ಹೆತ್ತವರೇ, ನಿಮ್ಮ ಅಮೂಲ್ಯ ಸ್ವಾಸ್ತ್ಯವನ್ನು ಸಂರಕ್ಷಿಸಿರಿ
“ವಿವೇಕವು ಸಂರಕ್ಷಣೆಗಾಗಿದೆ . . . [ಅದು] ತನ್ನನ್ನು ಹೊಂದಿದವನ ಜೀವವನ್ನು ಕಾಪಾಡುತ್ತದೆ.” —ಪ್ರಸಂಗಿ 7:12, Nw.
1. ಹೆತ್ತವರು ತಮ್ಮ ಮಕ್ಕಳನ್ನು ಉಡುಗೊರೆಯಾಗಿ ಪರಿಗಣಿಸಬೇಕು ಏಕೆ?
ಹೆತ್ತವರು ತಮ್ಮನ್ನು ಹೋಲುವಂಥ ಶಾರೀರಿಕ ರೂಪಲಕ್ಷಣಗಳು ಹಾಗೂ ವ್ಯಕ್ತಿತ್ವ ವೈಶಿಷ್ಟ್ಯಗಳಿರುವ ಒಂದು ಹೊಸ ಜೀವಂತ ವ್ಯಕ್ತಿಯನ್ನು ಜಗತ್ತಿಗೆ ತರುತ್ತಾರೆ. ಬೈಬಲು ಇಂಥ ಪುಟ್ಟ ಮಕ್ಕಳನ್ನು “ಯೆಹೋವನಿಂದ ಬಂದ ಸ್ವಾಸ್ತ್ಯ” ಎಂದು ಕರೆಯುತ್ತದೆ. (ಕೀರ್ತನೆ 127:3) ನಿಜವಾದ ಜೀವದಾತನು ಯೆಹೋವನೇ ಆಗಿರುವುದರಿಂದ, ವಾಸ್ತವದಲ್ಲಿ ಯಾವುದು ತನಗೆ ಸೇರಿದ್ದಾಗಿದೆಯೋ ಅದನ್ನು ಆತನು ಹೆತ್ತವರ ವಶಕ್ಕೆ ಒಪ್ಪಿಸಿಕೊಟ್ಟಿದ್ದಾನೆ. (ಕೀರ್ತನೆ 36:9) ಹೆತ್ತವರೇ, ದೇವರು ನಿಮಗೆ ಕೊಟ್ಟಿರುವ ಇಂಥ ಒಂದು ಅಮೂಲ್ಯ ಉಡುಗೊರೆಯನ್ನು ನೀವು ಹೇಗೆ ಪರಿಗಣಿಸುತ್ತೀರಿ?
2. ತಾನು ತಂದೆಯಾಗಲಿದ್ದೇನೆ ಎಂಬುದು ಮಾನೋಹನಿಗೆ ತಿಳಿದುಬಂದಾಗ ಅವನು ಹೇಗೆ ಪ್ರತಿಕ್ರಿಯಿಸಿದನು?
2 ಇಂಥ ಒಂದು ಉಡುಗೊರೆಯನ್ನು ದೀನಭಾವದಿಂದ ಹಾಗೂ ಗಣ್ಯತಾಭಾವದಿಂದ ಸ್ವೀಕರಿಸಬೇಕು ಎಂಬುದರಲ್ಲಿ ಸಂಶಯವೇ ಇಲ್ಲ. ಮೂರು ಸಾವಿರಕ್ಕಿಂತಲೂ ಹೆಚ್ಚು ವರ್ಷಗಳ ಹಿಂದೆ, ತನ್ನ ಹೆಂಡತಿಯು ಒಂದು ಮಗುವಿಗೆ ಜನ್ಮನೀಡಲಿದ್ದಾಳೆ ಎಂಬುದು ಮಾನೋಹನಿಗೆ ಒಬ್ಬ ದೇವದೂತನ ಮೂಲಕ ಗೊತ್ತಾದಾಗ ಅವನು ಇದೇ ರೀತಿಯಲ್ಲಿ ಪ್ರತಿಕ್ರಿಯಿಸಿದನು. ಈ ಸಿಹಿಸುದ್ದಿಯನ್ನು ಕೇಳಿಸಿಕೊಂಡ ಬಳಿಕ ಮಾನೋಹನು ಪ್ರಾರ್ಥಿಸಿದ್ದು: “ಸ್ವಾಮೀ, ದಯವಿರಲಿ; ನೀನು ಕಳುಹಿಸಿದ ದೇವಪುರುಷನು ಇನ್ನೊಂದು ಸಾರಿ ನಮ್ಮ ಬಳಿಗೆ ಬಂದು ಹುಟ್ಟಲಿಕ್ಕಿರುವ ಮಗುವಿಗೋಸ್ಕರ ಮಾಡಬೇಕಾದದ್ದನ್ನು ನಮಗೆ ಬೋಧಿಸಲಿ.” (ನ್ಯಾಯಸ್ಥಾಪಕರು 13:8) ಹೆತ್ತವರೇ, ಮಾನೋಹನ ಉದಾಹರಣೆಯಿಂದ ನೀವು ಯಾವ ಪಾಠವನ್ನು ಕಲಿಯಸಾಧ್ಯವಿದೆ?
ಈಗ ದೇವರ ಸಹಾಯದ ಅಗತ್ಯ ಏಕಿದೆ?
3. ವಿಶೇಷವಾಗಿ ಇಂದು ಮಕ್ಕಳನ್ನು ಬೆಳೆಸುವುದರಲ್ಲಿ ದೇವರ ಸಹಾಯದ ಅಗತ್ಯವಿದೆ ಏಕೆ?
3 ಹಿಂದೆಂದಿಗಿಂತಲೂ ಹೆಚ್ಚಾಗಿ ಇಂದು, ತಮ್ಮ ಮಕ್ಕಳನ್ನು ಬೆಳೆಸುವುದರಲ್ಲಿ ಹೆತ್ತವರಿಗೆ ಯೆಹೋವನ ಸಹಾಯದ ಅಗತ್ಯವಿದೆ. ಕಾರಣವೇನು? ಪಿಶಾಚನಾದ ಸೈತಾನನೂ ಅವನ ದೂತರೂ ಪರಲೋಕದಿಂದ ಭೂಮಿಗೆ ದೊಬ್ಬಲ್ಪಟ್ಟಿದ್ದಾರೆ. ಈ ವಿಷಯದಲ್ಲಿ ಬೈಬಲ್ ಎಚ್ಚರಿಸುವುದು: ‘ಭೂಮಿಯೇ, ನಿನ್ನ ದುರ್ಗತಿಯನ್ನು ಏನು ಹೇಳಲಿ; ಸೈತಾನನು ತನಗಿರುವ ಕಾಲವು ಸ್ವಲ್ಪವೆಂದು ತಿಳಿದು ಮಹಾ ರೌದ್ರವುಳ್ಳವನಾಗಿ ನಿನ್ನ ಕಡೆಗೆ ಇಳಿದುಬಂದಿದ್ದಾನೆ.’ (ಪ್ರಕಟನೆ 12:7-9, 12) ಬೈಬಲ್ ವಿವರಿಸುವಂತೆ, “ಗರ್ಜಿಸುವ ಸಿಂಹದೋಪಾದಿಯಲ್ಲಿ” ಸೈತಾನನು “ಯಾರನ್ನು ನುಂಗಲಿ ಎಂದು ಹುಡುಕುತ್ತಾ” ತಿರುಗುತ್ತಿದ್ದಾನೆ. (1 ಪೇತ್ರ 5:8) ಸಾಮಾನ್ಯವಾಗಿ ಸಿಂಹಗಳು ತುಂಬ ಬಲಹೀನವಾಗಿರುವ ಪ್ರಾಣಿಗಳ ಮೇಲೆ, ಹೆಚ್ಚಾಗಿ ಮರಿಗಳ ಮೇಲೆ ಹಲ್ಲೆಮಾಡುತ್ತವೆ. ಹೀಗಿರುವುದರಿಂದ, ವಿವೇಕಯುತವಾಗಿಯೇ ಕ್ರೈಸ್ತ ಹೆತ್ತವರು ತಮ್ಮ ಮಕ್ಕಳನ್ನು ಸಂರಕ್ಷಿಸಲು ಬೇಕಾಗಿರುವ ಮಾರ್ಗದರ್ಶನಕ್ಕಾಗಿ ಯೆಹೋವನ ಕಡೆಗೆ ನೋಡುತ್ತಾರೆ. ಅವರನ್ನು ಸಂರಕ್ಷಿಸಲಿಕ್ಕಾಗಿ ನೀವೆಷ್ಟು ಪ್ರಯತ್ನವನ್ನು ಮಾಡುತ್ತಿದ್ದೀರಿ?
4. (ಎ) ನೆರೆಹೊರೆಯಲ್ಲಿ ಒಂದು ಸಿಂಹವು ಅಲೆದಾಡುತ್ತಿದೆ ಎಂಬುದನ್ನು ತಿಳಿದಿರುವುದು, ಹೆತ್ತವರಲ್ಲಿ ಯಾವ ಪ್ರತಿಕ್ರಿಯೆಯನ್ನು ಉಂಟುಮಾಡುತ್ತದೆ? (ಬಿ) ಸಂರಕ್ಷಣೆಗಾಗಿ ಮಕ್ಕಳಿಗೆ ಯಾವುದರ ಆವಶ್ಯಕತೆಯಿದೆ?
4 ನಿಮ್ಮ ನೆರೆಹೊರೆಯಲ್ಲಿ ಒಂದು ಸಿಂಹವು ಅಲೆದಾಡುತ್ತಿದೆ ಎಂಬುದು ನಿಮಗೆ ಗೊತ್ತಿರುವಲ್ಲಿ, ನಿಮ್ಮ ಮಕ್ಕಳನ್ನು ಸಂರಕ್ಷಿಸುವುದೇ ನಿಮ್ಮ ಮುಖ್ಯ ಚಿಂತೆಯಾಗಿರುತ್ತದೆ ಎಂಬುದಂತೂ ಖಂಡಿತ. ಸೈತಾನನು ಪರಭಕ್ಷಕನಾಗಿದ್ದಾನೆ. ಅವನು ದೇವಜನರನ್ನು ಭ್ರಷ್ಟಗೊಳಿಸಿ, ದೇವರ ಸಮ್ಮತಿಯನ್ನು ಪಡೆಯಲು ಅವರನ್ನು ಅನರ್ಹರನ್ನಾಗಿ ಮಾಡಲಿಕ್ಕಾಗಿ ಪ್ರಯತ್ನಿಸುತ್ತಾನೆ. (ಯೋಬ 2:1-7; 1 ಯೋಹಾನ 5:19) ಮಕ್ಕಳು ಅವನಿಗೆ ಸುಲಭವಾಗಿ ಬಲಿಬೀಳಸಾಧ್ಯವಿದೆ. ಪಿಶಾಚನ ಪಾಶಗಳಿಂದ ತಪ್ಪಿಸಿಕೊಳ್ಳಬೇಕಾದರೆ, ಮಕ್ಕಳು ಯೆಹೋವನನ್ನು ತಿಳಿದುಕೊಳ್ಳಬೇಕು ಮತ್ತು ಆತನಿಗೆ ವಿಧೇಯರಾಗಬೇಕು. ಇದಕ್ಕೆ ಬೈಬಲ್ ಜ್ಞಾನವು ಅತ್ಯಾವಶ್ಯಕವಾಗಿದೆ. ಯೇಸುವಂದದ್ದು: “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯಜೀವವು.” (ಯೋಹಾನ 17:3) ಅಷ್ಟುಮಾತ್ರವಲ್ಲದೆ ಎಳೆಯರಿಗೆ ವಿವೇಕದ, ಅಂದರೆ ಅವರೇನನ್ನು ಕಲಿಯುತ್ತಾರೋ ಅದನ್ನು ಅರ್ಥಮಾಡಿಕೊಂಡು ಅನ್ವಯಿಸಿಕೊಳ್ಳುವ ಸಾಮರ್ಥ್ಯದ ಅಗತ್ಯವೂ ಇದೆ. ‘ವಿವೇಕವು ತನ್ನನ್ನು ಹೊಂದಿದವನ ಜೀವವನ್ನು ಕಾಪಾಡುತ್ತದಾದ್ದರಿಂದ,’ ಹೆತ್ತವರಾದ ನೀವು ನಿಮ್ಮ ಮಕ್ಕಳ ಹೃದಯಗಳಲ್ಲಿ ಸತ್ಯವನ್ನು ತುಂಬಿಸುವ ಆವಶ್ಯಕತೆಯಿದೆ. (ಪ್ರಸಂಗಿ 7:12, NW) ನೀವಿದನ್ನು ಹೇಗೆ ಮಾಡಬಹುದು?
5. (ಎ) ವಿವೇಕವನ್ನು ಹೇಗೆ ಮೂಡಿಸಸಾಧ್ಯವಿದೆ? (ಬಿ) ಜ್ಞಾನೋಕ್ತಿಯು ವಿವೇಕದ ಮೌಲ್ಯವನ್ನು ಹೇಗೆ ವರ್ಣಿಸುತ್ತದೆ?
5 ನೀವು ನಿಮ್ಮ ಮಕ್ಕಳಿಗೆ ದೇವರ ವಾಕ್ಯವನ್ನು ಓದಿಹೇಳಸಾಧ್ಯವಿದೆ ಮತ್ತು ಓದಿಹೇಳತಕ್ಕದ್ದು. ಆದರೆ ಅವರು ಯೆಹೋವನನ್ನು ಪ್ರೀತಿಸುವಂತೆ ಮತ್ತು ಆತನಿಗೆ ವಿಧೇಯರಾಗುವಂತೆ ಸಹಾಯಮಾಡುವುದರಲ್ಲಿ ಇದಕ್ಕಿಂತಲೂ ಹೆಚ್ಚಿನದ್ದು ಒಳಗೂಡಿದೆ. ಇದು ಅವರು ಅದನ್ನು ಅರ್ಥಮಾಡಿಕೊಳ್ಳುವುದನ್ನು ಅಗತ್ಯಪಡಿಸುತ್ತದೆ. ಒಂದು ದೃಷ್ಟಾಂತವನ್ನು ಪರಿಗಣಿಸಿರಿ: ಎಡಗಡೆ ಮತ್ತು ಬಲಗಡೆ ಸರಿಯಾಗಿ ನೋಡಿದ ನಂತರವೇ ಬೀದಿಯನ್ನು ದಾಟಬೇಕು ಎಂದು ಒಂದು ಮಗುವಿಗೆ ಹೇಳಲಾಗಿರಬಹುದು. ಆದರೆ ಕೆಲವು ಮಕ್ಕಳು ಇದಕ್ಕೆ ವಿಧೇಯರಾಗುವುದಿಲ್ಲ. ಕಾರಣವೇನು? ಒಂದು ಕಾರ್ ಬಂದು ಡಿಕ್ಕಿಹೊಡೆದರೆ ಪರಿಣಾಮವೇನಾಗುತ್ತದೆ ಎಂಬುದು ಸಾಕಷ್ಟು ಮಟ್ಟಿಗೆ ವಿವರಿಸಲ್ಪಟ್ಟಿರಲಿಕ್ಕಿಲ್ಲ ಅಥವಾ ಅದರಲ್ಲಿ ಅಪಾಯವೇನಿದೆ ಎಂಬುದನ್ನು ಮಗುವು ಪೂರ್ಣವಾಗಿ ಅರ್ಥಮಾಡಿಕೊಳ್ಳುವಂಥ ವಿಧದಲ್ಲಿ ವಿವರಿಸಲ್ಪಟ್ಟಿರಲಿಕ್ಕಿಲ್ಲ, ಮತ್ತು ಈ ಕಾರಣದಿಂದ ಅಪಘಾತಕ್ಕೆ ನಡಿಸಸಾಧ್ಯವಿರುವ “ಮೂರ್ಖತನ”ವನ್ನು ಮಗುವು ಜಯಿಸಿರುವುದಿಲ್ಲ. ಯಾರಿಗಾದರೂ ವಿವೇಕವನ್ನು ಮೂಡಿಸುವುದು ಸಮಯ ಹಾಗೂ ತುಂಬ ತಾಳ್ಮೆಯನ್ನು ಕೇಳಿಕೊಳ್ಳುತ್ತದೆ. ಆದರೆ ವಿವೇಕವು ನಿಜವಾಗಿಯೂ ಎಷ್ಟು ಅಮೂಲ್ಯ! ಬೈಬಲ್ ಹೇಳುವುದು: ‘ಅದರ ದಾರಿಗಳು ಸುಖಕರವಾಗಿವೆ, ಅದರ ಮಾರ್ಗಗಳೆಲ್ಲಾ ಸಮಾಧಾನವೇ. ಅದು ತನ್ನನ್ನು ಹಿಡಿದುಕೊಳ್ಳುವವರಿಗೆ ಜೀವದ ಮರವಾಗಿದೆ; ಅದನ್ನು ಅವಲಂಬಿಸುವ ಪ್ರತಿಯೊಬ್ಬನೂ ಧನ್ಯನು.’—ಜ್ಞಾನೋಕ್ತಿ 3:13-18; 22:15.
ವಿವೇಕವನ್ನು ನೀಡುವಂಥ ರೀತಿಯ ಕಲಿಸುವಿಕೆ
6. (ಎ) ಅನೇಕವೇಳೆ ಮಕ್ಕಳು ಅವಿವೇಕದಿಂದ ವರ್ತಿಸುತ್ತಾರೆ ಏಕೆ? (ಬಿ) ಯಾವ ಹೋರಾಟವು ನಡೆಯುತ್ತಿದೆ?
6 ಅನೇಕವೇಳೆ ಎಳೆಯರು ತಪ್ಪಾದುದನ್ನು ಮಾಡುತ್ತಾರೆ. ಯಾವುದು ಸರಿಯಾಗಿದೆ ಎಂಬುದು ಅವರಿಗೆ ಕಲಿಸಲ್ಪಟ್ಟಿಲ್ಲ ಎಂಬ ಕಾರಣಕ್ಕಾಗಿ ಅಲ್ಲ, ಬದಲಾಗಿ ಕಲಿಸಲ್ಪಟ್ಟಂಥ ವಿಷಯವು ಅವರ ಹೃದಯಗಳನ್ನು ಅಂದರೆ ಅವರ ಆಂತರ್ಯವನ್ನು ತಲಪಿರದ ಕಾರಣದಿಂದಾಗಿಯೇ. ಎಳೆಯರ ಹೃದಯವನ್ನು ಸ್ವಾಧೀನಪಡಿಸಿಕೊಳ್ಳಲಿಕ್ಕಾಗಿ ಪಿಶಾಚನು ಹೆಣಗಾಡುತ್ತಿದ್ದಾನೆ. ಅವರು ಈ ಲೋಕದ ದೇವಭಕ್ತಿರಹಿತ ಪ್ರಭಾವಗಳಿಗೆ ಒಡ್ಡಲ್ಪಡುವಂತೆ ಅವನು ವ್ಯೂಹರಚಿಸುತ್ತಾನೆ. ಕೆಟ್ಟ ವಿಷಯಗಳನ್ನು ಮಾಡಲು ಅವರು ಬಾಧ್ಯತೆಯಾಗಿ ಪಡೆದಿರುವ ಪ್ರವೃತ್ತಿಯನ್ನೂ ಅವನು ದುರುಪಯೋಗಿಸಲು ಪ್ರಯತ್ನಿಸುತ್ತಾನೆ. (ಆದಿಕಾಂಡ 8:21; ಕೀರ್ತನೆ 51:5) ತಮ್ಮ ಮಕ್ಕಳ ಹೃದಯದ ಮೇಲೆ ನಿಯಂತ್ರಣವನ್ನು ಪಡೆಯಲಿಕ್ಕಾಗಿ ನಿಜವಾದ ಹೋರಾಟವು ನಡೆಯುತ್ತಿದೆ ಎಂಬುದನ್ನು ಹೆತ್ತವರು ಮನಗಾಣುವ ಅಗತ್ಯವಿದೆ.
7. ಒಂದು ಮಗುವಿಗೆ ಯಾವುದು ಸರಿ ಅಥವಾ ಯಾವುದು ತಪ್ಪು ಎಂಬುದನ್ನು ಹೇಳುವುದಷ್ಟೇ ಸಾಕಾಗುವುದಿಲ್ಲವೇಕೆ?
7 ಸಾಮಾನ್ಯವಾಗಿ ಹೆತ್ತವರು ಒಂದು ಮಗುವಿಗೆ ಯಾವುದು ಸರಿ ಅಥವಾ ಯಾವುದು ತಪ್ಪು ಎಂಬುದನ್ನು ಹೇಳುತ್ತಾರೆ, ಮತ್ತು ಹೀಗೆ ಮಾಡುವ ಮೂಲಕ ಅದಕ್ಕೆ ಒಂದು ನಿರ್ದಿಷ್ಟ ನೈತಿಕ ಮೂಲತತ್ತ್ವವನ್ನು ಕಲಿಸಿದ್ದೇವೆಂದು ನೆನಸುತ್ತಾರೆ. ಸುಳ್ಳು ಹೇಳುವುದು, ಕದಿಯುವುದು ಅಥವಾ ವಿವಾಹ ಸಂಗಾತಿಯನ್ನು ಬಿಟ್ಟು ಬೇರೆ ಯಾರೊಂದಿಗೇ ಲೈಂಗಿಕ ಸಂಬಂಧವನ್ನಿಡುವುದು ತಪ್ಪು ಎಂದು ಅವರು ಮಗುವಿಗೆ ಹೇಳಬಹುದು. ಆದರೂ, ತನ್ನ ಹೆತ್ತವರು ಹೇಳಿದ್ದಾರೆಂಬ ಕಾರಣಕ್ಕಾಗಿ ಮಾತ್ರವೇ ಇವುಗಳಿಗೆ ವಿಧೇಯರಾಗುವುದಕ್ಕಿಂತಲೂ ಹೆಚ್ಚು ಬಲವತ್ತಾದ ಪ್ರಚೋದನೆ ಮಗುವಿಗಿರಬೇಕು. ಇವು ಯೆಹೋವನ ನಿಯಮಗಳಾಗಿವೆ. ದೇವರ ಆಜ್ಞೆಗಳಿಗೆ ವಿಧೇಯರಾಗುವುದೇ ವಿವೇಕದ ಮಾರ್ಗವಾಗಿದೆ ಎಂಬುದನ್ನು ಮಗುವು ಅರ್ಥಮಾಡಿಕೊಳ್ಳಬೇಕು.—ಜ್ಞಾನೋಕ್ತಿ 6:16-19; ಇಬ್ರಿಯ 13:4.
8. ಯಾವ ರೀತಿಯ ಕಲಿಸುವಿಕೆಯು ಮಕ್ಕಳು ವಿವೇಕಯುತವಾಗಿ ವರ್ತಿಸುವಂತೆ ಸಹಾಯಮಾಡಬಲ್ಲದು?
8 ವಿಶ್ವದ ಜಟಿಲತೆ, ಜೀವಿಗಳಲ್ಲಿನ ವೈವಿಧ್ಯತೆ, ಋತುಗಳ ಬದಲಾವಣೆ—ಇವೆಲ್ಲವೂ ಸರ್ವ ವಿವೇಕಿಯಾಗಿರುವ ಸೃಷ್ಟಿಕರ್ತನೊಬ್ಬನ ಅಸ್ತಿತ್ವವನ್ನು ಗಣ್ಯಮಾಡುವಂತೆ ಒಂದು ಮಗುವಿಗೆ ಸಹಾಯಮಾಡಸಾಧ್ಯವಿದೆ. (ರೋಮಾಪುರ 1:20; ಇಬ್ರಿಯ 3:4) ಅಷ್ಟುಮಾತ್ರವಲ್ಲ, ದೇವರು ಅವನನ್ನು ಪ್ರೀತಿಸುತ್ತಾನೆ ಮತ್ತು ಅವನಿಗೆ ನಿತ್ಯಜೀವವನ್ನು ನೀಡಲಿಕ್ಕಾಗಿ ದೇವರು ತನ್ನ ಮಗನ ಯಜ್ಞದ ಮೂಲಕ ಏರ್ಪಾಡನ್ನು ಮಾಡಿದ್ದಾನೆ ಎಂಬುದನ್ನು ಮಗುವಿಗೆ ಕಲಿಸಬೇಕಾಗಿದೆ. ಮತ್ತು ಆತನು ಏನು ಹೇಳುತ್ತಾನೋ ಅದಕ್ಕೆ ವಿಧೇಯನಾಗುವ ಮೂಲಕ ಅವನು ದೇವರನ್ನು ಸಂತೋಷಪಡಿಸಸಾಧ್ಯವಿದೆ ಎಂಬುದೂ ಮಗುವಿಗೆ ತಿಳಿದಿರಬೇಕು. ಆಗ, ಆ ಮಗುವನ್ನು ತಡೆಯಲಿಕ್ಕಾಗಿ ಪಿಶಾಚನು ಎಷ್ಟೇ ಪ್ರಯತ್ನಗಳನ್ನು ಮಾಡುವುದಾದರೂ, ಬಹುಶಃ ಆ ಮಗುವು ಯೆಹೋವನ ಸೇವೆಮಾಡಲು ಬಯಸುವುದು.—ಜ್ಞಾನೋಕ್ತಿ 22:6; 27:11; ಯೋಹಾನ 3:16.
9. (ಎ) ಜೀವರಕ್ಷಕ ಕಲಿಸುವಿಕೆಯು ಏನನ್ನು ಅಗತ್ಯಪಡಿಸುತ್ತದೆ? (ಬಿ) ತಂದೆಗಳಿಗೆ ಏನು ಮಾಡುವಂತೆ ತಿಳಿಸಲಾಗಿದೆ, ಮತ್ತು ಇದರಲ್ಲಿ ಏನು ಒಳಗೂಡಿದೆ?
9 ಒಂದು ಮಗುವನ್ನು ಸಂರಕ್ಷಿಸಿ, ಯಾವುದು ಸರಿಯಾಗಿದೆಯೋ ಅದನ್ನೇ ಮಾಡುವಂತೆ ಪ್ರಚೋದಿಸುವಂಥ ರೀತಿಯಲ್ಲಿ ಅದಕ್ಕೆ ಕಲಿಸುವುದು, ಸಮಯ, ಗಮನ ಹಾಗೂ ಯೋಜನೆಯನ್ನು ಅಗತ್ಯಪಡಿಸುತ್ತದೆ. ದೇವರಿಂದ ಕೊಡಲ್ಪಡುವ ಮಾರ್ಗದರ್ಶನವನ್ನು ಹೆತ್ತವರು ಅಂಗೀಕರಿಸುವಂತೆ ಇದು ಕೇಳಿಕೊಳ್ಳುತ್ತದೆ. ಬೈಬಲ್ ತಿಳಿಸುವುದು: “ತಂದೆಗಳೇ, ನಿಮ್ಮ ಮಕ್ಕಳಿಗೆ ಕೋಪವನ್ನೆಬ್ಬಿಸದೆ ಕರ್ತನಿಗೆ [“ಯೆಹೋವನಿಗೆ,” NW] ಮೆಚ್ಚಿಗೆಯಾಗಿರುವ ಬಾಲಶಿಕ್ಷೆಯನ್ನೂ ಬಾಲೋಪದೇಶವನ್ನೂ [“ಮಾನಸಿಕ ಕ್ರಮಪಡಿಸುವಿಕೆಯನ್ನೂ,” NW] ಮಾಡುತ್ತಾ ಅವರನ್ನು ಸಾಕಿಸಲಹಿರಿ.” (ಎಫೆಸ 6:4) ಇದರ ಅರ್ಥವೇನು? ಮೂಲ ಗ್ರೀಕ್ ಭಾಷೆಯಲ್ಲಿ ‘ಮಾನಸಿಕ ಕ್ರಮಪಡಿಸುವಿಕೆಯು’ “ಮನಸ್ಸನ್ನು ಹಾಕುವ” ವಿಷಯವನ್ನು ಸೂಚಿಸುತ್ತದೆ. ಆದುದರಿಂದ, ಕಾರ್ಯತಃ ತಂದೆಗಳು ತಮ್ಮ ಮಕ್ಕಳಲ್ಲಿ ಯೆಹೋವನ ಮನಸ್ಸನ್ನು ಹಾಕುವಂತೆ ಉತ್ತೇಜಿಸಲ್ಪಟ್ಟಿದ್ದಾರೆ. ಇದು ಎಳೆಯರಿಗೆ ಎಂಥ ಒಂದು ಸಂರಕ್ಷಣೆಯಾಗಿರುವುದು! ಮಕ್ಕಳ ಮನಸ್ಸಿನಲ್ಲಿ ದೇವರ ಆಲೋಚನೆಗಳು ಅಂದರೆ ಆತನ ಆಲೋಚನಾ ವಿಧವು ತುಂಬಿಸಲ್ಪಟ್ಟಿರುವಲ್ಲಿ, ತಪ್ಪುಗೈಯುವುದರ ವಿರುದ್ಧ ಅವರು ಸಂರಕ್ಷಿಸಲ್ಪಡುತ್ತಾರೆ.
ಪ್ರೀತಿಯಿಂದ ಪ್ರಚೋದಿತವಾದ ಬಯಕೆ
10. ನಿಮ್ಮ ಮಗುವಿಗೆ ಪರಿಣಾಮಕಾರಿಯಾದ ರೀತಿಯಲ್ಲಿ ಬೋಧಿಸಬೇಕಾದರೆ, ನಿಮಗೆ ಏನು ತಿಳಿದಿರುವುದು ಪ್ರಾಮುಖ್ಯವಾಗಿದೆ?
10 ಆದರೂ, ನಿಮ್ಮ ಮಗುವನ್ನು ಯೋಗ್ಯ ರೀತಿಯಲ್ಲಿ ಬೆಳೆಸುವ ನಿಮ್ಮ ಬಯಕೆಯು ಈಡೇರಲಿಕ್ಕಾಗಿ, ನಿಮ್ಮ ಪ್ರಯತ್ನಗಳು ಪ್ರೀತಿಯಿಂದ ಪ್ರಚೋದಿತವಾಗಿರುವ ಅಗತ್ಯವಿದೆ. ಇದಕ್ಕೆ ಮುಖ್ಯವಾಗಿರುವ ಅಂಶವು ಒಳ್ಳೇ ಮಾತುಸಂಪರ್ಕವೇ ಆಗಿದೆ. ನಿಮ್ಮ ಮಗುವಿನ ಜೀವನದಲ್ಲಿ ಏನು ನಡೆಯುತ್ತಿದೆ ಮತ್ತು ಅವನ ಅಥವಾ ಅವಳ ದೃಷ್ಟಿಕೋನಗಳು ಏನಾಗಿವೆ ಎಂಬುದನ್ನು ತಿಳಿದುಕೊಳ್ಳಿರಿ. ಆರಾಮವಾದ ಸನ್ನಿವೇಶದಲ್ಲಿ, ನಿಮ್ಮ ಮಗುವಿನ ಮನಸ್ಸಿನಲ್ಲಿ ಏನಿದೆ ಎಂಬುದನ್ನು ಚಾತುರ್ಯದಿಂದ ಹೊರಸೆಳೆಯಿರಿ. ಕೆಲವೊಮ್ಮೆ ಅವನು ಏನು ಹೇಳುತ್ತಾನೋ ಅದನ್ನು ಕೇಳಿ ನೀವು ಬೆಚ್ಚಿಬೀಳಬಹುದು. ಆದರೆ ಆ ಸಮಯದಲ್ಲಿ ನೀವು ಅತಿಯಾಗಿ ಪ್ರತಿಕ್ರಿಯಿಸದಂತೆ ಜಾಗ್ರತೆ ವಹಿಸಿ. ಅವನು ಹೇಳುವುದನ್ನು ಆಸಕ್ತಿಯಿಂದ ಕೇಳಿಸಿಕೊಳ್ಳಿ.
11. ಒಬ್ಬ ಹೆತ್ತವರು ಯಾವ ರೀತಿಯಲ್ಲಿ ದೇವರ ಮನಸ್ಸನ್ನು ಮಗುವಿನಲ್ಲಿ ಹಾಕಸಾಧ್ಯವಿದೆ?
11 ಲೈಂಗಿಕ ಅನೈತಿಕತೆಯನ್ನು ನಿಷೇಧಿಸುವಂಥ ದೇವರ ನಿಯಮಗಳ ಕುರಿತು ನೀವು ನಿಮ್ಮ ಮಗುವಿಗೆ ಬೈಬಲಿನಿಂದ ಓದಿ ಹೇಳಿರಬಹುದು, ಮತ್ತು ಇದನ್ನು ಅನೇಕ ಬಾರಿ ಮಾಡಿರಬಹುದು ನಿಜ. (1 ಕೊರಿಂಥ 6:18; ಎಫೆಸ 5:5) ಇದು, ಯೆಹೋವನು ಯಾವುದನ್ನು ಮೆಚ್ಚುತ್ತಾನೆ ಮತ್ತು ಯಾವುದನ್ನು ಮೆಚ್ಚುವುದಿಲ್ಲ ಎಂಬ ವಿಷಯವನ್ನು ನಿಮ್ಮ ಮಗುವಿನ ಮನಸ್ಸಿನಲ್ಲಿ ಅಚ್ಚೊತ್ತಿರಬಹುದು. ಆದರೂ, ಯೆಹೋವನ ಮನಸ್ಸನ್ನು ಮಗುವಿನಲ್ಲಿ ಹಾಕುವುದು ಇದಕ್ಕಿಂತ ಹೆಚ್ಚಿನದ್ದನ್ನು ಅಗತ್ಯಪಡಿಸುತ್ತದೆ. ಯೆಹೋವನ ನಿಯಮಗಳ ಮೌಲ್ಯವೇನೆಂಬುದನ್ನು ತರ್ಕಬದ್ಧವಾಗಿ ಅರ್ಥಮಾಡಿಕೊಳ್ಳಲು ಮಕ್ಕಳಿಗೆ ಸಹಾಯದ ಅಗತ್ಯವಿದೆ. ಆತನ ನಿಯಮಗಳು ಸರಿಯಾದವುಗಳಾಗಿವೆ, ಪ್ರಯೋಜನದಾಯಕವಾಗಿವೆ ಮತ್ತು ಅವುಗಳಿಗೆ ವಿಧೇಯರಾಗುವುದು ಯೋಗ್ಯವಾಗಿದೆ ಮತ್ತು ಪ್ರೀತಿಪರವಾದದ್ದಾಗಿದೆ ಎಂಬುದನ್ನು ಅವರು ಮನಗಾಣುವ ಅಗತ್ಯವಿದೆ. ನಿಮ್ಮ ಮಕ್ಕಳು ದೇವರ ದೃಷ್ಟಿಕೋನವನ್ನು ಅಂಗೀಕರಿಸುವಂಥ ರೀತಿಯಲ್ಲಿ ನೀವು ಅವರೊಂದಿಗೆ ಶಾಸ್ತ್ರವಚನಗಳ ಸಹಾಯದಿಂದ ತರ್ಕಬದ್ಧವಾಗಿ ಮಾತಾಡುವಲ್ಲಿ ಮಾತ್ರ, ನೀವು ಅವರಲ್ಲಿ ಆತನ ಮನಸ್ಸನ್ನು ಹಾಕಿದ್ದೀರಿ ಎಂದು ಹೇಳಸಾಧ್ಯವಿದೆ.
12. ಲೈಂಗಿಕ ಸಂಬಂಧಗಳ ಕುರಿತಾದ ಯೋಗ್ಯ ದೃಷ್ಟಿಕೋನವನ್ನು ಪಡೆದುಕೊಳ್ಳಲಿಕ್ಕಾಗಿ ಹೆತ್ತವರು ತಮ್ಮ ಮಗುವಿಗೆ ಹೇಗೆ ಸಹಾಯಮಾಡಬಲ್ಲರು?
12 ಸೆಕ್ಸ್ನ ಬಗ್ಗೆ ಮಾತಾಡುವಾಗ ನೀವು ಹೀಗೆ ಕೇಳಬಹುದು: “ವಿವಾಹಕ್ಕೆ ಮುಂಚೆ ಲೈಂಗಿಕ ಸಂಬಂಧಗಳನ್ನು ಇಡಬಾರದು ಎಂಬ ಯೆಹೋವನ ನಿಯಮಕ್ಕೆ ವಿಧೇಯರಾಗುವುದು ಒಬ್ಬ ವ್ಯಕ್ತಿಯ ಸಂತೋಷವನ್ನು ಕಸಿದುಕೊಳ್ಳುತ್ತದೆ ಎಂದು ನೆನಸುತ್ತೀಯೊ?” ನಿಮ್ಮ ಮಗು ಕೊಡುವ ಉತ್ತರಕ್ಕೆ ಅವನು ವಿವರಣೆ ಕೊಡುವಂತೆ ಉತ್ತೇಜಿಸಿರಿ. ಮಗುವನ್ನು ಉಂಟುಮಾಡಲಿಕ್ಕಾಗಿರುವ ದೇವರ ಅದ್ಭುತಕರ ಒದಗಿಸುವಿಕೆಯನ್ನು ಪುನರ್ವಿಮರ್ಶಿಸಿದ ಬಳಿಕ ನೀವು ಹೀಗೆ ಕೇಳಬಹುದು: “ನಮ್ಮ ಪ್ರೀತಿಭರಿತ ದೇವರು ಜೀವನದ ಆನಂದವನ್ನು ನಮ್ಮಿಂದ ಕಸಿದುಕೊಳ್ಳಲಿಕ್ಕಾಗಿ ನಿಯಮಗಳನ್ನು ವಿಧಿಸುತ್ತಾನೆಂದು ನಿನಗನಿಸುತ್ತದೊ? ಅಥವಾ ಆತನ ನಿಯಮಗಳು ನಮ್ಮ ಸಂತೋಷಕ್ಕಾಗಿವೆ ಮತ್ತು ನಮ್ಮ ಸಂರಕ್ಷಣೆಗಾಗಿವೆ ಎಂದು ನಿನಗನಿಸುತ್ತದೊ?” (ಕೀರ್ತನೆ 119:1, 2; ಯೆಶಾಯ 48:17) ಈ ವಿಷಯದಲ್ಲಿ ನಿಮ್ಮ ಮಗುವಿನ ಅಭಿಪ್ರಾಯವೇನು ಎಂಬುದನ್ನು ತಿಳಿದುಕೊಳ್ಳಿ. ತದನಂತರ, ಯಾವ ರೀತಿಯಲ್ಲಿ ಲೈಂಗಿಕ ಅನೈತಿಕತೆಯು ಮನೋವೇದನೆ ಹಾಗೂ ತೊಂದರೆಯನ್ನು ಉಂಟುಮಾಡಿದೆ ಎಂಬುದನ್ನು ತೋರಿಸುವಂಥ ಉದಾಹರಣೆಗಳ ಕಡೆಗೆ ನೀವು ಗಮನವನ್ನು ಸೆಳೆಯಬಹುದು. (2 ಸಮುವೇಲ 13:1-33) ದೇವರ ದೃಷ್ಟಿಕೋನವನ್ನು ಅರ್ಥಮಾಡಿಕೊಂಡು ಅದನ್ನು ಅಂಗೀಕರಿಸುವಂಥ ರೀತಿಯಲ್ಲಿ ನಿಮ್ಮ ಮಗುವಿನೊಂದಿಗೆ ತರ್ಕಬದ್ಧವಾಗಿ ಮಾತಾಡುವ ಮೂಲಕ, ಅವನಲ್ಲಿ ದೇವರ ಮನಸ್ಸನ್ನು ಹಾಕಲು ನೀವು ಬಹಳಷ್ಟನ್ನು ಮಾಡುವಿರಿ. ಅಷ್ಟುಮಾತ್ರವಲ್ಲ, ನೀವು ಮಾಡಸಾಧ್ಯವಿರುವ ಇನ್ನೊಂದು ವಿಷಯವೂ ಇದೆ.
13. ಯೆಹೋವನ ಕುರಿತು ಏನನ್ನು ಅರ್ಥಮಾಡಿಕೊಳ್ಳುವುದು, ಆತನಿಗೆ ವಿಧೇಯತೆ ತೋರಿಸುವಂತೆ ಒಂದು ಮಗುವಿಗೆ ವಿಶೇಷ ಪ್ರಚೋದನೆಯನ್ನು ನೀಡುತ್ತದೆ?
13 ವಿವೇಕಯುತವಾಗಿಯೇ, ಯೆಹೋವನಿಗೆ ಅವಿಧೇಯರಾಗುವುದರ ಪರಿಣಾಮಗಳನ್ನು ನೀವು ನಿಮ್ಮ ಮಕ್ಕಳಿಗೆ ಬೋಧಿಸುವಿರಿ ಮಾತ್ರವಲ್ಲ, ನಮ್ಮ ಜೀವನ ರೀತಿಯು ಹೇಗೆ ವೈಯಕ್ತಿಕವಾಗಿ ಯೆಹೋವನ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನೂ ವಿವರಿಸುವಿರಿ. ನಾವು ಯೆಹೋವನ ಚಿತ್ತವನ್ನು ಮಾಡಲು ತಪ್ಪುವಾಗ ಆತನ ಮನಸ್ಸಿಗೆ ನೋವನ್ನು ಉಂಟುಮಾಡಸಾಧ್ಯವಿದೆ ಎಂಬುದನ್ನು ಬೈಬಲಿನಿಂದ ನಿಮ್ಮ ಮಗುವಿಗೆ ತೋರಿಸಿರಿ. (ಕೀರ್ತನೆ 78:40) “ನೀನು ಏಕೆ ಯೆಹೋವನ ಮನಸ್ಸನ್ನು ನೋಯಿಸಲು ಬಯಸುವುದಿಲ್ಲ?” ಎಂದು ನೀವು ಕೇಳಬಹುದು ಮತ್ತು ಹೀಗೆ ವಿವರಿಸಬಹುದು: “ನಾವು ಯೆಹೋವನ ಸೇವೆಮಾಡುವುದು ಆತನ ಮೇಲಿನ ಪ್ರೀತಿಯಿಂದಾಗಿ ಅಲ್ಲ ಬದಲಾಗಿ ಸ್ವಾರ್ಥ ಕಾರಣಗಳಿಗಾಗಿಯೇ ಎಂದು ಯೆಹೋವನ ಶತ್ರುವಾಗಿರುವ ಸೈತಾನನು ಪ್ರತಿಪಾದಿಸುತ್ತಾನೆ.” ತದನಂತರ, ಯೋಬನು ಹೇಗೆ ಸಮಗ್ರತೆಯನ್ನು ಕಾಪಾಡಿಕೊಳ್ಳುವ ಮೂಲಕ ದೇವರ ಹೃದಯವನ್ನು ಸಂತೋಷಪಡಿಸಿದನು ಮತ್ತು ಹೀಗೆ ಸೈತಾನನ ಸುಳ್ಳಾರೋಪಕ್ಕೆ ಉತ್ತರವನ್ನು ನೀಡಿದನು ಎಂಬುದನ್ನು ವಿವರಿಸಿರಿ. (ಯೋಬ 1:9-11; 27:5) ತನ್ನ ನಡತೆಯ ಮೂಲಕ ತಾನು ಯೆಹೋವನನ್ನು ದುಃಖಪಡಿಸಸಾಧ್ಯವಿದೆ ಅಥವಾ ಸಂತೋಷಪಡಿಸಸಾಧ್ಯವಿದೆ ಎಂಬುದನ್ನು ನಿಮ್ಮ ಮಗು ಅರ್ಥಮಾಡಿಕೊಳ್ಳುವ ಅಗತ್ಯವಿದೆ. (ಜ್ಞಾನೋಕ್ತಿ 27:11) ಮಹಾ ಬೋಧಕನಿಂದ ಕಲಿಯಿರಿ (ಇಂಗ್ಲಿಷ್) ಎಂಬ ಪುಸ್ತಕವನ್ನು ಉಪಯೋಗಿಸುವ ಮೂಲಕ ಈ ಪಾಠವನ್ನು ಹಾಗೂ ಇನ್ನಿತರ ಅತ್ಯಾವಶ್ಯಕ ಪಾಠಗಳನ್ನು ಮಕ್ಕಳಿಗೆ ಕಲಿಸಸಾಧ್ಯವಿದೆ.a
ಅಪೇಕ್ಷಣೀಯ ಫಲಿತಾಂಶಗಳು
14, 15. (ಎ) ಬೋಧಕ ಪುಸ್ತಕದಲ್ಲಿರುವ ಯಾವ ಪಾಠಗಳು ಮಕ್ಕಳನ್ನು ಪ್ರಚೋದಿಸಿವೆ? (ಬಿ) ಈ ಪುಸ್ತಕವನ್ನು ಉಪಯೋಗಿಸುವುದರಿಂದ ಯಾವ ಒಳ್ಳೇ ಫಲಿತಾಂಶಗಳನ್ನು ನೀವು ಪಡೆದಿದ್ದೀರಿ? (18-19ನೆಯ ಪುಟಗಳಲ್ಲಿರುವ ಚೌಕವನ್ನು ಸಹ ನೋಡಿರಿ.)
14 ತನ್ನ ಏಳು ವರ್ಷದ ಮೊಮ್ಮಗನೊಂದಿಗೆ ಬೋಧಕ ಪುಸ್ತಕವನ್ನು ಓದುವಂಥ ಕ್ರೊಏಷಿಯದ ಅಜ್ಜನೊಬ್ಬನು, ತನ್ನ ಮೊಮ್ಮಗನು ತನಗೆ ಹೀಗೆ ಹೇಳಿದನೆಂದು ಬರೆದನು: “ಅಮ್ಮ ನನಗೆ ಒಂದು ಕೆಲಸವನ್ನು ಮಾಡಲು ಹೇಳಿದಳು, ಆದರೆ ನನಗೆ ಅದನ್ನು ಮಾಡಲು ಇಷ್ಟವಿರಲಿಲ್ಲ. ಆಗ ನಾನು ‘ವಿಧೇಯತೆಯು ನಿಮ್ಮನ್ನು ಸಂರಕ್ಷಿಸುತ್ತದೆ’ ಎಂಬ ಅಧ್ಯಾಯವನ್ನು ಜ್ಞಾಪಿಸಿಕೊಂಡೆ, ಆದುದರಿಂದ ಪುನಃ ಅಮ್ಮನ ಬಳಿಗೆ ಹೋಗಿ, ‘ನಾನು ನಿನಗೆ ವಿಧೇಯನಾಗುತ್ತೇನೆ’ ಎಂದು ಹೇಳಿದೆ.” ಯು.ಎಸ್.ಎ. ಫ್ಲೊರಿಡದಲ್ಲಿನ ದಂಪತಿಯೊಬ್ಬರು “ನಾವು ಏಕೆ ಸುಳ್ಳು ಹೇಳಬಾರದು?” ಎಂಬ ಅಧ್ಯಾಯದ ಕುರಿತು ಹೇಳಿದ್ದು: “ಮಕ್ಕಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ, ಸಾಮಾನ್ಯವಾಗಿ ಅವರು ಒಪ್ಪಿಕೊಳ್ಳದಿರುವಂಥ ತಪ್ಪುಗಳನ್ನು ಸಹ ಒಪ್ಪಿಕೊಳ್ಳುವಂತೆ ಪ್ರಚೋದಿಸುವಂಥ ಪ್ರಶ್ನೆಗಳನ್ನು ಅದು ಒದಗಿಸುತ್ತದೆ.”
15 ಬೋಧಕ ಪುಸ್ತಕದಲ್ಲಿ 230ಕ್ಕಿಂತಲೂ ಹೆಚ್ಚು ಚಿತ್ರಗಳಿವೆ ಮತ್ತು ಪ್ರತಿಯೊಂದು ಚಿತ್ರ ಅಥವಾ ಚಿತ್ರಗಳ ಗುಂಪಿಗೆ ಒಂದೊಂದು ಶೀರ್ಷಿಕೆ ಅಥವಾ ವಿವರಣೆ ಇದೆ. ಕೃತಜ್ಞತಾ ಮನೋಭಾವವುಳ್ಳ ತಾಯಿಯೊಬ್ಬಳು ತಿಳಿಸಿದ್ದು: “ಅನೇಕವೇಳೆ ನನ್ನ ಮಗನು ಒಂದು ಚಿತ್ರದ ಮೇಲೆ ದೃಷ್ಟಿ ನೆಟ್ಟಿರುತ್ತಾನೆ ಮತ್ತು ಆ ಪುಟವನ್ನು ತಿರುಗಿಸಲಿಕ್ಕೇ ಇಷ್ಟಪಡುವುದಿಲ್ಲ. ಚಿತ್ರಗಳು ಹೆಚ್ಚು ಆಕರ್ಷಕವಾಗಿವೆ ಮಾತ್ರವಲ್ಲ, ಅವು ಕೆಲವೊಂದು ಪಾಠಗಳನ್ನೂ ಕಲಿಸುತ್ತವೆ ಅಥವಾ ಕಡಿಮೆಪಕ್ಷ ಮಕ್ಕಳು ಪ್ರಶ್ನೆಗಳನ್ನು ಕೇಳುವಂತೆ ಪ್ರಚೋದಿಸುತ್ತವೆ. ಮಗುವೊಂದು ಕತ್ತಲೆ ಕೋಣೆಯಲ್ಲಿ ಕುಳಿತು ಟೆಲಿವಿಷನ್ ಅನ್ನು ವೀಕ್ಷಿಸುತ್ತಿರುವ ಚಿತ್ರದ ಕುರಿತು ನನ್ನ ಮಗನು, ‘ಮಮ್ಮಿ ಆ ಹುಡುಗನು ಏನು ಮಾಡುತ್ತಿದ್ದಾನೆ?’ ಎಂದು ಭಿನ್ನವಾದ ಸ್ವರದಲ್ಲಿ ಕೇಳಿದನು; ಏನೋ ತಪ್ಪು ನಡೆಯುತ್ತಿದೆ ಎಂಬುದು ಅವನಿಗೆ ಗೊತ್ತಿದೆ ಎಂಬುದನ್ನು ಅವನ ಸ್ವರವೇ ಸೂಚಿಸುತ್ತಿತ್ತು.” ಆ ಚಿತ್ರಕ್ಕೆ ಈ ಶೀರ್ಷಿಕೆ ಇದೆ: “ನಾವು ಮಾಡುವಂಥ ಪ್ರತಿಯೊಂದು ಕೆಲಸವನ್ನೂ ಯಾರು ನೋಡಬಲ್ಲರು?”
ಇಂದಿಗಾಗಿ ಅತ್ಯಾವಶ್ಯಕವಾಗಿರುವ ಶಿಕ್ಷಣ
16. ಇಂದು ಮಕ್ಕಳಿಗೆ ಏನನ್ನು ಕಲಿಸುವುದು ಪ್ರಾಮುಖ್ಯವಾಗಿದೆ, ಮತ್ತು ಏಕೆ?
16 ತಮ್ಮ ಜನನೇಂದ್ರಿಯಗಳ ಯೋಗ್ಯವಾದ ಹಾಗೂ ಅಯೋಗ್ಯವಾದ ಉಪಯೋಗದ ಬಗ್ಗೆ ಮಕ್ಕಳಿಗೆ ತಿಳಿದಿರುವ ಅಗತ್ಯವಿದೆ. ಆದರೆ ಈ ವಿಷಯದ ಕುರಿತು ಮಾತಾಡುವುದು ಸುಲಭವಾದದ್ದೇನಲ್ಲ. ಒಂದು ವಾರ್ತಾಪತ್ರಿಕೆಯ ಅಂಕಣಕಾರ್ತಿಯೊಬ್ಬಳು, ಲೈಂಗಿಕ ಅವಯವಗಳಿಗೆ ಸೂಚಿತವಾದ ಪದಗಳನ್ನು ಉಪಯೋಗಿಸುವುದು ಅಸಭ್ಯವೆಂದು ಪರಿಗಣಿಸಲಾಗುತ್ತಿದ್ದ ಸಮಯಾವಧಿಯಲ್ಲಿ ತಾನು ಬೆಳೆದೆನೆಂದು ತಿಳಿಸಿದಳು. ತನ್ನ ಮಕ್ಕಳಿಗೆ ಕಲಿಸುವ ವಿಷಯದಲ್ಲಿ ಅವಳು ಬರೆದುದು: “ಆದರೆ ನಾನು ಮಾತ್ರ ನನ್ನ ಮುಜುಗರದ ಅನಿಸಿಕೆಯನ್ನು ಕೊನೆಗಾಣಿಸಬೇಕು.” ಮುಜುಗರದ ಅನಿಸಿಕೆಯಿಂದಾಗಿ ಹೆತ್ತವರು ಸೆಕ್ಸ್ನ ಕುರಿತು ಚರ್ಚಿಸಲು ಹಿಂಜರಿಯುವುದಾದರೆ, ಇದು ನಿಜವಾಗಿಯೂ ಮಗುವನ್ನು ಸಂರಕ್ಷಿಸಲಾರದು. ಲೈಂಗಿಕ ಅತ್ಯಾಚಾರಿಗಳು ಮಗುವಿನ ಅಜ್ಞಾನವನ್ನು ದುರುಪಯೋಗಿಸಬಲ್ಲರು. ಮಹಾ ಬೋಧಕನಿಂದ ಕಲಿಯಿರಿ ಪುಸ್ತಕವು ಈ ವಿಷಯವನ್ನು ಹಿತಕರವಾದ ಹಾಗೂ ಗೌರವಯುತವಾದ ರೀತಿಯಲ್ಲಿ ಸಾದರಪಡಿಸುತ್ತದೆ. ಸೆಕ್ಸ್ನ ಕುರಿತು ಮಕ್ಕಳಿಗೆ ತಿಳಿಯಪಡಿಸುವುದು ಅವರ ಮುಗ್ಧತೆಯನ್ನು ಹಾಳುಮಾಡುವುದಿಲ್ಲ; ಆದರೆ ಇದನ್ನು ಮಾಡಲು ತಪ್ಪಿಹೋಗುವುದು ತಾನೇ ಅವರು ತಮ್ಮ ಮುಗ್ಧತೆಯನ್ನು ಕಳೆದುಕೊಳ್ಳುವ ಸ್ಥಿತಿಗೆ ತಲಪಿಸಬಲ್ಲದು.
17. ತಮ್ಮ ಮಕ್ಕಳಿಗೆ ಸೆಕ್ಸ್ನ ಕುರಿತು ಕಲಿಸುವಂತೆ ಬೋಧಕ ಪುಸ್ತಕವು ಹೆತ್ತವರಿಗೆ ಹೇಗೆ ಸಹಾಯಮಾಡುತ್ತದೆ?
17 ಹತ್ತನೆಯ ಅಧ್ಯಾಯದಲ್ಲಿ, ಭೂಮಿಗೆ ಬಂದು ಮಕ್ಕಳನ್ನು ಹುಟ್ಟಿಸಿದ ದುಷ್ಟ ದೇವದೂತರ ಕುರಿತು ಚರ್ಚಿಸುತ್ತಿರುವಾಗ, ಮಗುವಿಗೆ ಹೀಗೆ ಕೇಳಲಾಗಿದೆ: “ಲೈಂಗಿಕ ಸಂಬಂಧಗಳ ಕುರಿತು ನಿನಗೆ ಏನು ತಿಳಿದಿದೆ?” ಆ ಪುಸ್ತಕವು ಈ ಪ್ರಶ್ನೆಗೆ ಸರಳವೂ ಗೌರವಯುತವೂ ಆದ ಉತ್ತರವನ್ನು ಕೊಡುತ್ತದೆ. ತದನಂತರ 32ನೆಯ ಅಧ್ಯಾಯವು, ಮಕ್ಕಳನ್ನು ಲೈಂಗಿಕ ಅತ್ಯಾಚಾರಿಗಳಿಂದ ಹೇಗೆ ಸಂರಕ್ಷಿಸಸಾಧ್ಯವಿದೆ ಎಂಬುದನ್ನು ವಿವರಿಸುತ್ತದೆ. ಅನೇಕ ಪತ್ರಗಳು ಇಂಥ ಕಲಿಸುವಿಕೆಯು ಅತ್ಯಾವಶ್ಯಕವಾಗಿದೆ ಎಂಬುದನ್ನು ವರದಿಸಿವೆ. ಒಬ್ಬ ತಾಯಿ ಬರೆದುದು: “ಕಳೆದ ವಾರ ನನ್ನ ಮಗನಾದ ರೇವಾನ್ ಮಕ್ಕಳತಜ್ಞರನ್ನು ಕಾಣಬೇಕಿತ್ತು. ದೇಹದ ಜನನೇಂದ್ರಿಯಗಳ ಯೋಗ್ಯ ಉಪಯೋಗದ ಬಗ್ಗೆ ನಾವು ಅವನೊಂದಿಗೆ ಚರ್ಚಿಸಿದ್ದೇವೋ ಎಂದು ಆ ವೈದ್ಯಳು ಕೇಳಿದಳು. ನಮ್ಮ ಹೊಸ ಪುಸ್ತಕವನ್ನು ಉಪಯೋಗಿಸಿ ನಾವು ಅವನೊಂದಿಗೆ ಚರ್ಚೆ ನಡೆಸಿದ್ದೇವೆ ಎಂಬುದನ್ನು ಕೇಳಿ ಅವಳು ತುಂಬ ಪ್ರಭಾವಿತಳಾದಳು.”
18. ರಾಷ್ಟ್ರೀಯ ಸಂಕೇತಗಳಿಗೆ ಗೌರವ ಸಲ್ಲಿಸುವ ವಿಷಯವನ್ನು ಬೋಧಕ ಪುಸ್ತಕವು ಹೇಗೆ ಚರ್ಚಿಸುತ್ತದೆ?
18 ಇನ್ನೊಂದು ಅಧ್ಯಾಯವು, ಬಾಬೆಲಿನ ಸಂಸ್ಥಾನವನ್ನು ಪ್ರತಿನಿಧಿಸಿದ ಒಂದು ಪ್ರತಿಮೆಗೆ ಅಡ್ಡಬೀಳಲು ನಿರಾಕರಿಸಿದಂಥ ಶದ್ರಕ್, ಮೇಶಕ್ ಮತ್ತು ಅಬೇದ್ನೆಗೋ ಎಂಬ ಮೂವರು ಇಬ್ರಿಯ ಯುವಕರ ಕುರಿತಾದ ಬೈಬಲ್ ವೃತ್ತಾಂತವನ್ನು ಹೊಂದಿದೆ. (ದಾನಿಯೇಲ 3:1-30) ಬೋಧಕ ಪುಸ್ತಕವು ಸೂಚಿಸುವಂತೆ, ಪ್ರತಿಮೆಯನ್ನು ಆರಾಧಿಸುವುದು ಹಾಗೂ ಧ್ವಜವಂದನೆ ಮಾಡುವುದರ ನಡುವಣ ಸಂಬಂಧವನ್ನು ಕೆಲವರು ಅರ್ಥಮಾಡಿಕೊಳ್ಳದಿರಬಹುದು. ಆದರೂ, ಯು.ಎಸ್. ಕ್ಯಾಥೊಲಿಕ್ ಪತ್ರಿಕೆಯಿಂದ ನಡೆಸಲ್ಪಟ್ಟ ಒಂದು ಸಂದರ್ಶನದಲ್ಲಿ ಲೇಖಕರಾದ ಎಡ್ವರ್ಡ್ ಗ್ಯಾಫ್ನೀ ಏನು ಹೇಳಿದರೆಂಬುದನ್ನು ಗಮನಿಸಿರಿ. ಮೊದಲ ದಿನ ಪಬ್ಲಿಕ್ ಶಾಲೆಗೆ ಹೋಗಿ ಬಂದ ಅವರ ಮಗಳು, ತಾನು “ಶಾಲೆಯಲ್ಲಿ ಹೊಸ ಪ್ರಾರ್ಥನೆಯನ್ನು” ಕಲಿತು ಬಂದಿದ್ದೇನೆ ಎಂದು ಅವರಿಗೆ ಹೇಳಿದಾದ, ಅವಳೇನು ಹೇಳಿದಳೋ ಅದನ್ನು ಪುನರುಚ್ಚರಿಸುವಂತೆ ಕೇಳಿಕೊಳ್ಳಲಾಯಿತು. ಗ್ಯಾಫ್ನೀ ಹೇಳಿದ್ದು: “ಅವಳು ತನ್ನ ಎದೆಯ ಮೇಲೆ ಕೈಯನ್ನಿಟ್ಟು, ಹೆಮ್ಮೆಯಿಂದ ‘ನಾನು ಧ್ವಜಕ್ಕೆ ಸ್ವಾಮಿನಿಷ್ಠೆಯನ್ನು ತೋರಿಸುವ ಪ್ರತಿಜ್ಞೆಮಾಡುತ್ತೇನೆ . . .’ ಎಂದು ಹೇಳಲಾರಂಭಿಸಿದಳು.” ಅವರು ಮುಂದುವರಿಸಿದ್ದು: “ಆಗ ಇದ್ದಕ್ಕಿದ್ದಂತೆ ನನಗೆ ಒಂದು ವಿಷಯ ಅರ್ಥವಾಯಿತು. ಯೆಹೋವನ ಸಾಕ್ಷಿಗಳು ಹೇಳುವುದು ಸರಿಯೇ. ನಮ್ಮ ಶಾಲೆಗಳಲ್ಲಿ ಬಹಳ ಆರಂಭದ ಹಂತದಲ್ಲಿಯೇ ರಾಷ್ಟ್ರೀಯ ಆರಾಧನೆಯ ಒಂದು ಅಂಶವು—ಎಲ್ಲಾ ಎಲ್ಲೆಗಳನ್ನೂ ಮೀರಿರುವಂಥ ಸಂಪೂರ್ಣ ನಿಷ್ಠೆಯು—ಬಹಳವಾಗಿ ಉತ್ತೇಜಿಸಲ್ಪಡುತ್ತದೆ.”
ಪ್ರಯತ್ನವು ಸಾರ್ಥಕ
19. ಮಕ್ಕಳಿಗೆ ಕಲಿಸುವಾಗ ಯಾವ ಪ್ರತಿಫಲಗಳು ದೊರಕುತ್ತವೆ?
19 ನಿಮ್ಮ ಮಕ್ಕಳಿಗೆ ವಿಷಯಗಳನ್ನು ಕಲಿಸಲು ನೀವು ಮಾಡುವ ಎಲ್ಲಾ ಪ್ರಯತ್ನಗಳು ನಿಜವಾಗಿಯೂ ಸಾರ್ಥಕವಾಗಿವೆ. ಯು.ಎಸ್.ಎ. ಕಾನ್ಸಾಸ್ನಲ್ಲಿರುವ ತನ್ನ ಮಗನಿಂದ ಪತ್ರವೊಂದನ್ನು ಪಡೆದಾಗ ಒಬ್ಬ ತಾಯಿಯು ಆನಂದಬಾಷ್ಪವನ್ನು ಸುರಿಸಿದಳು. ಅವನು ಬರೆದುದು: “ಸಾಕಷ್ಟು ಮಟ್ಟಿಗೆ ಭಾವನಾತ್ಮಕವಾಗಿ ಸ್ಥಿರಚಿತ್ತನಾಗಿಯೂ ಸಮತೂಕನಾಗಿಯೂ ಇರುವಂತೆ ಸಹಾಯಮಾಡುವಂಥ ರೀತಿಯಲ್ಲಿ ನಾನು ಬೆಳೆಸಲ್ಪಟ್ಟದ್ದು ನನ್ನ ಭಾಗ್ಯವೇ ಸರಿ. ಅಪ್ಪ ಹಾಗೂ ನೀವು ನಿಶ್ಚಯವಾಗಿಯೂ ಪ್ರಶಂಸೆಗೆ ಅರ್ಹರು.” (ಜ್ಞಾನೋಕ್ತಿ 31:28) ಮಕ್ಕಳೆಂಬ ಅಮೂಲ್ಯ ಸ್ವಾಸ್ತ್ಯವನ್ನು ಸಂರಕ್ಷಿಸಲಿಕ್ಕಾಗಿ ಮಹಾ ಬೋಧಕನಿಂದ ಕಲಿಯಿರಿ ಪುಸ್ತಕವು ಇನ್ನೂ ಹೆಚ್ಚಿನ ಹೆತ್ತವರಿಗೆ ಸಹಾಯಮಾಡಬಲ್ಲದು.
20. ಹೆತ್ತವರು ಸದಾ ಏನನ್ನು ನೆನಪಿನಲ್ಲಿಡಬೇಕು, ಮತ್ತು ಅದು ಅವರ ಮೇಲೆ ಯಾವ ಪರಿಣಾಮವನ್ನು ಬೀರಬೇಕು?
20 ನಮ್ಮ ಮಕ್ಕಳು ನಮ್ಮಿಂದ ಕೊಡಸಾಧ್ಯವಿರುವ ಸಕಲ ಸಮಯ, ಗಮನ ಹಾಗೂ ಪ್ರಯತ್ನಕ್ಕೆ ಅರ್ಹರಾಗಿದ್ದಾರೆ. ಅವರು ಕೇವಲ ಕೊಂಚ ಕಾಲಕ್ಕೆ ಎಳೆಯರಾಗಿರುತ್ತಾರೆ. ಆದುದರಿಂದ, ಅವರೊಂದಿಗಿರುವ ಮತ್ತು ಅವರಿಗೆ ಸಹಾಯ ನೀಡಲಿಕ್ಕಾಗಿರುವ ಪ್ರತಿಯೊಂದು ಅವಕಾಶವನ್ನು ಸದುಪಯೋಗಿಸಿರಿ. ಇದನ್ನು ಮಾಡಿದ್ದಕ್ಕಾಗಿ ನೀವೆಂದಿಗೂ ವಿಷಾದಪಡದಿರುವಿರಿ. ಅವರು ನಿಮ್ಮನ್ನು ಪ್ರೀತಿಸತೊಡಗುವರು. ನಿಮ್ಮ ಮಕ್ಕಳು ದೇವರು ನಿಮಗೆ ಕೊಟ್ಟಿರುವ ಉಡುಗೊರೆಯಾಗಿದ್ದಾರೆ ಎಂಬುದನ್ನು ಸದಾ ನೆನಪಿನಲ್ಲಿಡಿರಿ. ಅವರೆಷ್ಟು ಅಮೂಲ್ಯವಾದ ಸ್ವಾಸ್ತ್ಯವಾಗಿದ್ದಾರೆ! (ಕೀರ್ತನೆ 127:3-5) ಆದುದರಿಂದ, ನೀವು ಅವರನ್ನು ಬೆಳೆಸುವ ವಿಧದ ಕುರಿತು ದೇವರಿಗೆ ಉತ್ತರವನ್ನು ಕೊಡಬೇಕೋ ಎಂಬಂತೆ ಅವರನ್ನು ಉಪಚರಿಸಿರಿ. ಏಕೆಂದರೆ ನೀವು ಆತನಿಗೆ ನಿಜವಾಗಿಯೂ ಉತ್ತರವಾದಿಗಳಾಗಿದ್ದೀರಿ.
[ಪಾದಟಿಪ್ಪಣಿ]
a ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟದ್ದು. “ದೇವರನ್ನು ಸಂತೋಷಪಡಿಸುವ ವಿಧ” ಎಂಬ 40ನೆಯ ಅಧ್ಯಾಯವನ್ನು ನೋಡಿರಿ.
ನೀವು ಹೇಗೆ ಉತ್ತರಿಸುವಿರಿ?
• ವಿಶೇಷವಾಗಿ ಈಗ ಹೆತ್ತವರು ತಮ್ಮ ಮಕ್ಕಳನ್ನು ಸಂರಕ್ಷಿಸುವ ಅಗತ್ಯ ಏಕಿದೆ?
• ಯಾವ ರೀತಿಯ ಕಲಿಸುವಿಕೆಯು ವಿವೇಕವನ್ನು ಮೂಡಿಸುತ್ತದೆ?
• ಇಂದು ನಿಮ್ಮ ಮಕ್ಕಳೊಂದಿಗೆ ಯಾವ ಅತ್ಯಾವಶ್ಯಕ ವಿಷಯಗಳನ್ನು ಚರ್ಚಿಸಬೇಕಾಗಿದೆ?
• ತಮ್ಮ ಮಕ್ಕಳಿಗೆ ಕಲಿಸುವುದರಲ್ಲಿ ಬೋಧಕ ಪುಸ್ತಕವು ಹೆತ್ತವರಿಗೆ ಹೇಗೆ ಸಹಾಯಮಾಡಿದೆ?
[ಪುಟ 18, 19ರಲ್ಲಿರುವ ಚೌಕ/ಚಿತ್ರಗಳು]
ಸರ್ವರಿಗಾಗಿರುವ ಒಂದು ಪುಸ್ತಕ
ಮಹಾ ಬೋಧಕನಿಂದ ಕಲಿಯಿರಿ ಎಂಬ ಪುಸ್ತಕವು, ಹೆತ್ತವರು ಅಥವಾ ಇತರ ವಯಸ್ಕರು ಯೇಸು ಕ್ರಿಸ್ತನ ಬೋಧನೆಗಳನ್ನು ಮಕ್ಕಳೊಂದಿಗೆ ಓದಿ ಚರ್ಚಿಸುವಂತೆ ಸಹಾಯಮಾಡಲಿಕ್ಕಾಗಿ ಸಿದ್ಧಗೊಳಿಸಲ್ಪಟ್ಟಿತು. ಆದರೂ, ಈ ಪುಸ್ತಕವನ್ನು ಓದಿದಂಥ ವಯಸ್ಕರು, ತಾವು ಅದರಿಂದ ಕಲಿತಂಥ ವಿಷಯಗಳಿಗಾಗಿ ಮನಃಪೂರ್ವಕ ಗಣ್ಯತೆಯನ್ನು ವ್ಯಕ್ತಪಡಿಸಿದ್ದಾರೆ.
ಯು.ಎಸ್.ಎ. ಟೆಕ್ಸಸ್ನ ಒಬ್ಬ ವ್ಯಕ್ತಿಯು ಹೇಳಿದ್ದು: “ಮಹಾ ಬೋಧಕನಿಂದ ಕಲಿಯಿರಿ ಪುಸ್ತಕವು ಅದರ ಸರಳತೆಯಿಂದಾಗಿ ಮನಸ್ಸನ್ನು ಪ್ರಭಾವಿಸುತ್ತದೆ, ಯಾವುದೇ ವಯಸ್ಸಿನವರನ್ನೂ ಪ್ರಚೋದಿಸುವಂಥದ್ದಾಗಿದೆ—76ರ ಪ್ರಾಯದವನಾಗಿರುವ ನಾನೂ ಇದರಿಂದ ಪ್ರಚೋದಿತನಾಗಿದ್ದೇನೆ. ಯೌವನಪ್ರಾಯದಿಂದಲೂ ಯೆಹೋವನ ಸೇವೆಮಾಡಿರುವವನಿಂದ ನಿಮಗೆ ತುಂಬ ಉಪಕಾರ.”
ಇಂಗ್ಲೆಂಡ್ನ ಲಂಡನ್ನಲ್ಲಿರುವ ವಾಚಕರೊಬ್ಬರು ವರದಿಸುವುದು: “ಸುಂದರವಾದ ಚಿತ್ರಗಳು ನಿಶ್ಚಯವಾಗಿಯೂ ಹೆತ್ತವರ ಹಾಗೂ ಮಕ್ಕಳ ಮನಸ್ಸುಗಳನ್ನು ಸೆರೆಹಿಡಿಯುತ್ತವೆ. ಪ್ರಶ್ನೆಗಳು ಹಾಗೂ ಶೈಲಿಯು (ಫಾರ್ಮ್ಯಾಟ್) ಸಹ ತುಂಬ ಚೆನ್ನಾಗಿದೆ, ಮತ್ತು ‘ಯೇಸು ಸಂರಕ್ಷಿಸಲ್ಪಟ್ಟ ವಿಧ’ ಎಂಬ 32ನೇ ಅಧ್ಯಾಯದಲ್ಲಿರುವಂತೆ, ಮುಜುಗರದ ವಿಷಯಗಳು ನಿರ್ವಹಿಸಲ್ಪಟ್ಟಿರುವ ವಿಧವು ನಿಜವಾಗಿಯೂ ಅತ್ಯುತ್ತಮವಾಗಿದೆ.” ಅವರು ಮುಂದುವರಿಸಿದ್ದು: “ಮೂಲತಃ ಈ ಪುಸ್ತಕವು ಯೆಹೋವನ ಸಾಕ್ಷಿಗಳ ಮಕ್ಕಳಿಗೋಸ್ಕರ ಸಿದ್ಧಪಡಿಸಲ್ಪಟ್ಟಿದೆ ಎಂಬ ವಿಷಯದಲ್ಲಿ ಯಾವುದೇ ಸಂಶಯವಿಲ್ಲವಾದರೂ, ಶಿಕ್ಷಕರು ಹಾಗೂ ಇನ್ನಿತರರು ಸಹ ಇದರ ಒಂದು ಪ್ರತಿಯನ್ನು ಪಡೆದುಕೊಳ್ಳಲು ಇಷ್ಟಪಡುವರು ಎಂಬುದು ನನ್ನ ಅನಿಸಿಕೆ. ಮುಂದಿನ ತಿಂಗಳುಗಳಲ್ಲಿ ಹಾಗೂ ವರ್ಷಗಳಲ್ಲಿ ಇದನ್ನು ಉಪಯೋಗಿಸುವ ಅವಕಾಶಗಳಿಗಾಗಿ ನಾನು ಮುನ್ನೋಡುತ್ತಿದ್ದೇನೆ.”
ಯು.ಎಸ್.ಎ. ಮ್ಯಾಸಚೂಸೆಟ್ಸ್ನ ಸ್ತ್ರೀಯೊಬ್ಬಳು, “ಜಾಗರೂಕತೆಯಿಂದ ದೃಷ್ಟಾಂತಿಸಲ್ಪಟ್ಟಿರುವ ಚಿತ್ರಗಳ” ಕುರಿತು ಹೇಳಿಕೆ ನೀಡಿದಳು. ಅವಳು ಬರೆದುದು: “ಈ ಪುಸ್ತಕವು ಮಕ್ಕಳಿಗಾಗಿ ತಯಾರಿಸಲ್ಪಟ್ಟಿದೆಯಾದರೂ, ಇದರಲ್ಲಿ ಚರ್ಚಿಸಲ್ಪಟ್ಟಿರುವ ವಿಷಯವಸ್ತುಗಳು ಯೆಹೋವನೊಂದಿಗಿನ ನಮ್ಮ ವೈಯಕ್ತಿಕ ಸಂಬಂಧದ ಕುರಿತು ಆಲೋಚಿಸುವಂತೆ ವಯಸ್ಕರಾದ ನಮಗೂ ಸಹಾಯಮಾಡಬಲ್ಲವು ಎಂಬುದನ್ನು ನಾನು ಗಮನಿಸಿದೆ.”
ಯು.ಎಸ್.ಎ.ಯ ಮೈನ್ನ ಸ್ತ್ರೀಯೊಬ್ಬಳು, “ವಾ! ಇದೆಷ್ಟು ಒಳ್ಳೇ ಪುಸ್ತಕವಾಗಿದೆ!” ಎಂದು ಉದ್ಗರಿಸಿದಳು. “ಇದು ಎಳೆಯರಿಗಾಗಿ ಮಾತ್ರವಲ್ಲ ದೇವರ ಮಕ್ಕಳಾಗಿರುವ ನಮ್ಮೆಲ್ಲರಿಗಾಗಿದೆ. ಇದು ನನ್ನ ಆಂತರ್ಯವನ್ನು ತಲಪಿದೆ ಮತ್ತು ನನ್ನ ಭಾವನೆಗಳನ್ನು ಕೆದಕಿದೆ ಹಾಗೂ ಅವುಗಳನ್ನು ಶಾಂತಗೊಳಿಸಿದೆ, ಆದುದರಿಂದಲೇ ನಾನು ಶಾಂತಿಯನ್ನು ಅನುಭವಿಸುವಂತಾಯಿತು. ನನ್ನ ತಂದೆಯಾಗಿರುವ ಯೆಹೋವನಿಗೆ ತುಂಬ ನಿಕಟವಾಗಿರುವ ಅನಿಸಿಕೆ ನನಗಾಗುತ್ತದೆ. ಗತ ವರ್ಷಗಳಲ್ಲಿ ನನಗೆ ಉಂಟಾಗಿದ್ದ ಎಲ್ಲಾ ಮಾನಸಿಕ ವೇದನೆಯನ್ನು ಆತನು ಹೋಗಲಾಡಿಸಿದ್ದಾನೆ ಮತ್ತು ತನ್ನ ಉದ್ದೇಶವನ್ನು ಸುಸ್ಪಷ್ಟಗೊಳಿಸಿದ್ದಾನೆ.” ಅವಳು ಮುಕ್ತಾಯಗೊಳಿಸಿದ್ದು: “‘ದಯವಿಟ್ಟು ಇದನ್ನು ಓದಿ’ ಎಂದು ನಾನು ಪ್ರತಿಯೊಬ್ಬರಿಗೂ ಹೇಳುತ್ತಿದ್ದೇನೆ.”
ಜಪಾನಿನ ಕ್ಯೋಟೊ ಎಂಬಲ್ಲಿನ ಸ್ತ್ರೀಯೊಬ್ಬಳು, ತನ್ನ ಮೊಮ್ಮಕ್ಕಳಿಗೆ ಈ ಪುಸ್ತಕದಿಂದ ಓದಿಹೇಳುತ್ತಿರುವಾಗ ಅವರು ಈ ಮುಂದಿನ ಪ್ರಶ್ನೆಗಳನ್ನು ಕೇಳಿದರೆಂದು ವರದಿಸಿದಳು: “‘ಆ ಹುಡುಗನು ಏನು ಮಾಡುತ್ತಿದ್ದಾನೆ? ಈ ಚಿಕ್ಕ ಹುಡುಗಿಗೆ ಏಕೆ ಬೈಯ್ಯುತ್ತಿದ್ದಾರೆ? ಈ ತಾಯಿ ಏನು ಮಾಡುತ್ತಿದ್ದಾರೆ? ಈ ಸಿಂಹವು ಏನು ಮಾಡುತ್ತಿದೆ?’ ನಮಗೆ ಆಸಕ್ತಿದಾಯಕವಾಗಿರುವ ವಿಷಯಗಳನ್ನೇ ಇದು ಕಲಿಸುತ್ತದೆ, ಆದುದರಿಂದ ನಾನು ಗ್ರಂಥಾಲಯದಲ್ಲಿ ಕಂಡುಕೊಳ್ಳಸಾಧ್ಯವಿರುವ ಯಾವುದೇ ಪುಸ್ತಕಕ್ಕಿಂತಲೂ ಇದು ನನ್ನ ಅಚ್ಚುಮೆಚ್ಚಿನ ಪುಸ್ತಕವಾಗಿದೆ.”
ಈ ಪುಸ್ತಕವನ್ನು ಪಡೆದುಕೊಂಡ ಕೂಡಲೆ ತನ್ನ ಆರು ವರ್ಷದ ಮಗಳಿಗೆ ಮತ್ತು ಒಂಬತ್ತು ವರ್ಷದ ಮಗನಿಗೆ ತಾನು ಓದಿಹೇಳಲಾರಂಭಿಸಿದೆನೆಂದು ಕೆನಡದ ಕ್ಯಾಲ್ಗರಿಯಲ್ಲಿರುವ ತಂದೆಯೊಬ್ಬನು ಹೇಳಿದನು. ಅವನು ವರದಿಸುವುದು: “ಅವರು ತೋರಿಸಿದ ಪ್ರತಿಕ್ರಿಯೆಯು ಅದ್ಭುತಕರವಾಗಿತ್ತು. ನನ್ನ ಮಕ್ಕಳು ಚೆನ್ನಾಗಿ ಗಮನ ಕೊಡುತ್ತಿದ್ದರು ಮತ್ತು ಪ್ರಶ್ನೆಗಳಿಗೆ ಮನಪೂರ್ವಕವಾದ ಉತ್ತರಗಳನ್ನು ಕೊಡುತ್ತಿದ್ದರು. ತಾವು ಸಹ ಅಧ್ಯಯನದಲ್ಲಿ ಪಾಲ್ಗೊಳ್ಳುತ್ತಿದ್ದೇವೆ ಎಂದು ಅವರಿಗನಿಸಿತು ಮತ್ತು ಇದು ತಮ್ಮ ಮನಸ್ಸಿನಲ್ಲಿರುವುದನ್ನು ವ್ಯಕ್ತಪಡಿಸಲು ಅವರಿಗೆ ಒಂದು ಅವಕಾಶವನ್ನು ನೀಡಿತು. ಅವರೀಗ ತುಂಬ ಲವಲವಿಕೆಯಿಂದ ಇದ್ದಾರೆ ಮತ್ತು ಈ ಹೊಸ ಪುಸ್ತಕದಿಂದ ಪ್ರತಿ ರಾತ್ರಿ ಅಧ್ಯಯನಮಾಡಲು ಇಷ್ಟಪಡುತ್ತೇನೆ ಎಂದು ನನ್ನ ಮಗಳು ಹೇಳುತ್ತಾಳೆ.”
ಒಂದು ಅಧ್ಯಯನದ ಬಳಿಕ ನಡೆದ ಸಂಗತಿಯನ್ನು ತಿಳಿಸುತ್ತಾ ಆ ತಂದೆಯು ಹೇಳಿದ್ದು: “ನಾನೂ ನನ್ನ ಮಗನೂ ಯೆಹೋವನ ಕುರಿತು ಮತ್ತು ಆತನ ಉದ್ದೇಶಗಳ ಕುರಿತು ಗಂಟೆಗಟ್ಟಲೆ ಮಾತಾಡಿದೆವು. ಪುಸ್ತಕದಲ್ಲಿರುವ ವಿಷಯದ ಮೇಲಾಧಾರಿತವಾದ ಅನೇಕ ಪ್ರಶ್ನೆಗಳು ಅವನಿಗಿದ್ದವು. ಅವನು ನನಗೆ ಗುಡ್ ನೈಟ್ ಹೇಳಿ, ‘ಅಪ್ಪ ನಾವು ಪುನಃ ಹೀಗೆಯೇ ಮಾಡೋಣವಾ? ನನಗೆ ತುಂಬ ಪ್ರಶ್ನೆಗಳಿವೆ, ನಾನು ಯೆಹೋವನ ಕುರಿತು ಎಲ್ಲವನ್ನೂ ತಿಳಿದುಕೊಳ್ಳಲು ಬಯಸುತ್ತೇನೆ’ ಎಂದು ಕೇಳಿದಾಗ ನನಗೆ ಕಣ್ಣೀರನ್ನು ತಡೆಯಲಾಗಲಿಲ್ಲ.”
[ಪುಟ 15ರಲ್ಲಿರುವ ಚಿತ್ರ]
ಹೆತ್ತವರೇ, ಮಾನೋಹನ ಉದಾಹರಣೆಯಿಂದ ನೀವು ಯಾವ ಪಾಠವನ್ನು ಕಲಿಯಬಲ್ಲಿರಿ?
[ಪುಟ 16ರಲ್ಲಿರುವ ಚಿತ್ರ]
ಎಳೆಯರೇ, ಮೂವರು ಇಬ್ರಿಯ ಯುವಕರ ಮಾದರಿಯಿಂದ ನೀವು ಯಾವ ಪಾಠವನ್ನು ಕಲಿಯಬಲ್ಲಿರಿ?
[ಪುಟ 17ರಲ್ಲಿರುವ ಚಿತ್ರಗಳು]
“ಬೋಧಕ” ಪುಸ್ತಕದಲ್ಲಿರುವ ಚಿತ್ರಗಳು ಮತ್ತು ಶೀರ್ಷಿಕೆಗಳು, ಪರಿಣಾಮಕಾರಿಯಾದ ರೀತಿಯಲ್ಲಿ ಬೋಧಿಸಲು ಸಹಾಯಮಾಡುತ್ತವೆ
ಅನನೀಯನು ಪೇತ್ರನಿಗೆ ಯಾವ ಸುಳ್ಳನ್ನು ಹೇಳುತ್ತಿದ್ದಾನೆ?
ನಾವು ಮಾಡುವಂಥ ಪ್ರತಿಯೊಂದು ಕೆಲಸವನ್ನೂ ಯಾರು ನೋಡಬಲ್ಲರು?