮೇಲೆ ಜಯಸಾಧಿಸಲು ಹಿರಿಯರು ಇತರರಿಗೆ ಸಹಾಯಮಾಡಬಹುದು. ನಮ್ಮಲ್ಲಿ ಪ್ರತಿಯೊಬ್ಬರೂ ಬಹಳವಾಗಿ ಗಣ್ಯಮಾಡಲ್ಪಡುತ್ತೇವೆಂದು ಮತ್ತು ಯೆಹೋವನ ಜನರಲ್ಲಿ ಒಂದು ಪ್ರಮುಖ ಸ್ಥಾನವನ್ನು ಹೊಂದಿದ್ದೇವೆಂದು, ಹಿರಿಯರು ಇಂತಹ ಖಾಸಗಿ ಭೇಟಿಗಳಲ್ಲಿ ತೋರಿಸಿಕೊಡಬಹುದು. (1 ಕೊರಿಂಥ 12:20-26) ಜೊತೆ ಕ್ರೈಸ್ತರ ಕುರಿತು ಒಬ್ಬ ಹಿರಿಯನು ಹೇಳಿದ್ದು: “ಅವರು ಎಷ್ಟು ಪ್ರಾಮುಖ್ಯರೆಂಬುದನ್ನು ಒತ್ತಿಹೇಳಲು, ಈ ಹಿಂದೆ ಅವರು ಸಾಧಿಸಿರುವ ವಿಷಯಗಳನ್ನು ನಾನು ಅವರಿಗೆ ಜ್ಞಾಪಿಸುತ್ತೇನೆ. ಅವರು ಯೆಹೋವನ ದೃಷ್ಟಿಯಲ್ಲಿ ಅಮೂಲ್ಯರೆಂದು ಮತ್ತು ಆತನ ಮಗನ ರಕ್ತವು ಅವರ ಪರವಾಗಿ ಸುರಿಸಲ್ಪಟ್ಟಿದೆ ಎಂದು ನಾನು ಸೂಚಿಸಿ ಹೇಳುತ್ತೇನೆ. ಇಂತಹ ತರ್ಕವನ್ನು ಅವರು ಆದರದಿಂದ ಸ್ವೀಕರಿಸುತ್ತಾರೆ. ಮತ್ತು ಬಲವಾದ ಬೈಬಲ್ ಸಂಬಂಧಿತ ಆಧಾರಗಳಿಂದ ಈ ತರ್ಕವನ್ನು ಸಮರ್ಥಿಸಿದ ಬಳಿಕ, ನಿರುತ್ಸಾಹಗೊಂಡಿದ್ದವರು ಕುಟುಂಬ ಪ್ರಾರ್ಥನೆ ಮತ್ತು ಅಧ್ಯಯನ ಹಾಗೂ ಬೈಬಲ್ ವಾಚನದಂತಹ ಹೊಸ ಗುರಿಗಳನ್ನಿಡುವ ಸ್ಥಾನದಲ್ಲಿ ಇರುತ್ತಾರೆ.”—ಇಬ್ರಿಯ 6:10.
ದೇವರನ್ನು ಮೆಚ್ಚಿಸಲು ಸಾಧ್ಯವೇ ಇಲ್ಲವೆಂಬ ಅಭಿಪ್ರಾಯವನ್ನು, ಹಿರಿಯರು ತಮ್ಮ ಕುರಿಪಾಲನೆಯ ಭೇಟಿಗಳಲ್ಲಿ ನೀಡುವುದರ ವಿರುದ್ಧ ಎಚ್ಚರಿಕೆಯಿಂದಿರಬೇಕು. ಬದಲಿಗೆ, ಯೇಸುವಿನ ಹಿಂಬಾಲಕರ ಮೇಲಿರುವ ಹೊರೆಯು ಹಗುರವಾಗಿದೆ ಎಂಬುದನ್ನು ನಿರುತ್ಸಾಹಗೊಂಡಿರುವ ಜೊತೆ ಆರಾಧಕರು ಮನಗಾಣುವಂತೆ ಹಿರಿಯರು ಸಹಾಯ ಮಾಡಸಾಧ್ಯವಿದೆ. ಹೀಗೆ, ನಮ್ಮ ಕ್ರೈಸ್ತ ಸೇವೆಯು ಆನಂದದ ಮೂಲವಾಗಿದೆ ಎಂಬುದನ್ನು ಅವರು ತಿಳಿದುಕೊಳ್ಳುವರು.—ಮತ್ತಾಯ 11:28-30.
ನಿರುತ್ಸಾಹವನ್ನು ಜಯಿಸುವುದು
ನಿರುತ್ಸಾಹದ ಕಾರಣಗಳು ಏನೇ ಆಗಿರಲಿ, ಅದೊಂದು ಉಪದ್ರವವಾಗಿದೆ, ಮತ್ತು ಅದರ ವಿರುದ್ಧ ಹೋರಾಡಬೇಕಾಗಿದೆ. ಈ ಹೋರಾಟದಲ್ಲಿ ನಾವು ಒಬ್ಬೊಂಟಿಗರಲ್ಲ ಎಂಬುದನ್ನು ಜ್ಞಾಪಕದಲ್ಲಿಟ್ಟುಕೊಳ್ಳಬೇಕು. ನಾವು ನಿರುತ್ಸಾಹಗೊಂಡರೆ, ನಮ್ಮ ಕ್ರೈಸ್ತ ಸಂಗಾತಿಗಳಿಂದ, ವಿಶೇಷವಾಗಿ ಹಿರಿಯರಿಂದ ಸಹಾಯವನ್ನು ಪಡೆದುಕೊಳ್ಳೋಣ. ಹೀಗೆ ಮಾಡುವ ಮೂಲಕ, ನಾವು ನಿರುತ್ಸಾಹದ ಅನಿಸಿಕೆಗಳನ್ನು ಕಡಿಮೆಮಾಡಬಹುದು.
ಎಲ್ಲಕ್ಕಿಂತಲೂ ಹೆಚ್ಚಾಗಿ, ನಿರುತ್ಸಾಹವನ್ನು ಸೋಲಿಸಲು ನಾವು ಸಹಾಯಕ್ಕಾಗಿ ದೇವರ ಕಡೆಗೆ ತಿರುಗಬೇಕು. ನಾವು ಪ್ರಾರ್ಥನಾಪೂರ್ವಕವಾಗಿ ಯೆಹೋವನ ಮೇಲೆ ಆತುಕೊಂಡರೆ, ನಿರುತ್ಸಾಹವನ್ನು ಸಂಪೂರ್ಣವಾಗಿ ಜಯಿಸಲು ಆತನು ನಮಗೆ ಸಹಾಯ ಮಾಡುವನು. (ಕೀರ್ತನೆ 55:22; ಫಿಲಿಪ್ಪಿ 4:6, 7) ವಿಷಯವು ಏನೇ ಆಗಿರಲಿ, ಆತನ ಜನರೋಪಾದಿ ನಾವು ಕೀರ್ತನೆಗಾರನ ಭಾವನೆಗಳಲ್ಲಿ ಪಾಲಿಗರಾಗಬಹುದು. ಅವನು ಹಾಡಿದ್ದು: “ಉತ್ಸಾಹಧ್ವನಿಯನ್ನು ಕೇಳಿದ ಜನರು ಧನ್ಯರು; ಯೆಹೋವನೇ, ಅವರು ನಿನ್ನ ಮುಖಪ್ರಕಾಶದಲ್ಲಿ ಸಂಚರಿಸುತ್ತಾರೆ. ಯಾವಾಗಲೂ ನಿನ್ನ ನಾಮದಲ್ಲಿ ಆನಂದಿಸುತ್ತಾರೆ; ನಿನ್ನ ನೀತಿಯಿಂದ ಏಳಿಗೆಹೊಂದುತ್ತಾರೆ. ಅವರು ಹಿಗ್ಗುವ ಬಲವು ನೀನೇ. ನಿನ್ನ ಕರುಣಾಕಟಾಕ್ಷದಿಂದ ನಮ್ಮ ಕೊಂಬು ಎತ್ತಲ್ಪಟ್ಟಿರುವದು.”—ಕೀರ್ತನೆ 89:15-17.
[ಅಧ್ಯಯನ ಪ್ರಶ್ನೆಗಳು]
a ದ ವಾಚ್ಟವರ್, ಮೇ 15, 1981ರ ಸಂಚಿಕೆಯಲ್ಲಿ, “ಮನೆಯಿಂದ ಮನೆಯ ಸಾಕ್ಷಿಕಾರ್ಯದ ಪಂಥಾಹ್ವಾನ” ಎಂಬ ಲೇಖನವನ್ನು ನೋಡಿರಿ.
b ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ, ಅವೇಕ್! ಪತ್ರಿಕೆಯ ಫೆಬ್ರವರಿ 22, 1985ರ ಸಂಚಿಕೆಯಲ್ಲಿ, ಪುಟಗಳು 12 ಮತ್ತು 13ನ್ನು ನೋಡಿರಿ.
c ಆಗಸ್ಟ್ 15, 1980ರ ದ ವಾಚ್ಟವರ್ ಪತ್ರಿಕೆಯಲ್ಲಿ, “ನಾನು ‘ಮರಣ ನಡೆ’ಯಿಂದ ಬದುಕಿ ಉಳಿದೆ” ಎಂಬ ಲೇಖನವನ್ನು, ಮತ್ತು ಜೂನ್ 22, 1985ರ ಅವೇಕ್! ಪತ್ರಿಕೆಯಲ್ಲಿ, “ನಾಸಿ ಜರ್ಮನಿಯಲ್ಲಿ ಸಮಗ್ರತೆಯನ್ನು ಕಾಪಾಡಿಕೊಳ್ಳುವುದು” ಎಂಬ ಲೇಖನವನ್ನು ನೋಡಿರಿ.
[ಪುಟ 31 ರಲ್ಲಿರುವ ಚಿತ್ರ]
ಪ್ರೀತಿಪೂರ್ಣ ಹಿರಿಯರಿಂದ ನಡೆಸಲ್ಪಡುವ ಆತ್ಮೋನ್ನತಿಮಾಡುವ ಕುರಿಪಾಲನೆಯ ಭೇಟಿಗಳು, ನಿರುತ್ಸಾಹವನ್ನು ಜಯಿಸಲು ಕ್ರೈಸ್ತರಿಗೆ ಸಹಾಯಮಾಡಬಲ್ಲವು