ಪ್ರಥಮ ಮಾನವ ದಂಪತಿಗಳಿಂದ ನಾವು ಪಾಠವನ್ನು ಕಲಿಯಸಾಧ್ಯವಿದೆ
ದೇವರು ಭೂಗ್ರಹವನ್ನು ಜಾಗರೂಕತೆಯಿಂದ ಪರಿಶೀಲಿಸಿದನು. ಆತನು ಅದನ್ನು ಮಾನವ ನಿವಾಸಕ್ಕಾಗಿ ಸಿದ್ಧಗೊಳಿಸುತ್ತಿದ್ದನು. ತಾನು ಮಾಡುತ್ತಿರುವ ಪ್ರತಿಯೊಂದು ಕೆಲಸವು ಒಳ್ಳೇದಾಗಿತ್ತೆಂಬುದನ್ನು ಆತನು ಖಚಿತಪಡಿಸಿಕೊಳ್ಳುತ್ತಿದ್ದನು. ವಾಸ್ತವದಲ್ಲಿ, ಈ ಕೆಲಸವನ್ನು ಮಾಡಿಮುಗಿಸಿದಾಗ, “ಬಹು ಒಳ್ಳೇದಾಗಿತ್ತು” ಎಂದು ಸಹ ಆತನು ಹೇಳಿದನು. (ಆದಿಕಾಂಡ 1:12, 18, 21, 25, 31) ಆದರೂ, ಆ ಅಂತಿಮ ತೀರ್ಮಾನಕ್ಕೆ ಬರುವ ಮೊದಲು ದೇವರು ಯಾವುದೋ ಒಂದು ವಿಷಯದ ಕುರಿತು ಅದು “ಒಳ್ಳೇದಲ್ಲ” ಎಂದು ಹೇಳಿದನು. (ಓರೆ ಅಕ್ಷರಗಳು ನಮ್ಮವು.) ದೇವರು ಯಾವುದನ್ನೂ ಅಪರಿಪೂರ್ಣವಾದದ್ದಾಗಿ ಮಾಡಲಿಲ್ಲ ಎಂಬುದಂತೂ ಖಂಡಿತ. ಆದರೆ, ಅವನ ಸೃಷ್ಟಿಕಾರ್ಯವು ಇನ್ನೂ ಪೂರ್ಣಗೊಂಡಿರಲಿಲ್ಲ ಅಷ್ಟೇ. “ಮನುಷ್ಯನು ಒಂಟಿಗನಾಗಿರುವದು ಒಳ್ಳೇದಲ್ಲ; ಅವನಿಗೆ ಸರಿಬೀಳುವ ಸಹಕಾರಿಯನ್ನು ಉಂಟುಮಾಡುವೆನು” ಎಂದು ಯೆಹೋವನು ಹೇಳಿದನು.—ಆದಿಕಾಂಡ 2:18.
ಮಾನವ ಸಮಾಜವು ಆರೋಗ್ಯದಿಂದ, ಸಂತೋಷದಿಂದ ಹಾಗೂ ಸಮೃದ್ಧಿಯಿಂದ ಭೂಪ್ರಮೋದವನದಲ್ಲಿ ನಿತ್ಯಜೀವವನ್ನು ಆನಂದಿಸಬೇಕೆಂಬುದು ಯೆಹೋವನ ಉದ್ದೇಶವಾಗಿತ್ತು. ಇಡೀ ಮಾನವಕುಲದ ತಂದೆಯು ಆದಾಮನಾಗಿದ್ದನು. ಅವನ ಹೆಂಡತಿಯಾದ ಹವ್ವಳು ‘ಬದುಕುವವರೆಲ್ಲರಿಗೂ ಮೂಲಮಾತೆ’ಯಾಗಿದ್ದಳು. (ಆದಿಕಾಂಡ 3:20) ಇಂದು ನೂರಾರು ಕೋಟಿಗಟ್ಟಲೆ ಮಾನವರು ಈ ಭೂಮಿಯಲ್ಲಿ ತುಂಬಿರುವುದಾದರೂ, ಅವರೆಲ್ಲರೂ ಅಪರಿಪೂರ್ಣರಾಗಿದ್ದಾರೆ.
ಆದಾಮಹವ್ವರ ಕುರಿತಾದ ಕಥೆಯು ಎಲ್ಲರಿಗೂ ಗೊತ್ತಿರುವಂತಹದ್ದೇ. ಆದರೆ, ಇಂದು ಇದರಿಂದ ನಮಗೆ ಯಾವ ಪ್ರಾಯೋಗಿಕ ಪ್ರಯೋಜನವಿದೆ? ಪ್ರಥಮ ಮಾನವ ದಂಪತಿಗಳ ಅನುಭವಗಳಿಂದ ನಾವು ಯಾವ ಪಾಠಗಳನ್ನು ಕಲಿಯಸಾಧ್ಯವಿದೆ?
“ಅವರನ್ನು ಗಂಡುಹೆಣ್ಣಾಗಿ ನಿರ್ಮಿಸಿದನು”
ಆದಾಮನು ಪ್ರಾಣಿಗಳಿಗೂ ಪಕ್ಷಿಗಳಿಗೂ ಹೆಸರಿಡುತ್ತಿರುವಾಗ, ಅವುಗಳಿಗೆ ಜೊತೆಗಳಿವೆ ಆದರೆ ತನಗೆ ಸಂಗಾತಿಯಿಲ್ಲ ಎಂಬುದು ಅವನ ಅರಿವಿಗೆ ಬಂತು. ಆದುದರಿಂದ, ತನ್ನ ಪಕ್ಕೆಲುಬುಗಳಿಂದ ಯೆಹೋವನು ರಚಿಸಿದ ಸುಂದರ ಸೃಷ್ಟಿಜೀವಿಯನ್ನು ಅವನು ನೋಡಿದಾಗ, ಅವನಿಗೆ ಅತ್ಯಾನಂದವಾಯಿತು. ಅವಳು ತನ್ನ ಶರೀರದ ಒಂದು ಭಾಗದಿಂದ ಸೃಷ್ಟಿಸಲ್ಪಟ್ಟವಳು ಎಂಬುದನ್ನು ಆದಾಮನು ಗ್ರಹಿಸಿದಾಗ, ಅವನು ಉದ್ಗರಿಸಿದ್ದು: “ಈಕೆಯು ನನ್ನ ಎಲುಬುಗಳಿಂದ ಬಂದ ಎಲುಬೂ ನನ್ನ ಮಾಂಸದಿಂದ ಬಂದ ಮಾಂಸವೂ ಆಗಿದ್ದಾಳೆ; ಈಕೆಯು ನರನಿಂದ ಉತ್ಪತ್ತಿಯಾದ ಕಾರಣ ನಾರೀ ಎನ್ನಿಸಿಕೊಳ್ಳುವಳು.”—ಆದಿಕಾಂಡ 2:18-23.
ಆದಾಮನಿಗೆ ಒಬ್ಬ ‘ಸಹಕಾರಿಣಿಯ’ ಅಗತ್ಯವಿತ್ತು. ಈಗ ತನಗೆ ಯೋಗ್ಯವಾದ ಒಬ್ಬ ಸಹಕಾರಿಣಿಯು ಅವನಿಗೆ ಸಿಕ್ಕಿದಳು. ತಮ್ಮ ತೋಟದ ಮನೆಯನ್ನು ಹಾಗೂ ಪ್ರಾಣಿಗಳನ್ನು ನೋಡಿಕೊಳ್ಳಲು, ಮಕ್ಕಳನ್ನು ಹೆರಲು, ಮತ್ತು ಒಬ್ಬ ನಿಜ ಸಂಗಾತಿಯ ಬೌದ್ಧಿಕ ಪ್ರಚೋದನೆ ಹಾಗೂ ಬೆಂಬಲವನ್ನು ನೀಡುವುದರಲ್ಲಿ ಆದಾಮನ ಸಹಾಯಕಿಯಾಗಿರಲು ಹವ್ವಳು ಪರಿಪೂರ್ಣವಾಗಿ ಯೋಗ್ಯಳಾಗಿದ್ದಳು.—ಆದಿಕಾಂಡ 1:26-30.
ಈ ದಂಪತಿಗಳು ಬಯಸಸಾಧ್ಯವಿರುವ ಪ್ರತಿಯೊಂದನ್ನೂ ಯೆಹೋವನು ಒದಗಿಸಿದನು. ತದನಂತರ ಹವ್ವಳನ್ನು ಆದಾಮನ ಬಳಿಗೆ ಕರೆದುಕೊಂಡು ಬಂದು, ಅವರ ಸೇರಿಕೆಗೆ ಅನುಮತಿಯನ್ನು ನೀಡಿದನು. ಈ ಮೂಲಕ ದೇವರು ವಿವಾಹ ಪದ್ಧತಿಯನ್ನು ಹಾಗೂ ಸಮಾಜವು ಯಾವುದರಿಂದ ರಚಿಸಲ್ಪಡಲಿತ್ತೋ ಆ ಕುಟುಂಬವನ್ನು ಆರಂಭಿಸಿದನು. ಈ ವಿಷಯದಲ್ಲಿ ಆದಿಕಾಂಡ ಪುಸ್ತಕವು ಹೀಗೆ ಹೇಳುತ್ತದೆ: “ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು; ಅವರಿಬ್ಬರು ಒಂದೇ ಶರೀರವಾಗಿರುವರು.” ಮತ್ತು ಯೆಹೋವನು ಪ್ರಥಮ ವಿವಾಹಿತ ದಂಪತಿಗಳನ್ನು ಆಶೀರ್ವದಿಸಿ, ಬಹುಸಂತಾನವುಳ್ಳವರಾಗಿ ಹೆಚ್ಚಿರಿ ಎಂದು ಅವರಿಗೆ ಹೇಳಿದನು. ಹೀಗೆ ಹೇಳುವ ಮೂಲಕ, ಪ್ರತಿಯೊಂದು ಮಗುವು ತಂದೆತಾಯಿಯರು ಚೆನ್ನಾಗಿ ಪರಾಮರಿಕೆಮಾಡುವಂತಹ ಒಂದು ಕುಟುಂಬದಲ್ಲಿ ಜನಿಸಬೇಕು, ಮತ್ತು ಅವರು ಮಗುವನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಬಯಕೆಯನ್ನು ಆತನು ಸ್ಪಷ್ಟವಾಗಿ ವ್ಯಕ್ತಪಡಿಸಿದನು.—ಆದಿಕಾಂಡ 1:28; 2:24.
“ದೇವಸ್ವರೂಪದಲ್ಲಿ”
ಆದಾಮನು ದೇವರ ಪರಿಪೂರ್ಣ ಪುತ್ರನಾಗಿದ್ದನು. ಅಷ್ಟೇ ಅಲ್ಲ, ಅವನು “ದೇವಸ್ವರೂಪದಲ್ಲಿ” ಉಂಟುಮಾಡಲ್ಪಟ್ಟಿದ್ದನು. ಆದರೆ ದೇವರು ‘ಆತ್ಮಸ್ವರೂಪನಾಗಿರುವುದರಿಂದ,’ ಈ ಹೋಲಿಕೆಯು ಶಾರೀರಿಕ ರಚನೆಯ ಕುರಿತಾಗಿರಸಾಧ್ಯವಿಲ್ಲ. (ಆದಿಕಾಂಡ 1:26; ಯೋಹಾನ 4:24) ದೇವಸ್ವರೂಪ ಅಂದರೆ, ಮನುಷ್ಯನನ್ನು ಪ್ರಾಣಿಗಳಿಗಿಂತ ಶ್ರೇಷ್ಠವಾಗಿ ಮಾಡಿದಂತಹ ಗುಣಗಳೊಂದಿಗೆ ಸೃಷ್ಟಿಸಿದ್ದೇ ಆಗಿದೆ. ಹೀಗೆ ಪ್ರೀತಿ, ವಿವೇಕ, ಶಕ್ತಿ ಹಾಗೂ ನ್ಯಾಯದಂತಹ ಗುಣಗಳು ಆರಂಭದಿಂದಲೇ ಮನುಷ್ಯನಲ್ಲಿ ಅಂತರ್ಗತವಾಗಿವೆ. ಮನುಷ್ಯನಿಗೆ ಇಚ್ಛಾ ಸ್ವಾತಂತ್ರ್ಯವು ಕೊಡಲ್ಪಟ್ಟಿದೆ ಮತ್ತು ಆತ್ಮಿಕತೆಯನ್ನು ಬೆಳೆಸಿಕೊಳ್ಳುವ ಸಾಮರ್ಥ್ಯವು ಸಹ ಇದೆ. ಸ್ವಭಾವಸಿದ್ಧವಾದ ನೈತಿಕ ಪರಿಜ್ಞಾನ ಅಥವಾ ಮನಸ್ಸಾಕ್ಷಿಯು, ಒಳ್ಳೇದು ಹಾಗೂ ಕೆಟ್ಟದ್ದರ ನಡುವಣ ವ್ಯತ್ಯಾಸವನ್ನು ಗುರುತಿಸಲು ಅವನನ್ನು ಶಕ್ತನನ್ನಾಗಿ ಮಾಡಿದೆ. ಮನುಷ್ಯನಿಗೆ ಬೌದ್ಧಿಕ ಸಾಮರ್ಥ್ಯವೂ ಕೊಡಲ್ಪಟ್ಟಿದೆ. ಇದರ ಸಹಾಯದಿಂದ ಅವನು, ಮಾನವರು ಏಕೆ ಅಸ್ತಿತ್ವದಲ್ಲಿದ್ದಾರೆ ಎಂಬುದರ ಕಾರಣವನ್ನು ಮನನಮಾಡಲು, ಸೃಷ್ಟಿಕರ್ತನ ಕುರಿತಾದ ಜ್ಞಾನವನ್ನು ಪಡೆದುಕೊಳ್ಳಲು, ಹಾಗೂ ಸೃಷ್ಟಿಕರ್ತನೊಂದಿಗೆ ಆಪ್ತತೆಯನ್ನು ಬೆಳೆಸಿಕೊಳ್ಳಲು ಶಕ್ತನಾಗಿದ್ದಾನೆ. ಈ ಎಲ್ಲ ಸಾಮರ್ಥ್ಯಗಳಿಂದ ಸಜ್ಜಿತನಾದ ಆದಾಮನು, ದೇವರ ಭೂಕೈಗೆಲಸದ ಆಡಳಿತಗಾರನ ಪಾತ್ರವನ್ನು ನಿರ್ವಹಿಸಲು ಅಗತ್ಯವಾದದ್ದೆಲ್ಲವನ್ನೂ ಹೊಂದಿದ್ದನು.
ಹವ್ವಳು ನಿಯಮವನ್ನು ಉಲ್ಲಂಘಿಸುತ್ತಾಳೆ
ಯೆಹೋವನು ಹಾಕಿದ್ದ ಒಂದು ನಿಷೇಧದ ಕುರಿತು ಆದಾಮನು ಹವ್ವಳಿಗೆ ಹೇಳಿದ್ದನು ಎಂಬುದರಲ್ಲಿ ಸಂಶಯವೇ ಇಲ್ಲ. ಆ ನಿಷೇಧವು ಇದಾಗಿತ್ತು: ತೋಟದ ಮನೆಯಲ್ಲಿರುವ ಎಲ್ಲ ಮರಗಳ ಹಣ್ಣುಗಳನ್ನು ಅವರು ತಿನ್ನಸಾಧ್ಯವಿತ್ತಾದರೂ, ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು ಮಾತ್ರ ಅವರು ತಿನ್ನಬಾರದಾಗಿತ್ತು. ಒಂದುವೇಳೆ ತಿನ್ನುವುದಾದರೆ, ತಿಂದ ದಿನವೇ ಅವರು ಸಾಯಲಿದ್ದರು.—ಆದಿಕಾಂಡ 2:16, 17.
ಆದರೆ, ಸ್ವಲ್ಪದರಲ್ಲೇ ನಿಷೇಧಿತ ಹಣ್ಣಿನ ವಿಷಯದಲ್ಲಿ ಒಂದು ವಿವಾದವು ಎಬ್ಬಿಸಲ್ಪಟ್ಟಿತು. ಒಬ್ಬ ಅದೃಶ್ಯ ಆತ್ಮಜೀವಿಯು ಸರ್ಪವನ್ನು ತನ್ನ ವದನಕವಾಗಿ ಉಪಯೋಗಿಸುತ್ತಾ, ಹವ್ವಳ ಬಳಿಗೆ ಬಂದಿತು. ಮುಗ್ಧತೆಯ ಸೋಗುಹಾಕುತ್ತಾ ಈ ಸರ್ಪವು ಅವಳನ್ನು, “ಏನವ್ವಾ, ತೋಟದಲ್ಲಿರುವ ಯಾವ ಮರದ ಹಣ್ಣನ್ನೂ ನೀವು ತಿನ್ನಬಾರದೆಂದು ದೇವರು ಅಪ್ಪಣೆಕೊಟ್ಟಿರುವದು ನಿಜವೋ”? ಎಂದು ಕೇಳಿತು. ಕೇವಲ ಒಂದು ಮರದ ಹಣ್ಣನ್ನು ಬಿಟ್ಟು ಉಳಿದ ಎಲ್ಲ ಮರಗಳ ಹಣ್ಣನ್ನು ತಿನ್ನುವ ಅನುಮತಿಯು ತಮಗೆ ಕೊಡಲ್ಪಟ್ಟಿದೆ ಎಂದು ಹವ್ವಳು ಉತ್ತರಿಸಿದಳು. ಆದರೆ ಸರ್ಪವು ದೇವರ ವಿರುದ್ಧವಾಗಿ ಮಾತಾಡುತ್ತಾ, ಆ ಸ್ತ್ರೀಗೆ ಹೇಳಿದ್ದು: “ನೀವು ಹೇಗೂ ಸಾಯುವದಿಲ್ಲ; ನೀವು ಇದರ ಹಣ್ಣನ್ನು ತಿಂದಾಗಲೇ ನಿಮ್ಮ ಕಣ್ಣುಗಳು ತೆರೆಯುವವು; ನೀವು ದೇವರಂತೆ ಆಗಿ ಒಳ್ಳೇದರ ಕೆಟ್ಟದ್ದರ ಭೇದವನ್ನು ಅರಿತವರಾಗುವಿರಿ.” ಆಗ ಅವಳು ನಿಷೇಧಿತ ಮರವನ್ನು ಭಿನ್ನವಾದ ದೃಷ್ಟಿಕೋನದಿಂದ ನೋಡತೊಡಗಿದಳು. “ಆ ಮರದ ಹಣ್ಣು ತಿನ್ನುವದಕ್ಕೆ ಉತ್ತಮವಾಗಿಯೂ ನೋಡುವದಕ್ಕೆ ರಮ್ಯವಾಗಿಯೂ . . . ಇದೆ” ಎಂದು ಅವಳಿಗನಿಸಿತು. ಪೂರ್ಣವಾಗಿ ವಂಚನೆಗೊಳಗಾದ ಹವ್ವಳು, ದೇವರ ನಿಯಮವನ್ನು ಉಲ್ಲಂಘಿಸಿದಳು.—ಆದಿಕಾಂಡ 3:1-6; 1 ತಿಮೊಥೆಯ 2:14.
ಹವ್ವಳ ಪಾಪವು ಅನಿವಾರ್ಯವಾಗಿತ್ತೋ? ಖಂಡಿತವಾಗಿಯೂ ಇಲ್ಲ! ಸ್ವತಃ ನಿಮ್ಮನ್ನು ಅವಳ ಸ್ಥಾನದಲ್ಲಿರಿಸಿಕೊಂಡು ನೋಡಿ. ಸರ್ಪದ ವಾದವು, ದೇವರು ಹಾಗೂ ಆದಾಮನು ಹೇಳಿದ್ದ ವಿಷಯಕ್ಕೆ ಸಂಪೂರ್ಣವಾಗಿ ಅಪಾರ್ಥವನ್ನು ಕಲ್ಪಿಸಿತು. ನೀವು ತುಂಬ ಪ್ರೀತಿಸುವ ಹಾಗೂ ಭರವಸೆಯಿಡುವ ಒಬ್ಬ ವ್ಯಕ್ತಿಯ ಮೇಲೆ, ಅಪರಿಚಿತನೊಬ್ಬನು ಅಪ್ರಾಮಾಣಿಕತೆಯ ಆರೋಪವನ್ನು ಹೊರಿಸುವಲ್ಲಿ ನಿಮಗೆ ಹೇಗನಿಸುತ್ತದೆ? ಸರ್ಪವು ಹವ್ವಳನ್ನು ಸಮೀಪಿಸಿದಾಗ, ಅದರ ಕಡೆಗೆ ಕೋಪವನ್ನು ತೋರಿಸುವ ಮೂಲಕ ಅವಳು ಭಿನ್ನವಾದ ರೀತಿಯಲ್ಲಿ ವರ್ತಿಸಬೇಕಾಗಿತ್ತು. ಅಷ್ಟುಮಾತ್ರವಲ್ಲ, ಸರ್ಪಕ್ಕೆ ಕಿವಿಗೊಡಲು ಸಹ ನಿರಾಕರಿಸಬೇಕಾಗಿತ್ತು. ಏಕೆಂದರೆ, ದೇವರ ನೀತಿಯನ್ನು ಹಾಗೂ ಅವಳ ಗಂಡನ ಮಾತನ್ನು ಪ್ರಶ್ನಿಸಲು ಸರ್ಪಕ್ಕೆ ಯಾವ ಹಕ್ಕೂ ಇರಲಿಲ್ಲ. ತಲೆತನದ ಮೂಲತತ್ವಕ್ಕೆ ಗೌರವವನ್ನು ತೋರಿಸಲಿಕ್ಕಾಗಿ ಹವ್ವಳು, ಯಾವುದೇ ನಿರ್ಣಯವನ್ನು ಮಾಡುವುದಕ್ಕೆ ಮೊದಲು ಗಂಡನಿಂದ ಸಲಹೆಯನ್ನು ಪಡೆದುಕೊಳ್ಳಬೇಕಾಗಿತ್ತು. ಆದುದರಿಂದ, ದೇವದತ್ತ ಉಪದೇಶಗಳಿಗೆ ವಿರುದ್ಧವಾದ ಮಾಹಿತಿಯು ನಮಗೆ ಎಂದಾದರೂ ಕೊಡಲ್ಪಡುವಲ್ಲಿ, ನಾವು ಸಹ ಇತರರ ಸಲಹೆಯನ್ನು ಪಡೆದುಕೊಳ್ಳಬೇಕು. ಆದರೂ ಹವ್ವಳು ಶೋಧಕನ ಮಾತುಗಳನ್ನು ನಂಬಿದಳು, ಮತ್ತು ಒಳ್ಳೇದರ ಕೆಟ್ಟದ್ದರ ಭೇದವನ್ನು ತಾನಾಗಿಯೇ ನಿರ್ಧರಿಸಲು ಬಯಸಿದಳು. ಸರ್ಪವು ಹೇಳಿದಂತಹ ವಿಷಯದ ಬಗ್ಗೆಯೇ ಹವ್ವಳು ಹೆಚ್ಚು ಯೋಚಿಸಿದ್ದರಿಂದ, ಆ ಪ್ರಸ್ತಾಪವು ಅವಳಿಗೆ ಹೆಚ್ಚು ಆಕರ್ಷಣೀಯವಾಗಿ ಕಂಡಿತು. ಆದರೆ ಅವಳು ಒಂದು ದೊಡ್ಡ ತಪ್ಪನ್ನು ಮಾಡಿದ್ದಳು; ಅದೇನೆಂದರೆ, ಕೆಟ್ಟ ಬಯಕೆಯೊಂದನ್ನು ಮನಸ್ಸಿನಿಂದ ತೆಗೆದುಹಾಕುವುದಕ್ಕೆ ಬದಲಾಗಿ, ಅಥವಾ ಆ ವಿಷಯವನ್ನು ತನ್ನ ಗಂಡನೊಂದಿಗೆ ಚರ್ಚಿಸುವುದಕ್ಕೆ ಬದಲಾಗಿ, ತಾನೇ ಕ್ರಿಯೆಗೈಯಲು ನಿರ್ಧರಿಸಿದಳು.—1 ಕೊರಿಂಥ 11:3; ಯಾಕೋಬ 1:14, 15.
ತನ್ನ ಹೆಂಡತಿಯ ಮಾತಿಗೆ ಆದಾಮನು ಕಿವಿಗೊಟ್ಟದ್ದು
ಆ ಕೂಡಲೆ ಹವ್ವಳು ತನ್ನೊಂದಿಗೆ ಪಾಪದಲ್ಲಿ ಒಳಗೂಡುವಂತೆ ಆದಾಮನನ್ನು ಪ್ರಚೋದಿಸಿದಳು. ಆಗ ಆದಾಮನು ಆಕ್ಷೇಪವೆತ್ತದೆ ಸುಲಭವಾಗಿ ಒಪ್ಪಿಕೊಂಡದ್ದನ್ನು ನಾವು ಹೇಗೆ ವಿವರಿಸಸಾಧ್ಯವಿದೆ? (ಆದಿಕಾಂಡ 3:6, 17) ಯಾರಿಗೆ ನಿಷ್ಠೆ ತೋರಿಸಬೇಕು ಎಂಬ ವಿಷಯದಲ್ಲಿ ಆದಾಮನ ಮನಸ್ಸಿನಲ್ಲಿ ಹೋರಾಟ ನಡೆಯಿತು. ತನ್ನ ಪ್ರೀತಿಯ ಸಂಗಾತಿಯಾದ ಹವ್ವಳನ್ನೂ ಸೇರಿಸಿ ಪ್ರತಿಯೊಂದನ್ನೂ ತನಗೆ ಒದಗಿಸಿರುವ ತನ್ನ ಸೃಷ್ಟಿಕರ್ತನಿಗೆ ಅವನು ವಿಧೇಯನಾಗುವನೊ? ಈಗ ತಾನು ಏನು ಮಾಡಬೇಕು ಎಂಬುದರ ಬಗ್ಗೆ ಆದಾಮನು ದೇವರ ಮಾರ್ಗದರ್ಶನವನ್ನು ಪಡೆದುಕೊಳ್ಳಲು ಪ್ರಯತ್ನಿಸುವನೊ? ಅಥವಾ ಈ ಮನುಷ್ಯನು ತನ್ನ ಹೆಂಡತಿಯ ಪಾಪದಲ್ಲಿ ಒಳಗೂಡಲು ನಿರ್ಧರಿಸುವನೊ? ನಿಷೇಧಿತ ಹಣ್ಣನ್ನು ತಿನ್ನುವ ಮೂಲಕ ಹವ್ವಳು ಏನನ್ನು ಪಡೆದುಕೊಳ್ಳಲು ಬಯಸುತ್ತಾಳೋ ಅದು ಭ್ರಾಂತಿಕಾರಕವಾದದ್ದಾಗಿದೆ ಎಂಬುದು ಆದಾಮನಿಗೆ ಚೆನ್ನಾಗಿ ಗೊತ್ತಿತ್ತು. ಈ ವಿಷಯದಲ್ಲಿ ಅಪೊಸ್ತಲ ಪೌಲನು ಹೀಗೆ ಬರೆಯುವಂತೆ ಪ್ರೇರಿಸಲ್ಪಟ್ಟನು: “ಆದಾಮನು ವಂಚನೆಗೆ ಒಳಬೀಳಲಿಲ್ಲ, ಸ್ತ್ರೀಯು ವಂಚನೆಗೆ ಒಳಬಿದ್ದು ಅಪರಾಧಿಯಾದಳು.” (1 ತಿಮೊಥೆಯ 2:14) ಹೀಗೆ ಆದಾಮನು ಉದ್ದೇಶಪೂರ್ವಕವಾಗಿ ಯೆಹೋವನ ಮಾತನ್ನು ಉಲ್ಲಂಘಿಸುವ ಆಯ್ಕೆಮಾಡಿದನು. ದೇವರ ಸಾಮರ್ಥ್ಯದಲ್ಲಿ ಆದಾಮನಿಗಿದ್ದ ನಂಬಿಕೆಗಿಂತಲೂ, ತನ್ನ ಹೆಂಡತಿಯಿಂದ ದೇವರು ತನ್ನನ್ನು ದೂರಮಾಡಿಬಿಡುತ್ತಾನೆಂಬ ಭಯವು ಅವನಲ್ಲಿ ಅತ್ಯಧಿಕವಾಗಿತ್ತು.
ಆದಾಮನ ಈ ಕೃತ್ಯವು ಆತ್ಮಹತ್ಯೆಗೆ ಸರಿಸಮವಾಗಿತ್ತು. ಅಷ್ಟುಮಾತ್ರವಲ್ಲ, ಯಾವ ಸಂತತಿಯ ಮೂಲಪುರುಷನಾಗುವಂತೆ ಯೆಹೋವನು ಅವನಿಗೆ ದಯೆಯಿಂದ ಅನುಮತಿ ನೀಡಿದ್ದನೋ ಆ ಸಂತತಿಯವರೆಲ್ಲರ ಕೊಲೆಗೆ ಇದು ಸಮಾನವಾಗಿತ್ತು. ಏಕೆಂದರೆ ಅವನ ಸಂತತಿಯವರೆಲ್ಲರೂ ಪಾಪಕ್ಕೆ ವಶರಾದರು ಮತ್ತು ಇದರ ಫಲವು ಮರಣವಾಗಿತ್ತು. (ರೋಮಾಪುರ 5:12) ಸ್ವಾರ್ಥಪರ ಅವಿಧೇಯತೆಗೆ ಎಂತಹ ಬೆಲೆಯನ್ನು ತೆರಬೇಕಾಯಿತು!
ಪಾಪದ ಪರಿಣಾಮಗಳು
ಆದಾಮನ ಪಾಪದ ಮೊದಲ ಪರಿಣಾಮವು ನಾಚಿಕೆಯಾಗಿತ್ತು. ಆದುದರಿಂದ, ಪಾಪಗೈದ ಬಳಿಕ ಯೆಹೋವನೊಂದಿಗೆ ಮಾತಾಡಲು ಆನಂದದಿಂದ ಮುನ್ನುಗ್ಗುವುದಕ್ಕೆ ಬದಲಾಗಿ, ಈ ದಂಪತಿಗಳು ಮರಗಳ ಹಿಂದೆ ಅಡಗಿಕೊಂಡರು. (ಆದಿಕಾಂಡ 3:8) ದೇವರೊಂದಿಗಿನ ಅವರ ಸ್ನೇಹವು ನುಚ್ಚುನೂರಾಗಿತ್ತು. ನೀವೇನು ಮಾಡಿದಿರಿ ಎಂದು ದೇವರು ಅವರನ್ನು ಪ್ರಶ್ನಿಸಿದನು. ಹೀಗೆ ಕೇಳಿದಾಗ, ತಾವಿಬ್ಬರೂ ದೇವರ ನಿಯಮವನ್ನು ಮುರಿದಿದ್ದೇವೆ ಎಂಬುದು ಅವರಿಗೆ ಗೊತ್ತಾದರೂ, ಅವರು ಪಶ್ಚಾತ್ತಾಪವನ್ನು ತೋರಿಸಲಿಲ್ಲ. ನಿಷೇಧಿತ ಹಣ್ಣನ್ನು ತಿನ್ನುವ ಮೂಲಕ ಅವರು ದೇವರ ಒಳ್ಳೇತನಕ್ಕೆ ಬೆನ್ನುಹಾಕಿದರು.
ಇದರ ಪರಿಣಾಮವಾಗಿ, ಮಕ್ಕಳನ್ನು ಹೆರುವಾಗ ನೀನು ಬಹು ಸಂಕಟಪಡಬೇಕಾಗುವುದು ಎಂದು ದೇವರು ಹವ್ವಳಿಗೆ ಹೇಳಿದನು. ಅವಳು ತನ್ನ ಗಂಡನಿಗಾಗಿ ಹಂಬಲಿಸುವುದಾದರೂ, ಅವನು ಅವಳ ಮೇಲೆ ದೊರೆತನ ನಡಿಸಲಿದ್ದನು. ಹೀಗೆ, ಸ್ವಾತಂತ್ರ್ಯವನ್ನು ಪಡೆದುಕೊಳ್ಳಲಿಕ್ಕಾಗಿ ಅವಳು ಮಾಡಿದ ಪ್ರಯತ್ನಕ್ಕೆ ವಿರುದ್ಧವಾದ ಪ್ರತಿಫಲವು ಅವಳಿಗೆ ದೊರಕಿತು. ಈಗ ಆದಾಮನು ಜೀವಮಾನವೆಲ್ಲಾ ಕಷ್ಟಪಟ್ಟು ದುಡಿದು ಭೂಮಿಯ ಹುಟ್ಟುವಳಿಯನ್ನು ತಿನ್ನಬೇಕಾಯಿತು. ಏಕೆಂದರೆ, ಏದೆನ್ ತೋಟದಲ್ಲಿದ್ದಾಗ ತನ್ನ ಹಸಿವನ್ನು ನೀಗಿಸಿಕೊಳ್ಳಲು ಅವನು ಈ ರೀತಿ ಕಷ್ಟಪಡಬೇಕಾಗಿರಲಿಲ್ಲ. ಆದರೆ ಈಗ, ಅವನು ಎಲ್ಲಿಂದ ಸೃಷ್ಟಿಸಲ್ಪಟ್ಟಿದ್ದನೋ ಆ ಮಣ್ಣಿಗೆ ಪುನಃ ಸೇರುವ ತನಕ, ಜೀವನದ ಆವಶ್ಯಕತೆಗಳನ್ನು ಪೂರೈಸಲಿಕ್ಕಾಗಿ ಅವನು ಶ್ರಮದಿಂದ ದುಡಿಯಬೇಕಾಗಿತ್ತು.—ಆದಿಕಾಂಡ 3:16-19.
ಇದಾದ ಬಳಿಕ ಆದಾಮಹವ್ವರು ಏದೆನ್ ತೋಟದಿಂದ ಹೊರಹಾಕಲ್ಪಟ್ಟರು. ಆಗ ಯೆಹೋವನು ಹೇಳಿದ್ದು: “ಈ ಮನುಷ್ಯನು ಒಳ್ಳೇದರ ಕೆಟ್ಟದ್ದರ ಭೇದವನ್ನರಿತು ನಮ್ಮಲ್ಲಿ ಒಬ್ಬನಂತಾದನಲ್ಲಾ. ಇದರಿಂದ ಇವನು ಕೈಚಾಚಿ ಜೀವವೃಕ್ಷದ ಫಲವನ್ನು ಸಹ ತೆಗೆದು ತಿಂದು ಶಾಶ್ವತವಾಗಿ ಬದುಕುವವನಾಗಬಾರದು . . .” ಇದರ ಬಗ್ಗೆ ವಿದ್ವಾಂಸರಾದ ಗೋರ್ಡನ್ ವೆನಮ್ರು, ಇಲ್ಲಿ “ಈ ವಾಕ್ಯವು ಅಪೂರ್ಣವಾಗಿ ಕೊನೆಗೊಂಡಿದೆ” ಎಂದು ಹೇಳಿದರು. ಆದುದರಿಂದ, ದೇವರ ಮುಂದಿನ ಮಾತುಗಳು ಯಾವುವು ಎಂಬುದನ್ನು ನಾವೇ ಊಹಿಸಬೇಕಾಗಿದೆ; ಅವು, “ಮೊದಲಾಗಿ ನಾನು ಇವರಿಬ್ಬರನ್ನು ಏದೆನ್ ತೋಟದಿಂದ ಹೊರಹಾಕುತ್ತೇನೆ” ಎಂದಾಗಿದ್ದಿರಬಹುದು. ಸರ್ವಸಾಮಾನ್ಯವಾಗಿ, ಒಬ್ಬ ಬೈಬಲ್ ಬರಹಗಾರನು ದೇವರ ಪೂರ್ಣ ವಿಚಾರವನ್ನು ವರದಿಸುತ್ತಾನೆ. ಆದರೆ ಇಲ್ಲಿ, “ಮುಕ್ತಾಯದ ಮಾತುಗಳು ಇಲ್ಲದಿರುವುದು, ದೇವರು ಎಷ್ಟು ತ್ವರಿತಗತಿಯಿಂದ ಕ್ರಿಯೆಗೈದನು ಎಂಬುದನ್ನು ತಿಳಿಯಪಡಿಸುತ್ತದೆ. ಆತನು ತನ್ನ ಮಾತುಗಳನ್ನು ಪೂರ್ಣಗೊಳಿಸುವುದಕ್ಕೆ ಮೊದಲೇ ಅವರು ತೋಟದಿಂದ ಹೊರಹಾಕಲ್ಪಟ್ಟರು” ಎಂದು ವೆನಮ್ ಹೇಳುತ್ತಾರೆ. (ಆದಿಕಾಂಡ 3:22, 23) ತದನಂತರ, ಯೆಹೋವ ದೇವರು ಹಾಗೂ ಈ ಪ್ರಥಮ ದಂಪತಿಗಳ ನಡುವಣ ಮಾತುಕತೆಯು ಸಂಪೂರ್ಣವಾಗಿ ನಿಂತುಹೋಯಿತು ಎಂಬುದು ಸ್ಪಷ್ಟ.
ಆದಾಮಹವ್ವರು ಅದೇ ದಿನ, ಅಂದರೆ 24 ಗಂಟೆಗಳ ಅವಧಿಯಲ್ಲೇ ದೈಹಿಕವಾಗಿ ಸಾಯಲಿಲ್ಲ. ಆದರೆ, ಆತ್ಮಿಕ ಅರ್ಥದಲ್ಲಿ ಅವರು ಸತ್ತುಹೋದರು. ಜೀವದ ಉಗಮನಾಗಿದ್ದ ದೇವರಿಂದ ಅವರು ಸಂಪೂರ್ಣವಾಗಿ ವಿಮುಖರಾಗಿದ್ದರು. ಇದರಿಂದಾಗಿ ಕಾಲಕ್ರಮೇಣ ಅವರು ಮರಣಕ್ಕೆ ಬಲಿಯಾದರು. ಆದರೆ, ಅವರ ಚೊಚ್ಚಲು ಮಗನಾಗಿದ್ದ ಕಾಯಿನನು ಎರಡನೆಯ ಮಗನಾಗಿದ್ದ ಹೇಬೆಲನನ್ನು ಕೊಂದಾಗ, ಪ್ರಪ್ರಥಮ ಬಾರಿಗೆ ಅವರು ಮರಣವನ್ನು ಕಣ್ಣಾರೆ ನೋಡಬೇಕಾಯಿತು; ಆಗ ಅವರಿಗೆ ಎಂತಹ ಕಹಿ ಅನುಭವವಾಗಿದ್ದಿರಬೇಕು ಎಂಬುದನ್ನು ತುಸು ಊಹಿಸಿಕೊಳ್ಳಿರಿ!—ಆದಿಕಾಂಡ 4:1-16.
ಈ ಘಟನೆಯ ಬಳಿಕ, ಪ್ರಥಮ ಮಾನವ ದಂಪತಿಗಳ ಬಗ್ಗೆ ನಮಗೆ ಯಾವ ವಿಷಯವೂ ತಿಳಿಸಲ್ಪಟ್ಟಿಲ್ಲ. ಆದಾಮನು 130 ವರ್ಷ ಪ್ರಾಯದವನಾಗಿದ್ದಾಗ, ಅವನ ಮಗನಾದ ಸೇತನು ಹುಟ್ಟಿದನು. ಆಮೇಲೆ “ಗಂಡು ಹೆಣ್ಣು ಮಕ್ಕಳನ್ನು ಪಡೆದು,” ಸುಮಾರು 800 ವರ್ಷಗಳ ಬಳಿಕ ಆದಾಮನು ಮೃತಪಟ್ಟನು. ಅವನು ಮೃತಪಟ್ಟಾಗ 930 ವರ್ಷದವನಾಗಿದ್ದನು.—ಆದಿಕಾಂಡ 4:25; 5:3-5.
ನಮಗೋಸ್ಕರ ಒಂದು ಪಾಠ
ಪ್ರಥಮ ವಿವಾಹಿತ ದಂಪತಿಗಳ ವೃತ್ತಾಂತವು, ಇಂದಿನ ಮಾನವ ಸಮಾಜದ ಭ್ರಷ್ಟ ಸ್ಥಿತಿಗೆ ಕಾರಣವೇನು ಎಂಬುದನ್ನು ತಿಳಿಯಪಡಿಸುತ್ತದೆ. ಅಷ್ಟುಮಾತ್ರವಲ್ಲ, ಇದು ಒಂದು ಮೂಲಭೂತ ಪಾಠವನ್ನು ಸಹ ಕಲಿಸುತ್ತದೆ. ಯೆಹೋವ ದೇವರಿಂದ ಸ್ವತಂತ್ರರಾಗಿರಲು ಮಾಡುವ ಯಾವುದೇ ಪ್ರಯತ್ನವು, ಖಂಡಿತವಾಗಿಯೂ ಮೂರ್ಖತನವಾಗಿದೆ. ನಿಜವಾದ ವಿವೇಕವಿರುವವರು, ತಮ್ಮ ಜ್ಞಾನದ ಮೇಲಲ್ಲ, ಬದಲಾಗಿ ಯೆಹೋವನಲ್ಲಿ ಮತ್ತು ಆತನ ವಾಕ್ಯದಲ್ಲಿ ನಂಬಿಕೆಯನ್ನಿಡುತ್ತಾರೆ. ಒಳ್ಳೇದು ಹಾಗೂ ಕೆಟ್ಟದ್ದನ್ನು ನಿರ್ಧರಿಸುವವನು ಯೆಹೋವನಾಗಿದ್ದಾನೆ. ಮತ್ತು ಸರಿಯಾದುದನ್ನು ಮಾಡುವುದರ ಅರ್ಥ, ಆತನಿಗೆ ವಿಧೇಯತೆ ತೋರಿಸುವುದೇ ಆಗಿದೆ. ತಪ್ಪಾದುದನ್ನು ಮಾಡುವುದರ ಅರ್ಥ, ಆತನ ನಿಯಮಗಳನ್ನು ಉಲ್ಲಂಘಿಸುವುದು ಮತ್ತು ಆತನ ಮೂಲತತ್ವಗಳನ್ನು ಅಲಕ್ಷಿಸುವುದೇ ಆಗಿದೆ.
ಮಾನವಕುಲವು ಬಯಸಸಾಧ್ಯವಿರುವುದನ್ನೆಲ್ಲ ದೇವರು ನೀಡಿದ್ದನು ಮತ್ತು ಈಗಲೂ ನೀಡುತ್ತಿದ್ದಾನೆ. ಏಕೆಂದರೆ ಸರ್ವ ಮಾನವಕುಲವು, ನಿತ್ಯಜೀವ, ಸ್ವಾತಂತ್ರ್ಯ, ಸಂತೃಪ್ತಿ, ಸಂತೋಷ, ಆರೋಗ್ಯ, ಶಾಂತಿ, ಸಮೃದ್ಧಿಯನ್ನು ಕಂಡುಕೊಳ್ಳಲು ಮತ್ತು ಹೊಸ ಕಂಡುಹಿಡಿತಗಳನ್ನು ಮಾಡಲು ಬಯಸುತ್ತದೆ. ಆದರೂ, ಇದೆಲ್ಲವನ್ನೂ ನಾವು ಆನಂದಿಸಬೇಕಾದರೆ, ನಮ್ಮ ಸ್ವರ್ಗೀಯ ತಂದೆಯಾದ ಯೆಹೋವನ ಮೇಲೆ ನಾವು ಸಂಪೂರ್ಣವಾಗಿ ಆತುಕೊಳ್ಳುವ ಅಗತ್ಯವಿದೆ ಎಂಬುದನ್ನು ಅಂಗೀಕರಿಸಬೇಕಾಗಿದೆ.—ಪ್ರಸಂಗಿ 3:10-13; ಯೆಶಾಯ 55:6-13.
[ಪುಟ 26ರಲ್ಲಿರುವ ಚೌಕ/ಚಿತ್ರ]
ಆದಾಮಹವ್ವರ ವೃತ್ತಾಂತ—ಕೇವಲ ಒಂದು ಕಾಲ್ಪನಿಕ ಕಥೆಯೋ?
ಆರಂಭದಲ್ಲಿ ಒಂದು ಭೂಪ್ರಮೋದವನವಿತ್ತು, ಆದರೆ ಪಾಪದಿಂದಾಗಿ ಅದು ನಷ್ಟಗೊಂಡಿತು ಎಂಬುದನ್ನು, ಪುರಾತನ ಬಾಬೆಲಿನವರು, ಅಶ್ಶೂರ್ಯರು, ಐಗುಪ್ತ್ಯರು, ಹಾಗೂ ಇನ್ನಿತರರು ನಂಬುತ್ತಾರೆ. ಪ್ರಸಿದ್ಧವಾದ ಅನೇಕ ವೃತ್ತಾಂತಗಳಲ್ಲಿ, ಯಾವ ವೃಕ್ಷದ ಫಲವನ್ನು ತಿನ್ನುವ ಮೂಲಕ ನಿತ್ಯಜೀವವು ಸಿಗಸಾಧ್ಯವಿತ್ತೋ ಆ ಜೀವವೃಕ್ಷದ ವೃತ್ತಾಂತವು ಸರ್ವಸಾಮಾನ್ಯವಾದದ್ದಾಗಿದೆ. ಹೀಗೆ, ಏದೆನ್ ತೋಟದಲ್ಲಿ ಒಂದು ದುರಂತವು ಸಂಭವಿಸಿತ್ತು ಎಂಬುದನ್ನು ಮಾನವಕುಲವು ಜ್ಞಾಪಿಸಿಕೊಳ್ಳುತ್ತದೆ.
ಇಂದು, ಆದಾಮಹವ್ವರ ಕುರಿತಾದ ಬೈಬಲ್ ವೃತ್ತಾಂತವನ್ನು ಅನೇಕರು ಕೇವಲ ಕಾಲ್ಪನಿಕ ಕಥೆಯೆಂದು ನೆನಸುತ್ತಾರೆ. ಆದರೆ, ಇಡೀ ಮಾನವಕುಲವು ಒಂದೇ ಕುಟುಂಬವಾಗಿದ್ದು, ಒಂದೇ ಮೂಲದಿಂದ ಬಂದದ್ದಾಗಿದೆ ಎಂಬುದನ್ನು ಬಹುತೇಕ ವಿಜ್ಞಾನಿಗಳು ಒಪ್ಪಿಕೊಳ್ಳುತ್ತಾರೆ. ಒಬ್ಬ ಪೂರ್ವಜನು ಮಾಡಿದ ಪಾಪದ ಪರಿಣಾಮಗಳು, ಇಡೀ ಮಾನವಕುಲಕ್ಕೆ ದಾಟಿಸಲ್ಪಟ್ಟವು ಎಂಬುದನ್ನು ಅಲ್ಲಗಳೆಯುವುದು ಅನೇಕ ದೇವತಾಶಾಸ್ತ್ರಜ್ಞರಿಗೆ ಸಹ ಅಸಾಧ್ಯವಾಗಿದೆ. ಮಾನವನು ಒಬ್ಬ ಹೆತ್ತವರಿಂದಲ್ಲ ಬದಲಾಗಿ ಅನೇಕ ಹೆತ್ತವರಿಂದ ಉಂಟುಮಾಡಲ್ಪಟ್ಟನು ಎಂದು ಯಾರಾದರೂ ನಂಬುವಲ್ಲಿ, ಅನೇಕ ಪೂರ್ವಜರು ಸೇರಿಕೊಂಡು ಮೊದಲ ಪಾಪವನ್ನು ಗೈದರು ಎಂದು ಹೇಳುವ ಹಂಗಿಗೆ ಅವರು ಒಳಗಾಗುತ್ತಾರೆ. ಇದು, “ಕಡೇ ಆದಾಮ”ನಾಗಿರುವ ಯೇಸು ಕ್ರಿಸ್ತನು ಮಾನವಕುಲವನ್ನು ಪಾಪದ ವಶದಿಂದ ವಿಮೋಚಿಸಿದನು ಎಂಬುದನ್ನು ಅವರು ಅಲ್ಲಗಳೆಯುವಂತೆ ಮಾಡುತ್ತದೆ. ಆದರೆ, ಯೇಸು ಹಾಗೂ ಅವನ ಶಿಷ್ಯರು ಇಂತಹ ಇಕ್ಕಟ್ಟನ್ನು ಎದುರಿಸಲಿಲ್ಲ. ಏಕೆಂದರೆ, ಆದಿಕಾಂಡದ ವೃತ್ತಾಂತವು ವಾಸ್ತವವಾಗಿ ಸಂಭವಿಸಿದ ಘಟನೆಯಾಗಿದೆ ಎಂಬುದನ್ನು ಅವರು ನಂಬಿದರು.—1 ಕೊರಿಂಥ 15:22, 45; ಆದಿಕಾಂಡ 1:27; 2:24; ಮತ್ತಾಯ 19:4, 5; ರೋಮಾಪುರ 5:12-19.