ಎಲ್ಲ ಸತ್ಯ ಕ್ರೈಸ್ತರು ಶುಭ ವಾರ್ತೆಯನ್ನು ಪ್ರಕಟಿಸುತ್ತಾರೆ
“ಯೆಹೋವನಿಗೆ ಹಾಡಿರಿ; ಆತನ ನಾಮವನ್ನು ಕೊಂಡಾಡಿರಿ. ಆತನ ರಕ್ಷಣೆಯನ್ನು ಪ್ರತಿನಿತ್ಯವೂ ಸಾರಿಹೇಳಿರಿ.”—ಕೀರ್ತನೆ 96:2.
1. ಜನರು ಯಾವ ಶುಭ ವಾರ್ತೆಯನ್ನು ಕೇಳಿಸಿಕೊಳ್ಳಬೇಕಾಗಿದೆ, ಮತ್ತು ಅಂಥ ವಾರ್ತೆಯನ್ನು ಹಬ್ಬಿಸುವುದರಲ್ಲಿ ಯೆಹೋವನ ಸಾಕ್ಷಿಗಳು ಹೇಗೆ ಆದರ್ಶಪ್ರಾಯರಾಗಿದ್ದಾರೆ?
ಪ್ರತಿದಿನವೂ ವಿಪತ್ತುಗಳು ಸಂಭವಿಸುತ್ತಿರುವಂಥ ಒಂದು ಲೋಕದಲ್ಲಿ ನಾವು ಇಂದು ಜೀವಿಸುತ್ತಿದ್ದೇವೆ. ಆದರೆ ಬೈಬಲಿಗನುಸಾರ, ತೀರ ಬೇಗನೆ ಯುದ್ಧ, ಪಾತಕ, ಹಸಿವು, ಮತ್ತು ದಬ್ಬಾಳಿಕೆಯು ಕೊನೆಗೊಳ್ಳುವುದೆಂಬ ಸಂಗತಿಯನ್ನು ತಿಳಿದು ನಮಗೆ ನಿಜವಾಗಿಯೂ ಸಾಂತ್ವನ ಸಿಗುತ್ತದೆ. (ಕೀರ್ತನೆ 46:9; 72:3, 7, 8, 12, 16) ಖಂಡಿತವಾಗಿಯೂ ಇದು ಎಲ್ಲರ ಕಿವಿಗೂ ಬೀಳಬೇಕಾದ ಶುಭ ವಾರ್ತೆಯಲ್ಲವೊ? ಯೆಹೋವನ ಸಾಕ್ಷಿಗಳಿಗೆ ಹಾಗೆಯೇ ಅನಿಸುತ್ತದೆ. ಆದುದರಿಂದ, ಎಲ್ಲಾ ಸ್ಥಳಗಳಲ್ಲೂ ಅವರು “ಒಳ್ಳೆಯ ಶುಭವರ್ತಮಾನವನ್ನು” ಪ್ರಕಟಿಸುವವರೆಂದು ಪ್ರಸಿದ್ಧರಾಗಿದ್ದಾರೆ. (ಯೆಶಾಯ 52:7) ಈ ಶುಭ ವಾರ್ತೆಯನ್ನು ಇತರರಿಗೆ ತಿಳಿಸಬೇಕೆಂಬ ತಮ್ಮ ದೃಢಸಂಕಲ್ಪದಿಂದಾಗಿ ಅನೇಕ ಸಾಕ್ಷಿಗಳು ಹಿಂಸೆಯನ್ನು ಅನುಭವಿಸಿದ್ದಾರೆಂಬುದು ನಿಜ. ಆದರೆ ಮೂಲತಃ ಅವರ ಮನಸ್ಸಿನಲ್ಲಿ ಜನರ ಹಿತಚಿಂತನೆಯಿದೆ. ಈ ಕಾರಣದಿಂದ, ಅವರು ತಮ್ಮ ಕೆಲಸವನ್ನು ಹುರುಪಿನಿಂದ ಮತ್ತು ಪಟ್ಟುಹಿಡಿದು ಮುಂದುವರಿಸುವುದರಲ್ಲಿ ಎಂಥ ಒಳ್ಳೇ ದಾಖಲೆಯನ್ನು ಮಾಡಿದ್ದಾರೆ!
2. ಯೆಹೋವನ ಸಾಕ್ಷಿಗಳ ಹುರುಪಿಗೆ ಒಂದು ಕಾರಣವೇನು?
2 ಇಂದು ಯೆಹೋವನ ಸಾಕ್ಷಿಗಳಿಗಿರುವ ಹುರುಪು, ಪ್ರಥಮ ಶತಮಾನದಲ್ಲಿದ್ದ ಕ್ರೈಸ್ತರ ಹುರುಪಿನಂತೆಯೇ ಇದೆ. ಅವರ ಬಗ್ಗೆ, ಲಾಸ್ಸೇರ್ವಾಟೋರೇ ರೋಮಾನೋ ಎಂಬ ರೋಮನ್ ಕ್ಯಾಥೊಲಿಕ್ ವಾರ್ತಾಪತ್ರಿಕೆಯು ಸರಿಯಾಗಿಯೇ ಹೀಗಂದಿತ್ತು: “ಆರಂಭದ ಕ್ರೈಸ್ತರಿಗೆ, ತಾವು ದೀಕ್ಷಾಸ್ನಾನವನ್ನು ಪಡೆದ ಕೂಡಲೇ, ಶುಭ ಸಮಾಚಾರವನ್ನು ಹಬ್ಬಿಸುವುದು ತಮ್ಮ ಕರ್ತವ್ಯ ಎಂದನಿಸಿತು. ಬಾಯಿಮಾತಿನ ಮುಖಾಂತರ ಈ ಸೇವಕರು ಶುಭ ಸಮಾಚಾರವನ್ನು ಇತರರಿಗೆ ದಾಟಿಸಿದರು.” ಆ ಆರಂಭದ ಕ್ರೈಸ್ತರಂತೆ ಯೆಹೋವನ ಸಾಕ್ಷಿಗಳಿಗೆ ಏಕೆ ತುಂಬ ಹುರುಪಿದೆ? ಮೊದಲನೆಯ ಕಾರಣವೇನೆಂದರೆ, ಅವರು ಪ್ರಕಟಪಡಿಸುವಂಥ ಒಳ್ಳೇ ಸುದ್ದಿ ಇಲ್ಲವೇ ಶುಭ ವಾರ್ತೆಯು, ಸ್ವತಃ ಯೆಹೋವ ದೇವರಿಂದ ಬಂದದ್ದಾಗಿದೆ. ಹುರುಪನ್ನು ತೋರಿಸಲಿಕ್ಕಾಗಿ ಇದಕ್ಕಿಂತ ಹೆಚ್ಚಿನ ಕಾರಣವು ಬೇಕೇ? ಶುಭ ವಾರ್ತೆಯನ್ನು ಪ್ರಕಟಿಸುವ ಅವರ ಕೆಲಸವು, “ಯೆಹೋವನಿಗೆ ಹಾಡಿರಿ; ಆತನ ನಾಮವನ್ನು ಕೊಂಡಾಡಿರಿ. ಆತನ ರಕ್ಷಣೆಯನ್ನು ಪ್ರತಿನಿತ್ಯವೂ ಸಾರಿಹೇಳಿರಿ” ಎಂಬ ಕೀರ್ತನೆಗಾರನ ಮಾತುಗಳಿಗೆ ಅವರು ತೋರಿಸುವ ಪ್ರತಿಕ್ರಿಯೆಯಾಗಿದೆ.—ಕೀರ್ತನೆ 96:2.
3. (ಎ) ಯೆಹೋವನ ಸಾಕ್ಷಿಗಳು ತೋರಿಸುವ ಹುರುಪಿಗೆ ಎರಡನೆಯ ಕಾರಣವೇನು? (ಬಿ) ದೇವರ ‘ರಕ್ಷಣೆಯಲ್ಲಿ’ ಏನೆಲ್ಲಾ ಒಳಗೂಡಿದೆ?
3 ಕೀರ್ತನೆಗಾರನ ಆ ಮಾತುಗಳು, ಯೆಹೋವನ ಸಾಕ್ಷಿಗಳು ತೋರಿಸುವ ಹುರುಪಿಗಾಗಿರುವ ಇನ್ನೊಂದು ಕಾರಣವನ್ನು ಜ್ಞಾಪಕಕ್ಕೆ ತರುತ್ತವೆ. ಅವರ ಸಂದೇಶವು, ರಕ್ಷಣೆಯ ಸಂದೇಶವಾಗಿದೆ. ಕೆಲವು ವ್ಯಕ್ತಿಗಳು ತಮ್ಮ ಜೊತೆ ಮಾನವರ ಪರಿಸ್ಥಿತಿಯನ್ನು ಸುಧಾರಿಸಲಿಕ್ಕಾಗಿ, ವೈದ್ಯಕೀಯ, ಸಾಮಾಜಿಕ, ಆರ್ಥಿಕ ಅಥವಾ ಇನ್ನಿತರ ಕ್ಷೇತ್ರಗಳಲ್ಲಿ ಕೆಲಸಮಾಡುತ್ತಾರೆ. ಅಂತಹ ಪ್ರಯತ್ನಗಳು ಶ್ಲಾಘನೀಯವೇ. ಆದರೆ ಒಬ್ಬ ಮನುಷ್ಯನು ಇನ್ನೊಬ್ಬ ಮನುಷ್ಯನಿಗೆ ಏನನ್ನು ಮಾಡಿದರೂ, “[ದೇವರ] ರಕ್ಷಣೆ”ಗೆ ಹೋಲಿಸುವಾಗ ಅದು ಪರಿಮಿತಿಯುಳ್ಳದ್ದಾಗಿದೆ. ಯೇಸು ಕ್ರಿಸ್ತನ ಮೂಲಕ ಯೆಹೋವನು ದೀನ ಜನರನ್ನು ಪಾಪ, ರೋಗ, ಮತ್ತು ಮರಣದಿಂದ ರಕ್ಷಿಸುವನು. ಅದರಿಂದ ಪ್ರಯೋಜನವನ್ನು ಪಡೆಯುವವರು ಸದಾಕಾಲ ಜೀವಿಸುವರು! (ಯೋಹಾನ 3:16, 36; ಪ್ರಕಟನೆ 21:3, 4) ಇಂದು ಕ್ರೈಸ್ತರು ಈ ಮಾತುಗಳಿಗೆ ಪ್ರತಿಕ್ರಿಯೆಯನ್ನು ತೋರಿಸುತ್ತಾರೆ: “ಜನಾಂಗಗಳಲ್ಲಿ [ದೇವರ] ಘನತೆಯನ್ನೂ ಎಲ್ಲಾ ಜನರಲ್ಲಿ ಆತನ ಅದ್ಭುತಕೃತ್ಯಗಳನ್ನೂ ಪ್ರಸಿದ್ಧಪಡಿಸಿರಿ. ಯೆಹೋವನು ದೊಡ್ಡವನೂ ಬಹಳವಾಗಿ ಸ್ತುತ್ಯನೂ ಆಗಿದ್ದಾನೆ. ಎಲ್ಲಾ ದೇವರುಗಳಲ್ಲಿ ಆತನೇ ಭಯಂಕರನು.” ಹೀಗೆ ಅವರು ವರ್ಣಿಸುವ ‘ಅದ್ಭುತಕೃತ್ಯಗಳಲ್ಲಿ’ ಆ ರಕ್ಷಣೆಯು ಒಂದು ವಿಷಯವಾಗಿದೆ.—ಕೀರ್ತನೆ 96:3, 4.
ಯಜಮಾನನ ಮಾದರಿ
4-6. (ಎ) ಯೆಹೋವನ ಸಾಕ್ಷಿಗಳು ಹುರುಪುಳ್ಳವರಾಗಿರುವುದಕ್ಕೆ ಮೂರನೆಯ ಕಾರಣವೇನು? (ಬಿ) ಸುವಾರ್ತೆಯನ್ನು ಸಾರುವ ಕೆಲಸಕ್ಕಾಗಿ ಯೇಸು ಹೇಗೆ ಹುರುಪನ್ನು ತೋರಿಸಿದನು?
4 ಯೆಹೋವನ ಸಾಕ್ಷಿಗಳು ಹುರುಪಿನಿಂದಿರಲು ಮೂರನೆಯ ಕಾರಣವೂ ಇದೆ. ಅವರು ಯೇಸು ಕ್ರಿಸ್ತನ ಮಾದರಿಯನ್ನು ಅನುಸರಿಸುತ್ತಾರೆ. (1 ಪೇತ್ರ 2:21) ಆ ಪರಿಪೂರ್ಣ ಮನುಷ್ಯನು, ‘ಬಡವರಿಗೆ [“ದೀನರಿಗೆ,” NW] ಶುಭವರ್ತಮಾನವನ್ನು ಸಾರುವ’ ನೇಮಕವನ್ನು ಮನಃಪೂರ್ವಕವಾಗಿ ಸ್ವೀಕರಿಸಿದನು. (ಯೆಶಾಯ 61:1; ಲೂಕ 4:17-21) ಹೀಗೆ, ಅವನೊಬ್ಬ ಸೌವಾರ್ತಿಕನಾದನು, ಅಂದರೆ ಶುಭ ವಾರ್ತೆಯನ್ನು ಪ್ರಕಟಿಸುವವನಾದನು. ಅವನು “ಪರಲೋಕರಾಜ್ಯದ ಸುವಾರ್ತೆಯನ್ನು ಸಾರಿಹೇಳುತ್ತಾ” ಗಲಿಲಾಯ ಮತ್ತು ಯೂದಾಯದಾದ್ಯಂತ ಪ್ರಯಾಣಿಸಿದನು. (ಮತ್ತಾಯ 4:23) ಮತ್ತು ಅನೇಕರು ಈ ಸುವಾರ್ತೆಗೆ ಪ್ರತಿಕ್ರಿಯೆಯನ್ನು ತೋರಿಸುವರೆಂದು ಅವನಿಗೆ ತಿಳಿದಿತ್ತು, ಯಾಕೆಂದರೆ ಅವನು ತನ್ನ ಶಿಷ್ಯರಿಗೆ ಹೇಳಿದ್ದು: “ಬೆಳೆಯು ಬಹಳ, ಕೆಲಸದವರು ಸ್ವಲ್ಪ; ಆದದರಿಂದ ಬೆಳೆಯ ಯಜಮಾನನನ್ನು—ನಿನ್ನ ಬೆಳೆಗೆ ಕೆಲಸದವರನ್ನು ಕಳುಹಿಸಬೇಕೆಂದು ಬೇಡಿಕೊಳ್ಳಿರಿ.”—ಮತ್ತಾಯ 9:37, 38.
5 ತನ್ನ ಸ್ವಂತ ಪ್ರಾರ್ಥನೆಗೆ ಹೊಂದಿಕೆಯಲ್ಲಿ, ಇತರರೂ ಶುಭ ವಾರ್ತೆಯನ್ನು ಪ್ರಕಟಿಸುವವರಾಗುವಂತೆ ಯೇಸು ತರಬೇತಿ ನೀಡಿದನು. ಸಕಾಲದಲ್ಲಿ, ಅವನು ತನ್ನ ಶಿಷ್ಯರನ್ನೇ ಕಳುಹಿಸುತ್ತಾ ಅವರಿಗೆ ಹೇಳಿದ್ದು: “ಪರಲೋಕರಾಜ್ಯವು ಸಮೀಪವಾಯಿತೆಂದು ಸಾರಿಹೇಳುತ್ತಾ ಹೋಗಿರಿ.” ಅವರ ದಿನದಲ್ಲಿದ್ದ ಸಾಮಾಜಿಕ ಪಿಡುಗುಗಳನ್ನು ತೆಗೆದುಹಾಕುವ ಕಾರ್ಯಕ್ರಮಗಳನ್ನು ಆರಂಭಿಸುವುದು ಹೆಚ್ಚು ವ್ಯಾವಹಾರಿಕವಾಗಿರುತ್ತಿತ್ತೊ? ಅಥವಾ ಆ ಸಮಯದಲ್ಲಿ ಎಲ್ಲೆಡೆಯೂ ಹಬ್ಬಿದ್ದ ಭ್ರಷ್ಟಾಚಾರವನ್ನು ತೆಗೆದುಹಾಕಲು ಅವರು ರಾಜಕೀಯದಲ್ಲಿ ಪಾಲ್ಗೊಳ್ಳಬೇಕಿತ್ತೊ? ಇಲ್ಲ. ಅದಕ್ಕೆ ಬದಲಾಗಿ, ‘ಸಾರಿಹೇಳುತ್ತಾ ಹೋಗಿರಿ’ ಎಂದು ಅವನು ತನ್ನ ಶಿಷ್ಯರಿಗೆ ಹೇಳಿದಾಗ, ಎಲ್ಲ ಕ್ರೈಸ್ತ ಪ್ರಚಾರಕರು ಏನು ಮಾಡಬೇಕೆಂಬ ಮಟ್ಟವನ್ನು ಯೇಸು ಸ್ಥಾಪಿಸಿದನು.—ಮತ್ತಾಯ 10:5-7.
6 ತದನಂತರ, “ದೇವರ ರಾಜ್ಯವು ನಿಮ್ಮ ಸಮೀಪಕ್ಕೆ ಬಂದದೆ” ಎಂದು ಪ್ರಕಟಿಸುವಂತೆ ಯೇಸು ಶಿಷ್ಯರ ಇನ್ನೊಂದು ಗುಂಪನ್ನು ಕಳುಹಿಸಿದನು. ತಮ್ಮ ಸಾರುವ ಕಾರ್ಯದಿಂದ ಸಿಕ್ಕಿದ ಯಶಸ್ಸಿನ ಬಗ್ಗೆ ತಿಳಿಸಲು ಅವರು ಹಿಂದಿರುಗಿ ಬಂದಾಗ, ಯೇಸುವಿಗೆ ಅತ್ಯಾನಂದವಾಯಿತು. ಅವನು ಪ್ರಾರ್ಥಿಸಿದ್ದು: “ತಂದೆಯೇ, ಪರಲೋಕ ಭೂಲೋಕಗಳ ಒಡೆಯನೇ, ನೀನು ಜ್ಞಾನಿಗಳಿಗೂ ಬುದ್ಧಿವಂತರಿಗೂ ಈ ಮಾತುಗಳನ್ನು ಮರೆಮಾಡಿ ಬಾಲಕರಿಗೆ ಪ್ರಕಟಮಾಡಿದ್ದೀ ಎಂದು ನಿನ್ನನ್ನು ಕೊಂಡಾಡುತ್ತೇನೆ.” (ಲೂಕ 10:1, 8, 9, 21) ಆ ಜನಾಂಗದ ಅತ್ಯಂತ ವಿದ್ಯಾವಂತ ಧಾರ್ಮಿಕ ಮುಖಂಡರಿಗೆ ಹೋಲಿಸುವಾಗ, ಈ ಹಿಂದೆ ಕಷ್ಟಪಟ್ಟು ಕೆಲಸಮಾಡುತ್ತಿದ್ದ ಬೆಸ್ತರು, ರೈತರು ಮುಂತಾದ ಕಸುಬಿನವರಾಗಿದ್ದ ಯೇಸುವಿನ ಶಿಷ್ಯರು ಮಕ್ಕಳಂತಿದ್ದರು. ಆದರೆ ಶಿಷ್ಯರು ಎಲ್ಲದ್ದಕ್ಕಿಂತಲೂ ಅತ್ಯುತ್ತಮವಾದ ಶುಭ ವಾರ್ತೆಯನ್ನು ಘೋಷಿಸಲು ತರಬೇತಿಯನ್ನು ಹೊಂದಿದರು.
7. ಯೇಸುವಿನ ಸ್ವರ್ಗಾರೋಹಣದ ನಂತರ, ಅವನ ಹಿಂಬಾಲಕರು ಮೊತ್ತಮೊದಲು ಯಾರಿಗೆ ಶುಭ ವಾರ್ತೆಯನ್ನು ಪ್ರಕಟಿಸಿದರು?
7 ಯೇಸುವಿನ ಸ್ವರ್ಗಾರೋಹಣದ ನಂತರ, ಅವನ ಹಿಂಬಾಲಕರು ರಕ್ಷಣೆಯ ಕುರಿತಾದ ಶುಭ ವಾರ್ತೆಯನ್ನು ಹಬ್ಬಿಸುವುದನ್ನು ಮುಂದುವರಿಸಿದರು. (ಅ. ಕೃತ್ಯಗಳು 2:21, 38-40) ಅವರು ಮೊತ್ತಮೊದಲು ಯಾರಿಗೆ ಸಾರಿದರು? ಅವರು ದೇವರ ಬಗ್ಗೆ ಅರಿಯದ ಜನಾಂಗಗಳ ಬಳಿ ಹೋದರೊ? ಇಲ್ಲ, ಅವರ ಮೊದಲ ಕ್ಷೇತ್ರವು ಇಸ್ರಾಯೇಲ್ ಜನಾಂಗವಾಗಿತ್ತು. ಇವರು 1,500ಕ್ಕಿಂತಲೂ ಹೆಚ್ಚು ವರ್ಷಗಳಿಂದ ಯೆಹೋವನ ಬಗ್ಗೆ ತಿಳಿದಿದ್ದ ಜನರಾಗಿದ್ದರು. ಎಲ್ಲಿ ಯೆಹೋವನನ್ನು ಈಗಾಗಲೇ ಆರಾಧಿಸಲಾಗುತ್ತಿತ್ತೊ ಆ ಜನಾಂಗದಲ್ಲೇ ಸಾರುವ ಹಕ್ಕು ಈ ಶಿಷ್ಯರಿಗಿತ್ತೊ? ಹೌದು. ಯಾಕೆಂದರೆ ಯೇಸು ಅವರಿಗೆ ಹೀಗಂದಿದ್ದನು: “ಯೆರೂಸಲೇಮಿನಲ್ಲಿಯೂ ಎಲ್ಲಾ ಯೂದಾಯ ಸಮಾರ್ಯ ಸೀಮೆಗಳಲ್ಲಿಯೂ ಭೂಲೋಕದ ಕಟ್ಟಕಡೆಯ ವರೆಗೂ ನನಗೆ ಸಾಕ್ಷಿಗಳಾಗಿ”ರುವಿರಿ. (ಅ. ಕೃತ್ಯಗಳು 1:8) ಬೇರೆ ಯಾವುದೇ ಜನಾಂಗದಂತೆಯೇ ಇಸ್ರಾಯೇಲ್ ಜನಾಂಗಕ್ಕೂ ಆ ಶುಭ ವಾರ್ತೆಯನ್ನು ಕೇಳಿಸಿಕೊಳ್ಳುವ ಅಗತ್ಯವಿತ್ತು.
8. ಯೆಹೋವನ ಸಾಕ್ಷಿಗಳು ಇಂದು ಯೇಸುವಿನ ಪ್ರಥಮ ಶತಮಾನದ ಹಿಂಬಾಲಕರನ್ನು ಹೇಗೆ ಅನುಕರಿಸುತ್ತಾರೆ?
8 ತದ್ರೀತಿಯಲ್ಲಿ, ಇಂದು ಯೆಹೋವನ ಸಾಕ್ಷಿಗಳು ಇಡೀ ಲೋಕದಲ್ಲಿ ಶುಭ ವಾರ್ತೆಯನ್ನು ಪ್ರಕಟಿಸುತ್ತಾರೆ. ಯೋಹಾನನು ನೋಡಿದಂಥ, ‘ಆಕಾಶಮಧ್ಯದಲ್ಲಿ ಹಾರಿಹೋಗುತ್ತಾ, ಭೂನಿವಾಸಿಗಳಾಗಿರುವ ಸಕಲ ಜನಾಂಗ ಕುಲ ಪ್ರಜೆಗಳವರಿಗೂ ಸಕಲ ಭಾಷೆಗಳನ್ನಾಡುವವರಿಗೂ ಸಾರಿಹೇಳುವದಕ್ಕೆ ನಿತ್ಯವಾದ ಶುಭವರ್ತಮಾನವನ್ನು’ ಹೊಂದಿದ್ದ ದೇವದೂತನೊಂದಿಗೆ ಅವರು ಸಹಕರಿಸುತ್ತಾರೆ. (ಪ್ರಕಟನೆ 14:6) ಇಸವಿ 2001ರಲ್ಲಿ, ಅವರು 235 ದೇಶಗಳಲ್ಲಿ ಮತ್ತು ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದರು. ಇವುಗಳಲ್ಲಿ, ಕ್ರೈಸ್ತ ದೇಶಗಳೆಂದು ಸಾಮಾನ್ಯವಾಗಿ ನೆನಸಲಾಗುವ ದೇಶಗಳೂ ಸೇರಿವೆ. ಕ್ರೈಸ್ತಪ್ರಪಂಚವು ಈಗಾಗಲೇ ತನ್ನ ಚರ್ಚುಗಳನ್ನು ಸ್ಥಾಪಿಸಿರುವ ಸ್ಥಳಗಳಲ್ಲಿ ಯೆಹೋವನ ಸಾಕ್ಷಿಗಳು ಪ್ರಕಟಿಸುವುದು ತಪ್ಪೋ? ಹೌದೆಂದು ಕೆಲವರು ಹೇಳುತ್ತಾರೆ. ಶುಭ ವಾರ್ತೆಯನ್ನು ಪ್ರಕಟಿಸುವ ಸಾಕ್ಷಿಗಳ ಈ ಕಾರ್ಯವು, ತಮ್ಮ ಚರ್ಚುಗಳ ಸದಸ್ಯರನ್ನು “ಅಪಹರಿಸುತ್ತಿದೆ” ಎಂದೂ ಕೆಲವರಿಗನಿಸುತ್ತದೆ. ಆದರೆ ಯೆಹೋವನ ಸಾಕ್ಷಿಗಳು, ತನ್ನ ದಿನದಲ್ಲಿದ್ದ ನಮ್ರಭಾವದ ಯೆಹೂದ್ಯರ ಕುರಿತು ಯೇಸುವಿಗಿದ್ದ ಭಾವನೆಗಳನ್ನು ನೆನಪಿನಲ್ಲಿಡುತ್ತಾರೆ. ಆ ಯೆಹೂದ್ಯರು ಈಗಾಗಲೇ ಯಾಜಕರ ಏರ್ಪಾಡನ್ನು ಹೊಂದಿದ್ದರೂ, ಯೇಸು ಅವರಿಗೆ ಆ ಶುಭ ವಾರ್ತೆಯನ್ನು ಹೇಳಲು ಹಿಂಜರಿಯಲಿಲ್ಲ. ಯಾಕಂದರೆ ಅವನು “ಜನರ ಗುಂಪುಗಳನ್ನು ನೋಡಿ ಅವರು ಕುರುಬನಿಲ್ಲದ ಕುರಿಗಳ ಹಾಗೆ ತೊಳಲಿ ಬಳಲಿ ಹೋಗಿದ್ದಾರಲ್ಲ ಎಂದು ಅವರ ಮೇಲೆ ಕನಿಕರಪಟ್ಟನು.” (ಮತ್ತಾಯ 9:36) ಯೆಹೋವನ ಬಗ್ಗೆ ಮತ್ತು ಆತನ ರಾಜ್ಯದ ಬಗ್ಗೆ ಗೊತ್ತಿರದ ನಮ್ರ ಜನರನ್ನು ಯೆಹೋವನ ಸಾಕ್ಷಿಗಳು ಕಂಡುಕೊಳ್ಳುವಾಗ, ಯಾವುದೋ ಧರ್ಮವು ಅವರ ಮೇಲೆ ಅಧಿಕಾರವಿದೆಯೆಂದು ಹೇಳಿಕೊಂಡ ಮಾತ್ರಕ್ಕೆ, ಅವರಿಗೆ ಆ ಶುಭ ವಾರ್ತೆಯನ್ನು ಹೇಳದೇ ಇರಬೇಕೊ? ಯೇಸುವಿನ ಅಪೊಸ್ತಲರ ಮಾದರಿಯನ್ನು ಅನುಸರಿಸುತ್ತಾ, ನಾವು ಇಲ್ಲ ಎಂದು ಉತ್ತರಿಸುತ್ತೇವೆ. ಈ ಶುಭ ವಾರ್ತೆಯು ಯಾರನ್ನೂ ಬಿಡದೇ, “ಎಲ್ಲಾ ಜನಾಂಗಗಳಿಗೆ” ಸಾರಲ್ಪಡಬೇಕು.—ಮಾರ್ಕ 13:10.
ಆರಂಭದ ಕ್ರೈಸ್ತರೆಲ್ಲರೂ ಶುಭ ವಾರ್ತೆಯನ್ನು ಪ್ರಕಟಿಸುವವರಾಗಿದ್ದರು
9. ಪ್ರಥಮ ಶತಮಾನದ ಕ್ರೈಸ್ತ ಸಭೆಯಲ್ಲಿ ಯಾರೆಲ್ಲ ಶುಭ ವಾರ್ತೆಯನ್ನು ಪ್ರಕಟಿಸುವ ಕೆಲಸದಲ್ಲಿ ಪಾಲ್ಗೊಂಡರು?
9 ಪ್ರಥಮ ಶತಮಾನದಲ್ಲಿ ಯಾರೆಲ್ಲ ಈ ಸಾರುವ ಕೆಲಸದಲ್ಲಿ ಪಾಲ್ಗೊಂಡರು? ಎಲ್ಲ ಕ್ರೈಸ್ತರು ಶುಭ ವಾರ್ತೆಯನ್ನು ಪ್ರಕಟಿಸುವವರಾಗಿದ್ದರೆಂದು ವಾಸ್ತವಾಂಶಗಳು ತೋರಿಸುತ್ತವೆ. ಲೇಖಕರಾದ ಡಬ್ಲ್ಯೂ. ಎಸ್. ವಿಲ್ಯಮ್ಸ್ ಹೇಳುವುದು: “ಮೊದಲ ಚರ್ಚಿನಲ್ಲಿದ್ದ ಎಲ್ಲ ಕ್ರೈಸ್ತರು . . . ಶುಭ ಸಂದೇಶವನ್ನು ಸಾರಿದರೆಂಬುದನ್ನು ಸಾಮಾನ್ಯ ಸಾಕ್ಷ್ಯವು ತೋರಿಸುತ್ತದೆ.” ಸಾ.ಶ. 33ನೆಯ ಪಂಚಾಶತ್ತಮದಂದು ನಡೆದ ಘಟನೆಗಳ ಬಗ್ಗೆ ಬೈಬಲ್ ಹೇಳುವುದು: “ಅವರೆಲ್ಲರು [ಸ್ತ್ರೀಪುರುಷರು] ಪವಿತ್ರಾತ್ಮಭರಿತರಾಗಿ ಆ ಆತ್ಮ ತಮತಮಗೆ ನುಡಿಯುವ ಶಕ್ತಿಯನ್ನು ಕೊಡುವ ಪ್ರಕಾರ ಬೇರೆಬೇರೆ ಭಾಷೆಗಳಿಂದ ಮಾತಾಡುವದಕ್ಕೆ ಪ್ರಾರಂಭಿಸಿದರು.” ಸಾರುವವರಲ್ಲಿ, ಗಂಡು ಹೆಣ್ಣು, ಆಬಾಲವೃದ್ಧರು, ಆಳು ಒಡೆಯರು, ಹೀಗೆ ಎಲ್ಲರೂ ಸೇರಿದ್ದರು. (ಅ. ಕೃತ್ಯಗಳು 1:14; 2:1, 4, 17, 18; ಯೋವೇಲ 2:28, 29; ಗಲಾತ್ಯ 3:28) ಹಿಂಸೆಯಿಂದಾಗಿ ಅನೇಕ ಕ್ರೈಸ್ತರು ಯೆರೂಸಲೇಮನ್ನು ಬಿಟ್ಟು ಓಡಿಹೋಗುವಂತೆ ಒತ್ತಾಯಿಸಲ್ಪಟ್ಟಾಗ, “ಚದರಿಹೋದವರು ಅಲ್ಲಲ್ಲಿ ಹೋಗಿ ಸುವಾರ್ತಾ ವಾಕ್ಯವನ್ನು ಸಾರುತ್ತಿದ್ದರು.” (ಅ. ಕೃತ್ಯಗಳು 8:4) ನೇಮಿತರಾದ ಕೆಲವು ಮಂದಿ ಮಾತ್ರವಲ್ಲದೆ, “ಚದರಿಹೋದವ”ರೆಲ್ಲರೂ ಶುಭ ವಾರ್ತೆಯನ್ನು ಪ್ರಕಟಿಸಿದರು.
10. ಯೆಹೂದಿ ವ್ಯವಸ್ಥೆಯ ನಾಶನಕ್ಕೆ ಮುಂಚೆ ಯಾವ ದ್ವಿಮುಖ ನೇಮಕವನ್ನು ಪೂರೈಸಲಾಯಿತು?
10 ಆ ಆದಿ ವರ್ಷಗಳಾದ್ಯಂತ ಇದು ಸತ್ಯವಾಗಿತ್ತು. ಯೇಸು ಪ್ರವಾದಿಸಿದ್ದು: “ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು.” (ಮತ್ತಾಯ 24:14) ಪ್ರಥಮ ಶತಮಾನದಲ್ಲಿ ಆ ಮಾತುಗಳನ್ನು ನೆರವೇರಿಸುತ್ತಾ, ರೋಮನ್ ಸೈನ್ಯಗಳು ಯೆಹೂದಿ ಧಾರ್ಮಿಕ ಮತ್ತು ರಾಜಕೀಯ ವ್ಯವಸ್ಥೆಯನ್ನು ನೆಲಸಮಗೊಳಿಸುವ ಮುಂಚೆ ಆ ಶುಭ ವಾರ್ತೆಯನ್ನು ವ್ಯಾಪಕವಾಗಿ ಪ್ರಕಟಿಸಲಾಯಿತು. (ಕೊಲೊಸ್ಸೆ 1:23) ಇನ್ನೂ ಮುಂದಕ್ಕೆ, ಯೇಸುವಿನ ಹಿಂಬಾಲಕರೆಲ್ಲರೂ ಅವನ ಈ ಆಜ್ಞೆಗೆ ವಿಧೇಯರಾದರು: “ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನಮಾಡಿಸಿ ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ.” (ಮತ್ತಾಯ 28:19, 20) ಆರಂಭದ ಕ್ರೈಸ್ತರು ದೀನ ವ್ಯಕ್ತಿಗಳಿಗೆ, ಆಧುನಿಕ ದಿನದಲ್ಲಿ ಪ್ರಚಾರಮಾಡುವವರಲ್ಲಿ ಕೆಲವರು ಮಾಡುವಂತೆ ಯೇಸುವಿನಲ್ಲಿ ನಂಬಿಕೆಯಿಡಿರಿ ಎಂದು ಹೇಳುತ್ತಾ, ಅನಂತರ ಮುಂದೆ ಅವರಿಗೆ ಯಾವುದೇ ಮಾರ್ಗದರ್ಶನವನ್ನು ಕೊಡದೆ ಅವರಷ್ಟಕ್ಕೆ ಬಿಡುತ್ತಿರಲಿಲ್ಲ. ಅದರ ಬದಲಿಗೆ, ಅವರು ಯೇಸುವಿನ ಶಿಷ್ಯರಾಗುವಂತೆ ಅವರಿಗೆ ಕಲಿಸಿದರು, ಅವರನ್ನು ಸಭೆಗಳಾಗಿ ಸಂಘಟಿಸಿದರು, ಮತ್ತು ಅವರು ಇನ್ನೂ ಇತರರಿಗೆ ಶುಭ ವಾರ್ತೆಯನ್ನು ಪ್ರಕಟಿಸಿ ಶಿಷ್ಯರನ್ನಾಗಿ ಮಾಡುವಂತೆ ತರಬೇತಿ ನೀಡಿದರು. (ಅ. ಕೃತ್ಯಗಳು 14:21-23) ಇಂದು ಯೆಹೋವನ ಸಾಕ್ಷಿಗಳು ಆ ನಮೂನೆಯನ್ನೇ ಅನುಸರಿಸುತ್ತಾರೆ.
11. ಮಾನವಕುಲಕ್ಕೆ ಅತ್ಯುತ್ತಮವಾದ ಶುಭ ವಾರ್ತೆಯನ್ನು ಪ್ರಕಟಿಸುವುದರಲ್ಲಿ ಇಂದು ಯಾರು ಪಾಲ್ಗೊಳ್ಳುತ್ತಿದ್ದಾರೆ?
11 ಪ್ರಥಮ ಶತಮಾನದ ಪೌಲ, ಬಾರ್ನಬ, ಮತ್ತು ಇತರ ಕ್ರೈಸ್ತರ ಮಾದರಿಗಳನ್ನು ಅನುಸರಿಸುತ್ತಾ, ಅನೇಕ ಯೆಹೋವನ ಸಾಕ್ಷಿಗಳು ಬೇರೆ ದೇಶಗಳಿಗೆ ಹೋಗಿ ಅಲ್ಲಿ ಶುಭ ವಾರ್ತೆಯನ್ನು ಪ್ರಕಟಿಸಲಾರಂಭಿಸಿದ್ದಾರೆ. ಅವರ ಕೆಲಸವು ನಿಜವಾಗಿಯೂ ಉಪಯುಕ್ತವಾಗಿದೆ, ಏಕೆಂದರೆ ಅವರು ಅಲ್ಲಿ ರಾಜಕೀಯದಲ್ಲಿ ಒಳಗೂಡಿಲ್ಲ ಇಲ್ಲವೆ, ಶುಭ ವಾರ್ತೆಯನ್ನು ಪ್ರಕಟಿಸುವ ತಮ್ಮ ನೇಮಕದಿಂದ ವಿಮುಖರಾಗಿಲ್ಲ. ‘ಸಾರಿಹೇಳುತ್ತಾ ಹೋಗಿರಿ’ ಎಂಬ ಯೇಸುವಿನ ಆಜ್ಞೆಯನ್ನು ಅವರು ಪಾಲಿಸಿದ್ದಾರೆ ಅಷ್ಟೆ. ಆದರೆ ಯೆಹೋವನ ಸಾಕ್ಷಿಗಳಲ್ಲಿ ಹೆಚ್ಚಿನವರು ಬೇರೆ ದೇಶಗಳಿಗೆ ಹೋಗಿ ಪ್ರಕಟಿಸುತ್ತಿಲ್ಲ. ಅದರ ಬದಲು ಅವರಲ್ಲಿ ಹೆಚ್ಚಿನವರು ತಮ್ಮ ಹೊಟ್ಟೆಪಾಡಿಗಾಗಿ ದುಡಿಯುತ್ತಿದ್ದಾರೆ, ಮತ್ತು ಇನ್ನಿತರರು ಶಾಲೆಗೆ ಹೋಗುತ್ತಿದ್ದಾರೆ. ಕೆಲವರು ಕುಟುಂಬಸ್ಥರಾಗಿದ್ದು, ಮಕ್ಕಳನ್ನು ಬೆಳೆಸುತ್ತಿದ್ದಾರೆ. ಆದರೆ ಎಲ್ಲ ಸಾಕ್ಷಿಗಳು, ತಾವು ಕಲಿತಂಥ ಶುಭ ವಾರ್ತೆಯನ್ನು ಬೇರೆಯವರೊಂದಿಗೆ ಹಂಚಿಕೊಳ್ಳುತ್ತಾರೆ. ಎಳೆಯರು, ವೃದ್ಧರು, ಗಂಡು, ಹೆಣ್ಣು ಎಂಬ ಭೇದವಿಲ್ಲದೆ, ಬೈಬಲಿನ ಈ ಬುದ್ಧಿವಾದಕ್ಕೆ ಅವರು ಸಂತೋಷದಿಂದ ಪ್ರತಿಕ್ರಿಯೆ ತೋರಿಸುತ್ತಾರೆ: “ದೇವರ ವಾಕ್ಯವನ್ನು ಸಾರು, ಅನುಕೂಲವಾದ ಕಾಲದಲ್ಲಿಯೂ ಅನುಕೂಲವಿಲ್ಲದ ಕಾಲದಲ್ಲಿಯೂ ಅದರಲ್ಲಿ ಆಸಕ್ತನಾಗಿರು.” (2 ತಿಮೊಥೆಯ 4:2) ಇವರಿಗಿಂತ ಮುಂಚೆ ಪ್ರಥಮ ಶತಮಾನದಲ್ಲಿ ಶುಭ ವಾರ್ತೆಯನ್ನು ಪ್ರಕಟಿಸುತ್ತಿದ್ದವರಂತೆ, ಇವರು ಸಹ ‘ಪ್ರತಿದಿನ ಎಡಬಿಡದೆ ಕ್ರಿಸ್ತನಾದ ಯೇಸುವಿನ ವಿಷಯವಾದ ಶುಭ ವರ್ತಮಾನವನ್ನು ಸಾರುತ್ತಾ ಇದ್ದಾರೆ.’ (ಅ. ಕೃತ್ಯಗಳು 5:42) ಮಾನವಜಾತಿಗೆ ಅತ್ಯುತ್ತಮವಾಗಿರುವ ಶುಭ ವಾರ್ತೆಯನ್ನು ಅವರು ಪ್ರಕಟಿಸುತ್ತಿದ್ದಾರೆ.
ಪ್ರಚಾರವೊ, ಮತಾಂತರಗೊಳಿಸುವಿಕೆಯೊ?
12. ಹೆಚ್ಚಿನವರಿಗೆ ಮತಾಂತರಮಾಡುವಿಕೆಯ ಕುರಿತಾಗಿ ಯಾವ ಅಭಿಪ್ರಾಯವಿದೆ?
12 ಇಂದಿನ ದಿನಗಳಲ್ಲಿ, ಮತಾಂತರಮಾಡುವುದು ಹಾನಿಕರವೆಂದು ಕೆಲವರು ಹೇಳುತ್ತಾರೆ. ಚರ್ಚುಗಳ ಜಾಗತಿಕ ಸಮಾಲೋಚನಾ ಸಮಿತಿಯಿಂದ ಪ್ರಕಾಶಿಸಲ್ಪಟ್ಟಿರುವ ಒಂದು ಡಾಕ್ಯುಮೆಂಟ್, “ಮತಾಂತರ ಮಾಡುವ ಪಾಪ”ದ ಕುರಿತಾಗಿಯೂ ಮಾತಾಡುತ್ತದೆ. ಏಕೆ? ಕ್ಯಾಥೊಲಿಕ್ ವರ್ಲ್ಡ್ ರಿಪೋರ್ಟ್ ತಿಳಿಸುವುದು: “ಆರ್ತೊಡಾಕ್ಸ್ ಚರ್ಚಿನಿಂದ ಬರುತ್ತಿದ್ದ ದೂರುಗಳ ಸತತವಾದ ಪ್ರವಾಹದಿಂದಾಗಿ, ಜನರನ್ನು ಮತಾಂತರಮಾಡುವುದಕ್ಕೆ ಬಲವಂತದ ಮತಾಂತರಿಸುವಿಕೆಯ ಅರ್ಥ ಬಂದಿದೆ.”
13. ಧರ್ಮವನ್ನು ಬದಲಾಯಿಸುವುದು ಹಾನಿಕರವಾಗಿ ಪರಿಣಮಿಸಿರುವ ಕೆಲವು ಉದಾಹರಣೆಗಳು ಯಾವುವು?
13 ಜನರನ್ನು ಮತಾಂತರಗೊಳಿಸುವುದರಲ್ಲಿ ಏನಾದರೂ ತಪ್ಪಿದೆಯೊ? ಇರಬಲ್ಲದು. ಶಾಸ್ತ್ರಿಗಳೂ ಫರಿಸಾಯರೂ ಜನರನ್ನು ತಮ್ಮ ಮತಕ್ಕೆ ಸೇರಿಸಿಕೊಳ್ಳಲು ತುಂಬ ಪ್ರಯತ್ನಗಳನ್ನು ಮಾಡುತ್ತಿದ್ದರೂ, ಇದರಿಂದ ಅಂಥವರಿಗೆ ಏನೂ ಪ್ರಯೋಜನವಾಗುವುದಿಲ್ಲವೆಂದು ಯೇಸು ಹೇಳಿದನು. (ಮತ್ತಾಯ 23:15) ಖಂಡಿತವಾಗಿಯೂ “ಬಲವಂತದಿಂದ ಮತಾಂತರಗೊಳಿಸುವುದು” ತಪ್ಪಾಗಿದೆ. ಇತಿಹಾಸಗಾರ ಜೋಸೀಫಸನಿಗನುಸಾರ, ಮಕಬೀ ಗುಂಪಿನವನಾಗಿದ್ದ ಜಾನ್ ಹರ್ಕೇನಸ್ ಎಂಬವನು ಇದೂಮಾಯದವರನ್ನು ಜಯಿಸಿದ ನಂತರ, “ಅವರು ಸುನ್ನತಿಮಾಡಿಸಿಕೊಂಡು, ಯೆಹೂದ್ಯರ ನಿಯಮಗಳನ್ನು ಪಾಲಿಸಲು ಸಿದ್ಧರಾಗಿದ್ದರೆ ಮಾತ್ರ ಅವರನ್ನು ಸ್ವದೇಶದಲ್ಲಿ ವಾಸಿಸುವಂತೆ ಅನುಮತಿಸಿದನು.” ಯೆಹೂದ್ಯರ ಆಳ್ವಿಕೆಯ ಕೆಳಗೆ ಜೀವಿಸಬೇಕಾದರೆ, ಆ ಇದೂಮಾಯದವರು ಯೆಹೂದಿ ಮತವನ್ನು ಪಾಲಿಸಬೇಕಾಗಿತ್ತು. ಸಾ.ಶ. ಎಂಟನೆಯ ಶತಮಾನದಲ್ಲಿ ಶಾರ್ಲ್ಮೇನನು ವಿಧರ್ಮಿ ಸ್ಯಾಕ್ಸನರನ್ನು ಜಯಿಸಿ, ಅವರು ಮತಾಂತರಗೊಳ್ಳುವಂತೆ ಕ್ರೂರವಾಗಿ ಬಲವಂತಪಡಿಸಿದನೆಂದು ಇತಿಹಾಸಗಾರರು ಹೇಳುತ್ತಾರೆ.a ಆದುದರಿಂದ, ಈ ಸ್ಯಾಕ್ಸನರು ಅಥವಾ ಇದೂಮಾಯದವರ ಮತಾಂತರವು ಮನಃಪೂರ್ವಕವಾಗಿ ಮಾಡಲ್ಪಟ್ಟಿರಲಿಲ್ಲ ಮತ್ತು ಶಿಶು ಯೇಸುವನ್ನು ಕೊಲ್ಲಲು ಪ್ರಯತ್ನಿಸಿದ ಇದೂಮಾಯನ್ ರಾಜ ಹೆರೋದನಿಗೆ, ಮೋಶೆಯ ಪ್ರೇರಿತ ಧರ್ಮಶಾಸ್ತ್ರದ ಕುರಿತು ನಿಜವಾದ ಗೌರವವಿರಲಿಲ್ಲ ಎಂಬುದು ಆಶ್ಚರ್ಯದ ಸಂಗತಿಯಾಗಿರುವುದಿಲ್ಲ.—ಮತ್ತಾಯ 2:1-18.
14. ಕ್ರೈಸ್ತಪ್ರಪಂಚದ ಕೆಲವು ಮಂದಿ ಮಿಷನೆರಿಗಳು, ಜನರು ಮತಾಂತರ ಹೊಂದುವಂತೆ ಒತ್ತಡಹಾಕುವುದು ಹೇಗೆ?
14 ಇಂದು ಜನರು ತಮ್ಮ ಧರ್ಮವನ್ನು ಬದಲಾಯಿಸುವಂತೆ ಒತ್ತಾಯಿಸಲಾಗುತ್ತಿದೆಯೊ? ಒಂದರ್ಥದಲ್ಲಿ ಕೆಲವರಿಗೆ ಹಾಗೆ ಮಾಡಲಾಗುತ್ತಿದೆ. ಕ್ರೈಸ್ತಪ್ರಪಂಚದ ಕೆಲವು ಮಂದಿ ಮಿಷನೆರಿಗಳು, ಮತಾಂತರವಾಗುವವರಿಗೆ ವಿದೇಶದಲ್ಲಿ ವಿದ್ಯೆಯನ್ನು ಕೊಡಿಸುವ ಆಸೆಯನ್ನು ತೋರಿಸುತ್ತಾರೆ. ಇಲ್ಲವೆ ಸ್ವಲ್ಪ ಊಟವನ್ನು ಪಡೆಯುವ ಸಲುವಾಗಿ, ಹಸಿದಿರುವ ಒಬ್ಬ ನಿರಾಶ್ರಿತನು ಚರ್ಚಿನಲ್ಲಿನ ಉಪದೇಶವನ್ನು ಕೇಳಿಸಿಕೊಳ್ಳುವಂತೆ ಅವರು ಮಾಡುತ್ತಾರೆ. ಆರ್ತೊಡಾಕ್ಸ್ ಬಿಷಪರ ಒಂದು ಅಧಿವೇಶನದಲ್ಲಿ, 1992ರಲ್ಲಿ ಹೊರಡಿಸಲಾದ ಒಂದು ಹೇಳಿಕೆಗನುಸಾರ, “ಮತಾಂತರಗೊಳಿಸುವಿಕೆಯು ಕೆಲವೊಮ್ಮೆ ಭೌತಿಕ ಆಕರ್ಷಣೆಗಳನ್ನು ತೋರಿಸುವ ಮೂಲಕ ನಡೆಯುತ್ತದೆ ಮತ್ತು ಕೆಲವೊಮ್ಮೆ ವಿಭಿನ್ನ ರೂಪದ ಹಿಂಸಾಚಾರದ ಮೂಲಕವೂ ನಡೆಯುತ್ತದೆ.”
15. ಒಬ್ಬ ವ್ಯಕ್ತಿಯು ತನ್ನ ಧರ್ಮವನ್ನು ಬದಲಾಯಿಸುವಂತೆ ಯೆಹೋವನ ಸಾಕ್ಷಿಗಳು ಒತ್ತಡ ಹೇರುತ್ತಾರೋ ಇಲ್ಲವೇ ಒತ್ತಾಯಮಾಡುತ್ತಾರೊ?
15 ಜನರು ತಮ್ಮ ಧರ್ಮವನ್ನು ಬದಲಾಯಿಸುವಂತೆ ಒತ್ತಾಯಿಸುವುದು ತಪ್ಪಾಗಿದೆ. ಯೆಹೋವನ ಸಾಕ್ಷಿಗಳು ಖಂಡಿತವಾಗಿಯೂ ಅದನ್ನು ಮಾಡುವುದಿಲ್ಲ.b ಅವರು ತಮ್ಮ ಅಭಿಪ್ರಾಯಗಳನ್ನು ಯಾರ ಮೇಲೂ ಬಲವಂತದಿಂದ ಹೇರುವುದಿಲ್ಲ. ಬದಲಿಗೆ, ಪ್ರಥಮ ಶತಮಾನದ ಕ್ರೈಸ್ತರಂತೆ ಅವರು ಎಲ್ಲರಿಗೂ ಶುಭ ವಾರ್ತೆಯನ್ನು ಪ್ರಕಟಿಸುತ್ತಾರೆ. ಸ್ವಯಂ ಇಚ್ಛೆಯಿಂದ ಪ್ರತಿಕ್ರಿಯೆಯನ್ನು ತೋರಿಸುವ ಯಾವುದೇ ವ್ಯಕ್ತಿಯನ್ನು, ಬೈಬಲ್ ಅಧ್ಯಯನದ ಮೂಲಕ ಹೆಚ್ಚಿನ ಜ್ಞಾನವನ್ನು ಪಡೆದುಕೊಳ್ಳುವಂತೆ ಆಮಂತ್ರಿಸಲಾಗುತ್ತದೆ. ಅಂಥ ಆಸಕ್ತ ಜನರು, ನಿಷ್ಕೃಷ್ಟವಾದ ಬೈಬಲ್ ಜ್ಞಾನದ ಆಧಾರದ ಮೇಲೆ ದೇವರಲ್ಲಿ ಮತ್ತು ಆತನ ಉದ್ದೇಶಗಳಲ್ಲಿ ನಂಬಿಕೆಯನ್ನಿಡಲು ಕಲಿಯುತ್ತಾರೆ. ಫಲಿತಾಂಶವಾಗಿ, ಅವರು ರಕ್ಷಣೆಗಾಗಿ ಯೆಹೋವ ಎಂಬ ದೇವರ ಹೆಸರನ್ನು ಕರೆಯುತ್ತಾರೆ. (ರೋಮಾಪುರ 10:13, 14, 17, NW) ಇಂಥವರು ಶುಭ ವಾರ್ತೆಯನ್ನು ಸ್ವೀಕರಿಸುವರೊ ಇಲ್ಲವೊ ಎಂಬುದು ಅವರ ವೈಯಕ್ತಿಕ ಆಯ್ಕೆಯಾಗಿದೆ. ಯಾರಿಗೂ ಒತ್ತಾಯವಿಲ್ಲ. ಹಾಗೆ ಮಾಡುವಲ್ಲಿ, ಮತಾಂತರಮಾಡುವಿಕೆಯು ಅರ್ಥಹೀನವಾಗುವುದು. ಯಾಕಂದರೆ ಒಬ್ಬ ವ್ಯಕ್ತಿಯು ದೇವರ ಮುಂದೆ ಸ್ವೀಕೃತನಾಗಬೇಕಾದರೆ, ಅವನು ಹೃದಯದಿಂದ ಆತನ ಆರಾಧನೆಯನ್ನು ಮಾಡಬೇಕು.—ಧರ್ಮೋಪದೇಶಕಾಂಡ 6:4, 5; 10:12.
ಆಧುನಿಕ ಸಮಯಗಳಲ್ಲಿ ಶುಭ ವಾರ್ತೆಯನ್ನು ಪ್ರಕಟಿಸುವ ಕಾರ್ಯ
16. ಆಧುನಿಕ ಸಮಯಗಳಲ್ಲಿ ಯೆಹೋವನ ಸಾಕ್ಷಿಗಳ ಶುಭ ವಾರ್ತೆಯನ್ನು ಪ್ರಕಟಿಸುವ ಕಾರ್ಯವು ಹೇಗೆ ಹೆಚ್ಚಿದೆ?
16 ಆಧುನಿಕ ಸಮಯದಲ್ಲೆಲ್ಲ, ಯೆಹೋವನ ಸಾಕ್ಷಿಗಳು ಮತ್ತಾಯ 24:14ರ ಇನ್ನೂ ಹೆಚ್ಚಿನ ನೆರವೇರಿಕೆಯಲ್ಲಿ ರಾಜ್ಯದ ಕುರಿತಾದ ಶುಭ ವಾರ್ತೆಯನ್ನು ಪ್ರಕಟಿಸಿದ್ದಾರೆ. ಅವರ ಈ ಕಾರ್ಯದಲ್ಲಿ ಒಂದು ಪ್ರಮುಖ ಆಯುಧವು, ಕಾವಲಿನಬುರುಜು ಪತ್ರಿಕೆಯೇ ಆಗಿದೆ.c 1879ರಲ್ಲಿ, ಕಾವಲಿನಬುರುಜು ಪತ್ರಿಕೆಯ ಮೊದಲ ಸಂಚಿಕೆಗಳು ಮುದ್ರಿಸಲ್ಪಟ್ಟಾಗ, ಈ ಪತ್ರಿಕೆಯು ಒಂದೇ ಭಾಷೆಯಲ್ಲಿ ಲಭ್ಯವಿದ್ದು, ಸುಮಾರು 6,000 ಪ್ರತಿಗಳ ವಿತರಣೆಯಾಗುತ್ತಿತ್ತು. 122 ವರ್ಷಗಳ ನಂತರ ಅಂದರೆ 2001ರಲ್ಲಿ, ಈ ವಿತರಣೆಯು 141 ಭಾಷೆಗಳಲ್ಲಿ 2,30,42,000 ಸಂಖ್ಯೆಯನ್ನು ತಲಪಿತು. ಆ ವೃದ್ಧಿಯ ಜೊತೆಗೆ, ಯೆಹೋವನ ಸಾಕ್ಷಿಗಳ ಸಾರುವ ಚಟುವಟಿಕೆಯು ಸಹ ಬೆಳೆದಿದೆ. 19ನೆಯ ಶತಮಾನದಲ್ಲಿ ಪ್ರತಿ ವರ್ಷ ಸಾರುವ ಕೆಲಸದಲ್ಲಿ ಕಳೆಯಲಾಗುತ್ತಿದ್ದ ಕೆಲವು ಸಾವಿರ ತಾಸುಗಳು, ಮತ್ತು 2001ನೆಯ ಇಸವಿಯಲ್ಲಿ ಸಾರುವ ಕೆಲಸದಲ್ಲಿ ವ್ಯಯಿಸಲ್ಪಟ್ಟ 116,90,82,225 ತಾಸುಗಳನ್ನು ಸ್ವಲ್ಪ ಹೋಲಿಸಿ ನೋಡಿ! ಪ್ರತಿ ತಿಂಗಳು ಸರಾಸರಿ ನಡೆಸಲಾಗಿದ್ದ 49,21,702 ಉಚಿತ ಬೈಬಲ್ ಅಧ್ಯಯನಗಳನ್ನು ಪರಿಗಣಿಸಿರಿ. ಎಷ್ಟೊಂದು ಉತ್ತಮ ಕೆಲಸವನ್ನು ಮಾಡಲಾಗಿದೆ! ಮತ್ತು ಅದನ್ನು 61,17,666 ಮಂದಿ ಸಕ್ರಿಯ ರಾಜ್ಯ ಪ್ರಚಾರಕರು ಮಾಡಿದ್ದಾರೆ.
17. (ಎ) ಯಾವ ರೀತಿಯ ಸುಳ್ಳು ದೇವರುಗಳನ್ನು ಇಂದು ಆರಾಧಿಸಲಾಗುತ್ತಿದೆ? (ಬಿ) ಒಬ್ಬನ ಭಾಷೆ, ದೇಶ, ಅಥವಾ ಸಾಮಾಜಿಕ ಅಂತಸ್ತು ಏನೇ ಆಗಿರಲಿ, ಪ್ರತಿಯೊಬ್ಬ ವ್ಯಕ್ತಿಯು ಏನನ್ನು ತಿಳಿದುಕೊಳ್ಳುವ ಅಗತ್ಯವಿದೆ?
17 ಕೀರ್ತನೆಗಾರನು ಹೇಳುವುದು: “ಜನಾಂಗಗಳ ದೇವತೆಗಳೆಲ್ಲಾ ಬೊಂಬೆಗಳೇ; ಯೆಹೋವನಾದರೋ ಗಗನಮಂಡಲವನ್ನು ನಿರ್ಮಿಸಿದವನು.” (ಕೀರ್ತನೆ 96:5) ಇಂದಿನ ಐಹಿಕ ಲೋಕದಲ್ಲಿ, ರಾಷ್ಟ್ರೀಯತಾವಾದ, ರಾಷ್ಟ್ರೀಯ ಸಂಕೇತಗಳು, ಪ್ರತಿಷ್ಠಿತ ವ್ಯಕ್ತಿಗಳು, ಭೌತಿಕ ವಸ್ತುಗಳು, ಮತ್ತು ಧನವನ್ನೇ ಆರಾಧಿಸಲಾಗುತ್ತಿದೆ. (ಮತ್ತಾಯ 6:24; ಎಫೆಸ 5:5; ಕೊಲೊಸ್ಸೆ 3:5) ಮೋಹನ್ದಾಸ್ ಕೆ. ಗಾಂಧಿ ಒಮ್ಮೆ ಹೇಳಿದ್ದು: “ಇಂದು ಯೂರೋಪ್ ಕೇವಲ ನಾಮಮಾತ್ರಕ್ಕೆ ಕ್ರೈಸ್ತವಾಗಿದೆಯೆಂಬುದು . . . ನನ್ನ ದೃಢ ಅಭಿಪ್ರಾಯವಾಗಿದೆ. ನಿಜವಾಗಿ ನೋಡುವುದಾದರೆ ಅದು ಮ್ಯಾಮನ್ [ಧನ] ಅನ್ನು ಆರಾಧಿಸುತ್ತಿದೆ.” ವಾಸ್ತವಾಂಶವೇನೆಂದರೆ, ಶುಭ ವಾರ್ತೆಯು ಎಲ್ಲ ಕಡೆಗಳಲ್ಲೂ ತಿಳಿಸಲ್ಪಡಬೇಕು. ಪ್ರತಿಯೊಬ್ಬ ವ್ಯಕ್ತಿಯ ಭಾಷೆ, ದೇಶ, ಅಥವಾ ಸಾಮಾಜಿಕ ಅಂತಸ್ತು ಏನೇ ಆಗಿರಲಿ, ಅವನು ಯೆಹೋವನ ಮತ್ತು ಆತನ ಉದ್ದೇಶಗಳ ಕುರಿತಾಗಿ ತಿಳಿದುಕೊಳ್ಳುವ ಅಗತ್ಯವಿದೆ. “ಬಲಪ್ರಭಾವಗಳು ಯೆಹೋವನವೇ ಯೆಹೋವನವೇ ಎಂದು ಹೇಳಿ ಆತನನ್ನು ಘನಪಡಿಸಿರಿ. ಯೆಹೋವನ ನಾಮಕ್ಕೆ ಯೋಗ್ಯವಾದ ಘನವನ್ನು ಸಲ್ಲಿಸಿರಿ” ಎಂಬ ಕೀರ್ತನೆಗಾರನ ಮಾತುಗಳಿಗೆ ಎಲ್ಲರೂ ಸ್ಪಂದಿಸಿದರೆ ಒಳ್ಳೇದಿತ್ತೆಂದು ನಾವು ಹಾರೈಸುತ್ತೇವೆ. (ಕೀರ್ತನೆ 96:7, 8) ಬೇರೆಯವರು ಯೆಹೋವನಿಗೆ ಯೋಗ್ಯ ರೀತಿಯಲ್ಲಿ ಘನವನ್ನು ಸಲ್ಲಿಸುವಂತೆ ಯೆಹೋವನ ಸಾಕ್ಷಿಗಳು ಅವರಿಗೆ ಯೆಹೋವನ ಬಗ್ಗೆ ಕಲಿಯಲು ಸಹಾಯಮಾಡುತ್ತಿದ್ದಾರೆ. ಮತ್ತು ಪ್ರತಿಕ್ರಿಯೆ ತೋರಿಸುವವರು ತುಂಬ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಅವರಿಗೆ ಯಾವ ಪ್ರಯೋಜನಗಳು ಸಿಗುತ್ತವೆ? ಇವುಗಳನ್ನು ಮುಂದಿನ ಲೇಖನದಲ್ಲಿ ಚರ್ಚಿಸಲಾಗುವುದು.
[ಪಾದಟಿಪ್ಪಣಿಗಳು]
a ದ ಕ್ಯಾಥೊಲಿಕ್ ಎನ್ಸೈಕ್ಲೊಪೀಡಿಯಕ್ಕನುಸಾರ, ಸುಧಾರಣೆಯ ಯುಗದಲ್ಲಿ, ಜನರ ಮೇಲೆ ಬಲವಂತದಿಂದ ಹೇರಲಾಗುತ್ತಿದ್ದ ಹೊರೆಯನ್ನು ಈ ಧ್ಯೇಯಮಂತ್ರದಲ್ಲಿ ಚೆನ್ನಾಗಿ ವ್ಯಕ್ತಪಡಿಸಲಾಯಿತು: ಕೂಯುಸ್ ರೇಗ್ಯೊ, ಇಲ್ಯುಸ್ ಎಟ್ ರೆಲಿಜ್ಯೊ (ಸಾರಾಂಶದಲ್ಲಿ ಇದರರ್ಥ: “ದೇಶವನ್ನು ಆಳುವವರೇ ಅದರ ಧರ್ಮವನ್ನೂ ನಿರ್ಣಯಿಸುವವರು.”)
b ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ನಿಯೋಗದ 2000ದ ನವೆಂಬರ್ 16ರಂದು ನಡೆದ ಕೂಟವೊಂದರಲ್ಲಿ ಭಾಗವಹಿಸಿದವನೊಬ್ಬನು, ಬಲವಂತದಿಂದ ಮತಾಂತರಮಾಡುವವರ ಮತ್ತು ಯೆಹೋವನ ಸಾಕ್ಷಿಗಳ ಚಟುವಟಿಕೆಯ ನಡುವೆ ಇರುವ ವ್ಯತ್ಯಾಸವನ್ನು ತಿಳಿಸಿದನು. ಯೆಹೋವನ ಸಾಕ್ಷಿಗಳು ಇತರರಿಗೆ ಸಾರುವಾಗ, ಒಬ್ಬ ವ್ಯಕ್ತಿಯು “ನನಗೆ ಆಸಕ್ತಿಯಿಲ್ಲ” ಎಂದು ಹೇಳಿ ಬಾಗಿಲನ್ನು ಮುಚ್ಚಿದರೆ ಸಾಕು, ಅವರು ಅಲ್ಲಿಂದ ಹೊರಟುಹೋಗುತ್ತಾರೆಂದು ಹೇಳಲಾಯಿತು.
c ಆ ಪತ್ರಿಕೆಯ ಇಡೀ ಶೀರ್ಷಿಕೆಯು, ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು ಎಂದಾಗಿದೆ.
ನೀವು ವಿವರಿಸಬಲ್ಲಿರೊ?
• ಯೆಹೋವನ ಸಾಕ್ಷಿಗಳು ಏಕೆ ಹುರುಪಿನಿಂದ ಶುಭ ವಾರ್ತೆಯನ್ನು ಪ್ರಕಟಿಸುತ್ತಾರೆ?
• ಯೆಹೋವನ ಸಾಕ್ಷಿಗಳು ಕ್ರೈಸ್ತಪ್ರಪಂಚವು ತನ್ನ ಚರ್ಚುಗಳನ್ನು ಸ್ಥಾಪಿಸಿರುವ ಸ್ಥಳಗಳಲ್ಲೂ ಏಕೆ ಸಾರುತ್ತಾರೆ?
• ಮತಾಂತರಮಾಡುವ ಇತರ ಧರ್ಮದವರಿಂದ ಯೆಹೋವನ ಸಾಕ್ಷಿಗಳು ಹೇಗೆ ಭಿನ್ನರಾಗಿದ್ದಾರೆ?
• ಯೆಹೋವನ ಸಾಕ್ಷಿಗಳ ಶುಭ ವಾರ್ತೆಯನ್ನು ಪ್ರಕಟಿಸುವ ಕಾರ್ಯವು ಆಧುನಿಕ ಸಮಯದಲ್ಲಿ ಹೇಗೆ ಬೆಳೆದಿದೆ?
[ಪುಟ 9ರಲ್ಲಿರುವ ಚಿತ್ರ]
ಯೇಸು ಹುರುಪಿನಿಂದ ಸಾರುವವನಾಗಿದ್ದನು ಮತ್ತು ಇತರರು ಅದೇ ಕೆಲಸವನ್ನು ಮಾಡುವಂತೆ ಅವರಿಗೆ ತರಬೇತಿ ನೀಡಿದನು
[ಪುಟ 10ರಲ್ಲಿರುವ ಚಿತ್ರ]
ಪ್ರಥಮ ಶತಮಾನದ ಸಭೆಯಲ್ಲಿ ಎಲ್ಲರೂ ಶುಭ ವಾರ್ತೆಯನ್ನು ಪ್ರಕಟಿಸುವ ಕಾರ್ಯದಲ್ಲಿ ಪಾಲ್ಗೊಂಡರು
[ಪುಟ 11ರಲ್ಲಿರುವ ಚಿತ್ರ]
ಜನರು ತಮ್ಮ ಧರ್ಮವನ್ನು ಬದಲಾಯಿಸುವಂತೆ ಬಲವಂತಪಡಿಸುವುದು ತಪ್ಪಾಗಿದೆ