ಸರ್ವ ದೇಶಗಳ ಜನರಿಗಾಗಿ ಸುವಾರ್ತೆ
“ಭೂಲೋಕದ ಕಟ್ಟಕಡೆಯವರೆಗೂ ನನಗೆ ಸಾಕ್ಷಿಗಳಾಗಿರಬೇಕು.”—ಅ. ಕೃತ್ಯಗಳು 1:8.
1. ಬೈಬಲ್ ಶಿಕ್ಷಕರಾಗಿರುವ ನಾವು ಯಾವುದಕ್ಕೆ ಗಮನ ಕೊಡುತ್ತೇವೆ, ಮತ್ತು ಏಕೆ?
ಸಮರ್ಥರಾಗಿರುವ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ತಾವು ಏನು ಹೇಳುತ್ತೇವೆಂಬುದಕ್ಕೆ ಮಾತ್ರವಲ್ಲ, ಅದನ್ನು ಹೇಗೆ ಹೇಳುತ್ತೇವೆಂಬುದಕ್ಕೂ ಗಮನ ಕೊಡುತ್ತಾರೆ. ಬೈಬಲ್ ಸತ್ಯದ ಶಿಕ್ಷಕರಾಗಿರುವ ನಾವು ಸಹ ಹಾಗೆಯೇ ಮಾಡುತ್ತೇವೆ. ನಾವು ಸಾರುವ ಸಂದೇಶ ಮತ್ತು ಅದನ್ನು ಸಾರಲು ಉಪಯೋಗಿಸುವ ವಿಧಾನಗಳು, ಇವೆರಡಕ್ಕೂ ನಾವು ಗಮನ ಕೊಡುತ್ತೇವೆ. ದೇವರ ರಾಜ್ಯದ ಸುವಾರ್ತೆ ಎಂಬ ನಮ್ಮ ಸಂದೇಶ ಬದಲಾಗುವುದಿಲ್ಲ, ಆದರೆ ನಮ್ಮ ವಿಧಾನಗಳನ್ನು ನಾವು ಸ್ಥಿತಿಗತಿಗನುಸಾರ ಬದಲಾಯಿಸುತ್ತೇವೆ. ಏಕೆ? ಸಾಧ್ಯವಾಗುವಷ್ಟು ಹೆಚ್ಚು ಜನರನ್ನು ತಲಪುವ ಉದ್ದೇಶದಿಂದಲೇ.
2. ನಾವು ನಮ್ಮ ಸಾರುವ ವಿಧಾನಗಳನ್ನು ಹೊಂದಿಸಿಕೊಳ್ಳುವಾಗ ಯಾರನ್ನು ಅನುಕರಿಸುತ್ತಿದ್ದೇವೆ?
2 ನಮ್ಮ ಸಾರುವ ವಿಧಾನಗಳನ್ನು ಹೊಂದಿಸಿಕೊಳ್ಳುವಾಗ, ನಾವು ಗತಕಾಲದ ದೇವರ ಸೇವಕರನ್ನು ಅನುಕರಿಸುತ್ತಿದ್ದೇವೆ. ದೃಷ್ಟಾಂತಕ್ಕೆ, ಅಪೊಸ್ತಲ ಪೌಲನನ್ನು ಪರಿಗಣಿಸಿರಿ. ಅವನು ಹೇಳಿದ್ದು: “ಯೆಹೂದ್ಯರಿಗೆ ಯೆಹೂದ್ಯನಂತಾದೆನು. . . . ನಿಯಮಗಳಿಗೆ ಅಧೀನರಾದವರನ್ನು ಸಂಪಾದಿಸಿಕೊಳ್ಳುವದಕ್ಕಾಗಿ ಅವರಿಗೆ ನಿಯಮಗಳಿಗೆ ಅಧೀನನಂತಾದೆನು. . . . ಬಲವಿಲ್ಲದವರನ್ನು ಸಂಪಾದಿಸುವದಕ್ಕೆ ಅವರಿಗೆ ಬಲವಿಲ್ಲದವನಾದೆನು. ಯಾವ ವಿಧದಲ್ಲಿಯಾದರೂ ಕೆಲವರನ್ನು ರಕ್ಷಿಸಬೇಕೆಂದು ಯಾರಾರಿಗೆ ಎಂಥೆಂಥವನಾಗಬೇಕೋ ಅಂಥಂಥವನಾಗಿದ್ದೇನೆ.” (1 ಕೊರಿಂಥ 9:19-23) ಪೌಲನ ಇಂತಹ ಹೊಂದಿಸಿಕೊಳ್ಳುವ ವಿಧಾನಗಳು ಪರಿಣಾಮಕಾರಿಯಾಗಿದ್ದವು. ನಾವು ಮಾತಾಡುತ್ತಿರುವ ಪ್ರತಿಯೊಬ್ಬ ವ್ಯಕ್ತಿಗೆ ತಕ್ಕಂತೆ ನಮ್ಮ ನಿರೂಪಣೆಗಳನ್ನು ಹೊಂದಿಸಿಕೊಳ್ಳುವಲ್ಲಿ, ನಾವು ಸಹ ಪರಿಣಾಮಕಾರಿಯಾಗುವೆವು.
“ದಿಗಂತಗಳ” ವರೆಗೆ
3. (ಎ) ನಮ್ಮ ಸಾರುವ ಕಾರ್ಯದಲ್ಲಿ ಯಾವ ಸವಾಲು ನಮ್ಮೆದುರಿಗಿದೆ? (ಬಿ) ಯೆಶಾಯ 45:22ರ ಮಾತುಗಳು ಇಂದು ಹೇಗೆ ನೆರವೇರುತ್ತಿವೆ?
3 ಸುವಾರ್ತೆಯನ್ನು ಸಾರುವವರು ಎದುರಿಸುವ ಒಂದು ದೊಡ್ಡ ಸವಾಲು ಸಾರುವ ಕ್ಷೇತ್ರದ ಗಾತ್ರವೇ—ಅದು “ಸರ್ವಲೋಕ” ಆಗಿದೆ. (ಮತ್ತಾಯ 24:14) ಕಳೆದ ಶತಮಾನದಲ್ಲಿ, ಯೆಹೋವನ ಅನೇಕ ಸೇವಕರು ಸುವಾರ್ತೆಯನ್ನು ಹಬ್ಬಿಸುವ ಕಾರಣದಿಂದ ಹೊಸ ದೇಶಗಳನ್ನು ತಲಪಲು ಕಷ್ಟಪಟ್ಟು ಕೆಲಸಮಾಡಿದರು. ಫಲಿತಾಂಶವೇನಾಗಿತ್ತು? ದಂಗುಬಡಿಸುವ ಲೋಕವ್ಯಾಪಕ ವಿಸ್ತರಣೆ. ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಕೇವಲ ಕೆಲವೇ ದೇಶಗಳಲ್ಲಿ ಸಾರುವ ಕೆಲಸವು ನಡೆಸಲ್ಪಡುತ್ತಿದ್ದ ವರದಿಯಿತ್ತು, ಆದರೆ ಈಗ ಯೆಹೋವನ ಸಾಕ್ಷಿಗಳು 235 ದೇಶಗಳಲ್ಲಿ ಕ್ರಿಯಾಶೀಲರಾಗಿದ್ದಾರೆ! ಹೌದು, ರಾಜ್ಯದ ಸುವಾರ್ತೆಯು ಈಗ “ದಿಗಂತಗಳ” ವರೆಗೆ ಸಾರಲ್ಪಡುತ್ತಿದೆ.—ಯೆಶಾಯ 45:22.
4, 5. (ಎ) ಸುವಾರ್ತೆಯನ್ನು ಹಬ್ಬಿಸುವುದರಲ್ಲಿ ಯಾರು ಗಮನಾರ್ಹ ಪಾತ್ರವನ್ನು ವಹಿಸಿಕೊಂಡಿದ್ದಾರೆ? (ಬಿ) ಪರದೇಶಗಳಿಂದ ಬಂದು ತಮ್ಮ ಬ್ರಾಂಚ್ ಟೆರಿಟೊರಿಯಲ್ಲಿ ಸೇವೆಮಾಡುತ್ತಿರುವವರ ಬಗ್ಗೆ ಕೆಲವು ಬ್ರಾಂಚ್ ಆಫೀಸುಗಳು ಏನು ಹೇಳಿದವು?
4 ಇಂತಹ ಪ್ರಗತಿಗೆ ಕಾರಣಗಳೇನು? ಕಾರಣಗಳೊ ಅನೇಕ. ವಾಚ್‌ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್‌ನಲ್ಲಿ ತರಬೇತಿ ಹೊಂದಿರುವ ಮಿಷನೆರಿಗಳು, ಮತ್ತು ಇತ್ತೀಚೆಗೆ ಶುಶ್ರೂಷಾ ತರಬೇತಿ ಶಾಲೆಯಲ್ಲಿ ಪದವಿ ಪಡೆದಿರುವ 20,000ಕ್ಕೂ ಹೆಚ್ಚು ಮಂದಿ ಪದವೀಧರರು ಇದಕ್ಕೆ ದೊಡ್ಡ ಸಹಾಯವನ್ನು ನೀಡಿದ್ದಾರೆ. ಹಾಗೆಯೇ, ರಾಜ್ಯ ಪ್ರಚಾರಕರ ಹೆಚ್ಚು ಅಗತ್ಯವಿರುವ ದೇಶಗಳಿಗೆ ತಮ್ಮ ಸ್ವಂತ ಖರ್ಚಿನಿಂದಲೇ ವಲಸೆಹೋಗಿರುವ ಅನೇಕ ಮಂದಿ ಸಾಕ್ಷಿಗಳು ಆವಶ್ಯವಿರುವ ನೆರವನ್ನು ನೀಡಿದ್ದಾರೆ. ಇಂತಹ ಸ್ವತ್ಯಾಗದ ಕ್ರೈಸ್ತರು, ಅಂದರೆ ಸ್ತ್ರೀಪುರುಷರು, ಯುವಕರು ಮತ್ತು ವೃದ್ಧರು, ಅವಿವಾಹಿತರು ಮತ್ತು ವಿವಾಹಿತರು—ಇವರೆಲ್ಲರೂ ರಾಜ್ಯ ಸಂದೇಶವನ್ನು ಲೋಕದಲ್ಲೆಲ್ಲೂ ಸಾರುವುದರಲ್ಲಿ ಗಮನಾರ್ಹವಾದ ಪಾತ್ರವನ್ನು ವಹಿಸಿದ್ದಾರೆ. (ಕೀರ್ತನೆ 110:3; ರೋಮಾಪುರ 10:18) ಇವರ ಸಹಾಯವನ್ನು ಅತಿಯಾಗಿ ಮಾನ್ಯಮಾಡಲಾಗುತ್ತದೆ. ಪರದೇಶಗಳಿಂದ ಬಂದು ಹೆಚ್ಚು ಅಗತ್ಯವಿರುವ ಬ್ರಾಂಚ್ ಟೆರಿಟೊರಿಯಲ್ಲಿ ಸೇವೆಮಾಡುವವರ ಕುರಿತು ಕೆಲವು ಬ್ರಾಂಚ್ ಆಫೀಸುಗಳು ಏನು ಹೇಳಿದವು ಎಂಬುದನ್ನು ಗಮನಿಸಿರಿ.
5 “ಈ ಪ್ರಿಯ ಸಾಕ್ಷಿಗಳು ದೂರದೂರದಲ್ಲಿ ಚದರಿರುವ ಸ್ಥಳಗಳಲ್ಲಿ ಸಾರುವುದರಲ್ಲಿ ಮುಂದಾಳತ್ವ ವಹಿಸುತ್ತಾರೆ, ಹೊಸ ಸಭೆಗಳನ್ನು ರಚಿಸಲು ಸಹಾಯಮಾಡುತ್ತಾರೆ ಮತ್ತು ಸ್ಥಳಿಕ ಸೋದರಸೋದರಿಯರ ಆಧ್ಯಾತ್ಮಿಕ ಬೆಳವಣಿಗೆಗೆ ನೆರವಾಗುತ್ತಾರೆ.” (ಎಕ್ವಡಾರ್) “ಇಲ್ಲಿ ಸೇವೆಮಾಡುತ್ತಿರುವ ನೂರಾರು ಮಂದಿ ವಿದೇಶಿಯರು ಇಲ್ಲಿಂದ ಹೋಗಿಬಿಡುವಲ್ಲಿ ಸಭೆಯ ಸ್ಥಿರತೆಗೆ ಭಂಗ ಬರುವುದು. ಅವರು ನಮ್ಮೊಂದಿಗೆ ಇರುವುದು ಒಂದು ಆಶೀರ್ವಾದವೇ ಸರಿ.” (ಡೊಮಿನಿಕನ್ ರಿಪಬ್ಲಿಕ್) “ಅನೇಕ ಸಭೆಗಳಲ್ಲಿ ಅಧಿಕಾಂಶ ಸಹೋದರಿಯರು ಇದ್ದಾರೆ, ಕೆಲವು ಕಡೆಗಳಲ್ಲಿ 70 ಪ್ರತಿಶತ ಸಹೋದರಿಯರೇ ಇದ್ದಾರೆ. (ಕೀರ್ತನೆ 68:11) ಅವರಲ್ಲಿ ಅನೇಕರು ಸತ್ಯದಲ್ಲಿ ಹೊಸಬರು. ಆದರೆ ಬೇರೆ ದೇಶಗಳಿಂದ ಬಂದಿರುವ ಅವಿವಾಹಿತ ಪಯನೀಯರ್ ಸಹೋದರಿಯರು ಆ ಹೊಸಬರನ್ನು ತರಬೇತುಗೊಳಿಸುವ ಮೂಲಕ ಅಮೂಲ್ಯವಾದ ನೆರವನ್ನು ಒದಗಿಸುತ್ತಿದ್ದಾರೆ. ಪರದೇಶಗಳಿಂದ ಬಂದಿರುವ ಈ ಸಹೋದರಿಯರು ನಮಗೊಂದು ನಿಜ ವರದಾನವಾಗಿದ್ದಾರೆ!” (ಪೂರ್ವ ಯೂರೋಪಿನ ಒಂದು ದೇಶ) ಇನ್ನೊಂದು ದೇಶಕ್ಕೆ ಹೋಗಿ ಸೇವೆಮಾಡುವ ವಿಷಯದಲ್ಲಿ ನೀವು ಎಂದಾದರೂ ಯೋಚಿಸಿದ್ದೀರೊ?a—ಅ. ಕೃತ್ಯಗಳು 16:9, 10.
“ವಿವಿಧಭಾಷೆಗಳವರಾದ ಹತ್ತುಜನರು”
6. ಜೆಕರ್ಯ 8:23, ನಮ್ಮ ಸಾರುವ ಕೆಲಸಕ್ಕೆ ಎದುರಾಗುವ ಭಾಷಾಸಂಬಂಧಿತ ಸವಾಲಿಗೆ ಹೇಗೆ ಸೂಚಿಸುತ್ತದೆ?
6 ಭೂಮಿಯ ಮೇಲೆ ಮಾತಾಡಲ್ಪಡುತ್ತಿರುವ ವೈವಿಧ್ಯಮಯ ಭಾಷೆಗಳು ಇನ್ನೊಂದು ದೊಡ್ಡ ಸವಾಲಾಗಿದೆ. ದೇವರ ವಾಕ್ಯವು ಮುಂತಿಳಿಸಿದ್ದು: “ಆ ಕಾಲದಲ್ಲಿ ಜನಾಂಗಗಳ ವಿವಿಧಭಾಷೆಗಳವರಾದ ಹತ್ತುಜನರು ಯೆಹೂದ್ಯನೊಬ್ಬನ ಸೆರಗನ್ನು ಹಿಡಿದುಕೊಂಡು—ನಾವು ನಿಮ್ಮೊಂದಿಗೆ ಬರುವೆವು, ದೇವರು ನಿಮ್ಮ ಸಂಗಡ ಇದ್ದಾನೆಂಬ ಸುದ್ದಿಯು ನಮ್ಮ ಕಿವಿಗೆ ಬಿದ್ದಿದೆ ಎಂದು ಹೇಳುವರು.” (ಜೆಕರ್ಯ 8:23) ಈ ಪ್ರವಾದನೆಯ ಆಧುನಿಕ ನೆರವೇರಿಕೆಯಲ್ಲಿ ಆ ಹತ್ತು ಜನರು, ಪ್ರಕಟನೆ 7:9ರಲ್ಲಿ ಪ್ರವಾದಿಸಲ್ಪಟ್ಟಿರುವ ಮಹಾ ಸಮೂಹವನ್ನು ಪ್ರತಿನಿಧಿಸುತ್ತಾರೆ. ಆದರೂ, ಜೆಕರ್ಯನ ಪ್ರವಾದನೆಗನುಸಾರ ಆ ಹತ್ತು ಜನರು ಸಕಲ ಜನಾಂಗಗಳಿಂದ ಬರಲಿದ್ದರು ಮಾತ್ರವಲ್ಲ, “ವಿವಿಧಭಾಷೆ”ಗಳವರೂ ಆಗಿರಲಿದ್ದರು ಎಂಬುದನ್ನು ಗಮನಿಸಿರಿ. ಪ್ರವಾದನೆಯ ಈ ಪ್ರಮುಖ ವಿವರದ ನೆರವೇರಿಕೆಯನ್ನು ನಾವು ನೋಡಿದ್ದೆವೊ? ಹೌದು, ನಿಶ್ಚಯವಾಗಿಯೂ ನೋಡಿದ್ದೇವೆ.
7. “ವಿವಿಧಭಾಷೆಗಳ” ಜನರಿಗೆ ಸುವಾರ್ತೆಯನ್ನು ತಲಪಿಸಲಾಗುತ್ತಿದೆ ಎಂದು ಯಾವ ಸಂಖ್ಯಾಸಂಗ್ರಹಣಗಳು ತೋರಿಸುತ್ತವೆ?
7 ಕೆಲವು ಸಂಖ್ಯಾಸಂಗ್ರಹಣಗಳನ್ನು ಪರಿಗಣಿಸಿರಿ. ಐವತ್ತು ವರುಷಗಳ ಹಿಂದೆ ನಮ್ಮ ಸಾಹಿತ್ಯಗಳು 90 ಭಾಷೆಗಳಲ್ಲಿ ಪ್ರಕಟಿಸಲ್ಪಡುತ್ತಿದ್ದವು. ಇಂದು ಆ ಸಂಖ್ಯೆ 400ಕ್ಕೂ ಹೆಚ್ಚು ಭಾಷೆಗಳಿಗೇರಿದೆ. ಕೆಲವು ಭಾಷೆಗಳು ತುಲನಾತ್ಮಕವಾಗಿ ಸ್ವಲ್ಪ ಜನರಿಂದ ಮಾತ್ರ ಆಡಲ್ಪಡುತ್ತವಾದರೂ, ಅವರಿಗೂ ಸಾಹಿತ್ಯಗಳನ್ನು ಒದಗಿಸಲು “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಸರ್ವಪ್ರಯತ್ನವನ್ನೂ ಮಾಡಿದೆ. (ಮತ್ತಾಯ 24:45) ಉದಾಹರಣೆಗೆ, (47,000 ಜನರು ಮಾತ್ರ ಮಾತನಾಡುವ) ಗ್ರೀನ್‌ಲ್ಯಾಂಡಿಕ್ ಭಾಷೆಯಲ್ಲಿ, (15,000 ಜನರು ಮಾತಾಡುವ) ಪಲಾವನ್ ಭಾಷೆಯಲ್ಲಿ ಮತ್ತು (7,000ಕ್ಕಿಂತಲೂ ಕಡಿಮೆ ಜನರು ಮಾತಾಡುವ) ಯಾಪೀಸ್ ಭಾಷೆಯಲ್ಲಿ ಬೈಬಲ್ ಸಾಹಿತ್ಯಗಳು ಈಗ ಲಭ್ಯವಿವೆ.
ಹೊಸ ಅವಕಾಶಗಳಿಗೆ ನಡೆಸುವ “ವಿಶಾಲವಾದ ದ್ವಾರ”
8, 9. ಯಾವ ವಿಕಸನವು ನಮಗೆ “ವಿಶಾಲವಾದ ದ್ವಾರ”ವನ್ನು ತೆರೆದಿದೆ, ಮತ್ತು ಸಾವಿರಾರು ಮಂದಿ ಸಾಕ್ಷಿಗಳು ಇದಕ್ಕೆ ಹೇಗೆ ಪ್ರತಿಕ್ರಿಯಿಸಿದ್ದಾರೆ?
8 ಈ ದಿನಗಳಲ್ಲಾದರೊ ಎಲ್ಲ ಭಾಷೆಗಳ ಜನರಿಗೆ ಸುವಾರ್ತೆಯನ್ನು ಹಂಚಲಿಕ್ಕಾಗಿ ನಾವು ವಿದೇಶಕ್ಕೆ ಹೋಗಬೇಕಾಗಿಲ್ಲ. ಇತ್ತೀಚಿನ ವರುಷಗಳಲ್ಲಿ, ಆರ್ಥಿಕವಾಗಿ ವಿಕಾಸಹೊಂದಿರುವ ದೇಶಗಳಿಗೆ ಹೋಗಿರುವ ಲಕ್ಷಾಂತರ ಮಂದಿ ವಲಸೆಗಾರರ ಮತ್ತು ನಿರಾಶ್ರಿತರ ಗುಂಪುಗಳು ಅನೇಕ ಭಾಷೆಗಳನ್ನಾಡುವ ವಲಸೆಗಾರರ ಸಮುದಾಯಗಳನ್ನು ನಿರ್ಮಿಸಿವೆ. ಉದಾಹರಣೆಗೆ, ಫ್ರಾನ್ಸ್ ದೇಶದ ಪ್ಯಾರಿಸ್ ನಗರದಲ್ಲಿ ಸುಮಾರು 100 ಭಾಷೆಗಳು ಮಾತಾಡಲ್ಪಡುತ್ತವೆ. ಕೆನಡ ದೇಶದ ಟೊರಾಂಟೊ ನಗರದಲ್ಲಿ ಮಾತಾಡಲ್ಪಡುವ ಭಾಷೆಗಳ ಸಂಖ್ಯೆ 125; ಮತ್ತು ಇಂಗ್ಲೆಂಡ್ ದೇಶದ ಲಂಡನ್ನಿನಲ್ಲಿ 300ಕ್ಕೂ ಹೆಚ್ಚು ವಿದೇಶೀ ಭಾಷೆಗಳು ಆಡಲ್ಪಡುತ್ತವೆ! ಅನೇಕ ಸಭಾ ಟೆರಿಟೊರಿಗಳಲ್ಲಿ, ಬೇರೆ ದೇಶಗಳಿಂದ ಬಂದಿರುವ ಜನರ ವಾಸವು, ಸರ್ವ ದೇಶಗಳ ಜನರೊಂದಿಗೆ ಸುವಾರ್ತೆಯನ್ನು ಹಂಚುವ ಹೊಸ ಸಂದರ್ಭಗಳಿಗೆ ನಡೆಸುವ “ವಿಶಾಲವಾದ ದ್ವಾರ”ವನ್ನು ತೆರೆಯುತ್ತದೆ.—1 ಕೊರಿಂಥ 16:9, NW.
9 ಸಾವಿರಾರು ಮಂದಿ ಸಾಕ್ಷಿಗಳು ಇನ್ನೊಂದು ಭಾಷೆಯನ್ನು ಕಲಿಯುವ ಮೂಲಕ ಈ ಪಂಥಾಹ್ವಾನವನ್ನು ನಿಭಾಯಿಸುತ್ತಿದ್ದಾರೆ. ಹೆಚ್ಚಿನವರಿಗೆ ಹೀಗೆ ಇನ್ನೊಂದು ಭಾಷೆಯನ್ನು ಕಲಿಯುವುದು ಕಷ್ಟಕರವೆಂಬುದು ಸತ್ಯವಾದರೂ, ದೇವರ ವಾಕ್ಯದಲ್ಲಿ ಕಂಡುಬರುವ ಸತ್ಯವನ್ನು ಈ ವಲಸೆಗಾರರೂ ನಿರಾಶ್ರಿತರೂ ಕಲಿಯುವಂತೆ ಸಹಾಯಮಾಡುವುದರಿಂದ ಸಿಗುವ ಆನಂದವು ಅವರಿಗೆ ಸಮೃದ್ಧವಾದ ಪ್ರತಿಫಲವನ್ನು ಕೊಡುತ್ತದೆ. ಪಶ್ಚಿಮ ಯೂರೋಪಿನ ದೇಶವೊಂದರಲ್ಲಿ, ಇತ್ತೀಚಿನ ಒಂದು ವರುಷದ ಜಿಲ್ಲಾ ಅಧಿವೇಶನಗಳಲ್ಲಿ ದೀಕ್ಷಾಸ್ನಾನ ಹೊಂದಿದವರಲ್ಲಿ ಸುಮಾರು 40 ಪ್ರತಿಶತ ಜನರು ಬೇರೊಂದು ದೇಶದಿಂದ ಬಂದವರಾಗಿದ್ದರು.
10. ಸರ್ವ ದೇಶಗಳ ಜನರಿಗಾಗಿ ಸುವಾರ್ತೆ ಎಂಬ ಪುಸ್ತಿಕೆಯನ್ನು ನೀವು ಹೇಗೆ ಉಪಯೋಗಿಸಿದ್ದೀರಿ? (ಪುಟ 26ರಲ್ಲಿರುವ “ಸರ್ವ ದೇಶಗಳ ಜನರಿಗಾಗಿ ಸುವಾರ್ತೆ ಎಂಬ ಪುಸ್ತಿಕೆಯ ವೈಶಿಷ್ಟ್ಯಗಳು” ಚೌಕವನ್ನು ನೋಡಿ.)
10 ನಮ್ಮಲ್ಲಿ ಅನೇಕರು ವಿದೇಶೀ ಭಾಷೆಯೊಂದನ್ನು ಕಲಿಯುವ ಸ್ಥಿತಿಯಲ್ಲಿಲ್ಲವೆಂಬುದು ನಿಜ. ಹಾಗಿದ್ದರೂ, ವಲಸೆಗಾರರಿಗೆ ಸಹಾಯ ನೀಡುವುದರಲ್ಲಿ ನಾವು ಸಹ ಪಾಲ್ಗೊಳ್ಳಸಾಧ್ಯವಿದೆ. ಅನೇಕ ಭಾಷೆಗಳಲ್ಲಿ ಒಂದು ಆಕರ್ಷಕವಾದ ಬೈಬಲ್ ಸಂದೇಶವಿರುವಂತಹ, ಇತ್ತೀಚಿಗೆ ಬಿಡುಗಡೆ ಮಾಡಲ್ಪಟ್ಟ ಸರ್ವ ದೇಶಗಳ ಜನರಿಗಾಗಿ ಸುವಾರ್ತೆb ಎಂಬ ಪುಸ್ತಿಕೆಯನ್ನು ಸದುಪಯೋಗಿಸುವ ಮೂಲಕ ನಾವು ಅವರಿಗೆ ನೆರವು ನೀಡುವುದರಲ್ಲಿ ಭಾಗವಹಿಸಬಲ್ಲೆವು. (ಯೋಹಾನ 4:37) ನೀವು ಶುಶ್ರೂಷೆಯಲ್ಲಿ ಈ ಪುಸ್ತಿಕೆಯನ್ನು ಉಪಯೋಗಿಸುತ್ತಿದ್ದೀರೊ?
ಜನರು ಪ್ರತಿವರ್ತನೆ ತೋರಿಸದಿರುವಾಗ
11. ಕೆಲವೊಂದು ಟೆರಿಟೊರಿಗಳಲ್ಲಿ ಇನ್ನೂ ಯಾವ ಪಂಥಾಹ್ವಾನವು ಎದುರಾಗುತ್ತದೆ?
11 ಭೂಮಿಯ ಮೇಲೆ ಸೈತಾನನ ವರ್ಚಸ್ಸು ಹೆಚ್ಚುತ್ತಿರುವಾಗ, ಇನ್ನೊಂದು ಪಂಥಾಹ್ವಾನ ಪದೇ ಪದೇ ಎದುರಾಗುತ್ತದೆ. ಅದೇನೆಂದರೆ, ಕೆಲವೊಂದು ಟೆರಿಟೊರಿಗಳಲ್ಲಿ ಒಳ್ಳೇ ಪ್ರತಿವರ್ತನೆಯು ವಿರಳವಾಗಿರುತ್ತದೆ. ಇದು ನಮ್ಮನ್ನು ಅಚ್ಚರಿಗೊಳಿಸುವುದಿಲ್ಲ ಎಂಬುದು ನಿಜ, ಏಕೆಂದರೆ ಅಂತಹ ಪರಿಸ್ಥಿತಿಯು ಬರಲಿದೆ ಎಂದು ಯೇಸು ಮುಂತಿಳಿಸಿದನು. ನಮ್ಮ ದಿನಗಳ ಬಗ್ಗೆ ಮಾತಾಡುತ್ತ ಅವನಂದದ್ದು: “ಬಹುಜನರ ಪ್ರೀತಿಯು ತಣ್ಣಗಾಗಿಹೋಗುವದು.” (ಮತ್ತಾಯ 24:12) ಹೌದು, ದೇವರಲ್ಲಿ ನಂಬಿಕೆ ಮತ್ತು ಬೈಬಲಿನ ಕಡೆಗೆ ಗೌರವವು ಅನೇಕರಲ್ಲಿ ಕ್ಷೀಣಿಸಿದೆ. (2 ಪೇತ್ರ 3:3, 4) ಈ ಕಾರಣದಿಂದ, ಲೋಕದ ಕೆಲವು ಭಾಗಗಳಲ್ಲಿ ಕ್ರಿಸ್ತನ ಹೊಸ ಶಿಷ್ಯರಾಗುವವರು ಸಂಬಂಧಸೂಚಕವಾಗಿ ಕೇವಲ ಕೊಂಚ ಮಂದಿ. ಆದರೆ ಇಂತಹ ಪ್ರತಿಕ್ರಿಯೆರಹಿತ ಪ್ರದೇಶಗಳಲ್ಲಿ ನಂಬಿಗಸ್ತಿಕೆಯಿಂದ ಸಾರುತ್ತಿರುವ ನಮ್ಮ ಪ್ರಿಯ ಕ್ರೈಸ್ತ ಸೋದರಸೋದರಿಯರ ಪ್ರಯಾಸಗಳು ವ್ಯರ್ಥವೆಂದು ಇದರ ಅರ್ಥವಲ್ಲ. (ಇಬ್ರಿಯ 6:10) ಏಕೆ? ಮುಂದೆ ಕೊಡಲ್ಪಟ್ಟಿರುವ ವಿಷಯಗಳನ್ನು ಪರಿಗಣಿಸಿರಿ.
12. ನಮ್ಮ ಸಾರುವ ಕೆಲಸದ ಎರಡು ಉದ್ದೇಶಗಳಾವುವು?
12 ಮತ್ತಾಯನ ಸುವಾರ್ತೆಯು ನಮ್ಮ ಸಾರುವ ಚಟುವಟಿಕೆಯ ಎರಡು ಪ್ರಧಾನ ಉದ್ದೇಶಗಳನ್ನು ಎತ್ತಿತೋರಿಸುತ್ತದೆ. ನಾವು “ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ” ಮಾಡಬೇಕೆಂಬುದು ಒಂದು. (ಮತ್ತಾಯ 28:19) ರಾಜ್ಯ ಸಂದೇಶವು “ಸಾಕ್ಷಿ” ಆಗಿ ಕಾರ್ಯನಡೆಸುತ್ತದೆ ಎಂಬುದು ಇನ್ನೊಂದು. (ಮತ್ತಾಯ 24:14) ಈ ಎರಡೂ ಉದ್ದೇಶಗಳು ಪ್ರಾಮುಖ್ಯವಾಗಿವೆಯಾದರೂ, ಎರಡನೆಯದ್ದು ವಿಶೇಷವಾಗಿ ಗಮನಾರ್ಹವಾಗಿದೆ. ಏಕೆ?
13, 14. (ಎ) ಕ್ರಿಸ್ತನ ಸಾನ್ನಿಧ್ಯದ ಸೂಚನೆಯ ಒಂದು ಗಮನಾರ್ಹವಾದ ಅಂಶವು ಯಾವುದು? (ಬಿ) ವಿಶೇಷವಾಗಿ, ಕಡಿಮೆ ಪ್ರತಿಕ್ರಿಯೆ ತೋರಿಸಲ್ಪಡುವ ಟೆರಿಟೊರಿಗಳಲ್ಲಿ ಸಾರುವಾಗ ನಾವೇನನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು?
13 ಅಪೊಸ್ತಲರು ಯೇಸುವನ್ನು ಹೀಗೆ ಪ್ರಶ್ನಿಸಿದರೆಂದು ಬೈಬಲ್ ಲೇಖಕನಾದ ಮತ್ತಾಯನು ದಾಖಲಿಸಿದನು: “ನೀನು ಪ್ರತ್ಯಕ್ಷನಾಗುವದಕ್ಕೂ ಯುಗದ ಸಮಾಪ್ತಿಗೂ ಸೂಚನೆಯೇನು?” (ಮತ್ತಾಯ 24:3) ಇದಕ್ಕೆ ಉತ್ತರವಾಗಿ, ಆ ಸೂಚನೆಯ ಒಂದು ಎದ್ದುಕಾಣುವ ಅಂಶವು ಭೌಗೋಳಿಕ ಸಾರುವ ಕೆಲಸವೆಂದು ಯೇಸು ಹೇಳಿದನು. ಅವನು ಶಿಷ್ಯರನ್ನಾಗಿ ಮಾಡುವುದರ ಕುರಿತು ಮಾತಾಡುತ್ತಿದ್ದನೊ? ಇಲ್ಲ. “ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು” ಎಂದು ಅವನು ಹೇಳಿದನು. (ಮತ್ತಾಯ 24:14) ಹೀಗೆ, ರಾಜ್ಯದ ಕುರಿತು ಸಾರುವ ಕೆಲಸವೇ ಆ ಸೂಚನೆಯ ಒಂದು ಪ್ರಮುಖಾಂಶ ಆಗಿರುವುದೆಂದು ಯೇಸು ತೋರಿಸಿದನು.
14 ಈ ಕಾರಣದಿಂದ, ರಾಜ್ಯದ ಸುವಾರ್ತೆಯನ್ನು ಸಾರುವಾಗ, ಶಿಷ್ಯರನ್ನಾಗಿ ಮಾಡುವುದರಲ್ಲಿ ನಾವು ಯಾವಾಗಲೂ ಸಾಫಲ್ಯ ಪಡೆಯದಿದ್ದರೂ, “ಸಾಕ್ಷಿ” ನೀಡುವುದರಲ್ಲಿ ಸಫಲರಾಗುತ್ತೇವೆ ಎಂಬುದನ್ನು ನಾವು ಜ್ಞಾಪಿಸಿಕೊಳ್ಳುತ್ತೇವೆ. ಜನರು ಯಾವ ವಿಧದಲ್ಲೇ ಪ್ರತಿವರ್ತಿಸಲಿ, ನಾವು ಏನು ಮಾಡುತ್ತಿದ್ದೇವೆಂದು ಅವರಿಗೆ ಗೊತ್ತಿದೆ ಮತ್ತು ಹೀಗೆ ಯೇಸುವಿನ ಪ್ರವಾದನೆಯನ್ನು ನೆರವೇರಿಸುವುದರಲ್ಲಿ ನಾವು ಪಾಲ್ಗೊಳ್ಳುತ್ತೇವೆ. (ಯೆಶಾಯ 52:7; ಪ್ರಕಟನೆ 14:6, 7) ಪಶ್ಚಿಮ ಯೂರೋಪಿನ ಒಬ್ಬ ಯುವ ಸಾಕ್ಷಿಯಾದ ಜಾರ್ಡೀ ಹೇಳಿದ್ದು: “ಮತ್ತಾಯ 24:14ನ್ನು ನೆರವೇರಿಸುವುದರಲ್ಲಿ ಯೆಹೋವನು ನನ್ನನ್ನು ಉಪಯೋಗಿಸುತ್ತಿದ್ದಾನೆಂದು ತಿಳಿಯುವುದೇ ನನ್ನನ್ನು ಸಂತೋಷಪಡಿಸುತ್ತದೆ.” (2 ಕೊರಿಂಥ 2:15-17) ನಿಮಗೂ ಹಾಗೆಯೇ ಅನಿಸುತ್ತದೆಂಬುದರಲ್ಲಿ ಸಂಶಯವಿಲ್ಲ.
ನಮ್ಮ ಸಂದೇಶವು ವಿರೋಧಿಸಲ್ಪಡುವಾಗ
15. (ಎ) ಯೇಸು ತನ್ನ ಶಿಷ್ಯರಿಗೆ ಯಾವುದರ ಕುರಿತು ಮುಂದಾಗಿಯೇ ಎಚ್ಚರಿಸಿದನು? (ಬಿ) ವಿರೋಧದ ಎದುರಿನಲ್ಲಿಯೂ ಸಾರುವಂತೆ ನಮ್ಮನ್ನು ಯಾವುದು ಶಕ್ತರನ್ನಾಗಿ ಮಾಡುತ್ತದೆ?
15 ರಾಜ್ಯದ ಸುವಾರ್ತೆಯನ್ನು ಸಾರುವುದಕ್ಕಿರುವ ಮತ್ತೊಂದು ಪಂಥಾಹ್ವಾನವು ವಿರೋಧ ಆಗಿದೆ. “ನನ್ನ ಹೆಸರಿನ ನಿಮಿತ್ತ ನಿಮ್ಮನ್ನು ಎಲ್ಲಾ ಜನಾಂಗಗಳವರು ಹಗೆಮಾಡುವರು” ಎಂದು ಯೇಸು ತನ್ನ ಹಿಂಬಾಲಕರನ್ನು ಮುಂದಾಗಿಯೇ ಎಚ್ಚರಿಸಿದನು. (ಮತ್ತಾಯ 24:9) ಆದಿ ಕ್ರೈಸ್ತರಂತೆಯೇ, ಯೇಸುವಿನ ಇಂದಿನ ಹಿಂಬಾಲಕರೂ ದ್ವೇಷಿಸಲ್ಪಟ್ಟಿದ್ದಾರೆ, ವಿರೋಧಿಸಲ್ಪಟ್ಟಿದ್ದಾರೆ ಮತ್ತು ಹಿಂಸಿಸಲ್ಪಟ್ಟಿದ್ದಾರೆ. (ಅ. ಕೃತ್ಯಗಳು 5:17, 18, 40; 2 ತಿಮೊಥೆಯ 3:12; ಪ್ರಕಟನೆ 12:12, 17) ಕೆಲವು ದೇಶಗಳಲ್ಲಿ ಅವರು ಈಗ ಸರಕಾರೀ ನಿಷೇಧಾಜ್ಞೆಗೆ ಒಳಗಾಗಿದ್ದಾರೆ. ಹೀಗಿದ್ದರೂ, ಅಂತಹ ದೇಶಗಳಲ್ಲಿರುವ ಸತ್ಯ ಕ್ರೈಸ್ತರು ದೇವರಿಗೆ ವಿಧೇಯರಾಗಿರುತ್ತಾ ರಾಜ್ಯದ ಸುವಾರ್ತೆಯನ್ನು ಸಾರುವುದನ್ನು ಮುಂದುವರಿಸುತ್ತಿದ್ದಾರೆ. (ಆಮೋಸ 3:8; ಅ. ಕೃತ್ಯಗಳು 5:29; 1 ಪೇತ್ರ 2:21) ಅವರೂ ಲೋಕವ್ಯಾಪಕವಾಗಿರುವ ಇತರ ಸಾಕ್ಷಿಗಳೆಲ್ಲರೂ ಹೀಗೆ ಮಾಡುವಂತೆ ಯಾವುದು ಶಕ್ತರನ್ನಾಗಿ ಮಾಡುತ್ತದೆ? ಯೆಹೋವನು ತನ್ನ ಪವಿತ್ರಾತ್ಮದ ಮೂಲಕ ಅವರಿಗೆ ಶಕ್ತಿಯನ್ನು ಕೊಡುತ್ತಾನೆ.—ಜೆಕರ್ಯ 4:6; ಎಫೆಸ 3:16; 2 ತಿಮೊಥೆಯ 4:17.
16. ಸಾರುವ ಕೆಲಸ ಮತ್ತು ದೇವರಾತ್ಮದ ಮಧ್ಯೆ ಇರುವ ಸಂಬಂಧವನ್ನು ಯೇಸು ಹೇಗೆ ತೋರಿಸಿದನು?
16 ದೇವರಾತ್ಮ ಮತ್ತು ಸಾರುವ ಕೆಲಸದ ಮಧ್ಯೆ ಇರುವ ನಿಕಟ ಸಂಬಂಧವನ್ನು ಯೇಸು ತನ್ನ ಹಿಂಬಾಲಕರಿಗೆ ಈ ಮಾತುಗಳಿಂದ ಒತ್ತಿಹೇಳಿದನು: ‘ಪವಿತ್ರಾತ್ಮ ನಿಮ್ಮ ಮೇಲೆ ಬಂದಾಗ ನೀವು ಶಕ್ತಿಯನ್ನು ಪಡೆಯುವಿರಿ. ಆಗ ನೀವು ಯೆರೂಸಲೇಮಿನಲ್ಲಿ, ಯೂದಾಯ ಮತ್ತು ಸಮಾರ್ಯದ ಎಲ್ಲಾ ಕಡೆಗಳಲ್ಲಿ ಹಾಗೂ ಭೂಲೋಕದ ಕೊನೆಯ ಮೇರೆಗಳವರೆಗೂ ನನಗೆ ಸಾಕ್ಷಿಗಳಾಗುವಿರಿ.’ (ಅ. ಕೃತ್ಯಗಳು 1:8, NIBV; ಪ್ರಕಟನೆ 22:17) ಈ ಶಾಸ್ತ್ರವಚನದಲ್ಲಿನ ಘಟನೆಗಳ ಕ್ರಮಾನುಗತಿಯು ಪ್ರಾಮುಖ್ಯವಾಗಿದೆ. ಮೊದಲು, ಶಿಷ್ಯರು ಪವಿತ್ರಾತ್ಮವನ್ನು ಪಡೆದರು. ಬಳಿಕ ಅವರು ಭೌಗೋಳಿಕ ಸಾಕ್ಷಿಕಾರ್ಯವನ್ನು ವಹಿಸಿಕೊಂಡರು. ದೇವರಾತ್ಮದ ಬೆಂಬಲದಿಂದ ಮಾತ್ರ “ಎಲ್ಲಾ ಜನಾಂಗಗಳಿಗೆ ಸಾಕ್ಷಿ” ಕೊಡುವ ಕೆಲಸದಲ್ಲಿ ತಾಳಿಕೊಳ್ಳಲು ಅವರಿಗೆ ಬಲ ದೊರೆಯಲಿತ್ತು. (ಮತ್ತಾಯ 24:13, 14; ಯೆಶಾಯ 61:1, 2) ಆದುದರಿಂದ ಸಮಂಜಸವಾಗಿಯೇ, ಯೇಸು ಪವಿತ್ರಾತ್ಮವನ್ನು “ಸಹಾಯಕನು” ಎಂದು ಸೂಚಿಸಿದನು. (ಯೋಹಾನ 15:26) ದೇವರಾತ್ಮವು ತನ್ನ ಶಿಷ್ಯರಿಗೆ ಕಲಿಸುವುದು ಮತ್ತು ಮಾರ್ಗದರ್ಶಿಸುವುದೆಂದೂ ಅವನು ಹೇಳಿದನು.—ಯೋಹಾನ 14:16, 26; 16:13.
17. ನಾವು ತೀಕ್ಷ್ಣ ವಿರೋಧವನ್ನು ಎದುರಿಸುವಾಗ ದೇವರಾತ್ಮವು ನಮಗೆ ಹೇಗೆ ಸಹಾಯಮಾಡುತ್ತದೆ?
17 ಸುವಾರ್ತೆಯನ್ನು ಸಾರುವಾಗ ತೀಕ್ಷ್ಣ ವಿರೋಧವು ಬರುವಲ್ಲಿ ದೇವರಾತ್ಮವು ಇಂದು ನಮಗೆ ಯಾವ ವಿಧಗಳಲ್ಲಿ ಸಹಾಯಮಾಡುತ್ತದೆ? ದೇವರಾತ್ಮವು ನಮ್ಮನ್ನು ಬಲಪಡಿಸುತ್ತದೆ ಮತ್ತು ನಮ್ಮನ್ನು ಹಿಂಸಿಸುವವರನ್ನು ವಿರೋಧಿಸುತ್ತದೆ. ಇದನ್ನು ದೃಷ್ಟಾಂತಿಸಲಿಕ್ಕಾಗಿ ಅರಸನಾಗಿದ್ದ ಸೌಲನ ಜೀವನದ ಒಂದು ಘಟನೆಯನ್ನು ಪರಿಗಣಿಸಿರಿ.
ದೇವರಾತ್ಮದಿಂದ ವಿರೋಧ
18. (ಎ) ಸೌಲನು ಹೇಗೆ ಕೆಟ್ಟವನಾಗಿ ಪರಿಣಮಿಸಿದನು? (ಬಿ) ದಾವೀದನನ್ನು ಹಿಂಸಿಸಲು ಸೌಲನು ಯಾವ ವಿಧಾನಗಳನ್ನು ಉಪಯೋಗಿಸಿದನು?
18 ಇಸ್ರಾಯೇಲಿನ ಪ್ರಥಮ ಅರಸನಾಗಿ ಸೌಲನು ಆರಂಭದಲ್ಲಿ ಒಳ್ಳೆಯವನಾಗಿದ್ದರೂ, ತದನಂತರ ಯೆಹೋವನಿಗೆ ಅವಿಧೇಯನಾದನು. (1 ಸಮುವೇಲ 10:1, 24; 11:14, 15; 15:17-23) ಈ ಕಾರಣದಿಂದ, ದೇವರಾತ್ಮವು ಅಂದಿನಿಂದ ಆ ಅರಸನನ್ನು ಬೆಂಬಲಿಸಲಿಲ್ಲ. ಮುಂದಿನ ಅರಸನಾಗಿ ಅಭಿಷಿಕ್ತನಾಗಿದ್ದ ಮತ್ತು ಈಗ ದೇವರಾತ್ಮದ ಬೆಂಬಲವಿದ್ದ ದಾವೀದನ ಮೇಲೆ ಸೌಲನು ಕ್ರೋಧಿತನಾಗಿ, ಅವನೊಂದಿಗೆ ಹಿಂಸಾತ್ಮಕ ರೀತಿಯಲ್ಲಿ ವರ್ತಿಸಿದನು. (1 ಸಮುವೇಲ 16:1, 13, 14) ದಾವೀದನು ಸುಲಭವಾಗಿ ನುಂಗಿಹಾಕಬಹುದಾದ ಬೇಟೆಯಂತೆ ತೋರುತ್ತಿದ್ದನು. ಏಕೆಂದರೆ ಸೌಲನ ಕೈಯಲ್ಲಿ ಈಟಿಯಿತ್ತು ಆದರೆ ದಾವೀದನ ಕೈಯಲ್ಲಿ ಕಿನ್ನರಿ ಮಾತ್ರ ಇತ್ತು. ಆದುದರಿಂದ ಒಂದು ದಿನ ದಾವೀದನು ಕಿನ್ನರಿ ಬಾರಿಸುತ್ತಿದ್ದಾಗ ಸೌಲನು, “ದಾವೀದನನ್ನು ಗೋಡೆಗೆ ಹತ್ತಿಕೊಳ್ಳುವಹಾಗೆ ತಿವಿಯುವೆನೆಂದುಕೊಂಡು ಈಟಿಯನ್ನು ಎಸೆದನು. ದಾವೀದನು ಎರಡು ಸಾರಿ ತಪ್ಪಿಸಿಕೊಂಡನು.” (1 ಸಮುವೇಲ 18:10, 11) ಬಳಿಕ, ಸೌಲನು ದಾವೀದನ ಸ್ನೇಹಿತನಾಗಿದ್ದ ತನ್ನ ಮಗನಾದ ಯೋನಾತಾನನ ಮಾತಿಗೆ ಕಿವಿಗೊಟ್ಟು, “ಯೆಹೋವನಾಣೆ, ಅವನನ್ನು ಕೊಲ್ಲುವದಿಲ್ಲ” ಎಂದು ಪ್ರಮಾಣಮಾಡಿದನು. ಆದರೆ ಬಳಿಕ, ಸೌಲನು ಪುನಃ “ದಾವೀದನನ್ನು ಗೋಡೆಗೆ ಹತ್ತಿಕೊಳ್ಳುವಂತೆ ತಿವಿಯಬೇಕೆಂದು ತನ್ನ ಈಟಿಯನ್ನು ಎಸೆದನು.” ಹಾಗಿದ್ದರೂ ದಾವೀದನು “ಫಕ್ಕನೆ ಸೌಲನೆದುರಿನಿಂದ ಸರಿದುಕೊಂಡ ಕಾರಣ ಅದು ಗೋಡೆಯೊಳಗೆ ನಾಟಿತು.” ದಾವೀದನು ಆಗ ಓಡಿಹೋದನಾದರೂ, ಸೌಲನು ಅವನನ್ನು ಬೆನ್ನಟ್ಟಿದನು. ಆ ನಿರ್ಣಾಯಕ ಸಮಯದಲ್ಲಿ ದೇವರಾತ್ಮವು ಸೌಲನ ವಿರೋಧಿಯಾಗಿ ಪರಿಣಮಿಸಿತು. ಯಾವ ವಿಧದಲ್ಲಿ?—1 ಸಮುವೇಲ 19:6, 10.
19. ದೇವರಾತ್ಮವು ದಾವೀದನನ್ನು ಹೇಗೆ ಸಂರಕ್ಷಿಸಿತು?
19 ದಾವೀದನು ಪ್ರವಾದಿ ಸಮುವೇಲನ ಬಳಿಗೆ ಓಡಿಹೋದರೂ, ಅವನನ್ನು ಹಿಡಿಯಲು ಸೌಲನು ತನ್ನ ಜನರನ್ನು ಕಳುಹಿಸಿದನು. ಅವರು ದಾವೀದನು ಅಡಗಿಕೊಂಡಿದ್ದ ಸ್ಥಳಕ್ಕೆ ಬಂದಾಗ, “ದೇವರ ಆತ್ಮವು ಅವರ ಮೇಲೆಯೂ ಬಂದಿತು; ಅವರೂ ಪರವಶರಾಗಿ ಮಾತಾಡತೊಡಗಿದರು.” ಅವರು ದೇವರಾತ್ಮದಿಂದ ಎಷ್ಟು ಪರವಶರಾದರೆಂದರೆ, ಅವರು ಅಲ್ಲಿಗೆ ಬಂದಿದ್ದ ಉದ್ದೇಶವನ್ನೇ ಪೂರ್ಣವಾಗಿ ಮರೆತುಬಿಟ್ಟರು. ದಾವೀದನನ್ನು ಹಿಡಿದು ತರಲು ಸೌಲನು ಇನ್ನೆರಡು ಬಾರಿ ಜನರನ್ನು ಕಳುಹಿಸಿದಾಗ, ಆ ಎರಡು ಸಲವೂ ಅವರಿಗೆ ಹಾಗೆಯೇ ಸಂಭವಿಸಿತು. ಕೊನೆಗೆ ಸೌಲನು ತಾನೇ ದಾವೀದನ ಬಳಿಗೆ ಹೋದನು ಆದರೆ ಅವನಿಗೂ ದೇವರಾತ್ಮದ ಪ್ರಭಾವವನ್ನು ತಡೆಯಲಾಗಲಿಲ್ಲ. ವಾಸ್ತವವೇನಂದರೆ, ಪವಿತ್ರಾತ್ಮವು ಅವನನ್ನು “ಆ ದಿನ ಹಗಲಿರುಳು” ನಿಶ್ಚಲಗೊಳಿಸಿತು. ಮತ್ತು ಇದರಿಂದಾಗಿ ದಾವೀದನಿಗೆ ಅಲ್ಲಿಂದ ಓಡಿಹೋಗಲು ಸಾಕಷ್ಟು ಸಮಯ ಸಿಕ್ಕಿತು.—1 ಸಮುವೇಲ 19:20-24.
20. ಸೌಲನು ದಾವೀದನನ್ನು ಹಿಂಸಿಸಿದ ವೃತ್ತಾಂತದಿಂದ ನಾವು ಯಾವ ಪಾಠವನ್ನು ಕಲಿಯಬಲ್ಲೆವು?
20 ಸೌಲದಾವೀದರ ಈ ವೃತ್ತಾಂತದಲ್ಲಿ ಬಲವರ್ಧಕ ಪಾಠವೊಂದಿದೆ: ದೇವರ ಸೇವಕರನ್ನು ಹಿಂಸಿಸುವವರು ದೇವರಾತ್ಮದಿಂದ ವಿರೋಧಿಸಲ್ಪಡುವಾಗ ಜಯಹೊಂದಲಾರರು. (ಕೀರ್ತನೆ 46:11; 125:2) ದಾವೀದನು ಇಸ್ರಾಯೇಲಿನ ಅರಸನಾಗುವಂತೆ ದೇವರು ಉದ್ದೇಶಿಸಿದ್ದನು. ಹೀಗಿರುವಾಗ, ಅದನ್ನು ಯಾವನೂ ಬದಲಾಯಿಸಸಾಧ್ಯವಿರಲಿಲ್ಲ. ನಮ್ಮ ದಿನಗಳಲ್ಲಿ, “ರಾಜ್ಯದ ಈ ಸುವಾರ್ತೆಯು . . . ಸಾರಲಾಗುವದು” ಎಂದು ಯೆಹೋವನು ನಿರ್ಣಯಿಸಿದ್ದಾನೆ. ಅದು ಸಂಭವಿಸುವುದನ್ನು ತಡೆಯಲು ಯಾವನಿಗೂ ಸಾಧ್ಯವಿಲ್ಲ.—ಅ. ಕೃತ್ಯಗಳು 5:40, 42.
21. (ಎ) ಇಂದು ಕೆಲವು ವಿರೋಧಿಗಳು ಹೇಗೆ ವರ್ತಿಸುತ್ತಾರೆ? (ಬಿ) ಆದರೆ ನಮಗೆ ಯಾವ ಭರವಸೆಯಿದೆ?
21 ಧಾರ್ಮಿಕ ಮತ್ತು ರಾಜಕೀಯ ನಾಯಕರಲ್ಲಿ ಕೆಲವರು, ನಮ್ಮನ್ನು ತಡೆಯುವ ಪ್ರಯತ್ನದಲ್ಲಿ ಸುಳ್ಳುಗಳನ್ನು ಮತ್ತು ಹಿಂಸಾಚಾರವನ್ನೂ ಪ್ರಯೋಗಿಸುತ್ತಾರೆ. ಆದರೂ, ಯೆಹೋವನು ದಾವೀದನನ್ನು ಆಧ್ಯಾತ್ಮಿಕವಾಗಿ ಕಾಪಾಡಿದಂತೆಯೇ, ಆತನು ತನ್ನ ಜನರನ್ನು ಇಂದು ಕಾಪಾಡುವನು. (ಮಲಾಕಿಯ 3:6) ಆದಕಾರಣ, ನಾವೂ ದಾವೀದನಂತೆ ಭರವಸೆಯಿಂದ ಹೀಗೆ ಹೇಳುತ್ತೇವೆ: “ದೇವರನ್ನು ನಂಬಿ ನಿರ್ಭಯದಿಂದಿರುವೆನು; ನರಪ್ರಾಣಿಗಳು ನನಗೆ ಮಾಡುವದೇನು?” (ಕೀರ್ತನೆ 56:11; 121:1-8; ರೋಮಾಪುರ 8:31) ರಾಜ್ಯದ ಸುವಾರ್ತೆಯನ್ನು ಸರ್ವ ದೇಶಗಳ ಜನರಿಗೆ ಸಾರಬೇಕೆಂಬ ದೇವದತ್ತ ಆಜ್ಞೆಯನ್ನು ನಾವು ನೆರವೇರಿಸುವಾಗ, ಯೆಹೋವನ ಸಹಾಯದಿಂದ ಸಕಲ ಪಂಥಾಹ್ವಾನಗಳನ್ನು ನಿಭಾಯಿಸುತ್ತ ಮುಂದುವರಿಯೋಣ.
[ಪಾದಟಿಪ್ಪಣಿಗಳು]
a “ಸಾರ್ಥಕತೆಯ ಆಳವಾದ ಪ್ರಜ್ಞೆ” ಎಂಬ ಕೆಳಗಿರುವ ಚೌಕವನ್ನು ನೋಡಿ.
b ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟಿದೆ.
ಜ್ಞಾಪಿಸಿಕೊಳ್ಳಬಲ್ಲಿರೊ?
• ನಮ್ಮ ಸಾರುವ ವಿಧಾನಗಳನ್ನು ನಾವು ಸಂದರ್ಭಾನುಸಾರ ಹೊಂದಿಸಿಕೊಳ್ಳುವುದೇಕೆ?
• ಯಾವ ಹೊಸ ಸದವಕಾಶಗಳಿಗೆ ನಡೆಸುವ “ವಿಶಾಲವಾದ ದ್ವಾರ”ವೊಂದು ತೆರೆದಿದೆ?
• ನಮ್ಮ ಸಾರುವ ಕೆಲಸದಿಂದಾಗಿ ಕಡಿಮೆ ಪ್ರತಿಕ್ರಿಯೆಯಿರುವ ಪ್ರದೇಶಗಳಲ್ಲಿಯೂ ಏನು ಪೂರೈಸಲ್ಪಡುತ್ತದೆ?
• ರಾಜ್ಯದ ಸುವಾರ್ತೆಯ ಸಾರುವಿಕೆಯನ್ನು ಯಾವ ವಿರೋಧಿಯೂ ಏಕೆ ನಿಲ್ಲಿಸಲಾರನು?
[ಪುಟ 22ರಲ್ಲಿರುವ ಚೌಕ]
ಸಾರ್ಥಕತೆಯ ಆಳವಾದ ಪ್ರಜ್ಞೆ
“ಸಂತೋಷಭರಿತರು ಮತ್ತು ಯೆಹೋವನಿಗೆ ಸಲ್ಲಿಸುತ್ತಿರುವ ತಮ್ಮ ಐಕ್ಯ ಸೇವೆಯಲ್ಲಿ ಆನಂದಿಸುತ್ತಿದ್ದಾರೆ.” ಸ್ಪೇನ್ ದೇಶದಿಂದ ಬೊಲಿವಿಯಕ್ಕೆ ಸ್ಥಳಾಂತರಿಸಿದ ಒಂದು ಕುಟುಂಬವನ್ನು ಆ ಮಾತುಗಳಲ್ಲಿ ವರ್ಣಿಸಬಹುದು. ದೂರದಲ್ಲಿರುವ ಒಂದು ಪ್ರತ್ಯೇಕ ಗುಂಪನ್ನು ಬೆಂಬಲಿಸಲಿಕ್ಕಾಗಿ ಆ ಕುಟುಂಬದ ಒಬ್ಬ ಮಗನು ಹೋಗಿದ್ದನು. ಅವನಲ್ಲಿ ವ್ಯಕ್ತವಾಗುತ್ತಿದ್ದ ಆನಂದವು ಅವನ ಹೆತ್ತವರನ್ನು ಎಷ್ಟು ಪ್ರಭಾವಿಸಿತೆಂದರೆ, 14ರಿಂದ 25 ವರ್ಷ ವಯಸ್ಸಿನ ನಾಲ್ಕು ಮಂದಿ ಹುಡುಗರ ಸಮೇತ ಇಡೀ ಕುಟುಂಬವೇ ಅಲ್ಲಿ ಹೋಗಿ ಸೇವೆ ಸಲ್ಲಿಸಲಾರಂಭಿಸಿತು. ಈ ಹುಡುಗರಲ್ಲಿ ಮೂವರು ಈಗ ಪಯನೀಯರ್ ಸೇವೆಮಾಡುತ್ತಿದ್ದಾರೆ, ಮತ್ತು ಅವರೆಲ್ಲರಿಗೆ ಮಾರ್ಗವನ್ನು ತೋರಿಸಿದವನು ಇತ್ತೀಚೆಗೆ ಶುಶ್ರೂಷಾ ತರಬೇತಿ ಶಾಲೆಗೆ ಹಾಜರಾದನು.
ಪೂರ್ವ ಯೂರೋಪಿನಲ್ಲಿ ಸೇವೆಸಲ್ಲಿಸುತ್ತಿರುವ ಕೆನಡದ 30ರ ವಯಸ್ಸಿನ ಆ್ಯಂಜಲಿಕ ಹೇಳುವುದು: “ಪಂಥಾಹ್ವಾನಗಳೋ ಅನೇಕ, ಆದರೆ ಶುಶ್ರೂಷೆಯಲ್ಲಿ ಜನರಿಗೆ ಸಹಾಯಮಾಡುವುದರಿಂದ ನನಗೆ ತೃಪ್ತಿ ಸಿಗುತ್ತದೆ. ಸ್ಥಳಿಕ ಸಾಕ್ಷಿಗಳ ಅನೇಕ ಕೃತಜ್ಞತಾ ಅಭಿವ್ಯಕ್ತಿಗಳೂ ನನ್ನ ಮನಸ್ಪರ್ಶಿಸುತ್ತವೆ. ತಮಗೆ ಸಹಾಯಮಾಡಿದ್ದಕ್ಕಾಗಿ ಅವರು ಅನೇಕವೇಳೆ ನನಗೆ ಉಪಕಾರ ಹೇಳುತ್ತಾರೆ.”
ಡೊಮಿನಿಕನ್ ರಿಪಬ್ಲಿಕ್‌ನಲ್ಲಿ ಸೇವೆಸಲ್ಲಿಸುತ್ತಿರುವ ಮೂವತ್ತರ ವಯಸ್ಸನ್ನು ಸಮೀಪಿಸುತ್ತಿರುವ ಅಮೆರಿಕದ ಇಬ್ಬರು ಅಕ್ಕತಂಗಿಯರು ಹೇಳಿದ್ದು: “ನಾವು ಎಷ್ಟೋ ವಿಭಿನ್ನ ರೀತಿನೀತಿಗಳಿಗೆ ಒಗ್ಗಿಕೊಳ್ಳಬೇಕಾಗಿತ್ತು. ಆದರೂ ನಮ್ಮ ನೇಮಕದಲ್ಲಿ ನಾವು ಪಟ್ಟುಹಿಡಿದ ಕಾರಣ ನಮ್ಮ ಬೈಬಲ್ ವಿದ್ಯಾರ್ಥಿಗಳಲ್ಲಿ ಏಳು ಮಂದಿ ಈಗ ಕೂಟಗಳಿಗೆ ಹಾಜರಾಗುತ್ತಿದ್ದಾರೆ.” ಸಭೆಯೇ ಇಲ್ಲದಿದ್ದ ಒಂದು ಪಟ್ಟಣದಲ್ಲಿ ರಾಜ್ಯ ಪ್ರಚಾರಕರ ಒಂದು ಗುಂಪನ್ನು ಸಂಘಟಿಸಲು ಈ ಇಬ್ಬರು ಸಹೋದರಿಯರು ಸಹಾಯಮಾಡಿದರು.
ಮೂವತ್ತರ ವಯಸ್ಸನ್ನು ಸಮೀಪಿಸುತ್ತಿರುವ ಲಾರ ಎಂಬ ಸಹೋದರಿ ವಿದೇಶದಲ್ಲಿ ನಾಲ್ಕು ವರ್ಷಗಳಿಗೂ ಹೆಚ್ಚು ಸಮಯ ಸೇವೆಮಾಡಿದ್ದಾರೆ. ಆಕೆ ಹೇಳುವುದು: “ಬೇಕೆಂತಲೇ ನಾನು ನನ್ನ ಜೀವನವನ್ನು ಸರಳವಾಗಿ ಇಡುತ್ತೇನೆ. ಇದು, ಆಡಂಬರವಿಲ್ಲದ ಮಿತ ಖರ್ಚಿನ ಜೀವನವು ಬಡತನದಿಂದಾಗಿ ಅಲ್ಲ ಬದಲಾಗಿ ನಾವಾಗಿಯೇ ಮಾಡುವ ಆಯ್ಕೆ ಮತ್ತು ಸ್ವಸ್ಥಚಿತ್ತದ ಪರಿಣಾಮ ಆಗಿದೆಯೆಂದು ಪ್ರಚಾರಕರು ನೋಡುವಂತೆ ಸಹಾಯಮಾಡುತ್ತದೆ. ಇತರರಿಗೆ, ಮುಖ್ಯವಾಗಿ ಯುವ ಜನರಿಗೆ ಸಹಾಯಮಾಡಲು ಶಕ್ತರಾಗಿರುವುದು ನನಗೆ ಹರ್ಷದ ಮೂಲವಾಗಿ ಪರಿಣಮಿಸಿದೆ. ವಿದೇಶದಲ್ಲಿ ಸೇವೆಮಾಡುವಾಗ ಎದುರಾಗುವ ನಿಜವಾದ ಕಷ್ಟಗಳನ್ನು ಇದು ಮರೆಮಾಡುತ್ತದೆ. ನಾನು ಇಲ್ಲಿ ಮಾಡುತ್ತಿರುವ ಸೇವೆಯನ್ನು, ಇನ್ನಾವುದೇ ರೀತಿಯ ಜೀವನಕ್ಕಾಗಿ ವಿನಿಮಯ ಮಾಡಿಕೊಳ್ಳಲಾರೆ. ಯೆಹೋವನು ಅನುಮತಿಸುವ ವರೆಗೆ ನಾನು ಇಲ್ಲೇ ಇರುವೆ.”
[ಪುಟ 26ರಲ್ಲಿರುವ ಚೌಕ/ಚಿತ್ರ]
ಸರ್ವ ದೇಶಗಳ ಜನರಿಗಾಗಿ ಸುವಾರ್ತೆ ಎಂಬ ಪುಸ್ತಿಕೆಯ ವೈಶಿಷ್ಟ್ಯಗಳು
ಸರ್ವ ದೇಶಗಳ ಜನರಿಗಾಗಿ ಸುವಾರ್ತೆ ಎಂಬ ಪುಸ್ತಿಕೆಯಲ್ಲಿ ಒಂದು ಪುಟದ ಸಂದೇಶವಿದೆ. ಕೆಲವು ದೇಶಗಳಲ್ಲಿ ಈ ಪುಸ್ತಿಕೆಯ ಆವೃತ್ತಿಯಲ್ಲಿ 92ರಷ್ಟು ವಿಭಿನ್ನ ಭಾಷೆಗಳಲ್ಲಿ ಈ ಸಂದೇಶವು ಕೊಡಲ್ಪಟ್ಟಿದೆ. ಈ ಸಂದೇಶವನ್ನು ಪ್ರಥಮ ವಿಭಕ್ತಿಯಲ್ಲಿ ಬರೆಯಲಾಗಿದೆ. ಆದುದರಿಂದ, ಮನೆಯ ವ್ಯಕ್ತಿ ಆ ಸಂದೇಶವನ್ನು ಓದುವಾಗ ನೀವೇ ಅವನೊಂದಿಗೆ ಮಾತಾಡುತ್ತಿರುವಂತೆ ಅನಿಸುತ್ತದೆ. ಈ ಪುಸ್ತಿಕೆಯಲ್ಲಿ ಉಪಯುಕ್ತವಾದ ಇತರ ಅಂಶಗಳೂ ಇವೆ:
ಈ ಪುಸ್ತಿಕೆಯ ಮುನ್ನುಡಿಯಲ್ಲಿ, ನಮಗೆ ತಿಳಿಯದ ಭಾಷೆಯನ್ನಾಡುವವರಿಗೆ ಪರಿಣಾಮಕಾರಿ ಸಹಾಯವನ್ನು ನೀಡಲು ತೆಗೆದುಕೊಳ್ಳಬೇಕಾದ ಹಲವಾರು ಹೆಜ್ಜೆಗಳನ್ನು ಪಟ್ಟಿಮಾಡಲಾಗಿದೆ. ಈ ಹೆಜ್ಜೆಗಳನ್ನು ದಯವಿಟ್ಟು ಜಾಗರೂಕತೆಯಿಂದ ಓದಿ, ಅವುಗಳನ್ನು ನಿಷ್ಠೆಯಿಂದ ಅನ್ವಯಿಸಿರಿ, ಏಕೆಂದರೆ ಜೀವಗಳು ಅದರ ಮೇಲೆ ಹೊಂದಿಕೊಂಡಿವೆ.
ಅನುಕ್ರಮಣಿಕೆಯಲ್ಲಿ ಭಾಷೆಗಳ ಪಟ್ಟಿ ಮಾತ್ರವಲ್ಲ, ಆಯಾ ಭಾಷೆಯ ಸಂಕೇತಾಕ್ಷರಗಳೂ ಇವೆ. ಇದರಿಂದಾಗಿ ವಿವಿಧ ಭಾಷೆಗಳಲ್ಲಿರುವ ನಮ್ಮ ಟ್ರ್ಯಾಕ್ಟ್‌ಗಳಲ್ಲಿ ಮತ್ತು ಇತರ ಸಾಹಿತ್ಯಗಳಲ್ಲಿ ಮುದ್ರಿಸಲಾಗಿರುವ ಭಾಷಾ ಸಂಕೇತಾಕ್ಷರಗಳನ್ನು ಗುರುತಿಸಲು ನಿಮಗೆ ಸಹಾಯವಾಗುವುದು. ಈ ರೀತಿಯಲ್ಲಿ, ಇಂತಹ ಸಾಹಿತ್ಯಗಳು ಯಾವ ಭಾಷೆಯವುಗಳಾಗಿವೆ ಎಂದು ನೀವು ಸುಲಭವಾಗಿ ಕಂಡುಹಿಡಿಯಬಲ್ಲಿರಿ.
[ಚಿತ್ರ]
ನೀವು ಶುಶ್ರೂಷೆಯಲ್ಲಿ ಈ ಪುಸ್ತಿಕೆಯನ್ನು ಬಳಸುತ್ತಿದ್ದೀರೊ?
[ಪುಟ 23ರಲ್ಲಿರುವ ಚಿತ್ರಗಳು]
ನಮ್ಮ ಬೈಬಲ್ ಸಾಹಿತ್ಯಗಳು ಈಗ 400ಕ್ಕೂ ಹೆಚ್ಚು ಭಾಷೆಗಳಲ್ಲಿ ಲಭ್ಯವಿವೆ
ಘಾನ
ಲ್ಯಾಪ್ಲಂಡ್ (ಸ್ವೀಡನ್)
ಫಿಲಿಪ್ಪೀನ್ಸ್
[ಪುಟ 24, 25ರಲ್ಲಿರುವ ಚಿತ್ರಗಳು]
ರಾಜ್ಯ ಘೋಷಕರ ಹೆಚ್ಚಿನ ಅಗತ್ಯವಿರುವ ಸ್ಥಳದಲ್ಲಿ ನೀವು ಸೇವೆಮಾಡಬಲ್ಲಿರೊ?
ಎಕ್ವಡಾರ್
ಡೊಮಿನಿಕನ್ ರಿಪಬ್ಲಿಕ್