ನಮಗೆ ಯೆಹೋವನ ಸಂಸ್ಥೆಯ ಅಗತ್ಯವಿದೆ
“ನಾನು ದೇವರಲ್ಲಿ ನಂಬಿಕೆಯಿಡುತ್ತೇನೆ ಆದರೆ ಸುಸಂಘಟಿತ ಧರ್ಮದಲ್ಲಿ ನಂಬಿಕೆಯಿಡುವುದಿಲ್ಲ” ಎಂದು ಯಾರಾದರೂ ಹೇಳುವುದನ್ನು ನೀವೆಂದಾದರೂ ಕೇಳಿಸಿಕೊಂಡಿದ್ದೀರೊ? ಒಂದು ಕಾಲದಲ್ಲಿ ಅತ್ಯಂತ ಹುರುಪಿನಿಂದ ಚರ್ಚಿಗೆ ಹೋಗುತ್ತಿದ್ದರೂ ಕಾಲಾನಂತರ ಆ ಧರ್ಮವು ತಮ್ಮ ಆತ್ಮಿಕ ಆವಶ್ಯಕತೆಗಳನ್ನು ಪೂರೈಸಲು ತಪ್ಪಿಹೋದದ್ದಕ್ಕಾಗಿ ಹತಾಶರಾದ ಅನೇಕ ವ್ಯಕ್ತಿಗಳಿಂದ ತದ್ರೀತಿಯ ಅಭಿಪ್ರಾಯಗಳು ಅನೇಕವೇಳೆ ವ್ಯಕ್ತಪಡಿಸಲ್ಪಡುತ್ತವೆ. ಸಾಮಾನ್ಯವಾಗಿ ಧಾರ್ಮಿಕ ಸಂಸ್ಥೆಗಳಿಂದ ನಿರಾಶೆಗೆ ತುತ್ತಾಗಿದ್ದರೂ, ತಾವಿನ್ನೂ ದೇವರನ್ನು ಆರಾಧಿಸಲು ಬಯಸುತ್ತೇವೆ ಎಂದು ಅನೇಕರು ಹೇಳುತ್ತಾರೆ. ಆದರೂ, ಒಂದು ಚರ್ಚು ಅಥವಾ ಇನ್ನಿತರ ಸಂಸ್ಥೆಯೊಂದಿಗೆ ದೇವರನ್ನು ಆರಾಧಿಸುವುದಕ್ಕೆ ಬದಲಾಗಿ, ತಮ್ಮದೇ ಆದ ರೀತಿಯಲ್ಲಿ ಆತನನ್ನು ಆರಾಧಿಸುವುದು ಹೆಚ್ಚು ಉತ್ತಮ ಎಂದು ಅವರು ನಂಬುತ್ತಾರೆ.
ಇದರ ಕುರಿತು ಬೈಬಲು ಏನು ಹೇಳುತ್ತದೆ? ಕ್ರೈಸ್ತರು ಒಂದು ಸಂಸ್ಥೆಯೊಂದಿಗೆ ಸಹವಾಸಿಸುವಂತೆ ದೇವರು ಬಯಸುತ್ತಾನೋ?
ಸಂಘಟಿತರಾಗಿರುವ ಮೂಲಕ ಆದಿ ಕ್ರೈಸ್ತರು ಪ್ರಯೋಜನವನ್ನು ಪಡೆದುಕೊಂಡರು
ಸಾ.ಶ. 33ರ ಪಂಚಾಶತ್ತಮದಂದು, ಕೆಲವು ಪ್ರತ್ಯೇಕ ವಿಶ್ವಾಸಿಗಳ ಮೇಲೆ ಯೆಹೋವನು ತನ್ನ ಪವಿತ್ರಾತ್ಮವನ್ನು ಸುರಿಸುವುದಕ್ಕೆ ಬದಲಾಗಿ, ಯೆರೂಸಲೇಮ್ ಪಟ್ಟಣದಲ್ಲಿನ ಮೇಲಿನ ಕೋಣೆಯಲ್ಲಿ, ಅಂದರೆ “ಒಂದೇ ಸ್ಥಳದಲ್ಲಿ” ಒಟ್ಟುಗೂಡಿದ್ದ ಸ್ತ್ರೀಪುರುಷರ ಒಂದು ಗುಂಪಿನ ಮೇಲೆ ತನ್ನ ಪವಿತ್ರಾತ್ಮವನ್ನು ಸುರಿಸಿದನು. (ಅ. ಕೃತ್ಯಗಳು 2:1) ಆ ಸಮಯದಲ್ಲಿ, ಅಂತಾರಾಷ್ಟ್ರೀಯ ಸಂಸ್ಥೆಯಾಗಿ ಪರಿಣಮಿಸಿದ ಒಂದು ಕ್ರೈಸ್ತ ಸಭೆಯು ರಚಿಸಲ್ಪಟ್ಟಿತು. ಆ ಆದಿ ಶಿಷ್ಯರಿಗೆ ಇದು ಒಂದು ನೈಜ ಆಶೀರ್ವಾದವಾಗಿ ಪರಿಣಮಿಸಿತು. ಏಕೆ? ಒಂದು ಕಾರಣವೇನೆಂದರೆ, ಅವರಿಗೆ ಒಂದು ಪ್ರಮುಖ ನೇಮಕವು ಕೊಡಲ್ಪಟ್ಟಿತ್ತು. ಇದು ಕಾಲಕ್ರಮೇಣ “ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ” ದೇವರ ರಾಜ್ಯದ ಸುವಾರ್ತೆಯನ್ನು ಸಾರುವುದೇ ಆಗಿತ್ತು. (ಮತ್ತಾಯ 24:14) ಸಭೆಯಲ್ಲಿ ಹೊಸದಾಗಿ ಮತಾಂತರಗೊಂಡವರು, ಸಾರುವ ಕೆಲಸವನ್ನು ಹೇಗೆ ಮಾಡಬೇಕೆಂಬುದನ್ನು ಅನುಭವಸ್ಥ ಜೊತೆ ವಿಶ್ವಾಸಿಗಳಿಂದ ಕಲಿತುಕೊಳ್ಳಸಾಧ್ಯವಿತ್ತು.
ಸ್ವಲ್ಪ ಸಮಯದಲ್ಲೇ ರಾಜ್ಯದ ಸಂದೇಶವು ಯೆರೂಸಲೇಮಿನ ಹೊರಗೂ ಹಬ್ಬಿಸಲ್ಪಟ್ಟಿತು. ಸಾ.ಶ. 62 ಹಾಗೂ 64ರ ನಡುವೆ, “ಪೊಂತ ಗಲಾತ್ಯ ಕಪ್ಪದೋಕ್ಯ ಆಸ್ಯ ಬಿಥೂನ್ಯ ಎಂಬ ಸೀಮೆಗಳಲ್ಲಿ,” ಅಂದರೆ ಆಧುನಿಕ ದಿನದ ಟರ್ಕಿಯಲ್ಲೆಲ್ಲ ‘ಚದರಿದ್ದ’ ಕ್ರೈಸ್ತರಿಗೆ ಅಪೊಸ್ತಲ ಪೇತ್ರನು ತನ್ನ ಮೊದಲ ಪತ್ರವನ್ನು ಬರೆದನು. (1 ಪೇತ್ರ 1:1) ಪ್ಯಾಲೆಸ್ಟೀನ್, ಲೆಬನನ್, ಸಿರಿಯ, ಗ್ರೀಸ್, ಕ್ರೇತ, ಮತ್ತು ಇಟಲಿಯಲ್ಲಿಯೂ ವಿಶ್ವಾಸಿಗಳು ಇದ್ದರು. ಸಾ.ಶ. 60-61ರಲ್ಲಿ ಪೌಲನು ಕೊಲೊಸ್ಸೆಯವರಿಗೆ ಬರೆದಂತೆ, ಸುವಾರ್ತೆಯು ‘ಆಕಾಶದ ಕೆಳಗಿರುವ ಸರ್ವಸೃಷ್ಟಿಗೆ ಸಾರಲ್ಪಟ್ಟಿತ್ತು.’—ಕೊಲೊಸ್ಸೆ 1:23.
ಒಂದು ಸಂಸ್ಥೆಯೊಂದಿಗೆ ಸಹವಾಸಿಸುವುದರಿಂದ ದೊರಕುವ ಎರಡನೆಯ ಪ್ರಯೋಜನವು, ಕ್ರೈಸ್ತರು ಪರಸ್ಪರ ಕೊಡಸಾಧ್ಯವಿದ್ದ ಉತ್ತೇಜನವಾಗಿತ್ತು. ಸಭೆಯೊಂದಿಗೆ ಸಹವಾಸಿಸುವ ಮೂಲಕ ಕ್ರೈಸ್ತರು ಭಾವಪ್ರಚೋದಕ ಭಾಷಣಗಳನ್ನು ಕೇಳಿಸಿಕೊಳ್ಳಸಾಧ್ಯವಿತ್ತು, ಪವಿತ್ರ ಶಾಸ್ತ್ರವಚನಗಳನ್ನು ಒಟ್ಟಾಗಿ ಅಭ್ಯಾಸಿಸಸಾಧ್ಯವಿತ್ತು, ನಂಬಿಕೆಯನ್ನು ಬಲಪಡಿಸುವಂತಹ ಅನುಭವಗಳನ್ನು ಹಂಚಿಕೊಳ್ಳಸಾಧ್ಯವಿತ್ತು, ಮತ್ತು ಪ್ರಾರ್ಥನೆಯಲ್ಲಿ ಜೊತೆ ವಿಶ್ವಾಸಿಗಳೊಂದಿಗೆ ಜೊತೆಗೂಡಸಾಧ್ಯವಿತ್ತು. (1 ಕೊರಿಂಥ 14ನೆಯ ಅಧ್ಯಾಯ) ಮತ್ತು ಪ್ರೌಢ ಪುರುಷರು ‘ದೇವರ ಮಂದೆಯನ್ನು ಕಾಯ’ಸಾಧ್ಯವಿತ್ತು.—1 ಪೇತ್ರ 5:2.
ಸಭೆಯ ಸದಸ್ಯರೋಪಾದಿ ಕ್ರೈಸ್ತರು ಒಬ್ಬರನ್ನೊಬ್ಬರು ಪರಿಚಯಮಾಡಿಕೊಳ್ಳಲು ಮತ್ತು ಪರಸ್ಪರ ಪ್ರೀತಿಸಲು ಸಹ ಆರಂಭಿಸಿದರು. ಆದಿ ಕ್ರೈಸ್ತರು ಸಭೆಯೊಂದಿಗಿನ ತಮ್ಮ ಸಹವಾಸವನ್ನು ಹೊರೆಯೋಪಾದಿ ಪರಿಗಣಿಸುವುದಕ್ಕೆ ಬದಲಾಗಿ, ಅದರಿಂದ ಆತ್ಮಿಕವಾಗಿ ಭಕ್ತಿವೃದ್ಧಿಮಾಡಲ್ಪಟ್ಟರು ಮತ್ತು ಬಲಗೊಳಿಸಲ್ಪಟ್ಟರು.—ಅ. ಕೃತ್ಯಗಳು 2:42; 14:27; 1 ಕೊರಿಂಥ 14:26; ಕೊಲೊಸ್ಸೆ 4:15, 16.
ಲೋಕವ್ಯಾಪಕವಾಗಿ ಒಂದು ಸಂಘಟಿತ ಸಭೆಯ ಅಥವಾ ಸಂಸ್ಥೆಯ ಅಗತ್ಯವಿದ್ದುದರ ಇನ್ನೊಂದು ಕಾರಣವು, ಐಕ್ಯಭಾವವನ್ನು ಉತ್ತೇಜಿಸುವುದೇ ಆಗಿತ್ತು. ಕ್ರೈಸ್ತರು “ಒಂದೇ ಅಭಿಪ್ರಾಯ”ವುಳ್ಳವರಾಗಿರಲು ಕಲಿತರು. (1 ಕೊರಿಂಥ 1:10) ಇದು ಅತ್ಯಾವಶ್ಯಕವಾಗಿತ್ತು. ಸಭೆಯ ಸದಸ್ಯರು ಬೇರೆ ಬೇರೆ ಶೈಕ್ಷಣಿಕ ಹಾಗೂ ಸಾಮಾಜಿಕ ಹಿನ್ನೆಲೆಗಳಿಂದ ಬಂದವರಾಗಿದ್ದರು. ಅವರು ಬೇರೆ ಬೇರೆ ಭಾಷೆಗಳನ್ನು ಮಾತಾಡುತ್ತಿದ್ದರು, ಮತ್ತು ಅವರಲ್ಲಿ ಎದ್ದುಕಾಣುವಂತಹ ವ್ಯಕ್ತಿತ್ವ ಭೇದಗಳು ಸಹ ಇದ್ದವು. (ಅ. ಕೃತ್ಯಗಳು 2:1-11) ಕೆಲವೊಮ್ಮೆ ಅವರ ಮಧ್ಯೆ ಭಿನ್ನಾಭಿಪ್ರಾಯಗಳಿರುತ್ತಿದ್ದವು. ಆದರೂ, ಇಂತಹ ಭಿನ್ನಾಭಿಪ್ರಾಯಗಳನ್ನು ಸಭೆಯೊಳಗೇ ಬಗೆಹರಿಸುವಂತೆ ಕ್ರೈಸ್ತರಿಗೆ ಸಹಾಯ ದೊರೆಯಿತು.—ಅ. ಕೃತ್ಯಗಳು 15:1, 2; ಫಿಲಿಪ್ಪಿ 4:2, 3.
ಸ್ಥಳಿಕ ಹಿರಿಯರಿಂದ ನಿರ್ವಹಿಸಲು ಅಸಾಧ್ಯವಾಗಿದ್ದಂತಹ ಗಂಭೀರ ಪ್ರಶ್ನೆಗಳು, ಪೌಲನಂತಹ ಪ್ರೌಢ ಸಂಚರಣ ಮೇಲ್ವಿಚಾರಕರಿಗೆ ತಿಳಿಸಲ್ಪಡುತ್ತಿದ್ದವು. ಅತ್ಯಾವಶ್ಯಕವಾಗಿದ್ದ ತಾತ್ವಿಕ ವಿಚಾರಗಳು ಯೆರೂಸಲೇಮಿನಲ್ಲಿದ್ದ ಕೇಂದ್ರೀಯ ಆಡಳಿತ ಮಂಡಲಿಗೆ ತಿಳಿಸಲ್ಪಡುತ್ತಿದ್ದವು. ಆರಂಭದಲ್ಲಿ ಆಡಳಿತ ಮಂಡಲಿಯು ಯೇಸು ಕ್ರಿಸ್ತನ ಅಪೊಸ್ತಲರಿಂದ ರಚಿತವಾಗಿತ್ತಾದರೂ, ಸಮಯಾನಂತರ ಯೆರೂಸಲೇಮಿನಲ್ಲಿದ್ದ ಸಭೆಯ ಹಿರಿಯ ಪುರುಷರನ್ನೂ ಇದರಲ್ಲಿ ಸೇರಿಸಿಕೊಳ್ಳಲಾಯಿತು. ಶುಶ್ರೂಷೆಯನ್ನು ವ್ಯವಸ್ಥಾಪಿಸಲು, ಅನೇಕ ಪುರುಷರನ್ನು ಸೇವಾ ಸ್ಥಾನಗಳಿಗೆ ನೇಮಿಸಲು, ಮತ್ತು ತಾತ್ವಿಕ ವಿಚಾರಗಳ ಕುರಿತಾದ ನಿರ್ಣಯಗಳನ್ನು ಮಾಡಲು ಆಡಳಿತ ಮಂಡಲಿಗೆ ಮತ್ತು ಅದರ ಪ್ರತಿನಿಧಿಗಳಿಗೆ ಕೊಡಲ್ಪಟ್ಟ ದೇವದತ್ತ ಅಧಿಕಾರವನ್ನು ಪ್ರತಿಯೊಂದು ಸಭೆಯು ಅಂಗೀಕರಿಸಿತು. ಒಂದು ವಾದಾಂಶವು ಆಡಳಿತ ಮಂಡಲಿಯಿಂದ ಬಗೆಹರಿಸಲ್ಪಟ್ಟಾಗ, ಸಭೆಗಳು ಆ ನಿರ್ಣಯವನ್ನು ಅಂಗೀಕರಿಸಿದವು ಮತ್ತು ‘ಸಂತೋಷಪಟ್ಟವು.’—ಅ. ಕೃತ್ಯಗಳು 15:1, 2, 28, 30, 31.
ಹೌದು, ಪ್ರಥಮ ಶತಮಾನದಲ್ಲಿ ಯೆಹೋವನು ಒಂದು ಸಂಸ್ಥೆಯನ್ನು ಉಪಯೋಗಿಸಿದನು. ಆದರೆ ಇಂದಿನ ಕುರಿತಾಗಿ ಏನು?
ಇಂದು ಸಹ ನಮಗೆ ಒಂದು ಸಂಸ್ಥೆಯ ಅಗತ್ಯವಿದೆ
ಪ್ರಥಮ ಶತಮಾನದ ಕ್ರೈಸ್ತರಂತೆಯೇ, ರಾಜ್ಯದ ಸುವಾರ್ತೆಯನ್ನು ಸಾರುವ ನೇಮಕವನ್ನು ಇಂದು ಯೆಹೋವನ ಸಾಕ್ಷಿಗಳು ತುಂಬ ಗಂಭೀರವಾಗಿ ಪರಿಗಣಿಸುತ್ತಾರೆ. ಅವರು ಈ ಕೆಲಸವನ್ನು ಮುಂದುವರಿಸುವ ಒಂದು ರೀತಿಯು, ಬೈಬಲ್ಗಳು ಹಾಗೂ ಬೈಬಲ್ ಅಭ್ಯಾಸ ಸಹಾಯಕಗಳನ್ನು ವಿತರಿಸುವ ಮೂಲಕವೇ. ಇದಕ್ಕಾಗಿ ಒಂದು ಸಂಸ್ಥೆಯ ಅಗತ್ಯವಿದೆ.
ಕ್ರೈಸ್ತ ಪ್ರಕಾಶನಗಳನ್ನು ಜಾಗರೂಕತೆಯಿಂದ ತಯಾರಿಸಬೇಕು, ಅವುಗಳ ನಿಷ್ಕೃಷ್ಟತೆಯನ್ನು ಪರಿಶೀಲಿಸಬೇಕು, ಮುದ್ರಿಸಬೇಕು, ಮತ್ತು ತದನಂತರ ಸಭೆಗಳಿಗೆ ರವಾನಿಸಬೇಕು. ಅದೇ ರೀತಿಯಲ್ಲಿ, ಕ್ರೈಸ್ತರು ಸಹ ವ್ಯಕ್ತಿಗತವಾಗಿ ಯಾರು ಈ ಸಾಹಿತ್ಯವನ್ನು ಓದಲು ಬಯಸುತ್ತಾರೋ ಅವರಿಗೆ ಅದನ್ನು ಕೊಂಡೊಯ್ಯಲು ಇಷ್ಟಪೂರ್ವಕವಾಗಿ ಮುಂದೆಬರಬೇಕು. ಈ ರೀತಿಯಲ್ಲಿ ರಾಜ್ಯ ಸಂದೇಶವು ಕೋಟಿಗಟ್ಟಲೆ ಜನರಿಗೆ ತಲಪಿಸಲ್ಪಟ್ಟಿದೆ. ಸುವಾರ್ತೆಯ ಪ್ರಚಾರಕರು ತಮ್ಮ ಸಾರುವ ಚಟುವಟಿಕೆಯನ್ನು ವ್ಯವಸ್ಥಿತ ರೀತಿಯಲ್ಲಿ ಮುಂದುವರಿಸಲು ಪ್ರಯತ್ನಿಸುತ್ತಾರೆ. ಅಂದರೆ ಯಾವುದೋ ಟೆರಿಟೊರಿಯ ಒಂದು ಭಾಗವು ಪುನಃ ಪುನಃ ಆವರಿಸಲ್ಪಡುತ್ತಿರುವಾಗ, ಇನ್ನಿತರ ಭಾಗಗಳು ಅಲಕ್ಷಿಸಲ್ಪಡುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಈ ಎಲ್ಲ ಕೆಲಸಗಳನ್ನು ಪೂರೈಸಲು ಸಂಸ್ಥೆಯ ಅಗತ್ಯವಿದೆ.
“ದೇವರು ಪಕ್ಷಪಾತಿಯಲ್ಲ,” ಆದುದರಿಂದ ಬೈಬಲ್ ಹಾಗೂ ಬೈಬಲ್ ಸಾಹಿತ್ಯವು ಭಾಷಾಂತರಿಸಲ್ಪಡಲೇಬೇಕು. (ಅ. ಕೃತ್ಯಗಳು 10:34) ಸದ್ಯಕ್ಕೆ, ಈ ಪತ್ರಿಕೆಯು 132 ಭಾಷೆಗಳಲ್ಲಿ ಮತ್ತು ಎಚ್ಚರ! ಎಂಬ ಇದರ ಜೊತೆ ಪತ್ರಿಕೆಯು 83 ಭಾಷೆಗಳಲ್ಲಿ ಲಭ್ಯವಿದೆ. ಈ ಕೆಲಸಕ್ಕಾಗಿ ಲೋಕವ್ಯಾಪಕವಾಗಿ ಭಾಷಾಂತರಕಾರರ ಸಂಘಟಿತ ತಂಡಗಳ ಅಗತ್ಯವಿದೆ.
ಸಭೆಯ ಸದಸ್ಯರು ಕ್ರೈಸ್ತ ಕೂಟಗಳಿಗೆ ಮತ್ತು ಸಮ್ಮೇಳನಗಳಿಗೆ ಹಾಜರಾಗುವಾಗ ಉತ್ತೇಜನವನ್ನು ಪಡೆದುಕೊಳ್ಳುತ್ತಾರೆ. ಅಲ್ಲಿ ಅವರು ಪ್ರಚೋದನಾತ್ಮಕ ಬೈಬಲ್ ಭಾಷಣಗಳಿಗೆ ಕಿವಿಗೊಡುತ್ತಾರೆ, ಶಾಸ್ತ್ರವಚನಗಳನ್ನು ಒಟ್ಟಿಗೆ ಅಭ್ಯಾಸಿಸುತ್ತಾರೆ, ಭಕ್ತಿವೃದ್ಧಿಮಾಡುವಂತಹ ಅನುಭವಗಳನ್ನು ಹಂಚಿಕೊಳ್ಳುತ್ತಾರೆ, ಮತ್ತು ಪ್ರಾರ್ಥನೆಯಲ್ಲಿ ಜೊತೆ ಆರಾಧಕರೊಂದಿಗೆ ಒಂದುಗೂಡುತ್ತಾರೆ. ಅಷ್ಟುಮಾತ್ರವಲ್ಲ, ಪ್ರಥಮ ಶತಮಾನದಲ್ಲಿದ್ದ ಸಹೋದರರು ಆನಂದಿಸಿದಂತೆಯೇ, ಇವರು ಸಹ ಪ್ರೀತಿಯ ಸಂಚರಣ ಮೇಲ್ವಿಚಾರಕರ ನಂಬಿಕೆಯನ್ನು ಬಲಪಡಿಸುವಂತಹ ಭೇಟಿಗಳಲ್ಲಿ ಆನಂದಪಡುತ್ತಾರೆ. ಹೀಗೆ, ಇಂದಿನ ಕ್ರೈಸ್ತರು ‘ಒಂದೇ ಹಿಂಡಾಗುವರು, ಮತ್ತು ಅವರಿಗೆ ಒಬ್ಬನೇ ಕುರುಬನಿರುವನು.’—ಯೋಹಾನ 10:16.
ಆದಿ ಕ್ರೈಸ್ತರು ಹೇಗೆ ಪರಿಪೂರ್ಣರಾಗಿರಲಿಲ್ಲವೋ ಹಾಗೆಯೇ ಯೆಹೋವನ ಸಾಕ್ಷಿಗಳೂ ಪರಿಪೂರ್ಣರಲ್ಲ ಎಂಬುದಂತೂ ನಿಜ. ಆದರೂ, ಅವರು ಐಕ್ಯಭಾವದಿಂದ ಒಟ್ಟಿಗೆ ಕೆಲಸಮಾಡುತ್ತಾರೆ. ಇದರ ಫಲಿತಾಂಶವಾಗಿ, ರಾಜ್ಯದ ಸುವಾರ್ತೆಯನ್ನು ಸಾರುವ ಕೆಲಸವು ಭೂಮಿಯಾದ್ಯಂತ ಪೂರೈಸಲ್ಪಡುತ್ತಿದೆ.—ಅ. ಕೃತ್ಯಗಳು 15:36-40; ಎಫೆಸ 4:13.
[ಪುಟ 31ರಲ್ಲಿರುವ ಚಿತ್ರ]
ಇಂದಿನ ಕ್ರೈಸ್ತರು ‘ಒಂದೇ ಹಿಂಡಾಗುವರು ಮತ್ತು ಅವರಿಗೆ ಒಬ್ಬನೇ ಕುರುಬನಿರುವನು’