ಜೀವನ ಕಥೆ
ಸ್ವತ್ಯಾಗದ ಮನೋಭಾವದೊಂದಿಗೆ ಸೇವೆಮಾಡುವುದು
ಡಾನ್ ರೆಂಡಲ್ ಅವರು ಹೇಳಿದಂತೆ
ಇಸವಿ 1927ರಲ್ಲಿ, ನಾನು ಕೇವಲ ಐದು ವರ್ಷದವನಾಗಿದ್ದಾಗ ನನ್ನ ತಾಯಿ ಸತ್ತುಹೋದರು. ಆದರೂ ಅವರ ನಂಬಿಕೆಯು ನನ್ನ ಜೀವನದ ಮೇಲೆ ತುಂಬ ಪ್ರಭಾವವನ್ನು ಬೀರಿತು. ಅದು ಹೇಗೆ?
ನನ್ನ ತಾಯಿ ಸೈನಿಕನಾಗಿದ್ದ ನನ್ನ ತಂದೆಯನ್ನು ಮದುವೆಯಾದಾಗ ಚರ್ಚ್ ಆಫ್ ಇಂಗ್ಲೆಂಡಿನ ಪಕ್ಕಾ ಸದಸ್ಯರಾಗಿದ್ದರು. ಅದು ಒಂದನೆಯ ವಿಶ್ವ ಯುದ್ಧಕ್ಕಿಂತಲೂ ಹಿಂದಿನ ಸಂಗತಿಯಾಗಿತ್ತು. ಒಂದನೆಯ ವಿಶ್ವ ಯುದ್ಧವು 1914ರಲ್ಲಿ ಸ್ಫೋಟಿಸಿತು. ಪಾದ್ರಿಯು ತನ್ನ ಪೀಠವನ್ನು ಸೈನ್ಯಕ್ಕಾಗಿ ಸೈನಿಕರನ್ನು ಸೇರಿಸುವ ವೇದಿಕೆಯಾಗಿ ಉಪಯೋಗಿಸುವುದರ ಬಗ್ಗೆ ನನ್ನ ತಾಯಿ ಅವರಿಗೆ ತಮ್ಮ ಅಸಮ್ಮತಿಯನ್ನು ವ್ಯಕ್ತಪಡಿಸಿದರು. ಆ ಪಾದ್ರಿಯ ಉತ್ತರವೇನಾಗಿತ್ತು? “ಮನೆಗೆ ಹೋಗು, ಮತ್ತು ಇಂಥ ಪ್ರಶ್ನೆಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡ!” ಈ ಉತ್ತರದಿಂದಾಗಿ ತಾಯಿಗೆ ಸಮಾಧಾನವಾಗಲಿಲ್ಲ.
ಇಸವಿ 1917ರಲ್ಲಿ ಯುದ್ಧವು ರಭಸದಿಂದ ನಡೆಯುತ್ತಿದ್ದಾಗ, ತಾಯಿಯವರು “ಫೋಟೋ ಡ್ರಾಮಾ ಆಫ್ ಕ್ರಿಏಷನ್” ಅನ್ನು ನೋಡಲು ಹೋದರು. ಆಗ ತನಗೆ ಸತ್ಯವು ಸಿಕ್ಕಿದೆಯೆಂದು ಅವರಿಗೆ ಮನದಟ್ಟಾಗಿದ್ದರಿಂದ, ಅವರು ಬೈಬಲ್ ವಿದ್ಯಾರ್ಥಿಗಳೊಂದಿಗೆ (ಆಗ ಯೆಹೋವನ ಸಾಕ್ಷಿಗಳನ್ನು ಹಾಗೆ ಕರೆಯಲಾಗುತ್ತಿತ್ತು) ಸಹವಾಸಮಾಡಲಿಕ್ಕಾಗಿ ಚರ್ಚನ್ನು ಕೂಡಲೇ ಬಿಟ್ಟುಬಿಟ್ಟರು. ಸಾಮರ್ಸೆಟ್ ಎಂಬ ಆಂಗ್ಲ ಪ್ರಾಂತದಲ್ಲಿ, ವೆಸ್ಟ್ ಕೋಕರ್ ಎಂಬ ನಮ್ಮ ಹಳ್ಳಿಗೆ ಅತಿ ಸಮೀಪದಲ್ಲಿದ್ದ ಯೋವಿಲ್ನ ಸಭೆಯಲ್ಲಿ ಕೂಟಗಳಿಗೆ ಹಾಜರಾದರು.
ಸ್ವಲ್ಪ ಸಮಯದಲ್ಲೇ ತಾಯಿ ಈ ಹೊಸ ನಂಬಿಕೆಯನ್ನು ತಮ್ಮ ಮೂರು ಮಂದಿ ಸಹೋದರಿಯರಿಗೆ ತಿಳಿಸಿದರು. ಮತ್ತು ನನ್ನ ತಾಯಿ ಹಾಗೂ ಅವರ ತಂಗಿ ಮಿಲಿ, ಹೇಗೆ ಹುರುಪಿನಿಂದ ನಮ್ಮ ವಿಸ್ತಾರವಾದ ಗ್ರಾಮೀಣ ಟೆರಿಟೊರಿಯಲ್ಲಿ ಸೈಕಲುಗಳಲ್ಲಿ ಪ್ರಯಾಣಿಸುತ್ತಾ, ಸ್ಟಡೀಸ್ ಇನ್ ದ ಸ್ಕ್ರಿಪ್ಚರ್ಸ್ ಎಂಬ ಬೈಬಲ್ ಅಧ್ಯಯನ ಸಹಾಯಕಗಳನ್ನು ವಿತರಿಸುತ್ತಿದ್ದರೆಂಬುದನ್ನು ಯೋವಿಲ್ ಸಭೆಯ ಹಳೇಕಾಲದ ಸದಸ್ಯರು ಈಗಲೂ ವರ್ಣಿಸುತ್ತಾರೆ. ಆದರೆ ದುಃಖದ ಸಂಗತಿಯೇನೆಂದರೆ, ತಮ್ಮ ಬದುಕಿನ ಕೊನೆಯ 18 ತಿಂಗಳುಗಳಲ್ಲಿ, ನನ್ನ ತಾಯಿ ಕ್ಷಯರೋಗದಿಂದಾಗಿ ಹಾಸಿಗೆ ಹಿಡಿದರು. ಆ ಸಮಯದಲ್ಲಿ ಈ ರೋಗಕ್ಕೆ ಔಷಧವು ಲಭ್ಯವಿರಲಿಲ್ಲ.
ಸ್ವತ್ಯಾಗ ಕಾರ್ಯರೂಪದಲ್ಲಿ
ಆ ಸಮಯದಲ್ಲಿ ನಮ್ಮೊಂದಿಗೆ ವಾಸಿಸುತ್ತಿದ್ದ ಚಿಕ್ಕಮ್ಮ ಮಿಲಿ, ತಾಯಿ ಅಸ್ವಸ್ಥರಾದಾಗ ಅವರ ಶುಶ್ರೂಷೆಮಾಡಿದರು ಮತ್ತು ನನ್ನ ಹಾಗೂ ನನ್ನ ಏಳು ವರ್ಷ ಪ್ರಾಯದ ಅಕ್ಕ ಜೋನ್ಳ ಆರೈಕೆಮಾಡಿದರು. ತಾಯಿ ತೀರಿಹೋದಾಗ, ಚಿಕ್ಕಮ್ಮ ಮಿಲಿ ಮಕ್ಕಳಾದ ನಮ್ಮನ್ನು ನೋಡಿಕೊಳ್ಳಲು ತತ್ಕ್ಷಣವೇ ತಮ್ಮನ್ನು ನೀಡಿಕೊಂಡರು. ತನ್ನ ಹೆಗಲ ಮೇಲಿನ ಭಾರವು ಹಗುರಗೊಳಿಸಲ್ಪಟ್ಟದ್ದಕ್ಕಾಗಿ ಸಂತೋಷಪಟ್ಟ ತಂದೆಯವರು, ಚಿಕ್ಕಮ್ಮ ಮಿಲಿ ನಮ್ಮೊಂದಿಗೆ ಕಾಯಂ ಆಗಿ ವಾಸಿಸಲು ಬರುವಂತೆ ಕೂಡಲೇ ಒಪ್ಪಿಕೊಂಡರು.
ನಾವು ಚಿಕ್ಕಮ್ಮನನ್ನು ಪ್ರೀತಿಸತೊಡಗಿದ್ದೆವು ಮತ್ತು ಅವರು ಇನ್ನು ಮುಂದೆ ನಮ್ಮೊಂದಿಗೇ ಇರುವರೆಂಬ ಸುದ್ದಿಯಿಂದ ತುಂಬ ಸಂತೋಷಪಟ್ಟೆವು. ಆದರೆ ಅವರು ನಮ್ಮೊಂದಿಗೆ ಇರುವ ನಿರ್ಣಯವನ್ನು ಮಾಡಿದ್ದೇಕೆ? ಅನೇಕ ವರ್ಷಗಳ ನಂತರ ಚಿಕ್ಕಮ್ಮ ನಮಗೆ ಕಾರಣವನ್ನು ತಿಳಿಸಿದರು. ಅದೇನೆಂದರೆ, ತಾಯಿಯವರು ನಮ್ಮಲ್ಲಿ ಹಾಕಿದಂಥ ಅಸ್ತಿವಾರದ ಮೇಲೆ ಕಟ್ಟುವ, ಅಂದರೆ ನನಗೆ ಮತ್ತು ಜೋನ್ಳಿಗೆ ಬೈಬಲ್ ಸತ್ಯವನ್ನು ಕಲಿಸುವ ಕರ್ತವ್ಯ ತನಗಿದೆಯೆಂಬುದನ್ನು ಅವರು ಮನಗಂಡಿದ್ದರು. ಧರ್ಮದಲ್ಲಿ ಯಾವುದೇ ಆಸಕ್ತಿಯಿಲ್ಲದಿದ್ದ ನಮ್ಮ ತಂದೆಯವರು ಈ ಕೆಲಸವನ್ನು ಎಂದಿಗೂ ಮಾಡಲಿಕ್ಕಿಲ್ಲ ಎಂಬದನ್ನು ಅವರು ಗ್ರಹಿಸಿದರು.
ತರುವಾಯ, ಚಿಕ್ಕಮ್ಮ ಮಿಲಿಯವರು ಇನ್ನೂಂದು ತೀರ ವೈಯಕ್ತಿಕವಾದ ನಿರ್ಣಯವನ್ನೂ ಮಾಡಿದ್ದರೆಂಬುದು ನಮಗೆ ತಿಳಿದುಬಂತು. ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುವ ಸಲುವಾಗಿ, ಅವರು ಎಂದೂ ಮದುವೆಯಾಗದಿರುವ ನಿರ್ಣಯವನ್ನು ಮಾಡಿದ್ದರು. ಎಂಥ ಸ್ವತ್ಯಾಗ! ಹೀಗೆ ನಾನು ಮತ್ತು ಜೋನ್ ಅವರಿಗೆ ತುಂಬ ಕೃತಜ್ಞರಾಗಿರಲು ಬಲವಾದ ಕಾರಣಗಳಿವೆ. ಚಿಕ್ಕಮ್ಮ ಮಿಲಿ ನಮಗೆ ಕಲಿಸಿದಂಥ ಎಲ್ಲ ಸಂಗತಿಗಳು ಮತ್ತು ಅವರ ಅತ್ಯುತ್ಕೃಷ್ಟವಾದ ಮಾದರಿಯು ಈಗಲೂ ನಮ್ಮೊಂದಿಗೆ ಉಳಿದಿದೆ.
ನಿರ್ಣಯಮಾಡುವ ಸಮಯ
ಜೋನ್ ಮತ್ತು ನಾನು ಚರ್ಚ್ ಆಫ್ ಇಂಗ್ಲೆಂಡಿನ ಹಳ್ಳಿಯ ಶಾಲೆಗೆ ಹೋದೆವು. ನಮ್ಮ ಧಾರ್ಮಿಕ ಶಿಕ್ಷಣದ ಕುರಿತು ಚಿಕ್ಕಮ್ಮನವರು ಮುಖ್ಯೋಪಾಧ್ಯಾಯಿನಿಯೊಂದಿಗೆ ಒಂದು ದೃಢವಾದ ನಿಲುವನ್ನು ತೆಗೆದುಕೊಂಡರು. ಬೇರೆಲ್ಲ ಮಕ್ಕಳು ಚರ್ಚಿಗೆ ಹೋಗುತ್ತಿದ್ದಾಗ, ನಾವು ಮನೆಗೆ ಹೋಗುತ್ತಿದ್ದೆವು. ಮತ್ತು ಧಾರ್ಮಿಕ ಶಿಕ್ಷಣಕ್ಕಾಗಿ ಪಾದ್ರಿಯು ಶಾಲೆಗೆ ಬರುತ್ತಿದ್ದಾಗ, ನಾವು ಬೇರೆ ಮಕ್ಕಳಿಂದ ಪ್ರತ್ಯೇಕವಾಗಿ ಕುಳಿತುಕೊಳ್ಳುತ್ತಿದ್ದೆವು ಮತ್ತು ನಮಗೆ ಬಾಯಿಪಾಠಮಾಡಲಿಕ್ಕಾಗಿ ಬೈಬಲಿನ ವಚನಗಳನ್ನು ಕೊಡಲಾಗುತ್ತಿತ್ತು. ಇದು ನನಗೆ ಮುಂದೆ ತುಂಬ ಉಪಯುಕ್ತವಾಗಿ ಪರಿಣಮಿಸಿತು, ಯಾಕೆಂದರೆ ಈ ವಚನಗಳು ನನ್ನ ಮನಸ್ಸಿನಲ್ಲಿ ಅಚ್ಚಳಿಯದಂಥ ರೀತಿಯಲ್ಲಿ ಉಳಿದವು.
ನಾನು 14 ವರ್ಷದವನಾಗಿದ್ದಾಗ, ಚೀಸ್ ತಯಾರಿಸುವ ಒಂದು ಸ್ಥಳಿಕ ಕಾರ್ಖಾನೆಯಲ್ಲಿ ನಾಲ್ಕು ವರ್ಷಗಳಿಗಾಗಿ ಉಮೇದುವಾರನಾಗಿ ಸೇರಿಕೊಳ್ಳಲಿಕ್ಕೋಸ್ಕರ ಶಾಲೆ ಬಿಟ್ಟೆ. ನಾನು ಪಿಯಾನೋ ನುಡಿಸಲೂ ಕಲಿತುಕೊಂಡೆ, ಮತ್ತು ಸಂಗೀತ ಹಾಗೂ ಬಾಲ್ರೂಮ್ ನೃತ್ಯ ನನ್ನ ಹವ್ಯಾಸಗಳಾದವು. ಬೈಬಲ್ ಸತ್ಯವು ನನ್ನ ಹೃದಯದಲ್ಲಿ ಬೇರೂರಿಸಲ್ಪಟ್ಟಿದ್ದರೂ, ನಾನು ಕ್ರಿಯೆಗೈಯುವಂತೆ ಇನ್ನೂ ಪ್ರಚೋದಿತನಾಗಿರಲಿಲ್ಲ. ಅನಂತರ 1940ರ ಮಾರ್ಚ್ ತಿಂಗಳ ಒಂದು ದಿನ ಒಬ್ಬ ವೃದ್ಧ ಸಾಕ್ಷಿಯು, ಸುಮಾರು 110 ಕಿಲೊಮೀಟರ್ ದೂರದಲ್ಲಿದ್ದ ಸ್ವಿಂಡನ್ ಎಂಬಲ್ಲಿ ಒಂದು ಸಮ್ಮೇಳನಕ್ಕೆ ತಮ್ಮೊಂದಿಗೆ ಬರುವಂತೆ ನನ್ನನ್ನು ಆಮಂತ್ರಿಸಿದರು. ಬ್ರಿಟನ್ನಲ್ಲಿದ್ದ ಯೆಹೋವನ ಸಾಕ್ಷಿಗಳ ಅಧ್ಯಕ್ಷ ಶುಶ್ರೂಷಕರಾಗಿದ್ದ ಆಲ್ಬರ್ಟ್ ಡಿ. ಶ್ರೋಡರ್ರವರು ಬಹಿರಂಗ ಭಾಷಣವನ್ನು ಕೊಟ್ಟರು. ಆ ಸಮ್ಮೇಳನವೇ ನನ್ನ ಬದುಕಿನ ತಿರುಗುಬಿಂದುವಾಗಿತ್ತು.
ಎರಡನೆಯ ವಿಶ್ವ ಯುದ್ಧವು ರಭಸವಾಗಿ ನಡೆಯುತ್ತಾ ಇತ್ತು. ನನ್ನ ಬದುಕಿನಲ್ಲಿ ನಾನು ಏನನ್ನು ಸಾಧಿಸುತ್ತಿದ್ದೇನೆ? ನಾನು ಯೋವಿಲ್ ರಾಜ್ಯ ಸಭಾಗೃಹಕ್ಕೆ ಹಿಂದಿರುಗುವ ನಿರ್ಣಯವನ್ನು ಮಾಡಿದೆ. ನಾನು ಹಾಜರಾದ ಮೊದಲ ಕೂಟದಲ್ಲೇ, ಬೀದಿ ಸಾಕ್ಷಿಕಾರ್ಯವನ್ನು ಪರಿಚಯಿಸಲಾಯಿತು. ನನಗೆ ಸೀಮಿತ ಜ್ಞಾನವಿದ್ದರೂ, ನಾನು ಈ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಮುಂದೆಹೋದೆ. ನನ್ನ ಸ್ನೇಹಿತರೆಂದು ಹೇಳಿಕೊಳ್ಳುತ್ತಿದ್ದ ಅನೇಕರು ನಾನು ಈ ಕೆಲಸವನ್ನು ಮಾಡುತ್ತಿರುವುದನ್ನು ನೋಡಿ ಚಕಿತರಾದರು, ಮತ್ತು ನನ್ನನ್ನು ದಾಟಿಹೋಗುತ್ತಿದ್ದಾಗ ಗೇಲಿಮಾಡಿದರು!
ಜೂನ್ 1940ರಲ್ಲಿ, ನಾನು ಬ್ರಿಸ್ಟಲ್ ನಗರದಲ್ಲಿ ದೀಕ್ಷಾಸ್ನಾನಹೊಂದಿದೆ. ಒಂದೇ ತಿಂಗಳಿನೊಳಗೆ ನಾನು ರೆಗ್ಯುಲರ್ ಪಯನೀಯರನಾಗಿ, ಅಂದರೆ ಪೂರ್ಣ ಸಮಯದ ಸೌವಾರ್ತಿಕನಾಗಿ ಸೇವೆಮಾಡಲಾರಂಭಿಸಿದೆ. ಸ್ವಲ್ಪ ಸಮಯದ ಬಳಿಕ ನನ್ನ ಅಕ್ಕ ಕೂಡ ನೀರಿನ ದೀಕ್ಷಾಸ್ನಾನದ ಮೂಲಕ ತನ್ನ ಸಮರ್ಪಣೆಯನ್ನು ಸಂಕೇತಿಸಿದಾಗ ನನಗೆಷ್ಟು ಸಂತೋಷವಾಯಿತು!
ಯುದ್ಧಕಾಲದಲ್ಲಿ ಪಯನೀಯರ್ ಸೇವೆಮಾಡುವುದು
ಯುದ್ಧವು ಆರಂಭಗೊಂಡ ಒಂದು ವರ್ಷದ ನಂತರ, ನಾನು ಸೈನ್ಯದಲ್ಲಿ ಭರ್ತಿಯಾಗುವಂತೆ ಕೇಳಿಕೊಂಡ ದಸ್ತಾವೇಜುಗಳನ್ನು ಪಡೆದೆ. ನನ್ನ ಮನಸ್ಸಾಕ್ಷಿಯ ಕಾರಣದಿಂದ ಸೈನ್ಯದಲ್ಲಿ ಸೇರಲಾರೆ ಎಂದು ಹೆಸರು ಬರೆಸಿಕೊಂಡದ್ದು ಯೋವಿಲ್ನಲ್ಲಿ ಆದದರಿಂದ, ನಾನು ಬ್ರಿಸ್ಟಲ್ನಲ್ಲಿ ನ್ಯಾಯಾಲಯದ ಮುಂದೆ ಹಾಜರಾಗಬೇಕಾಯಿತು. ನಾನು ಸಿಂಡರ್ಫರ್ಡ್, ಗ್ಲೌಸೆಸ್ಟರ್ಶೈರ್, ಮತ್ತು ತದನಂತರ ವೇಲ್ಸ್ನಲ್ಲಿ ಹ್ಯಾವರ್ಫರ್ಡ್ವೆಸ್ಟ್ ಹಾಗೂ ಕಾರ್ಮಾರ್ತೆನ್ನಲ್ಲಿ ಪಯನೀಯರ್ ಸೇವೆಮಾಡಲು ಜಾನ್ ವಿನ್ ಎಂಬವನೊಂದಿಗೆ ಜೊತೆಗೂಡಿದೆ.a ಅನಂತರ, ಕಾರ್ಮಾರ್ತೆನ್ನಲ್ಲಿ ನಡೆದ ಕೋರ್ಟ್ ವಿಚಾರಣೆಯೊಂದರಲ್ಲಿ ನನಗೆ ಸ್ವಾನ್ಸೀ ಸೆರೆಮನೆಯಲ್ಲಿ ಮೂರು ತಿಂಗಳುಗಳ ಸೆರೆವಾಸ ಹಾಗೂ ಇದರೊಂದಿಗೆ 25 ಪೌಂಡ್ಸ್ (1,725 ರೂಪಾಯಿಗಳು) ದಂಡವನ್ನು ವಿಧಿಸಲಾಯಿತು. ಈ ಮೊತ್ತವು ಆ ದಿನಗಳಲ್ಲಿ ದೊಡ್ಡದ್ದಾಗಿತ್ತು. ನಾನು ಆ ದಂಡವನ್ನು ಕೊಡದೇ ಇದ್ದದಕ್ಕಾಗಿ ನನಗೆ ಪುನಃ ಮೂರು ತಿಂಗಳುಗಳ ಸೆರೆವಾಸದ ಶಿಕ್ಷೆ ವಿಧಿಸಲ್ಪಟ್ಟಿತ್ತು.
ಮೂರನೆಯ ವಿಚಾರಣೆಯ ಸಮಯದಲ್ಲಿ ನನಗೆ ಹೀಗೆ ಕೇಳಲಾಯಿತು: “‘ಕೈಸರನದನ್ನು ಕೈಸರನಿಗೆ ಕೊಡಿರಿ’ ಎಂದು ಬೈಬಲ್ ಹೇಳುತ್ತದೆಂಬುದು ನಿನಗೆ ಗೊತ್ತಿಲ್ಲವೊ?” ನಾನು ಉತ್ತರಿಸಿದೆ: “ಹೌದು, ನನಗೆ ಅದು ಗೊತ್ತು, ಆದರೆ ನಾನು ಆ ವಚನವನ್ನು ಪೂರ್ಣಗೊಳಿಸಲು ಬಯಸುತ್ತೇನೆ, ‘ದೇವರದನ್ನು ದೇವರಿಗೆ ಕೊಡಿರಿ.’ ನಾನು ಅದನ್ನೇ ಮಾಡುತ್ತಿದ್ದೇನೆ.” (ಮತ್ತಾಯ 22:21) ಕೆಲವು ವಾರಗಳ ನಂತರ, ನಾನು ಮಿಲಿಟರಿ ಸೇವೆಯ ಹಂಗುಗಳಿಂದ ಮುಕ್ತನಾಗಿದ್ದೇನೆಂದು ತಿಳಿಸಿದಂಥ ಒಂದು ಪತ್ರವು ನನ್ನ ಕೈಸೇರಿತು.
ಇಸವಿ 1945ರ ಆರಂಭದಲ್ಲಿ, ನನ್ನನ್ನು ಲಂಡನ್ನ ಬೆತೆಲ್ ಕುಟುಂಬಕ್ಕೆ ಸೇರುವಂತೆ ಆಮಂತ್ರಿಸಲಾಯಿತು. ಮುಂದಿನ ವರ್ಷದ ಚಳಿಗಾಲದಲ್ಲಿ, ಲೋಕವ್ಯಾಪಕ ಸಾರುವ ಕೆಲಸದಲ್ಲಿ ಮುಂದಾಳತ್ವ ವಹಿಸುತ್ತಿದ್ದ ನೇತನ್ ಏಚ್. ನಾರ್ ಮತ್ತು ಅವರ ಸೆಕ್ರಿಟರಿ ಮಿಲ್ಟನ್ ಜಿ. ಹೆನ್ಶಲ್ರವರು ಲಂಡನ್ಗೆ ಭೇಟಿಯಿತ್ತರು. ಬ್ರಿಟನ್ನಿಂದ ಎಂಟು ಮಂದಿ ಯುವ ಸಹೋದರರನ್ನು, ಮಿಷನೆರಿ ತರಬೇತಿಗಾಗಿ ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ಗಾಗಿ ಆಯ್ಕೆಮಾಡಲಾಯಿತು. ಅವರಲ್ಲಿ ನಾನೂ ಒಬ್ಬನಾಗಿದ್ದೆ.
ಮಿಷನೆರಿ ನೇಮಕಗಳು
ಇಸವಿ 1946ರ ಮೇ 23ರಂದು, ನಾವು ಯುದ್ಧಕಾಲದ ಲಿಬರ್ಟಿ ಹಡಗೊಂದರಲ್ಲಿ, ಫಾವೀ ಎಂಬ ಚಿಕ್ಕ ಕಾರ್ನಿಷ್ ಹಡಗುದಾಣದಿಂದ ಹೊರಟೆವು. ಬಂದರಿನ ಆಡಳಿತ ನಡೆಸುವವರಾಗಿದ್ದ ಕ್ಯಾಪ್ಟನ್ ಕಾಲಿನ್ಸ್ ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಾಗಿದ್ದರು. ಮತ್ತು ನಾವು ರೇವುಕಟ್ಟೆಯಿಂದ ಹೊರಟಾಗ, ಸೈರನ್ ಅನ್ನು ಮೊಳಗಿಸಿದರು. ಇಂಗ್ಲೆಂಡಿನ ಕಡಲಂಚು ಕಣ್ಮರೆಯಾಗುವುದನ್ನು ನೋಡುತ್ತಿದ್ದಾಗ ಸಹಜವಾಗಿಯೇ ನಮ್ಮೆಲ್ಲರಲ್ಲಿ ಮಿಶ್ರ ಭಾವನೆಗಳು ಉಂಟಾದವು. ಅಟ್ಲಾಂಟಿಕ್ ಸಾಗರವನ್ನು ದಾಟುತ್ತಿದ್ದಾಗ, ಹವಾಮಾನವು ತುಂಬ ಬಿರುಸಾಗಿತ್ತು, ಆದರೆ 13 ದಿನಗಳ ಯಾನದ ನಂತರ ನಾವು ಸುರಕ್ಷಿತವಾಗಿ ಅಮೆರಿಕವನ್ನು ತಲಪಿದೆವು.
ಓಹಾಯೋದ ಕ್ಲೀವ್ಲ್ಯಾಂಡ್ನಲ್ಲಿ, 1946ರ ಆಗಸ್ಟ್ 4ರಿಂದ 11ರ ವರೆಗೆ ನಡೆದ ಹರ್ಷಭರಿತ ಜನಾಂಗಗಳು ಎಂಬ ಎಂಟು ದಿನಗಳ ದೇವಪ್ರಭುತ್ವಾತ್ಮಕ ಸಮ್ಮೇಳನಕ್ಕೆ ಹಾಜರಾಗುವುದು ಒಂದು ಸ್ಮರಣೀಯ ಅನುಭವವಾಗಿತ್ತು. ಇತರ 32 ದೇಶಗಳಿಂದ ಬಂದಿದ್ದ 302 ಮಂದಿ ಪ್ರತಿನಿಧಿಗಳ ಜೊತೆಗೆ, ಎಂಬತ್ತು ಸಾವಿರ ಅಭ್ಯರ್ಥಿಗಳು ಹಾಜರಿದ್ದರು. ಆ ಅಧಿವೇಶನದಲ್ಲಿ, ಎಚ್ಚರ!b ಪತ್ರಿಕೆ ಹಾಗೂ “ದೇವರು ಸತ್ಯವಂತನೇ ಸರಿ” ಎಂಬ ಬೈಬಲ್ ಅಧ್ಯಯನ ಸಹಾಯಕವು ಆ ಹುರುಪಿನ ಜನಸಮೂಹಕ್ಕೆ ಬಿಡುಗಡೆಮಾಡಲ್ಪಟ್ಟಿತು.
ನಾವು 1947ರಲ್ಲಿ ಗಿಲ್ಯಡ್ ಶಾಲೆಯಿಂದ ಪದವಿಪಡೆದೆವು, ಮತ್ತು ಬಿಲ್ ಕಾಪ್ಸನ್ ಹಾಗೂ ನನ್ನನ್ನು ಈಜಿಪ್ಟ್ ದೇಶಕ್ಕೆ ನೇಮಿಸಲಾಯಿತು. ಆದರೆ ನಾವು ಹೊರಡುವ ಮುಂಚೆ, ನನಗೆ ಬ್ರೂಕ್ಲಿನ್ ಬೆತೆಲಿನಲ್ಲಿ ರಿಚರ್ಡ್ ಏಬ್ರಹಾಮ್ಸನ್ರಿಂದ ಆಫೀಸ್ ಕೆಲಸದ ಬಗ್ಗೆ ಒಳ್ಳೆಯ ತರಬೇತಿ ಸಿಕ್ಕಿತು. ನಾವು ಈಜಿಪ್ಟ್ನ ಅಲೆಕ್ಸಾಂಡ್ರಿಯದಲ್ಲಿ ಇಳಿದೆವು, ಮತ್ತು ಮಧ್ಯಪೂರ್ವದ ಜೀವನಶೈಲಿಗೆ ನಾನು ಬೇಗನೆ ಒಗ್ಗಿಕೊಂಡೆ. ಆದರೆ ಅರಬ್ಬೀ ಭಾಷೆಯನ್ನು ಕಲಿಯುವುದು ಒಂದು ಪಂಥಾಹ್ವಾನವಾಗಿತ್ತು. ನಾನು ನಾಲ್ಕು ಭಾಷೆಗಳಲ್ಲಿ ಟೆಸ್ಟಿಮನಿ ಕಾರ್ಡುಗಳನ್ನು ಬಳಸಬೇಕಾಯಿತು.
ಬಿಲ್ ಕಾಪ್ಸನ್ ಏಳು ವರ್ಷಗಳ ವರೆಗೆ ಅಲ್ಲಿ ಉಳಿದರು, ಆದರೆ ಮೊದಲನೆಯ ವರ್ಷದ ನಂತರ ನನ್ನ ವೀಸಾ ಅನ್ನು ನವೀಕರಿಸಲು ಸಾಧ್ಯವಾಗದಿದ್ದ ಕಾರಣ ನಾನು ದೇಶವನ್ನು ಬಿಡಬೇಕಾಯಿತು. ಮಿಷನೆರಿ ಸೇವೆಯ ಆ ಒಂದು ವರ್ಷವನ್ನು ನಾನು ನನ್ನ ಬದುಕಿನ ಅತ್ಯಂತ ಫಲಪ್ರದ ವರ್ಷವಾಗಿ ಪರಿಗಣಿಸುತ್ತೇನೆ. ಪ್ರತಿ ವಾರ 20ಕ್ಕಿಂತಲೂ ಹೆಚ್ಚು ಮನೆ ಬೈಬಲ್ ಅಧ್ಯಯನಗಳನ್ನು ನಡೆಸುವ ಸದವಕಾಶ ನನಗಿತ್ತು, ಮತ್ತು ಆಗ ಸತ್ಯವನ್ನು ಕಲಿತವರಲ್ಲಿ ಕೆಲವರು ಈಗಲೂ ಯೆಹೋವನನ್ನು ಸಕ್ರಿಯವಾಗಿ ಸ್ತುತಿಸುತ್ತಿದ್ದಾರೆ. ಈಜಿಪ್ಟ್ನಿಂದ ನನಗೆ ಸೈಪ್ರಸ್ಗೆ ಹೋಗುವಂತೆ ಹೇಳಲಾಯಿತು.
ಸೈಪ್ರಸ್ ಮತ್ತು ಇಸ್ರೇಲ್
ಸ್ಥಳಿಕ ಪ್ರಾಂತಭಾಷೆಯೊಂದಿಗೆ ಪರಿಚಿತನಾಗಲು ನಾನು ಒಂದು ಹೊಸ ಭಾಷೆ, ಅಂದರೆ ಗ್ರೀಕ್ ಅನ್ನು ಕಲಿಯಲಾರಂಭಿಸಿದೆ. ಸ್ವಲ್ಪ ಸಮಯದ ನಂತರ, ಆ್ಯಂತೊನಿ ಸಿಡರಿಸ್ರನ್ನು ಗ್ರೀಸ್ಗೆ ಸ್ಥಳಾಂತರಿಸುವಂತೆ ಹೇಳಲಾಯಿತು, ಮತ್ತು ಸೈಪ್ರಸ್ನಲ್ಲಿನ ಕೆಲಸದ ಮೇಲ್ವಿಚಾರಣೆ ಮಾಡಲು ನನ್ನನ್ನು ನೇಮಿಸಲಾಯಿತು. ಆ ಸಮಯದಲ್ಲಿ ಸೈಪ್ರಸ್ನಲ್ಲಿದ್ದ ಬ್ರಾಂಚ್ ಆಫೀಸು ಇಸ್ರೇಲ್ನಲ್ಲಿನ ಕೆಲಸವನ್ನೂ ನೋಡಿಕೊಳ್ಳುತ್ತಿತ್ತು. ಮತ್ತು ಬೇರೆ ಸಹೋದರರೊಂದಿಗೆ ನನಗೂ ಆಗಾಗ್ಗೆ ಇಸ್ರೇಲ್ನಲ್ಲಿದ್ದ ಕೆಲವೊಂದು ಸಾಕ್ಷಿಗಳನ್ನು ಭೇಟಿಯಾಗುವ ಸುಯೋಗ ಸಿಕ್ಕಿತು.
ಇಸ್ರೇಲ್ಗೆ ನಾನು ಮೊದಲ ಬಾರಿ ಭೇಟಿಮಾಡಿದಾಗ, ಸುಮಾರು 50ರಿಂದ 60 ಮಂದಿ ಹಾಜರಾದ ಒಂದು ಚಿಕ್ಕ ಸಮ್ಮೇಳನವನ್ನು, ಹೈಫಾದಲ್ಲಿನ ಒಂದು ರೆಸ್ಟರಾಂಟ್ನಲ್ಲಿ ನಡೆಸಿದೆವು. ಬೇರೆ ಬೇರೆ ರಾಷ್ಟ್ರೀಯ ಗುಂಪುಗಳಿಗೆ ಸೇರಿದವರ ಪ್ರತ್ಯೇಕ ಗುಂಪುಗಳನ್ನು ಮಾಡುವ ಮೂಲಕ ಆ ಸಮ್ಮೇಳನ ಕಾರ್ಯಕ್ರಮವನ್ನು ನಾವು ಆರು ಭಿನ್ನ ಭಾಷೆಗಳಲ್ಲಿ ಪ್ರಸ್ತುತಪಡಿಸಲು ಸಾಧ್ಯವಾಯಿತು! ಇನ್ನೊಂದು ಸಂದರ್ಭದಲ್ಲಿ, ಯೆಹೋವನ ಸಾಕ್ಷಿಗಳಿಂದ ತಯಾರಿಸಲ್ಪಟ್ಟಿದ್ದ ಒಂದು ಚಲನಚಿತ್ರವನ್ನು ಜೆರೂಸಲೇಮ್ನಲ್ಲಿ ತೋರಿಸಲು ಶಕ್ತನಾದೆ, ಮತ್ತು ಒಂದು ಬಹಿರಂಗ ಭಾಷಣವನ್ನೂ ಕೊಟ್ಟೆ. ಇದರ ಬಗ್ಗೆ ಇಂಗ್ಲಿಷ್ ಭಾಷೆಯ ಒಂದು ವಾರ್ತಾಪತ್ರಿಕೆಯಲ್ಲಿ ಒಳ್ಳೆಯ ವರದಿಯನ್ನು ಕೊಡಲಾಯಿತು.
ಆ ಸಮಯದಲ್ಲಿ ಸೈಪ್ರಸ್ನಲ್ಲಿ ಸುಮಾರು 100 ಸಾಕ್ಷಿಗಳಿದ್ದರು. ಮತ್ತು ಅವರು ತಮ್ಮ ನಂಬಿಕೆಗೋಸ್ಕರ ತುಂಬ ಹೋರಾಡಬೇಕಾಯಿತು. ಗ್ರೀಕ್ ಆರ್ತೊಡಾಕ್ಸ್ ಚರ್ಚಿನ ಪಾದ್ರಿಗಳ ನೇತೃತ್ವದಲ್ಲಿ, ಗಲಭೆಯ ಗುಂಪುಗಳು ನಮ್ಮ ಸಮ್ಮೇಳನಗಳಿಗೆ ಅಡ್ಡಿಬಂದವು, ಮತ್ತು ಗ್ರಾಮೀಣ ಕ್ಷೇತ್ರಗಳಲ್ಲಿ ಕಲ್ಲುಹೊಡೆಯಲ್ಪಡುವುದು ನನಗೊಂದು ಹೊಸ ಅನುಭವವಾಗಿತ್ತು. ಬೇಗನೆ ಅಲ್ಲಿಂದ ಪರಾರಿಯಾಗುವುದನ್ನು ನಾನು ಕಲಿಯಬೇಕಿತ್ತು! ಅಂಥ ಹಿಂಸಾತ್ಮಕ ವಿರೋಧದ ಎದುರಿನಲ್ಲೂ, ಆ ದ್ವೀಪಕ್ಕೆ ಹೆಚ್ಚು ಮಿಷನೆರಿಗಳು ನೇಮಿಸಲ್ಪಡುವುದನ್ನು ನೋಡುವುದು ನಂಬಿಕೆಯನ್ನು ಬಲಪಡಿಸುವಂಥದ್ದಾಗಿತ್ತು. ಡೆನಿಸ್ ಮತ್ತು ಮೇವಿಸ್ ಮ್ಯಾಥ್ಯೂಸ್ರೊಂದಿಗೆ ಜೋನ್ ಹಲಿ ಮತ್ತು ಬೆರಲ್ ಹೇವುಡ್, ಫಾಮಗಸ್ಟದಲ್ಲಿದ್ದ ನನ್ನೊಂದಿಗೆ ಜೊತೆಗೂಡಿದರು, ಮತ್ತು ಟಾಮ್ ಹಾಗೂ ಮೇರಿ ಗೂಲ್ಡೆನ್, ಮತ್ತು ಮೂಲತಃ ಸೈಪ್ರಸ್ ದೇಶದವರಾಗಿದ್ದರೂ ಲಂಡನ್ನಲ್ಲಿ ಹುಟ್ಟಿ ಬೆಳೆದ ನೀನ ಕಾನ್ಸ್ಟೆಂಟಿ ಲಿಮಾಸೊಲ್ಗೆ ಹೋದರು. ಅದೇ ಸಮಯದಲ್ಲಿ ಬಿಲ್ ಕಾಪ್ಸನ್ರನ್ನು ಸೈಪ್ರಸ್ಗೆ ಸ್ಥಳಾಂತರಿಸಲಾಯಿತು, ಮತ್ತು ಅನಂತರ ಬರ್ಟ್ ಹಾಗೂ ಬೆರಲ್ ವೈಸೇ ಬಂದು ಅವರನ್ನು ಜೊತೆಗೂಡಿದರು.
ಬದಲಾಗುತ್ತಿದ್ದ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವುದು
ಇಸವಿ 1957ರ ಅಂತ್ಯದೊಳಗೆ, ನಾನು ಕಾಯಿಲೆಬಿದ್ದು, ನನ್ನ ಮಿಷನೆರಿ ನೇಮಕದಲ್ಲಿ ಮುಂದುವರಿಯಲು ಅಶಕ್ತನಾದೆ. ನನ್ನ ಆರೋಗ್ಯವನ್ನು ಸುಧಾರಿಸಲಿಕ್ಕಾಗಿ ನಾನು ದುಃಖದಿಂದ ಇಂಗ್ಲೆಂಡಿಗೆ ಹಿಂದಿರುಗಲು ನಿರ್ಧರಿಸಿದೆ. ಅಲ್ಲಿ ನಾನು 1960ರ ವರೆಗೆ ಪಯನೀಯರ್ ಸೇವೆಯಲ್ಲಿ ಮುಂದುವರಿದೆ. ನನ್ನ ಅಕ್ಕ ಮತ್ತು ಭಾವ ದಯೆಯಿಂದ ನನ್ನನ್ನು ತಮ್ಮ ಮನೆಯಲ್ಲಿ ಇರಿಸಿಕೊಂಡರು, ಆದರೆ ಪರಿಸ್ಥಿತಿಗಳು ಬದಲಾಗಿದ್ದವು. ಜೋನ್ಳಿಗೆ ಎಲ್ಲ ವಿಷಯಗಳನ್ನೂ ನಿಭಾಯಿಸುವುದು ಹೆಚ್ಚೆಚ್ಚು ಕಷ್ಟಕರವಾಗುತ್ತಾ ಇತ್ತು. ಏಕೆಂದರೆ ಅವಳು ತನ್ನ ಗಂಡನನ್ನೂ ಎಳೆಯ ಮಗಳನ್ನೂ ನೋಡಿಕೊಳ್ಳುವುದರೊಂದಿಗೆ, ನನ್ನ ಅನುಪಸ್ಥಿತಿಯ 17 ವರ್ಷಗಳ ಸಮಯದಲ್ಲಿ, ವೃದ್ಧರೂ ಅಸ್ವಸ್ಥರೂ ಆಗಿಬಿಟ್ಟಿದ್ದ ನಮ್ಮ ತಂದೆ ಹಾಗೂ ಚಿಕ್ಕಮ್ಮ ಮಿಲಿಯನ್ನೂ ಪ್ರೀತಿಯಿಂದ ಪರಾಮರಿಸಿದ್ದಳು. ಸ್ವತ್ಯಾಗದ ವಿಷಯದಲ್ಲಿ ನನ್ನ ಚಿಕ್ಕಮ್ಮ ಇಟ್ಟಿದ್ದಂಥ ಮಾದರಿಯನ್ನು ನಾನು ಅನುಕರಿಸುವ ಅಗತ್ಯವು ಸುವ್ಯಕ್ತವಾಗಿತ್ತು, ಆದುದರಿಂದ ನನ್ನ ಚಿಕ್ಕಮ್ಮ ಹಾಗೂ ತಂದೆ ಇಬ್ಬರೂ ತೀರಿಹೋಗುವ ವರೆಗೆ ನಾನು ನನ್ನ ಅಕ್ಕನೊಂದಿಗೇ ಉಳಿದೆ.
ಇಂಗ್ಲೆಂಡ್ನಲ್ಲೇ ನೆಲೆಸುವುದು ತುಂಬ ಸುಲಭವಾಗಿರುತ್ತಿತ್ತು. ಆದರೆ ಸ್ವಲ್ಪ ಕಾಲ ವಿಶ್ರಮಿಸಿದ ಬಳಿಕ, ನಾನು ನನ್ನ ನೇಮಕಕ್ಕೆ ಹಿಂದಿರುಗಬೇಕೆಂಬ ಕರ್ತವ್ಯಪ್ರಜ್ಞೆಯು ನನ್ನಲ್ಲಿ ಉಂಟಾಯಿತು. ನನ್ನನ್ನು ತರಬೇತಿಗೊಳಿಸಲಿಕ್ಕಾಗಿ ಯೆಹೋವನ ಸಂಸ್ಥೆಯು ಬಹಳಷ್ಟು ಹಣವನ್ನು ಖರ್ಚುಮಾಡಿತ್ತಲ್ಲವೇ? ಆದುದರಿಂದ, 1972ರಲ್ಲಿ ನನ್ನ ಸ್ವಂತ ಖರ್ಚಿನಲ್ಲೇ ನಾನು ಸೈಪ್ರಸ್ಗೆ ಹಿಂದಿರುಗಿ, ಅಲ್ಲಿ ಪುನಃ ಪಯನೀಯರ್ ಸೇವೆಯನ್ನಾರಂಭಿಸಿದೆ.
ಮುಂದಿನ ವರ್ಷ ನಡೆಯಲಿದ್ದ ಒಂದು ಅಧಿವೇಶನಕ್ಕಾಗಿ ಏರ್ಪಾಡುಗಳನ್ನು ಮಾಡಲು ನೇತನ್ ಏಚ್. ನಾರ್ ಇಲ್ಲಿಗೆ ಆಗಮಿಸಿದರು. ನಾನು ಹಿಂದಿರುಗಿದ್ದೇನೆಂದು ಅವರಿಗೆ ತಿಳಿದುಬಂದಾಗ, ಆ ಇಡೀ ದ್ವೀಪಕ್ಕೆ ನಾನು ಸರ್ಕಿಟ್ ಮೇಲ್ವಿಚಾರಕನಾಗುವಂತೆ ನೇಮಕಪಡೆಯಲು ಅವರು ಶಿಫಾರಸ್ಸುಮಾಡಿದರು. ನಾನು ಆ ಸುಯೋಗದಲ್ಲಿ ನಾಲ್ಕು ವರ್ಷಗಳನ್ನು ಕಳೆದೆ. ಅದೊಂದು ಭಯಹಿಡಿಸುವ ನೇಮಕವಾಗಿತ್ತು, ಯಾಕೆಂದರೆ ನಾನು ಹೆಚ್ಚಿನ ವೇಳೆ ಗ್ರೀಕ್ ಭಾಷೆಯನ್ನಾಡಬೇಕಾಗುತ್ತಿತ್ತು.
ತೊಂದರೆಯ ಸಮಯ
ಸೈಪ್ರಸ್ ದೇಶದವನಾಗಿದ್ದ ಗ್ರೀಕ್ ಭಾಷೆಯನ್ನಾಡುವ ಇನ್ನೊಬ್ಬ ಸಾಕ್ಷಿಯಾದ ಪಾಲ್ ಆಂಡ್ರೂ ಮತ್ತು ನಾನು, ಸೈಪ್ರಸ್ನ ಉತ್ತರ ಕರಾವಳಿಯಲ್ಲಿ ಕಿರೀನ್ಯದ ಪೂರ್ವಕ್ಕಿರುವ ಕಾರಾಕೂಮಿ ಎಂಬ ಹಳ್ಳಿಯಲ್ಲಿ ಒಂದು ಮನೆಯಲ್ಲಿ ಜೊತೆಯಾಗಿ ವಾಸಿಸುತ್ತಿದ್ದೆವು. ಸೈಪ್ರಸ್ನ ಬ್ರಾಂಚ್ ಆಫೀಸು, ಕಿರೀನ್ಯ ಪರ್ವತಗಳ ದಕ್ಷಿಣಕ್ಕಿರುವ ನಿಕೊಸಿಯದಲ್ಲಿತ್ತು. ಜುಲೈ 1974ರ ಆದಿ ಭಾಗದಲ್ಲಿ, ರಾಷ್ಟ್ರಾಧ್ಯಕ್ಷ ಮಾಕಾರಿಯೊಸ್ನನ್ನು ಪದಚ್ಯುತಮಾಡಲಿಕ್ಕಾಗಿ ನಡೆದ ಕ್ಷಿಪ್ರ ಕ್ರಾಂತಿಯ ಸಮಯದಲ್ಲಿ ನಾನು ನಿಕೊಸಿಯದಲ್ಲೇ ಇದ್ದೆ, ಮತ್ತು ಅವನ ಅರಮನೆಯು ಬೆಂಕಿಗೆ ಆಹುತಿಯಾಗುವುದನ್ನು ಕಣ್ಣಾರೆ ಕಂಡೆ. ಪ್ರಯಾಣಮಾಡುವುದು ಸುರಕ್ಷಿತವಾದಾಗ, ನಾನು ಕಿರೀನ್ಯಕ್ಕೆ ತರಾತುರಿಯಿಂದ ಹಿಂದಿರುಗಿದೆ. ಅಲ್ಲಿ ನಾವು ಒಂದು ಸರ್ಕಿಟ್ ಸಮ್ಮೇಳನಕ್ಕಾಗಿ ತಯಾರಿ ನಡೆಸುತ್ತಾ ಇದ್ದೆವು. ಎರಡು ದಿನಗಳ ಬಳಿಕ, ಬಂದರಿನಲ್ಲಿ ಮೊದಲ ಬಾಂಬ್ ಬೀಳುವುದನ್ನು ನಾನು ಕೇಳಿಸಿಕೊಂಡೆ, ಮತ್ತು ಗಗನವು ಟರ್ಕಿಯಿಂದ ದಾಳಿಮಾಡುವ ಸೈನ್ಯಗಳನ್ನು ತಂದ ಹೆಲಿಕಾಪ್ಟರ್ಗಳಿಂದ ತುಂಬಿಹೋಗಿದ್ದನ್ನು ನೋಡಿದೆ.
ನಾನೊಬ್ಬ ಬ್ರಿಟಿಷ್ ಪ್ರಜೆಯಾಗಿದ್ದದರಿಂದ ಟರ್ಕಿಷ್ ಸೈನಿಕರು ನನ್ನನ್ನು ನಿಕೊಸಿಯದ ಹೊರವಲಯಕ್ಕೆ ಕೊಂಡೊಯ್ದರು. ಅಲ್ಲಿ ವಿಶ್ವಸಂಸ್ಥೆಯ ಸಿಬ್ಬಂದಿಯವರು ನನ್ನನ್ನು ಪ್ರಶ್ನಿಸಿದ ನಂತರ, ಬ್ರಾಂಚ್ ಆಫೀಸ್ನೊಂದಿಗೆ ಸಂಪರ್ಕಮಾಡಿದರು. ಅನಂತರ ನಾನು, ಯಾರಿಗೂ ಸೇರಿಲ್ಲದ ಪ್ರದೇಶದ ಆಚೆ ಬದಿಯಲ್ಲಿದ್ದ ನಿರ್ಜನ ಮನೆಗಳಿಗೆ ತಲಪಲು ಟೆಲಿಫೋನ್ ಹಾಗೂ ಎಲೆಕ್ಟ್ರಿಕಲ್ ತಂತಿಗಳ ಜಟಿಲ ರಾಶಿಯ ಮಧ್ಯದಿಂದ ನಡೆದುಹೋಗುವ ಭಯಭರಿತ ಕೆಲಸವು ನನ್ನ ಮುಂದೆ ಇತ್ತು. ಯೆಹೋವ ದೇವರೊಂದಿಗಿನ ನನ್ನ ಸಂಪರ್ಕದ ತಂತಿಯು ಕಡಿಯಲಸಾಧ್ಯವಾದುದಕ್ಕಾಗಿ ನಾನೆಷ್ಟು ಹರ್ಷಿತನಾಗಿದ್ದೆ! ನನ್ನ ಜೀವಿತದಲ್ಲಿನ ಅತಿ ಸಂಕಷ್ಟಕರ ಅನುಭವಗಳ ಸಮಯದಲ್ಲಿ ನನ್ನ ಪ್ರಾರ್ಥನೆಗಳೇ ನನಗೆ ಬೇಕಾದ ಶಕ್ತಿಯನ್ನು ಕೊಟ್ಟವು.
ನಾನು ನನ್ನ ಎಲ್ಲ ಸ್ವತ್ತುಗಳನ್ನೂ ಕಳೆದುಕೊಂಡಿದ್ದೆ, ಆದರೆ ನನಗೆ ಬ್ರಾಂಚ್ ಆಫೀಸ್ನಲ್ಲಿ ಸಿಕ್ಕಿದ ಸುರಕ್ಷೆಗಾಗಿ ಸಂತೋಷಿತನಾಗಿದ್ದೆ. ಆದರೆ ಈ ಸನ್ನಿವೇಶವು ಅಲ್ಪಾವಧಿಯದ್ದಾಗಿತ್ತು. ಕೆಲವೇ ದಿನಗಳೊಳಗೆ, ದಾಳಿಮಾಡುತ್ತಿದ್ದ ಪಡೆಗಳು ಆ ದ್ವೀಪದ ಉತ್ತರ ಭಾಗವನ್ನು ವಶಪಡಿಸಿಕೊಂಡವು. ಬೆತೆಲನ್ನು ತೊರೆಯಬೇಕಾಯಿತು ಮತ್ತು ನಾವು ಲಿಮೊಸೊಲ್ಗೆ ಸ್ಥಳಾಂತರಿಸಿದೆವು. ಅಲ್ಲಿನ ಗಲಭೆಯಿಂದಾಗಿ ಬಾಧಿತರಾಗಿದ್ದ 300 ಮಂದಿ ಸಹೋದರರ ಆರೈಕೆಮಾಡಲು ರಚಿಸಲ್ಪಟ್ಟಿದ್ದ ಒಂದು ಕಮಿಟಿಯೊಂದಿಗೆ ಕೆಲಸಮಾಡಲು ನಾನು ಸಂತೋಷಿಸಿದೆ. ಆ ಸಹೋದರರಲ್ಲಿ ಹೆಚ್ಚಿನವರು ತಮ್ಮ ಮನೆಗಳನ್ನು ಕಳೆದುಕೊಂಡಿದ್ದರು.
ನೇಮಕಗಳಲ್ಲಿ ಹೆಚ್ಚಿನ ಬದಲಾವಣೆಗಳು
ಜನವರಿ 1981ರಲ್ಲಿ, ನಾನು ಅಥೆನ್ಸ್ನಲ್ಲಿರುವ ಬೆತೆಲ್ ಕುಟುಂಬವನ್ನು ಸೇರಲಿಕ್ಕಾಗಿ ಗ್ರೀಸ್ ದೇಶಕ್ಕೆ ಸ್ಥಳಾಂತರಿಸುವಂತೆ ಆಡಳಿತ ಮಂಡಲಿಯು ನನ್ನನ್ನು ಕೇಳಿಕೊಂಡಿತು. ಆದರೆ ಆ ವರ್ಷದ ಅಂತ್ಯದೊಳಗೆ, ನಾನು ಪುನಃ ಸೈಪ್ರಸ್ನಲ್ಲಿ ಇದ್ದೆ ಮತ್ತು ಬ್ರಾಂಚ್ ಕಮಿಟಿಯ ಕೊಆರ್ಡಿನೇಟರ್ ಆಗಿ ನೇಮಿಸಲ್ಪಟ್ಟೆ. ಆಂತ್ರಿಯಾಸ್ ಕಾಂಡಾಯೊರ್ಗೀಸ್ ಮತ್ತು ಅವರ ಹೆಂಡತಿ ಮಾರೊ ಎಂಬ ಲಂಡನ್ನಿಂದ ಕಳುಹಿಸಲ್ಪಟ್ಟ ಸೈಪ್ರಸ್ ನಿವಾಸಿಗಳು, ನನಗೆ “ಬಲವರ್ಧಕ ನೆರವು” ಆಗಿ ಪರಿಣಮಿಸಿದರು.—ಕೊಲೊಸ್ಸೆ 4:11, NW.
ಇಸವಿ 1984ರಲ್ಲಿ ಥಿಯೊಡರ್ ಜಾರಸ್ರವರ ಸೋನ್ ಭೇಟಿಯ ಅಂತ್ಯದಲ್ಲಿ ನನಗೆ ಆಡಳಿತ ಮಂಡಲಿಯಿಂದ ಒಂದು ಪತ್ರ ಸಿಕ್ಕಿತು. ಅದರಲ್ಲಿ ಇಷ್ಟೇ ಹೇಳಲಾಗಿತ್ತು: “ಸಹೋದರ ಜಾರಸ್ರ ಭೇಟಿಯು ಅಂತ್ಯಗೊಂಡಾಗ, ನೀವು ಅವರೊಂದಿಗೆ ಗ್ರೀಸ್ಗೆ ಬರುವಂತೆ ಬಯಸುತ್ತೇವೆ.” ಯಾವುದೇ ಕಾರಣವನ್ನು ಕೊಡಲಾಗಲಿಲ್ಲ, ಆದರೆ ನಾವು ಗ್ರೀಸ್ಗೆ ಬಂದು ತಲಪಿದಾಗ, ನನ್ನನ್ನು ಆ ದೇಶದಲ್ಲಿ ಬ್ರಾಂಚ್ ಕಮಿಟಿಯ ಕೊಆರ್ಡಿನೇಟರ್ ಆಗಿ ನೇಮಿಸುತ್ತಾ, ಆಡಳಿತ ಮಂಡಲಿಯಿಂದ ಬಂದ ಇನ್ನೊಂದು ಪತ್ರವನ್ನು ಬ್ರಾಂಚ್ ಕಮಿಟಿಗೆ ಓದಿಹೇಳಲಾಯಿತು.
ಇಷ್ಟರೊಳಗೆ, ಧರ್ಮಭ್ರಷ್ಟತೆಯು ತಲೆದೋರುತ್ತಾ ಇತ್ತು. ಕಾನೂನುನಿಷಿದ್ಧವಾದ ಮತಾಂತರದ ಬಗ್ಗೆಯೂ ಅನೇಕ ತಪ್ಪಾರೋಪಗಳಿದ್ದವು. ದಿನಾಲೂ ಯೆಹೋವನ ಜನರನ್ನು ದಸ್ತಗಿರಿಮಾಡಿ, ನ್ಯಾಯಾಲಯಕ್ಕೆ ಕೊಂಡೊಯ್ಯಲಾಗುತ್ತಿತ್ತು. ಈ ಪರೀಕ್ಷೆಯ ಸಮಯದಲ್ಲಿ ತಮ್ಮ ಸಮಗ್ರತೆಯನ್ನು ಕಾಪಾಡಿಕೊಂಡಿದ್ದ ಸಹೋದರ ಸಹೋದರಿಯರೊಂದಿಗೆ ಪರಿಚಿತರಾಗುವುದು ಎಂಥ ಸುಯೋಗವಾಗಿತ್ತು! ಅವರ ಮೊಕದ್ದಮೆಗಳಲ್ಲಿ ಕೆಲವೊಂದನ್ನು ತದನಂತರ ಮಾನವ ಹಕ್ಕುಗಳ ಯುರೋಪಿಯನ್ ಕೋರ್ಟ್ನಲ್ಲಿ ಕೇಳಿಸಿಕೊಳ್ಳಲಾಯಿತು. ಮತ್ತು ಇವು, ಗ್ರೀಸ್ನಲ್ಲಿ ನಡೆಯುತ್ತಿದ್ದ ಸಾರುವ ಕೆಲಸದ ಮೇಲೆ ಒಳ್ಳೆಯ ಪರಿಣಾಮವನ್ನು ಬೀರಿದ ಅದ್ಭುತಕರ ಫಲಿತಾಂಶಗಳನ್ನು ತಂದವು.c
ನಾನು ಗ್ರೀಸ್ನಲ್ಲಿ ಸೇವೆಸಲ್ಲಿಸುತ್ತಿದ್ದಾಗ, ಅಥೆನ್ಸ್, ಥೆಸಲೊನೈಕ, ಮತ್ತು ರ್ಹೋಡ್ಸ್ ಹಾಗೂ ಕ್ರೀಟ್ ದ್ವೀಪಗಳಲ್ಲಿ ನಡೆದ ಸ್ಮರಣೀಯ ಅಧಿವೇಶನಗಳಿಗೆ ಹಾಜರಾಗಲು ಶಕ್ತನಾದೆ. ಅವು ಸಂತೋಷಭರಿತವಾದ, ಫಲಭರಿತ ನಾಲ್ಕು ವರ್ಷಗಳಾಗಿದ್ದವು. ಆದರೆ ಇನ್ನೊಂದು ಬದಲಾವಣೆಯು ಬರಲಿತ್ತು—1988ರಲ್ಲಿ ಸೈಪ್ರಸ್ಗೆ ಹಿಂದಿರುಗುವುದೇ.
ಸೈಪ್ರಸ್ಗೆ ಮತ್ತು ಪುನಃ ಗ್ರೀಸ್ಗೆ
ನಾನು ಸೈಪ್ರಸ್ನಲ್ಲಿಲ್ಲದಿದ್ದಾಗ, ಸಹೋದರರು ನಿಸೂ ಎಂಬಲ್ಲಿ ಹೊಸ ಬ್ರಾಂಚ್ ಕಟ್ಟಡಗಳನ್ನು ಸಿದ್ಧಗೊಳಿಸಿದ್ದರು. ಇದು ನಿಕೊಸಿಯಾದಿಂದ ಕೆಲವೇ ಕಿಲೊಮೀಟರ್ ದೂರದಲ್ಲಿತ್ತು. ಮತ್ತು ಯೆಹೋವನ ಸಾಕ್ಷಿಗಳ ಬ್ರೂಕ್ಲಿನ್ ಮುಖ್ಯಕಾರ್ಯಾಲಯದಿಂದ ಬಂದ ಕ್ಯಾರಿ ಬಾರ್ಬರ್ ಅವರು ಸಮರ್ಪಣೆಯ ಭಾಷಣವನ್ನು ಕೊಟ್ಟರು. ಈಗ ಆ ದ್ವೀಪದಲ್ಲಿ ಸನ್ನಿವೇಶವು ಹೆಚ್ಚು ಶಾಂತವಾಗಿತ್ತು, ಮತ್ತು ನಾನು ಅಲ್ಲಿ ಹಿಂದಿರುಗಿದ್ದಕ್ಕಾಗಿ ಸಂತೋಷಪಟ್ಟೆ. ಆದರೆ ಇದು ಸಹ ಬೇಗನೆ ಬದಲಾಗಲಿತ್ತು.
ಗ್ರೀಸ್ನಲ್ಲಿ, ಅಥೆನ್ಸ್ನ ಉತ್ತರಕ್ಕೆ ಕೆಲವು ಕಿಲೊಮೀಟರ್ ದೂರದಲ್ಲಿ ಒಂದು ಹೊಸ ಬೆತೆಲ್ ಗೃಹವನ್ನು ಕಟ್ಟುವ ಯೋಜನೆಗಳಿಗೆ ಆಡಳಿತ ಮಂಡಲಿಯು ಅನುಮೋದನೆಯನ್ನು ಕೊಟ್ಟಿತ್ತು. ನಾನು ಇಂಗ್ಲಿಷ್ ಹಾಗೂ ಗ್ರೀಕ್ ಭಾಷೆಗಳನ್ನಾಡಲು ಶಕ್ತನಾಗಿದ್ದದ್ದರಿಂದ, ಅಲ್ಲಿ ಕೆಲಸಮಾಡುತ್ತಿದ್ದ ಅಂತಾರಾಷ್ಟ್ರೀಯ ಸೇವಕರ ಕುಟುಂಬಕ್ಕಾಗಿ ಒಬ್ಬ ತರ್ಜುಮೆಗಾರನಾಗಿ ಸೇವೆಸಲ್ಲಿಸುವಂತೆ ನನ್ನನ್ನು 1990ರಲ್ಲಿ ಆ ಹೊಸ ಕಟ್ಟಡ ನಿವೇಶನದಲ್ಲಿ ಕೆಲಸಮಾಡುವಂತೆ ಪುನಃ ಆಮಂತ್ರಿಸಲಾಯಿತು. ನಿರ್ಮಾಣ ಕುಟುಂಬದೊಂದಿಗೆ ಜೊತೆಜೊತೆಯಾಗಿ ಕೆಲಸಮಾಡಲಿಕ್ಕಾಗಿ ಮುಂದೆ ಬಂದಂಥ ನೂರಾರು ಗ್ರೀಕ್ ಸಹೋದರ ಸಹೋದರಿಯರನ್ನು ಸ್ವಾಗತಿಸಲಿಕ್ಕಾಗಿ, ಬೇಸಗೆಕಾಲದ ಬೆಳಗ್ಗೆಗಳಂದು ಆರು ಗಂಟೆಗೆ ಕಟ್ಟಡ ನಿವೇಶನದಲ್ಲಿ ಇರಲು ನನಗಾಗುತ್ತಿದ್ದ ಆನಂದವನ್ನು ನಾನು ಈಗಲೂ ಜ್ಞಾಪಿಸಿಕೊಳ್ಳಬಲ್ಲೆ! ಅವರ ಸಂತೋಷ ಮತ್ತು ಹುರುಪಿನ ಸವಿನೆನಪುಗಳು ಯಾವಾಗಲೂ ನನ್ನ ಬಳಿ ಇರುವವು.
ಗ್ರೀಕ್ ಆರ್ತೊಡಾಕ್ಸ್ ಪಾದ್ರಿಗಳು ಮತ್ತು ಅವರ ಬೆಂಬಲಿಗರು ನಿವೇಶನವನ್ನು ಪ್ರವೇಶಿಸಿ, ನಮ್ಮ ಕೆಲಸವನ್ನು ಭಂಗಗೊಳಿಸಲು ಪ್ರಯತ್ನಿಸಿದರು. ಆದರೆ ಯೆಹೋವನು ನಮ್ಮ ಪ್ರಾರ್ಥನೆಗಳನ್ನು ಆಲಿಸಿದನು ಮತ್ತು ನಾವು ಸಂರಕ್ಷಿಸಲ್ಪಟ್ಟೆವು. 1991ರ ಏಪ್ರಿಲ್ 13ರಂದು ಹೊಸ ಬೆತೆಲ್ ಗೃಹದ ಸಮರ್ಪಣೆ ಆಗುವುದನ್ನು ನೋಡಲಿಕ್ಕಾಗಿ ನಾನು ಅಲ್ಲಿಯೇ ಉಳಿದೆ.
ನನ್ನ ಪ್ರಿಯ ಅಕ್ಕನನ್ನು ಬೆಂಬಲಿಸುವುದು
ಮುಂದಿನ ವರ್ಷ ನಾನು ರಜೆಗಾಗಿ ಇಂಗ್ಲೆಂಡಿಗೆ ತೆರಳಿದೆ ಮತ್ತು ಅಲ್ಲಿ ನನ್ನ ಅಕ್ಕ ಹಾಗೂ ಭಾವನವರೊಂದಿಗೆ ಉಳಿದೆ. ದುಃಖದ ಸಂಗತಿಯೇನೆಂದರೆ ನಾನು ಅಲ್ಲಿದ್ದಾಗ, ನನ್ನ ಭಾವನಿಗೆ ಎರಡು ಹೃದಯಾಘಾತಗಳಾಗಿ ಅವರು ತೀರಿಹೋದರು. ನನ್ನ ಮಿಷನೆರಿ ಸೇವೆಯ ಸಮಯದಲ್ಲೆಲ್ಲ ಜೋನ್ ನನಗೆ ಪುಷ್ಕಳ ಬೆಂಬಲವನ್ನು ಕೊಟ್ಟಿದ್ದಳು. ಒಂದೇ ಒಂದು ವಾರ ಬಿಡದೆ, ಅವಳು ತಪ್ಪದೇ ನನಗೆ ಉತ್ತೇಜನದಾಯಕ ಪತ್ರಗಳನ್ನು ಬರೆಯುತ್ತಿದ್ದಳು. ಇದು, ಯಾವುದೇ ಮಿಷನೆರಿಗೆ ಎಂಥ ಒಂದು ಆಶೀರ್ವಾದವಾಗಿದೆ! ಈಗ ಅವಳೊಬ್ಬ ವಿಧವೆಯಾಗಿದ್ದಳು, ಆರೋಗ್ಯವು ಕೆಡುತ್ತಾ ಇತ್ತು ಮತ್ತು ಬೆಂಬಲದ ಅಗತ್ಯವಿತ್ತು. ಈಗ ನಾನೇನು ಮಾಡಬೇಕು?
ಜೋನ್ಳ ಮಗಳಾದ ಥೆಲ್ಮ ಮತ್ತು ಅವಳ ಗಂಡನು ಈಗಾಗಲೇ, ನಮ್ಮ ಸೋದರಬಂಧುಗಳಲ್ಲಿ ಒಬ್ಬಳಾಗಿದ್ದ ಮತ್ತು ಪ್ರಾಣಾಂತಕ ರೋಗಕ್ಕೆ ತುತ್ತಾಗಿದ್ದ, ಸಭೆಯಲ್ಲಿನ ಇನ್ನೊಬ್ಬ ನಂಬಿಗಸ್ತ ವಿಧವೆಯ ಪರಾಮರಿಕೆಯನ್ನು ಮಾಡುತ್ತಿದ್ದರು. ಆದುದರಿಂದ ಬಹಳಷ್ಟು ಪ್ರಾರ್ಥನೆಗಳನ್ನು ಮಾಡಿದ ನಂತರ, ನಾನು ಜೋನ್ಳ ಆರೈಕೆ ಮಾಡಲಿಕ್ಕೋಸ್ಕರ ಹಿಂದೆ ಉಳಿಯಲು ನಿರ್ಧರಿಸಿದೆ. ಈ ಹೊಂದಾಣಿಕೆಯನ್ನು ಮಾಡುವುದು ಸುಲಭವಾಗಿರಲಿಲ್ಲ, ಆದರೆ ಈಗ ಯೋವಿಲ್ನಲ್ಲಿರುವ ಎರಡು ಸಭೆಗಳಲ್ಲೊಂದಾಗಿರುವ ಪೆನ್ ಮಿಲ್ನಲ್ಲಿ ಹಿರಿಯನಾಗಿ ಸೇವೆಸಲ್ಲಿಸುವ ಸುಯೋಗ ನನಗಿದೆ.
ನಾನು ವಿದೇಶದಲ್ಲಿ ಯಾರೊಂದಿಗೆ ಸೇವೆಮಾಡಿದೆನೊ ಆ ಸಹೋದರರು, ನನ್ನೊಂದಿಗೆ ಫೋನ್ ಮೂಲಕವೂ ಪತ್ರಗಳ ಮೂಲಕವೂ ಸಂಪರ್ಕವನ್ನಿಡುತ್ತಾರೆ. ಮತ್ತು ಇದಕ್ಕಾಗಿ ನಾನು ತುಂಬ ಆಭಾರಿಯಾಗಿದ್ದೇನೆ. ನಾನು ಗ್ರೀಸ್ ಇಲ್ಲವೇ ಸೈಪ್ರಸ್ಗೆ ಹಿಂದಿರುಗಲು ಬಯಸುತ್ತೇನೆಂದು ಹೇಳಿದರೆ ಸಾಕು, ನನ್ನ ಪ್ರಯಾಣದ ಟಿಕೇಟುಗಳನ್ನು ಅವರು ಒಡನೆಯೇ ನನಗೆ ಕಳುಹಿಸುವರೆಂದು ನನಗೆ ಗೊತ್ತಿದೆ. ಆದರೆ ನನಗೀಗ 80 ವರ್ಷ ಪ್ರಾಯ ಮತ್ತು ನನ್ನ ದೃಷ್ಟಿಯಾಗಲಿ, ಆರೋಗ್ಯವಾಗಲಿ ಒಂದುಕಾಲದಲ್ಲಿ ಇದ್ದಷ್ಟು ಒಳ್ಳೇದಾಗಿಲ್ಲ. ಹಿಂದಿನಷ್ಟು ಸಕ್ರಿಯನಾಗಿರಲು ಆಶಕ್ತನಾಗಿರುವುದು ನನಗೆ ತುಂಬ ನಿರಾಶೆಯನ್ನುಂಟುಮಾಡುತ್ತದೆ. ಆದರೆ ಬೆತೆಲ್ ಸೇವೆಯಲ್ಲಿ ನಾನು ಕಳೆದಿರುವ ವರ್ಷಗಳು, ಇಂದು ನನಗೆ ಉಪಯುಕ್ತವಾಗಿರುವ ಅನೇಕ ಅಭ್ಯಾಸಗಳನ್ನು ಬೆಳೆಸಿಕೊಳ್ಳುವಂತೆ ಸಹಾಯಮಾಡಿವೆ. ಉದಾಹರಣೆಗಾಗಿ ನಾನು ಬೆಳಗ್ಗಿನ ಉಪಾಹಾರಕ್ಕೆ ಮುಂಚೆ ಯಾವಾಗಲೂ ದೈನಿಕ ವಚನವನ್ನು ಓದುತ್ತೇನೆ. ನಾನು ಜನರೊಂದಿಗೆ ಹೊಂದಿಕೊಂಡು ಹೋಗಲು ಮತ್ತು ಅವರನ್ನು ಪ್ರೀತಿಸಲು ಕಲಿತುಕೊಂಡೆ. ಇದು ಯಶಸ್ವಿಭರಿತ ಮಿಷನೆರಿ ಸೇವೆಯ ಕೀಲಿ ಕೈಯಾಗಿದೆ.
ಯೆಹೋವನನ್ನು ಸ್ತುತಿಸುವುದರಲ್ಲಿ ನಾನು ಕಳೆದಿರುವ ಸುಮಾರು 60 ವರ್ಷಗಳ ಕುರಿತಾಗಿ ನಾನು ಯೋಚಿಸುವಾಗ, ಪೂರ್ಣ ಸಮಯದ ಶುಶ್ರೂಷೆಯು ಅತಿ ಶ್ರೇಷ್ಠವಾದ ಸುರಕ್ಷೆಯಾಗಿದೆ ಮತ್ತು ಅತ್ಯುತ್ತಮವಾದ ಶಿಕ್ಷಣವನ್ನು ಕೊಡುತ್ತದೆಂದು ನನಗೆ ಗೊತ್ತಿದೆ. “ಇಕ್ಕಟ್ಟಿನ ಕಾಲದಲ್ಲಿ ಆಶ್ರಯವೂ ದುರ್ಗವೂ ಆಗಿರುವ ನಿನ್ನ ಬಲವನ್ನು ಹಾಡಿ ಹೊಗಳುವೆನು” ಎಂಬ ದಾವೀದನ ಮಾತುಗಳನ್ನು ನಾನು ಮನಃಪೂರ್ವಕವಾಗಿ ಪ್ರತಿಧ್ವನಿಸಬಲ್ಲೆ.—ಕೀರ್ತನೆ 59:16.
[ಪಾದಟಿಪ್ಪಣಿಗಳು]
a “ನನ್ನ ಹೃದಯವು ಕೃತಜ್ಞತೆಯಿಂದ ತುಂಬಿತುಳುಕುತ್ತದೆ” ಎಂಬ ಜಾನ್ ವಿನ್ರವರ ಜೀವನ ಕಥೆಯು, 1997ರ ಸೆಪ್ಟೆಂಬರ್ 1ರ ಕಾವಲಿನಬುರುಜು ಪತ್ರಿಕೆಯಲ್ಲಿ, 25-8ನೆಯ ಪುಟಗಳಲ್ಲಿ ಬಂದಿತ್ತು.
b ಹಿಂದೆ ಕಾನ್ಸಲೇಷನ್ ಎಂದು ಪ್ರಸಿದ್ಧವಾಗಿತ್ತು.
c ಇಸವಿ 1998, ಡಿಸೆಂಬರ್ 1ರ ಕಾವಲಿನಬುರುಜು ಪತ್ರಿಕೆಯ 20-1ನೆಯ ಪುಟಗಳನ್ನು ಮತ್ತು 1993, ಸೆಪ್ಟೆಂಬರ್ 1ರ ಸಂಚಿಕೆಯ, 27-31ನೆಯ ಪುಟಗಳನ್ನು; ಎಚ್ಚರ! (ಇಂಗ್ಲಿಷ್) ಪತ್ರಿಕೆಯ 1998, ಜನವರಿ 8ರ ಸಂಚಿಕೆಯ, 21-2ನೆಯ ಪುಟಗಳನ್ನು ಮತ್ತು (ಕನ್ನಡ) 1997, ಏಪ್ರಿಲ್ 8ರ ಸಂಚಿಕೆಯ 14-15ನೆಯ ಪುಟಗಳನ್ನು ನೋಡಿರಿ.
[ಪುಟ 24ರಲ್ಲಿರುವ ಭೂಪಟಗಳು]
(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)
ಗ್ರೀಸ್
ಅಥೆನ್ಸ್
ಸೈಪ್ರಸ್
ನಿಕೊಸಿಯ
ಕಿರೀನ್ಯ
ಫಾಮಗಸ್ಟ
ಲಿಮೊಸೊಲ್
[ಪುಟ 21ರಲ್ಲಿರುವ ಚಿತ್ರ]
1915ರಲ್ಲಿ ತಾಯಿ
[ಪುಟ 22ರಲ್ಲಿರುವ ಚಿತ್ರ]
1946ರಲ್ಲಿ ಬ್ರೂಕ್ಲಿನ್ ಬೆತೆಲ್ನ ಛಾವಣಿಯ ಮೇಲೆ, ನಾನು (ಎಡಬದಿಯಿಂದ ನಾಲ್ಕನೆಯವನು) ಮತ್ತು ಗಿಲ್ಯಡ್ ಶಾಲೆಯ ಎಂಟನೆಯ ತರಗತಿಯ ಬೇರೆ ಸಹೋದರರು
[ಪುಟ 23ರಲ್ಲಿರುವ ಚಿತ್ರ]
ಇಂಗ್ಲೆಂಡಿಗೆ ಮೊದಲ ಬಾರಿ ಹಿಂದಿರುಗಿದಾಗ ಚಿಕ್ಕಮ್ಮ ಮಿಲಿಯೊಂದಿಗೆ