ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w05 4/15 ಪು. 31
  • ವಾಚಕರಿಂದ ಪ್ರಶ್ನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಾಚಕರಿಂದ ಪ್ರಶ್ನೆಗಳು
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
  • ಅನುರೂಪ ಮಾಹಿತಿ
  • “ನಾನು ಹೇಳೋದನ್ನ ಕೇಳಿಸ್ಕೊಳ್ಳಿ”
    ದೇವರ ರಾಜ್ಯಕ್ಕೆ ‘ಕೂಲಂಕಷ ಸಾಕ್ಷಿ’
  • “ಫರಿಸಾಯರ ಮತ್ತು ಸದ್ದುಕಾಯರ ಹುಳಿಹಿಟ್ಟಿನ ವಿಷಯದಲ್ಲಿ ಜಾಗರೂಕರಾಗಿರಿ.”
    ಕಾವಲಿನಬುರುಜು—1995
  • “ನನ್ನಿಂದ ಕಲಿತುಕೊಳ್ಳಿರಿ”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
  • ‘ಫರಿಸಾಯರ ಹುಳಿಹಿಟ್ಟಿನ ವಿಷಯದಲ್ಲಿ ಜಾಗ್ರತೆಯಿಂದಿರಿ’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
w05 4/15 ಪು. 31

ವಾಚಕರಿಂದ ಪ್ರಶ್ನೆಗಳು

ಅಪೊಸ್ತಲ ಪೌಲನು, “ನಾನು ಫರಿಸಾಯನು” ಎಂದು ಹಿರೀಸಭೆಯ ಮುಂದೆ ಹೇಳಿದಾಗ ತನ್ನ ನಂಬಿಕೆಯನ್ನು ರಾಜಿಮಾಡಿಕೊಳ್ಳಲಿಲ್ಲವೋ?

ಅಪೊಸ್ತಲರ ಕೃತ್ಯಗಳು 23:6ರಲ್ಲಿ ಕಂಡುಬರುವ ಪೌಲನ ಆ ಹೇಳಿಕೆಯನ್ನು ಅರ್ಥಮಾಡಿಕೊಳ್ಳಲಿಕ್ಕಾಗಿ ನಾವು ಅದರ ಪೂರ್ವಾಪರವನ್ನು ಪರಿಗಣಿಸಬೇಕು.

ಯೆಹೂದ್ಯರ ದೊಂಬಿಯಿಂದ ಆಕ್ರಮಣಕ್ಕೆ ಒಳಗಾದ ಮೇಲೆ, ಪೌಲನು ಜನರ ಗುಂಪನ್ನು ಸಂಬೋಧಿಸಿ ಮಾತನಾಡಿದನು. ತಾನು “[ಯೆರೂಸಲೇಮಿನಲ್ಲೇ] ಬೆಳೆದವನು. ಗಮಲಿಯೇಲನ ಪಾದಸನ್ನಿಧಿಯಲ್ಲಿ ನಮ್ಮ ಪಿತೃಗಳ ಧರ್ಮಶಾಸ್ತ್ರದಲ್ಲಿ ಪೂರ್ಣ ಶಿಕ್ಷಿತನಾದೆನು” ಎಂದು ಅವನು ಹೇಳಿದನು. ಜನರ ಗುಂಪು ಅವನ ಪ್ರತಿವಾದಕ್ಕೆ ಸ್ವಲ್ಪ ಹೊತ್ತು ಕಿವಿಗೊಟ್ಟರಾದರೂ, ಅವರು ಕೊನೆಗೆ ಕೋಪೋದ್ರಿಕ್ತರಾದಾಗ, ಪೌಲನನ್ನು ಬಿಗಿಭದ್ರತೆಯಲ್ಲಿ ನಡೆಸುತ್ತಿದ್ದ ಸಹಸ್ರಾಧಿಪತಿಯು ಅವನನ್ನು ಕೋಟೆಯೊಳಗೆ ಕರೆದೊಯ್ದನು. ಅವನಿಗೆ ಇನ್ನೇನು ಕೊರಡೆ ಏಟುಗಳು ಬೀಳಲಿಕ್ಕಿರುವಾಗ, “ರೋಮಾಪುರದ ಹಕ್ಕುದಾರನಾದ ಮನುಷ್ಯನನ್ನು ನ್ಯಾಯವಿಚಾರಣೆಮಾಡದೆ ಕೊರಡೆಗಳಿಂದ ಹೊಡಿಸುವದು ನಿಮಗೆ ನ್ಯಾಯವೋ?” ಎಂದು ಅವನು ಅವರಿಗೆ ಕೇಳಿದನು.​—⁠ಅ. ಕೃತ್ಯಗಳು 21:27-22:⁠29.

ಮರುದಿನ ಸಹಸ್ರಾಧಿಪತಿಯು ಪೌಲನನ್ನು ಯೆಹೂದಿ ಹಿರೀಸಭೆಯಾದ ಸನ್ಹೆದ್ರಿನ್‌ ಮುಂದೆ ಹಾಜರುಪಡಿಸಿದನು. ಪೌಲನು ನೆರೆದುಬಂದಿದ್ದ ಸಭೆಯನ್ನು ಜಾಗರೂಕವಾಗಿ ನೋಡಿದಾಗ, ಅಲ್ಲಿ ಸದ್ದುಕಾಯರು ಮತ್ತು ಫರಿಸಾಯರು ಕೂಡಿಬಂದಿದ್ದಾರೆ ಎಂಬುದನ್ನು ಗಮನಿಸಿದನು. ಅನಂತರ, “ಸಹೋದರರೇ, ನಾನು ಫರಿಸಾಯನು, ಫರಿಸಾಯರ ಮಗನು; ಸತ್ತವರೆದ್ದು ಬರುವರು ಎಂಬ ನಿರೀಕ್ಷೆಯ ವಿಷಯವಾಗಿ ನನ್ನನ್ನು ವಿಚಾರಣೆಮಾಡುತ್ತಾರೆ” ಎಂದು ಅವನು ಹೇಳಿದನು. ಇದರ ಪರಿಣಾಮವಾಗಿ, ಫರಿಸಾಯರು ಮತ್ತು ಸದ್ದುಕಾಯರ ಮಧ್ಯೆ ಜಗಳ ಹುಟ್ಟಿಕೊಂಡಿತು. ಏಕೆಂದರೆ, “ಸದ್ದುಕಾಯರು ಪುನರುತ್ಥಾನ ಇಲ್ಲವೆಂದೂ ದೇವದೂತರಾಗಲಿ, ಆತ್ಮಗಳಾಗಲಿ ಇಲ್ಲವೆಂದೂ ಹೇಳುತ್ತಿದ್ದರು.” (NIBV) ಫರಿಸಾಯರ ಗುಂಪಿಗೆ ಸೇರಿದ ಕೆಲವರು ಎದ್ದು, “ಈ ಮನುಷ್ಯನಲ್ಲಿ ನಮಗೆ ಕೆಟ್ಟದ್ದೇನೂ ಕಾಣಬರುವದಿಲ್ಲ” ಎಂದು ವಾಗ್ವಾದಮಾಡಿದರು.​—⁠ಅ. ಕೃತ್ಯಗಳು 23:6-10.

ಅತ್ಯುತ್ಸಾಹಿ ಕ್ರೈಸ್ತನೆಂದು ಪ್ರಖ್ಯಾತನಾಗಿದ್ದ ಪೌಲನು, ತಾನು ಫರಿಸಾಯರ ಪಂಕ್ತಿಯಲ್ಲಿ ಒಬ್ಬ ಸಕ್ರಿಯ ವ್ಯಕ್ತಿ ಎಂದು ಅವರನ್ನು ನಂಬಿಸುವುದು ಸಾಧ್ಯವಿದ್ದಿರಲಿಕ್ಕಿಲ್ಲ. ಹಾಜರಿದ್ದ ಫರಿಸಾಯರು ಅವರ ಎಲ್ಲಾ ಬೋಧನೆಗಳಲ್ಲಿ ನಂಬಿಕೆಯನ್ನಿಟ್ಟಿರದ ಒಬ್ಬ ವ್ಯಕ್ತಿಯನ್ನು ಸ್ವೀಕರಿಸುತ್ತಿರಲಿಲ್ಲ. ಆದುದರಿಂದ, ಪೌಲನು ತಾನೊಬ್ಬ ಫರಿಸಾಯನು ಎಂದು ಪೂರ್ಣಾರ್ಥದಲ್ಲಿ ಹೇಳಿರಲಿಕ್ಕಿಲ್ಲ ಮತ್ತು ಅಲ್ಲಿ ಹಾಜರಿದ್ದ ಫರಿಸಾಯರು ಸಹ ಪೌಲನ ಮಾತುಗಳನ್ನು ಅದೇ ರೀತಿಯಲ್ಲಿ ಅರ್ಥಮಾಡಿಕೊಂಡಿರಬೇಕು.

ಸತ್ತವರೆದ್ದು ಬರುವರು ಎಂಬ ನಿರೀಕ್ಷೆಯ ವಿಷಯವಾಗಿ ತನ್ನನ್ನು ವಿಚಾರಣೆಮಾಡುತ್ತಾರೆ ಎಂದು ಪೌಲನು ಹೇಳಿದಾಗ, ಈ ಸಂಬಂಧದಲ್ಲಿ ಮಾತ್ರ ತಾನು ಫರಿಸಾಯರಂತೆ ಇದ್ದೇನೆ ಎಂದು ಅವನು ಸ್ಪಷ್ಟಪಡಿಸಿದನು. ಪುನರುತ್ಥಾನಕ್ಕೆ ಸಂಬಂಧಿಸಿದ ಯಾವುದೇ ಭಿನ್ನಾಭಿಪ್ರಾಯದಲ್ಲಿ, ಪೌಲನನ್ನು ಪುನರುತ್ಥಾನದಲ್ಲಿ ನಂಬಿಕೆಯನ್ನು ಹೊಂದಿರದ ಸದ್ದುಕಾಯರೊಂದಿಗೆ ಅಲ್ಲ, ಬದಲಿಗೆ ಫರಿಸಾಯರೊಂದಿಗೆ ಗುರುತಿಸಲಾಗುತ್ತಿತ್ತು.

ಒಬ್ಬ ಕ್ರೈಸ್ತನಾಗಿ ಪೌಲನು ನಂಬಿಕೆಯನ್ನಿಟ್ಟಿದ್ದ ಕೆಲವು ವಿಚಾರಗಳಲ್ಲಿ ಫರಿಸಾಯರೂ ನಂಬಿಕೆಯನ್ನಿಟ್ಟಿದ್ದರು​—⁠ಇದರಲ್ಲಿ ಪುನರುತ್ಥಾನ, ದೇವದೂತರು ಮತ್ತು ಧರ್ಮಶಾಸ್ತ್ರದಲ್ಲಿದ್ದ ಕೆಲವು ವಿಷಯಗಳೂ ಸೇರಿದ್ದವು. (ಫಿಲಿಪ್ಪಿ 3:5) ಆದುದರಿಂದ, ಈ ಮಿತಿಗಳೊಳಗೆ ಪೌಲನು ತನ್ನನ್ನು ಫರಿಸಾಯರೊಂದಿಗೆ ಹೋಲಿಸಸಾಧ್ಯವಿತ್ತು, ಮತ್ತು ಹಿರೀಸಭೆಯಲ್ಲಿ ಕೂಡಿಬಂದಿದ್ದವರೂ ಈ ಸೀಮಿತ ಅರ್ಥದಲ್ಲೇ ಅವನ ಮಾತುಗಳನ್ನು ಅರ್ಥಮಾಡಿಕೊಂಡರು. ಹೀಗೆ, ಅವನು ಪೂರ್ವಗ್ರಹದಿಂದ ಕೂಡಿದ್ದ ಯೆಹೂದಿ ಉಚ್ಚ ನ್ಯಾಯಾಲಯದೊಂದಿಗೆ ವ್ಯವಹರಿಸಲಿಕ್ಕಾಗಿ ತನ್ನ ಯೆಹೂದಿ ಹಿನ್ನೆಲೆಯನ್ನು ಸದುಪಯೋಗಿಸಿದನು.

ಆದರೂ, ಯೆಹೋವನ ಅನುಗ್ರಹವು ಪೌಲನ ಮೇಲೆ ಸದಾ ಇದ್ದದ್ದು ಅವನು ತನ್ನ ನಂಬಿಕೆಯನ್ನು ರಾಜಿಮಾಡಿಕೊಳ್ಳಲಿಲ್ಲ ಎಂಬುದಕ್ಕೆ ಅತಿ ದೊಡ್ಡ ಪುರಾವೆಯಾಗಿದೆ. ಪೌಲನು, ಪ್ರಶ್ನೆಯಲ್ಲಿ ಕೊಡಲ್ಪಟ್ಟಿರುವ ಆ ಹೇಳಿಕೆಯನ್ನು ಮಾಡಿದ ಅದೇ ದಿನದ ರಾತ್ರಿ ಯೇಸು ಅವನಿಗೆ ಹೇಳಿದ್ದು: “ಧೈರ್ಯದಿಂದಿರು; ನೀನು ಯೆರೂಸಲೇಮಿನಲ್ಲಿ ನನ್ನ ಸಂಗತಿಯನ್ನೆಲ್ಲಾ ಸಾಕ್ಷಿಯಾಗಿ ಹೇಳಿದಂತೆಯೇ ರೋಮಾಪುರದಲ್ಲಿಯೂ ಸಾಕ್ಷಿಹೇಳಬೇಕಾಗುವದು.” ಪೌಲನಿಗೆ ದೇವರ ಅನುಗ್ರಹವಿದ್ದ ಕಾರಣ, ಅವನು ತನ್ನ ಕ್ರೈಸ್ತ ನಂಬಿಕೆಯನ್ನು ರಾಜಿಮಾಡಿಕೊಳ್ಳಲಿಲ್ಲ ಎಂದೇ ನಾವು ತೀರ್ಮಾನಿಸಬೇಕಾಗಿದೆ.​—⁠ಅ. ಕೃತ್ಯಗಳು 23:⁠11.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ