ನಿಮಗೆ ನೆನಪಿದೆಯೇ?
ಕಾವಲಿನಬುರುಜು ಪತ್ರಿಕೆಯ ಇತ್ತೀಚಿನ ಸಂಚಿಕೆಗಳನ್ನು ನೀವು ಓದಿ ಗಣ್ಯಮಾಡಿದ್ದೀರೋ? ಹಾಗಾದರೆ, ಈ ಮುಂದಿನ ಪ್ರಶ್ನೆಗಳಿಗೆ ನೀವು ಉತ್ತರವನ್ನು ನೀಡಲು ಶಕ್ತರಾಗಿದ್ದೀರೋ ಎಂದು ನೋಡಿ:
• ಕೊರಿಯದಲ್ಲಿ ಕ್ರಿಸ್‌ಮಸ್ ಹಬ್ಬವು ಸ್ವೀಕರಿಸಲ್ಪಡುವಂತೆ ಯಾವುದು ದಾರಿಯನ್ನು ಸುಗಮಗೊಳಿಸಿತು?
ಕೊರಿಯದಲ್ಲಿ ಮತ್ತು ಇನ್ನಿತರ ದೇಶಗಳಲ್ಲಿ ಹಳೆಯಕಾಲದಿಂದ ಬಂದಿದ್ದ ಒಂದು ನಂಬಿಕೆಯಿತ್ತು. ಅದೇನೆಂದರೆ ಅಡಿಗೆಮನೆಯ ಒಬ್ಬ ದೇವನು, ಡಿಸೆಂಬರ್ ತಿಂಗಳಲ್ಲಿ ಹೊಗೆ ಕೊಳವೆಯ ಮೂಲಕ ಬಂದು ಬಹುಮಾನಗಳನ್ನು ತರುತ್ತಿದ್ದನೆಂದು ನೆನಸಲಾಗುತ್ತಿತ್ತು. ಅದಲ್ಲದೆ, IIನೆಯ ಜಾಗತಿಕ ಯುದ್ಧದ ನಂತರ, ಅಮೆರಿಕದ ಸೈನಿಕರು ಸ್ಥಳಿಕ ಚರ್ಚುಗಳಲ್ಲಿ ಉಡುಗೊರೆಗಳನ್ನು ಮತ್ತು ಇತರ ಸಹಾಯ ಸಾಮಗ್ರಿಗಳನ್ನು ವಿತರಿಸುತ್ತಿದ್ದರು.—12/15, ಪುಟಗಳು 4, 5.
• ಯೆಶಾಯ 21:8ರ ನೆರವೇರಿಕೆಯಲ್ಲಿ, ದೇವರು ನಮ್ಮ ಸಮಯದಲ್ಲಿ ಯಾವ ‘ಕಾವಲುಗಾರನನ್ನು’ ಇಟ್ಟಿದ್ದಾನೆ?
ಕಾವಲುಗಾರ ವರ್ಗದೋಪಾದಿ ಕೆಲಸಮಾಡುತ್ತಿರುವ ಆತ್ಮಾಭಿಷಿಕ್ತ ಕ್ರೈಸ್ತರು, ಬೈಬಲಿನ ಪ್ರವಾದನೆಯನ್ನು ನೆರವೇರಿಸುತ್ತಿರುವ ಲೋಕದ ಘಟನೆಗಳ ಅರ್ಥದ ಕುರಿತು ಜನರನ್ನು ಎಚ್ಚರಿಸಿದ್ದಾರೆ. ಅಶಾಸ್ತ್ರೀಯ ಬೋಧನೆಗಳು ಮತ್ತು ಆಚರಣೆಗಳು ಯಾವವು ಎಂಬುದನ್ನು ಗುರುತಿಸಿ, ಅವುಗಳಿಂದ ದೂರವಿರುವಂತೆಯೂ ಅವರು ಬೈಬಲ್ ವಿದ್ಯಾರ್ಥಿಗಳಿಗೆ ಸಹಾಯಮಾಡಿದ್ದಾರೆ.—1/1, ಪುಟಗಳು 8, 9.
• “ಪೋಲಿಷ್ ಬ್ರೆದ್ರೆನ್” ಪಂಥದವರು ಯಾರಾಗಿದ್ದರು?
ಇವರು ಪೋಲೆಂಡ್‌ನಲ್ಲಿ 16ನೆಯ ಮತ್ತು 17ನೆಯ ಶತಮಾನಗಳಲ್ಲಿದ್ದ ಒಂದು ಚಿಕ್ಕ ಧಾರ್ಮಿಕ ಗುಂಪಿನವರಾಗಿದ್ದರು. ಇವರು ಬೈಬಲಿಗೆ ಅಂಟಿಕೊಳ್ಳುವುದನ್ನು ಪ್ರೋತ್ಸಾಹಿಸಿದರು ಮತ್ತು ಆ ಸಮಯದಲ್ಲೂ ಚರ್ಚಿನಲ್ಲಿ ಚಾಲ್ತಿಯಲ್ಲಿದ್ದ ತ್ರಯೈಕ್ಯ, ಶಿಶು ದೀಕ್ಷಾಸ್ನಾನ ಮತ್ತು ನರಕಾಗ್ನಿಯಂತಹ ಬೋಧನೆಗಳನ್ನು ತಿರಸ್ಕರಿಸಿದರು. ಸಮಯಾನಂತರ, ಅವರನ್ನು ಘೋರವಾಗಿ ಹಿಂಸಿಸಲಾಯಿತು ಮತ್ತು ಬೇರೆ ದೇಶಗಳಲ್ಲಿ ಚದರಿಹೋಗುವಂತೆ ಒತ್ತಾಯಿಸಲಾಯಿತು.—1/1, ಪುಟಗಳು 21-3.
• ಭವಿಷ್ಯಾನುಮಾನಿಗರು ಅಥವಾ ಜ್ಯೋತಿಷಿಗಳ ಮುಂತಿಳಿಸುವಿಕೆಗಳ ಬದಲು ಬೈಬಲ್ ಪ್ರವಾದನೆಗಳಲ್ಲಿ ಏಕೆ ಭರವಸೆಯನ್ನಿಡಸಾಧ್ಯವಿದೆ?
ಪ್ರವಾದಿಗಳಾಗಿರಬೇಕೆಂದು ವ್ಯರ್ಥವಾಗಿ ಆಶಿಸುವವರು, ಭರವಸಾರ್ಹರಲ್ಲದವರಾಗಿ ಕಂಡುಬಂದಿದ್ದಾರೆ. ಯಾಕೆಂದರೆ ಅವರು ಯೆಹೋವ ದೇವರನ್ನು ಮತ್ತು ಬೈಬಲನ್ನು ಕಡೆಗಣಿಸುತ್ತಾರೆ. ದೇವರ ಉದ್ದೇಶಕ್ಕನುಗುಣವಾಗಿ ಘಟನೆಗಳು ಹೇಗೆ ನಡೆಯುತ್ತಿವೆ ಎಂಬುದನ್ನು ನಿಮಗೆ ತಿಳಿಯಪಡಿಸುತ್ತಾ, ನಿಮಗೂ ನಿಮ್ಮ ಕುಟುಂಬಕ್ಕೂ ಶಾಶ್ವತ ಪ್ರಯೋಜನಗಳನ್ನು ಕೇವಲ ಬೈಬಲ್ ಪ್ರವಾದನೆಗಳು ತರಬಲ್ಲವು.—1/15, ಪುಟ 3.
• ನಾವು ಕಡೇ ದಿವಸಗಳಲ್ಲಿ ಜೀವಿಸುತ್ತಿದ್ದೇವೆಂಬುದನ್ನು ರುಜುಪಡಿಸುವ ಕೆಲವು ಸಾಕ್ಷ್ಯಗಳು ಯಾವುವು?
ಪರಲೋಕದಿಂದ ಸೈತಾನನು ದೊಬ್ಬಲ್ಪಟ್ಟಿರುವುದರ ಪರಿಣಾಮಗಳನ್ನು ನಾವು ನೋಡಸಾಧ್ಯವಿದೆ. (ಪ್ರಕಟನೆ 12:9) ಪ್ರಕಟನೆ 17:9-11ರಲ್ಲಿ ತಿಳಿಸಲ್ಪಟ್ಟಿರುವ ಕೊನೆಯ ‘ಅರಸನ’ ಸಮಯದಲ್ಲಿ ನಾವು ಜೀವಿಸುತ್ತಿದ್ದೇವೆ. ನಿಜವಾಗಿಯೂ ಅಭಿಷಿಕ್ತರಾಗಿರುವ ಕ್ರೈಸ್ತರ ಸಂಖ್ಯೆಯು ಕಡಿಮೆಯಾಗುತ್ತಾ ಇದೆ. ಆದರೂ ಅವರಲ್ಲಿ ಕೆಲವರು ಮಹಾ ಸಂಕಟವು ಆರಂಭವಾಗುವಾಗ ಇನ್ನೂ ಭೂಮಿಯ ಮೇಲಿರುವರೆಂದು ತೋರುತ್ತದೆ.—1/15, ಪುಟಗಳು 12, 13.
• ಹಬಕ್ಕೂಕನ ಪುಸ್ತಕವು ಯಾವಾಗ ಬರೆಯಲ್ಪಟ್ಟಿತು, ಮತ್ತು ನಾವು ಅದರಲ್ಲಿ ಏಕೆ ಆಸಕ್ತರಾಗಿರಬೇಕು?
ಈ ಬೈಬಲ್ ಪುಸ್ತಕವು ಸುಮಾರು ಸಾ.ಶ.ಪೂ. 628ರಲ್ಲಿ ಬರೆಯಲ್ಪಟ್ಟಿತು. ಪ್ರಾಚೀನ ಯೆಹೂದ ಮತ್ತು ಬಾಬೆಲಿನ ವಿರುದ್ಧ ತಿಳಿಸಲ್ಪಟ್ಟಿದ್ದ ಯೆಹೋವನ ನ್ಯಾಯತೀರ್ಪು ಅದರಲ್ಲಿ ಅಡಕವಾಗಿದೆ. ಸದ್ಯದ ದುಷ್ಟ ವ್ಯವಸ್ಥೆಯ ಮೇಲೆ ಬೇಗನೆ ಬರಲಿರುವ ದೈವಿಕ ನ್ಯಾಯತೀರ್ಪಿನ ಕುರಿತಾಗಿಯೂ ಅದು ತಿಳಿಸುತ್ತದೆ.—2/1, ಪುಟ 8.
• ಗುಣವತಿಯರಾದ ಪತ್ನಿಯರಿಗಾಗಿ ತಾಯಿಯೊಬ್ಬಳ ವಿವೇಕಯುತ ಸಲಹೆಯನ್ನು ನಾವು ಬೈಬಲಿನಲ್ಲಿ ಎಲ್ಲಿ ಕಂಡುಕೊಳ್ಳಬಹುದು?
ಜ್ಞಾನೋಕ್ತಿ ಪುಸ್ತಕದ ಕೊನೆಯ ಅಧ್ಯಾಯ, ಅಂದರೆ 31ನೆಯ ಅಧ್ಯಾಯವು ಅಂತಹ ಸಲಹೆಯ ಅತ್ಯುತ್ಕೃಷ್ಟ ಉಗಮವಾಗಿದೆ.—2/1, ಪುಟಗಳು 30, 31.
• ಯೆಹೋವನು ನಮಗೆ ‘ಕ್ರಿಸ್ತನ ಮನಸ್ಸನ್ನು’ ತಿಳಿಯಪಡಿಸಿರುವುದಕ್ಕಾಗಿ ನಾವೇಕೆ ಕೃತಜ್ಞರಾಗಿರಬಲ್ಲೆವು? (1 ಕೊರಿಂಥ 2:16)
ಸುವಾರ್ತಾ ದಾಖಲೆಯ ಮೂಲಕ, ನಾವು ಯೇಸುವಿನ ವಿಚಾರಗಳು, ಭಾವನಗೆಳು, ಚಟುವಟಿಕೆಗಳು ಮತ್ತು ಅವನಿಗೆ ಪ್ರಮುಖವಾಗಿದ್ದ ವಿಷಯಗಳ ಕುರಿತಾಗಿ ಕಲಿಯುವುದನ್ನು ಯೆಹೋವನು ಸಾಧ್ಯಮಾಡಿದ್ದಾನೆ. ಇದು ನಾವು ಇನ್ನೂ ಹೆಚ್ಚಿನ ರೀತಿಯಲ್ಲಿ, ವಿಶೇಷವಾಗಿ ಜೀವರಕ್ಷಿಸುವ ಸಾರುವ ಕೆಲಸಕ್ಕೆ ನಾವು ಕೊಡುವ ಮಹತ್ವದ ವಿಷಯದಲ್ಲಿ ಯೇಸುವಿನಂತಿರಲು ಸಹಾಯಮಾಡಬಲ್ಲದು.—2/15, ಪುಟ 25.
• ದೇವರು ಇಂದು ಪ್ರಾರ್ಥನೆಗಳಿಗೆ ಉತ್ತರ ಕೊಡುತ್ತಾನೋ?
ಹೌದು. ದೇವರು ಎಲ್ಲ ಪ್ರಾರ್ಥನೆಗಳಿಗೆ ಉತ್ತರವನ್ನು ಕೊಡುವುದಿಲ್ಲವೆಂದು ಬೈಬಲು ತೋರಿಸುತ್ತದಾದರೂ, ಸಾಂತ್ವನವನ್ನು ಕೋರುತ್ತಾ ಮತ್ತು ವೈವಾಹಿಕ ಸಮಸ್ಯೆಗಳನ್ನು ಬಗೆಹರಿಸುವಂತಹ ವಿಷಯಗಳಲ್ಲಿ ಸಹಾಯ ಮಾಡುವಂತೆ ಪ್ರಾರ್ಥನೆ ಮಾಡಿರುವ ಜನರಿಗೆ ಆತನು ಅನೇಕವೇಳೆ ಪ್ರತಿಕ್ರಿಯೆ ತೋರಿಸಿದ್ದಾನೆಂದು ಆಧುನಿಕ ದಿನದ ಅನುಭವಗಳು ರುಜುಪಡಿಸುತ್ತವೆ.—3/1, ಪುಟಗಳು 3-7.
• ದೇವರಿಂದ ಶಕ್ತಿಯನ್ನು ಪಡೆಯಲಿಕ್ಕಾಗಿ ನಾವೇನು ಮಾಡಬಲ್ಲೆವು?
ನಾವು ಅದನ್ನು ಪ್ರಾರ್ಥನೆಯಲ್ಲಿ ಕೇಳಿಕೊಳ್ಳಬಹುದು, ಬೈಬಲಿನಿಂದ ಆತ್ಮಿಕ ಬಲವನ್ನು ಪಡೆದುಕೊಳ್ಳಬಹುದು ಮತ್ತು ಕ್ರೈಸ್ತ ಸಹವಾಸದ ಮೂಲಕ ಬಲಗೊಳಿಸಲ್ಪಡಬಹುದು.—3/1, ಪುಟಗಳು 15, 16.
• ಮಕ್ಕಳು ಕ್ರೈಸ್ತ ಕೂಟಗಳಿಂದ ಹೆಚ್ಚು ಪ್ರಯೋಜನ ಪಡೆದುಕೊಳ್ಳುವಂತೆ ಹೆತ್ತವರು ಅವರಿಗೆ ಹೇಗೆ ಸಹಾಯಮಾಡಬಹುದು?
ಮಕ್ಕಳು ನಿದ್ರೆಹೋಗದಂತೆ ಅವರಿಗೆ ಸಹಾಯಮಾಡಬಹುದು. ಕೂಟಗಳಿಗೆ ಹೋಗುವ ಮುಂಚೆ ಮಕ್ಕಳನ್ನು ಸ್ವಲ್ಪ ಹೊತ್ತು ಮಲಗಿಸಬಹುದು. ಪರಿಚಿತವಾದ ಪದಗಳು ಅಥವಾ ಹೆಸರುಗಳು ಉಪಯೋಗಿಸಲ್ಪಡುವಾಗಲೆಲ್ಲ ಒಂದು ಕಾಗದದಲ್ಲಿ ಗುರುತನ್ನು ಮಾಡುವಂತಹ ರೀತಿಯಲ್ಲಿ, ‘ನೋಟ್ಸ್’ ಬರೆಯುವಂತೆ ಅವರನ್ನು ಉತ್ತೇಜಿಸಬಹುದು.—3/15, ಪುಟ 17, 18.
• ಯೋಬನ ಮಾದರಿಯಿಂದ ನಾವು ಕಲಿಯಬಹುದಾದ ಕೆಲವು ಸಂಗತಿಗಳು ಯಾವುವು?
ಯೋಬನು ದೇವರೊಂದಿಗಿನ ತನ್ನ ಸಂಬಂಧವನ್ನು ಪ್ರಥಮವಾಗಿಟ್ಟನು, ಜೊತೆ ಮಾನವರೊಂದಿಗಿನ ವ್ಯವಹಾರದಲ್ಲಿ ನ್ಯಾಯವಂತನಾಗಿದ್ದನು, ತನ್ನ ವಿವಾಹ ಸಂಗಾತಿಗೆ ನಿಷ್ಠಾವಂತನಾಗಿದ್ದನು, ತನ್ನ ಕುಟುಂಬದ ಆತ್ಮಿಕತೆಯ ಕುರಿತು ಚಿಂತಿತನಾಗಿದ್ದನು, ಮತ್ತು ಪರೀಕ್ಷೆಯ ಕೆಳಗೆ ನಂಬಿಗಸ್ತಿಕೆಯಿಂದ ತಾಳಿಕೊಂಡನು.—3/15, ಪುಟಗಳು 25-7.
• ನಿಗೂಢ ಸಂದೇಶಗಳನ್ನು ವಿವರಿಸುವ ಒಂದು ಗುಪ್ತವಾದ ಸಂಕೇತ ಭಾಷೆಯು ಬೈಬಲಿನಲ್ಲಿದೆಯೊ?
ಇಲ್ಲ. ನಿರ್ದಿಷ್ಟ ಐಹಿಕ ಪುಸ್ತಕಗಳಲ್ಲೂ ಗುಪ್ತವಾದ ಸಂಕೇತ ಭಾಷೆಯಿದೆಯೆಂದು ಹೇಳಸಾಧ್ಯವಿದೆ. ಹೀಬ್ರೂ ಭಾಷೆಯ ಮೂಲಪಾಠಗಳಲ್ಲಿರುವ ಕಾಗುಣಿತದಲ್ಲಿರುವ ಭಿನ್ನತೆಗಳು, ಬೈಬಲಿನಲ್ಲಿ ಸಂಕೇತ ಭಾಷೆಯು ಇದೆಯೆಂಬ ಹೇಳಿಕೆಯನ್ನು ನಿರರ್ಥಕಗೊಳಿಸಬಲ್ಲವು.—4/1, ಪುಟಗಳು 30, 31.