ನಂಬಲು ಸರಿಯಾದ ಕಾರಣ
ಯುವ ಜನರು ಚರ್ಚನ್ನು ತ್ಯಜಿಸಲು 31 ಕಾರಣಗಳು ಎಂಬ ಕೊರಿಯನ್ ಪುಸ್ತಕವು ಪ್ರತಿಪಾದಿಸುವುದೇನೆಂದರೆ, ಅನೇಕರು ತಮ್ಮ ಪ್ರಶ್ನೆಗಳಿಗೆ ತೃಪ್ತಿಕರವಾದ ಉತ್ತರಗಳನ್ನು ಕಂಡುಕೊಳ್ಳಲು ಸಾಧ್ಯವಾಗದೆ ಇರುವ ಕಾರಣ ಚರ್ಚಿಗೆ ಹೋಗುವುದನ್ನೇ ನಿಲ್ಲಿಸಿಬಿಟ್ಟಿದ್ದಾರೆ. ಉದಾಹರಣೆಗೆ, ಅವರು ಕೇಳುವುದು: ‘ದೇವರಲ್ಲಿ ನಂಬಿಕೆಯಿಡುವ ಜನರು ಏಕೆ ಕಷ್ಟಾನುಭವಿಸುತ್ತಾರೆ?’ ಮತ್ತು ‘ಚರ್ಚಿನಲ್ಲಿ ಕಲಿಸುವ ಅನೇಕ ಬೋಧನೆಗಳು ಗಲಿಬಿಲಿಯನ್ನು ಉಂಟುಮಾಡುವಂಥವುಗಳೂ ಅಸಂಗತವಾದವುಗಳೂ ಆಗಿರುವಾಗ ನಾವೇಕೆ ಅದು ಕಲಿಸುವ ಪ್ರತಿಯೊಂದು ವಿಷಯವನ್ನೂ ಸ್ವೀಕರಿಸಬೇಕು?’
ಅನೇಕರು ಪಾದ್ರಿಗಳಿಂದ ಕೊಡಲ್ಪಟ್ಟ ಉತ್ತರಗಳಿಂದ ಅತೃಪ್ತರಾಗಿ, ತಮ್ಮ ಪ್ರಶ್ನೆಗಳಿಗೆ ಬೈಬಲಿನಲ್ಲಿ ಉತ್ತರವಿಲ್ಲ ಎಂಬ ನಿರ್ಣಯಕ್ಕೆ ಬಂದಿದ್ದಾರೆ. ಪಾದ್ರಿಯೊಬ್ಬನು ತನ್ನ ವೈಯಕ್ತಿಕ ವಿಚಾರದ ಮೇಲಾಧಾರಿತ ವಿವರಣೆಯನ್ನು ನೀಡುವಾಗ, ಅನೇಕವೇಳೆ ಅದರ ಫಲಿತಾಂಶವು ದೇವರ ಮತ್ತು ಬೈಬಲಿನ ಕುರಿತಾದ ತಪ್ಪಭಿಪ್ರಾಯ ಹಾಗೂ ತಿರಸ್ಕಾರವಾಗಿರುತ್ತದೆ.
ಏಬೆಲ್ ಎಂಬವನ ಅನುಭವವು ಇದೇ ಆಗಿತ್ತು. ಅವನು ದಕ್ಷಿಣ ಆಫ್ರಿಕದಲ್ಲಿ ಲೂತರನ್ ಧರ್ಮದಲ್ಲಿ ಬೆಳೆಸಲ್ಪಟ್ಟವನಾಗಿದ್ದನು. ಅವನು ಜ್ಞಾಪಿಸಿಕೊಳ್ಳುವುದು: “ಸಾಯುವ ಪ್ರತಿಯೊಬ್ಬ ಮನುಷ್ಯನನ್ನು ದೇವರು ತನ್ನ ಬಳಿ ‘ಕರೆಸಿಕೊಳ್ಳುತ್ತಾನೆ’ ಎಂದು ಚರ್ಚ್ ಬೋಧಿಸುತ್ತದೆ. ಆದರೆ ಒಬ್ಬ ಪ್ರೀತಿಯ ದೇವರು ಹೆತ್ತವರನ್ನು ಅವರ ಮಕ್ಕಳಿಂದ ಬೇರ್ಪಡಿಸಿ ಏಕೆ ತನ್ನ ಬಳಿ ‘ಕರೆಸಿಕೊಳ್ಳುತ್ತಾನೆ’ ಎಂಬುದು ನನಗೆ ಅರ್ಥವಾಗುತ್ತಿರಲಿಲ್ಲ. ನಾನು ಬೆಳೆದಂಥ ಆಫ್ರಿಕದ ಗ್ರಾಮೀಣ ಪ್ರದೇಶದಲ್ಲಿ ಒಂದು ಕೋಳಿಯನ್ನು ಅದರ ಮರಿಗಳು ದೊಡ್ಡವುಗಳಾಗುವ ತನಕ ಕೊಲ್ಲುತ್ತಿರಲಿಲ್ಲ. ಮತ್ತು ಒಂದು ಹಸುವು ಗರ್ಭಧರಿಸಿದೆ ಎಂದು ತಿಳಿದುಬಂದರೆ, ಅದು ಕರು ಹಾಕಿ ಆ ಕರುವಿಗೆ ಹಾಲುಣಿಸುತ್ತಾ ಇರುವ ವರೆಗೆ ಅದನ್ನು ಕಡಿಯುತ್ತಿರಲಿಲ್ಲ. ಹೀಗಿರುವಾಗ, ಪ್ರೀತಿಪರನಾದ ದೇವರೇಕೆ ಇದೇ ರೀತಿಯ ಪರಿಗಣನೆಯನ್ನು ಮನುಷ್ಯರ ಕಡೆಗೆ ತೋರಿಸುವುದಿಲ್ಲ ಎಂಬುದು ನನಗೆ ಅರ್ಥವಾಗುತ್ತಿರಲಿಲ್ಲ.”
ಇದೇ ರೀತಿಯ ಸಂಶಯಗಳು ಕೆನಡದ ಆರಾಮ್ ಎಂಬವನಲ್ಲಿಯೂ ಇದ್ದವು. ಅವನು ತಿಳಿಸುವುದು: “ನಾನು 13 ವರುಷ ಪ್ರಾಯದವನಾಗಿದ್ದಾಗ ನನ್ನ ತಂದೆಯವರು ತೀರಿಕೊಂಡರು. ಸ್ವರ್ಗದಲ್ಲಿ ನನ್ನ ತಂದೆಯವರು ದೇವರ ಸಮೀಪಕ್ಕೆ ಬರಸಾಧ್ಯವಾಗುವಂತೆ ದೇವರೇ ಅವರ ಸಾವನ್ನು ಬಯಸಿದನು ಎಂಬುದಾಗಿ ಒಬ್ಬ ಪ್ರಖ್ಯಾತ ಪಾದ್ರಿಯು ನನ್ನ ತಂದೆಯ ಶವಸಂಸ್ಕಾರ ಸೇವೆಯ ಸಮಯದಲ್ಲಿ ವಿವರಿಸಿದನು. ಅವನಂದದ್ದು, ‘ದೇವರು ಒಳ್ಳೇ ಜನರನ್ನು ಕರೆಸಿಕೊಳ್ಳುತ್ತಾನೆ, ಏಕೆಂದರೆ ದೇವರು ನೀತಿವಂತರನ್ನು ಪ್ರೀತಿಸುತ್ತಾನೆ.’ ದೇವರು ಅಷ್ಟು ಸ್ವಾರ್ಥಿಯಾಗಿರಲು ಹೇಗೆ ಸಾಧ್ಯ ಎಂಬುದು ನನಗೆ ಅರ್ಥವಾಗುತ್ತಿರಲಿಲ್ಲ.”
ಸಮಯಾನಂತರ ಏಬೆಲ್ ಮತ್ತು ಆರಾಮ್ ಯೆಹೋವ ಸಾಕ್ಷಿಗಳನ್ನು ಭೇಟಿಯಾದರು, ಮತ್ತು ಅವರೊಂದಿಗೆ ಬೈಬಲ್ ಅಧ್ಯಯನವನ್ನು ಮಾಡಿದರು. ಹೀಗೆ, ತಮ್ಮ ಪ್ರಶ್ನೆಗಳಿಗೆ ಕೊನೆಗೂ ಉತ್ತರಗಳನ್ನು ಕಂಡುಕೊಂಡರು. ಅವರು ದೇವರಿಗಾಗಿ ಪ್ರೀತಿಯನ್ನು ಮತ್ತು ಆತನಲ್ಲಿ ದೃಢವಾದ ನಂಬಿಕೆಯನ್ನು ಬೆಳೆಸಿಕೊಂಡರು. ಕೊನೆಯಲ್ಲಿ ಅವರು ತಮ್ಮ ಜೀವನವನ್ನು ಯೆಹೋವನಿಗೆ ಸಮರ್ಪಿಸಿಕೊಂಡು, ಆತನ ನಿಷ್ಠಾವಂತ ಸೇವಕರಾದರು.
ನಿಷ್ಕೃಷ್ಟ ಜ್ಞಾನ —ದೇವರಲ್ಲಿ ನಂಬಿಕೆಯಿಡಲು ಒಂದು ಕೀಲಿ ಕೈ
ಈ ಅನುಭವಗಳಿಂದ ನಾವೇನನ್ನು ಕಲಿಯಬಲ್ಲೆವು? ದೇವರಲ್ಲಿ ನಂಬಿಕೆ ಎಂಬುದಾಗಿ ಹೇಳುವಾಗ ಅದಕ್ಕೆ ಬೈಬಲಿನ ನಿಷ್ಕೃಷ್ಟ ಜ್ಞಾನದ ಆವಶ್ಯಕತೆಯಿದೆ ಎಂಬುದನ್ನು ಇವು ನಮಗೆ ತಿಳಿಸುತ್ತವೆ. ಪುರಾತನ ಫಿಲಿಪ್ಪಿ ಪಟ್ಟಣದಲ್ಲಿನ ಕ್ರೈಸ್ತರಿಗೆ ಅಪೊಸ್ತಲ ಪೌಲನು ಹೇಳಿದ್ದು: “ನಾನು ದೇವರನ್ನು ಪಾರ್ಥಿಸಿ—ನಿಮ್ಮ ಪ್ರೀತಿಯು ಹೆಚ್ಚುತ್ತಾ ಹೆಚ್ಚುತ್ತಾ ಪೂರ್ಣ ಜ್ಞಾನವಿವೇಕಗಳಿಂದ [“ನಿಷ್ಕೃಷ್ಟ ಜ್ಞಾನದಿಂದ,” NW] ಕೂಡಿ ಉತ್ತಮ ಕಾರ್ಯಗಳು ಯಾವವೆಂದು ನೀವು ವಿವೇಚಿಸುವವರಾಗಬೇಕೆಂತಲೂ . . . ಬೇಡಿಕೊಳ್ಳುತ್ತೇನೆ.” (ಫಿಲಿಪ್ಪಿ 1:9-11) ದೇವರಿಗಾಗಿರುವ ಮತ್ತು ಜೊತೆ ವಿಶ್ವಾಸಿಗಳಿಗಾಗಿರುವ ಪ್ರೀತಿಯನ್ನು ಪೌಲನು ದೇವರ ಕುರಿತಾದ ನಿಷ್ಕೃಷ್ಟ ಜ್ಞಾನ ಮತ್ತು ಆತನ ಚಿತ್ತದ ಕುರಿತಾದ ವಿವೇಚನಾಶಕ್ತಿಗೆ ಸಂಬಂಧಿಸಿ ಮಾತಾಡುತ್ತಾನೆ.
ಇದು ತರ್ಕಬದ್ಧ ಸಂಗತಿಯಾಗಿದೆ, ಏಕೆಂದರೆ ಯಾರೇ ಒಬ್ಬ ವ್ಯಕ್ತಿಯಲ್ಲಿ ನಾವು ಭರವಸೆಯನ್ನು ಇಡಬೇಕಾದರೆ ಮೊದಲು ಆ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳುವುದು ಅಗತ್ಯವಾಗಿದೆ. ಎಷ್ಟು ಹೆಚ್ಚು ನಿಷ್ಕೃಷ್ಟವಾಗಿ ನಾವು ಆ ವ್ಯಕ್ತಿಯ ಕುರಿತು ತಿಳಿದುಕೊಳ್ಳುತ್ತೇವೋ ನಮ್ಮ ಭರವಸೆಯು ಅಷ್ಟೇ ಹೆಚ್ಚುತ್ತಾ ಹೋಗುತ್ತದೆ. ಅಂತೆಯೇ, ದೇವರಲ್ಲಿ ನಂಬಿಕೆಯಿಡಲು ನೀವು ಪ್ರೇರೇಪಿಸಲ್ಪಡಬೇಕಾದರೆ ನಿಷ್ಕೃಷ್ಟ ಜ್ಞಾನದ ಅಗತ್ಯವಿದೆ. ಪೌಲನು ಹೇಳಿದ್ದು: “ನಂಬಿಕೆಯೋ ನಾವು ನಿರೀಕ್ಷಿಸುವವುಗಳ ವಿಷಯವಾಗಿ ಭರವಸದಿಂದಿರುವದೂ ಕಣ್ಣಿಗೆ ಕಾಣದವುಗಳನ್ನು ನಿಜವೆಂದು ತಿಳುಕೊಳ್ಳುವದೂ ಆಗಿದೆ.” (ಇಬ್ರಿಯ 11:1) ಬೈಬಲಿನ ನಿಷ್ಕೃಷ್ಟ ಜ್ಞಾನವಿಲ್ಲದೆ ದೇವರಲ್ಲಿ ನಂಬಿಕೆಯಿಡುವುದು, ಇಸ್ಪೀಟಿನ ಎಲೆಗಳಿಂದ ಮಾಡಿದ ಮನೆಗೆ ಸಮಾನವಾಗಿದೆ. ಅದು ಕುಸಿದು ಬೀಳಲು ಕೇವಲ ಒಂದು ಒತ್ತುಸಿರೇ ಸಾಕು.
ಬೈಬಲನ್ನು ಅಧ್ಯಯನ ಮಾಡುವುದು, ಏಬೆಲ್ ಮತ್ತು ಆರಾಮ್‌ರನ್ನು ಬಹುದಿನಗಳಿಂದ ಗಲಿಬಿಲಿಗೊಳಿಸಿದ್ದಂಥ ರೀತಿಯ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಲು ನಿಮಗೆ ಸಹಾಯಮಾಡಬಲ್ಲದು. ಜನರು ಏಕೆ ಸಾಯುತ್ತಾರೆ? ಬೈಬಲ್ ವಿವರಿಸುವುದು, “ಒಬ್ಬ ಮನುಷ್ಯನಿಂದಲೇ ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಸೇರಿದವು; ಎಲ್ಲರು ಪಾಪ ಮಾಡಿದ್ದರಿಂದ ಮರಣವು ಹೀಗೆ ಎಲ್ಲರಲ್ಲಿಯೂ ವ್ಯಾಪಿಸಿತು.” (ರೋಮಾಪುರ 5:12) ಮನುಷ್ಯರು ವೃದ್ಧರಾಗಿ ಸಾಯುವುದು, ದೇವರು ಅವರನ್ನು ತನ್ನೊಂದಿಗೆ ಇರಿಸಿಕೊಳ್ಳಲಿಕ್ಕಾಗಿ ಕರೆದೊಯ್ಯುವ ಕಾರಣದಿಂದಲ್ಲ ಬದಲಾಗಿ ಆದಾಮನು ಮಾಡಿದ ಪಾಪದ ಕಾರಣದಿಂದಲೇ. (ಆದಿಕಾಂಡ 2:16, 17; 3:6, 17-19) ಅಷ್ಟುಮಾತ್ರವಲ್ಲದೆ, ಯೆಹೋವ ದೇವರು ಒದಗಿಸುವ ನಿಜ ನಿರೀಕ್ಷೆಯನ್ನು ಬೈಬಲ್ ಪ್ರಕಟಪಡಿಸುತ್ತದೆ. ಆತನು ತನ್ನ ಮಗನಾದ ಯೇಸು ಕ್ರಿಸ್ತನ ಮೂಲಕ ಪಾಪಿಗಳಾದ ಮಾನವರಿಗೆ ಪುನರುತ್ಥಾನದ ನಿರೀಕ್ಷೆಯನ್ನು ಒದಗಿಸುತ್ತಾನೆ.—ಯೋಹಾನ 5:28, 29; ಅ. ಕೃತ್ಯಗಳು 24:15.
ಪುನರುತ್ಥಾನದ ನಿಜತ್ವವನ್ನು ನಾವು ಅರ್ಥಮಾಡಿಕೊಳ್ಳಲು ಸಹಾಯವಾಗುವಂತೆ, ಯೇಸು ಪುನಃ ಬದುಕಿಸಿದ ವ್ಯಕ್ತಿಗಳ ಹಲವಾರು ಉದಾಹರಣೆಗಳು ಬೈಬಲಿನಲ್ಲಿ ದಾಖಲಿಸಿಡಲ್ಪಟ್ಟಿವೆ. (ಲೂಕ 7:11-17; 8:40-56; ಯೋಹಾನ 11:17-45) ಈ ಬೈಬಲ್ ವೃತ್ತಾಂತಗಳನ್ನು ನೀವು ಓದುವಾಗ, ಪುನರುತ್ಥಾನಹೊಂದಿದವರ ಸ್ನೇಹಿತರು ಮತ್ತು ಕುಟುಂಬಸ್ಥರಿಂದ ಅನುಭವಿಸಲ್ಪಟ್ಟ ಆನಂದ ಹಾಗೂ ಉಲ್ಲಾಸವನ್ನು ಗಮನಿಸಿರಿ. ಅಷ್ಟುಮಾತ್ರವಲ್ಲದೆ, ಅವರು ದೇವರನ್ನು ಸ್ತುತಿಸಲು ಮತ್ತು ಯೇಸುವಿನಲ್ಲಿ ನಂಬಿಕೆಯಿಡಲು ಪ್ರೇರಿಸಲ್ಪಟ್ಟರು ಎಂಬುದನ್ನು ಗಮನಿಸಿರಿ.
ದೇವರ ಮತ್ತು ಆತನ ಉದ್ದೇಶಗಳ ಕುರಿತಾದ ನಿಷ್ಕೃಷ್ಟ ಜ್ಞಾನವು ಇಂದು ಸಹ ಜನರ ಮೇಲೆ ಅದೇ ರೀತಿಯ ಪ್ರಭಾವವನ್ನು ಬೀರಬಲ್ಲದು. ಯಾವ ಪ್ರಶ್ನೆಗಳಿಗೆ ತೃಪ್ತಿಕರವಾದ ಉತ್ತರಗಳನ್ನು ಕಂಡುಹಿಡಿಯಲು ಸಾಧ್ಯವಾಗಲಿಲ್ಲವೋ ಅಂಥ ಪ್ರಾಮುಖ್ಯ ಪ್ರಶ್ನೆಗಳಿಂದ ಅನೇಕರು ಒಂದೊಮ್ಮೆ ಗಲಿಬಿಲಿಗೊಂಡವರಾಗಿ, ಹೊರೆಹೊತ್ತವರಾಗಿ ಮತ್ತು ಎಡವಲ್ಪಟ್ಟವರಾಗಿಯೂ ಇದ್ದರು. ಆದರೆ ಬೈಬಲನ್ನು ಅಧ್ಯಯನಮಾಡಿದಾಗ ಅವರು ಉತ್ತರಗಳನ್ನು ಕಂಡುಕೊಂಡರು ಮತ್ತು ಅದು ಅವರ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸಿತು.
ದೇವರ ಕಡೆಗಿರುವ ಪ್ರೀತಿಯೇ ಆತನನ್ನು ಸೇವಿಸಲು ಪ್ರಾಮುಖ್ಯ ಕಾರಣ
ದೇವರಲ್ಲಿ ನಂಬಿಕೆಯಿಡಲು ನಿಷ್ಕೃಷ್ಟ ಜ್ಞಾನವು ಅತ್ಯಗತ್ಯವಾಗಿರುವುದಾದರೂ, ಒಬ್ಬನು ದೇವರಿಗೆ ವಿಧೇಯನಾಗಲು ಮತ್ತು ಆತನನ್ನು ಸೇವಿಸಲು ಪ್ರೇರೇಪಿಸಲ್ಪಡಬೇಕಾದರೆ ಅದಕ್ಕಿಂತಲೂ ಹೆಚ್ಚಿನದ್ದರ ಅಗತ್ಯವಿದೆ. ದೇವರಿಂದ ಬಂದ ಅತಿ ದೊಡ್ಡ ಆಜ್ಞೆ ಯಾವುದು ಎಂದು ಕೇಳಿದಾಗ ಯೇಸು ಹೇಳಿದ್ದು: “ನಿನ್ನ ದೇವರಾದ ಕರ್ತನನ್ನು [“ಯೆಹೋವನನ್ನು,” NW] ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣಬುದ್ಧಿಯಿಂದಲೂ ಪೂರ್ಣಶಕ್ತಿಯಿಂದಲೂ ಪ್ರೀತಿಸಬೇಕು.” (ಮಾರ್ಕ 12:30) ಯೇಸು ತಿಳಿಸಿದ ರೀತಿಯಲ್ಲಿ ವ್ಯಕ್ತಿಯೊಬ್ಬನು ದೇವರನ್ನು ಪ್ರೀತಿಸುವುದಾದರೆ, ಅವನು ಆತನಿಗೆ ವಿಧೇಯನಾಗಲು ಮತ್ತು ಆತನನ್ನು ಸೇವಿಸಲು ಬಹಳವಾಗಿ ಇಚ್ಛಿಸುತ್ತಾನೆ. ಇದು ನಿಮ್ಮ ವಿಷಯದಲ್ಲಿಯೂ ನಿಜವಾಗಿದೆಯೋ?
ಅನೇಕ ದಶಕಗಳಿಂದ ಕೊರಿಯದಲ್ಲಿ ಮಿಷನೆರಿಯಾಗಿ ಸೇವೆಸಲ್ಲಿಸಿದ ರೇಚಲ್ ಎಂಬವಳು ತನ್ನ ನಂಬಿಕೆಗೆ ಈ ಕಾರಣವನ್ನು ಕೊಡುತ್ತಾಳೆ: “ಯೆಹೋವನು ತನ್ನ ಸೃಷ್ಟಿಯ ಕಡೆಗೆ ತೋರಿಸುವ ಉದಾರ ಗುಣ, ಆತನು ಜನರೊಂದಿಗೆ ವ್ಯವಹರಿಸುವಾಗ ವ್ಯಕ್ತಪಡಿಸುವ ಕ್ಷಮಿಸುವ ಮನೋಭಾವ, ಮತ್ತು ಆತನು ನಮ್ಮಿಂದ ಏನನ್ನು ಬಯಸುತ್ತಾನೆಂಬುದನ್ನು ನಮಗೆ ತಿಳಿಯಪಡಿಸುವ ಮೂಲಕ ನಾವು ಪ್ರಯೋಜನವನ್ನು ಪಡೆದುಕೊಳ್ಳಬೇಕೆಂಬ ಆತನ ಬಯಕೆ ಮುಂತಾದ ವಿಷಯಗಳ ಕುರಿತು ನಾನು ಆಲೋಚಿಸುತ್ತೇನೆ. ಈ ಎಲ್ಲಾ ವಿಷಯಗಳು ದೇವರ ಕಡೆಗಿನ ನನ್ನ ಪ್ರೀತಿಯನ್ನು ಬೆಳೆಸುತ್ತವೆ ಮತ್ತು ಆ ಪ್ರೀತಿಯು, ಆತನನ್ನು ಸೇವಿಸಬೇಕೆಂಬ ಇಚ್ಛೆಯನ್ನು ನನ್ನಲ್ಲಿ ಉಂಟುಮಾಡುತ್ತದೆ.”
ಜರ್ಮನಿಯಲ್ಲಿರುವ ಮಾರ್ಥ ಎಂಬ ವಿಧವೆಯು ಯೆಹೋವನಿಗೆ 48 ವರುಷ ಸೇವೆಸಲ್ಲಿಸಿದ್ದಾಳೆ. ಅವಳು ಹೇಳುವುದು: “ನಾನೇಕೆ ಯೆಹೋವನನ್ನು ಸೇವಿಸುತ್ತೇನೆ? ಏಕೆಂದರೆ ನಾನು ಆತನನ್ನು ಪ್ರೀತಿಸುತ್ತೇನೆ. ಪ್ರತಿ ಸಾಯಂಕಾಲವೂ ನಾನು ಯೆಹೋವನೊಂದಿಗೆ ಪ್ರಾರ್ಥನೆಯಲ್ಲಿ ಮಾತನಾಡುತ್ತೇನೆ ಮತ್ತು ಆತನ ಎಲ್ಲಾ ಆಶೀರ್ವಾದಗಳಿಗಾಗಿ, ಅದರಲ್ಲಿಯೂ ಮುಖ್ಯವಾಗಿ ವಿಮೋಚನಾ ಯಜ್ಞಕ್ಕಾಗಿ ನಾನಾತನಿಗೆ ಎಷ್ಟು ಆಭಾರಿಯಾಗಿದ್ದೇನೆಂಬುದನ್ನು ಆತನಿಗೆ ತಿಳಿಸುತ್ತೇನೆ.”
ಹೌದು, ದೇವರ ಕಡೆಗಿನ ಪ್ರೀತಿಯು, ಹೃದಯದಾಳದಿಂದ ಆತನನ್ನು ಸೇವಿಸಬೇಕೆಂಬ ಇಚ್ಛೆಯನ್ನು ನಮ್ಮಲ್ಲಿ ಉಂಟುಮಾಡುತ್ತದೆ. ಆದರೆ ಅಂಥ ಪ್ರೀತಿಯನ್ನು ಒಬ್ಬನು ಹೇಗೆ ಬೆಳೆಸಿಕೊಳ್ಳುತ್ತಾನೆ? ದೇವರು ನಮಗಾಗಿ ತೋರಿಸಿದ ಪ್ರೀತಿಗೆ ನಮ್ಮಲ್ಲಿರುವ ಆಳವಾದ ಗಣ್ಯತೆಯೇ ನಾವು ಆತನ ಕಡೆಗಿರುವ ನಮ್ಮ ಪ್ರೀತಿಯನ್ನು ಬೆಳೆಸಿಕೊಳ್ಳಲು ಅತಿ ಬಲವಾದ ಪ್ರೇರಕವಾಗಿದೆ. ಬೈಬಲಿನ ಈ ಹೃದಯೋಲ್ಲಾಸಕರ ಮರುಜ್ಞಾಪನವನ್ನು ಗಮನಿಸಿರಿ: “ಪ್ರೀತಿಯಿಲ್ಲದವನು ದೇವರನ್ನು ಬಲ್ಲವನಲ್ಲ; ಯಾಕಂದರೆ ದೇವರು ಪ್ರೀತಿಸ್ವರೂಪಿಯು. ದೇವರು ತನ್ನ ಒಬ್ಬನೇ ಮಗನನ್ನು ನಾವು ಆತನ ಮೂಲಕ ಜೀವಿಸುವದಕ್ಕಾಗಿ ಲೋಕಕ್ಕೆ ಕಳುಹಿಸಿಕೊಟ್ಟದರಲ್ಲಿಯೇ ದೇವರ ಪ್ರೀತಿಯು ನಮ್ಮಲ್ಲಿ ಪ್ರತ್ಯಕ್ಷವಾಗಿದೆ. ನಾವು ದೇವರನ್ನು ಪ್ರೀತಿಸಿದ್ದರಲ್ಲಿಯಲ್ಲ, ಆತನು ನಮ್ಮನ್ನು ಪ್ರೀತಿಸಿ ನಮ್ಮ ಪಾಪನಿವಾರಣಾರ್ಥವಾಗಿ ತನ್ನ ಮಗನನ್ನು ಕಳುಹಿಸಿಕೊಟ್ಟದರಲ್ಲಿಯೇ ಪ್ರೀತಿಯ ನಿಜ ಗುಣವು ತೋರಿಬರುತ್ತದೆ.”—1 ಯೋಹಾನ 4:8-10.
ಈ ಪ್ರೀತಿಯು ಬಹು ಮಹತ್ತರವಾದದ್ದಾಗಿದೆ ಎಂಬುದನ್ನು ನೀವು ಗಣ್ಯಮಾಡುತ್ತೀರೋ? ರಭಸವಾಗಿ ಹರಿಯುತ್ತಿರುವ ಒಂದು ಹೊಳೆಯಲ್ಲಿ ನೀವು ಮುಳುಗುತ್ತಿರುವಂತೆ ಕಲ್ಪಿಸಿಕೊಳ್ಳಿ. ಒಬ್ಬ ವ್ಯಕ್ತಿಯು ತನ್ನ ಜೀವವನ್ನು ಪಣಕ್ಕೊಡ್ಡಿ ನಿಮ್ಮನ್ನು ರಕ್ಷಿಸುತ್ತಾನೆ. ನೀವು ಅವನನ್ನು ಮರೆಯುವಿರೋ, ಅಥವಾ ನೀವವನಿಗೆ ಬಹಳ ಕೃತಜ್ಞರಾಗಿರುವಿರೊ? ನಿಮ್ಮಿಂದಾದದ್ದೆಲ್ಲವನ್ನೂ ಅವನಿಗಾಗಿ ಮಾಡಲು ನೀವು ಇಚ್ಛಿಸುವುದಿಲ್ಲವೋ? ದೇವರು ತನ್ನ ಮಗನಾದ ಯೇಸು ಕ್ರಿಸ್ತನನ್ನು ವಿಮೋಚನಾ ಯಜ್ಞವಾಗಿ ಒದಗಿಸಿದ್ದರಲ್ಲಿ ಆತನು ತೋರಿಸಿದ ಪ್ರೀತಿಯು ಹೋಲಿಸಲಸಾಧ್ಯವಾದಷ್ಟು ಮಹತ್ತರವಾದದ್ದಾಗಿದೆ. (ಯೋಹಾನ 3:16; ರೋಮಾಪುರ 8:38, 39) ದೇವರು ತೋರಿಸಿದ ಪ್ರೀತಿಯಿಂದ ನಿಮ್ಮ ಹೃದಯವು ಸ್ಪರ್ಶಿಸಲ್ಪಟ್ಟಾಗ, ನೀವು ಆತನನ್ನು ಪ್ರೀತಿಸುವಂತೆ ಮತ್ತು ಪೂರ್ಣಹೃದಯದಿಂದ ಆತನನ್ನು ಸೇವಿಸುವಂತೆ ಪ್ರೇರಿಸಲ್ಪಡುವಿರಿ.
ಆಶೀರ್ವಾದಗಳು—ಈಗ ಮತ್ತು ಭವಿಷ್ಯತ್ತಿನಲ್ಲಿ
ದೇವರ ಮೇಲಣ ನಮ್ಮ ಪ್ರೀತಿಯೇ ಆತನ ಚಿತ್ತವನ್ನು ಮಾಡಲು ಮುಖ್ಯ ಕಾರಣವಾಗಿರಬೇಕಾದರೂ, ಆತನನ್ನು ಸೇವಿಸುವವರಿಗೆ ಆತನು ಪ್ರತಿಫಲವನ್ನು ಕೊಡುವಾತನಾಗಿದ್ದಾನೆ ಎಂದು ತಿಳಿಯುವುದು ಹೃದಯೋಲ್ಲಾಸವನ್ನು ಉಂಟುಮಾಡುತ್ತದೆ. ಅಪೊಸ್ತಲ ಪೌಲನು ತಿಳಿಸಿದ್ದು: “ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವದು ಅಸಾಧ್ಯ; ದೇವರ ಬಳಿಗೆ ಬರುವವನು ದೇವರು ಇದ್ದಾನೆ, ಮತ್ತು ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ ಎಂದು ನಂಬುವದು ಅವಶ್ಯ.”—ಇಬ್ರಿಯ 11:6.
ಯಾರು ದೇವರನ್ನು ಪ್ರೀತಿಸಿ, ಆತನಿಗೆ ವಿಧೇಯರಾಗುತ್ತಾರೋ ಅವರನ್ನು ದೇವರು ಖಂಡಿತವಾಗಿಯೂ ಆಶೀರ್ವದಿಸುತ್ತಾನೆ. ಬೈಬಲಿನ ಮೂಲತತ್ತ್ವಗಳನ್ನು ಅನುಸರಿಸುವ ಕಾರಣ ಅನೇಕರು ಉತ್ತಮ ಆರೋಗ್ಯವನ್ನು ಅನುಭವಿಸುತ್ತಿದ್ದಾರೆ. (ಜ್ಞಾನೋಕ್ತಿ 23:20, 21; 2 ಕೊರಿಂಥ 7:1) ಪ್ರಾಮಾಣಿಕತೆ ಮತ್ತು ಶ್ರಮಶೀಲತೆಯ ಕುರಿತಾದ ಬೈಬಲಿನ ಮೂಲತತ್ತ್ವಗಳನ್ನು ಯಾರು ಅನ್ವಯಿಸುತ್ತಾರೋ ಅವರು ಸಾಮಾನ್ಯವಾಗಿ ತಮ್ಮ ಧಣಿಗಳ ಭರವಸೆಗೆ ಪಾತ್ರರಾಗುತ್ತಾರೆ ಮತ್ತು ಈ ಕಾರಣ ಹೆಚ್ಚಿನ ಆರ್ಥಿಕ ಭದ್ರತೆಯನ್ನು ಅನುಭವಿಸುತ್ತಾರೆ. (ಕೊಲೊಸ್ಸೆ 3:23) ದೇವರ ಸೇವಕರು ಯೆಹೋವನಲ್ಲಿ ತಮ್ಮ ಭರವಸೆಯನ್ನಿಡುವ ಮೂಲಕ ಕಷ್ಟಕರವಾದ ಸಂದರ್ಭಗಳಲ್ಲಿಯೂ ಮನಶ್ಶಾಂತಿಯನ್ನು ಪಡೆಯುತ್ತಾರೆ. (ಜ್ಞಾನೋಕ್ತಿ 28:25; ಫಿಲಿಪ್ಪಿ 4:6, 7) ಎಲ್ಲಕ್ಕಿಂತಲೂ ಮಿಗಿಲಾಗಿ, ಬರಲಿರುವ ಭೂಪರದೈಸಿನಲ್ಲಿ ನಿತ್ಯಜೀವದ ಆಶೀರ್ವಾದವನ್ನು ಅವರು ಭರವಸೆಯಿಂದ ಮುನ್ನೋಡುತ್ತಿದ್ದಾರೆ.—ಕೀರ್ತನೆ 37:11, 29.
ಯೆಹೋವನಿಂದ ಅಂಥ ಆಶೀರ್ವಾದಗಳನ್ನು ಅನುಭವಿಸುವವರಿಗೆ ಆತನ ಬಗ್ಗೆ ಹೇಗನಿಸುತ್ತದೆ? ಜ್ಯಾಕ್ಕಲೀನ್ ಎಂಬ ಕೆನಡದ ಕ್ರೈಸ್ತಳೊಬ್ಬಳು ದೇವರಿಗಾಗಿರುವ ತನ್ನ ಗಣ್ಯತೆಯನ್ನು ಈ ರೀತಿಯಲ್ಲಿ ವ್ಯಕ್ತಪಡಿಸುತ್ತಾಳೆ: “ಆತನು ಯಾವಾಗಲೂ ನಮಗೆ ಅತಿ ಉತ್ತಮವಾದ ಉಡುಗೊರೆಯನ್ನು ನೀಡುತ್ತಾನೆ, ಮತ್ತು ನಿತ್ಯಜೀವದ ಖಚಿತವಾದ ನಿರೀಕ್ಷೆಯನ್ನು ಸಹ ಒದಗಿಸುತ್ತಾನೆ.” ಆರಂಭದಲ್ಲಿ ಗಮನಿಸಿದ ಏಬೆಲ್ ಎಂಬವನು ತನ್ನ ಭಾವನೆಗಳನ್ನು ಈ ರೀತಿ ವರ್ಣಿಸುತ್ತಾನೆ: “ಭೂಪರದೈಸಿನಲ್ಲಿ ನಿತ್ಯಕ್ಕೂ ಜೀವಿಸುವ ಆಶ್ವಾಸನೆಯು ನನಗೆ ಹೊಸ ವಿಷಯವಾಗಿದೆ ಮತ್ತು ನಾನು ಅದಕ್ಕಾಗಿ ಮುನ್ನೋಡುತ್ತೇನೆ. ಹಾಗಿದ್ದರೂ, ಒಂದುವೇಳೆ ಪರದೈಸ್ ಇಲ್ಲದಿರುತ್ತಿದ್ದರೆ ಆಗಲೂ ದೇವರನ್ನು ಸೇವಿಸುವ ಮೂಲಕ ಆತನ ಕಡೆಗಿನ ನನ್ನ ಪ್ರೀತಿಯನ್ನು ವ್ಯಕ್ತಪಡಿಸಲು ನಾನು ಬಹಳವಾಗಿ ಸಂತೋಷಿಸುತ್ತಿದ್ದೆ.”
ನೀವು ಸಹ ನಿಜವಾದ ನಂಬಿಕೆಯನ್ನು ಬೆಳೆಸಿಕೊಳ್ಳಬಲ್ಲಿರಿ
‘ಹೃದಯವನ್ನೂ ಅಂತರಿಂದ್ರಿಯವನ್ನೂ ಪರೀಕ್ಷಿಸಿ ನ್ಯಾಯವಾಗಿ ತೀರ್ಪುಮಾಡುವ ಸೇನಾಧೀಶ್ವರನಾದ ಯೆಹೋವನು’ ಎಂಬುದಾಗಿ ಆತನ ಕುರಿತು ಬೈಬಲ್ ಹೇಳುತ್ತದೆ. (ಯೆರೆಮೀಯ 11:20) ಹೌದು, ಯೆಹೋವನು ನಮ್ಮ ಅಂತರಾಳದಲ್ಲಿ ಗುಪ್ತವಾಗಿರುವ ವಿಷಯವನ್ನು ಪರೀಕ್ಷಿಸುತ್ತಾನೆ. ನಮ್ಮಲ್ಲಿ ಪ್ರತಿಯೊಬ್ಬನೂ ತಾನು ದೇವರಲ್ಲಿ ನಂಬಿಕೆಯನ್ನಿಟ್ಟಿರುವುದರ ಹಿಂದೆ ಯಾವ ಹೇತುವಿದೆ ಎಂಬುದನ್ನು ಪರೀಕ್ಷಿಸಿಕೊಳ್ಳಬೇಕು. ದೇವರ ಕುರಿತು ತಪ್ಪಾದ ನಂಬಿಕೆಗಳು ಮತ್ತು ಕಲ್ಪನೆಗಳು, ಪೂರ್ವದಲ್ಲಿ ತಪ್ಪು ಕೃತ್ಯಗಳಿಗೆ ನಡಿಸಿದ್ದಿರಬಹುದು. ಆದರೆ ಬೈಬಲಿನ ನಿಷ್ಕೃಷ್ಟ ಜ್ಞಾನವು, ಸೃಷ್ಟಿಕರ್ತನಾದ ಯೆಹೋವ ದೇವರೊಂದಿಗೆ ಸರಿಯಾದ ಸಂಬಂಧಕ್ಕೆ ನಡಿಸಬಲ್ಲದು.—1 ತಿಮೊಥೆಯ 2:3, 4.
ಉಚಿತ ಮನೆ ಬೈಬಲ್ ಅಧ್ಯಯನದ ಏರ್ಪಾಡಿನ ಮೂಲಕ, ಯೆಹೋವನ ಸಾಕ್ಷಿಗಳು ಜನರಿಗೆ ದೇವರ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳುವಂತೆ ಸಹಾಯಮಾಡುತ್ತಾರೆ. (ಮತ್ತಾಯ 28:20) ಅಂಥ ಸಹಾಯವನ್ನು ಸ್ವೀಕರಿಸಿದ ಅನೇಕರು ದೇವರನ್ನು ಪ್ರೀತಿಸಲು ಮತ್ತು ಆತನಲ್ಲಿ ನಿಜವಾದ ನಂಬಿಕೆಯನ್ನು ಬೆಳೆಸಿಕೊಳ್ಳಲು ಆರಂಭಿಸಿದ್ದಾರೆ. ಬೈಬಲಿನ ಅಧ್ಯಯನದ ಮೂಲಕ ಅವರು “ಪ್ರಾಯೋಗಿಕ ವಿವೇಕ ಮತ್ತು ಯೋಚನಾ ಸಾಮರ್ಥ್ಯವನ್ನು” ಪಡೆದುಕೊಂಡಿದ್ದಾರೆ, ಮತ್ತು ಇದು ಈಗಿನ ಸಂಕಟಮಯ ಸಮಯದಲ್ಲಿ “ಭದ್ರತೆಯಲ್ಲಿ ನಡೆಯುವಂತೆ” ಅವರಿಗೆ ಸಹಾಯಮಾಡುತ್ತದೆ. (ಜ್ಞಾನೋಕ್ತಿ 3:21-23, NW) ಇದೆಲ್ಲದಕ್ಕಿಂತಲೂ ಹೆಚ್ಚಾಗಿ, ಅವರು ಭವಿಷ್ಯತ್ತಿಗಾಗಿ “ಭರವಸಕ್ಕೆ ಯೋಗ್ಯವಾದದ್ದೂ ಸ್ಥಿರವಾದದ್ದೂ” ಆಗಿರುವ ನಿರೀಕ್ಷೆಯನ್ನು ಈಗ ಹೊಂದಿದ್ದಾರೆ. (ಇಬ್ರಿಯ 6:19) ನೀವು ಸಹ ನಿಜವಾದ ನಂಬಿಕೆಯನ್ನು ಬೆಳೆಸಿಕೊಂಡು, ಇಂಥ ಆಶೀರ್ವಾದಗಳಲ್ಲಿ ಆನಂದಿಸಬಲ್ಲಿರಿ.
[ಪುಟ 6ರಲ್ಲಿರುವ ಚೌಕ]
ಉತ್ತರಗಳ ಅಗತ್ಯವಿರುವ ಗಲಿಬಿಲಿಗೊಳಿಸುವಂಥ ಪ್ರಶ್ನೆಗಳು
“ಮೆಡಿಕಲ್ ವಿದ್ಯಾರ್ಥಿಯಾಗಿ ಆಸ್ಪತ್ರೆಯಲ್ಲಿ ಶಿಕ್ಷಣವನ್ನು ಪಡೆದುಕೊಳ್ಳುತ್ತಿರುವಾಗ, ಅಸ್ವಸ್ಥತೆ ಮತ್ತು ವಿಪತ್ತುಗಳ ಕಾರಣ ಒಳ್ಳೇ ಜನರು ನೋವಿನಿಂದ ನರಳಾಡುವುದನ್ನು ನಾನು ನೋಡಿದೆ. ಒಬ್ಬ ದೇವರಿರುವುದಾದರೆ, ಈ ಎಲ್ಲಾ ವಿಷಯಗಳು ಏಕೆ ಸಂಭವಿಸುತ್ತವೆ? ಧರ್ಮವೆಂಬುದು ಕೇವಲ ಮನಶ್ಶಾಂತಿಯನ್ನು ಪಡೆದುಕೊಳ್ಳುವ ಒಂದು ಮಾಧ್ಯಮವಾಗಿದೆಯೋ?”—ಕೊರಿಯದ ಒಬ್ಬ ಮಾಜಿ ಪ್ರೆಸ್‌ಬಿಟೇರಿಯನ್.
“ಒಬ್ಬ ಕುಡುಕರಾಗಿದ್ದ ನನ್ನ ತಂದೆ, ಮರಣಪಟ್ಟ ಬಳಿಕ ಸ್ವರ್ಗಕ್ಕೆ ಹೋಗಿದ್ದಾರೋ ಅಥವಾ ನರಕಕ್ಕೆ ಹೋಗಿದ್ದಾರೋ ಎಂದು ನಾನು ಅನೇಕವೇಳೆ ಚಿಂತಿಸುತ್ತಿದ್ದೆ. ನಾನು ಸತ್ತವರಿಗೆ ಹೆದರುತ್ತಿದ್ದೆ ಮತ್ತು ನರಕಾಗ್ನಿ ಎಂಬ ಬೋಧನೆಯಿಂದಲೂ ಭಯಪಡುತ್ತಿದ್ದೆ. ಪ್ರೀತಿಪರನಾದ ದೇವರು, ಒಬ್ಬ ವ್ಯಕ್ತಿಯು ನರಕಾಗ್ನಿಯಲ್ಲಿ ಸದಾಕಾಲಕ್ಕೂ ಯಾತನೆಯನ್ನು ಅನುಭವಿಸುವಂತೆ ಅಲ್ಲಿಗೆ ಹೇಗೆ ಕಳುಹಿಸಬಲ್ಲನು ಎಂಬುದು ನನಗೆ ಅರ್ಥವಾಗುತ್ತಿರಲಿಲ್ಲ.”—ಬ್ರಸಿಲ್‌ನ ಒಬ್ಬ ಮಾಜಿ ಕ್ಯಾಥೊಲಿಕ್.
“ಭೂಮಿಗಾಗಿ ಮತ್ತು ಮಾನವಕುಲಕ್ಕಾಗಿ ಭವಿಷ್ಯತ್ತಿನಲ್ಲಿ ಏನು ಕಾದಿದೆ? ಮಾನವಕುಲವು ಹೇಗೆ ಸದಾಕಾಲ ಜೀವಿಸಬಲ್ಲದು? ನಿಜ ಶಾಂತಿಯನ್ನು ಮಾನವಕುಲವು ಹೇಗೆ ಪಡೆಯಸಾಧ್ಯವಿದೆ?”—ಜರ್ಮನಿಯ ಮಾಜಿ ಕ್ಯಾಥೊಲಿಕ್.
“ಪುನರ್ಜನ್ಮದ ಬೋಧನೆಯು ನನಗೆ ಯಾವ ಅರ್ಥವನ್ನೂ ಕೊಡಲಿಲ್ಲ. ಪ್ರಾಣಿಗಳು ದೇವರನ್ನು ಆರಾಧಿಸುವುದಿಲ್ಲ, ಹಾಗಿರುವಾಗ ನೀವು ಮಾಡಿದ ಯಾವುದೋ ಒಂದು ಪಾಪದ ಕಾರಣ ನೀವು ಪ್ರಾಣಿಯಾಗಿ ಹುಟ್ಟಿದರೆ ಮುಂದಕ್ಕೆ ವಿಷಯವನ್ನು ಸರಿಪಡಿಸಿ, ಒಂದು ಉತ್ತಮ ಸ್ಥಿತಿಗೆ ನೀವು ಹೇಗೆ ಬರಸಾಧ್ಯವಿದೆ?”—ದಕ್ಷಿಣ ಆಫ್ರಿಕದ ಒಬ್ಬ ಮಾಜಿ ಹಿಂದು.
“ಕನ್‌ಫ್ಯೂಷಿಯನ್ ಧರ್ಮಕ್ಕೆ ಸೇರಿದ ಒಂದು ಕುಟುಂಬದಲ್ಲಿ ನಾನು ಬೆಳೆಸಲ್ಪಟ್ಟೆ. ನಮ್ಮ ಪೂರ್ವಜರ ಶಾಂತಿಗಾಗಿ ನಡಿಸುತ್ತಿದ್ದ ಮತಾಚರಣೆಯಲ್ಲಿ ನಾನು ಭಾಗವಹಿಸುತ್ತಿದ್ದೆ. ಬಲಿಪೀಠವನ್ನು ಸಿದ್ಧಗೊಳಿಸುವುದರಲ್ಲಿ ಮತ್ತು ಸಾಷ್ಟಾಂಗ ನಮಸ್ಕಾರಮಾಡುವುದರಲ್ಲಿ ನಾನು ಭಾಗವಹಿಸುತ್ತಿದ್ದಾಗ, ನಮ್ಮ ಮೃತಪೂರ್ವಜರು ಆಹಾರವನ್ನು ಸೇವಿಸಲು ಬರುತ್ತಾರೋ ಹಾಗೂ ನಾವು ಅವರಿಗೆ ಸಾಷ್ಟಾಂಗ ನಮಸ್ಕಾರಮಾಡುವುದನ್ನು ನೋಡುತ್ತಾರೋ ಎಂದೆಲ್ಲಾ ಚಿಂತಿಸುತ್ತಿದ್ದೆ.”—ಕೊರಿಯದ ಮಾಜಿ ಕನ್‌ಫ್ಯೂಷಿಯನಿಷ್ಟ್.
ಈ ಎಲ್ಲಾ ವ್ಯಕ್ತಿಗಳು, ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಧ್ಯಯನ ಮಾಡಿದಾಗ ತಮ್ಮ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಂಡರು.