ಅವರು ತಮ್ಮ ಶರೀರಕ್ಕೆ ನಾಟಿದ್ದ ಮುಳ್ಳುಗಳನ್ನು ಸಹಿಸಿಕೊಂಡರು
“ನನ್ನನ್ನು ಹೊಡೆಯುತ್ತಾ ಇರಲು, ಸೈತಾನನ ಒಬ್ಬ ದೂತನಂತೆ, ನನ್ನ ಶರೀರದಲ್ಲಿ ಒಂದು ಮುಳ್ಳು ನಾಟಲ್ಪಟ್ಟಿತ್ತು.”—2 ಕೊರಿಂಥ 12:7, NW.
1. ಇಂದು ಜನರ ಮುಂದಿರುವ ಕೆಲವು ಸಮಸ್ಯೆಗಳು ಯಾವುವು?
ಕೊನೆಗೊಳ್ಳದಿರುವ ಒಂದು ಸಂಕಷ್ಟದೊಂದಿಗೆ ನೀವು ಹೆಣಗಾಡುತ್ತಾ ಇದ್ದೀರೊ? ಹಾಗಿರುವಲ್ಲಿ, ನೀವು ಒಬ್ಬರೇ ಇಲ್ಲ. ‘ನಿಭಾಯಿಸಲು ಕಷ್ಟಕರವಾಗಿರುವ ಈ ಕಾಲಗಳಲ್ಲಿ’ ನಂಬಿಗಸ್ತ ಕ್ರೈಸ್ತರು ತೀವ್ರ ವಿರೋಧ, ಕೌಟುಂಬಿಕ ಸಮಸ್ಯೆಗಳು, ರೋಗ, ಹಣಕಾಸಿನ ಚಿಂತೆಗಳು, ಭಾವನಾತ್ಮಕ ವ್ಯಥೆಗಳು, ಪ್ರಿಯ ಜನರ ಸಾವು ಮತ್ತು ಇನ್ನಿತರ ಪಂಥಾಹ್ವಾನಗಳನ್ನು ಎದುರಿಸುತ್ತಾ ಇದ್ದಾರೆ. (2 ತಿಮೊಥೆಯ 3:1-5, NW) ಕೆಲವು ದೇಶಗಳಲ್ಲಿ ಬರಗಳು ಮತ್ತು ಯುದ್ಧಗಳಿಂದಾಗಿ ಅನೇಕರ ಜೀವಗಳು ಬೆದರಿಕೆಗೊಳಪಟ್ಟಿವೆ.
2, 3. ನಾವು ಎದುರಿಸುತ್ತಿರುವ ಮುಳ್ಳಿನಂಥ ಸಮಸ್ಯೆಗಳಿಂದಾಗಿ ಯಾವ ನಕಾರಾತ್ಮಕ ಮನೋಭಾವವು ಪರಿಣಮಿಸಬಹುದು, ಮತ್ತು ಅದು ಹೇಗೆ ಅಪಾಯಕಾರಿಯಾಗಬಲ್ಲದು?
2 ಇಂಥ ಸಮಸ್ಯೆಗಳು, ಒಬ್ಬನು ಸಂಪೂರ್ಣವಾಗಿ ತನ್ನ ಚಿತ್ತಸ್ಥೈರ್ಯವನ್ನು ಕಳೆದುಕೊಳ್ಳುವಂತೆ ಮಾಡಬಹುದು. ಮತ್ತು ಅನೇಕ ತೊಂದರೆಗಳು ಒಂದೇ ಸಮಯದಲ್ಲಿ ಬಂದೆರಗಿದರಂತೂ ಇದು ವಿಶೇಷವಾಗಿ ಸತ್ಯವಾಗಿರುವುದು. ಜ್ಞಾನೋಕ್ತಿ 24:10 ಏನು ಹೇಳುತ್ತದೆಂಬುದನ್ನು ಗಮನಿಸಿರಿ: “ಇಕ್ಕಟ್ಟಿನ ದಿನದಲ್ಲಿ ನೀನು ಬಳಲಿಹೋದರೆ [“ನಿರುತ್ಸಾಹಗೊಂಡರೆ,” NW] ನಿನ್ನ ಬಲವೂ ಇಕ್ಕಟ್ಟೇ.” ಹೌದು, ನಮ್ಮ ಮೇಲೆ ಬರುತ್ತಿರುವ ಸಂಕಟಗಳ ಕಾರಣದಿಂದ ನಾವು ನಿರುತ್ಸಾಹಗೊಳ್ಳುವುದಾದರೆ, ನಮಗೆ ಆ ಸಮಯದಲ್ಲಿ ತುಂಬ ಆವಶ್ಯಕವಾಗಿರುವ ಬಲವು ಕುಂದಿಹೋಗಬಹುದು ಮತ್ತು ಅಂತ್ಯದ ತನಕ ತಾಳಿಕೊಂಡು ಹೋಗುವ ನಮ್ಮ ದೃಢನಿರ್ಧಾರವು ದುರ್ಬಲಗೊಳ್ಳಬಹುದು. ಹೇಗೆ?
3 ನಿರುತ್ಸಾಹವು, ನಾವು ಸಂಗತಿಗಳ ವಾಸ್ತವಿಕತೆಯನ್ನು ನೋಡುವ ಸಾಮರ್ಥ್ಯವನ್ನು ಕಳೆದುಕೊಳ್ಳುವಂತೆ ಮಾಡಬಲ್ಲದು. ಉದಾಹರಣೆಗಾಗಿ ನಾವು ನಮ್ಮ ಕಷ್ಟಕಾರ್ಪಣ್ಯಗಳನ್ನು ದೊಡ್ಡದಾಗಿ ಮಾಡಿ, ನಮ್ಮ ಬಗ್ಗೆಯೇ ಮರುಕಪಡಲಾರಂಭಿಸಬಹುದು. “ನನಗೆ ಹೀಗಾಗುವಂತೆ ಏಕೆ ಅನುಮತಿಸುತ್ತಿದ್ದೀ ದೇವರೇ?” ಎಂದು ಸಹ ಕೆಲವರು ದೇವರಿಗೆ ಕೂಗಿ ಹೇಳುತ್ತಿರಬಹುದು. ಇಂಥ ನಕಾರಾತ್ಮಕ ಮನೋಭಾವವು ಒಬ್ಬ ವ್ಯಕ್ತಿಯ ಹೃದಯದಲ್ಲಿ ಬೇರೂರಲಾರಂಭಿಸಿದರೆ, ಅದು ಅವನ ಆನಂದ ಮತ್ತು ಭರವಸೆಯನ್ನು ಕೊರೆದುಹಾಕಬಲ್ಲದು. ದೇವರ ಒಬ್ಬ ಸೇವಕನು ಎಷ್ಟು ನಿರುತ್ಸಾಹಿತನಾಗಬಹುದೆಂದರೆ, ಅವನು ‘ನಂಬಿಕೆಯ ಶ್ರೇಷ್ಠ ಹೋರಾಟವನ್ನು’ ಮಾಡುವುದನ್ನೂ ನಿಲ್ಲಿಸಬಹುದು.—1 ತಿಮೊಥೆಯ 6:12.
4, 5. ಕೆಲವೊಂದು ವಿದ್ಯಮಾನಗಳಲ್ಲಿ ನಮ್ಮ ಮೇಲೆ ಬರುವ ಸಮಸ್ಯೆಗಳಲ್ಲಿ ಸೈತಾನನು ಹೇಗೆ ಒಳಗೂಡಿರುತ್ತಾನೆ, ಆದರೂ ನಮಗೆ ಯಾವ ಭರವಸೆಯಿರಸಾಧ್ಯವಿದೆ?
4 ಯೆಹೋವ ದೇವರು ಖಂಡಿತವಾಗಿಯೂ ನಮ್ಮ ಕಷ್ಟಗಳಿಗೆ ಕಾರಣನಾಗಿರುವುದಿಲ್ಲ. (ಯಾಕೋಬ 1:13) ನಾವು ಆತನಿಗೆ ನಂಬಿಗಸ್ತರಾಗಿರಲು ಪ್ರಯತ್ನಿಸುವ ಕಾರಣದಿಂದಲೇ ಕೆಲವು ಪರೀಕ್ಷೆಗಳು ನಮ್ಮ ಮೇಲೆ ಬರುತ್ತವೆ. ವಾಸ್ತವದಲ್ಲಿ ಯೆಹೋವನ ಸೇವೆಮಾಡುವವರೆಲ್ಲರೂ ಆತನ ಮುಖ್ಯ ಶತ್ರುವಾಗಿರುವ ಪಿಶಾಚನಾದ ಸೈತಾನನ ಗುರಿಹಲಗೆಗಳಾಗುತ್ತಾರೆ. ದುಷ್ಟನಾದ ಈ “ಪ್ರಪಂಚದ ದೇವರು,” ತನಗೆ ಉಳಿದಿರುವ ಅಲ್ಪ ಸಮಯದಲ್ಲಿ, ಯೆಹೋವನನ್ನು ಪ್ರೀತಿಸುವ ಯಾವುದೇ ವ್ಯಕ್ತಿಯು ಆತನ ಚಿತ್ತವನ್ನು ಮಾಡುವುದನ್ನು ನಿಲ್ಲಿಸುವಂತೆ ಮಾಡಲು ಪ್ರಯತ್ನಿಸುತ್ತಿದ್ದಾನೆ. (2 ಕೊರಿಂಥ 4:4) ಲೋಕದ ಸುತ್ತಲೂ ಇರುವ ನಮ್ಮ ಸಹೋದರರ ಬಳಗದ ಮೇಲೆ ಸೈತಾನನು ತನ್ನಿಂದ ಸಾಧ್ಯವಾಗುವ ಎಲ್ಲ ಕಷ್ಟಗಳನ್ನು ತಂದೊಡ್ಡುತ್ತಾನೆ. (1 ಪೇತ್ರ 5:9) ನಮ್ಮ ಎಲ್ಲ ಸಮಸ್ಯೆಗಳಿಗೆ ಸೈತಾನನು ನೇರವಾಗಿ ಕಾರಣನಾಗಿಲ್ಲ ಎಂಬುದು ನಿಜವಾದರೂ, ನಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಅವನು, ನಮ್ಮನ್ನು ಇನ್ನೂ ಹೆಚ್ಚು ದುರ್ಬಲಗೊಳಿಸಲಿಕ್ಕಾಗಿ ಬಳಸಬಲ್ಲನು.
5 ಸೈತಾನನಾಗಲಿ ಅವನ ಆಯುಧಗಳಾಗಲಿ ಎಷ್ಟೇ ಪ್ರಬಲವಾಗಿದ್ದರೂ ನಾವು ಮಾತ್ರ ಅವನನ್ನು ಖಂಡಿತವಾಗಿಯೂ ಸೋಲಿಸಬಲ್ಲೆವು! ಅದರ ಬಗ್ಗೆ ನಾವು ಹೇಗೆ ಅಷ್ಟೊಂದು ಖಾತ್ರಿಯಿಂದಿರಬಲ್ಲೆವು? ಯಾಕೆಂದರೆ ಯೆಹೋವ ದೇವರು ನಮ್ಮ ಪರವಾಗಿ ಹೋರಾಡುತ್ತಾನೆ. ತನ್ನ ಸೇವಕರು ಸೈತಾನನ ತಂತ್ರೋಪಾಯಗಳ ಅರಿವುಳ್ಳವರಾಗಿರುವುದನ್ನು ಆತನು ಖಚಿತಪಡಿಸಿಕೊಳ್ಳುತ್ತಾನೆ. (2 ಕೊರಿಂಥ 2:11) ವಾಸ್ತವದಲ್ಲಿ ಸತ್ಯ ಕ್ರೈಸ್ತರನ್ನು ಬಾಧಿಸುವ ಪರೀಕ್ಷೆಗಳ ಕುರಿತಾಗಿ ದೇವರ ವಾಕ್ಯವು ಬಹಳಷ್ಟನ್ನು ತಿಳಿಸುತ್ತದೆ. ಅಪೊಸ್ತಲ ಪೌಲನ ವಿಷಯದಲ್ಲಿ ಬೈಬಲು, ‘ಶರೀರಕ್ಕೆ ನಾಟಿದ್ದ ಒಂದು ಮುಳ್ಳು’ ಎಂಬ ವಾಕ್ಸರಣಿಯನ್ನು ಉಪಯೋಗಿಸಿತು. ಏಕೆ? ದೇವರ ವಾಕ್ಯವು ಆ ಪದಗುಚ್ಛವನ್ನು ಹೇಗೆ ವಿವರಿಸುತ್ತದೆ ಎಂಬುದನ್ನು ನಾವು ಸ್ವಲ್ಪ ನೋಡೋಣ. ಆಗ ಸಂಕಷ್ಟಗಳ ಮೇಲೆ ಜಯವನ್ನು ಸಾಧಿಸಲು ಯೆಹೋವನ ಸಹಾಯದ ಅಗತ್ಯವುಳ್ಳವರು ಕೇವಲ ನಾವು ಮಾತ್ರವಲ್ಲ ಎಂಬುದು ನಮಗೆ ಅರಿವಾಗುವುದು.
ಕೆಲವೊಂದು ಪರೀಕ್ಷೆಗಳು ಮುಳ್ಳುಗಳಂತಿರಲು ಕಾರಣ
6. ‘ಶರೀರದಲ್ಲಿ ಒಂದು ಮುಳ್ಳು’ ಎಂದು ಪೌಲನು ಹೇಳಿದ್ದರ ಅರ್ಥವೇನಾಗಿತ್ತು, ಮತ್ತು ಆ ಮುಳ್ಳು ಏನಾಗಿದ್ದಿರಬಹುದು?
6 ಕಠಿನವಾದ ಪರೀಕ್ಷೆಗೊಳಗಾಗಿದ್ದ ಪೌಲನು, ಹೀಗೆ ಬರೆಯುವಂತೆ ಪ್ರೇರಿಸಲ್ಪಟ್ಟನು: “ನಾನು ಅತಿಶಯವಾಗಿ ಹೆಚ್ಚಿಸಿಕೊಳ್ಳದಂತೆ ನನ್ನನ್ನು ಹೊಡೆಯುತ್ತಾ ಇರಲು, ಸೈತಾನನ ಒಬ್ಬ ದೂತನಂತೆ, ನನ್ನ ಶರೀರದಲ್ಲಿ ಒಂದು ಮುಳ್ಳು ನಾಟಲ್ಪಟ್ಟಿತ್ತು.” (2 ಕೊರಿಂಥ 12:7, NW) ಪೌಲನ ಶರೀರದಲ್ಲಿ ನಾಟಿದ್ದ ಈ ಮುಳ್ಳು ಏನಾಗಿತ್ತು? ಚರ್ಮದಲ್ಲಿ ತುಂಬ ಆಳಕ್ಕೆ ಹೋಗಿ ಸಿಕ್ಕಿಕೊಂಡಿರುವ ಒಂದು ಮುಳ್ಳು ಖಂಡಿತವಾಗಿಯೂ ತುಂಬ ನೋವನ್ನುಂಟುಮಾಡಬಲ್ಲದು. ಹೀಗಿರುವುದರಿಂದ ಈ ರೂಪಕವು, ಪೌಲನಿಗೆ ಶಾರೀರಿಕವಾಗಿಯೋ ಭಾವನಾತ್ಮಕವಾಗಿಯೋ ಇಲ್ಲವೇ ಎರಡೂ ರೀತಿಯಲ್ಲಿ ನೋವನ್ನು ಉಂಟುಮಾಡುತ್ತಿದ್ದ ಯಾವುದೋ ಸಂಗತಿಯನ್ನು ಸೂಚಿಸುತ್ತದೆ. ಪೌಲನು ಕಣ್ಣಿನ ಬೇನೆಯಿಂದಲೊ ಇಲ್ಲವೇ ಬೇರಾವುದೊ ಶಾರೀರಿಕ ದೌರ್ಬಲ್ಯದಿಂದಲೊ ಕಷ್ಟಪಡುತ್ತಿದ್ದಿರಬಹುದು. ಇಲ್ಲವೇ ಆ ಮುಳ್ಳು ಎಂಬುದು, ಪೌಲನು ಅಪೊಸ್ತಲನಾಗಿರುವ ಅರ್ಹತೆಯ ಬಗ್ಗೆ ವಾಗ್ವಾದಮಾಡುತ್ತಿದ್ದ ಮತ್ತು ಅವನ ಸಾರುವ ಹಾಗೂ ಕಲಿಸುವ ಕೆಲಸದ ಮೌಲ್ಯವನ್ನು ಸಂದೇಹಿಸುತ್ತಿದ್ದ ವ್ಯಕ್ತಿಗಳಿಗೆ ಸೂಚಿತವಾಗಿದ್ದಿರಬಹುದು. (2 ಕೊರಿಂಥ 10:10-12; 11:5, 6, 13) ಅದು ಏನೇ ಆಗಿರಲಿ, ಆ ಮುಳ್ಳು ಪೌಲನ ಬೆನ್ನು ಬಿಡಲಿಲ್ಲ ಮತ್ತು ಅದನ್ನು ತೆಗೆದುಹಾಕಲು ಸಾಧ್ಯವೇ ಇರಲಿಲ್ಲ.
7, 8. (ಎ) ‘ಹೊಡೆಯುವುದು’ ಎಂಬ ಪದವು ಏನನ್ನು ಸೂಚಿಸುತ್ತದೆ? (ಬಿ) ನಮ್ಮನ್ನು ಈಗ ಬಾಧಿಸುತ್ತಿರುವ ಯಾವುದೇ ಮುಳ್ಳುಗಳನ್ನು ಸಹಿಸಿಕೊಳ್ಳುವುದು ಏಕೆ ಅತ್ಯಾವಶ್ಯಕವಾಗಿದೆ?
7 ಆ ಮುಳ್ಳು ಪೌಲನನ್ನು ಹೊಡೆಯುತ್ತಾ ಇತ್ತೆಂಬುದನ್ನು ಗಮನಿಸಿರಿ. ಆಸಕ್ತಿಯ ಸಂಗತಿಯೇನೆಂದರೆ, ಇಲ್ಲಿ ಪೌಲನು ಉಪಯೋಗಿಸಿರುವ ಗ್ರೀಕ್ ಕ್ರಿಯಾಪದವು, “ಗೆಣ್ಣೆಲುಬು” ಎಂಬುದಕ್ಕಾಗಿರುವ ಪದದಿಂದ ತೆಗೆಯಲ್ಪಟ್ಟಿದೆ. ಆ ಪದವನ್ನು ಮತ್ತಾಯ 26:67ರಲ್ಲಿ ಅಕ್ಷರಾರ್ಥವಾಗಿ ಮತ್ತು 1 ಕೊರಿಂಥ 4:11ರಲ್ಲಿ (NW) ಸಾಂಕೇತಿಕವಾಗಿ ಉಪಯೋಗಿಸಲಾಗಿದೆ. ಆ ವಚನಗಳಲ್ಲಿ ಮುಷ್ಟಿಗಳಿಂದ ಹೊಡೆಯಲ್ಪಟ್ಟಿರುವ ವಿಚಾರವನ್ನು ಕೊಡಲಾಗಿದೆ. ಸೈತಾನನಿಗೆ ಯೆಹೋವನ ಕಡೆಗೆ ಮತ್ತು ಆತನ ಸೇವಕರ ಕಡೆಗಿರುವ ಬದ್ಧದ್ವೇಷವನ್ನು ಮನಸ್ಸಿಗೆ ತರುವಾಗ, ಒಂದು ಮುಳ್ಳು ಪೌಲನನ್ನು ಹೊಡೆಯುತ್ತಾ ಇತ್ತೆಂಬ ಸಂಗತಿಯಿಂದ ಸೈತಾನನಿಗೆ ತುಂಬ ಸಂತೋಷವಾಗಿತ್ತೆಂಬುದು ಖಂಡಿತ. ಇಂದು ನಾವು ಕೂಡ ಅದೇ ರೀತಿಯಲ್ಲಿ ಶರೀರದಲ್ಲಿ ನಾಟಿರುವ ಒಂದು ಮುಳ್ಳಿನಿಂದ ಬಾಧಿಸಲ್ಪಡುವಾಗ, ಸೈತಾನನಿಗೆ ಅಷ್ಟೇ ಸಂತೋಷವಾಗುತ್ತದೆ.
8 ಆದುದರಿಂದ ಪೌಲನಂತೆ, ಅಂಥ ಮುಳ್ಳುಗಳನ್ನು ಸಹಿಸಿಕೊಳ್ಳುವುದು ಹೇಗೆಂದು ನಮಗೆ ತಿಳಿದಿರಬೇಕು. ಹಾಗೆ ಮಾಡುವುದರ ಮೇಲೆ ನಮ್ಮ ಜೀವವೇ ಅವಲಂಬಿಸಿದೆ! ಮತ್ತು ಮುಳ್ಳಿನಂಥ ಸಮಸ್ಯೆಗಳು ನಮ್ಮನ್ನು ಬಾಧಿಸದಂಥ ತನ್ನ ಹೊಸ ಲೋಕದಲ್ಲಿ ಯೆಹೋವನು ನಮ್ಮ ಜೀವನವನ್ನು ದೀರ್ಘಗೊಳಿಸಲು ಬಯಸುತ್ತಾನೆಂಬುದನ್ನು ನೆನಪಿನಲ್ಲಿಡಿರಿ. ಈ ಅದ್ಭುತವಾದ ಬಹುಮಾನವನ್ನು ಗಿಟ್ಟಿಸಿಕೊಳ್ಳುವಂತೆ ಸಹಾಯಮಾಡಲು, ದೇವರು ತನ್ನ ಪವಿತ್ರ ವಾಕ್ಯವಾದ ಬೈಬಲಿನಲ್ಲಿ ಅನೇಕ ಮಾದರಿಗಳನ್ನು ಒದಗಿಸಿದ್ದಾನೆ. ಆತನ ನಂಬಿಗಸ್ತ ಸೇವಕರು ತಮ್ಮ ಶರೀರದಲ್ಲಿನ ಮುಳ್ಳುಗಳನ್ನು ಯಶಸ್ವಿಕರವಾಗಿ ಸಹಿಸಿಕೊಂಡರೆಂಬುದನ್ನು ಈ ಮಾದರಿಗಳು ತೋರಿಸುತ್ತವೆ. ಅವರು ಕೂಡ ನಮ್ಮಂತೆಯೇ ಸಾಧಾರಣರಾದ, ಅಪರಿಪೂರ್ಣ ಜನರಾಗಿದ್ದರು. ‘ಮೇಘದೋಪಾದಿಯಿರುವ ಇಷ್ಟು ಮಂದಿ ಸಾಕ್ಷಿಗಳಲ್ಲಿ’ ಕೆಲವರ ಬಗ್ಗೆ ಪರ್ಯಾಲೋಚಿಸುವುದು, ‘ನಮಗೆ ನೇಮಕವಾದ ಓಟವನ್ನು ಸ್ಥಿರಚಿತ್ತದಿಂದ ಓಡುವಂತೆ’ ಸಹಾಯಮಾಡಬಹುದು. (ಇಬ್ರಿಯ 12:1) ಅವರೇನನ್ನು ತಾಳಿಕೊಂಡರೊ ಅದರ ಕುರಿತಾಗಿ ಮನನಮಾಡುವುದು, ಸೈತಾನನು ನಮ್ಮ ವಿರುದ್ಧ ಉಪಯೋಗಿಸಬಹುದಾದ ಯಾವುದೇ ಮುಳ್ಳುಗಳನ್ನು ನಾವು ಸಹಿಸಬಲ್ಲೆವೆಂಬ ನಮ್ಮ ಭರವಸೆಯನ್ನು ಇನ್ನಷ್ಟು ಹೆಚ್ಚಿಸಬಲ್ಲದು.
ಮೆಫೀಬೋಶೆತನನ್ನು ಬಾಧಿಸುತ್ತಿದ್ದ ಮುಳ್ಳುಗಳು
9, 10. (ಎ) ಮೆಫೀಬೋಶೆತನಿಗೆ ಶರೀರದಲ್ಲಿ ಮುಳ್ಳು ನಾಟಿದ್ದು ಹೇಗೆ? (ಬಿ) ರಾಜ ದಾವೀದನು ಮೆಫೀಬೋಶೆತನಿಗೆ ಹೇಗೆ ದಯೆಯನ್ನು ತೋರಿಸಿದನು, ಮತ್ತು ನಾವು ದಾವೀದನನ್ನು ಹೇಗೆ ಅನುಕರಿಸಬಹುದು?
9 ದಾವೀದನ ಮಿತ್ರನಾದ ಯೋನಾತಾನನ ಮಗನಾಗಿದ್ದ ಮೆಫೀಬೋಶೆತನನ್ನು ತೆಗೆದುಕೊಳ್ಳಿ. ಅವನು ಐದು ವರ್ಷದವನಾಗಿದ್ದಾಗ, ಅವನ ತಂದೆಯಾದ ಯೋನಾತಾನನು ಮತ್ತು ಅವನ ಅಜ್ಜನಾದ ರಾಜ ಸೌಲನು ಕೊಲ್ಲಲ್ಪಟ್ಟಿದ್ದರೆಂಬ ಸುದ್ದಿ ಬಂತು. ಆಗ ಈ ಹುಡುಗನ ದಾದಿಯು ಗಾಬರಿಗೊಂಡಳು. ಅವಳು “ಅವನನ್ನು . . . ತೆಗೆದುಕೊಂಡು ಅವಸರದಿಂದ ಓಡಿಹೋಗುವಾಗ ಅವನು ಬಿದ್ದು ಕುಂಟನಾದನು.” (2 ಸಮುವೇಲ 4:4) ಈ ಅಂಗವಿಕಲತೆಯು, ಮೆಫೀಬೋಶೆತನು ಬೆಳೆಯುತ್ತಾ ಹೋದಂತೆ ನಿಜವಾಗಿಯೂ ಸಹಿಸಿಕೊಳ್ಳಬೇಕಾದ ಒಂದು ಮುಳ್ಳಾಗಿದ್ದಿರಬಹುದು.
10 ಯೋನಾತಾನನಿಗಾಗಿ ತನಗಿದ್ದ ಅಪಾರ ಪ್ರೀತಿಯಿಂದಾಗಿ, ರಾಜ ದಾವೀದನು ಕೆಲವು ವರ್ಷಗಳ ನಂತರ ಮೆಫೀಬೋಶೆತನಿಗೆ ಪ್ರೀತಿದಯೆಯನ್ನು ತೋರ್ಪಡಿಸಿದನು. ಸೌಲನಿಗೆ ಸೇರಿದ್ದ ಎಲ್ಲ ಭೂಮಿಯನ್ನು ದಾವೀದನು ಮೆಫೀಬೋಶೆತನಿಗೆ ಒಪ್ಪಿಸಿಕೊಟ್ಟನು ಮತ್ತು ಸೌಲನ ದಾಸನಾದ ಚೀಬನು ಈ ಭೂಮಿಯನ್ನು ನೋಡಿಕೊಳ್ಳುವಂತೆ ನೇಮಿಸಿದನು. ದಾವೀದನು ಮೆಫೀಬೋಶೆತನಿಗೆ ಹೀಗೂ ಹೇಳಿದನು: “ನೀನು ಪ್ರತಿದಿನ ನನ್ನ ಪಂಕ್ತಿಯಲ್ಲಿ ಊಟಮಾಡಬೇಕು.” (2 ಸಮುವೇಲ 9:6-10) ದಾವೀದನ ಪ್ರೀತಿದಯೆಯು ಮೆಫೀಬೋಶೆತನಿಗೆ ಸಾಂತ್ವನವನ್ನು ನೀಡಿತು ಮತ್ತು ಅವನ ಅಂಗವಿಕಲತೆಯ ನೋವನ್ನು ಶಮನಗೊಳಿಸಲು ಸಹಾಯಮಾಡಿತೆಂಬುದರ ಕುರಿತು ಸಂದೇಹವಿಲ್ಲ. ಎಷ್ಟು ಒಳ್ಳೆಯ ಪಾಠ! ಶರೀರದಲ್ಲಿನ ಒಂದು ಮುಳ್ಳಿನೊಂದಿಗೆ ಹೆಣಗಾಡುತ್ತಿರುವವರಿಗೆ ನಾವು ಕೂಡ ಹಾಗೆಯೇ ದಯೆಯನ್ನು ತೋರಿಸಬೇಕು!
11. ಮೆಫೀಬೋಶೆತನ ಬಗ್ಗೆ ಚೀಬನು ಏನು ಹೇಳಿದನು, ಆದರೆ ಅವನ ಆ ಮಾತುಗಳು ಸುಳ್ಳಾಗಿದ್ದವೆಂದು ನಮಗೆ ಹೇಗೆ ಗೊತ್ತು? (ಪಾದಟಿಪ್ಪಣಿಯನ್ನು ನೋಡಿರಿ.)
11 ಅನಂತರ, ಮೆಫೀಬೋಶೆತನಿಗೆ ಶರೀರದಲ್ಲಿನ ಇನ್ನೊಂದು ಮುಳ್ಳಿನೊಂದಿಗೆ ಸೆಣಸಾಡಬೇಕಾಯಿತು. ಅವನ ದಾಸನಾದ ಚೀಬನು, ರಾಜ ದಾವೀದನ ಮುಂದೆ ಅವನ ಬಗ್ಗೆ ಚಾಡಿಹೇಳಿದನು. ಆ ಸಮಯದಲ್ಲಿ ದಾವೀದನು, ತನ್ನ ಮಗನಾದ ಅಬ್ಷಾಲೋಮನ ದಂಗೆಯ ಕಾರಣ ಯೆರೂಸಲೇಮಿನಿಂದ ಪಲಾಯನಗೈಯುತ್ತಿದ್ದನು. ಚೀಬನು ಅವನಿಗೆ, ಮೆಫೀಬೋಶೆತನು ದಾವೀದನಿಗೆ ನಿಷ್ಠೆ ತೋರಿಸದೇ, ರಾಜತ್ವವನ್ನು ಗಿಟ್ಟಿಸಿಕೊಳ್ಳುವ ಆಸೆಯಿಂದ ಯೆರೂಸಲೇಮಿನಲ್ಲೇ ಉಳಿದಿದ್ದಾನೆಂದು ಹೇಳಿದನು.a ದಾವೀದನು ಚೀಬನು ಹೇಳಿದ ಚಾಡಿಯನ್ನು ನಂಬಿಕೊಂಡು, ಆ ಸುಳ್ಳುಗಾರನಿಗೆ ಮೆಫೀಬೋಶೆತನ ಎಲ್ಲ ಆಸ್ತಿಯನ್ನು ಕೊಟ್ಟುಬಿಟ್ಟನು!—2 ಸಮುವೇಲ 16:1-4.
12. ಮೆಫೀಬೋಶೆತನು ತನ್ನ ಸನ್ನಿವೇಶಕ್ಕೆ ಹೇಗೆ ಪ್ರತಿಕ್ರಿಯೆ ತೋರಿಸಿದನು, ಮತ್ತು ಅವನು ನಮಗಾಗಿ ಹೇಗೆ ಒಂದು ಒಳ್ಳೇ ಮಾದರಿಯಾಗಿದ್ದಾನೆ?
12 ಆದರೆ ಮೆಫೀಬೋಶೆತನು ಕೊನೆಗೆ ದಾವೀದನನ್ನು ಸಂಧಿಸಿದಾಗ, ನಡೆದಂಥ ನಿಜ ಸಂಗತಿಯನ್ನು ರಾಜನಿಗೆ ತಿಳಿಸಿದನು. ಮೆಫೀಬೋಶೆತನು ದಾವೀದನ ಜೊತೆ ಹೋಗಲು ತಯಾರಿ ನಡೆಸುತ್ತಾ ಇದ್ದಾಗಲೇ, ಚೀಬನು ಅವನನ್ನು ಮೋಸಗೊಳಿಸಿ, ಅವನ ಸ್ಥಾನದಲ್ಲಿ ತಾನೇ ಹೋಗಲು ಮುಂದೆಬಂದನು. ಈ ಅನ್ಯಾಯವನ್ನು ದಾವೀದನು ಸರಿಪಡಿಸಿದನೊ? ಸ್ವಲ್ಪಮಟ್ಟಿಗೆ ಮಾತ್ರ. ಅವನು ಆ ಆಸ್ತಿಯನ್ನು ಆ ಇಬ್ಬರು ಪುರುಷರಿಗೂ ಹಂಚಿಕೊಟ್ಟನು. ಈಗ ಇಲ್ಲಿ ಮೆಫೀಬೋಶೆತನ ಶರೀರದಲ್ಲಿ ಇನ್ನೊಂದು ಸಂಭಾವ್ಯ ಮುಳ್ಳು ಸಿಕ್ಕಿಕೊಂಡಿತು. ಇದಕ್ಕಾಗಿ ಅವನು ತುಂಬ ವ್ಯಥೆಪಟ್ಟನೊ? ದಾವೀದನು ಮಾಡಿದಂಥ ನಿರ್ಣಯವು ಅನ್ಯಾಯವಾಗಿತ್ತೆಂದು ದೂಷಿಸುತ್ತಾ ಅವನು ಆ ನಿರ್ಣಯದ ವಿರುದ್ಧ ಪ್ರತಿಭಟಿಸಿದನೊ? ಇಲ್ಲ, ಅದಕ್ಕೆ ಬದಲಾಗಿ ಅವನು ರಾಜನ ಇಚ್ಛೆಗಳಿಗೆ ನಮ್ರತೆಯಿಂದ ಮಣಿದನು. ನ್ಯಾಯವಾದ ಹಕ್ಕುಳ್ಳ ಇಸ್ರಾಯೇಲಿನ ರಾಜನು ಕ್ಷೇಮವಾಗಿ ಹಿಂದಿರುಗಿದ್ದನೆಂಬ ಕಾರಣಕ್ಕಾಗಿ ಹರ್ಷಿಸುತ್ತಾ, ಸಕಾರಾತ್ಮಕ ವಿಷಯಗಳ ಮೇಲೆ ಅವನು ತನ್ನ ಮನಸ್ಸನ್ನು ಕೇಂದ್ರೀಕರಿಸಿದನು. ಮೆಫೀಬೋಶೆತನು ಅಂಗವಿಕಲತೆ, ಚಾಡಿ, ಮತ್ತು ನಿರಾಶೆಯನ್ನು ತಾಳಿಕೊಳ್ಳುವ ಮೂಲಕ ನಿಜವಾಗಿಯೂ ಒಂದು ಉತ್ಕೃಷ್ಟ ಮಾದರಿಯನ್ನಿಟ್ಟನು.—2 ಸಮುವೇಲ 19:24-30.
ನೆಹೆಮೀಯನು ತನ್ನ ಪರೀಕ್ಷೆಗಳನ್ನು ನಿಭಾಯಿಸಿದನು
13, 14. ನೆಹೆಮೀಯನು ಯೆರೂಸಲೇಮಿನ ಗೋಡೆಗಳನ್ನು ಪುನರ್ನಿರ್ಮಿಸಲು ಹಿಂದಿರುಗಿದಾಗ, ಅವನು ಯಾವ ಮುಳ್ಳುಗಳನ್ನು ಸಹಿಸಿಕೊಳ್ಳಬೇಕಾಯಿತು?
13 ಸಾ.ಶ.ಪೂ. ಐದನೆಯ ಶತಮಾನದಲ್ಲಿ ನೆಹೆಮೀಯನು ಯೆರೂಸಲೇಮಿನ ಗೋಡೆಗಳಿಲ್ಲದ ನಗರಕ್ಕೆ ಹಿಂದಿರುಗಿದಾಗ ಸಹಿಸಿಕೊಂಡಂಥ ಸಾಂಕೇತಿಕ ಮುಳ್ಳುಗಳ ಕುರಿತಾಗಿ ಯೋಚಿಸಿರಿ. ಆ ನಗರವು ಕಾರ್ಯತಃ ರಕ್ಷಣೆಯಿಲ್ಲದೆ ಬಿದ್ದಿರುವುದನ್ನು, ಹಿಂದಿರುಗಿದಂಥ ಯೆಹೂದ್ಯರು ಅವ್ಯವಸ್ಥಿತರೂ, ನಿರುತ್ತೇಜಿತರೂ ಮತ್ತು ಯೆಹೋವನ ದೃಷ್ಟಿಯಲ್ಲಿ ಅಶುದ್ಧರೂ ಆಗಿರುವುದನ್ನು ಅವನು ನೋಡಿದನು. ರಾಜ ಅರ್ತಷಸ್ತನೇ ಯೆರೂಸಲೇಮಿನ ಗೋಡೆಗಳನ್ನು ಪುನಃ ಕಟ್ಟುವಂತೆ ಅಧಿಕಾರವನ್ನು ಕೊಟ್ಟಿದ್ದರೂ, ಹತ್ತಿರದಲ್ಲಿದ್ದ ಜನಾಂಗಗಳ ದೇಶಾಧಿಪತಿಗಳಿಗೆ ತನ್ನ ಈ ಕೆಲಸವು ಅಸಹ್ಯಕರವಾದದ್ದಾಗಿತ್ತು ಎಂಬುದು ನೆಹೆಮೀಯನಿಗೆ ಬೇಗನೆ ತಿಳಿದುಬಂತು. “ಇಸ್ರಾಯೇಲ್ಯರ ಹಿತಚಿಂತಕನೊಬ್ಬನು ಬಂದನೆಂಬ ವರ್ತಮಾನವು . . . ಮುಟ್ಟಿದಾಗ ಅವರು ಬಹಳವಾಗಿ ಹೊಟ್ಟೆಕಿಚ್ಚುಪಟ್ಟರು.”—ನೆಹೆಮೀಯ 2:10.
14 ಆ ಪರದೇಶಿ ವಿರೋಧಕರು, ನೆಹೆಮೀಯನ ಕೆಲಸವನ್ನು ನಿಲ್ಲಿಸಲಿಕ್ಕಾಗಿ ತಮ್ಮಿಂದಾದುದೆಲ್ಲವನ್ನೂ ಮಾಡಿದರು. ಅವರ ಬೆದರಿಕೆಗಳು, ಸುಳ್ಳುಗಳು, ಚಾಡಿ, ಭಯಹುಟ್ಟಿಸುವಿಕೆ ಮತ್ತು ಅವನನ್ನು ನಿರುತ್ತೇಜಿಸಲು ಕಳುಹಿಸಲ್ಪಟ್ಟ ಗುಪ್ತಚಾರರ ಉಪಯೋಗವು ಅವನ ಶರೀರದಲ್ಲಿ ನಿರಂತರವಾಗಿ ಚುಚ್ಚುವ ಮುಳ್ಳುಗಳಂತಿದ್ದಿರಬಹುದು. ಆ ಶತ್ರುಗಳ ಕುತಂತ್ರಗಳಿಗೆ ಅವನು ಮಣಿದನೊ? ಇಲ್ಲ. ಅವನು ದೇವರಲ್ಲಿ ಪೂರ್ಣ ಭರವಸೆಯನ್ನಿಡುತ್ತಾ ಎಂದೂ ಬಲಹೀನನಾಗಲಿಲ್ಲ. ಹೀಗಿರುವುದರಿಂದ, ಯೆರೂಸಲೇಮಿನ ಗೋಡೆಗಳು ಕೊನೆಗೆ ಪುನರ್ನಿರ್ಮಿಸಲ್ಪಟ್ಟಾಗ, ಅವು ಯೆಹೋವನು ನೆಹೆಮೀಯನಿಗೆ ಕೊಟ್ಟ ಪ್ರೀತಿಪೂರ್ವಕ ಬೆಂಬಲದ ಶಾಶ್ವತ ಸಾಕ್ಷ್ಯವನ್ನು ಕೊಟ್ಟವು.—ನೆಹೆಮೀಯ 4:1-12; 6:1-19.
15. ಯೆಹೂದ್ಯರ ನಡುವಿನ ಯಾವ ಸಮಸ್ಯೆಗಳು ನೆಹೆಮೀಯನಿಗೆ ತುಂಬ ಕಳವಳವನ್ನುಂಟುಮಾಡಿದವು?
15 ದೇಶಾಧಿಪತಿಯೋಪಾದಿಯೂ ನೆಹೆಮೀಯನು ದೇವಜನರ ನಡುವಿನ ಅನೇಕ ಸಮಸ್ಯೆಗಳೊಂದಿಗೆ ಹೆಣಗಾಡಬೇಕಾಯಿತು. ಈ ತೊಂದರೆಗಳು ಅವನಿಗೆ ತುಂಬ ಕಳವಳವನ್ನು ಉಂಟುಮಾಡಿದವು, ಯಾಕೆಂದರೆ ಅವು ಯೆಹೋವನೊಂದಿಗಿನ ಜನರ ಸಂಬಂಧವನ್ನು ಬಾಧಿಸುತ್ತಿದ್ದವು. ಧನಿಕರು ವಿಪರೀತ ಬಡ್ಡಿಯನ್ನು ತೆಗೆದುಕೊಳ್ಳುತ್ತಿದ್ದರು, ಮತ್ತು ಅವರ ಬಡ ಸಹೋದರರು ತಮ್ಮ ಸಾಲಗಳನ್ನು ಮಾತ್ರವಲ್ಲದೆ ಪರ್ಷಿಯನರ ಕಂದಾಯವನ್ನು ಸಲ್ಲಿಸಲಿಕ್ಕಾಗಿ, ತಮ್ಮ ಭೂಮಿಯನ್ನು ಬಿಟ್ಟುಕೊಟ್ಟು, ತಮ್ಮ ಮಕ್ಕಳನ್ನೂ ದಾಸತ್ವಕ್ಕೆ ಮಾರಿಬಿಡಬೇಕಾಗುತ್ತಿತ್ತು. (ನೆಹೆಮೀಯ 5:1-10) ಅನೇಕ ಯೆಹೂದ್ಯರು ಸಬ್ಬತ್ ದಿನವನ್ನು ಉಲ್ಲಂಘಿಸುತ್ತಿದ್ದರು ಮತ್ತು ಲೇವ್ಯರನ್ನು ಹಾಗೂ ಆಲಯವನ್ನು ಬೆಂಬಲಿಸಲು ತಪ್ಪುತ್ತಿದ್ದರು. ಅಷ್ಟುಮಾತ್ರವಲ್ಲ, ಕೆಲವರು “ಅಷ್ಡೋದ್ ಅಮ್ಮೋನಿಯ ಮೋವಾಬ್ ಸ್ತ್ರೀಯರನ್ನು” ಮದುವೆಮಾಡಿಕೊಂಡಿದ್ದರು. ಇದು ನೆಹೆಮೀಯನಿಗೆ ಎಷ್ಟು ನೋವನ್ನುಂಟುಮಾಡಿತು! ಆದರೆ ಇವುಗಳಲ್ಲಿನ ಯಾವುದೇ ಮುಳ್ಳಿನ ಕಾರಣದಿಂದಾಗಿಯೂ ಅವನು ಬಿಟ್ಟುಕೊಡಲಿಲ್ಲ. ಸಂದರ್ಭಕ್ಕೆ ತಕ್ಕಂತೆ ಅವನು ಪುನಃ ಪುನಃ ದೇವರ ನೀತಿಯ ನಿಯಮಗಳನ್ನು ಹುರುಪಿನಿಂದ ಎತ್ತಿಹಿಡಿಯುವವನಾಗಿ ರುಜುವಾದನು. ನೆಹೆಮೀಯನಂತೆ, ಬೇರೆಯವರ ಅಪನಂಬಿಗಸ್ತ ನಡತೆಯು, ನಾವು ಯೆಹೋವನಿಗೆ ನಿಷ್ಠಾವಂತ ಸೇವೆಯನ್ನು ಸಲ್ಲಿಸುವುದರಿಂದ ನಮ್ಮನ್ನು ತಡೆಯದಂತೆ ನೋಡಿಕೊಳ್ಳೋಣ.—ನೆಹೆಮೀಯ 13:10-13, 23-27.
ಇನ್ನೂ ಅನೇಕ ನಂಬಿಗಸ್ತರು ಸಹಿಸಿಕೊಂಡರು
16-18. ಕುಟುಂಬ ಕಲಹವು ಇಸಾಕ ಮತ್ತು ರೆಬೆಕ್ಕರನ್ನು, ಹನ್ನ, ದಾವೀದ ಮತ್ತು ಹೋಶೇಯರನ್ನು ಹೇಗೆ ಬಾಧಿಸಿತು?
16 ಮುಳ್ಳುಗಳಂತಿದ್ದ ಸಂಕಟಕರ ಸನ್ನಿವೇಶಗಳನ್ನು ಸಹಿಸಿಕೊಂಡ ಅನೇಕ ಜನರ ಮಾದರಿಗಳು ಬೈಬಲಿನಲ್ಲಿವೆ. ಅಂಥ ಮುಳ್ಳುಗಳ ಒಂದು ಸಾಮಾನ್ಯ ಮೂಲವು, ಕುಟುಂಬ ಸಮಸ್ಯೆಗಳಾಗಿದ್ದವು. ಏಸಾವನ ಇಬ್ಬರು ಹೆಂಡತಿಯರಿಂದಾಗಿ ಅವನ ಹೆತ್ತವರಿಗೆ “ಮನೋವ್ಯಥೆಯುಂಟಾಯಿತು.” ಆ ಹೆಂಡತಿಯರಿಂದಾಗಿ ತನಗೆ ಜೀವವೇ ಬೇಸರವಾಗಿ ಹೋಗಿದೆಯೆಂದೂ ರೆಬೆಕ್ಕಳು ಹೇಳಿದಳು. (ಆದಿಕಾಂಡ 26:34, 35; 27:46) ಹನ್ನಳ ಸವತಿಯೂ, ಪ್ರತಿಸ್ಪರ್ಧಿಯೂ ಆಗಿದ್ದ ಪೆನಿನ್ನಳು, ಹನ್ನಳು ಬಂಜೆಯಾಗಿದ್ದರಿಂದ ಅವಳನ್ನು ಎಷ್ಟೊಂದು “ಕೆಣಕಿ ನೋಯಿಸುತ್ತಿದ್ದಳು” ಎಂಬುದರ ಕುರಿತಾಗಿ ಯೋಚಿಸಿರಿ. ಅವರ ಮನೆಯ ಏಕಾಂತದಲ್ಲಿ ಹನ್ನಳು ಈ ಯಾತನೆಯನ್ನು ಪದೇ ಪದೇ ಅನುಭವಿಸುತ್ತಿದ್ದಿರಬಹುದು. ಅವರ ಕುಟುಂಬವು ಶಿಲೋವಿನಲ್ಲಿನ ಉತ್ಸವಕ್ಕೆ ಹಾಜರಾಗುತ್ತಿದ್ದಾಗಲೂ ಪೆನಿನ್ನಳು ನಿಸ್ಸಂದೇಹವಾಗಿಯೂ ಅವಳನ್ನು ಬಂಧುಬಳಗದವರ ಮುಂದೆ ಬಹಿರಂಗವಾಗಿ ಪೀಡಿಸುತ್ತಿದ್ದಳು. ಇದು ಆ ಮುಳ್ಳನ್ನು ಹನ್ನಳ ಶರೀರದೊಳಗೆ ಇನ್ನೂ ಒಳಕ್ಕೆ ಚುಚ್ಚಿದಂತಿತ್ತು.—1 ಸಮುವೇಲ 1:4-7.
17 ದಾವೀದನು ತನ್ನ ಮಾವನಾದ ರಾಜ ಸೌಲನ ಹುಚ್ಚು ಈರ್ಷ್ಯೆಯಿಂದಾಗಿ ಏನೆಲ್ಲ ಸಹಿಸಿಕೊಂಡನೆಂಬುದರ ಕುರಿತಾಗಿ ಸ್ವಲ್ಪ ಊಹಿಸಿಕೊಳ್ಳಿರಿ. ತನ್ನ ಜೀವವನ್ನು ರಕ್ಷಿಸಿಕೊಳ್ಳಲಿಕ್ಕಾಗಿ ಅವನು ಏಂಗೆದೀಯ ಅರಣ್ಯದಲ್ಲಿದ್ದ ಗುಹೆಗಳಲ್ಲಿ ವಾಸಿಸಬೇಕಾಯಿತು. ಅಲ್ಲಿ ಅವನು ಕಡಿದಾದ ಮತ್ತು ಅಪಾಯಕಾರಿಯಾದ ಬಂಡೆದಾರಿಗಳನ್ನು ಹಾದುಹೋಗಬೇಕಾಗುತ್ತಿತ್ತು. ಅವನು ಸೌಲನ ವಿರುದ್ಧ ಯಾವುದೇ ತಪ್ಪನ್ನು ಮಾಡಿರದೇ ಇದ್ದದರಿಂದ ಅವನಿಗಾದ ಈ ಅನ್ಯಾಯವು ತುಂಬ ನೋಯಿಸುವಂಥದ್ದಾಗಿದ್ದಿರಬಹುದು. ಹಾಗಿದ್ದರೂ, ದಾವೀದನು ಎಷ್ಟೋ ವರ್ಷಗಳ ವರೆಗೆ ಹೀಗೆಯೇ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪಲಾಯನಮಾಡುತ್ತಾ ಜೀವಿಸುತ್ತಿದ್ದನು. ಮತ್ತು ಕೇವಲ ಸೌಲನ ಈರ್ಷ್ಯೆಯಿಂದಾಗಿಯೇ ಅವನು ಇದೆಲ್ಲವನ್ನೂ ಸಹಿಸಿಕೊಳ್ಳಬೇಕಾಗಿತ್ತು.—1 ಸಮುವೇಲ 24:14, 15; ಜ್ಞಾನೋಕ್ತಿ 27:4.
18 ಪ್ರವಾದಿಯಾದ ಹೋಶೇಯನ ಮೇಲೆ ಬಂದೆರಗಿದ ಕುಟುಂಬ ಕಲಹವನ್ನು ಊಹಿಸಿಕೊಳ್ಳಿರಿ. ಅವನ ಹೆಂಡತಿಯು ಹಾದರಗಿತ್ತಿಯಾದಳು. ಅವಳ ಈ ಅನೈತಿಕತೆಯು ಅವನ ಹೃದಯಕ್ಕೆ ಮುಳ್ಳುಗಳಂತೆ ಚುಚ್ಚಿರಬಹುದು. ಅದಲ್ಲದೆ, ಅವಳ ಹಾದರದಿಂದಾಗಿ ಅವಳು ಇಬ್ಬರು ಜಾರಜ ಮಕ್ಕಳನ್ನು ಹೆತ್ತಾಗ ಅವನು ಎಷ್ಟೊಂದು ಸಂಕಟದಿಂದ ನರಳಾಡಿದ್ದಿರಬಹುದು!—ಹೋಶೇಯ 1:2-9.
19. ಪ್ರವಾದಿಯಾದ ಮೀಕಾಯೆಹುವನ್ನು ಯಾವ ಹಿಂಸೆಯು ಕಾಡಿತು?
19 ಶರೀರದಲ್ಲಿ ನಾಟುವ ಇನ್ನೊಂದು ಮುಳ್ಳು ಹಿಂಸೆಯಾಗಿದೆ. ಪ್ರವಾದಿಯಾದ ಮೀಕಾಯೆಹುವಿನ ಅನುಭವವನ್ನು ಪರಿಗಣಿಸಿರಿ. ದುಷ್ಟ ರಾಜ ಆಹಾಬನು ತನ್ನ ಸುತ್ತಲೂ ಸುಳ್ಳು ಪ್ರವಾದಿಗಳನ್ನು ಇರಿಸಿ, ಅವರು ಹೇಳುತ್ತಿದ್ದ ಸುಳ್ಳುಗಳನ್ನೇ ನಂಬುತ್ತಿರುವುದನ್ನು ನೋಡಿ, ಮೀಕಾಯೆಹುವಿನ ನೀತಿವಂಥ ಪ್ರಾಣಕ್ಕೆ ಯಾತನೆಯಾಗಿದ್ದಿರಬಹುದು. ಅನಂತರ, ಆ ಎಲ್ಲ ಪ್ರವಾದಿಗಳು “ಅಸತ್ಯವನ್ನಾಡುವ ಆತ್ಮ”ದಿಂದ ಮಾತಾಡುತ್ತಿದ್ದಾರೆಂದು ಮೀಕಾಯೆಹುವು ಆಹಾಬನಿಗೆ ಹೇಳಿದಾಗ, ಆ ನಯವಂಚಕರ ಮುಖಂಡನು ಏನು ಮಾಡಿದನು? ಅವನು ಮೀಕಾಯೆಹುವಿನ ‘ಕೆನ್ನೆಗೆ ಒಂದು ಏಟು ಕೊಟ್ಟನು’! ರಾಮೋತ್ಗಿಲ್ಯಾದನ್ನು ಪುನಃ ವಶಪಡಿಸಿಕೊಳ್ಳುವ ಕಾರ್ಯಾಚರಣೆಯು ಖಂಡಿತವಾಗಿಯೂ ಸೋಲುವುದೆಂದು ಯೆಹೋವನು ಕೊಟ್ಟ ಎಚ್ಚರಿಕೆಗೆ ಆಹಾಬನು ತೋರಿಸಿದ ಪ್ರತಿಕ್ರಿಯೆಯು ಇನ್ನೂ ಕೆಟ್ಟದ್ದಾಗಿತ್ತು. ಮೀಕಾಯೆಹುವನ್ನು ಸೆರೆಮನೆಗೆ ಹಾಕಿ, ಅವನಿಗೆ ಕಡಿಮೆಪ್ರಮಾಣದ ಆಹಾರವನ್ನು ಕೊಡುವಂತೆ ಆಹಾಬನು ಅಪ್ಪಣೆಕೊಟ್ಟನು. (1 ಅರಸುಗಳು 22:6, 9, 15-17, 23-28) ಯೆರೆಮೀಯನನ್ನು ಮತ್ತು ಅವನ ಹಂತಕ ಹಿಂಸೆಗಾರರು ಅವನನ್ನು ಉಪಚರಿಸಿದ ರೀತಿಯನ್ನು ನೆನಪಿಸಿಕೊಳ್ಳಿರಿ.—ಯೆರೆಮೀಯ 20:1-9.
20. ನೊವೊಮಿಯು ಯಾವ ಮುಳ್ಳುಗಳನ್ನು ಸಹಿಸಿಕೊಳ್ಳಬೇಕಾಯಿತು, ಮತ್ತು ಅವಳಿಗೆ ಹೇಗೆ ಪ್ರತಿಫಲ ಸಿಕ್ಕಿತು?
20 ಮರಣದಲ್ಲಿ ಪ್ರಿಯ ವ್ಯಕ್ತಿಗಳನ್ನು ಕಳೆದುಕೊಳ್ಳುವುದು, ಶರೀರದಲ್ಲಿನ ಒಂದು ಮುಳ್ಳಿನಂತಿರಬಹುದಾದ ಇನ್ನೊಂದು ದುಃಖಕರ ಸನ್ನಿವೇಶವಾಗಿದೆ. ನೊವೊಮಿಯು, ತನ್ನ ಗಂಡ ಮತ್ತು ಇಬ್ಬರು ಪುತ್ರರನ್ನು ಮರಣದಲ್ಲಿ ಕಳೆದುಕೊಳ್ಳುವ ನೋವನ್ನು ಸಹಿಸಿಕೊಳ್ಳಬೇಕಾಯಿತು. ಅವಳು ಯೆರೂಸಲೇಮಿಗೆ ಹಿಂದಿರುಗಿದಾಗ, ಅವಳನ್ನು ಛಿದ್ರಗೊಳಿಸಿದಂಥ ಆ ಹೊಡೆತಗಳ ನೋವಿನ ಅನಿಸಿಕೆಗಳು ಇನ್ನೂ ಅವಳ ಮನಸ್ಸಿನಲ್ಲಿದ್ದವು. ತನ್ನನ್ನು ನೊವೊಮಿ ಎಂದಲ್ಲ ಬದಲಾಗಿ ಮಾರಾ ಎಂದು ಕರೆಯುವಂತೆ ಅವಳು ತನ್ನ ಸ್ನೇಹಿತೆಯರಿಗೆ ಹೇಳಿದಳು. ಈ ಹೆಸರು ಅವಳಿಗಾದ ಅನುಭವಗಳ ಕಹಿತನವನ್ನು ಪ್ರತಿಬಿಂಬಿಸಿತು. ಆದರೆ ಕೊನೆಯಲ್ಲಿ ದೇವರು ಅವಳ ತಾಳ್ಮೆಗೆ ಪ್ರತಿಫಲವನ್ನು ಕೊಟ್ಟನು. ಅವಳ ಮೊಮ್ಮಗನು, ಮೆಸ್ಸೀಯನ ವಂಶದಲ್ಲಿ ಒಂದು ಕೊಂಡಿಯಾಗಿ ಪರಿಣಮಿಸಿದನು.—ರೂತಳು 1:3-5, 19-21; 4:13-17; ಮತ್ತಾಯ 1:1, 5.
21, 22. ಹೇಗೆ ನಷ್ಟವು ಯೋಬನನ್ನು ಮುತ್ತಿಕೊಂಡಿತು, ಮತ್ತು ಅವನು ಹೇಗೆ ಪ್ರತಿಕ್ರಿಯಿಸಿದನು?
21 ತನ್ನ ಹತ್ತು ಮಂದಿ ಪ್ರಿಯ ಮಕ್ಕಳ ಹಠಾತ್ತಾದ ಮತ್ತು ಭೀಕರ ಮರಣದ ಕುರಿತಾದ, ಹಾಗೂ ತನ್ನ ಎಲ್ಲ ಜಾನುವಾರುಗಳ ಹಿಂಡುಗಳು ಮತ್ತು ಸೇವಕರ ನಷ್ಟದ ಕುರಿತಾದ ಸುದ್ದಿಯನ್ನು ಕೇಳಿದಾಗ ಯೋಬನಿಗೆ ಎಷ್ಟು ಆಘಾತವಾಗಿದ್ದಿರಬಹುದು ಎಂಬುದರ ಕುರಿತಾಗಿ ಯೋಚಿಸಿರಿ. ಇದ್ದಕ್ಕಿದ್ದ ಹಾಗೆ ಅವನ ಇಡೀ ಲೋಕವೇ ಕುಸಿದುಬಿದ್ದಂತಿತ್ತು! ಅನಂತರ ಯೋಬನು ಈ ಹೊಡೆತಗಳಿಂದ ತತ್ತರಿಸುತ್ತಿದ್ದಾಗಲೇ ಸೈತಾನನು ಅವನ ಮೇಲೆ ಕಾಯಿಲೆಯನ್ನು ಬರಮಾಡಿದನು. ಈ ಕೆಟ್ಟ ಕಾಯಿಲೆಯು ತನ್ನ ಪ್ರಾಣವನ್ನೇ ತೆಗೆದುಬಿಡುವುದೆಂದು ಯೋಬನು ನೆನಸಿದ್ದಿರಬಹುದು. ಅವನ ನೋವು ಎಷ್ಟು ಸಹಿಸಲಸಾಧ್ಯವಾಗಿತ್ತೆಂದರೆ, ತಾನು ಸತ್ತರೆ ಮಾತ್ರ ಉಪಶಮನ ಸಿಗುವುದೆಂದು ಅವನಿಗನಿಸುತ್ತಿತ್ತು.—ಯೋಬ 1:13-20; 2:7, 8.
22 ಇದೆಲ್ಲವೂ ಕಡಿಮೆಯಾಗಿತ್ತೊ ಎಂಬಂತೆ, ಅವನ ಹೆಂಡತಿ ಸಹ ದುಃಖ ಹಾಗೂ ಸಂಕಟವನ್ನು ತಾಳಲಾರದೆ, ಅವನ ಬಳಿ ಬಂದು “ದೇವರನ್ನು ದೂಷಿಸಿ ಸಾಯಿ” ಎಂದು ಕೂಗಾಡಿದಳು. ಈಗಾಗಲೇ ನೋಯುತ್ತಿದ್ದ ಅವನ ಶರೀರದಲ್ಲಿ ಇದು ಇನ್ನೊಂದು ನೋಯಿಸುವಂಥ ಮುಳ್ಳಾಗಿತ್ತು! ಮುಂದೆ, ಯೋಬನ ಮೂವರು ಸಂಗಡಿಗರು ಅವನಿಗೆ ಸಾಂತ್ವನದ ನುಡಿಗಳನ್ನಾಡುವ ಬದಲಿಗೆ, ಸತ್ಯವಾಗಿರುವಂತೆ ತೋರುವ ತರ್ಕದೊಂದಿಗೆ ಅವನ ಮೇಲೆ ದಾಳಿನಡೆಸುತ್ತಾ, ಅವನು ಗುಪ್ತ ಪಾಪಗಳನ್ನು ನಡೆಸುತ್ತಿದ್ದಾನೆಂದು ಅವನ ಮೇಲೆ ಆರೋಪ ಹೊರಿಸಿ, ಅವನ ಈ ದುರ್ಗತಿಗೆ ಅವನೇ ಹೊಣೆಗಾರನೆಂದು ಹೇಳಿದರು. ಸಾಂಕೇತಿಕವಾಗಿ ಹೇಳುವುದಾದರೆ, ಅವರ ಈ ದೋಷಭರಿತ ವಾದಗಳು ಅವನ ಶರೀರದಲ್ಲಿನ ಮುಳ್ಳುಗಳನ್ನು ಇನ್ನೂ ಆಳಕ್ಕೆ ನೂಕಿದವು. ಈ ಎಲ್ಲ ಘೋರ ಸಂಗತಿಗಳು ತನಗೆ ಏಕೆ ಸಂಭವಿಸುತ್ತಿವೆ ಎಂಬುದು, ಮತ್ತು ತನ್ನ ಸ್ವಂತ ಜೀವ ಮಾತ್ರ ಉಳಿಸಲ್ಪಡುವುದೆಂಬುದು ಯೋಬನಿಗೆ ತಿಳಿದಿರಲಿಲ್ಲವೆಂಬ ಸಂಗತಿಯನ್ನೂ ನೆನಪಿನಲ್ಲಿಡಿರಿ. ಹೀಗಿದ್ದರೂ, “ಯೋಬನು ಪಾಪಮಾಡಲಿಲ್ಲ, ದೇವರ ಮೇಲೆ ತಪ್ಪುಹೊರಿಸಲೂ ಇಲ್ಲ.” (ಯೋಬ 1:22; 2:9, 10; 3:3; 14:13; 30:17) ಏಕಕಾಲದಲ್ಲೇ ಅನೇಕ ಮುಳ್ಳುಗಳು ಅವನನ್ನು ಚುಚ್ಚಿದರೂ, ಅವನು ಎಂದೂ ತನ್ನ ಸಮಗ್ರತೆಯ ಮಾರ್ಗಕ್ರಮವನ್ನು ಬಿಟ್ಟುಬಿಡಲಿಲ್ಲ. ಇದೆಷ್ಟು ಉತ್ತೇಜನೀಯವಾಗಿದೆ!
23. ನಾವು ಯಾವ ನಂಬಿಗಸ್ತರ ಕುರಿತಾಗಿ ಚರ್ಚೆಮಾಡಿದೆವೋ ಅವರು ಶರೀರದಲ್ಲಿನ ವಿಭಿನ್ನ ಮುಳ್ಳುಗಳನ್ನು ಏಕೆ ತಾಳಿಕೊಳ್ಳಲು ಶಕ್ತರಾಗಿದ್ದರು?
23 ಈ ಎಲ್ಲ ಉದಾಹರಣೆಗಳಿಗಿಂತಲೂ ಇನ್ನೂ ಅನೇಕ ಉದಾಹರಣೆಗಳು ಬೈಬಲಿನಲ್ಲಿವೆ. ಈ ನಂಬಿಗಸ್ತ ಸೇವಕರು ತಮ್ಮ ಸ್ವಂತ ಸಾಂಕೇತಿಕ ಮುಳ್ಳುಗಳೊಂದಿಗೆ ಹೆಣಗಾಡಬೇಕಾಯಿತು. ಮತ್ತು ಅವರು ಎಷ್ಟು ಭಿನ್ನವಾದ ಸಮಸ್ಯೆಗಳನ್ನು ಎದುರಿಸಿದರು! ಆದರೂ, ಅವರೆಲ್ಲರಲ್ಲಿ ಒಂದು ಸಾಮಾನ್ಯ ಸಂಗತಿಯಿತ್ತು. ಅವರಲ್ಲಿ ಯಾರೂ ಯೆಹೋವನ ಸೇವೆಯನ್ನು ಬಿಟ್ಟುಕೊಡಲಿಲ್ಲ. ಅವರ ಈ ಎಲ್ಲ ಸಂಕಟಮಯ ಪರೀಕ್ಷೆಗಳ ಎದುರಿನಲ್ಲೂ, ಯೆಹೋವನು ಅವರಿಗೆ ಒದಗಿಸಿದ ಬಲದಿಂದಾಗಿ ಸೈತಾನನ ಮೇಲೆ ಜಯವನ್ನು ಸಾಧಿಸಿದರು. ಹೇಗೆ? ಮುಂದಿನ ಲೇಖನವು ಈ ಪ್ರಶ್ನೆಯನ್ನು ಉತ್ತರಿಸಿ, ನಮ್ಮ ಶರೀರದಲ್ಲಿ ಮುಳ್ಳಿನಂತಿರುವ ಯಾವುದೇ ಸಂಗತಿಯನ್ನು ನಾವು ಕೂಡ ಹೇಗೆ ಸಹಿಸಿಕೊಳ್ಳಬಹುದು ಎಂಬುದನ್ನು ತೋರಿಸುವುದು.
[ಪಾದಟಿಪ್ಪಣಿ]
a ಆ ರೀತಿಯ ಮಹತ್ವಾಕಾಂಕ್ಷೆಯ ಯೋಜನೆಯನ್ನು, ಮೆಫೀಬೋಶೆತನಂಥ ಗಣ್ಯಭಾವದ ನಮ್ರ ವ್ಯಕ್ತಿಯು ಮಾಡುವನೆಂಬುದನ್ನು ಕನಸಿನಲ್ಲೂ ಯೋಚಿಸಲಸಾಧ್ಯ. ತನ್ನ ತಂದೆಯಾದ ಯೋನಾತಾನನಿಂದ ಇಡಲ್ಪಟ್ಟಿದ್ದಂಥ ನಂಬಿಗಸ್ತ ದಾಖಲೆಯ ಬಗ್ಗೆ ಅವನಿಗೆ ಚೆನ್ನಾಗಿ ಗೊತ್ತಿತ್ತು ಎಂಬ ವಿಷಯದಲ್ಲಿ ಸಂದೇಹವಿಲ್ಲ. ಯೋನಾತಾನನು ರಾಜನಾದ ಸೌಲನ ಮಗನಾಗಿದ್ದರೂ, ಯೆಹೋವನು ದಾವೀದನನ್ನು ಇಸ್ರಾಯೇಲಿನ ರಾಜನಾಗುವಂತೆ ಮಾಡಿದ ಆಯ್ಕೆಯನ್ನು ಅವನು ನಮ್ರಭಾವದಿಂದ ಅಂಗೀಕರಿಸಿದ್ದನು. (1 ಸಮುವೇಲ 20:12-17) ಆದುದರಿಂದ, ಮೆಫೀಬೋಶೆತನ ದೇವಭೀರು ತಂದೆಯೋಪಾದಿ ಮತ್ತು ದಾವೀದನ ನಿಷ್ಠಾವಂತ ಸ್ನೇಹಿತನೋಪಾದಿ, ಯೋನಾತಾನನು ತನ್ನ ಎಳೆಯ ಮಗನಿಗೆ ರಾಜ್ಯಾಧಿಕಾರಕ್ಕಾಗಿ ಆಸೆಪಡುವಂತೆ ಖಂಡಿತವಾಗಿಯೂ ಕಲಿಸುತ್ತಿರಲಿಲ್ಲ.
ನೀವು ಹೇಗೆ ಉತ್ತರಿಸುವಿರಿ?
• ನಾವು ಎದುರಿಸುವಂಥ ಸಮಸ್ಯೆಗಳನ್ನು ಶರೀರದಲ್ಲಿನ ಮುಳ್ಳುಗಳಿಗೆ ಏಕೆ ಹೋಲಿಸಬಹುದು?
• ಮೆಫೀಬೋಶೆತ ಮತ್ತು ನೆಹೆಮೀಯರು ತಾಳಿಕೊಳ್ಳಬೇಕಾಗಿದ್ದ ಕೆಲವೊಂದು ಮುಳ್ಳುಗಳು ಯಾವುವು?
• ಶರೀರಕ್ಕೆ ನಾಟಿದ್ದ ಭಿನ್ನ ಭಿನ್ನ ಮುಳ್ಳುಗಳನ್ನು ಸಹಿಸಿಕೊಂಡ ಸ್ತ್ರೀಪುರುಷರ ಶಾಸ್ತ್ರೀಯ ಮಾದರಿಗಳಲ್ಲಿ, ವಿಶೇಷವಾಗಿ ಯಾರ ಮಾದರಿಯು ನಿಮ್ಮ ಮನಮುಟ್ಟಿತು, ಮತ್ತು ಏಕೆ?
[ಪುಟ 15ರಲ್ಲಿರುವ ಚಿತ್ರಗಳು]
ಮೆಫೀಬೋಶೆತನು ಅಂಗವಿಕಲತೆ, ಚಾಡಿ ಮತ್ತು ನಿರಾಶೆಯನ್ನು ಸಹಿಸಿಕೊಳ್ಳಬೇಕಾಗಿತ್ತು
[ಪುಟ 16ರಲ್ಲಿರುವ ಚಿತ್ರ]
ನೆಹೆಮೀಯನು ವಿರೋಧದ ಎದುರಿನಲ್ಲೂ ಪಟ್ಟುಹಿಡಿದನು